ಮಾನವನ ಸುತ್ತ ದಿನವೂ ಸಾಗಿರುವ ನಿಸರ್ಗದ ರಮಣೀಯತೆಯ ವೈವಿಧ್ಯವನ್ನೂ ವೈಚಿತ್ರ್ಯವನ್ನು ಕಂಡಾಗ ಎನಿಸುತ್ತದೆ, ಭಗವಂತ ನಮ್ಮ ಜೀವನನಾಟಕಕ್ಕೆ ಎಂತಹ ಸುಂದರವಾದ ರಂಗಸ್ಥಲವನ್ನು ನಿರ್ಮಿಸಿದ್ದಾನೆ ಎಂದು ! ಹೌದು, ಶತಮಾನಗಳಿಂದ ಈ ಸುಂದರ ರಂಗಮಂಟಪದಲ್ಲಿ ಮಾನವಜೀವಿತದ ನಾಟಕ ಸಾಗಿಬಂದಿದೆ. ಕವಿಯ ಕಣ್ಣು ಈ ಸಮಸ್ತ ನಾಟಕವನ್ನು ತನ್ನ ಪ್ರತಿಭೆಯಿಂದ ಬೇರೊಂದೆಂಬಂತೆ ಚಿತ್ರಿಸಿ ತೋರುತ್ತದೆಯಾದರೂ ಕಾವ್ಯ ಪ್ರಧಾನವಾಗಿ ಮಾನುಷ ವ್ಯಾಪಾರದ ಚಿತ್ರಣ. ಕವಿ ತನ್ನ ಕಾವ್ಯದಲ್ಲಿ ಮಾನವ ಜೀವನ ಎಲ್ಲ ಚೆಲುವುಗಳನ್ನು ಚಿತ್ರಿಸುವುದರ ಜೊತೆಗೆ ಮಾನವತೆ ಏರಬೇಕಾದ ನಿಲುವು ಏನೆಂಬುದನ್ನು ತನ್ನ ಕಾವ್ಯದ ಉದಾತ್ತ ಪಾತ್ರಗಳ ಚಾರಿತ್ರ್ಯದಿಂದ ತೋರುತ್ತಾನೆ.

ಕನ್ನಡದ ಪ್ರಾಚೀನ ಕವಿಗಳು ಮಾನವ ಸೌಂದರ‍್ಯದ ವರ್ಣನೆಯಲ್ಲಿ ವಿಶೇ ಆಸಕ್ತಿಯನ್ನು ತೋರಿದ್ದಾರೆ. ಬಾಲ್ಯದಿಂದ ಹಿಡಿದು ಮುಪ್ಪಿನ ತನಕ, ಸಾಮಾನ್ಯನಿಂದ ಹಿಡಿದು ಮಹಾತ್ಮನ ತನಕ ಮಾನವನಲ್ಲಿ ಕಾಣುವ ಚೆಲುವಿನ ವಿವಿಧ ಭಂಗಿಗಳನ್ನು ಚಿತ್ರಿಸಿದ್ದಾರೆ. ಇಲ್ಲಿಯೂ ಪ್ರಕೃತಿ ಚಿತ್ರಣದಲ್ಲೆಂತೋ ಅಂತೆ ಸಂಪ್ರದಾಯದ ವಜ್ರಮುಷ್ಟಿಯ ಗುರುತುಗಳನ್ನು ಕಾಣಬಹುದು.

ಮಾನವ ಸೌಂದರ್ಯ ಎಂದರೆ ಕೇವಲ ಶರೀರ ಸಂಪತ್ತಿನ ವರ್ಣನೆ ಎಂದು ಮಾತ್ರ ಅರ್ಥವಲ್ಲ, ಹೃದಯಭಾವಸಂಪತ್ತಿನ ವರ್ಣನೆಯೂ ಹೌದು. ಹೆಣ್ಣಿನ ವರ್ಣನೆಯಲ್ಲಿ ನಮ್ಮ ಕವಿಗಳು ದೇಹಶ್ರೀ ವರ್ಣನೆಯಲ್ಲಿಯೇ ತಮ್ಮ ಬಹುಮಟ್ಟಿನ ಪ್ರತಿಭೆಯನ್ನು ವೆಚ್ಚ ಮಾಡಿದ್ದರೂ, ಗಂಡಿನ ವರ್ಣನೆಯಲ್ಲಿ ಆತನ ವೀರಾದಿಗುಣಗಳೇ ಸೌಂದರ‍್ಯವೆಂದು ಭಾವಿಸಿರುವುದು ಕಂಡುಬರುತ್ತದೆ. ಗಂಡು – ಹೆಣ್ಣಿನ ಚಿತ್ರಣಗಳಲ್ಲಿಯೂ ಅವರ ಚಾರಿತ್ರ್ಯಗಳ ಚೆಲುವು ಸಾತ್ವಿಕ ಸೌಂದರ್ಯದ ಸೀಮೆಯನ್ನು ಮುಟ್ಟಿ ಗೌರವ ಭಾಜನವೂ ಪೂಜ್ಯವೂ ಆಗಿದೆ. ಮಹಾಶ್ವೇತೆಯ ತಪಸ್ಸಿನಲ್ಲಿ, ಪಾರ್ವತಿಯ ಪಾತ್ರದಲ್ಲಿ, ಕರ್ಣನ ತ್ಯಾಗಶೀಲತೆಯಲ್ಲಿ, ಭೀಷ್ಮರ ಮಹೋನ್ನತಿಯಲ್ಲಿ ಮಾನವ ಸೌಂದರ್ಯ ಆತ್ಮಸೌಂದರ್ಯದ ಮಜಲನ್ನು ಮುಟ್ಟುತ್ತದೆ. ಮಾನವನು ತನ್ನ ಕಲ್ಪನೆಯಿಂದ ಕಡೆದ ದಿವ್ಯಲೋಕದ ಋಷಿ-ಮುನಿಗಳ, ದೇವಾಪ್ಸರೆಯರ ಚೆಲುವಿನ ಚಿತ್ರಣವೂ  ಇಲ್ಲಿ ಗಮನಿಸಬೇಕಾದುದೇ.

ಮಾನವ ಸೌಂದರ್ಯ ಚಿತ್ರಣದಲ್ಲಿ ಕವಿಯ ಕಾವ್ಯಗಳಲ್ಲಿ ಅಗ್ರಸ್ಥಾನವನ್ನು ಪಡೆದಿರುವುದು ಸ್ತ್ರೀರೂಪವೇ. ಕಾವ್ಯಗಳನ್ನು ಬರೆದವರೆಲ್ಲಾ ಗಂಡಸರಾದುದರಿಂದ ಅವರು ತಮಗೆ ಮೋಹಕವಾದ ಸ್ತ್ರೀರೂಪವನ್ನು ಇಷ್ಟು ವರ್ಣಿಸಿರುವಂತೆ, ಹೆಂಗಸರೇ ಕಾವ್ಯಗಳನ್ನು ಬರೆದಿದ್ದ ಪಕ್ಷದಲ್ಲಿ ಅವರು ಪುರುಷರೂಪವನ್ನು ಹೀಗೆಯೇ ವರ್ಣಿಸುತ್ತಿದ್ದರೇ ಎಂಬ ಪ್ರಶ್ನೆ ಇಲ್ಲಿ ಎದ್ದರೂ, ಅದಕ್ಕೆ ಉತ್ತರ ದೊರೆಯಲು ಸಾಧ್ಯವಿಲ್ಲ. ‘ಸ್ತ್ರೀರೂಪಮೆ ರೂಪಂ’ ಎಂದು ನೇಮಿಚಂದ್ರನೂ, ‘ಸಾರಂ ಅನಂಗ ಜಂಗಮ ಲತಾಲಲಿತಾಂಗಿಯರಿಂದ ಮಲ್ತೆ ಸಂಸಾರಂ’ ಎಂದು ಪಂಪನೂ, ಸ್ತ್ರೀಸೌಂದರ್ಯವನ್ನು ಮಿತಿಮೀರಿ ಬಣ್ಣಿಸಿರುವುದುಂಟು; ಆದರೆ ಅವಳು ತಾಯಿ, ಗೃಹಿಣಿ, ತಪಸ್ವಿನಿ ಎನ್ನುವುದನ್ನೂ ಮರೆತಿಲ್ಲ.

ಕವಿಗಳ ಕಾವ್ಯಗಳಲ್ಲಿ ನಾವು ಕಾಣುವ ಬಹುತೇಕ ಸ್ತ್ರೀಯರು ಸಾಮಾನ್ಯವಾಗಿ ಉತ್ಸವಪ್ರಿಯರಾದ ರಾಜಮಹಾರಾಜರ ಅರಮನೆಯ ಅರಗಿಣಿಗಳು. ಇವರನ್ನು ಬಿಟ್ಟರೆ ಹೊಲಗದ್ದೆಗಳಲ್ಲಿ ಹಕ್ಕಿಗಳನ್ನೋಡಿಸುವ ಗ್ರಾಮಸುಂದರಿಯರು, ಅರವಟ್ಟಿಗಳಲ್ಲಿ ನೀರೆರೆವ ಲಲನೆಯರು. ನಗರಗಳಲ್ಲಿ ಕಾಣುವ ವಿಟೀಜನರು, ಜಾರೆಯರು, ವೇಶ್ಯೆಯರು ಇತ್ಯಾದಿ. ಕವಿಯ ವರ್ಣನಾಸಾಮಗ್ರಿ ಮಾತ್ರ ಯಾವ ಸ್ತ್ರೀಯರನ್ನು ವರ್ಣಿಸಬೇಕಾದರೂ ಒಂದೇ ಮಾದರಿಯಲ್ಲಿದೆ. ಹೆಣ್ಣಿನ ವರ್ಣನೆ ಮಾಡಬೇಕೆಂದರೆ ಅಡಿಯಿಂದ ಮುಡಿಯವರೆಗೂ ಅಂಗ ಅಂಗಗಳ ಚೆಲುವನ್ನು ಬಿಡಿಬಿಡಿಯಾಗಿ ಚಿತ್ರಿಸುವಾಗ-

ಸುನಿಮೇಷ ಮೀನಚಾಪಲನೇತ್ರೆ ಚಕ್ರೋನ್ಮಿ
ಥುನೆ ಕುಂಭಕುಚೆ ಮಕರ ಕೇತು ನುತ ವರ್ತುಳಾ
ನನೆ ಸಿಂಹಮಧ್ಯೆ ವೃಷಭಾಂಕವೈರಿಯ ಪಟ್ಟದಾನೆ ಕನ್ಯಾಕುಲಮಣಿ
(ಜೈಮಿನಿ ಭಾರತ ೬-೨೫)

ಕಲಹಂಸ ಗಮನೆ, ಪೂರ್ಣೇಂದುಮುಖಿ, ಚಾರುಮಂ-
ಗಳಗಾತ್ರಿ, ಘನಸೌಮ್ಯ ಸುಂದರ ವಿಲಾಸಿನಿ, ವಿ
ಮಲ ಗುರುಪಯೋಧರೆ ಸರಸಕವಿನುತಪ್ರಮದೆ ಮಲ್ಲಿಕಾಮಂದಸ್ಮಿತೆ.
(ಜೈಮಿನಿ ಭಾರತ, ೬-೨೯)

ಎಂದು ಪ್ರತಿಯೊಬ್ಬ ಕವಿಯೂ ಚಿತ್ರಿಸಿರುವುದರಿಂದ, ಇಲ್ಲಿ ಒಬ್ಬ ಕವಿಯ ಚಿತ್ರಣವನ್ನು ನೋಡಿದರೆ ಎಲ್ಲಾ ಕವಿಗಳ ಚಿತ್ರಣವನ್ನೂ ನೋಡಿದಂತೆಯೇ ಆಯಿತು!

ಹೆಣ್ಣಿನ ಮೈ ಚೆಲುವಿನ ಬಣ್ಣನೆಯಲ್ಲಿ ಕವಿತೋರಿರುವ ಆಸಕ್ತಿ ಅಸಾಧಾರಣವಾದುದು. ಕವಿಯ ಕಣ್ಣಿಗೆ ಹೆಣ್ಣು ಸಮಸ್ತ ಪ್ರಕೃತಿ ಸೌಂದರ್ಯದ ಕಲಶ. ಪ್ರಕೃತಿಯ ಸೌಂದರ್ಯದ ಸಾರವನ್ನೇ ಭಟ್ಟಿ ಇಳಿಸಿ ಕವಿ ಸ್ತ್ರೀ ರೂಪದ ಚಿತ್ರಣಕ್ಕೆ ಅದನ್ನು ಬಳಸುತ್ತಾನೆ. ಚಂದ್ರನನ್ನು ಮುಖಕ್ಕೆ , ದುಂಬಿಗಳನ್ನು ಮುಂಗುರುಳಿಗೆ, ಕಮಲಗಳನ್ನು ಕಣ್ಣಿಗೆ, ಸಂಪಿಗೆಯನ್ನು ಮೂಗಿಗೆ, ತಳಿರನ್ನು ಕೈಗೆ, ಬಾಳೆಯನ್ನು ತೊಡೆಗೆ, ನವಿಲನ್ನು ಮುಡಿಗೆ, ಹಂಸವನ್ನು ನಡೆಗೆ, ಮಲ್ಲಿಗೆಯನ್ನು ನಗೆಗೆ, ದಾಳಿಂಬವನ್ನು ಹಲ್ಲಿಗೆ, ಮೀನುಗಳನ್ನು ಕಣ್ಣ ನೋಟಕ್ಕೆ – ಹೋಲಿಸಿ ಹೋಲಿಸಿ ಕವಿಗಳು ಸ್ತ್ರೀರೂಪದ ಪಾರಮ್ಯವನ್ನು ಎತ್ತಿಹಿಡಿದಿದ್ದಾರೆ. ಹೆಣ್ಣು ನಡೆದರೆ ಹೆಜ್ಜೆ ಹೆಜ್ಜೆಗೂ ಕಮಲಗಳರಳುತ್ತವೆ; ನುಡಿದರೆ ಕೋಗಿಲೆಯೇ ಮೂಕವಾಗುತ್ತದೆ; ನಿಡುಸುಯ್ದರೆ ಅದರ ಕಂಪಿಗೆ ದುಂಬಿಗಳು ಮುಸುರುತ್ತವೆ. ಯಾವ ಹೆಣ್ಣನ್ನು ತೆಗೆದುಕೊಂಡರೂ ನಮ್ಮ ಕಾವ್ಯಗಳಲ್ಲಿ ಈ ಮಾತಲ್ಲದೆ ಬೇರೆ ಇಲ್ಲ. ಈ ಹೆಂಗಸರಂತೂ ಸದಾ ದುಂಬಿಗಳಿಂದ ಪರಿವೃತೆಯರಾದ ವದನಾರವಿಂದೆಯರು! ಸದಾ ರಾಜ ಮಹಾರಾಜರ ಅರಮನೆಗಳಲ್ಲಿ ಮಿಂಚನ್ನು ಕೆದರುತ್ತಾ, ಉದ್ಯಾನವನಗಳಲ್ಲಿ ಹೂವುಗಳನ್ನು ಕಿತ್ತು ಮುಡಿಯುತ್ತಾ, ತಿಳಿಗೊಳಗಳಲ್ಲಿ ಜಲಕ್ರೀಡೆಯಾಡುತ್ತಾ, ಗಾನ ನರ್ತನಾದಿಗಳಿಂದ ಮಹಾರಾಜನ ಮನವನ್ನು ರಂಜಿಸುವ ರಾಗಿಣಿಯರು. ಇವರಿಗೆ ಬಹುಮಟ್ಟಿಗೆ ಒದಗುವ ಕೊರಗು ವಿರಹತಾಪ, ಇಲ್ಲವೇ ಪುತ್ರ ದೋಹಳ. ಇದು ಹೊರತು ನೋವಿನ ನೆಳಲು ಸೋಂಕದ ಶೃಂಗಾರ ರಂಗಮಂಟಪದ ಹೊನ್ನ ಪುತ್ಥಳಿಗಳು ಇವರಲ್ಲಿ ಬಹುಮಂದಿ!

ಕವಿಗಳು ಹೆಣ್ಣಿನ ಬಣ್ಣನೆಯಲ್ಲಿ ನಿಸರ್ಗದ ಸುಂದರ ವಸ್ತುಗಳ ರೂಪಕಗಳನ್ನು ಬಳಸುವುದರಲ್ಲಿ ವಿಶೇಷವಾದ ಅರ್ಥವಿದೆ. ಹೆಣ್ಣು ಪ್ರಕೃತಿಯಂತೆಯೇ ಉತ್ಸವಪ್ರಿಯವಾದ ಚೇತನ ಎಂಬುದಷ್ಟೇ ಅರ್ಥವಲ್ಲ. ಪ್ರಕೃತಿ ಸೌಂದರ‍್ಯಕ್ಕೂ ಮಾನವ ಸೌಂದರ್ಯಕ್ಕೂ ಸಮಾನ ಧರ್ಮ ಉಂಟೆಂಬುದನ್ನು ತೋರಿಸಲು ಹೀಗೆ ಮಾಡಿದ್ದಾರೆ. ಮಾನವ ಸೌಂದರ‍್ಯದೊಂದಿಗೆ ಒಂದಾಗದ ಪ್ರಕೃತಿ ಸೌಂದರ್ಯವೆಂಬುದೇ ಇಲ್ಲ. ಕುಮಾರವ್ಯಾಸನಲ್ಲಿ ಈ ಒಂದು ಅಂಶವನ್ನು ವಿಶೇಷವಾಗಿ ಗುರುತಿಸಬಹುದು. ಅವನು ಬಹಿರಂಗದ ಪ್ರಕೃತಿ ಸೌಂದರ್ಯವನ್ನು ಮಾನವನ ಅಂತರಂಗ ಪ್ರಕೃತಿಯ ಸೌಂದರ್ಯವನ್ನು ಚಿತ್ರಿಸಲು ಬಳಸುತ್ತಾನೆ.  ಸ್ತ್ರೀ ಸೌಂದರ್ಯದಲ್ಲಂತೂ ಪ್ರಕೃತಿಯ ಕೋಮಲವಾದ ಚೆಲುವೆಲ್ಲವೂ ಕವಿಯ ಕುಂಚಕ್ಕೆ ಒದಗಿಬರುತ್ತದೆ. ಸಂಸ್ಕೃತ ಕವಿಗಳಂತೆ ನಮ್ಮ ಕವಿಗಳೂ ಸಹ ಈ ಮಾನವ ಸೌಂದರ್ಯವೆನ್ನುವುದು ಒಂದು ದೈವೀ ಸೃಷ್ಟಿಯೆನ್ನುವುದನ್ನು ಹೇಳಿದ್ದಾರೆ. ಅದರಲ್ಲಿಯೂ ಪರಮ ಸುಂದರವಾದ ಸ್ತ್ರೀ ರೂಪ ಆ ಬ್ರಹ್ಮನ ಸೃಷ್ಟಿಯೇ ಎಂದು ಹಾಡಿದ್ದಾರೆ. ಕಮಲಭವನು ತನ್ನ ಶಾಂತೀಶ್ವರ ಪುರಾಣದಲ್ಲಿ ಜ್ಯೋತಿರ್ಮಾಲೆಯನ್ನು ವರ್ಣಿಸುತ್ತಾ –

ಪೊಳೆವಮಲೇಂದು ಬಿಂಬದ ಕಳಾವಳಿಯಂ ತೆಗೆದು
ಆ ಸುಧಾಂಬುವಿನಿಂ ತೊಳೆದು, ಪೞಚ್ಚನಾಗಲ್ ಅದಱಳ್
ಭುವನತ್ಪ್ರಯದೊಂದು ಚೆಲ್ವನ್ ಒರ್ವಳೆ ಎನೆ ಮಾಡಿ
ಕೊಡೆ ಪಡೆದಂ ಜಲಜೋದ್ಭವನ್…
(ಶಾಂತೀಶ್ವರ ಪುರಾಣ : ೪-೫)

