ಜೈವಿಕ ಇಂಧನ ಬೀಜಗಳಿಗೆ ಪ್ರಸ್ತುತ ನಿಗದಿತ ಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಬೀಜಗಳ ಬೆಲೆಯನ್ನು ಪೂರೈಕೆ ಹಾಗು ಬೇಡಿಕೆಯ ಆದಾರದ ಮೇಲೆ ನಿಗದಿ ಪಡಿಸಲಾಗುವುದು. ಆದರೆ, ಮುಂದಿನ ದಿನಗಳಲ್ಲಿ ಎಣ್ಣೆ ಬೀಜಗಳಿಗೆ, ಜೈವಿಕ ಇಂಧನ ಮತ್ತು ಜೈವಿಕ ಇಂಧನ ಉಪ-ಉತ್ಪನ್ನಗಳಿಗೆ ನಿಶ್ಚಿತವಾದ ಮಾರುಕಟ್ಟೆ ನಿರ್ಮಾಣವಾಗುವುದರಲ್ಲಿ  ಯಾವ ಸಂಶಯವೂ ಇಲ್ಲ.

ಆದುದರಿಂದ ಈ ನಿಟ್ಟಿನಲ್ಲಿ ಸಂಘಟಿತವಾದ ಬೀಜಸಂಗ್ರಹಣಾ ಜಾಲ ಹಳ್ಳಿಗಳಲ್ಲಿ ಪ್ರಾರಂಭವಾಗಬೇಕಾಗಿದೆ. ಈ ಸಂಗ್ರಹಣಾ ಜಾಲವು ಈಗ ಪ್ರಚಲಿತದಲ್ಲಿರುವ ಹಾಲು ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡಬಹುದು. ಹೀಗೆ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಹೋಬಳಿ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಎಣ್ಣೆ ತೆಗೆಯುವ ಯಂತ್ರವನ್ನು ಸ್ಥಾಪಿಸಿ, ತೆಗೆದಂತಹ ಎಣ್ಣೆಯನ್ನು ಮತ್ತು ಹಿಂಡಿಯನ್ನು ಪುನಃ ಇದೇ ಸಹಕಾರ ಸಂಘದ ಸದಸ್ಯರುಗಳಿಗೆ ಮೊದಲು ಕೊಡುವ ವ್ಯವಸ್ಥೆ ಮಾಡಬಹುದು. ಈ ಎಣ್ಣೆಯನ್ನು ರೈತರು ಡೀಸಲ್ ಜೊತೆ ಶೇ. ೧೦ ರಿಂದ ೨೦ ರವರೆಗೆ ಮಿಶ್ರಣಮಾಡಿ ಟ್ರ್ಯಾಕ್ಟರ್, ಟಿಲ್ಲರ್ ಮತ್ತು ಪಂಪ್‌ಸೆಟ್‌ಗಳಿಗೆ ಬಳಸಬಹುದು. ನಂತರ ಉಳಿದ ಹೆಚ್ಚಿನ ಎಣ್ಣೆಯನ್ನು ಜೈವಿಕ ಡೀಸಲ್ ಉತ್ಪಾದಿಸಲು ಕಾರ್ಖಾನೆಗಳಿಗೆ ಕಳುಹಿಸಬಹುದು.  ಸಣ್ಣ ಪ್ರಮಾಣದಲ್ಲಿ ಜೈವಿಕ ಇಂಧನ ಉತ್ಪಾದಿಸುವ ಯಂತ್ರಗಳನ್ನು ಕೃಷಿ ವಿಶ್ವ ವಿದ್ಯಾಲಯದಿಂದ ಅಭಿವೃದ್ಧಿ ಪಡಿಸಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಜನೆ ಹಾಗೂ ಆದಾಯ ತರಬಲ್ಲ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಿದೆ.

