Categories
e-ದಿನ

ಮಾರ್ಚ್-03

ಪ್ರಮುಖಘಟನಾವಳಿಗಳು:

724: ಜಪಾನಿನ ಚಕ್ರವರ್ತಿನಿ ಜೆನ್ಶೋ ಅವರು ತಮ್ಮ ಸೋದರಳಿಯ ಶೋಮು ಎಂಬಾತನಿಗೆ ಸಿಂಹಾಸನವನ್ನು ಬಿಟ್ಟುಕೊಟ್ಟರು. ಆತ ಜಪಾನಿನ ಚಕ್ರವರ್ತಿಯಾದನು.

1575: ಮುಘಲ್ ಚಕ್ರವರ್ತಿ ಅಕಬರ್ ತುಕೋರಾಯ್ ಕದನದಲ್ಲಿ ಬೆಂಗಾಲಿ ಸೇನೆಯನ್ನು ಸೋಲಿಸಿದರು.

1585: ಇಟಲಿಯ ವಿಸೆನ್ಸಾದಲ್ಲಿ ಆಂಡ್ರಿಯಾ ಪಲ್ಲಾಡಿಯೋ ಅವರು ವಿನ್ಯಾಸೀಕರಿಸಿದ ‘ಒಲಿಂಪಿಕ್ ಥಿಯೇಟರ್’ ಉದ್ಘಾಟನೆಗೊಂಡಿತು.

1865: ಎಚ್.ಎಸ್.ಬಿ.ಸಿ (HSBC ಗುಂಪಿನ) ಪ್ರಾರಂಭ ರೂಪವಾದ ‘ದಿ ಹಾಂಕಾಂಗ್ ಅಂಡ್ ಶಾಂಘೈ ಬ್ಯಾಂಕಿಂಗ್ ಕಾರ್ಪೋರೇಶನ್ ಲಂಡನ್ನಿನಲ್ಲಿ ಆರಂಭಗೊಂಡಿತು.

1873: ಅಮೆರಿಕದ ಕಾಂಗ್ರೆಸ್ ‘ಕಾಮ್ಸ್ಟಾಕ್ ಕಾನೂನು’ ಮೂಲಕ ಅಶ್ಲೀಲ, ನೀಚ, ಅಥವಾ ಕಾಮ ಪ್ರಚೋದಕ ಪುಸ್ತಕಗಳನ್ನು ಅಂಚೆಯಲ್ಲಿ ಕಳುಹಿಸುವುದನ್ನು ನಿಷೇಧಿಸಿತು.

1875: ಪ್ಯಾರಿಸ್ಸಿನ ‘ಒಪೇರಾ-ಕಾಮಿಕ್’ನಲ್ಲಿ ಜಾರ್ಜಸ್ ಬಿಜೆಟ್ ಅವರ ‘ಕಾರ್ಮೆನ್’ ಒಪೇರಾ ತನ್ನ ಪ್ರಥಮ ಪ್ರದರ್ಶನವನ್ನು ನೀಡಿತು

1904: ಕೈಸರ್ ಜರ್ಮನಿಯ ಎರಡನೇ ವಿಲ್ಹೆಮ್ ಅವರು ಥಾಮಸ್ ಎಡಿಸನ್ ಅವರ ಫೋನೋಗ್ರಾಫ್ ಸಿಲಿಂಡರ್ ಬಳಸಿ ರಾಜಕೀಯ ದಾಖಲೆಯೊಂದರ ಧ್ವನಿ ಮುದ್ರಣ ಮಾಡಿದ ಪ್ರಥಮ ವ್ಯಕ್ತಿ ಎನಿಸಿದರು.

1910: ಜಾನ್ ಡಿ. ರಾಕ್ ಫೆಲ್ಲೆರ್ ಜೂನಿಯರ್ ಅವರು ‘ರಾಕ್ ಫೆಲ್ಲರ್ ಫೌಂಡೇಶನ್’ ಮೂಲಕವಾಗಿ ಲೋಕಕಲ್ಯಾಣದ ಕಾರ್ಯಗಳಿಗೆ ತಮ್ಮ ಪೂರ್ಣ ಸಮಯವನ್ನು ಮೀಸಲಿಡುವ ಸಲುವಾಗಿ, ಉದ್ಯಮದ ಜವಾಬ್ದಾರಿಗಳಿಂದ ನಿವೃತ್ತರಾದರು.

1923: ‘ಟೈಮ್’ ನಿಯತಕಾಲಿಕವು ಪ್ರಥಮ ಬಾರಿಗೆ ಪ್ರಕಟಗೊಂಡಿತು.