ಹೊಳೆವ ಚಂದ್ರಬಿಂಬದ ಕಳೆಯನ್ನು ತೆಗೆದು, ಬೆಳುದಿಂಗಳಲ್ಲಿ ತೊಳೆದು ಅದು ನಿರ್ಮಲವಾಗಲಾಗಿ ಅದರಲ್ಲಿ ಭುವನತ್ರಯದ ಚೆಲುವನ್ನು ಇವಳೊಬ್ಬಳನ್ನಾಗಿ ಮಾಡಿದನು ಆ ಬ್ರಹ್ಮ – ಎನ್ನುತ್ತಾನೆ. ಆದರೆ ಪಂಪ ಈ ಚೆಲುವು ಬ್ರಹ್ಮನಿಗೆ ಸಾಧ್ಯವಿಲ್ಲ, ಮನ್ಮಥ ಮಾಡಿದ್ದು ಎನ್ನುತ್ತಾ –

ಜಗಮಂ ಮಾಡಿದ ಪದ್ಮಜಂ ಪಡೆದನಿಲ್ಲ,
ಈ ಕನ್ನೆಯಂ ಮಾಡುವಲ್ಲಿಗೆ ಚಂದ್ರಂ ಮಳಯಾನಿಳಂ
ಮಳಯಜಂ, ನೀರೇಜಂ, ಇಮ್ಮಾವು, ಮಲ್ಲಿಗೆ ಎಂದು ಇಂತಿವಂ
ಅೞ್ಕರಿಂದ ಅಮರ್ದಿನೊಳ್ ತಾನೞ್ತುಯಿಂ ತೊಯ್ದು
ಮೆಲ್ಲಗೆ ಸಂದು ಅಂಗಜನೆಂಬ ಅಜಂ ಪಡೆದನ್
ಅಂತು ಆ ಕಾಂತಿಗೆ ಈ ಕಾಂತಿಯಂ
(ಪಂಪಭಾರತ : ೪-೭೫)

ಇವಳನ್ನು ಬ್ರಹ್ಮ ಪಡೆಯಲಿಲ್ಲ. ಚಂದ್ರ ಮಲಯಾನಿಲ, ಶ್ರೀಗಂಧ, ಕಮಲ, ಮಾವು- ಇವುಗಳನ್ನು ಅಮೃತದಲ್ಲಿ ನೆನಸಿ ಮನ್ಮಥನೆಂಬ ಬ್ರಹ್ಮನೇ ಮಾಡಿದನು ಎಂದು ಹೇಳುತ್ತಾನೆ. ಈ ಎರಡು ಪದ್ಯಗಳ ಸಾರವು ಕಾಳಿದಾಸನದೇ ಆದರೂ, ಕವಿ ತನ್ನ ಕಲ್ಪನೆಯ ಕುಂಚದಿಂದ ತಾನು ಕಂಡ ಸ್ತ್ರೀ ರೂಪವನ್ನು ಚಿತ್ರಿಸಿದ್ದಾನೆ. ಅಷ್ಟೇ ಅಲ್ಲ, ನಿಸರ್ಗದ ಸುಂದರವಾದ ಮತ್ತು ಕೋಮಲ ವಸ್ತುಗಳಿಂದ ಆದುದು ಈ ಸ್ತ್ರೀರೂಪ ಎನ್ನುವ ಭಾವನೆಯೂ ಇಲ್ಲಿದೆ. ಹೆಣ್ಣು ಪ್ರಕೃತಿ ಸೌಂದರ್ಯದ ಸಾರದಿಂದ ಆದ ಸೃಷ್ಟಿಯಲ್ಲ; ಅದಕ್ಕಿಂತಲೂ ಮಿಗಿಲು ಎಂದು ಸ್ತ್ರೀರೂಪವನ್ನು ಪ್ರಶಂಸಿಸಿರುವುದೂ ಉಂಟು. ಪಂಪ ಆದಿಪುರಾಣದಲ್ಲಿ ಮರುದೇವಿಯ ಸೌಂದರ್ಯವನ್ನು ವರ್ಣಿಸುತ್ತಾ –

ಮೊಗಮಂ ತಾವರೆ, ಕಣ್ಣನುತ್ಪಲದಳಂ, ಧಮ್ಮಿಲ್ಲಮಂ ಸೋಗೆ,
ಸೆಳ್ಳುಗುರಂ ಕೇದಿಗೆ, ಪುರ್ಬನಂಗಜನ ಬಿಲ್, ದಂತಾಳಿಯಂ ಮುತ್ತು
ಕೈಮುಗಿದು ಆರಾಧಿಸಿ ಪೋಲ್ತುವೆನ್ನದೆ,
ಸರೋಜಾತಾದಿ ನಿಸ್ಸಾರವಸ್ತುಗಳೊಳ್ ಪೋಲಿಸುವಂತುಟು ಏನ್
ಮರುಳನೇ
ರೂಪಂ ವಿಚಿತ್ರಾಂಗಿಯಾ
(ಆದಿಪುರಾಣ: ೬.೮೫)

ಮುಖವನ್ನು ತಾವರೆ, ಕಣ್ಣನ್ನು ಕನ್ವೈದಿಲೆ, ಮುಡಿಯನ್ನು ನವಿಲು, ಉಗುರನ್ನು ಕೇದಿಗೆ, ಹುಬ್ಬನ್ನು ಕಾಮನಬಿಲ್ಲು, ಹಲ್ಲನ್ನು ಮುತ್ತು, ಕೈಮುಗಿದು ಆರಾಧಿಸಿ ಹೋಲಿಕೆಯನ್ನು ಪಡೆದುವು; ಹಾಗಲ್ಲದೆ ಮುಖ ತಾವರೆಯನ್ನು, ನೈದಿಲೆಯನ್ನು ಕಣ್ಣು – ಹೋಲುತ್ತಿತ್ತು ಎಂದು ಸರೋಜಾತಾದಿ ನಿಸ್ಸಾರ ವಸ್ತುಗಳಲ್ಲಿ ಅವಳ ರೂಪವನ್ನು ಹೋಲಿಸಲು ನಾನೇನು ಮರುಳನೇ ಎನ್ನುತ್ತಾನೆ ಕವಿ. ಇದೂ ಒಂದು ರೀತಿಯಾದ ಚಮತ್ಕಾರಪೂರ್ಣವಾದ ವರ್ಣನೆ. ಆದರೆ ಸಾಂಪ್ರದಾಯಿಕವಾದ ಈ ಬಣ್ಣನೆಯಿಂದ ಹೊರತಾದ ಒಂದು ಚಿತ್ರವೆಂದರೆ ಹರಿಹರನ ‘ನಂಬಿಯಣ್ಣನ ರಗಳೆ’ಯಲ್ಲಿ ಕಂಡುಬರುವ ಕನ್ನೆಯ ಚಿತ್ರ. ಹರಿಹರ ಕಾವ್ಯಮಯವಾದ ಗದ್ಯದಲ್ಲಿ ವಿಶಿಷ್ಟವಾದ ಅಪೂರ್ವವಾದ ಈ ಒಂದು ಚಿತ್ರವನ್ನು ಬರೆದಿದ್ದಾನೆ:

‘ಒರ್ವ ಬಾಲೆ ಮುಗ್ಧೆ, ಹರೆಯಂ ಕಿರಿದು ಯೌವನಂ ಪಿರಿದಾಗಿ, ಮುಖವೆಲ್ಲಂ
ಕಣ್ಣು, ಬೆನ್ನೆಲ್ಲಂ ಮುಡಿ, ಉರವೆಲ್ಲಂ ಮೊಲೆ, ಪಿಂತೆಲ್ಲಂ ನಿತಂಬಂ, ನಡೆಯೆಲ್ಲಂ
ಮೃದು, ನುಡೆಯೆಲ್ಲಂ ನೋಟ, ನೋಟಮೆಲ್ಲಂ ಬೇಟ’
(ನಂಬಿಯಣ್ಣನ ರಗಳೆ : ನಾಲ್ಕನೆಯ ಸ್ಥಳ, ಪು. ೩೪)

ಹೆಣ್ಣಿನ ಚೆಲುವಿನ ಬಣ್ಣನೆಯಲ್ಲಿ ನಾನಾ ರೀತಿಗಳನ್ನು ನಾವು ಗುರುತಿಸಬಹುದು. ಯೌವನವತಿಯಾದ ಹೆಣ್ಣಿನ ಸೌಂದರ್ಯವೇ ಕವಿಗಳ ವರ್ಣನೆಯ ಮೊದಲ ಘಟ್ಟ. ಆ ಯೌವನವತಿಯ ಚೆಲುವಿನಲ್ಲಿಯೂ ಪ್ರಖರತೆ, ಮೋಹಕತೆ, ಸಾತ್ವಿಕತೆಗಳುಂಟು. ತಾಯಿಯಾಗಲಿರುವ ಗರ್ಭಿಣಿಯ ಸೌಂದರ್ಯ, ತಾಯಿಯಾದವಳ ಗೌರವಸೌಂದರ್ಯ ಇವುಗಳನ್ನೂ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲ ಸರ್ವಾವಸ್ಥೆಗಳಲ್ಲಿಯೂ ಸ್ತ್ರೀರೂಪ ಮನೋಹರ ರೂಪವೆಂಬುದನ್ನು ಕವಿಗಳು ಸಾರಿದ್ದಾರೆ. ಅವರು ನಾನಾಬಗೆಯಾದ ಭಾವ ಭಂಗಿಗಳಲ್ಲಿ ಹೇಗೆ ಹೇಗೆ ಕಂಡರು ಎನ್ನುವುದನ್ನೂ ಅತ್ಯಂತ ಆಸಕ್ತಿಯಿಂದ ಚಿತ್ರಿಸಿದ್ದಾರೆ. ಸ್ತ್ರೀ ಸೌಂದರ್ಯದ ಆದರ್ಶವನ್ನು, ರತಿ-ಪಾರ್ವತಿ-ಲಕ್ಷ್ಮಿಯರ ಸೌಂದರ್ಯಕ್ಕೆ ಹೋಲಿಸುವುದರ ಮೂಲಕ ಎತ್ತಿ ಹಿಡಿದಿದ್ದಾರೆ. ಯಾವಾಗ ಕುಮಾರಸಂಭವದಲ್ಲಿ ಕಾಳಿದಾಸನು ಲೋಕಮಾತೆಯಾದ ಪಾರ್ವತಿಯ ಸಾತ್ವಿಕ ಸೌಂದರ್ಯವನ್ನು ಕುರಿತು ಹಾಡಿದನೋ, ಅಂದಿನಿಂದ ಕವಿಗಳೆಲ್ಲರೂ ಸ್ತ್ರೀ ಸೌಂದರ್ಯದ ಮಹತ್ವವನ್ನು ಗುರುತಿಸಿ ತಮ್ಮ ಕಾವ್ಯ ಕಥಾನಾಯಿಕೆಯರನ್ನು ಪಾರ್ವತಿಗೆ ಎಂದು ಹೇಳುವುದನ್ನು ಕಲಿತರೆಂದು ತೋರುತ್ತದೆ. ಆದರೆ ಕಥಾನಾಯಿಕೆಯರನ್ನು ಪಾರ್ವತಿಗೆ ಸಾಟಿ ಸಮ ಎಂದಂತೆ ಕಥಾನಾಯಕರನ್ನು ಈಶ್ವರನಿಗೆ ಸಮವೆನ್ನುವ ಅಚಾತುರ್ಯಕ್ಕೆ ಹೋಗಲಿಲ್ಲ. ಕಥಾನಾಯಕರ ಸರದಿ ಬಂದಾಗ ಮನ್ಮಥನಲ್ಲಿ ಹೋಲಿಸುವುದರಲ್ಲಿ ತಮ್ಮ ವಿವೇಕವನ್ನು ತೋರಿದರು.

ಸ್ತ್ರೀರೂಪ ಅಪೂರ್ವ ಲಾವಣ್ಯಶೋಭೆಯನ್ನು ಪಡೆದು ಪ್ರಖರವಾಗುವುದು ಯೌವನದಲ್ಲಿ. ‘ಅಲರ್ಗಣೆಗೆ ಕೂರ್ಪು’ ಒದಗಿದಂತೆ ಕಾಣುತ್ತಾಳೆ ಹೆಣ್ಣು ಆ ಕಾಲದಲ್ಲಿ. ಆ ಚೆಲುವನ್ನು ನೇಮಿಚಂದ್ರ ಹೀಗೆ ವರ್ಣಿಸುತ್ತಾನೆ –

ಕರುವಿಟ್ಟಂ ಕಾಮದೇವಂ, ರತಿಯತಿಶಯದಿಂ ಬಣ್ದೆವಿಟ್ಟಳ್,
ಬಸಂತಂ ಬರೆದಂ ಸರ್ವಾಂಗಮಂ, ಕಣ್ದೆರೆದನ್ ಒಸೆದು ಸೀತಾಂಶು
ಚೈತ್ರಾನಿಲಂ ತೀವಿರೆ ಜೀವಂಬೊಯ್ದನ್, ಅಂತಲ್ಲದೊಡೆ
ಸೊಗಯಿಪ ಈ ರೂಪ, ಈ ಬಣ್ಣ, ಈ ಮೆಯ್ಸಿರಿ ಈ ಕಣ್ಚೆಲ್ವು
ಈ ಭಾವಕಮ್ ಒಗೆಯದು ಎನಲ್ ಕಾಂತೆ ಕಣ್ಗೆಡ್ಡಮಾದಳ್.
(ಲೀಲಾವತಿ ೩-೪೭)

ಯೌವನದ ಚೆಲುವನ್ನು ಕವಿ ಕಂಡ ಪರಿ ಇದು. ಆದರೆ ಷಡಕ್ಷರಿ ಆ ಸೌಂದರ‍್ಯದ ಆಕರ್ಷಕ ಗುಣವನ್ನು ಮಾತ್ರವಲ್ಲ, ಪ್ರಖರತೆಯನ್ನೂ ಗುರುತಿಸುತ್ತಾನೆ –

ಇದು ಕುಸುಮಾಸ್ತ್ರನ ಅಸ್ತ್ರಮ್, ಇದು ದರ್ಪಕನ ಆರ್ಪು, ಮನೋಜನ
ಓಜೆ ನೋಡಿದು, ನನೆವಿಲ್ಲ ಬಲ್ಲಹನ ಚೆಲ್ವು ಇದು, ಕಾವನ ಜೀವರತ್ನ
ಮಿಂತಿದು, ರತಿ ಕಾಂತನ್ ಆಂತ ಪೊಸ ಕೂರಸಿ ತಾನಿದು, ಮಾರವೀರ
ನಗ್ಗದಸದಳಂಕೃತಿಧ್ವಜಮಿದು ಎನಿಸಿರ್ದುದು ರೂಪು ನೀರೆಯಾ
(ರಾಜಶೇಖರ ವಿಳಾಸ : ೭-೬೩)

ಇಲ್ಲಿ ಮನ್ಮಥನ ಚೆಲುವು, ಅಲಂಕೃತಿ, ಪ್ರಕಾಶಮಾತ್ರವಲ್ಲ. ಮನ್ಮಥನ ಅಸ್ತ್ರ, ಕಾಮನ ಹೊಸ ಕೂರಲಗು ಎನ್ನುವ ಮಾತಿನಲ್ಲಿ ಸೌಂದರ್ಯದ ಪ್ರಖರತೆಯನ್ನು ಚಿತ್ರಿಸಿದ್ದಾನೆ. ಇಂತಹ ಯೌವನಶ್ರೀಯನ್ನು ತಳೆದ ಹೆಣ್ಣು ಸ್ವಯಂವರ ಮಂಟಪಕ್ಕೆ ಬಂದು ನಿಂತಾಗ ಅವಳ ಸೌಂದರ್ಯವನ್ನು ನಾರಣಪ್ಪ ಬಲು ಸೊಗಸಾಗಿ ಚಿತ್ರಿಸಿದ್ದಾನೆ. ಸ್ವಯಂವರ ಮಂಟಪದಲ್ಲಿ ಬಂದು ನಿಂತ ದ್ರೌಪದಿ ನಳಿನಮುಖಿಯರ ಸಕಲ ಸೃಷ್ಟಿಗೆ ‘ಕಳಶ’ ಎಂಬಂತೆ ತೋರಿದಳಂತೆ. ಆ ಲಾವ್ಯಣದ ಕಾಂತಿ ಮಿಂಚಿನಂತಹುದು –

ಚೆಲುವಿಕೆಯ ಚೈತನ್ಯವೋ, ಪರಿ
ಮಳದ ಪುತ್ಥಳಿಯೋ, ಲತಾಂಗಿಯ
ಸುಳಿವೊ, ಲಾವಣೈಕ್ಯ ರಸ ಸಾಕಾರ ವಿಭ್ರಮವೊ
ಲಲಿತ ಶೃಂಗಾರಾಬ್ಧಿ ಮಥನೋ
ಜ್ವಲಿತ ಸುಧೆಯೋ ಸಾಧಕರಿಗಿದು
ಫಲಿಸಿದರೆ ಕೃತ ಕೃತ್ಯರವರೆಂದುದು ಸುರಸ್ತೋಮ.
(ಆದಿಪರ್ವ : ೧೩-೪೭)

ಹರಿಹರನು ‘ಪ್ರಭುದೇವರ ರಗಳೆ‘ಯಲ್ಲಿ ಕಾಮಲತೆಯ ಸೌಂದರ್ಯವನ್ನು ವರ್ಣಿಸುತ್ತಾ –

ಶಶಿಕಿರಣದಂತೆ ಬೆಳೆದಳ್ ಬೆಳೆದಳಮ್ಮಮ್ಮ
ಕುಸುಮ ಶರದಂತೆ ನೆರೆದಳ್ ನೆರೆದಳಮ್ಮಮ್ಮ
ರತಿಗಿತಿಯ ರಂಭೆಗಿಂಭೆಯ ಮಾತು ಬೇಡಿಲ್ಲಿ
ಮತಿಗಿತಿಗೆ ಪೊಗಳ್ವಗಿಗಳ್ವಾಸೆಗಳ್ ಪುಗವಿಲ್ಲಿ
ಈ ತೆರದೊಳೆಸೆವ ಸೊಬಗಿನ ಸೊಂಪನೊಳಕೊಂಡು
ಮದನಶರವಿಕ್ಷುಧನುವಿಂದೆ ಪೊರಮಡುವಂತೆ
ಪದೆದು ಸುವಿಟರ ಮೇಲೆ ದಾಳಿ ಪೊರಮಡುವಂತೆ
ಶಿವನ ಭವನಕ್ಕೆ ಪೊರಮಟ್ಟಳಾ ಕಾಮಲತೆ.
(ಪ್ರಭುದೇವರ ರಗಳೆ : ಪುಟ ೪)

ಎಂದು ಹೇಳುವಲ್ಲಿ ಕಾಮಲತೆಯ ಮೋಹಕವಾದ ಚೆಲುವನ್ನು ಚಿತ್ರಿಸಿದ್ದಾನೆ. ಇದು ಪ್ರಖರವಾದ ಸೌಂದರ್ಯವಾದರೆ, ನಮ್ಮ ಕವಿಗಳು ಅಪ್ರಖರವಾದ ಕಾಂತಾ ಸೌಂದರ‍್ಯವನ್ನೂ ಚಿತ್ರಿಸಿದ್ದಾರೆ. ‘ಜೈಮಿನಿ ಭಾರತ’ದಲ್ಲಿ ನಾವು ಕಾಣುವ ಸುಧನ್ವನ ರಾಣಿಯಾದ ಪ್ರಭಾವತಿ ಅಪ್ರಖರ ಸುಂದರಿ.

