Categories
e-ದಿನ

ಮಾರ್ಚ್-13

ಪ್ರಮುಖಘಟನಾವಳಿಗಳು:

624: ಮುಹಮ್ಮದ್ ಅವರ ಜೊತೆಗೂಡಿದ ನೂತನ ಇಸ್ಲಾಂ ಅನುಯಾಯಿಗಳ ಸೈನ್ಯ ಮತ್ತು ಮೆಕ್ಕಾದ ಸ್ಥಳೀಯ ಕುರೇಯಿಷ್ ಅವರುಗಳ ನಡುವಣ ಪಶ್ಚಿಮ ಅರೇಬಿಯಾದ ಹೆಜಾಸ್ ಎಂಬಲ್ಲಿ ನಡೆದ ‘ಬದರ್’ ಕದನದಲ್ಲಿ ಮುಹಮ್ಮದ್ ನೇತೃತ್ವದ ಮುಸ್ಲಿಮರ ಸೈನ್ಯಕ್ಕೆ ಗೆಲುವು ದೊರಕಿತು. ಇದು ಇಸ್ಲಾಂ ಬೆಳವಣಿಗೆಯಲ್ಲಿ ಮಹತ್ವದ ಘಟನೆಯಾಯಿತು.

1639: ಹಾರ್ವರ್ಡ್ ವಿಶ್ವವಿದ್ಯಾಲಯವಾದ ‘ಹಾರ್ವರ್ಡ್ ಕಾಲೇಜಿಗೆ’ ಪಾದ್ರಿ ಜಾನ್ ಹಾರ್ವರ್ಡ್ ಅವರ ಹೆಸರನ್ನಿರಿಸಲಾಯಿತು.

1781: ಸರ್ ವಿಲಿಯಂ ಹರ್ಷೆಲ್ ‘ಯುರೇನಸ್’ ಗ್ರಹವನ್ನು ಅನ್ವೇಷಿಸಿದರು.

1852: ‘ನ್ಯೂಯಾರ್ಕ್ ಲ್ಯಾಂಟರ್ನ್’ ನಲ್ಲಿ ಕಾರ್ಟೂನ್ ಪಾತ್ರವಾಗಿ ‘ಅಂಕಲ್ ಸ್ಯಾಮ್’ ಪರಿಚಿತಗೊಂಡಿತು.

1878: ಪ್ರಾದೇಶಿಕ ಪತ್ರಿಕೆಗಳನ್ನು ನಿಯಂತ್ರಿಸಲು ಭಾಷಾವಾರು ಪತ್ರಿಕಾ ಕಾಯ್ದೆಯನ್ನು ಅಂಗೀಕರಿಸಲಾಯಿತು. ಮರುದಿನವೇ ‘ಅಮೃತ ಬಜಾರ್ ಪತ್ರಿಕಾ’ ಇಂಗ್ಲಿಷ್ ಸುದ್ದಿ ಪತ್ರಿಕೆಯಾಯಿತು.

1930: ಪ್ಲೂಟೋದ ಅನ್ವೇಷಣಾ ಸುದ್ಧಿಯು ಹಾರ್ವರ್ಡ್ ಕಾಲೇಜ್ ವೀಕ್ಷಣಾಲಯಕ್ಕೆ ಟೆಲಿಗ್ರಾಫ್ ಸುದ್ಧಿಯಾಗಿ ಬಂತು.

1933: ಆರ್ಥಿಕ ಅಧಃಪತನದ ಕಾಲವಾದ ‘ಗ್ರೇಟ್ ಡಿಪ್ರೆಷನ್’ ಸಮಯದಲ್ಲಿ ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅವರು ಘೋಷಿಸಿದ್ದ ಬ್ಯಾಂಕ್ ರಜೆಗಳಿಂದ, ಕ್ರಮೇಣವಾಗಿ ಬ್ಯಾಂಕುಗಳು ಪುನರಾರಂಭಗೊಂಡವು.

