ಮಾನವ ಶಕ್ತಿ ಮತ್ತು ಕೌಶಲದ ಪ್ರತೀಕ ಚಕ್ರ

ಹಳ್ಳಿಯಲ್ಲಿನ ಕಮ್ಮಾರರ ಕುಲುಮೆಗಳು ಗ್ರಾಮೀಣರಿಗೆ ಒಂದು ರೀತಿಯಲ್ಲಿ ದೊಡ್ಡ ಉದ್ದಿಮೆ ಇದ್ದ ಹಾಗೆ. ತಮಗೆ ಬೇಕಾಗುವ ಕೃಷಿ ಪರಿಕರಗಳನ್ನು ಈ ಕುಲುಮೆಗಳಿಂದಲೇ ಅವರು ಸಿದ್ಧಪಡಿಸಿಕೊಳ್ಳುವುದು. ಮುಂಗಾರು ಆರಂಭವಾಯಿತೆಂದರೆ ಸಾಕು ಬಿತ್ತುವುದು, ಹರಗುವುದು, ಒಡ್ಡು ಹಾಕುವುದು ಮುಂತಾದ ಕೃಷಿ ಕೆಲಸಗಳ ಒತ್ತಡ ಆರಂಭವಾಗುತ್ತದೆ.

ಕೃಷಿಗೆ ಬೇಕಾದ ಕೂರಗಿ, ಕುಂಟೆ, ಚಕ್ಕಡಿ, ಪಿಕಾಸಿ, ಕುಡುಗೋಲು, ಸಲಿಕೆ, ಈಳಿಗೆ, ಗುದ್ದಲಿ, ಮಡಿಕೆಯ ಮುಂಜೂಣ, ಹಾರೆ… ಹೀಗೆ ನಾನಾ ತರಹದ ಕೃಷಿ ಪರಿಕರಗಳನ್ನು ಮಾಡಿಸಿಕೊಳ್ಳಲು ರೈತರು ಕಮ್ಮಾರರ ಕುಲುಮೆಯಲ್ಲಿ ಸಂತೆಯಂತೆ ನೆರೆಯುತ್ತಾರೆ.

ಅನಾದಿ ಕಾಲದಿಂದಲೂ ಕುಲುಮೆಗಳಲ್ಲಿ ಬಳಕೆಯಾಗುತ್ತಿದ್ದ ಕಟ್ಟಿಗೆ ಚಕ್ರದ ಸಹಾಯದಿಂದಲೇ ಇಂತಹ ಬಹುತೇಕ ವಸ್ತುಗಳು ಸಿದ್ಧಗೊಳ್ಳುತ್ತಿದ್ದವು. ವಿದ್ಯುತ್ ಚಿಂತೆ ಇಲ್ಲ, ಪೇಟೆಯಿಂದ ಬಿಡಿ ಭಾಗಗಳನ್ನು ತರಬೇಕೆಂಬ ತಾಪತ್ರಯವಿಲ್ಲ, ರೈತರಿಗೆ ಭಾರವೆನಿಸುವ ದರವೂ ಇಲ್ಲ. ಕಮ್ಮಾರನ ಕೈಯಲ್ಲಿ ಉಳಿ ಜೊತೆಗೆ ಚಕ್ರ ತಿರುವಲು ರೈತನ ರಟ್ಟೆಯಲ್ಲಿ ಕಸುವು ಇದ್ದರೆ ಸಾಕು. ಚಕ್ಕಡಿಗೆ ಬೇಕಾಗುವ ಚಕ್ರಗಳು, ಬುಗುರೆಯಾಕಾರದ ದಿಂಡುಗಳು ಒಂದೆರಡು ತಾಸಿನಲ್ಲೇ ತಯಾರಾಗುತ್ತಿದ್ದವು. ಆ ಚಕ್ರವೇ ಬಡಗಿ, ಕಮ್ಮಾರರ ಜೀವನ ಗತಿಯ ಚಕ್ರವೂ ಆಗಿತ್ತು.

