Categories
e-ದಿನ

ಮಾರ್ಚ್-15

ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ

ಗ್ರಾಹಕರ ಹಕ್ಕುಗಳ ಚಳುವಳಿಗಾರ ಅನ್ವರ್ ಫೈಸಲ್ ಅವರ ಶ್ರಮದ ಮೇರೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವದೆಲ್ಲೆಡೆಯಲ್ಲಿರುವ ಎಲ್ಲಾ ಗ್ರಾಹಕರ ಹಕ್ಕುಗಳನ್ನೂ ಗೌರವಿಸಿ, ಸಂರಕ್ಷಿಸುವ ಸಲುವಾಗಿ ಹಾಗೂ ಗ್ರಾಹಕರನ್ನು ಮಾರುಕಟ್ಟೆಯಲ್ಲಿ ದುರುಪಯೋಗಪಡಿಸಿಕೊಳ್ಳುವುದು ಮತ್ತು ಅವರ ಮೇಲಿನ ಸಾಮಾಜಿಕ ಅನ್ಯಾಯಗಳನ್ನು ತಪ್ಪಿಸಲು ಪ್ರತೀ ವರ್ಷ ಮಾರ್ಚ್ 15 ದಿನವನ್ನು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 44: ಮಾರ್ಕಸ್ ಜೂನಿಯಸ್ ಬ್ರೂಟಸ್, ಗೆಯಸ್ ಕಾಸಿಯಸ್ ಲಾಂಗಿನಸ್, ಮತ್ತು ಇನ್ನಿತರ ರೋಮನ್ ಸೆನೆಟರುಗಳ ಕೈವಾಡದಿಂದ ರೋಮನ್ ರಿಪಬ್ಲಿಕ್ ಸರ್ವಾಧಿಕಾರಿಯಾಗಿದ್ದ ಜೂಲಿಯಸ್ ಸೀಸರ್ ಹತ್ಯೆಗೊಳಗಾದ.

1493: ಕ್ರಿಸ್ಟಫರ್ ಕೊಲಂಬಸ್ ತಮ್ಮ ಪ್ರಥಮ ಅಮೆರಿಕದ ಯಾತ್ರೆ ಮುಗಿಸಿ ಸ್ಪೇನ್ಗೆ ಹಿಂದಿರುಗಿದರು

1783: ತಮ್ಮ ಮನಮಿಡಿಯುವ ಭಾಷಣದಲ್ಲಿ ಜಾರ್ಜ್ ವಾಷಿಂಗ್ಟನ್ ಅವರು ತಮ್ಮ ಅಧಿಕಾರಿಗಳನ್ನು ಉದ್ದೇಶಿಸಿ ನ್ಯೂ ಬರ್ಗ್ ಕಾನ್ಸ್ಪಿರೆಸಿಯಲ್ಲಿ ಭಾಗವಹಿಸದಿರಲು ಮನವಿ ಮಾಡಿಕೊಂಡರು. ಈ ಕೋರಿಕೆಯು ಯಶಸ್ವಿಯಾಗಿ ಭಯದ ವಾತಾವಾರಣ ಸೃಷ್ಟಿಸಿದ್ದ ಒಳಸಂಚು ನಡೆಯಲೇ ಇಲ್ಲ

1877: ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಅಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೆಲ್ಬೋರ್ನ್ ನಗರದ ಎಂ.ಸಿ.ಜಿ ಸ್ಟೇಡಿಯಂನಲ್ಲಿ ನಡೆಯಿತು.

1906: ಭವ್ಯ ಕಾರುಗಳು ಮತ್ತು ಏರೋ ಇಂಜಿನ್ ತಯಾರಿಕೆಗೆ ಪ್ರಸಿದ್ಧವಾದ ರೋಲ್ಸ್ ರಾಯ್ಸ್ ಲಿಮಿಟೆಡ್ ಸಂಸ್ಥೆಯು ಇಂಗ್ಲೆಂಡಿನ ಡರ್ಬಿ ಎಂಬಲ್ಲಿ ಸ್ಥಾಪನೆಗೊಂಡಿತು.

1952: ಫ್ರಾನ್ಸಿಗೆ ಸೇರಿದ ಸಿಲೋಸ್ ರೀಯೂನಿಯನ್ ದ್ವೀಪದಲ್ಲಿ ಮಾರ್ಚ್ 15ರಿಂದ ಮಾರ್ಚ್ 16ರ ನಡುವಿನ 24 ಗಂಟೆಗಳಲ್ಲಿ 73 ಇಂಚುಗಳ ದಾಖಲೆಯ ಭೀಕರ ಮಳೆ ಸುರಿಯಿತು

1964: ನಟಿ ಎಲಿಜಬೆತ್ ಟೇಲರ್ ಅವರು ಮಾಂಟ್ರಿಯಲ್ನಲ್ಲಿ ನಟ ರಿಚರ್ಡ್ ಬರ್ಟನ್ ಅವರನ್ನು ಮದುವೆಯಾದರು. ಇದು ಆಕೆಯ ಐದನೇ ಮದುವೆ ಮತ್ತು ರಿಚರ್ಡ್ ಬರ್ಟನ್ ಅವರ ಎರಡನೇ ಮದುವೆ. ಮುಂದೆ ಎಲಿಜಬೆತ್ ತನ್ನ 8ನೇ ಮದುವೆಯನ್ನೂ ಈತನ ಜೊತೆಗೇ ಮಾಡಿಕೊಂಡರು.

