ಜನಪದ ನಂಬಿಕೆಗಳು ತನ್ನದೇ ಆದ ಪ್ರಾಚೀನತೆಯನ್ನು ಹೊಂದಿದ್ದು, ಗತಕಾಲದ ಬೇಟೆಯ ಸಂಸ್ಕೃತಿಯಿಂದ ಮೊದಲ್ಗೊಂಡು ತತ್ಕಾಲದ ಪೇಟೆಯ ಸಂಸ್ಕೃತಿಯವರೆಗೆ ಒಂದಿಲ್ಲಾ ಒಂದು ರೀತಿಯಿಂದ ಮಾನವ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅವುಗಳ ಪ್ರಾಚೀನತೆಯನ್ನು ಕುರಿತು ಹೇಳುವುದಾದರೆ, ಭೂಮಿಯ ಮೇಲೆ ಎಂದು ಮಾನವನ ಉಗಮವಾಯಿತೋ ಅಂದೇ ಅವನ ಮನೋಮಂದಿರದಲ್ಲಿ ಅವು ಮೂಡಿದವೆನ್ನಬಹುದು. ಜನಪದ ನಂಬಿಕೆಗಳ ಉಗಮಕ್ಕೆ ಕಾರಣ ಮಾನವನ ಮಾನಸಿಕ ಅಂದೋಳನ, ನೈಸರ್ಗಿಕ ಶಕ್ತಿಯ ಪ್ರಭಾವ ಮತ್ತು ಅಮಾನುಷ ಶಕ್ತಿಯ ಭಯ. ಜನಪದ ಜೀವನದ ಮೂಲ ನಿಧಿಯಾದ ನಂಬಿಕೆಗಳು, ಜನತೆಯ ಬದುಕಿನಲ್ಲಿ ಎಂದೂ ಬತ್ತದ ಗುಪ್ತಗಾಮಿನಿಯಾಗಿರುತ್ತವೆ. ಪಂಡಿತರಿಂದ ಪಾಮರರವರೆಗೆ, ವಿಜ್ಞಾನಿಯಿಂದ ಅಜ್ಞಾನಿಯವರೆಗೆ ಈ ಶಕ್ತಿಯ ಪ್ರಭಾವಕ್ಕೆ ಒಳಗಾಗದ ವ್ಯಕ್ತಿಯೇ ಇಲ್ಲವೆನಿಸುತ್ತದೆ. ಮನುಷ್ಯನ ಇಹ-ಪರ ಬದುಕಿಗೆ ನಂಬಿಕೆಯೇ ಊರುಗೋಲು, ಇಷ್ಟಾರ್ಥ ಸಿದ್ಧಿಗಳಿಗೆಲ್ಲ ನಂಬಿಕೆಯೇ ಮೂಲಬೇರು, ಅದಕ್ಕಾಗಿಯೇ ಬಸವಣ್ಣನವರು ‘ನಂಬಿ ಕರೆದಡೆ ಓ ಎನ್ನನ್ನೇ ಶಿವನು’ ಎಂದು ನಂಬಿಕೆಗಳಿಗೆ ನಿಷ್ಠೆ ತೋರಿಸಿರಬೇಕು. ‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ’ ಎಂದು ದಾಸರು ಹಾಡಿ ಕುಣಿದಿರಬೇಕು.

ಜನಪದ ನಂಬಿಕೆಗಳು ಜನಜೀವನದಲ್ಲಿ ನಡೆದಾಡುವ ನಾಣ್ಯಗಳಿದ್ದಂತೆ. ಅವು ಜನತೆಯ ಜೀವನಾನುಭವದ ಮೂಸೆಯಿಂದ ಮೂಡಿ ಬಂದು, ಬದುಕಿನಲ್ಲಿ ಬೆರೆತು ಪರಿಣಾಮಕಾರಿಯಾಗಿ ಪ್ರಭಾವಬೀರಿ ಜೀವಂತವಾಗಿವೆ. ಜನತಾಭಾವದ ಅಭಿವ್ಯಕ್ತಿಗಳಾದ ಜನಪದ ನಂಬಿಕೆಗಳು, ಜನತೆಯ ಪರಂಪರಾಗತ ಜ್ಞಾನಸುಧೆ, ಸುಸಂಸ್ಕೃತ ಹೃದಯದ ಪರಿಪಕ್ವ ಅನುಭವದ ಸಾರವೆಂದು ಹೇಳಬಹುದು. ಹೀಗಾಗಿ ಇವು ಜನಜೀವನದಲ್ಲಿ ಹಾಸುಹೊಕ್ಕಾಗಿ ಸೆರಿ, ಅವರ ಬದುಕನ್ನೇ ನಿಯಂತ್ರಿಸಿ ನಿರ್ದೇಶಿಸುವ ಪ್ರಮುಖ ಶಕ್ತಿಯಾಗಿ ಪರಿಣಾಮಿಸಿ, ಜನಪದ ಬದುಕಿಗೆ ವಜ್ರಕವಚವಾಗಿದೆ.

ಜನಪದ ನಂಬಿಕೆಗಳ ಬಗ್ಗೆ ದೇಶಿಯ ಮತ್ತು ವಿದೇಶಿಯ ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಗೊಳಿಸಿದ್ದು, ಇಲ್ಲಿ ಕೆಲವನ್ನು ಉದಾಹರಿಸಬಹುದಾಗಿದೆ. ‘ಮನುಷ್ಯನಿಗೆ ವಿಚಾರ ಮಾಡುವ ಶಕ್ತಿ ಇದ್ದುದರಿಂದ, ಹೊಸ ಹೊಸ ಕಲ್ಪನೆಗಳನ್ನು ಹೆಣೆದು ಭಾವನೆಗಳನ್ನು ಹೊಸೆಯುತ್ತಾನೆ. ಅವು ಆತನ ಮಾತಿನಲ್ಲಿ ಅಭಿವ್ಯಕ್ತಿಗೊಂಡು, ಆಚರಣೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇಂಥ ವಿಶಿಷ್ಟ ರೀತಿಯ ಭಾವನೆಗಳನ್ನೇ “ನಂಬಿಕೆಗಳು” ಎಂದು ‘ಹ್ಯೂಮ’ ಅಭಿಪ್ರಾಯ ಪಟ್ಟರೆ, ಅವು “ವಸ್ತುನಿಷ್ಠ ತೀರ್ಪುಗಳು” ಎಂದು ‘ಬಾಲ್ಡವಿನ್’ ತಿಳಿಸುತ್ತಾರೆ. ನಂಬಿಕೆಗಳು ‘ಭಾವಜೀವಿಯ ವರದ ಹಸ್ತ’ ಎಂದು ಗಾರ್ಡಿನರ್ ಹೇಳಿದರೆ, “ಅವುಗಳ ರೂಪ ಬದಲಾದರೂ, ಸ್ವರೂಪ ಉಳಿದುಕೊಳ್ಳುತ್ತವೆ” ಎಂದು ಹಕ್ಸಲೆ ತಿಳಿಸಿದ್ದಾನೆ. ಪರಂಪರಾಗತವಾಗಿ ಬಂದ ಈ ನಂಬಿಕೆಗಳು ಸಮಾಜದ ಸಾಮೂಹಿಕ ಒಪ್ಪಿಗೆಯ ಮುದ್ರೆಯನ್ನು ಪಡೆದು, ಮನುಷ್ಯನ ನಿತ್ಯ ವ್ಯವಹಾರದಲ್ಲಿ ಕಾಣಿಸಿಕೊಂಡು, ಭೂತ -ವರ್ತಮಾನ -ಭವಿಷತ್‌ಕಾಲದ ಫಲಿತಾಂಶವನ್ನು ಸೂಚಿಸುವ ಕಲ್ಪನೆಗಳಾಗಿವೆ” ಎಂದು ದೇಶೀಯ ಜನಪದ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈ ಎಲ್ಲ ಅಭಿಪ್ರಾಯಗಳನ್ನು ಅವಲೋಕಿಸಿದಾಗ, ಮನುಷ್ಯನ ಹುಟ್ಟಿನೊಂದಿಗೆ ರಕ್ತಗತವಾಗಿ ಬಂದ ನಂಬಿಕೆಗಳು ಆತನ ಬಾಳಿನ ಒಂದಂಗವೆಂಬಂತೆ ಜೀವನದಲ್ಲಿ ಬೆರೆದು ಸಮಷ್ಠಿಪ್ರಜ್ಞೆಯನ್ನು ಮೆರೆಯುವ ಜನಪದ ಸಂಸ್ಕೃತಿಯ ಪ್ರಮುಖ ಅಂಗವೆಂದು ತಿಳಿದುಬರುತ್ತದೆ.

