ಪ್ರಕೃತಿ ಲೋಕದಲ್ಲೆಂತೋ ಅಂತೆ ಮಾನವ ಲೋಕದಲ್ಲಿಯೂ ನೆಳಲು – ಬೆಳಕು ಹಗಲು – ಇರುಳು, ಬಿಸಿಲು – ಬೆಳುದಿಂಗಳು, ತಂಗಾಳಿ – ಬಿರುಗಾಳಿ, ಮೋಡ, ಮಳೆ ಮಿಂಚು ಗುಡುಗು ಸಿಡಿಲುಗಳೂ, ಶಿಶಿರ ವಸಂತಗಳೂ ಉಂಟು. ಏಕೆಂದರೆ ಮಾನವ ಲೋಕವಾಗಲೀ ಪ್ರಕೃತಿ ಲೋಕವಾಗಲೀ ಒಂದೇ ಸೂತ್ರ ಆಡಿಸುವ ಎರಡು ಪಾತ್ರಗಳು ಮಾತ್ರ. ಈ ಎರಡು ಲೋಕಗಳ ಚೆಲುವನ್ನೂ ಅವುಗಳ ವೈವಿಧ್ಯವನ್ನು ಅದರ ಅಂತರಾಳದ ಏಕ ಸೂತ್ರವನ್ನೂ ಕಂಡು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವಿರುವ ಕಲೆಗಾರನೂ ಮಾನವನೇ. ಅವನು ತನ್ನ ಜೀವನದಲ್ಲಿ ಮತ್ತು ತನ್ನ ಸುತ್ತಣ ಜೀವನದಲ್ಲಿ ಕಂಡ, ಉಂಡ ಅನುಭವಗಳನ್ನು ತನ್ನ ಪರಿಭಾವನೆಗೆ ಒಳಪಡಿಸಿ ಈ ಮಾನವಲೋಕದ ಚೆಲುವನ್ನು ತೆರೆಯುತ್ತಾನೆ.

ಮಾನವ ಲೋಕದ ಚೆಲುವು ಎರಡು ರೀತಿಯದು. ಒಂದು, ಹೊರಗಣ್ಣಿಗೆ ಕಾಣುವ ಶರೀರದ ಸೊಬಗು, ಕಣ್ಣನ್ನು ಸೆಳೆಯುವ ರೂಪ, ಹಾವ, ಭಾವ, ನಿಲುವು ಮಾರ್ದವ, ಮೆಲ್ಪು, ಇಂಪು ಇತ್ಯಾದಿ. ಇನ್ನೊಂದು, ಒಳಗಣ್ಣಿಗೆ ಕಾಣುವ ಗುಣ ; ನಯ, ವಿನಯ, ಸೌಜನ್ಯ, ಸೌಶೀಲ್ಯ- ಇತ್ಯಾದಿ ಚಾರಿತ್ರ್ಯಕ್ಕೆ ಸಂಬಂಧಪಟ್ಟ ಚೆಲುವು. ಅಂತೆಯೇ ವ್ಯಕ್ತಿಯ ಬಹಿರಂಗ ವರ್ತನೆಗಳಲ್ಲಿ ಮತ್ತು ಅಂತರಂಗದ ಹೋರಾಟಗಳಲ್ಲಿ ಕಾಣುವ ಚೆಲುವು, ಮನುಷ್ಯ ಪ್ರೀತಿಯಲ್ಲಿ ಕಂಡು ಬರುವ ವೈವಿಧ್ಯಗಳೂ, ಸಂಸಾರದ ರಸ – ವಿಷ ನಿಮಿಷಗಳೂ ಕವಿಯ ಸೌಂದರ್ಯಾನುಭವದ ವಸ್ತುಗಳು.

ಹಿಂದಿನ ಕವಿಗಳಂತೆ ಇಂದಿನ ಕವಿಗಳು ಮಾನವ ದೇಹದ ಚೆಲುವನ್ನು ಚಿತ್ರಿಸುವಲ್ಲಿ ಅಡಿಯಿಂದ ಮುಡಿಯವರೆಗೆ ವರ್ಣಿಸುವುದಿಲ್ಲ. ತಾವು ಕಂಡ ವ್ಯಕ್ತಿಯ ನಿಲುವಿನಲ್ಲಿ ತಮ್ಮ ಮನಸ್ಸಿಗೆ ಆ ವ್ಯಕ್ತಿತ್ವ ತಟ್ಟಿದ ಪರಿಯನ್ನು ಇಂದಿನವರು ಚಿತ್ರಿಸುತ್ತಾರೆ. ಇಲ್ಲಿಯೂ ನೋಡುವ ವ್ಯಕ್ತಿ ಯಾರು ಎನ್ನುವುದರ ಮೇಲೆ ಈ ಚಿತ್ರಣದ ರೀತಿ ನಿಂತಿದೆ. ಒಬ್ಬ ಹೆಣ್ಣಿನ ಚಿತ್ರವನ್ನು ಚಿತ್ರಿಸುವಲ್ಲಿ, ಆ ಹೆಣ್ಣನ್ನು ನೋಡುವ ಕಣ್ಣು ಪ್ರಣಯಿಯದೇ, ನಲ್ಲನದೇ, ತಾಯಿಯದೇ, ಮಗುವಿನದೇ – ಎನ್ನುವುದು ಮುಖ್ಯ. ಹೊಸದಾಗಿ ಮದುವೆಯಾದ ಗಂಡನೊಬ್ಬ ತನ್ನ ನಲ್ಲೆಯ ಚೆಲುವನ್ನು ವರ್ಣಿಸುವಾಗ –

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚನ್ನೆ ನನ್ನ ಮಡದಿ.
ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ
ಕಪ್ಪುಗುರುಳನು ಬೆನ್ನ ಮೇಲೆಲ್ಲ ಹರಡಿದರೆ
ದೂರದಲಿ ಗಿರಿಯ ಮೇಲೆ
ಇಳಿದಂತೆ ಇರುಳ ಮಾಲೆ
[1]

ಎಂದು ಹೇಳುವಲ್ಲಿ ಗಂಡ ತನ್ನ ನಲ್ಲೆಯ ಚೆಲುವಿನಲ್ಲಿ ‘ಬೆಳಗುಗೆನ್ನೆ’ಯನ್ನು ಹೊಳೆಯ ಸುಳಿಗಿಳಿಗಿಂತ ಆಳವಾದ ಕಣ್ಣನ್ನು, ಸಂಜೆ ಗಿರಿಯ ಮೇಲೆ ಇಳಿದ ಇರುಳ ಮಾಲೆಯನ್ನು ನೆನಪಿಗೆ ತರುವ ಕಪ್ಪುಗೂದಲು ಸೊಗಸನ್ನು ವರ್ಣಿಸುತ್ತಾನೆ. ಹಿಂದಿನಂತೆ ಕಮಲವಾಗಲೀ, ಕನ್ನೈದಿಲೆಯಾಗಲೀ, ದುಂಬಿಗಳ ಮಾಲೆಯಾಗಲೀ – ಹೆಣ್ಣಿನ ಈ ಬಣ್ಣನೆಗೆ ಬೇಕಿಲ್ಲ. ಅಕ್ಕಿಯನ್ನು ಆರಿಸುತ್ತಾ ಕುಳಿತ ಹೆಣ್ಣುಮಗಳೊಬ್ಬಳ ಚಿತ್ರಣವನ್ನು ಕೊಡುವಲ್ಲಿ –

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು:
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚುಹೊಳೆ ಮುಂಗಾರಿನುರುಳು
[2]

ಎಂದು ಕವಿ ಚಿತ್ರಿಸುವ ವರ್ಣನೆಯಲ್ಲಿ ಆ ಮುಖದ ಭಾವ ಎಷ್ಟು ಸೊಗಸಾಗಿ ಚಿತ್ರಿತವಾಗಿದೆ! ದೇವರ ಮನೆಯ ಕಡೆಯಿಂದ ನಡೆದು ಬಂದ ಮಡದಿ ಗುರುಕೃಪೆಯಂತೆ ತೋರಿದಾಗ –

ನಿರಿ ನಿರಿ ಮೆರೆದುದು ನೀಲಿಯ ಸೀರೆ
ಶರಧಿಯನುಟ್ಟಳೆ ಭೂಮಿಯ ನೀರೆ?
ಹೂವೆಡಗೈಯಲ್ಲಿ;
ಮಾಂಗಲ್ಯದ ತೋಳ್ಸೆರೆ ಕೊರಳಲ್ಲಿ,
ಬಿಡುಗಡೆ ಎದೆಯಲ್ಲಿ.
ಚಂದ್ರ ಮುಖದಲಿ ತಾರೆಯ ಬಿಂದು;
ಚಂದ್ರೋದಯದಲಿ ಮಿಂದುದೆ ಸಿಂಧು?
[3]

ಎಂಬ ಈ ವರ್ಣನೆಯಲ್ಲಿ ಕಾಣುವ ಧೀರವಾದ ಗಂಭೀರವಾದ, ಗೌರವಾರ್ಹವಾದ ಸ್ತ್ರೀರೂಪ ಬೇರೆಯ ರೀತಿಯದು. ತಾಯಿಯಾದ ಹೆಣ್ಣೊಬ್ಬಳು ಹರೆಯದ ಗಂಡೊಬ್ಬನನ್ನು ತನ್ನ ಗೆಳತಿಗೆ, ಕಂಡು ವರ್ಣಿಸುವ ರೀತಿ ತುಂಬ ಸೊಗಸಾಗಿದೆ ಬೇಂದ್ರೆಯವರ ‘ಚೆಲುವ’ ಎಂಬ ಕವಿತೆಯಲ್ಲಿ –

ಯಾರವ್ವಾ ಇವ ಚೆಲುವಾ ತನ್ನಷ್ಟಕತಾನ ನೋಡಿ ನಲಿವಾ!
ನಗಿಯೊಂದು ಬಗಿಯಾಟ
ಕಣ್ಣು ಹಿಗ್ಗಿನ ತೋಟ
ಚವತೀ ಚಂದ್ರಮನ್ಹೋಲುವಾ
……………..
ಒಡೆದಿಲ್ಲ ಇನ್ನುಮಕ ಮೀಶಿ ಒಡೆದಿಲ್ಲ;
ತೊಡೆದಿಲ್ಲ ಇನ್ನೂ ತುಟಿ ಹಾಲು ತೊಡೆದಿಲ್ಲ;
ಹಿಡಿದಿಲ್ಲ ಕಣ್ಣಿಗೆ ಹೆಣ್ಣುಚ್ಚು ಹಿಡಿದಿಲ್ಲಾ
……………………..
ನೋಡವ್ವಾ ನನ ಗೆಣತಿ
ಮೊಲೆಗೂಸು ಇರುವಾಗಿನ
ಕಾಮಣ್ಣನೋಲು ಕಾಣುವಾ……….
[4]

ಈ ಚಿತ್ರ ವಾತ್ಸಲ್ಯದ ದೃಷ್ಟಿಗೆ ಹರೆಯದ ಗಂಡು ಕಂಡ ಪರಿಯನ್ನು ರೂಪಿಸುತ್ತದೆ. ಇಲ್ಲಿಯೂ ಅಷ್ಟೇ, ತತ್ಕಾಲದಲ್ಲಿ ಕಣ್ಣನ್ನು ಕಟ್ಟಿದ ಮನವನ್ನು ತಟ್ಟಿದ ಚೆಲುವಿನ ಅಂಶ ಪ್ರಧಾನವಾಗಿದೆ. ಹಾಗೆ ಅವರು ಕಂಡ ಚೆಲುವಿನ ಅಂಶವನ್ನು ಕಲ್ಪನಾ ಸೌಂದರ‍್ಯವನ್ನಾಗಿ ಮಾಡಿ ನೀಡಿದೆ ಕವಿಯ ಪ್ರತಿಭೆ. ಈ ಕಲ್ಪನೆಯಲ್ಲಿ ನಾವೀನ್ಯವಿದೆ; ವೈವಿಧ್ಯವಿದೆ. ಅಂತಲ್ಲದೆ ಕಂಡದ್ದನ್ನೇ ಯಥಾವತ್ತಾಗಿ ಚಿತ್ರಿಸುವಲ್ಲಿಯೂ ಅದರ ಸಹಜ ಸೌಂದರ‍್ಯವನ್ನು ಈ ಕವಿಗಳು ತೆರೆದಿದ್ದಾರೆ. ಸಣ್ಣ ಮಗುವನ್ನು ವರ್ಣಿಸುತ್ತಾ –

ಈ ಮಗಳು
ತುಟಿಯ ತೆರೆದರೆ ಸಾಕು ಮೇಲೊಂದು ಸಣ್ಣಕ್ಕಿ,
ಕೆಳತುಟಿಯ ಹಿಂದೆ ಇನ್ನೊಂದು ಹಾಲಿನ ಚುಕ್ಕಿ.
ಬಟ್ಟ ತಲೆ, ದುಂಡು ಮುಖ, ಕಿವಿಯವರೆಗೂ ಕಣ್ಣು,
ಇಷ್ಟಾಗಿ ಶಾಸ್ತ್ರಕ್ಕೆ ಹತ್ತುಕೂದಲು; ಒಂದು
ಮರುಳು ಜಡೆ, ಅದೂ ಬ್ರಹ್ಮ ಗಂಟು!
[5]

ಎಂದು ಹೇಳುವಲ್ಲಿ ಮಗುವಿನ ಮುಖವಷ್ಟನ್ನೇ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಮೋಡಿಯನ್ನು ಕಾಣುತ್ತೇವೆ. ಮಗುವಿನ ಮುಖವನ್ನು ಕುರಿತು –

ತುಂಬು ಕಿತ್ತಲೆ ಕೆನ್ನೆ, ನಗೆ ಮಿಂಚುಗಳ ಕುವರ ಕ್ರಾಂತಿಕಾರ,
ಹೊಳೆವೆಳೆಯ ಕಂಗಳಲಿ ಬೆಳುದಿಂಗಳನು ತುಂಬಿ
ತಂದು ಮನೆಯಂಗಳಕೆ ಸುರಿವ ಧೀರ
[6]

ಎಂದು ವರ್ಣಿಸುವ ರೀತಿಯೂ ಸೊಗಸಾಗಿದೆ. ಇಂತೆಯೇ ಇನ್ನೊಂದು ಉಜ್ವಲವಾದ ಚಿತ್ರ ಮದುವೆಯ ಹೆಣ್ಣಿನದು. ಮದುವೆಗೆ ಹಿಂದಿನ ದಿನ ಏನೋ ಕಾರಣದಿಂದ ಖಿನ್ನಳಾಗಿ ಮಲಗಿದ ಹೆಣ್ಣಿನ ಚಿತ್ರ ಇದು –

ಬಿಳಿ ವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ
ಹೆರಳಲ್ಲಿ; ಮಾತಿಲ್ಲ; ಉಸಿರು.
ಥಳ ಥಳಿಸುವ ಕಣ್ಣ ಮುಚ್ಚಿ, ಕೆದರಿದ ಕುರುಳ
ಹತ್ತಾರು ದಿಕ್ಕಿಗೆ ಹರಿಸಿ,
ಹೊದಿಕೆಯ ಹೊರಗೆ ಮುಂಗೈ ಬೀಸಿ, ನಡು ಬೆರಳ
ಉಂಗುರದ ನಡು ಹರಳ ಜ್ವಲಿಸಿ,
ಬೆನ್ನ ಸೆರಗಿನ ಮೇಲೆ ಅರಿಯದೆ ತಂಗಿದ
ಜರತಾರಿ ಹೂವನು ಮರೆತು,
ತಲೆಯಿಟ್ಟು ತುಂಬು ದಿಂಬಿನಮೇಲೆ ಹಣೆಗಿಟ್ಟ
ಕುಂಕುಮದ ಒತ್ತನ್ನು ಕುರಿತು,
ಏನೇನೊ ಮಾತು – ದೇವರು ಬಲ್ಲ!- ಮಾತೆಲ್ಲ
ಹೊಂದದೆ ಒಡೆದ ಕಿರು ಮುತ್ತು;
[7]