ಸಹಕಾರ ಸಂಘದ ಮಾದರಿಯಲ್ಲಿ ಜೈವಿಕ ಇಂಧನ ಮರಗಳ ಬೀಜಗಳನ್ನು ಸಂಗ್ರಹಿಸುವುದರಿಂದ ರೈತರಿಗೆ ಅನುಕೂಲವಾಗಿ ಮಧ್ಯವರ್ತಿಗಳನ್ನು ದೂರಮಾಡಬಹುದು. ಇದರಿಂದ ನಿಗದಿತ ಬೆಲೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ಶೇಖರಣೆ ಮಾಡಲು ಸಹಾಯಕವಾಗುತ್ತದೆ. ಈ ರೀತಿಯಲ್ಲಿ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಸಂಸ್ಕರಿಸಲು ಈ ಕೆಳಗಿನ ವಿಧದಲ್ಲಿ ಯೋಜನೆ ಹಾಕಬಹುದು;

 • ಸಂಗ್ರಹಿಸಿದ ಬೀಜಗಳನ್ನು ಕಾರ್ಖಾನೆಗೆ ಮಾರುವುದು.
 • ಗ್ರಾಮೀಣ ಮಟ್ಟದಲ್ಲಿಯೇ ಎಣ್ಣೆ ತೆಗೆಯುವ ಘಟಕಗಳನ್ನು ಸ್ಥಾಪಿಸುವುದು.
 • ಎಣ್ಣೆಯನ್ನು ಮತ್ತು ಹಿಂಡಿಯನ್ನು ಆ ಹಳ್ಳಿಯ ಸಂಘದ ಸದಸ್ಯರು ಖರೀದಿಸಿ ಉಪಯೋಗಿಸಬಹುದು.
 • ಹೆಚ್ಚಿಗೆ ಉಳಿದ ಎಣ್ಣೆಯನ್ನು ಶುದ್ಧೀಕರಿಸಿ ಜೈವಿಕ ಡೀಸಲ್ ಮಾಡಲು ವ್ಯವಸ್ಥಿತ ಕಾರ್ಖಾನೆಗೆ ಮಾರಾಟ ಮಾಡುವುದು.

ಮಾರುಕಟ್ಟೆ ವ್ಯವಸ್ಥೆಯ ಸ್ಥಾಪನೆ

 • ರೈತರಿಂದ ಉತ್ಪನ್ನಗಳನ್ನು ಶೇಖರಿಸಿ ಗ್ರಾಮಮಟ್ಟದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ.
 • ಖಚಿತ ಮತ್ತು ನಿಗದಿತ ಬೆಲೆಯನ್ನು ಒದಗಿಸುವ ವ್ಯವಸ್ಥೆ.
 • ಹಾಲು ಉತ್ಪಾದನಾ ಸಂಘಗಳ ಮಾದರಿಯಲ್ಲಿ ಮಾರುಕಟ್ಟೆ ಜಾಲವನ್ನು ಸ್ಥಾಪಿಸುವುದು.

ಉತ್ಪಾದನಾ ಘಟಕಗಳ ಸ್ಥಾಪನೆ

 • ಗೃಹ ಮಟ್ಟದಲ್ಲ್ಲಿ ಬೀಜಗಳಿಂದ ಎಣ್ಣೆಯನ್ನು ಹೊರತೆಗೆಯುವ ಯಂತ್ರಗಳ ಬಳಕೆ.
 • ಗ್ರಾಮ, ಹೋಬಳಿ ಹಾಗೂ ತಾಲ್ಲೂಕುಮಟ್ಟದಲ್ಲಿ ಗುಣಮಟ್ಟದ ಎಣ್ಣೆಗಾಣಗಳನ್ನು ಸ್ಥಾಪಿಸುವುದು.
 • ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜೈವಿಕ ಇಂಧನವನ್ನು ಉತ್ಪತ್ತಿಮಾಡುವ ಘಟಕಗಳ ನಿರ್ಮಾಣ.

ಜೈವಿಕ ಇಂಧನಗಳನ್ನು ಖರೀದಿ ಮಾಡುವ ಸಂಸ್ಥೆಗಳು

 • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
 • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.
 • ದಕ್ಷಿಣ ರೈಲು ಸಂಸ್ಥೆ.
 • ಭಾರತೀಯ ತೈಲ ನಿಗಮ.

