ಅದು ಚುಮು-ಚುಮು ನಸುಕಿನ ಮಂದ ಬೆಳಕು, ದೇಹಕ್ಕೆ ಹಿತನೀಡುವ ತಂಗಾಳಿ, ಬಾನಾಡಿಗಳ ಉಲಿವು, ಗೋವುಗಳ ಕೂಗು, ಕಣ್ಣಾಯಿಸಿದಲ್ಲೆಲ್ಲಾ ಹಸಿರು ಹೊದ್ದು ಮೊಗ್ಗುಗಳಿಂದ ತುಂಬಿ ಜೀಕುತ್ತಿರುವ ಮಲ್ಲಿಗೆ ಬಳ್ಳಿಯ ಗೆಲ್ಲುಗಳು, ಸೂರ್ರ‍್ಯೋದಯವಾಗುವುದರೊಳಗೆ ಉಡಿ ತುಂಬ ಮೊಗ್ಗು ಬಿಡಿಸಿ ಕೈ ತುಂಬ ಕಾಸು ತೆಗೆದುಕೊಂಡು ಹೋಗಬೇಕು ಎಂಬ ತವಕದಿಂದ ಮಲ್ಲಿಗೆಯ ಸಾಲು-ಸಾಲು ಹಿಡಿದು ಮೊಗ್ಗುಗಳನ್ನು ಬಿಡಿಸುತ್ತಿರುವ ಕೂಲಿ ಹೆಂಗಳೆಯರ ದಂಡು, ಇಂದು ಎಷ್ಟು ಆಳುಗಳು ಬಂದಿವೆ? ಮೊಗ್ಗುಗಳ ಸ್ಥಿತಿ ಹೇಗಿದೆ? ಯಾವ ಕಡೆ ನೀರು ಹರಿಸಬೇಕು? ಮಲ್ಲಿಗೆಗೆ ಯಾವ-ಯಾವ ಮಾರುಕಟ್ಟೆಗಳಿಂದ ಎಷ್ಟೆಟ್ಟು ಬೇಡಿಕೆ ಬಂದಿದೆ?… ಎಂಬೆಲ್ಲ ತರ್ಕದೊಂದಿಗೆ ಮಲ್ಲಿಗೆ ತೋಟ ಸುತ್ತಿ ಕಾರ್ಮಿಕರ ಯೋಗ ಕ್ಷೇಮ ಕೇಳುತ್ತಾ ಪಾದರಸದಂತೆ ಸಂಚರಿಸುವ ತೋಟದ ಯಜಮಾನಿ… ಹೀಗೆ ಬೆಳಗು ಹರಿಯುತ್ತಿದ್ದಂತೆ ನೂರಾರು ಕೂಲಿ ಆಳುಗಳಿಂದ ಮಲ್ಲಿಗೆ ತೋಟ ತುಂಬಿ ಪರಿಸರದ ಜೊತೆಗೆ ಯಾಂತ್ರಿಕ ಚಟುವಟಿಕೆಯ ಪಾಠ ಹೇಳುವಂತಿರುತ್ತದೆ. ಇಂತಹ ವಾತಾವರಣ, ಹಿತವೆನಿಸುವ ಈ ಎಲ್ಲ ದೃಶಗಳನ್ನು ಬೆಳಗಿನ ಹೊತ್ತಿನಲ್ಲಿ ನೋಡಿದ ಹೃನ್ಮನಗಳಿಗೆ ಅದೆಷ್ಟೋ ಹಿತ ನೀಡುತ್ತದೆ.

ಮಾದರಿ ಮಹಿಳೆ :

ಅಂದ ಹಾಗೆ ಹೆಂಗಳೆಯೊಬ್ಬರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಈ ೧೫ ಎಕರೆಯ ಮಲ್ಲಿಗೆ ತೋಟ ಇರುವುದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ತಾಲೂಕಿನ ಶಿವಾನಂದ ನಗರದಲ್ಲಿ.

ಕೆಲಸಗಾರರ ಮೇಲ್ವಿಚಾರಣೆಯಲ್ಲಿ ತೋಟದ ಯಜಮಾನಿ ಪ್ರಮಿಳಾ.

ಈ ತೋಟದ ಯಜಮಾನಿ ಪ್ರಮಿಳಾ ಎತ್ತಿನಮನಿ, ಸದ್ಯ ಕೃಷಿ ಕ್ಷೇತ್ರದಲ್ಲಿ ಅತ್ಯಂತ ಅನುಭವ ಹೊಂದಿದ ಮಹಿಳೆ ಎನ್ನಬಹುದು. ಸುಮಾರು ೧೫ ವರ್ಷಗಳಿಂದ ಸಾವಯವ ಕೃಷಿ, ಜೀವಾಮೃತ, ಗೋರಕ್ಷಣೆ, ಜಲಸಂರಕ್ಷಣೆ, ಎರೆಗೊಬ್ಬರದಂತಹ ಹತ್ತಾರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ತಮ್ಮ ಅನುಭವದಲ್ಲಿಯೇ ಕಂಡುಕೊಂಡ ಕೆಲವೊಂದು ಕೃಷಿಗೆ ಪೂರಕ ಚಟುವಟಿಕೆಗಳನ್ನು ಅನುಸರಿಸುತ್ತಾ ಬಂದಿದ್ದಾರೆ. ಮಹಿಳಾ ಲೋಕದಲ್ಲಿಯೇ ಮಾದರಿ ವ್ಯಕ್ತಿ ಎನಿಸುವ ಇವರಿಗೆ ಅವರ ಪತಿ ಶಿವಪುತ್ರಪ್ಪ ಎತ್ತಿನಮನಿಯವರ ಪ್ರೋತ್ಸಾಹವೇ ಇವರಿಗೆ ಶ್ರೀರಕ್ಷೆಯಾಗಿದೆ ಎಂಬಲ್ಲಿ ಸಂದೇಹವೇ ಇಲ್ಲ.

ಸಾವಯವ ಕೃಷಿ ಪದ್ದತಿಯಲ್ಲಿ ಈ ಬಾಗಕ್ಕೆ ಸೂಕ್ತವೆನಿಸುವ, ಈ ಹಿಂದಿನಿಂದಲೂ ಪ್ರಶಿದ್ದಿ ಹೊಂದಿದ ಸ್ಥಳೀಯ ತಳಿಯಾದ ‘ಹಡಗಲಿ ಮಲ್ಲಿಗೆ’ ಬೆಳೆಯನ್ನು ೧೫ ಎಕರೆಯಲ್ಲಿ ಕೃಷಿ ಮಾಡಿ ನಿತ್ಯ ನಾಲ್ಕಾರು ಕ್ವಿಂಟಲ್ ಮಲ್ಲಿಗೆ ಮೊಗ್ಗು ಬೆಳೆಯುವ ರಾಜ್ಯದ ಏಕೈಕ ಮಹಿಳೆ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಮಹಿಳೆಯರಿಗೆ ಸ್ವಾತಂತ್ರ್ಯ, ಪ್ರೋತ್ಸಾಹ, ವಿಶ್ವಾಸ ದೊರೆತರೆ ಅಡುಗೆಮನೆಯಲ್ಲಿ ಸೌಟು ಹಿಡಿದುಕೊಳ್ಳುವ ಕೈಗಳು ಯಶಸ್ವಿಯಾಗಿ ಕೃಷಿ ಜವಾಬ್ದಾರಿಯನ್ನೂ ನಿರ್ವಹಿಸಬಲ್ಲವು ಎಂಬ ಸಂದೇಶ ಪ್ರಮಿಳಾ ಅವರಿಂದ ಮಹಿಳಾ ಸಮಾಜಕ್ಕೆ ರವಾನೆಯಾಗುತ್ತಿದೆ.

ಕ್ವಿಂಟಲ್ಕ್ವಿಂಟಲ್ ಮಲ್ಲಿಗೆ ಎಸಳು :

ಇಪ್ಪತ್ತೈದು ವರ್ಷಗಳ ಹಿಂದೆ ಏಳು-ಬೀಳುಗಳನ್ನು ಕಾಣುತ್ತಾ ಐದು ಎಕರೆಗಳಿಂದ ಆರಂಭವಾದ ಇವರ ಕೃಷಿ, ಸತಿ-ಪತಿಗಳ ಅಪಾರ ಶ್ರಮದಿಂದ ಈಗ ಐವತ್ತು ಎಕರೆಗಳಿಗೆ ವಿಸ್ತಾರ ಹೊಂದಿದೆ. ಇದರಲ್ಲಿ ದಾಳಿಂಬೆ, ಟೆಂಗು, ಮೆಕ್ಕೆಜೋಳ, ಸೇವಂತಿಗೆ… ಹೀಗೆ ಏನೆಲ್ಲ ಬೆಳಗಳಿವೆ. ಆದರೆ ಅದರಲ್ಲಿ ಇವರಿಗೆ ಮುಖ್ಯವಾದ ಬೆಳೆ, ಕೈ ತುಂಬ ಕಾಸು ತಂದುಕೊಡುವ ಬೆಳೆ, ಸಾಕಷ್ಟು ಅನುಬವ ದೊರೆತ ಬೆಳೆ ಎಂದರೆ ಹಡಗಲಿ ಮಲ್ಲಿಗೆ ಬೆಳೆ.

ಎಷ್ಟೊಂದು ಸಮೃದ್ಧ ನನ್ನ ಮಲ್ಲಿಗೆ ತೋಟ.

