Categories
e-ದಿನ

ಮಾರ್ಚ್-12

ಪ್ರಮುಖಘಟನಾವಳಿಗಳು:

1881: ಆಂಡ್ರ್ಯೂ ವಾಟ್ಸನ್ ಅವರು ಸ್ಕಾಟ್ಲೆಂಡ್ ಪರವಾಗಿ ಮೊದಲ ಬಾರಿಗೆ ಆಡುವುದರ ಮೂಲಕ ಅಂತರರಾಷ್ಟ್ರೀಯ ಮಟ್ಟದ ಅಸೋಸಿಯೇಶನ್ ಫುಟ್ಬಾಲ್ ಕ್ರೀಡಾಂಕಣದಲ್ಲಿ ಪಾಲ್ಗೊಂಡ ಪ್ರಪ್ರಥಮ ಕರಿಯ ವ್ಯಕ್ತಿ ಎನಿಸಿದರು.

1894: ಕೋಕಾ-ಕೋಲಾ ಪಾನೀಯವನ್ನು ಮಿಸಿಸಿಪಿಯ ವಿಕ್ಸ್ಬರ್ಗಿನ ಸ್ಥಳೀಯ ಸೋಡಾ ಫೌಂಟೆನ್ ನಡೆಸುತ್ತಿದ್ದ ಬೀಡೆನ್ ಹಾರ್ನ್ ಎಂಬುವರು ಪ್ರಥಮಬಾರಿಗೆ ಬಾಟಲಿನಲ್ಲಿ ತುಂಬಿ ಮಾರಾಟ ಮಾಡಿದರು.

1918: ಮಾಸ್ಕೋ ಮತ್ತೊಮ್ಮೆ ರಷ್ಯಾದ ರಾಜಧಾನಿಯಾಯಿತು. 215 ವರ್ಷಗಳ ಕಾಲ ಈ ಸ್ಥಾನವನ್ನು ಅದು ಸೈಂಟ್ ಪೀಟರ್ಸ್ಬರ್ಗಿಗೆ ಕೊಟ್ಟಿತ್ತು.

1930: ಮಹಾತ್ಮಾ ಗಾಂಧೀಜಿಯವರು ಉಪ್ಪು ಉತ್ಪಾದನೆಯಲ್ಲಿ ಏಕಸ್ವಾಮ್ಯ ಸ್ಥಾಪಿಸುವ ಬ್ರಿಟಿಷ್ ಕಾನೂನನ್ನು ಉಲ್ಲಂಘಿಸುವ ಉಪ್ಪಿನ ಸತ್ಯಾಗ್ರಹಕ್ಕಾಗಿ 24 ದಿನಗಳ 390 ಕಿಲೋಮೀಟರ್ ದೂರದ ‘ದಂಡಿ ಯಾತ್ರೆ’ಯನ್ನು ಪ್ರಾರಂಭಿಸಿದರು.

1954: ಭಾರತದ ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಡಾ. ಎಸ್. ರಾಧಾಕೃಷ್ಣನ್ ಅವರು ನವದೆಹಲಿಯಲ್ಲಿ ಉದ್ಘಾಟಿಸಿದರು.

