Categories
e-ದಿನ

ಮಾರ್ಚ್-02

ಪ್ರಮುಖಘಟನಾವಳಿಗಳು:

1484: ಇಂಗ್ಲೆಂಡಿನ ಮೂರನೆಯ ರಿಚರ್ಡ್ ಅವರಿಂದ ಒಪ್ಪಿಗೆ ಪಡೆದ ರಾಯಲ್ ಚಾರ್ಟರ್ ಮೂಲಕ ‘ಕಾಲೇಜ್ ಆಫ್ ಆರ್ಮ್ಸ್’ ಆರಂಭಗೊಂಡಿತು.

1498: ಪ್ರಸಿದ್ಧ ನಾವಿಕ ವಾಸ್ಕೋಡಗಾಮ ಅವರ ನೌಕೆ ಮೊಸಾಂಬಿಕ್ ದ್ವೀಪಕ್ಕೆ ಭೇಟಿ ನೀಡಿತು.

1657: ಅಂದು ‘ಎಡೋ’ ಎಂದು ಹೆಸರಾಗಿದ್ದ ಇಂದಿನ ಟೋಕಿಯೋದಲ್ಲಿ ‘ಗ್ರೇಟ್ ಫೈರ್ ಆಫ್ ಮೀರೇಕಿ’ ಬೆಂಕಿಯಿಂದ ಒಂದು ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಿತು. ಈ ಬೆಂಕಿ ಮೂರು ದಿನಗಳವರೆಗೆ ವ್ಯಾಪಿಸಿತ್ತು.

1717: ‘ದಿ ಲೌವ್ಸ್ ಆಫ್ ಮಾರ್ಸ್ ಅಂಡ್ ವೀನಸ್’ ಇಂಗ್ಲೆಂಡಿನಲ್ಲಿ ಅಭಿನಯಿಸಲ್ಪಟ್ಟ ಪ್ರಥಮ ಬ್ಯಾಲೆಟ್ ಎನಿಸಿತು.

1791: ಪ್ಯಾರಿಸ್ನಲ್ಲಿ ಸೆಮಾಫೋರ್ ಯಂತ್ರದ ಸ್ಥಾಪನೆಯಿಂದಾಗಿ ದೂರ ಪ್ರದೇಶಗಳ ನಡುವಣ ಸಂಪರ್ಕಗಳು ಹೆಚ್ಚು ವೇಗವನ್ನು ಪಡೆದುಕೊಂಡಿತು.

1797: ಬ್ಯಾಂಕ್ ಆಫ್ ಇಂಗ್ಲೆಂಡು, ಒಂದು ಪೌಂಡ್ ಮತ್ತು ಎರಡು ಪೌಂಡ್ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಿತು.

1807: ಅಮೆರಿಕದ ಕಾಂಗ್ರೆಸ್ಸು, ಹೊಸದಾಗಿ ದೇಶದೊಳಕ್ಕೆ ಗುಲಾಮರನ್ನು ಆಮದುಮಾಡಿಕೊಳ್ಳುವುದನ್ನು ನಿಷೇದಿಸುವ ಕಾನೂನನ್ನು ಜಾರಿಗೆ ತಂದಿತು.

1808: ‘ವೆರಿನೆರಿಯನ್ ನ್ಯಾಚುರಲ್ ಹಿಸ್ಟರಿ ಸೊಸೈಟಿ’ಯ ಪ್ರಾರಂಭಿಕ ಸಭೆ ಎಡಿನ್ಬರ್ಗ್ ನಗರದಲ್ಲಿ ಏರ್ಪಟ್ಟಿತು. ಹಿಂದೆ ಇದು ‘ಸ್ಕಾಟಿಷ್ ಲರ್ನೆಡ್ ಸೊಸೈಟಿ’ ಎಂಬ ಹೆಸರು ಹೊಂದಿತ್ತು.