ಮಾರ್ಚ ಕೊನೆಯ ವಾರದಿಂದ ಆರಂಭವಾಗುವ ಮಲ್ಲಿಗೆ ಕೊಯ್ಲು ಅಕ್ಟೋಬರ್ ವರೆಗೂ ಮುಂದುವರೆದಿರುತ್ತದೆ. ಮಲ್ಲಿಗೆ ಸೀಜನ್ ಮಧ್ಯೆದ ಅವಧಿ ಹೇಗಿರುತ್ತದ ಎಂದರೆ ಬಯಲು ಸೀಮೆಯ ರೈತರು ಕಣದಲ್ಲಿ ಜೋಳದ ರಾಶಿ ಹಾಕಿ ಚೀಲಕ್ಕೆ ತುಂಬಿದಂತೆ ಇವರು ಗೋಣಿ ಚೀಲಕ್ಕೆ ಹೂವಿನ ಮೊಗ್ಗುಗಳನ್ನು ಹಾಕಿ ರಾಶಿಯಂತೆ ತುಂಬುತ್ತಿರುತ್ತಾರೆ.

ಸೂರ್ಯ ಉದಯಿಸುವುದಕ್ಕಿಂತ ಮೊದಲೇ ಸದ್ದಿಲ್ಲದೇ ಎತ್ತೆತ್ತೋ ಮೂಲೆಯಿಂದ ಬಂದ ನೂರಾರು ಕೂಲಿ ಕಾರ್ಮಿಕರು ಮಲ್ಲಿಗೆ ತೋಟದಲ್ಲಿ ಮೊಗ್ಗು ಬಿಡಿಸುತ್ತಿರುತ್ತಾರೆ. ಮೂರು ಹಂತಗಳಲ್ಲಿ ಮೊಗ್ಗು ತೂಗಿಸಿಕೊಳ್ಳಿ ಎಂದು ಸೈರನ್ ಬರುತ್ತದೆಯೋ ಆಗ ಮಾತ್ರ ಹುತ್ತದ ಮೇಲೆ ನೀರು ಬಿದ್ದಾಗ ಹೇಗೆ ಇರುವೆಗಳೆಲ್ಲ ಹಾತೊರೆಯುತ್ತಾ ಹೊರಬರುತ್ತವೆಯೋ ಹಾಗೆ ಮಲ್ಲಿಗೆ ತೋಟದಿಂದ ತೇಲಿ ಮೊಗ್ಗು ತೂಗುವ ಮನೆಗೆ ಗುಬುಗುಬು ಎಂದು ಬರುತ್ತಾರೆ.

ಮಲ್ಲಿಗೆ ಮೊಗ್ಗು ಬರುವ ಆರಂಭದಲ್ಲಿ ೧೦-೨೦ ಕೂಲಿ ಆಳುಗಳಿಂದ ಹೂ ಬಿಡಿಸುವ ಕೆಲಸ ನಡೆದರೆ ಜೂನ್-ಜುಲೈ ತಿಂಗಳು ಹೆಚ್ಚು ಇಳುವರಿ ಬರುವ ಸಮಯವಾಗಿರುತ್ತದೆ. ಆ ಸಮಯದಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಆಳುಗಳು ಇವರ ತೋಟದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮೊದಲು ಬೆಳೆಯಾಗಿ ೫೦ ಕೇ.ಜಿ ಯಂತೆ ಆರಂಭವಾಗಿ ಅದು ಮುಂದಿನ ದಿನಗಳಲ್ಲಿ ೪-೫ ಕ್ವಿಂಟಲ್‌ವರೆಗೆ ಮೊಗ್ಗಿನ ಸುರಿಮಳೆಯಾಗುತ್ತದೆ.

ಕಣ್ಣಾಯಿಸಿದಲ್ಲೆಲ್ಲಾ ಮಲ್ಲಿಗೆ ವನ.

ಸಮಯಕ್ಕೆ ಸರಿಯಾಗಿ ಮೊಗ್ಗು ರವಾನೆ :

ಮೊಗ್ಗಾಗಿರುವ ಮಲ್ಲಿಗೆ ಎಸಳು ದೇವರ ಪೂಜೆಯ ಸಮಯದಲ್ಲಿ, ವಿವಾಹದಂತಹ ಕಾರ‍್ಯಗಳ ಘಳಿಗೆಯಲ್ಲಿ ಅಥವಾ ಗೃಹಣಿಯ ಮುಡಿಯೇರು ಸಮಯದಲ್ಲಿ ಅರಳಿದರೆ ಮಾತ್ರ ಅದಕ್ಕೆ ಬೆಲೆ! ಅದೇನಾದರೂ ಬಳ್ಳಿಯಲ್ಲಿರುವಾಗ ಇಲ್ಲವೆ ರವಾನೆಯಯಾಗುವಾಗಲೇ ಅರಳಿದರೆ ಮಂಗಲ ಕಾರ‍್ಯಗಳಂತಹ ಸಮಯಕ್ಕೆ ಬರುವುದರೊಳಗೆ ಇಲ್ಲವೆ ಗ್ರಾಹಕರು ಖರೀದಿಸುವ ಸಮಯದಲ್ಲಿ ಬಾಡಿ ಬಕ್ಕುಲವಾಗಿರುತ್ತದೆ. ಹೀಗೇನಾದರೂ ಮೊಗ್ಗು ಮೊದಲೇ ಅರಳಿ ದಲ್ಲಾಳಿಗಳ ಅಂಗಡಿಗೆ ಬಂದರೆ ಬಿಡಿ ವ್ಯಾಪಾರಿಗಳಿಂದ ಅಂತಹ ಹೂವಿಗೆ ಕವಡೆ ಕಾಸು ಕಿಮ್ಮತ್ತು ಸಿಗುವುದಿಲ್ಲ. ಆದ್ದರಿಂದಲೇ ಮಲ್ಲಿಗೆ ಬೆಳೆಗಾರರು ಬೆಳೆ ಬೆಳೆಯುವಲ್ಲಿ ತೋರುವ ಜವ್ದಾರಿಯಷ್ಟೇ ಮೊಗ್ಗು ಬಿಡಿಸುವಿಕೆ ಹಾಗೂ ಮಾರುಕಟ್ಟೆಗೆ ರವಾನೆ ಮಾಡುವಲ್ಲಿಯೂ ತೋರಿಸಬೇಕಾದದ್ದು ಅವಶ್ಯ ಎನ್ನುತ್ತಾರೆ ಪ್ರಮಿಳಾ.

ಈ ದೃಷ್ಠಿಯಿಂದಾಗಿಯೇ ಬೆಳಿಗ್ಗೆ ೯ ಗಂಟೆಗೆ ತೋಟದಿಂದ ಹೊರಟ ಮೊಗ್ಗು ಗ್ರಾಹಕರ ಮನೆಗೆ ಮಲ್ಲಿಗೆ ಹಾರವಾಗಿ ಬರುವುದರೊಳಗೆ ಹಲವಾರು ಹಂತಗಳನ್ನು ದಾಟಿ ಬಂದಿರುತ್ತದೆ. ಮೊಗ್ಗು ಬಿಡಿಸುವುದು, ತೂಕ, ಪ್ಯಾಕಿಂಗ್, ಸಾಗಾಣಿಕೆ ಒಂದು ಹಂತವಾದರೆ ಖರೀದಿದಾರರು; ತೋಟದಿಂದ ಬಂದ ಹೂಗಳನ್ನು ಮತ್ತೊಮ್ಮೆ ತೂಕ ಮಾಡಿ ಚಿಕ್ಕ –ಚಿಕ್ಕ ಪೊಟ್ಟಣಗಳ ಮೂಲಕ ಬಿಡಿ ವ್ಯಾಪಾರಸ್ಥರಿಗೆ ಸಾಗಿಸುವುದು, ಬಿಡಿ ವ್ಯಾಪಾರಸ್ಥರಿಂದ ಮಾಲೆ ಪೋಣಿಸುವವರ ಮನೆಗಳಿಗೆ ವಿಲೇವಾರಿಯಾಗುತ್ತವೆ, ನಂತರ ಹನ್ನೆರಡು ಗಂಟೆಯ ಹೊತ್ತಿಗೆ ಮೊಗ್ಗು ಪೋಣಿಸಿದ ಮಾಲೆಗಳ ಸಂಗ್ರಹ ಮಾಡಿಕೊಳ್ಳುವುದು ಮತ್ತೊಂದು ಹಂತ, ಬಿಡಿ ವ್ಯಾಪಾರಸ್ಥರು ಮೊಳ ಹಾಕಿ ತೂಕ ಮಾಡಿ ಮಾರುವುದು ಕೊನೆಯ ಹಂತ. ಹೀಗೆ ನೂರಾರು ಕಿ.ಮೀ ದೂರದಲ್ಲಿರುವ ತೋಟದ ಮೊಗ್ಗುಗಳು ಹತ್ತಾರು ಕೈಗಳಿಂದ ಕೈಗಳಿಗೆ ಬದಲಾಗುತ್ತಾ ಹಾರವಾಗಿ ನಗರದ ಮಾರುಕಟ್ಟೆಗೆ ಬರುತ್ತಿದ್ದಂತೆ ಮೊಗ್ಗುಗಳೆಲ್ಲ ಕುಸುಮಗಳಾಗಿ ಅರಳಿ ಪರಿಮಳ ಹೊರ ಸೂಸುತ್ತಿರುತ್ತವೆ.

