Categories
e-ದಿನ

ಮಾರ್ಚ್-06

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 12: ರೋಮನ್ ದೊರೆ ಆಗಸ್ಟಸ್ ‘ಪಾಂಟಿಫೆಕ್ಸ್ ಮ್ಯಾಕ್ಸಿಮಸ್’ ಗೌರವ ಪಡೆದು ಚಕ್ರವರ್ತಿಯಾದರು

632: ಪ್ರವಾದಿ ಮುಹಮ್ಮದ್ ಅವರ ಅಂತಿಮ ಸಂದೇಶ (ಫೇರ್ವೆಲ್ ಸರ್ಮನ್) ಸಂದಿತು.

1665: ರಾಯಲ್ ಸೊಸೈಟಿಯ ಪ್ರಥಮ ಜಂಟಿ ಕಾರ್ಯದರ್ಶಿಗಳಾದ ಹೆನ್ರಿ ಓಲ್ಡನ್ ಬರ್ಗ್ ಅವರು ‘ಫಿಲಸಾಫಿಕಲ್ ಟ್ರಾನ್ಸಾಕ್ಷನ್ಸ್ ಆಫ್ ದಿ ರಾಯಲ್ ಸೊಸೈಟಿ’ ಪ್ರಥಮ ಸಂಚಿಕೆಯನ್ನು ಪ್ರಕಟಿಸಿದರು.

1869: ಡ್ಮಿಟ್ರಿ ಮೆಂಡೆಲೀವ್ ಅವರು ಮೊದಲ ರಸಾಯನ ಶಾಸ್ತ್ರದ ಪೀರಿಯಾಡಿಕ್ ಟೇಬಲ್ ಅನ್ನು ರಷ್ಯನ್ ಕೆಮಿಕಲ್ ಸೊಸೈಟಿಯ ಮುಂದೆ ಪ್ರಸ್ತುತಪಡಿಸಿದರು.

1899: ಬಾಯರ್ ಸಂಸ್ಥೆಯು ‘ಆಸ್ಪಿರಿನ್’ ಅನ್ನು ತನ್ನ ಟ್ರೇಡ್ ಮಾರ್ಕ್ ಆಗಿ ನೊಂದಾಯಿಸಿತು.

1930: ಕಮ್ಯೂನಿಸ್ಟ್ ಇಂಟರ್ನ್ಯಾಷನಲ್ ಸಂಘಟನೆಯು ವಿಶ್ವದಾದ್ಯಂತ ‘ಇಂಟರ್ ನ್ಯಾಷನಲ್ ಅನ್ ಎಂಪ್ಲಾಯ್ಮೆಂಟ್’ ಪ್ರದರ್ಶನಗಳನ್ನು ಏರ್ಪಡಿಸಿತು. ‘ಗ್ರೇಟ್ ಡಿಪ್ರೆಷನ್’ ಅಥವಾ ಆರ್ಥಿಕ ಹಿನ್ನೆಡೆಯ ಸಂದರ್ಭದಲ್ಲಿ ಎಲ್ಲೆಲ್ಲೂ ನಿರುದ್ಯೋಗ ಕಾಡತೊಡಗಿದ್ದ ಸಂದರ್ಭದಲ್ಲಿ ಈ ಪ್ರದರ್ಶನಕ್ಕೆ ವ್ಯಾಪಕವಾದ ಬೆಂಬಲ ದೊರೆತಿತ್ತು.

1943: ನಾರ್ಮನ್ ರಾಕ್ವೆಲ್ ಅವರು ‘ದಿ ಸಾಟರ್ಡೇ ಈವನಿಂಗ್ ಪೋಸ್ಟ್’ ಪತ್ರಿಕೆಯಲ್ಲಿ ‘ಫೋರ್ ಫ್ರೀಡಮ್’ ಮಾಲಿಕೆಯಲ್ಲಿ ‘ಫ್ರೀಡಮ್ ಫ್ರಂ ವಾಂಟ್’ ಲೇಖನವನ್ನು ಪ್ರಕಟಿಸಿದರು.

1961: ಭಾರತದ ಮೊತ್ತ ಮೊದಲ ಆರ್ಥಿಕ ದಿನಪತ್ರಿಕೆ `ಇಕನಾಮಿಕ್ ಟೈಮ್ಸ್’ ಅನ್ನು ಟೈಮ್ಸ್ ಆಫ್ ಇಂಡಿಯಾ ಸಮೂಹ ಆರಂಭಿಸಿತು.