1993: ಮುಂಬೈನಲ್ಲಿ ಇಪ್ಪತ್ತೊಂಬತ್ತು ಮಹಡಿಗಳ ಷೇರು ವಿನಿಮಯ ಕಟ್ಟಡ ಮತ್ತು ಏರ್ ಇಂಡಿಯಾ ಕಟ್ಟಡ ಸೇರಿದಂತೆ ಮುಂಬೈಯಲ್ಲಿ ಹಲವೆಡೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದವು. ಈ ಸ್ಫೋಟಗಳಲ್ಲಿ 317 ಜನ ಮೃತರಾಗಿ 1100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ಒಂದು ದಿನದ ಸೀಮಿತ 50 ಓವರುಗಳ ಪಂದ್ಯದಲ್ಲಿ ‘ಯಾವುದೇ ತಂಡವೇ ಆದರೂ 400 ರನ್ನುಗಳನ್ನು ಗಳಿಸುವುದು ಸಾಧ್ಯವೇ?’ ಎಂಬ ಊಹೆಯ ಪ್ರಶ್ನೆಗೆ, ‘ಸಾಧ್ಯ’ ಎಂಬ ಉತ್ತರ ಈ ದಿನ ಲಭ್ಯವಾಯಿತು. 50 ಓವರುಗಳಲ್ಲಿ ಆಸ್ಟ್ರೇಲಿಯಾ ಮೂಡಿಸಿದ ವಿಶ್ವದಾಖಲೆಯ 434 ರನ್ನುಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ, ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್ ನಷ್ಟಕ್ಕೆ 438 ರನ್ ಗಳಿಸಿ, ಐದು ಪಂದ್ಯಗಳ ಸರಣಿಯನ್ನು 3-2ರ ಅಂತರದಲ್ಲಿ ಗೆದ್ದುಕೊಂಡಿತು. ವಿಶ್ವಕಪ್ ಕ್ರಿಕೆಟಿನಲ್ಲಿ ಶ್ರೀಲಂಕಾ 5 ವಿಕೆಟ್ ಕಳೆದುಕೊಂಡು 398 ರನ್ ಗಳಿಸಿದ್ದು ಇದುವರೆಗಿನ ಏಕದಿನ ಪಂದ್ಯಗಳಲ್ಲಿನ ಅತ್ಯಧಿಕ ಮೊತ್ತವಾಗಿತ್ತು.

2007: ಇಸ್ರೋ ನಿರ್ಮಿತ ಭಾರೀ ತೂಕದ ಇನ್ಸಾಟ್ 4 ಬಿ ಉಪಗ್ರಹವನ್ನು, ಫ್ರೆಂಚ್ ಗಯಾನಾದ ಕೌರು ಎಂಬಲ್ಲಿಂದ ಏರಿಯನ್ 5 ರಾಕೆಟ್ ಮೂಲಕ ಈದಿನ ಮುಂಜಾನೆ ಗಗನಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇನ್ಸಾಟ್ ಸರಣಿಯ ಎರಡನೇ ಉಪಗ್ರಹವಾದ ‘ಇನ್ಸಾಟ್ 4 ಬಿ’ ಉಪಗ್ರಹವು ಅಧಿಕ ಶಕ್ತಿಯ 12 ಕೆಯು ಬ್ರ್ಯಾಂಡ್ ಹಾಗೂ 12 ಸಿ. ಬ್ರ್ಯಾಂಡ್ ಟ್ರಾನ್ಸ್ ಪಾಂಡರುಗಳನ್ನು ಹೊಂದಿದ್ದು, ಈ ಉಪಗ್ರಹದಿಂದ ಮನೆ ಮನೆಗೆ ನೇರ (ಡಿಟಿಎಚ್) ಪ್ರಸಾರ, ಟಿ.ವಿ ಸೇವೆ ಹಾಗೂ ಸಂಪರ್ಕ ವ್ಯವಸ್ಥೆಗಳಿಗೆ ಸಹಾಯವಾಗಲಿವೆ.

2009: ಷೇರುಮಾರುಕಟ್ಟೆ ಇತಿಹಾಸದಲ್ಲೇ ಅತ್ಯಂತ ಬೃಹತ್ ಹಗರಣವಾದ ಹದಿನೆಂಟು ಬಿಲಿಯನ್ ಡಾಲರ್ ಬೃಹತ್ ವಂಚನೆಯ ಹಗರಣದಲ್ಲಿ ಪಾತ್ರವಹಿಸಿದ್ದಾಗಿ ಷೇರು ದಲ್ಲಾಳಿ ಬೆರ್ನಾರ್ಡ್ ಮೆಡಾಫ್ ತಪ್ಪೊಪ್ಪಿಗೆ ಸಲ್ಲಿಸಿದ.