1859: ಅಮೆರಿಕದ ಚರಿತ್ರೆಯಲ್ಲೇ ಅತ್ಯಂತ ಬೃಹತ್ತಾದ ಎರಡು ದಿನಗಳ ‘ಗ್ರೇಟ್ ಸ್ಲೇವ್ ಆಕ್ಷನ್’ ಅಥವಾ ‘ಗುಲಾಮರ ಹರಾಜು’ ಪ್ರಾರಂಭಗೊಂಡಿತು.

1882: ರಾಣಿ ವಿಕ್ಟೋರಿಯಾ ಅವರು ವಿಂಡ್ಸರ್ ಎಂಬಲ್ಲಿ, ಸ್ವಲ್ಪದರಲ್ಲೇ ರೋಡೆರಿಕ್ ಮೆಕ್ಲೀನ್ ಎಂಬಾತ ಪ್ರಯತ್ನಿಸಿದ್ದ ಹತ್ಯೆಯಿಂದ ಪಾರಾದರು.

1901: ಕಾರ್ನಿಗೆ ಸ್ಟೀಲ್ ಕಂಪೆನಿ ಮತ್ತು ಫೆಡರಲ್ ಸ್ಟೀಲ್ ಕಂಪೆನಿಯ ವಿಲೀನದೊಂದಿಗೆ ಯುನೈಟೆಡ್ ಸ್ಟೇಟ್ಸ್ ಸ್ಟೀಲ್ ಕಾರ್ಪೊರೇಶನ್ ಉದಯವಾಗಿ ವಿಶ್ವದಲ್ಲೇ ಒಂದು ಬಿಲಿಯನ್ ಡಾಲರ್ ಬೃಹತ್ ಬಂಡವಾಳದ ಹೊಂದಿದ ಮೊಟ್ಟ ಮೊದಲ ಸಂಸ್ಥೆ ಎನಿಸಿತು.

1903: ಮಹಿಳೆಯರಿಗೇ ಪ್ರತ್ಯೇಕವಾದ ‘ಮಾರ್ಥಾ ವಾಷಿಂಗ್ಟನ್ ಹೋಟೆಲ್’ ನ್ಯೂಯಾರ್ಕ್ ನಗರದಲ್ಲಿ ಆರಂಭಗೊಂಡಿತು.

1962: ವಿಲ್ಟ್ ಚೇಂಬರ್ಲೈನ್ ಅವರು ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೆಶನ್ನಿನಲ್ಲಿ ನಡೆದ ಪಂದ್ಯದಲ್ಲಿ ಒಂದೇ ಆಟದಲ್ಲಿ ನೂರು ಪಾಯಿಂಟ್ ಗಳಿಸಿ ದಾಖಲೆ ನಿರ್ಮಿಸಿದರು.

1972: ಫ್ಲೋರಿಡಾದ ಕೇಪ್ ಕಾನವೆರಲ್ನಲ್ಲಿ ಹೊರ ಗ್ರಹಗಳನ್ನು ಅನ್ವೇಷಿಸುವ ಉದ್ದೇಶದ ‘ಪಯನಿಯರ್ 10’ ಉಡಾವಣೆಗೊಂಡಿತು

1983: ಅಮೆರಿಕದ ಮಾರುಕಟ್ಟೆಯಲ್ಲಿ ಮೊದಲಬಾರಿಗೆ ಕಾಂಪ್ಯಾಕ್ಟ್ ಡಿಸ್ಕ್’ಗಳು ಬಿಡುಗಡೆಗೊಂಡವು. ಈ ಮೊದಲ ಅವು ಜಪಾನಿನಲ್ಲಿ ಮಾತ್ರಾ ಲಭ್ಯವಿದ್ದವು.

1989: ಹನ್ನೆರಡು ಯೂರೋಪ್ ದೇಶಗಳು 2000ದ ವರ್ಷಕ್ಕೆ ಮುಂಚೆ ಕ್ಲೋರೋಫ್ಲೋರೋ ಕಾರ್ಬನ್ ತಯಾರಿಕೆಯನ್ನು ನಿಷೇದಿಸುವ ಒಪ್ಪಂದಕ್ಕೆ ಸಹಿ ಹಾಕಿದವು.

