Categories
e-ದಿನ

ಮಾರ್ಚ್-09

ಪ್ರಮುಖಘಟನಾವಳಿಗಳು:

1815: ಇಂಗ್ಲೆಂಡಿನ ಫ್ರಾನ್ಸಿಸ್ ರೋನಾಲ್ಡ್ಸ್ ಅವರು ‘ಫಿಲಸಾಫಿಕಲ್ ಮ್ಯಾಗಜಿನ್’ನಲ್ಲಿ ಮೊದಲ ಬ್ಯಾಟರಿ ಚಾಲಿತ ಗಡಿಯಾರದ ಕುರಿತು ವಿವರಿಸಿದರು.

1959: ‘ಬಾರ್ಬಿ’ ಬೊಂಬೆಯು ಮೊದಲಬಾರಿಗೆ ‘ಅಮೆರಿಕನ್ ಇಂಟರ್ ನ್ಯಾಷನಲ್ ಟಾಯ್ ಫೇರ್’ನಲ್ಲಿ ಪ್ರದರ್ಶನಗೊಂಡಿತು.

1960: ಡಾ. ಬೆಲ್ಡಿಂಗ್ ಹಿಬ್ಬರ್ಡ್ ಸ್ಕ್ರಿಬ್ನರ್ ಅವರು ರೋಗಿಯೊಬ್ಬನಿಗೆ ಹೆಮೋಡಯಾಲಿಸಿಸ್ ನೀಡಲಿಕ್ಕಾಗಿ ಮೊದಲ ಬಾರಿಗೆ ತಾವು ಸಂಶೋಧಿಸಿದ ಶಂಟ್ ಅಳವಡಿಸಿದರು.

1961: ‘ಇವಾನ್ ಇವಾನೋವಿಚ್’ ಎಂಬ ಹೆಸರುಳ್ಳ ಮನುಷ್ಯನ ಪ್ರತಿಕೃತಿಯೊಂದನ್ನು ಹೊತ್ತ ಸ್ಪುಟ್ನಿಕ್ 9 ಉಪಗ್ರಹವು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಜಿಗಿಯಿತು.

1979: ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಗೋಪಾಲಕೃಷ್ಣ ಅಡಿಗರ ಸಮ್ಮೆಳನಾಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ಆರಂಭಗೊಂಡಿತು.

2006: ಮ್ಯಾನ್ಮಾರ್ ದೇಶಕ್ಕೆ ಭೇಟಿ ನೀಡಿದ ಭಾರತದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಯಾಂಗನ್ನಿನಲ್ಲಿ ಇರುವ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಹಕಾರ ನೀಡಿದ ಕೊನೆಯ ಮೊಘಲ್ ದೊರೆ ಬಹ್ದದೂರ್ ಷಾ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಿದ ಬ್ರಿಟಿಷ್ ಆಡಳಿತ ಬಹದ್ದೂರ್ ಷಾ ಅವರನ್ನು ಯಾಂಗನ್ಗೆ ಗಡೀಪಾರು ಮಾಡಿತ್ತು. ಈ ಹಿಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಈ ಸಮಾಧಿಗೆ ಬೇಟಿ ನೀಡಿದ್ದರು.

2006: ಭಾರತದ ಪರ ಮೊಹಾಲಿಯಲ್ಲಿ 131ನೇ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಸಚಿನ್ ತೆಂಡೂಲ್ಕರ್ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಈ ಹಿಂದೆ ಭಾರತದ ಪರ ಕಪಿಲ್ ದೇವ್ ಅತ್ಯಂತ ಹೆಚ್ಚು ಟೆಸ್ಟುಗಳಲ್ಲಿ ಅಂದರೆ 131 ಪಂದ್ಯಗಳಲ್ಲಿ ಆಡಿದ ದಾಖಲೆ ಹೊಂದಿದ್ದರು.