ಕೆಲಸಗಾರರ ಸಾಲು - ಸಾಲು

“ಇದೊಂದು ನೆಟ್‌ವರ್ಕ ತರಹ, ಅವರವರ ಕೆಲಸ ಆಯಾ ನಿಗದಿತ ಸಮಯಕ್ಕೆ ಮುಗಿಸಲೇ ಬೇಕು, ಈ ಜಾಲದಲ್ಲಿ ತೊಡಗಿಕೊಂಡುರುವ ಯಾರಾದರು ಆಲಸ್ಯದಿಂದ ಎಡವಟ್ಟು ಮಾಡಿಕೊಂಡರೆ ಅದರ ಹಾನಿ ಅವರಿಗೆ ತಟ್ಟುತ್ತದೆ, ಈ ಕಾರಣದಿಂದಲೇ ಬಿಡಿಸಿದ ಮೊಗ್ಗು ಗ್ರ್ರಾಹಕರ ಕೈ ಸೇರುವ ತನಕ ಒಂದು ತರಹ ಎಲ್ಲರಲ್ಲೂ ತವಕ ಮನೆ ಮಾಡಿರುತ್ತದೆ, ಸರಿಯಾದ ಸಮಯಕ್ಕೆ ಹೂ ಗ್ರಾಹಕರ ಕೈ ಸೇರಿದಾಗಲೇ ನಾವೆಲ್ಲರೂ ನಿರಂಬಳವಾಗಿ ಉಸಿರಾಡುವುದು” ಎಂದು ಪ್ರಮಿಳಾ ಮೊಗ್ಗು ತೂಗುತ್ತಲೇ ಪಟ-ಪಟ ಹೇಳುತ್ತಾರೆ. ಅದೇ ರೀತಿ ಮಾರನೇ ದಿನ ಹೂವಿಗೆ ಸಂಬಂಧಿಸಿದ ಬಿಲ್ ಬಿಡಿ ವ್ಯಾಪಾರಸ್ಥರಿಂದ ಸಗಟು ವ್ಯಾಪಾರಸ್ಥರಿಗೆ, ಸಗಟು ವ್ಯಾಪಾರಸ್ಥರಿಂದ ಹೂ ಬೆಳೆಗಾರರ ಕೈಗೆ ಬೆಳಗಾರರಿಂದ ಕೆಲಸಗಾರರ ಕೈಗೆ ಕೂಲಿ ರೂಪದಲ್ಲಿ ಸೇರುತ್ತದೆ.

ಬೆಳಿಗ್ಗೆ ಆರಂಭವಾಗುವ ಮೊಗ್ಗು ಬಿಡಿಸುವ ಕೆಲಸ ಮಧ್ಯಾಹ್ನ ೩ ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಇಲ್ಲೂ ಕೂಡಾ ಮೊಗ್ಗು ಬಿಡಿಸುವ ಕೆಲಸವನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಿಕೊಂಡಿದ್ದಾರೆ. ಹೀಗೆ ನಾಲ್ಕು ಹಂತಗಳನ್ನು ಮಾಡಿಕೊಳ್ಳುವುದರ ಹಿಂದೆ ವ್ಯವಹಾರದ ಮೌಲಿಕತೆಯೂ ಅಡಗಿರುವುದು ಕಂಡು ಬರುತ್ತದೆ.

ಬೆಳಗಿನಿಂದ ೯ ಗಂಟೆಯ ವರೆಗೆ ಬಿಡಿಸಿದ ಮೊಗ್ಗುಗಳು ಮೊದಲನೇ ಹಂತ, ೯ ರಿಂದ ೧೧ ಗಂಟೆಯವರೆಗೆ ಬಿಡಿಸಿದ ಮೊಗ್ಗುಗಳು ಎರಡನೇ ಹಂತ, ೧೧ ಗಂಟೆಯಿಂದ ೧ ಗಂಟೆಯ ವರೆಗಿನ ಮೊಗ್ಗುಗಳು ಮೂರನೇ ಹಂತ, ೧ ಗಂಟೆಯಿಂದ ೩ ಗಂಟೆಯವರೆಗೆ ಬಿಡಿಸಿದ ಮೊಗ್ಗುಗಳು ಕೊನೆಯ ಹಂತದಲ್ಲಿ ಸಾಗುವ ಮೊಗ್ಗುಗಳಾಗಿರುತ್ತವೆ. ಈ ಹಂತಗಳನ್ನು ಅನುಸರಿಸಿಯೇ ದೂರದ ಮಾರುಕಟ್ಟೆಗಳಿಗೆ ಸಾಗಿಸುವ ವ್ಯವಸ್ಥೆಯೂ ಅದರ ಮೇಲೆ ಅಡಕವಾಗಿರುತ್ತದೆ.

ಬೆಳಿಗ್ಗೆ ಉಸಿರು ಬಿಗಿ ಹಿಡಿದುಕೊಂಡು ಲಗುಬಗೆಯಿಂದ ಹೆಚ್ಚಿನ ತೂಕ ಬರುವಂತೆ ಹೆಚ್ಚು ಹೂ ಬಿಡಿಸಬೇಕು, ಹೆಚ್ಚು ಕೂಲಿ ಪಡೆದುಕೊಳ್ಳಬೇಕು ಎಂಬ ಹಂಬಲದಿಂದ ಹಕ್ಕಿಗಳು ತೆನೆಯಲ್ಲಿನ ಕಾಳುಗಳನ್ನು ಪಕಪಕನೇ ಕುಕ್ಕು ಕುಕ್ಕಿ ತಿನ್ನುವ ಹಾಗೆ ಹೂ ಬಿಡಿಸುವಲ್ಲಿ ಸಾಕಷ್ಟು ಪಳಗಿದ ಈ ಹೆಂಗಳೆಯರ ಕೈಗಳು ಗೊನೆಯಲ್ಲಿನ ಮೊಗ್ಗುಗಳನ್ನು ಪಕಪಕ ಬಿಡಿಸಿ ಉಡಿ ತುಂಬಿಸಿಕೊಳ್ಳುತ್ತಿರುತ್ತಾರೆ.

ಉಡಿ-ಉಡಿ ಮೊಗ್ಗು ಬಿಡಿಸಿದ್ದಾಯ್ತು, ಈಗ ನೀರಿನ ತೇವ.

ತೋಟದ ಮನೆಯ ಗಡಿಯಾರದ ಮುಳ್ಳು ಬೆಳಗಿನ ೯ ಗಂಟೆಗೆ ಬರುತ್ತಿದ್ದಂತೆ ಮಲ್ಲಿಗೆ ತೋಟದಲ್ಲಿರುವ ಆಳುಗಳ ಮೇಲಿನ ನಾಲ್ಕಾರು ಮೇಲ್ವಿಚಾರಕರು ಒಮ್ಮೆಲೆ “ಮೊಗ್ಗು ತಗೊಂಡು ಬರ್ರೆವೋ… ತೂಕ ಚಾಲು ಆಗೈತೆ…” ಎಂದು ಕೂಗುತ್ತಾರೆ. ಅದು ಒಂದು ರೀತಿ ಕೂಲಿಕಾರರಿಗೆ ಸೈರನ್ ಇದ್ದ ಹಾಗೆ. ಈ ಸೈರನ್ ಬಂದ ತಕ್ಷಣ ಯಾರೂ ತಡ ಮಾಡುವಂತಿಲ್ಲ! ಯಾಕೆಂದರೆ ಅವರಿಗೂ ಈ ಮೊಗ್ಗಿನ ಮೇಲಿರುವ ಸಮಯದ ಮಹತ್ವ ಗೊತ್ತಿರುತ್ತದೆ. ಹೀಗಾಗಿ ಬಿಡಿಸಿದ ಮೊಗ್ಗುಗಳನ್ನು ಅರಿವೆಯಲ್ಲಿ ಗಂಟು ಕಟ್ಟಿಕೊಂಡು ತೂಕ ಮಾಡುವ ತೋಟದ ಜೋಪಡಿಗೆ ಬರುತ್ತಿರುತ್ತಾರೆ.

ತೂಕದ ಮನೆ ಪ್ರವೇಶಿಸುವ ಮೊದಲು ನೀರಿನ ತೊಟ್ಟಿಯಲ್ಲಿ ಮೊಗ್ಗಿನ ಗಂಟು ಮುಳುಗಿಸಿ ಮೊಗ್ಗುಗಳನ್ನು ಒದ್ದೆ ಮಾಡಿಕೊಂಡು ತೂಕ ಮಾಡಿಸಲು ಸಾಲಾಗಿ ನಿಲ್ಲುತ್ತಾರೆ.