2011: ಹಿಂದಿನ ದಿನ ನಡೆದ ಭೂಕಂಪನದ ದೆಸೆಯಿಂದ ಜಪಾನಿನ ಫುಕುಶಿಮ ದೈಚಿ ಪರಮಾಣು ಘಟಕದಲ್ಲಿನ ರಿಯಾಕ್ಟರ್ ಒಂದು ಸ್ಪೋಟಗೊಂಡು ಬೃಹತ್ ಪ್ರಮಾಣದ ರೇಡಿಯೋ ಆಕ್ಟಿವಿಟಿಯು ವಾತಾವರಣಕ್ಕೆ ಸೋರಿಕೆಯಾಗಿ ಭೂಕಂಪ ಸುನಾಮಿಗಳ ಭೀತಿಯನ್ನು ಹಲವು ಪಟ್ಟು ಹೆಚ್ಚಿಸಿತು.

ಪ್ರಮುಖಜನನ/ಮರಣ:

1831: ಕುದುರೆಗಳು ಎಳೆಯುವ ಬಂಡಿಗಳನ್ನು ಬ್ರಹತ್ ಉದ್ಯಮವಾಗಿ ಸ್ಥಾಪಿಸಿದ ಕ್ಲೆಮೆಂಟ್ ಸ್ಟುಡೆಬೇಕರ್ ಅವರು ಪೆನ್ಸಿಲ್ವೇನಿಯಾದ ಪೈನ್ ಟೌನ್ ಎಂಬಲ್ಲಿ ಜನಿಸಿದರು. ಇವರು ತಮ್ಮ ಸಹೋದರ ಹೆನ್ರಿ ಜೊತೆಗೂಡಿ ಹೆಚ್ ಅಂಡ್ ಸಿ ಸ್ಟುಡೆಬೇಕರ್ ಕಂಪೆನಿಯನ್ನು ಸ್ಥಾಪಿಸಿದರು. ಮುಂದೆ ಈ ಸಂಸ್ಥೆ ಮೋಟಾರು ವಾಹನ ನಿರ್ಮಾಣದಲ್ಲೂ ಬೆಳೆಯಿತು.

1832: ಇಂಗ್ಲೆಂಡಿನಲ್ಲಿ ಲ್ಯಾಂಡ್ ಏಜೆಂಟ್ ಆಗಿದ್ದ ಚಾರ್ಲ್ಸ್ ಬಾಯ್ಕಾಟ್ ತನ್ನ ‘ಬಹಿಷ್ಕಾರ’ ಗುಣದ ನಡತೆಯಿಂದಾಗಿ, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಆ ಗುಣಕ್ಕೆ ‘ಬಾಯ್ಕಾಟ್’ ಎಂದೇ ಹೆಸರಾದ. ಬ್ರಿಟಿಷ್ ಸೇನೆಯಲ್ಲಿಯೂ ಸೇವೆ ಸಲ್ಲಿಸಿದ ಈತ ನಾರ್ಫೋಕ್ ಬಳಿಯ ಬರ್ಗ್ ಸೈಂಟ್ ಪೀಟರ್ ಎಂಬಲ್ಲಿ ಜನಿಸಿದ.

1913: ಭಾರತದ ರಾಜಕಾರಣಿ, ಸಹಕಾರ ಸಂಘಟನಕಾರ ಯಾಶವಂತರಾವ್ ಚೌವಾನ್ ಅವರು ಬ್ರಿಟಿಷ್ ಮುಂಬೈ ಅಧಿಪತ್ಯದ ದೇವರಾಷ್ಟ್ರೆ ಎಂಬಲ್ಲಿ ಜನಿಸಿದರು. ಮಹಾರಾಷ್ಟ್ರವು ಮುಂಬೈ ಪ್ರೆಸಿಡೆನ್ಸಿಯಿಂದ ಹೊಸ ರಾಜ್ಯವಾದಾಗ ಅದರ ಪ್ರಥಮ ಮುಖ್ಯಮಂತ್ರಿಗಳಾಗಿ, ರಾಷ್ಟ್ರದ ಉಪ ಪ್ರಧಾನಿಗಳಾಗಿ, ಹಣಕಾಸು ಖಾತೆ, ವಿದೇಶಾಂಗ ಖಾತೆ ಮುಂತಾದ ಅನೇಕ ಸಚಿವ ಸ್ಥಾನಗಳನ್ನು ಅಲಂಕರಿಸಿದವರಾಗಿ, ಕೃಷಿಕರ ಸಹಕಾರ ಸಂಘಕ್ಕೆ ವಿಶಾಲ ವ್ಯಾಪ್ತಿ ನೀಡಿದವರಾಗಿ ಇವರು ಪ್ರಸಿದ್ಧರಾಗಿದ್ದಾರೆ.

