. ಬಾಲಕ ಮಾಬುಸುಬಾನಿಯವರ ಸಾಹಸ

ಮೈಬೂಬ ಶರಣರ ಮಹಿಮಾ ತಿಳಿಸುವೆ ಜನಕ
ತಾಯಿ ಗರ್ಭದಿ ನಿರ್ಭಯದಿ ತೋರಸ್ಯಾರ ಕೌತುಕ
ಹಾಂ ಹಾಂ ತಿಳಿಯಿರಿ ನಿಮ್ಮ ಮನಕ
ಫಾತಿಮಾ ಮನಿ ಬಿಟ್ಟು ಬಂದಾಳೋ ಕೇಳರಿ ಹಿತ್ತಲಕ
ಬಂದ ನೋಡಿದರ ಸೂಕ್ಷ್ಮದಾಳಿಂಬರಿ ಇತ್ತರಿ ಆ ಕ್ಷಣಕ
ಹಾಂ ಹಾಂ ತಿಳಿಯಿರಿ ನಿಮ್ಮ ಮನಕ
ಫಾತಿಮಾ ಜೊಹರಾ ಏರಿ ನಿಂತಾರೋ ಹಣ್ಣನು ಹರಿವುದಕ
ನಾಗರ ಸರ್ಪ ನಾಲಿಗಿ ಚಾಚಿ ಅವರನ್ನು ಕಡಿಯುದಕ ||
ನಾಗರ ಸರ್ಪ ಕಚ್ಚಿಬಿಟ್ಟಿತು ಕೇಳರಿ ಆ ಕ್ಷಣಕ ||
ಶಿವಾ ಶಿವಾ ಎನ್ನುತ ಭೂಮಿಗೆ ಬಿದ್ದಾಳೋ ತಿಳಿಯಿರಿ ನಿಮ್ಮ ಮನಕ ||
ಮೈಬೂಬ ಶರಣರು ಓಡಿ ಬಂದಾರೋ ಕೇಳರಿ ಆಕ್ಷಣಕ
ಹಲ್ಲಿನಿಂದ ವಿಷ ತೆಗೆದು ತೋರಸ್ಯಾರೋ ಕೌತೂಕ ||
ಹಾಂ ಹಾಂ ತಿಳಿಯಿರಿ ನಿಮ್ಮ ಮನಕ

