Categories
e-ದಿನ

ಮಾರ್ಚ್-14

ಪ್ರಮುಖಘಟನಾವಳಿಗಳು:

1663: ಜರ್ಮನ್ ವಿಜ್ಞಾನಿ ಓಟ್ಟೋ ವಾನ್ ಗ್ಯೂರಿಕೆ ಅವರು ‘ವ್ಯಾಕ್ಯೂಮ್ಸ್’ ಕುರಿತಾದ ತಮ್ಮ ಪ್ರಸಿದ್ಧ ಕೃತಿಯನ್ನು ಪೂರ್ಣಗೊಳಿಸಿದರು.

1794: ಎಲಿ ವಿಟ್ನಿ ಅವರು ಹತ್ತಿಯನ್ನು ಬೀಜದಿಂದ ಬೇರ್ಪಡಿಸುವ ‘ಕಾಟನ್ ಜಿನ್’ (ಹತ್ತಿಯ ರಾಟೆ)ಗೆ ಪೇಟೆಂಟ್ ಪಡೆದರು.

1931: ಭಾರತದ ಮೊಟ್ಟ ಮೊದಲ ಮಾತಿನ ಚಿತ್ರ ‘ಅಲಂ ಅರಾ’ ಮುಂಬೈನ ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಅರ್ಡೆಶಿರ್ ಎಂ. ಇರಾನಿ ನಿರ್ದೇಶನದ ಈ ಚಿತ್ರವನ್ನು ಇಂಪೀರಿಯಲ್ ಕಂಪೆನಿ ನಿರ್ಮಿಸಿತು. ಮಾಸ್ಟರ್ ವಿಠಲ್, ಜುಬೇದಾ, ಪೃಥ್ವಿರಾಜ್ ಕಪೂರ್ ಅವರುಗಳು ಪ್ರಮುಖ ಪಾತ್ರದಲ್ಲಿದ್ದರು.

1942: ಅಮೆರಿಕದಲ್ಲಿ ಒರ್ವಾನ್ ಹೆಸ್ ಮತ್ತು ಜಾನ್ ಬಮ್ಸ್ಟೆಡ್ ಅವರು ಪೆನ್ಸಿಲಿನ್ ಉಪಯೋಗಿಸಿ ಯಶಸ್ವಿಯಾಗಿ ಆನ್ ಮಿಲ್ಲರ್ ಎಂಬವರಿಗೆ ಚಿಕಿತ್ಸೆ ನೀಡಿದ ಕೀರ್ತಿಗೆ ಪಾತ್ರರಾದರು

1948: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಿಂಧಿಯಾ ನೆವಿಗೇಷನ್ ಕಂಪೆನಿಯ ಎಸ್. ಎಸ್. ಜಲಉಷಾ ಹಡಗಿಗೆ ಚಾಲನೆ ನೀಡಿದರು. ವಿಶಾಖಪಟ್ಟಣದಲ್ಲಿ ನಿರ್ಮಿಸಲಾದ ಇದು ಭಾರತದಲ್ಲೇ ನಿರ್ಮಿತಗೊಂಡ ಮೊತ್ತ ಮೊದಲ ಹಡಗಾಗಿದೆ.

1962: ಶಿವಲಿಂಗಪ್ಪ ಆರ್. ಕಂಠಿ ಅವರು ಮೈಸೂರು ರಾಜ್ಯದ ಆರನೇ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರು ಕೇವಲ 96 ದಿನಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. ಈ ಹಿಂದೆ ವಿದಾನಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದ ಇವರು ಮುಂದೆ, ನಿಜಲಿಂಗಪ್ಪನವರ ಮಂತ್ರಿ ಮಂಡಲದಲ್ಲಿ ಶಿಕ್ಷಣ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು.