ಈ ಹಿನ್ನೆಲೆಯಲ್ಲಿ ಜನಪದ ನಂಬಿಕೆಗಳ ಒಂದು ಪ್ರಮುಖ ಅಂಗವಾದ ‘ಮಾನವ ಸಂಬಂಧಿ ನಂಬಿಕೆ’ ಗಳನ್ನು ಕುರಿತು ಇನ್ನು ನೋಡಬಹುದು. ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಶ್ಶಾಸ್ತ್ರ ಹಾಗೂ ಜಾನಪದ ವಿಜ್ಞಾನ ಮುಂತಾದ ಶಾಖೆಗಳ ಮಾನವನ ಸಂಬಂಧನಿಷ್ಠ, ಗುಣನಿಷ್ಠ, ಮನೋನಿಷ್ಠ ಹಾಗೂ ಆಚರಣೆನಿಷ್ಠ ಸರ್ವ ಸಂಗತಿಗಳು ಈ ಪ್ರಬಂಧದ ನೀಲನಕ್ಷೆಗೆ ಆಹಾರ ಒದಗಿಸುತ್ತವೆ. ಮನುಷ್ಯನ ವಿವಿಧ ಅವಸ್ಥೆ -ಆಚರಣೆಗಳಿಗೆ ಸಂಬಂಧಿಸಿದ ಭಾವ ಪ್ರಧಾನ ಹಾಗೂ ಕಲ್ಪನಾಪ್ರಧಾನ ಅಂಶಗಳೆಲ್ಲವೂ ಇದರಲ್ಲಿ ಸೇರುತ್ತವೆ. ಕಾಯುವ ದೇವರು, ಕಾಡುವ ದೆವ್ವ, ಉಪಕರಿಸುವ ಪ್ರಾಣಿ -ಪಕ್ಷಿ ಹಾಗೂ ಆಯುರಾರೋಗ್ಯ ನೀಡುವ ಸಸ್ಯ ಸಂಪತ್ತು ಮುಂತಾದವುಗಳ ನಿಕಟ ಸಂಪರ್ಕವು ಮಾನವನಿಗಿದೆಯಾದವರೂ, ಆ ಬಗ್ಗೆ ಪ್ರತ್ಯೇಕ ಪ್ರಬಂಧಗಳಿರುವದರಿಂದ ಅವನ್ನು ಹೊರತುಪಡಿಸಿ, ಕೇವಲ ಮಾನವನ ಆಂಗಿಕ ಆಚರಾಣಾತ್ಮಕ ಅಂಶಗಳಿಗೆ ಮಾತ್ರ ಪ್ರಬಂಧದ ವಿಷಯವನ್ನು ಸೀಮಿತಗೊಳಿಸಿಕೊಳ್ಳಲಾಗಿದೆ.

ಹುಟ್ಟು ಸಾವುಗಳ ಮಾರ್ಗಮಧ್ಯದ ವೈವಿಧ್ಯಮಯವಾದ ಈ ಸಂಸಾರಯಾತ್ರೆಯಲ್ಲಿ ಲೆಕ್ಕವಿಡಲು ಬೇಸರಪಡುವಷ್ಟು ನಂಬಿಕೆಗಳು ಮನುಷ್ಯನ ಬಾಳಿನಲ್ಲಿ ಸೇರಿಕೊಂಡಿವೆಯಾದರೂ, ಆ ಎಲ್ಲ ನಂಬಿಕೆಗಳ ಮಹಾಂಬುಧಿಯನ್ನು ಈಜುವ ಸಾಹಸಕ್ಕೆ ತೊಡಗದೇ ಆಚಾರ-ವಿಚಾರ, ಕ್ರಿಯೆ-ಕಲ್ಪನೆಗಳಿಗೆ ಸಂಬಂಧಿಸಿದಂತೆ, ಮಾನವನು ಅಳವಡಿಸಿಕೊಂಡ ಆಂತರಿಕ ಮತ್ತು ಬಾಹ್ಯವ್ಯಕ್ತಿತ್ವದ ವಿಚಾರಗಳಿಗೆ ಮಾತ್ರ ಇಲ್ಲಿ ಒತ್ತು ಕೊಡಲಾಗಿದೆ. ನಿತ್ಯ ಜೀವನದಲ್ಲಿ ಅನ್ಯ ವ್ಯಕ್ತಿಯೊಂದಿಗೆ ಸಮೂಹದೊಂದಿಗೆ ಆತ ಇರಿಸಿಕೊಂಡ ನಿಕಟ ಸಂಪರ್ಕದಲ್ಲಿ ಬಂಗಾರದ ಎಳೆಯಂತೆ ಮಿಂಚುವ ವಿಧಿ ನಿಷೇಧಾತ್ಮಕ ನಂಬಿಕೆಗಳ ಸಂಗ್ರಹ ಹಾಗೂ ವಿಶ್ಲೇಷಣೆ ಪ್ರಬಂಧದ ಪ್ರಮುಖ ಉದ್ದೇಶವಾಗಿದೆ.

ಮದುವೆ, ಗೃಹಜೀವನ, ಗರ್ಭಿಣಿ, ಕೂಸು, ಉಡುಗೆ -ತೊಡುಗೆ, ಹಬ್ಬ -ಹರಿದಿನ, ವಾರ -ನಕ್ಷತ್ರ, ಊಟ, ಯಾತ್ರೆ, ಪೂಜೆ, ನಿದ್ರೆ, ಕನಸು, ಆವಯವ, ರೋಗ, ಸುಳಿ ಶುಭಾ- ಶುಭಗಳ ಕಲ್ಪನೆ, ಶಕುನ ಹಾಗೂ ಶವ ಇವೇ ಮುಂತಾದ ವಿಷಯಗಳನ್ನೊಳಗೊಂಡ ಭಾವನಾತ್ಮಕ ಮಾನವ ಸಂಬಂಧಿ ನಂಬಿಕೆಗಳ ವಿಶ್ಲೇಷಣೆಯನ್ನು ಪ್ರಬಂಧದ ವ್ಯಾಪ್ತಿಯಲ್ಲಿ ಅಳವಡಿಸಿಕೊಂಡಿರುವೆನು.

ಪ್ರಾಚೀನ ಕಾಡುಮಾನವನಿಂದ ಇತ್ತೀಚಿನ ನಾಡು ಮಾನವನವರೆಗೆ ಆಯಾ ಕಾಲಘಟ್ಟದ ಪರಿಜ್ಞಾನಕ್ಕೆ ತಕ್ಕಂತೆ ನಿತ್ಯ ಜೀವನದ ಆಚರಣೆಯ ಸತ್ಯ ಸಂಗತಿಗಳಾಗಿ ಮಾನವ ನಿಷ್ಠ ನಂಬಿಕೆಗಳು ಜನ್ಮ ತಾಳುತ್ತಲೇ ಬಂದಿವೆ. ನಂಬಿಕೆಯ ಬೆಸುಗೆಯಿಂದಲೇ ಪರಸ್ಪರ ಮಾನವ ಸಂಬಂಧದ ಕೊಂಡಿ ಗಟ್ಟಿಗೊಳ್ಳುತ್ತಲಿದೆಯೆಂಬುದಕ್ಕೆ ಮಾನವನ ನಿತ್ಯ ಜೀವನವೇ ಸಾಕ್ಷಿಯಾಗಿದೆ. ಪ್ರಬುದ್ಧ ಧರ್ಮಗಳು ಬೆಳಕಿಗೆ ಬರುವ ಮುನ್ನ ನೈಸರ್ಗಿಕ ಧರ್ಮ ಮಾನವನನ್ನು ನಿಯಂತ್ರಿಸುತ್ತ ಬಂದ ಸಂಗತಿ ಇತಿಹಾಸದಿಂದ ತಿಳಿದುಬರುತ್ತದೆ. ಈ ನೈಸರ್ಗಿಕ ಶಕ್ತಿಯ ಪ್ರಭಾವದಿಂದ ಅತಿಮಾನುಷ ಶಕ್ತಿಯ ಭಯಕ್ಕೊಳಗಾದ ಗತಕಾಲದ ಮಾನವ ಸಿಡಿಲು, ಮಿಂಚು, ಗಾಳಿ, ಬೆಂಕಿ ಮುಂತಾದ ನೈಸರ್ಗಿಕ ಶಕ್ತಿಗಳಿಂದ ಭಯಗೊಂಡು, ಅವುಗಳನ್ನು ದೈವತ್ವಕ್ಕೇರಿಸಿ ಪೂಜಿಸಲು ಪ್ರಾರಂಭಿಸಿದನೆಂದು ಕಾಣಿಸುತ್ತದೆ. ಈ ನೈಸರ್ಗಿಕ ನಂಬಿಕೆಗಳೇ ಶಕುನ ರೂಪದಲ್ಲಿ ಧಾರ್ಮಿಕ ನಿಯಮಗಳನ್ನು ಅಳವಡಿಸಿಕೊಂಡು, ಶಿಷ್ಟ ಸಂಪ್ರದಾಯಕ್ಕೆ ತಿರುಗಿ ಜ್ಯೋತಿಷ್ಯ ಸೃಷ್ಟಿಯಾಗಿರಬೇಕು. ಜ್ಯೋತಿಷ್ಯ ಮಾನವನ ಶ್ರೇಯೋಭಿವೃದ್ಧಿಗೆ ಪೂರಕ ಹಾಗೂ ಮಾರಕವಾದ ಮಾಹಿತಿಯನ್ನು ಒದಗಿಸುವ ಮಾನವ ಸಂಬಂಧಿ ನಂಬಿಕೆಗಳ ವಿಶ್ವಕೋಶವೆಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ಶಿಷ್ಟರ ಜೋತಿಷ್ಯ, ಸಾಮಾನ್ಯರ ಶಕುನ ಹಾಗೂ ಜಾನಪದೀಯರ ಶಾಸ್ತ್ರ ಇವೇ ಮುಂತಾದವುಗಳ ಸಂಪರ್ಕ ಪಡೆದು ಮಾನವ ಸಂಬಂಧಿ ನಂಬಿಕೆಗಳು ವೈವಿಧ್ಯಮಯ ಸಂಸ್ಕಾರಕ್ಕನುಗುಣವಾಗಿ ಸಾಮೂಹಿಕ ಬೆಳವಣಿಗೆ ಪಡೆದು, ರಾಶಿರಾಶಿಯಾಗಿ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿವೆ. ಮಾನವ ಸಂಬಂಧಿ ನಂಬಿಕೆಗಳು ಬುದ್ಧಿಪೂರ್ವಕವಾಗಿ ಆಲೋಚನಾ ಹಂತಗಳನ್ನೇರಿ ಹೃದಯದಿಂದ ಮೂಡಿಬಂದ ಮಾನವ ಜೀವನದ ನಿತ್ಯನೇಮಗಳಾಗಿವೆ. ವೈಜ್ಞಾನಿಕ ಸತ್ಯ ಹಾಗೂ ಸಾಮಾನ್ಯ ತಿಳುವಳಿಕೆಗಳಿಂದ ಮಾನವನ ಅಂಧಶೃದ್ಧೆಯನ್ನು ತಿದ್ದುವದರೊಂದಿಗೆ, ಇವು ಅವರ ಚಿತ್ರಮಯ ಬದುಕಿಗೆ ಬರೆದಿಟ್ಟ ಸಚಿತ್ರ ಶಾಸನಗಳಾಗಿವೆ. ತಟ್ಟಿದರೆ ಶಿಕ್ಷೆ ಎನ್ನುವ ರೀತಿಯಲ್ಲಿ ಸಮಾಜದ ಬಹುಪಾಲು ಜನರು ಮುಚ್ಚುಮರೆಯಿಲ್ಲದೆ ಬಹು ಎಚ್ಚರಿಕೆಯಿಂದ ಇವುಗಳನ್ನು ಪಾಲಿಸುತ್ತ ಬಂದಿರುವರು.

