ಮಂಗನಿಂದ ಮಾನವ ಬಂದ ಎಂದು ನೂರೈವತ್ತು ವರ್ಷಗಳ ಹಿಂದೆಯೇ ಚಾಲ್ರ್ಸ್ ಡಾರ್ವಿನ್ ಹೇಳಿದ್ದರೂ, ಈ ದಿಸೆಯಲ್ಲಿ ಮಾನವನ ಸಾಗಿ ಬಂದ ಹಾದಿ ಹೇಗಿತ್ತು ಎನ್ನುವ ಬಗ್ಗೆ ಕುತೂಹಲವಿನ್ನೂ ಮುಗಿದಿಲ್ಲ. ಮಂಗನಿಗೂ ಮಾನವನಿಗೂ ಇರುವ ವ್ಯತ್ಯಾಸಗಳು ಸುಸ್ಪಷ್ಟವಾಗಿದ್ದರೂ, ಈ ವ್ಯತ್ಯಾಸಗಳು ಕಾಣಿಸಿಕೊಂಡ ಕಾಲಟ್ಟ ಹಾಗೂ ಅವುಗಳಿಗೆ ಕಾರಣವೇನೆಂಬುದರ ಬಗ್ಗೆ ಹಲವಾರು ಊಹಾಪೋಹಗಳಿವೆ. ಮೊನ್ನೆ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಹೊಸದೊಂದು ಸಂಶೋಧನೆ ವಿಕಾಸದ ಹಾದಿಯಲ್ಲಿ ಮಾನವ ಇಟ್ಟಿರಬಹುದಾದ ಮೊದಲ ಕಹೆಜ್ಜೆಕಿಗಳನ್ನು ಗುರುತಿಸಿದೆ. ಅಮೆರಿಕೆಯ ರಟ್ಗರ್ಸ್ ವಿಶ್ವವಿದ್ಯಾನಿಲಯದ ಮಾನವ ಶಾಸ್ತ್ರಜ್ಞ ಮ್ಯಾಥ್ಯೂ ಬೆನೆಟ್ ಮತ್ತು ಸಂಗಡಿಗರು ಕೀನ್ಯಾದ ಶಿಲೆಗಳಲ್ಲಿ ಕಂಡು ಬಂದ ಕಹೆಜ್ಜೆಗುರುತುಕಿಗಳನ್ನು ಅಧ್ಯಯನ ಮಾಡಿ, ತಲೆಯೆತ್ತಿ ನಿಲ್ಲುವಂತಹ ವಿಶೇಷ ಭಂಗಿಯನ್ನು ಮಾನವನಿಗೆ ನೀಡಿದ ಪಾದಗಳ ವಿಕಾಸ ಸುಮಾರು 15 ಲಕ್ಷ ವರ್ಷಗಳ ಹಿಂದೆಯೇ ಆಗಿದೆ ಎಂದು ವಾದಿಸಿದ್ದಾರೆ.  ಇದು ಕಲ್ಲಿನಲ್ಲಿ ಮೂಡಿದ ಹೆಜ್ಜೆಗಳು ಹೇಳಿದ ಕಥೆ.