ಒಬ್ಬರ ನಂತರ ಒಬ್ಬರು ಸರಸರನೇ ತೂಕ ಮಾಡಿಸಿಕೊಂಡು ತಿರುಗ ಮೊಗ್ಗು ಬಿಡಿಸಲು ತೋಟದ ಕಡೆಗೆ ದೌಡಾಯಿಸುತ್ತಿರುತ್ತಾರೆ. ನೂರಾರು ಕೂಲಿ ಆಳುಗಳ ಹೆಸರು ನೆನಪಿಡಲು, ಅವರ ಹೆಸರು ಹುಡುಕಿ ತೂಕ ನಮೂದಿಸಿಕೊಳ್ಳುವುದು ಕಷ್ಟದ ಹಾಗೂ ಸಮಯ ಹಿಡಿಯುವ ಕೆಲಸವಾಗಿದ್ದರಿಂದ, ಪ್ರಮಿಳಾ ಅವರು ಕೂಲಿ ಆಳುಗಳಿಗೆ ಒಂದೊಂದು ರೋಲ್ ನಂಬರ್ ನೀಡಿದ್ದಾರೆ. ತೂಕದ ಕಟ್ಟೆಗೆ ತಮ್ಮ ಮೊಗ್ಗಿಗಳ ಗಂಟು ಸುರಿಯುವ ಆಳುಗಳು ತಮ್ಮ ನಂಬರ್ ಕೂಗುತ್ತಾರೆ. ಅದೇ ನಂಬರ್‌ಗೆ ತೂಕ ಮಾಡಿದ ವ್ಯಕ್ತಿ ಅಳತೆಯನ್ನು ಜೋರಾಗಿ ಕೂಗಿ ಹೇಳಿ ಎಂಟ್ರಿ ಮಾಡಿಸುತ್ತಾನೆ. ಇದು ತೂಕ ಎಂಟ್ರಿ ಮಾಡುವವರಿಗೂ ಹಾಗೂ ಕೂಲಿ ಆಳುಗಳಿಗೂ ತಮ್ಮ ಮೊಗ್ಗಿನ ತೂಕ ಎಷ್ಟಾಯಿತು ಎಂದು ಸರಳವಾಗಿ ತಿಳಿದುಕೊಳ್ಳಲು ಅನುಕೂಲವಾಗಿದೆ.

ತೂಕವಾದ ಮೊಗ್ಗುಗಳನ್ನು ಮತ್ತೊಂದು ತುದಿಯಲ್ಲಿ ಇಡಿಯಾಗಿ ತೂಕ ಮಾಡಲಾಗುತ್ತದೆ. ಇಲ್ಲಿ ಯಾವ ಮಾರುಕಟ್ಟೆಯ ವ್ಯಾಪಾರಸ್ಥರು ಎಷ್ಟು ಬೇಡಿಕೆ ನೀಡಿದ್ದಾರೆ? ಎಂಬ ಲೆಕ್ಕದಲ್ಲಿ ತೂಕ ಮಾಡಿ ತೇವಯುಕ್ತ ಗೋಣಿ ಚೀಲದಲ್ಲಿ ಮೊಗ್ಗುಗಳನ್ನು ತುಂಬುತ್ತಾರೆ. ಗೋಣಿ ಚೀಲ ತುಂಬುತ್ತಿದ್ದಂತೆ ಅದನ್ನು ಹೊಲಿದು ಆಯಾ ಅಂಗಡಿಗಳ ಲೇಬಲ್ ಅಂಟಿಸಿ ವ್ಯಾನಿಗೆ ಹಾಕುವುದು ಕೊನೆಯ ಕೆಲಸ, ಇದು ಕಣ್ ಕಣ್ ಬಿಡುತ್ತಿದ್ದಂತೆಯೇ ಹತ್ತಾರು ಕೈಗಳ ನಡುವೆ ಅರ್ಧ ಗಂಟೆಯ ಹೊತ್ತಿನಲ್ಲಿಯೇ ಮುಗಿದು ಹೋಗುತ್ತದೆ. ಮೊದಲನೇ ಹಂತದಲ್ಲಿನ ಮೊಗ್ಗುಗಳು ಸಮೀಪದ ಹೊಸಪೇಟೆ ಮರುಕಟ್ಟೆಗೆ ಸಾಗಿದರೆ, ಎರೆಡನೇ ಹಂತದಲ್ಲಿ ಬರುವ ಮೊಗ್ಗುಗಳು ಶಿವಮೊಗ್ಗ ಮಾರುಕಟ್ಟೆಗೆ, ಮೂರನೇ ಹಂತದ ಮೊಗ್ಗುಗಳು ಹುಬ್ಬಳ್ಳಿಗೆ, ನಾಲ್ಕನೇ ಹಂತದ ಮೊಗ್ಗುಗಳು ಮತ್ತೊಂದು ಬಾರಿಗೆ ಹೊಸಪೇಟೆ ಮಾರುಕಟ್ಟೆಗೆ ಸಾಗುತ್ತವೆ.

ಸಮಯಕ್ಕೆ ಬೆಲೆ :

ಹೀಗೆ ಆಯಾ ಮಾರುಕಟ್ಟೆಗಳಿಗೆ ಸರಿಯಾದ ಸಮಯಕ್ಕೆ ಮೊಗ್ಗುಗಳು ತಲುಪಿದವೆಂದರೆ ಸಗಟು ವ್ಯಾಪರಸ್ಥನಿಗೆ ಎಲ್ಲಿಲ್ಲದ ಸಂತಸದ ಜೊತೆಗೆ ಹೆಚ್ಚು ಮೊಗ್ಗುಗಳಿಗೆ ಬೆಲೆ-ಬೇಡಿಕೆ ಲಭಿಸುತ್ತದೆ. ಸರಿಯಾದ ಸಮಯಕ್ಕೆ ತಲುಪಿದ ಮೊಗ್ಗುಗಳಿಗೆ ದಲ್ಲಾಳಿಗಳು ಮಾಡುವ ಲಿಲಾವಿನ ನಿಖರ ಬೆಲೆ ದೊರಕುತ್ತದೆ. ಶಿವಮೊಗ್ಗ ಮಾರುಕಟ್ಟೆಗೆ ಶೆಡ್ಯೂಲ್‌ಗಿಂತ ಒಂದು ಗಂಟೆ ಮೊದಲು ಮೊಗ್ಗು ತಲುಪಿದರೆ ಪ್ರತಿ ಕೇ.ಜಿ ಗೆ ಹತ್ತು ರೂಪಾಯಿ ಎಕ್ಸ್ಟ್ರಾ ಬೋನಸ್ ನೀಡುತ್ತಾರೆ. ಶೆಡ್ಯೂಲ್‌ಗೆ ಒಂದು ಗಂಟೆ ತಡವಾಗಿ ಮೀರಿ ಬಂದ ಮೊಗ್ಗುಗಳಿಗೆ ನಿಗದಿಯಾದ ಬೆಲೆಯಲ್ಲಿ ಕೇ.ಜಿಗೆ ಹತ್ತು ರೂಪಾಯಿ ಖೋತಾ ಆಗುತ್ತದೆ. ಇನ್ನು ಎರಡು ಮೂರು ತಾಸು ತಡವಾಗಿ ಬಂದರೆ ಆ ಮೊಗ್ಗುಗಳಿಗೆ ದಲ್ಲಾಳಿ ಹಾಕಿದಷ್ಟೇ ಬೆಲೆ ದೊರಕುತ್ತದೆ. ಈ ಕಾರಣದಿಂದಲೇ ಪ್ರಮಿಳಾಬಾಯಿಯವರು ಮೊಗ್ಗುಗಳು ಮಾರುಕಟ್ಟೆ ಸೇರುವ ತನಕ ಯಾರೊಂದಿಗೆ ಖಾಲಿ ಮಾತನಾಡುವುದಾಗಲಿ ಅತಿಥಿ ಸತ್ಕಾರವಾಗಲಿ ಮೂಲಾಜಿ ಇಲ್ಲದೇ ಹಿಂದೆ ಸರಸಿ ಕೆಲಸದ ಕಡೆಗೆ ಗಮನ ನೀಡುತ್ತಾರೆ.

ಎಷ್ಟೆ ತೂಕ ಮಾಡಿದರು ಕೈ ಸೋಲುವುದಿಲ್ಲ ಬಿಡಿ.

ಸಾಗಾಣಿಕೆಗೊಂದು ಯೋಜನೆ :

ಕಳೆದ ವರ್ಷದ ಮಾತು, ಮೇ ತಿಂಗಳು ಎಂದರೆ ಮದುವೆ, ಮುಂಜವಿಗಳ ಸೀಜನ್, ಮಾರುಕಟ್ಟೆಯಲ್ಲಿ ಕಿಲೋ ಮೊಗ್ಗಿಗೆ ೧೦೦ ರಿಂದ ೧೨೦ ರೂಪಾಯಿ ಬೆಲೆ ಇತ್ತು. ಶಿವಮೊಗ್ಗ ವ್ಯಾಪಾರಿಯೊಬ್ಬರು ಸಾಕಷ್ಟು ಆರ‍್ಡರ್ ಹಿಡಿದಿದ್ದರಿಂದ ಹಿಂದಿನ ದಿನವೇ ಎತ್ತಿನಮನಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೊಗ್ಗು ಕಳಿಸಿಕೊಡಲು ಬೇಡಿಕೆ ಇಟ್ಟಿದ್ದರು. ಮೂರು ಗಂಟೆಯೊಳಗೆ ಶಿವಮೊಗ್ಗ ಮಾರುಕಟ್ಟೆ ತಲುಪಲು ಶೆಡ್ಯೂಲ್ ಇದ್ದುದ್ದರಿಂದ ನೂರಾರು ಕೆಲಸಗಾರರು ಬೆಳಿಗ್ಗೆಯಿಂದಲೇ  ಮೊಗ್ಗು ಬಿಡಿಸುವ ಕೆಲಸ ಆರಂಭಿಸಿದ್ದರು. ಬೆಳಿಗಿನ ೯ ಗಂಟೆಗೆ ಹಗರಿಬೊಮ್ಮನಹಳ್ಳಿ ಯಿಂದ  ಹೊರಡುವ ಬಸ್‌ಗೆ ೧ ಕ್ವಿಂಟಲ್ ಹೂವಿನ ಮೋಟೆ ಏರಿಸಿದ್ದು ಆಗಿತ್ತು. ಮೂರು ಗಂಟೆಯ ನಂತರ ಶಿವಮೊಗ್ಗ ವ್ಯಾಪಾರಿಯಿಂದ ದೂರವಾಣಿ ಕರೆ ಬಂತು “ನಮ್ಮ ಅಂಗಡಿ ಮುಂದೆ ಹೂವಿಗಾಗಿ ಬಿಡಿ ವ್ಯಾಪಾರಿಗಳ ಜಾತ್ರೆ ನೆರದೈತೆ, ೪ ಗಂಟೆಯದ್ರೂ ನಿಮ್ಮ ಮಲ್ಲಿಗೆ ಮೊಗ್ಗಿನ ಮೋಟೆ ಪತ್ತೇ ಇಲ್ಲ, ನಾವು ನಿಮ್ಮ ಮೊಗ್ಗುಗಳನ್ನೇ ನಂಬಿ ವ್ಯಾಪಾರ ಮಾಡ್ತೀರ‍್ತಿವಿ ಹೀಗ ಮಾಡಿದ್ರ ಹ್ಯಾಂಗ್ರಿ” ಎಂದು ಆ ವ್ಯಾಪಾರಿ ತನ್ನೆಲ್ಲ ವೇದನೆಯನ್ನು ಒಂದೇ ಬಾರಿಗೆ ಉಸುರಿದ.