. ಮಾಬು ಸುಬಾನಿಯವರ ಚಿಣಿಪಣಿಯಾಟ

ಶಾಸ್ತರ ಲೀಲಾ ಹೇಳುವೆ ಮೂಲಾ ಸಂದ ಕಡಕ ನಿಮ್ಮ ಕರುಣೆ ಇರಬೇಕ
ಶಾಹೀರ ಅಂತಿದಿ ಎಂತಾ ಕ್ಷಾಣಾ ಕೊಡೋ ಉತ್ತರನಾ ಸಂದ ತಿಳಿಸುವೆ ಈ ದಿನಾ
ಮೈಬೂಬ ಮಕಬೂಲ ಚಿಣಿಪಣಿಯಾಟ ಆಡೂದು ಒಳ್ಳೆ ತರಕ ಗೆಳೆತನ ಒಳೆದಿಮಾಕ
ಸೋಲುವುದು ಗೆಲುವುದು ನಡದೈತಿ ಕೇಳರಿ ಕೌತುಕನಾ ಚಿಣಿಪಣಿಯಾಟ ಆಡೂದಕನಾ
ಹೊತ್ತು ಏರಿ ನೆತ್ತಿಮ್ಯಾಲ ಮಧ್ಯಾಹ್ನ ಬಿಸಿಲಾತ ತುರಸಿನ ಆಟ ನಡದೀತ
ಮೈಬೂಬ ಮಕಬೂಲ ಸಾಲಿ ಕಲಿಯಾಕ  ಒಳೆ ಚುರುಕ ಗೆಳೆತನ ಇರೂದು ಠೀಕ
ಇಬ್ಬರಲ್ಲಿ ವಾದ ಬೆಳಿತೋ ಸೋಲುವುದು ಗೆಲುವುದಕ ಚಿಣಿಪಣಿ ಆಡೂದಕ
ಮಕಬೂಲ ತಾಯಿ ಹುಡುಕೂತ ಬಂದಾಳೋ ಮಮತಿಲಿಂದನಾ
ನೋಡ್ಯಾಳೋ ಮಕ್ಕಳ ಆಟವನಾ
ಊಟ ಮಾಡಿ ಬರಬೇಕೋ ಕಂದಾ ಹೇಳ್ಯಾರೋ ಠೀಕನಾ ಹೊತ್ತ ಆತೋ ಈ ದಿನಾ
ಮೈಬೂಬ ಅಂತಾನೋ ಸಿಟ್ಟಿನಿಂದ ಅಂಗಿ ಹಿಡಿದನಾ ಕೊಡೋ ಆಟ ಈ ದಿನಾ
ತಾಯಿ ಮಾತ ಮೀರದೆ ಮಕಬೂಲ ಹೇಳ್ಯಾನೊ ಠೀಕನಾ ಬಂದ ಕೊಡತೇನಿ ಆಟನಾ
ನನ್ನ ಆಟ ಕೊಡುತನಾ ಜಾಮೀನ ಕೊಡಬೇಕ ಸತ್ಯ ನುಡಿ ಇರಬೇಕ
ಅಲ್ಲಾನ ಸಾಕ್ಷಿ ಕೊಟ್ಟ ಹೊಂಟಾನೋ ಊಟ ಮಾಡುದಕ ಹೊಳ್ಳಿ ಬರತೇನಿ ಆಡುದಕ
ತಾಯಿ ಮಕಬೂಲ ಉಂಡಾರೋ ಶಿಸ್ತ ಮಮತಿಲಿಂದನಾ ತಕ್ಷಣ ಹೊಂದ್ಯಾನೋ ಮರಣಾ
ಮಕಬೂಲನ ಡೋಲಿ ಹೊಂಟಿತೋ ಶಿಸ್ತ ಮೌಲೂದ ಹೇಳೂತ ಜನ ಇತ್ತೊ ಬಹುಠೀಕ
ಮೈಬೂಬ ಬಂದು ತರಬ್ಯಾನೋ ಡೋಲಿ ನೀಎಂತ ಸತ್ಯವಂತ ಮಾಡುವೆ ಹರಕತ ತುರತಾ
ಕೂಡಿರು ಜನಾ ಆಗಿ ಗಾಬ ಕೇಳರಿ ಈ ದಿನ ಡೋಲಿ ಬಿಡಬೇಕ ಈ ದಿನ
ಪುನರ್ಜನ್ಮ ಆಗಿ ಮಕಬೂಲ ಕೊಟ್ಟಾನೋ ಆಟನಾ ಪುನಾ ಹೊಂದ್ಯಾನೋ ಮರಣಾ
ಕೂಡಿರೋ ಜನಾ ನೋಡಿ ಆಟ ಆಗ್ಯಾರೋ ದಂಗನಾ ಮುಗಸೇನಿ ಸ್ವಲ್ಪಕ ಈ ದಿನ
ಸೋತಗೆದ್ದ  ಆಟದ ಲೆಕ್ಕ ಕೇಳತೇನಿ ವಿಸ್ತಾರನಾ ವಯಸ್ಸು ಎಷ್ಟೋ ಆ ದಿನಾ
ಕೆರೂರ ಶಾರ ಮೋಜಿನ ಶಾರ ಐತಿ ಒಳೆ ಶಿಸ್ತ ಬಜಾರ ಶಿಸ್ತ ಇರುವುದಕ
ಶಾಹೀರ ಇಮಾಮ ಮಾಡೋರು ಕವಿ ಒಳ್ಳೆ ಚುರುಕ ಅಜಮೀರ ಗೈಬು ಇರಬೇಕ

