Categories
e-ದಿನ

ಮಾರ್ಚ್-08

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರರಾಷ್ಟ್ರೀಯ ಮಹಿಳಾ ಉದ್ಯೋಗಿಗಳ ದಿನಾಚರಣೆ ಎಂದು ಪ್ರಾರಂಭವಾದ ಮಾರ್ಚ್ 8ರ ದಿನವು ಕಾಲಕ್ರಮೇಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ 1909ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಮಹಿಳಾ ದಿನಾಚರಣೆಯು ಪ್ರಥಮವೆನಿಸಿದ್ದು, ಅದು ಸೋಷಿಯಲಿಸ್ಟರ ಒಂದು ರಾಜಕೀಯ ಆಚರಣೆಯಾಗಿ ನಡೆಯಿತು. 1917ರಲ್ಲಿ ಸೋವಿಯತ್ ಯೂನಿಯನ್ನಿನಲ್ಲಿ (ಜೂಲಿಯನ್ ಕ್ಯಾಲೆಂಡರಿನಲ್ಲಿ ಫೆಬ್ರವರಿ 23ರಂದು ನಡೆದ) ಮಹಿಳಾ ದಿನದ ಪ್ರತಿಭಟನೆಗಳು ಮಹತ್ವದ ಫೆಬ್ರವರಿ ಕ್ರಾಂತಿಗೆ ನಾಂದಿ ಹಾಡಿತು. ಮುಂದೆ ಅಲ್ಲಿ ಈ ದಿನವು ರಜಾದಿನವಾಗಿ ಘೋಷಿತಗೊಂಡು, ವಿಶ್ವದ ವಿವಿದೆಡೆಗಳಿಗೂ ವ್ಯಾಪಿಸಿತು. 1975ರ ವರ್ಷದಲ್ಲಿ ಐಸ್ಲ್ಯಾಂಡ್ ದೇಶದಲ್ಲಿ ನಡೆದ ಮಹಿಳೆಯರ ಮುಷ್ಕರವು, ಅತ್ಯಂತ ಅರ್ಥಪೂರ್ಣ ಮಹಿಳಾ ದಿನದ ಆಚರಣೆಗಳಲ್ಲಿ ಒಂದೆನಿಸಿದ್ದು ಅಲ್ಲಿ ವಿಶ್ವದಲ್ಲೇ ಪ್ರಪ್ರಥಮವಾಗಿ ಮಹಿಳೆಯರೊಬ್ಬರು ಅಧ್ಯಕ್ಷರಾಗುವುದಕ್ಕೆ ಎಡೆ ಮಾಡಿಕೊಟ್ಟಿತು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ವಿಶ್ವದ ವಿವಿಧ ಭಾಗಗಳಲ್ಲಿ ಮಹಿಳೆಯರ ಕುರಿತಾಗಿ ಗೌರವ, ಅವರ ಕೌಟುಂಬಿಕ ಸೇವೆ ಮತ್ತು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ತರಗಳಲ್ಲಿನ ಸಾಧನೆಗಳ ಕುರಿತಾಗಿ ಮೆಚ್ಚುಗೆ ಮತ್ತು ಪ್ರೀತ್ಯಾಭಿಮಾನಗಳನ್ನು ವ್ಯಕ್ತಪಡಿಸುವ ದ್ಯೋತಕವಾದ ಆಚರಣೆಯಾಗಿದೆ.

ಪ್ರಮುಖಘಟನಾವಳಿಗಳು:

1010: ಪ್ರಸಿದ್ಧ ಪರ್ಷಿಯನ್ ಕವಿವರ್ಯರಾದ ಫೆರ್ಡೌಸಿ ಅವರು ತಮ್ಮ ಮಹಾಕಾವ್ಯವಾದ ‘ಷಾಹ್ನಮೇಹ್’ ಅನ್ನು ಪೂರ್ಣಗೊಳಿಸಿದರು.

1576: ಸ್ಪಾನಿಷ್ ಅನ್ವೇಷಕರಾದ ಡೀಗೋ ಗ್ರೆಸಿಯಾ ಡಿ ಪೆಲೆಶಿಯೋ ಅವರು ಪ್ರಥಮ ಬಾರಿಗೆ ಕೋಪನ್ನಿನ ಮಯಾನ್ ನಗರದ ಅವಶೇಷಗಳನ್ನು ಕಂಡರು.