ಮುಡಿಯ ಪೊಸ ಮಲ್ಲಿಗೆಯ, ಸೂಸುವೆಳನಗೆಯ, ಸವಿ-
ನುಡಿಯ ಬಾಯ್ದೆರೆಯ, ಹೊಳೆಹೊಳೆವ ದಶನದ,
ಮಿಸುಪ ಕಡೆಗಣ್ಣ, ತೊಳಗುವ ನಖಾವಳಿಯ
ಥಳಿಥಳಿಪ ಕಂಠಮಾಲೆಯ ಮುತ್ತಿನ ತೊಡವುಗಳ,
ಘನ ಸಾರದನುಲೇಪನದ, ಸಣ್ಣ ಮಡಿ ದುಕೂಲದ
ಬೆಳ್ವೊಗರ್ ಕೋಮಲಾಂಗದೊಳ್ ಬಿಡದೆ ಪಸರಿಸೆ
ಚಂದ್ರಕಾಂತದಿಂ ನಿರ್ಮಿಸಿದ ಪುತ್ಥಳಿವೊಲ್ ಅವಳೆಸೆದಳು.
(ಜೈಮಿನಿ ಭಾರತ : ೧೧-೧೦)

ಮಲ್ಲಿಗೆಯ ಬೆಳ್ಪು, ಎಳನಗೆಯ ಬೆಳ್ಪು, ದಂತಕಾಂತಿಯ ಬೆಳ್ಪು, ಕಡೆಗಣ್ಣಿನ ಬೆಳ್ಪು, ನಖಾವಳಿಯ ಬೆಳ್ಪು, ಮುತ್ತಿನ ತೊಡವುಗಳ ಹೊಳಪು, ಶ್ರೀಗಂಧ ಲೇಪನದ, ಬಿಳಿಮಡಿ, ದುಕೂಲದ ಧಾವಳ್ಯ – ಇವೆಲ್ಲ ಸೇರಿ ಚಂದ್ರಕಾಂತದ ಬೊಂಬೆಯಂತಿದ್ದಾಳೆ ಈ ಹೆಣ್ಣು. ಕವಿ ಕಾಂತಿಯ ಮೇಲೆ ಕಾಂತಿಯನ್ನು ಹೇರಿದ್ದಾನೆ; ಎಲ್ಲವೂ ಅಪ್ರಖರ, ಲಲಿತ ರಮ್ಯ, ಚಂದ್ರಕಾಂತ. ಪ್ರಭಾವತಿಗೇ ಸರಿ ಈ ಸೌಂದರ್ಯ ಎನಿಸುತ್ತದೆ. ಯೌವನದ ಈ ಚೆಲುವು ತಾಯ್ತನವನ್ನು ಹಾರೈಸುವಾಗ ಪೂಜ್ಯವೂ, ಗಂಭೀರವೂ, ಗೌರವ ಭಾಜನವೂ ಆಗುತ್ತದೆ. ಪಂಪ ಭಾರತದಲ್ಲಿ ಪುತ್ರಕಾಂಕ್ಷಿಯಾದ ಕುಂತೀದೇವಿಯ ಸೌಂದರ್ಯವನ್ನು ಪಂಪ ಹೀಗೆ ಚಿತ್ರಿಸಿದ್ದಾನೆ :

ಸುಲಿಪಲ್ ಮಿಂಚಿನಗೊಂಚಲ್, ಉಟ್ಟದುಗುಲಂ ಗಂಗಾನದೀಫೇನಂ
ಉಜ್ವಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾರಮ್
ಅಂಗಲಾಲಿತ ಸಾಂದ್ರಚಂದನ ರಸಂ ಬೆಳ್ದಿಂಗಳ್ ಎಂಬೊಂದು
ಬಂಬಲ್ಗೆಡೆಯಾಗೆ ಬೆಳ್ವಸಂದನಂ ಕಣ್ಗೊಪ್ಪಿತಾ ಕಾಂತೆಯಾ
(ಪಂಪಭಾರತ : ೧-೧೩೭)

ಈ ಗಂಭೀರವಾದ ಬೆಳ್ದಿಂಗಳ ಇರುಳಿನ ಶಾಂತಭವ್ಯತೆಯನ್ನು ಪಡೆದ ಈ ಸೌಂದರ‍್ಯ ತಾಯ್ತನಕ್ಕೆ ನೋಂತು ಗರ್ಭಿಣಿಯಾದಾಗ ಹೇಗೆ ತೋರುತ್ತದೆ ಎನ್ನುವುದನ್ನು ಭಾರತೀಯ ಕವಿಗಳು ಚಿತ್ರಿಸಿದ್ದಾರೆ. ಸಾಮಾನ್ಯವಾಗಿ ಗರ್ಭಿಣೀಸ್ತ್ರೀಯರ ಸೌಂದರ್ಯವನ್ನು ಚಿತ್ರಿಸುವುದರಲ್ಲಿ ಪಾಶ್ಚಾತ್ಯ ಕವಿಗಳು ವಿಶೇಷ ಲಜ್ಜೆಯನ್ನು ತಾಳಿರುವಂತೆ ತೋರುತ್ತದೆ. ಆದುದರಿಂದಲೇ ಅವರ ಕಾವ್ಯಗಳಲ್ಲಿ ಎಲ್ಲಿಯೂ ಗರ್ಭಿಣಿಯರಾದ ಸ್ತ್ರೀಯರ ವರ್ಣನೆ ನಮಗೆ ಕಾಣುವುದಿಲ್ಲ. ಆದರೆ ನಮ್ಮ ಕವಿಗಳಲ್ಲಿ ಈ ವಿಚಾರವಾಗಿ ಯಾವ ಸಂಕೋಚವೂ ಇಲ್ಲ. ಗರ್ಭಿಣಿಸ್ತ್ರೀಯರ ಸೌಂದರ್ಯ ವಿಶೇಷ ಪೂಜ್ಯವಾದುದು. ಸ್ತ್ರೀ ಗರ್ಭವತಿಯಾದಾಗ ಅವಳ ಅಂಗಾಂಗಗಳನ್ನು ಯಾವ ಮುಚ್ಚುಮರೆಯೂ ಸಂಕೋಚವೂ ಇಲ್ಲದಂತೆ ಚಿತ್ರಿಸಿದ್ದಾರೆ. ನಮ್ಮ ಕವಿಗಳು. ಲಕ್ಷ್ಮೀಶನು ಗರ್ಭಿಣಿಯಾದ ಸೀತಾದೇವಿಯ ಚೆಲುವನ್ನು ಕುರಿತು –

ಸಣ್ಣನಡು ಬಳೆಯೆ, ತಿವಳಿಗಳ್ ಅಡಗೆ, ತೆಳ್ವಾಸೆ
ನುಣ್ಣನೆ ಪೊಗರ್ ಪಡೆಯೆ, ಚೂಚುಕದ ಕಪ್ಪುಣ್ಮೆ,
ತಿಣ್ಣಮೊಲೆ ಬಿಣ್ಪಡರೆ, ಕಾಲ್ ಮಂದಗತಿಗೆ ಅಲಸೆ
ನಗೆ ಮೊಗಂ ಬೆಳ್ಪುದೋರೆ
ಕಣ್ಣೆವೆಯ ಪುರ್ವಿನ ನವಿರ್ ಮಿಂಚುದಳೆಯೆ, ತನು
ತಣ್ಣಸದೊಳ್ ಎಸೆಯೆ, ಪೊಸಗಾಡಿವೆತ್ತಿರ್ದಳ್…
(ಜೈಮಿನಿ ಭಾರತ : ೧೮-೪೬)

ಎಂದು ಆ ಚೆಲುವನ್ನು ಚಿತ್ರಿಸಿದ್ದಾನೆ. ಪಂಪನು ಗರ್ಭಿಣಿಯಾದ ಸುನಂದಾ ಮಹಾದೇವಿಯ ಚೆಲುವನ್ನು ಚಿತ್ರಿಸುತ್ತಾ

‘…………….ಬಂದು ಉದಯಂಗೆಯಲಿರ್ದ ಪೂರ್ಣ ಚಂ
ದ್ರನನ್ ಒಳಕೊಂಡು ಬೆಳ್ಪೆಸೆವ ವಾಸವ ದಿಗ್ವನಿತಾನನಂಬೊಲಾ
ನನ ರುಚಿ ಚೆಲ್ವನೇಂ ನೆಱುಯೆ ತಾಳ್ದಿದುದೋ ಬಿಸಕಾಂಡ ಪಾಂಡುರಂ’
(ಆದಿ ಪುರಾಣ: ೮-೪೬)

ಉದಯವಾಗಲಿರುವ ಪೂರ್ಣಚಂದ್ರನನ್ನು ಒಳಕೊಂಡ ಪೂರ್ವ ದಿಗ್ವನಿತೆಯ ಮುಖದಂತೆ ಅವಳ ಮುಖಕಾಂತಿ ತಾವರೆ ದಂಟಿನ ಬೆಳ್ಪನ್ನು ತಾಳಿತು ಎಂದು ವರ್ಣಿಸುತ್ತಾನೆ.

ಸ್ತ್ರೀಯರು ಅಂತಃಪುರದಲ್ಲಿ ಹೇಗೆ ಕಂಡರು, ಉದ್ಯಾನದಲ್ಲಿ ಹೇಗೆ ಕಂಡರು, ನೀರಾಟವಾಡುವಾಗ ಹೇಗೆ ಕಂಡರು, ವಿರಹದಲ್ಲಿ ಹೇಗೆ ಕಂಡರು, ಹಾಡುವಾಗ ನರ್ತಿಸುವಾಗ ಹೇಗೆ ಕಂಡರು ಎನ್ನುವ ವಿವಿಧ ಪರಿಗಳನ್ನು ಕವಿಗಳ ಕಣ್ಣು ಕಂಡಿದೆ. ಅರಮನೆಯಲ್ಲಿ ಅವರ ಚೆಲುವು ಹೇಗೆ ಕಂಡಿತು ಎನ್ನುವುದನ್ನು ರತ್ನಾಕರವರ್ಣಿ ಬಹು ಸೊಗಸಾಗಿ ವರ್ಣಿಸಿದ್ದಾನೆ ಭರತೇಶ ವೈಭವದಲ್ಲಿ. ಭರತ ಚಕ್ರವರ್ತಿ ಸಾವಿರ ಕಮಲಗಳರಳಿದ ಕೊಳದ ನೀರಿನಲ್ಲಿ ಬಿಂಬಿಸುವ ಸೂರ‍್ಯನಂತೆ ಲಲನಾ ಲಾವಣ್ಯದ ನಡುವೆ ತೋರುತ್ತಾನೆ. ‘ಭರತೇಶ ವೈಭವ’ದ, ‘ರಾಜಲಾವಣ್ಯ ಸಂಧಿ’ ನೂರಾರು ಬಗೆಯ ಸ್ತ್ರೀ ಸೌಂದರ್ಯದಿಂದ ರಾಜಿಸುತ್ತದೆ. ಭರತ ಚಕ್ರಿಗೆ ಉಣಬಡಿಸುವಾಗಲೂ ಕವಿ ಹೆಣ್ಣಿನ ಚೆಲುವನ್ನು ಕುಶಲನಾದ ರೂವಾರಿಯಂತೆ ಚಿತ್ರಿಸುತ್ತಾನೆ. ಅಲ್ಲಿ ‘ಚಂಚಲಾಕ್ಷಿಯರು ಅತ್ತಿತ್ತ ಸುಳಿದರು ಮಿಂಚಿನ ಲತೆಗಳೆಂಬಂತೆ’ ಎನ್ನುತ್ತಾನೆ. ಊಟಕ್ಕೆ ಎಡೆಮಾಡುವ ಸ್ತ್ರೀಯರ ರೂಪವನ್ನು ಕವಿ-

ಮೊಲೆಗಟ್ಟು ಬೆನ್ನಮೇಲಲೆವ ಕೇಶದ ಗಂಟು
ಸೆಳೆನಡು ಸುತ್ತಿದ ಸೆರಗು
ಬಲಗಯ್ಯ ಹೊನ್ನ ಸಟ್ಟುಗ ವಾಮಕರದ ಮಂ
ಗಲ ಭಾಂಡವೆಸೆಯೆ ಸುಳಿದರು.
ತೊಟ್ಟ ರವಕೆ ಜಡೆ ಕಾಸೆಯಂದದೊಳಿಳಿ –
ವಿಟ್ಟು ಸಿಕ್ಕಿದ ಮೇಲು ಸೆರಗು
ಬಟ್ಟವೆಂಗಳು ಕೆಲಬರು ಸುಳಿದರು ಹೊನ್ನ
ಚೆಟ್ಟಿ ಸಟ್ಟುಗಗಳನಾಂತು
(ಆರೋಗಣೆ ಸಂಧಿ : ಪದ್ಯ. ೭೦-೭೧)

ಎಂದು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾನೆ. ಪಂಪ ‘ಆದಿಪುರಾಣ’ದಲ್ಲಿ ಭರತಚಕ್ರಿಯ ಜೊತೆಗೆ ವನವಿಹಾರಕ್ಕೆಂದು ಹೋದ ತರುಣಿಯರು ಪುಷ್ಪಾಪಚಯಕ್ಕೆ ತೊಡಗಿದಾಗ ಸ್ತ್ರೀ ಸೌಂದರ್ಯವೂ ಪ್ರಕೃತಿ ಸೌಂದರ‍್ಯದೊಂದಿಗೆ ಎಷ್ಟೊಂದು ಸಾಮ್ಯವನ್ನು ಪಡೆಯಿತು ಎನ್ನುವುದನ್ನು ಚಿತ್ರಿಸಿದ್ದಾನೆ. ಜಲಕ್ರೀಡೆಯನ್ನು ಮುಗಿಸಿ ಕೊಳದಿಂದ ಹೊರಗೆ ಬಂದು ನಿಂದಾಗ –

ಕೂಲವನ್ ಅಡರ್ದು ನೆನೆದಂಗದೊಳ್ ಪತ್ತಿದ ದು
ಕೂಲದೊಳಿರಲ್ಕೆ ತಾಪಸರ ದೃಢಮತಿಗೆ ಪ್ರತಿ-
ಕೂಲಕೃತಿಗಳೋ ಮೋಹನದ ರಸದೊಳ್ ಆರ್ದ್ರತೆಯನಾಂತ ಚೆಲ್ವಿನಕಣಿಗಳೊ
ಸಾಲಮಣಿಮಯ ಸೋಪಾನದೊಳ್ ನಿಲಿಸಿರ್ದ
ಸಾಲಭಂಜಿಕೆಗಳೊ ವಿಚಿತ್ರಮೆನೆ ರಂಜಿತ ರ
ಸಾಲ ಪಲ್ಲವ ಪಾಣಿಪಾದ ತಳದ ಅಬಲೆಯರ ರೂಪುಗಳ್ ಕಣ್ಗೆಸೆದುವು.
(ಜೈಮಿನಿಭಾರತ : ೩೦-೧೩)

ಎಂದು ಲಕ್ಷ್ಮೀಶನು ಚಿತ್ರಿಸುತ್ತಾನೆ. ಅವರು ನಾಂದ ಬಟ್ಟೆಯನ್ನು ತೆಗೆದು ಬಣ್ಣಬಣ್ಣದ ಬೇರೆಯ ಬಟ್ಟೆಯನ್ನುಟ್ಟಾಗ ಮಾಗಿಯನ್ನು ಜಾರಿಸಿ ವಸಂತ ಋತುವನ್ನು ತಾಳಿದ ವನದೇವಿಯರಂತೆ ತೋರಿದರೆಂದು ಲಕ್ಷ್ಮೀಶ ಹೇಳುತ್ತಾನೆ. ಹಾಡುತ್ತಾ ಕುಳಿತ ಹೆಣ್ಣನ್ನು ಕುರಿತು ಪಂಪ –

ತಳದ ಕಡುಗೆಂಪು ಪುದಿದ
ವ್ವಳಿಸಿರೆ ಸುರಯುವತಿ ಮಧುರ ತಂತ್ರೀನಾದಂ
ಕೊಳೆ ಬೀಣೆಯ ದಂಡಿಗೆಯುಂ
ತಳಿರ್ತ್ತುದೆಂಬೊಂದು ಶಂಕೆಯಂ ಪುಟ್ಟಿಸಿದಳ್
(ಆದಿಪುರಾಣ : ೨-೨೧)

ವೀಣೆಯನ್ನು ಹಿಡಿದ ತರುಣಿಯ ಅಂಗೈಯ ಕೆಂಪು ನೋಡುವವರಿಗೆ ವೀಣೆಯ ದಂಡಿಗೆಯೇ ಚಿಗುರಿದಂತೆ ತೋರುವುದೆಂದು ವರ್ಣಿಸುತ್ತಾನೆ. ನರ್ತಿಸುವ ನರ್ತಕಿಯ ಕಣ್ಣಿನ ಒಲೆದಾಟವನ್ನು ಕುರಿತು

ನಸುಮುಚ್ಚುವ, ಬಿಚ್ಚುವ, ಪೊಳೆವ,
ಸುೞಿವ, ಬಳಸುವ, ಬೞಲ್ವ ತೆರೆಮಸಗಿ
ಮರಲ್ದು ಎಸೆವ ರಸಭಾವ ದೃಷ್ಟಿಗಳ್
ಅಸದಳಮ್ ಎನಿಸಿದುವು ನೃತ್ಯದೊಳ್
ನರ್ತಕಿಯಾ
(ಲೀಲಾವತಿ: ೪-೧೬)

ಎಂದು ನೇಮಿಚಂದ್ರ ಚಿತ್ರಿಸುತ್ತಾನೆ. ಹೆಣ್ಣಿನ ಈ ಮೋಹಕವಾದ ಚೆಲುವು ಆಭರಣಗಳಿಂದ ಸಿಂಗಾರಗೊಂಡಾಗ ಒಂದು ಚೆಂದವಾದರೆ ನಿರಾಭರಣವಾದಾಗಲೂ ಸುಂದರವಾಗಿಯೇ ತೋರುತ್ತದೆ. ಶ್ರೀಮತಿಯ ಸೌಂದರ‍್ಯವನ್ನು ಚಿತ್ರಿಸುತ್ತಾ

ಒದವಿದ ನೂಲತೊಂಗಲುಲಿಯಿಲ್ಲದ ಪೀನ ನಿತಂಬಂ, ಹಾರಮಿ
ಲ್ಲದೆ ಕುಚಮಂಡಲಂ ಪಲವುಮಂದದ ಚಂದದ ಚಿನ್ನಪೂಗಳಿ-
ಲ್ಲದ ಲಲಿತಾಳಕಂ, ಕ್ವಣನ್ನೂಪುರಮಿಲ್ಲದ ಪಾದಪದ್ಮಮೊ-
ಪ್ಪಿದಪುದು ನೋಡ ರೂಪಿನಿತು ಬೇಸಱಳಂ ಸೊಗಯಿಪ್ಪುದೀಕೆಯಾ
(ಆದಿಪುರಾಣ : ೩-೪೮)

ನೋಡಿರಿ, ಬೇಸರದಲ್ಲೂ ಇವಳ ರೂಪು ಇಷ್ಟು ಸೊಗಸುತ್ತದೆಯಲ್ಲ – ಎಂದು ಹೇಳಿಸುತ್ತಾನೆ ಪಂಪ. ಸಹಜಸುಂದರವಾದುದು ನಿರಾಭರಣವಾಗಿಯೂ ಸದಾ ಶೋಭಿಸಬಲ್ಲದು. ವಿರಹಭಾರದಿಂದ ಕೊರಗಿ ಕೃಶವಾದಾಗಲೂ, ಆ ರಿಕ್ತ ಸ್ಥಿತಿಯೂ ಸುಂದರವಾಗಿಯೇ ಕಾಣುತ್ತದೆ ಪಂಪನ ಕಣ್ಣಿಗೆ :