ಗ್ರಾಮೀಣ ಬದುಕು

ಪಕ್ಕಾ ಗ್ರಾಮೀಣ ಶೈಲಿಯ ಸ್ವಾವಲಂಬಿ ಈ ಕಟ್ಟಿಗೆ ಚಕ್ರದ ಸಹಾಯದಿಂದ ತಯಾರಾಗುವ ಎಲ್ಲ ಸಾಮಗ್ರಿಗಳ ಪೈಕಿ ಅತ್ಯಂತ ಮುಖ್ಯವಾದುದೆಂದರೆ ಚಕ್ಕಡಿ(ಎತ್ತಿನ ಬಂಡಿ) ಚಕ್ರದ ಕುಂಭಗಳು. ಕುಂಭ ಎಂದರೆ ರೈತರ ಚಕ್ಕಡಿಯ ಚಕ್ರಗಳಲ್ಲಿನ ಹಲ್ಲುಗಳು(ಕಾಲು) ಒಂದೆಡೆ ಸಂಧಿಸುವ (ಸೇರುವ) ಅಂಗ (ಆಕ್ಸೆಲ್). ಇದು ಬಂಡಿಯ ಚಕ್ರಗಳು ಸಮಾಂತರವಾಗಿ ಉರುಳುವಂತೆ ಮಾಡುವ ಮುಖ್ಯ ಅಂಗವೂ ಹೌದು. ಈ ಕುಂಭಗಳು ಸಮನಾದ ಅಳತೆ ಹೊಂದಿರಲೇಬೇಕು. ಹೆಚ್ಚು ಕಡಿಮೆ ಅಳತೆ ಏನಾದರೂ ಹೊಂದಿದ್ದರೆ ಚಕ್ಕಡಿ ದಾರಿ ಬಿಟ್ಟು ಸಾಗಬಹುದು, ಇಲ್ಲವೆ ಧಪಕ್ಕೆಂದು ಬೀಳಲೂಬಹುದು. ಅಷ್ಟೊಂದು ಮಹತ್ವ ಈ ಕುಂಭಗಳದ್ದಾಗಿದೆ.

ಚಕ್ರದ ವಿನ್ಯಾಸ

ಕುಲುಮೆಗಳ ತುದಿಗಳಲ್ಲಿ ನೆಟ್ಟಿರುವ ಎರಡು ಪುಟ್ಟ ಕಂಬಗಳು, ಅವುಗಳ ಮಧ್ಯದಲ್ಲಿರುವ ರಂಧ್ರಗಳಲ್ಲಿ ಹಾದು ಬಂದಿರುವ ಕಬ್ಬಿಣದ ಹಾರೆ, ಆ ಹಾರಗೆ ಈ ಪುಟ್ಟ ಬಂಡಿ ಗಾಲಿಯನ್ನು ತೂಗು ಹಾಕಿರುತ್ತಾರೆ. ಇದನ್ನು ತಿರುಗಿಸಲು ಎಡ- ಬಲದಲ್ಲಿ ಎರಡು ಹಿಡಿಕೆ ಇರುತ್ತವೆ. ದನದ ಚರ್ಮದಿಂದ ಮಾಡಿದ ಇಲ್ಲವೆ ರಬ್ಬರಿನಿಂದ ಮಾಡಿದ ಒಂದು ಬೆಲ್ಟ್ ಗಾಲಿ ಸುತ್ತುವರೆದು ಎಂಟು ಅಡಿ ದೂರದಲ್ಲಿ ಇರುವ ಕಟ್ಟಿಗೆ ಚೌಕದಲ್ಲಿ ನೇತು ಬಿದ್ದಿರುವ ಕುಂಭಕ್ಕೆ ಸುತ್ತುವರಿದಿರುತ್ತದೆ.

ಚಕ್ರ ತಿರುಗಿದಂತೆ ಈ ಬೆಲ್ಟ್ ಕಟ್ಟಿಗೆ ಚೌಕದಲ್ಲಿರುವ ಕುಂಭವನ್ನು ಗರಗರ ತಿರುಗಿಸುತ್ತದೆ. ಹೀಗೆ ವೇಗವಾಗಿ ತಿರುಗುವ ಕುಂಭಕ್ಕೆ ಬಡಿಗೇರರು ಮೊನಚಾದ ವಿವಿಧ ಆಳತೆಯ ಉಳಿ (ಕಬ್ಬಣದ ಸಾಧನ) ಬಳಸಿ ಕುಂಭದ ಮೇಲ್ಮೈ ಕರಾರುವಕ್ಕಾದ ಅಳತೆಗೆ ತಕ್ಕಂತೆ ರೂಪುಗೊಳ್ಳುವಂತೆ ಮಾಡುತ್ತಾರೆ. ಹಾಗೇ ಅದರ ಮೇಲ್ಮೈ ನುಣುಪಾಗುವಂತೆಯೂ ಮಾಡುತ್ತಾರೆ. ಅಳತೆ ಮತ್ತು ವಿನ್ಯಾಸ ಕರಾರುವಕ್ಕಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸಾಂಪ್ರದಾಯಕ ಕೈವಾರ ಬಳಸುವುದು ವಿಶೇಷ.

