. ಧಾರ್ಮಿಕ ನಂಬಿಕೆಗಳು : ಮನುಷ್ಯನ ಅಂತರಾಳದಲ್ಲಿಯ ಭಯ ಮತ್ತು ಆಸ್ತಿರ ಭಾವನೆಗಳು ಈ ನಂಬಿಕೆಗಳ ಮೂಲ ಭೂಮಿಕೆಯಾಗಿದ್ದು, ಇವುಗಳನ್ನು ಅತಿಮಾನುಷ ನಂಬಿಕೆಗಳೆಂದೂ ಕರೆಯಲಾಗುತ್ತದೆ. ನಿಸರ್ಗದ ನಡುವೆ ಬದುಕಬೇಕಿದ್ದ ಮಾನವ ತನ್ನ ಪರಿಸರದ ಅದೆಷ್ಟೋ ಸಂಗತಿಗಳ ಬಗ್ಗೆ ಅಜ್ಞಾನಿಯಾಗಿ ದೆವ್ವ ಭೂ, ಮಾಟ, ಮಂತ್ರ ಮುಂತಾದವುಗಳಲ್ಲಿ ನಂಬಿಕೆಯಿಟ್ಟು, ಅದರ ಪ್ರಭಾವ ಪರಿಧಿಯಿಂದ ಹೊರಬಾರದ ಸ್ಥಿತಿಯಲ್ಲಿದ್ದಾಗ, ಮಾನಸಿಕ ಭ್ರಮೆ ಹಾಗೂ ಅಸ್ತಿರ ಬದುಕಿಗೆ ತಾತ್ಕಾಲಿಕವಾಗಿಯಾದರೂ ಸಮಾಧಾನ ಸಿಗುವುದೆಂಬ ಹಿರಿಯಾಸೆಯಿಂದ ಕೆಲ ಧಾರ್ಮಿಕ ಹಾಗೂ ನಿಷೇಧಾತ್ಮಕ ನಂಬಿಕೆಗಳನ್ನು ಸೃಷ್ಟಿಸಿಕೊಂಡನು. ಪೌರಾಣಿಕ ಹಾಗೂ ಜಾನಪದ ಅಂಶಗಳ ಸಹಯೋಗದಿಂದಲೂ ಕೆಲ ನಂಬಿಕೆಗಳು ಆಚರಣೆಯಲ್ಲಿ ಬಂದವು. ಅಂಥ ಕೆಲ ನಂಬಿಕೆಗಳನ್ನು ಇಲ್ಲಿ ಉದಾಹರಿಸಬಹುದು.

“ಗರ್ಭಿಣಿ ಸ್ತ್ರೀಯರನ್ನು ಕರೆತರಲು ಒಟಹುಟ್ಟಿದವರು ಹೋಗಬಾರದು” ಪೌರಾಣಿಕ ಅಂಶಗಳು ಇಂಥ ನಂಬಿಕೆಗಳಿಗೆ ಮೂಲವಾಗಬಹುದು. ಶ್ರೀಕೃಷ್ಣನು ಗರ್ಭಿಣಿಯಾದ ತಂಗಿ ಸುಭದ್ರೆಯನ್ನು ಕರೆತರಲು ಹೋದಾಗ, ಮಾರ್ಗಾಯಾಸದಿಂದ ತಂಗಿಯ ಬಾಡಿದ ಮುಖವನ್ನು ನೋಡಲಾರದೇ ಮರದಡಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುವಾಗ, ಸುಭದ್ರೆಯ ಒತ್ತಾಯದ ಮೇರೆಗೆ ಚಕ್ರವ್ಯೂಹಕ್ಕೆ ಸಂಬಂಧಿಸಿದ ಕಥೆಯನ್ನು ಹೇಳಲು ತೊಡಗುವನು. ಕಥೆ ಕೇಳುತ್ತ ‘ಹೂಂ’ ಗುಡುವ ತಂಗಿ ನಿದ್ರೆ ಹೋದಾಗ, ಗರ್ಭಸ್ಥ ಶಿಸು ‘ಹೂಂ’ ಕಾರವನ್ನು ಮುಂದುವರೆಸವದು. ಗರ್ಭದಲ್ಲಿಯ ಹಲವಾರು ಬಾಹುಗಳುಳ್ಳ ಗಂಡು ಮಗುವನ್ನು ದಿವ್ಯದೃಷ್ಟಿಯಿಂದ ಶ್ರೀಕೃಷ್ಣ ನೋಡಿ, ಆ ಮಗು ಅಷ್ಟಬಾಹುಗಳಿಂದ ಹೊರಬಂದರೆ ತನ್ನ ಕೃಷ್ಣ ನಾಮಕ್ಕೆ ನಾಮ ಹಾಕುತ್ತದೆಂದು ತತ್ತರಿಸಿ, ತನ್ನ ಚಕ್ರದಿಂದ ಎರಡು ಬಾಹುಗಳನ್ನುಳಿದು ಉಳಿದ ಬಾಹುಗಳನ್ನು ಕತ್ತರಿಸಿ ಹಾಕುತ್ತಾನೆ. ಎಂಬ ಪೌರಾಣಿಕ ಹಿನ್ನೆಲೆ ಇಂಥ ನಂಬಿಕೆಗೆ ಮೂಲವಾದರೆ ಮತ್ತೊಂದು ಕಡೆಗೆ ‘ಸೂತ್ರಕಥೆ’ ಇನ್ನೊಂದು ಮಾಹಿತಿಯನ್ನು ಒದಗಿಸುತ್ತದೆ. ಗರ್ಭಿಣಿಯಾದ ತಂಗಿಯನ್ನು ಅಣ್ಣ ತವರಿಗೆ ಕರೆಯಲು ಹೋದಾಗ, ಊಟೋಪಚಾರ ಮಾಡಿಸಿ, ಒಡವೆ ವಸ್ತುಗಳನ್ನು ಹಾಕಿ ಗಂಡನ ಮನೆಯವರು ಸೊಸೆಯನ್ನು ಕಳಿಸಿ ಕೊಡುತ್ತಾರೆ. ತಂಗಿಯ ಮೈಮೇಲಿನ ಬಹುಬೆಲೆ ಬಾಳುವ ವಡವೆಗಳು ಅಣ್ಣನ ಕಣ್ಣು ಕುಕ್ಕಿಸಿ ಬಂಗಾರದ ಬಯಕೆ ಗರಿಗೆದರಿ ನಿಲ್ಲುತ್ತದೆ. ದಟ್ಟವಾದ ಕಾಡಿನಲ್ಲಿ ಅವಳ ಎಲ್ಲ ಆಭರಣಗಳನ್ನು ಕಿತ್ತುಕೊಂಡು ಅವಳನ್ನು ಕಡಿದು ರುಂಡವನ್ನು ಪಕ್ಕ ಕೊಳಕ್ಕೆ ಹಾಕಿ ಹೋಗುತ್ತಾನೆ. ಅದೇ ಕೊಳದಲ್ಲಿ ಅವಳ ರುಂಡ ತಾವರೆಯ ಹೂವಾಗಿ ಅರಳಿ ನಿಲ್ಲುತ್ತದೆ. ತಿಂಗಳಾದರೂ ಸೊಸೆ ಹೆತ್ತ ಸುದ್ದಿ ಬಾರದೇ ಇದ್ದಾಗ, ಗಂಡನ ಮನೆಯವರು ಮಗನೊಂದಿಗೆ ತಾವೇ ಹೋಗುತ್ತಾರೆ. ದಾರಿಯ ಕೊಳದಲ್ಲಿ ಅರಳಿ ಕಣ್ಸೆಳೆಯುವ ತಾವರೆಯ ಹೂವನ್ನು ಕಿತ್ತುಕೊಳ್ಳಲು ಗಂಡ ಹೋದಾಗ ಆ ಹೂ “ಮುಟ್ಟಬ್ಯಾಡ ಮುಟ್ಟಬ್ಯಾಡ ಗಂಡಯ್ಯ” ಮುಟ್ಟಿದರೆ ಹೂ ಬಾಡೀತು.

“ಅಣ್ಣ ಅನ್ನೊ ಸೂಳೇಮಗ ಕಚಕ್ಕನೇ ಕಡಿದ” ಎಂದು ಮಾತನಾಡುತ್ತದೆ. ಇದು ತುಂಬ ಆಸಕ್ತಿದಾಯಕ ಸನ್ನಿವೇಶ ಕಥೆ. ಥಟ್ಟನೆ ಇಲ್ಲಿ ಸೂತ್ರಪ್ರಾಯವಾಗಿ ನಿಂತು ಬಿಡುತ್ತದೆ. ಹೀಗೆ ಹಲವಾರು ಸಾಹಿತ್ಯ ಸಂಗತಿಗಳು ಅಣ್ಣನಿಂದ ತಂಗಿಗೆ ಬಂದ ಕುತ್ತವನ್ನು ವಿವರಿಸುತ್ತವೆ. ಆದ್ದರಿಂದ ಅಂಥ ಕಥೆಗಳು ಸಾರುವ ನೀತಿ ಜನತೆಯ ಬದುಕಿನಲ್ಲಿ ನಂಬಿಕೆಯ ನೊಗವಾಗಿ ನಿಂತಿದೆ. ಇಂಥ ನಂಬಿಕೆಯನ್ನು ಕುರಿತು ಹೀಗೂ ಅರ್ಥೈಸಬಹುದು. ತುಂಬು ಗರ್ಭಿಣಿಯನ್ನು ಕರೆತರುವಾಗ ಪ್ರಸವದ ಪ್ರಯಾಸ ಸಂಭವಿಸುವದುಂಟು. ಅಂಥ ಸಮಯದಲ್ಲಿ ಅರಿತವರಿಗಿಂತ ನುರಿತವರು ಜಾಣರು ಎನ್ನುವಂತೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಅದರಲ್ಲಿಯೇ ತಾಯಿಯಾದವಳು ಹತ್ತಿರವಿದ್ದರೆ ಹೆರಿಗೆಯ ನೋವಿಗೆ ತಕ್ಕಂತೆ ಉಪಚರಿಸಬಲ್ಲಳು ಎಂಬುದೇ ಈ ನಂಬಿಕೆಗೆ ಬಲವಾದ ಹಿನ್ನೆಲೆಯೆಂದು ಹೇಳಬಹುದು.

ಮಾಟ ಮತ್ತು ಮಾಂತ್ರಿಕ ಶಕ್ತಿಯು ಜನಪದರ ಜೀವನದ ಮೇಲೆ ಗಾಢ ಪ್ರಭಾವ ಬೀರಿ, ಅವರ ದೈನಂದಿನ ಬದುಕನ್ನು ಮತ್ತಷ್ಟು ಧಾರ್ಮಿಕ ಮುಖವಾಗಿರಿಸಿದೆ. ಹೆಚ್ಚು ಸಂದರ್ಭಗಳಲ್ಲಿ ಜೀವನಕ್ಕೆ ಮಾರಕವಾಗುವ ಈ ತಂತ್ರ, ಕೆಲ ಸಂದರ್ಭಗಳಲ್ಲಿ ಆರೋಗ್ಯವರ್ಧಕವಾಗಿಯೂ ಜನ-ಮನದಲ್ಲಿ ವಿಶ್ವಾಸವನ್ನು ಕುದುರಿಸುವದು.