ಮಾನವ ಸಂಬಂಧಿ ನಂಬಿಕೆಗಳು ವರ್ಗೀಕರಣ: ಜನಪದ ನಂಬಿಕೆಗಳ ವ್ಯವಸ್ಥಿತ ಅಧ್ಯಯನಕ್ಕೆ ವಿಷಯಾನುಕ್ರಮ ವರ್ಗೀಕರಣ ಅಗತ್ಯ. ಪಾಶ್ಚಾತ್ಯ ಹಾಗೂ ಭಾರತೀಯ ವಿದ್ವಾಂಸರು ಜನಪದ ನಂಬಿಕೆಗಳನ್ನು ಕ್ರಮಬದ್ಧವಾಗಿ ವರ್ಗೀಕರಿಸಲು ಪ್ರಯತ್ನಿಸಿರುವರು.

ಆರ್. ಎಸ್. ಬಾಗ್ಸ್ ಅವರು ಒಟ್ಟು ಜಾನಪದವನ್ನು -ಪುರಾಣ, ಐತಿಹ್ಯ, ಪದ್ಧತಿ ಮಾಂತ್ರಿಕತೆ, ವೈದ್ಯ ಮತ್ತು ಕಾಲಜ್ಞಾನವೆಂದು ವರ್ಗೀಕರಿಸಿದ್ದು, ಇಲ್ಲಿ ಮಾನುಷ ಸಂಬಂಧಿ ನಂಬಿಕೆಗಳು ವೈದ್ಯ ಮತ್ತು ಪದ್ಧತಿ ಎಂಬ ಭಾಗಗಳಲ್ಲಿ ಹೆಚ್ಚು ಸೇರುತ್ತವೆ.

ರಾ. ಗೌ. ಅವರು ಒಟ್ಟು ನಂಬಿಕೆಗಳನ್ನು – ಪ್ರಾಕೃತಿಕ, ಕೌಟುಂಬಿಕ ರೋಗನಿವಾರಕ ಹಾಗೂ ಅತಿಮಾನುಷ ನಂಬಿಕೆಗಳು ಎಂದು ವರ್ಗೀಕರಿಸಿದ್ದು ಇಲ್ಲಿ ಬಹುಪಾಲು ವ್ಯಕ್ತಿನಿಷ್ಠ ನಂಬಿಕೆಗಳು ವರ್ಗೀಕರಣದಿಂದ ಹೊರಗುಳಿಯುವ ಸಂಭವವಿದೆ.

‘ಡಿ. ಕೆ. ರಾಜೇಂದ್ರ’ ಅವರು ದೇವರು, ದೆವ್ವ, ಮದುವೆ, ಕನಸು ಮುಂತಾಗಿ ಹನ್ನೆರಡು ಭಾಗಗಳನ್ನಾಗಿ ಒಟ್ಟು ನಂಬಿಕೆಗಳನ್ನು ಒಡೆದಿದ್ದು, ವರ್ಗೀಕರಣ ಸುದೀರ್ಘವಾಗಿದ್ದರೂ, ಅಧ್ಯಯನದ ಅನುಕೂಲಕ್ಕೆ ಪೂರಕವೆಂದೇ ಹೇಳಬೇಕು.

ಅದೇನೇ ಇದ್ದರೂ ನಂಬಿಕೆಗಳು ಹುಟ್ಟಿದ ಸಂದರ್ಭಗಳನ್ನು ಅವಲೋಕಿಸಿ, ಅವುಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡುವದೇ ಯೋಗ್ಯವೆನಿಸುತ್ತದೆ. ಕೆಲವು ನಂಬಿಕೆಗಳು ಅಪ್ರಯತ್ನಪೂರ್ವಕವಾಗಿ ಹುಟ್ಟಿನಿಂದಲೇ ಬಂದಿದ್ದರೆ, ಇನ್ನೂ ಕೆಲವು ಸತತಾಭ್ಯಾಸ ಬಲದಿಂದ ಆಲೋಚನಾ ಪರವಾಗಿ ಜನ್ಮತಾಳಿದವು. ಈ ದಿಶೆಯಲ್ಲಿ ಮಾನವ ಸಂಬಂಧಿ ನಂಬಿಕೆಗಳನ್ನು ಆಲೋಚನಾಪರವಾದ ವಿಭಾಗದಲ್ಲಿ ಸೇರಿಸುವದೇ ಕ್ಷೇಮ.

ಅಧ್ಯಯನದ ಅನುಕೂಲಕ್ಕಾಗಿ ಮಾನವಸಂಬಂಧಿ ನಂಬಿಕೆಗಳನ್ನು (೧) ದೈಹಿಕ ನಂಬಿಕೆಗಳು (೨) ಬೌದ್ಧಿಕ ನಂಬಿಕೆಗಳು ಎಂದು ವರ್ಗೀಕರಿಸಬಹುದು. ಮೊದಲನೆಯದು ವ್ಯಕ್ತಿನಿಷ್ಠವಾಗಿ ಹೊರಗಣ್ಣಿಗೆ ಹೊಳೆಯುವಂತಹುದಾದರೆ, ಎರಡನೆಯದು ಗುಣನಿಷ್ಠವಾಗಿ ಒಳಗಣ್ಣಿಗೆ ಹೊಳೆಯುವಂತಹುದು, ಒಂದು ದೇಹ ಸಂಬಂಧಿಯಾದರೆ, ಇನ್ನೊಂದು ಮನೋಸಂಬಂಧಿಯಾಗಿದೆ.