1994: ಮುಕ್ತ ತಂತ್ರಜ್ಞಾನದಲ್ಲಿ ರೂಪುಗೊಂಡ ಕಂಪ್ಯೂಟರ್ ಚಾಲನಾ ವ್ಯವಸ್ಥೆಯಾದ ಲಿನಕ್ಸ್ ಆಪರೇಟಿಂಗ್ ಸಿಸ್ಟಮಿನ ಪ್ರಥಮ ಅವತರಣಿಕೆ – ‘ವರ್ರ್ಷನ್ 1.0.0’ ಬಿಡುಗಡೆಗೊಂಡಿತು

1995: ನಾರ್ಮನ್ ಥಗಾರ್ಡ್ ಅವರು ರಷ್ಯಾದ ರಾಕೆಟ್ಟಿನ ಮೂಲಕ ಬಾಹ್ಯಾಕಾಶಕ್ಕೆ ಹಾರಿದ ಪ್ರಥಮ ಅಮೆರಿಕದ ಗಗನ ಯಾತ್ರಿ ಎನಿಸಿದರು.

2007: ಪಶ್ಚಿಮ ಬಂಗಾಳದ ಎಡಪಕ್ಷ ಸರ್ಕಾರವು ಭೂಮಿ ಉಚ್ಚೇದ್ ಪ್ರತಿರೋದ್ ಸಮಿತಿಯ ಪ್ರತಿಭಟನೆಯನ್ನು ಹತ್ತಿಕ್ಕಲು ನಂದಿಗ್ರಾಮಕ್ಕೆ 3000 ಪೋಲೀಸ್ ಪಡೆಯನ್ನು ಕಳುಹಿಸಿಕೊಟ್ಟಿತು. ಈ ಸಂದರ್ಭದಲ್ಲಿ ಉಂಟಾದ ಗಲಭೆಯಲ್ಲಿ 14 ಸಾವು ಸಂಭವಿಸಿತು.

2008: ಕರ್ನಾಟಕ ಹೈಕೋರ್ಟಿನಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡುವ ಮೂಲಕ ನ್ಯಾಯಮೂರ್ತಿ ಅರಳಿ ನಾಗರಾಜ್ ಚಾರಿತ್ರಿಕ ದಾಖಲೆ ನಿರ್ಮಿಸಿದರು.

2007: ಸಾಹಿತ್ಯ ಸೇವೆಗಾಗಿ ಕರ್ನಾಟಕ ಸರ್ಕಾರವು ನೀಡುವ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಹಿರಿಯ ವಿಮರ್ಶಕ ಜಿ.ಎಸ್. ಆಮೂರ ಮತ್ತು ಲೇಖಕಿಯರಿಗೆ ನೀಡಲಾಗುವ ‘ದಾನ ಚಿಂತಾಮಣಿ ಅತ್ತಿಮಬ್ಬೆ’ ಪ್ರಶಸ್ತಿಗೆ ಹಿರಿಯ ಬರಹಗಾರ್ತಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಆಯ್ಕೆಯಾದರು.

2008: ಒಲ್ಲದ ಮನಸ್ಸಿನಿಂದಲೇ ರಾಜಕಾರಣಕ್ಕೆ ಬಂದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹತ್ತು ವರ್ಷ ಕಾಲ ಯಶಸ್ವಿಯಾಗಿ ನಿಭಾಯಿಸಿ ಸಕ್ರಿಯ ರಾಜಕಾರಣದಲ್ಲಿ ದಶಮಾನೋತ್ಸವ ಆಚರಿಸಿದ ಸೋನಿಯಾ ಗಾಂಧಿ ಅವರಿಗೆ ಕಾಂಗ್ರೆಸ್ ವಿಶೇಷ ಅಧಿವೇಶನದಲ್ಲಿ ಗೌರವ ಸೂಚಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಪ್ರಮುಖಜನನ/ಮರಣ:

1854: ಜರ್ಮನಿಯ ಪ್ರಸಿದ್ಧ ವೈದ್ಯ ವಿಜ್ಞಾನಿ ಮತ್ತು ಜೀವವಿಜ್ಞಾನಿ ಪಾಲ್ ಎಹ್ರ್ಲಿಚ್ ಅವರು ಜರ್ಮನಿಯ ಸ್ಟ್ರೆಹ್ಲೆನ್ ಎಂಬಲ್ಲಿ ಜನಿಸಿದರು. ಇಮ್ಯುನಾಲಜಿ ಕುರಿತಾದ ಕೊಡುಗೆಗಾಗಿ ಇವರಿಗೆ 1908ರ ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಲ್ಲಿಸಲಾಗಿತ್ತು.