1969: ಚಂದ್ರನ ಮೇಲೆ ತನ್ನ ಪ್ರಯೋಗಗಳನ್ನು ಯಶಸ್ವಿಯಾಗಿ ಕೈಗೊಂಡ ಅಪೋಲೋ 9 ಕ್ಷೇಮವಾಗಿ ಭುವಿಗೆ ಹಿಂದಿರುಗಿತು.

1981: ಐವತ್ಮೂರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಿರಿಯ ಕವಿ ಪು.ತಿ. ನರಸಿಂಹಾಚಾರ್ಯರ ಸಮ್ಮೇಳನಾಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನಲ್ಲಿ ಆರಂಭಗೊಂಡಿತು.

1986: ಮೈಕ್ರೋಸಾಫ್ಟ್ ಕಂಪೆನಿಯ ಷೇರು ವಹಿವಾಟು (ಸ್ಟಾಕ್ ಟ್ರೇಡಿಂಗ್) ಆರಂಭಗೊಂಡಿತು.

1997: ಭಾರತದ ಮಿಷಿನರೀಸ್ ಆಫ್ ಚಾರಿಟಿ ಸಂಘಟನೆಯು ಮದರ್ ತೆರೇಸಾ ಅವರ ಉತ್ತರಾಧಿಕಾರಿಯಾಗಿ ಸಹೋದರಿ ನಿರ್ಮಲಾ ಅವರನ್ನು ನೇಮಿಸಿತು.

2003: ಮಾನವ ವಿಕಾಸದ ಕುರಿತಾದ ಒಂದು ವಿಶಿಷ್ಟ ವರದಿ: ‘ನೇಚರ್’ ಪತ್ರಿಕೆಯು ಇಟಲಿಯಲ್ಲಿ ಮೂರೂವರೆ ಲಕ್ಷ ವರ್ಷಗಳ ಹಿಂದೆ ನೇರವಾಗಿ ನಡೆದ ಮಾನವನ ಪಾದದ ಗುರುತು ಕಂಡಿದೆ ಎಂದು ವರದಿ ಮಾಡಿತು.

ಪ್ರಮುಖಜನನ/ಮರಣ:

1855: ಅಮೆರಿಕದ ಉದ್ಯಮಿ, ಬರಹಗಾರ, ಗಣಿತಜ್ಞ ಮತ್ತು ಖಗೋಳ ತಜ್ಞ ಪರ್ಸೀವಲ್ ಲಾರೆನ್ಸ್ ಲೋವೆಲ್ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು. ಇವರು ಲೋವೆಲ್ ಅಬ್ಸರ್ವೇಟರಿ ಸೃಷ್ಟಿಸಿ ಪ್ಲೂಟೋ ಕುರಿತು ಅನ್ವೇಷಣೆಗೆ ಅಡಿಪಾಯ ಹಾಕಿದರು. ಇವರ ನಿಧನಾನಂತರದಲ್ಲಿ ಈ ಅನ್ವೇಷಣೆ ಫಲ ನೀಡಿ ಪ್ಲೂಟೋದ ಅನ್ವೇಷಣೆ ಯಶಸ್ವಿಯಾಯಿತು.

1899: ಅಮೆರಿಕದ ಭೌತವಿಜ್ಞಾನಿ ಮತ್ತು ಗಣಿತಜ್ಞ ಜಾನ್ ಹಾಸ್ಬ್ರೌಕ್ ವ್ಯಾನ್ ವ್ಲೆಕ್ ಅವರು ಕನೆಕ್ಟಿಕಟ್ ಪ್ರದೇಶದ ಮಿಡಲ್ ಟೌನ್ ಎಂಬಲ್ಲಿ ಜನಿಸಿದರು. ಎಲೆಕ್ಟ್ರಾನ್ಸ್ ಇನ್ ಮ್ಯಾಗ್ನೆಟಿಕ್ ಸಾಲಿಡ್ಸ್ ಕುರಿತಾದ ಸಂಶೋಧನೆಗೆ ಇವರಿಗೆ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿದೆ.