1618: ಜೊಹಾನ್ನೆಸ್ ಕೆಪ್ಲರ್ ಅವರು ಗ್ರಹಗಳ ಚಲನೆಯ ಮೂರನೆಯ ನಿಯಮ(third law of planetary motion)ವನ್ನು ಅನ್ವೇಷಿಸಿದರು

1655: ಜಾನ್ ಕೇಸರ್ ಅವರು ಇಂಗ್ಲೆಂಡಿನ ಉತ್ತರ ಅಮೆರಿಕದದ ವಸಾಹತುಗಳಲ್ಲಿನ ಮೊಟ್ಟ ಮೊದಲ ಕಾನೂನಿನ ರೀತ್ಯಾ ಗುರುತಿಸಲ್ಪಟ್ಟ ಗುಲಾಮರೆನಿಸಿದರು.

1775: ಅನಾಮಿಕ ಬರಹಗಾರರೊಬ್ಬರು ‘ಅಮೆರಿಕದಲ್ಲಿ ಆಫ್ರಿಕನ್ನರ ಗುಲಾಮಗಿರಿ’ ಎಂಬ ಲೇಖನ ಮೂಡಿಸಿ, ಅಮೆರಿಕದ ವಸಾಹತುಗಳ ಇತಿಹಾಸದಲ್ಲೇ ಮೊದಲಬಾರಿಗೆ, ಇಲ್ಲಿನ ಗುಲಾಮರ ವಿಮೋಚನೆ ಮತ್ತು ಗುಲಾಮಗಿರಿಯನ್ನು ನಿಷೇದಿಬೇಕೆಂಬ ಅಭಿಪ್ರಾಯ ಮಂಡಿಸಿದರು. ಈ ಅನಾಮಿಕ ಬರಹಗಾರರು ಥಾಮಸ್ ಪೈನ್ ಅವರೇ ಇರಬೇಕು ಎಂಬುದು ಕೆಲವೊಂದು ವಿದ್ವಾಂಸರ ಊಹೆಯಾಗಿದೆ.

1817: ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಸ್ಥಾಪನೆಗೊಂಡಿತು.

1910: ಫ್ರೆಂಚ್ ವಿಮಾನ ಚಾಲಕಿ ರೇಮಂಡೇ ಡಿ ಲರೋಚ್ ಅವರು ಪೈಲಟ್ ಪರವಾನಗಿ ಪಡೆದ ಪ್ರಥಮ ಮಹಿಳೆ ಎನಿಸಿದರು.

1917: ಸೈಂಟ್ ಪೀಟರ್ ಬರ್ಗ್’ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರತಿಭಟನೆಗಳು ಫೆಬ್ರವರಿ ಕ್ರಾಂತಿಗೆ ನಾಂದಿ ಹಾಡಿದವು. (ಅಂದಿನ ದಿನದಲ್ಲಿ ಅಲ್ಲಿ ಜೂಲಿಯನ್ ಕ್ಯಾಲೆಂಡರ್ ಅಸ್ತಿತ್ವದಲ್ಲಿದ್ದು, ಗ್ರೆಗೋರಿಯನ್ ಕ್ಯಾಲೆಂಡರಿನ ಮಾರ್ಚ್ 8ರ ದಿನ ಜೂಲಿಯನ್ ಕ್ಯಾಲೆಂಡರಿನ ಫೆಬ್ರವರಿ 23ರ ದಿನವಾಗಿತ್ತು. ಹಾಗಾಗಿ ಅದು ಫೆಬ್ರವರಿ ಕ್ರಾಂತಿ.)

1920: ಪ್ರಥಮ ಆಧುನಿಕ ಅರಾಬ್ ರಾಷ್ಟ್ರವಾದ ‘ಅರಾಬ್ ಕಿಂಗ್ಡಂ ಆಫ್ ಸಿರಿಯಾ’ ಸ್ಥಾಪನೆಗೊಂಡಿತು

1947: ಫೆಬ್ರವರಿ 28ರಂದು ತೈವಾನಿನಲ್ಲಿ ಬುಗಿಲೆದ್ದ ಅಧಿಕಾರಶಾಹಿ ವಿರುದ್ಧದ ಚಳುವಳಿಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ್ದ ಚೀನಾದ ಆಡಳಿತವು, 13000 ಸೈನ್ಯಪಡೆಯನ್ನು ತೈವಾನಿಗೆ ತಂದು ವ್ಯಾಪಕ ಕಾರ್ಯಾಚರಣೆ ನಡೆಸಿ ಅನೇಕ ಪ್ರಾಜ್ಞರನ್ನೂ ಒಳಗೊಂಡಂತೆ ಸಹಸ್ರಾರು ಜನರನ್ನು ಕೊಂದುಹಾಕಿತು. ಇದು ತೈವಾನ್ ಸ್ವಾತಂತ್ರ್ಯ ಚಳುವಳಿಗೆ ಬೇರುಗಳನ್ನು ಸೃಷ್ಟಿಸಿತು.