ಅಲಕಂ ಮಂದಾರಶೂನ್ಯಂ, ಕದಪು ಮಕರಿಕಾಪತ್ರ ಶೂನ್ಯಂ,
ಲಲಾಟಂ ತಿಲಕಾಲಂಕಾರ ಶೂನ್ಯಂ, ಘನಕುಚಯುಗಲಂ
ಹಾರ ಶೂನ್ಯಂ, ನಿತಂಬಂ ಕಲಕಾಂಚೀದಾಮ ಶೂನ್ಯಂ
ಚರಣಯುಗಲಮುಂ ನೂಪುರಾಲಾಪ ಶೂನ್ಯಂ….
(ಆದಿಪುರಾಣ : ೩.೧೩)

ಈ ನಿರಾಭರಣ ಶೂನ್ಯತಾ ಸೌಂದರ್ಯವೂ ಒಂದು ರೀತಿಯಲ್ಲಿ ಮನೋಹರವಾಗಿಯೇ ಇದೆ. ಹೀಗೆ ನಮ್ಮ ಕವಿಗಳು ಸರ್ವಾವಸ್ಥೆಯಲ್ಲಿಯೂ ಹೆಣ್ಣಿನ ಚೆಲುವನ್ನು ಚಿತ್ರಿಸಿದ್ದಾರೆ. ಲಕ್ಷ್ಮೀಶನಂತೂ ಜೈಮಿನೀಭಾರತದಲ್ಲಿ ‘ಪ್ರಮೀಳಾ ರಾಜ್ಯ’ವೆಂಬ ಸ್ತ್ರೀ ಲೋಕವನ್ನೇ ಚಿತ್ರಿಸಿದ್ದಾನೆ. ಪುರುಷರ ಪ್ರಾಬಲ್ಯವೇ ಇಲ್ಲದ ಆ ಪ್ರಮೀಳಾರಾಜ್ಯದ ಕಲ್ಪನೆ ಬಹುಶಃ ಬೇರಾವ ಸಾಹಿತ್ಯದಲ್ಲೂ (ಮೂಲ ಸಂಸ್ಕೃತದ್ದೆ) ಇರಲಾರದು. ಇದೊಂದು ಕವಿಯ ಅಪೂರ್ವ ಕಲ್ಪನಾಸೃಷ್ಟಿ. ಅಲ್ಲಿನ ಸ್ತ್ರೀಯರ ಸೈನ್ಯ ವೀರಪಾರ್ಥನ ಸೈನ್ಯವನ್ನು ಎದುರಿಸುವುದೂ ಒಂದು ಬಗೆಯಲ್ಲಿ ಚೆನ್ನಾಗಿಯೇ ಇದೆ. ಪುರುಷರಿಗೆ ಬಾಹುಬಲವೇ ಪರಾಕ್ರಮವಾದರೆ ಸ್ತ್ರೀಯರಿಗೆ ಸೌಂದರ‍್ಯವೇ ಪರಾಕ್ರಮವೆನ್ನುವುದನ್ನು ಕವಿ ಸೂಚಿಸಿದ್ದಾನೆ. ಈ ಅಂಶವನ್ನು ಕವಿ –

ಚಂಚಲಾಕ್ಷಿಯರ ತಳ ತಳಿಪ ಕಡೆಗಣ್ಣ ಕುಡಿ
ಮಿಂಚು, ಅವರಡರ್ದ ತೇಜಿಗಳ ದೂವಾಳಿಯಂ
ಮುಂಚಿದುವು, ನಳಿತೋಳ್ಗಳಿಂ ಜಡಿದು ಝಳಪಿಸುವ
ಕೈದುಗಳ ದೀಧಿತಿಗಳು ಹೊಂಚಿದುವು
ವಜ್ರ ಮಣಿ ಭೂಷಣದ ಕಾಂತಿಯಂ. ಪಂಚಬಾಣ
ಪ್ರಯೋಗದೊಳನೇಕಾಸ್ತ್ರ ಪ್ರಪಂಚವಡಗಿತು
ಎಸೆವ ಸಿಂಗಾಡಿಗಳನ್ ಅವರ ಪುರ್ಬಿನ ಗಾಡಿಗಳ್ ಮಿಕ್ಕುವು.
(ಜೈಮಿನಿ ಭಾರತ : ೧೬-೭)

ಎಂದು ವರ್ಣಿಸಿದ್ದಾನೆ. ಒಟ್ಟಿನಲ್ಲಿ ನಮ್ಮ ಕವಿಗಳು ಹೆಣ್ಣಿನ ಬಣ್ಣನೆಯಲ್ಲಿ ತಮ್ಮ ಕಲ್ಪನೆಯ ಭಂಡಾರದ ಮುದ್ರೆಯನ್ನೊಡೆದಿದ್ದಾರೆನ್ನಬಹುದು.

ಅರಮನೆಯ ಶೃಂಗಾರಮಯವಾದ ಆವರಣದಿಂದ ದೂರವಾದ ಪುಣ್ಯ ಹೈಮಾಚಲದ ಧವಳ ಸಾನಿಧ್ಯದಲ್ಲಿ ನಾವು ಕಾಣುವ ಪಾರ್ವತಿ ಮತ್ತು ಮಹಾಶ್ವೇತೆಯರ ಸೌಂದರ್ಯ ಭವ್ಯವಾದುದು. ಶಿವನನ್ನು ತನ್ನ ತಪಸ್ಸಿನಿಂದ ತಾನಿರ್ದಲ್ಲಿಗೇ ಬರಮಾಡಿಕೊಂಡ ಹರಿಹರನ ಗಿರಿಜೆ ‘ಬಲ್ಪಿನ ಭಾವಕಿ’ ‘ಚಲದ ಲಲನೆ’. ಅವಳ ನೋಟದಲ್ಲಿಯೇ ಕೋಟ್ಯನುಕೋಟಿ ಕುಸುಮಾಯುಧರು ಹುಟ್ಟುತ್ತಾರೆ! ಅಂತಹ ಅಪೂರ್ವ ಸುಂದರಿ ಅವಳು. ‘ಹರನ ಪರತತ್ವಮಯವಾದ ಸೌಂದರ್ಯ ರೂಪ’ವನ್ನು ಗೆಲ್ಲಲು ಅವಳು ತಪಸ್ಸಿಗೆ ನಿಂತಾಗ ಆ ನಿಲುವನ್ನು ಹರಿಹರ –

ಸಂದಣಿಸುವ ಜಡೆ ಬೆನ್ನಂ ಮಂದಯಿಸಿ
ಮುಸುಂಕುತ ಇಳಿಯೆ ನೀಲಾಂಬುದಮಂ
ಪಿಂತಿಕ್ಕಿ ಮುಂದೆ ಬೆಳಗುತ್ತ ನಿಂದ ಎಳಮಿಂಚಿನೊಲ್
ಅಗಜೆ ನೆರೆ ಮೆರೆದಿರ್ದಳ್
(ಗಿರಿಜಾ ಕಲ್ಯಾಣ : ೯-೭)

ಬಿಚ್ಚಿ ಹರಹಿದ ಮುಡಿ ಬೆನ್ನನ್ನು ಮುಚ್ಚಿರಲಾಗಿ, ನೀಲಮೇಘವನ್ನು ಹಿಂದಿಟ್ಟು ನಿಂದ ಎಳೆಯ ಮಿಂಚಿನಂತೆ ಪಾರ್ವತಿ ತೋರಿದಳೆಂದು ವರ್ಣಿಸುತ್ತಾನೆ. ಹೈಮಾಚಲದ ಸಮಸ್ತ ಗಾಂಭೀರ್ಯವೇ ಶಿವಪೂಜೆಯಲ್ಲಿ ತಲ್ಲೀನವಾದಂತೆ ತೋರುವ ಮತ್ತೊಂದು ಮೂರ್ತಿ ಮಹಾಶ್ವೇತೆಯದು. ಅವಳ ಸಾತ್ವಿಕ ಸೌಂದರ್ಯವನ್ನು ನಾಗವರ್ಮ ಅಪೂರ್ವವಾಗಿ ಚಿತ್ರಿಸಿದ್ದಾನೆ. ಇಂದ್ರಾಯುಧದ ಬೆನ್ನೇರಿ, ಅಚ್ಛೋದ ಸರೋವರದ ಭವ್ಯ ಸೌಂದರ‍್ಯದಿಂದ ಮುಗ್ಧನಾಗಿ, ಹಿಮಾಲಯದ ಧವಳ ಪರ್ವತಗಳ ಶಿವಸೌಂದರ್ಯದಲ್ಲಿ ಭಾವಪರವಶನಾಗಿ ಶಿವಾಲಯವೊಂದನ್ನು ಪ್ರವೇಶಿಸಿದ ಚಂದ್ರಾಪೀಡನ ಜೊತೆಗೇ ನಾವೂ ಕಾಣುತ್ತೇವೆ ಮಹಾಶ್ವೇತೆಯನ್ನು.[1]

ಅಮೃತಾಂಭೋರಾಶಿಪೂರಪ್ರತಿಮ ನಿಜತಪಸ್ಸಂಚಯಂ
ಪರ್ವಿತೋ ಲೋಕಮನ್ ಎಂಬಂತಿರ್ದ ದೇಹಾಂಶುಗಳ ಬಳಗದಿಂ
ಕಾನನಾನೀಕಮಂ ದಂತಮಯಂ ಮಾೞ್ಪಂತೆ
ತಾರಾಚಳಮಂ ಅಸದಳಂ ನುಣ್ಣಿಪಂತೆ
ಒರ್ವಳ್ ಅತ್ಯುತ್ತಮ ದಿವ್ಯಾಕಾರೆ, ಕುಳ್ಳಿರ್ದು
ಅತನುಹರನನ್ ಆರಾಧಿಸುತ್ತಿರ್ದಳಾಗಳ್,
(ಕಾದಂಬರೀ ಸಂಗ್ರಹ : ೩-೩೩)

ಅಮೃತ ಸಾಗರ-ಸದೃಶವಾದ ತಪಸ್ತೇಜದಿಂದ ಕಾಡುಗಳನ್ನೇ ದಂತಮಯವಾಗಿ ಧವಳಿಸುವ, ತಾರಾಚಳವನ್ನೇ ನುಣುಪುಗೊಳಿಸುವ ಈ ಅತ್ಯುತ್ತಮ ದಿವ್ಯಾಕಾರೆ,

ಕಡೆದರೋ ಶಂಖದಿಂ, ತೆಗೆದರೋ ನವಮೌಕ್ತಿಕದಿಂ,
ಮೃಣಾಳದಿಂ ಪಡೆದರೋ, ದಂತದಿಂದ ಎಸೆಯೆ ಮಾಡಿದರೊ
ರುಚಿರೋಜ್ವಲಾಂಗಮಂ, ಬಿಡದೆ ಅಮೃತಾಂಶುರಶ್ಮಿಗಳ
ಕುಂಚಿಗೆಯಿಂದಮೆ ಕರ್ಚಿ ಪಾರದಂದೊಡೆದರೋ ಪೇೞುನಲ್
ಕಣ್ಗೆಸೆದಿರ್ದುದು ರೂಪು ಕಾಂತೆಯಾ
(ಕಾದಂಬರೀ ಸಂಗ್ರಹ : ೩-೨೪)

ಶಂಖದಿಂದ ಕಡೆದಿದ್ದಾರೋ, ಹೊಸಮುತ್ತುಗಳಿಂದ ತೆಗೆದಿದ್ದಾರೋ, ಕಮಲದಿಂದ ಪಡೆದರೋ, ದಂತದಿಂದ ರಚಿಸಿದರೋ, ಚಂದ್ರಕಿರಣಗಳ ಕುಂಚದಿಂದ ಬರೆದು ಪಾದರಸವನ್ನು ಲೇಪಿಸಿದರೋ ಎನ್ನುವಂತಿದ್ದಾಳೆ ಅವಳು. ಅಷ್ಟೇ ಅಲ್ಲ –

ಪೊಳೆವ ಎಳನೇಸಱಂ ತೆಗೆದ ರಶ್ಮಿಗಳಂತೆ ಮಡಲ್ತು,
ಕಾಂತಿಯಂ ತಳೆದ ಎಳಮಿಂಚಿನ ಒಳ್ ತಳಿರ್ಗಳಂತೆ ಕವಲ್ತು
ಮೃಂಗಾಂಕಮೌಳಿ ನಿರ್ಮಳ ಪದ ಭಸ್ಮರೇಣುಗಳೆನಲ್
ನವಮಜ್ಜನ ವಾಃ ಕಣಂಗಳಂ ತಳೆದು ಪೆಗಲ್ವರಂ ಬಳೆದು
ರಂಜಿಸುಗುಂ ಜಡೆಗಳ್ ಮೃಗಾಕ್ಷಿಯಾ
(ಕಾದಂಬರೀ ಸಂಗ್ರಹ : ೩-೨೫)

ಶಿವನ ನಿರ್ಮಲ ಪಾದದ ಭಸ್ಮರೇಣುಗಳಂತೆ, ಮುಡಿಯನ್ನು ಪೊದಳ್ದ ನವಮಜ್ಜನದ ತುಂತುರುಗಳಿಂದ ಶೋಭಿಸುತ್ತ, ಹೆಗಲಿನವರೆಗೂ ಹರಹಿದ ಅವಳ ಜಡೆಮುಡಿ ಹೊಳೆ ಹೊಳೆವ ಎಳಸೂರ್ಯನ ಕಿರಣಗಳಂತೆ ಕುಡಿಯೊಡೆದು, ಕಾಂತಿಯನ್ನು ತಳೆದ ಎಳೆಯ ಮಿಂಚಿನ ಚಿಗುರಿನಂತೆ ಕವಲು ಕವಲಾಗಿ ರಂಜಿಸುತ್ತಿವೆ. ಈ ತಪೋಮಯವಾದ ಸಾತ್ವಿಕ ಸೌಂದರ್ಯವನ್ನು ಒಂದೇ ಮಾತಿನಲ್ಲಿ ಹೇಳಬೇಕಾದರೆ ‘ಭಕ್ತಿಯೆ ಭವಸನ್ನಿಧಿಯಲ್ಲಿ ರೂಪುಗೊಂಡಂತಿರ್ದಳ್’ (ಕಾದಂಬರೀ ಸಂಗ್ರಹ. ೩-೨೬)

ಮಹಾಶ್ವೇತೆಯ ಅತ್ಯುತ್ತಮ ದಿವ್ಯಾಕಾರವನ್ನು ಚಿತ್ರಿಸುವಲ್ಲಿ ಕವಿ, ಬೆಳ್ದಿಂಗಳ ಬಣ್ಣದಲ್ಲಿ ಮಿಂಚಿನ ಕುಂಚವನ್ನದ್ದಿದ್ದಾನೆ. ಈ ಸಾತ್ವಿಕ ಸೌಂದರ‍್ಯ ಪವಿತ್ರವೂ ಪೂಜ್ಯವೂ ಶಾಶ್ವತವೂ ಆಗಿದೆ ಸಾಹಿತ್ಯಲೋಕದಲ್ಲಿ. ಪಾರ್ವತಿ ಮಹಾಶ್ವೇತೆಯರ ಸೌಂದರ್ಯ ತರಳವಾದ ಚಾಂಚಲ್ಯವನ್ನು ತಪಸ್ಸಿನಿಂದ ಕಳೆದುಕೊಂಡು ಪಾವನವಾಗಿದೆ. ದೇಹದ ರೂಪು ಎಲ್ಲಿಯತನಕ ಕೇವಲ ಭೋಗವಾಸನೆಯನ್ನು ಕೆರಳಿಸುವುದೋ ಅಲ್ಲಿಯ ತನಕ ಅದು ನಿಜವಾದ ಸೌಂದರ್ಯವಲ್ಲ. ಆ ನಿಂದನೀಯವಾದ ರೂಪ ತಪಸ್ಸಿನಿಂದ ಪರಿಶುದ್ಧವಾದಾಗಲೇ ದಿವ್ಯ ಪ್ರೇಮವಾದ ಆತ್ಮ ಸೌಂದರ್ಯದ ಪದವಿಗೇರುತ್ತದೆ ಎನ್ನುವ ಅಂಶವನ್ನು ಕವಿಗಳು ಸಾರಿದ್ದಾರೆ.

ಪ್ರಾಚೀನ ಕನ್ನಡ ಕಾವ್ಯಲೋಕದಲ್ಲಿ ನಾವು ಕಾಣುವ ಕುಮಾರವ್ಯಾಸನ ದ್ರೌಪದಿಯಲ್ಲಿ ಮಿಂಚಿನ ಪ್ರಖರತೆಯನ್ನು ಕಾಣುತ್ತೇವೆ. ಅಗ್ನಿ ಪುತ್ರಿಯಾದುದರಿಂದ ಅವಳು ಬಂದೆಡೆಯಲ್ಲೆಲ್ಲಾ ಪ್ರಕೃತಿಯ ರಭಸ ಸೌಂದರ್ಯಗಳು ನುಗ್ಗಿಬರುತ್ತವೆ. ಪಂಚಪಾಂಡವರನ್ನು ಹಿಡಿತದಲ್ಲಿಟ್ಟುಕೊಂಡು ಮಹಾಭಾರತಕ್ಕೆ ಪ್ರಚೋದಕವಾದ ಶಕ್ತಿ ಅವಳು. ಲಕ್ಷ್ಮೀಶನ ಸೀತೆ ಅಬಲೆ; ‘ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ’ ಎಂದು ಎಲ್ಲ ತಪ್ಪನ್ನೂ ತನ್ನ ತಲೆಯಮೇಲೆ ಹೊತ್ತು ನಿಂತ ಚಿರದುಃಖಿನಿ. ಅವನೇ ಚಿತ್ರಿಸಿರುವ ಪ್ರಭಾವತಿ, ವಿಷಯೆ, ಪ್ರಮೀಳೆ, ಸತ್ಯಭಾಮೆ, ರುಕ್ಮಿಣಿ ಇವರೆಲ್ಲರೂ ಆಕರ್ಷಕವಾದ ಪ್ರಮದೆಯರು. ಇವರು ಒಂದು ಬಗೆಯಾದರೆ ಉದ್ದಾಲಕನ ಹೆಂಡತಿ ‘ಚಂಡಿ’ ಭಾರತದ ಸ್ತ್ರೀಯರ ಮತ್ತೊಂದು ರೂಪ. ರತ್ನಾಕರನು ಚಿತ್ರಿಸಿರುವ ಕುಸುಮಾಜಿ ರಸಿಕ ಮನೋರಾಗಿಣಿ; ಮುದ್ದಣನ ಮನೋರಮೆ ‘ಬಲ್ಸೊಗಸು.’