ಆದರೆ ಬಸ್ ಸೇರಬೇಕಾಗಿದ್ದ ನಿಲ್ದಾಣ ಸೇರದೇ ದಾರಿಯ ಮಧ್ಯೆ ಅದು ನಿರ್ಜನ ಪ್ರದೇಶದಲ್ಲಿ ಕೆಟ್ಟು ನಿಂತಿತ್ತು, ಪ್ರಯಾಣಿಕರೆಲ್ಲ ಬೇರೆ ಬಸ್‌ಗೆ ಹೋಗಿದ್ದರೆ ಮೊಗ್ಗಿನ ಮೋಟೆಗಳು ಅನಾಥವಾಗಿ ಬಿದ್ದಿದ್ದವು. ಬಸ್ ನಿಂತಿರುವ ಸ್ಥಳ ಹುಡುಕಿ ಖಾಸಗಿ ವಾಹನವೊಂದರಲ್ಲಿ ಆ ಮೋಟೆಗಳನ್ನು ಹಾಕಿಕೊಂಡು ಶಿವಮೊಗ್ಗ ಮಾರುಕಟ್ಟೆ ತಲುಪುವುದರೊಳಗೆ ಸಾಯಂಕಾಲ ೭ ಗಂಟೆಯಾಗಿತ್ತು. ಬಿಡಿ ವ್ಯಾಪರಿಗಳು ಬೇರೆ ದಲ್ಲಾಳಿಗರ ಕಡೆಗೆ ಮೊಗ್ಗು ಕೊಂಡು ಹೋಗಿದ್ದರು. ಸಾಕಷ್ಟು ತಡವಾಗಿ ಬಂದ ಈ ಮೊಗ್ಗಿನ ಮೋಟೆಗಳಿಗೆ ಬೆಲೆಯೇ ಇಲ್ಲದಂತಾಯಿತು.

ಸುಮಾರು ೧೦,೦೦೦ ರೂಪಾಯಿ ಲಾಭ ತರಬೇಕಾಗಿದ್ದ ಹೂವಿನ ಮೋಟೆಗಳು ಆ ದಿನ ಮೊಗ್ಗು ಬಿಡಿಸಿದ ಕೆಲಸಗಾರರ ಕೂಲಿಯಷ್ಟೂ ದೊರಕಲಿಲ್ಲ.

ಈ ಕಾರಣದಿಂದಲೇ ಅಂದೇ ಶಿವಾನಂದ ಸುತ್ತಮುತ್ತಲಿರುವ ಬ್ಯಾಲಹಾಳು, ಕಡ್ಲಬಾಳು, ಬಾಚಿಗೊಂಡನಹಳ್ಳಿ, ದೇವನಹಳ್ಳಿ, ಕಟ್ಟೇನಬಂಡಿ, ನಂದಿಪುರ, ಮುಟಗನಹಳ್ಳಿ, ಬಲ್ಲಹುಣಸಿ… ಹಳ್ಳಿಗಳಲ್ಲಿ ಸಣ್ಣಪ್ರಮಾಣದಲ್ಲಿ ಬೆಳೆಯುವ ಮಲ್ಲಿಗೆ ಬೆಳೆಯುವ ೨೫ ಬೆಳೆಗಾರರನ್ನೆಲ್ಲಾ ಸೇರಿಸಿ ಒಂದು ಮಲ್ಲಿಗೆ ಬೆಳೆಗಾರರ ಸಂಘ ಕಟ್ಟಿಕೊಂಡರು. ಸಾಗಾಣಿಕೆಯಲ್ಲಿ ಈ ಹಳ್ಳಿಗರು ಒಂದೊಲ್ಲೊಂದು ರೀತಿಯಲ್ಲಿ ತೊಂದರೆ ಅನುಭವಿಸದವರೆ ಆಗಿದ್ದರು. ಸಂಘದಿಂದ ಒಂದು ವಾಹನ ವ್ಯವಸ್ಥೆ ಮಾಡಿದರು. ಈಗ ಎಲ್ಲರೂ ನಿಗದಿತ ಸಮಯಕ್ಕೆ ನಿಗದಿತ ಸ್ಥಳಕ್ಕೆ ಬಂದು ಆ ವಾಹನದಲ್ಲಿ ತಮ್ಮೆಲ್ಲ ಮೊಗ್ಗಿನ ಮೋಟೆಗಳನ್ನು ಹಾಕಿ ಹೋಗುತ್ತಾರೆ. ಇಲ್ಲಿ ವಾಹನಕ್ಕೆ ರೈಟ್ ಹೇಳಿದರೆ ಅದು ನಿಲ್ಲುವುದು ಮಾರುಕಟ್ಟೆಯ ಮುಂದೆಯೇ. ಚಾಲಕನ ಕೈಯಲ್ಲಿ ಮೊಬೈಲ್ ನೀಡಿದ್ದರಿಂದ ವಾಹನವೇನಾದರೂ ದಾರಿ ಮಧ್ಯೆ ಕೈಕೊಟ್ಟರೆ ಮತ್ತೊಂದು ವಾಹನಕ್ಕೆ ಸಂದೇಶ ನೀಡುತ್ತಾನೆ. ಶೆಡ್ಯೂಲ್‌ಗಿಂತ ಮುಂಚೆಯೇ ಮಲ್ಲಿಗೆ ಮಾರುಕಟ್ಟೆ ಸೇರಿ ಕೇಜಿಗೆ ೧೦ ರೂಪಾಯಿ ಎಕ್ಸ್ಟ್ರಾ ಬೋನಸ್ ದೊರಕಿಸುತ್ತದೆ.

ವಾಹನದ ಬಾಡಿಗೆ, ಚಾಲಕನ ವೇತನ, ಇಂಧನದ ಖರ್ಚುವೆಚ್ಚಗಳನ್ನು ವಾರಕ್ಕೊಮ್ಮೆ ಲೆಕ್ಕ ಹಾಕಿ ಸಾಗಾಣಿಕೆಯಾದ ಪ್ರತಿ ಕೆ.ಜಿ ಮೊಗ್ಗಿಗೆ ಅದನ್ನು ಭಾಗಿಸಿ ಯಾರ‍್ಯಾರು ಒಂದು ವಾರದ ಅವಧಿಯಲ್ಲಿ ಎಷ್ಟೆಷ್ಟು ಕೆ.ಜಿ ಮೊಗ್ಗು ಹಾಕಿದ್ದಾರೆ ಅದಕ್ಕೆ ತಕ್ಕಂತೆ ಬಾಡಿಗೆ ನೀಡುತ್ತಾರೆ. ಯಾವುದೇ ಚೌಕಾಸಿ ಇಲ್ಲ, ಬಾಡಿಗೆ ಭಾರವೆನಿಸುವುದಿಲ್ಲ, ಸಾಗಾಣಿಕೆಯ ಕಿರಕ್ ಅಂತೂ ಇಲ್ಲವೇ ಇಲ್ಲ.

ವ್ಯಾಪಾರ ವಹಿವಾಟು :

ಮಾರ್ಚ-ಎಪ್ರಿಲ್‌ನಲ್ಲಿ ಮೊಗ್ಗು ಕೊಯ್ಲು ಆರಂಭವಾದರೂ ಆ ಸಮಯದಲ್ಲಿ ಎಕರೆಗೆ ದಿನಕ್ಕೆ ೧೦ ಕೆ.ಜಿ ಯಷ್ಟು ಮೊಗ್ಗು ಮಾತ್ರ ದೊರಕುತ್ತದೆ. ಜೂನ್-ಜುಲೈ ಸಮಯದಲ್ಲಿ ೨೫ ಕೇ.ಜಿ ದಾಟುತ್ತದೆ. ಎಕರೆಗೆ ವಾರ್ಷಿಕ ಸರಾಸರಿ ೨೦ ಕ್ವಿಂಟಲ್‌ಗಿಂತಲೂ ಹೆಚ್ಚು ಮೊಗ್ಗು ಪಡೆಯಬಹುದಾಗಿದೆ.