“ಹೊಟ್ಟೆನೋವು ಮತ್ತು ಹೊಟ್ಟೆ ಉಬ್ಬಿದಾಗ ಹೊಸ್ತಿಲದ ಎಡಭಾಗದ ಮೇಲೆ ಬೂದಿ ಹಾಕಿ, ಅದರ ಮೇಲೆ ಎಡಗಾಲಿಟ್ಟು ಮೂರು ಸಾರಿ ತಿರುಗಿ, ಉಜ್ಜಿ ಆ ಬೂದಿಯನ್ನು ಸವರಿ, ಇಳೇದಗಿದು ತಿನ್ನಿಸಿದರೆ ಗುಣಮುಖವಾಗುವದು” ಇಂಥ ನಂಬಿಕೆಗಳಲ್ಲಿ “ಹೊಸ್ತಿಲು ಎಡಭಾಗ” ಎಡಗಾಲು ಬೂದಿ “ಇಳೇದಗ” ಇವೇ ಮುಂತಾದ ಮಾಂತ್ರಿಕ ಸಂಬಂಧಿ ತಾಂತ್ರಿಕ ಶಬ್ದಗಳನ್ನು ಕೇಳಿದಾಗಲೇ ಇದು ರೋಗವಾಸಿಗೊಳಿಸುವ ತಂತ್ರವಾಗಿರಬೇಕು ಎಂಬ ಮಾನಸಿಕ ಪ್ರಕ್ರಿಯೆ ರೋಗಿಯಲ್ಲಿ ಪ್ರಾರಂಭವಾಗುತ್ತದೆ. ಮಂತ್ರಿಸಿದ ವಿಭೂತಿಯು ಪರಿಣಾಮಕಾರಿಯಾಗಬಲ್ಲುದಾದರೂ, ಇಲ್ಲಿ ಮಂತ್ರಶಕ್ತಿಯ ಪ್ರಭಾವದಿಂದಲೇ ಪರಿಣಾಮ ನೆಟ್ಟಗಾಯಿತು ಎಂಬುದನ್ನು ಒಪ್ಪುವಂತಿಲ್ಲ. ಈ ಮಂತ್ರಶಕ್ತಿ ವ್ಯಕ್ತಿಯ ಮನೋಭಾವಕ್ಕೆ ತಕ್ಕಂತೆ ವರ್ತಿಸುತ್ತದೆ. ಆ ಸಂದರ್ಭದಲ್ಲಾಗುವ ಮಾನಸಿಕ ಕ್ರಿಯೆಯನ್ನು ಮರೆಯಬಾರದು. ರೋಗಿಗೆ ರೋಗದ ಭಯಕ್ಕಿಂತ ‘ವಾಸಿ’ ಯಾಗುತ್ತದೆ ಎಂದು ಮಾಂತ್ರಿಕರು ಹೇಳುವ ಮಾತಿನಲ್ಲಿಯೇ ಹೆಚ್ಚು ನಂಬಿಕೆ. ಆಗ ರೋಗ ಬಂದಿದೆ ಎಂಬ ಭಾವ ಮರೆಯಾಗಿ ‘ವಾಸಿ’ ಯಾಗುತ್ತದೆಂಬುದೇ ಆತನ ತಲೆಯಲ್ಲಿ ತುಂಬಿರುತ್ತದೆ. ಈ ಮಾನಸಿಕ ಕ್ರಿಯೆಯಿಂದಲೇ ಅರ್ಥೈಸಬಹುದು. ಬೂದಿ ಅಥವಾ ವಿಭೂತಿ ಇಂಗಾಲವೆನ್ನಬಹುದು. ಹೊಟ್ಟೆಬಾಕರು ಅಜೀರ್ಣಕ್ಕೆ ತುತ್ತಾಗುವದು ಸಹಜ. ಜೀರ್ಣಶಕ್ತಿ ಕಡಿಮೆಯಾದರೆ ಹೊಟ್ಟೆನೋವು ಬರುವದು. ಹೊಟ್ಟೆಯಲ್ಲಿ ಗ್ಯಾಸಟ್ರಿಕ್ ಹೆಚ್ಚಾದಾಗ ಸಹಜವಾಗಿಯೇ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಬೂದಿರೂಪದ ಇಂಗಾಲವನ್ನು ತೆಗೆದುಕೊಂಡಾಗ, ಅದು ಹೊಟ್ಟೆಯಲ್ಲಿಯ ಅತಿಯಾದ ಗ್ಯಾಸನ್ನು ಹೀರುತ್ತದೆ. ಕ್ರಮೇಣ ಊದಿದ ಹೊಟ್ಟೆಯು ಇಳಿದು ನೋವು ಶಮನವಾಗುವದು. ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಈ ಕ್ರಿಯೆಯನ್ನು ನಿರ್ವಹಿಸಿದರೆ, ಆರೋಗ್ಯದಾಯಕವೆಂಬ ಸತ್ಯಸಂಗತಿ, ನಂಬಿಕೆಯ ರೂಪದಲ್ಲಿ ಮಾಂತ್ರಿಕ ಕವಚವನ್ನು ಧರಿಸಿ ಮಾನವ ಶ್ರದ್ಧೆಗೆ ಕಾರಣವಾಗಿದೆ.

ಘಟನಾ ಪ್ರಧಾನ ಅಂಶಗಳೂ ಧಾರ್ಮಿಕ ನಂಬಿಕೆಗಳ ಒಂದು ಅಂಗವೆಂದೇ ಹೇಳಬೇಕು. ಮಾನವನ ಮನಸ್ಸು ಇಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಇವೂ ಮಾನವ ಸಂಬಂಧಿಯೆಂದೇ ಪರಿಗಣಿಸಬೇಕು. ಊರು, ಕೇರಿ, ಬೆಟ್ಟ ಮುಂತಾದ ವಿಷಯಗಳ ಕುರಿತು ಜರುಗಿದ ಅಪರೂಪದ ಘಟನೆಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಇಂಥ ನಂಬಿಕೆಗಳು ಜನ್ಮತಾಳುವವು. ಇವು ಸಾರ್ವತ್ರಿಕವಾಗಿರದೇ ಆಯಾ ಪ್ರದೇಶದಲ್ಲಿ ಮಾತ್ರ ಆಚರಣೆಯಲ್ಲಿರುವದು ಗಮನಾರ್ಹ.

ಉದಾ. “ಕೆಂಪಿಯ ಗುಡಿಗೆ ಕೆಂಡದ ಮೇಲಿನ ಕಾಳನ್ನು ನೈವೇದ್ಯವಾಗಿ ಅರ್ಪಿಸಬೇಕು” ಬೆಂಗಳೂರಿನ ಪ್ರದೇಶದಲ್ಲಿ ನಡೆದು ಹೋದ ಘಟನೆಯನ್ನು ಜನಪದರು ಬಾಯಲ್ಲಿಟ್ಟುಕೊಂಡು ಬಂದ ನಂಬಿಕೆಯಿದಾಗಿದೆ. ಈ ನಂಬಿಕೆ ಆ ಪ್ರದೇಶದಲ್ಲಿ ಮಾತ್ರ ರೂಢಿಯಲ್ಲಿದೆ. ಈಗ ‘ಬೆಂಗಳೂರ’ ಇರುವ ಪ್ರದೇಶದಲ್ಲಿ ಒಮ್ಮೆ ಸಂಚಾರ ಹೊರಟ ಕೆಂಪೇಗೌಡ (ಕೆಂಪೇಗೌಡನೆಂದರೆ ಹೊಯ್ಸಳ ವೀರಬಲ್ಲಾಳನಿರಬೇಕು) ಅತಿ ಹಸಿವೆಯಿಂದ ಬಳಲುತ್ತಿರವಾಗ, ಆತನ ಮನೆದೇವತೆಯಾದ ಕೆಂಪಮ್ಮನನ್ನು ಸ್ಮರಿಸಿದನಂತೆ, ‘ನೆನಸಿದವರ ಮನಸ್ಸಿನಲ್ಲಿ’ ಎಂಬಂತೆ ಕೆಂಪಮ್ಮ ದೇವತೆ ಮುದುಕಿಯ ರೂಪ ತಾಳಿ ಬೆಂದ ಕಾಳನ್ನು ನೀಡಿ ಆತನ ಹಸಿವೆಯನ್ನು ಹಿಂಗಿಸಿ, ಅಲ್ಲಿ ಒಂದು ಕೋಟೆಯನ್ನು ಕಟ್ಟಿಸಲು ಅಪ್ಪಣೆ ಮಾಡಿ ಅದೃಶ್ಯಳಾದಳಂತೆ. ಅಮ್ಮನ ಮಾತನ್ನು ತಲೆಯಮೇಲೆ ಹೊತ್ತು ಅಲ್ಲಿ ಒಂದು ಕೋಟೆ ಕಟ್ಟಿಸಿ, ಆ ದೇವಿ ಕೊಟ್ಟ ಬೆಂದ ಕಾಳಿನ ಸ್ಮರಣೆಗಾಗಿ ಕೋಟೆಗೆ ‘ಬೆಂಗಾಳು’ ಎಂದು ಹೆಸರಿಟ್ಟನಂತೆ. ಆತ ಕಟ್ಟಿಸಿದ ಕೋಟೆಯೇ ಕೆಂಪಮ್ಮ ದೇವಸ್ಥಾನವಾಯಿತು. ಈ ಹಿನ್ನೆಲೆಯಲ್ಲಿ ಕೆಂಪಿಯ ಗುಡಿಗೆ ಬೆಂದ ಕಾಳು ನೈವೇದ್ಯ ಎಂಬ ಪರಂಪರೆಗೆ ಈ ನಂಬಿಕೆ ಮೂಲವಾಗಿರಬೇಕು. (ಬೆಂಗಾಳು ಎಂಬ ಪೂರ್ವ ಪದಕ್ಕೆ ‘ಊರು’ ಎಂಬ ಉತ್ತರ ಪದ ಸೇರಿ ಬೆಂಗಾಳೂರು > ಬೆಂಗಳೂರು ಆಗಿ ಮಾರ್ಪಾಡಾಡಿರಬೇಕು ಎಂದು ಡಾ. ಎಂ. ಎಂ. ಕಲಬುರ್ಗಿಯವರು ಹೇಳುತ್ತಾರೆ)

ಇದೇ ಹಿನ್ನೆಲೆಯಲ್ಲಿ ಹುಟ್ಟಿದ ರಾಮಾಯಣದ ದಶರಥ ಸಂಬಂಧಿ ನಂಬಿಕೆಯಾದ ‘ಮಾನವ ಮಾತು ಮೀರಿ ಮಂಗ್ಯ ಆಗಬಾರದು’ ಎಂಬುದು ಪಿರಿಯಾಪಟ್ಟಣದ ಸಮೀಪದ ಮಾಕಲ್ಲಯ್ಯನ ಗುಡ್ಡಕ್ಕೆ ಹಿನ್ನೆಲೆಯಾಗಿ ಹುಟ್ಟಿದ ನಂಬಿಕೆಯಾದರೆ, ನೇತ್ರಾವತಿಯ ಪೂಜೆಗೆ ಹೋದರೆ ಕೃಷ್ಮನ ಕಣ್ಣೀರು ಒರಸಬೇಕು’ ಎಂಬುದು ಗಂಗೆಯ ಪೂಜೆಗೆ ಸಂಬಂಧಿಸಿದ ನಂಬಿಕೆಯಾಗಿದೆ. ಹೀಗೆ ವದಂತಿಯನ್ನು ಹಿನ್ನೆಲೆಯಾಗಿರಿಸಿಕೊಂಡು ಹುಟ್ಟಿದ ಇಂಥ ಅಪರೂಪದ ನಂಬಿಕೆಗಳು ಸಂಶೋಧನೆಗೂ ಕೆಲವೊಮ್ಮೆ ಪೂರಕ ಸಾಮಗ್ರಿ ಒದಗಿಸಬಲ್ಲವೆಂಬ ಗಮನಾರ್ಹ.