1931: ಅಮೆರಿಕವು ‘ದಿ ಸ್ಟಾರ್-ಸ್ಪಾಂಗಲ್ಡ್ ಬ್ಯಾನರ್’ ಅನ್ನು ತನ್ನ ರಾಷ್ಟ್ರಗೀತೆಯನ್ನಾಗಿಸಿಕೊಂಡಿತು.

1938: ಸೌದಿ ಅರೇಬಿಯಾದಲ್ಲಿ ತೈಲ ನಿಕ್ಷೇಪ ಪತ್ತೆಯಾಯಿತು.

1939: ಮುಂಬೈನಲ್ಲಿ ಮಹಾತ್ಮ ಗಾಂಧೀಜಿ ಅವರಿಂದ ಬ್ರಿಟಿಷ್ ನಿರಂಕುಶ ಆಡಳಿತದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಗೊಂಡಿತು.

1969: ನಾಸಾವು ಚಂದ್ರಲೋಕದ ಪರೀಕ್ಷಣೆಗಾಗಿ ‘ಅಪೋಲೋ 9’ ಉಪಗ್ರಹವನ್ನು ಉಡಾವಣೆ ಮಾಡಿತು.

1997: ದಕ್ಷಿಣ ಗೋಳಾರ್ಧದಲ್ಲಿ ಅತ್ಯಂತ ಎತ್ತರದ ಮುಕ್ತ ನಿರ್ಮಾಣವೆನಿಸಿರುವ ‘ಸ್ಕೈ ಟವರ್’, ನ್ಯೂಜಿಲ್ಯಾಂಡಿನ ಆಕ್ಲ್ಯಾಂಡ್ನಲ್ಲಿ ಉದ್ಘಾಟನೆಗೊಂಡಿತು. ಇದು ಎರಡೂವರೆ ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿತು.

2005: ಸ್ಟೀವ್ ಫಾಸ್ಸೆಟ್ ಅವರು ಎಲ್ಲಿಯೂ ಪುನಃ ಇಂಧನ ತುಂಬಿಸಿಕೊಳ್ಳದೆ ಏಕೈಕಿಯಾಗಿ ವಿಶ್ವಪರ್ಯಟನೆ ನಡೆಸಿದ ಪ್ರಥಮ ವಿಮಾನ ಚಾಲಕರೆನಿಸಿದರು.

2008: ಇನ್ಫೋಸಿಸ್ ಸಂಸ್ಥಾಪಕರಾದ ಎನ್. ಆರ್. ನಾರಾಯಣ ಮೂರ್ತಿ ಅವರು ಜಾಗತಿಕ ಖಾಸಗಿ ಬ್ಯಾಂಕ್ ಆದ ಎಚ್.ಎಸ್.ಬಿ.ಸಿ. ನಿರ್ದೇಶಕರಾಗಿ ನೇಮಕಗೊಂಡರು.

2008: ಕನ್ನಡ ಮಾಧ್ಯಮದಲ್ಲಿ ತರಗತಿ ನಡೆಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟು ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತು.

2008: ರಷ್ಯದಲ್ಲಿ ನಡೆದ ಚುನಾವಣೆಯಲ್ಲಿ ಡಿಮಿಟ್ರಿ ಮೆಡ್ವಡೆವ್ ಅವರು ಶೇ 70.22ರಷ್ಟು ಮತ ಗಳಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರಮುಖಜನನ/ಮರಣ:

1839: ಭಾರತೀಯ ಕೈಗಾರಿಕಾ ಪಿತಾಮಹರಾದ ಜೆಮ್ಸೇಟ್ಜಿ ನಸರ್ವಾನ್ಜಿ ಟಾಟಾ ಅವರು ಬರೋಡಾ ಬಳಿಯ ನವ್ಸಾರಿ ಎಂಬಲ್ಲಿ ಜನಿಸಿದರು. ಇಂದು ಭಾರತದಲ್ಲೇ ಅಲ್ಲದೆ ವಿಶ್ವವ್ಯಾಪಾರಿ ಸಮುದಾಯದಲ್ಲಿ ವೈಶಿಷ್ಟ್ಯಪೂರ್ಣ ಹೆಸರಾದ ಟಾಟಾ ಸಮೂಹಕ್ಕೆ ಅಡಿಪಾಯವನ್ನು ಒದಗಿಸಿದ ಮಹಾಪುರುಷರೀತ. ಅಷ್ಟು ಮಾತ್ರವಲ್ಲದೆ ಜೆಮ್ಸೇಟ್ಜಿ ಟಾಟಾ ಅವರು ಭಾರತವನ್ನು ಕೈಗಾರಿಕರಂಗಕ್ಕೆ ಮೊದಲು ಕೈಹಿಡಿದು ಕರೆತಂದ ಅವಿಸ್ಮರಣೀಯರೂ ಹೌದು. ಜೆಮ್ಸೇಟ್ಜಿ ಅವರ ಅಪಾರಸಾಧನೆಯಿಂದಾಗಿ ಜಾರ್ಖಂಡ್ ರಾಜ್ಯದ ಜಮ್ಷೆಡ್ಪುರವು ಇಂದು ಟಾಟಾ ನಗರವೆಂದೇ ಜನಪ್ರಿಯಗೊಂಡಿದೆ.