1964: ನೇಶನ್ ಆಫ್ ಇಸ್ಲಾಂ ನಾಯಕರಾದ ಎಲಿಜಃ ಮುಹಮ್ಮದ್ ಅವರು ಬಾಕ್ಸಿಂಗ್ ಚಾಂಪಿಯನ್ ಕ್ಯಾಸಿಯಸ್ ಕ್ಲೇ ಅವರಿಗೆ ಮುಹಮ್ಮದ್ ಅಲಿ ಎಂಬ ಹೆಸರು ಕೊಟ್ಟರು

1967: ಸೋವಿಯತ್ ಯೂನಿಯನ್ನಿನ ಜೋಸೆಫ್ ಸ್ಟಾಲಿನ್ ಅವರ ಪುತ್ರಿ ಸ್ವೆಟ್ಲಾನಾ ಅಲ್ಲಿಲುವೇವಾ ಅವರು ಅಮೆರಿಕಕ್ಕೆ ವಲಸೆ ಹೋದರು

1971: ಪೋರ್ಟ್ ಆಫ್ ಸ್ಪೇನಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವುದರೊಂದಿಗೆ ಸುನಿಲ್ ಗಾವಸ್ಕರ್ ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡಿದರು. ಅವರು ಔಟಾಗದೆ 65 ಮತ್ತು 67 ರನ್ನುಗಳನ್ನು ಪಡೆದರು.

1992: ‘ಮೈಕೆಲೇಂಜೆಲೊ’ ಹೆಸರಿನ ವೈರಸ್ ಜಗತ್ತಿನಾದ್ಯಂತ ಪರ್ಸನಲ್ ಕಂಪ್ಯೂಟರುಗಳನ್ನು ಬಾಧಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು.

1997: ಇಂಗ್ಲೆಂಡಿನ ರಾಣಿ 2ನೇ ಎಲಿಜಬೆತ್ ರಾಯಲ್ ವೆಬ್ ಸೈಟನ್ನು ಉದ್ಘಾಟಿಸಿದರು (http://www.royal.gov.uk)

2006: ಸಾರ್ವಜನಿಕರ ಒತ್ತಡವನ್ನು ಅನುಸರಿಸಿ ದೆಹಲಿ ಪೊಲೀಸರು ರೂಪದರ್ಶಿ ಜೆಸ್ಸಿಕಾಲಾಲ್ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಹೊಸದಾಗಿ ಪ್ರಕರಣ ದಾಖಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಹರಿಯಾಣ ಸಚಿವರ ಪುತ್ರ ಮನುಶರ್ಮಾ ಸೇರಿದಂತೆ 9 ಆರೋಪಿಗಳನ್ನು ಖುಲಾಸೆ ಮಾಡಿತ್ತು.

2006: ಪ್ರಸ್ತುತ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯು ‘ಕ್ರಾಷ್’ ಚಿತ್ರಕ್ಕೆ ಲಭಿಸಿತು. ಆಂಜ್ ಲೀ ನಿರ್ದೇಶನದ ‘ಬ್ರೋಕ್ ಬ್ಯಾಕ್ ಮೌಂಟನ್’ ಚಿತ್ರವನ್ನು ‘ಕ್ರಾಷ್’ ಹಿಂದಿಕ್ಕಿತು. ಆಂಜ್ ಲೀಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು.

2007: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೊತ್ತ ಮೊದಲ ಬಾರಿಗೆ 1000 ಕೋಟಿ ರೂಪಾಯಿ ವಾರ್ಷಿಕ ವರಮಾನ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿತು. 2006ರಲ್ಲಿ ಇದೇ ದಿನ ಸಂಸ್ಥೆಯು 838 ಕೋಟಿ ರೂಪಾಯಿ ವರಮಾನ ಗಳಿಸಿತ್ತು.

2008: ಅಮೆರಿಕದ ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿದ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ಅರ್ಸೆಲರ್ ಮಿತ್ತಲ್ ಸಂಸ್ಥೆಯ ಸ್ಥಾಪಕ ಮುಖ್ಯಸ್ಥ ಲಕ್ಷ್ಮೀ ಮಿತ್ತಲ್ ಅವರು 45 ಶತಕೋಟಿ ಡಾಲರುಗಳ ಒಡೆಯರಾಗಿ ಮೊದಲ ಸ್ಥಾನದಲ್ಲಿ ಕಂಗೊಳಿಸಿದರು.