ಕೆ.ಎಸ್. ನರಸಿಂಹಸ್ವಾಮಿಯವರ ಕುಸುರಿ ಕಲೆಗಾರಿಕೆ ಇದು. ಸಚಿತ್ರವಾದ ವರ್ಣಮಯವಾದ, ಉಜ್ವಲವಾದ – ಒಂದು ವರ್ಣಶಿಲ್ಪ ಇದು. ಇಲ್ಲೆಲ್ಲಾ ಕಲೆಗಾರ ತಾನು ಕಂಡ ಚಿತ್ರವನ್ನು ಯಥಾವತ್ತಾಗಿ ಚಿತ್ರಿಸುವುದರ ಮೂಲಕ ಚೆಲುವನ್ನು ತೆರೆದಿದ್ದಾನೆ. ಕವಿ ತಾನು ಹೊರಗೆ ಕಂಡ ಚೆಲುವನ್ನು ಅದು ಮನಸ್ಸನ್ನು ಮುಟ್ಟಿದ ಪರಿಯನ್ನು ಚಿತ್ರಿಸುವ ಒಂದು ರೀತಿ ಇದು. ಆದರೆ – ಒಟ್ಟು ಸೌಂದರ‍್ಯ ಕವಿಯ ಮೇಲೆ ಮಾಡಿದ ಪರಿಣಾಮವನ್ನು ಬೇರೊಂದು ಚಿತ್ರದಿಂದ ಧ್ವನಿಸುವ ಬೇರೊಂದು ಕ್ರಮವನ್ನು ನಾವು ಗುರುತಿಸಬಹುದು. ‘ರತ್ನ’ ತನ್ನ ಪುಟ್ನಂಜಿಯ ರೂಪವನ್ನು ಕುರಿತು

ಅಲ್ನಲ್ ಕಮಲದ್ ಊ ತೇಲ್ಪುಟ್ಟು
ಮೇಲ್ ಒಂದ್ ತೆಳ್ನೆ ಲೇಪ
ಚಿನ್ನದ್ ನೀರ‍್ನಲ್ ಕೊಟ್ಟಂಗೈತೆ
ನನ್ ಪುಟ್ನಂಜಿ ರೂಪ!
[8]

ಎಂದು ಹೇಳುವ ಈ ಮಾತು ಕೇವಲ ಹೊರಗೆ ಕವಿ ಕಂಡ ಮೈಸಿರಿಯನ್ನು ಮಾತ್ರ ಚಿತ್ರಿಸುತ್ತಿಲ್ಲ. ಜೊತೆಗೆ ಪುಟ್ನಂಜಿಯ ಸುಕೋಮಲ ಸ್ವಭಾವವನ್ನೂ ಸೂಚಿಸುತ್ತದೆ. ಅಷ್ಟೇ ಅಲ್ಲ ಒಲಿದ ಗಂಡನಿಗೆ ಹೆಣ್ಣೂ ಕೇವಲ ಪ್ರೇಯಸಿ ಮಾತ್ರವಲ್ಲ; ಅವಳು ಶ್ರೇಯಸಿಯೂ ಹೌದು. ಅವಳ ಬಗ್ಗೆ ಪೂಜ್ಯವಾದ ಪವಿತ್ರವಾದ ಭಾವನೆಯೂ ಬೆಳೆದ ಚೇತನಕ್ಕಾಗುತ್ತದೆ. ‘ರತ್ನ’ ಪುಟ್ನಂಜಿಯ ರೂಪವನ್ನು ಕುರಿತು –

ದೇವಸ್ಥಾನ್ದಾಗ್ ಎಂಗಿರತೈತೆ
ಚಿನ್ನದ್ ನಂದಾದೀಪ
ಅಂಗ್ ನನ್ ಅಟ್ಟೀನ್ ಬೆಳಗಿಸ್ತೈತೆ
ನನ್ ಪುಟ್ನಂಜಿ ರೂಪ!
[9]

ಎಂದು ಹೇಳುವಲ್ಲಿ ಪುಟ್ನಂಜೀ ರೂಪ ದೇವಸ್ಥಾನದಲ್ಲಿ ತೂಗುವ ಚಿನ್ನದ ನಂದಾದೀಪದಂತೆ ಎನ್ನುವ ಮಾತು ಅವಳ ವ್ಯಕ್ತಿತ್ವದ ಶಾಂತ ಮಧುರ – ದಿವ್ಯತೆಯನ್ನು ಧ್ವನಿಸುತ್ತದೆ. ಕೈ ಹಿಡಿದ ಮಡದಿಯಲ್ಲಿ ತಾಯ್ತನವನ್ನು ಕಂಡು, ಚಿತ್ರಿಸುವ ಕವಿಯ ವ್ಯಕ್ತಿತ್ವದ ಹಿರಿಮೆಯನ್ನೂ ನಾವು ಕಾಣುತ್ತೇವೆ ಈ ಒಂದು ಕವನದಲ್ಲಿ –

ತಾಯ ಚರಣಕಿರಣವೊಂದು
ಕೃಪೆಯೊಳೆನ್ನ ಪೊರೆಯಲೆಂದು
ನಿನ್ನರೂಪದಿಂದ ಬಂದು
ಸಲಹುತಿರುವುದೆನ್ನನಿಂದು
[10]

ಎಂದು ಕವಿ ‘ಸತಿ’ಯನ್ನು ಕುರಿತು ಮಾಡುವ ವರ್ಣನೆಯಲ್ಲಿ ನಾವು ಆಗಲೇ ಸ್ತ್ರೀರೂಪದ ಅಂತರಂಗ ಸೌಂದರ‍್ಯವನ್ನು ಕಾಣುತ್ತೇವೆ. ಮೊದಮೊದಲು – ಮಗುವಾಗಿ ಜಗತ್ತಿಗೆ ಬಂದ ಗಂಡಸಿಗೆ ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ – ತನ್ನಿಂದ ಬೇರೆಯಾದ ಒಂದು ಜೀವವಾಗಿ ಹೆಣ್ಣು ತೋರುತ್ತಾಳೆ; ಆದರೆ ಬಾಳಿನ ಗೆಳತಿಯಾಗಿ ಕೈ ಹಿಡಿದು ಬಾಳನ್ನು ಸಾಗಿಸುವಾಗ, ಆ ಹೆಣ್ಣು ಮತ್ತು ತಾನು ಒಂದೇ ಎಂಬ ಅರಿವಾಗುತ್ತದೆ. ದೇಹಸಂಗದ ಜೊತೆಯಲ್ಲೇ ಆತ್ಮಸಂಗವೂ ಬೆಳೆಯುತ್ತದೆ. ಈ ಆತ್ಮಸಂಗದಿಂದ ಅವಳ ಅಂತರಂಗದ ಚೆಲುವಾದ ಸೈರಣೆ, ಮೆಚ್ಚು, ಮಮತೆ, ನೇಹ ಕರುಣೆ ಇತ್ಯಾದಿಗಳ ಪರಿಚಯದಿಂದ, ತನ್ನ ಮಕ್ಕಳಿಗೆ ತಾಯಿಯಾಗಿ, ತೆಕ್ಕನೆಯೇ ಬೇರೊಂದು ನಿಲುವಿನಲ್ಲಿ ನಿಲ್ಲುವ ಹೆಣ್ಣು, ಮಾತೃ ಸ್ವರೂಪಿಣಿಯಾಗಿಯೂ ಗೋಚರಿಸುತ್ತಾಳೆ. ಆಗ ಅನ್ನಿಸುತ್ತದೆ-

ಹೇ ಮಾಸತಿ, ಪ್ರೇಮಾವತಿ
ಮೃಣ್ಮಯದಲಿ ಚಿನ್ಮಯರತಿ
ಮನ್ನಿಸೆನ್ನ ಭಗವತಿ
[11]

ಎಂದು. ಸ್ತ್ರೀರೂಪವನ್ನು ಕುರಿತ ಈ ಆತ್ಮ ಸೌಂದರ‍್ಯದ ಮಜಲನ್ನು ಇಂದಿನ ಕವಿಗಳು ಚಿತ್ರಿಸಿರುವುದು ಗಮನಿಸಬೇಕಾದ ಅಂಶ.

ಕವಿ ತನ್ನ ಸುತ್ತಣ ಜೀವನದಲ್ಲಿ ತನ್ನ ಮೇಲೆ ತಮ್ಮ ವ್ಯಕ್ತಿತ್ವದಿಂದ ಪ್ರಭಾವ ಬೀರಿದ ಹಲವು ಗಣ್ಯ ವ್ಯಕ್ತಿಗಳನ್ನೋ ಮಹಾ ವ್ಯಕ್ತಿಗಳನ್ನೋ ಕುರಿತು ಬರೆದ ಗೀತೆಗಳಲ್ಲಿ ನಾವು ವ್ಯಕ್ತಿಯ ಚಾರಿತ್ರ್ಯದ ಸೌಂದರ‍್ಯವನ್ನು ಕಾಣುತ್ತೇವೆ. ಹಾಗೆ ಪರಿಣಾಮ ಮಾಡುವ ವ್ಯಕ್ತಿ ಗಂಡಾಗಿರಬಹುದು, ಹೆಣ್ಣಾಗಿರಬಹುದು. ಗೆಳೆಯನಾಗಿರಬಹುದು, ಗುರುವಾಗಿರಬಹುದು, ಮಹಾತ್ಮನಾಗಿರಬಹುದು, ದೇಶದ ನಾಯಕನಾಗಿರಬಹುದು. ಆ ವ್ಯಕ್ತಿ ಸಮಕಾಲೀನನಾಗಿರಬಹುದು. ಪುರಾತನನಾಗಿರಬಹುದು. ಅಂತಹ ವ್ಯಕ್ತಿ ಚಿತ್ರಣ ಗುಣ ಪ್ರಶಂಸಾರೂಪವಾದ ಕವನವಾಗಿಯೂ ಚರಮಗೀತ ರೂಪವಾಗಿಯೋ ಉಪಾಸನಾ ರೂಪವಾದ ಕವನವಾಗಿಯೋ ಇರಬಹುದು. ಗಾಂಧೀಜಿಯನ್ನು ಕುರಿತು –

“ಆಫ್ರಿಕದ ಕತ್ತಲೆಗೆ ಬೆಳಕ ಬೀರಿದೆ ನೀನು;
ಆಂಗ್ಲರಧಿಕಾರ ಮೋಹವನು ಮುರಿದೆ.
ಅವರಿವರ ದುಷ್ಕೃತಿಗೆ ಕುದಿದು ಕಂಬನಿಗರೆದೆ
ಉಪವಾಸದಗ್ನಿಯಲಿ ನಡೆದು ಬಂದೆ
[12]

ಎಂದು ಗಾಂಧೀಜಿಯ ಗುಣಕಥನವನ್ನು ಮಾಡುವುದು ಒಂದು ರೀತಿಯಾದರೆ, ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಬೇರೊಂದು ಶಕ್ತಿ ಪೂರ್ಣವಾದ ಪ್ರತಿಮೆಯನ್ನು ನಿರ್ಮಿಸುವುದರ ಮೂಲಕ ಗಾಂಧೀಜಿಯ ಚಿತ್ರವನ್ನು ಕೊಡುವುದು ಬೇರೊಂದು. ಪು.ತಿ.ನ. ಅವರ ‘ನೆರಳು’ ಇಂಥ ಒಂದು ಪ್ರತಿಮೆ. ಹಾರುವ ಗರುಡನ ನೆರಳನ್ನು ಕಂಡು –

ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೊ ಅದರಿಚ್ಛೆ ಹಾದಿ
ಇದಕೊ ಹರಿದತ್ತ ಬೀದಿ
ನೆಲ ನೆಲದಿ ಮನೆಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡ ಗುಲ್ಮ ತೆವರು ತಿಟ್ಟು
ಎನ್ನದಿದಕೊಂದೆ ನಿಟ್ಟು

ಗಾಳಿ ಬೆರಗಿದರ ನೆಲದೊಳೋಟ!
ವೇಗಕಡ್ಡಬಹುದಾವ ಹೂಟ?
ಸಿಕ್ಕು ದಣಿವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ.”

ಕವಿ ಕೊಡುವ ಈ ಚಿತ್ರಣ ವಾಸ್ತವವಾಗಿ ಹಾರುವ ಗರುಡನ ಮತ್ತು ಕೆಳಗೆ ಓಡುವ ಅದರ ನೆಳಲಿನ – ಪರಿಭಾವನೆಯಿಂದಲೇ ಮೂಡಿದುದು. ಆದರೆ ತೆಕ್ಕನೆ ಈ ಅನುಭವವನ್ನು ಪರಿಭಾವಿಸಿ, ಅವರು –

ಇದ ನೋಡಿ ನಾನು ನೆನೆವೆನಿಂದು
ಇಂಥ ನೆಳಲೇನು ಗಾಂಧಿಯೆಂದು!
ಹರಿದತ್ತ ಹರಿಯ ಚಿತ್ತ ಈ ಧೀರ ನಡೆವನತ್ತ!
[13]

ಎನ್ನುತ್ತಾರೆ. ನೆಳಲಿನ ಅನುಭವವನ್ನು ಪರಿಭಾವಿಸಿ ಆ ಬೆಳಕನ್ನು ಗಾಂಧೀಜಿಯ ವ್ಯಕ್ತಿತ್ವದ ಚಿತ್ರಣಕ್ಕೆ ತಟಕ್ಕನೆ ತಗುಳ್ಚಿರುವುದು ತುಂಬ ಹಿತವಾಗಿದೆ; ಅಂತೆಯೇ ಗಾಂಧೀಜಿಯ ವ್ಯಕ್ತಿತ್ವಕ್ಕೆ ನೂತನವಾದ ವ್ಯಾಖ್ಯಾನವೊಂದನ್ನು ಒದಗಿಸುತ್ತದೆ. ಇಲ್ಲಿ ನೆಳಲು ಗಾಂಧೀಜಿಯ ವ್ಯಕ್ತಿತ್ವಕ್ಕೊಂದು ಪ್ರತಿಮೆಯಾಗಿದೆ. ಈ ಪ್ರತಿಮಾ ನಿರ್ಮಾಣ, ಕವಿ ಗಾಂಧೀಜಿಯನ್ನೇ ಕುರಿತು ನಡೆಸಿದ ಪರಿಭಾವನೆಯಿಂದ ಬಂದುದಲ್ಲ; ನೆರಳನ್ನು ಕುರಿತು ನಡೆಸಿದ ಪರಿಭಾವನೆಯಿಂದ ಬಂದುದು. ಆದರೆ ಗಾಂಧೀಜಿಯನ್ನೇ ಕುರಿತು ನಡೆಸಿದ ಪರಿಭಾವನೆಯಿಂದ, ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ಅವರು ಕಂಡ ಪರಿಯನ್ನು ಉಜ್ವಲವಾದ ಪ್ರತಿಮೆಯೊಂದರಲ್ಲಿ ರೂಪಿಸಿರುವ ಪರಿ ಇದು –

ಈ ಮಹಾ ಸ್ವಾತಂತ್ರ್ಯ ರಣಯಾಗ ಧೂಮದಲಿ
ಶ್ವೇತಾಗ್ನಿ ಜ್ವಾಲೆಯೊಂದುರಿಯುತಿದೆ; ನಿಶ್ಚಲಂ
ರಂಜಿಸುತ್ತಿದೆ – ಶಾಂತಿಯಲಿ ಹಿಮಮಹಾಚಲಂ
ರಾರಾಜಿಪಂತೆ ನೀಲಿಮ ನಭೋ ಧಾಮದಲಿ
[14]