ಧಾರ್ಮಿಕ ರಂಗದ ಕೆಲ ನಂಬಿಕೆಗಳು ಮನುಷ್ಯನ ಹೀನ ಸಂಸ್ಕೃತಿಗೆ ಕನ್ನಡಿ ಹಿಡಿದಿವೆ. ‘ಗಂಡನೊಂದಿಗೆ ಕೆಂಡವಾದರೆ ಸ್ವರ್ಗಸುಖ ಸಿಗುತ್ತದೆ’ ಎಂಬುದು ವೇದಕಾಲದ ಸ್ತ್ರೀ ಸ್ವಾತಂತ್ರ್ಯ ಹರಣದ ದ್ಯೊತಕವಾಗಿ ರೂಢಿಯಲ್ಲಿದ್ದ ‘ಸತಿ ಪದ್ಧತಿ’ಯನ್ನು ಪ್ರೋತ್ಸಾಹಿಸಲು ಹುಟ್ಟಿಕೊಂಡ ನಂಬಿಕೆಯಾಗಿದೆ. ಪ್ರಾಚೀನ ಕವಿ ಕಾವ್ಯಗಳಲ್ಲಿ ಈ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ‘ಗಂಡ ಸತ್ತನಂತರ ಹೆಂಡತಿ ಚಿತೆಯ ಹಾಸಿಗೆಯ ಮೇಲೆ ಮಲಗಬೇಕು’ ಎಂಬ ಕಟ್ಟಳೆ ಸಮಾಜದ ಪ್ರಮುಖ ನಂಬಿಕೆಯಾಗಿ, ಸ್ತ್ರೀಯರಿಗೆ ಕಣ್ಣಿಗೆ ಕಾಣದ ಸ್ವರ್ಗದ ಆಶೆಯನ್ನು ತೋರಿಸಿ, ಹೆಂಗಳೆಯರನ್ನು ಜೀವಂತ ಸುಡುವ ಕ್ರೌರ್ಯ ನಂಬಿಕೆಯ ರೂಪದಲ್ಲಿ ಪರಂಪರೆಯಾಗಿ ಬೆಳೆದು ಬಂದಿತ್ತು. ಒಂದು ವೇಳೆ ಸ್ತ್ರೀ ಅಗ್ನಿ ಪ್ರವೇಶವನ್ನು ಪ್ರತಿಭಟಿಸಿ ಬದುಕುವ ಆಶೆಯನ್ನು ತೋರಿಸಿದರೆ, ವೇಶ್ಯೆಯಾಗಿಯೋ ಇಲ್ಲವೇ ಪ್ರತಿಷ್ಠಿತನ ಖಾಸಿಗಿ ಹೆಂಡತಿಯಾಗಿಯೋ ಜೀವನ ಸಾಗಿಸಬೇಕಿತ್ತು. ಇಂಥ ಬಿಕ್ಕಟ್ಟಿನಲ್ಲಿ ಸಿಕ್ಕು ಬೆದರಿದ ಹೆಣ್ಣು, ಮರ್ಯಾದೆ ಕಳೆದುಕೊಂಡು ಬಾಳಲು ಇಷ್ಟಪಡದೇ ಸಹಗಮನಕ್ಕೆ ಸಿದ್ಧಳಾಗುವ ಕರುಣಾಜನಕ ಕಥೆ ಇಂಥ ನಂಬಿಕೆಗೆ ಮೂಲವಾಗಿದೆ. ಕೆಂಡವಾಗುವದಕ್ಕೂ ಸ್ವರ್ಗಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಕುರುಡು ನಂಬಿಕೆಯಿಂದ ಕೆಂಡದ ಬಾಯಿಗೆ ಕಾಯ ಒಪ್ಪಿಸುವ ಈ ದುಷ್ಟಪದ್ಧತಿ, ಜನಪದ ನಂಬಿಕೆಯ ರೂಪದಲ್ಲಿ ಸಾಕಷ್ಟು ಪ್ರಚಾರದಲ್ಲಿತ್ತು ಎಂಬುದಕ್ಕೆ ಅಲ್ಲಲ್ಲಿ ಸಿಗುವ ಮಾಸ್ತಿಕಲ್ಲುಗಳೇ ಸಾಕ್ಷಿಯಾಗಿವೆ.

“ಬಾವಿಗೆ ನೀರು ಬರದಿದ್ದರೆ ಮಕ್ಕಳನ್ನು ಬಲಿಕೊಡಬೇಕು”
“ಬುನಾದಿ ಭದ್ರವಾಗಲು ಹಸುಳೆಗಳನ್ನು ಆಹುತಿಕೊಡಬೇಕು.”
“ಕೆರೆಯಲ್ಲಿ ನೀರು ಬರದಿರಲು ಕಿರಿಸೊಸೆಯನ್ನು ಹಾರಕೊಡಬೇಕು”

-ಎಂದು ಹರಕೆ ಹೊರುವ ಹಿನ್ನೆಲೆಯಲ್ಲಿ ಹುಟ್ಟಿದ ನಂಬಿಕೆಗಳು ಮಾನವನ ರಾಕ್ಷಸೀ ಮನೋಭಾವನೆಗೆ ಹಿಡಿದ ಕನ್ನಡಿಯಾಗಿವೆ. ಅಜ್ಞಾನದ ಅಂಧಕಾರಕ್ಕೆ ಸಾಕ್ಷಿಯಾಗಿ ನಿಂತ ಸಿಡಿ ಆಡುವ, ಬೆತ್ತಲೆಸೇವೆ ಮಾಡುವ, ನಾಯಿಯಂತೆ ಬೊಗಳುವ, ದಿಂಡುರಕಿ ಉಳ್ಳುವ, ಗುಂಡು ಹೊಡೆದುಕೊಳ್ಳುವ ನೂರಾರು ನಂಬಿಕೆಗಳು ಅಜ್ಞಾನದ ಅವತಾರಗಳೇ ಆಗಿ, ಧಾರ್ಮಿಕ ವಿಧಿಯ ಅವಿಭಾಜ್ಯ ಅಂಗಗಳಾಗಿದ್ದವೆಂಬುದಕ್ಕೆ ಮೇಲೆ ಹೇಳಿದ ನಂಬಿಕೆಗಳೇ ಪ್ರತ್ಯಕ್ಷ ಸಾಕ್ಷಿಗಳಾಗಿವೆ. ಮೈಯ್ಯಲ್ಲಿ ದೇವರು ಬಂದವರಂತೆ ನಟಿಸಿ ಮಾಟ ಮಂತ್ರ, ಚೀಟಿ ತಾಯತಗಳನ್ನು ರಟ್ಟೆಗೆ ಕಟ್ಟಿ, ಕುರುಡು ನಂಬಿಕೆಗಳಿಗೆ ಹುಟ್ಟುಹಾಕಿ ಜನಸಾಮಾನ್ಯರ ಅಜ್ಞಾನದ ದುರುಪಯೋಗ ಮಾಡಿಕೊಳ್ಳುವ ಬಾಯಿ ಚಪಲದ, ಕೈಚಳಕದ ಯಜಮಾನ ಸಂಸ್ಕೃತಿಯ ಈ ಗುತ್ತಿಗೆದಾರರ ಮೇಲುಮುಸುಕನ್ನು ತೆರೆದು, ಅಂಥವರ ಹೂರಣವನ್ನು ಹೊರಗೆಡೆಹಿದರೆ ಇಂಥ ಅಮಾನುಷ ನಂಬಿಕೆಗಳಿಂದ ವ್ಯಕ್ತಿ ಮುಕ್ತಿ ಪಡೆಯಬಹುದು.

ಧಾರ್ಮಿಕ ಪ್ರಕ್ರಿಯೆಗೆ ಸಂಬಂಧಿಸಿದ ಇನ್ನು ಕೆಲ ನಂಬಿಕೆಗಳು ಸಮಾಜದ ಅನಧಿಕೃತ ಶಾಸನಗಳಂತೆ ಸುಖಜೀವನಕ್ಕೆ ಸಂಜೀವಿನಿಯಾಗಿವೆ. ಅಂಥವುಗಳ ಪಾಲನೆಯಿಂದ ಬದುಕು ಹಸನಾಗಿ ಜೀವನದಲ್ಲಿ ಭರವಸೆ ಮೂಡುವದುಂಟು.