ಸಾಮಾನ್ಯವಾಗಿ ೪೦ ರೂಪಾಯಿ ಯಿಂದ ಆರಂಭವಾಗುವ ಬೆಲೆ ೧೨೦ ರೂಪಾಯಿಗೆ ತಲುಪುವ ಸಾಧ್ಯತೆ ಇರುತ್ತದೆ. ಆಷಾಡ ಮಾಸದಲ್ಲಿ ಹೂವಿನ ಇಳುವರಿ ಹೆಚ್ಚು ಇರುತ್ತದೆ. ಆದರೆ ಆ ಸಮಯದಲ್ಲಿ ಧಾರ್ಮಿಕ ಹಾಗೂ ವಿವಾಹದಂತಹ ಕಾರ‍್ಯಕ್ರಮಗಳು ಇರುವುದಿಲ್ಲವಾದ್ದರಿಂದ ಬೆಲೆ ಮಾತ್ರ ಅತೀ ಕಡಿಮೆ.

ಸದ್ಯ ಹಡಗಲಿ ಮೊಗ್ಗಿಗೆ ಕೆ.ಜಿ ಗೆ ೮೦ ರೂಪಾಯಿ ಬೆಲೆ ಇದೆ. ಏನಿಲ್ಲವೆಂರೂ ಈಗ ದಿನಕ್ಕೆ ಮೂರು ಕ್ವಿಂಟಲ್ ಹೂ ದೊರಕುತ್ತವೆ. ಹೊಸಪೇಟೆ ಮಾರುಕಟ್ಟೆಯಲ್ಲಿ ಕೆ.ಜಿ ಗೆ ೬೦ ರಿಂದ ೮೦ ರೂಪಾಯಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ೮೦ ರಿಂದ ೧೦೦ ರೂಪಾಯಿ ಇನ್ನು ಹುಬ್ಬಳ್ಳಿ, ಡಾವಣಗೆರೆ ಮಾರುಕಟ್ಟೆಯಲ್ಲಿ ೯೦ ರಿಂದ ೧೨೦ ರೂಪಾಯಿ ವರೆಗೆ ಬೆಲೆ ಸಿಗುತ್ತದೆ. ಇದು ಮುಂದೆ ವೃದ್ಧಿಯಾಗುವ ಸಾಧ್ಯತೆ ಇರುತ್ತದೆ. ಈಗಿನ ಬೆಲೆಯನ್ನೇ ಒಂದು ರೀತಿ ಅಂದಾಜು ಮಾಡಿದರೂ ಎರಡು ಕ್ವಿಂಟಲ್ ಮೊಗ್ಗಿಗೆ ಹೆಚ್ಚು ಕಡಿಮೆ ೨೦,೦೦೦ ರೂಪಾಯಿ ಸಹಜವಾಗಿ ದೊರಕುತ್ತದೆ. ಅಂದರೆ ಇವರ ದಿನದ ಆದಾಯ ೨೦,೦೦೦ ರೂಪಾಯಿ ಇದರಲ್ಲಿ ನೂರಾರು ಕೂಲಿ ಕಾರ್ಮಿಕರ ವೇತನ, ತೋಟದ ನಿರ್ವಹಣೆಗೆ ಅರ್ಧಕ್ಕಿಂತಲೂ ಕೊಂಚ ಕಡಿಮೆ ಖರ್ಚಾಗುತ್ತದೆ.

ಜುಲೈ ತಿಂಗಳದ ಸಮಯದಲ್ಲಿ ನಾಲ್ಕು ಕ್ವಿಂಟಲ್ ವರೆಗೆ ಮೊಗ್ಗು ದೊರಕುತ್ತದೆ. ಆ ದಿನಗಳ ದಿನದ ಆದಾಯ ೪೦,೦೦೦ ರೂಪಾಯಿ. ಒಬ್ಬ ರೈತ ಮಹಿಳೆ ಬೆವರಿನ ಫಲ ಇಷ್ಟು ಎಂದರೆ ಅವರು ಈ ಮಟ್ಟಕ್ಕೆ ಬರಬೇಕಾದರೆ ಎಷ್ಟು ಕಷ್ಟಪಟ್ಟಿರಬೇಕು? ಎಷ್ಟು ತೊಂದರೆ ಅನುಭವಿಸಿರಬೇಕು? ಎಂಬುದು ಇಲ್ಲಿ ಮುಖ್ಯವಾದ ಅಂಶವಾಗಿದೆ.

ಮಲ್ಲಿಗೆ ತೂಕ ಮಾಡಿಸಲು ಮುಗಿ ಬಿದ್ದ ಕೆಲಸಗರರು.

ಒಂದು ಎಕರೆ ಮಲ್ಲಿಗೆಯ ತೋಟ ವಾರ್ಷಿಕ ಸುಮಾರು ೨೦ ಕ್ವಿಂಟಲ್ ಮೊಗ್ಗು ಕೊಡುತ್ತದೆ. ಕೆ.ಜಿ  ೬೦ ರೂಪಾಯಿ ಯಂತೆ ಗುಣಿಸಿದರೆ ಕನಿಷ್ಠ ಪಕ್ಷ ೧,೨೦,೦೦೦ ರೂಪಾಯಿ ದೊರಕುತ್ತದೆ. ಇದರಲ್ಲಿ ೫೦,೦೦೦ ರೂಪಾಯಿ ಖರ್ಚು ತಗೆದರೆ ಎಕರೆಗೆ ೭೦,೦೦೦ ರೂಪಾಯಿ ನಿವ್ಹಳ ಲಾಭ ದೊರಕುತ್ತದೆ ಎನ್ನುತ್ತಾರೆ.

ಬೆಳೆ ವಿಧಾನ :

೧೦*೧೦ ರ ಅಂತರದಲ್ಲಿ ಕಸಿ ಕಟ್ಟಿದ ಸಸಿಗಳನ್ನು ನಾಟಿ ಮಾಡಿರುವ ಇವರು ಬಹುತೇಕ ಸಾವಯವ ವಿಧಾನದಲ್ಲಿಯೇ ಕೃಷಿ ಮಾಡುತ್ತಿದ್ದಾರೆ. ಮಲ್ಲಿಗೆ ಬೆಳೆಗೆ ಇಲ್ಲಿನ ವಾತಾವರಣ ಸೂಕ್ತವಾದುದಾಗಿದೆ. ಹೀಗಾಗಿಯೇ ಉತ್ತಮ ಇಳುವರಿ, ತೂಕ, ಗಾತ್ರ ಬರುತ್ತದೆ. ಮಳೆ ಬಿದ್ದು ವಾತಾವರಣದಲ್ಲಿ ಸಾಕಷ್ಟು ನೀರಿನಾಂಶ ಇದ್ದರೆ ಮಲ್ಲಿಗೆ ಬೆಳೆಗೆ ಮತ್ತಷ್ಟು ಇಂಬು ದೊರತಂತೆ.

ಎತ್ತಿನಮನಿಯವರು ಮೊದಲು ‘ಪುಕೊವುಕೊ’ ವಿಧಾನದಲ್ಲಿ ಸಹಜ ಕೃಷಿ ಮಾಡಿದ್ದರು. ಕಳೆ ತೆಗೆಯುವುದಾಗಲಿ, ಬಳ್ಳಿಗಳ ಮಧ್ಯೆ ಹರಗುವಂತಹ ಮಾನವನ ಕೃತಕ ವಿಧಾನ ಅವರ ಕೃಷಿಯಲ್ಲಿ ಬಳಕೆ ಕಡಿಮೆ ಇತ್ತು. ಮಲ್ಲಿಗೆ ಹೂವಿನ ಗಿಡದ ಅಡಿಯಲ್ಲಿ ಸಾರಜನಕ ಪೂರೈಸಲೆಂದು ದ್ವಿದಳ ಧಾನ್ಯದ ಬೆಳೆಗಳು, ಸೂರ‍್ಯನ ಅತಿ ನೇರಳೆ ಕಿರಣಗಳನ್ನು ತಡೆಹಿಡಿಯುವುದಕ್ಕಾಗಿ ನೆಲಕ್ಕೆ ಹಾಸಿದ ಹಬ್ಬುವ ಬಳ್ಳಿಗಳೂ ಹೀಗೆ ಒಂದಕ್ಕೊಂದು ಪೂರಕವಾಗಿ ಬೆಳೆದು ದಪ್ಪ ಪೊದೆಯಂತಾಗಿದ್ದವು. ಇಂತಹ ಸಹಜ ಕೃಷಿ ಪದ್ಧತಿಯಲ್ಲಿಯೇ ಖರ್ಚಿಲ್ಲದೇ ಸಾಕಷ್ಟು ಲಾಭ ಪಡೆದುಕೊಂಡಿದ್ದರು. ಆದರೆ ಈ ಬೆಳೆಗೆ ನೂರಾರು ಕೂಲಿ ಆಳುಗಳೇ ಮುಖ್ಯ ಆಧಾರ, ಅವರು ಕೈಕೊಟ್ಟರೆ ಅಧೋ ಗತಿ ಇಂತಹ ಪರಸ್ಥಿತಿ ಇರುವಾಗ ಈ ಬಯಲು ಸೀಮೆಯ ಕಾರ್ಮಿಕರು ಇಂತಹ ಪೊದೆಯಲ್ಲಿ ಕಾಲೂರಿ ಕೆಲಸ ಮಾಡಲು ಹಿಂಜರಿಯುವ ವಾತಾವರಣ ಕಂಡು ಬಂದಿದ್ದರಿಂದಾಗಿ ಈಗ ಆ ಎಲ್ಲ ಹಬ್ಬು ಬಳ್ಳಿಗಳನ್ನು ಹಾಗೂ ಮಲ್ಲಿಗೆ ಬೆಳೆಯಲ್ಲಿ ಬೆಳೆಯುವ ಎಲ್ಲ ನಮೂನೆಯ ಕಳೆಗಳನ್ನು ಕಳೆ ಕೊಚ್ಚುವ ಯಂತ್ರದಿಂದ ಕತ್ತರಿಸಿ ಅಲ್ಲಿಯೇ ಹೊದಿಕೆ ಮಾಡುವುದರಿಂದ ಭೂಮಿ ಸ್ಪಂಜಿನಂತೆ ಮೆತ್ತಗಾಗಿದೆ.

