ಕಲೆ. ಸಂಸ್ಕೃತಿ, ಸಂಗೀತ, ಸಾಹಿತ್ಯ, ನೃತ್ಯ ಈ ಎಲ್ಲಾ ಮಾಧ್ಯಮಗಳಲ್ಲೂ ಕರ್ನಾಟಕ, ಕಾಲದಿಂದ ಕಾಲಕ್ಕೆ ಅನುಮಪಮ ಸಾಧನೆಗಳನ್ನು ದಾಖಲಿಸುತ್ತಾ ಬಂದಿದೆ. ಪ್ರತಿಭೆಯ ಕಣಜಗಳ ನಿರಂತರ ಹುಟ್ಟು ಈ ದಾಖಲೆಗಳಿಗೆ ಪ್ರಮುಖ ಕಾರಣ. ಮಾಧ್ಯಮ ಯಾವುದಾದರು ಅಲ್ಲಿ ಅಸಾಧಾರಣ ಕೆಲಸ ಮಾಡುವ ಸಾಧಕರನ್ನು ನಮ್ಮ ಕರ್ನಾಟಕ ಕಾಣುತ್ತಾ ಬಂದಿದೆ. ಇನ್ನು ನೃತ್ಯದ ವಿಷಯ ಬಂದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕರ್ನಾಟಕದ ಭೂಪಟಕ್ಕೆ ಒಂದು ಗೌರವಯುತ ಸ್ಥಾನ ಕಲ್ಪಿಸಿದ ಅನೇಕ ನೃತ್ಯ ಕಲಾವಿದರನ್ನು ನಾವು ಕಾಣುತ್ತೇವೆ. ಅಂತಹ ಸಾಧಕರಲ್ಲಿ ಪ್ರಮುಖರಾದ ಹಿರಿಯ ನೃತ್ಯ ಕಲಾವಿದೆ ಶ್ರೀಮತಿ ಮಾಯಾರಾವ್‌.

ಪರಿಸರ,ಭಾಷೆ, ಸಂಸ್ಕೃತಿ ಇವುಗಳನ್ನು ಆಧರಿಸಿ ಒಂದೊಂದು ಪ್ರದೇಶದಲ್ಲಿ ಒಂದೊಂದು ನೃತ್ಯ ಪ್ರಕಾರ ಬೆಳೆದುಬಂದಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆಗಳಿವೆ. ಉದಾಹರಣೆಗೆ ಕರ್ನಾಟದಕದಲ್ಲಿ ಯಕ್ಷಗಾನ, ತಮಿಳುನಾಡಿನಲ್ಲಿ ಭರತನಾಟ್ಯ, ಆಂಧ್ರ ಪ್ರದೇಶದಲ್ಲಿ ಕೂಚಿಪುಡಿ, ಕೇರಳದಲ್ಲಿ ಮೋಹಿನಿ ಅಟ್ಟಂ ಮತ್ತು ಕಥಕ್ಕಳಿ, ಒರಿಸ್ಸಾದಲ್ಲಿ ಒಡಿಸ್ಸಿ ಹೀಗೆ… ಆದರೆ ನಮ್ಮ ಕರ್ನಾಟಕ ಹಿಂದಿನಿಂದಲೂ ಹೇಗೆ ಎಲ್ಲಾ ಧರ್ಮ, ಭಾಷೆಗಳನ್ನು ಪೋಸಿಸುತ್ತಿದೆಯೋ, ಹಾಗೆಯೇ ಹಲವು ನೃತ್ಯ ಶೈಲಿಗಳಗೆ ಆಶ್ರಯ ನೀಡುತ್ತಾ ಬಂದಿದೆ. ಹಾಗಾಗಿ ಇಲ್ಲಿ ಭರತನಾಟ್ಯ, ಕೂಚಿಪುಡಿ, ಮೋಹಿನಿ ಅಟ್ಟಂ, ಕಥಕ್ಕಳಿ, ಕಥಕ್‌ ಎಲ್ಲಾ ಶೈಲಿಗಳಿಗೂ ಜನಾಶ್ರಯ ಇದೆ. ಜೊತೆಗೆ ನಮ್ಮವರೂ ಈ ಶೈಲಿಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಇಂದಿನ ಕನ್ನಡ ತಲೆಮಾರಿಗೆ ಉತ್ತರ ಭಾರತದ ಕಥಕ್‌ ನೃತ್ಯ ಸಂಪ್ರದಾಯವನ್ನು, ಅದರ ಮೂಲ ಬೇರಿನ ಅರಿವಿನ ಜೊತೆಗೆ ಪರಿಚಯಿಸುತ್ತಿರುವವರು ಶ್ರೀಮತಿ ಮಾಯಾರಾವ್‌.

ಹಾಗೆ ನೋಡಿದರೆ ಈ ಹಿಂದೆ ಸೋಹನ್‌ ಲಾಲ್‌ ಗಣನೀಯ ಪ್ರಮಾಣದಲ್ಲಿ ಕಥಕ್‌ ನೃತ್ಯ ಸಂಪ್ರದಾಯಕ್ಕೆ ಸಂಬಂಧಪಟ್ಟ ಹಾಗೆ ಕರ್ನಾಟಕದಲ್ಲಿ ಕೆಲಸ ಮಾಡಿದ್ದರು. ಆದರೆ ಆ ಪರಂಪರೆಗೆ ಸುಭದ್ರತೆ ಒದಗಿಸಿದವರು ಶ್ರೀಮತಿ ಮಾಯಾರಾವ್‌ ಅಂದರೆ ತಪ್ಪಾಗಲಿಕ್ಕಿಲ್ಲ.