“ಸಾವಿನ ಮನೆಗೆ ಹೋದವರು ಸ್ನಾನ ಮಾಡಿ ಒಳಗೆ ಬರಬೇಕು”
“ಬಂಜೆಯರು ಅರಳಿ ಮರ ಸುತ್ತುವರೆದರೆ ಮಕ್ಕಳಾಗುವವು”

ಇಂಥ ನಂಬಿಕೆಗಳನ್ನು ಆಚರಿಸುವದರಿಂದ ಯಾವ ಅಪಾಯವೂ ಇಲ್ಲ. ಸಾಮಾನ್ಯವಾಗಿ ಸಾವು ಸೂತಕವೆಂಬ ನಂಬಿಕೆಯಿದೆ. ಹೆಣದ ಪರಿಸರದಲ್ಲಿ ಸಾವಿಗೆ ಕಾರಣವಾದ ರೋಗವರ್ಧಕ ಕ್ರಿಮಿಗಳು ಇರಲು ಸಾಧ್ಯವಿದೆ. ಸ್ಮಶಾನಕ್ಕೆ ಹೋದಾಗ ರೋಗ ಕ್ರಿಮಿಗಳ ಜೊತೆಗೆ ಸ್ಮಶಾನದಲ್ಲಿಯ ಧೂಳು ಕಾಲಿಗೆ ಅಂಟಿಕೊಂಡಿರುತ್ತದೆ. ಆದ್ದರಿಂದ ಹೆಣ ಒಪ್ಪ ಮಾಡಿ ಬರುವಾಗ ಕೈಕಾಲು ಮುಖ ತೊಳೆಯುವದು. ಮಡಿವಂತಿಕೆಯ ಲಕ್ಷಣವಾದರೂ, ತಲೆಯ ಮೇಲೆ ನೀರು ಹಾಕಿ ಚೆನ್ನಾಗಿ ಸ್ನಾನ ಮಾಡುವದು ಇನ್ನೂ ಕ್ಷೇಮಕರ. ಅದನ್ನು ಬಿಟ್ಟು ಶಾಸ್ತ್ರ ಮನಸ್ಸಿನಿಂದ ತಲೆಯ ಮೇಲೆ ಮೂರು ಬಾರಿ ನೀರು ಚಿಮುಕಿಸಿ ಸೂತಕ ಕಳೆದುಕೊಳ್ಳುವದು ಕೇವಲ ಮನಸ್ಸಿನ ಸಮಾಧಾನಕ್ಕೆ ಮಾತ್ರ.

‘ಬಂಜೆಯರು ಅರಳೆಮರ ಸುತ್ತುವರೆದರೆ ಮಕ್ಕಳಾಗುವವೆಂಬದು ಆರೋಗ್ಯದಾಯಕ ನಂಬಿಕೆ. ಯಾಕೆಂದರೆ ಅರಳಿಮರದ ಗಾಳಿ ಗರ್ಭಕೋಶದ ರೋಗಗಳನ್ನು ನಾಶಪಡಿಸುವ ಗುಣಪಡೆದಿದೆಯೆಂದು ವೈದ್ಯಕೀಯ ರಂಗದ ಅಭಿಪ್ರಾಯ. ಗಿಡ ಸುತ್ತುಹಾಕಿ ಬಂದು ಬಾಗಿ ನಮಸ್ಕರಿಸುವಾಗ ಕಿಬ್ಬೊಟ್ಟಿಗೆ ಒಂದು ರೀತಿ ವ್ಯಾಯಾಮ ಸಿಕ್ಕು, ಗರ್ಭಕೋಶದ ಕೊರತೆ ಪೀಡೆಗಳು ದೂರಾಗಿ ಗರ್ಭಧರಿಸುವ ಸಂಭವವಿರುತ್ತದೆ. ಅದಕ್ಕಾಗಿ ಅಂಥವರನ್ನು ಕಂಡು ಅರಳೆಗೆ ಒಂದು ಸುತ್ತ ಹಾಕಿ ಹೊಟ್ಟೆ ಮುಟ್ಟಿ ನೋಡಿಕೊಂಡರಂತೆ’ ಎಂಬ ಗಾದೆಯು ಹುಟ್ಟಿಕೊಂಡಿದೆ. ಒಟ್ಟಾರೆ ಬಂಜೆಯರ ಬಯಕೆಗೆ ಪೂರಕ ಪುರಾವೆ ಒದಗಿಸುವ ಆರೋಗ್ಯದಾಯಕ ನಂಬಿಕೆ ಇದಾಗಿದೆ.

‘ತುಂಬಿದ ಬಸುರೆ ಸತ್ತರ ಹೂಳುವ ಸಮಯದಲ್ಲಿ ಹೊಟ್ಟೆ ಸೀಳಬೇಕು’ ಇದು ಅನಾಗರಿಕ ಲಕ್ಷಣವಾಗಿ ಕಂಡರೂ ಹೊಸ ಜೀವದ ಆಕಸ್ಮಿಕ ರಕ್ಷಣೆಗೆ ಅನಿವಾರ್ಯವೆಂದೇ ಹೇಳಬೇಕು. ದಿನ ತುಂಬಿದ ಗರ್ಭಿಣಿ ಸತ್ತಸ್ವಲ್ಪೇ ಸಮಯದಲ್ಲಿಯೇ ಸಂಸ್ಕಾರ ಜರುಗಿದ್ದಾದರೆ, ದಿನ ತುಂಬಿರುವ ಮಗು ಸ್ವಲ್ಪ ಕಾಲ ಗರ್ಭಕೋಶದಲ್ಲಿ ಬದುಕಿರುವ ಸಾಧ್ಯತೆಯಿದೆ. ಹಾಗೆ ಹೊಟ್ಟೆ ಸೀಳಿದಾಗ ಕೂಸಿನ ಚಲನವಲನ ಇರುವದು ಸಾಧ್ಯವಾದರೂ, ಅದು ಅಪರೂಪವೆಂಬುದೂ ಗಮನಾರ್ಹ. ಸುದೈವದಿಂದ ಕೂಸು ಜೀವಂತವಾಗಿದ್ದರೆ ಬದುಕಿಸಿಕೊಳ್ಳಲು ಸಾಧ್ಯವಿದೆ. ಹಲವಾರು ಹೆಣಗಳಲ್ಲಿ ಒಂದು ಕೂಸು ಬದುಕಿ ಉಳಿದರೂ. ಅದಕ್ಕೆ ಬೆಲೆಯಿದೆ. ಅದು ಓಣಿಯ ಕೂಸಾಗಿ ಸರ್ವರ ಅನುಕಂಪಕ್ಕೆ ಪಾತ್ರವಾಗಬಲ್ಲುದೆಂದು ಜನರ ನಂಬಿಕೆಯಾಗಿದೆ.

‘ತೀರ್ಥ ತಿರಸ್ಕರಿಸಿದರೆ ದೆವ್ವ ಕನಸಿನಲ್ಲಿ ಬರುವದು’ -ಇಂಥ ನಂಬಿಕೆಯಲ್ಲಿಯೂ ಉತ್ತಮಿಕೆಯನ್ನು ಗುರುತಿಸಬಹುದು. ತೀರ್ಥದ ಪಾತ್ರೆಯಲ್ಲಿ ತುಳಸೀ ದಳ ಇರುವದು. ಅದರ ಮಹತ್ವ ತೀರ್ಥ ಕೊಡುವ ಪೂಜಾರಿಗೂ ತಿಳದಿರುವದಿಲ್ಲ. ಕಣ್ಣುಮುಚ್ಚಿ ಕುಡಿಯುವ ಭಕ್ತರಿಗೂ ಗೊತ್ತಿರುವದಿಲ್ಲ. ಪೂಜಾರಿಯನ್ನು ಪೀಡಿಸಿ ಕೇಳಬೇಕೆಂದು ಯುವಪೀಳಿಗೆ ಹಟ ತೊಟ್ಟರೆ, ಪೂಜಾರಿಯನ್ನು ಪೀಡಿಸಿದರೆ ಪಾಪ ಬರುವದು ಎಂಬ ಹೊಸ ನಂಬಿಕೆಯನ್ನು ಹಿರಿಯರು ಸೃಷ್ಟಿಮಾಡಿ, ಕುತೂಹಲಿಗಳ ಬಾಯಿ ಮುಚ್ಚಿಸುವದು ಉಂಟು. ತುಳಸೀದಳದಲ್ಲಿ ಔಷಧೀಯ ಒಳ್ಳೆ ಗುಣಗಳಿವೆ. ಅದನ್ನು ತೀರ್ಥದ ನೆಪದಲ್ಲಿ ತೆಗೆದುಕೊಂಡರೆ, ಅನೇಕ ಕಾಯಿಲೆಗಳು ದೂರಾಗುತ್ತವೆಯೆಂಬ ವೈಜ್ಞಾನಿಕ ಸತ್ಯ ಇದರಲ್ಲಿ ಅಡಕವಾಗಿದೆಯೇ ಹೊರತು, ‘ದೈವ್ವದ ಬೆದರಿಕೆ’ ಕೇವಲ ಔಪಚಾರಿಕವೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

“ತುಂಬಿದ ಗರ್ಭಿಣಿಯರು ಹೆಣದ ಸಂಗಡ ಸ್ಮಶಾನಕ್ಕೆ ಹೋಗಬಾರದು”
“ಮೊದಲು ಬೆಳೆದ ಧಾನ್ಯವನ್ನು ದೇವಸ್ಥಾನಕ್ಕೆ ಕೊಡಬೇಕು”
“ಸಂಜೆಯಾದ ನಂತರ ಕಸ ಹೊರ ಚೆಲ್ಲಬಾರದು”

ಇವೆಲ್ಲಾ ಧಾರ್ಮಿಕ ಮನೋಭಾವನೆಯಿಂದ ತುಂಬಿತುಳುಕುವ ಉಪಯುಕ್ತ ನಂಬಿಕೆಗಳೆಂದು ಹೇಳಬಹುದು.

“ಗಣಪತಿಯ ಎಡೆಯನ್ನು ಹೆಂಗಸರು ಉಂಡರೆ ಬಂಜೆಯರಾಗುವರು”
“ಗುಳ್ಳವ್ವನ ಎಡೆಯನ್ನು ಗಂಡಸರು ಉಂಡರೆ ಮೀಸೆ ಬರುವದಿಲ್ಲ”
“ಕಾಮಣ್ಣನ ಬೆಂಕಿಯಲ್ಲಿ ಕಡ್ಲಿ ಸುಟ್ಟು ತಿಂದರೆ ಹಲ್ಲು ಗಟ್ಟಿಯಾಗುವವು”
ಬಂಜೆಯರು ಹನುಮಪ್ಪನಿಗೆ ನಡೆದುಕೊಂಡರೆ ಬಸಿರುದುಂಬುವದು”

ಇವೇ ಮುಂತಾದ ಅರ್ಥವಿಲ್ಲದ ನಂಬಿಕೆಗಳು ಧಾರ್ಮಿಕ ರಂಗದಲ್ಲಿ ಮೂಢನಂಬಿಕೆಗಳಾಗಿ ಉಳಿದುಕೊಂಡು ಬಂದಿವೆ. ಇಂಥವುಗಳನ್ನು ಪುರಸ್ಕರಿಸಿದರೆ ಪ್ರಯೋಜನವಿಲ್ಲ ತಿರಸ್ಕರಿಸಿದರೆ ಯಾವ ಹಾನಿಯೂ ಇಲ್ಲ.

