Categories
e-ದಿನ

ಮಾರ್ಚ್-01

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 752: ರೋಮ್ ಸಾಮ್ರಾಜ್ಯದ ಪ್ರಥಮ ದೊರೆಯಾದ ರೊಮ್ಯುಲಸ್ ಅವರು ಸೀನಿಯೇನ್ಸೆಸ್ ವಿರುದ್ಧ ಜಯಗಳಿಸುವುದರ ಮೂಲಕ ತಮ್ಮ ಪ್ರಥಮ ವಿಜಯವನ್ನು ಸಾಧಿಸಿದರು

1565: ರಿಯೋ ಡಿ. ಜನೈರೋ ಪಟ್ಟಣವು ಪೋರ್ಚುಗೀಸರಿಂದ ಸ್ಥಾಪಿತಗೊಂಡಿತು

1776: ಮರಾಠರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಪುರಂದರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು 1775ರ ಸೂರತ್ ಒಪ್ಪಂದವನ್ನು ಅನೂರ್ಜಿತಗೊಳಿಸಿತು.

1815: ಗಡೀಪಾರಾಗಿದ್ದ ನೆಪೋಲಿಯನ್ ಎಲ್ಬಾದಿಂದ ಫ್ರಾನ್ಸಿಗೆ ವಾಪಸ್ಸಾದರು. ಇದು ಚಾರಿತ್ರಿಕ ‘ನೂರು ದಿನಗಳ’ ಗಣನೆಯ ಮೊದಲ ದಿನವೆನಿಸಿತು. ಗಡೀಪಾರಾಗಿದ್ದ ನೆಪೋಲಿಯನ್ ಎಲ್ಬಾದಿಂದ ಫ್ರಾನ್ಸಿಗೆ ಬಂದ ದಿನದಿಂದ ಮೊದಲುಗೊಂಡಂತೆ, ಹದಿನಾರನೇ ಲೂಯಿ ಎರಡನೇ ಬಾರಿ ರಾಜನಾದ ಜುಲೈ 8, 1815 ಅವಧಿಯನ್ನು, ಚಾರಿತ್ರಿಕವಾಗಿ ‘ನೂರು ದಿನ’ ಎಂದು ಕರೆಯಲಾಗುತ್ತಿದೆ.

1858: ಜರ್ಮನಿಯ ಸಮಾಜ ವಿಜ್ಞಾನಿ ಜಾರ್ಜ್ ಸಿಮ್ಮೆಲ್ ಬರ್ಲಿನ್ ನಗರದಲ್ಲಿ ಜನಿಸಿದರು.

1872: ಪ್ರಪಂಚದ ಪ್ರಥಮ ನ್ಯಾಷನಲ್ ಪಾರ್ಕ್ ಆಗಿ ‘ಯೆಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕ್ ಸ್ಥಾಪನೆ’ಗೊಂಡಿತು. ಇದು ಅಮೇರಿಕಾದ ವ್ಯೋಮಿಂಗ್, ಮೊಂಟಾನಾ ಮತ್ತು ಇಡಾಹೋ ಪ್ರದೇಶಗಳಲ್ಲಿ ವ್ಯಾಪಿಸಿದೆ.

1873: ‘ಇ. ರೆಮಿಂಗ್ಟನ್ ಅಂಡ್ ಸನ್ಸ್ ಸಂಸ್ಥೆ’ಯು ನ್ಯೂಯಾರ್ಕಿನ ಲ್ಲಿಯಾನ್ ಎಂಬಲ್ಲಿ ಪ್ರಾಯೋಗಿಕವಾಗಿ ಟೈಪರೈಟರ್ ಯಂತ್ರದ ಉತ್ಪಾದನೆಯನ್ನು ಪ್ರಾರಂಭಿಸಿತು.

1886: ಸಿಂಗಪುರದಲ್ಲಿ ಬಿಷಪ್ ವಿಲಿಯಂ ಓಲ್ಡ್ ಹ್ಯಾಮ್ ಅವರು ಪ್ರಥಮ ಆಂಗ್ಲೋ-ಚೈನೀಸ್ ಶಾಲೆಯನ್ನು ಸ್ಥಾಪಿಸಿದರು.