2007: ಖ್ಯಾತ ಕಾಶ್ಮೀರಿ ಕವಿ, ವಿಮರ್ಶಕ ರೆಹಮಾನ್ ರಾಹಿ ಅವರನ್ನು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ರಾಹಿ ಅವರು ಈ ಪ್ರಶಸ್ತಿಯನ್ನು ಪಡೆದ ಮೊತ್ತ ಮೊದಲ ಕಾಶ್ಮೀರಿ ಬರಹಗಾರರಾಗಿದ್ದು, ಈ ಹಿಂದೆ ಅವರು 1961ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. 1925ರಲ್ಲಿ ಜನಿಸಿದ ರಾಹಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಸಾಹಿತ್ಯ ಅಕಾಡೆಮಿ ಫೆಲೋ ಕೂಡಾ ಆಗಿದ್ದಾರೆ.

2007: ಭಾರತೀಯ ಮೂಲದ ಲೇಖಕಿ ಕಿರಣ್ ದೇಸಾಯಿ ಅವರ ‘ದಿ ಇನ್ ಹೆರಿಟೆನ್ಸ್ ಆಫ್ ಲಾಸ್’ ಪುಸ್ತಕವು ‘ದಿ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಫಿಕ್ಷನ್ ಪ್ರಶಸ್ತಿ’ಗೆ ಆಯ್ಕೆಯಾಯಿತು. ಈ ಮೊದಲು ಈ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿತ್ತು.

2007: ಭಾರತೀಯ ಮೂಲದ ಸಂಗೀತಗಾರ ಜುಬಿನ್ ಮೆಹ್ತಾ ಅವರಿಗೆ 2007ನೇ ಸಾಲಿನ ಡಾನ್ ಡೇವಿಡ್ ಪ್ರಶಸ್ತಿ ಲಭಿಸಿತು.

2011: ಮೂವತ್ತೊಂಬತ್ತು ಬಾರಿ ಗಗನಕ್ಕೆ ಚಿಮ್ಮಿದ್ದ ಸ್ಪೇಸ್ ಷಟಲ್ ಡಿಸ್ಕವರಿ ತನ್ನ ಕೊನೆಯ ಬಾಹ್ಯಾಕಾಶ ಪಯಣವನ್ನು ಮಾಡಿತು.

ಪ್ರಮುಖಜನನ/ಮರಣ:

1454: ಇಟಲಿಯ ಪ್ರಸಿದ್ಧ ಭೂಪಟ ತಯಾರಕ ಮತ್ತು ಅನ್ವೇಷಕ ಅಮೇರಿಗೊ ವೆಸ್ಪುಸ್ಸಿ ಫ್ಲಾರೆನ್ಸ್ ನಗರದಲ್ಲಿ ಜನಿಸಿದರು.

1824: ಪಸಿದ್ಧ ಉದ್ಯಮಿ ಮತ್ತು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯ ಸ್ಥಾಪಕ ಅಮಾಸಾ ಲೇಲ್ಯಾಂಡ್ ಸ್ಟಾನ್ಫೋರ್ಡ್ ಅವರು ನ್ಯೂಯಾರ್ಕಿನ ವಾಟರ್ವಿಲೆಟ್ ಎಂಬಲ್ಲಿ ಜನಿಸಿದರು.

1862: ಫ್ರೆಂಚ್ ಸಂಶೋಧಕ ಮತ್ತು ವೈದ್ಯ ಫರ್ನಾಂಡ್ ಇಸಿಡೋರ್ ವೈಡಲ್ ಅವರು ಡೆಲ್ಲಿಸ್ ಎಂಬಲ್ಲಿ ಜನಿಸಿದರು. ವೈದ್ಯ ಹಾಗೂ ಬ್ಯಾಕ್ಟೀರಿಯಾ ತಜ್ಞರಾದ ಇವರು ಟೈಫಾಯಿಡ್ ಜ್ವರಕ್ಕೆ ಚಿಕಿತ್ಸೆ ನೀಡುವ ತಮ್ಮದೇ ಅದ ವಿಧಾನ ರೂಪಿಸಿದರು. ಈ ವಿಧಾನ ‘ವೈಡಾಲ್ ರಿಯಾಕ್ಷನ್’ ಎಂದು ಖ್ಯಾತಿ ಪಡೆದಿದೆ.