. ಸಾಂಸ್ಕೃತಿಕ ನಂಬಿಕೆಗಳು :

ಸಮಾಜಜೀವಿಯಾದ ಮಾನವ ತನ್ನ ಬದುಕು ಹಸನಾಗಲೆಂಬ ಉದ್ದೇಶದಿಂದ, ನಿತ್ಯಜೀವನದಲ್ಲಿ ನಂಬಿಕೆ ರೂಪದ ಸಾಕಷ್ಟು ನಿಯಮಗಳನ್ನು ಸೃಷ್ಟಿಸಿಕೊಂಡಿರುವನು. ಹುಟ್ಟಿನಿಂದ ಸಾವಿನವರೆಗೆ ಈ ನಂಬಿಕೆಗಳು ಆತನ ಮೇಲೆ ಸವಾರಿ ಮಾಡುತ್ತಲೇ ಬಂದಿದ್ದು, ಎಂತಹ ಪ್ರಸಂಗ ಬಂದರೂ ಈ ಸಿದ್ಧ ಶಾಸನಗಳನ್ನು ಮೆಟ್ಟಿ ನಿಲ್ಲುವ ಸಾಹಸ ಆತ ಮಾಡಲಾರ. ಮಾನವನ ಹುಟ್ಟಿನೊಂದಿಗೆ ರಕ್ತಗತವಾಗಿ ಬಂದ ಇವು ಆತನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಮದುವೆ, ದಾಂಪತ್ಯ ಜೀವನ, ಬಸಿರು, ಬಾಣಂತಿ, ಊಟೋಪಚಾರ, ಉಡುಗೆ -ತೊಡುಗೆ ಹಬ್ಬ -ಹರಿದಿನ, ವಾರ-ನಕ್ಷತ್ರ ಜ್ಯಾತಿ ಪದ್ಧತಿ ಹಾಗೂ ನಿದ್ರೆ ಕನಸು ಮುಂತಾದ ವಿಷಯಗಳನ್ನೊಳಗೊಂಡು ಸೃಷ್ಟಿಯಾದ ನಂಬಿಕೆಗಳೆಲ್ಲವೂ ಈ ಭಾಗದಲ್ಲಿ ಸೇರುತ್ತಿದ್ದು, ವಿಷಯ ವೈವಿಧ್ಯತೆಯಿಂದ ಈ ಭಾಗಕ್ಕೆ ಉಳಿದ ಭಾಗಗಳಿಗಿಂತಲೂ ಹೆಚ್ಚಿನ ವ್ಯಾಪ್ತಿ ಪ್ರಾಪ್ತವಾಗಿದೆ.

ಮದುವೆ, ಬದುಕಿನ ಬಹುಮುಖ್ಯ ಸಂಸ್ಕಾರ ಎಂಬ ನಂಬಿಕೆ ಜನಪದರಲ್ಲಿ ಬೇರು ಬಿಟ್ಟಿದೆ. ನಿಸರ್ಗ ಸಹಜವಾದ ಲೈಂಗಿಕ ಕ್ರಿಯೆಗೆ ವ್ಯವಸ್ಥಿತ ಮಾರ್ಗ ಕಲ್ಪಿಸಿ ಕೊಡುವದೇ ಇದರ ಉದ್ದೇಶ.

ಮಕ್ಕಳ ಮದುವೆ ಮಾಡಿದವರು ಸತ್ತಮೇಲೆ ಸ್ವರ್ಗವಾಸಿಯಾಗುವರು ಎಂಬ ನಂಬಿಕೆಯು ಮದುವೆಯ ಅವಸರಕ್ಕೆ ಕಾರಣವಾಗಿರಬೇಕು. ಅದಕ್ಕಾಗಿ ಮಕ್ಕಳ ಮನೋಭಾವನೆಯನ್ನು ಅರಿಯದೇ, ಆಜನ್ಮಪರ್ಯಂತ ಹೆಣ್ಣಿಗೆ ಕಣ್ಣೀರಿನ ಅಭಿಷೇಕ ಮಾಡಿಸುವ ಇಂಥ ಅನಿಷ್ಟ ಪದ್ಧತಿಗಳು, ಎಷ್ಟೋ ಜನ ಹೆಣ್ಣು ಮಕ್ಕಳ ಸುಂದರ ಕನಸುಗಳನ್ನು ನುಂಗಿ ನೀರು ಕುಡಿದ ಸಂಗತಿಗಳು ಜನಪದ ಕಥೆಯಿಂದ ಹಾಗೂ ಚರಿತ್ರೆಯಿಂದ ತಿಳಿದು ಬರುತ್ತದೆ. ಇನ್ನು ಕೆಲ ನಂಬಿಕೆಗಳು ಸುಖ ಜೀವನಕ್ಕೆ ಪೂರಕವಾಗಿದ್ದು ಕೆಳಕಂಡ ಉದಾಹರಣೆಗಳಿಂದ ಅರಿಯಬಹುದು.

“ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ಹೆಣ್ಣು ಗಂಡಿನ ಮನೆಯಲ್ಲಿ ಋತುಮತಿಯಾದರೆ ಅಂದಿನಿಂದ ಒಸಗೆಯಾಗುವವರೆಗೆ ಗಂಡ ಹೆಂಡತಿಯ ಮುಖ ನೋಡಬಾರದು” ಇಂಥ ನಂಬಿಕೆಗಳಲ್ಲಿ ಉಪಯುಕ್ತ ಅರ್ಥ ಹುಡುಕಬಹುದು. ಪ್ರಾಚೀನ ಕಾಲದಲ್ಲಿ ತೊಟ್ಟಿಲಕ್ಕೆ ಬಾಸಿಂಗ ಕಟ್ಟಿ ಮದುವೆ ಮಾಡಿದ ಉಲ್ಲೇಖಗಳು ಜನಪದದಲ್ಲಿ ಸಿಗುತ್ತವೆ. ಹೆಣ್ಣು ಪ್ರಾಪ್ತ ವಯಸ್ಸಿನ ಬರುವವರೆಗೆ ಗಂಡು ಕಾಯಬೇಕಾಗುತ್ತಿತ್ತು. ಕರುಣಿನ ಕುಡಿಯನ್ನು ಹಬ್ಬಿಸಬೇಕೆಂದೋ, ತವರು ಮನೆಯನ್ನು ಗೆಲ್ಲಬೇಕೆಂದೋ ಚಿಕ್ಕಂದಿನಲ್ಲಿಯೇ ಹೆಣ್ಣನ್ನು ಗಂಡಿನ ಮನೆಯಲ್ಲಿ ಬೆಳಸುವ ಪರಂಪರೆಯಿತ್ತು. ಹುಡುಗಿ ಗಂಡಿನ ಮನೆಯಲ್ಲಿ ಮೈನೆರೆತಿದ್ದಾದರೆ ಆ ಕಾಲದಲ್ಲಿ ಹೆಣ್ಣು ಮತ್ತು ಗಂಡಿನ ಆಶೆಯ ಬುಗ್ಗೆ ಸ್ಫೋಟಗೊಂಡು ಎದ್ದು ನೋಡುವ, ಕದ್ದು ನೋಡುವ ಕ್ರಿಯೆ ಸರ್ವೇ ಸಾಮಾನ್ಯ. ಪರಸ್ಪರರು ಮಾತನಾಡಬೇಕು, ನಕ್ಕು ನಲಿಯಬೇಕು ಎಂಬ ಅಭಿಲಾಷೆಯ ಸಂಗಡ ಸುಪ್ತವಾದ ಕಾಮಾಭಿಲಾಷೆಯೂ ಗರಿಗೆದರುವದು ಸಹಜ. ಅದಕ್ಕಾಗಿ ಅಪ್ರಾಪ್ತ ವಯಸ್ಸಿನಲ್ಲಿ ಪರಸ್ಪರರು ಕೂಡುವಿಕೆಯಿಂದ ಅವರು ಕಲ್ಪಿಸಿಕೊಂಡ ಸುಖಪ್ರದ ಜೀವನದ ಕನಸಿನ ಕನ್ನಡಿ ಛಿದ್ರಗೊಳ್ಳಬಾರದೆಂದು ಈ ಆರೋಗ್ಯದಾಯಕ ನಂಬಿಕೆ ಸೃಷ್ಟಿಯಾಗಿದೆ.

“ಮದುವೆಯಾದ ಒಂದು ವರ್ಷದ ಒಳಗಾಗಿ ಅತ್ತು ಅಳಿಯನಿಗೆ ಊಟಕ್ಕೆ ನೀಡಬಾರದು” ಇಲ್ಲಿ ಅರ್ಥವಿಲ್ಲವೆಂದರೂ ಸ್ವಲ್ಪ ಮಟ್ಟಿಗೆ ಇಂಥ ನಂಬಿಕೆ ವಿಚಾರಾರ್ಹ. ಹಿಂದಿನವರು ಸಾಮಾನ್ಯವಾಗಿ ಪ್ರಾಪ್ತ ವಯಸ್ಸಿನ ಬರುವ ಮೊದಲೇ ಹೆಣ್ಣಿನ ಮದುವೆ ಮಾಡಿ ಜವಾಬ್ದಾರಿ ತಪ್ಪಿತೆಂದು ಸಮಾಧಾನ ಪಡುತ್ತಿದ್ದರು. ತಾಯಿ ಮತ್ತು ಮಗಳ ಮುಖದಲ್ಲಿ ಹೆಚ್ಚು ಸಾದೃಶ್ಯವಿರುವದು ಸಹಜವಾದುದರಿಂದ, ಅತ್ತೆಯ ಮುಖ ಹೆಂಡತಿಯ ಮುಖದಂತೆಯೇ ಕಾಣಬಹುದೇನೋ ಎಂಬ ಮುನ್ನೆಚ್ಚರಿಕೆಯ ಕ್ರಮವಾಗಿ ಜನಪದೀಯರು ಇಂಥ ಕೆಲವು ನಂಬಿಕೆಗಳಿಗೆ ಹುಟ್ಟು ಹಾಕಿರಬಹುದು.

ಒಸಗೆಗೆ ಸಂಬಂಧಿಸಿದಂತೆ ಕೆಲ ನಂಬಿಕೆಗಳು ಪ್ರಚಲಿದಲ್ಲಿದ್ದು “ಒಸಗೆಯ ದಿನ ರಾತ್ರಿ ದೀಪ ನಂದದಂತೆ ನೋಡಿಕೊಳ್ಳಬೇಕು” ನಾಚುವ ಗಂಡು ಹೆಣ್ಣು ಪರಸ್ಪರರ ಮುಖದ ಮೇಲಿನ ಪ್ರತಿಕ್ರಿಯೆಯನ್ನು ತಿಳಿಯಲು, ಮುಖದ ಸೌಂದರ್ಯವನ್ನು ಕಣ್ತುಂಬ ನೋಡಿ ಆನಂದಿಸಲು ಮತ್ತು ಲಜ್ಜಾಭಾವವನ್ನು ತೊರೆದು ಪರಸ್ಪರರು ಮಾನಸಿಕವಾಗಿ ಹತ್ತಿರವಾಗಲು ಇಂಥ ನಂಬಿಕೆಗಳು ಪ್ರಚೋದನೆ ನೀಡುತ್ತಿರಬೇಕು.