1948: ಸಾಗರೋತ್ತರ ವಿಮಾನ ಸೇವೆಗಾಗಿ ಭಾರತದಲ್ಲಿ ಏರ್ ಇಂಡಿಯಾ ಇಂಟರ್ನ್ಯಾಷನಲ್ ಅನ್ನು ಸ್ಥಾಪಿಸಲಾಯಿತು.

1957: ಈಜಿಪ್ಟ್ ದೇಶವು ಸ್ಯೂಯೇಜ್ ಬಿಕ್ಕಟ್ಟು ಕೊನೆಗೊಂಡ ನಂತರದಲ್ಲಿ ಸ್ಯೋಯೇಜ್ ಕಾಲುವೆಯನ್ನು ಪುನಃ ತೆರೆಯಿತು

1971: ನ್ಯೂಯಾರ್ಕ್ ನಗರದ ಮ್ಯಾಡಿಸನ್ ಸ್ಪೆಯರ್ ಗಾರ್ಡನ್ನಿನಲ್ಲಿ ನಡೆದ ಸ್ಪರ್ಧೆಯಲ್ಲಿ 15 ಸುತ್ತುಗಳಲ್ಲಿ ಜೋ ಫ್ರೇಜಿಯರ್ ಅವರು ಮಹಮ್ಮದ್ ಅಲಿ ಅವರನ್ನು ಪರಾಭವಗೊಳಿಸಿ ಜಗತ್ತಿನ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದರು.

1979: ಫಿಲಿಪ್ಸ್ ಸಂಸ್ಥೆ ಮೊಟ್ಟಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಂಪಾಕ್ಟ್ ಡಿಸ್ಕ್’ಗಳನ್ನು ಪ್ರದರ್ಶಿಸಿತು.

1985: 1983 ವರ್ಷದಲ್ಲಿ ಪೂರ್ಣ ಬಹುಮತ ಹೊಂದಿಲ್ಲದಿದ್ದರೂ, ಹೆಚ್ಚು ಸ್ಥಾನಗಳನ್ನು ಗಳಿಸಿದ್ದ ತಮ್ಮ ಜನತಾ ಪಕ್ಷ ಸರ್ಕಾರಕ್ಕೆ ಭಾರತೀಯ ಜನತಾಪಕ್ಷ, ಕಮ್ಯೂನಿಸ್ಟ್ ಪಕ್ಷ ಮತ್ತು ಪಕ್ಷೇತರರ ಹೊರಗಿನ ಬೆಂಬಲದಿಂದ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದ ರಾಮಕೃಷ್ಣ ಹೆಗಡೆ ಅವರು, 2015ರಲ್ಲಿ ಪೂರ್ಣ ಬಹುಮತ ಪಡೆದ ಚುನಾವಣಾ ಯಶಸ್ಸಿನೊಂದಿಗೆ ಎರಡನೆಯ ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

2007: ಎಲ್ಲಿಯವರೆಗೆ ಒಂದು ರಾಜ್ಯದಲ್ಲಿ ಅಧ್ಯಯನ ಮಾಡುವಿರೋ ಅಲ್ಲಿಯವರೆಗೆ ಆ ರಾಜ್ಯದ ಭಾಷೆ ಕಲಿಯುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತು. ರಾಜ್ಯದಲ್ಲಿ ಸಿ ಬಿ ಎಸ್ ಇ ಅಥವಾ ಐ ಸಿ ಎಸ್ ಇ ಪಠ್ಯಕ್ರಮದಲ್ಲಿ ಅಧ್ಯಯನ ಮಾಡುವ ಹೊರದೇಶ ಅಥವಾ ಹೊರರಾಜ್ಯಗಳ ವಿದ್ಯಾರ್ಥಿಗಳು ಒಂದು ವಿಷಯವಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ರಾಜ್ಯ ಸರ್ಕಾರ 2006ರ ಮೇ 25ರಂದು ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿತು.