1893: ಎಲೆಕ್ಟ್ರಿಕಲ್ ಇಂಜಿನಿಯರ್ ಆದ ನಿಕೊಲಾ ಟೆಲ್ಸಾ ಅವರು ಮಿಸ್ಸೌರಿಯ ಸೈಂಟ್ ಲೂಯಿಸ್ ಎಂಬಲ್ಲಿ ಪ್ರಥಮ ಸಾರ್ವಜನಿಕ ರೇಡಿಯೋ ಪ್ರಾತ್ಯಕ್ಷಿಕೆಯನ್ನು ನೀಡಿದರು.

1921: ವಾರ್ವಿಕ್ ಆರ್ಮ್ಸ್ಟ್ರಾಂಗ್ ಅವರ ನೇತೃತ್ವದ ತಂಡ ‘ಆಷಸ್’ ಕ್ರಿಕೆಟ್ ಸರಣಿಯನ್ನು ಸೋಲೇ ಇಲ್ಲದೆ ಅಜೇಯವಾಗಿ ಗೆದ್ದ ಪ್ರಥಮ ಆಸ್ಟ್ರೇಲಿಯನ್ ಕ್ರಿಕೆಟ್ ತಂಡವಾಯಿತು. ಇದು ಮುಂದೆ 86 ವರ್ಷಗಳವರೆಗೆ ಘಟಿಸಲಿಲ್ಲ.

1947: ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಇಂದ ಹಣಕಾಸಿನ ವ್ಯವಹಾರವು ಆರಂಭಗೊಂಡಿತು.

1953: ಸೋವಿಯತ್ ಪ್ರಮುಖರಾದ ಜೋಸೆಫ್ ಸ್ಟಾಲಿನ್ ಅವರು ಆಘಾತದಿಂದ ಕುಸಿದರು. ಮುಂದೆ ನಾಲ್ಕು ದಿನಗಳ ನಂತರ ಅವರು ನಿಧನರಾದರು.

1954: ಅಣ್ವಸ್ತ್ರ ಪ್ರಯೋಗ ಪರೀಕ್ಷೆಯಲ್ಲಿ, ಅಮೆರಿಕದಿಂದ 15 ಮೇಘಾ ಟನ್ ‘ಕ್ಯಾಸಲ್ ಬ್ರೆವೋ’ ಹೈಡ್ರೋಜನ್ ಬಾಂಬ್ ಸಿಡಿತದ ಪ್ರಯೋಗವು ಪೆಸಿಫಿಕ್ ಸಾಗರದ ಬಿಕಿನಿ ಅಟೋಲ್ ಎಂಬಲ್ಲಿ ನಡೆಯಿತು. ಇದು ಭೀಕರ ರೇಡಿಯೋ ಆಕ್ಟೀವ್ ಮಾಲಿನ್ಯಕ್ಕೆ ಎಡೆಕೊಟ್ಟಿತು. ಈ ಬಾಂಬು 1945ರಲ್ಲಿ ಹಿರೋಷಿಮಾವನ್ನು ಧ್ವಂಸಗೊಳಿಸಿದ ಬಾಂಬಿಗಿಂತ 500 ಪಟ್ಟು ಹೆಚ್ಚು ದೈತ್ಯಶಕ್ತಿಯುಳ್ಳದ್ದಾಗಿತ್ತು.

1961: ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ‘ಪೀಸ್ ಕಾರ್ಪ್ಸ್’ ಸ್ಥಾಪಿಸಿದರು. ಇದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಪೂರಕ ಅಂಶಗಳ ಕಡೆಗೆ ಗಮನ ನೀಡುವ ವಿವಿಧ ಜನಾಂಗಗಳೊಂದಿಗೆ ಸೌಹಾರ್ದ ಬೆಸೆಯುವ ಆಶಯವುಳ್ಳದ್ದಾಗಿತ್ತು.

1966: ಸೋವಿಯತ್ ಬಾಹ್ಯಾಕಾಶ ತನಿಖಾ ವಾಹನವಾದ ‘ವೆನೆರಾ 3 ಸೋವಿಯತ್ ಸ್ಪೇಸ್ ಪ್ರೋಬ್’ ಶುಕ್ರಗ್ರಹದ ಮೇಲೆ ಅಪ್ಪಳಿಸಿ, ಮತ್ತೊಂದು ಗ್ರಹದ ಮೇಲೆ ಇಳಿದ ಪ್ರಥಮ ಬಾಹ್ಯಾಕಾಶ ವಾಹನವೆನಿಸಿತು.