“ಟೆಂಗಿನಕಾಯಿ ಒಡೆಯುವಾಗ ತೊಟ್ಟಿಲಗಾಯಿ ಒಡೆದರೆ ಹೆಣ್ಣು ಮಗುವಿಗೆ ಜನ್ಮ ಕೊಡುವರು” “ಫಲ ತಾಂಬೂಲಾದಿಗಳನ್ನು ಗಂಡ ಹೆಂಡತಿಯ ಉಡಿಯಲ್ಲಿ ಹಾಕಿದರೆ ಹೆಂಡತಿ ಫಲವತಿಯಾಗುವಳು” ಇವೆಲ್ಲ ಅರ್ಥವಿಲ್ಲದ ನಂಬಿಕೆಗಳೆಂದೇ ಹೇಳಬೇಕು.

ಅವಸರದಲ್ಲಿ ಒಡೆದ ಟೆಂಗಿನಕಾಯಿ ತೊಟ್ಟಿಲುಗಾಯಿಯಾಗಿ ಹೋಳಾಗುವದು ಸಹಜ. ಹಾಗೆಂದರೆ ಒಡೆದವರು ಹೆಣ್ಣು ಮಗುವಿಗೆ ಜನ್ಮ ಕೊಡುವರೆಂಬುದು ಹುಂಬತನದ ಮಾತಾದೀತು. ಅಕಸ್ಮಾತ್ ಇದೇ ನಿಜವಾದದ್ದಾದರೆ ದೇವಸ್ಥಾನದ ಮನೆಯ ಹೆಂಗಸರಿಗೆ ಹೆರುವದೇ ಒಂದು ದೊಡ್ಡ ಕೆಲಸವಾಗಿ ಪೂಜಾರಿಯ ಮನೆಯಲ್ಲಿ ಹೆಣ್ಣು ಮಕ್ಕಳ ಸುರಿಮಳೆಯೇ ಆಗಬೇಕಾದೀತು, ಹೆಂಗಸರ ಬಸಿರಿನ ಬಗ್ಗೆ ಇಂಥ ಅನೇಕ ನಂಬಿಕೆಗಳು ವೈಜ್ಞಾನಿಕ ಸತ್ಯವಿಲ್ಲದೇ ಹುಟ್ಟಿಕೊಂಡು, ಆಚರಣೆಯ ಹಾದಿಯಲ್ಲಿ ಅವರನ್ನು ದಂಡಿಸುತ್ತ ಬಂದಿವೆ.

“ಹೆಣ್ಣು ಮಕ್ಕಳ ಚೊಚ್ಚಿಲು ಹೆರಿಗೆ ತವರುಮನೆಯಲ್ಲಿಯೇ ಆಗಬೇಕು” ಹೆಣ್ಣಿನ ಬದುಕಿನಲ್ಲಿ ಚೊಚ್ಚಿಲು ಹೆರಿಗೆ ತುಂಬ ಅಪಾಯಕರವಾದುದು. ಅದು ಅವಳ ಪಾಲಿಗೆ ಮರುಜನ್ಮ ಪಡೆದಂತೆ ಎಂಬ ನಂಬಿಕೆ ಹಳ್ಳಿಯಲ್ಲಿದೆ. ಏನೂ ಅರಿಯದ ಅವಳಿಗೆ ಈ ಸ್ಥಿತಿಯಲ್ಲಿ ಹೊಸ ಅನುಭವ, ಭೀತಿ, ಆತಂಕ ಹಾಗೂ ಮಾನಸಿಕ ತೊಳಲಾಟ ಇವೇ ಮುಂತಾದ ತೊಂದರೆಗಳು ಮೈಮನವನ್ನು ಮತ್ತು ಕಾಡುತ್ತಿರುವವು. ಸಾಮಾನ್ಯವಾಗಿ ಅವಳ ಆಶೆ. ಆಕಾಂಕ್ಷೆ ಆತಂಕಗಳನ್ನು ಅರಿತು ಚೆನ್ನಾಗಿ ಉಪಚರಿಸಬಲ್ಲವಳು ಆ ಹೆಣ್ಣಿನ ತಾಯಿ. ಈ ಉದ್ದೇಶದಿಂದ ಚೊಚ್ಚಲು ಹೆರಿಗೆ ತವರು ಮನೆಯಲ್ಲಿಯೇ ಆಗಬೇಕೆಂದು ಹೇಳುವರು.

ಹಾಗೆಯೇ ಮಕ್ಕಳನ್ನು ಎತ್ತಿ ಆಡಿಸುವಾಗ, ಮಡಿಲಲ್ಲಿ ಕುಣಿಸುವಾಗ ಹೊಟ್ಟಿಗೆ ಪೆಟ್ಟು ಬೀಳದಿರಲೆಂಬ ಕಾರಣದಿಂದ “ಗರ್ಭಿಣಿಯರು ಮಕ್ಕಳನ್ನು ಎತ್ತಿಕೊಳ್ಳಬಾರದು” ಎಂಬ ನಂಬಿಕೆಯು ರೂಢಿಯಲ್ಲಿರಬೇಕು. ಅದೇ ಹಿನ್ನೆಲೆಯಲ್ಲಿ ಕೊಳ್ಳಿಗೆ ನೀರು ಹಾಕುವಾಗ ಅದರಿಂದ ಏಳುವ ಹೊಗೆ ಅವಳನ್ನಾವರಿಸಿ ಉಸಿರುಗಟ್ಟಿಸಬಹುದು. ಕೆಮ್ಮು, ಕಣ್ಣೀರುದುಂಬುವದು, ತಲೆ ತಿರುಗುವದು ಇಂಥ ತೊಂದರೆಗಳು ಆಗದಿರಲೆಂದು “ಬಸುರೆಯಾದವಳು ಉರಿಯುವ ಕೊಳ್ಳಿಗೆ ನೀರು ಹಾಕಬಾರದು” ಎಂಬ ನಂಬಿಕೆ ಹುಟ್ಟಿರಬೇಕು, ಮೂಲ ನಕ್ಷತ್ರದಲ್ಲಿ ಮಕ್ಕಳು ಹುಟ್ಟಬಾರದು ‘ಎಂಟನೇ ಗರ್ಭದಲ್ಲಿ ಗಂಡು ಮಗು ಹುಟ್ಟಬಾರದು’ ಬಸುರೆಯ ಮುಖ ಕಪ್ಪಾದರೆ ಗಂಡು ಬೆಳ್ಳಗಾದರೆ ಹೆಣ್ಣು ಕೂಸು ಜನಿಸುವವು’ ಮಕ್ಕಳ ಸಾಕೆನಿಸಿದಾಗ ಕೊನೆಗೆ ಹುಟ್ಟುವ ಕೂಸಿಗೆ ‘ಸಾಕಮ್ಮ’ ಎಂದು ಹೆಸರಿಡಬೇಕು ಇವೇ ಮುಂತಾದವುಗಳು ಬಸುರೆ ಬಾಣಂತಿಯರು ಕುರಿತ ಅರ್ಥವಿಲ್ಲದೆ ನಂಬಿಕೆಗಳಾಗಿವೆ.

ಊಟ ಉಡುಗೆಗೆ ಸಂಬಂಧಿಸಿದಂತೆ ಸಾಕಷ್ಟು ನಂಬಿಕೆಗಳು ಬಳಕೆಯಿಲ್ಲಿವೆ. ನಮ್ಮ ಜನರು ದೈವದ ನೆಲೆಗಟ್ಟಿನ ಮೇಲೆ ಗಟ್ಟಿಯಾಗಿ ನಿಂತಿರುವದರಿಂದ ಊಟ ಮಾಡುವ ಪ್ರತಿಯೊಂದು ಪದಾರ್ಥ ಅವರ ಪಾಲಿಗೆ ಪ್ರಸಾದದ ಪವಿತ್ರ ಕಲ್ಪನೆಯನ್ನು ಮೂಡಿಸುತ್ತವೆ. ಒಲೆಯ ಮೇಲೆ ಅಟ್ಟಿದ್ದು ಪದಾರ್ಥ, ಜಗಲಿಯ ಮೇಲ;ಎ ಇಟ್ಟಿದ್ದು ಪ್ರಸಾದ ಎಂಬ ಜನಪದ ನಂಬಿಕೆ ಊಟದ ಬಗೆಗೆ ಅವರು ನಂಬಿಕೊಂಡ ದೈವೀ ಕಲ್ಪನೆಯನ್ನು ತೋರಿಸುವದು. ದೇವರನ್ನು ಸಂತೃಪ್ತಿಪಡಿಸಿ ಊಟ ಮಾಡುವದರಲ್ಲಿಯೇ ಅವರ ಹಿರಿತನ ಅಡಗಿದೆ. ಇದೇ ಹಿನ್ನೆಲೆಯಲ್ಲಿ ದೇವರು ದಿಂಡರಿಗೆ ನೈವೇದ್ಯವಾದ ಮೇಲೆ ಊಟ ಮಾಡಬೇಕು’ ಎಂಬ ನಂಬಿಕೆ ಹುಟ್ಟಿಕೊಂಡಿದೆ. ಪದಾರ್ಥ, ದೇವರಿಗೆ ಅರ್ಪಿಸಿದಾಗ ಪ್ರಸಾದ ಕಳೆಯನ್ನು ಹೊಂದುವದೆಂಬ ಪವಿತ್ರ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಊಟ ಪ್ರಾರಂಭವಾಗುತ್ತದೆ.