1990: ನೆಲ್ಸನ್ ಮಂಡೇಲಾ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿ ಚುನಾಯಿತರಾದರು.

1995: ಫೆರ್ಮಿಲ್ಯಾಬ್ ಸಂಶೋಧಕರು ‘ಟಾಪ್ ಕ್ವಾರ್ಕ್’ ಪತ್ತೆ ಹಚ್ಚಿದರು. ‘ಟಾಪ್ ಕ್ವಾರ್ಕ್’ ಎಂಬುದು ಕ್ವಾರ್ಕ್ ಗಳಲ್ಲಿ ಅತಿ ಹೆಚ್ಚಿನ ರಾಶಿಯುಳ್ಳದ್ದು. ‘ಕ್ವಾರ್ಕ್’ಗಳು ಪ್ರೋಟಾನ್ ಮತ್ತು ನ್ಯೂಟ್ರ‍ಾನ್ ಗಳ ಒಳಗೆ ಬಂಧಿಸಲ್ಪಟ್ಟಿವೆ. ಸಾಂಪ್ರದಾಯಿಕ ಚಲನವಿಜ್ಞಾನದ ಪ್ರಕಾರ ‘ಕ್ವಾರ್ಕ್’ ಅಂದರೆ ಒಂದು ಬಿಂದು ಎಂದು ಊಹಿಸಬಹುದು. ಆದರೆ ಕ್ವಾಂಟಮ್ ವಿಜ್ಞಾನದನ್ವಯ ಕ್ವಾರ್ಕ್ ಕೆಲವು ಬಾರಿ ಬಿಂದುವಿನಂತೆ ಮತ್ತೆ ಕೆಲವು ಸಲ ತರಂಗದಂತೆ ವರ್ತಿಸುತ್ತದೆ.

1998: “ಗೆಲಿಲಿಯೋ ಬಾಹ್ಯಾಕಾಶ ವಾಹನವು ಕಳುಹಿಸಿದ ಮಾಹಿತಿಯ ಪ್ರಕಾರ ಗುರು ಗ್ರಹದ ಚಂದ್ರ- ‘ಯುರೋಪಾ’ದಲ್ಲಿ ಗಟ್ಟಿಗೊಂಡಿರುವ ಮಂಜುಗಡ್ಡೆಯ ತಳಭಾಗದಲ್ಲಿ ದ್ರವಸಾಗರವಿದೆ” ಎಂಬುದು ವಿಜ್ಞಾನಿಗಳ ಅಂಬೋಣವಾಗಿದೆ.

2006: ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಅಂಗೀಕಾರ ದೊರಕಿತು. ನಾಗರಿಕ ಮತ್ತು ಸೇನಾ ಉದ್ದೇಶದ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸುವ ಮೂಲಕ ಉಭಯರಾಷ್ಟ್ರಗಳು ವಿವಾದದ ಕಗ್ಗಂಟು ಬಗೆಹರಿಸಿಕೊಂಡವು. ಭಾರತದ 22 ಪರಮಾಣು ಸ್ಥಾವರಗಳ ಪೈಕಿ, ನಾಗರಿಕ ಬಳಕೆಯ 14 ಸ್ಥಾವರಗಳನ್ನು ಅಂತಾರಾಷ್ಟ್ರೀಯ ಸುರಕ್ಷತಾ ನಿಯಮಗಳಿಗೆ ಒಳಪಡಿಸಲು ಭಾರತ ಸಮ್ಮತಿಸಿತು. ಆದರೆ ಫಾಸ್ಟ್ ಬ್ರೀಡರ್ ರಿಯಾಕ್ಟರುಗಳು ಯಾವುದೇ ಜಾಗತಿಕ ನಿಯಮಕ್ಕೆ ಒಳಪಡುವುದಿಲ್ಲ ಎಂದು ಸ್ಪಷ್ಟ ಪಡಿಸಿತು. ಹೈದರಾಬಾದ್ ಹೌಸಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲು ಬುಷ್ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು.