1995: ಪ್ರಸಿದ್ಧ ಅಂತರ್ಜಾಲ ತಾಣವಾದ ಯಾಹೂ ಸ್ಥಾಪನೆಗೊಂಡಿತು.

1998: ಅಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಕರ್ನಾಟಕ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು.

1998: ‘ಟೈಟಾನಿಕ್’ ಚಿತ್ರವು ಒಂದು ಬಿಲಿಯನ್ ಡಾಲರ್ ಹಣಗಳಿಸಿದ ಪ್ರಪ್ರಥಮ ಚಿತ್ರವೆನಿಸಿತು.

2001: ಆಫ್ಘಾನಿಸ್ಥಾನದ ತಾಲಿಬಾನ್ 2000 ವರ್ಷಗಳಷ್ಟು ಪುರಾತನವಾದ ಬಾಮಿಯಾನಿನ ಬೌದ್ಧ ವಿಗ್ರಹಗಳ ನಾಶವನ್ನು ಆರಂಭಿಸಿತು.

2002: ‘ಎನ್ವಿಸಾಟ್(ENVISAT)’ ಅಥವ ‘ಎನ್ವೈರನ್ಮೆಂಟ್ ಸ್ಯಾಟಲೈಟ್’ ಉಪಗ್ರಹವು ಭೂಮಿಯಿಂದ 850 ಕಿಲೋಮೀಟರ್ ಮೇಲೆ ಕಕ್ಷೆಯನ್ನು ತಲುಪಿತು. ಯೂರೋಪಿನ ಉಪಗ್ರಹವಾದ ಇದು ಇದುವರೆಗಿನ ಅತಿ ಹೆಚ್ಚು ತೂಕವಾದ 8500 ಟನ್ ತೂಕವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ಉಪಗ್ರಹವಾಗಿದೆ.

2003: ಹೇಗ್ನಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟು ತನ್ನ ಪ್ರಥಮ ಸಭೆಯನ್ನು ನಡೆಸಿತು.

2006: ಇಂಗ್ಲಿಷ್ ವಿಕಿಪೀಡಿಯಾವು ಮಿಲಿಯನ್ ಲೇಖನಗಳ ಸಂಖ್ಯೆಯನ್ನು ಮುಟ್ಟಿತು. ‘ಜೋರ್ಡಾನ್ ಹಿಲ್ ರೈಲ್ವೇ ಸ್ಟೇಶನ್’ ಹತ್ತು ಲಕ್ಷ ಸಂಖ್ಯೆಯ ಲೇಖನವೆನಿಸಿತು.

2007: ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ಕಂಪೆನಿಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟವು ಸಮ್ಮತಿ ನೀಡಿತು.

2007: ಖ್ಯಾತ ರಂಗನಿರ್ದೇಶಕ ಆರ್. ನಾಗೇಶ್, ಭರತನಾಟ್ಯ ಕಲಾವಿದೆ ಎಸ್. ನರ್ಮದಾ ಸೇರಿದಂತೆ ವಿವಿಧ ಕ್ಷೇತ್ರಗಳ 33 ಗಣ್ಯರಿಗೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು, ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.

2008: ಬಾಂಗ್ಲಾದೇಶ ತಂಡದ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ನೀಲ್ ಮೆಕೆಂಜಿ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 415 ರನ್ನುಗಳನ್ನು ಸೇರಿಸಿ, 53 ವರ್ಷಗಳ ಹಿಂದಿದ್ದ ದಾಖಲೆಯನ್ನು ಅಳಿಸಿಹಾಕಿದರು. 1956ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ, ಭಾರತದ ಪಂಕಜ್ ರಾಯ್ ಮತ್ತು ವಿನೂ ಮಂಕಡ್ ಜೊತೆಗೂಡಿ ಮೊದಲ ವಿಕೆಟಿಗೆ 413 ರನ್ನುಗಳನ್ನು ಸೇರಿಸಿದ್ದು ಹಿಂದಿನ ವಿಶ್ವದಾಖಲೆಯಾಗಿತ್ತು.