ಸಾಮಾನ್ಯವಾಗಿ ಚನ್ನಾಗಿ ನೀರು ಬಸಿದು ಹೋಗುವಂತಹ ಕೆಂಪು ಗೋಡುಮಣ್ಣು ಇಲ್ಲವೆ ಮರುಳು ಮಿಶ್ರಿತ ಗೋಡು ಮಣ್ಣು ಈ ಬೆಳೆ ಬೆಳೆಯಲು ಹೆಚ್ಚ ಸೂಕ್ತವಾದ ಮಣ್ಣು ಎಂದು ತೋಟಗಾರಿಕಾ ಅಧಿಕಾರಿಗಳು ಸಲಹೆ ನೀಡುತ್ತಾರೆ. ಮಲ್ಲಿಗೆ ನಾಟಿ ಮಾಡಲು ಮಳೆಗಾಲ ಅತ್ಯಂತ ಯೋಗ್ಯವಾದ ಸಮಯವಾಗಿದ್ದು ಜೂನ್ ದಿಂದ ಆಗಷ್ಟ್ ತಿಂಗಳುಗಳು ನಾಟಿ ಮಾಡಲು ಉತ್ತಮ ಅವಧಿಯಾಗಿದೆ.

ನುಸಿರೋಗ, ಕೆಂಪು ಶಲ್ಕ ಕೀಟ, ಹಿಟ್ಟು ತಿಗಣೆ, ಮಲ್ಲಿಗೆ ತಿಗಣೆ, ಎಲೆ ತಿನ್ನುವ ಹುಳುಗಳ ಹಾವಳಿ, ಜೊತೆಗೆ ಎಲೆ ಚಿಕ್ಕೆ ರೋಗ, ಸೊರಗು ರೋಗ, ಬೂದಿ ರೋಗ, ಬೇರಿಗೆ ಜಂತು ರೋಗ ಕಾಣಿಸಿಕೊಳ್ಳುತ್ತವೆ.

ಚೀಲಕ್ಕೆ ಭರ್ತಿಯಾದ ಮೊಗ್ಗು.

ಡಿಸೆಂಬರ್‌ನಲ್ಲಿ ಮಲ್ಲಿಗೆ ಗಿಡಗಳನ್ನು ಕಟಾವ್ ಮಡಿದಾಗ ಹಾಗೂ ಎಪ್ರಿಲ್, ಮೇ ತಿಂಗಳಿನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ ಸಾಮನ್ಯವಾಗಿ ಬೆಳೆಗಳಿಗೆ ಎಲೆಚುಕ್ಕೆ ರೋಗ, ಬೂದಿರೋಗ, ಶಿಲೀಂದ್ರಬಾಧೆ ಬರುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಪಕ್ಕಾ ಸಾವಯವ ಕೃಷಿಕರಾಗಿರುವ ಇವರು ಸಾಮಾನ್ಯವಾಗಿ ಅವುಗಳ ನಿಯಂತ್ರಣಕ್ಕಾಗಿ ತಮ್ಮ ಬೇಲಿಯ ಬದಿಯಲ್ಲಿಯೇ ಬೆಳೆದು ನಿಂತಿರುವ ಆ ಬಾಧೆ ನಿವಾರಿಸಲು ಕ್ರಿಮಿನಾಶಕಗಳ ಬದಲಾಗಿ ಸರ್ವೇಗಿಡ (ಕ್ಯಾಜೋರಿನ್ ಕನ್ನಿಂಗ್ ಹ್ಯಾಮ್), ಲಂಟಾನ, ಸುವರ್ಣಗಡ್ಡೆ, ಕಾಗದ ಹೂ, ಎಕ್ಕ, ಕತ್ತಾಳೆ ವಿಷಮಧಾರಿ, ಅಡುಸೋಗೆ ಹಾಗೂ ಬೇವಿನ ಎಲೆಗಳಂತಹ ೧೦ ಕೇ,ಜಿ ಸೊಪ್ಪನ್ನು ೧೦೦ ಲೀ. ನೀರಿನಲ್ಲಿ ಮೂರು ದಿನ ನೆನೆಹಾಕಿ ಕಷಾಯ ತಯರಿಸುತ್ತಾರೆ. ನಂತರ ೧೦ ಲೀ. ನೀರಿನಲ್ಲಿ ೧೦೦ ಮಿ.ಲೀ ನಷ್ಟು ಈ ಕಷಾಯ ಬೆರೆಸಿ ಬೆಳೆಗೆ ಸಿಂಪರಣೆ ಮಡುತ್ತಾರೆ. ಹೂವಿನ ಗುಣಮಟ್ಟ ವೃದ್ಧಿಸಲು ಗೋ ಮೂತ್ರವನ್ನೂ ಸಿಂಪರಣೆ ಮಾಡುತ್ತಾರೆ.

ಉಪದ್ರವಿ ಕೀಟಗಳು ವಿಕರ್ಷಿಸಲು ಎತ್ತಿನ ಕೋಡಿನ ತುಂಡು, ಕೊಳಗ, ಕೂದಲು, ಬಜಿಬೇರು ಸೇರಿಸಿ ಸಾಯಂಕಾಲ ತೋಟದ ಮೂಲೆ-ಮೂಲೆಗಳಲ್ಲಿ ಹೊಗೆ ಮಾಡಿ ನಿಯಂತ್ರಿಸುತ್ತಾರೆ.

ತೋಟದ ಬದಿಯಂದು ಟ್ಯಾಂಕ್ ನಿರ್ಮಿಸಿದ್ದು ಅದರಲ್ಲಿ ಗೋಮೂತ್ರ, ಎರೆಜಲ, ಜೀವಾಮೃತ ಸಂಗ್ರಹಿಸಿ ಸೆಕ್ಷನ್ ಪೈಪ್‌ಗಳ ಮೂಲಕ ಬೆಳೆಗಳಿಗೆ ಸಾಗಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಮಲ್ಲಿಗೆ ಹೂಗಳು ಸುವಾಸನೆ, ತೂಕ ಹೊಂದಿ ಹೆಚ್ಚು ಕಾಲದ ವರೆಗೆ ತಾಜಾತನ ಕಾಯ್ದುಕೊಳ್ಳುತ್ತವೆ.

ಬಿಸಿವಾತಾವರಣದಲ್ಲಿ ಹೂವಿನ ಇಳುವರಿ ಕಡಿಮೆ ಇರುತ್ತದೆ, ಮಳೇ ಬಿದ್ದು ವಾತಾವರಣದಲ್ಲಿ ನೀರಿನಾಂಶ ಇದ್ದರೆ ಮೊಗ್ಗು ದಪ್ಪವಾಗಿ ತೂಕ ಹಾಗೂ ಆಕಾರ ಸೇರಿದಂತೆ ಹೆಚ್ಚು ಇಳುವರಿ ದೊರಕುತ್ತದೆ ಎನ್ನುತ್ತಾರೆ.

ಕೆಸಲಗಾರರಿಗೆ ದುಡಿಮೆ ನೀಡಿದರು :

ಪಕ್ಕದ ಮುಟುಗನಹಳ್ಳಿಯಿಂದ ಮೊಗ್ಗು ಬಿಡಿಸಲು ನಿತ್ಯ ೨೦೦ ಕ್ಕಿಂತ ಹೆಚ್ಚು ಕಾರ್ಮಿಕರು ಇವರ ತೋಟಕ್ಕೆ ಕೆಲಸಕ್ಕೆ ಬರುತ್ತಾರೆ. ಬಿಡಿಸಿದ ಪ್ರತಿ ಕೇ.ಜಿ ಮೊಗ್ಗಿಗೆ ೨೦ ರೂಪಾಯಿಯಂತೆ ಕೂಲಿ ಪಡೆಯುತ್ತಾರೆ. ದಿನಕ್ಕೆ ಸಾಮಾನ್ಯವಾಗಿ ಒಬ್ಬರು ಸೀಸನ್‌ನಲ್ಲಿ ೪ ರಿಂದ ೬ ಕೇ.ಜಿ ಮೊಗ್ಗು ಬಿಡಿಸುತ್ತಾರೆ.

ವಾರಕ್ಕೊಮ್ಮೆ ಕೂಲಿಕಾರರ ವೇತನ ಬಟಾವಡೆ ನಡೆಯುತ್ತದೆ. ಅಂದು ಪ್ರಮಿಳಾ ಅವರು ೩೦,೦೦೦ ರೂಪಾಯಿಗಿಂತಲೂ ಹೆಚ್ಚು ಹಣ ವಿತರಣೆ ಮಾಡುತ್ತಾರೆ.

ಮೊಗ್ಗು ಬಿಡಿಸುವ ೫೦ ಕಾರ್ಮಿಕರಿಗೊಬ್ಬರಂತೆ ಮೇಲ್ವಿಚಾರಕರನ್ನು ನೇಮಿಸಿದ್ದಾರೆ. ಕೆಲಸಗಾರರ ಕುಟುಂಬದಲ್ಲಿ ಮದುವೆ, ಮಿಂಜವಿಯಂತಹ ಕಾರ‍್ಯಗಳು ಬಂದಾಗ ಮುಂಗಡವಾಗಿ ಹಣ ನೀಡುವುದು ಅನಿವಾರ‍್ಯ.

