Categories
e-ದಿನ

ಮಾರ್ಚ್-05

ಪ್ರಮುಖಘಟನಾವಳಿಗಳು:

363: ರೋಮನ್ ಚಕ್ರಾಧಿಪತಿ ಜೂಲಿಯನ್ ಆಂಟಿಯೋಕ್ನಿಂದ 90,000 ಸೈನಿಕರೊಂದಿಗೆ ಸಸಾನಿಯನ್ ಸಾಮ್ರಾಜ್ಯದ ವಿರುದ್ಧ ದಂಡಯಾತ್ರೆ ಹೊರಟ. ಈ ದಂಡಯಾತ್ರೆ ಆತನಿಗೇ ಸಾವು ತಂದಿತು.

1046: ಪರ್ಷಿಯನ್ ಕವಿ ನಾಸಿರ್ ಖುಸ್ರಾವ್ ಏಳು ವರ್ಷಗಳ ಮಧ್ಯ ಪೂರ್ವ ಪ್ರವಾಸವನ್ನು ಪ್ರಾರಂಭಿಸಿದರು. ತಮ್ಮ ಪ್ರವಾಸದ ಅನುಭವಗಳನ್ನು ಅವರ ತಮ್ಮ ‘ಸಫರ್ನಾಮಾ’ ಕೃತಿಯಲ್ಲಿ ವಿವಿರಿಸಿದ್ದಾರೆ.

1616: ನಿಕೊಲಸ್ ಕೂಪರ್ನಿಕಸ್ ಅವರ ಪುಸ್ತಕ ‘ಆನ್ ದಿ ರೆವಲ್ಯೂಷನ್ಸ್ ಆಫ್ ದಿ ಹೆವನ್ಲಿ ಸ್ಫಿಯರ್ಸ್’, ಅದು ಪ್ರಕಟಗೊಂಡ 73 ವರ್ಷಗಳ ನಂತರದಲ್ಲಿ ನಿಷೇಧಿತ ಪುಸ್ತಕಗಳ ಪರಿವಿಡಿಗೆ ಸೇರ್ಪಡೆಗೊಂಡಿತು.

1770: ಬೋಸ್ಟನ್ ಹತ್ಯಾಕಾಂಡದಲ್ಲಿ ಕ್ರಿಸ್ಪಸ್ ಆಟಕ್ಸ್ ಅವರೂ ಸೇರಿದಂತೆ ಐದು ಅಮೆರಿಕನ್ನರಿಗೆ ಬ್ರಿಟಿಷ್ ಪೋಲೀಸ್ ಕಾರ್ಯಾಚರಣೆಯಿಂದ ಗಂಭೀರ ಸ್ವರೂಪದ ಪೆಟ್ಟು ಬಿತ್ತು. ಈ ಘಟನೆ ಮುಂದೆ ಅಮೆರಿಕನ್ ಕ್ರಾಂತಿಕಾರಿ ಹೋರಾಟಕ್ಕೆ ತಿರುಗಿ ಅಮೆರಿಕನ್ ಸ್ವಾತಂತ್ರ್ಯಕ್ಕಾಗಿನ ಯುದ್ಧಸ್ವರೂಪ ಪಡೆಯಿತು.

1836: ಸಾಮ್ಯುಯೆಲ್ ಕೋಲ್ಟ್ ಅವರು ‘.34-ಕ್ಯಾಲಿಬರ್’ನ ಪ್ರಥಮ ಉತ್ಪಾದನಾ ಮಾದರಿ ರಿವಾಲ್ವರ್ಗೆ ಪೇಟೆಂಟ್ ಪಡೆದರು.

1850: ಮೆನಾಯ್ ಸ್ಟ್ರೀಟ್ ಮೇಲುಗಡೆಯಲ್ಲಿ ಆಂಗ್ಲೆಸೆ ದ್ವೀಪ ಮತ್ತು ಮೈನ್ ಲ್ಯಾಂಡ್ ವೇಲ್ಸ್ ನಡುವಣ ಬ್ರಿಟಾನಿಯಾ ಸೇತುವೆ ಸಂಚಾರಕ್ಕೆ ತೆರೆದುಕೊಂಡಿತು.