ಗಾಂಧೀಜಿ ಸ್ವಾತಂತ್ರ್ಯ ರಣಯಾಗಧೂಮದ ನಡುವೆ ಪ್ರಜ್ವಲಿಸುವ ಒಂದು ಶ್ವೇತಾಗ್ನಿ ಜ್ವಾಲೆ! ಅಗ್ನಿ ಶ್ವೇತರೂಪ ತಾಳುವುದು ಅದರ ಅತ್ಯಂತ ಪ್ರಖರಾವಸ್ಥೆಯಲ್ಲಿ. ಆದರೆ ನಿಶ್ಚಲವಾಗಿದೆ ಈ ಜ್ವಾಲೆ; ಅದರಲ್ಲಿ ಯಾವ ಚಾಂಚಲ್ಯವೂ ಇಲ್ಲ; ಯೋಗಿಯ ಸಮಾಧಿಯಂತೆ ನಿಶ್ಚಲವಾಗಿದೆ, ಸುತ್ತ ಬಳಸಿದ ಧೂಮದ ನಡುವೆ. ಇಷ್ಟೊಂದು ಪ್ರಖರವಾದ, ಆದರೂ ನಿಶ್ಚಲವಾದ ಈ ಜ್ವಾಲೆ ಕಣ್ಣು ಕೋರೈಸುವಂತಿಲ್ಲ. ನೀಲಿಮ ನಭೋಧಾಮದಲ್ಲಿ ಹಿಮ ಮಹಾಚಲದಂತೆ ಧೀರವಾಗಿ ಗಂಭೀರವಾಗಿ ಶಾಂತಿಯಿಂದ ರಂಜಿಸುತ್ತಿದೆ. ಗಾಂಧೀಜಿಯ ವ್ಯಕ್ತಿತ್ವದ ಒಂದು ಪ್ರತಿಮೆಗೆ ಬಳಸಲ್ಪಟ್ಟಿರುವ ಈ ಎರಡು ಬೇರೆ ಬೇರೆ ಚಿತ್ರಗಳು ತಮಗೆ ತಾವೇ ಬೇರೆ ಬೇರೆಯ ಸ್ವಭಾವದವುಗಳಾದರೂ – ಗಾಂಧೀಜಿಯ ವ್ಯಕ್ತಿತ್ವದ ಜ್ವಾಲೆಯ ನಿಶ್ಚಲತೆಯ ಚಿತ್ರಣಕ್ಕೆ ಶೀತಲವಾದ ಹಿಮಾಚಲದ ಉಪಮೆ! – ಅವೆರಡೂ ಆ ಮಹಾ ವ್ಯಕ್ತಿಯಲ್ಲಿ ಮೈಗೊಂಡ ಪ್ರಖರತೆ – ಶಾಂತತೆಗಳ ಒಂದು ಸಾಮರಸ್ಯವನ್ನು ತುಂಬ ಸೊಗಸಾಗಿ ಧ್ವನಿಸುತ್ತವೆ.

ಕವಿಯ ಬದುಕಿನ ಮೇಲೆ, ಗಾಂಧೀಜಿಯ ವ್ಯಕ್ತಿತ್ವದಂತೆ ಮಹತ್ತಾದ ಪರಿಣಾಮವನ್ನು ಬೀರದಿದ್ದರೂ ವಿಶೇಷ ಪರಿಣಾಮ ಮಾಡಿದ ಹಿರಿಯರು, ಪೂಜ್ಯರು, ಗಣ್ಯವ್ಯಕ್ತಿಗಳು, ಸ್ನೇಹಿತರು, ಇತ್ಯಾದಿ ವ್ಯಕ್ತಿಗಳನ್ನು ಕುರಿತ ಪದ್ಯಗಳು ಇಂದು ವಿಶೇಷವಾಗಿ ರಚಿತವಾಗಿವೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ಸೂಚಿಸಿ ಮುಂದುವರಿಯಬಹುದು. ದಿವಂಗತ ಪಂಜೆಯವರನ್ನು ಕುರಿತು –

ಹಾಲು ಸಕ್ಕರೆ ಸೇರಿ ನೀವಾದಿರಾಚಾರ‍್ಯ
ನಡೆಯ ಮಡಿಯಲಿ, ನುಡಿಯ ಸವಿಯಲ್ಲಿ, ನಿಮ್ಮ ಬಗೆ
ಹಸುಳೆ ನಗೆ; ನಿಮ್ಮ ಕೆಳಯೊಲುಮೆ ಹಗೆತನಕೆ ಹಗೆ
………………..
ಕಚ್ಚಿದರೆ ಕಬ್ಬಾಗಿ, ಹಿಂಡಿದರೆ ಜೇನಾಗಿ
ನಿಮ್ಮುತ್ತಮಿಕೆಯನೆ ಮೆರೆದಿರಯ್ಯ…….
……………ಕೀರ್ತಿಲೋಭಕೆ ಬಾಗಿ
ಬಾಳ್ವಂಡಿ ನೊಗಕೆ ಹೆಗಲಿತ್ತವರು ನೀವಲ್ಲ;
ತೇರ‍್ಮಿಣಿಯನೆಳೆದಿರಲ್ಲದೆ ಮತ್ತೆ ಮಣಿದಿಲ್ಲ
[15]

ಕವಿ ಕುವೆಂಪು ಅವರು ಬರೆದ ಸ್ಮೃತಿಗೀತೆ ಇದು. ಪಂಜೆಯವರ ವ್ಯಕ್ತಿತ್ವದ ಮಾಧುರ‍್ಯ, ಮಾರ್ದವತೆ, ಮುಗ್ಧತೆ, ಉತ್ತಮಿಕೆ, ಅಕಾಮಹತವಾದ ಜೀವನ ಶ್ರದ್ಧೆ, ಸ್ಥೆ ರ್ಯ – ಈ ಗುಣಗಳ ಪರಿಭಾವನೆಯಿಂದ, ಈ ಚಾರಿತ್ರ್ಯದ ಸೊಗಸನ್ನು ಇಲ್ಲಿ ನಿರೂಪಿಸಿದ್ದಾರೆ. ಅಂತೆಯೇ ಉತ್ತರಕರ್ನಾಟಕದಲ್ಲಿ ತಮ್ಮ ಧ್ಯಾನಶೀಲವಾದ ವ್ಯಕ್ತಿತ್ವದಿಂದ ಅಲ್ಲಿನ ಲೇಖಕರ ಮೇಲೆ ಪ್ರಭಾವ ಬೀರಿದವರು ಶ್ರೀ ಮಧುರಚೆನ್ನರು. ಅವರನ್ನು ಕುರಿತು ಹಲವು ಲೇಖಕರು ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲೊಂದರಲ್ಲಿ, ಅವರ ವ್ಯಕ್ತಿತ್ವವನ್ನು ಬಹು ಸೊಗಸಾಗಿ ಪ್ರತಿಮಿಸುವ ಒಂದು ಚಿತ್ರ ಇದು –

ದೇಹ ಮೋಂಬತ್ತಿಯೊಲು ಮುಡಿದ ಬೆಳಕಿನ ಕುಡಿಗೆ
ಕರಗಿ ಮಿದುವಾಗಿತ್ತು ಅಂತರಂಗ
[16]

ವ್ಯಾಖ್ಯಾನ ನಿರಪೇಕ್ಷಕವಾದ ಈ ಚಿತ್ರ ಮಧುರ ಚೆನ್ನರ ಮಾರ್ದವ ತೇಜೋಮೂರ್ತಿಯನ್ನು ಸೊಗಸಾಗಿ ನಿಲ್ಲಿಸುತ್ತದೆ. ಇಂಥ ಚಿತ್ರಣಗಳಲ್ಲಿ ಕಂಡು ಬರುವ ಈ ಚಾರಿತ್ರ್ಯದ ಸೌಂದರ್ಯ ನವೋದಯ ಕವಿಗಳಲ್ಲಿ ಮಾತ್ರ ಕಾಣುವ ವಿಶೇಷತೆಯೇನಲ್ಲ. ನಮ್ಮ ಹಳಗನ್ನಡ ಕವಿಗಳು ತಮ್ಮ ಆಶ್ರಯದಾತರಾದ ರಾಜರನ್ನು, ತಮ್ಮ ಮೇಲೆ ಪ್ರಭಾವ ಬೀರಿದ ಮಹಾ ವ್ಯಕ್ತಿಗಳನ್ನು ಮತ್ತು ಆಚಾರ‍್ಯರನ್ನು ಕುರಿತು ಬರೆದಿರುವುದುಂಟು. ಪಂಪನ ಅರಿಕೇಸರಿ, ರನ್ನನ ದಾನಚಿಂತಾಮಣಿ ಅತ್ತಿಮಬ್ಬೆ ಇಂಥವರ ಚಿತ್ರಣವೂ ಈ ರೀತಿಯಿದೆ.

ಕವಿ ಸಮಕಾಲೀನ ಹಾಗೂ ಸಮೀಪ ಕಾಲೀನಕರಾದ ವ್ಯಕ್ತಿಗಳ ಪಾತ್ರ ಸೌಂದರ‍್ಯವನ್ನು ಚಿತ್ರಿಸುವಂತೆಯೇ ಹಿಂದಿನ ವ್ಯಕ್ತಿಗಳ ಜೀವನ ಚರಿತ್ರೆಯ ಅವಲೋಕನದಿಂದಲೂ ಅಂತಹ ವ್ಯಕ್ತಿಗಳ ಚಾರಿತ್ರ್ಯ ಸೌಂದರ್ಯವನ್ನು ಚಿತ್ರಿಸಿರುವುದು ಗಣನೀಯವಾಗಿದೆ. ಹಿಂದಿನ ಕವಿಗಳಾದರೋ ಕೃಷ್ಣ ಬುದ್ಧರಂಥವರನ್ನು ಕುರಿತು ಪ್ರತ್ಯೇಕವಾದ ಚಿತ್ರಣವನ್ನು ಕೊಡುವ ಬದಲು ತಮ್ಮ ಕಾವ್ಯದಲ್ಲಿ ಅಂತಹ ಒಂದೊಂದು ಪಾತ್ರಗಳನ್ನು ಸೃಜಿಸಲು ಅವರು ಕೃತಿಯನ್ನಾಗಿಸಿಕೊಂಡ ಪೌರಾಣಿಕ ಕಥಾವಸ್ತುವಿನ ಹರಹಿನಲ್ಲಿ ಅವಕಾಶ ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನವರು ಕೃಷ್ಣಬುದ್ಧರನ್ನು ಕುರಿತು ತಮ್ಮ ಕವಿತೆಯಲ್ಲಿ ಆ ವ್ಯಕ್ತಿಗಳ ಸೌಂದರ‍್ಯವನ್ನು ಹಿಡಿದಿಟ್ಟಿದ್ದಾರೆ. ಶ್ರೀ ಕೃಷ್ಣನ ಜೀವನವನ್ನು ಪರಿಭಾವಿಸಿ ಅದರ ಅಗಮ್ಯತೆಯನ್ನೂ, ರಮ್ಯತೆಯನ್ನೂ, ಹಲವು ಪ್ರತಿಮೆಗಳ ಮೂಲಕ ಚಿತ್ರಿಸಿರುವ ಒಂದು ಪರಿಯನ್ನು, ‘ಕೃಷ್ಣಶಕ್ತಿ’ ಎಂಬ ಕವಿತೆಯಲ್ಲಿ ನೋಡಬಹುದು. ಕವಿತೆ ಮೊದಲಾಗುವುದು ಹೀಗೆ –

ಸುತ್ತ ಮುತ್ತ ಅಂಧಕಾರ
ಮಳೆ ಹನಿಗಳ ಪಂಜರ
ದೈತ್ಯ ಸೆರೆಯ ಕಂಬಿಯೊಳಗೆ
ಬಂತು ದೇವ ಕುಂಜರ!
[17]

ಕೃಷ್ಣ ಯುಗಾವತಾರಿಯಾದ ಒಂದು ಶಕ್ತಿ, ಲೋಕದ ಅಂಧಕಾರದಲ್ಲಿ ಆಸುರೀ ಶಕ್ತಿಗಳು ನಿರ್ಮಿಸಿದ ಈ ಪಂಜರದೊಳಗೆ ಆ ದೇವ ಕುಂಜರರೂಪವಾದ ಕೃಷ್ಣಶಕ್ತಿ ಪ್ರವೇಶಿಸಿತು – ಎಂಬ ವರ್ಣನೆಯಲ್ಲಿ ಶ್ರೀ ಕೃಷ್ಣನ ಜನನ ಸಂದರ್ಭದ ಪ್ರಕೃತಿಯ ವರ್ಣನೆ ಸೂಚಿತವಾಗಿದೆ. ಬೃಂದಾವನದ ಕೃಷ್ಣ – ರಣ ರಂಗದ ತುಮುಲದಲ್ಲಿ ಗೀತೆಯನ್ನು ಬೋಧಿಸಿದ ಕೃಷ್ಣ ಈ ಎಲ್ಲ ಮಜಲುಗಳನ್ನು ಅತ್ಯಂತ ಸೂಕ್ಷ್ಮವಾಗಿ ಮುಂದಿನ ಐದು ಪದ್ಯಗಳಲ್ಲಿ ಧ್ವನಿಸಿ, ಕಡೆಗೆ –

ಮತ್ತೆ ಮತ್ತೆ ಅಂಧಕಾರ
ಮಳೆ ಹನಿಗಳ ಪಂಜರ
ಸೊಂಡಿಲಾಡಿಸುತ್ತ ಬರುವು
ದದೋ ದೇವ ಕುಂಜರ
[18]

ಎಂಬ ಮುಕ್ತಾಯದಲ್ಲಿ ಲೋಕಲೀಲೆಯ ಮತ್ತು ಲೀಲಾವತಾರಿಯ ಚಿರಂತನತೆಯನ್ನು ಈ ಕವಿತೆ ಸಾರುತ್ತದೆ. ಶ್ರೀ ಗುರು ಬುದ್ಧದೇವರನ್ನು ಕುರಿತು –

ಬುದ್ಧ ಬುದ್ಧ –
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ [19]

ಎಂದು ಮೊದಲಾಗುವ ಬೇಂದ್ರೆಯವರ ಈ ಕವಿತೆಯಲ್ಲಿ ಈ ಮೊದಲ ಪಂಕ್ತಿಯಿಂದ ಅನುರಣಿತವಾಗುವ ಅರ್ಥ ಪ್ರಪಂಚ ವಿಸ್ತಾರವಾಗಿದೆ. ಬುದ್ಧನಂತೆಯೇ ಬುದ್ಧನ ‘ಅಮೃತಸ್ಮಿತ’ವನ್ನು ಕವಿ –

ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ
ಇದಕ್ಕಿಲ್ಲ; ಕುಂದ ಮೀರಿದೆ; ಗ್ರಹಣ ಹತ್ತದಿದ –
ಕೆಂದಿಗೂ. ಬೇರೆ ಫಲದಾಸೆಯಿದನೊಣಗಿಸದು;
…………………………………….ಶ್ರೀ ಬುದ್ಧ ಮೂ –
ರ್ತಿಯ ಅಮರ ಹಾಸ -ಶ್ರೀ ಬುದ್ಧ ದೇವನ ದುಃಖ
ಹಿಮಗಿರಿಯ ಶಿಖರದಲಿ ತಪಮಿದ್ದ ಶಾಂತಿತ-
ನ್ನಸಮ ಧ್ಯಾನದ ಗವಿಯ ಗಹನದಲಿ ಗುರುತಿಸಿದ
ಚೆನ್ನ ಕನಸಿನ ಬಿಂಬ. ಆನಂದ ಕಲ್ಪವೃಕ್ಷಕ್ಕೆ ಬಂ-
ದೊಂದೆ ಹೂ…………..|

ಎಂದು ವರ್ಣಿಸಿದ್ದಾರೆ. ಈ ಲೋಕಭೂಮಿಕೆಯಲ್ಲಿದ್ದ ವ್ಯಕ್ತಿಗಳ ಚಿತ್ರಣವನ್ನುಮಾತ್ರವಲ್ಲ, ಕಾವ್ಯ ಭೂಮಿಕೆಯಲ್ಲಿ ಚಿತ್ರಿತವಾದ ಹಲವು ಪಾತ್ರಗಳನ್ನೂ ಪರಿಭಾವಿಸಿ ನೀಡುವುದು ಮತ್ತೊಂದು ವಿಶೇಷತೆ. ವಾಲ್ಮೀಕಿ ರಾಮಾಯಣದಲ್ಲಿ ಅಗೋಚರಳಾಗಿರುವ-ಕವಿ ಟಾಗೂರರ ಮಾತಿನಲ್ಲಿ ಹೇಳುವುದಾದರೆ, ಕಾವ್ಯದ ಅನಾದರಕ್ಕೆ ಈಡಾಗಿರುವ ಊರ‍್ಮಿಳೆಯ ಪಾತ್ರದ ಮಹತ್ತನ್ನು ಪರಿಭಾವಿಸಿ ಕುವೆಂಪು ಅವರು –

ರಾಮಾಯಣದ ಮಹಾ ರತ್ನವೇದಿಕೆಯ ಮೇಲೆ,
ಮೂಲೆಯಲಿ, ನಿಂತಿರುವುದೊಂದಮೃತ ಶಿಲ್ಪಕೃತಿ
ನಾಣ್ಚಿ, ಕಾಣದೆ ಸಂತೆಗಣ್ಗಳಿಗೆ; ಪೂರ್ಣಸತಿ,
ಊರ‍್ಮಿಳಾದೇವಿ, ಲಕ್ಷ್ಮಣ ಚಿರತಪಶ್ಯೀಲೆ!
ತೆಭುವನ ವಂದಿತ ಬೃಹನ್ಮೂರ್ತಿಗಳ ಛಾಯೆ
ಮುಚ್ಚಿ ಮರೆಸಿದೆ ನಿನ್ನನೆಲೆ ಸಾಧ್ವಿ……..
[20]

ಎಂದು ‘ಗೋಚರಾತೀತೆ’ಯಾದ ‘ಊರ‍್ಮಿಳಾದೇವಿ’ಯ ಪಾತ್ರವನ್ನು ಚಿತ್ರಿಸಿದ್ದಾರೆ.