ಮಾನವನ ಹೆಬ್ಬೆರಳು ಮತ್ತು ಪಾದ ಅವನ ಮತ್ತು ಮಂಗಗಳ ನಡುವೆ ಇರುವ ವ್ಯತ್ಯಾಸಗಳಲ್ಲಿ ಪ್ರಮುಖವಾದುವು ಎನ್ನುವುದು ವಿಜ್ಞಾನಿಗಳ ನಂಬಿಕೆ. ಖಮಾನವನ ಪಾದ ನಿಸರ್ಗದೊಂದಿಗೆ ಅತ್ಯಂತ ವಿಶಿಷ್ಟವಾದ ಹೊಂದಾಣಿಕೆ,ಕಿ ಎನ್ನುತ್ತಾರೆ ಇಂಗ್ಲೆಂಡಿನ ಲಿವರ್ಪೂಲ್ನ ವಿಜ್ಞಾನಿ ರಾಬಿನ್ ಕ್ರಾಂಪ್ಟನ್. ನಿಜವೇ. ದಪ್ಪ ಚರ್ಮ, ಕೊಬ್ಬು ಮತ್ತು ಗಡುಸಾದ ಸ್ನಾಯುಗಳ ಮೆತ್ತೆಯ ಮೇಲೆ ಇರುವ ಸ್ನಾಯುಹುರಿಗಳು ಮತ್ತು ತಂತುಕಟ್ಟುಗಳ ಹಂದರದಲ್ಲಿ 27 ಮೂಳೆಗಳು ಜೋಡಣೆಯಾಗಿ ಮಾನವನ ಪಾದವೆನ್ನಿಸಿದೆ.  ಅವುಗಳ ನಡುವೆ ಇರುವ ಸಂಕೀರ್ಣ ಜೋಡಣೆಯಿಂದಾಗಿ ಈ ಇಪ್ಪತ್ತೇಳು ಮೂಳೆಗಳೂ ಚಲಿಸಬಲ್ಲುವು. ಪಾದಗಳ ಈ ವಿಶಿಷ್ಟ ರಚನೆಯಿಂದಾಗಿಯೇ ನಮ್ಮ ಗತ್ತಿನ ನಡೆ ಸಾಧ್ಯವಾಗಿದೆ ಎನ್ನಬಹುದು. ನೆಟ್ಟಗೆ ಎದೆಯುಬ್ಬಿಸಿ ನಿಲ್ಲುವುದಕ್ಕೂ, ರಭಸದಿಂದ ಓಡುವುದಕ್ಕೂ, ತಟಕ್ಕನೆ ನಿಲ್ಲುವುದಕ್ಕೂ ನಮ್ಮ ಪಾದ ನೆರವಾಗುತ್ತದೆ. ಅದಕ್ಕೇ ಇದು ಅತ್ಯಂತ ವಿಶಿಷ್ಟ ಹೊಂದಾಣಿಕೆ.

ನಂಬಿಕೆಯಾಗದಿದ್ದರೆ ಮಂಗ-ವಾನರಗಳ ಪಾದಗಳಿಗೆ ನಮ್ಮ ಪಾದಗಳನ್ನು ಹೋಲಿಸಿ ನೋಡಿ. ಮಂಗಗಳ ಪಾದದಲ್ಲಿ ದೊಡ್ಡ ಕಾಲ್ಬೆರಳು ಅರ್ಥಾತ್ ಉಂಗುಷ್ಟ ಪಾದದಿಂದ ಹೊರಗೆ ಚಾಚಿಕೊಂಡಿರುತ್ತದೆ. ಆದರೆ ನಮ್ಮ ಕಾಲಿನಲ್ಲಿ ದೊಡ್ಡ ಕಾಲ್ಬೆರಳು ಉಳಿದ ಬೆರಳುಗಳಿಗೆ ಅಂಟಿಕೊಂಡಂತೆ ಇದೆ. ನಮ್ಮ ಪಾದ ನಡುವೆ ಕಮಾನಿನಂತೆ ಬಾಗಿದೆ. ವಾನರಗಳಲ್ಲಿ ಇದು ಸಪಾಟಾಗಿರುತ್ತದೆ. ಕೆಲವರಿಗೆ ಹುಟ್ಟಿನಿಂದಲೇ ಹೀಗೆ ಸಪಾಟಾದ ಪಾದಗಳು ಇರುವುದುಂಟು. ನಡೆಯಲು ಅವರು ಪಡುವ ಪಾಡು ಯಾರಿಗೂ ಬೇಡ!  ಅಂತಹವರು ಪಾದಗಳ ಮೇಲೆ ಬೀಳುವ ಒತ್ತಡ, ಅದರಿಂದಾಗುವ ನೋವನ್ನು ತಡೆಯಲು ವಿಶೇಷ ಪಾದರಕ್ಷೆಗಳನ್ನು ಧರಿಸಬೇಕಾಗುತ್ತದೆ. ಕಾಲು ಚಾಚಿ ಮಲಗಿದ್ದಾಗ, ಮಂಗಗಳ ಪಾದಗಳು ಒಂದನ್ನೊಂದು ಮುಟ್ಟುವಂತೆ ಒಳಗೆ ಚಾಚಿಕೊಂಡಿರುತ್ತವೆ. ನಮ್ಮ ಪಾದಗಳು ಹೊರಗೆ ಚಾಚಿಕೊಳ್ಳುತ್ತವೆ. ಅಷ್ಟೇ ಅಲ್ಲ. ನಡೆಯುವಾಗಲೂ ಮಾನವನ ಪಾದಗಳ ಚಲನೆ ಭಿನ್ನವಾಗಿರುತ್ತದೆ. ನಡೆಯುವಾಗ ಹಿಮ್ಮಡಿ ಮೊದಲು ನೆಲ ತಾಕುತ್ತದೆ.  