೧೯೨೮ರ ಮೇ ೨, ಶ್ರೀಮತಿ ಮಾಯಾರಾವ್‌ ಅವರ ಜನ್ಮದಿನ. ತಂದೆ ಶ್ರೀ ಎಚ್‌. ಸಂಜೀವರಾವ್‌. ತಾಯಿ ಶ್ರೀಮತಿ ಲಲಿತಾಬಯಿ. ಬಹಳ ಸಂಪ್ರದಾಯದ ಸಾರಸ್ವತ ಕುಟುಂಬ ಮಾಯಾರಾವ್‌ ಅವರದು. ತಂದೆ ಶ್ರೀ ಸಂಜೀವ್‌ ರಾವ್‌ ಸಿವಿಲ್‌ ಇಂಜಿನಿಯರ್. ಅಂದಿನ ಕಾಲದಲ್ಲಿ ಬಹಳ ಹೆಸರು ಪಡೆದಿದ್ದರು. ಮೈಸೂರು ಅರಮನೆಯ ಮುಂಭಾಗದ ಹೆಬ್ಬಾಗಿಲೊಂದು ಸಂಜೀವ್‌ ರಾವ್‌ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣವಾಗಿದೆಯೆಂದು ಅನೇಕ ಹಿರಿಯರು ಹೇಳುತ್ತಾಋಎ. ಮಾಯಾರಾವ್‌ ಅವರ ತಾಯಿ ಲಲಿತಾಬಾಯಿ ಉತ್ತಮ ಗೃಹಿಣಿ. ಮನೆಯ ಮಕ್ಕಳ ಲಾಲನೆ, ಪಾಲೆನ, ವಿದ್ಯಾಭ್ಯಾಸ, ಭವಿಷ್ಯ ಎಲ್ಲದರ ಬಗ್ಗೆ ಬಹಳ ಜವಾಬ್ದಾರಿ ಹೊತ್ತುಕೊಂಡ ಮಹಾತಾಯಿ.

ಸಂಜೀವ ರಾವ್‌ ಲಲಿತಾಬಾಯಿ ದಂಪತಿಗಳಿಗೆ ಆರು ಮಕ್ಕಳು. ಮಾಯಾರಾವ್‌ ಮೂರನೆಯವರು. ಉಳಿದಂತೆ ಮನೋಹರ ರಾವ್‌, ರಮೇಶ್‌, ಶಿವರಾಂ, ಉಮಾರಾವ್‌, ಚಿತ್ರಾರಾವ್‌ ಸೋದರ ಸೋದರಿಯರು.

ಮಾಯಾರಾವ್‌ ಅವರಿಗೆ ಬೆಂಗಳೂರಿನ ಕಂಟೋನ್ಮೆಂಟಿನಲ್ಲಿದ್ದ ಕಮಲಾಬಾಯಿ ಶಾಲೆಯಲ್ಲಿ ಪ್ರೈಮರಿ ಶಿಕ್ಷಣ ದೊರೆಯಿತು. ಮಹಾರಾಣಿ ಕಾಲೇಜಿನಲ್ಲಿ ಬ್ಯಾಚುಲರ್ ಪದವಿ, ಸೆಂಟ್ರಲ್‌ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ, ಇದು ಮಾಯಾರಾವ್‌ ಅವರ ಶೈಕ್ಷಣಿಕ  ಹಿನ್ನೆಲೆ.

ವಾಸ್ತವವಾಗಿ ಮಾಯಾರಾವ್‌ ಕಲಾಪ್ರಪಂಚಕ್ಕೆ ಅಡಿಯಿರಿಸಿದ್ದು ಹಿಂದುಸ್ತಾನಿ ಸಂಗೀತದ ಮೂಲಕ. ತಮ್ಮ ಆರರ ಪ್ರಾಯದಲ್ಲಿ ಪಂಡಿತ್‌ ರಾಮರಾವ್‌ ಹೊನ್ನಾವರ ಅವರ ಮಾರ್ಗದರ್ಶನದಲ್ಲಿ ಮಾಯಾ ಅವರಿಗೆ ಹಿಂದುಸ್ತಾನಿ ಸಂಗೀತದಲ್ಲಿ ಶಿಕ್ಷಣ ಪ್ರಾರಂಭವಾಗಿತ್ತು. ಕಟ್ಟಾ ಸಂಪ್ರದಾಯವಾದಿಗಳ ಕುಟುಂಬವಾಗಿದ್ದರಿಂದ ನೃತ್ಯದ ಬಗ್ಗೆ ಯೋಚುಸಯವ ವಾತಾವರಣ ಕೂಡ ಮನೆಯಲ್ಲಿರಲಿಲ್ಲ. ಸಂಗೀತವೂ ‘ಹಾಡು ಹಸೆ’ ಎನ್ನುವ ಮಟ್ಟಿಗೆ ಸೀಮಿತ. ಸಾರ್ವಜನಿಕ ಕಚೇರಿ ಎನ್ನುವುದು ಕಲ್ಪನೆಗೆ ನಿಲುಕದ ವಿಷಯವಾಗಿತ್ತು.

ಇಂತಹ ವಾತಾವರಣದಲ್ಲಿ ಬೆಳೆದ ಮಾಯಾರಾವ್‌ ಅವರಿಗೆ ನೃತ್ಯದ ಕಡೆ ಗಮನ ಹರಿಸಲು ಕಾರಣವಾದ ಒಂದು ಸಂದರ್ಭ ಒದಗಿ ಬಂತು. ನಲವತ್ತರ ದಶಕದಲ್ಲಿ ಆಗಿನ ಪ್ರಖ್ಯಾತ ನೃತ್ಯ ಕಲಾವಿದ ಶ್ರೀ ರಾಮ್‌ಗೋಪಾಲ್‌ ಕರ್ನಾಟಕಕ್ಕೆ ಬಂದಿದ್ದರು. ಅವರ ಪ್ರದರ್ಶನ ಬೆಂಗಳೂರಿನಲ್ಲಿ ಇದ್ದಾಗ, ಅವರ ಇಡೀ ತಂಡ ಸಂಜೀವ ರಾವ್‌ ಅವರ ಮನೆಗೆ ಬಂದು ಹೋಗುತ್ತಿದ್ದರು. ಆ ತಂಡದಲ್ಲಿ ಪ್ರಸಿದ್ಧ ಕಥಕ್‌ ನೃತ್ಯ ಕಲಾವಿದ ಸೋಹನ್‌ ಲಾಲ್‌ ಕೂಡ ಇದ್ದರು. ಮನೆಯಲ್ಲಿದ್ದ ಮಾಯಾ ಅವರ ತಂಗಿಯರಾದ ಉಮಾ ಮತ್ತು ಚಿತ್ರ ಸೋಹನ್‌ ಲಾಲ್‌ ಬಳಿ ಕಥಕ್‌ ಕಲಿಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಮಾಯಾ ಅವರಿಗೆ ಹದಿನಾಲ್ಕರ ಯೌವನ. ಆ ವಯಸ್ಸಿನ ಹುಡುಗಿಯರು ನೃತ್ಯ ಕಲಿಯಲು ಎನ್ನುವ ಕಲ್ಪನೆಯೆ ಇರದಿದ್ದ ವಾತಾವರಣದಲ್ಲಿ, ಸೋಹನ್‌ ಲಾಲ್‌ ಅವರ ಒತ್ತಾಯಕ್ಕೆ ಮಣಿದು ಸಂಜೀವರಾವ್‌ ದಂಪತಿಗಳು ಮಾಯಾ ಅವರೂ ತಂಗಿಯರ ಜೊತೆಯಲ್ಲಿ ನೃತ್ಯ ಕಲಿಯಲು ಅನುಮತಿ ನೀಡಿದರು. ಅಂದರೆ ೧೯೪೨ರಲ್ಲಿ ಮಾಯಾರಾವ್‌ ಅವರಿಗೆ ಸೋಹನ್‌ ಲಾಲ್‌ ಅವರಿಂದ ಜೈಪುರ್ ಘರಾನಾದ ಕಥಕ್‌ ಶೈಲಿಯ ಶಿಕ್ಷಣ ಪ್ರಾರಂಭವಾಯಿತು.

