Categories
e-ದಿನ

ಮಾರ್ಚ್-16

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 597: ಬ್ಯಾಬಿಲೋನಿಯನ್ನರು ಜೆರುಸಲೇಮ್ ಅನ್ನು ಆಕ್ರಮಿಸಿ ರಾಜನಾದ ಜೆಕೋನಿಯಾ ಜಾಗದಲ್ಲಿ ಜೆಡೇಕಿಯಾ ಎಂಬಾತನನ್ನು ಸ್ಥಾಪಿಸಿದರು.

1527: ಮೊಘಲ್ ಚಕ್ರವರ್ತಿ ಬಾಬರ್, ಆಗ್ರಾ ಸಮೀಪದ ಖಾನ್ವಾದಲ್ಲಿ ಮೇವಾಡದ ರಾಣಾ ಸಂಘ ನೇತೃತ್ವದ ರಜಪೂತ ಪಡೆಗಳನ್ನು ಸೋಲಿಸಿದನು. ಪಾಣಿಪತ್ ಯುದ್ಧಕ್ಕಿಂತಲೂ ಭೀಕರವಾಗಿ ನಡೆದ ಈ ಕದನದಲ್ಲಿ ಉಭಯ ಕಡೆಗಳಲ್ಲೂ ಬಹಳಷ್ಟು ಸಾವು ನೋವು ಸಂಭವಿಸಿತು. ಈ ವಿಜಯದಿಂದ ಬಾಬರ್ ಹಿಂದೂಸ್ಥಾನದ ಚಕ್ರವರ್ತಿಯಾದ.

1870: ಟಿಚೈಕೋವ್ಸ್ಕೈ ಅವರ ರೋಮಿಯೋ ಜೂಲಿಯೆಟ್ ರಂಗಕಲ್ಪನೆಯು ತನ್ನ ಪ್ರಥಮ ಪ್ರದರ್ಶನವನ್ನು ನೀಡಿತು.

1872: ವಿಶ್ವದ ಅತ್ಯಂತ ಹಳೆಯ್ ಫುಟ್ಬಾಲ್ ಪಂದ್ಯಾವಳಿ ಎನಿಸಿರುವ ‘ಎಫ್.ಎ’ ಕಪ್ ಅನ್ನು ವಾಂಡರರ್ಸ್ ಎಫ್.ಸಿ. ತಂಡವು ಗೆದ್ದಿತು. ಲಂಡನ್ನಿನ ಓವಲ್ ಕೆನ್ನಿಂಗ್ಟನ್ ಎಂಬಲ್ಲಿ ನಡೆದ ಪಂದ್ಯಾವಳಿಯಲ್ಲಿ ಇದು ‘ರಾಯಲ್ ಎಂಜಿನಿಯರ್ಸ್ ಎ.ಎಫ್.ಸಿ’ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿತು.

1926: ಅಮೆರಿಕದ ರಾಬರ್ಟ್ ಎಚ್ ಗೊಡ್ಡಾರ್ಡ್ ಅವರು ಮೊದಲ ಬಾರಿಗೆ ದ್ರವ-ಇಂಧನವನ್ನು ಬಳಸಿದ ರಾಕೆಟ್ ಅನ್ನು ಮೆಸ್ಸಚುಸೆಟ್ ಪ್ರದೇಶದ ಔಬರ್ನ್ ಎಂಬಲ್ಲಿ ಉಡಾಯಿಸಿದರು

1945: ಎರಡನೇ ವಿಶ್ವ ಮಹಾಯುದ್ಧದಲ್ಲಿ ಜರ್ಮನಿಯ ವುರ್ಜ್ಬರ್ಗ್ ನಗರವು ಕೇವಲ 20 ನಿಮಿಷಗಳಲ್ಲಿ ಬ್ರಿಟಿಷ್ ಬಾಂಬುಗಳಿಂದ ನಿರ್ನಾಮವಾಗಿ ಸುಮಾರು 5000 ಮಂದಿ ಸಾವಿಗೀಡಾದರು

1958: ಫೋರ್ಡ್ ಮೋಟಾರ್ ಸಂಸ್ಥೆಯು ತನ್ನ 50ನೇ ದಶಲಕ್ಷ ವಾಹನವನ್ನು ಉತ್ಪಾದಿಸಿತು.

1968: ಫೋರ್ಡ್ ಮೋಟಾರ್ ಸಂಸ್ಥೆಯು ತನ್ನ 100ನೇ ದಶಲಕ್ಷ ವಾಹನವನ್ನು ಉತ್ಪಾದಿಸಿತು.

1989: ಈಜಿಪ್ಟಿನ ಚಿಯೋಪ್ಸ್ ಪಿರಮಿಡ್ಡಿನಲ್ಲಿ 4,400 ವರ್ಷ ಹಳೆಯ ಮಮ್ಮಿ ಪತ್ತೆಯಾಯಿತು

2002: ನ್ಯೂಜಿಲ್ಯಾಂಡಿನ ನೇಥನ್ ಅಸ್ಟ್ಲೆ ಅವರು 218 ನಿಮಿಷಗಳಲ್ಲಿ 153 ಚೆಂಡುಗಳಿಗೆ (ಬಾಲ್ಗಳಿಗೆ) 200 ರನ್ ಗಳಿಸಿ ಅಂದಿನ ದಿನದವರೆಗೆ ಅತಿ ಕಡಿಮೆ ಅವಧಿಯಲ್ಲಿ ದ್ವಿಶತಕ ಬಾರಿಸಿದ ಆಟಗಾರನೆನಿಸಿದರು. ಇಂಗ್ಲೆಂಡಿನ ಕ್ರೈಸ್ಟ್ ಚರ್ಚಿನಲ್ಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅಸ್ಟ್ಲೆ ಅವರು ಈ ಸಾಧನೆ ಮಾಡಿದರು.