1874: ಡಚ್ ಉದ್ಯಮಿ ಫಿಲಿಪ್ಸ್ ಸಂಸ್ಥೆಯ ಸಹಸಂಸ್ಥಾಪಕರದ ಆಂಟನ್ ಫಿಲಿಪ್ಸ್ ಅವರು ನೆದರ್ಲ್ಯಾಂಡ್ಸ್ ದೇಶದಲ್ಲಿ ಜನಿಸಿದರು. ತಮ್ಮ ತಂದೆಯವರೊಡಗೂಡಿ ಪ್ರಸಿದ್ಧ ಫಿಲಿಪ್ಸ್ ಉದ್ಯಮವನ್ನು ಸ್ಥಾಪಿಸಿದ ಇವರು, 1922-39 ಅವಧಿಯಲ್ಲಿ ಆ ಸಂಸ್ಥೆಯ ಪ್ರಧಾನರಾಗಿ (ಸಿ.ಇ.ಓ. ಆಗಿ) ಕಾರ್ಯನಿರ್ವಹಿಸಿದರು.

1879: ವಿಶ್ವ ಕಂಡ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಆಲ್ಬರ್ಟ್ ಐನ್ ಸ್ಟೈನರು ಜರ್ಮನಿಯ ಉರ್ಟೆಂಬರಿನ ಉಲ್ಮ್ ಎಂಬಲ್ಲಿ ಜನಿಸಿದರು. ಬ್ರೌನಿಯನ್ ಚಲನೆ, ದ್ಯುತಿ ವಿದ್ಯುತ್ ಪರಿಣಾಮ, ಹೊಸ ಸಾಪೇಕ್ಷ ಸಿದ್ಧಾಂತ ಮುಂತಾದ ವಿಷಯಗಳಲ್ಲಿ ಮಹತ್ವದ ವಿಜ್ಞಾನದ ವಿಸ್ಮಯಗಳನ್ನು ತೆರೆದಿಟ್ಟ ಇವರಿಗೆ ಬಹಳಷ್ಟು ಯೂರೋಪ್ ಮತ್ತು ಅಮೇರಿಕಾ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಗೌರವಗಳು ಸಂದವು. ಜೊತೆಗೆ ನೊಬೆಲ್ ಪಾರಿತೋಷಕವೇ ಅಲ್ಲದೆ ರಾಯಲ್ ಸೊಸೈಟಿ ಪಾರಿತೋಷಕ, ಫ್ರಾಂಕ್ಲಿನ್ ಪಾರಿತೋಷಕ, ಮುಂತಾದ ಅನೇಕ ಗೌರವಗಳು ಸಹಾ ಅವರನ್ನರಸಿ ಬಂದವು.

1887: ಅಮೆರಿಕನ್-ಫ್ರೆಂಚ್ ಪ್ರಕಾಶಕ ‘ಶೇಕ್ಸ್ಪಿಯರ್ ಅಂಡ್ ಕಂಪೆನಿ’ ಸ್ಥಾಪಕ ಸಿಲ್ವಿಯಾ ಬೀಚ್ ಅವರು ಅಮೆರಿಕದ ಬಾಲ್ಟಿಮೋರ್ ಪಟ್ಟಣದಲ್ಲಿ ಜನಿಸಿದರು.

1920: ‘ಡೆನ್ನಿಸ್ ದಿ ಮೆನೇಸ್’ ಸೃಷ್ಟಿಕರ್ತ ವ್ಯಂಗ್ಯಚಿತ್ರಕಾರ ಹ್ಯಾಂಕ್ ಕೆಚಮ್ ಅವರು ಅಮೆರಿಕದ ಸೀಟಲ್ ನಗರದಲ್ಲಿ ಜನಿಸಿದರು.