ಕೃಷಿ ವಿಜ್ಞಾನ ಕೇಂದ್ರಗಳು

ಜೈವಿಕ ಇಂಧನ ಬೀಜ ಉತ್ಪಾದನ/ಸಂಗ್ರಹಗಾರರ ಸಂಘ

ಇತ್ತೀಚಿನ ವರ್ಷಗಳಲ್ಲಿ ಜೈವಿಕ ಇಂಧನ ತಯಾರಿಕೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆಯುತ್ತಿರುವ ಹೊಂಗೆ, ಬೇವು, ಬೇಲಿಹರಳು (ಜಟ್ರೋಪ), ಹಿಪ್ಪೆ ಹಾಗೂ ಇತರೆ ತತ್ಸಂಬಂಧ ಗಿಡಗಳಿಂದ ಬರುವ ಬೀಜ ಸಂಗ್ರಹಣೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.  ಈ ಗಿಡಗಳ ಬೀಜ ಮಾರಾಟದಿಂದ ರೈತರಿಗೆ ಅನುಕೂಲ ಹಾಗೂ ಉತ್ತಮ ಆದಾಯ ತರುವ ಸಾಧ್ಯತೆಗಳು ಹೆಚ್ಚಾಗಿವೆ.  ಆದಕಾರಣ ಗ್ರಾಮಮಟ್ಟದಲ್ಲಿ ಆಸಕ್ತ ರೈತರ/ರೈತ ಕುಟುಂಬಗಳ ಸಂಘಟನೆಯ ಮೂಲಕ ಜೈವಿಕ ಇಂಧನ ಗಿಡಗಳಿಂದ ಎಣ್ಣೆ ಬೀಜಸಂಗ್ರಹಣೆ ಮಾಡಿ ಮಾರಾಟ ಮಾಡುವ ವ್ಯವಸ್ಥೆ ಅವಶ್ಯಕವಾಗಿದೆ.

ಇತ್ತೀಚಿನ ದಿನದವರೆಗೆ ಈ ಬೀಜ ಸಂಗ್ರಹಣೆ ಹಾಗೂ ಮಾರಾಟ ವ್ಯಕ್ತಿಗತ ಕಾರ್ಯಕ್ರಮವಾಗಿದ್ದು ಇದೀಗ ಸಾಮೂಹಿಕವಾಗಿ ಬೀಜ ಸಂಗ್ರಹಿಸಿ ಮಾರಾಟ ಮಾಡುವ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಕಂಡು ಬಂದಿದೆ.

ಈ ವ್ಯವಸ್ಥೆಯಿಂದ ರೈತರಿಗೆ ಒಳ್ಳೆಯ ನಿಶ್ಚಿತ ಬೆಲೆ, ಗ್ರಾಮದಲ್ಲಿ ಬೀಜಗಳ ವಿಲೇವಾರಿ ಹಾಗೂ ಎಲ್ಲಾ ಉತ್ಪನ್ನಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಅನುಕೂಲತೆಗಳು ಹೆಚ್ಚಾಗಿವೆ.

ಈ ನಿಟ್ಟಿನಲ್ಲಿ ಒಂದು ವ್ಯವಸ್ಥಿತ ಮಾರುಕಟ್ಟೆಯನ್ನು ರೂಪಿಸಲು ಹಾಗೂ ಹೆಚ್ಚು ಬೇಡಿಕೆಯುಳ್ಳ ಎಣ್ಣೆ ಬೀಜಗಳನ್ನು ಸಮೀಪದಲ್ಲೆ ಸ್ಥಾಪಿಸಲಾಗುವ ಎಣ್ಣೆ ತೆಗೆಯುವ / ಜೈವಿಕ ಡೀಸೆಲ್ ತಯಾರಿಸುವ ಕೇಂದ್ರಕ್ಕೆ ಒದಗಿಸುವ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.