ಪ್ರಮುಖಜನನ/ಮರಣ:

1475: ಮೈಕೆಲೇಂಜೆಲೋ ಬೊನೋರೊಟ್ಟಿ ಇಟಲಿಯ ಫ್ಲಾರೆನ್ಸ್ ನಗರದ ಸಮೀಪದ ಕೇಪ್ರೆಸೆ ಎಂಬಲ್ಲಿ ಜನಿಸಿದರು. ಮಹಾನ್ ಚಿತ್ರಕಾರ, ಶಿಲ್ಪಿ, ವಿನ್ಯಾಸಕಾರ ಹಾಗೂ ಕವಿಯೆನಿಸಿರುವ ಮೈಕೆಲೇಂಜೆಲೋ ಅವರು ಇಟಲಿಯ ಭವ್ಯ ಪುನರುತ್ಥಾನ ಕಾಲದ ಮೇರುಸದೃಶ ಕಲಾವಿದರೆಂದು ಪ್ರಸಿದ್ಧರಾಗಿದ್ದಾರೆ. ರೋಮ್ ನಗರದಲ್ಲಿ ‘ಪಿಯೇಟಾ’ ಶಿಲ್ಪ, ಫ್ಲಾರೆನ್ಸ್ ನಗರದಲ್ಲಿ ‘ಡೇವಿಡ್’ ಶಿಲ್ಪ, ವ್ಯಾಟಿಕನ್ ನಗರದ ಸಿಸ್ಟೀನ್ ಚಾಪೆಲ್ಲಿನಲ್ಲಿ ಕ್ರಿಸ್ತನ ಜೀವನ ಚರಿತ್ರೆ ಮತ್ತು ‘ದಿ ಲಾಸ್ಟ್ ಜಡ್ಜ್ಮೆಂಟ್’ ಮುಂತಾದವು ಅವರ ಪ್ರಸಿದ್ಧ ಸೃಷ್ಟಿಗಳಾಗಿವೆ.

1508: ಮೊಘಲ್ ವಂಶದ ಎರಡನೇ ದೊರೆ ಹುಮಾಯೂನ್ ಆಫ್ಘಾನಿಸ್ಥಾನದ ಕಾಬುಲ್ನಲ್ಲಿ ಜನಿಸಿದರು.

1697: ಬ್ರಿಟಿಷ್ ಭಾರತದ ಮೊಟ್ಟ ಮೊದಲ ಸೈನ್ಯಾಧಿಕಾರಿಗಳಾದ ಸ್ಟ್ರಿಂಜರ್ ಲಾರೆನ್ಸ್ ಇಂಗ್ಲೆಂಡಿನ ಹಿಯರ್ಫೋರ್ಡ್ ಎಂಬಲ್ಲಿ ಜನಿಸಿದರು.

1849: ಆಸ್ಟ್ರಿಯನ್ ಗನ್ ವಿನ್ಯಾಸಕಾರರಾದ ಜಾರ್ಜ್ ಲೂಗರ್ ಅವರು ಟೈರಾಲ್ ಪ್ರದೇಶದ ಸ್ಟೀನಾಕ್ ಆಮ್ ಬ್ರೆನ್ನರ್ ಎಂಬಲ್ಲಿ ಜನಿಸಿದರು. ಇವರು ವಿನ್ಯಾಸಗೊಳಿಸಿದ ಪಿಸ್ತೂಲು ‘ಲೂಗರ್ ಪಿಸ್ತೂಲ್’ ಎಂದೇ ಹೆಸರಾಗಿದೆ.