ಮಹತ್ತು ಮಹಾವ್ಯಕ್ತಿಗಳಲ್ಲಿ ಸುಪ್ರಕಟವಾಗಿ ಲೋಕಲೋಚನವನ್ನು ಸೆಳೆದರೆ, ಅದೇ ಮಹತ್ತು ತೀರ ಸಾಮಾನ್ಯ ವ್ಯಕ್ತಿಗಳಲ್ಲೂ ಅಪ್ರಕಟವಾಗಿ ಗುಪ್ತವಾಗಿರುತ್ತದೆ. ಸಾಮಾನ್ಯತೆಯಲ್ಲಿರುವ ಅಸಾಮಾನ್ಯ ಗುಣಗಳನ್ನು ಕವಿಯ ಕಣ್ಣು ಕಂಡು ಚಿತ್ರಿಸಿದಾಗ ಈ ತೀರ ಸಾಮಾನ್ಯರೆಂದು ನಾವು ಅವಜ್ಞೆಗೈವ ವ್ಯಕ್ತಿಗಳ ಚಾರಿತ್ರ್ಯ ಯಾವ ಮಹಾವ್ಯಕ್ತಿಗಳ ಪ್ರಖರ ತೇಜಸ್ಸಿನೆದುರೂ ತನ್ನ ನಂದಾದೀಪ ಸದೃಶವಾದ ದೀಪ್ತಿಯಿಂದ ತಲೆಯೆತ್ತಿ ನಿಲ್ಲಬಲ್ಲದು ಎನ್ನಿಸುತ್ತದೆ. ಇಂತಹ ವ್ಯಕ್ತಿ ಚಿತ್ರಗಳನ್ನು ಕಥಾ ರೂಪದಲ್ಲಿ ನಮ್ಮ ಕವಿಗಳು ಚಿತ್ರಿಸಿದ್ದಾರೆ. ಪು.ತಿ.ನ ಅವರ ‘ರಂಗವಲ್ಲಿ’[21] ಎಂಬ ಕವಿತೆ, ದಿನ ದಿನವೂ ಬೆಳಗಾಗ ಮೇಲುಕೋಟೆಯ ದೇಗುಲದೆಡೆಗೆ ಬೆಟ್ಟವನ್ನು ಹತ್ತಿ ಬಂದು ಭಕ್ತಿಯಿಂದ ದೇಗುಲದ ಬಾಗಿಲಿಗೆ ರಂಗೋಲಿಯನ್ನು ಬರೆಯುವ ಹಣ್ಣು ಹಣ್ಣು ಮುದುಕಿಯೊಬ್ಬಳ – ಚಿತ್ರವನ್ನು ನೀಡುತ್ತದೆ. ಆ ಕವಿತೆಯಲ್ಲಿ ಚಿತ್ರಿತವಾಗಿರುವ ಮುದುಕಿಯ ದೈವೀಶ್ರದ್ಧೆ ನಿಜಕ್ಕೂ ಪೂಜ್ಯವಾದುದು. ಅವಳ ಮನಸ್ಸಿನ ಪರಿಪಾಕ ತುಂಬ ಹಿರಿಯದು. ಅಂತೆಯೇ ಅವರು ಚಿತ್ರಿಸುವ ಒಕ್ಕಲ ಹೆಣ್ಣಾದ ‘ನಾಗಿ’ಯೂ ತುಂಬ ಸ್ವಾರಸ್ಯವಾದ ವ್ಯಕ್ತಿ. ಒಂದು ದಿನ ಬೇಸಿಗೆಯ ಮಟ ಮಟ ಮಧ್ಯಾಹ್ನ ಗೋಧಿಯನ್ನು ಬೀಸುತ್ತಾ ಕುಳಿತ ನಾಗಿ ಇದ್ದಕ್ಕಿದ್ದಹಾಗೆ ಅಳತೊಡಗುತ್ತಾಳೆ. ಆಗ ಹತ್ತಿರ ಕುಳಿತ ಅಜ್ಜಿ ಕೇಳುತ್ತದೆ ನಾಗಿಯ ಅಳುವಿನ ಕಾರಣವನ್ನು. ನಾಗಿ ಹೇಳುತ್ತಾಳೆ-

ಏನೇಳ್ಳಿ ನಮ್ಮವ್ವ ಇರುವೋರು ಮೂವೋರು
ನಾನು ನಮ್ಮೆಣ್ಣು ಮೊಲೆಗೂಸು
ಕಾಣಿರಾ ಒಪ್ಪೊತ್ತು ದುಡಿಯದೆ ಕೂತರೂ
ಪ್ರಾಣಾವ ನೀಸೋದು ಕಷ್ಟ
ಹುಲು ಮನುಸಿಯ ಪಾಡು ಹಿಂಗಾಯ್ತೆ ನಮ್ಮವ್ವ,
ಮಲೆದೇವ್ರ ಪಾಡ ಏನೇಳ್ಳಿ!
ಸುಲಭಾನೆ ಲೋಕಾದ ಸಂಸಾರ ನಡೆಸೋದು?
ಅಳು ಬಂತು ನಮ್ಮಪ್ಪಗಾಗಿ!
[22]

ಎಂದು. ವಿಶ್ವಕುಟುಂಬಿಯಾದ ಆ ಭಗವಂತನಿಗೆ ಈ ಲೋಕವನ್ನು ನಡೆಸುವುದು ಎಷ್ಟು ಕಷ್ಟವಿರಬೇಕು ಎಂದು ಅಳುವ ಈ ಒಕ್ಕಲ ಹೆಣ್ಣು ನಿಜಕ್ಕೂ ನಮ್ಮಲ್ಲಿ ಸೋಜಿಗ ರೋಮಾಂಚನವನ್ನೇಳಿಸುತ್ತಾಳೆ. ರಾಜರತ್ನಂ ಅವರ ‘ಮಲ್ಲಿ’ಯ ಪಾತ್ರದಲ್ಲಿ ಭಾರತೀಯ ಸತೀತ್ವದ ಮುಖ್ಯ ಲಕ್ಷಣವನ್ನು ಕಾಣುತ್ತೇವೆ. ನಾಗ ಒಂದು ಸಲ ಮಲ್ಲಿಯನ್ನು ಕರೆದುಕೊಂಡು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾನೆ, ದೇವರ ಪೂಜೆ ಆದಮೇಲೆ ಬೆಟ್ಟ ಇಳಿಯುವಾಗ, ನಾಗ ಕೇಳುತ್ತಾನೆ ಮಲ್ಲಿಯನ್ನು ‘ ಅಮ್ಮನ ಹತ್ತಿರ ಏನು ವರ ಕೇಳಿದೆ’ ಎಂದು. ಮಲ್ಲಿ ಹೇಳುತ್ತಾಳೆ ‘ಒಂದು ಸಣ್ಣ’ ವರವನ್ನು ಕೇಳಿದೆ ಎಂದು. ಆ ಸಂಭಾಷಣೆಯನ್ನು ನಾಗನ ಮಾತಿನಲ್ಲೆ ಕೇಳಿ –

“ಏನು ವರ’ ಯಾರಿಗೆ?”
‘ನಿಮಗೆ’
‘ನನಗೆ!’
“ಮತ್ತೆ, ಮಕ್ಳು ಮುವೋರಿಗೆ|”
“ನನಗೇನು ಮಲ್ಲಿ”
“ನಿಮಗೆ ಆಯುಸ್ಸು” “ನಿಮಗೆ ಆರೋಗ್ಯ”
“ಮತ್ತೆ ಮಕ್ಕಳಿಗೆ?”
‘ಅವಕೆಲ್ಲ – ಗುಣ, ಯಿದ್ದೆ, ಭಾಗ್ಯ”
“ನಿನಗೆ, ಮಲ್ಲಿ?”
“ನನಗಾ ….ಮುತ್ತೈದೆ ಸಾವು!”
[23]

ಮಲ್ಲಿ ದೇವರ ಬಳಿ ಕೇಳಿಕೊಂಡದ್ದು ಮುತ್ತೈದೆ ಸಾವನ್ನು? ಈ ಹೆಣ್ಣು ಚಾಮುಂಡಿಯ ಬಳಿ ಕೇಳಿದ ಈ ವರ ನಿಜಕ್ಕೂ ನಮ್ಮನ್ನು ದಂಗುಬಡಿಸುತ್ತದೆ. ಈ ಒಂದು ನಿಲುವಿನಲ್ಲಿ ಈ ಮಲ್ಲಿ ಯಾವ ಸೀತೆ ಸಾವಿತ್ರಿಯರಿಗೆ ಕಡಮೆಯಾಗಿದ್ದಾಳೆ? ಇಂತೆಯೇ ಮಾಸ್ತಿಯವರ ‘ಗೌಡರ ಮಲ್ಲಿ’ಯೂ ತನ್ನ ಮಹತ್ತಿನಿಂದ ನಮ್ಮನ್ನು ಬೆರಗುಗೊಳಿಸುತ್ತಾಳೆ. ‘ಬಸವಿ’ಯಾದ ಮಲ್ಲಿ ಊರ ಗೌಡನನ್ನು ಕೈಹಿಡಿದು ಗಂಭೀರ ಗರತಿಯಾಗಿ, ತನ್ನ ಒಲವಿನಿಂದ, ಸೌಜನ್ಯದಿಂದ, ನಮ್ಮ ಮನವನ್ನು ಸೆಳೆಯುತ್ತಾಳೆ. ಅವರದೇ ‘ರಾಮನವಮಿ’ಯಲ್ಲಿ ನಾವು ಕಾಣುವ ಜವರ ಗೌಡರೂ – ಇಂಥ ಒಬ್ಬ ಹಿರಿಯ ವ್ಯಕ್ತಿಯೇ. ರಾಮನವಮಿಯ ದಿನ, ತನ್ನ ಊರಿನ ಬಸರಿಯ ಮರದ ಬಳಿಗೆ, ರಾಮ-ಸೀತೆ-ಲಕ್ಷ್ಮಣರು ಬರುವರೆಂಬ ಐತಿಹ್ಯವನ್ನು ನಂಬಿ, ಹರೆಯದಿಂದ ಮುದುಕನಾಗುವ ತನಕ ವರುಷ ವರುಷವೂ ತಪ್ಪದೆ ಬಂದು ಕಾಯುವ ಜವರಗೌಡನ ಶ್ರದ್ಧೆ, ಶಬರಿಯ ತಪಸ್ಸಿಗಿಂತ ಕಿರಿದೇನಲ್ಲ. ಅವನ ನಂಬಿಕೆ, ಅರ್ಧಂಬರ್ಧ ಓದು ಕಲಿತ ನಮ್ಮಂಥವರಿಗೆ ಬರಿಯ ಮೂಢ ನಂಬಿಕೆಯಾಗಿ ತೋರಿದರೆ ಜವರ ಗೌಡನಿಗೋ –

ರಾಮಲಕ್ಷ್ಮಣ ಸೀತಾದೇವಿ
ಒಂದಿಗೆ ದಯಮಾಡಿ
ಮೂರುಗಳಿಗೆ ಈ ಎಡೆ ಸಂತಸದಲಿ
ನಡೆವರು ಸುಳಿದಾಡಿ

ಪುಣ್ಯವಂತರಿಗೆ ಕಾಣುವರೆಂದು
ಹೇಳಿ ಕೇಳಿ ಬಲ್ಲೆ;
ಕರುಣಿಸೆ ಕಾಂಬರು; ಪುಣ್ಯವೆ? ದೇವರ
ಕೃಪೆಗೆ ಏಕೆ ಎಲ್ಲೆ?
[24]

ಇಂತಹ ಶ್ರದ್ಧೆ. ಇಂತಹ ತುಂಬು ಶ್ರದ್ಧೆಯೊಂದೇ ಸಾಕು ಜೀವನ ಸಾಫಲ್ಯಕ್ಕೆ. ಇಂಥ ಹಲವು ವ್ಯಕ್ತಿ ಚಿತ್ರಗಳಲ್ಲಿ ನಾವು ಸಾಮಾನ್ಯತೆಯಲ್ಲಿ ಹುದುಗಿದ ಮಹತ್ತನ್ನು – ಕಲ್ಲಿನಲ್ಲಿ ಹುದುಗಿದ ಚಿನ್ನದಂತೆ ಇರುವ ಸಂಪತ್ತನ್ನು – ಕಾಣುತ್ತೇವೆ, ಕವಿಯ ಕಣ್ಣಿನ ಬೆಳಕಿನಿಂದ. ದಿನವೂ ಮುಂಜಾನೆ ಗುಡಿಗೆ ಬಂದು ರಂಗೋಲಿ ಹಾಕುವ ಆ ಮುದುಕಿ, ವಿಶ್ವಕುಟುಂಬಿಯಾದ ಭಗವಂತನ ಜವಾಬ್ದಾರಿಗಾಗಿ ಮರುಗುವ ಒಕ್ಕಲ ಹೆಣ್ಣಾದ ನಾಗಿ, ಮುತ್ತೈದೆ ಸಾವನ್ನು ಕೇಳಿಕೊಳ್ಳುವ ಮಲ್ಲಿ, ವೇಶ್ಯೆಯಾದರೂ ಗರತಿತನಕ್ಕೆ ಹಾರೈಸಿದ್ದ ಗೌಡನ ಕೈಹಿಡಿದ ಆ ಮಲ್ಲಿ, ಶ್ರೀರಾಮನಿಗಾಗಿ ಬಂದು ಕಾಯುವ ಜವರಗೌಡ – ಇವರೆಲ್ಲರೂ ತುಂಬ ಹಿರಿಯ ಚೇತನಗಳು. ಇವರೆಲ್ಲರ ಅಂತರಂಗದ ಶ್ರದ್ಧೆ – ಧೈರ‍್ಯ – ಶೀಲ ಇವೇ ವ್ಯಕ್ತಿಯ ನಿಜವಾದ ಸೌಂದರ‍್ಯ. ಅಂತರಂಗದ ಈ ಚಾರಿತ್ರ್ಯ ಸೌಂದರ್ಯವನ್ನು ಚಿತ್ರಿಸುವ ಇನ್ನೂ ಇಂತಹ ಹಲವಾರು ಕವಿತೆಗಳು ನವೋದಯದ ಕೃತಿಗಳಲ್ಲಿವೆ. ಜನ ಸಾಮಾನ್ಯರ ಜೀವನದ ಘನತೆಯನ್ನು ತೆರೆಯುವ ಈ ರಚನೆಗಳು ನವೋದಯದ ಕವಿಗಳ ವಿಶಿಷ್ಟತೆಯನ್ನು ತೋರಿಸುತ್ತದೆ.