2008: ಜಾಗತಿಕ ಚೆಸ್ ಕ್ರೀಡೆಯಲ್ಲಿ ಮತ್ತೊಮ್ಮೆ ತಮ್ಮ ಪ್ರಭುತ್ವ ತೋರಿದ ಭಾರತದ ವಿಶ್ವನಾಥನ್ ಆನಂದ್ ಅವರು ಮೊರೆಲಿಯಾ-ಲಿನಾರೆಸ್ ಟೂರ್ನಿಯಲ್ಲಿ ಗೆಲುವು ಸಾಧಿಸಿದರು. ಅಂತಿಮ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಬಲ್ಗೇರಿಯದ ವೆಸೆಲಿನ್ ಟೊಪಲೊವ್ ಜೊತೆ ಡ್ರಾ ಸಾಧಿಸಿದರು. ಇದರೊಂದಿಗೆ ಸಾಧ್ಯವಿರುವ 14 ಪಾಯಿಂಟುಗಳಲ್ಲಿ 8.5 ಪಾಯಿಂಟ್ ಗಿಟ್ಟಿಸಿಕೊಂಡ ಈ ಭಾರತದ ಗ್ರ್ಯಾಂಡ್ ಮಾಸ್ಟರ್ ಅಗ್ರಸ್ಥಾನ ಪಡೆದುಕೊಂಡರು. ಕಳೆದ ವರ್ಷವೂ ಇಲ್ಲಿ ಪ್ರಶಸ್ತಿ ಆನಂದ್ ಅವರ ಪಾಲಾಗಿತ್ತು.

2008: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎಲ್ಲವನ್ನೂ ಮಹಿಳೆಯರೇ ನಿರ್ವಹಿಸಿದ ಏರ್ ಇಂಡಿಯಾ ವಿಮಾನವೊಂದು ಈದಿನದಂದು ಚೆನ್ನೈಯಿಂದ ಕೊಲಂಬೊಗೆ ತೆರಳಿತು. ಕ್ಯಾಪ್ಟನ್ ಎಂ.ದೀಪಾ ಮತ್ತು ಫ್ಲೈಟ್ ಆಫೀಸರ್ ಎನ್. ಆರ್. ವೇದಾ ಬಕಾವತಿ ಹಾಗೂ ಇತರ ಮಹಿಳಾ ಸಿಬ್ಬಂದಿಯನ್ನು ಈ ವಿಮಾನವು ಒಳಗೊಂಡಿತ್ತು. ಗಗನಸಖಿಯರು, ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ಪ್ರಯಾಣಿಕರನ್ನು ಕೊಲಂಬೊದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಗುಲಾಬಿ ಹೂವಿನೊಂದಿಗೆ ಸ್ವಾಗತಿಸಲಾಯಿತು.

2016: ಪೂರ್ಣ ಸೂರ್ಯಗ್ರಹಣವು ಸಂಭವಿಸಿತು. ಇದರ ಪೂರ್ಣ ದರ್ಶನವು ಇಂಡೊನೇಷ್ಯಾ ಮತ್ತು ಉತ್ತರ ಪೆಸಿಫಿಕ್ ಪ್ರದೇಶಗಳಲ್ಲಿ ಲಭ್ಯವಾಯಿತು.

ಪ್ರಮುಖಜನನ/ಮರಣ:

1787: ಪ್ರಸಿದ್ಧ ಜರ್ಮನ್ ಶಸ್ತ್ರಚಿಕಿತ್ಸಕ ಕಾರ್ಲ್ ಫರ್ಡಿನಾಂಡ್ ವೊನ್ ಗ್ರಾಫ್ ವಾರ್ಸಾದಲ್ಲಿ ಜನಿಸಿದರು. ಇವರು ಪ್ಲಾಸ್ಟಿಕ್ ಸರ್ಜರಿ ಮತ್ತು ರಿಕನ್ಸ್ಟ್ರಕ್ಟಿವ್ ಸರ್ಜರಿಯಲ್ಲಿ ಆಗ್ರಗಣ್ಯರೆನಿಸಿದ್ದರು.

