“ಬೀಸಣಿಗೆ ಬೇಕೇ ಸ್ವಾಮಿ ಬೀಸಣಿಗೆ
ಹತ್ತು ಪೈಸಕ್ಕೊಂದು ಹೊಸಾ ಬೀಸಣಿಗೆ”
– ಬಂತಪ್ಪ ಬಂತು, ಬಂದೇ ಬಿಡ್ತು
ಈ ಊರೊಳಗೆ ಬೇಸಿಗೆ.

ಷರಬತ್ತಿನಂಗಡಿಯ ಖಾಲಿ ಕುರ್ಚಿಯ ಮೇಲೆ
ಛಳಿಗಾಲ ತೂರಿದ್ದ ತರಗು-ಧೂಳನು ಒರಸಿ
ಬಣ್ಣ ಬಣ್ಣದ ಸೀಸೆಗಳನ್ನು ಸಾಲಾಗಿರಿಸಿ
ಹಳೆಯ ಚಿಲ್ಲರೆ ಎಣಿಸಿ ಕೂತಿದ್ದಾನೆ ಮಾಲೀಕ
ಬೀಡಾ ಜಗಿಯುತ್ತ
ಎದುರಿಗೇ ಇದೆ ಸೋಡಾ ಸೀಸೆ ಹೊಗೆಯಾಡುತ್ತ.

ಕಿತ್ತಲೆಯ ಹಣ್ಣು ಮುದಿಮುಖವಾಗಿ, ಮೋಸಂಬಿ
ನೀರಸವಾಗಿ ಮೂಲೆಯಲಿ ಕೂತಿರಲು,
ಬೇಲದ ಹಣ್ಣು ಬುಟ್ಟಿಯ ತುಂಬ; ಸಿದ್ದೋಟಿ
ಕರಬೂಜ ಕಲ್ಲಂಗಡಿಗಳದೇ ರಾಜ್ಯಭಾರ.
ಹೂವಿನಂಗಡಿಯ ಸಾಲುಗಳಲ್ಲಿ ಮೈಸೂರು ಮಲ್ಲಿಗೆ
ಮಾರ್ಕೆಟ್ಟಿನೀ ಸದ್ದು ಗದ್ದಲದಲ್ಲು ಘಮಾಘಮಾ ಮೆಲ್ಲಗೆ.

ಅಂಗಡಿಯ ಕಣ್ಮುಂದೆ ಚಾಪೆ ಗೋಣೀ ತಟ್ಟುಗಳ
ರೆಪ್ಪೆ ಇಳಿಬಿಟ್ಟು, ಮೈಯಿಂದಿಳಿವ ಬೆವರನ್ನೊ-
ರಸಲೆಂದು ಒಂದು ಟವಲ್ಲನೇ ಮುಡುಪಾಗಿಟ್ಟು
ಬರೀ ಬನಿಯನ್ನಿನಲ್ಲೇ ಎಲ್ಲ ವ್ಯವಹಾರ ;
ಸಂಜೆ ದೀಪ ಹಾಕಿದ ಮೇಲೆ ಏನಿದ್ದರೂ
ನಿಜವಾದ ವ್ಯಾಪಾರ.

ಬಿರು ಬಿಸಿಲಿನಲ್ಲೇ ಮಿರಿಮಿರೀ ಕರಿ ರಸ್ತೆ
ಸುಟ್ಟವಾಸನೆ ಹೊಡೆದು
ಉಜ್ಜಿ ನಡೆಯುವ ರಬ್ಬರಿನ ಗಾಲಿ ಧೂಳಿನ ಜೊತೆಗೆ
ಪೆಟ್ರೋಲು ವಾಸನೆ ಬೆರೆದು
ವಿಲಕ್ಷಣ ಪಾಕ-
ಕೆಳಗೆಲ್ಲ ಹಾಳು ಸುರಿಯುವ ಹಗಲು, ಮೇಲೆ
ಬರಿ ತರಲೆ ಆಕಾಶ ; ಮಳೆ ಬರುವುದೇ ಇಲ್ಲ,
ಹಾಳು ಶೆಖೆ-
‘ಬೀಸಣಿಗೆ ಬೇಕೆ ಸ್ವಾಮಿ ಬೀಸಣಿಗೆ
ಹತ್ತು ಪೈಸಾಕ್ಕೊಂದು ಹೊಸಾ ಬೀಸಣಿಗೆ’
– ಬಂತಪ್ಪ ಬಂತು, ಬಂದೇ ಬಿಡ್ತು
ಈ ಊರೊಳಗೆ ಬೇಸಿಗೆ.