1851: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸ್ಥಾಪನೆಗೊಂಡಿತು.

1872: ಜಾರ್ಜ್ ವೆಸ್ಟಿಂಗ್ ಹೌಸ್ ಅವರು ‘ಏರ್ ಬ್ರೇಕ್’ಗೆ ಪೇಟೆಂಟ್ ಪಡೆದರು.

1931: ಗಾಂಧೀ-ಇರ್ವಿನ್ ಒಪ್ಪಂದಕ್ಕೆ ಸಹಿಯಾಯಿತು.

1933: ‘ಗ್ರೇಟ್ ಡಿಪ್ರೆಷನ್’ ಎಂಬ ಭೀಕರ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು ಬ್ಯಾಂಕುಗಳಿಗೆ ರಜೆ ಘೋಷಿಸಿ, ಅದರ ಬಾಗಿಲುಗಳನ್ನು ಮುಚ್ಚಿ ಎಲ್ಲಾ ಹಣಕಾಸು ವ್ಯವಹಾರಗಳನ್ನೂ ಸ್ಥಗಿತಗೊಳಿಸಿದರು.

1933: ರೀಚ್ ಸ್ಟ್ಯಾಗ್ ಚುನಾವಣೆಯಲ್ಲಿ ಅಡೋಲ್ಫ್ ಹಿಟ್ಲರನ ನಾಜಿ ಪಕ್ಷ 43.9% ಮತಗಳಿಸಿತು. ಇದರಿಂದಾಗಿ ಅದು ‘ಎನೇಬ್ಲಿಂಗ್ ಖಾಯಿದೆ’ಯನ್ನು ಜಾರಿಗೆ ತಂದು ಸರ್ವಾಧಿಕಾರತ್ವದ ಸರ್ಕಾರವನ್ನು ರಚಿಸುವುದಕ್ಕೆ ಮುಂದಾಯಿತು.

1940: ಕಟಿನ್ ಮಾರಣಹೋಮ ಎಂದು ಹೆಸರಾಗಿರುವ ಘಟನೆಯಲ್ಲಿ ಜೋಸೆಫ್ ಸ್ಟಾಲಿನ್ ಒಳಗೊಂಡಂತೆ ಆರು ಜನ ಪ್ರಮುಖ ಅಧಿಕಾರಿಗಳನ್ನೊಳಗೊಂಡ ‘ಸೋವಿಯತ್ ಪೊಲಿಟ್ಬ್ಯುರೋ’ ನಿರ್ಣಾಯಕ ಮಂಡಳಿಯು, 14,700 ಯುದ್ಧಖೈದಿಗಳನ್ನೂ ಒಳಗೊಂಡಂತೆ 25,700 ಪೋಲಿಷ್ ಬುದ್ಧಿಜೀವಿಗಳನ್ನು ಹತ್ಯೆಗೈಯುವ ಆದೇಶಕ್ಕೆ ಸಹಿ ಹಾಕಿತು.

1940: ಮಹಾತ್ಮಾ ಗಾಂಧಿಯವರು ಸೆಗಾಂವ್ ಗ್ರಾಮಕ್ಕೆ ‘ಸೇವಾ ಗ್ರಾಮ’ ಎಂದು ಮರುನಾಮಕರಣ ಮಾಡಿದರು.

1946: ವಿನ್ಸ್’ಟನ್ ಚರ್ಚಿಲ್ ಅವರು ಮಿಸ್ಸೌರಿಯ ವೆಸ್ಟ್ ಮಿನಿಸ್ಟರ್ ಕಾಲೇಜಿನಲ್ಲಿನ ತಮ್ಮ ಭಾಷಣದಲ್ಲಿ ‘ಕಬ್ಬಿಣದ ಪರದೆ’(Iron Curtain) ಎಂಬ ರೂಪಕವನ್ನು ಬಳಸಿದರು.

