ಎಂ.ಎ. ಪದವೀಧರರಾದ ಮಾಯಾರಾವ್ ಅವರು ಪ್ರಸಿದ್ಧನಾಟ್ಯ ಗುರುಗಳಾದ ಪದ್ಮಶ್ರೀ ಶ್ರೀ ಶಂಭುಮಹಾರಾಜ್ ಹಾಗೂ ಶ್ರೀ ಸುಂದರಪ್ರಸಾದ್ ಅವರಿಂದ ಕಥಕ್ ಅಭ್ಯಸಿಸಿ. ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ನಾಟ್ಯ ರಚನಾ ವಿಧಾನದಲ್ಲಿ ಪ್ರೌಢಿಮೆ ಗಳಿಸಿರುವ ಇವರು ಈ ವಿಷಯದಲ್ಲಿ ರಷ್ಯ ದೇಶದ ಸ್ನಾತಕೋತ್ತರ ಪದವಿ ಗಳಿಸಿರುವ ಭಾರತದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ. ಇವರು ೫೦ಕ್ಕೂ ಹೆಚ್ಚಿನ ನೃತ್ಯ ರೂಪಕಗಳನ್ನು ರಚಿಸಿ ವಿದೇಶಗಳಲ್ಲಿ ಪ್ರದರ್ಶಿಸಿದ್ದಾರೆ. ೧೯೮೭ ರಿಂದ ೧೯೯೦ರವರೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಕಲಾ ಕ್ಷೇತ್ರದ ಕೊಡುಗೆಗಾಗಿ ಇವರಿಗೆ ರಾಷ್ಟ್ರ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ, ಶಾಂತಲಾ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ನಾಟ್ಯ ರಚನಾ ವಿಧಾನಕ್ಕಾಗಿ ಪ್ರಶ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹೆಚ್. ಆರ್. ಡಿ. ಫೆಲೋಶಿಪ್ ಸಂದಾಯವಾಗಿದೆ. ಇವರು ದೇಶವಿದೇಶಗಳ ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ ಹಾಗೂ ಅನೇಕ ಗ್ರಂಥಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಡಾ. ಮಾಯಾರಾವ್ ಅವರು ಬೆಂಗಳೂರು ಮಲ್ಲೇಶ್ವರಂನಲ್ಲಿರುವ ನಾಟ್ಯ ಇನ್ಸ್‌ಟಿಟ್ಯೂಟ್ ಆಫ್ ಕಥಕ್ ಅಂಡ್ ಕೂರಿಯೋಗ್ರಫಿ ಎಂಬ ನಾಟ್ಯ ಕಾಲೇಜಿನ ಸಂಸ್ಥಾಪಕರಾಗಿದ್ದು ಪ್ರಸ್ತುತ ಅದರ ಸರ್ವತೋಮುಖ ಏಳಿಗೆಯಲ್ಲಿ ಕಾರ್ಯನಿರತರಾಗಿದ್ದಾರೆ. ಇವರ ಕಾಲೇಜಿನಿಂದ ೧೦೦೦ಕ್ಕೂ ಹೆಚ್ಚು ನೃತ್ಯಗಾರರು ಪದವಿ ಪಡೆದಿದ್ದಾರೆ. ಪ್ರಸ್ತುತ ಇವರಲ್ಲಿ ಕೆಲವರು ದೇಶ-ವಿದೇಶಗಳಲ್ಲಿ ಖ್ಯಾತನಾಮರಾಗಿದ್ದಾರೆ.