“ಹಿಂಬಡಪೂರ್ತಿ ಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು”
“ಊಟಕ್ಕೆ ಕುಳಿತಾಗ ಉಂಡೆ ಕಟ್ಟಿ ತಿಂದರೆ ಆಯುಷ್ಯ ಕಡಿಮೆ”

ಹಿಂಬಡದ ಮೇಲೆ ಸ್ವಲ್ಪ ತಗ್ಗು ಭಾಗವಿದ್ದು, ನಡೆದಾಡುವಾಗ ಅಲ್ಲ ಹೆಚ್ಚು ಧೂಳು ಸೇರುವ ಸಾಧ್ಯತೆಯಿದೆ. ಮುಂದಿನಿಂದ ಹಾಕಿಕೊಂಡ ನೀರು ಹಿಮ್ಮಡಕ್ಕೆ ಮುಟ್ಟಿದೆಯೂ ಇರಬಹುದು. ಅದಕ್ಕಾಗಿ ಹಿಮ್ಮಡದ ಕೊಳಕು ಹೋಗುವಂತೆ ಚೆನ್ನಾಗಿ ಕಾಲು ತೊಳೆಯುವದು ಆರೋಗ್ಯದಾಯಕ ಲಕ್ಷಣವೆಂಬ ಹಿನ್ನೆಲೆಯಲ್ಲಿ ಈ ನಂಬಿಕೆ ಗಮನಾರ್ಹವಾದುದು. ಹಾಗೆಯೇ ‘ಊಟ ಮಾಡುವಾಗ ಕಾಲು ಕುಣಿಸಬಾರದು’ ‘ಕತ್ತಲಲ್ಲಿ ಊಟ ಮಾಡಬಾರದು’ ಇವೇ ಮುಂತಾದವುಗಳು ಊಟವನ್ನು ಕುರಿತ ಇತರ ಕ್ಷೇಮಕರ ನಂಬಿಕೆಗಳಾಗಿವೆ. ‘ಜಂಗಮರನ್ನು ಮನೆಗೆ ಪ್ರಸಾದಕ್ಕೆ ಕರೆದರೆ, ಯಜಮಾನ ಸಾಷ್ಟಾಂಗ ಹಾಕಿ ಸಾಗಲಿ ಎನ್ನಬೇಕು. ಜಂಗಮರು ಹಿಂಗ ಮ್ಯಾಲಿಂದ ಮ್ಯಾಲೆ ಮಾಡ್ತಾಯಿರು ಎನ್ನಬೇಕು. ನೀವೂ ಹಿಂಗ ನಡೆಸಿಕೊಡ್ರಿ ಎಂದು ಯಜಮಾನ ಹೇಳಬೇಕು’ ಇವೆಲ್ಲಾ ಸತ್ಪರಂಪರೆಯನ್ನು ಆಧರಿಸಿ ಹುಟ್ಟಿದ ನಂಬಿಕೆಗಳಾಗಿವೆ.

ಉಡುಪನ್ನು ಕುರಿತು ಉಪಯುಕ್ತ ಮತ್ತು ನಿಷೇದಾತ್ಮಕ ನಂಬಿಕೆಗಳು ಹುಟ್ಟಿಕೊಂಡಿವೆ. ಊಟ ಮಾಡುವಾಗ ತಟ್ಟೆಯಲ್ಲಿ ಬಿದ್ದೀತು ಎಂಬ ಮುನ್ನೆಚ್ಚರಿಕೆಯ ಕ್ರಮವಾಗಿ “ಟೊಪ್ಪಿಗೆ ಹಾಕಿಕೊಂಡು ಊಟ ಮಾಡಬಾರದು” ಎಂಬ ನಂಬಿಕೆಯ ಬಳಕೆಯಲ್ಲಿದ್ದರೆ, ಸೀರೆಯ ದಡಿಗೆ ದಕ್ಕೆಯಾದೀತು ಎಂಬ ಎಚ್ಚರಿಕೆಯನ್ನು ನೀಡಲು ‘ಊಟ ದಟ್ಟಿಯನ್ನು ಉಂಗುಟಕ್ಕೆ ಹಾಕಿ ಮೀಟಬಾರದು’ ಎಂಬ ನಂಬಿಕೆ ಆಚರಣೆಯಲ್ಲಿದೆ. ಹೊಲಿಯುವ ಸೂಜಿ ಮೈಗೆ ತಾಗಿ ಅಪಾಯವಾದೀತು ಎಂದು ಎಚ್ಚರಿಕೆಯನ್ನು ನೀಡಲು ‘ಮೈಮೇಲಿನ ಬಟ್ಟೆ ಹೊಲಿಯಬಾರದು’ ಎಂಬ ನಂಬಿಕೆ ಸೂಚಿಸಿದರೆ, ಸ್ತ್ರೀನೀತಿಯನ್ನು ಬೋಧಿಸಲು ಸೆರಗು ತೆಗೆದು ಓಡಾಡಬಾರದು ಎಂಬ ನಂಬಿಕೆ ಬೋಧನೆ ನೀಡುತ್ತದೆ.

ಭೂಮಿಯನ್ನೆ ಹಾಸಿ ಆಕಾಶವನ್ನೇ ಹೊದ್ದು ಬದುಕುವ ಜನಪದಿಯರಿಗೆ ವಾರ-ನಕ್ಷತ್ರ, ಹಬ್ಬ-ಹರಿದಿನ ಮುಂತಾದವುಗಳು ನಿತ್ಯ ಜೀವನ ನಿರ್ವಹಣೆಗೆ ಸಹಾಯಕ್ಕಾಗಿ ನಿಂತು. ಅನೇಕ ನಂಬಿಕೆಗಳಿಗೆ ಹುಟ್ಟುಹಾಕಿವೆ.

ಉದಾ:  “ಆಕಾಶದಲ್ಲಿ ಧೂಮಕೇತು ಮೂಡಿದರೆ ದೇಶದ ದೊಡ್ಡ ವ್ಯಕ್ತಿಗೆ ಆಪತ್ತು”
“ಯುಗಾದಿ ದಿವಸ ಬೇವಿನ ತಪ್ಪಲು ನೀರಲ್ಲಿ ಹಾಕಿ ಸ್ನಾನ ಮಾಡಬೇಕು”

‘ಚಳಿಗಾಲದಲ್ಲಿ ಹೆಣ್ಣು ನೋಡಲು ಹೋಗಬಾರದು’
‘ಶಿವರಾತ್ರಿಯ ದಿವಸ ಸತ್ತರೆ ಸ್ವರ್ಗ ಸಿಗುವದು’

ಇಂಥ ನಂಬಿಕೆಗಳು ಅರ್ಥವತ್ತಾಗಿದ್ದು, ದೈನಂದಿನ ಜೀವನಕ್ಕೆ ಯೋಗ್ಯವಾದ ಜೀವನ ಸೂತ್ರವನ್ನು ಸೂಚಿಸುವಲ್ಲಿ ತೆರೆದಿಟ್ಟ ಪುಸ್ತಕದಂತಿವೆ. ವಾರನಕ್ಷತ್ರಗಳಿಗೆ ಸಂಬಂಧಿಸಿದ ಇಂಥ ನಂಬಿಕೆಗಳು ದೇಶ ಮತ್ತು ಜನಾಂಗ ಭಿನ್ನತೆಗೆ ತಕ್ಕಂತೆ ವಿಭಿನ್ನ ರೂಪಗಳನ್ನು ಹೊಂದುವವೆಂಬುದು ಗಮನಾರ್ಹವಾದುದು.

ಗೃಹ ಜೀವನಕ್ಕೆ ಸಂಬಂಧಿಸಿದ ಕೆಲ ನಂಬಿಕೆಗಳು ಮಾನವನ ಆಗು -ಹೋಗುಗಳನ್ನು ನಿರ್ವಹಿಸುವ ಅಮರವಾಣಿಗಳಂತೆ ಕಂಡುಬರುತ್ತವೆ. ಉದಾ : ‘ಬದುಕಿ ಇದ್ದವರ ಫೋಟೋ ಪೂಜಿಸಿ ಗಂಧ ಕುಂಕುಮ ಹಚ್ಚಬಾರದು’ ಅಂದರೆ ಈ ಕ್ರಿಯೆ ನಡೆಯುವದು ವ್ಯಕ್ತಿಯ ಮುಖ ಮರೆಯಾದ ನಂತರ (ಮುನಿ ತಪಸ್ಸಿ, ಸಾಧು ಸಂತರಿಗೆ ಈ ಮಾತು ಅನ್ವಯಿಸುವದಿಲ್ಲ) ಜೀವಂತಬಿದ್ದಾಗಲೇ ಅಂಥ ಕೆಲಸಕ್ಕೆ ಕೈಹಾಕಿದರೆ ಭಾವಚಿತ್ರದಲ್ಲಿರುವ ವ್ಯಕ್ತಿಯ ಮನಸ್ಸಿಗೆ ಆಘಾತವಾಗುವದೆಂಬ ಭ್ರಮೆಯಿಂದ, ಹಾಗೂ ವ್ಯಕ್ತಿ ಪೂಜಾರ್ಹನಾಗುವದು ಸತ್ಯ ನಂತರವೇ ಎಂಬ ನಂಬಿಕೆಯಿಂದ ಇಂಥ ಕೆಲ ವಿಧಿ -ನಿಷೇಧಗಳು ಆಚರಣೆಯಲ್ಲಿ ಬಂದಿರಬೇಕು.

“ಒಳ್ಳೆ ಕೆಲಸಕ್ಕೆ ಹೋಗುವಾಗ ಮೂರು ನಾಮದೇವರು ಎದುರಾದರೆ ಅಪಶಕುನ”
“ಕರಿ ಹಾರುವನನ್ನು ಬಿಳಿ ಕೋಮಟಿಗನನ್ನು ನಂಬಬಾರದು”
“ಮಂಜಾನೆದ್ದು ಕರಿಗಾಣಿಗನ ಮುಖ ನೋಡಬಾರದು.”
“ಬಯಕೆ ಹತ್ತಿದ ಗರ್ಭಿಣಿ ಎರಿಮಣ್ಣು ತಿಂದರೆ ಹುಟ್ಟುವ ಮಗ ರಾಜನಾಗುವನು”
“ಹೆಂಡತಿ ಗರ್ಭಿಣಿಯಾದಾಗ ಗಂಡ ಗಡ್ಡ ಬಿಡಬೇಕು”

-ಇಂಥ ಕೆಲ ನಂಬಿಕೆಗಳು ಜನರ ಅಜ್ಞಾನದ ದ್ಯೋತಕವಾಗಿ ಹುಟ್ಟಿಕೊಂಡಿದ್ದು, ದಕ್ಷತೆಯ ಕೊರತೆಯಿಂದ ಮಾಡುವ ಕೆಲಸ ಕೆಟ್ಟರೂ, ಅರ್ಹತೆಯನ್ನು ಲಕ್ಷಿಸದೇ ಮೇಲ್ಕಂಡ ನಂಬಿಕೆಗಳಲ್ಲಿ ಬರುವ ವಿವಿಧ ವ್ಯಕ್ತಿಗಳ ಕಡೆಗೆ ಬೆರಳು ಮಾಡಿ ತೋರಿಸಿ, ಆರೋಪಿಸುವ ಅನಿಷ್ಠ ಪದ್ಧತಿ ಅಂಟುರೋಗದಂತೆ ಸಮಾಜವನ್ನು ಆವರಿಸಿಕೊಂಡಿದೆ.

ಇದೇ ಹಿನ್ನೆಲೆಯಲ್ಲಿ ಜಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲ ನಂಬಿಕೆಗಳು ಹುಟ್ಟಿಕೊಂಡಿದ್ದು, ಇವು ಅಸ್ಪೃಶ್ಯತೆಯನ್ನು ಸಮರ್ಥಿಸಿಕೊಂಡು ಬಂದ ಮಡಿವಂತರ ಸೃಷ್ಟಿಗಳೆಂದೇ ಹೇಳಬೇಕು.