. ದೈಹಿಕ ನಂಬಿಕೆಗಳು : ಅಡಿಯಿಂದ ಮುಡಿಯವರೆಗೆ ಮಾನವ ದೇಹದ ವಿವಿಧ ಅವಯವಗಳಿಗೆ ಸಂಬಂಧಿಸಿದ ಎಲ್ಲ ನಂಬಿಕೆಗಳೂ ಇದರಲ್ಲಿ ಸೇರುತ್ತವೆ. ಜನಪದೀಯರು ತಮ್ಮ ಇಷ್ಟಾನಿಷ್ಟಗಳನ್ನು ದೇಹದ ಆಕಾರ, ಬಣ್ಣ ಹಾಗೂ ಅವಯವಗಳನ್ನು ಲಕ್ಷಿಸಿ ನಿರ್ಧರಿಸುತ್ತ ಬಂದಿರುವರು. ಅಜ್ಞಾನದ ದ್ಯೋತಕವಾಗಿ ಅರ್ಥವಿಲ್ಲದ ಕೆಲ ನಂಬಿಕೆಗಳು ಆಚರಣೆಯಲ್ಲವೆಯಾದರೂ, ಬಹುಪಾಲು ನಂಬಿಕೆಗಳು ಮಾನವನ ಪ್ರಗತಿಗೆ ಪೂರಕವಾಗಿದ್ದು, ನಾಗರಿಕತೆಯ ತುಟ್ಟಿ ತುದಿ ಏರಿದವರಿಗೂ ಅನುಕರಣೀಯವಾಗಿವೆ.

ಸತ್ಯ ನಿಯಮಗಳ ಮೂಲಕ ಮಾನವನ ನಿತ್ಯ ಜೀವನವನ್ನು ನಿಯಂತ್ರಿಸುವಲ್ಲಿ ಇವು ದಂಡಧಾರಿ ಗುರುವಿನ ಆಜ್ಞೆಯಂತೆ ಕಂಗೊಳಿಸುತ್ತವೆ. ಇಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದ ಆರೋಗ್ಯದಾಯಕ ನಂಬಿಕೆಗಳು ಕೆಲವಾದರೆ, ಆಪತ್ಸನ್ನು ತಪ್ಪಿಸಲು ನಿಷೇಧ ಒಡ್ಡುವ ನಂಬಿಕೆಗಳು ಕೆಲವು-ಕಾಲನ್ನು ಕುರಿತ ಕೆಲ ನಂಬಿಕೆಗಳನ್ನು ನಿದರ್ಶಕ್ಕೆಂದು ಇಲ್ಲಿ ಉದಾಹರಿಸಬಹುದು.

“ಕಂಬಕ್ಕೆ ಒಂಟಿ ಕಾಲಿನಿಂದ ನಿಲ್ಲಬಾರದು ಅದು ಲಕ್ಷ್ಮಿಯ ಸಮಾನ” ಸುರಕ್ಷತೆಯನ್ನು ಆಧರಿಸಿ ಹುಟ್ಟಿದ ನಂಬಿಕೆಯಿದಾಗಿದೆ. ಮೇಲ್ಮಾಳಗಿಯ ಭಾರವನ್ನು ತೊಲೆಗಳು ಹೊತ್ತಿದ್ದರೂ, ತೊಲೆಯ ಭಾರ ಕಂಬದ ಮೇಲಿರುತ್ತದೆ. ಕಂಬಕ್ಕೆ ಕಾಲುಕೊಟ್ಟು ಜೀಕುವದರಿಂದ ಕಂಬ ಅಂತರಿಸಿ, ತೊಲೆ ಸರಿದು, ಮೇಲ್ಮಾಳಗಿ ಕುಸಿಯುವ ಸಂಭವವುಂಟೆಂಬ ಎಚ್ಚರಿಕೆಯನ್ನು ನೀಡುವುದೇ ಈ ನಂಬಿಕೆಯ ಉದ್ದೇಶ. ಮನೆಗೆ ಮೂಲ ಆಧಾರವಾದ ಕಂಬವನ್ನು ಸದಾಕಾಲ ನಿಂತು ಕಾಯುವದು ಅಸಾಧ್ಯವೆಂದರಿತ ಜನಪದ ಆಧ್ಯಾತ್ಮಿಕ ಮನಸ್ಸು, ಕಂಬಕ್ಕೆ ‘ಲಕ್ಷ್ಮೀ’ ಎಂದು ಹೆಸರಿಸಿ ಕಾಲು ಕೊಟ್ಟ ಜೀಕುವಂತವರನ್ನು ಹಣೆ ಹಚ್ಚಿ ನಮಸ್ಕರಿಸುವಂತೆ ಮಾಡಿದೆ.

“ಮಲಗುವಾಗ ಕಾಲನ್ನು ಚಕಲ್ ಬಕಲ್ ಹಾಕಿ ಮಲಗಬಾರದು” ಇಲ್ಲಿ ಅಮಂಗಳ ಭಾವ ನಂಬಿಕೆಗೆ ಗ್ರಾಸ ಒದಗಿಸಿದೆ. (ಚಕಲ್ ಬಕಲ್ ಎಂದರೆ ಒಂದರ ಮೇಲೊಂದು ಕಾಲು ಹಾಕಿ ಊಟಕ್ಕೆ ಕುಳಿತುಕೊಳ್ಳುವ ಸ್ಥಿತಿಯೆಂದು ಭಾವಿಸಿಕೊಳ್ಳಬೇಕು) ಯಾರಾದರೂ ಸತ್ತಾಗ ಒಂದರ ಮೇಲೊಂದು ಕಾಲು ಮಡಚಿಕಟ್ಟಿ ಗೂಟಕ್ಕೆ ಕೂಡಿಸುವ ಪರಂಪರೆಯಿದೆ. ಸುಡಗಾಡಕ್ಕೆ ಒಯ್ಯುವ ಚಟ್ಟದ ಮೇಲೆ ಮಲಗಿಸುವಾಗಲು ಕೆಲವು ಕಡೆಗೆ ಅದೇ ಸ್ಥಿತಿಯಲ್ಲಿ ಮಲಗಿಸುತ್ತಾರೆ. ಅದಕ್ಕಾಗಿ ಇದು ಅಶುಭ ಕಲ್ಪನೆಯಾದುದರಿಂದ ಹಾಗೆ ಮಲಗಬಾರದು ಎಂದು ಹೇಳುವರು. ಈ ಸ್ಥಿತಿಯಲ್ಲಿ ಬಹಳ ಹೊತ್ತು ಮಲಗಿ ಎದ್ದಾಗ ಮೊಳಕಾಲು ನೋವಾಗಿ, ಕಾಲಿನ ಕೀಲು ಹಿಡಿಯುವ ಸಂಭವವೂ ಉಂಟು. ದೇಹದ ತೊಂದರೆಯನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಇಂಥ ನಂಬಿಕೆಗಳು ಹುಟ್ಟಿರಬೇಕು.

“ಅಂಗಾಲು ಕಾಪಿದರೆ ಬಡತನ ಬರುತ್ತದೆ”

“ಅಂಗಾಲು ಸವರಿದರೆ ಭೂತ ಬಡೆದುಕೊಳ್ಳುತ್ತದೆ” ಎನ್ನುವಲ್ಲಿ ಕ್ರಮವಾಗಿ ಬೆಂಕಿಯಿಂದ ಹಾಗೂ ಮುಳ್ಳುಗಳಿಂದ ಅಂಗಾಲಿಗೆ ಆಗುವ ಅನಾಹುತವನ್ನು ತಪ್ಪಿಸಲು ‘ಭೂತ’ದ ಭಯವನ್ನು ಸೂಚಿಸಿರಬೇಕು. ಇವು ಕಾಲಿಗೆ ಸಂಬಂಧಿಸಿದ ಸಂರಕ್ಷಣಾತ್ಮಕ ನಂಬಿಕೆಗಳಾದರೆ ಇನ್ನು ಕೆಲವು ಅರ್ಥವಿಲ್ಲದ ನಂಬಿಕೆಗಳು ರೂಢಿಯಲ್ಲಿವೆ. ಉದಾ. ‘ಸಪಾಟ ಅಂಗಾಲಿನವಳನ್ನು ಮದುವೆಯಾದರೆ ಮನೆ ಬರಿದಾಗುವದು’ “ಕಾಲಲ್ಲಿ ನಾಯಿಗೆರೆ ಇದ್ದವರು ನಾಲ್ಕು ದಿಕ್ಕುಗಳಲ್ಲಿ ತಿರುಗುವರು” “ಹೆಣ್ಣು ಮಕ್ಕಳ ಬುದ್ಧಿ ಮೊಳಕಾಲ ಕೆಳಗೆ” ಇಂಥ ನಂಬಿಕೆಗಳಲ್ಲಿ ಯಾವ ಅರ್ಥವೂ ಇಲ್ಲ. ಸಪಾಟ ಅಂಗಾಲು ಹಾಗೂ ಬಡತನಕ್ಕಾಗಲಿ, ಅಂಗಾಲಲ್ಲಿಯ ಗೆರೆ ಹಾಗೂ ಅತಿ ತಿರುಗುವದಕ್ಕಾಗಲಿ ಯಾವ ಸಂಬಂಧವೂ ಇದ್ದಂತಿಲ್ಲ. ಇಂಥ ನಂಬಿಕೆಗಳನ್ನು ರೂಢಿಸಿಕೊಂಡು ಹೆಣ್ಣು ಹುಡುಕುವವರು ಅಂಗಾಲ ಪರೀಕ್ಷೆ ತೊಡಗುವ ಅಗತ್ಯವೂ ಇಲ್ಲ.