ಸೌಂದರ‍್ಯದಂತೆ ಪ್ರೀತಿಯೂ ಒಂದು ಮೋಡಿ. ಅಷ್ಟೇ ಅಲ್ಲ ಪ್ರೀತಿಯೆ ಸೌಂದರ‍್ಯದ ಸೂತ್ರ. ಪ್ರೀತಿ ಇದ್ದರೆ ಸೌಂದರ್ಯದ ದರ್ಶನ, ಇಲ್ಲದಿದ್ದರೆ ಇಲ್ಲ. ಹೆಣ್ಣು ಗಂಡಿಗೆ ಚೆಲುವಾಗಿ ತೋರುವುದು ಪ್ರೀತಿಯಿಂದಲೇ| ಪ್ರೀತಿಯಲ್ಲಿ ಅನೇಕ ಮಜಲುಗಳಿವೆ ಮೇಲಿಂದ ಕೆಳಗಿನವರೆಗೆ – ಕಾಮ, ಸ್ನೇಹ, ವಾತ್ಸಲ್ಯ, ಭಕ್ತಿ ಪ್ರೇಮ ಇತ್ಯಾದಿಯಾಗಿ. ಆತ್ಮ ಆತ್ಮಗಳನ್ನು ಬೆಸೆಯುವ ಈ ಮಧುರ ಬಾಂಧವ್ಯದ ರಹಸ್ಯವನ್ನು ಕುರಿತು ‘ಪ್ರೇಮ’ವನ್ನೆ ತಮ್ಮ ಪರಿಭಾವನೆಯ ವಸ್ತುವನ್ನಾಗಿ ಮಾಡಿಕೊಂಡು ನವೋದಯ ಕವಿಗಳು ಸುಂದರವಾದ ಗೀತಗಳನ್ನು ಬರೆದಿರುವುದು – ಗಮನಾರ್ಹವಾದ ಅಂಶವಾಗಿದೆ.

ಸಾಮಾನ್ಯವಾಗಿ ಮಾನವ ಲೋಕದಲ್ಲಿ ನಾವು ಕಾಣುವ ಪ್ರೀತಿ ಎನ್ನುವುದು ಒಂದು ಆಕರ್ಷಣೆ. ಅದೊಂದು ಚುಂಬಕ ಶಕ್ತಿ-

ಆ ಮುಖಾ – ಈ ಮುಖಾ
ಯಾವ ಗಂಡೊ
ಯಾವ ಹೆಣ್ಣೊ
ಪ್ರೀತಿಯೆಂಬ ಚುಂಬಕಾ
ಕೂಡಿಸಿತ್ತು
ಆಡಿಸಿತ್ತು
ಕೂಡಲದೊಳು ನೋಟವಾ
ಮೂರು ದಿನದ ಆಟವಾ
[25]

ಹೀಗನ್ನಿಸುತ್ತದೆ ಈ ಮಾನವ ಪ್ರಣಯದ ಮೋಡಿಗೆ ಬೆರಗಾದಾಗ. ಪ್ರೀತಿ ಎಂಬ ಒಂದು ಚುಂಬಕ ಶಕ್ತಿ ಗಂಡು ಹೆಣ್ಣುಗಳನ್ನು ಕೂಡಿಸುತ್ತದೆ, ಹೊಸ ಅಧ್ಯಾಯವನ್ನು ಆರಂಭಿಸುತ್ತದೆ. ಈ ಪ್ರೀತಿಯ ಚಿಂತನೆಗೆ ತೊಡಗಿದ ಕವಿಗೆ ಎನ್ನಿಸುತ್ತದೆ ಈ ಪ್ರೀತಿ ಎನ್ನುವುದು ಒಂದು ಅಖಂಡ ಸ್ರೋತವೆಂದು. ಈ ಒಲುಮೆಯ ಹೊನಲನ್ನು ತಾಯಿ, ತಂದೆ, ತಮ್ಮ, ಕೆಳೆಯ, ಮಗ ಇತ್ಯಾದಿ ಅಣೆಕಟ್ಟುಗಳು ತಡೆದು ನಿಲ್ಲಿಸುತ್ತವೆ. ಈ ಪರಿಭಾವನೆಯಲ್ಲಿ ಕವಿ

ಒಲುಮೆ ಹೊನಲಿಗಣೆಗಳೆಷ್ಟು
ಹರಿಯ ಬಿಡದ ತಡೆಗಳು!
ಹೊನಲ ತಡೆವುವೇನು ಹಿತದಿ
ಆದರೇನು? ತಡೆಗಳು!
ತಾಯಿ, ತಂದೆ, ಅಣ್ಣ, ತಮ್ಮ
ಕೆಳೆಯ, ಸುತರು, ಪುತ್ರಿಯು
ಬಾಳಿನರಕೆ ಪೂರ್ಣಗೈವ
ಸತಿಯು ಎಂಬ ತಡೆಗಳು!
[26]

ಎಂಬ ಪ್ರೀತಿಯ ವ್ಯಾಖ್ಯಾನದಲ್ಲಿ ಈ ಚಿಂತನೆಯೂ ಸುಂದರವಾಗಿದೆ; ಪರಿಭಾವಿಸಿದಷ್ಟು ರಸಪೂರ್ಣವಾಗುತ್ತದೆ. ಎದೆ ಎದೆಯಲ್ಲಿ ಹರಿವ ಈ ಒಲುಮೆಯ ಸೆಳೆತಕ್ಕೆ ಸಿಕ್ಕ ನಲ್ಲ, ಹೆಣ್ಣು ರೂಪವನ್ನು ಕಂಡು, ಏಕೆ ತನ್ನನ್ನು ಹೆಣ್ಣು ಈ ರೀತಿ ಸೆಳೆಯುತ್ತದೆ ಎಂಬ ಚಿಂತನೆಗೆ ತೊಡಗಿದಾಗ ಅವನಿಗನ್ನಿಸುತ್ತದೆ, ತನ್ನಜೀವನದಲ್ಲಿ ಇಂದು ಪ್ರೀತಿಯಾಗಿ ಮೈದೋರಿದ, ಮತ್ತೊಂದು ಜೀವವನ್ನು ಬಯಸುವ ಈ ಆಸೆ, ಇಂದಿನದಲ್ಲ, ನಿನ್ನೆಯದಲ್ಲ ಜನ್ಮಾಂತರದ್ದು ಎಂದು. ಆಗ ಎನಿಸುತ್ತದೆ

ಹಿಂದೆ ಜನ್ಮಾಂತರದ ಸಂಜೆಗೆಂಪಿನಲಿ ಮೊಳೆತ
ನಮ್ಮ ಪ್ರೇಮದ ಮೊಗ್ಗೆ ಈ ಜನ್ಮದೆಳ ಹಗಲೊಳು
ಪ್ರಥಮ ದರ್ಶನದ ರವಿಯುದಯದಲಿ ಬಿರಿದರಳಿತು
ಬೀಜವಿಲ್ಲದೆ ವೃಕ್ಷವೇಳುವುದು ಜಗದೊಳುಂಟೆ?
[27]

ಎಂದು. ಇಂದರಳಿದ ಈ ಪುಷ್ಪ ಹಿಂದೆ ಜನ್ಮಾಂತರದ ಸಂಜೆಗೆಂಪಿನಲ್ಲಿ ಮೊಳೆತ ಮೊಗ್ಗೆಯ ವಿಕಾಸದ ಪರಿಣಾಮ. ಎಂದೋ ಒಮ್ಮೆ ಬೀಸತೊಡಗಿತ್ತು ಈ ಚುಂಬಕ ಗಾಳಿ-

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ!
[28]

ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೂ ಬೀಸುವ ಈ ಚುಂಬಕ ಗಾಳಿಯ ಸೆಳೆತದಲ್ಲಿ ಗ್ರಹಚಂದ್ರ ತಾರಾದಿಗಳೂ ತಿರುಗುತ್ತಿವೆ ಒಂದನ್ನೊಂದು ಆಕರ್ಷಿಸಿ. ಅಂತಹುದು ಈ ‘ಅನಂತಪ್ರಣಯ’ದ ಚುಂಬಕಗಾಳಿ. ಶೂನ್ಯ ಸಮಾಧಿಯಲ್ಲಿದ್ದ ಬ್ರಹ್ಮನನ್ನು ತನ್ನ ಮಧುರ ಚುಂಬನದಿಂದ ಎಚ್ಚರಿಸಿ ಸೃಷ್ಟಿಲೀಲೆಗೆ ಪ್ರಥಮ ರತಿಯು ಪ್ರೇರಿಸಿದಂದಿನಿಂದ ಮೊದಲಾಯಿತು ಈ ಪ್ರೀತಿಯ ರಾಸಲೀಲೆ. ಈ ಸತ್ಯದ ಸುಂದರ ಪ್ರತಿಮೆಯೇ ಕೃಷ್ಣಗೋಪಿಯರ ರಾಸಕ್ರೀಡೆ. ಅದೋ ಅಲ್ಲಿ ‘ವಿಶ್ವದ ಕೇಂದ್ರದ ಬೃಂದಾವನ’ದಲ್ಲಿ –

ನರ್ತಿಸುತ್ತಿದೆ ಗೋಪೀ ವೃಂದಂ
ಲಲನಾಕಾರದ ಪ್ರಣಯಾನಂದಂ
ಹಗಲಿರುಳೆರಡೂ ಉಷೆಸಂಧ್ಯೆಯರಂ
ತಳ್ಕೈಸಿಳೆಯಂ ಭ್ರಮಿಪಂದದಲಿ
ರಂಗುರಂಗಿನ ಸೀರೆಯ ಸೊಬಗಿಂ
ಮೆರೆಯುವ ಹೂದೋಂಟದ ಚಂದದಲಿ,
ಜಗದೆದೆಯಲಿ ರತಿ ತೃಷ್ಣೆಯ ಕೆರಳಿಸಿ
ಕುಣಿ ಕುಣಿವರು ಚಕ್ರದ ಬಂಧದಲಿ!
[29]

‘ಅಣು ಅಣುವಿನಿಂದ ನೀಹಾರಿಕೆವರೆಗೆ, ತೃಣಕಣದಿಂದ ಹಿಮಗಿರಿವರೆಗೆ’ ನಡೆಯುತ್ತಿದೆ, ಈ ಪ್ರೇಮದ ರಾಸಲೀಲೆ. ಈ ರಾಸಲೀಲೆಯೇ ಬೇರೊಂದು ಹೆಸರಿನಿಂದ ಕರೆಯುವುದಾದರೆ ಶಿವಲೀಲೆಯೂ. ಜಗತ್ತಿನ ಮಾತಾಪಿತರಾದ ಶಿವ-ಪಾರ್ವತಿಯರ ಪ್ರೇಮವೇ ಸಕಲ ಜಂಗಮ ಜಗತ್ತಿನ ಪ್ರೇಮಕ್ಕೂ ಮೂಲ. ಕವಿ ಕಾಳಿದಾಸ, ಭಕ್ತ ಕವಿಯಾದ ಹರಿಹರ, ತಮ್ಮ  ‘ಕುಮಾರ ಸಂಭವ’ ಮತ್ತು ‘ಗಿರಿಜಾ ಕಲ್ಯಾಣ’ಗಳಲ್ಲಿ – ಇದೇ ಭಾವವನ್ನು ಕಡೆದಿಟ್ಟಿದ್ದಾರೆ. ಇದೇ ಭಾವವನ್ನು ಸುಂದರವಾದ ಪ್ರತಿಮೆಯೊಂದರಲ್ಲಿ ರೂಪಿಸಿದ್ದಾರೆ ಕುವೆಂಪು ಅವರು ‘ಹರಿಗಿರಿಜಾ’ ಎಂಬ ಕವನದಲ್ಲಿ. ಪರ್ವತ ವಧೂ ಹೃದಯೇಶ್ವರ, ವರನಾದನಂತರ, ಶಿವಶಿವೆಯರ ಒಸಗೆಯಾಯಿತು. ಅಂದಿನಿಂದ ಇಂದಿನವರೆಗೆ ಸಾಗಿ ಬರುತ್ತಿರುವ ಯೋಗೀಶ್ವರನ ಭೋಗದಾಟವೇ ಈ ಭವ. ಸರ್ವ ಜೀವ ಜಡಗಳಲ್ಲಿಯೂ ಆ ಶಕ್ತಿಯೇ ಹೆಣ್ಣು, ಶಿವನೇ ಗಂಡು, ಅದೇ ಪುರುಷ, ಪ್ರಕೃತಿ –

ಶಿವ, ಶಕ್ತಿ, ಶಕ್ತಿ, ಶಿವ;
ಮಿಲನದಾಟವದುವೆ ಭವ!
ಭೋಗ ಲೀಲೆ ಸಾಗಿದೆ
ನಾನು ನೀನು ಆಗಿದೆ.
[30]

ಹೀಗೆ ಮಾನವರ ಎದೆಗಳಲ್ಲಿ ಪ್ರೀತಿಯಾಗಿ ಮೈದೋರಿ ಬಾಳನ್ನು ಬೆಳಗುವ ಈ ಶಕ್ತಿ ಚಿರಂತನವಾದ ದೈವೀ ಪ್ರೇಮದ ಒಂದು ವಿನ್ಯಾಸ ಮಾತ್ರ – ಎನ್ನುವುದನ್ನು ನವೋದಯ ಕವಿಗಳು ಗುರುತಿಸಿದ್ದಾರೆ.

ಪ್ರೀತಿ ಎನ್ನುವುದು ಆತ್ಮದ ಆಕರ್ಷಣೆ. ಗಂಡಿಗೆ ಹೆಣ್ಣಾಗಿ, ಹೆಣ್ಣಿಗೆ ಗಂಡಾಗಿ ಪರಸ್ಪರರನ್ನು ಸೆಳೆಯುವ ಈ ಶಕ್ತಿಯನ್ನು ನಮ್ಮ ಕವಿಗಳು ಅನೇಕ ಬಗೆಯಲ್ಲಿ ಚಿತ್ರಿಸಿದ್ದಾರೆ. ಈ ವಿಷಯವನ್ನು ನಾನಾ ಬಗೆಯ ಪ್ರತಿಮೆಗಳಲ್ಲಿ ಹಿಡಿದಿಟ್ಟಿರುವ ಸೊಗಸೂ ಗಮನಾರ್ಹವಾದುದು. ಮೊದಲನೆಯದಾಗಿ ‘ಹೂವಿನ ಕೋರಿಕೆ’ಯಲ್ಲಿ ಇದು ಮೈದೋರಿರುವ ಪರಿಯನ್ನು ನೋಡಿ –

ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ
ಅಧರ ಚುಂಬನದಿಂದ ಸವಿಯದನು ಬಾ.
ಚಂಚಲತೆ ಏಕೆ, ಓ ಚಂಚರೀಕವೆ ನಿನಗೆ
ವಂಚನೆಯದಿನಿತಿಲ್ಲ; ಬಾ | ಬೇಗ ಬಾ!