1949: ಮುವ್ವತ್ತೆರಡನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರೆವರೆಂಡ್ ಉತ್ತಂಗಿ ಚನ್ನಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ಕಲಬುರ್ಗಿಯಲ್ಲಿ ಆರಂಭಗೊಂಡಿತು.

1970: 43 ದೇಶಗಳು ಸಹಿ ಹಾಕುವುದರೊಂದಿಗೆ ‘ನ್ಯೂಕ್ಲಿಯರ್ ನಾನ್-ಪ್ರೊಲಿಫಿರೇಶನ್ ಟ್ರೀಟಿ’ ಚಾಲನೆ ಪಡೆದುಕೊಂಡಿತು.

1990: ಭೋಪಾಲಿನಲ್ಲಿ 1984ರಲ್ಲಿ ಸಂಭವಿಸಿದ ಭೀಕರ ವಿಷಾನಿಲ ದುರಂತದಲ್ಲಿ ತೊಂದರೆಗೆ ಒಳಗಾದ 5 ಲಕ್ಷ ಜನರಿಗೆ 360 ಕೋಟಿ ರೂಪಾಯಿಗಳ ನೆರವನ್ನು ಸರ್ಕಾರ ಘೋಷಿಸಿತು.

1995: ಭಾರತ ಮತ್ತು ಚೀನಾ ಹೊಸ ಗಡಿ ರೇಖೆಯನ್ನು ಗುರುತಿಸಿದವು. ಮಿಲಿಟರಿ ಅಧಿಕಾರಿಗಳ ಮಾತುಕತೆಗೆ ನೆರವಾಗಲು ಸಿಕ್ಕಿಂನ ನಾಥೂಲಾ ಪ್ರದೇಶವನ್ನು ಗುರುತಿಸಲಾಯಿತು.

1997: ಮುಂಬೈನ ಪಾಂಡುರಂಗ ಶಾಸ್ತ್ರಿ ಅಠವಳೆ ಅವರನ್ನು ಧಾರ್ಮಿಕ ಪ್ರಗತಿಗಾಗಿ ನೀಡಲಾಗುವ 1997ರ `ಜಾನ್ ಎಂ.ಟಿ. ಟೆಂಪ್ಲೆಟನ್ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಲಾಯಿತು. ಈ ಪ್ರಶಸ್ತಿಯ ಮೊತ್ತ 12 ಲಕ್ಷ ಡಾಲರುಗಳು.

2007: ಭಾರತವು ಪೈಲಟ್ ರಹಿತ ಯುದ್ಧ ವಿಮಾನ ‘ಲಕ್ಷ್ಯ’ದ ಪರೀಕ್ಷಾರ್ಥ ಪ್ರಯೋಗವನ್ನು ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಿತು. ಬೆಂಗಳೂರಿನ ವಿಮಾನ ಅಭಿವೃದ್ಧಿ ಸಂಸ್ಥೆಯಲ್ಲಿ (ಎಡಿಇ) ಸಿದ್ಧ ಪಡಿಸಲಾಗಿರುವ ಈ ವಿಮಾನವು ಚಾಲಕರಿಲ್ಲದೆಯೇ ಗುರಿಯನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ.

2008: ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜೀನಾಮೆ ಸಲ್ಲಿಸಿದರು.

ಪ್ರಮುಖಜನನ/ಮರಣ:

1512: ಜರ್ಮನ್-ನೆದರ್ಲ್ಯಾಂಡ್ ಪ್ರದೇಶದವರಾದ ಭೂಪಟ ತಯಾರಕ, ಭೂಗೊಳತಜ್ಞ ಮತ್ತು ಕಾಸ್ಮೋಗ್ರಾಫರ್ ಆದ ಗೆರಾರ್ಡಸ್ ಮರ್ಕೇಟರ್ ನೆದರ್ಲ್ಯಾಂಡಿನ ರೂಪೆಲ್ಮೊಂಡೆ ಎಂಬಲ್ಲಿ ಜನಿಸಿದರು. ‘ನಕಾಶೆ’ ಅಥವಾ ‘ಮ್ಯಾಪ್’ ತಯಾರಿಕೆ ಇವರು ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಇದು ‘ಮರ್ಕೇಟರ್ ಪ್ರೊಜೆಕ್ಷನ್’ ಎಂದೇ ಖ್ಯಾತಿ ಪಡೆದಿದೆ. ಇದಲ್ಲದೆ ಇವರು ನಕಾಶೆಗಳ ಸಂಗ್ರಹಕ್ಕೆ ‘ಅಟ್ಲಾಸ್’ ಎಂಬ ಶಬ್ದವನ್ನು ಬಳಕೆಗೆ ತಂದರು.

1730: ಆಂಟನಿ ಲೌಮೆಟ್ ಡೆ ಲಾ ಮೋತ್ ಕಾಡಿಲ್ಯಾಕ್ ಅವರು ಪ್ರಾನ್ಸಿನ ಸೈಂಟ್-ನಿಕೊಲಸ್-ಡಿ-ಲಾ ಗ್ರೇವ್ ಎಂಬಲ್ಲಿ ಜನಿಸಿದರು. ಫ್ರೆಂಚ್ ಯೋಧ, ಸಂಶೋಧಕ ಹಾಗೂ ಉತ್ತರ ಅಮೆರಿಕಾದ ಆಡಳಿತಗಾರರಾದ ಇವರು ಡೆಟ್ರಾಯಿಟ್ ನಗರವನ್ನು ಸ್ಥಾಪಿಸಿದರು. ಸಿಟಿ ಆಫ್ ಕಾಡಿಲ್ಯಾಕ್, ಕಾಡಿಲ್ಯಾಕ್ ಮೌಂಟನ್, ಕಾಡಿಲ್ಯಾಕ್ ಆಟೋಮೊಬೈಲ್ ಮುಂತಾದವುಗಳೆಲ್ಲಾ ಇವರ ಹೆಸರನ್ನು ಪಡೆದುಕೊಂಡಿವೆ.

1912: ಕತೆಗಾರ್ತಿ ಕೊಡಗಿನ ಗೌರಮ್ಮನವರು ಮಡಿಕೇರಿಯಲ್ಲಿ ಜನಿಸಿದರು. ತಮ್ಮೂರಿಗೆ ಬಂದ ಗಾಂಧೀಜಿಯವರನ್ನು ಉಪವಾಸ ಕುಳಿತು ತನ್ನ ಮನೆಗೆ ಬರುವಂತೆ ಮಾಡಿ ತನ್ನ ಆಭರಣಗಳನ್ನೆಲ್ಲಾ ಕೊಟ್ಟುಬಿಟ್ಟರೆಂದು ಸ್ವಯಂ ಗಾಂಧೀಜಿಯವರೇ, ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಬರೆದಿದ್ದಾರೆ. ಅವರ ಮೊದಲ ಕತೆ ಪ್ರಕಟವಾದದ್ದು 1931ರಲ್ಲಿ. ಅಲ್ಲಿಂದ ಸುಮಾರು ಎಂಟು ವರ್ಷಗಳವರೆಗಿನ ಅವಧಿಯಲ್ಲಿ ಸುಮಾರು ಇಪ್ಪತ್ತೊಂದು ಕಥೆಗಳನ್ನು ಬರೆದಿದ್ದಾರೆ. 1939ರ ಏಪ್ರಿಲ್ 13ರಂದು ಅವರ ಮನೆಗೆ ಸಮೀಪ ಹರಿಯುತ್ತಿದ್ದ ಹಟ್ಟಿ ಹಳ್ಳಿಯಲ್ಲಿ ಈಜಲು ಹೋಗಿ ಸುಳಿಗೆ ಸಿಕ್ಕಿ ಹೊರಬರಲಾಗದೆ ಮೃತರಾದರು.