ಮಾನವನ ಕಣ್ಣು ಹಾಗೂ ಕೈಗಳಿಗೆ ಸಂಬಂಧಿಸಿದಂತೆ ಅತಿ ಹೆಚ್ಚು ನಂಬಿಕೆಗಳು ಹುಟ್ಟಿಕೊಂಡಿವೆ. ನೋಟ ಮಾಟಕ್ಕೆ ಸಂಬಂಧ ಪಟ್ಟ ಈ ಅವಯವಗಳ ಬಗ್ಗೆ ಮಾನವನಿಗೆ ಇರುವ ಪ್ರೀತಿ ವಿಶ್ವಾಸವೇ ಇದಕ್ಕೆ ಕಾರಣವಾಗಿರಬೇಕು. ನಿತ್ಯ ಜೀವನದಲ್ಲಿ ಇವುಗಳ ಅಗತ್ಯ ಮತ್ತು ಅನಿವಾರ್ಯತೆಯನ್ನು ಕಂಡುಕೊಂಡ ಮಾನವ, “ರೂಪಕ್ಕೆ ಕಣ್ಣು ಮುಂದು, ಕಾರ್ಯಕ್ಕೆ ಕೈ ಮುಂದು” ಎಂಬಂತೆ ದೈನಂದಿನ ಬದುಕಿನಲ್ಲಿ ಅವುಗಳಿಗೆ ಅಗ್ರ ಸ್ಥಾನ ನೀಡಿರುವನು. ‘ಕಣ್ಣು ನೋಡಿ ರೂಪ ಗುರುತಿಸುವುದು, ಭುಜ ನೋಡಿ ಪೌರುಷ ಗುರುತಿಸುವುದು ಜನಪದ ಸಾಹಿತ್ಯದಲ್ಲಿ ಕಂಡು ಬರುವ ಸಹಜ ಕ್ರಿಯೆಗಳಾಗಿವೆ. ‘ಕಿವಿ ಇಂಗಿ ಇರಬೇಕು, ಕಣ್ಣು ಹೋಗಿ ಇರಬಾರದು’, ಎಂಬ ಮಾತು ನಿತ್ಯ ಜೀವನದಲ್ಲಿ ಕಣ್ಣಿನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಅಂಗಗಳ ಕುರಿತು ಕೆಲ ನಿದರ್ಶನಗಳನ್ನು ಇಲ್ಲಿ ನೋಡಬಹುದು.

“ತಿನ್ನುವಾಗ ಯಾರಾದರೂ ನೋಡಿದರೆ ಕಣ್ಣು ಕುಟರೆಯಾಗುತ್ತದೆ” ಎಂಬುದು ಒಂದು ಸಾಮಾನ್ಯ ನಂಬಿಕೆಯಾಗಿದೆ. ಅಂದರೆ ತಿನ್ನುವವರು ನೋಡುವವರಿಗೆ ಕೊಟ್ಟು ತಿನ್ಲಿ ಎಂಬುದೇ ಇಲ್ಲಿಯ ಪ್ರಮುಖ ನೀತಿಯಾಗಿದೆ. ಇದನ್ನೇ ‘ತಿರಕೊಂಡು ಬಂದರೂ ಕರಕೊಂಡು ಉಣಬೇಕು’ ಎಂದೂ ಹೇಳುತ್ತಾರೆ. ಇದ್ದುದನ್ನು ಹಂಚಿಕೊಂಡು ಉಣ್ಣಲಿ ಎಂಬ ಸದುದ್ದೇಶದಿಂದ ಮನುಷ್ಯನಲ್ಲಿ ಮಾನವೀಯ ಗುಣವನ್ನು ತುಂಬುವ ಸಲುವಾಗಿ ಹಿರಿಯರು ‘ಕಣ್ಣು ಕುಟರೆ’ ಬರುತ್ತದೆಯೆಂದು ಹೆದರಿಸಿರಬಹುದೇ ವಿನಃ ಮತ್ತೇನು ವಿಶೇಷತೆ ಇಲ್ಲಿ ಕಂಡುಬರುವದಿಲ್ಲ.

“ಕಣ್ಣು ಕುಟರೆಯಾದಾಗ ಕೆಂಪು ಹಂಚು ತೇದು ಹಚ್ಚಬೇಕು ಇಲ್ಲವೆ ಕೋಳಿಯ ಕಸ ಹಚ್ಚಬೇಕು” ಇದು ಯೋಗ್ಯವಾದ ಜನಪದ ವೈದ್ಯವೆಂದೇ ಹೇಳಬೇಕು. ಸ್ವಚ್ಛಯುತ ಆಹಾರದ ಕೊರತೆ ಹಾಗೂ ನಿದ್ರೆಯ ಅಭಾವದಿಂದ ಕಣ್ಣು ಕುಟರೆಯಾಗುವದುಂಟು. ಗ್ರಂಥಿಗಳಿಂದ ಸುತ್ತುವರೆಯಲ್ಪಟ್ಟ ಕಣ್ಣು ರೆಪ್ಪೆಯ ಕೆಳಭಾಗದಲ್ಲಿ ಗುಳ್ಳಿಗಳಾಗುತ್ತವೆ. ಕೆಂಪು ಹಂಚು ತೆಯ್ದು ಇಲ್ಲವೇ ಕೋಳಿಯಕಸವನ್ನು ಹಚ್ಚಿದ ಕೆಲ ಸಮಯದ ನಂತರ, ಲೇಪನ ಒಣಗಿ, ಗುಳ್ಳಿ ಬಿಗಿತಕ್ಕೊಳಗಾಗಿ ಒಡೆಯುವದರಿಂದ ಕೀವು ಹಾಗೂ ಕೆಟ್ಟ ರಕ್ತ ಸೋರಿ ಹೋಗಿ, ನೋವು ಶಮನವಾಗಿ ಗಾಯ ಬೇಗ ಮಾಯುತ್ತದೆಯೆಂಬ ಹಿನ್ನೆಲೆಯಲ್ಲಿ ಈ ನಂಬಿಕೆ ಹುಟ್ಟಿರಬೇಕು.

“ಗಂಡಿನ ಬಲಗಣ್ಣು ಹಾಗೂ ಬಲಭುಜ ಅದಿರಿದರೆ ಶುಭವಾಗುವದು”
“ಹೆಣ್ಣಿಗೆ ಎಡಗಣ್ಣು ಅದಿರಿದರೆ ಶುಭವಾಗುವದು”

ಉಪ್ಪು ತುಳಿದರೆ ಕಣ್ಣು ಕುರುಡಾಗುವವು ಇಂಥ ಕೆಲ ನಂಬಿಕೆಗಳು ಉಪಯುಕ್ತವೆಂದೇ ಹೇಳಬೇಕು. ಉಪ್ಪಿನಲ್ಲಿ ಅನ್ನದ ಸಾರವನ್ನು ಹೆಚ್ಚಿಸುವ ಗುಣವಿದೆ. ಅದಕ್ಕಾಗಿ ‘ಉಪ್ಪಿಗಿಂತ ರುಚಿಯಿಲ್ಲ, ಎಂಬ ಮಾತು ಜನಭರಿತವಾಗಿದೆ. ಅನ್ನದ ಬಗ್ಗೆ ಇರುವ ಭಕ್ತಿ ಉಪ್ಪಿನ ಮೇಲೆಯೂ ಇರಬೇಕೆಂಬ ಬೋಧನೆ ಮಾಡುವಾಗ ಕಣ್ಣು ಕುರುಡಾಗುವವು’ ಎಂಬ ಬೆದರಿಕೆ ಹಾಕಿರಬೇಕು. ಅನ್ನದೇವರೆಂಬಂತೆ ಉಪ್ಪಿನ ಬಗ್ಗೆಯೂ ದೈವೀಕಲ್ಪನೆ ಕುದುರಿಸುವದಕ್ಕಾಗಿ ಈ ಹಿತೋಕ್ತಿ ನಂಬಿಕೆಯ ರೂಪಧರಿಸಿ ಬಳಕೆಗೆ ಬಂದಿರಬೇಕು.

ಕಣ್ಣನ್ನು ಕುರಿತ ಕೆಲ ಮೂಢನಂಬಿಕೆಗಳನ್ನು ಈ ಕೆಳಗಿನಂತೆ ಉದಾಹರಿಸಬಹುದು.

‘ಹುಬ್ಬಿನ ಕೂದಲು ಕೂಡಿದರೆ ನಪೂಂಸಕರಾಗುವರು” ‘ಮೆಳ್ಳಗಣ್ಣಿನ ಸೊಸೆ ಇದ್ದರೆ ಮನೆ ಏರುತ್ತದೆ’ “ಕರಿಕಣ್ಣಿನ ಹೆಣ್ಣನ್ನು ಮದುವೆಯಾದರೆ ಮಸಣ ಸಮೀಪ” ಇವೆಲ್ಲ ಕಣ್ಣನ್ನು ಕುರಿತ ರೂಢಿಯಲ್ಲಿರುವ ಅರ್ಥವಿಲ್ಲದ ನಂಬಿಕೆಗಳು.