1985: ಪ್ರಥಮ ಅಂತರಜಾಲ ತಾಣದ ಹೆಸರಾದ ‘ಸಿಂಬಾಲಿಕ್ಸ್.ಕಾಂ’ ಎನ್ನುವ ಡೊಮೇನ್ ನೇಮ್ ನೊಂದಾಯಿತಗೊಂಡಿತು.

1990: ಮಿಖೈಲ್ ಗೋರ್ಬೆಚವ್ ಅವರು ಸೋವಿಯತ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಗೊಂಡರು.

1991: ಜರ್ಮನಿಯ ಕುರಿತಾದ ಪೂರ್ಣ ಒಮ್ಮತದ ‘ಟ್ರೀಟಿ ಆನ್ ದಿ ಫೈನಲ್ ಸೆಟ್ಟಲ್ಮೆಂಟ್ ವಿಥ್ ರೆಸ್ಪೆಕ್ಟ್ ಟು ಜರ್ಮನಿ’ ಕಾರ್ಯರೂಪಕ್ಕೆ ಬಂದು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಒಂದಾದ ಸಂಪೂರ್ಣ ರಾಷ್ಟ್ರವಾಗಲು ಅನುವು ಮಾಡಿಕೊಡುವ ಸ್ವಾತಂತ್ರ್ಯ ದೊರಕಿದಂತಾಯಿತು. ಈ ಒಪ್ಪಂದದ ಮೇರೆಗೆ ಬ್ರಿಟನ್, ಸೋವಿಯತ್ ಯೂನಿಯನ್ ಮತ್ತು ಫ್ರಾನ್ಸ್ ದೇಶಗಳು ತಮಗೆ ಜರ್ಮನಿಯ ಪ್ರದೇಶಗಳ ಮೇಲಿದ್ದ ಹಕ್ಕುಗಳನ್ನು ಬಿಟ್ಟುಕೊಟ್ಟವು.

2001: ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ಜೊತೆಗೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವಿ.ವಿ.ಎಸ್. ಲಕ್ಷ್ಮಣ್ ಅವರು 281 ರನ್ ಗಳಿಸಿ, ಅದುವರೆಗೆ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಅಂದಿನವರೆಗೆ ಅತೀ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನಿಸಿದರು. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗಾವಸ್ಕರ್ ಗಳಿಸಿದ್ದ 236 ರನ್ನುಗಳ ದಾಖಲೆಯನ್ನು ಇದು ಮುರಿಯಿತು.

2006: ಮೆಲ್ಬೋರ್ನಿನಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಸಂಭ್ರಮೋತ್ಸಾಹದ ಮಧ್ಯೆ ಉದ್ಘಾಟನೆಗೊಂಡವು.

2007: ಸುದೀರ್ಘಕಾಲದಿಂದ ಉಚಿತವಾಗಿ ಪ್ರತಿವಾರ ವೈದ್ಯಕೀಯ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದ ಬೆಂಗಳೂರಿನ ವೈದ್ಯರಾದ ಡಾ. ಬಿ. ರಮಣರಾವ್ ಅವರ ಸಾಧನೆ ‘ಲಿಮ್ಕಾ ದಾಖಲೆಗಳ ಪುಸ್ತಕ’ಕ್ಕೆ ಸೇರ್ಪಡೆಗೊಂಡಿತು.

ಪ್ರಮುಖಜನನ/ಮರಣ:

1767: ಆಂಡ್ರ್ಯೂ ಜಾಕ್ಸನ್ ಅವರು ಬ್ರಿಟಿಷ್ ಅಮೆರಿಕದ ಕೆರೋಲಿನಾದಲ್ಲಿ ಜನಿಸಿದರು. ಅಮೆರಿಕಾದ ಸೇನಾ ನಾಯಕರಾಗಿದ್ದ ಇವರು ಅಮೆರಿಕದ ಡೆಮೊಕ್ರೆಟಿಕ್ ಪಕ್ಷವನ್ನು ಸ್ಥಾಪಿಸಿ, 1829-37ರ ಅವಧಿಯಲ್ಲಿ ಅಮೆರಿಕದ ಅಧ್ಯಕ್ಷರಾದರು. ಕೇವಲ ಪ್ರತಿಷ್ಟಿತ ಮಂದಿಗೆ ಒಲಿಯುತ್ತಿದ್ದ ಅಮೆರಿಕದ ಅಧ್ಯಕ್ಷ ಪದವಿ ಜನಸಾಮಾನ್ಯನಿಗೂ ಒದಗುವಂತೆ ಪ್ರಾರಂಭ ನೀಡಿದ ಇವರ ನಡೆ ‘ಜಾಕ್ಸೋನಿಯನ್ ಡೆಮೋಕ್ರೆಸಿ’ ಎಂದೇ ಪ್ರಸಿದ್ಧಿ ಪಡೆದಿದೆ.