ಪುರುಷನಿಗೆ ಪೌರುಷವೇ ನಿಜವಾದ ಸೌಂದರ್ಯವೆಂದು ಭಾವಿಸಿದ್ದುದರಿಂದ ನಮ್ಮ ಕವಿಗಳು ಸ್ತ್ರೀರೂಪದ ನಾನಾ ಭಂಗಿಗಳನ್ನು ಅಡಿಯಿಂದ ಮುಡಿಯವರೆಗೂ ವರ್ಣಿಸುವುದರಲ್ಲಿ ತಾಳಿರುವಷ್ಟು ಅತ್ಯುತ್ಸಾಹವನ್ನು ಪುರುಷರೂಪ ಚಿತ್ರಣದ ಬಗೆಗೆ ತಾಳದಿದ್ದರೂ ಪುರುಷರೂಪವನ್ನು ಚಿತ್ರಿಸದೆ ಬಿಟ್ಟಿಲ್ಲ. ಪ್ರಾಚೀನ ಕಾವ್ಯಗಳಲ್ಲಿ ಸಾಮಾನ್ಯವಾಗಿ ನಾವು ಕಾಣುವ ಪುರುಷರೆಂದರೆ ಕಥಾನಯಕನಾದ ರಾಜ, ಅವನ ಕುಮಾರರು, ಮಂತ್ರಿ ಇತ್ಯಾದಿ. ಕಾವ್ಯಾರಂಭದಲ್ಲಿ ಕವಿ ಕಥಾನಾಯಕನ ಪರಿಚಯವನ್ನು ಮಾಡುವಾಗ ರಾಜನ ತೇಜಸ್ಸು, ಅವನಿಗಿರುವ ಸಾಮಂತ ಸಂಪತ್ತಿ, ಅವನ ದಾನಶೂರತೆ, ಪರಾಕ್ರಮ, ರಾಜ್ಯವಿಸ್ತಾರ ಇತ್ಯಾದಿಗಳನ್ನು ವರ್ಣಿಸಿ, ರೂಪದಲ್ಲಿ ಮನ್ಮಥ, ಸಂಪತ್ತಿನಲ್ಲಿ ಕುಬೇರ. ದಾನದಲ್ಲಿ ಕಲ್ಪವೃಕ್ಷ, ಇತ್ಯಾದಿಯಾಗಿ ಪರಿಚಯ ಮಾಡಿಕೊಡುತ್ತಾರೆ. ಈ ಚಿತ್ರಣದಲ್ಲಿಯೂ ಅವನ ಅಜಾನುವಾದ, ಕರಿಕರಾನುಕಾರಿಗಳಪ್ಪ ದೋರ್ದಂಡವನ್ನೂ, ರಾಜಶ್ರೀಗೆ ತೂಗುಯ್ಯಾಲೆಯಾದ ವಿಶಾಲವಕ್ಷವನ್ನೂ, ಸಾಮಂತಮಣಿ ಮಕುಟ ಕೋಟಿರಂಜಿತ ಚರಣಾರವಿಂದಗಳನ್ನೂ ಕವಿ ಪ್ರಸ್ತಾಪಿಸಿದರೂ ಅವು ಸೌಂದರ್ಯವನ್ನು ಸೂಚಿಸುವುದಕ್ಕಿಂತ ಮಿಗಿಲಾಗಿ ಪರಾಕ್ರಮವನ್ನೇ ಸೂಚಿಸುತ್ತವೆ. ಒಟ್ಟಿನಲ್ಲಿ ಪುರುಷರೂಪದಲ್ಲಿ ನಾವು ಔನ್ನತ್ಯವನ್ನೂ ಗಾಂಭೀರ್ಯವನ್ನೂ ಕಾಣುತ್ತೇವೆ. ಪಂಪ ಬಾಹುಬಲಿ ಕುಮಾರನ ವರ್ಣನೆ ಮಾಡುತ್ತಾ

ಮರಕತ ನಗಂ ದಿವ್ಯಂ ಮರ್ತ್ಯೋತ್ತಮಾಕೃತಿ ಎಂಬಿನಂ
ವಿರಚಿಸಿದನ್ ಇಂತು ಆದಿಬ್ರಹ್ಮಂ ಹರಿನ್ಮಣಿವರ್ಣನಂ
ನೆರೆದುದೊ ಮೇಣ್ ಕ್ಷಾತ್ರಂ ತೇಜಂ ಧರಾಧಿಪರೂಪದಿಂ
(ಆದಿಪುರಾಣ : ೧೪-೪೪)

ಎನ್ನುತ್ತಾನೆ. ಕ್ಷಾತ್ರತೇಜದಿಂದ ಉಜ್ವಲಿಸುವ ವೀರದಂತೆಯೇ ಪುರುಷರೂಪದ ಸಮ್ಮೋಹಕ ಸೌಂದರ್ಯವನ್ನೂ ಕವಿಗಳು ಚಿತ್ರಿಸಿದ್ದಾರೆ. ನಾಗಚಂದ್ರನು ಶ್ರೀರಾಮನನ್ನು ವರ್ಣಿಸುತ್ತಾ-

ಹಿಮಕರಬಿಂಬದಿಂ ಕಡೆದುದೋ, ಪಳಿಕಿಂ ಪಡೆದತ್ತೋ, ಪೂಗಳಿಂ
ಸಮೆದುದೋ ಚಂದ್ರಕಾಂತಮಣಿಯಿಂ ಬೆಸಕೆಯ್ದುದೋ,
ಮೌಕ್ತಿಕಂಗಳಿಂ ಸಮನಿಸಿದತ್ತೋ, ಕೋಮಲ ಮೃಣಾಳಿಕೆಯಿಂ
ಪರಿಪೂರ್ಣಮಾಯ್ತೊ ಪೇಳಿಮ್ ಇದು ಎನೆ ರಂಜಿಸಿತು ರಘುರಾಮನ
ಪಾಂಡುರ ದೇಹಮಂಡಲಂ
(ರಾಮಚಂದ್ರ ಚರಿತಪುರಾಣ : ೩-೧೫)

ಎಂದು ಹೇಳುತ್ತಾನೆ. ನಾಗಚಂದ್ರನ ರಾಮ ಅರ್ಹತ್ ಪದವಿಗೇರುವ ಜೀವವಾದುದರಿಂದ ಅವನು ಇಂತಹ ಶಾಂತ ಸೌಂದರ್ಯದಿಂದ ಮೋಹಕವಾಗಿದ್ದಾನೆ. ಇದೇ ವರ್ಣನೆಯನ್ನು ಹೆಣ್ಣಿನ ಬಣ್ಣನೆಗೂ ಸುಲಭವಾಗಿ ಬಳಸಬಹುದು ಎನ್ನಿಸುತ್ತದೆ ಇಂತಹ ಸುಕುಮಾರ ಕಲ್ಪನೆಯನ್ನು ನೋಡಿದರೆ!. ಗಂಡಿನ ವರ್ಣನೆಗೆ ಈ ಸೌಕುಮಾರ‍್ಯಕ್ಕೂ ಮೀರಿದ ಬೇರೊಂದು ಓಜಸ್ಸು ಬೇಕು. ಪಂಪನು ವಿಕ್ರಮಾರ್ಜುನ ವಿಜಯದಲ್ಲಿ, ಅರ್ಜುನನ ಸೌಂದರ್ಯವನ್ನು ಚಿತ್ರಿಸುವಲ್ಲಿ ಅತಿ ಉತ್ಸಾಹದಿಂದ ಕಾವ್ಯಮಯವಾದ ಗದ್ಯದಲ್ಲಿ ಸವಿಸ್ತಾರವಾಗಿ ಗುಣಾರ್ಣವನ ಯೌವನಶ್ರೀಯನ್ನು ಚಿತ್ರಿಸಿದ್ದಾನೆ. ತನ್ನ ಸ್ವಾಮಿಯಾದ ಅರಿಕೇಸರಿಯನ್ನು ಅರ್ಜುನನಲ್ಲಿ ಅಭಿನ್ನವಾಗಿ ವರ್ಣಿಸಲು ಹೊರಟಿದ್ದರಿಂದ ಇಲ್ಲಿ ಅವನು ತನ್ನ ರಾಜನನ್ನೇ ವರ್ಣಿಸಿರಲೂ ಬಹುದು. ಪಂಪನ ಈ ಚಿತ್ರಣದಲ್ಲಿ ಶೃಂಗಾರ ಪರಾಕ್ರಮಗಳೆರಡೂ ಬೆರೆತಿವೆ. ಅಷ್ಟೇ ಅಲ್ಲ ಪಂಪ, ಕೊಂಚ ಔಚಿತ್ಯವನ್ನು ಅತಿಕ್ರಮಿಸಿಯೇ ಅರ್ಜುನನ ವರ್ಣನೆಯನ್ನು ಮಾಡಿದ್ದಾನೆ. ಎನ್ನಿಸುತ್ತದೆ. ಹರಿಹರನು ನಂಬಿಯಣ್ಣನ ರಗಳೆಯಲ್ಲಿ ಕಾವ್ಯಗದ್ಯದಲ್ಲಿ ನಂಬಿಯಣ್ಣನ ಸೌಂದರ್ಯವನ್ನು ವರ್ಣಿಸಿದರೂ ಅದರ ಪ್ರತಿಯೊಂದು ಚಿತ್ರಣವೂ ಶಿವಸಂಬಂಧಿಯಾಗಿದೆ. ನಂಬಿಯಣ್ಣನ ತಲೆಯ ಕೂದಲು ‘ಗಂಗಾಧರನೊಳ್ ಪುರುಡಿಸಿ ತೆರೆಮಸಗಿದ ಕಾಳಿಂದಿ’ ಯಂತಿದೆ. ಅವನ ‘ಸುಲಿಪಲ್ಗಳ ಮುಖಮಂಡಲ’ ‘ಶಿವಸ್ತೋತ್ರ ಗೀತಾಮೃತ ರಸಾಸ್ವಾದಕ್ಕೆ ತೀವಿರ್ಪ ರತ್ನಖಚಿತ ಮಾಣಿಕ್ಯ, ಕರಂಡಗೆಯಂತಿರ್ದಪುದು. ಹೀಗಾಗಿ ನಂಬಿಯಣ್ಣ ‘ಏಱುಂಜವ್ವನಂ ಶಿವಪೂಜೆಗೆಂದರಳಲಿರ್ದ ಪರಿಮಳದ ಮೊಗ್ಗೆಯಂತಿರ್ದಪುದು, (ಪು.೨೩. ೪ನೇ ಸ್ಥಲ) ಎಂದು ಹೇಳುವಲ್ಲಿ, ಹರಿಹರನ ಸೌಂದರ್ಯದೃಷ್ಟಿಯ ವಿಶಿಷ್ಟತೆಯನ್ನು ಕಾಣಬಹುದು. ಇವನ ಕಣ್ಣಿಗೆ ಯೌವನ ಕೇವಲ ಶೃಂಗಾರದ ಸಾಮಗ್ರಿಯಲ್ಲ; ಶಿವಪೂಜೆಯ ಸಾಮಗ್ರಿ, ರತ್ನಾಕರವರ್ಣಿಯ ಭರತೇಶ ಲಾವಣ್ಯರತ್ನಾಕರ. ಶೃಂಗಾರದ ಸರಸಿಯಲ್ಲಿ ವಿಹರಿಸುವ ಅಧ್ಯಾತ್ಮ ರಾಜಹಂಸ ಅವನು. ಕವಿ ಭರತ ಚಕ್ರಿಯ ಪರಮ ಸೌಂದರ್ಯವನ್ನು ಬಗೆಬಗೆಯಾಗಿ ಬಣ್ಣಿಸಿದ್ದಾನೆ. ‘ಭರತೇಶ ವೈಭವ’ ಕಾವ್ಯವು ಒಂದು ಕುಶಲ ಕಲಾಶಾಲೆಯಂತಿದೆ. ಕವಿ ಎಷ್ಟೊಂದು ವರ್ಣನೆಗಳನ್ನು ಬಳಸಿ ಮಾನವ ಸೌಂದರ್ಯವನ್ನು ಚಿತ್ರಿಸಿದ್ದಾನೆ! ಯಾವ ಅವಸರವೂ ಆಡಂಬರವೂ ಇಲ್ಲದೆ ಕವಿಯ ವರ್ಣಕುಂಚ ಭರತಚಕ್ರಿಯವನ್ನು ಬಣ್ಣಿಸುತ್ತದೆ. ರಾಜ ಆಸ್ಥಾನದಲ್ಲಿ ಕುಳಿತಾಗ, ನಿಂತಾಗ, ಕಾವ್ಯವನ್ನಾಲಿಸುವಾಗ, ಜಿನಸೇವೆಗೆ ತೊಡಗಿದಾಗ, ಊಟಮಾಡುವಾಗ ಅಂತಃ ಪುರದಲ್ಲಿರುವಾಗ – ಪ್ರತಿಯೊಂದು ಸಂದರ್ಭದಲ್ಲಿಯೂ ಕವಿ ರಾಯನ ಚರ‍್ಯೆಗಳ, ನಿಲುವುಗಳ, ಭಾವಗಳ, ಚಿತ್ರವನ್ನು ಬಿಡಿ ಬಿಡಿಯಾಗಿ ಕೊಡುತ್ತಾನೆ. ಕವಿ ಆಸ್ಥಾನದಲ್ಲಿ ಕುಳಿತ ಭರತಚಕ್ರಿಯನ್ನು ವರ್ಣಿಸುತ್ತಾ –

ಕೋಮಲಾಂಗನು ಹೇಮವರ್ಣನು ಜಗವೆಲ್ಲ
ಕಾಮಿಸತಕ್ಕ ಚೆನ್ನಿಗನು
ಆಮೋದವುಕ್ಕುವ ಜವ್ವನಿಗನು ಸರ್ವ
ಭೂಮೀಶರೊಡೆಯನಾ ಚಕ್ರಿ.      ೨೫

ಆವ ಬಿಂಕವೋ ಎಡಗಾಲು ಗದ್ದುಗೆಯ ಮೇ
ಲೋವಿ ಮಡಿದು ಮತ್ತೆ ಕೆಳಗೆ
ಹಾವುಗೆಯೊಳು ಪೆಂಡೆಯದ ಬಲಗಾಲೂರಿ
ಠೀವಿಯೊಳೆಸೆದನಾ ರಾಯಾ.    ೩೧

ನರುಸುಯ್ಯಗಾಳಿಗೆ ತೇಲ್ವ ದುಕೂಲದ
ಸೆರಗುಸೇರುವೆ ದೊರೆ ಹೊದೆದು
ತೆರಪಿನೆದೆಯ ಹೊನ್ನ ಜನ್ನಿವಾರದ ರೇಖೆ
ಮರೆಯ ರಾಜೇಂದ್ರ ಮೆರೆದನು. ೩೩

ಉಬ್ಬಿ ಬೆಳೆದು ಬಾಗಿತಿಲ್ಲ ರೇಖೆಗೆ ಬಂದು
ಹುಬ್ಬಿನಂತೆಸೆವೆಳೆ ಮೀಸೆ
ಹುಬ್ಬು ಮೀಸೆಯ ನೋಡಿ ನಲಿವ ಬವರಿಕಣ್ಣ
ಹಬ್ಬವ ಮಾಳ್ಪನೆಲ್ಲರಿಗೆ. ೪೦

ಆರು ಬಣ್ಣಿಪರವನಂಗದ ನಿರ್ಮಲಾ
ಕಾರದ ಕೊರಳೊಳಿರ್ದಾ
ತೋರಮುತ್ತುಗಳೆಲ್ಲ ತಿಳಿಗೊಳದೊಳು ತೋರ್ಪ
ತಾರಾಳಿಯಂತೆ ತೋರಿದುವು    ೪೩
(ಭರತೇಶ ವೈಭವ : ಆಸ್ಥಾನ ಸಂಧಿ)

ಕವಿ ತೆರೆದಿರುವ ಒಂದೊಂದು ಚಿತ್ರದಲ್ಲೂ ಕವಿಯ ಉತ್ಕ್ರಷ್ಟವಾದ ವರ್ಣಶಿಲ್ಪವನ್ನು ಗುರುತಿಸಬಹುದು. ಕಾಂತಿ ಹೊಳಪು, ನಾದ ತೇಜಸ್ಸು, ಇವುಗಳು ಸೌಂದರ್ಯದ ಎಂತಹ ಅಂಶಗಳು ಎನ್ನುವುದು ನಮಗೆ ರತ್ನಾಕರನಲ್ಲಿ ಪರಿಣಾಮಕಾರಿಯಾಗಿ ಅನುಭವಕ್ಕೆ ಬರುತ್ತದೆ.  ಚೆಲುವನ್ನು ಕಡೆದು ಕಣ್ಣ ಮುಂದೆ ನಿಲ್ಲಿಸುವುದರಲ್ಲಿ ರತ್ನಾಕರನದು ಅಸಾಧಾರಣವಾದ ಶಕ್ತಿ. ಇಷ್ಟೊಂದು ಕಾಂತಿ ಉಜ್ವಲತೆಗಳ ನಡುವೆಯೂ ಭರತೇಶನ ಗಂಭೀರ ಸೌಂದರ‍್ಯ ಎದ್ದು ಶೋಭಿಸುತ್ತದೆ. ಭರತ ಚಕ್ರವರ್ತಿಯ ಚಕ್ರ ಕೇವಲ ಕಲ್ಪನೆಯ ಶಿಲ್ಪವಲ್ಲ, ವಾಸ್ತವಕ್ಕಿಂತಲೂ ವಾಸ್ತವವೆಂಬಷ್ಟರ ಮಟ್ಟಿಗೆ ಜೀವಂತವಾಗಿ ನಮ್ಮ ಎದುರು ಸುಳಿದಾಡುತ್ತದೆ. ಊಟ ಮಾಡುವಾಗಲೂ ಕವಿ ಭರತನ ಚರ್ಯೆಯನ್ನು ಗಮನಿಸಿದ್ದಾನೆ.

ಕಲಸುವ ಬೆಡಗು ಕೈವಿಡಿದು ಕುಶಲ ಜಿಹ್ವೆ
ಗೊಲಿದು ತುತ್ತಿಡುವೊಂದು ಜೋಕೆ.
ಅಲುಗಿ ಸವಿವದೊಂದು ಗಂಭೀರ ವದನುಂಬ
ಚೆಲುವಿಕೆ ಕೋರೈಸುತಿಹುದು.

ಬೋನವನುಂಬಂಗವಗಡಿಗೊಮ್ಮೊಮ್ಮೆ
ಪಾನಕವ ಕೊಂಬುದೊಂದಂಗಾ
ಆನಂದವಿಡಿದಿಷ್ಟು ವಿಶ್ರಮಿಸುವ ಠೀವಿ
ತಾನೊಂದು ಗಮಕವಾಗಿಹುದು.

ತುಟಿಬಟ್ಟಲೊಂದಿ ರಸಾಯನಗಳ ಗುಟು
ಗುಟನೆ ತಾನೀಂಟುವ ಗಾಡಿ
ಗಿಟಿಗಿರ್ರನೊಡನೆ ತೇಗುವ ಭಾವ ತುತ್ತ
ಪಲ್ಲಟಿಸಿಕೊಂಬಂದ ರಂಜಿಸಿತು
(ಆರೋಗಣೆ ಸಂಧಿ : ೯೯ : ೧೦೦-೧೦೧)

ಊಟ ಮಾಡುವ ದೃಶ್ಯವೂ ಎಂತಹ ಸೊಗಸು ಎನ್ನಿಸುತ್ತಾನೆ ರತ್ನಾಕರ. ಮತ್ತೊಂದೆಡೆ ಕವಿ ಕುಸುಮಾಜಿಯಿಂದ ಭರತಚಕ್ರಿಯ ರೂಪವನ್ನು ವರ್ಣಿಸುತ್ತಾನೆ. ಹೆಣ್ಣಿನ ಕಣ್ಣಿಗೆ ಅದರಲ್ಲೂ ಪ್ರಿಯೆಯಾದವಳ ಕಣ್ಣಿಗೆ ಅವಳ ಪ್ರಿಯತಮ ಹೇಗೆ ಕಂಡನೆನ್ನುವುದನ್ನು ಅವಳ ಬಾಯಿಂದಲೇ ಹೇಳಿಸಿರುವುದು ಇಲ್ಲಿರುವ ವೈಶಿಷ್ಟ್ಯ. ಅದರಲ್ಲೂ ಕುಸುಮಾಜಿ ಅರಗಿಳಿಯ ಎದುರಿಗೆ ಗೋಪ್ಯವಾಗಿ ರಾಯನ ಚೆಲುವನ್ನು ಬಣ್ಣಿಸಿದ್ದನ್ನು ಕನ್ಯೆಯೊಬ್ಬಳು ಕೇಳಿಸಿಕೊಂಡು ಕವಿತೆ ಕಟ್ಟಿ ರಾಜನ ಎದುರಿಗೆ ಹೇಳುವ ಜಾಣ್ಮೆ ಇನ್ನೂ ಸೊಗಸು. ಆ ಸೊಗಸನ್ನು ಭರತೇಶವೈಭವದ ‘ರಾಜ ಲಾವಣ್ಯಸಂಧಿ’ಯಲ್ಲಿ ಓದುಗರು ಸವಿಸ್ತಾರವಾಗಿ ಕಾಣಬಹುದು. ಗಂಡಿನ ಚೆಲುವನ್ನು ಹೆಣ್ಣಿನ ಕಣ್ಣಿನ ಮೂಲಕ ಬಣ್ಣಿಸುತ್ತಿರುವ ಮತ್ತೊಂದು ಪ್ರಸಂಗವೆಂದರೆ, ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ. ರಾಮಾಜ್ಞೆಯಂತೆ ಲಕ್ಷ್ಮಣನು ಸೀತಾದೇವಿಯನ್ನು ಕಾಡಿನಲ್ಲಿ ಬಿಟ್ಟುಹೋದಾಗ ಸೀತೆ ರಾಮನ ಸೌಂದರ್ಯವಿಗ್ರಹವನ್ನು ನೆನೆಯುತ್ತಾಳೆ.