2008: ಕರ್ನಾಟಕ ಸರ್ಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕವಯತ್ರಿ-ಲೇಖಕಿ ಶಶಿಕಲಾ ವೀರಯ್ಯಸ್ವಾಮಿ ಅವರ ಹೆಸರನ್ನು ಶಿಫಾರಸು ಮಾಡಲಾಯಿತು. ಬಿ.ಟಿ. ಲಲಿತಾ ನಾಯಕ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಹೆಸರನ್ನು ಶಿಫಾರಸು ಮಾಡಿತು.

2009: ಬೆಂಗಳೂರಿನಲ್ಲಿ ಕನ್ನಡ ವಾಕ್ಚಿತ್ರ ಅಮೃತ ಮಹೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಿದರು.

ಪ್ರಮುಖಜನನ/ಮರಣ:

1812: ‘ಪ್ಯಾಲೇಸ್ ಆಫ್ ವೆಸ್ಟ್ ಮಿನಿಸ್ಟರ್’ ವಿನ್ಯಾಸದ ಖ್ಯಾತಿಯ ಇಂಗ್ಲಿಷ್ ವಿನ್ಯಾಸಕಕಾರ ಆಗಸ್ಟಸ್ ಪ್ಯುಗಿನ್ ಅವರು ಇಂಗ್ಲೆಂಡಿನ ಬ್ಲೂಮ್ಸ್ ಬರಿಯಲ್ಲಿನ ಕೆಪ್ಪೆಲ್ ಸ್ಟ್ರೀಟ್ ಎಂಬಲ್ಲಿ ಜನಿಸಿದರು.

1910: ಇಂಗ್ಲಿಷ್ ರಸಾಯನಶಾಸ್ತ್ರ ವಿಜ್ಞಾನಿ ಆರ್ಚರ್ ಜಾನ್ ಪೋರ್ಟರ್ ಮಾರ್ಟಿನ್ ಅವರು ಲಂಡನ್ನಿನಲ್ಲಿ ಜನಿಸಿದರು. ಕ್ರೋಮೆಟಾಗ್ರಫಿ ಕುರಿತಾದ ಸಂಶೋಧನೆಗೆ ಇವರಿಗೆ 1952 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1922: ‘ಮ್ಯಾಡ್’ ಮ್ಯಾಗಜೈನ್ ಪ್ರಕಾಶಕ ಮತ್ತು ‘EC ಕಾಮಿಕ್ಸ್’ ಸಹಸಂಪಾದಕ ವಿಲಿಯಂ ಮ್ಯಾಕ್ಸ್ ವೆಲ್ ಗೈನ್ಸ್ ಅವರು ನ್ಯೂಯಾರ್ಕಿನ ಬ್ರೂಕ್ಲಿನ್ ಎಂಬಲ್ಲಿ ಜನಿಸಿದರು.

1936: ನಿರಂತರ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯನ್ನು ಅಭಿವ್ಯಕ್ತಿಸಿದ ಆರ್. ಎಂ. ಹಡಪದ್ ಅವರು ವಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಜನಿಸಿದರು. ಕೆಲ ಕಾಲ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಉತ್ತಮ ಕಲಾವಿದ ಮತ್ತು ಅಧ್ಯಾಪಕ ಪುರಸ್ಕಾರ, ಕರ್ನಾಟಕ ಲಲಿತಕಲಾ ಅಕಾಡೆಮಿ ಸೀನಿಯರ್ ಫೆಲೋಷಿಪ್ ಮುಂತಾದ ಅನೇಕ ಗೌರವಗಳು ಸಂದಿದ್ದವು.

1944: ಪಶ್ಚಿಮ ಬಂಗಾಳದ ಏಳನೇ ಮುಖ್ಯಮಂತ್ರಿಗಳಾಗಿದ್ದ ಬುದ್ಧದೇಬ್ ಭಟ್ಟಾಚಾರ್ಜಿ ಕೋಲ್ಕತ್ತಾದಲ್ಲಿ ಜನಿಸಿದರು.

1980: ಪ್ರಖ್ಯಾತ ಕ್ರಿಕೆಟ್ ಆಟಗಾರ ಶಾಹಿದ್ ಆಫ್ರಿದಿ ಅವರು ಪಾಕಿಸ್ತಾನದ ಗುಡ್ಡಗಾಡು ಪ್ರದೇಶವಾದ ಖೈಬರ್ ಎಂಬಲ್ಲಿ ಜನಿಸಿದರು. ಆಲ್ರೌಂಡರ್ ಆದ ಈತ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಕೇವಲ 37 ಚೆಂಡುಗಳಲ್ಲಿ ಶತಕ ಬಾರಿಸಿದ್ದಲ್ಲದೆ, ಅತ್ಯಂತ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ.