ಕಥಕ್‌ ಶೈಲಿಯಲ್ಲಿ ಮೊದಲ ನೃತ್ಯ ಪ್ರದರ್ಶನ ಮಾಯಾರಾವ್‌ ನೀಡಿದ್ದು ೧೯೪೪ರಲ್ಲಿ. ಅದು ಸಾರ್ವಜನಿಕ ಪ್ರದರ್ಶನವೇನಲ್ಲ. ಸಾರಸ್ವತ ಸಮಾಜದ ಒಂದು ಸಮಾವೇಶ ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ.

೧೯೪೨ರಿಂದ ೧೯೪೫ರತನಕ ಸೋಹನ್‌ ಲಾಲ್‌ ಅವರ ಮಾರ್ಗದರ್ಶನದಲ್ಲಿ ನೃತ್ಯ ಕಲಿತ ಮಾಯಾರಾವ್‌, ನಂತರ ತಮ್ಮ ಸಾಧನೆಯನ್ನು ತಾವೇ ಮುಂದುವರೆಸಿಕೊಂಡು ಬಂದರು. ಈ ಅವಧಿಯಲ್ಲೇ ಕಥಕ್‌ ನೃತ್ಯ ಶೈಲಿಯಲ್ಲಿ ಕೆಲವು ಕ್ರಿಯಾಶೀಲ ಪ್ರಯತ್ನಗಳನ್ನು ಮಾಯಾರಾವ್‌ ವೇದಿಕೆಗೆ ತಂದು ನೃತ್ಯಾಸಕ್ತರ ಗಮನ ಸೆಳೆದಿದ್ದರು.

೧೯೪೯ರಲ್ಲಿ ಶ್ರೀ ಎಂ.ಎಸ್‌. ನಟರಾಜ್‌ ಅವರನ್ನು ಭೇಟಿಯಾದ ನಂತರ ಮಾಯಾರಾವ್‌ ಬದುಕಿನಲ್ಲಿ ಒಂದು ಹೊಸ ತಿರುವು ಆರಂಭವಾಯಿತು. ಆ ಸಂದರ್ಭವನ್ನು ನೆನಪಿಸಿಕೊಳ್ಳುವಾಗ ಮಾಯಾರಾವ್‌ ಈಗಲೂ ಹರಯದ ಹುಡುಗಿಯಂತೆ ನಾಚಿಕೊಳ್ಳುತ್ತಾರೆ. ಏಕೆಂದರೆ ಮಾಯಾ ಅವರ ಪ್ರಕಾರ, ನಟರಾಜರ ಮೊದಲ ಭೇಟಿ ಅವರಲ್ಲಿ ನವಿರು ಭಾವನೆಗಳನ್ನು ಮೂಡಿಸಿದ್ದವು. ಹಳೆಯ ಹಿಂದಿ ಸಿನಿಮಾಗಳಲ್ಲಿನ ಪ್ರೇಮಕಥೆಗಳ ಆರಂಭ ಹೀಗೇ ಇರುತ್ತದಲ್ಲವೇ ಎಂಬುದು ಮಾಯಾ ಅವರ ತುಂಟ ಪ್ರಶ್ನೆ.

ಆ ಸಂದರ್ಭದಲ್ಲಿ  ಮಾಯಾರಾವ್‌ ಅವರ ಕಾಲೇಜು ವಿದ್ಯಾಭ್ಯಾಸ ನಡೆಯುತ್ತಿತ್ತು. ಸ್ಟೂಡೆಂಟ್‌ ಫೆಡರೇಷನ್‌ ಚಟುವಟಿಕೆಗಳಲ್ಲಿ ಮಾಯಾರಾವ್‌ ತಮ್ಮನ್ನು ಬಹಳವಾಗಿ ತೊಡಗಿಸಿಕೊಂಡಿದ್ದರು. ಸಮಾರಂಭ ಒಂದಕ್ಕೆ ಮಾಯಾ ಅವರ ಸಹಪಾಟಿ ಶ್ರೀಮತಿ ವಿಮಲಾ ರಂಗಾಚಾರ್ ಇಂಗ್ಲೀಷ್‌ ನಾಟಕ ಒಂದನ್ನು ಸಿದ್ಧಪಡಿಸುತ್ತಿದ್ದರು. ಮಾಯಾರಾವ್‌ ನೃತ್ಯ ರೂಪಕ ಒಂದಕ್ಕೆ ತಯಾರಿಮಾಡುತ್ತಿದ್ದರು. ಎಂ.ಎಸ್‌.ನಟರಾಜ್‌ ಸಂಗೀತ ಕಾರ್ಯಕ್ರಮ ಒಂದರ ಸಿದ್ಧತೆಯಲ್ಲಿದ್ದರು.

ಮಾಯಾರಾವ್‌ ಸಿದ್ಧಪಡಿಸುವ ರೂಪಕಕ್ಕೆ ಅವರ ಸಮಾಜದ ನೃತ್ಯ ಗುರುಗಳು ಸಂಗೀತದ ಸಹಾಯ ನೀಡಲು ಕಲಾವಿದನೊಬ್ಬನನ್ನು ಗೊತ್ತು ಮಾಡಿದ್ದರು. ಆದರೆ ಸರಿಯಾದ ಸಮಯಕ್ಕೆ ಆ ಕಲಾವಿದ ಕೈ ಕೊಟ್ಟುಬಿಟ್ಟ. ಸಂದಿಗ್ಧದ ಸಮಯದಲ್ಲಿ ಎಂ.ಎಸ್‌. ನಟರಾಜ್‌ ಸಹಾಯಕ್ಕೆ ಬಂದರು. ನಟರಾಜ್‌ ಅವರ ಸಲಹೆಯಂತೆ ಮಲ್ಲಾರಾಧ್ಯ ಅವರ ಪುತ್ರಿ ಸುಂದಾರ ಹಾಡುವುದಕ್ಕೆ, ನಟರಾಜ್‌ ಹಿನ್ನೆಲೆ ಸಂಗೀತ ನೀಡುವುದಕ್ಕೆ ವ್ಯವಸ್ಥೆಯಾಯಿತು. ರಿಹರ್ಸಲ್‌ ಸಮಯದಲ್ಲಿ ನಟರಾಜ್‌ ತಮ್ಮ ನೃತ್ಯ ರೂಪಕಕ್ಕೆ ಹಲವು ಸಲಹೆ ಸೂಚನೆಗಳನ್ನು ಕೊಡುತ್ತಿದ್ದುದು ಮಾಯಾ ಅವರ ಮನಸ್ಸು ನಟರಾಜ್‌ ಕಡೆ ತುಡಿಯಲು ಪ್ರಾರಂಭವಾಯಿತು.