1920: ಗಂಧದ ಕೆತ್ತನೆ ಕೆಲಸಕ್ಕೆ ಹೆಸರಾದ ಗುಡಿಕಾರ ಕಲಾವಿದ ಯಶವಂತ ಈರಯ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜನಿಸಿದರು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1927: ಕೊಲಂಬಿಯನ್ ಪತ್ರಕರ್ತ ಮತ್ತು ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮರ್ಕ್ವೆಜ್ ಅವರು ಕೊಲಂಬಿಯಾದ ಅರಕಟಾಕ ಎಂಬಲ್ಲಿ ಜನಿಸಿದರು. ಸ್ಪಾನಿಷ್ ಭಾಷೆಯ ಮಹತ್ವದ ಬರಹಗಾರರೆನಿಸಿರುವ ಇವರಿಗೆ 1982 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1937: ರಷ್ಯಾದ ಗಗನಯಾತ್ರಿ ವಾಲೆಂಟೀನಾ ತೆರೆಷ್ಕೋವಾ ಸೋವಿಯತ್ ಯೂನಿಯನ್ನಿನ ಬೋಲ್ ಶೋಯೇ ಮಸ್ಲೆನ್ನಿಕೋವೋ ಎಂಬಲ್ಲಿ ಜನಿಸಿದರು. ಬಾಹ್ಯಾಕಾಶಕ್ಕೆ ಪಯಣಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ರಾಜಕಾರಣಿಯಾಗಿ ಸಹಾ ಅನೇಕ ಹುದ್ಧೆಗಳನ್ನು ನಿರ್ವಹಿಸಿದ್ದಾರೆ.

1938: ಚಲನಚಿತ್ರ ಕಲಾವಿದೆ ಎಂ. ಲೀಲಾವತಿ ಅವರು ಮಂಗಳೂರಿನಲ್ಲಿ ಜನಿಸಿದರು. ಸುಮಾರು 600 ಚಿತ್ರಗಳಲ್ಲಿ ನಟಿಸಿರುವ ಇವರು ಮದುವೆ ಮಾಡಿ ನೋಡು, ಸಂತ ತುಕಾರಾಂ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಪಡೆದರೆ, ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು. ಅವರೇ ನಿರ್ಮಿಸಿದ ‘ಕನ್ನಡದ ಕಂದ’ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಪಡೆದರು. ಚಲನಚಿತ್ರ ರಂಗದ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿಯೂ ಇವರಿಗೆ ಸಂದಿದೆ.

1973: ಅಮೇರಿಕನ್ ಮಹಿಳಾ ಸಾಹಿತಿ ಪರ್ಲ್ ಎಸ್ ಬಕ್ ಅವರು ವೆರ್ಮಾಂಟ್ ಪ್ರದೇಶದ ಡ್ಯಾನ್ಬಿ ಎಂಬಲ್ಲಿ ನಿಧನರಾದರು. ‘ಗುಡ್ ಅರ್ಥ್’ ಎಂಬುದು ಅವರ ಪ್ರಸಿದ್ಧ ಕಾದಂಬರಿ. ಚೀನಾ ದೇಶದಲ್ಲಿನ ರೈತ ಜೀವನವನ್ನು ಮನೋಜ್ಞವಾಗಿ ನಿರೂಪಿಸಿರುವ ಮತ್ತು ತಮ್ಮ ಜೀವನಾನುಭವಗಳನ್ನು ತೆರೆದಿಟ್ಟಿರುವ ಅವರಿಗೆ 1938 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

2005: ಜರ್ಮನ್-ಅಮೇರಿಕನ್ ಭೌತವಿಜ್ಞಾನಿ ಹಾನ್ಸ್ ಬೇಥೆ ಅವರು ನ್ಯೂಯಾರ್ಕಿನ ಇಥಾಕಾ ಎಂಬಲ್ಲಿ ತಮ್ಮ 97ನೇ ವಯಸ್ಸಿನಲ್ಲಿ ನಿಧನರಾದರು. ಆಸ್ಟ್ರೋ ಫಿಸಿಕ್ಸ್, ಎಲೆಕ್ಟ್ರೋ ಡೈನಮಿಕ್ಸ್ ಮತ್ತು ಸಾಲಿಡ್ ಸ್ಟೇಟ್ ಫಿಸಿಕ್ಸ್ ಕುರಿತಾದ ಅವರ ಕುರಿತಾದ ಸಂಶೋಧನಾ ಕೊಡುಗೆಗಳಿಗಾಗಿ ಇವರಿಗೆ 1967 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

2015: ಬಿಹಾರದ 18ನೇ ಮುಖ್ಯಮಂತ್ರಿಗಳಾಗಿದ್ದ ರಾಮ ಸುಂದರ ದಾಸ್ ಪಾಟ್ನಾದಲ್ಲಿ ನಿಧನರಾದರು.