1917: ಆಸ್ಟ್ರೇಲಿಯಾದ ಪ್ರಸಿದ್ಧ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ತಾರೆ ಗೂಗಿ ವಿದರ್ಸ್ ಅವರು ಬ್ರಿಟಿಷ್ ಭಾರತದ ಕರಾಚಿಯಲ್ಲಿ ಜನಿಸಿದರು.

1925: ಜಪಾನಿನ ಪ್ರಸಿದ್ಧ ಭೌತವಿಜ್ಞಾನಿ ಲಿಯೋ ಎಸಾಕಿ ಅವರು ಒಸಾಕಾದಲ್ಲಿ ಜನಿಸಿದರು. ಎಲೆಕ್ಟ್ರಾನಿಕ್ ಟನೆಲಿಂಗ್ ಕುರಿತಾದ ಸಂಶೋಧನೆಗೆ ಅವರಿಗೆ 1973ರ ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು.

1936: ಕನ್ನಡದ ಪ್ರಖ್ಯಾತ ಬರಹಗಾರ್ತಿ ಆರ್ಯಾಂಬ ಪಟ್ಟಾಭಿ ಅವರು ಮಂಡ್ಯದಲ್ಲಿ ಜನಿಸಿದರು. ಅನೇಕ ಕಾದಂಬರಿಗಳನ್ನು, ಮಕ್ಕಳ ಕತೆಗಳನ್ನು ರಚಿಸಿರುವ ಇವರ ‘ಕಪ್ಪು ಬಿಳುಪು’ ಕಾದಂಬರಿ ಪ್ರಸಿದ್ಧ ಚಲನಚಿತ್ರವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಕೃತಿ ಪ್ರಶಸ್ತಿ, ಗೌರವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಇವರನ್ನು ಅರಸಿ ಬಂದಿವೆ.

1954: ಪ್ರಸಿದ್ಧ ಭಾರತೀಯ-ಇಂಗ್ಲಿಷ್ ಶಿಲ್ಪಿ ಅನೀಶ್ ಕಪೂರ್ ಅವರು ಮುಂಬೈನಲ್ಲಿ ಜನಿಸಿದರು. ಇವರಿಗೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿ’ಗಳು ಸಂದಿವೆ.

1984: ಭಾರತದ ಪ್ರಖ್ಯಾತ ಹಿನ್ನೆಲೆಗಾಯಕಿ ಶ್ರೇಯಾ ಘೋಶಾಲ್ ಅವರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಪಟ್ಟಣದಲ್ಲಿ ಜನಿಸಿದರು. ಕನ್ನಡವನ್ನೂ ಒಳಗೊಂಡ ಹಾಗೆ ಭಾರತದ ಬಹುತೇಕ ಭಾಷಾ ಚಲನಚಿತ್ರಗಳಲ್ಲಿ ಪ್ರಮುಖ ಹಿನ್ನೆಲೆ ಗಾಯಕಿಯಗಿರುವ ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ.

1925: ಚೀನಾದ ವೈದ್ಯ, ಬರಹಗಾರ, ತತ್ವಜ್ಞಾನಿ, ಬರಹ ಕಲೆಗಾರ, ಕ್ರಾಂತಿಕಾರ ಹಾಗೂ ರಿಪಬ್ಲಿಕ್ ಆಫ್ ಚೈನಾದ ಪ್ರಥಮ ಅಧ್ಯಕ್ಷ ಮತ್ತು ಸ್ಥಾಪನಾ ಪಿತಾಮಹರೆನಿಸಿರುವ ಸನ್ ಯತ್-ಸೆನ್ ಅವರು ನಿಧನರಾದರು.