ಉದಾ.  “ಕೀಳು ಜಾತಿಯವರು ಮುಟ್ಟಿದ ಪಾತ್ರೆಗಳನ್ನು ಬೆಳಗದೇ ಒಳಗೆ ತರಬಾರದು”
“ಬಿಸಿ ಅಡಿಗೆಯನ್ನು ಮನೆಯವರು ಊಟಮಾಡಿ ಹೊಲೆಯರಿಗೆ ಇಕ್ಕಬೇಕು”
“ದೇವಸ್ಥಾನದಲ್ಲಿ ಹೊಲೆಯರು ಪ್ರವೇಶಿಸಿದರೆ ಊರಿಗೆ ಕೇಡು”
ಕೆರೆ ಬಾವಿಗಳಲ್ಲಿ ಹೊಲೆಯರು ಹೊಕ್ಕರೆ ಗಂಗೆ ಇಂಗುವಳು”

ಪ್ರತಿಷ್ಠಿತ ವರ್ಗದವರಿಂದ ಸೃಷ್ಟಿಯಾದ ಇಂಥ ಕ್ರೂರ ನಂಬಿಕೆಗಳು ಸಮಾಜದ ನೆಮ್ಮದಿಯನ್ನು ಹಾಳು ಮಾಡುವಲ್ಲಿ ಅಗ್ರಸ್ಥಾನ ವಹಿಸಿವೆಯೆಂದು ಹೇಳಬಹುದು.

ಕೆಲ ನಂಬಿಕೆಗಳಲ್ಲಿ ಕಾವ್ಯಾಂಶವನ್ನು ಗುರುತಿಸಲು ಸಾಧ್ಯವಿದೆ. ಕಾವ್ಯಾಂಶ ಸಂಭೂತವಾದ ನಂಬಿಕೆಗಳು ಗಾದೆಗಳ ರೂಪದಲ್ಲಿದ್ದು, ಹೇಳಬೇಕಾದ ವಿಷಯವನ್ನು ಸೂಚ್ಯವಾಗಿ ಸಾಂಕೇತಿಕವಾಗಿ, ಸಂಕ್ಷಿಪ್ತವಾಗಿ ಹಾಗೂ ಪರಿಣಾಮಕಾರಿಯಾಗಿ ಹೇಳುವದೇ ಇವುಗಳ ಪ್ರಮುಖ ಲಕ್ಷಣವಾಗಿದೆ.

ಉದಾ. ‘ತುಂಬಿದ ಕೆರೆಗೆ ಕಲ್ಲು ಹೊಡೆಯಬಾರದು’ ‘ಉಂಡ ಮನಿಗೆ ಎರಡು ಬಗೆಯಬಾರದು’

ಮಾನವ ಬದುಕಿನ ಆಗು ಹೋಗುಗಳನ್ನು ತಿಳಿಸುವ ಪ್ರತಿಮೆಗಳು ಈ ನಂಬಿಕೆಗಳ ಹೃದಯವಾದ ಮೂಲಕ ಇಂಥವುಗಳನ್ನೂ ಮಾನವ ಸಂಬಂಧಿಯೆಂದೇ ಪರಿಗಣಿಸಲಾಗಿದೆ. ತುಂಬಿದ ಕೆರೆ ಕಲ್ಲು ಹೊಡೆಯುತ್ತ ಬಂದರೆ ಮುಚ್ಚುತ್ತ ಬರುವದು. ಆಳ ಕಡಿಮೆಯಾದಂತೆಲ್ಲ ನೀರು ಕಡಿಮೆಯಾಗಿ ಆ ಕೆರೆಯಿಂದ ಆಗುತ್ತಿದ್ದ ಉಪಯೋಗ ಕುಂಠಿತಗೊಳ್ಳುತ್ತದೆ. ಆದ್ದುದರಿಂದ ಕೆರೆಗೆ ಕಲ್ಲು ಹೊಡೆಯಬಾರದು ಎಂಬುದು ವಾಚ್ಯಾರ್ಥವಾದರೆ, ಇಲ್ಲಿ ಬೇರೊಂದು ಧ್ವನ್ಯಾರ್ಥವನ್ನು ಗುರುತಿಸಲು ಸಾಧ್ಯವಿದೆ. ನಿರ್ಮಲ ಮನಸ್ಸು ಹೊಂದಿ ತುಂಬು ಹೃದಯದಿಂದ ಬಾಳುತ್ತಿರುವವರ ಬದುಕಿನಲ್ಲಿ ಕುಹಕಿಯೊಬ್ಬ ಪ್ರವೇಶಿಸಿ ತನ್ನ ಕುಬುದ್ಧಿಯಿಂದ ಆ ವ್ಯಕ್ತಿಯ ಬಾಳ ಹಾದಿಗೆ ಹಲವಾರು ವಿಧವಾದ ಎಡರು ತೊಡರುಗಳನ್ನು ತಂದು, ತುಂಬಿದ ಕೆರೆಯಂತೆ ಪ್ರಸಾಂತವಾಗಿದ್ದ ಆತನ ಮನಸ್ಸನ್ನು ಕೆಡಸಿ, ಬಾಳ ನೆಮ್ಮದಿಯನ್ನೇ ಹಾಳು ಮಾಡಬಹುದು. ಸದ್ಭಾವದ ವ್ಯಕ್ತಿ ತುಂಬಿದ ಕೆರೆಯಾದರೆ, ಕುಹಕಿ ಹೂಡುವ ತಂತ್ರ ಕಲ್ಲಾಗಿ ಪರಿಣಮಿಸುತ್ತದೆ. ಇಂಥ ಸಂದರ್ಭದಲ್ಲಿ ‘ತುಂಬಿದ ಕೆರೆ ಕಲ್ಲು ಹೊಡೆಯಬಾರದು’ ಎಂಬ ನಂಬಿಕೆಯನ್ನು ಬಳಸುತ್ತಾರೆ. ಇಂಥ ನಂಬಿಕೆಗಳನ್ನು ವಿಶ್ಲೇಶಿಸುವದರಿಂದ ಅವುಗಳಲ್ಲಿ ಅಡಕವಾದ ಕಾವ್ಯಗುಣಗಳನ್ನು ಗುರುತಿಸಬಹುದು.

ಉಪಸಂಹಾರ : ಒಟ್ಟಾರೆ ಮಾನವ ಸಂಬಂಧಿ ನಂಬಿಕೆಗಳು ಜನತಾಭಾವದ ಅಭಿವ್ಯಕ್ತಿಗಳಾಗಿದ್ದು, ನಡೆದಾಡುವ ನಾಣ್ಯಗಳಂತೆ ಜನತೆಯ ದೈನಂದಿನ ಬದುಕಿನಲ್ಲಿ ಬೆರೆತು ಪರಿಣಾಮಕಾರಿಯಾದ ಪ್ರಭಾವ ಬೀರುತ್ತಲಿವೆ. ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಇವುಗಳ ಅಧ್ಯಯನ ಆಪೇಕ್ಷಿತ ಮಟ್ಟದಲ್ಲಿ ಆಗಿಲ್ಲವಾದರೂ, ಇತ್ತೀಚೆಗೆ ನಂಬಿಕೆಗಳ ಕುರಿತು ಸಂಗ್ರಹಕಾರ್ಯ, ಇಂಥ ಸಮ್ಮೇಲನ ದಂತಹ ಚಿಂತನಮಂಥನಗಳು ನಡೆದಿರುವದು ನಂಬಿಕೆಗಳ ಕುರಿತು ವಿಶೇಷ ಅಧ್ಯಯನದ ಶುಭಾರಂಭವೆಂದೇ ಹೇಳಬೇಕು. ವಸ್ತುನಿಷ್ಠ ಹಾಗೂ ಗುಣನಿಷ್ಟ ತೀರ್ಪುಗಳನ್ನು ಮೈಗೂಡಿಸಿಕೊಂಡು ಇಂಥ ನಂಬಿಕೆಗಳ ಪ್ರಾದೇಶಿಕ ಮತ್ತು ಸಾಮಾಜಿಕ ಸೂಕ್ಷ್ಮಾಧ್ಯಯನಕ್ಕೆ ಒಂದು ವ್ಯವಸ್ಥಿತವಾದ ಶಿಸ್ತು ಪ್ರಾಪ್ತವಾಗಬೇಕಿದೆ. ಅಂದಾಗ ಮಾತ್ರ ವೈಜ್ಞಾನಿಕ ಮತ್ತು ವಿಶ್ಲೇಷಣಾತ್ಮಕ ವಿವೇಚನಾ ಕಾರ್ಯ ತೀವ್ರ ಗತಿಯಲ್ಲಿ ನಡೆದು, ನಾಡಿನ ಸಂಸ್ಕೃತಿಯ ಹಿರಿಮೆ ಇನ್ನೂ ಶ್ರೀಮಂತಗೊಳ್ಳಬಲ್ಲದು. 

ಗ್ರಂಥ ಋಣ

ಜಾನಪದ ಅಧ್ಯಯನ : ಡಾ. ಹಾ. ಮಾ. ನಾಯಕ

ಜಾನಪದ ಜೀವಾಳ : ಡಾ. ಮ. ಗು. ಬಿರಾದಾರ

ಕನ್ನಡ ಸಂಶೋಧನ ಶಾಸ್ತ್ರ : ಡಾ. ಎಂ. ಎಂ. ಕಲಬುರ್ಗಿ

ಕನ್ನಡ ಜನಪದ ನಂಬಿಕೆಗಳು : ಸಂ. ಪ್ರೊ. ವಿವೇಕ ರೈ

ಜನಪದ ನಂಬಿಕೆಗಳು : ಕನ್ನಡ ವಿಶ್ವಕೋಶ ೧೯೭೭ ಮೈ. ವಿ. ವಿ.

ನಮ್ಮ ಜನಪದ ನಂಬಿಕೆಗಳು : ಸಂ. ಜಿ. ವಿ. ದಾಸೇಗೌಡ

ಉತ್ತರ ಕರ್ನಾಟಕದ ಜನಪದ ನಂಬಿಕೆಗಳು : ಸಂ. ಡಾ. ಮಲ್ಲಿಕಾರ್ಜುನ ಲಠ್ಠೆ

ಮಲೆನಾಡು ಜಾನಪದ : ಡಾ. ಎಚ್. ತಿಪ್ಪೆರುದ್ರಸ್ವಾಮಿ ಮತ್ತು ಎಚ್. ಜಿ. ಲಕ್ಕಪ್ಪಗೌಡರ

ಮದ್ದುಂಟೇ ಜನನ ಮರಣಕ್ಕೆ? : ಗುಂಡ್ಮಿ ಚಂದ್ರಶೇಖರ ಐತಾಳ

ಪ್ರಸೂತಿ ಜಾನಪದ : ಡಾ. ಎಸ್. ಪಿ. ಪದ್ಮಪ್ರಸಾದ

ವೈದ್ಯಕೀಯ ನಂಬಿಕೆಗಳು ವಿಶ್ಲೇಷಣೆ : ರಾಮಲಿಂಗಯ್ಯ ಉಪ್ಪಿನಕೆರೆ