2007: ಪಂಜಾಬಿನ ನೂತನ ಮುಖ್ಯಮಂತ್ರಿಗಳಾಗಿ ಶಿರೋಮಣಿ ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್ ಮತ್ತು ಮಣಿಪುರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಇಬೋಬಿ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. ಅತಿ ದೀರ್ಘಕಾಲ ಆಳ್ವಿಕೆ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾದಲ್ ಮುಖ್ಯಮಂತ್ರಿ ಗದ್ದುಗೆ ಏರಿದ್ದು ಇದು ನಾಲ್ಕನೇ ಬಾರಿ.

2008: ‘ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾದರೆ ಅದಕ್ಕೆ ವಾಹನ ಸವಾರರೇ ಸಂಪೂರ್ಣ ಹೊಣೆ’ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.

2008: ಭಾರತೀಯ ಕ್ರಿಕೆಟ್ಟಿಗೆ ಇದು ಸ್ಮರಣೀಯ ದಿನ ಎನಿಸಿತು. ಎಂ.ಎಸ್.ದೋನಿ ಬಳಗ ಸಿಡ್ನಿಯಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲಿನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿತು. ಇತ್ತ ಕೌಲಾಲಂಪುರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಕಿರಿಯ ಆಟಗಾರರು ವಿಶ್ವಕಪ್ ಕ್ರಿಕೆಟ್ ಫೈನಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆದರು.

ಪ್ರಮುಖಜನನ/ಮರಣ:

1920: ‘ಸತ್ಯಕಾಮ’ ಎಂದೇ ಪ್ರಸಿದ್ಧರಾದ ಅನಂತ ಕೃಷ್ಣ ಶಹಾಪುರ ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ಜನಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಕನಾಗಿದ್ದಾಗ 5 ಘಟಕಿಯ ಶಿಕ್ಷೆ, ಮುಂದೆ 6 ತಿಂಗಳ ಸೆರೆವಾಸ ಅನುಭವಿಸಿ ಹಲವು ಕಾಲ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದ ಅವರು ಹಿಮಾಲಯದಲ್ಲಿ ಹಲವು ಕಾಲ ವಿವಿಧ ಯೋಗಿಗಳ ಜೊತೆ ಇದ್ದು ಬಂದರು. ಅನೇಕ ನಾಟಕ, ಕತೆ, ಕಾದಂಬರಿಗಳನ್ನು ಬರೆದು ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದರು. ಕೃಷಿಕರಾಗಿ ಜಮಖಂಡಿ ಸಮೀಪದ ಕಲ್ಲಹಳ್ಳಿಯ ಗುಡ್ಡಗಾಡನ್ನು ನಂದನವನವಾಗಿ ಪರಿವರ್ತಿಸಿದ್ದರು.

1931: ಸೋವಿಯತ್ ಅಧ್ಯಕ್ಷರಾಗಿದ್ದ, ನೊಬೆಲ್ ಶಾಂತಿ ಪುರಸ್ಕೃತ ಗೋರ್ಬೇಚೆವ್ ಅವರು ಸೋವಿಯತ್ ಯೂನಿಯನ್ನಿನ ಪ್ರಿವೊಲ್ನೋಯೇ ಎಂಬಲ್ಲಿ ಜನಿಸಿದರು. ಅವರ ‘ಗ್ಲಾಸ್ನಾಸ್ಟ್’ (ಮುಕ್ತತೆ) ‘ಪೆರಿಸ್ಟ್ರೋಯಿಕಾ’(ಪುನರ್ನಿರ್ಮಾಣ) ನೀತಿಗಳು ಸೋವಿಯತ್ ಯೂನಿಯನ್ನಿನಲ್ಲಿದ್ದ ‘ಶೀತಲ ಸಮರವನ್ನು’ ಕೊನೆಗಾಣಿಸಿದವು. ಆದರೆ ಈ ಹಾದಿಯಲ್ಲಿ ಅವರು ದೇಶದ ಆಳುವಿಕೆಯಲ್ಲಿ ಕಮ್ಯೂನಿಸ್ಟ್ ಪಕ್ಷದ ಪಾತ್ರವನ್ನು ಸಂವಿಧಾನದಲ್ಲಿ ತೆಗೆದದ್ದರಿಂದ ರಾಜಕೀಯ ಅಸ್ಥಿರತೆ ತಲೆದೋರಿ ಮುಂದೆ ಸೋವಿಯತ್ ಯೂನಿಯನ್ನಿನ ವಿಭಜನೆಗೆ ಹಾದಿಮಾಡಿಕೊಟ್ಟವು.