1928: ಮೊಟ್ಟ ಮೊದಲ ಗಗನಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪ್ರಾಂಕ್ ಬೋರ್ಮನ್ ಅವರು, ಅಮೆರಿಕದ ಇಂಡಿಯಾನಾ ಪ್ರದೇಶದ ಗ್ಯಾರಿ ಎಂಬಲ್ಲಿ ಜನಿಸಿದರು. ಇವರು ಜೇಮ್ಸ್ ಎ ಲೋವೆಲ್ ಮತ್ತು ವಿಲಿಯಂ ಅವರ ಜೊತೆಗೆ ಅಪೋಲೊ 8ರ ಮೂಲಕ 1968ರಲ್ಲಿ ಚಂದ್ರನಿಗೆ ಸುತ್ತು ಹಾಕಿದರು. ಮಾನವ ಸಹಿತವಾಗಿ ಬಾಹ್ಯಾಕಾಶ ನೌಕೆ ಮೂಲಕ ಚಂದ್ರನಿಗೆ ಪ್ರದಕ್ಷಿಣೆ ಹಾಕಿದ ಮೊದಲ ಗಗನಯಾನವಿದು.

1941: ಉಭಯಗಾನ ವಿದುಷಿ ಎಂದೇ ಹೆಸರು ಪಡೆದಿರುವ ಶ್ಯಾಮಲಾ ಜಿ. ಭಾವೆ ಅವರು ಬೆಂಗಳೂರಿನಲ್ಲಿ ಜನಿಸಿದರು. ವಿಶ್ವದಾದ್ಯಂತ ಅನೇಕ ಸಂಗೀತ ಕಚೇರಿಗಳನ್ನು ನೀಡಿ ಅನೇಕ ಶಿಷ್ಯರನ್ನು ತಯಾರು ಮಾಡುತ್ತಾ ಬಂದಿರುವ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸುರ್ ಸಿಂಗಾರ್ ಪ್ರಶಸ್ತಿ, ಅನೇಕ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಮುಂತಾದ ಗೌರವಗಳು ಸಂದಿವೆ.

1965: ಜನಪ್ರಿಯ ಹಿಂದೀ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಮತ್ತು ಕಿರುತೆರೆಯ ಕಾರ್ಯಕ್ರಮ ನಿರ್ವಾಹಕ ಅಮೀರ್ ಖಾನ್ ಅವರು ಮುಂಬೈನಲ್ಲಿ ಜನಿಸಿದರು. ಹಲವಾರು ಫಿಲಂ ಫೇರ್ ಪ್ರಶಸ್ತಿಗಳಲ್ಲದೆ ಪದ್ಮಶ್ರೀ, ಪದ್ಮಭೂಷಣ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ.

1972: ಕವಯತ್ರಿ ಮತ್ತು ಹೋರಾಟಗಾರ್ತಿ ಐರೋಮ್ ಚನು ಶರ್ಮಿಳ ಮಣಿಪುರದ ಕಾಂಗ್ಪಾಲ್ ಎಂಬಲ್ಲಿ ಜನಿಸಿದರು. ನವೆಂಬರ್ 2, 2000 ದಿನಾಂಕದಿಂದ ಆಗಸ್ಟ್ 9, 2016ರ ವರೆಗೆ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹ ಮಾಡಿದ ಅಪೂರ್ವ ಹೋರಾಟಗಾರ್ತಿ ಈಕೆ. ಮಾಲ್ಕಂ ಮಾರಣ ಹೋಮದ ಸಂದರ್ಭದಲ್ಲಿ ಮನನೊಂದ ಆಕೆ, ಭಾರತೀಯ ಸೇನೆಗೆ ಇರುವ ವಿಶೇಷ ಅಧಿಕಾರವನ್ನು ಕಿತ್ತುಹಾಕಬೇಕು ಎಂಬ ಒತ್ತಡದ ಮೇರೆಗೆ ಈ ಹೋರಾಟ ಉಪವಾಸಗಳನ್ನು ನಡೆಸಿದರು.

1974: ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಮಹತ್ವದ ಸಾಧನೆ ಮಾಡಿದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರೋಹಿತ್ ಶೆಟ್ಟಿ ಅವರು ಮುಂಬೈನಲ್ಲಿ ಜನಿಸಿದರು. ಇವರ ತಂದೆ ಮುದ್ದು ಬಾಬು ಶೆಟ್ಟಿ ಅವರು ಮೂಲತಃ ಕರ್ನಾಟಕದ ಉಡುಪಿಯವರಾಗಿದ್ದು ಹಿಂದೀ ಮತ್ತು ಕನ್ನಡ ಚಲನಚಿತ್ರ’ಗಳಲ್ಲಿ ಸಾಹಸ ಚಿತ್ರಣಗಳ ಸಂಯೋಜಕರಾಗಿ, ಖಳ ನಟರಾಗಿ ಪ್ರಸಿದ್ಧಿ ಪಡೆದಿದ್ದರು.