ಇರುಳೆಲ್ಲ ತಪಗೈದು ಎದೆಯ ಹೊಂಬಟ್ಟಲಲಿ
ಅರುಣನುದಯಕೆ ನೀನು ಬರುವೆಯೆಂದು,
ಪ್ರಣಯ ರಸವನು ಎರೆದು ಕಾದಿಹೆನು ತುಟಿ ತೆರೆದು
ಪಾನಗೈ ಓ ನನ್ನ ಭ್ರಮರ ಬಂಧು|
[31]

ಹೃದಯದಲ್ಲಿ ಪ್ರೇಮವನ್ನು ತುಂಬಿಕೊಂಡು ಭ್ರಮರವನ್ನು ಆಹ್ವಾನಿಸುವ ಈ ‘ಹೂವಿನ ಕೋರಿಕೆ’ಯಲ್ಲಿ ಕವಿ ಪ್ರೀತಿಯ ಕರೆಯನ್ನು ಹೂವು – ದುಂಬಿಯ ಪ್ರತಿಮೆಯಲ್ಲಿ ಹಿಡಿದಿರಿಸಿದ್ದಾರೆ. ಇದೇ ಬಗೆಯ ಹಂಬಲ ಇನ್ನೊಂದೆಡೆ ಹುಬ್ಬಳ್ಳಿಯವನಿಗಾಗಿ ಹಂಬಲಿಸುವ ವೇಶ್ಯೆಯಲ್ಲಿಯೂ

ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾವಾ
ವಾರದಾಗ ಮೂರು ಸರತಿ ಬಂದು ಹೋದಾಂವಾ
…………………………..
ಹುಟ್ಟಾಯಾಂವಾ ನಗೀಕ್ಯಾದೀಗಿ ಮುಡಿಸಿಕೊಂಡವಾ
ಕಂಡ ಹೆಣ್ಣಿಲೇ ಪ್ರೀತಿ ವೀಳ್ಯೇ ಮಡಿಸಿಕೊಂಡಾವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾವಾ
ಎದೀ ಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಾವಾ
[32]

ತನ್ನ ನಲ್ಲೆಯ ಸೆಳೆತವನ್ನನುಭವಿಸಿದ ನಲ್ಲ –

ಧರೆ ಶಶಿಯನೆಳೆವಂತೆ
ನಾನಿನ್ನ ಸೆಳೆವೆ
ರವಿ ಧರೆಯನೆಳೆವಂತೆ
ನೀನೆನ್ನನೆಳೆವೆ
[33]

ಎಂದು ವಿಶ್ವದ ಆಕರ್ಷಣ ಶಕ್ತಿಯ ಪ್ರತಿಮೆಯಲ್ಲಿ ಒಲವನ್ನು ಚಿತ್ರಿಸುವಲ್ಲಿ; ತನ್ನ ಪ್ರಿಯತಮನಿಗಾಗಿ ಹಾರೈಸುವ ಮಧುರ ಭಾವದ ಚೇತನವೊಂದು –

“ಬಾ ನನ್ನ ಮಧುರ ಮೋಹನ ಮೂರ್ತಿ! ಹೇ ಅನಂತ ನಿರೀಕ್ಷೆಯ ತಪಃಫಲ ಮೂರ್ತಿ!
ನನ್ನ ಬಳಿ ಮೈ ಸೋಂಕಿನಲಿ ಕುಳಿತುಕೋ, ನಿರಾಕಾರತೆಯ,
ಅನಿಶ್ಚಯತೆಯ, ಸುದೂರತೆಯ ಸಂದೇಹವನ್ನು ಸಂಹರಿಸು,
ನಿನ್ನನಪ್ಪಿ ನೀನಿರುವುದನು ನಂಬಿ ನಲಿಯುವೆನು.
ನನ್ನನಾಲಂಗಿಸು; ಚುಂಬಿಸು ನನ್ನನಿಲ್ಲಗೈ!
ಅಯ್ಯೋ ಈ ಬೇಸರದ ಏಕಾಂತವೂ ಸಾಕೆನಗೆ; ಈ ಮೌನದ
ಪೀಡನೆಯೂ ಸಾಕೆನಗೆ
ನಿನ್ನ ಚುಂಬನ ಆಲಿಂಗನಗಳಿಂದ ನನ್ನ ಏಕಾಂತವಳಿದು ಹೋಗಲಿ!
ನಿನ್ನೊಲುಮೆಯ ಸವಿಮಾತುಗಳಿಂದ ಈ ಮಹಾಮೌನ ಸಿಡಿದೊಡೆದು
ಅಸಂಖ್ಯ ಮಧುರ ಸ್ವರಗಳಾಗಲಿ!”
[34]

ಹೀಗೆ ಕಾತರಿಸುವಲ್ಲಿ; ಅದೇ ಚೇತನ ರಾಧೆಯಾಗಿ ಕೃಷ್ಣನಿಗಾಗಿ ಹಾರೈಸುತ್ತಾ-

ಎದೆಯ ಬನಕೆ ಬಾರೊ ನೀ
ಗೋಪ ಬಾಲನೆ;
ಮುದದಿ ಶಶಿಯ ಕಿರಣ ನಿನ್ನ
ಕರೆಯುತಿರುವುದು.
[35]

ಎಂದು ತನ್ನ ಹಂಬಲವನ್ನು ತೋಡಿಕೊಳ್ಳುವಲ್ಲಿ; ಚಂದ್ರಮಂಚಕ್ಕೆ ಏರುವ ಚಕೋರವೊಂದು-

ಓ ಬೆಳಕಿನಾ ಮಲ್ಲಿಗೆ
ಇಳಿದು ಬಾ ಇಲ್ಲಿಗೆ:
ಏರಲಾರೆನಲ್ಲಿಗೆ
ಓ ನನ್ನ ಮಲ್ಲಿಗೆ!
[36]

ಎಂದು ಕರೆಯುವ ಚಕೋರಾಭೀಪ್ಸೆಯಲ್ಲಿ ಒಂದೇ ಒಲವಿನ ಕಾತರತೆಯ ವಿವಿಧ ಚಿತ್ರಣಗಳನ್ನು ಕಾಣುತ್ತೇವೆ. ದುಂಬಿಗಾಗಿ ಹಾರೈಸುವ ಹೂವು; ಹುಬ್ಬಳ್ಳಿಯವನಿಗಾಗಿ ಹಾರೈಸುವ ವೇಶ್ಯಾಂಗನೆ; ತನ್ನ ನಲ್ಲೆಯ ಸೆಳೆತಕ್ಕೆ ಸಿಕ್ಕ ನಲ್ಲ; ದೇವಪತಿಗಾಗಿ ಹಾರೈಸುವ ಜೀವಸತಿ; ಕೃಷ್ಣನಿಗಾಗಿ ಕಾಯುವ ರಾಧೆ; ಬೆಳಕಿನ ಮಲ್ಲಿಗೆಗೆ ಬಾಯ್ಬಿಡುವ ಚಕೋರ – ಈ ಎಲ್ಲ ಪ್ರತಿಮೆಗಳಲ್ಲಿಯೂ ಸೂತ್ರವೊಂದೇ, ಪಾತ್ರ ಬೇರೆ ಬೇರೆ; ಉಸಿರೊಂದೇ, ಮೈ ಹಲವು.

ಪ್ರೇಮವು ಕಟ್ಟಿದ ಸಂಸಾರದ ಗೂಡಿನಲ್ಲಿ ಬಾಳುವ ದಂಪತಿಗಳ ಬಾಳಿನಲ್ಲಿ ಸರಸವೂ ಇದೆ ವಿರಸವೂ ಇದೆ. ನೋವೂ ಇದೆ, ನಲವೂ ಇದೆ. ಈ ಸರಸ – ವಿರಸಗಳ, ನೋವು ನಲವಿನ ಚಿತ್ರಗಳಿಂದ ರಸವನ್ನು ಕವಿ ನಮಗೆ ಹಣಿಸುತ್ತಾನೆ. ದಿನ ದಿನದ ಬಾಳಿನ ಸಂಗತಿ ಪರಿಭಾವನೆಗೆ ಸಂದಾಗ ಅದು ಅಸಾಮಾನ್ಯವಾಗಿ ತೋರುತ್ತದೆ; ಸುಂದರವಾಗಿ ರಂಜಿಸುತ್ತದೆ. ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬಂದ ವಧುವಿಗೆ ಮಾನಸಿಕ ಅವಸ್ಥೆಯ ಮಧುರ ಚಿತ್ರವನ್ನು ಒಲವಿನ ಕವಿ ಕೆ.ಎಸ್.ನ ಅವರು ಬಹು ಸುಂದರವಾಗಿ ಚಿತ್ರಿಸಿದ್ದಾರೆ.

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ.
ಚಿಂತೆ ಬಿಡಿ ಹೂವ ಮುಡಿದಂತೆ;
ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ;
ಜೀವದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿ ಮುಖವಿಲ್ಲ, ಇಷ್ಟು ನಗು-
ಮೂಗುತಿಯ ಮಿಂಚು ಒಳಗೆ ಹೊರಗೆ;
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು
ಬೇಲಿಯಲಿ ಹಾವು ಹರಿದಂತೆ.

ಮೂರನೆಯ ಸಂಜೆ ಹೆರಳಿನ ತುಂಬ ದಂಡೆ ಹೂ.
ಹೂವಿಗೂ ಜೀವ ಬಂದಂತೆ;
ಸಂಜೆಯಲಿ ರಾತ್ರಿ ಇಳಿದಂತೆ, ಬಿರುಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ!
[37]

ಮೂರು ದಿನಗಳಲ್ಲಿ ಮನೆಗೆ ಬಂದ ಹೆಣ್ಣಿನ ಮನೋಗತಿಯನ್ನು ಚಿತ್ರಿಸುವ ಈ ಸುಂದರವಾದ ಕವನವನ್ನು ಬೇರೆ ಮಾತಿನಿಂದ ವಿವರಿಸಲು ಹೊರಡುವುದು ಹಸುರು ಹುಲ್ಲಿನ ಮೇಲೆ ಮಿರುಗುವ ಇಬ್ಬನಿಗಳ ಸೊಗಸನ್ನು ತೋರಿಸಲು ಕೈಗೆತ್ತಿಕೊಂಡಂತೆ! ಅಕ್ಕಿಯಾರಿಸುತ್ತ ಕುಳಿತಾಗ ಈ ಹೆಣ್ಣಿನ ನಿಲುವೇ ಬೇರೆ –

ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು;
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ
ಸಿಂಗಾರ ಕಾಣದ ಹೆರಳು
[38]

ಈ ನಿರಾಭರಣ ಸುಂದರಿ –

ಕಲ್ಲುಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಜಲ್ಲೆನುವ ಬಳೆಯ ಸದ್ದು –
[39]

ಇಲ್ಲಿ, ‘ವೀ.ಸೀ.’ ಯವರ ಮಾತಿನಲ್ಲಿ ಹೇಳುವುದಾದರೆ ‘ಝಲ್ಲೆನುವುದು ಓದುಗರ ಎದೆ’ ಇಂಥ ಸಜೀವವಾದ ಬಣ್ಣನೆಯಿಂದ. ಇಂತಹ ಹೆಣ್ಣು ಹೆರಿಗೆಗೆಂದು ತೌರೂರಿಗೆ ಹೋದಾಗ ಅಲ್ಲಿ ‘ಸೀಮಂತ’ದ ದಿನ ಬಳೆಯನ್ನು ತೊಡಿಸಿದ ಮುದುಕ ಬಳೆಗಾರ ಚನ್ನಯ್ಯ, ಗಂಡನೆದುರು ಅವಳ ಗಾಂಭೀರ‍್ಯವನ್ನು ವರ್ಣಿಸುತ್ತಾ-

ಸಿರಿಗೌರಿಯಂತೆ ಬಂದರು ತಾಯಿ ಹಸೆ ಮಣೆಗೆ,
ಸೆರಗಿನಲಿ ಕಣ್ಣೀರನೊರಸಿ
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ,
ದೀಪದಲಿ ಬಿಡುಗಣ್ಣ ನಿಲಿಸಿ
[40]

ಎಂದು ಹೇಳುವಲ್ಲಿ ವಾತ್ಸಲ್ಯದ ದೃಷ್ಟಿಗೆ ಹೆಣ್ಣುಮಗಳು ಕಂಡ ಪರಿಯನ್ನು ತೆರೆಯುತ್ತದೆ ಇಂತಹ ವರ್ಣನೆ. ಗಂಡ ಹೆಂಡಿರ ಸಂಸಾರದಲ್ಲಿ ಕಂದನ ಆಗಮನ ಹೊಸ ಬೆಳಕೊಂದನ್ನು ತಂದು ತುಂಬುತ್ತದೆ; ಅನೇಕ ಅಮೃತ ಮೂಹೂರ್ತಗಳನ್ನು ಸೃಜಿಸುತ್ತದೆ. ಅಂತಹದೊಂದು ಮುಹೂರ್ತದ ಚಿತ್ರಣ ಇದು –

ನವಿಲಿನ ಕೊರಳಿನ ಬಣ್ಣದ ಸೀರೆ
ಹೊಂದಾವರೆ ಹೂವಿನ ಗೆರೆಯಂಚು
ಬೆನ್ದಿರುಹುತೆ ಕುಳಿತಿದ್ದಳು ನೀರೆ
ಸಾಗಿದ್ದಿತು ಹಸುಳೆಯ ಹಾಲೊಳಸಂಚು!

ಬಾಚಿದ ಹಿಂದಲೆ ಕದ್ದಿಂಗಳ ಹೆಡೆ;
ಹಾವೆನಲಿಳಿದಿದೆ ಬೆನ್ನಿನ ಮೇಲ್ಜಡೆ.
ಮುಡಿಯಲಿ ಮೂಬಣ್ಣದ ಹೂ ಕುಚ್ಚು –
ಕೆಂಪಿದೆ, ಬಿಳಿಯಿದೆ, ಹಸುರಿದೆ – ಕಬ್ಬಿಗನೆದೆ ಮೆಚ್ಚು.

ಮೂದಿಂಗಳ ಕಂದನ ಹೂಗಾಲು,
ಒಳಸಂಚನು ಹೊರಗೆಡಹುವವೋಲು,
ಅಂಚಲದೊಳಗಿಂ ಕಟಿತಟದಲ್ಲಿ
ಇಣುಕಿರೆ – ಮುಳುಗಿದೆ ನಾನೂ ಅಮೃತದ ಸುಖದಲ್ಲಿ
[41]

ತುಂಬ ಸುಂದರವಾದ, ಅಪೂರ್ವವಾದ ಒಂದು ಚಿತ್ರಣ ಇದು. ತಾಯಿಯ ಹಾಲೊಳಸಂಚನ್ನು ಮೂದಿಂಗಳ ಕಂದನ ಹೂಗಾಲು ಹೊರಗೆಡಹುವ ಈ ದೃಶ್ಯ ಓದುಗರನ್ನು ‘ಅಮೃತ ಸುಖ’ದಲ್ಲಿ ಅದ್ದುತ್ತದೆ, ತಾಯಿಯ ಚಿರಂತನ ವಾತ್ಸಲ್ಯವನ್ನು ಚಿತ್ರಿಸುವ ಒಂದು ‘ಸಣ್ಣ ಸಂಗತಿ’ಯನ್ನು ಗಮನಿಸಬಹುದು-

ನಟ್ಟಿರುಳ ಕರಿಮುಗಿಲ ನೀರ್ – ತುಂಬಿಗಳ ನಡುವೆ
ಹುಣ್ಣಿಮೆಯ ಕಣ್ಣು ತೆರೆದಿದೆ. ತಾರೆ ಬಂದಿವೆ
ಬಾನ ಬೀದಿಗೆ. ಅತ್ತಹಿಡಿದ ಸೋನೆಯ ಶ್ರುತಿಗೆ
ಗಾಳಿಯೇ ಹಾಡುತಿದೆ. ಇತ್ತ ಈ ಮನೆಯೊಳಗೆ
ಪುಟ್ಟಮಗುವೊಂದು ಮಂಚದ ಬಳಿಯ ತೊಟ್ಟಿಲಲಿ
ಕಣ್ಣರ್ಧ ಮುಚ್ಚಿ ಮಲಗಿದೆ, ಅದೂ ಬರೀ ಮೈಲಿ!