1933: ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ವಿಜಾಪುರ ಜಿಲ್ಲೆಯ ಇಂಡಿ ಎಂಬಲ್ಲಿ ಜನಿಸಿದರು. ಕರ್ನಾಟಕ ಸಾಹಿತ್ಯ ಆಕಾಡೆಮಿಯ ಕೃತಿ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿಗಳು ಇವರಿಗೆ ಸಂದಿದ್ದವು. ಧಾರವಾಡದ ಮನೋಹರ ಗ್ರಂಥಮಾಲೆಯು ಖಾಸನೀಸರ ಎಲ್ಲ ಕಥೆಗಳನ್ನು ಸೇರಿಸಿ ‘ಸಮಗ್ರ ಕಥೆಗಳನ್ನು’ ಪ್ರಕಟಿಸಿದೆ.

1935:  ಖ್ಯಾತ ಪಿಟೀಲು ವಾದಕ ಮತ್ತು ಸಂಗೀತ ವಿದ್ವಾಂಸ ಕುನ್ನುಕ್ಕುಡಿ ವೈದ್ಯನಾಥನ್ ಅವರು ಮುರುಗನ್ ದೇವಾಲಯದ ಊರಾದ ಕುನ್ನುಕ್ಕುಡಿಯಲ್ಲಿ ಜನಿಸಿದರು. ಪಿಟೀಲು ವಾದನದಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡಿದ್ದ ಅವರ ಡೋಲಿನ ಜೊತೆಗಿನ ಪಿಟೀಲು ವಾದನ ಅತ್ಯಂತ ಜನಪ್ರಿಯಗೊಂಡಿತ್ತು. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯೇ ಅಲ್ಲದೆ, ಕಲೈಮಾಮಣಿ, ಸಂಗೀತ ನಾಟಕ ಅಕಾಡೆಮಿ ಗೌರವ, ಚಿತ್ರ ಸಂಗೀತಕ್ಕಾಗಿನ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

274: ಪರ್ಷಿಯನ್ ಪ್ರವಾದಿ ‘ಮಣಿ’ ಸಸ್ಸಾನಿಡ್ ಚಕ್ರಾಧಿಪತ್ಯಕ್ಕೆ ಸೇರಿದ್ದ ಗುಂಡೇಶ್ಪುರ್ ಎಂಬಲ್ಲಿ ನಿಧನರಾದರು.

1506: ರಜಪೂತ ದೊರೆ ರಾಣಾ ರತನ್ ಸಿಂಗ್ ಪುತ್ರಿ ಸಂತ ಕವಯಿತ್ರಿಯರಲ್ಲಿ ಪ್ರಮುಖರಾದ ಮೀರಾಬಾಯಿ ದ್ವಾರಕಾದಲ್ಲಿ ನಿಧನರಾದರು. ಕವಯತ್ರಿಯಾಗಿ ಮತ್ತು ಭಕ್ತಿ ಪಂತದ ಮಹಾನ್ ಸಂತೆಯಾಗಿ ಇವರು ಪ್ರಸಿದ್ಧಿ ಪಡೆದಿದ್ದಾರೆ.

1949: ‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರು ಲಕ್ನೋದಲ್ಲಿ ನಿಧನರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರಥಮ ಮಹಿಳಾ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಪ್ರಥಮ ರಾಜ್ಯಪಾಲರಾದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.