ಆ ಹೊತ್ತಿಗಾಗಲೇ ನಟರಾಜ್‌ ತಮ್ಮ ಸರಸ್ವತಿ ಆರ್ಕೆಸ್ಟ್ರಾ ಮೂಲಕ ಜನಪ್ರಿಯರಾಗಿದ್ದರು. ಅಂದಿಗೆ ಸರಸ್ವತಿ ಆರ್ಕೆಸ್ಟ್ರಾ ದಕ್ಷಿಣ ಭಾರತದಲ್ಲಿ ಆ ರೀತಿಯ ಪ್ರಪ್ರಥಮ ಸಂಸ್ಥೆಯೆಂದು ಪ್ರಸಿದ್ಧಿಯಾಗಿತ್ತು. ಕ್ರಮೇಣ ಮಾಯಾ ಮತ್ತು ನಟರಾಜ್‌ ಒಳ್ಳೆಯ ಸ್ನೇಹಿತರಾಗಿ ಬೆಳೆಯ ತೊಡಗಿದರು. ಇಬ್ಬರೂ ಸೇರಿ ಆಗ ಹುಟ್ಟುಹಾಕಿದ ಸಂಗೀತ ನೃತ್ಯಗಳ ಸಂಸ್ಥೆ ‘ನಾಟ್ಯ ಸರಸ್ವತಿ’ ಈ ಸಂಸ್ಥೆಯ ಮೂಲಕ ಸಂಗೀತ ಮತ್ತು ನೃತ್ಯ ಎರಡೂ ಮಾಧ್ಯಮಗಳಲ್ಲಿ ಮಕ್ಕಳಿಗೆ ಒಳ್ಳೆಯ ತರಬೇತಿ ನೀಡುವುದು ಮಾಯಾ ಅವರ ಮುಖ್ಯ ಉದ್ದೇಶವಾಗಿತ್ತು.

ಇಷ್ಟರಲ್ಲಾಗಲೇ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಮಾಯಾ ಅವರಿಗೆ ಜೈಪುರದಲ್ಲಿ ಇಂಗ್ಲೀಷ್‌ ಉಪನ್ಯಾಸಕಿಯಾಗಿ ಉದ್ಯೋಗ ದೊರೆಯಿತು. ಈ ಉದ್ಯೋಗದ ನೆಪದಿಂದ ಜೈಪುರದಲ್ಲಿ ಕಥಕ್‌ ನೃತ್ಯ ಶೈಲಿಯ ಅತ್ಯುತ್ತಮ ಗುರುಗಳಿಂದ ತಮ್ಮ ನೃತ್ಯ ಶಿಕ್ಷಣ ಇನ್ನಷ್ಟ ಗಟ್ಟಿಯಾಗಬಹುದೆಂಬ ಆಶಯದಿಂದ ಮಾಯಾ ಜೈಪುರಕ್ಕೆ ತೆರಳಿದರು. ಆದರೆ ಮಾಯಾ ಅವರು ಬಹಳ ಕೇಳಿದ್ದ ಹಿರಿಯ ನೃತ್ಯ ಗುರುಗಳಾದ ಜೈಲಾಲ್‌, ಸುಂದರ್ ಪ್ರಸಾದ್‌ ಮುಂತಾದವರು ಜೈಪುರ ಬಿಟ್ಟು ಮುಂಬೈ, ಕಲ್ಕತ್ತಾ ಮುಂತಾದ ಕಡೆಗಳಿಗೆ ಹೊರಟು ಹೋಗಿದ್ದರು. ಮಾಯಾ ಅವರಿಗೆ ಬಹಳ ನಿರಾಸೆಯಾಯಿತು. ಹೀಗೆ ಎರಡು ವರ್ಷಗಳ ಕಾಲ ಇಷ್ಟವಿಲ್ಲದ ಉಪನ್ಯಾಸಕಿ ಹುದ್ದೆಯಲ್ಲಿ ಮಾಯಾ ಮುಂದುವರಿದರು.

ಅದೇ ಸಮಯದಲ್ಲಿ ಶ್ರೀಲಂಕಾದಲ್ಲಿದ್ದ ಮಾಯಾ ಅವರ ಸಹೋದರ ಶ್ರೀಲಂಕಾದ ಕ್ಯಾಂಡಿಯನ್‌ ನೃತ್ಯ ಕಲಿಯಲು ಮಾಯಾ ಅವರನ್ನು ಶ್ರೀಲಂಕಾಗೆ ಆಹ್ವಾನಿಸಿದರು. ತಾನು ಕಲಿತ ಕಥಕ್‌ ನೃತ್ಯವನ್ನು ಸಿಂಹಳೀಯರಿಗೆ ಕಲಿಸಿ, ಅವರಿಂದ ತಾನು ಕ್ಯಾಂಡಿಯನ್‌ ನೃತ್ಯ ಕಲಿಯಬಹುದೆಂದು ಮಾಯಾ ಶ್ರೀಲಂಕಾಗೆ ತೆರಳಿದರು. ಅಲ್ಲಿ ಗುರು ಶ್ರೀ ಚಿತ್ರಾ ಸೇನ್‌ ಅವರಿಂದ ಮಾಯಾ ಕ್ಯಾಂಡಿಯನ್‌ ನೃತ್ಯ ಕಲಿತರು. ಅದು ೧೯೫೩ರ ಸಮಯ.