1822: ಸೀಮೆ ಎಣ್ಣೆ ದೀಪವನ್ನು ಕಂಡುಹಿಡಿದ ಪೋಲಿಷ್ ಉದ್ಯಮಿ ಮತ್ತು ಸಂಶೋಧಕ ಇಜ್ಞೆಸಿ ಲುಕಾಸೀವಿಕ್ಜ್ ಅವರು ಆಸ್ಟ್ರಿಯಾದ ಮೀಲೆಕ್ ಬಳಿಯ ಜಡುಸ್ನಿಕಿ ಎಂಬಲ್ಲಿ ಜನಿಸಿದರು.

1848: ರೋಲರ್ ಕೋಸ್ಟರ್ ಅಭಿವೃದ್ಧಿ ಪಡಿಸಿದ ಅಮೆರಿಕದ ತಂತ್ರಜ್ಞ ಮತ್ತು ಉದ್ಯಮಿ ಲಮಾರ್ಕಸ್ ಅಡ್ನ ಥಾಂಪ್ಸನ್ ಅವರು ಓಹಿಯೋ ಪ್ರಾಂತ್ಯದ ಲಿಕಿಂಗ್ ಕೌಂಟಿ ಬಳಿಯ ಜೆರ್ಸೀ ಎಂಬಲ್ಲಿ ಜನಿಸಿದರು.

1879: ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಒಟ್ಟೋ ಹಾನ್ ಅವರು ಫ್ರಾಂಕ್ಫರ್ಟ್ ನಗರದಲ್ಲಿ ಜನಿಸಿದರು. ಪರಮಾಣು ರಸಾಯನಶಾಸ್ತ್ರದ ಪಿತಾಮಹರೆಂದು ಖ್ಯಾತರಾದ ಇವರಿಗೆ 1944 ವರ್ಷದಲ್ಲಿ ನೊಬೆಲ್ ಪರಮಾಣುಶಾಸ್ತ್ರದ ಪ್ರಶಸ್ತಿ ಸಂದಿತ್ತು.

1886: ಅಮೆರಿಕದ ರಸಾಯನಶಾಸ್ತ್ರ ವಿಜ್ಞಾನಿ ಎಡ್ವರ್ಡ್ ಕಾಲ್ವಿನ್ ಕೆಂಡಾಲ್ ಕನೆಕ್ಟಿಕಟ್ ಪ್ರಾಂತ್ಯದ ಸೌತ್ ನರ್ವಾಕ್ ಎಂಬಲ್ಲಿ ಜನಿಸಿದರು. ಹಾರ್ಮೋನ್ಸ್ ಆಫ್ ದಿ ಅಡ್ರಿನಲ್ ಗ್ಲ್ಯಾಂಡ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ ಇತರ ಮೂವರು ವಿಜ್ಞಾನಿಗಳೊಂದಿಗೆ 1950 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1921: ಕವಿ ಮತ್ತು ಚಲನಚಿತ್ರ ಗೀತರಚನಕಾರ ಸಾಹಿರ್ ಲೂಧಿಯಾನ್ವಿ ಕಾವ್ಯನಾಮವುಳ್ಳ ಅಬ್ದುಲ್ ಹಾಯೀ ಅವರು ಪಂಜಾಬಿನ ಲೂಧಿಯಾನಾದಲ್ಲಿ ಜನಿಸಿದರು. ತಾಜ್ ಮಹಲ್, ಕಭೀ ಕಭೀ ಮುಂತಾದ ಚಿತ್ರಗಳಲ್ಲಿನ ಗೀತೆಗಳಿಗೆ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದ ಇವರಿಗೆ ಭಾರತಸರ್ಕಾರದ ಪದ್ಮಶ್ರೀ ಪುರಸ್ಕಾರ ಸಂದಿತ್ತು. ಹಿಂದೀ ಮತ್ತು ಉರ್ದೂ ಕವಿಯಾಗಿದ್ದ ಇವರ ನೆನಪಿನಲ್ಲಿ 2013 ವರ್ಷದಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.