ಕಾಯಕ ಮಾಡುವ ಕೈಗಳ ಬಗ್ಗೆ ಜನಪದೀಯರಲ್ಲಿ ಎಲ್ಲಿಲ್ಲದ ಅಭಿಮಾನ. ಸಮರ್ಥ ರೀತಿಯಲ್ಲಿ ಚಿಕಿತ್ಸೆ ನೀಡುವ ವೈದ್ಯರನ್ನು ಅವರ ಚಿಕಿತ್ಸೆಯ ರೀತಿಯನ್ನು ಗಮನಿಸದೇ ‘ಕೈಗುಣ ಒಳ್ಳೆಯದು’ ಎಂದು, ಕೊಟ್ಟ ದುಡ್ಡು ಮರಳಿ ಬರದಾದಾಗ ‘ಕೈಗುಣ್ಣ ಕೆಟ್ಟದ್ದು’ ಎಂದು ತೀರ್ಮಾನಿಸುವಲ್ಲಿ ‘ಕೈ’ ಮೊದಲ ಮಾತಾಗಿ ಬರುತ್ತದೆ ಈ ಅಂಗವನ್ನು ಕುರಿತು ಸಾಕಷ್ಟು ನಂಬಿಕೆಗಳು ರೂಢಿಯಲ್ಲಿವೆ.

“ತಲೆಯ ಮೇಲೆ ಕೈಹೊತ್ತು ಕುಳಿತರೆ ಬಡತನ ಬರುತ್ತದೆ” ‘ಕೈಕಟ್ಟಿ ಕುಳಿತಕೊಂಡರೆ ದಾರಿರ್ದ್ಯ ಅಪ್ಪಳಿಸುತ್ತದೆ’ ಎಂಬ ನಂಬಿಕೆಗಳು ಚಿಂತೆ ಹಾಗೂ ದಾರಿರ್ದ್ಯದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದು, ಕೆಲಸ ಮಾಡುವ ಕೈಗಳನ್ನು ಬಂಧಿಸಿ ಕೂಡುವುದು ಒಳ್ಳೆಯದಲ್ಲ. ಕಾರ್ಯಶೀಲನಾಗು, ಕ್ರಿಯಾಶೀಲತೆಯಿಂದ ಏನೆಲ್ಲವನ್ನೂ ಪಡೆಯಲು ಸಾಧ್ಯವೆಂಬ ಪರೋಕ್ಷ ಬೋಧನೆ ಇಂಥ ನಂಬಿಕೆಗಳಿಗೆ ಹಿನ್ನೆಲೆಯಾಗಿದೆ. ‘ಕೈಕೆಸರಾದರೆ ಬಾಯಿ ಮೊಸರು’ ಎಂಬ ನಾಣ್ಣುಡಿ ಇಂಥ ನಂಬಿಕೆಗಳಿಗೆ ಪೋಷಣೆ ನೀಡುವದು.

‘ಆಕಳಿಸುವಾಗ ಕೈಬೆರಳ ಚಟಕಿ ಹೊಡೆಯಬಾರದು’ ಆಕಳಿಕೆ ನಿದ್ರೆಯ ಸೂಚನೆಯನ್ನು ನೀಡುವದಾಗಿದೆ. ಬಾಯಿಗೆ ಅಂಗೈ ಮುಚ್ಚಿ ಆಕಳಿಸುವದು ಆರೋಗ್ಯದಾಯಕ ಲಕ್ಷಣ. ಆಕಳಿಸುವಾಗ ಏದುಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಡುವ ಕ್ರಿಯೆ ನಡೆಯುವದು. ಆಕಳಿಸುವ ವ್ಯಕ್ತಿ ರೋಗದಿಂದ ಬಳಲುವವನಾಗಿದ್ದರೆ, ಆತನ ಅಂತರಾಳದಿಂದ ಬರುವ ಬಿರುಸಿನ ಬಿಸಿಯುಸಿರು ಎದುರಿಗೆ ಕುಳಿತವರಿಗೆ ಬಡಿಯದಿರಲೆಂದು, ‘ಅಂಗೈಯಿಂದ ಬಾಯಿ ಮುಚ್ಚಿ ಆಕಳಿಸುವದು ಆರೋಗ್ಯದಾಯಕ’ ಎಂಬ ನಂಬಿಕೆ ರೂಢಿಯಲ್ಲಿ ಬಂದಿರಬೇಕು.

“ಆರು ಬಟ್ಟಿನ ಕೂಸು ಹುಟ್ಟಿದರೆ ಅನ್ನ ಹೆಚ್ಚುವದು.”
“ಮುತ್ತೈದೆಯರು ಮುಂಗೈಗೆ ಹಸಿರು ಬಳೆ ಧರಿಸಬೇಕು.”

ಎರಡೂ ಕೈಗಳಿಂದ ತಲೆ ತುರಿಸಬಾರದು ಇವೆಲ್ಲ ‘ಕೈ’ಯನ್ನು ಕುರಿತ ಆರೋಗ್ಯದಾಯಕ ನಂಬಿಕೆಗಳಾದರೆ, ಅರ್ಥವಿಲ್ಲದ ಕೆಲ ನಂಬಿಕೆಗಳನ್ನು ಈ ಕೆಳಕಂಡಂತೆ ಗುರುತಿಸಬಹುದು.

ಉದಾ.  “ಅಂಗೈ ತುರಿಸಿದರೆ ರೊಕ್ಕ ಖರ್ಚಾಗುವವು”
“ಹೆಣ್ಣು ಮಕ್ಕಳ ಕೈಮೇಲೆ ಕೂದಲು ಇದ್ದರೆ ಬೇಗನೆ ಅಮಂಗಲೆಯರಾಗುವರು.”

ಇಂಥ ನಂಬಿಕೆಗಳಿಗೆ ಅರ್ಥ ಹುಡುಕುವದು ಕಷ್ಟದ ಕೆಲಸವೆಂದೇ ಹೇಳಬೇಕು.

‘ಮೂಗು’, ಮುಖಕ್ಕೆ ಮೆರಗು ತರುವ ಪ್ರಮುಖ ಅಂಗ. ಅದು ನೀಟಾಗಿರಬೇಕೆಂಬುದೇ ಸರ್ವರ ಅಭಿಲಾಷೆ. ಸೌಂದರ್ಯವರ್ಣನೆಯ ಸಂದರ್ಭದಲ್ಲಿ ಮೂಗನ್ನು ಸಂಪಿಗೆ ಎಸಳಿಗೆ ಹೋಲಿಸಿ ಹೇಳುವ ಸನ್ನಿವೇಶಗಳು ಸಾಹಿತ್ಯದಲ್ಲಿ ವಿಪುಲವಾಗಿ ಬೆಳೆದು ಬಂದಿವೆ. ‘ಬಟ್ಟನ್ನು ಮುಖಕ್ಕೆ ನೆಟ್ಟನ್ನು ಮೂಗು’ ಎಂದು ಜನಪದ ಗೀತೆಗಳಲ್ಲಿ ವರ್ಣಿಸಲಾಗಿದೆ. ಅದಕ್ಕಾಗಿ ಎದ್ದು ಕಾಣುವ ಮೂಗು ಸೌಂದರ್ಯದ ಹೆಚ್ಚಳಕ್ಕೆ ಪೂರಕವೆಂಬ ಕಲ್ಪನೆಯಿಂದ ‘ಮೂಗು ಉದ್ದ ಇದ್ದವರು ಪುಣ್ಯವಂತರು’ ಎಂಬ ನಂಬಿಕೆ ಹುಟ್ಟಿಕೊಂಡಿದೆ. ಮೂಗಿಗೂ ಪುಣ್ಯವಂತರಾಗುವದಕ್ಕೂ ಯಾವುದೇ ಸಂಬಂಧವಿಲ್ಲದೇ ಹೋದರೂ ಸಹ, ಚಪ್ಪಟೆ ಮೂಗು ಸೌಂದರ್ಯವರ್ಧಕ ಅಲ್ಲವೆಂಬ ಬೋಧನೆಯನ್ನು ನಾವಿಲ್ಲಿ ಅರಿಯುತ್ತೇವೆ.