ತೊಳಪ ನಾಸಿಕದ, ನುಣ್ಗದಪುಗಳ, ಪೊಳೆವ ಕಂಗಳ, ತುರುಗಿದೆವೆಯ
ನಿಡುಪುರ್ಬುಗಳ, ಪೆರೆನೊಸಲ, ಥಳಥಳಿಪ ಮಕುಟದ, ಕವಿಯ
ಮಕರ ಕುಂಡಲದ, ಕೋಮಲಿತ ಚುಬುಕಾಗ್ರದ,
ಲಲಿತಾರುಣಧರದ, ಮಿರುಗುವ ರದನ ಪಂಕ್ತಿಗಳ, ಸೂಸುವೆಳನಗೆಯ,
ಮೋಹನದ ಚೆಲ್ವಿನೊಬ್ಬುಳಿಯೆನಿಪ ರಾಘವನ ಸಿರಿಮೊಗವ-
ನೆಂತು ನೋಡದೆ ಮಾಣ್ಬೆನು, ಅಕಟಾ ಎಂದಳು
(ಜೈಮಿನಿ ಭಾರತ : ೧೯ – ೨೧)

ಪುರುಷನದು ವೀರಸೌಂದರ‍್ಯ ಎನ್ನುವ ಮಾತನ್ನು ಆಗಲೇ ಹೇಳಿದ್ದಾಗಿದೆ. ವೀರತೆ ಎನ್ನುವುದು ಎರಡು ರೀತಿಯದು; ಆಂತರಿಕ ಮತ್ತು ಬಾಹ್ಯ. ಬಹಿರಂಗದಲ್ಲಿ ಈ ವೀರತೆ ರಣರಂಗದಲ್ಲಿ ಹೋರಾಡಿ ವಿರೋಧಿಬಲಗಳನ್ನು ಒಕ್ಕಲಿಕ್ಕುವಲ್ಲಿ ಕಂಡರೆ, ಅಂತರಂಗದ ವೀರತೆ ಧರ್ಮಸಂಕಟದ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸುವ ಮಾನಸಿಕ ನಿರ್ಧಾರಗಳಲ್ಲಿ, ದಾನ ವೀರತೆಯಲ್ಲಿ, ತ್ಯಾಗ ವೀರತೆಯಲ್ಲಿ ತೋರುತ್ತದೆ. ಎರಡೂ ಒಬ್ಬನಲ್ಲಿಯೇ ತೋರಿದಾಗ ವ್ಯಕ್ತಿ ಅತ್ಯುನ್ನತಿಗೇರುತ್ತಾನೆ – ಭೀಷ್ಮರಂತೆ, ಬಾಹುಬಲಿಯಂತೆ. ಭೀಮಸೇನನ ಹೋರಾಟದಲ್ಲೆಂತೋ ಅಂತೆಯೇ ಬಹುಶಃ ಅದಕ್ಕೂ ಮಿಗಿಲಾಗಿ ಕರ್ಣನು ಕವಚವನ್ನು ಹರಿದುಕೊಡುವಲ್ಲಿ, ಭೀಷ್ಮರು ಪುರುಷ ವ್ರತವನ್ನು ಘೋಷಿಸುವಲ್ಲಿ ತೋರುತ್ತದೆ ಆ ಪರಾಕ್ರಮ. ಅಷ್ಟೇ ಅಲ್ಲ ಸಾಮಾನ್ಯ ಸಂದರ್ಭಗಳಲ್ಲಿಯೂ ಮಾನವನ ಭಾವ ವ್ಯಾಪಾರಗಳು ಕವಿಯ ಕುಂಚದಿಂದ ಸುಂದರವಾಗಿಯೇ ತೋರುತ್ತವೆ. ‘ಕೋಪ’ ಬರುವುದನ್ನು  ನಾವು ಲೋಕದಲ್ಲಿ ನೋಡಿದ್ದೇವೆ. ಆದರೆ ಅದು ಅಲ್ಲಿ ನಮ್ಮ ಭಯ ಕುತೂಹಲಾದಿ ಕ್ರಿಯಾಪೇಕ್ಷಿಯಾದ ಭಾವಪ್ರಚೋದನೆಯಿಂದ ನಮ್ಮಲ್ಲಿ ರಸಾನುಭವವನ್ನು ನೀಡಲಾರದು. ಆದರೆ ಕಾವ್ಯದಲ್ಲಿ ಕೋಪಗೊಂಡ ಭೀಮನ ಚಿತ್ರವೂ ಎಷ್ಟೊಂದು ಪರಿಭಾವನಾ ಯೋಗ್ಯವಾಗಿದೆ ನೋಡಿ –

ಕೋಪದ ಪೆರ್ಚಿನೊಳ್ ನಡುಗುವ ಊರುಯುಗಂ
ಕಡುಪಿಂದ ಅರಲ್ವ ನಾಸಾಪುಟಂ
ಎಕ್ಕೆಯಿಂ ಪೊಡರ್ವ ಪುರ್ವು
ಪೊದೞ್ದ ಲಯಾಂತಕ ತ್ರಿಶೂಲೋಪಮಭೀಷಣಭ್ರುಕುಟಿ
ಮುನ್ನವೆ ರೌದ್ರಗದಾಯುಧಂಬರಂ ಪೋಪ ಭುಜಾರ್ಗಳಂ
ರಿಪುಗಳಗ್ರಹಮಾದುದು ಭೀಮಸೇನನಾ
(ಪಂಪ ಭಾರತ : ೭-೬)

ದ್ರೌಪದಿಯ ಕೇಶಪಾಶವನ್ನೆಳೆದ ದುಶ್ಯಾಸನನನ್ನು ಕಂಡು ಭೀಮನಿಗಾದ ಕೋಪದ ಸಚಿತ್ರ ವರ್ಣನೆಯನ್ನು ಪಂಪ ಮಾಡಿರುವ ರೀತಿ ಇದು. ಕೋಪಾಧಿಕ್ಯದಿಂದ ತೊಡೆ ನಡುಗುತ್ತಿದೆ; ಮೂಗು ಅರಳುತ್ತಿದೆ; ಹುಬ್ಬು ಬಿಗಿದಿದೆ – ಲಯಾಂತಕ ತ್ರಿಶೂಲೋಪಮವಾಗಿ ಭೀಷಣವಾಗಿದೆ, ಕೈ ತಾನಾಗಿಯೇ ಗದಾದಂಡದೆಡೆಗೆ ಹೋಗಿದೆ. ನಿಜವಾಗಿಯೂ ಇದು ಭೀಮಕೋಪದ ‘ಸುಂದರ’ವಾದ ವರ್ಣನೆ. ಇದೇ ಭೀಮಸೇನನ ರೂಪು ರಣರಂಗದಲ್ಲಿ ಪರಾಕ್ರಮದ ಪರಮಾವಧಿಯನ್ನು ಮುಟ್ಟಿ ಅದ್ಭುತ ಸೌಂದರ್ಯವಾಗುತ್ತದೆ.

ಪಿಡಿದೊಂದೊಂದರ ಗಾತ್ರಮಂ ತಿರಿಪಿಕೊಂಡೊಂದೊಂದರೊಳ್ ಪೊಯ್ದುಮೆ
ಲ್ವಡಗಪ್ಪನ್ನೆಗಮ್ ಎತ್ತಿಕೊಂಡು ಅಸಗವೊಯ್ಲೊಳ್ ತಡಂ ಬೊಯ್ದು ಉ-
ಳ್ಳಡಗುಂ ನೆತ್ತರುಮೆಲ್ವುಂ ಎಲ್ಲದೆಸೆಗಂ ಜೀರೆಳ್ದು ಪಾರೇಳೆ ಬ-
ಲ್ದಡಿಗಂ ಬೀಸಿಯುಂ ಒಂದು ಕೋಟಿವರೆಗಂ ಕೊಂದಂ ಮದೇಭಂಗಳಂ
(ಪಂಪಭಾರತ : ೧೦-೧೦೪)

ಒಂದೊಂದು ಆನೆಯನ್ನೆತ್ತಿ ಅದನ್ನೇ ಆಯುಧವನ್ನಾಗಿ ಮಾಡಿ ಮಾಡಿ ಮತ್ತೊಂದು ಆನೆಯನ್ನು ಮಾಂಸದ ಮುದ್ದೆಯಾಗುವ ತನಕ ಅಗಸನಂತೆ ಹೊಯ್ದು, ಆನೆಯ ರಕ್ತ ಮಾಂಸ ಎಲುಬೆಲ್ಲಾ ದಿಕ್ಕುದಿಕ್ಕಿಗೆ ಹಾರಿಹೋಗುವಂತೆ ಡಡಿಗನಾದ ಭೀಮ ಒಂದು ಕೋಟಿ ಆನೆಗಳನ್ನು ಕೊಲ್ಲುತ್ತಾ ನಿಂತ ಈ ಚಿತ್ರ ಅದ್ಭುತವಾಗಿದೆ. ಈ ಬಾಹುಬಲ ಗೌರವಾಸ್ಪದವೂ ಪೂಜ್ಯವೂ ಆಗುವುದು ಭೀಷ್ಮರು ಶರಶಯ್ಯೆಯಲ್ಲಿ ಮಲಗಿರುವುದನ್ನು ಕಂಡಾಗ –

ತಿಂತಿಣಿಯಾಗಿ ನೆಟ್ಟ ಕಣೆಯೊಳ್ ನೆಲಮುಟ್ಟದೆ ಮೆಯ್ಯೊಳತ್ತಮಿ
ತ್ತಂ ತೆಱುದಿರ್ದ ಪುಣ್ಗಳೆಸವಕ್ಕರದಂತಿರೆ ನೋಡಿ ಕಲ್ಲಿಮೆಂ-
ಬಂತೆವೊಲಿರ್ದ ನಟ್ಟವಣೆ ಕೋಲ್ಗಳ ಮೇಲೆಸೆದಿರ್ದ ವೀರಸಿ-
ದ್ಧಾಂತದ ಶಾಸನಂ ಬರೆದ ಪೊತ್ತಗೆಯಂತಮರಾಪಗಾತ್ಮಜಂ.
(ಪಂಪಭಾರತ : ೧೧-೪೬)

ತಿಂತಿಣಿಯಾಗಿ ಬಾಣಗಳು, ಮೈಯನ್ನು ನಾಟಿವೆ; ಅದರ ಮೇಲೆ ನೆಲವನ್ನು ಮುಟ್ಟದೆ ಭೀಷ್ಮರು ಮಲಗಿದ್ದಾರೆ. ಮೈತುಂಬ ತೆರೆದ ಗಾಯಗಳು ಅಕ್ಷರದಂತಿವೆ. ಅವರನ್ನು ನೋಡಿದರೆ ನೋಡಿ ಕಲಿಯಿರಿ ಎಂಬಂತೆ ಅಟ್ಟವಣೆ ಕೋಲ್ಗಳ ಮೇಲೆ ತೆರೆದಿಟ್ಟ ವೀರ ಸಿದ್ಧಾಂತದ ಶಾಸನದಂತಿದ್ದಾರೆ ಭೀಷ್ಮರು ಶರಶಯ್ಯೆಯ ಮೇಲೆ. ಪಂಪನ ಅಪೂರ್ವವಾದ ಈ ಚಿತ್ರ ಗಂಭೀರವೂ ಅರ್ಥಪೂರ್ಣವೂ ಆಗಿದೆ. ಈ ವೀರ ಭವ್ಯತೆಗೇರುವುದು ಬಾಹುಬಲಿಯ ತ್ಯಾಗದಲ್ಲಿ. ಅಣ್ಣನಾದ ಭರತಚಕ್ರಿಯನ್ನು ಯುದ್ಧದಲ್ಲಿ ಸೋಲಿಸಿಯೂ ತಾನು ತನ್ನ ಸಮಸ್ತ ವಿಜಯವನ್ನೇ ತ್ಯಾಗಮಾಡಲು ಸಿದ್ಧನಾದಾಗ; ಭರತನ ತಲೆಯ ಮೇಲೆ ತನ್ನ ಭ್ರಾತೃವಾತ್ಸಲ್ಯದ ಕಂಬನಿಯನ್ನು ಸುರಿಸುವಾಗ.

ನಿಜಪಾದಾಂಬುರುಹಕ್ಕೆ ಪಾದ್ಯವಿಧಿಯಂ ನೇತ್ರಾಂಬುವಿಂ ಮಾಡುವ
ಗ್ರಜನತ್ಯುನ್ನತಮಪ್ಪ ಮಸ್ತಕದ ಮೇಗೆ ಓರಂತೆ ಪಾಯ್ವ ಬಾ-
ಷ್ಪಜಲೌಘಂಗಳಿನಂದು ಬಾಹುಬಲಿ ತನ್ನಿಂದಂ ನಿಧೀಶಂಗೆ ವಂ-
ಶಜರಾಜ್ಯಾಭಿಷವೋತ್ಸವಂ ನೆಗೆೞ್ದುದೆಂಬಾಶಂಕೆಯಂ ಮಾಡಿzಂ.
(ಆದಿಪುರಾಣ : ೧೪-೧೩೩)

ಇದೊಂದು ಅಪೂರ್ವ – ಮನೋಹರವಾದ ಚಿತ್ರ. ತಮ್ಮನ ಕಣ್ಣೀರು ಅಣ್ಣನ ತಲೆಯ ಮೇಲೆ, ಅಣ್ಣನ ಕಣ್ಣೀರು ತಮ್ಮನ ಪಾದದ ಮೇಲೆ ಸುರಿಯುತ್ತಿದೆ! ಈ ಪ್ರೀತಿಯ ಕಂಬನಿಯ ಬೆಳಕಿನಲ್ಲಿ ಈ ಸೋದರ ಸೌಂದರ್ಯವು ಎಷ್ಟು ಪಾವನವಾಗಿವೆ!

ಗಿಡಕ್ಕೆ ಹೂವು-ಹಕ್ಕಿಗಳಂತೆ ಮನೆಗೆ ಮಕ್ಕಳು. ಮಗುವಿನ ಬಾಲಲೀಲೆಯ ಮಧುರ ರೋಮಾಂಚಕತೆಯೇ ಸಂಸಾರದ ಸೌಂದರ್ಯ. ನಮ್ಮ ಕವಿಗಳೂ ಮುದ್ದು ಮಕ್ಕಳ ಸೌಂದರ್ಯವನ್ನು  ಚಿತ್ರಿಸಿದ್ದಾರೆ. ಲಕ್ಷ್ಮೀಶ – ರತ್ನಾಕರರಿಬ್ಬರು ಚಿತ್ರಿಸಿರುವ ಮಕ್ಕಳ ಬಾಲಲೀಲೆಯ ಬೆಡಗು ಗಮನಾರ್ಹವಾಗಿದೆ. ಲವ ಕುಶರ ಸೊಬಗನ್ನು ಚಿತ್ರಿಸುವಾಗ –

ತೊಟ್ಟಿಲೊಳ್ ನಲಿವ, ನೆವವಿಲ್ಲದೆ ನಗುವ, ಬಾಯ್ಗೆ ಬೆಟ್ಟಿಕ್ಕಿ ಪೀರ್ವ,
ಪಸಿದೊಡೆ ಚೀರ್ವ, ಮೊಲೆಯುಂಬ, ಪಟ್ಟಿರಿಸೆ ಪೊರಳ್ವ,
ಅಂಬೆಗಾಲಿಡುವ, ಮೊಳೆವಲ್ಲ ಜೊಲ್ ಉಗೆ ತೊದಳಿಸಿ ನುಡಿವ,
ದಟ್ಟಡಿಯಿಡುವ, ನಿಲ್ವ, ತೋರ್ವ, ಬೇಡುವ, ಪರಿವ,
ಬಟ್ಟೆಯೊಳ್ ಒರಗುವ, ಕಾಡುವ, ಕುಣಿವ ಲೀಲೆಯಂ
ನೆಟ್ಟನೆ ಕುಮಾರಕರ್ ತೋರಿದರ್ ಜಾನಕಿಗೆ ವಾಲ್ಮೀಕಿ ಮುನಿವರಂಗೆ
(ಜೈಮಿನಿ ಭಾರತ : ೧೯-೫೦)

ಎಂಬ ಈ ವರ್ಣನೆ ಅದೆಷ್ಟು ವಾಸ್ತವ ಸುಂದರವಾಗಿದೆ! ತಂದೆಯ ಜೊತೆಗೆ ಆಡುವ ಮಾತಾಡುವ ಎಳೆಯ ಮಗುವಿನ ಒಂದು ಚಿತ್ರವನ್ನು ರತ್ನಾಕರ ಹೀಗೆ ಚಿತ್ರಿಸಿದ್ದಾನೆ.

‘ತಂದೆಯ ಕೊರಳನೆದ್ದಪ್ಪುವ ಕಿರುವೆರ
ಳಿಂದ ಕೊರಳ ಮಣಿಗಳನು
ಒಂದೆಂಟು ಹತ್ತೆರಡೆಂದು ತಪ್ಪೆಣಿಸುವಾ
ನಂದದಕರಕುಬ್ಬಿ ನಲಿವಾ

ಅಷ್ಟೇ ಅಲ್ಲ –

ಮೀಸೆಯ ತಿದ್ದಿ ಗಲ್ಲವ ತಡಹಿ ವಿ
ಲಾಸದಿ ನಗುವನಾ ತರಳಾ
ಅಣ್ಣ ಚಿದಂಬರಪುರುಷ ಎನ್ನೆಂದಾಗ
ಬಣ್ಣಿಸಿ ಕಲಿಸಿ ಕೊಡುವನು
ಚಿಣ್ಣ ಚಿದಂಬರಪೂಸಯೆಂಬನದಕೆ ಹೊಟ್ಟೆ
ಹುಣ್ಣಾಗೆ ನಗುವನಾ ಚಕ್ರಿ
(ಆದಿರಾಜೋದಯ ಸಂಧಿ ೩೦-೩೧-೩೩)

ಲಕ್ಷ್ಮೀಶ – ರತ್ನಾಕರರಲ್ಲಿ ಕಂಡು ಬರುವ ಈ ಸಹಜ ಸರಳ ಸೌಂದರ‍್ಯ, ಮಕ್ಕಳನ್ನು ಕುರಿತು ಬೇರೆಯ ಕವಿಗಳು ಮಾಡಿರುವ ವರ್ಣನೆಯಲ್ಲಿ ದುರ್ಲಭ. ಅಂತೆಯೇ ಸಂಸಾರದ ಗಂಡ ಹೆಂಡಿರ ಜೀವನದ ಚಿತ್ರವಂತೂ ರತ್ನಾಕರ-ಮುದ್ದಣರನ್ನು ಬಿಟ್ಟರೆ ಬೇರೆಲ್ಲಿಯೂ ದೊರೆಯದು. ಉಳಿದ ಕವಿಗಳು ಚಿತ್ರಿಸಿರುವ ಸಂಸಾರದ ಚಿತ್ರಣಗಳು ನಮ್ಮ ಜೀವನದಿಂದ ಎಲ್ಲೋ ದೂರ ನಿಂತುಕೊಂಡಂತೆ ಕಾಣುತ್ತವೆ. ಆದರೆ ರತ್ನಾಕರನಲ್ಲಿ ನಾವು ಭರತ ಚಕ್ರಿಯ ಮತ್ತು ಅವನ ರಾಣಿಯರ ಸರಸ ಸಲ್ಲಾಪಗಳಲ್ಲಿ ಮಾನವೀಯ ಸ್ಪರ್ಶವನ್ನು ಕಾಣುತ್ತೇವೆ. ಮುದ್ದಣ – ಮನೋರಮೆಯರ ಸಂಸಾರದಂಥ ಸಂಸಾರ ಕನ್ನಡ ಕಾವ್ಯಲೋಕದಲ್ಲಿ ಬೇರೊಂದಿಲ್ಲ. ಮುದ್ದಣ ಮನೋರಮೆಯರ ಸಂಸಾರ, ಸುತ್ತ ಜಿನುಗುವ ಮಳೆಯ ನೂಲಿನ ಹಿಂದೆ ಪುಟ್ಟದೊಂದು ಮನೆಯಲ್ಲಿ ಕಿರುಹಣತೆಯ ಬೆಳಕಿನಲ್ಲಿ ತನ್ನ ಅಪೂರ್ವ ಸೊಗಸಿನಿಂದ ಚಿರಂತನವಾಗಿದೆ.