ಮೃದು ಮಾಂಸ ಇರುವ ಹಿಮ್ಮಡಿ ಇಲ್ಲದಿದ್ದರೆ ನಾವು ಕಾಲಿಡುವ ರಭಸದ ಜೊತೆಗೆ ದೇಹದ ಭಾರವೂ ಕೂಡಿಕೊಂಡು ಮೂಳೆಗಳು ಚೂರು, ಚೂರಾಗಿ ಬಿಡಬೇಕಿತ್ತು!   ಈ ಒತ್ತಡ ಮೂಳೆಗೆ ತಗುಲದಂತೆ ಹಿಮ್ಮಡಿ ಹೀರಿಕೊಳ್ಳುತ್ತದೆ.  ಮುಂದಿನ ಹೆಜ್ಜೆಗೆ ಹಿರಿಯ ಕಾಲ್ಬೆರಳು ನೆರವಾಗುತ್ತದೆ. ಉಳಿದ ಬೆರಳುಗಳ ಜೊತೆಗೆ ಇರುವುದರಿಂದ, ದೇಹವನ್ನು ಮುಂದೂಡುವಷ್ಟು ಬಲ ಉಂಟಾಗುವಂತೆ ನೆಲವನ್ನು ಪಾದ ದೂಡಬಹುದು. ಉಂಗುಷ್ಟವಿಲ್ಲದಿದ್ದರೆ ಓಡುವುದು ಎಷ್ಟು ಕಷ್ಟ ಎನ್ನುವುದು ತಿಳಿಯಬೇಕಾದರೆ ಉಂಗುಷ್ಟವಿಲ್ಲದ ಚಪ್ಪಲಿ ಹಾಕಿಕೊಂಡು ಓಡಿ ನೋಡಿ!

ಒಟ್ಟಾರೆ ಮಾನವನ ಗತ್ತಿನ ನಡೆಗೆ ಪಾದದ ಈ ವಿಶಿಷ್ಟ ರಚನೆಯೇ ಕಾರಣ. ಆದರೆ ಇದು ಮಾನವನಲ್ಲಿ ಕಾಣಿಸಿಕೊಂಡಿದ್ದು ಯಾವಾಗ? ಈ ಪ್ರಶ್ನೆಗೆ ಉತ್ತರ ಇದುವರೆವಿಗೂ ದೊರೆತಿರಲಿಲ್ಲ. ಏಕೆಂದರೆ, ಮಾನವನ ಪೂರ್ವಜರು ಎಂದು ವಿಜ್ಞಾನಿಗಳು ಗುರುತಿಸಿದ ಜೀವಿಗಳ ಪಳೆಯುಳಿಕೆಗಳು ಪೂರ್ಣ ರೂಪದದಲ್ಲಿ ಎಲ್ಲಿಯೂ ದೊರಕಿಲ್ಲ.  ಕೈಗೆ ಸಿಕ್ಕಿದ ಕೆಲವು ಎಲುಬುಗಳಿಂದಲೇ ಜೀವಿಯ ಆಕಾರ, ಚಲನವಲನಗಳನ್ನು ವಿಜ್ಞಾನಿಗಳು ಊಹಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.  ಪಾದಗಳ ಮೂಳೆಗಳೆಲ್ಲವೂ ದೊರಕಿದರಲ್ಲವೇ ಈ ಜೀವಿಗಳ ನಡೆ ಮಂಗನ ಹಾಗೆ ವಾಲುನಡೆಯೋ, ಮಾನವನ ಗತ್ತಿನ ನಡೆಯೋ ತಿಳಿದುಕೊಳ್ಳುವುದು ಸಾಧ್ಯ!? ಮಾನವನ ಪೂರ್ವಜರು ವಾಲುನಡೆಯಿಂದ ನೇರನಡೆಯತ್ತ ಯಾವಾಗ ವಾಲಿದುವೆಂಬುದು ನಿಗೂಢವಾಗಿತ್ತು. ಮ್ಯಾಥ್ಯೂ ಬೆನೆಟ್ ತಂಡದ ಸಂಶೋಧನೆ ಈ ರಹಸ್ಯವನ್ನು ಬಯಲು ಮಾಡುವತ್ತ ಮೊದಲ ಹೆಜ್ಜೆ ಇಟ್ಟಿದೆ.