1942: ಭೌತವಿಜ್ಞಾನಿ, ರಸಾಯನ ಶಾಸ್ತ್ರಜ್ಞ ಮತ್ತು ಗಣಿತಜ್ಞ ವಿಲಿಯಂ ಹೆನ್ರಿ ಬ್ರಾಗ್ ಅವರು ಲಂಡನ್ನಿನಲ್ಲಿ ಜನಿಸಿದರು. ‘ಎಕ್ಸ್-ರೇ ಮೂಲಕ ಅನಾಲಿಸಿಸ್ ಆಫ್ ಕ್ರಿಸ್ಟಲ್ ಸ್ಟ್ರಕ್ಚರ್ ಕುರಿತಾದ ಇವರ ಕುರಿತಾದ ಸಂಶೋಧನೆಗೆ 1915ರ ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತ್ತು.

1960: ಭಾರತೀಯ ಇತಿಹಾಸಜ್ಞ, ಬರಹಗಾರ, ಶಿಕ್ಷಣ ತಜ್ಞ ಮತ್ತು ವಿಶ್ವಭಾರತಿ ವಿಶ್ವವಿದ್ಯಾಲಯದ ಉಪಾಚಾರ್ಯರಾದ ಕ್ಷಿತಿಮೋಹನ್ ಸೇನ್ ನಿಧನರಾದರು. ಇವರು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕನ್ನು ಚೆಲ್ಲುವ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ.

1942: ಫಿನ್ನಿಷ್-ಸ್ವೀಡಿಷ್ ವೈದ್ಯ ವಿಜ್ಞಾನಿ ರಾಗ್ನಾರ್ ಗ್ರಾನಿಟ್ ಅವರು ಸ್ವೀಡನ್ನಿನ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ‘ಪ್ರೈಮರಿ ಫಿಸಿಯಲಾಜಿಕಲ್ ಅಂಡ್ ಕೆಮಿಕಲ್ ವಿಷುಯಲ್ ಪ್ರೋಸೆಸ್ ಇನ್ ದಿ ಐ’ ಕುರಿತಾದ ಇವರ ಸಂಶೋಧನೆಗೆ 1967ರ ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರ ಪುರಸ್ಕಾರ ಸಂದಿತ್ತು.

2006: ತಮಿಳುನಾಡಿನ ಖ್ಯಾತ ನಟಿ, ಗಾಯಕಿ ಎಂ.ಎಸ್. ಸುಂದರಬಾಯಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಮೂಲತಃ ತಂಜಾವೂರಿನವರಾದ ಇವರು 1940ರಿಂದ 70 ರ ದಶಕದಲ್ಲಿ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು. ತಮಿಳುನಾಡು ಸರ್ಕಾರ ನೀಡುವ ಕಲೈಮಾಮಣಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿದ್ದವು.

2013: ಭಾರತೀಯ ಚಿತ್ರಕಾರರಲ್ಲಿ ಪ್ರಸಿದ್ಧರಾಗಿದ್ದ ಗಣೇಶ್ ಪೈನ್ ಅವರು ಕೋಲ್ಕತ್ತಾದಲ್ಲಿ ನಿಧನರಾದರು. ಇವರಿಗೆ ಕೇರಳ ಸರ್ಕಾರದ ರಾಜಾ ರವಿ ವರ್ಮ ಪ್ರಶಸ್ತಿ ಸಂದಿತ್ತು. ಇವರ ಕುರಿತಾದ ಸಾಕ್ಷಚಿತ್ರವು 1998ರ ವರ್ಷದಲ್ಲಿ ರಾಷ್ತ್ರೀಯ ಪ್ರಶಸ್ತಿ ಗಳಿಸಿತ್ತು.

2016: ಅಮೆರಿಕದ ಪ್ರಸಿದ್ಧ ಗಣಿತಜ್ಞ ಮತ್ತು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಲಾಯ್ಡ್ ಶೇಪ್ಲಿ ಅರಿಜೋನಾದ ಟಕ್ಸನ್ ಎಂಬಲ್ಲಿ ಜನಿಸಿದರು.