1839: ನೊಬೆಲ್ ಪುರಸ್ಕೃತ ಜರ್ಮನ್ ಸಾಹಿತಿ ಪಾಲ್ ಹೇಯ್ಸೆ ಅವರು ಬರ್ಲಿನ್ ನಗರದಲ್ಲಿ ಜನಿಸಿದರು. ಕಾದಂಬರಿ, ನಾಟಕ ಮತ್ತು ಸಣ್ಣ ಕತೆಗಳಿಗೆ ಇವರು ಪ್ರಸಿದ್ಧರಾಗಿದ್ದರು.

1854: ಜರ್ಮನಿಯ ವೈದ್ಯ ವಿಜ್ಞಾನಿ ಎಮಿಲ್ ವಾನ್ ಬೆಹ್ರಿಂಗ್ ಅವರು ಈಗಿನ ಪೋಲೆಂಡ್ ದೇಶಕ್ಕೆ ಸೇರಿದ ಹ್ಯಾನ್ಸ್ ಡಾರ್ಫ್ ಎಂಬಲ್ಲಿ ಜನಿಸಿದರು. ಡಿಫ್ತೀರಿಯಾ ರೋಗಕ್ಕೆ ಔಷದ ಕಂಡುಹಿಡಿದ ಇವರು ‘ಮಕ್ಕಳ ಸಂರಕ್ಷರೆಂಬ’ ಕೀರ್ತಿಗೆ ಪಾತ್ರರಾಗಿ 1901 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಪಡೆದರು.

1944: ಮಹಾನ್ ಸಂಗೀತ ವಿದ್ವಾಂಸರೂ, ವೈಣಿಕರೂ, ವಾಗ್ಗೇಯಕಾರರೂ, ಸಂಗೀತ ಗುರುಗಳೂ ಆದ ಪ್ರೊ. ರಾ. ವಿಶ್ವೇಶ್ವರನ್ ಜನಿಸಿದರು. ಮದರಾಸಿನ ಕೃಷ್ಣ ಗಾನ ಸಭಾದ ಸಂಗೀತ ಚೂಡಾಮಣಿ, ರಾಜ್ಯ ಸರಕಾರದ ಸಂಗೀತ ವಿದ್ವಾನ್, ಗಾನ ಕಲಾ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