ಶ್ರೀಲಂಕಾದಲ್ಲಿದ್ದಾಗಲೇ ಜೈಪುರದಲ್ಲಿದ್ದ ಸಂಬಂಧಿಗಳೊಬ್ಬರು. ದಿನಪತ್ರಿಕೆ ಪ್ರಕಟಣೆಯೊಂದನ್ನು ಮಾಯಾರಾವ್‌ ಅವರ ಗಮನಕ್ಕೆ ತಂದರು. ಅದು ಭಾರತ ಸರ್ಕಾರ ಗುರು ಶಂಭು ಮಹಾರಾಜ್‌ ಅವರಿಂದ ಕಥಕ್‌ ನೃತ್ಯ ಕಲಿಯಲು ಪ್ರತಿಭಾವಂತರಿಗೆ ಶಿಷ್ಯವೇತನ ನೀಡುವ ವಿಷಯ. ತಕ್ಷಣ ಮಾಯಾ ಅರ್ಜಿ ಸಲ್ಲಿಸಿದರು.

ಸುಮಾರು ತಿಂಗಳುಗಳ ನಂತರ ಲಕ್ನೋದಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಮಾಯಾ ಅವರಿಗೆ ಕರೆ ಬಂತು. ಕೇವಲ ಎರಡು ದಿನಗಳ ಸಮಯಾವಕಾಶದಲ್ಲಿ ಬಹಳ ಕಷ್ಟಪಟ್ಟು ಮಾಯಾ ಕೊಲಂಬೋದಿಂದ ಲಕ್ನೋಗೆ ಬಂದು ಸಂದರ್ಶನಕ್ಕೆ ಹಾಜರಾದರು.

೧೯೫೪ರ ಕೊನೆಯಲ್ಲಿ ಸಂದರ್ಶನದಲ್ಲಿ ಉತ್ತೀರ್ಣರಾಗಿ ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ಗುರು ಶಂಭು ಮಹಾರಾಜ ಅವರಲ್ಲಿ ಕಥಕ್‌ ನೃತ್ಯ ಕಲಿಯಲು ಆಯ್ಕೆಯಾದ ಪತ್ರ ಬಂತು. ಮಾಯಾ ತಮ್ಮ ಜೀವನದ ಮಹತ್ವದ ಕನಸೊಂದು ನನಸಾದ ಬಗ್ಗೆ ಸಂಭ್ರಮ ಪಟ್ಟರು.

ಹೀಗೆ ೧೯೫೫ರಲ್ಲಿ ಮಾಯಾರಾವ್‌ ಅವರು ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ಗುರು ಶಂಭು ಮಹಾರಾಜ್‌ ಅವರಿಂದ ಕಥಕ್‌ ನೃತ್ಯಾಭ್ಯಾಸ ಆರಂಭಿಸಿದರು. ಭಾರತ ಸರ್ಕಾರ ಎರಡು ವರ್ಷಗಳ ಅವಧಿಗೆ ಶಿಷ್ಯವೇತನ ನೀಡಿದ್ದರೂ, ಮಾಯಾ ಅವರ ಶ್ರದ್ಧೆಯನ್ನು ಗಮನಿಸಿ ಇನ್ನೂ ಒಂದು ವರ್ಷ ಶಿಷ್ಯವೇತನವನ್ನು ಮುಂದುವರಿಸಿತು.

೧೯೫೮ರಿಂದ ಗುರು ಶಂಭು ಮಹಾರಾಜ್‌ ಅವರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದ ಮಾಯಾ, ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ಈಗಿನ ಅನೇಕ ಪ್ರಸಿದ್ಧ ಕಥಕ್‌ ನೃತ್ಯ ಕಲಾವಿದರಿಗೆ ಶಿಕ್ಷಣ ನೀಡಿದರು. ಜೊತೆಗೆ ಇದೇ ಅವಧಿಯಲ್ಲಿ ಪಂಡಿತ್‌ ಸುಂದರ್ ಪ್ರಸಾದ್‌ ಅವರ ಮಾರ್ಗದರ್ಶನದಲ್ಲಿ ಜೈಪುರ್ ಘರಾನಾ ಪದ್ಧತಿ ಕಥಕ್‌ ಅಭ್ಯಾಸ ಮಾಡಿದರು. ಅಲ್ಲದೇ ಶಂಭು ಮಹಾರಾಜನರ ಅಣ್ಣ ಅಚನ್‌ ಮಹಾರಾಜ್‌ರ ಪುತ್ರ ಬ್ರಿಜು ಮಹಾರಾಜ್‌ ಅವರ ಜೊತೆಗೂಡಿ ಅನೇಕ ನೃತ್ಯರೂಪಕಗಳನ್ನು ಸಂಯೋಜಿಸಿದರು.

೧೯೫೮ರಿಂದ ಮಾಯಾರಾವ್‌ ಅವರ ಕಾರ್ಯಕ್ರಮಗಳ ಪರ್ವ ಕಾಲ ಆರಂಭವಾಯಿತು. ಕಲಾಕೇಂದ್ರದ ಎಲ್ಲ ರೂಪಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಜೊತೆಗೆ ಸೋಲೋ ನರ್ತಕಿಯಾಗಿ ಭಾರತ ಮತ್ತು ಸಿಲೋನ್‌ ದೇಶಗಳ ಪ್ರಮುಖ ಕೇಂದ್ರಗಳಲ್ಲಿ ಮತ್ತು ಪ್ರಮುಖ ಉತ್ಸವಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದರು.

೧೯೬೧ರಿಂದ ೬೪ ಮಾಯಾರಾವ್‌ ಅವರ ಬದುಕಿನ ಇನ್ನೊಂದು ಘಟ್ಟ. ರಷ್ಯಾದ ಮಾಸ್ಕೋದಲ್ಲಿರುವ State Institute of Theater Arts ಸಂಸ್ಥೆ ಕರೆದಿದ್ದ ಕೊರಿಯಾಗ್ರಫಿ ತರಬೇತಿಗೆ ಭಾರತ ಸರ್ಕಾರದಿಂದ ಆರಿಸಲ್ಪಟ್ಟು ರಷ್ಯಾ ಸರ್ಕಾರದ ಶಿಷ್ಯವೇತನ ಪಡೆದು ಕಲಿಯುವ ಅವಕಾಶ ಮಾಯಾ ಅವರಿಗೆ ಲಭಿಸಿತು. ನಂತರ ಅಲ್ಲಿನ Bolshoi Ballet ಸಂಸ್ಥೆಯ ನಿರ್ದೇಶಕರು ಮತ್ತು ಕಲಾವಿದರ ಜೊತೆ, ಅವರ ಮಕ್ಕಳಿಗಾಗಿ ನಿರ್ಮಿಸಿದ ರಾಮಾಯಣ ರೂಪಕಕ್ಕೆ ಕೆಲಸ ಮಾಡವ ಅವಕಾಶ ಮಾಯಾ ಅವರಿಗೆ ದೊರೆಯಿತು. ಜೊತೆಗೆ ರಷ್ಯಾದ ಪ್ರತಿಷ್ಠಿತ ರಿಗಾ ಸಂಸ್ಥೆ ತನ್ನ ಶಕುಂತಲಾ ರೂಪಕಕ್ಕೆ ಸಂಯೋಜಕಿಯಾಗಿ ಕೆಲಸ ಮಾಡಲು ಮಾಯಾ ಅವರನ್ನು ಆಹ್ವಾನಿಸಿತು.