ಒಂದು ಎಕರೆ ಮಲ್ಲಿಗೆ ಮೊಗ್ಗು ಬಿಡಿಸಲು ೪೦,೦೦೦ ರೂಪಾಯಿ ಕೂಲಿ ತಗುಲುತ್ತದೆ. ವಾರ್ಷಿಕವಾಗಿ ಸುಮಾರು ಐದರಿಂದ ಆರು ಲಕ್ಷ ರೂಪಾಯಿ ಕಾರ್ಮಿಕರಿಗೆ ಕೂಲಿ ನೀಡುತ್ತೇವೆ ಎಂದು ವಿವರಣೆ ನೀಡುತ್ತಾರೆ ಶಿವಪುತ್ರಪ್ಪ ಎತ್ತಿನಮನಿಯವರು.

ಹೆಚ್ಚು ಕಡಿಮೆ ಬರಗಾಲದ ನೆರಳಲ್ಲಿಯೇ ಇರುವ ಈ ಭಾಗದ ಜನತೆಗೆ ಈ ತೋಟ ಕೆಲಸ ನೀಡಿ ಕೈತುಂಬ ಕೂಲಿ ನೀಡುವ ತಾಣವಾಗಿದೆ. ನಾಲ್ಕಾ ತಿಂಗಳು ಬಿಡುವಿಲ್ಲದೇ ನೂರಾರು ಜನರಿಗೆ ಕೆಲಸ ದೊರೆತರೆ ಉಳಿದ ದಿನಗಳಲ್ಲಿ ಬಳ್ಳಿ ಕಟಾವ್ ಮಾಡುವುದು, ನೀರು ಹಾಯಿಸುವುದು, ಸಾವಯವ ಗೊಬ್ಬರ ತಯಾರಿಕೆ, ಕಳೆ ತೆಗೆಯಲು, ಸಾವಯವ ಔಷಧಿ ಸಿಂಪರಣೆ ಮಾಡಲು, ತೋಟದ ಸುತ್ತಲಿರುವ ತೆಂಗಿನ ಮರದ ಕಾಯಿ ಇಳಿಸುವುದು, ಗಿಟಗ ಬಿಡಿಸುವುದ, ಹೊಸ ಪ್ಲಾಂಟೇಶನ್ ನಂತಹ ವಿವಿಧ ಕೆಲಸಗಳು ಇದ್ದೇ ಇರುತ್ತವೆ. ಹೀಗಾಗಿ ವರ್ಷ ಪೂರ್ತಿ ಕೆಲಸ ದೊರಕುತ್ತದೆ.

ಬ್ಯಾಂಕಿನಿಂದ ಜಮೀನಿಗೆ :

ಅಂದ ಹಾಗೆ ಎತ್ತಿನ ಮನಿಯವರು ಮೂಲತಃ ಕೃಷಿಕರಲ್ಲ್ಲ. ೨೫ ವರ್ಷಗಳ ಹಿಂದೆ ಪ್ರಮಿಳಾ ಅವರು ಶಿವಪುತ್ರಪ್ಪ ಇವರ ಕೈಹಿಡಿದು ಮನೆಗೆ ಬಂದಾಗ ಶಿವಪುತ್ರಪ್ಪ ಗ್ರಾಮೀಣ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬ್ಯಾಂಕ್ ಮಾನೇಜರರೊಬ್ಬರ ಹೆಂಡತಿಯಾಗಿ ಸುಖದ ಜೀವನ ನಡೆಸುತ್ತಿದ್ದ ಆ ಸಮಯ ಬಹಳ ದಿನ ಉಳಿಯಲಿಲ್ಲ. ಕೆಲವೊಂದು ಕಾರಣಗಳಿಂದ ಶಿವಪುತ್ರಪ್ಪ ಸ್ವತಃ ಸೇವೆಯಿಂದಲೇ ಮುಕ್ತಿ ಹೊಂದಿದರು.

ಹಿರಿಯರ ಆಸ್ತಿ ಎಂಬುದೇನೂ ಇವರಿಗೆ ಇದ್ದಿಲ್ಲ. ಇಂತಹ ಸಂದರ್ಭದಲ್ಲಿ ಆಕಾಶವೇ ಕಳಚಿ ಮೇಲೆ ಬಿದ್ದಂತಾಯಿತು. ಎದೆಗುಂದಿದ ಶಿವಪುತ್ರಪ್ಪ ಅವರ ಮನಸ್ಸಿಗೆ ಸತಿ ಪ್ರಮಿಳಾ ಅವರ ಮಾತುಗಳು ಧೈರ‍್ಯ ತುಂಬುತ್ತಿದ್ದವು. ಕಷ್ಟ ಕಾಲದಲ್ಲಿ ಕೆಲವೊಬ್ಬರು ಅಲ್ಪ ಸಹಾಯ ಮಾಡಿದರು.

ಜಮೀನು ಹಿಡಿದು ಕೃಷಿ ಮಾಡಿ ಬದುಕು ನಡೆಸೋಣ ಎಂಬ ಪ್ರಮಿಳಾ ಅವರ ಒತ್ತಾಸೆಗೆ ಮಣಿದರು. ಬಂಗಾರದ ಆಸೆ ಬಿಟ್ಟ ಪ್ರಮಿಳಾ ಬಂಗಾರದ ಬೆಳೇ ಪಡೆಯಲು ನಿಶ್ಚಯಿಸಿ ತಮ್ಮ ಮೈಮೇಲೆ ಹಾಕಿಕೊಂಡಿದ್ದ ಬಂಗಾರದ ಒಡೆವೆಗಳನ್ನೆಲ್ಲಾ ಬಿಚ್ಚಿ ಕೊಟ್ಟರು.

೧೯೮೪ ರಲ್ಲಿ ಹಗರಿಬೊಮ್ಮನಹಳ್ಳಿಯ ಶಿವಾನಂದ ನಗರದಲ್ಲಿ ೫ ಎಕರೆ ಜಮೀನು ಖರೀದಿಸಿದರು. ಆರಂಭದಲ್ಲಿ ಜೋಳ, ಸಜ್ಜೆ, ಮೆಕ್ಕೆಜೋಳದಂತಹ ಬೆಳೆ ಬೆಳೆದರು. ಆದಿನ ನಮಗೆ ಎಂತಹ ಕಷ್ಟದ ಕಾಲ ಇತ್ತು ಅನ್ನೋದು ಹೇಳಿತೀನ್ರಿ, ಜೋಳ ಕೊಯ್ದ ಆಳುಗಳಿಗೆ ಕೂಲಿ ಕೊಡ್ಲಿಕ್ಕೆ ನಮ್ಮಲ್ಲಿ ದುಡ್ಡು ಇದ್ದಿಲ್ಲ, ಮೇಲಿಂದ ಮೇಲೆ ಕೂಲಿ ಆಳುಗಳು ಹಣಕ್ಕಾಗಿ ಮನೆಗೆ ಅಲೆಯುವುದರಿಂದ ಬೇಸರವಾಗಿ ಬಡ್ಡಿ ರೂಪದಲ್ಲಿ ಸಾಲ ತರಲೆಂದು ನಾನು ಪೇಟೆಗೆ ಹೋಗಿದ್ದ, ಮೂರು ತಿಂಗಳ ಬಾಣಂತಿಯಾಗಿದ್ದ ನನ್ನ ಶ್ರೀಮತಿಯವರು ನನ್ನ ಕಷ್ಟ ನೋಡದೇ ತಾವೊಬ್ಬರೇ ಒಣಗಿದ ತೆನೆಗಳನ್ನು ಆಯ್ದು ಬಡಿದು ರಾಶಿ ಮಾಡಿ ೨೦ ಸೇರು ಕಾಳು ಮಾಡಿದ್ದರು. ಅದೇ ಜೋಳ ಮಾರಿ ಆಳುಗಳಿಗೆ ಕೂಲಿ ನೀಡಿದೆವು, ಆದಾಗ್ಯೂ ನಮಗೂ ಒಂದು ಉತ್ತಮ ಕಾಲ ಬಂದೇ ಬರುತ್ತದೆ ಎಂಬ ಆಶಾಭಾವನೆ ಇದ್ದೇ ಇತ್ತು. ಅದೀಗ ಬಂದಿದೆ, ಅದೆಲ್ಲ  ಕ್ರೆಡಿಟ್ ನಮ್ಮ ಶ್ರೀಮತಿಯವರ ಶ್ರಮಕ್ಕೆ ಸಲ್ಲುತ್ತದೆ ಎಂದು ಹೇಳುತ್ತಾರೆ. ಅಮದ ಹಾಗೆ ೨೦೦೫-೦೬ ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಈ ಆದರ್ಶ ರೈತ ಮಹಿಳೆಯನ್ನು ಗುರುತಿಸಿದ ಸರ್ಕಾರ ಪ್ರತಿಷ್ಠಿತ ‘ಕೃಷಿ ಪಂಡಿತ’ ಪ್ರಶಸ್ತಿಯನ್ನು ಈ ದಂಪತಿ ಇರ್ವರಿಗೂ ಜಂಟಿಯಾಗಿ ನೀಡಿ ಅವರ ಕೃಷಿ ಕಾರ‍್ಯಕ್ಕೆ ಮತ್ತಷ್ಟು ಇಂಬು ನೀಡಿದೆ.