‘ದಂಡಿ ಕಟ್ಟುವ ಮೊದಲು ಹಣೆಗೆ ಮುಟ್ಟಿಸಿ ಕಟ್ಟಬೇಕು’ ಎಂಬುದು ಹಣೆಯ ಭಾಗದ ಉತ್ತಮಿಕೆಯನ್ನು ತಿಳಿಸಿಕೊಡುತ್ತದೆ. ಜನಪದೀಯ ಮನೋಭಾವದಲ್ಲಿ ‘ಹಣೆ’ ಆತ್ಮದ ಸಂಕೇತವೆಂಬ ಪವಿತ್ರ ನಂಬಿಕೆಯಿದೆ. ಪೂಜ್ಯರು ಅಕ್ಷತೆಯನ್ನು ಕೊಡುವಾಗ ಹಣೆಗೆ ಮುಟ್ಟಿಸಿಕೊಂಡು ಕೊಡುವದು. ಈ ಅಂಗದ ಹಿರಿಮೆಯ ದ್ಯೋತಕವಾಗಿದೆ. ‘ದಂಡೆ’ ಎಂಬುದು ಮದುವೆಯ ಸಂದರ್ಭದಲ್ಲಿ ಹೆಣ್ಣಿನ ತಲೆಗೆ ಕಟ್ಟುವ ಮಂಗಲ ವಸ್ತು ‘ಶಟಗೆವ್ವನ ಬರಹದ ಪವಿತ್ರ ತಾಣ ಹಣೆ’ ಎಂಬ ಕಲ್ಪನೆಯಿಂದ ಹಣೆಗೆ ಮುಟ್ಟಿಸಿ ಕಟ್ಟಿದ್ದಾದರೆ, ಗಂಡ ದೀರ್ಘಾಯುಷಿಯಾಗುವನು ಎಂಬ ಭಾವನೆ ಇದಕ್ಕೆ ಮೂಲ ನೆಲೆಯಾಗಿದೆ. ಹಾಗೆಯೇ ಹಣೆಯನ್ನು ಕುರಿತು ‘ಅಗಲ ಹಣೆಯಿದ್ದವರು ಪುಣ್ಯವಂತರು’ ಹಾಗೂ ‘ಹಣೆ ಅದರಿದರೆ ಲಕ್ಷ್ಮೀವಶ’ ಮುಂತಾದವುಗಳು ಶುಭ ಕಲ್ಪನೆಯನ್ನು ಹಿನ್ನೆಲೆಯನ್ನಾಗಿರಿಸಿಕೊಂಡು ಹುಟ್ಟಿದ ನಂಬಿಕೆಗಳಾಗಿವೆ.

‘ಹೆಣ್ಣು ಮಕ್ಕಳು ತಲೆಯ ಮೇಲಿನ ಸೆರಗು ತೆಗೆದು ತಿರುಗಬಾರದು’ ಎಂಬುದು ಫ್ಯಾಶನ್ನಿನ ಹೆಸರಿನಲ್ಲಿ ಹದಗೆಟ್ಟ ಸ್ತ್ರೀ ಸಂಸ್ಕೃತಿಯನ್ನು ತೋರಿಸಿಕೊಟ್ಟರೆ, ಗಂಡಿಗೆ ಎದೆಯ ಎಡಭಾಗದಲ್ಲಿ ಹಾಗೂ ಹೆಣ್ಣಿಗೆ ಎದೆಯ ಬಲಭಾಗದಲ್ಲಿ ಮಚ್ಚೆ ಇರಬಾರದು’ ಎಂಬವು ಲಕ್ಷೀಧಾತ್ಮಕ ನಂಬಿಕೆಗಳಾಗಿ ಬದುಕಿನಲ್ಲಿ ಹುದುಗಿಕೊಂಡಿವೆ.

ಕೂದಲನ್ನು ಕುರಿತು ಕೆಲ ನಂಬಿಕೆಗಳು ಪ್ರಚಲಿತವಾಗಿವೆ. “ಮೂಗಿನ ಹೊರಳಯಲ್ಲಿಯ ಕೂದಲನ್ನು ಕತ್ತರಿಸಬಾರದು” ಇದು ಆರೋಗ್ಯದಾಯಕ ನಂಬಿಕೆ. ಉಸಿರಾಟಕ್ಕೆ ಮೂಲ ಸಾಧನ ಮೂಗು, ಕಲುಷಿತವಾತಾವರಣದಲ್ಲಿಯ ಧೂಳಿಯ ಕಣಗಳು ಹಾಗೂ ರೋಗವರ್ಧಕ ಕ್ರಿಯೆಗಳು, ಒಳಗೆ ಹೋಗದೇ ತಡೆಯುವಲ್ಲಿ ಮೂಗಿನ ಕೂದಲು ಪ್ರಮುಖ ಪಾತ್ರ ವಹಿಸುವ ಹಿನ್ನೆಲೆ ಇದಕ್ಕಿರಬೇಕು. ಅಲ್ಲದೆ ಕೂದಲು ಕತ್ತರಿಸುವಾಗ ಮೂಗಿಗೆ ಗಾಯವಾಗಿ ಊನವಾಗಬಹುದೆಂಬ ಕಾರಣವೂ ಇರಬಹುದೆನಿಸುವದು.

‘ಹೆಣ್ಣು ಮಕ್ಕಳು ತಲೆಯ ಕೂದಲನ್ನು ಕತ್ತರಿಸಬಾರದು’ ಎಂಬಲ್ಲಿ ರೂಪರಾಶಿಗೆ ಕೇಶರಾಶಿಯೇ ಪೂರಕವೆಂಬ ನೈಜ ಕಲ್ಪನೆಯಿದ್ದು, ನಾಗರಿಕತೆಯ ಹೆಸರಿನಲ್ಲಿ ಹೆಣ್ಣಿನ ರೂಪ ಕುರೂಪವಾಗದಿರಲೆಂಬ ಹಿನ್ನೆಲೆಯಲ್ಲಿ ಇಂತ ನಂಬಿಕೆ ಹುಟ್ಟಿರಬೇಕು. ಹಾಗೆಯೇ ತಲೆ ಕೆದರಿಕೊಂಡು ಊಟ ಮಾಡಬಾರದು, ಹೊಟ್ಟೆಯ ಮೇಲಿನ ಕೂದಲು ಕತ್ತರಿಸಬಾರದು, ಇವೆಲ್ಲ ಕೂದಲಿಗೆ ಸಂಬಂಧಿಸಿದ ಇತರ ನಂಬಿಕೆಗಳಾಗಿವೆ.

‘ಬಾಯಿ’ಗೆ ಸಂಬಂಧಿಸಿದಂತೆ ಕೆಲ ನಂಬಿಕೆಗಳು ಹುಟ್ಟಿಕೊಂಡಿವಿ. ಉದಾ : “ಬಾಯಿ ತೆರೆದುಕೊಡು ಅಂಗಾತ ಮಲಗಬಾರದು” “ಬಾಚಣಿಕೆ ಬಾಯಲ್ಲಿಟ್ಟುಕೊಂಡರೆ ಬಾಯಬಸಳ್ ರೋಗ ಬರುತ್ತದೆ” ಬಾಯಬಸಳೆ ರೋಗ ಬಾಯಲ್ಲಿ ಬಾಚಣಿಕೆ ಇಡುವದರಿಂದ ಬರುವುದೆಂದು ಕೆಲ ಕಡೆಗೆ ನಂಬಿಕೊಂಡಿದ್ದಾದರೆ, ಎಂಜಲು ತಿಂದರೆ ಬರುವದಂದು ಮತ್ತೆ ಕೆಲವರು ನಂಬಿಕೆ. ಶರೀರಕ್ಕೆ ‘ಬಿ’ ಜೀವಸತ್ವದ ಕೊರತೆಯಾದಾಗ, ತುಟಿಯ ಒಳಭಾಗದಲ್ಲಿ ಹುಣ್ಣುಗಳು ಆಗಿ ಆ ಭಾಗದ ಚರ್ಮ ಬಿಳುಪಾಗುವುದು ಸಹಜ. ಅದಕ್ಕಾಗಿ ಅಗತ್ಯ ಜೀವಸತ್ವಗಳ ಕೊರತೆಯೇ ಇಂತಹ ರೋಗಕ್ಕೆ ಕಾರಣವೆಂದು ಹೇಳಬಹುದು. ಕೆಲವೊಮ್ಮೆ ಬಾಚಣಿಕೆಯಲ್ಲಿ ಹಿಕ್ಕಿಕೊಂಡ ಕೂದಲು ಹಾಗೇ ಉಳದಿರುವ ಸಂಭವವೂ ಉಂಟು. ಅಂತಹ ಸಂದರ್ಭದಲ್ಲಿ ಮಗು ಬಾಚಣಿಕೆಯನ್ನು ಬಾಯಲ್ಲಿ ಹಿಡಿದಾಗ, ಕೂದಲು ಹೊಟ್ಟೆಯಲ್ಲಿ ಹೋಗಿ ಅನಾರೋಗ್ಯಕ್ಕೆ ಕಾರಣವಾಗಬಹುದೆಂಬ ಹೆದರಿಕೆ ಈ ನಂಬಿಕೆಯಲ್ಲಿ ಬಲವಾಗಿದೆ.