1900: ನೊಬೆಲ್ ಪುರಸ್ಕೃತ ಗ್ರೀಕ್ ಸಾಹಿತಿ ಜಿಯೋರ್ಗೋಸ್ ಸೆಫೆರಿಸ್ ಒಟ್ಟೋಮನ್ ಸಾಮ್ರಾಜ್ಯದ ಉರ್ಲಾ ಎಂಬಲ್ಲಿ ಜನಿಸಿದರು. ಇವರು 20ನೇ ಶತಮಾನದ ಮಹತ್ವದ ಕವಿಗಳಲ್ಲಿ ಒಬ್ಬರೆಂದು ಪ್ರಖ್ಯಾತರಾಗಿದ್ದಾರೆ.

1800: ಮರಾಠರ ಪೇಶ್ವೆ ಆಡಳಿತಕಾಲದ ಅತ್ಯಂತ ಚತುರ ರಾಜಕಾರಣಿ, ಮಂತ್ರಿ ಎನಿಸಿದ್ದ ನಾನಾ ಫಡ್ನವಿಸ್ ಅವರು ಪುಣೆಯಲ್ಲಿ ನಿಧನರಾದರು. ಇಂಗ್ಲಿಷರು ಇವರನ್ನು ‘ಮರಾಠ ಮಚಿಯವೆಲ್ಲಿ’ ಎಂದು ಶ್ಲಾಘಿಸುತ್ತಿದ್ದರು.

1975: ನೊಬೆಲ್ ಪುರಸ್ಕೃತ ಯುಗೋಸ್ಲಾವಿಯಾದ ಸಾಹಿತಿ ಇವೋ ಆಂಡ್ರಿಕ್ ಅವರು ಬೆಲ್ಗ್ರೇಡ್ ನಗರದಲ್ಲಿ ನಿಧನರಾದರು. ಬೋಸ್ನಿಯನ್ ಮತ್ತು ಒಟ್ಟೋಮನ್ ಕುರಿತಾದ ವಿಚಾರಗಳು ಇವರ ಬರಹಗಳಲ್ಲಿ ತುಂಬಿದ್ದು, ಕತೆ, ಕಾದಂಬರಿ ಮತ್ತು ಕಾವ್ಯಗಳಲ್ಲಿ ಇವರ ಸಾಹಿತ್ಯ ಹರಿದಿತ್ತು. 1961 ವರ್ಷದಲ್ಲಿ ಇವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಂದಿತ್ತು.

2004: ಭಾರತದ ಪ್ರಖ್ಯಾತ ಸಿತಾರ್ ವಾದಕ ಮತ್ತು ಹಿಂದೂಸ್ಥಾನಿ ಸಂಗೀತ ವಿದ್ವಾಂಸ ಉಸ್ತಾದ್ ವಿಲಾಯತ್ ಖಾನ್ ನಿಧನರಾದರು. ಪಾಶ್ಚಿಮಾತ್ಯ ದೇಶದವರಿಗೆ ಭಾರತೀಯ ಸಂಗೀತವನ್ನು ತಲುಪಿಸುವಲ್ಲಿ ಬಹಳಷ್ಟು ಶ್ರಮ ವಹಿಸಿದ್ದ ಇವರು ಸತ್ಯಜಿತ್ ರೇ ಅವರ ಚಿತ್ರವನ್ನೂ ಒಳಗೊಂಡ ಹಾಗೆ ಮೂರು ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದರು. ಇವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ನೀಡಿದಾಗ ಅವರು ಅದನ್ನು ನಿರಾಕರಿಸಿದರು. ಅಂತೆಯೇ ಅವರು ಸಂಗೀತ ನಾಟಕ ಅಕಾಡೆಮಿ ಗೌರವವನ್ನೂ ತೀರಸ್ಕರಿಸಿದ್ದರು.