ಒಂದರ್ಥದಲ್ಲಿ ಬುಗರಿಯ ಹಾಗೆ ಕುಂಭಗಳನ್ನು ತಿದ್ದಿ ತೀಡುವುದರ ಜೊತೆಗೆ ಅದರ ಸುತ್ತಲೂ ಚಕ್ರದ ಎಲ್ಲಾ ಹಲ್ಲುಗಳು ಸೇರಬೇಕಾದ ಜಾಗೆಯಲ್ಲಿ ಇದರಿಂದಲೇ ಗೆರೆಗಳನ್ನು ಹಾಕುತ್ತಾರೆ, ಅಂಚುಗಳನ್ನು(ಕಬ್ಬಿಣದ ಬಳೆ) ಹಾಗೂ ಕೀಲು(ಸನ್ನೆ) ಹಾಕುವ ಕಡೆ ಸಣ್ಣದಾಗಿರುವಂತೆ ಮಾಡುತ್ತಾರೆ.

ಅಪರೂಪದ ಚಕ್ರ

ಮಾಯವಾಯಿತು ಈಗ!

ನೂರಾರು ವರ್ಷಗಳ ಇತಿಹಾಸ ಹೊಂದಿದ ಈ ಚಕ್ರ ಸದ್ಯ ಕುಲುಮೆಗಳಲ್ಲಿ ನೋಡಲೂ ಸಿಗುವುದಿಲ್ಲ. ಅದರ ಬದಲಿಗೆ ವಿದ್ಯುತ್ ಚಾಲಿತ ಚಕ್ರ ಕಾಣುತ್ತದೆ. ಕಾಲಮಾನ ಬದಲಾದಂತೆ ಯಾವಾಗ ಹಳ್ಳಿಗಳಿಗೂ ಆಧುನಿಕತೆಯ ಸ್ಪರ್ಶವಾಯಿತೊ ಉಪಯೋಗವಿರಲಿ ಬಿಡಲಿ ಇಂತಹ ಅನೇಕ ವಸ್ತುಗಳು ಮೂಲೆಗುಂಪಾದವು.

ಇಂತಹ ಚಕ್ರದ ಮಾಹಿತಿ ಪಡೆಯಲೆಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಹಿರೆಅರಳಿಹಳ್ಳಿಯ ಹಳೆಯ ಕುಲುಮೆಗೆ ಹೋಗಿದ್ದಾಗ ಅಲ್ಲಿ ಕಂಡ ಚಿತ್ರಣವೇ ಬೇರೆಯದಾಗಿತ್ತು.

ಕಟ್ಟಿಗೆ ಚಕ್ರದ ಜಾಗೆಯಲ್ಲಿ ವಿದ್ಯುತ್ಚಾಲಿತ ಯಂತ್ರವೊಂದಿತ್ತು. ಅದರ ಸುತ್ತಲೂ ಇನ್ನು ಸಾಣೇ ಹಿಡಿಯಬೇಕಾಗಿದ್ದ ಕುಂಭಗಳು ಹಾಗೇ ಬಿದ್ದಿದ್ದವು. ಜೊತೆಗೆ ಬಡಿಗೇರರೂ ಖಾಲಿ ಕುಳಿತಿದ್ದರು. “ಮೂರು ದಿವ್ಸದ ಹೊತ್ತಾತು ನೋಡ್ರಿ, ಮೊನ್ನೇ ಬೀಸಿದ ಬಿರುಗಾಳಿಗೆ ಎಲ್ಲೆಲ್ಲೋ ವಿದ್ಯುತ್ ಕಂಬ ಬಿದ್ದಾವಂತ್ರಿ, ಕೆರೆಂಟ್ ಬರೋದು ಇನ್ನು ಎರಡು ದಿವ್ಸ ತಡ ಆಕೈತಂತೆ, ಅಲ್ಲಿವರೆಗೂ ನಮಗ ದುಡುಮಿ ಇಲ್ರಿ” ಎಂದು ಮೌನೇಶ ಬಡಿಗೇರ ಹೇಳುತ್ತಿದ್ದ. ಅಲ್ಲದೇ ಕಳೆದ ವಾರ ಈ ಯಂತ್ರ ಕೆಟ್ಟಿದ್ದರಿಂದ ದುರಸ್ತಿ ಮಾಡುವವರು ಬರುವವರೆಗೂ ಎರಡು ದಿನ ಕೆಲಸವಿಲ್ಲದೇ ಖಾಲಿ ಕುಳಿತಿದ್ದರಂತೆ. ನಗರದ ಮೆಕ್ಯಾನಿಕ್ ಬಂದು ದುರಸ್ತಿ ಮಾಡಿದ ನಂತರ, ನಮ್ಮ ಭೇಟಿಯ ಹಿಂದಿನ ದಿನವಷ್ಟೇ ಇದು ಚಾಲು ಆಗಿತ್ತು.