ಭೋಗಮಯವಾದ ಯೌವನದ ಚೆಲುವಿನ ವರ್ಣನೆಗೆ ಕೊಟ್ಟಿರುವಷ್ಟು ಗಮನವನ್ನು ನಮ್ಮ ಕವಿಗಳು ವೃದ್ಧಾಪ್ಯದ ಚೆಲುವಿಗೆ ಕೊಡಲಿಲ್ಲ. ಜೈನ ಕಾವ್ಯಗಳಲ್ಲಿಯಂತೂ ತಲೆಯಲ್ಲೊಂದು ನರೆಗೂದಲು ಕಂಡೊಡನೆಯೇ ಜೀವನದ ನಶ್ವರತೆಯನ್ನರಿತು ರಾಜರು ವಿರಾಗಿಗಳಾಗಿ ತಪೋವನಕ್ಕೆ ನಡೆದುಬಿಡುತ್ತಾರೆ. ಹೀಗಾಗಿ ವೃದ್ಧಾಪ್ಯ ಕಾಡು ಸೇರಿ ಕವಿಗಳ ವರ್ಣನೆಗೆ ದೊರೆಯಲಿಲ್ಲವೇನೋ. ಮಹಾಭಾರತವನ್ನು ವಸ್ತುವನ್ನಾಗಿ ತೆಗೆದುಕೊಂಡ ಪಂಪ, ನಾರಣಪ್ಪ ಇವರಿಗೆ ಭೀಷ್ಮರ ಪಾತ್ರಸಿಕ್ಕರೂ, ಕುಲವೃದ್ಧರ ಸಿಂಹಪರಾಕ್ರಮವೇ ಅವರಿಗೆ ಪ್ರಧಾನವಾಯಿತು. ‘ಭೀಷ್ಮರ ಜೋಬ್ಬು ಹುಬ್ಬಗಳನ್ನು ಎತ್ತಿ ಹಣೆಗೆ ಪಟ್ಟಕಟ್ಟಿದರು’ ಎಂಬ ಒಂದೇ ಮಾತಿನಲ್ಲಿ ಪಂಪನು ಭೀಷ್ಮರ ಚಿತ್ರವನ್ನು ಕೊಟ್ಟಿದ್ದಾನೆ. ಇಂಥ ಪಾತ್ರಗಳನ್ನು ಬಿಟ್ಟರೆ, ಕವಿಗಳು ಮುದಿ ಸೂಳೆಯ ಚಿತ್ರವನ್ನೇನೊ ಕೊಟ್ಟಿದ್ದರೂ ಅದು ವೃದ್ಧಾಪ್ಯದ ಬಗ್ಗೆ ಗೌರವವನ್ನುಕ್ಕಿಸುವುದರ ಬದಲು ಜುಗುಪ್ಸೆಯನ್ನು ತರುವಷ್ಟು ವಿಕೃತವಾಗಿದೆ. ಆದರೆ ನಾವು ನಾಗವರ್ಮನಲ್ಲಿ ಕಾಣುವ ವೃದ್ಧ ಚಾಂಡಾಲನ ಪಾತ್ರವೂ ಗಮನಾರ್ಹವಾಗಿದೆ.

ಜರೆಯಿಂದಂ ಕೂಡಿ ಬೆಳ್ಪಂ ತಳೆಯೆ ತಲೆ, ದಳದ್ರಕ್ತ ನೀರೇಜಮಂ
ಪೋಲ್ತಿರೆ ಕಣ್, ವ್ಯಾಯಾಮದಿಂದ ಮೈ ಸಡಿಲದೆ ಎಸೆಯೆ….
(ಕಾದಂಬರೀ ಸಂಗ್ರಹ ೧-೧೪)

ಇದು ಬಾಣಕವಿಯ ಪ್ರಸಾದ ಕನ್ನಡಕ್ಕೆ. ಹರಿಹರನ ನಂಬಿಯಣ್ಣನ ರಗಳೆಯಲ್ಲಿ (ಆರನೆಯ ಸ್ಥಲ) ನಾವು ಕಾಣುವ ವೃದ್ಧ ಮಾಹೇಶ್ವರನ ಪಾತ್ರ ತುಂಬ ಸೊಗಸಾಗಿದೆ. ತಿರುನೀಲಕಂಠರ ರಗಳೆಯಲ್ಲಿ ಮುಪ್ಪು ಬಂದಾಗ ಅವರನ್ನು ವರ್ಣಿಸುತ್ತಾ –

‘ಶಿವಭಕ್ತಿ ಸೋಪಾನದಂತೆ ತೆರೆಗಳು ಮಸಗೆ
ಶಿವನಲ್ಲದಾರು ಇಲ್ಲೆಂಬಂತೆ ತಲೆ ನಡುಗೆ
ಭವಿಗಳಂ ನೋಡೆನೆಂಬಂತೆ ಕಣ್ಣೆವೆ ಮುಗಿಯೆ
ಅವಿರಳದಿ ನೆನಪು ಶುಭ್ರತೆಯಂತೆ ನೆರೆ ಹೊಳೆಯೆ
ಹಲವು ಕರ್ಮಕ್ಕಡಿಯನಿಡದಂತೆ ನಡೆಯುಡುಗೆ
ಉಲಿವ ಮಾಯೆಯ ತೇರುವಂತೆ ಕೈಗಳು ನಡುಗೆ
ಜರೆಯಡಸಲಿಂತು ತೊಂಬತ್ತನೆಯ ವರ್ಷದೊಳು
ಹರನಾಜ್ಞೆಯಂ ತಾಳ್ದು ಬಾಳ್ದಿರ್ಪ ಸಮಯದೊಳು
(ತಿರುನೀಲಕಂಠರ ರಗಳೆ ಪು. ೨೧)

ಹರಿಹರನು ಕೊಡುವ ಈ ಚಿತ್ರ ಅಭೂತಪೂರ್ವವಾದುದು.

ಮಾನವ ಯಾವ ಶಕ್ತಿಯನ್ನು ಭಾವಿಸಿದರೂ ಅದಕ್ಕೊಂದು ರೂಪು ಕೊಡದೆ ಇರಲು ಸಾಧ್ಯವಿಲ್ಲ. ಅದರಲ್ಲೂ ಮಾನವ ಕಲ್ಪನೆ ಬೇರೆ ಬೇರೆಯ ಶಕ್ತಿಗಳನ್ನು ಚಿತ್ರಿಸುವಾಗ ಆಯಾ ಶಕ್ತಿಗೆ  ಉಚಿತವಾದ ಅತಿಮಾನುಷ ಕಳೆಯನ್ನು ಒಪ್ಪಿದರೂ, ಮಾನವಾಕೃತಿಯಲ್ಲಲ್ಲದೆ ಬೇರೆಯಾಗಿ ಭಾವಿಸದಿರುವುದು ಅನಿವಾರ‍್ಯ. ಕವಿಕಲ್ಪನೆ ಈ ಅಂಶವನ್ನು ಗೌರವಿಸಿದೆ. ಕಾವ್ಯ ಲೋಕದಲ್ಲಿ ನಾವು ಕಾಣುವ ಅಪ್ಸರೆಯರು, ವಿದ್ಯಾಧರರು, ದೇವಋಷಿಗಳು, ದಾನವರು – ಇತ್ಯಾದಿ ಚೇತನಗಳನ್ನು ಕವಿ ಪ್ರತಿಭೆ ಮಾನವ ರೂಪದಲ್ಲಿಯೇ ಭಾವಿಸಿ ಗ್ರಹಿಸಿದೆ.

ಅಪ್ಸರೆಯರ ಚೆಲುವಿನಲ್ಲಿ ಚಂಚಲತೆ ಮತ್ತು ಸಮ್ಮೋಹಕತೆಯನ್ನು ಕಾಣಬಹುದು. ಇಂದ್ರಕೀಲದಲ್ಲಿ ತಪಸ್ಸಿಗೆ ನಿಂತ ಅರ್ಜುನನ ತಪೋಭಂಗಕ್ಕೆಂದು ಬಂದ ಅಪ್ಸರೆಯರು ‘ಅನಂಗ ಜಂಗಮ ಲತೆಗಳ್’; ಅವರೆಲ್ಲರೂ ‘ಮುಗಿಲ ಮೇಲೆ ನಡೆಪಾಡುವಾಕೆಗಳ್’ ಎಂಬುದರ ಹೊರತು ಉಳಿದೆಲ್ಲ ಅಂಶಗಳಲ್ಲೂ ಈ ಲೋಕದ ಸ್ತ್ರೀಯರಂತೆಯೇ ಹಾವಭಾವ ವಿಲಾಸ ವಿಭ್ರಮ ಕುಶಲೆಯರು. ಪುರುದೇವನ ಮುಂದೆ ಬಂದು ರಂಗಂಬೊಕ್ಕು ನಾಟ್ಯವಾಡಿದ ನೀಲಾಂಜನೆಯ ಚೆಲುವೂ ಮಿಂಚಿನಂತೆ ಚಂಚಲವಾದುದೇ. ಘಟೋದ್ಗಜನ

ವರ್ಣನೆಯಲ್ಲಿಯೂ ಪಂಪ ತನ್ನ ಕಲ್ಪನೆಯನ್ನು ಮೆರೆದಿದ್ದಾನೆ. ಹುಟ್ಟಿದೊಡನೇ ಹೀಗೆ ಇದ್ದನಂತೆ ಘಟೋದ್ಗಜ-

ಕಾರಿರುಳ ತಿರುಳ ಬಣ್ಣಂ
ಕೂರಿದುವೆನೆ ತೊಳಪ ದಾಡೆ, ಮಿಳಿರ್ವ ಉರಿಗೇಸರಂ
ಪೇರೊಡಲ್ ಎಸೆದಿರೆ ಪುಟ್ಟಿದ-
ನಾರುಮಗುರ್ವಿಸೆ ಮಗಂ ಘಟೋದ್ಗಜನೆಂಬಂ
(ಪಂಪ ಭಾರತ : ೩ – ೨೦)

ಕಾರಿರುಳ ತಿರುಳಿನ ಬಣ್ಣ; ಹರಿತವಾದ ಹೊಳೆವ ದಾಡೆ; ನಳನಳಿಸುವ ಉರಿಗೂದಲು; ದೊಡ್ಡ ಶರೀರ – ಇದರಿಂದ ಯಾರೂ ಹೆದರುವಂತಾದನಂತೆ ಘಟೋದ್ಗಜ. ಅರ್ಜನನ ಬಳಿ ಖಾಂಡವ ದಹನಕ್ಕೆಂದು ಬಂದ ಅಗ್ನಿದೇವನನ್ನು ಬ್ರಾಹ್ಮಣಾಕೃತಿಯಲ್ಲಿ ಕಡೆದು ಕೊಡುತ್ತದೆ ಪಂಪನ ಪ್ರತಿಭೆ –

ಉರಿವುರಿಯನೆ ತಲೆನವಿರನುಕರಿಸಿರೆ,
ಸಂತಪ್ತ ಕನಕವರ್ಣಮುಮ್ ಉರಿಯೊಂದುರುಳಿವೊಲಿರೆ,
ಜಠರಾನಳ ಉರಿವಿನಂ ಅಂತು ಒರ್ವನ್ ಉರಿಯ ಬಣ್ಣದ ಪಾರ್ವಂ
(ಪಂಪ ಭಾರತ : ೫-೬೯)

ತಲೆಗೂದಲು ಉರಿವ ಉರಿಯ ಎಳೆಗಳನ್ನು ಹೋಲುತ್ತದೆ; ಪುಟವಿಟ್ಟ ಚಿನ್ನದಂತಿರುವ ಮೈ ಉರಿಯ ಉರುಳಿಯಂತಿದೆ; ಜಠರಾಗ್ನಿಯೇ ಉರಿದು ಬಂದಂತಿದ್ದಾನೆ ಆ ಬ್ರಾಹ್ಮಣ. ಧರ್ಮರಾಜನು ಸಭೆಯಲ್ಲಿರುವಾಗ ದೇವಋಷಿಯಾದ ನಾರದರು ಗಗನ ತಳದಿಂದ ನೆಲಕ್ಕಿಳಿಯುತ್ತಾರೆ. ಆ ಚಿತ್ರವನ್ನು –

ಬೆಳಗುಗಳೆಲ್ಲಮೊಂದುರುಳಿಯಾಗಿ ನಭಸ್ಥಳದಿಂದಮೀ ಮಹೀ
ತಳಕಿೞತರ್ಪುದೆಂದು, ಮನುಜಾಕೃತಿಯೆಂದು, ಮುನೀಂದ್ರನೆಂದು, ಕ-
ಣ್ಗೊಳಿಸೆ ಮುನೀಂದ್ರರೊಳ್ ಕಮಲ ಸಂಭವನೆಂದು ನೋಟಕರ್
ತಳವೆಳಗಾಗೆ ಸಾರೆವರೆ ನೀರದ ಮಾರ್ಗದಿನ್ ಅಂದು ನಾರದಂ.
(ಪಂಪ ಭಾರತ : ೬-೬)

ಹೀಗೆ ಕೊಡುತ್ತಾನೆ. ಇದು ಕಲ್ಪನಾ ಸೌಂದರ್ಯದ ಮೋಡಿ. ಕೆಳಗಿನಿಂದ ತಲೆ ಎತ್ತಿ ನೋಡುವ ಕಣ್ಣಿಗೆ ಮೊದಲು ಬೆಳಗುಗಳೆಲ್ಲವೂ ಒಂದು ಉರುಳಿಯಾಗಿ ತೋರುತ್ತದೆ; ಆಮೇಲೆ ಮನುಷ್ಯಾಕೃತಿಯಂತೆ ತೋರುತ್ತದೆ, ಕೊಂಚಕೆಳಗೆ ಬಂದಾಗ ಋಷಿಯ ರೂಪದಂತೆ ತೋರುತ್ತದೆ; ಇನ್ನೂ ಕೆಳಕ್ಕೆ ಇಳಿದಾಗ ಋಷಿಗಳಲ್ಲಿ ನಾರದನೆಂದು ಕಾಣುತ್ತದೆ. ನಿಜವಾಗಿಯೂ ಅಪೂರ್ವವಾದ ಚಿತ್ರಣ. ಮೊದಲು ಬೆಳಗಾಗಿ, ಆ ಬೆಳಗು ಒಂದು ಆಕೃತಿಯನ್ನು ಧರಿಸಿ ಇಳಿಯುವ ಚಿತ್ರಣದ ಈ ವರ್ಣನೆ ಕವಿಯ ಮನಸ್ಸಿನಲ್ಲಿ  ಭಾವವೊಂದು  ರೂಪುದಾಳುವ ಪ್ರತಿಭೆಯ ಮೋಡಿಯಂತಿದೆ! ಈ ಹಲವಾರು ವರ್ಣನೆಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ: ಕವಿಯ ಕಲ್ಪನೆ ಯಾವೆಲ್ಲ ಬಗೆಯ ಶಕ್ತಿಗಳನ್ನು ಪರಿಭಾವಿಸಿ ಮಾನವರುಚಿರವಾದ ರೂಪವನ್ನು ಕೊಟ್ಟು ಸುಂದರವನ್ನಾಗಿ ಮಾಡಿದೆ.