1886: ಉಕ್ರೇನ್-ಫ್ರೆಂಚ್ ಭೌತವಿಜ್ಞಾನಿ ಜಾರ್ಜಸ್ ಚರ್ಪಾರ್ಕ್ ಅವರು ಪೋಲೆಂಡಿನ ಡಬ್ರೋವಿಕಾ ಎಂಬಲ್ಲಿ ಜನಿಸಿದರು. ಮಲ್ಟಿವೈರ್ ಪ್ರೋಪೋರ್ಷನಲ್ ಚೇಂಬರ್ ಸಾಧನೆಗಾಗಿ ಪ್ರಸಿದ್ಧರಾದ ಇವರಿಗೆ 1992 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1928: ದೇಶದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಸೇವೆ, ನ್ಯಾಯಾಂಗದಲ್ಲಿ ನಿಷ್ಠಾವಂತ ಸೇವೆ, ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮತ್ತು ಬರವಣಿಗೆ, ಹೀಗೆ ಬಹುಮುಖಿ ಸಾಧಕರಾದ ಅನ್ನದಾನಯ್ಯ ಪುರಾಣಿಕರು ಕೊಪ್ಪಳ ಜಿಲ್ಲೆಯ ದ್ಯಾಂಪುರದಲ್ಲಿ ಜನಿಸಿದರು. ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ವಚನ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳೂ ಸೇರಿದಂತೆ ಅನೇಕ ಪ್ರಶಸ್ತಿ, ಗೌರವ, ಸನ್ಮಾನಗಳು ಅವರಿಗೆ ಸಂದಿದ್ದವು.

1933: ಆಕಾಶವಾಣಿಯಲ್ಲಿ ಅಧಿಕಾರಿಯಾಗಿ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ವಿವಿಧಮುಖೀ ಸಾಧಕರಾದ ಯಮುನಾ ಮೂರ್ತಿ ಅವರು ಬೆಂಗಳೂರಿನಲ್ಲಿ ಜನಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಗೌರವವೂ ಸೇರಿದಂತೆ ಹಲವಾರು ಗೌರವಗಳು ಯಮುನಾ ಮೂರ್ತಿಯವರನ್ನು ಅರಸಿ ಬಂದಿವೆ.

1935: ಕಥೆ, ಕವನ, ಪತ್ರಿಕೆ, ಅಧ್ಯಾಪನ, ಸಂಪಾದನೆ, ವಿಮರ್ಶೆ, ನಾಟಕ, ಸಿನಿಮಾ, ಚಳುವಳಿ ಮುಂತಾದ ವಿಭಿನ್ನ ನೆಲೆಗಳ ಬಹುಮುಖಿ ಪ್ರತಿಭಾವಂತರಾದ ಪಿ. ಲಂಕೇಶ್ ಅವರು ಶಿವಮೊಗ್ಗ ಜಿಲ್ಲೆಯ ಕೊಂಗವಳ್ಳಿ ಎಂಬಲ್ಲಿ ಜನಿಸಿದರು. ಸಾಹಿತ್ಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಸಿನಿಮಾದಲ್ಲಿ ಶ್ರೇಷ್ಠ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1923: ಡಚ್ ಭೌತವಿಜ್ಞಾನಿ ಜೋಹಾನ್ನೆಸ್ ಡಿದೆರಿಕ್ ಡೆರ್ ವಾಲ್ಸ್ ಅವರು ನೆದರ್ಲ್ಯಾಂಡ್ಸಿನ ಆಮ್ಸ್ಟರ್ಡ್ಯಾಮ್ ನಗರದಲ್ಲಿ ನಿಧನರಾದರು. ಈಕ್ವೇಶನ್ ಆಫ್ ಸ್ಟೇಟ್ ಕುರಿತಾದ ಕುರಿತಾದ ಸಾಧನೆಗೆ ಪ್ರಸಿದ್ಧರಾದ ಇವರಿಗೆ 1910 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1988: ಪಂಜಾಬಿ ಗಾಯಕ, ಸ್ವರಸಂಯೋಜಕ, ಗೀತರಚನಕಾರ ಅಮರ್ ಸಿಂಗ್ ಚಂಕಿಲಾ ಪಂಜಾಬಿನ ಮೆಹಸಂಪುರ್ ಎಂಬಲ್ಲಿ ಹತ್ಯೆಗೀಡಾದರು

1999: ನ್ಯೂಯಾರ್ಕ್ ಯಾಂಕೀಸ್ ಬೇಸ್ ಬಾಲ್ ತಾರೆ ಜೋ ಡಿಮ್ಯಾಗ್ಗಿಯೊ ಅವರು ಫ್ಲಾರಿಡಾದ ಹಾಲಿವುಡ್ಡಿನಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.

2012: ಜಪಾನಿನ ಉದ್ಯಮಿ, ಮೋರಿ ಆರ್ಟ್ ಮ್ಯೂಸಿಯಂ ಸ್ಥಾಪಕ ಮಿನೋರು ಮೋರಿ ಅವರು ಟೋಕಿಯೋದಲ್ಲಿ ನಿಧನರಾದರು.