“ಅದೆಲ್ಲ ಆಯ್ತು, ನೀವು ಮೊದಲು ಇದೇ ಕೆಲಸಕ್ಕೆ ಬಳಸುತ್ತಿದ್ದ ಹಳೆಯ ಚಕ್ರ ಇತ್ತಲ್ಲ… ಈಗ ಅದೆಲ್ಲಿ ?” ಎಂದು ಕೇಳಿದಾಗ “ಈಗೆಲ್ಲೈತ್ರಿ ಆ ಚಕ್ರ ? ತೆಗೆದು ಹಾಕಿ ಆಗಲೇ ಹತ್ತಾರು ವರ್ಷ ಆತ್ರಿ” ಎಂದು ಕಾಳಪ್ಪ ಹೇಳಿದ.

 ಮೂಲೆ ಸೇರಲು ಕಾರಣವೇನು?

ಈ ಮಾನವ ಚಾಲಿತ ಯಂತ್ರ ಬಳಕೆ ಇದ್ದ ಕಾಲದಲ್ಲಿ ಬಡಿಗೇರರಿಗೆ ಯಾರು ಚಕ್ಕಡಿ ತಯಾರಿಸಲು ಬೇಡಿಕೆ ಕೊಟ್ಟಿರುತ್ತಾರೋ ಅವರು ಕುಂಭ ತಯಾರಾಗುವವರೆಗೂ ಈ ಚಕ್ರ ತಿರುಗಿಸಬೇಕು. ಆದರೆ, ಈಗ ಚಕ್ಕಡಿ ಮಾಡಿಸಿಕೊಳ್ಳಬೇಕಾದವರು ಚಕ್ರ ತಿರುಗಿಸಲು ನಿರಾಕರಿಸುತ್ತಿದ್ದಾರೆ. ಜೊತೆಗೆ ಯಂತ್ರದಿಂದ ಕುಂಭಗಳು ಬೇಗನೇ ತಯಾರಾಗುತ್ತವೆ ಎಂಬ ಭ್ರಮೆ ಗ್ರಾಹಕ ಮತ್ತು ಉತ್ಪಾದಕರಿಬ್ಬರಲ್ಲೂ ಬೇರೂರಿದೆ. ಹಳೆಯ ಯಂತ್ರಕ್ಕಿಂತ ಹೊಸ ಯಂತ್ರದ ಮೇಲೆ ಯುವ ಬಡಗಿಗಳಿಗೆ ಹೆಚ್ಚು ವ್ಯಾಮೋಹ. ಈ ಎಲ್ಲ ಕಾರಣಗಳಿಂದ ಪ್ರತಿಯೊಂದು ಹಳ್ಳಿಗಳ ಕುಲುಮೆಗಳಲ್ಲಿರುತ್ತಿದ್ದ ಚಕ್ರಗಳು ಮಾಯವಾಗಿ ಆ ಜಾಗದಲ್ಲಿ ಆಧುನಿಕ ಯಂತ್ರಗಳು ಸ್ಥಾನ ಪಡೆದಿರುವ ಬಗ್ಗೆಯೂ ಕಾಳಪ್ಪ ಹೇಳಿದ.