ಈ ಎಲ್ಲಾ ತರಬೇತಿಗಳ ನಂತರ ದೆಹಲಿಗೆ ಹಿಂದಿರುಗಿದಕ ಮಾಯಾರಾವ್‌, ೧೯೬೪ರಲ್ಲಿ ದೆಹಲಿಯಲ್ಲಿ Natya Institute of Kathak & Choregraphy ಸಂಸ್ಥೆ ಪ್ರಾರಂಭಿಸಿದರು. ಇಲ್ಲಿ ಕಥಕ್‌ ಮತ್ತು ಕೊರಿಯಾಗ್ರಫಿ ವಿಷಯಗಳಲ್ಲಿ ಉತ್ಕೃಷ್ಟ ಮಟ್ಟದ ತರಬೇತಿ ಸಿಗುತ್ತಿತ್ತು. ಜೊತೆಗೆ ಕೋರಿಯಾಗ್ರಫಿ ವಿಭಾಗದಲ್ಲಿ ಡಿಪ್ಲೊಮಾ ಪದವಿ ಕೂಡ ಈ ಸಂಸ್ಥೆಯಲ್ಲಿ ಕೊಡಲಾಗುತ್ತಿತ್ತು.

ಈ ಸಂಸ್ಥೆ ಸ್ಥಾಪಿಸಲು ಒಂದು ಬಲವಾದ ಕಾರಣವಿದೆ. ಮಾಯಾರಾವ್‌ ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ರಷ್ಯಾಗೆ ತರಬೇತಿಗೆ ತೆರಳಲು ಮಾರ್ಗದರ್ಶನ ನೀಡಿ ಕಳುಹಿಸಿದವರು ಶ್ರೀಮತಿ ಕಮಲಾದೇವಿ ಚಟ್ಟೋಪಧ್ಯಾಯ. ರಷ್ಯಾದಿಂದ ಹಲವಾರು ಹೊಸ ಹೊಸ ವಿಚಾರಗಳೊಂದಿಗೆ ಬಂದ ಮಾಯಾರಾವ್‌ ಅವರಿಗೆ, ಅವರ ಅನುಭವಕ್ಕೆ ತಕ್ಕ ಪುರಸ್ಕಾರ ಭಾರತೀಯ ಕಲಾಕೇಂದ್ರದಲ್ಲಿ ದೊರೆಯಲಿಲ್ಲ. ಇದರಿಂದ ಬೇಸತ್ತ ಮಾಯಾರಾವ್‌, ತಮ್ಮನ್ನು ರಷ್ಯಾಗೆ ಕಳುಹಿಸಿದ, ಕಮಲಾದೇವಿಯವರೊಂದಿಗೆ ಈ ಬಗ್ಗೆ ಚರ್ಚಿಸಿದರು. ಆಗ ಕಮಲಾದೇವಿಯವರು ಅನಿಲ್‌ ಬಿಸ್ವಾಸ್‌, ಕಮಲಾ ನರೇಂದ್ರಲಾಲ್‌ ಮುಂತಾದವರೊಡನೆ ಚರ್ಚಿಸಿ ನಾಟ್ಯ ಇನ್‌ಸಸ್ಟಿಟ್ಯೂಟ್‌ಗೆ ಒಂದು ರೂಪು ನಿರ್ಮಿಸಿದರು.

ಇಷ್ಟೆಲ್ಲಾ ಚಟುವಟಿಕೆಗಳ  ಮಧ್ಯೆ ತಮ್ಮ ವೈಯಕ್ತಿಕ ಬದುಕಿನ ಕಡೆ ಗಮನವನ್ನೂ ಕೊಡಲು ಅಶಕ್ತರಾಗಿದ್ದ ಮಾಯಾರಾವ್‌, ಈಗ ಆ ಬಗ್ಗೆ ಗಮನಹರಿಸಿದರೇನೊ. ೧೯೪೭ರಲ್ಲಿ ಭೇಟಿಯಾಗಿ ಮನಸ್ಸಿನಲ್ಲಿ ಪ್ರೀತಿಯ ಮೊಳಕೆ ಬೆಳೆಸಿಕೊಂಡು, ಕಲಿಕೆಯ ದಾಹದಿಂದ ಭಾವನೆಗಳನ್ನು ಒಳಗೇ ಹಿಡಿದಿಟ್ಟುಕೊಂಡಿದ್ದ ಮಾಯಾ, ೧೯೬೪ರ ಡಿಸೆಂಬರ್ ೨೭ರಂದು ಎಂ.ಎಸ್‌. ನಟರಾಜ್‌ ಅವರನ್ನು ತಮ್ಮ ೩೬ನೇ ವಯಸ್ಸಿನಲ್ಲಿ ವಿವಾಹವಾದರು. ೧೯೭೧ರಲ್ಲಿ ಹೆಣ್ಣು ಮಗು ಒಂದಕ್ಕೆ ಜನ್ಮ ನೀಡಿದರು. ಮಾಯಾರಾವ್‌ ಅವರ ಒಬ್ಬಳೇ ಮಗಳು ಶ್ರೀಮತಿ ಮಧು ನಟರಾಜ್‌ ಹೇರಿ ಈಗ ಕಥಕ್‌ ನೃತ್ಯಶೈಲಿ ಮತ್ತು ಆಧುನಿಕ ನೃತ್ಯಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಪ್ರತಿಭಾವಂತ ಕಲಾವಿದೆ. ತಮ್ಮದೇ ಸ್ಟೆಮ್‌ ತಂಡದ ಮೂಲಕ ವಿಶ್ವಾದ್ಯಂತ ಕಾರ್ಯಕ್ರಮಗಳನ್ನು ಕೊಡುತ್ತಿದ್ದಾರೆ.