“ಹಲ್ಲಿನಿಂದ ಉಗುರು ಕಡೆಯಬಾರದು ಹಾಗೆ ಕಡೆದರೆ ವಿಷವೇರುವದು” ಸತ್ಯದ ನೆಲಗಟ್ಟಿನ ಮೇಲೆ ನಿಂತ ನಂಬಿಕೆಯಿದಾಗಿದೆ. ಬೆರಳು ಮತ್ತೂ ಉಗುರಿನ ಮಧ್ಯದಲ್ಲಿ ಸ್ವಲ್ಪ ಸ್ಥಳಾವಕಾಶವಿದ್ದು, ಕೊಳಕು ಮತ್ತು ರೋಗ ಕ್ರಿಮಿಗಳು ಉಗುರಿನ ಒಳಗೆ ಸೇರಿರುವ ಸಾಧ್ಯತೆಗಳಿವೆ. ಉಗುರು ಕಡಿಯುವಾಗ ಆ ಕೊಳಕು ಹಲ್ಲಿನೊಂದಿಗೆ ಹೊಟ್ಟೆ ಸೇರುವ ಸಂಭವವೂ ಉಂಟು. ಹೀಗೆ ಆರೋಗ್ಯ ಸೂತ್ರದ ಹಿನ್ನೆಲೆಯಲ್ಲಿ ಈ ನಂಬಿಕೆ ಹುಟ್ಟಿಕೊಂಡಿರಬೇಕು.

“ಕತ್ತರಿಸಿದ ಉಗುರನ್ನು ಮನೆಯಲ್ಲಿ ಬಿಡಬಾರದು ಹಾವು ಚೇಳು ಬರುವವು” ಇದು ಒಪ್ಪುವ ಅಭಿಪ್ರಾಯವೇ ಆಗಿದ್ದು, ಚೂಪಾದ ಉಗುರುಗಳು ಕತ್ತರಿಸಿದ ನಂತರ ಮತ್ತಷ್ಟು ಬಿರುಸಾಗುವ ಗುಣವನ್ನು ಹೊಂದಿರುವದರಿಂದ, ನಡೆಯುವಾಗ ಪಾದಕ್ಕೆ, ಕುಳಿತುಕೊಳ್ಳುವಾಗ ಕುಂಡಿಗೆ ಚುಚ್ಚಿಕೊಳ್ಳಬಹುದು. ಅಂಬಾಗಾಲಿಕ್ಕಿ ಆಡುವ ಮಕ್ಕಳ ಮೃದುವಾದ ಚರ್ಮಕ್ಕಂತೂ ಗಾಯವಾಗಲೂ ಬಹುದು. ಉಗುರಿನ ಕೊಳಕಿನ ಜೊತೆ ರೋಗ ಕ್ರಿಮಿಗಳು ಇರುವದರಿಂದ ನಂಜಾಗುವ ಸಾಧ್ಯತೆಗಳೂ ಉಂಟು. ಅಲ್ಲದೇ ಅರಿಯದ ಮಕ್ಕಳು ಬಾಯಲ್ಲಿ ಹಾಕಿಕೊಂಡು ನುಂಗಿ ತೀವ್ರ ತೊಂದರೆಗೆ ಒಳಗಾಗಬಹುದು. ಅದಕ್ಕಾಗಿ ಮುಂಜಾಗೃತೆಯ ಕ್ರಮವಾಗಿ ‘ಚೇಳಿ’ನ ಭಯವನ್ನು ಹಾಕಿದ ಈ ನಂಬಿಕೆ, ಆರೋಗ್ಯದ ಗುಟ್ಟನ್ನು ಮೈಗೂಡಿಸಿಕೊಂಡಿದೆ. ಕೆಲವೊಮ್ಮೆ ಮಂತ್ರಗಾರರಿಗೆ ಹೀಗೆ ಕತ್ತರಿಸಿದ ಉಗುರು ಸಿಕ್ಕದ್ದಾದರೆ ಮಾಟ ಮಾಡುವ ಸಂಭವವೂ ಉಂಟೆಂದು, ಯಾರಿಗೂ ಗೊತ್ತಾಗದಂತೆ ಕತ್ತರಿಸಿದ ಉಗುರನ್ನು ಕಲ್ಲುಗಳ ಕೆಳಗೆ ಹೂತಿಡಬೇಕೆಂಬ ನಂಬಿಕೆಯೂ ಹುಟ್ಟಿಕೊಂಡಿದೆ.

ಊಟಕ್ಕೆ ಸಂಬಂಧಿಸಿದಂತೆ ಕೆಲ ನಂಬಿಕೆಗಳು ರೂಢಿಯಲ್ಲಿವೆ. ‘ಊಟ ಮಾಡದೇ ಮೈಚೆಲ್ಲಬಾರದು’, ‘ಊಟ ಮಾಡಿದ ಮೇಲೆ ಮೈ ಮುರಿಯಬಾರದು’ ಇವೆಲ್ಲ ಆರೋಗ್ಯ ದಾಯಕ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನಂಬಿಕೆಗಳಾಗಿವೆ. ಊಟ ಮಾಡದೇ ಮಲಗಿದ್ದಾರೆ ಎದೆ ಉರಿ, ಸಂಕಟ ನಿದ್ರಾಭಂಗತೆ, ಅಸ್ಪಷ್ಟ ಕನಸು ಹಾಗೂ ತಲೆನೋವು ಇವೇ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುವ ಸಂಭವ ಉಂಟು. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಅದರಲ್ಲಿಯೂ ವಿಶೇಷವಾಗಿ ಗರ್ಭಿಣಿಯರು ಬರಿಹೊಟ್ಟೆಯಲ್ಲಿ ಮಲಗುವದು ಒಳ್ಳೆಯದಲ್ಲವೆಂದು ಉಪದೇಶಿಸುವದುಂಟು. ಅದೇ ರೀತಿ ವ್ಯಕ್ತಿಯ ಬಗ್ಗೆ, ನಿಲುವು ಇವೇ ಮುಂತಾದ ವಿಷಯಗಳ ಕುರಿತು ಮಂಗಳ ಅಮಂಗಲ ಸೂಚಕ ನಂಬಿಕೆಗಳು ಜನಪದ ಜೀವನದಲ್ಲಿ ಜೀವಂತವಾಗಿವೆ.

. ಬೌದ್ಧಿಕ ನಂಬಿಕೆಗಳು : ಮಾನವನ ಆಂತರಿಕ ವ್ಯಕ್ತಿತ್ವಕ್ಕೆ ‘ಕ್ಷ’ ಕಿರಣ ಬೀರುವ ಈ ನಂಬಿಕೆಗಳು ಪ್ರಾಚೀನಕಾಲದಿಂದಲೂ ಭಾವನಾತ್ಮಕ ಸಂಬಂಧ ಹೊಂದಿ, ಬೇವು ಬೆಲ್ಲದಂತೆ ಬದುಕಿನಲ್ಲಿ ಸೇರಿಕೊಂಡಿವೆ. ಮಾನವ ದೇಹದ ಅವಯವಗಳನ್ನು ಹೊರತುಪಡಿಸಿದ ಬಹುತೇಕ ನಂಬಿಕೆಗಳು ಬೌದ್ಧಿಕ ನಂಬಿಕೆಗಳಿಗೆ ಆಹಾರವನ್ನೊದಗಿಸುತ್ತವೆ. ಜೋತಿಷ್ಯ ಪುರಾಣ, ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಸಂಸ್ಕಾರಾದಿ ಕ್ರಿಯೆಗಳು ಮಾನವ ಬದುಕಿನ ಒಂದು ಮುಖವನ್ನು ಪ್ರತಿನಿಧಿಸಿದ್ದಾದರೆ, ಹುಟ್ಟಿನಿಂ ಸಾವಿನವರೆಗೆ ಜೀವನದ ವಿವಿಧ ಹಂತಗಳಲ್ಲಿ ಆಚರಿಸುತ್ತ ಬಂದ ಸಾಮಾಜಿಕಕ್ರಿಯೆ – ಪ್ರಕ್ರಿಯೆಗಳು ಇನ್ನೊಂದು ಮುಖವನ್ನು ಪ್ರತಿನಿಧಿಸುತ್ತವೆ. ಗಾಢ ಅನುಭವದ ಅಮೃತನಿಧಿಗಳಾದ ಇವು, ಇಂದಿನ ಮುಂದುವರೆದ ಸಮಾಜಕ್ಕೆ ಸವಾಲೊಡ್ಡುವ ರೀತಿಯಲ್ಲಿ ಆದರ್ಶವನ್ನು ಗರ್ಭೀಕರಿಸಿಕೊಂಡು ಬದುಕಿನ ಜೀವಂತ ನಾಣ್ಯಗಳಾಗಿ ಮುಂದುವರೆದಿವೆ.

ಬೌದ್ದಿಕ ನಂಬಿಕೆಗಳನ್ನು (೧) ಧಾರ್ಮಿಕ ನಂಬಿಕೆಗಳು (೨) ಸಾಂಸ್ಕೃತಿಕ ನಂಬಿಕೆಗಳು ಎಂದು ವರ್ಗೀಕರಿಸಬಹುದು.