ಒಂದು ಚಕ್ಕಡಿಗೆ ಬೇಕಾಗಿರುವ ಎರಡು ಕುಂಭಗಳು ಸುಮಾರು ಮೂರು ಗಂಟೆಗಳಲ್ಲಿ ಆ ಹಳೆಯ ಕಾಲದ ಚಕ್ರದಿಂದಲೇ ತಯಾರಾಗುತ್ತಿದ್ದವು. ವಿದ್ಯುತ್ ಹೋಯಿತು ಎಂಬ ಚಿಂತೆಯಿಲ್ಲ, ಬಿಲ್ ಬಂತೆಂಬ ಭಯವಿಲ್ಲ. ಇಲ್ಲಿ ಖರ್ಚಾದದ್ದು ಕೇವಲ ಮಾನವ ಶಕ್ತಿ ಮಾತ್ರ. ಹಾಗೇನಾದ್ರೂ ಚಕ್ರ ಕೆಟ್ಟರೆ ತಾವೇ ಸರಳವಾಗಿ ಅರೆಗಳಿಗೆಯಲ್ಲಿ ದುರಸ್ತಿ ಮಾಡಿಕೊಳ್ಳುತ್ತಿದ್ದರು.

ಬಡಿಗೇರರ ಬದುಕಿನ ಆ ಚಕ್ರದ ಮಹತ್ವ, ದೈಹಿಕ ವ್ಯಾಯಾಮ, ಹಣ ಹಾಗೂ ಸಮಯದ ಉಳಿತಾಯ, ಸ್ವಾವಲಂಬನೆ ಬದುಕು,.. ಜೊತೆಗೆ ಬೇಕೆಂದಾಗ ಕೆಲಸಕ್ಕೆ ಥಟ್ ಎಂದು ಸಿದ್ಧವಾಗಿ ನಿಲ್ಲುವ ಆ ಗ್ರಾಮೀಣ ಚಕ್ರದ ಮಹತ್ವ ಕುರಿತು ಅವರೆಲ್ಲರೂ ಸೈ ಎನ್ನುವ ರೀತಿಯಲ್ಲಿಯೇ ಮಾತನಾಡಿದರು.

ಕೈವಾರದಿಂದ ಚಕ್ಕಡಿ ಗಾಡಿ ಕುಂಭದ ಅಳತೆ

ಕೆಲಸ ಆರಂಭಿಸಿದ ಚಕ್ರ

ಮಾರನೇ ದಿನ ಅದೇ ಕುಲುಮೆಗೆ ಹೋದಾಗ ಕುಂಭಗಳನ್ನು ತಯಾರಿಸುವ ಕೆಲಸ ಭರದಿಂದ ನಡೆದಿತ್ತು, ಅಂದ ಹಾಗೆ ಇದು ವಿದ್ಯುತ್ ಯಂತ್ರದಿಂದಲ್ಲ? ಲಟಕ್… ಪಟಕ್… ಸದ್ದಿನ ಆ ಮಾನವ ಚಾಲಿತ ಚಕ್ರದ ಸಹಾಯದಿಂದ. ರೈತರು ತಮ್ಮ ತೋಳು ಬಳಸಿ ಬೆವರಿಳಿಸುತ್ತಾ ಚಕ್ರ ತಿರುಗಿಸುತ್ತಿದ್ದರು. ಬಡಿಗೇರ ಮರದ ಚೌಕದ ಮುಂದೆ ಕುಳಿತು ಕುಂಭಗಳನ್ನು ಸಾಣೆ ಹಿಡಿಯುತ್ತಿದ್ದ. “ಈಗ ನಮಗ ಕರೆಂಟಿನ ದಾರಿ ಕಾಯೋ ಪಡಿಪಾಟ್ಲ ಇಲ್ಲ ನೋಡ್ರಿ, ನಮ್ಮ ಹಳೆಯ ಚಕ್ರ ಹ್ಯಾಂಗ ತಿರಗಾಕ ಹತೈತೆ” ಎಂದು ಕಾಳಪ್ಪ ನಗುಮೊಗದಿಂದ ಹೇಳುತ್ತಿದ್ದ.

ಅಂತೂ ಮೂಲೆ ಸೇರಿದ್ದ ಹಳೆಯ ಕಾಲದ ಯಂತ್ರವೊಂದು ಮತ್ತೆ ಕೆಲಸ ಆರಂಭಿಸಿತ್ತು. ಇಷ್ಟೊಂದು ಕಡಿಮೆ ಅವಧಿಯಲ್ಲಿ ಕೆಲಸಕ್ಕೆ ಸಿದ್ಧವಾಗಿ ಉಪಯೋಗಕ್ಕೆ ಬರುವ ಇಂತಹ ಸಾಮಗ್ರಿಗಳ ಬಗ್ಗೆ ರೈತರು, ಕುಶಲಕರ್ಮಿಗಳು ಯೋಚಿಸಬೇಕಾದದ್ದು ಅವಶ್ಯವಾಗಿದೆ.