1847: ದೂರಸಂಪರ್ಕ ಮಾಧ್ಯಮದ ಹರಿಕಾರ, ಮಹಾನ್ ವಿಜ್ಞಾನಿ ಅಲೆಗ್ಸಾಂಡರ್ ಗ್ರಹಾಂಬೆಲ್ ಅವರು ಸ್ಕಾಟ್ಲ್ಯಾಂಡಿನ ಎಡಿನ್ಬರ್ಗ್ ಎಂಬಲ್ಲಿ ಜನಿಸಿದರು. ಕಿವುಡುತನ ಹೊಂದಿದ್ದ ತಮ್ಮ ತಾಯಿಯೊಂದಿಗೆ ಅವರು ಸಂಭಾಷಿಸಲು ಉಪಯೋಗಿಸುತ್ತಿದ್ದ ಹಲವು ಸ್ವಯಂನಿರ್ಮಿತ ತಂತ್ರಗಳು ಅವರನ್ನು ಕಿವುಡ ಮಕ್ಕಳ ಕುರಿತಾಗಿ ಅಪಾರ ಆಸಕ್ತಿ ವಹಿಸುವಂತೆ ಮಾಡಿದವು. ಈ ಆಸಕ್ತಿಯು ಅವರನ್ನು ಮೈಕ್ರೋಫೋನ್ ನಿರ್ಮಿಸಲು ಪ್ರೇರಣೆ ನೀಡಿ, 1876ರ ವೇಳೆಗೆ “ವಿದ್ಯುತ್ ಚಾಲಿತ ಸಂಭಾಷಣಾ ಯಂತ್ರ” ಅಥವ “ಎಲೆಕ್ಟ್ರಿಕಲ್ ಸ್ಪೀಚ್ ಮೆಷಿನ್” ಅನ್ನು ನಿರ್ಮಿಸಿದರು. ಈ ಯಂತ್ರವೇ ಇಂದು ನಾವೆಲ್ಲರೂ ಉಪಯೋಗಿಸುತ್ತಿರುವ ‘ಟೆಲಿಫೋನ್’.

1888: ಕನ್ನಡ ಪಂಡಿತರಾಗಿ, ಪ್ರಕಾಂಡ ವೈಯಾಕರಣರಾಗಿ ಆದರ್ಶ ಅಧ್ಯಾಪಕರಾಗಿ, ಉತ್ತಮ ಪತ್ರಕರ್ತರಾಗಿ, ಅಗಾಧ ಸಂಪನ್ನ – ಸಂಶೋಧಕ – ವಿಮರ್ಶಕರಾಗಿ, ಸುಮಧುರ ಕಂಠದ ಗಮಕಿಗಳಾಗಿ, ಚಿತ್ತಾಕರ್ಷಕ ವ್ಯಾಖ್ಯಾನಕಾರರಾಗಿ ಪ್ರಸಿದ್ಧಿ ಪಡೆದಿದ್ದ ಮುಳಿಯ ತಿಮ್ಮಪ್ಪಯ್ಯನವರು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಜನಿಸಿದರು. ಇವರು 1931ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