1907: ಮಿರ್ಸಿಯಾ ಎಲಿಯಾಡ್ ಅವರು ರೊಮೇನಿಯಾದ ಬುಚಾರೆಸ್ಟ್ ಎಂಬಲ್ಲಿ ಜನಿಸಿದರು. ಧಾರ್ಮಿಕ ಇತಿಹಾಸಕಾರರಾದ ಇವರು ಕೋಲ್ಕತ್ತಾದಲ್ಲಿ ಸುರೇಂದ್ರನಾಥ ದಾಸ್ ಗುಪ್ತ ಅವರ ಕೈಕೆಳಗೆ ಧಾರ್ಮಿಕ ಇತಿಹಾಸದ ಅಧ್ಯಯನ ನಡೆಸಿದ್ದರು. ಇವರು ಆರು ಸಂಪುಟಗಳ ‘ಎನ್ಸೈಕ್ಲೋಪಿಡಿಯಾ ಆಫ್ ರಿಲಿಜನ್ಸ್’ ಮುಖ್ಯ ಸಂಪಾದಕರಾಗಿದ್ದರು.

1923: ಆಸ್ಟ್ರಿಯನ್-ಅಮೆರಿಕನ್ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಜ್ಞಾನಿ ವಾಲ್ಟರ್ ಕೊಹ್ನ್ ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ಜನಿಸಿದರು. ‘ಡೆನ್ಸಿಟಿ ಫಂಕ್ಷನಲ್ ಥಿಯರಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1998 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1934: ವಿಶ್ವದ ಪ್ರಥಮ ಗಗನಯಾತ್ರಿ ಯೂರಿ ಅಲೆಕ್ಸೆಯಿವಿಚ್ ಗಗಾರಿನ್ ಅವರು ಸೋವಿಯತ್ ಯೂನಿಯನ್ನಿನ ಕ್ಲುಷಿನೋ ಎಂಬಲ್ಲಿ ಜನಿಸಿದರು. ಸೋವಿಯತ್ ವಿಮಾನ ಚಾಲಕ ಮತ್ತು ಗಗನಯಾತ್ರಿಯಾದ ಇವರು 1961ರಲ್ಲಿ ಭೂಮಿಯ ಕಕ್ಷೆಯನ್ನು ಸುತ್ತುಹಾಕಿದ ವೊಸ್ಟೋಕ್ ಬಾಹ್ಯಾಕಾಶ ವಾಹನದಲ್ಲಿ ಪಯಣಿಸಿದ್ದರು.

1951: ತಬಲಾ ವಾದನವನ್ನು, ಸಂಗೀತ ಕಚೇರಿಗಳಲ್ಲಿನ ಪಕ್ಕವಾದ್ಯವಷ್ಟೇ ಅಲ್ಲದೆ ಪ್ರಧಾನ ತಾಳ ಕಚೇರಿಯಾಗಿಯೂ ಅತ್ಯಂತ ಜನಪ್ರಿಯ ಮಾಡಿದ ಕೀರ್ತಿ ಜಾಕಿರ್ ಹುಸೇನರದ್ದು. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೂ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಜಾಕಿರ್ ಹುಸೇನರನ್ನು ಅರಸಿ ಬಂದಿವೆ.

1956: ಭಾರತದ ರಾಜಕಾರಣಿಯಾಗಿ ಮತ್ತು ವಿಶ್ವಸಂಸ್ಥೆಯ ಅಧಿಕಾರಿಯಾಗಿ ಪ್ರಸಿದ್ಧರಾದ ಶಶಿ ತರೂರ್ ಲಂಡನ್ನಿನಲ್ಲಿ ಜನಿಸಿದರು. ವಿಶ್ವಸಂಸ್ಥೆಯಲ್ಲಿ ಅಂಡರ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸಿದ್ದ ಇವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಸೋಲನುಭವಿಸಿದರು. ಇವರು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