ಪ್ರಸ್ತುತದಲ್ಲಿ ಉತ್ಪಾದನೆಯ ಪ್ರಮಾಣಕ್ಕೆ ಅನುಗುಣವಾಗಿ ಎಣ್ಣೆ ಗಿರಣಿಗಳನ್ನು ಸ್ಥಾಪಿಸಲಾಗುತ್ತದೆ.  ಹಾಗೂ ಮಾರುಕಟ್ಟೆ ವ್ಯವಸ್ಥೆಗಾಗಿ ಸಾರ್ವಜನಿಕ ವಲಯದ ಉದ್ದಿಮೆಗಳಾದ ರೈಲ್ವೆ ಇಲಾಖೆ, ಸಾರಿಗೆ ಸಂಸ್ಥೆ ಇತರೆ ಸಾರ್ವಜನಿಕ ಉದ್ದಿಮೆಗಳು ಇತ್ಯಾದಿಗಳ ಜೊತೆ ಸೂಕ್ತ ಒಪ್ಪಂದಗಳನ್ನು ಮಾಡಲಾಗುತ್ತದೆ.

ರೈತರ ಸಹಕಾರ ಸಂಘ, ಖಾಸಗಿ ಉದ್ದಿಮೆದಾರರು ಇತರೆ ಸಂಘ ಸಂಸ್ಥೆಗಳು ಜೈವಿಕ ಇಂಧನ ತಯಾರಿಸಲು ಮುಂದೆ ಬರುತ್ತಿದ್ದಾರೆ.  ಇವುಗಳಿಗೆ ವ್ಯವಸ್ಥಿತವಾಗಿ ಬೀಜಗಳ ಪೂರೈಕೆ ಆಗಬೇಕಾಗಿದೆ, ಹಾಗೂ ಮುಂಬರುವ ದಿವಸಗಳಲ್ಲಿ ಉತ್ಪಾದನೆ ಹೆಚ್ಚಾಗುವಲ್ಲಿ ರೈತರ ಪಾತ್ರ ಗಣನೀಯವಾಗಿರುವುದು.

ಈ ಕಾರ್ಯಕ್ರಮದಿಂದ ರೈತರಿಗೆ ಹೆಚ್ಚು ಲಾಭ.  ವರ್ಷವಿಡೀ (ಪ್ರತಿ ತಿಂಗಳು) ನಿರ್ದಿಷ್ಟ ಪ್ರಮಾಣದ ಆದಾಯವನ್ನು ತರುವ  ನಿಟ್ಟಿನಲ್ಲಿ ಈ ಸಂಘಗಳ ರಚನೆ ಅಮೂಲ್ಯವಾದದ್ದು.

ಸಂಘಗಳ ರಚನೆ ಉದ್ದೇಶ

 • ರೈತರ ಹಿಡುವಳಿಯಲ್ಲಿ ಬೆಳೆದಿರುವ ಎಣ್ಣೆ ಬೀಜಗಳ ಗಿಡಗಳಿಂದ ಬೀಜ ಸಂಗ್ರಹಣೆ.
 • ಸಾಮೂಹಿಕವಾಗಿ ಗ್ರಾಮದ ರೈತರ ಉತ್ಪತ್ತಿಯನ್ನು ಮಾರಾಟ ಮಾಡುವುದು.

ಮಧ್ಯವರ್ತಿಗಳಿಂದ ರೈತರಿಗಾಗುವ ಶೋಷಣೆ ತಡೆಯುವುದು ಹಾಗೂ ಬೆಳೆ ಬೆಳೆದ ರೈತನಿಗೆ ಅಧಿಕ ಲಾಭ ಒದಗಿಸುವುದು.