1895: ನಾರ್ವೆಯ ಅರ್ಥಶಾಸ್ತ್ರಜ್ಞ ರಾಗ್ನರ್ ಫ್ರಿಸ್ಚ್ ಅವರು ನಾರ್ವೆಯ ಕ್ರಿಶ್ಚಿಯಾನ ಎಂಬಲ್ಲಿ ಜನಿಸಿದರು. ‘ಎಕನಾಮಿಟ್ರಿಕ್ಸ್’ ಕುರಿತಾದ ಮಹತ್ವದ ಕೊಡುಗೆಗಾಗಿ ಜಾನ್ ಟಿನ್ಬರ್ಗನ್ ಅವರೊಂದಿಗೆ ಇವರಿಗೆ ಜಂಟಿಯಾಗಿ ಪ್ರಪ್ರಥಮ ನೊಬೆಲ್ ಅರ್ಥ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1904: ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಹಾವೇರಿ ಜಿಲ್ಲೆಯ ಹಾನಗಲ್‌ನ ದೇವರ ಹೊಸಕೋಟೆಯಲ್ಲಿ ಜನಿಸಿದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಗಾಯನವಷ್ಟೇ ಅಲ್ಲದೆ ಸಂಗೀತ ಲೋಕದ ಬಹುತೇಕ ವಾದ್ಯಗಾರಿಕೆಯಲ್ಲೂ ಇವರಿಗೆ ಅಪ್ರತಿಮ ಸಾಧನೆಯಿತ್ತು. ವೀರೇಶ್ವರ ಆಶ್ರಮದ ಪೀಠಾಧಿಪತಿಯಾಗಿ ಮತ್ತು ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಕ ಸಂಗೀತ ಮಹಾವಿದ್ಯಾಲಯದ ಜವಾಬ್ದಾರಿ ಹೊತ್ತಿದ್ದ ಇವರು ಅನೇಕ ಅಂಧರು, ಅನಾಥರು, ವಿಕಲಚೇತನರಿಗೆ ಸಂಗೀತ ಶಿಕ್ಷಣ ದೊರಕುವಂತೆ ಮಾಡಿದರು.

1918: ಅಮೇರಿಕಾದ ಜೈವಿಕ ವಿಜ್ಞಾನಿ ಆರ್ಥರ್ ಕಾರ್ನ್ ಬರ್ಗ್ ಅವರು ನ್ಯೂಯಾರ್ಕಿನಲ್ಲಿ ಜನಿಸಿದರು. ‘ಡಿ.ಎನ್.ಎ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1959 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1925: ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಡಾ. ಎಂ. ಅಕಬರ ಅಲಿ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳೇಗಡ್ಡಿ ಖಾನಾಪುರದಲ್ಲಿ ಜನಸಿದರು. ಅವರ ‘ಸುಮನ ಸೌರಭ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಗಂಧಕೇಶರ’ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಅನೇಕ ಗೌರವಗಳು ಸಂದಿದ್ದವು.

1941: ನಾಡಿನ ಅಪೂರ್ವ ಕಲಾವಿದರಾದ ಎಸ್. ಜಿ. ವಾಸುದೇವ್ ಅವರು ಮೈಸೂರಿನಲ್ಲಿ ಜನಿಸಿದರು. ಪೇಂಟಿಂಗ್, ರೇಖಾಚಿತ್ರ. ಲೋಹ (ತಾಮ್ರ), ಜವಳಿ (ಟ್ಯಾಪೆಸ್ಟ್ರಿ) – ಹೀಗೆ ವಿವಿಧ ಮಾಧ್ಯಮಗಳಲ್ಲಿ ಅವರ ಕಲಾಭಿವ್ಯಕ್ತಿ ಹರಡಿಕೊಂಡಿದೆ. ಅವರು ‘ ರಾಷ್ಟ್ರಪ್ರಶಸ್ತಿ ವಿಜೇತ ‘ಸಂಸ್ಕಾರ` ಚಿತ್ರಕ್ಕೆ ಕಲಾ ನಿರ್ದೇಶಕರಾಗಿಯೂ ದುಡಿದಿದ್ದರು. ಇವರಿಗೆ ಕರ್ನಾಟಕ ಲಲಿತ ಆಕಾಡೆಮಿಯ ಗೌರವ ಫೆಲೋಷಿಪ್, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1951: ಪ್ರಖ್ಯಾತ ರಂಗಭೂಮಿ ಕಲಾವಿದೆ ಮತ್ತು ಸುಗಮ ಸಂಗೀತ ಗಾಯಕಿ ಮಾಲತಿ ಶರ್ಮ ಜನಿಸಿದರು. ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.