ಹಾಗಂತ ಬೆನೆಟ್ರವರಿಗೆ ಮಾನವ ಪೂರ್ವಜರ ಪೂರ್ಣರೂಪದ ದೇಹ ಸಿಕ್ಕಿತೆಂದಲ್ಲ. ಇವರಿಗೆ ಕೀನ್ಯಾದ ಇಲೆರೆಟ್ ಎಂಬಲ್ಲಿನ ಶಿಲಾಪದರಗಳಲ್ಲಿ ಕೆಲವು ಹೆಜ್ಜೆಗುರುತುಗಳು ಸಿಕ್ಕಿವೆ ಅಷ್ಟೆ. ಸುಮಾರು 15 ಲಕ್ಷ ವರ್ಷಗಳಷ್ಟು ಹಿಂದೆ ರೂಪುಗೊಂಡ ಶಿಲೆಗಳಲ್ಲಿ ಈ ಹೆಜ್ಜೆಗುರುತುಗಳು ಸಿಕ್ಕಿವೆ. ಅದೂ ಒಂದೇ ಸಮಯದ ಪದರಗಳಲ್ಲಿ ಅಲ್ಲ. ಬೇರೆ, ಬೇರೆ ಸಮಯದಲ್ಲಿ ಅಚ್ಚೊತ್ತಿದ ಹೆಜ್ಜೆ ಗುರುತುಗಳು ಇವು.  ಕಾಲನ ತುಳಿತಕ್ಕೆ ಸಿಕ್ಕ ಈ ಹೆಜ್ಜೆಗುರುತುಗಳೂ ಮಸುಕಾಗಿವೆ. ಕೆಸರಲ್ಲಿ ನಾವು ಅಚ್ಚೊತ್ತಿದಂತೆ ಸ್ಪಷ್ಟವಾಗಿರದ ಇವುಗಳನ್ನು ಜಾಣತನದಿಂದ ಅಧ್ಯಯನ ಮಾಡಿ, ಆ ಗುರುತುಗಳನ್ನು ಮಾಡಿದ ಪಾದಗಳ ರಚನೆ ಹೇಗಿದ್ದಿರಬಹುದು ಎಂದು ಬೆನೆಟ್ ತಂಡ ಲೆಕ್ಕ ಮಾಡಿದೆ. ಲೇಸರ್ ಕಿರಣಗಳಿಂದ ಈ ಗುರುತುಗಳನ್ನು ಬೆಳಗಿ ಚಿತ್ರ ತೆಗೆದಿದ್ದಾರೆ. ಈ ತಂತ್ರದಿಂದಾಗಿ, ಒಂದರ ಮೇಲೊಂದು ಅಚ್ಚು ಬಿದ್ದ ಗುರುತುಗಳನ್ನೂ ಪ್ರತ್ಯೇಕಿಸಬಹುದು.  ಹೀಗೆ ತೆಗೆದ ಚಿತ್ರಗಳಿಗೆ ಅನಂತರ ಕಂಪ್ಯೂಟರಿನಿಂದ ಬಣ್ಣ ಬಳಿದಿದ್ದಾರೆ.   ಒಂದೇ ಸಮನಾದ ಒತ್ತಡ ಊರಿದ ಹೆಜ್ಜೆಯ ವಿವಿಧ ಭಾಗಗಳನ್ನು ಒಂದೇ ಬಣ್ಣದಿಂದ ಈ ತಂತ್ರ ಗುರುತಿಸುತ್ತದೆ. ಒತ್ತಡದ ಪ್ರಮಾಣವನ್ನೂ ಲೆಕ್ಕ ಹಾಕಬಹುದು. ಇವೆಲ್ಲ ತಂತ್ರವನ್ನೂ ಬಳಸಿಕೊಂಡು ನೋಡಿದಾಗ ಮಸುಕಾದ ಹೆಜ್ಜೆಗುರುತಿನಲ್ಲಿಯೂ, ಪಾದದ ಕಮಾನು, ಉಂಗುಷ್ಟದ ದಪ್ಪ, ಅದರ ಸ್ಥಾನ ಹಾಗೂ ಪಾದದ ವಿವಿಧೆಡೆ ಇರುವ ಸ್ನಾಯುಗಳ ದಪ್ಪ ಗೋಚರಿಸುತ್ತದೆ.