ಮಾನವಲೋಕದಲ್ಲಿ ಕಾಣುವ ಈ ಎಲ್ಲ ಸೌಂದರ್ಯದ ಒಳಗುಟ್ಟೇನು ಎನ್ನುವುದನ್ನು ಕುರಿತು ಎರಡು ಮಾತನ್ನು ಇಲ್ಲಿ ಹೇಳಿ ಈ ವಿಷಯವನ್ನು ಇಲ್ಲಿಗೆ ಮುಗಿಸಬಹುದು. ನಮ್ಮ ಪ್ರಾಚೀನ ಕವಿಗಳು ಮಾನವ ಲೋಕದ ಹಾಗೂ ಪ್ರಕೃತಿಲೋಕದ ಸೌಂದರ್ಯದ ನಾನಾ ಮುಖಗಳನ್ನು ಕಂಡು ಹಾಡಿದ್ದಾರೆ. ಈ ಎಲ್ಲ ಚೆಲುವೂ ರಮ್ಯವಾಗಿದೆ; ಸುಖದಾಯಕವಾಗಿದೆ; ಚೇತೋಹಾರಿಯಾಗಿದೆ. ಅದರಲ್ಲಿ ದೈವಿಕತೆ ಇದೆ; ಮಾಯಿಕತೆಯೂ ಇದೆ. ಆದರೆ ಈ ಎಲ್ಲ ಚೆಲುವನ್ನು ಮಾನವನಾದವನು ಒಲಿಯಬೇಕು; ಆನಂದವನ್ನು ಕಾಣಬೇಕು. ಈ ಸುಖವೂ ನಾನಾ ರೀತಿಯಾಗಿರಬಹುದು. ಪ್ರಕೃತಿಯ ಸೌಂದರ್ಯವನ್ನು ತಮ್ಮ ಮೈ ಚೆಲುವಿಗೆ ಬಳಸಿ ಸುಖಿಸುವ ಅರಮನೆಯ ವಿಲಾಸಿನಿಯರ ಸುಖ ಒಂದು ರೀತಿಯದು. ಹೂವುಗಳನ್ನು ಕಿತ್ತು, ಕೊಂಬೆಗಳನ್ನು ಜಗ್ಗಿ, ಅಯ್ಯೋ ಇಂತಹ ಮರವನ್ನು ನೋಯಿಸಿದೆನಲ್ಲಾ ಎಂದು ಕೊರಗುವ ಮನಃಸ್ಥಿತಿಯ ಸೊಗಸು ಇನ್ನೊಂದು ರೀತಿಯದು. ಹೂವುಗಳನ್ನು ಶಿವಪೂಜಾ ಸಾಮಗ್ರಿ ಎಂದು ಭಾವಿಸುವ ಭಕ್ತ ಮನೋಭಾವದ ಸುಖ ಮತ್ತೂ ಒಂದು ರೀತಿಯದು. ಪ್ರಕೃತಿಯ ಚೆಲುವಿನಲ್ಲಿ ಪರಮಾತ್ಮನ ಅಂಶವನ್ನೇ ಕಂಡು ಬೆರಗಾಗುವ ಕವಿಯ ಸುಖ ಒಂದು ರೀತಿಯದು. ಪ್ರಕೃತಿ ಸೌಂದರ‍್ಯ ಹಲವು ಸಲ ಹಿನ್ನೆಲೆಯಾಗಿ, ಹಲವು ಸಲ ಪಾತ್ರವಾಗಿ, ಹಲವು ಸಲ ಭಾವಸಂಬಂಧಿಯಾಗಿ ನಿಲ್ಲುತ್ತದೆ- ಅಂದಂದಿನ ಅವನವನ ಮನೋಭಾವಕ್ಕೆ ಅನುಸಾರವಾಗಿ. ಆದಿಪುರಾಣದ ವಜ್ರಬಾಹು ಮಹಾರಾಜನಂಥವರಿಗೆ ಸುಂದರವಾದ ಮೋಡವೂ ಅದರ ನಶ್ವರತೆಯಿಂದ ವಿರಾಗಕ್ಕೆ ಕಾರಣವಾಗುತ್ತದೆ; ವಜ್ರದಂತನಿಗೆ ಪ್ರತೀಹಾರಿ ತಂದೊಪ್ಪಿಸಿದ ಕಮಲದ ಹೂವೊಂದು ದುಂಬಿಯ ಸಾವಿನ ಪಂಜರವಾಗಿ ತೋರಿ ವಿರಾಗಕ್ಕೆ ಕಾರಣವಾಗುತ್ತದೆ; ಸಿಡಿಲು ಬಿದ್ದು ಕೆಡೆದ ಆಲದ ಮರವೊಂದು ವೈಶ್ರವಣನ ವೈರಾಗ್ಯಕ್ಕೆ ಕಾರಣವಾಗುತ್ತದೆ ಮಲ್ಲಿನಾಥ ಪುರಾಣದಲ್ಲಿ. ಹೀಗೆ ಪ್ರಕೃತಿಯ ಸೌಂದರ್ಯ ಗುರುವೂ ಆಗಿದೆ ಸಂಸ್ಕಾರವಂತರಿಗೆ. ಇನ್ನು ಮಾನವ ಲೋಕದ ಸಮಸ್ತ ದೇಹ ಸೌಂದರ್ಯವೂ ಮೋಹಕ; ಭೋಗ ಸಹಾಯಕ. ಆದರೆ ಈ ಚೆಲುವೆಲ್ಲವೂ ‘ಮಿಂಚಿನಂತೆ ಚಂಚಲ.’ ಸಂಸಾರದ ಸೌಂದರ್ಯದಲ್ಲಿ ಒಲವಿದೆ ನಲವಿದೆ; ಆದರೆ ಅದರಲ್ಲೇ ರಮಿಸಿದರೆ ಅದು ವಜ್ರದ ಸಂಕೋಲೆ, ಮೇಲೇರುವ ಜೀವಕ್ಕೆ; ಅದರಿಂದ ಬಿಡುಗಡೆ ಇಲ್ಲ ಎನ್ನುತ್ತದೆ ಜೈನ ದೃಷ್ಟಿ. ದೇಹದ ಚೆಲುವು ಎಷ್ಟು ನಶ್ವರವೆಂಬುದು ಶ್ರೀಮತಿ ವಜ್ರಜಂಘರ ಪ್ರಸಂಗದಿಂದ ತಿಳಿಯುತ್ತದೆ. ಈ ಕಿಡುವ ಸುಖವನ್ನು ಬಿಟ್ಟು ಶಾಶ್ವತವಾದ ಸೌಂದರ್ಯಕ್ಕೆ ಜೀವ ಆಶಿಸುತ್ತದೆ. ಕಡೆಗೆ ಅದು ದರ್ಶಿಸುವ ಸ್ಥಿತಿ ಜಿನ ಸೌಂದರ್ಯ-

ಪೊಸಮುತ್ತಿಂ ಸಮೆದಂತೆ, ನುಣ್ ಪಳುಕಿನಿಂ ಗೆಯ್ದಂತೆ,
ಕರ್ಪೂರದಿಂ ದೆಸೆಯಾಚ್ಛಾದಿಸಿದಂತೆ, ಕೋಮಳ ಮೃಣಾಳ
ಕಾಂಡದಿಂ ಮಾಡಿದಂತೆ, ಸುಧಾಂಭೋನಿಧಿ ಫೇನದಿಂ ನೆರಪಿದಂತೆ,
ಆಶ್ಚರ್ಯಮಂ ಕಣ್ಗೆ ಪುಟ್ಟಿಸಿ ಚಂದ್ರಪ್ರಭಾಮೂರ್ತಿಯೇಂ
ತಳೆದುದೋ ಧಾವಲ್ಯ ಸಾಂಕಲ್ಯಮಂ
(ಅಗ್ಗಳನ ಚಂದ್ರಪ್ರಭ ಪುರಾಣ : ೧೩-೧೦)

ಅಂತಹ ಶಾಶ್ವತ ಸೌಂದರ್ಯ ಅದು. ಈ ಸ್ಥಿತಿಗೇರಲು ಜೀವ ತನ್ನೆಲ್ಲವನ್ನೂ ತ್ಯಾಗ ಮಾಡಿ ನಡೆಯುವ ಸಂದರ್ಭವೂ ಗೌರವಾಸ್ಪದವಾದುದು. ವಡ್ಡಾರಾಧನೆಯ ಕಥೆಗಳಲ್ಲೆಲ್ಲಾ ಈ ಪರಮಗತಿಯನ್ನು ಪಡೆಯಲು ಹೊರಟ ಜೀವದ ಆತ್ಮ ಯಾತ್ರೆಯ ಸೌಂದರ‍್ಯದ ಕಥನವಿದೆ. ಆ ಪರಮವಾದದ್ದನ್ನು ಪಡೆಯಲು ಇದೆಲ್ಲವನ್ನೂ ಬಿಟ್ಟುಹೋಗಬೇಕೆಂಬುದು ಒಂದು ದೃಷ್ಟಿಯಾದರೆ, ಈ ಎಲ್ಲ ಚೆಲುವಿನ ನಡುವೆ ಬಾಳಿಯೂ, ಭೋಗಿಸಿಯೂ ಯೋಗಿಯಾಗಿರಬೇಕು ಭಕ್ತನಾಗಿರಬೇಕು ಎನ್ನುವ ರತ್ನಾಕರನ ಮತ್ತು ವಚನಕಾರರ ದೃಷ್ಟಿ ಬೇರೊಂದು ಬಗೆಯದು. ಸೌಂದರ‍್ಯವೆನ್ನುವುದು ತಪ್ಪಿಸಿಕೊಂಡು ಓಡಬೇಕಾದ ಮಾಯೆಯಲ್ಲ; ಇದೆಲ್ಲವು ನನ್ನದಾಗಬೇಕು ಎನ್ನುವ ‘ಮನದ ಮುಂದಣ ಆಸೆಯೇ ಮಾಯೆ.’ ಈ ಸ್ವಾರ್ಥಪರತೆಯನ್ನು ಕಳೆದು ನಿಸ್ಸಂಗ ಪರಿಭಾವನೆಯಲ್ಲಿ ನಿಂತವರಿಗೆ ಲೋಕವೇ ಶಿವಮಯವಾಗಿ ಕಾಣುತ್ತದೆ. ಈ ಒಂದು ನಿಲುವಿನ ಪರಿಯನ್ನು ಹರಿಹರ ‘ಮುರುಘರ ಮಹಾತ್ಮ್ಯೆರಗಳೆ’ಯಲ್ಲಿ ವರ್ಣಿಸಿದ್ದಾನೆ –

ಲೋಗರೇನೆಂದೊಡಂ ನಮಃ ಶಿವಾಯಮಾಗೆ ತನಗೆ
ಆಗಲೇನೆಂದೊಡಂ ನಮಃಶಿವಾಯವಾಗೆ ತನಗೆ
ಉಲಿವ ಹಕ್ಕಿಯುಲಿವು ಪಂಚವರ್ಣದಂತೆ ತಾಗೆ ಕಿವಿಗೆ
ಕೆಲೆವ ವೃಷಭನಾದಮುಂ ನಮಃ ಶಿವಾಯಮಾಗೆ ತನಗೆ
ಕಣ್ಣೊಳಂ ನಮಃ ಶಿವಾಯಮೆಂಬ ಲಿಖಿತವಿರ್ದ ತೆರದೆ
ಕಣ್ಣ ಮೊದಲ ರೂಪು ಪಂಚವರ್ಣವಾಗಿ ತೋರಲುರದೆ
(ಮುರುಘರ ಮಹಾತ್ಮ್ಯೆಯ ರಗಳೆ ಪು. ೬೪)

ಈ ಒಂದು ಸ್ಥಿತಿಯಲ್ಲಿ ಕಂಡದ್ದೆಲ್ಲ, ಕೇಳಿದ್ದೆಲ್ಲ ಶಿವಮಯವಾಗಿಯೇ ತೋರುತ್ತದೆ. ಇಂತಹ ನೆಲೆಗಾಗಿ ತೀರ್ಥಯಾತ್ರಿಗಳಾದ, ಈ ನೆಲೆಯ ಶಿವಮಂದಿರವನ್ನು ತಲುಪಿದ ಮಹಾಸಾಧಕರೂ, ಅನುಭಾವಿಗಳೂ ತಮ್ಮ ಅನುಭವದ ಅಭಿವ್ಯಕ್ತಿಗೆ ಸಾಹಿತ್ಯದ ರೀತಿಯನ್ನು ನಿಮಿತ್ತ ಮಾತ್ರವನ್ನಾಗಿ ಅವಲಂಬಿಸಿ ಕನ್ನಡದಲ್ಲಿ ದೈವೀಸೌಂದರ್ಯದ ಧಾರೆಯನ್ನು ದಾನಮಾಡಿದ್ದಾರೆ. ಶಿವಶರಣರ ಮತ್ತು ಹರಿದಾಸರ ಸಾಹಿತ್ಯ ಈ ಜಾತಿಗೆ ಸೇರಿದ್ದು. ಇವರು ಪ್ರಧಾನವಾಗಿ ಸಾಹಿತಿಗಳಲ್ಲ; ತಾವು ಬರೆದದ್ದು ಸಾಹಿತ್ಯವಾಗಲಿಲ್ಲವೆಂದು ಕೊರಗಿದವರೂ ಅಲ್ಲ. ಭಗವಂತನ ಅನುಭವ ಸೌಂದರ್ಯಧಾರೆಯಾಗಿ ಹರಿದು ವಾಙ್ಮಯರೂಪದಲ್ಲಿ ಪ್ರಕಟವಾಗಿರುವುದರಿಂದ ನಾವು ಇವರ ವಚನಗಳಲ್ಲಿ ಹಾಗೂ ಕೀರ್ತನೆಗಳಲ್ಲಿ ಚೆಲುವಿನ ಪ್ರಕಾಶಗಳನ್ನು ಗುರುತಿಸಬಹುದು.

ಈ ಅನುಭಾವಿಗಳ ದೃಷ್ಟಿಗೆ ಸೌಂದರ್ಯವೆಂದರೆ ಭಗವಂತನೇ, ಇವರಿಗೆ ಭಗವಂತ ಭಗವಂತನಾಗಿರುವುದರಿಂದ ಸುಂದರನೇ ಹೊರತು, ಸುಂದರನಾಗಿರುವುದರಿಂದ ಭಗವಂತ ಪ್ರಿಯನೆಂದು ಇವರು ಒಲಿಯಲಿಲ್ಲ. ಅವರ ದೃಷ್ಟಿಗೆ “ಮೊದಲ ಸ್ಥಾನ ಭಗವಂತನೇ ಚೆಲುವು ಎಂಬುದಕ್ಕೆ; ಎರಡನೆಯ ಸ್ಥಾನ ಭಗವಂತನ ಚೆಲುವು ಎಂಬುದಕ್ಕೆ.”[2] ಶರಣೆಯಾದ ಅಕ್ಕಮಹಾದೇವಿ ಕಂಡದ್ದು ಚೆನ್ನಮಲ್ಲಿಕಾರ್ಜುನನೇ ಚೆಲುವು ಎಂದು. ಆ ಚೆಲುವನಾದ ಚೆನ್ನಮಲ್ಲಿಕಾರ್ಜುನ ಎಂಥವನು?

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗಾನೊಲಿದೆನವ್ವಾ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವಾ
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗಾನೊಲಿದೆ
ಇದು ಕಾರಣ ಚೆನ್ನಮಲ್ಲಿಕಾರ್ಜುನನೆ ಚೆಲುವ ಗಂಡನೆನಗೆ
[3]

ಇಲ್ಲೆಲ್ಲಾ ಚೆಲುವಂಗೆ ಎನ್ನುವ ಮಾತು ಗಮನಾರ್ಹವಾದುದು. ಅಕ್ಕಮಹಾದೇವಿ ಒಲಿದುದು ಚೆನ್ನಮಲ್ಲಿಕಾರ್ಜುನ ಚೆಲುವನಾಗಿದ್ದಾನೆ ಎಂದಲ್ಲ, ಚೆನ್ನಮಲ್ಲಿಕಾರ್ಜುನನಾಗಿರುವುದರಿಂದ ಆತ ಚೆಲುವನಾಗಿದ್ದಾನೆ ಎಂದು. ಹರಿದಾಸರ ಪಾಲಿಗೆ ದೇವರು ‘ಚೆಲುವ ನಾರಾಯಣ’. ಅವರಿಗೆ ‘ಈ ಪರಿಯ ಸೊಬಗು’ ಮತ್ತೆಲ್ಲೂ ಕಾಣದು. ಎಂತಲೇ ಅವರು ಹಾಡುತ್ತಾರೆ.

ಈ ಪರಿಯ ಸೊಬಗಾವ ದೇವರೊಳು ನಾ ಕಾಣೆ
ಗೋಪೀಜನ ಪ್ರಿಯ ಗೋಪಾಲಗಲ್ಲದೆ
[4]

ಇದು ಚೆಲುವೇ ಮೂರ್ತಿಗೊಂಡ ಭಗವಂತನ ನಿಲುವು. ಈ ಚೆಲುವು ಭಕ್ತಿ ಭಾವಕ್ಕೆ ಕಂಡದ್ದು. ಈ ಪರಮ ಸೌಂದರ‍್ಯಕ್ಕೆ ಬೆರಗಾಗಿ, ತ್ಯಾಗಮೂರ್ತಿಯಾದ ರುದ್ರನ ಸೌಂದರ್ಯವನ್ನು ‘ಹರಭಕ್ತರೂ, ಭೋಗಮೂರ್ತಿಯಾದ ಹರಿಯ ಸೌಂದರ್ಯವನ್ನು ಹರಿಭಕ್ತರೂ- ಮನದಣಿಯ ಹಾಡಿದ್ದಾರೆ. ‘ಭಗವಂತನೇ ಚೆಲುವು’ – ಎಂಬುದನ್ನು ಅನುಭವಿಸಿದ ಈ ಅನುಭಾವಿಗಳು ‘ಭಗವಂತನ ಚೆಲುವನ್ನು’ ನಾನಾ ಭಾವಗಳಲ್ಲಿ ಭಾವಿಸಿ ರೂಪಿಸಿ ಹಾಡಿದ್ದಾರೆ. ಸೌಂದರ್ಯವೇ ತಾನಾದ ಭಗವಂತ ಭಕ್ತರ ಪಾಲಿಗೆ ಮೂರ್ತ ಸೌಂದರ್ಯವೊಂದರಲ್ಲಿ ರೂಪುಗೊಳ್ಳಬೇಕಷ್ಟೆ? ಹಾಗೆ ಭಕ್ತರ ಭಕ್ತಿಯಿಂದ ರೂಪುಗೊಂಡ ‘ಭಗವಂತನ ಚೆಲುವು’ ಇದು-

ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ
ಧನ್ಯನಾದೆನೋ ಧರೆಯೊಳು-
ಇನ್ನು ಈ ಭವ ಭಯಕೆ ಅಂಜಲೇತಕೊ
ಚೆನ್ನಸಿರಿ ವೆಂಕಟೇಶ ಶ್ರೀಶ
[5]
ಶಿರದಲ್ಲಿ ರವಿಕೋಟಿ ತೇಜದಿಂದೆಸೆವಂಥ
ವರಕಿರೀಟ ಕುಂಡಲ
ಕೊರಳೊಳಿಹ ಸರಿಗೆ ವೈಜಯಂತಿಯ ಮಾಲೆ
ಪರಿಪರಿಯ ಹಾರಗಳು….
[6]

ಇದು ‘ಚೆನ್ನಸಿರಿ ವೆಂಕಟೇಶ’ನ ರೂಹು. ಅಕ್ಕಮಹಾದೇವಿ ಕಂಡ ಚೆನ್ನಮಲ್ಲಿಕಾರ್ಜುನನ ಚೆಲುವು ಹೀಗಿತ್ತಂತೆ-

ಹೊಳೆವ ಕೆಂಜಡೆಗಳ, ಮಣಿಮಕುಟ, ಒಪ್ಪುವ ಸುಲಿಪಲ್ಲ,
ನಗೆಮೊಗದ ಕಂಗಳ ಕಾಂತಿಯಿಂ ಈರೇಳು ಭುವನಮಂ
ಬೆಳಗುವ ದಿವ್ಯ ಸ್ವರೂಪನ ಕಂಡೆ ನಾನು. ಕಂಡೆನ್ನ
ಕಂಗಳ ಬರ ಹಿಂಗಿತ್ತಿಂದು

ದಾಸರು ದರ್ಶಿಸಿದ ‘ಚೆನ್ನಸಿರಿ ವೆಂಕಟೇಶ’ನ ಈ ಪರಿಯ ಸೊಬಗು’, ಅಕ್ಕಮಹಾದೇವಿ ಕಂಡ ಚೆನ್ನಮಲ್ಲಿಕಾರ್ಜುನನ ಚೆಲುವೂ ಕಾಂತಿದೀಪ್ತಿಗಳಿಂದ ರಾಜಿಸುತ್ತಿವೆ. ಭಗವಂತನ ಚೆಲುವನ್ನೂ ಈ ಅನುಭಾವ ಕವಿಗಳೂ ಮಾನವ ಪ್ರಿಯವಾದ ಮೂರ್ತ ರೂಪವೊಂದರಲ್ಲಿ ಹಾಡಿ ಸೌಂದರ್ಯ ಲಹರಿಯನ್ನು ಹರಿಯಿಸಿದ್ದಾರೆ.

* * *

 


[1] ತಪೋನಂದನ ; ಕುವೆಂಪು, ‘ಮಹಾಶ್ವೇತೆಯ ತಪಸ್ಸು’ ನೋಡಿ,

[2] ಶ್ರೀ ಕುವೆಂಪು – (ಮಾತನಾಡುವಾಗ)

[3] ಎಂ. ಆರ್.ಶ್ರೀ., ವಚನಧರ್ಮಸಾರ, ಪು. ೧೦೨.

[4] ಪುರಂದರದಾಸರ ಕೀರ್ತನೆಗಳು : ಪ್ರಕಾಶಕರು – ಮಧ್ವ ಸಿದ್ದಾಂತ ಗ್ರಂಥಾಲಯ. ಉಡುಪಿ, ಭಾಗ ೭, ಪುಟ ೭೦ ಹಾಡು ೧೬೧

[5] ಅಲ್ಲೇ : ಭಾಗ ೪, ಪುಟ ೯೦ ಹಾಡು ೧೮೪

[6] ಶೂನ್ಯಸಂಪಾದನೆ ; ಸಂ: ಎಸ್.ಎಸ್. ಭೂಸನೂರು ಮಠ. ಪುಟ ೩೪೬.