1883: ಕಮ್ಯುನಿಸಂ ಚಿಂತನೆಯ ಮೂಲಪುರುಷರೆಂದು ಪರಿಗಣಿಸಲ್ಪಡುವ ಕಾರ್ಲ್ ಮಾರ್ಕ್ಸ್ ಅವರು ಲಂಡನ್ನಿನಲ್ಲಿ ನಿಧನರಾದರು. ತತ್ವಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಾಮಾಜಿಕಶಾಸ್ತ್ರಜ್ಞ, ಇತಿಹಾಸಜ್ಞ, ಪತ್ರಕರ್ತ ಹೀಗೆ ಹಲವು ಆಯಾಮಗಳು ಈ ಅಪೂರ್ವ ವ್ಯಕ್ತಿಯಲ್ಲಿ ಮೇಳೈಸಿದ್ದವು. ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಬಂಡೆದ್ದ ಇವರ ಚಿಂತನೆಗಳು ಕಮ್ಯೂನಿಸಮ್ ಎಂಬ ಹೊಸ ಪ್ರಪಂಚವನ್ನೇ ಸೃಷ್ಟಿಸಿತು.

1932: ಈಸ್ಟ್ಮನ್ ಕೊಡಕ್ ಸಂಸ್ಥೆಯ ಸ್ಥಾಪಕ, ಕೋಡಕ್ ಫಿಲಂ ಸಂಶೋಧಕ ಜಾರ್ಜ್ ಈಸ್ಟ್ ಮನ್ ಅವರು ನ್ಯೂಯಾರ್ಕಿನ ರೋಚೆಸ್ಟರ್ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಛಾಯಾಗ್ರಹಣ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಫಿಲಂ ರೋಲ್ ತಯಾರಿಕೆಯಲ್ಲಿ ಪ್ರಸಿದ್ಧ ಹೆಸರಾಗಿದ್ದ ಇವರು ಬೆನ್ನು ಮೂಳೆಯ ಬಾಧೆಯಿಂದ ತೀವ್ರ ಬಾಧೆ ಅನುಭವಿಸಿದವರಾಗಿ “ನನ್ನ ಕೆಲಸವೆಲ್ಲವೂ ಮುಗಿದಿದೆ, ಸುಮ್ಮನೆ ಏತಕ್ಕಾಗಿ ಕಾಯುವುದು” ಎಂಬ ಸಂದೇಶವನ್ನು ತಮ್ಮ ಮಿತ್ರರಿಗೆ ಉದ್ಧೇಶಿಸಿ ಚೀಟಿಯಲ್ಲಿ ಬರೆದು ಗುಂಡಿನೇಟಿನ ಮೂಲಕ ತಮ್ಮ 77 ವರ್ಷಗಳ ಬದುಕಿಗೆ ಮುಕ್ತಾಯ ಹಾಡಿದರು.

1995: ಅಮೆರಿಕದ ಭೌತಶಾಸ್ತ್ರಜ್ಞ ಮತ್ತು ಖಗೋಳತಜ್ಞ ವಿಲಿಯಂ ಆಲ್ಫ್ರೆಡ್ ಫೌಲರ್ ಕ್ಯಾಲಿಫೋರ್ನಿಯಾದ ಪಸಡೆನ ಎಂಬಲ್ಲಿ ನಿಧನರಾದರು. ಇವರು ಭಾರತೀಯ ಮೂಲ ಸಂಜಾತ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಜೊತೆಗೆ ತಮ್ಮ ‘ನ್ಯೂಕ್ಲಿಯರ್ ರಿಯಾಕ್ಷನ್ಸ್’ ಸಂಶೋಧನೆಗಾಗಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿಯನ್ನು 1983 ವರ್ಷದಲ್ಲಿ ಹಂಚಿಕೊಂಡರು.