 • ಎಲ್ಲಾ ಸದಸ್ಯರಿಗೂ ಏಕ ರೂಪ ಬೆಲೆ ದೊರಕಿಸುವುದು.
 • ಎಲ್ಲಾ ಉತ್ಪತ್ತಿಯನ್ನು ಮಾರಾಟ ಮಾಡಲು ಅನುವು ಮಾಡಿಕೊಳ್ಳುವುದು.
 • ಆಸಕ್ತ ರೈತರು ಬೀಜಗಳಿಂದ ಗೃಹ ಮಟ್ಟದಲ್ಲಿ ಎಣ್ಣೆ ತೆಗೆಯುವುದು ಮತ್ತು ಮಾರಾಟ ಮಾಡುವುದು.
 • ಹೆಚ್ಚಿನ ಬೀಜ ಉತ್ಪತ್ತಿಯಾದಲ್ಲಿ ಸಂಘವು ತನ್ನದೇ ಆದ ಎಣ್ಣೆ ಉತ್ಪಾದನ ಘಟಕ ಪ್ರಾರಂಭಿಸುವುದು.
 • ಎಣ್ಣೆ ಹಾಗೂ ಹಿಂಡಿಯನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದು ಹಾಗೂ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗುವುದು.
 • ಗ್ರಾಮ ಸಂಘಗಳ ಒಕ್ಕೂಟವನ್ನು ನಂತರದ ದಿನಗಳಲ್ಲಿ ಗ್ರಾಮಪಂಚಾಯಿತಿ ಅಥವಾ ಹೋಬಳಿ ಮಟ್ಟದಲ್ಲಿ ರಚಿಸುವುದು.
 • ಪ್ರಾರಂಭಿಕ ಹಂತದಲ್ಲಿ ಗ್ರಾಮಮಟ್ಟದ ವ್ಯವಸ್ಥೆಯನ್ನು ರಚಿಸುವುದು.

ಸದಸ್ಯತ್ವ ಹಾಗು ರಚನೆ

 • ಗ್ರಾಮದ ಎಲ್ಲಾ ಹಿಡುವಳಿದಾರರು ಸಂಘದ ಸದಸ್ಯರಾಗಲು ಅರ್ಹತೆಯುಳ್ಳವರಾಗಿರುತ್ತಾರೆ.
 • ಹತ್ತು ಜನ ಸದಸ್ಯರುಗಳು ಸಂಘದ ಪದಾಧಿಕಾರಿಗಳಾಗಿದ್ದು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸುವುದು.
 • ಪದಾಧಿಕಾರಿಗಳಲ್ಲಿ ಓರ್ವ ಅಧ್ಯಕ್ಷರು, ಓರ್ವ ಉಪಾಧ್ಯಕ್ಷರು, ಓರ್ವ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿಗಳು ದೈನಂದಿನ ಕಾರ್ಯಕ್ರಮಗಳನ್ನು ನೋಡಿಕೊಳ್ಳುವುದು.
 • ಪದಾಧಿಕಾರಿಗಳು ಪ್ರತಿ ತಿಂಗಳು ಸಭೆ ನಡೆಸಿ ಸಂಘದ ಕಾರ್ಯಚಟುವಟಿಕೆಗಳನ್ನು ಪರಾಮರ್ಶಿಸುವುದು.
 • ಆಗಿಂದಾಗ್ಗೆ ಹಾಗೂ ವರ್ಷದಲ್ಲಿ ಎರಡು ಬಾರಿ ನಿಶ್ಚಿತ ದಿನದಂದು (ಜೂನ್ ಹಾಗೂ ಡಿಸೆಂಬರ್) ಎಲ್ಲಾ ಸದಸ್ಯರುಗಳಿಗೂ ಸಂಘದ ಕೆಲಸಕಾರ್ಯ ಹಾಗೂ ಇತರೆ ವಿಚಾರಗಳನ್ನು ತಿಳಿಸುವುದು.