1983: ವಿಶ್ವ ಬಾಕ್ಸಿಂಗ್ ಕ್ರೀಡೆಯಲ್ಲಿ ಮಹತ್ವದ ಸಾಧನೆ ಮಾಡಿರುವ ಮೇರಿ ಕೋಮ್ ಅವರು ಮಣಿಪುರದ ಚುರಾಚನಪುರದ ಕಂಗಾಥೈ ಎಂಬ ಗ್ರಾಮದ ಬುಡಕಟ್ಟು ಜನಾಂಗದ ಕುಟುಂಬವೊಂದರಲ್ಲಿ ಜನಿಸಿದರು. ಐದು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್, 2012ರ ಒಲಿಂಪಿಕ್ಸ್ ಸ್ಪರ್ಧೆಯ 51 ಕೆ ಜಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಮತ್ತು 2014 ವರ್ಷ ದಕ್ಷಿಣ ಕೊರಿಯಾದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳ ಸಾಧನೆ ಇವರದ್ದಾಗಿದೆ. ರಾಜ್ಯಸಭೆಗೆ ನಾಮಾಂಕಣ ಹೊಂದಿರುವ ಇವರು ಪದ್ಮಭೂಷಣ, ಅರ್ಜುನ ಪ್ರಶಸ್ತಿ, ಪದ್ಮಶ್ರೀ, ರಾಜೀವ್ ಖೇಲ್ ರತ್ನ, ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ರಾಯಭಾರಿ ಗೌರವ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

1773: ಇಟಲಿಯ ಕಟ್ಟಡ ವಿನ್ಯಾಸಕಾರರಾದ ಲ್ಯೂಗಿ ಅವರು ವ್ಯಾನ್ವಿಟೆಲ್ಲಿ ಕ್ಯಾಸೆರ್ಟಾ ಎಂಬಲ್ಲಿ ನಿಧನರಾದರು. ಪ್ಯಾಲೇಸ್ ಆಫ್ ಕ್ಯಾಸೆರ್ಟಾ ಇವರ ಪ್ರಸಿದ್ಧ ವಿನ್ಯಾಸಕ್ಕೆ ಹೆಸರಾಗಿದೆ.

1911: ಡಚ್-ಜರ್ಮನ್ ರಸಾಯನ ಶಾಸ್ತ್ರ ವಿಜ್ಞಾನಿ ಜಾಕೋಬಸ್ ಹೆನ್ರಿಕಸ್ ವಾಂಟ್’ಹಾಫ್ ಅವರು ಬರ್ಲಿನ್ ಬಳಿಯ ಸ್ಟೆಗ್ಲಿಟ್ಜ್ ಎಂಬಲ್ಲಿ ನಿಧನರಾದರು. ಇವರ ಸಂಶೋಧನೆಯಿಂದ ಕೆಮಿಕಲ್ ಅಫಿನಿಟಿ, ಕೆಮಿಕಲ್ ಈಕ್ವಿಲಿಬ್ರಿಯಮ್, ಕೆಮಿಕಲ್ ಕಿನೆಟಿಕ್ಸ್ ಮತ್ತು ಕೆಮಿಕಲ್ ಥರ್ಮೋ ಡೈನಮಿಕ್ಸ್ ಕುರಿತಾದ ವಿಚಾರಗಳು ಬೆಳಕಿಗೆ ಬಂದವು. 1901 ವರ್ಷದಲ್ಲಿ ಇವರಿಗೆ ನೊಬೆಲ್ ರಸಾಯನ ಶಾಸ್ತ್ರದ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1989: ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿದ್ದ ವಸಂತದಾದಾ ಪಾಟೀಲ್ ನಿಧನರಾದರು. ಅವರು ರಾಜಾಸ್ಥಾನದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1994: ಭಾರತದ ಖ್ಯಾತ ಚಿತ್ರ ನಿರ್ದೇಶಕ ಮನಮೋಹನ್ ದೇಸಾಯಿ ಮುಂಬೈಯಲ್ಲಿ ಅವರು ಮನೆಯ ಬಾಲ್ಕನಿಯಿಂದ ಬಿದ್ದು ನಿಧನರಾದರು.