1913: ಕಿರಾಣಾ ಘರಾಣೆಯ ಸ್ವರ ಸಾಮ್ರಾಜ್ಞಿ ಎಂದು ಪ್ರಸಿದ್ಧರಾಗಿದ್ದ ಗಾಂಗೂಬಾಯಿ ಹಾನಗಲ್ ಅವರು ಹಾನಗಲ್ ಎಂಬಲ್ಲಿ ಜನಿಸಿದರು. ಜೀವನಪರ್ಯಂತ ಸೀದಾ ಸಾದಾ ವ್ಯಕ್ತಿತ್ವವನ್ನೇ ರೂಪಿಸಿಕೊಂಡು ನಡೆದ ಅವರಿಗೆ ಪದ್ಮವಿಭೂಷಣ, ಎಂಟು ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಪದವಿಗಳು, ರಾಷ್ಟ್ರಮಟ್ಟದಲ್ಲೇ ಮೇರುಮಟ್ಟದ ನಲವತ್ತೆಂಟು ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

1916: ಬಿಜೊಯಾನಂದ ‘ಬಿಜು’ ಪಟ್ನಾಯಕ್ ಒರಿಸ್ಸಾದ ಕಟಕ್ ನಗರದಲ್ಲಿ ಜನಿಸಿದರು. ವೈಮಾನಿಕರಾಗಿಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು 1961-63 ಮತ್ತು 1990-95ರ ಅವಧಿಗಳಲ್ಲಿ ಎರಡು ಬಾರಿ ಒರಿಸ್ಸಾ ಮುಖ್ಯಮಂತ್ರಿಯಾಗಿ, 1977-80 ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1934: ಇಸ್ರೇಲಿ-ಅಮೆರಿಕನ್ ಅರ್ಥಶಾಸ್ತ್ರಜ್ಞ ಮತ್ತು ಮನಃಶಾಸ್ತ್ರಜ್ಞರಾದ ಡೇನಿಯಲ್ ಕಹ್ನೆಮನ್ ಪ್ಯಾಲೆಸ್ಟೈನಿನ ಟೆಲ್ ಅವಿವ್ ಎಂಬಲ್ಲಿ ಜನಿಸಿದರು. ಇವರಿಗೆ 2002 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1966: ಭಾರತೀಯ-ಅಮೇರಿಕನ್ ನಟ, ನಿರ್ಮಾಪಕ, ಚಿತ್ರಕತೆಗಾರ ಆಸಿಫ್ ಮಾಂಡ್ವಿ ಮುಂಬೈನಲ್ಲಿ ಜನಿಸಿದರು. ಇವರು ಅಮೆರಿಕದ ಅನೇಕ ಚಲನಚಿತ್ರ ಮತ್ತು ಕಿರುತೆರೆ ಕಾರ್ಯಕ್ರಮಗಳ ನಟ, ನಿರ್ಮಾಪಕ ಮತ್ತು ಕತೆಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.

1539: ಭಾರತದಲ್ಲಿ ಪೋರ್ಚುಗೀಸ್ ಗವರ್ನರ್ ಆಗಿದ್ದ ನುನೋ ಡ ಕುನ್ಹ ಅವರು ಗುಡ್ ಹೋಪ್ನಲ್ಲಿ ನಿಧನರಾದರು.

1953: ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ದೇಶಾಡಳಿತದ ಮುಖ್ಯಸ್ಥರಾಗಿದ್ದ ಜೋಸೆಫ್ ಸ್ಟಾಲಿನ್ ಅವರು ಸೋವಿಯತ್ ಯೂನಿಯನ್ನಿನ ಕುಂಟ್ಸೆವೋ ಎಂಬಲ್ಲಿ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾದರು. ಸುಮಾರು ಮೂರು ದಶಕಗಳ ಕಾಲ ಈತ ಸೋವಿಯತ್ ಒಕ್ಕೂಟದ ಸರ್ವಾಧಿಕಾರಿಯಂತೆ ಅಧಿಕಾರ ನಡೆಸಿದರು.