ಕಾರ್ಯಕ್ರಮಗಳು

 • ಸಂಘದ ಸದಸ್ಯರುಗಳು ಎಣ್ಣೆ ಬೀಜ ಸಂಗ್ರಹಿಸಿ ಸೂಕ್ತ ಸಮಯದಲ್ಲಿ (ದಿವಸಕ್ಕೆ ಒಂದು ಬಾರಿ) ಉತ್ಪತ್ತಿಯನ್ನು ಒಟ್ಟು ಮಾಡಿ ಮಾರಾಟದ ವ್ಯವಸ್ಥೆಯನ್ನು ಮಾಡುವುದು.
 • ಮಾರಾಟದ ಮೊಬಲಗನ್ನು ಸದಸ್ಯರುಗಳಿಗೆ ಹಂಚಿ ಶೇಕಡ ೨ ರಷ್ಟನ್ನು ಸಂಘದ ಕಾರ್ಯಚಟುವಟಿಕೆಗಳಿಗೆ ಉಪಯೋಗಿಸುವುದು
 • ಇತರೆ ಸಂಘಗಳು ಹಾಗೂ ಎಣ್ಣೆ ಉತ್ಪಾದನಾ ಘಟಕಗಳೊಡನೆ ಸಂಬಂಧ ಇರಿಸಿಕೊಂಡು ಬೆಲೆಯ ಸ್ಥಿರತೆಯನ್ನು ಕಾಪಾಡುವುದು.
 • ಸಂಘದ ಸದಸ್ಯರುಗಳು ತಮ್ಮ ಉತ್ಪಾದನೆ ಹೆಚ್ಚಿಸುವಲ್ಲಿ ಕಾರ್ಯತತ್ಪರರಾಗುವುದು.
 • ಯಾವುದೇ ರೀತಿಯಲ್ಲಿ ಕೃಷಿಗೆ ಧಕ್ಕೆಯಾಗದಂತೆ ಎಣ್ಣೆ ಬೀಜ ಗಿಡಗಳನ್ನು ಬೆಳೆಸುವುದು (ಬದು, ಬಂಜರು, ಹಿತ್ತಲು, ಕೊರಕಲು, ಬೇಲಿ ಇತ್ಯಾದಿ ಪ್ರದೇಶದಲ್ಲಿ ಮಾತ್ರ ಬೆಳೆಸುವುದು)

ಮಧ್ಯದ ಬೆಳೆಯಾಗಿ ಪುಂಡಿ, ಹರಳು ತರಹದ ಅಲ್ಪಾವದಿ ಬೆಳೆಗಳನ್ನು ರೈತರು ಬೆಳೆಯಲು ಪ್ರೋತ್ಸಾಹಿಸುವುದು.

ಇತರೆ ಕಾರ್ಯಗಳು

೧. ಕೃಷಿ ಇಲಾಖೆ, ಜೈವಿಕ ಇಂಧನ ಉದ್ಯಾನ, ಮಡೆನೂರು, ಎಣ್ಣೆ ಉತ್ಪಾದನೆ ಗಿರಣಿಗಳು, ಪೂರಕ ಇಲಾಖೆಗಳೊಡನೆ ಸಂಪರ್ಕವಿರಿಸಿಕೊಳ್ಳುವುದು

೨. ರೈತರಿಗೆ ಮಾಹಿತಿ ಒದಗಿಸುವುದು, ಉತ್ತಮ ಜಾತಿ ಗಿಡಗಳನ್ನು ಪಡೆದು ನೆಡಲು ಪ್ರೇರೇಪಿಸುವುದು, ಬೀಜ ಕೊಯ್ಲು ಸಮಯ, ಸಂಗ್ರಹ ಹಾಗೂ ಮಾರಾಟಕ್ಕೆ ಯೋಗ್ಯವಾದ ಸಂಸ್ಕರಿಸುವ ಕಾರ್ಯವನ್ನು ನಡೆಸಿಕೊಂಡು ಬರುವುದು

೩. ಜೈವಿಕ ಇಂಧನ ಉದ್ಯಾನ, ಮಡೆನೂರು ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರಗಳಿಂದ ಸೂಕ್ತ ಸಮಯಗಳಲ್ಲಿ ಮಾಹಿತಿ ಮತ್ತು ಸಹಕಾರವನ್ನು ಪಡೆಯಲು ಶ್ರಮಿಸುವುದು.