ಮಾನವನದರಂತಹ ಪುರಾತನ ಹೆಜ್ಜೆಗುರುತುಗಳು ದೊರೆತಿರುವುದು ಇದೇ ಮೊದಲಲ್ಲ. ಇದಕ್ಕೂ ಹಿಂದೆ ತಾಂಜಾನಿಯಾದ ಲೇಟೊಲಿ ಎಂಬಲ್ಲಿಯೂ ಮಾನವನಂತಹ ಪ್ರಾಣಿಯ ಹೆಜ್ಜೆಗುರುತುಗಳು ದೊರೆತಿದ್ದುವು.  ಆದರೆ ಆ ಹೆಜ್ಜೆ ಮೂಡಿದ ಸಮಯದಲ್ಲಿ ಅಲ್ಲಿದ್ದದ್ದು ಕುಬ್ಜನಾದ, ಕುಳ್ಳುಗಾಲುಗಳ ಜೀವಿ. ಅದನ್ನು ಆಸ್ಟ್ರಾಲೋಪಿತೆಕಸ್ ಆಫಾರೆನ್ಸಿಸ್ ಎಂದು ವಿಜ್ಞಾನಿಗಳು ಹೆಸರಿಸಿದ್ದಾರೆ. ಈ ಜೀವಿಯಿಂದಲೇ ಮಾನವನ ವಿಕಾಸವಾಯಿತು ಎಂದು ಹೇಳಲಾಗುತ್ತದೆ. ಅದಾದನಂತರದ ಕಾಲಗಳಲ್ಲಿ ಇದ್ದಿರಬಹುದಾದ ಜೀವಿಗಳ ಹೆಜ್ಜೆಗುರುತುಗಳು ಎಲ್ಲಿಯೂ ದೊರಕಿರಲಿಲ್ಲ. ಹೀಗಾಗಿ ಇಲೆರೆಟ್ನಲ್ಲಿ ಕಂಡುಬಂದ ಈ ಹೆಜ್ಜೆಗುರುತುಗಳು ಸುದ್ದಿಯಾದುವು. ಈಗ ಅವು ಲೇಟೊಲಿಯಲ್ಲಿ ದೊರೆತ ಹೆಜ್ಜೆಗುರುತುಗಳಿಗಿಂತ ಬಹಳ ಭಿನ್ನವೆಂತಲೂ, ಇಂದಿನ ಮಾನವನ ಹೆಜ್ಜೆಗುರುತುಗಳನ್ನು ಹೆಚ್ಚು ಹೋಲುತ್ತವೆಂದೂ ಬೆನೆಟ್ ತಂಡದ ಅಧ್ಯಯನಗಳು ತಿಳಿಸುತ್ತಿವೆ.  ಮಾನವ ಎಂಬ ಪ್ರಾಣಿ ತಲೆಯೆತ್ತಿ ನಿಂತದ್ದು ಸುಮಾರು 15 ಲಕ್ಷ ವರ್ಷಗಳ ಹಿಂದೆ ಎನ್ನುತ್ತಿವೆ. ಹೀಗಿದೆ ಮರಳುಗಾಡಿನಲ್ಲಿ ಮಸುಕಾಗಿ ಮೂಡಿದ ಹೆಜ್ಜೆಗುರುತುಗಳು ಹೇಳುವ ಕಾಲನ ಕಥೆ.

Matthew R. Bennett et al; Early hominin foot morphology based on 1.5 million year old footprints from Ileret, Kenya.  Science, 323, Pp 1197-1201; 2009; 27 February 2009