ವಾಸ್ತವವಾಗಿ ಮಾಯಾರಾವ್‌ ಅವರ ಕೌಟುಂಬಿಕ ಜೀವನ ಅವರ ಕಲಾಸಾಧನೆಗೆ ಅಡ್ಡಿಯೇನನ್ನೂ ಉಂಟುಮಾಡಲಿಲ್ಲ. ಮಾಯಾ ಪರಿಪೂರ್ಣ ಕಲಾವಿದೆಯಾಗಿ ರೂಪುಗೊಳ್ಳಲಿ ಎಂಬ ಒಂದೇ ಕಾರಣದಿಂದ ನಟರಾಜ್‌ ಸುಮರು ೧೮ ವರ್ಷಗಳ ಕಾಲ ಮಾಯಾ ಅವರಿಗಾಗಿ ಕಾದಿದ್ದರು. ಮದುವೆಯನಂತರ ನಟರಾಜ್‌ ಅವರ ತಂದೆ ಸ್ವಂತ ಮಗಳಂತೆ ಮಾಯಾ ಅವರನ್ನು ಆದರಿಸಿದರು. ಅವರ ಕುಟುಂಬದ ಇತರ‍ ಸದಸ್ಯರಿಂದಲೂ ಮಾಯಾ ಅವರಿಗೆ ಅಭಿಮಾನದ ಒತ್ತಾಸೆ ದೊರೆಯಿತು. ಮಗುವಾದ ಮೇಲಂತೂ ಮಾಯಾರಾವ್‌ ಸೋದರ ಸೋದರಿಯರು ಪುಟ್ಟ ಮಗುವಿನ ಜವಾಬ್ದಾರಿಯನ್ನು ತಾವು ತೆಗೆದುಕೊಂಡು, ತಮ್ಮ ಸೋದರಿಯ ಕಲಾ ಹಾದಿಯನ್ನು ಸುಗಮಗೊಳಿಸಿಕೊಟ್ಟರು. ಹಾಗಾಗಿ ಮಧು ತನ್ನ ಬಾಲ್ಯವನ್ನು ತಾಯಿಯ ಜೊತೆ ಇತರ ಮಕ್ಕಳಷ್ಟು ಕಳೆಯಲು ಸಾಧ್ಯವಾಗದಿದ್ದರೂ ಒಂಟಿಯಾಗಿ ಬೆಳೆಯುವ ಪರಿಸ್ಥಿತಿ ಬರಲಿಲ್ಲ.

ತುಳಸಿಕೆರಾಮ್‌, ಕೃಷ್ಣ ಲೀಲಾ, ವೆಂಕಟೇಶ್ವರ ವಿಲಾಸಂ, ಬಸವೇಶ್ವರ ವೈಭವ, ಶಾಂತಲಾ, ಪುಲಿಕೇಶಿ ಮತ್ತು ಹರ್ಷವರ್ಧನರ ಕೆಲವು ಘಟನೆಗಳನ್ನು ಆದರಿಸಿದ ಸಮರ್ ಶಾಂತಿ, ಕುವೆಂಪು ಅವರ ರಾಮಾಯಣ ದರ್ಶನಂ, ಮಾಸ್ತಿ ಅವರ ಕಾಮನ ಬಿಲ್ಲು ಅಮೀರ್ ಖುಸ್ರು, ಊರು ಭಂಗ ಇವೆಲ್ಲಾ ತಮ್ಮ ನಾಟ್ಯ ಸಂಸ್ಥೆಯಲ್ಲಿ ಮಾಯಾರಾವ್‌ ನಿರ್ಮಿಸಿ, ನಿರ್ದೇಶಿಸಿದ ರೂಪಕಗಳು. ಒಂದೊಂದು ವಸ್ತು ನಿರೂಪಣೆಯಲ್ಲಿ, ವಿಷಯ ಪ್ರತಿಪಾದನೆಯಲ್ಲಿ, ತಾಂತ್ರಿಕ ಅಳವಡಿಕೆಯಲ್ಲಿ ಮಾಯಾರಾವ್‌ ಅವರಿಗೆ ವಿಶ್ವವ್ಯಾಪಿ ಜನಮನ್ನಣೆ ಗಳಿಸಿಕೊಟ್ಟ ರೂಪಕಗಳು.

ಈ ನಡುವೆ ಮಾಯಾರಾವ್‌ ಅವರ ಕುಟುಂಬ ದೆಹಲಿ ಬೆಂಗಳೂರುಗಳ ನಡುವೆ ಓಡಾಡುತ್ತಿತ್ತು. ನಟರಾಜ್‌ ಸ್ವಲ್ಪ ತಿಂಗಳುಗಳು ದೆಹಲಿಲಯಲ್ಲಿದ್ದರೆ, ಮಾಯಾರಾವ್‌ ಕೆಲವು ತಿಂಗಳುಗಳು ಬೆಂಗಳೂರಿಗೆ ಬರುತ್ತಿದ್ದರು. ಒಮ್ಮೆ ತಮ್ಮಲ್ಲಿ ನೃತ್ಯ ಕಲಿಯುತ್ತಿದದ ಬಜಾಜ್‌ ಕುಟುಂಬದ ಕಲಾವಿದರೊಬ್ಬರು, ತಮ್ಮ ಹಿರಿಯರಾದ ರಾಮ್‌ಗೋಪಾಲ್‌ ಬಜಾಜ್‌ ಅವರಿಗೆ ಬಹಳ ಆತ್ಮೀಯರಾಗಿದ್ದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರನ್ನು ದೆಹಲಿಯ ನಾಟ್ಯ ಸಂಸ್ಥೆಗೆ ಅನುದಾನ ಕೇಳಲುಲ ಪರಿಚಯಿಸಿದರು. ಹೊರ ನಾಡ ಕನ್ನಡ ಕಲಾವಿದೆ ಎಂದು ಒಂದಷ್ಟು ಅನುದಾನ ಕೊಡಲು ಸಾಧ್ಯವಿದ್ದರೂ, ರಾಮಕೃಷ್ಣ ಹೆಗಡೆ ಒಂದು ಬೃಹತ್‌ ಯೋಜನೆಗೆ ಮಾಯಾ ಅವರನ್ನು ಪ್ರೇರೇಪಿಸಿದರು. ಅದು ದೆಹಲಿಯ ನಾಟ್ಯ ಸಂಸ್ಥೆಯನ್ನು ಬೆಂಗಳೂರಿಗೆ ಸ್ಥಳಾಂತರಿಸುವುದು. ಬಹಳ ಯೋಚಿಸಿದ ಮಾಯಾರಾವ್‌ ಹೆಗಡೆಯವರ ಆಹ್ವಾನವನ್ನು ಒಪ್ಪಿಕೊಂಡರು. ಆಗ ಕರ್ನಾಟಕ ಸರ್ಕಾರದ ಸಂಸ್ಕೃತಿ ಸಚಿವರಾಗಿದ್ದ ಶ್ರೀ ಜೀವರಾಜ ಆಳ್ವ ಹೆಗಡೆಯವರ ಆದೇಶದಂತೆ ಹೃದಯ ಪೂರ್ವಕವಾಗಿ ಸಹಕಾರ ನೀಡಿದರು. ಬೆಂಗಳೂರಿನ ಸಮಾಜ ಸೇವಕಿ ವಿಮಲಾ ರಂಗಾಚಾರ್ ಸಂಸ್ಥೆಗೆ ತಮ್ಮ ಉಸ್ತುವಾರಿಯಲ್ಲಿದ್ದ ಭೂಮಿಕಾದಲ್ಲಿ ವ್ಯವಸ್ಥೆ ಮಾಡಿಕೊಟ್ಟರು. ಹೀಗೆ ದೆಹಲಿಯ ನಾಟ್ಯ ಸಂಸ್ಥೆ ಬೆಂಗಳೂರಿಗೆ ಬಂತು. ಜೊತೆಗೆ ಕರ್ನಾಟಕದ ಕಲಾವಿದರಿಗೆ ಕಥಕ್‌ ನೃತ್ಯ ಸಂಪ್ರದಾಯ ಕಲಿಕೆಗೆ ಒಂದು ಶಿಸ್ತಿನ ಗುರುಕುಲ ದೊರೆಯಿತು. ಈಗ ನಾಟ್ಯ ಸಂಸ್ಥೆ ಕೊರಿಯಾಗ್ರಫಿ ವಿಭಾಗದಲ್ಲಿ ಬ್ಯಾಚುಲರ್ ಪದವಿ ನೀಡುತ್ತಿದ್ದು, ಈ ಪದವಿ ಕರ್ನಾಟದಕದಲ್ಲಿ ಪ್ರಥಮ ಎನಿಸಿಕೊಂಡಿದೆ ಮತ್ತು ಈ ಬ್ಯಾಚುಲರ್ ಪದವಿಗೆ ಬೆಂಗಳೂರು’ ವಿಶ್ವವಿದ್ಯಾಲಯದ ಮಾನ್ಯತೆ ಇದೆ.