1962: ಪ್ರಸಿದ್ಧ ಅಥ್ಲೀಟ್ ಜಾಕಿ ಜಾಯ್ನರ್ ಕೆರ್ಸೀ ಅಮೆರಿಕದ ಇಲಿನಾಯ್ಸ್ ಪ್ರದೇಶದ ಈಸ್ಟ್ ಸೈಂಟ್ ಲೂಯಿಸ್ ಎಂಬಲ್ಲಿ ಜನಿಸಿದರು. ಈಕೆ ಹೆಪ್ಲಾಥಾನಿನಲ್ಲಿ 7000ಕ್ಕೂ ಹೆಚ್ಚು ಪಾಯಿಂಟ್ ಗಳಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1967: ಪ್ರಸಿದ್ಧ ಭಾರತೀಯ ಚಲನಚಿತ್ರ ಹಿನ್ನೆಲೆಗಾಯಕ ಮತ್ತು ಶಂಕರ್-ಎಹಸನ್-ಲಾಯ್ ಜೋಡಿಯ ಸಂಗೀತ ನಿರ್ದೇಶಕರಲ್ಲೊಬ್ಬರಾದ ಶಂಕರ್ ಮಹಾದೇವನ್ ಅವರು ಮುಂಬೈನ ಚೆಂಬೂರಿನಲ್ಲಿ ಜನಿಸಿದರು. ಮೂರು ಬಾರಿ ಶ್ರೇಷ್ಠ ಹಿನ್ನೆಲೆಗಾಯಕರಾಗಿ ಮತ್ತು ಒಮ್ಮೆ ಶ್ರೇಷ್ಠ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಗೌರವ ಇವರಿಗೆ ಸಂದಿದೆ. ಇವರು ತಮ್ಮ ಶಂಕರ್ ಮಹಾದೇವನ್ ಅಕಾಡೆಮಿಯ ಮೂಲಕ ಆನ್ಲೈನ್ ಸಂಗೀತ ಶಾಲೆ ನಡೆಸುತ್ತಿದ್ದಾರೆ.

1707: ಮೊಘಲ್ ಚಕ್ರವರ್ತಿ ಔರಂಗಜೇಬ್ ತನ್ನ 88ನೇ ವಯಸ್ಸಿನಲ್ಲಿ ಅಹಮದ್ ನಗರದಲ್ಲಿ ನಿಧನನಾದ.

1982: ಫಿರಾಕ್ ಗೋರಖ್ ಪುರಿ ಎಂದು ಪ್ರಸಿದ್ಧರಾದ ರಘುಪತಿ ಸಹಾಯ್ ಅವರು ನವದೆಹಲಿಯಲ್ಲಿ ನಿಧನರಾದರು. ಭಾರತೀಯ ಶ್ರೇಷ್ಠ ಉರ್ದು ಕವಿಗಳಲ್ಲಿ ಪ್ರಮುಖರಾದ ಇವರು ಭಾರತೀಯ ಜ್ಞಾನಪೀಠ, ಪದ್ಮಭೂಷಣ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದರು.

1999: ಜರ್ಮನ್-ಕೆನಡಿಯನ್ ರಸಾಯನಶಾಸ್ತ್ರ, ಭೌತಶಾಸ್ತ್ರ ವಿಜ್ಞಾನಿ ಗೆರ್ಹಾರ್ಡ್ ಹೆರ್ಜ್ಬರ್ಗ್ ಅವರು ಕೆನಡಾದ ಒಟ್ಟಾವಾದಲ್ಲಿ ನಿಧನರಾದರು. ‘ಡಯಾಟಾಮಿಕ್ ಮತ್ತು ಪಾಲಿಯಾಟಾಮಿಕ್ ಮಾಲೆಕ್ಯೂಲ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1971 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2002: 12ನೇ ಲೋಕಸಭಾ ಸ್ಪೀಕರ್ ಜಿ.ಎಮ್.ಸಿ ಬಾಲಯೋಗಿ ಅವರು ಆಂಧ್ರಪ್ರದೇಶದ ಕೃಷ್ಣಾಜಿಲ್ಲೆಯ ಕೈಕಾಲೂರು ಬಳಿ ಅವರು ಪಯಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ನಿಧನರಾದರು.

2003: ಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಬೆಂಗಳೂರಿನಲ್ಲಿ ನಿಧನರಾದರು. ಅನೇಕ ಶ್ರೇಷ್ಠ ಗೀತೆಗಳಿಗೆ ಪ್ರಸಿದ್ಧರಾದ ಇವರಿಗೆ ಸುರಸಿಂಗಾರ್ ಪ್ರಶಸ್ತಿ, ಕರ್ನಾಟಕ ಸರ್ಕಾರದ ಡಾ. ರಾಜ್ ಕುಮಾರ್ ಪ್ರಶಸ್ತಿ ಹಾಗೂ ಆರು ಚಿತ್ರಗಳಿಗೆ ಶ್ರೇಷ್ಠ ಸಂಗೀತಸಂಯೋಜನೆಗಾಗಿನ ಪ್ರಶಸ್ತಿಗಳು ಸಂದಿದ್ದವು.