ನಿದ್ದೆಗಣ್ಣಿನಲೆ ಪಕ್ಕದ ತಾಯಿ ಕೈ ನೀಡಿ
ಮತ್ತೆ ಹೊದಿಕೆಯನ್ನು ಸರಿಪಡಿಸುವಳು. ಮಗು ತಿರುಗಿ
ಹೊದಿಕೆಯೆನು ಕಿತ್ತೆಸೆದು ಮಲಗುವುದು ಬರಿ ಮೈಲಿ:
ಸಣ್ಣಗಿದೆ ದೀಪ ಎಲ್ಲೋ ಒಂದು ಮೂಲೆಯಲಿ.
ಇದು ಸರಿಯೆ? ತಪ್ಪೇ? – ಉತ್ತರವಿಲ್ಲ. ದೆಸೆದೆಸೆಗೆ
ಎಲ್ಲ ಮಲಗಿಹರು ಮಾತಾಡದೆಯೇ, ನೋಡದೆಯೆ.
ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ
ಅದನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ.
[42]

ಹೆಸರು ‘ಸಣ್ಣಸಂಗತಿ’. ನೋಡಲು ಸಣ್ಣ ಸಂಗತಿಯಾದರೂ ಪರಿಭಾವನೆಗೆ ಇದು ಯೋಗ್ಯವಾಗಿದೆ. ಈ ಕವಿತೆಯ ಧ್ವನಿರಮ್ಯತೆಯನ್ನು ವಾಚ್ಯವಾಗಿಸುವ ಕಡೆಯ ನಾಲ್ಕು ಪಂಕ್ತಿಗಳನ್ನು ಬಿಟ್ಟರೆ, ಇಡೀ ಪದ್ಯ ಕೇವಲ ಸಣ್ಣ ಸಂಗತಿಯಾಗದೆ ಯಾವ ಎತ್ತರಕ್ಕೂ ಏರುತ್ತದೆ; ಒಂದು ನಿತ್ಯಸತ್ಯದ ಪ್ರತೀಕವಾಗುತ್ತದೆ, ಹೊದಿಕೆಯನ್ನೊದೆಯುವ ಮಗು ಮತ್ತು ಅದರ ಹೊದಿಕೆಯನ್ನು ಸರಿಪಡಿಸುವ ತಾಯಿಯ ಕೈ. ಸಂಸಾರದ ಇಂತಹ ರಸ ಕ್ಷಣಗಳ ಸೌಂದರ‍್ಯವನ್ನೂ ಮಹತ್ತನ್ನೂ ನಮ್ಮ ಕವಿಗಳು ತೆರೆದಿದ್ದಾರೆ. ಗಂಡ ಹೆಂಡಿರ ಸರಸ ವಿರಸಗಳ ಚಿತ್ರಣದಲ್ಲಿ ಸಂಸ್ಕೃತ ಕವಿಗಳ ಮತ್ತು ಪಾಶ್ಚಾತ್ಯ ಕವಿಗಳ ಪ್ರಭಾವವನ್ನು ಗುರುತಿಸಿದರೂ, ಅವುಗಳಿಂದ ಬೇರೆಯಾದ ಒಂದು ಹೊಸತನವನ್ನು ಪಡೆದ ಕವಿತೆಗಳನ್ನು ನಮ್ಮವರು ಬರೆದಿದ್ದಾರೆ.

ಸಂಸಾರದಲ್ಲಿ ಸುಖವಿರುವಂತೆ ಅದರ ನೆರಳಾಗಿ ದುಃಖವೂ ಇದೆ. ಕೇವಲ ಸುಖವನ್ನು ಚಿತ್ರಿಸುವುದೇ ಸೌಂದರ‍್ಯಧರ್ಮವಲ್ಲ, ದುಃಖವನ್ನು ಚಿತ್ರಿಸುವುದು ಕೂಡ. ತನ್ನ ಮಗುವನ್ನು ಕಳೆದುಕೊಂಡು ಶೋಕ ಸಂತಪ್ತಳಾಗಿ ಕುಳಿತ ಮಡದಿಯ ಚಿತ್ರವನ್ನು ಗಂಡ ಚಿತ್ರಿಸುತ್ತಿದ್ದಾನೆ –

ಇಬ್ಬನಿ ತೊಳೆದರೂ ಹಾಲುಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ, ಹೆಣ್ಣು, ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನಸತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿವೀ ಚಂದಿರನ ಹೆಣಾಬಂತೊ ಮುಗಿಲಾಗ ತೇಲತಾ ಹಗಲ!
[43]

ಇಲ್ಲಿ ಕಾಣುವ ಹೆಣ್ಣಿನ ಮುಖ ಶೋಕರಾಹುಗ್ರಸ್ತವಾಗಿ ದಿಗಿಲು ಬಡಿಸುತ್ತದೆ. ಕಣ್ಣು ಇಬ್ಬನಿ ತೊಳೆದರೂ ಹಾಲು ಮೆತ್ತಿದ ಕವಳಿ ಕಂಟಿಯ ಹಣ್ಣಿನಂತಿವೆ; ಮುಖವೋ ಹಗಲ ಮುಗಿಲಲ್ಲಿ ತೇಲುತ್ತ ಬಂದ ಹುಣ್ಣಿಮೆ ಚಂದಿರನ ಹೆಣವಾಗಿದೆ! ಇನ್ನೊಂದೆಡೆ ತನ್ನ ಗಂಡನ ಶವದ ಹಿಂದೆ, ಅನಾಥೆಯಾಗಿ ನಡೆವ ಹೆಣ್ಣಿನ ಚಿತ್ರವನ್ನು ಕವಿ ಕೆತ್ತಿದ್ದಾರೆ-

ನಾಲ್ಕು ಮಂದಿ ಹೆಗಲ ಮೇಲೆ
ಮುಂದೆ ಹೆಣವು – ಹಿಂದೆ ಹೆಣ್ಣು.
‘ಬಿರಿಯೆ ತಾಯಿ ನಿನ್ನ ಎದೆಯ
ಬಾಗಿಲನ್ನು ತೆರೆಯೆ ತಾಯಿ
ಎನ್ನುವಂತೆ ಅಡಿಗಡಿಗೂ
ನೆಲವನಮುಕಿ ನೋಡುತಿಹಳು,
ಓಡುತಿಹಳು ಗಾಳಿ ಸೇರಿ-
ದಂತೆ ಒಮ್ಮೆ ಹೆಣದ ಹಿಂದೆ
ಎರಡು ಕಣ್ಣ ಮುಚ್ಚಿಕೊಂಡಿ-
ನ್ನೊಂದ ತೆರೆಯಲೆಂದು
ಜಾನಿಸುವಳೊ ಎಂಬ ಹಾಗೆ
ಮುಗಿಲನೊಮ್ಮೆ ದಿಟ್ಟಿಸುವಳು
[44]

ಈ ಒಂದು ವರ್ಣನೆಯಲ್ಲಿ ನಾವು ಕಾಣುವ ಹೆಣ್ಣಿನ ಚಿತ್ರವೇ ಬೇರೆ. ಗಂಡನನ್ನು ಕಳೆದುಕೊಂಡು ವಿಧವೆಯಾಗಿ ‘ಕುರುಡು ಧರ್ಮಕ್ಕೆ ಸ್ಮಾರಕ ನಿಂತಂತೆ’ ನಿಂತ ‘ಪುಟ್ಟ ವಿಧವೆಗೆ-

ತಲೆ ಭಾರ ಇಳಿದಿತ್ತು, ಅಂಗಾರ ಬೆಳೆದಿತ್ತು
ಮೈಯನ್ನು ಮುಚ್ಚಿತ್ತು ಕೆಂಪು ಸೀರೆ.
[45]

ಇವಳನ್ನು ಕಂಡು ಮರುಗದವರಾರು? ಇಂತಹ ಹೃದಯವೇಧಕವಾದ ಸಂದರ್ಭಗಳನ್ನು ಕವಿ ಚಿತ್ರಿಸಿದ್ದಾರೆ. ಇವುಗಳನ್ನೋದುವಾಗಲೂ ನಮ್ಮಲ್ಲಿ ಕರುಣರಸ ಹೊನಲಾಗುತ್ತದೆ. ಬಾಳಿಗೆ ಒಂದು ಮುಖವಲ್ಲ; ನೂರು ಮುಖವಿದೆ. ಆ ನೂರು ಮುಖದಲ್ಲೂ ಚೆಲುವಿದೆ.  ಆ ನೂರು ಮುಖದ ನೂರು ಬಗೆಯ ಚೆಲುವನ್ನು ಕವಿ ತನ್ನ ಪರಿಭಾವನೆಯಿಂದ ರಸವತ್ತಾಗಿ ಮಾಡಿ ನೀಡುತ್ತಾನೆ. ಅದು ಸುಖರೂಪವಾಗಿರುವಂತೆ ಶೋಕರೂಪವಾಗಿಯೂ ನಮ್ಮನ್ನು ಕರಗಿಸುತ್ತದೆ. ಕವಿ ಅಂಥ ಜೀವ-ಪಟ್ಟಪಾಡೆಲ್ಲವನ್ನೂ ಹುಟ್ಟು ಹಾಡಾಗಿಮಾಡಿ, ರಸವಾಗಿ ಹೊಸವಾಗಿ ಹರಿಸುತ್ತಾನೆ.

ಹನಿಗೂಡಿ ಹಳ್ಳವಾಗಿ,ಹಳ್ಳ ಹೊಳೆಯಾಗಿ,ಹೊಳೆ ಕಡಲಾಗುವುದು ಹೇಗೋ ಹಾಗೆ, ವ್ಯಕ್ತಿಯ ಪ್ರೇಮದ ವಿಕಾಸವೂ ಕೂಡ. ವ್ಯಷ್ಟಿಯಿಂದ ಸಮಷ್ಟಿಯ ಕಡೆಗೆ, ತಾನು ತನ್ನವರಿಂದ, ಸಮಾಜದ ದೇಶದ ವಿಶ್ವದ ಕಡೆಗೆ, ಅವನ ಪ್ರೀತಿ ಬೆಳೆಯತೊಡಗುತ್ತದೆ. ಹೆಜ್ಜೆ ಹೆಜ್ಜೆಗೂ ತನ್ನ ಉಪಾಧಿಯ ವೃತ್ತರೇಖೆಯನ್ನು ವಿಸ್ತರಿಸಿಕೊಂಡು ವಿಶಾಲವಾಗುವ ಈ ವಿಕಾಸದಲ್ಲಿ, ಸೃಷ್ಟಿಯಿಂದ ವಿಶ್ವದವರೆಗಿನ ಈ ಮಜಲಿನಲ್ಲಿ ವ್ಯಕ್ತಿ ದೇಶ ಪ್ರೇಮವೆಂಬ ಒಂದು ಘಟ್ಟದಲ್ಲಿ ನಿಂತು ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾನೆ. ಇಂತಹ ಮಜಲಿನಲ್ಲಿ, ಹೆತ್ತತಾಯಿ ಪ್ರೀತಿ ಪಾತ್ರಳಾಗುವಂತೆ, ತಮ್ಮೆಲ್ಲರಿಗೂ ಜನ್ಮವಿತ್ತ ದೇಶ ಮಾತೃಭೂಮಿಯಾಗಿ ಮೈಗೊಂಡು ವ್ಯಕ್ತಿಯ ಪ್ರೇಮಕ್ಕೆ ಪಾತ್ರವಾಗುತ್ತದೆ. ಮಾತೃಭೂಮಿಯ ಬಗೆಗೆ ಆರಾಧನಾ ರೂಪವಾದ ಪ್ರೀತಿಯನ್ನು ತೋರುವುದೂ, ಅದಕ್ಕಾಗಿ ತನ್ನ ತನವನ್ನು ತ್ಯಾಗಮಾಡುವುದೂ ತನ್ನ ಕರ್ತವ್ಯವೆಂದು ವ್ಯಕ್ತಿ ಭಾವಿಸುತ್ತಾನೆ. ಇಂತಹ ದೇಶಪ್ರೇಮದ ಭಾವ ಕವಿಯ ಮೂಲಕ ಜನ ಸಮಷ್ಟಿಯ ಹಾರೈಕೆಯಾಗಿ, ಹಾಡುಗಳಾಗಿ ಮೂಡುತ್ತದೆ. ಜನತೆಯನ್ನು ಎಚ್ಚರಿಸಿ ಅವರನ್ನು ಕರ್ತವ್ಯಪರರನ್ನಾಗಿ ಮಾಡುವ ಶಕ್ತಿಯೂ ಆಗುತ್ತದೆ.

ನವೋದಯದ ಕವಿಗಳಲ್ಲಿ ನೂತನ ಚೈತನ್ಯವನ್ನು ತುಂಬಿದುದು ಭರತಮಾತೆಯ ಬಿಡುಗಡೆಯ ತುಡಿತವಾದ ರಾಷ್ಟ್ರೀಯತೆ. ಪರಕೀಯ ಪ್ರಭುತ್ವದಿಂದ ಪಾರಾಗಿ ಸ್ವರಾಜ್ಯವನ್ನು ಗಳಿಸಿಕೊಳ್ಳುವ ಹಂಬಲವೇ ರಾಷ್ಟ್ರೀಯತೆ. ಅದು –

ಭರತ ಮಾತೆಯೆ ಭರತಮಾತೆಯೆ
ಎಂದುನೀ ತಲೆ ಎತ್ತುವೆ
ಎಂದು ಲೋಕದ ಜನರ ಹೃದಯದಿ
ನಿನ್ನ ಮಹಿಮೆಯ ಬಿತ್ತುವೆ?
[46]

ಎನ್ನುವ ಈ ಕೊರಗಿನಿಂದ ಪ್ರಾರಂಭವಾಯಿತು. ಮುಂದೆ ಅದು ಎಚ್ಚರದ ದನಿಯಾಗಿ –

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ
[47]

ಎಂಬ ಯೋಧವಾಣಿಯಾಗಿ ಮೊಳಗಿತು. ಆಗ ಭರತಮಾತೆ ಆದಿ ಶಕ್ತಿಯಾಗಿ ನಿಂತು ಕೇಳಿದಳು-

“ಗಂಡುಸಾದರೆ ನಿನ್ನ ಬಲಿ ಕೊಡುವೆಯೇನು?” [48]

ಎಂದು. ಸಾವಿರ ಸಾವಿರ ಸತ್ಯಾಗ್ರಹಿಗಳು ರಕ್ತತರ್ಪಣಕ್ಕೆ ಸಿದ್ಧರಾದರು. ತಮ್ಮ ಸ್ವಾತಂತ್ರ್ಯ ಸಮರ ಮಂತ್ರವನ್ನು ಉದ್ಗೋಷಿಸಿದರು –

ಬೀಳಲಿ ಮೈ ನೆತ್ತರು ಕಾರಿ;
ಹೋದರೆ ಹೋಗಲಿ ತಲೆ ಹಾರಿ
ತಾಯ್ನಾಡಿನ ಮೇಲ್ಮೆಗೆ ಹೋರಿ
ಸ್ವಾತಂತ್ರ್ಯದ ಸ್ವರ್ಗಕ್ಕೆ ಏರಿ
[49]

ಎಂದು ನಾಡೆಲ್ಲ ಒಂದಾಗಿ ಕಡಲಲೆಯಂತೆ ನುಗ್ಗಿತು ಗಾಂಧೀಜಿಯ ಮಂತ್ರಮಯ ವ್ಯಕ್ತಿತ್ವದ ಹಿಂದೆ! ಆ ದೃಶ್ಯವನ್ನು ಕವಿ ಕಂಡು ಮೂಕನಾದರೂ ಹಾಡದಿರಲಾಗಲಿಲ್ಲ-

-ನಡೆದಿವೆ ಬೀದಿಗೆ, ಕೋಟೆಗೆ, ಪೇಟೆಗೆ, ಸಭೆಗೆ
ನಡೆದಿವೆ ಕಾಳಗ ಕಾರುವ ಕಣಕೆ-
ನಡೆನಡೆದಿವೆ ಬೀಡಿಗೆ, ನಿರ್ಬಂಧದ ಸೆರೆಗೆ,
ಕನಲಿವೆ ಒಳದನಿಗಳ ಕರೆಗೆ, ಮೊರೆಗೆ,
ಅದೊ ನಡೆದಿವೆ ಕೋವಿಗೆ, ಬಡಿಗೋಲಿಗೆ ಬಾಗದೆ ತೂಗದೆ
ಒಳ ಹೊರಗಿನ ಹಿಂಸೆಗೆ ಹಲ್ಕಿರಿ ನಗೆಗೆ!
ನಡೆದಿವೆ ಬಗೆದಿರುಗದೆ, ಹಿಂತಿರುಗದೆ ಅದಿರದೆ –
ಬಿಡುಗಡೆಗೆ
[50]

ಈ ಹೋರಾಟದಲ್ಲಿ ಸತ್ಯಕ್ಕೆ ಜಯವಾಯಿತು. ಭಾರತೀಯ ಬಿಡುಗಡೆಯ ಕನಸು ನನಸಾಯಿತು. ಆ ಸಂಭ್ರಮವೂ ಹರ್ಷವೂ ಹಾಡಾಗಿ ಮೊಳಗಿತು-

ನನಸಾದುದೊ ಶತಮಾನದ
ಶತಶತಮಾನದಾ ಕನಸಿಂದು:
ಸ್ವಾತಂತ್ರ್ಯದ ಸಂಗ್ರಾಮದಿ
ಗತಿಸಿದಮಿತ ಹುತ ಆತ್ಮರ
ಬಲಿದಾನಂ ಫಲಿಸಿತೊ ಇಂದು!
ಓ ಎಳೆಯರೆ, ಓ ಮುದಿಯರೆ
ಓ ಗೆಳೆಯರೆ ಐತನ್ನಿ;
ಹೊಸ ಬಾಳಿಗೆ ಹೊಸ ನೋಂಪಿಯ
ಹೊಸ ಕಂಕಣವನು ತನ್ನಿ
[51]

ಎಂಬ ಉದ್ಘೋಷದ ದೇಶ ಪ್ರೇಮದ ಸೌಂದರ‍್ಯ ಈ ಹಲವು ಗೀತಗಳಲ್ಲಿ ಮಡುಗೊಂಡಿದೆ. ವೀರೋತ್ಸಾಹಗಳ ಹೊನಲೊಂದು ಈ ಗೀತಗಳ ಮೂಲಕ ಜನದೆದೆಗೆ ಪ್ರವಹಿಸಿ ಹೊಸ ಬಾಳಿನ ಆರಂಭಕ್ಕೆ ನಾಂದಿಯನ್ನು ಬರೆಯಿತು.