1958: ಪತ್ರಕರ್ತ ಮತ್ತು ಬರಹಗಾರರಾದ ರವಿ ಬೆಳಗೆರೆ ಅವರು ಬಳ್ಳಾರಿಯಲ್ಲಿ ಜನಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1920: ಅಮೇರಿಕದ ವೈದ್ಯ ವಿಜ್ಞಾನಿ ಇ. ಡೊನ್ನಾಲ್ ಥಾಮಸ್ ಅವರು ಈಗಿನ ಟೆಕ್ಸಾಸ್ ಪ್ರದೇಶದ ಮಾರ್ಟ್ ಎಂಬಲ್ಲಿ ಜನಿಸಿದರು. ‘ಆರ್ಗನ್ ಟ್ರಾನ್ಸ್ ಪ್ಲಾಂಟೇಶನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1990 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1930:  ಬೆಲಾರುಸಿಯನ್-ರಷ್ಯನ್ ಭೌತವಿಜ್ಞಾನಿ ಜ್ಹೊರ್ಸ್ ಅಲ್ಫೆರೋವ್ ಸೋವಿಯತ್ ಯೂನಿಯನ್ನಿನ ವಿಟೆಬ್ಸ್ಕ್ ಎಂಬಲ್ಲಿ ಜನಿಸಿದರು. ಹೆಟೆರೊ ಟ್ರಾನ್ಸಿಸ್ಟರ್ ಕುರಿತಾದ ಸಂಶೋಧನೆಗಾಗಿ ಇವರಿಗೆ 2000ದ ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1930: ಆಸ್ಟ್ರಿಯನ್-ಅಮೇರಿಕನ್ ರಸಾಯನಶಾಸ್ತ್ರ ವಿಜ್ಞಾನಿ ಮಾರ್ಟಿನ್ ಕಾರ್ ಪ್ಲಸ್ ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ಜನಿಸಿದರು. ‘ಮಲ್ಟಿ ಸ್ಕೇಲ್ ಮಾಡೆಲ್ಸ್ ಫಾರ್ ಕಾಂಪ್ಲೆಕ್ಸ್ ಕೆಮಿಕಲ್ ಸಿಸ್ಟಮ್ಸ್’ ಕುರಿತ ಅಭಿವೃದ್ಧಿಗಾಗಿ ಇವರಿಗೆ 2013ದ ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1962: ಅಮೆರಿಕದ ಭೌತವಿಜ್ಞಾನಿ ಆರ್ಥರ್ ಕಾಂಪ್ಟನ್ ಕ್ಯಾಲಿಫೋರ್ನಿಯಾದ ಬರ್ಕ್ಲಿ ಎಂಬಲ್ಲಿ ನಿಧನರಾದರು. ‘ಕಾಂಪ್ಟನ್ ಎಫೆಕ್ಟ್’ ಎಂಬ ‘ಪಾರ್ಟಿಕಲ್ ನೇಚರ್ ಅಆಫ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೆಡಿಯೇಷನ್’ ಎಂಬ ಕೊಡುಗೆಗಾಗಿ ಇವರಿಗೆ 1927ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1994: ಕನ್ನಡ ಸಾಹಿತ್ಯಲೋಕದ ಒಂದು ವಿಸ್ಮಯ ಎಂದು ಪ್ರಸಿದ್ಧರಾದ ಎಂ.ಕೆ. ಇಂದಿರಾ ಅವರು ತಮ್ಮ 77ನೇ ವಯಸ್ಸಿನಲ್ಲಿ ನಿಧನರಾದರು. ಕೇವಲ 2ನೇ ತರಗತಿ ಓದಿದರೂ, 48 ಕಾದಂಬರಿಗಳನ್ನೂ, 15 ಸಣ್ಣಕಥಾ ಸಂಕಲನಗಳನ್ನೂ ಮತ್ತು ಆತ್ಮಚರಿತ್ರೆಯನ್ನೂ ಬರೆದ ಅವರ ‘ತುಂಗಭದ್ರ’, ‘ಸದಾನಂದ’, ‘ನವರತ್ನ’, ‘ಫಣಿಯಮ್ಮ’ – ಈ ನಾಲ್ಕು ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು. ಚಲನಚಿತ್ರವಾದ ‘ಫಣಿಯಮ್ಮ’ ರಾಷ್ಟ್ರ ಪ್ರಶಸ್ತಿ ಗಳಿಸಿತು. ‘ಗೆಜ್ಜೆಪೂಜೆ’ ಮತ್ತೊಂದು ಮಹತ್ವದ ಚಿತ್ರವಾಯಿತು. ತೇಜಸ್ವಿ ನಿರಂಜನ ಅವರು ಮೂಡಿಸಿದ ‘ಫಣಿಯಮ್ಮ’ ಕೃತಿಯ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು

2004: ನೊಬೆಲ್ ಪುರಸ್ಕೃತ ಇಂಗ್ಲಿಷ್-ಅಮೆರಿಕನ್ ರಸಾಯನ ಶಾಸ್ತ್ರಜ್ಞ ಜಾನ್ ಪೋಪಲ್ ಅವರು ಚಿಕಾಗೋದಲ್ಲಿ ನಿಧನರಾದರು. ‘ಕಂಪ್ಯುಟೇಶನಲ್ ಮೆಥಡ್ಸ್ ಇನ್ ಕ್ವಾಂಟಮ್ ಥಿಯರಿ’ ಕುರಿತಾದ ಇವರ ಕೊಡುಗೆಗಾಗಿ 1998 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2006: ದಕ್ಷಿಣ ಭಾರತದ ಚಿತ್ರಗಳ, ಪ್ರಮುಖವಾಗಿ ಮಲಯಾಳಂ ಚಲನಚಿತ್ರಗಳ ಸಂಗೀತ ನಿರ್ದೇಶಕರಾಗಿದ್ದ ಜಿ. ದೇವರಾಜನ್ ಅವರು ತಮ್ಮ 78ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು. ಮಲಯಾಳಂ ಅಲ್ಲದೆ ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಸಹಾ ಇವರ ಸಂಗೀತ ಹರಿದಿತ್ತು. ಇವರಿಗೆ ಕೇರಳ ಸರ್ಕಾರದ ಚಲನಚಿತ್ರ ಸಂಗೀತ ಮತ್ತು ಹಿನ್ನೆಲೆ ಸಂಗೀತಕ್ಕೆ ಐದು ಪ್ರಶಸ್ತಿಗಳು ಮತ್ತು ಜೀವಮಾನ ಸಾಧನೆಯ ಪ್ರಶಸ್ತಿ ಸಂದಿತ್ತು.