. ಮಾಬುಸುಬಾನಿ ಮಾಡಿದ ಪವಾಡ

ಕೂಡಿರು ದೈವಾ ಅನಬೇಕ ವಾಹವ್ವಾ ನಾನು ಶರಣಾ
ಸುಂದ್ರ ಸಬಾ ಇಂದ್ರನಕ್ಕಿಂತ ಆದೀತೋ ಮೇಲಾ ಕೇಳರಿ ಜನಾ
ಬಂಜೆಯರ ಕಥನಾ ತಿಳಿಸುವೆ ನಾನಾ ಮಾಬೂಬ ಶರಣಾ ಕರುಣಾ
ಒಬ್ಬಾಕಿ ಬಂಜೆನಾ ಮಕ್ಕಳ ಇಲ್ಲದೆ ಬಳಲುವೆ ನಾನಾ ಮಾಡರಿ ಕರುಣಾ
ಮುಟ್ಟಿದ ಗಿಡನಾ ಒಣಗಿತೋ ಪೂರ್ಣಾ ಬಂಜೆಯರ ಕಥನಾ
ಕೆರಿಭಾವಿ ಬತ್ತಿತೋ ಹೂಕಾಯಿ ಒಣಗಿತೋ ಮುಟ್ಟಿದ ತಕ್ಷಣಾ
ಮಕ್ಕಳು ಇಲ್ಲದೆ ಬಳಲುವೆ ನಾನಾ ಮಾಡರಿ ನೀವು ಕರುಣಾ
ಬಗದಾದ ಅರಸಾ ಮಾಬೂಬ ಶರಣಾ ನುಡಿದರೆ ವಾಕ್ಯ ಆಗೂದು ನೇಮಾ
ಮಕ್ಕಳು ಕೇಳುದಕ ಬಂದಾರೋ ಬಂಜೆಯರಾ ಕೊಡರಿ ನೀವು ಮಕ್ಕಳನಾ
ಲಿಂಬೆಯ ಹಣ್ಣು ತಿನ್ನಿರಿ ಮೊದಲಾ ಆಗುವವು ಮಕ್ಕಳನಾ ಕೇಳರಿ ಜನಾ
ಕುಶಿಯಾಗ ಬಂಜೆಯರು ತಿಂದಾರೋ ಹಣ್ಣಾ ಮಾಬೂಬ ಶರಣಾ ಕರುಣಾ
ಒಬ್ಬಾಕಿ ಬಂಜಿ ತಿನಲಿಲ್ಲ ಹಣ್ಣನ್ನಾ ತಿಪ್ಪಿಯಲಿ ಮುಚ್ಚಿ ಹೇರ‍್ಯಾಳೋ ಕಲ್ಲನ್ನಾ
ಹಣ್ಣು ತಿಂದ ಅಬಲೆಗೆ ಮಕ್ಕಳು ಆಗ್ಯಾವೋ ಪೂರ್ಣಾ
ಶರಣರ ವರಣಾ ಆದೀತೋ ಮೇಲನಾ ತಿನ್ನದ ಅಬಲೆ ಬಂದಾಳೋ ಪೈಲಾ ಕರುಣಾ
ಮುಚ್ಚಿಟ್ಟ ಬಾಲೆಗೆ ಆಗಲಿಲ್ಲ ಮಕ್ಕಳು ಅಂದಾಳೋ ತೀವ್ರ ಮೊದಲಾ
ಮಾಬೂಬ ಶರಣಾ ತಿನ್ನದ ಅಬಲೆ ನಾ ತಿಪ್ಪೆಯಲಿ ಹಣ್ಣಾ ಪಿಂಡ ವರ್ಣಾ
ಕೂಡಿರು ಜನಾ ನೋಡ್ಯಾರೋ ಪೂರ್ಣಾ ಆದಂತ ಪಿಂಡವರ್ಣಾ
ತಪ್ಪ ಮಾಪ ಮಾಡರಿ ಶರಣಾ ಓದ್ಯಾರೋ ಕಲ್ಮನಾ ಕೂಡಿರೋ ಜನಾ
ದೇಶಕ್ಕ ವಾಹಿನಾ ಕೆರವೂರ ಮಿಗಿಲಾ ಇಮಾಮ ಶಾಹೀರಾ ಮೇಲಾ
ಅಜಮೀರ ಪೀರನಾ ಕಲಿಗಿಗೆ ಮೂಲಾ ವಾದಿಯ ಜನಕ ಕೊಟ್ಟಾನೋ ಗುಲ್ಲಾ