ನಂತರದ್ದೆಲ್ಲಾ ನಮ್ಮೆದುರೆ ಇರುವ ವಾಸ್ತವ. ಏಕೆಂದರೆ ನಾಟ್ಯ ಸಂಸ್ಥೆ ಬೆಂಗಳೂರಿಗೆ ಬಂದ ನಂತರ ಮಾಯಾರಾವ್‌ ಅವರ ಸಂಪೂರ್ಣ ಪ್ರತಿಭೆಯನ್ನು ಕರ್ನಾಟಕದ ಕಲಾವಿದರು ಬಳಸಿಕೊಳ್ಳುತ್ತಿದ್ದಾರೆ. ಕಥಕ್‌ ಶೈಲಿಯಲ್ಲಿ ಅನೇಕ ವೃತ್ತಿಪರ ಕಲಾವಿದರು ಕರ್ನಾಟಕದಲ್ಲಿ ರೂಪುಗೊಂಡಿದ್ದಾರೆ. ಒಂದೇ ಇದ್ದ ಕಥಕ್‌ ನೃತ್ಯಶಾಲೆ ಕ್ರಮೇಣ ಹಲವಾಗುತ್ತಿವೆ. ದೇಶದ ಪ್ರತಿಷ್ಠಿತ ನೃತ್ಯೋತ್ಸವಗಳ ವ್ಯವಸ್ಥಾಪಕರು ಕಥಕ್‌ ಕಲಾವಿದರು ಬೇಕೆನಿಸಿದಾಗ ಕರ್ನಾಟಕದತ್ತ ಭರವಸೆಯಿಂಧ ನೋಡುತ್ತಿದ್ದಾರೆ. ಇದನ್ನೆಲ್ಲಾ ಕಂಡು ಮಾಯಾರಾವ್‌ ಕಣ್ಣುಗಳಲ್ಲಿ ಸಂತೃಪ್ತಿಯ ಕಂಬನಿ ತುಳುಕುತ್ತಿದೆ.

ಮಾಐಆರಾವ್‌ ಅವರ ಸಾಧನೆಗೆ ಸಂದ ಪ್ರಶಸ್ತಿ, ಪುರಸ್ಕಾರಗಳು ಹಲವಾರು. ಹೆಲ್ಸಿಂಕಿಯಲ್ಲಿ ನಡೆದ world Theater Festival ನಲ್ಲಿ, ೩೬ ದೇಶಗಳ ಕಲಾವಿದರನ್ನು ಹಿಂದಿಕ್ಕಿ, ತಮ್ಮ ಸೋಲೋ ಪ್ರದರ್ಶನಕ್ಕೆ ಚಿನ್ನದ ಪದಕ ಪಡೆದ ಹೆಗ್ಗಳಿಕೆ ಮಾಯಾರಾವ್‌ ಅವರದು. ೧೯೮೫ರಲ್ಲಿ ದೆಹಲಿಯ ಸಾಹಿತ್ಯ ಕಲಾ ಪರಿಷತ್‌ ಪ್ರಶಸ್ತಿ, ೧೯೮೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೬ರಲ್ಲಿ ದೆಹಲಿಯ choreofest Award, ೧೯೬೮ರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೮೯ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ೨೦೦೦, ಇವೆಲ್ಲ ಕೆಲವು ಪ್ರಮುಖ ಪುರಸ್ಕಾರಗಳು.

ಇವೆಲ್ಲಕ್ಕೂ ಕಳಸವಿಟ್ಟಂತೆ ಕರ್ನಾಟಕ ಸರ್ಕಾರ ೧೯೮೭-೯೦ರ ಅವಧಿಗೆ ಮಾಯಾರಾವ್‌ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ತಮ್ಮ ಅಧ್ಯಕ್ಷ ಅವಧಿಯಲ್ಲಿ ಮಾಯಾ ಹಲವು ಕ್ರಿಯಾಶೀಲ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು.

ಇಂತಹ ಕ್ರಿಯಾಶೀಲ, ಪ್ರತಿಭಾವಂತ ಕಲಾವಿದೆ ನಮ್ಮವರು ಎಂಬುದು ಎಲ್ಲಾ ನಾಡ ನಾಗರಿಕರಿಗೆ ಅಭಿಮಾನದ ಸಂಗತಿ. ಮಾಯಾರಾವ್‌ ಇನ್ನೂ ನೂರ್ಕಾಲ ಬಾಳಬೇಕು.