ದೇಶದ ದೇಹಕ್ಕೆ ಭಾಷೆ ವಾಣಿ. ಮೈಗೆ ಮಾತೆಂತೋ ಅಂತೆ, ಒಂದು ದೇಶಕ್ಕೆ ಒಂದು ಭಾಷೆ. ಭಾಷೆಯ ಮೇಲಿನ ಪ್ರೇಮವೂ – ಸ್ವಾತಂತ್ರ್ಯ ಪ್ರೇಮದ ಜೊತೆಯಲ್ಲೇ ಕೈಹಿಡಿದು ಬಂತು. ಭಾರತ ಭೂಮಿಯ ತನುಜಾತೆಯಾದ ಕನ್ನಡ ದೇಶ ತನ್ನ ಭಾಷೆಯ ಮೇಲಿದ್ದ ಪರಾಕ್ರಮಣವನ್ನು ಬಿಡಿಸಿಕೊಂಡು ಬೆಳೆಯಬೇಕು – ಎನ್ನುವ ಹಂಬಲ ‘ಕನ್ನಡ ಚಳುವಳಿ’ಯಾಗಿ ಹರಿದು ಬಂತು. ಕನ್ನಡನಾಡಿಗೆ, ಕನ್ನಡ ದೇಶಕ್ಕೆ ತನ್ನದೇ ಆದ ಒಂದು ಪ್ರಾಚೀನ ಪರಂಪರೆ ಉಂಟು; ಕನ್ನಡ ನಾಡು ಸ್ವತಂತ್ರವಾಗಿ, ಹರಿದು ಹಂಚಿ ಹೋದ ಅದರ ಭಾಗವೆಲ್ಲ ಒಂದುಗೂಡಿ ಏಕೀಕರಣವಾದಾಗಲೇ ಕನ್ನಡ ನುಡಿ ತನ್ನ ಮುನ್ನಿನ ಹೊಂಗನಸನ್ನು ನನಸನ್ನಾಗಿ ಮಾಡಿಕೊಳ್ಳುತ್ತದೆ ಎಂಬ ಶ್ರದ್ಧೆ ‘ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಆಶಯವಾಗಿ ಮೊದಲು ಪ್ರಕಟವಾಯಿತು. ಕನ್ನಡ ನುಡಿ ಆಚಾರ್ಯ ‘ಶ್ರೀ’ಯವರಿಗೆ, ಕನ್ನಡ ತಾಯಿ’ಯಾಗಿ ಮೈದೋರಿತು. ‘ತನು ಕನ್ನಡ ಮನ ಕನ್ನಡ, ನುಡಿ ಕನ್ನಡವೆಮ್ಮೆವು’ ಎಂದ ಗೋವಿಂದ ಪೈಗಳ ಹಾಡಿನಲ್ಲಿ, “ಕನ್ನಡದ ಪುಲ್ಲೆನಗೆ ಪಾವನ ತುಲಸಿ, ಕನ್ನಡದ ನೀರ್ವೊನಲೆನಗೆ ದೇವನದಿ’ ಎಂದ ಸಾಲಿ ರಾಮಚಂದ್ರರಾಯರ ಮಾತಿನಲ್ಲಿ.

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ ಪದವಾಡ್ತೀನಿ
[52]

ಎಂದು ಘೋಷಿಸಿದ ‘ರತ್ನ’ ನ ಪದಗಳಲ್ಲಿ

ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು
[53]

ಎಂದ ಕುವೆಂಪು ಅವರ ಹಾಡಿನಲ್ಲಿ – ಈ ಭಾಷಾ ಪ್ರೇಮ ತನ್ನ ಅಭಿವ್ಯಕ್ತಿಯನ್ನು ಪಡೆದಿದೆ. ಈ ಹಾರೈಕೆಗಳ ಪರಿಣಾಮವಾಗಿ ಇಂದು ಕನ್ನಡ ನಾಡು ಒಂದಾಗಿದೆ, ಮುಂದಾಗಿದೆ, ಕವಿ ಭಾಷೆಯನ್ನು ಕುರಿತು ತಾಳುವ ಈ ಭಾವನೆ, ಭಾಷೆಯನ್ನು, ದೇಶವನ್ನು ದೈವೀಶಕ್ತಿಯೆಂದು ತಾಯಿ ಎಂದು ಪರಿಭಾವಿಸುವ ದೃಷ್ಟಿ, ಇವು ಸುಂದರವಾಗಿ ಮೈದೋರಿವೆ.

ನವೋದಯ ಕವಿಗಳ ಸೌಂದರ್ಯಬೋಧೆಯಲ್ಲಿ ವಸ್ತುನಿಷ್ಠತೆಗಿಂತ ವ್ಯಕ್ತಿನಿಷ್ಠತೆಯೇ ಪ್ರಧಾನವಾಗಿದೆ. ಕವಿ ವಸ್ತುವೊಂದನ್ನು ಯಾವ ಯಾವ ಭಾವದ ಕಣ್ಣಿಂದ ನೋಡುವನೋ ಅಷ್ಟಷ್ಟು ವೈವಿಧ್ಯವಿದೆ. ಈ ಕವಿಗಳು ಇಂದ್ರಿಯ ಸೌಂದರ್ಯದಿಂದ ಆತ್ಮ ಸೌಂದರ್ಯದವರೆಗಿನ ಚೆಲುವಿನ ನಿಲುವುಗಳನ್ನು ಗುರುತಿಸಿದ್ದಾರೆ. ಈ ಸೌಂದರ್ಯಾನುಭವದ ಪರಿಗಳನ್ನು ಸೂಚಿಸಲು ಬಳಸಿರುವ ಅನೇಕ ಕವನ ಮತ್ತು ಕವನ ಭಾಗಗಳೆಲ್ಲವೂ ಪ್ರಧಾನವಾಗಿ ನಮ್ಮ ಹೊಸಗನ್ನಡ ಕವಿಗಳು ಚೆಲುವಿನ ವಿವಿಧ ಸ್ತರಗಳನ್ನು ಹೇಗೆ ಗ್ರಹಿಸಿ, ಅಭಿವ್ಯಕ್ತಿಸಿದ್ದಾರೆ ಎನ್ನುವುದರ ನಿದರ್ಶನವಾಗಿವೆ ಎಂಬುದನ್ನು ಸಹೃದಯರು ಗುರುತಿಸದೆ ಇರಲಾರರು. ಜತೆಗೆ ಹಳಗನ್ನಡ ಕವಿಗಳ ದೃಷ್ಟಿಯಿಂದ, ನವೋದಯ ಕವಿಗಳ ದೃಷ್ಟಿ ಎಷ್ಟರಮಟ್ಟಿಗೆ ವಿಶಿಷ್ಟವಾಗಿದೆ, ವಿನೂತನವಾಗಿದೆ, ವೈವಿಧ್ಯಮಯವಾಗಿದೆ ಎನ್ನುವುದರ ನಿರ್ದೇಶವನ್ನೂ ಇಲ್ಲಿ ಕಾಣಬಹುದು.

* * *


[1] ಕೆ.ಎಸ್.ನ : ಮೈಸೂರು ಮಲ್ಲಿಗೆ, ಪು. ೩

[2] ಕೆ.ಎಸ್.ನ : ಇರವಂತಿಗೆ ಪು. ೧.

[3] ಕುವೆಂಪು : ಪ್ರೇಮ ಕಾಶ್ಮೀರ, ಪು. ೬೪

[4] ಗರಿ : ಬೇಂದ್ರೆ, ಪು. ೮೮

[5] ಕೆ.ಎಸ್.ನ: ದೀಪದ ಮಲ್ಲಿ, ಪು. ೨೪

[6] ಜಿ.ಎಸ್.ಶಿ: ಚೆಲುವು – ಒಲವು (ಕ್ರಾಂತಿಕಾರ), ಪು. ೩೭

[7] ಕೆ.ಎಸ್.ನ: ಇರುವಂತಿಗೆ, ಪು. ೩.

[8] ಜಿ.ಪಿ. ರಾಜರತ್ನಂ : ರತ್ನನ ಪದಗಳು, ಪು. ೫೬ ಮತ್ತು ೫೮

[9] ಜಿ.ಪಿ. ರಾಜರತ್ನಂ : ರತ್ನನ ಪದಗಳು, ಪು. ೫೬ ಮತ್ತು ೫೮

[10] ಕುವೆಂಪು: ಚಂದ್ರಮಂಚಕೆ ಬಾ ಚಕೋರಿ, ಪು. ೭.

[11] ಕುವೆಂಪು : ಚಂದ್ರಮಂಚಕೆ ಬಾ ಚಕೋರಿ, ಪು.೯

[12] ಕೆ.ಎಸ್.ನ. : ಉಂಗುರ, ಪು. ೧೫

[13] ಪು.ತಿ.ನ.: ಗಣೇಶದರ್ಶನ. ಪು. ೩೫

[14] ಕುವೆಂಪು : ಪಾಂಚಜನ್ಯ, ಪು. ೪೦

[15] ಕುವೆಂಪು : ಕೃತ್ತಿಕೆ, ಪು. ೫೪

[16] ಚನ್ನವೀರ ಕಣವಿ : ದೀಪಧಾರಿ. ಪು.೨.

[17] ಜಿ.ಎಸ್.ಶಿ. : ದೇವಶಿಲ್ಪ: ಪು ೧-೨

[18] ಬೇಂದ್ರೆ : ಗಂಗಾವತರಣ ಪು, ೩೯

[19] ಬೇಂದ್ರೆ : ಉಯ್ಯಾಲೆ, ಪು. ೮೪

[20] ಕುವೆಂಪು : ಕೃತ್ತಿಕೆ. ಪು. ೫೦

[21] ಪು.ತಿ.ನ.: ಹಣತೆ, ಪು. ೭೨.

[22] ಪು.ತಿ.ನ: ಹಣತೆ ಪು. ೭೦-೭೧

[23] ಜಿ.ಪಿ. ರಾಜರತ್ನಂ : ನಾಗನ ಪದಗಳು, ಪು. ೪೦

[24] ಶ್ರೀನಿವಾಸ : ರಾಮನವಮಿ. ಪು. ೩೦.

[25] ಬೇಂದ್ರೆ : ಸಖೀಗೀತ, ಪು. ೫೧

[26] ಪು.ತಿ.ನ. ಹಣತೆ . ಪು.೧೫

[27] ತೀ.ನಂ. ಶ್ರೀಕಂಠಯ್ಯ: ಒಲುಮೆ, ಪು. ೩೧

[28] ಬೇಂದ್ರೆ : ನಾದಲೀಲೆ, ಪು.೫೦

[29] ಕುವೆಂಪು : ಪ್ರೇಮ ಕಾಶ್ರೀರ, ಪು ೨೫.

[30] ಕುವೆಂಪು : ಚಂದ್ರಮಂಚಕೆ ಬಾ ಚಕೋರಿ. ಪು. ೧೭

[31] ಕುವೆಂಪು : ಪ್ರೇಮ ಕಾಶ್ಮೀರ ಪು.೧

[32] ಬೇಂದ್ರೆ : ಸಖೀಗೀತ, ಪು. ೪೭-೪೮

[33] ಕುವೆಂಪು : ಪ್ರೇಮ ಕಾಶ್ಮೀರ ಪು. ೨೯

[34] ಕುವೆಂಪು : ಕಿಂಕಿಣಿ ಪು. ೪೯

[35] ಕುವೆಂಪು : ಷೋಡಶೀ ಪು. ೩೪

[36] ಕುವೆಂಪು : ಚಂದ್ರಮಂಚಕೆ ಬಾ ಚಕೋರಿ ಪು. ೬೯

[37] ಕೆ.ಎಸ್.ನ. ಉಂಗುರ ಪು. ೨೮

[38] ಕೆ.ಎಸ್.ನ. ಇರುವಂತಿಗೆ ಪು. ೧

[39] ಕೆ.ಎಸ್.ನ : ಇರುವಂತಿಗೆ, ಪು.೧

[40] ಕೆ.ಎಸ್.ನ. : ಮೈಸೂರ ಮಲ್ಲಿಗೆ ಪು. ೬೩

[41] ಕುವೆಂಪು : ಪ್ರೇಮ ಕಾಶ್ಮೀರ ಪು. ೭೦

[42] ಕೆ.ಎಸ್.ನ.: ಇರುವಂತಿಗೆ ಪು. ೫೮

[43] ಬೇಂದ್ರೆ : ನಾದಲೀಲೆ, ಪು. ೫೮

[44] ಬೇಂದ್ರೆ : ನಾದಲೀಲೆ, ಪು. ೬೭

[45] ಬೇಂದ್ರೆ : ಸಖೀಗೀತ, ಪು. ೫೪

[46] ಬಿ.ಎಂ.ಶ್ರೀ : ಹೊಂಗನಸುಗಳು, ಪು.೧.

[47] ಕುವೆಂಪು : ಪಾಂಚಜನ್ಯ, ಪು.೭

[48] ಬೇಂದ್ರೆ : ಗರಿ, ಪು. ೩೬

[49] ಕುವೆಂಪು : ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ, ಪು. ೨೭

[50] ವೀ.ಸಿ: ದ್ರಾಕ್ಷಿ ದಾಳಿಂಬೆ ಪು.೨

[51] ಕುವೆಂಪು : ಸ್ವಾತಂತ್ರೋದಯ ಮಹಾ ಪ್ರಗಾಥ ಪು.೮.

[52] ರಾಜರತ್ನಂ : ರತ್ನಪದಗಳು, ಪು. ೧೫

[53] ಕುವೆಂಪು : ಕೋಗಿಲೆ ಮತ್ತು ಸೋವಿಯಟ್ ರಷ್ಯ, ಪು. ೩೩