1959: ಜಪಾನ್ ಭೌತಶಾಸ್ತ್ರ ವಿಜ್ಞಾನಿ ತಕಾಕಿ ಕಜಿತ ಅವರು ಹಿಗಾಶಿಮತ್ಸುಯಾಮಾ ಎಂಬಲ್ಲಿ ಜನಿಸಿದರು. ನ್ಯೂಟ್ರಿನೊ ಸಂಶೋಧನೆಗೆ ಇವರಿಗೆ 2015 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1926: ರೇಖಿ ಧ್ಯಾನ ಪದ್ಧತಿ ಸ್ಥಾಪಕ ಮಿಕಾವೋ ಉಸುಯಿ ಅವರು ಜಪಾನಿನ ಫುಕುಯಾಮಾ ಎಂಬಲ್ಲಿ ನಿಧನರಾದರು.

1947: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಮತ್ತು ಗುಜರಾತಿ ಕವಿ ಜಾವೇರ್ಚಂದ್ ಮೆಘಾನಿ ಅವರು ಗುಜರಾತಿನ ಬೊಟಾಡ್ ಎಂಬಲ್ಲಿ ಜನಿಸಿದರು. ಇವರನ್ನು ಮಹಾತ್ಮಾ ಗಾಂಧೀಜಿ ಅವರು ಇವರನ್ನು ‘ರಾಷ್ಟ್ರ ಕವಿ’ ಎಂದು ಪ್ರಶಂಸಿಸಿದ್ದರು. ಮೆಘಾನಿ ಅವರಿಗೆ ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ ರಂಜಿತ್ರಾಮ್ ಸುವರ್ಣ ಚಂದ್ರಕ್ ಪ್ರಶಸ್ತಿ ಸಂದಿತ್ತು.

1974: ಅಮೇರಿಕನ್ ವೈದ್ಯ ವಿಜ್ಞಾನಿ ಮತ್ತು ಜೈವಿಕ ವಿಜ್ಞಾನಿಗಳಾದ ಅರ್ಲ್ ವಿಲಬರ್ ಸುದರ್ಲ್ಯಾಂಡ್ ಅವರು ಮಿಯಾಮಿಯಲ್ಲಿ ನಿಧನರಾದರು. ಮೆಕಾನಿಸಮ್ಸ್ ಆಫ್ ದಿ ಆಕ್ಷನ್ಸ್ ಆಫ್ ದಿ ಹಾರ್ಮೋನ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1971 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1983: ಸ್ವೀಡಿಷ್ ವೈದ್ಯ ವಿಜ್ಞಾನಿ ಉಲ್ಫ್ ವಾನ್ ಯೂಲರ್ ನಿಧನರಾದರು. ‘ನ್ಯೂರೋ ಟ್ರಾನ್ಸ್ಮಿಟರ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1970 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1992: ಇಸ್ರೇಲ್ ರಾಜಕಾರಣಿ ನೊಬೆಲ್ ಶಾಂತಿ ಪುರಸ್ಕೃತ ಮೆನಾಚೆಮ್ ಬೆಗಿನ್ ಅವರು ಟೆಲ್ ಅವಿವ್ ನಗರದಲ್ಲಿ ನಿಧನರಾದರು. 1979ರಲ್ಲಿ ಈಜಿಪ್ಟ್ ಜೊತೆಗೆ ಶಾಂತಿ ಒಪ್ಪಂದ ಏರ್ಪಡಿಸಿದ ಸಾಧನೆಗಾಗಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

2012: 1960ರ ದಶಕದ ಪ್ರಸಿದ್ಧ ಸುರದ್ರೂಪಿ ನಟರಲ್ಲಿ ಒಬ್ಬರಾಗಿದ್ದ ಜಾಯ್ ಮುಖರ್ಜಿ ಅವರು ಮುಂಬೈನಲ್ಲಿ ನಿಧನರಾದರು. ಅವರು ಚಲನಚಿತ್ರ ನಿರ್ದೇಶನ ಮತ್ತು ನಿರ್ಮಾಣದಲ್ಲೂ ಕಾರ್ಯನಿರ್ವಹಿಸಿದ್ದರು.