2006: ಮೆಲ್ಬೋರ್ನಿನಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಿರಿಯ ವೇಟ್ ಲಿಫ್ಟಿಂಗ್ ಪಟು ಕುಂಜುರಾಣಿ ದೇವಿ ಅವರು ಭಾರತಕ್ಕೆ ಮೊದಲ ಸ್ವರ್ಣಪದಕ ತಂದುಕೊಟ್ಟರು. ಮಹಿಳೆಯರ 48 ಕಿಲೋ ವಿಭಾಗದಲ್ಲಿ 166 ಕಿಲೋ ತೂಕ ಎತ್ತುವ ಮೂಲಕ ಕುಂಜುರಾಣಿ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದರು.

2007: ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದೇ ಓವರಿನ ಆರು ಎಸೆತಗಳಲ್ಲಿ ಆರು ಸಿಕ್ಸರ್ ಗಳಿಸಿದ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ಅವರು ವಿಶ್ವದಾಖಲೆ ಸ್ಥಾಪಿಸಿದರು. ಹಾಲೆಂಡ್ ಮತ್ತು ದಕ್ಷಿಣ ಆಫ್ರಿಕದ ಮಧ್ಯೆ ನಡೆದ ವಿಶ್ವ ಕಪ್ ಎ ಬಣದ ಪಂದ್ಯದಲ್ಲಿ ಗಿಬ್ಸ್ ಈ ದಾಖಲೆ ಮಾಡಿದರು.

ಪ್ರಮುಖಜನನ/ಮರಣ:

1836: ವಿಶ್ವದ ಪ್ರಥಮ ಕೇಬಲ್ ಕಾರ್ ವ್ಯವಸ್ಥೆಯಾದ ಸ್ಯಾನ್ ಫ್ರಾನ್ಸಿಸ್ಕೋದ ‘ಕ್ಲೇ ಸ್ಟ್ರೀಟ್ ರೈಲ್ ರೋಡ್’ ಸ್ಥಾಪಕರಾದ ಆ್ಯಂಡ್ರ್ಯೂ ಸ್ಮಿತ್ ಹಲ್ಲಿಡೀ ಅವರು ಲಂಡನ್ನಿನಲ್ಲಿ ಜನಿಸಿದರು. ಇದಲ್ಲದೆ ಇವರು ಕ್ಯಾಲಿಫೋರ್ನಿಯಾದಲ್ಲಿ ವೈರ್ ರೋಪ್ ನಿರ್ಮಾಣವನ್ನು ಪರಿಚಯಿಸಿದರಲ್ಲದೆ, ಪ್ರಾರಂಭದ ದಿನಗಳಲ್ಲೇ ಕ್ಯಾಲಿಫೋರ್ನಿಯಾ ನಗರದಲ್ಲಿ ಅನೇಕ ಸೇತುವೆಗಳನ್ನು ನಿರ್ಮಿಸಿದರು.

1839: ನೊಬೆಲ್ ಪುರಸ್ಕೃತ ಫ್ರೆಂಚ್ ಕವಿ ಸುಲ್ಲಿ ಪ್ರುಡ್ಹೊಮ್ಮೆ ಅವರು ಪ್ಯಾರಿಸ್ ನಗರದಲ್ಲಿ ಜನಿಸಿದರು.

1910: ಭಾರತ ಮತ್ತು ಇಂಗ್ಲೆಂಡ್ ಎರಡೂ ಕ್ರಿಕೆಟ್ ತಂಡಗಳ ಪರವಾಗಿ ಆಡಿದ ಇಫ್ತಿಕರ್ ಆಲಿ ಪಟೌಡಿ ಅವರು ಈಗಿನ ಹರ್ಯಾಣಾದಲ್ಲಿರುವ ಪಟೌಡಿ ಸಂಸ್ಥಾನದಲ್ಲಿ ಜನಿಸಿದರು. ಪಟೌಡಿ ಮನೆತನದ 8ನೇ ನವಾಬರಾಗಿದ್ದ ಇವರು 1946ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನೂ ವಹಿಸಿದ್ದರು. ಇವರು ಕೇವಲ ತಮ್ಮ 41ನೇ ವಯಸ್ಸಿನಲ್ಲಿ ನವದೆಹಲಿಯಲ್ಲಿ ಪೋಲೊ ಆಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದರು.

1918: ಅಮೆರಿಕದ ಭೌತವಿಜ್ಞಾನಿಗಳಾದ ಫ್ರೆಡ್ರಿಕ್ ರೀನೇಸ್ ಅವರು ನ್ಯೂಜೆರ್ಸಿಯ ಪ್ಯಾಟರ್ಸನ್ ಎಂಬಲ್ಲಿ ಜನಿಸಿದರು. ‘ನ್ಯೂಟ್ರಿನೋ ಸಂಶೋಧನೆ’ಯಲ್ಲಿನ ಇವರ ಕೊಡುಗೆಗಾಗಿ 1995 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1927: 1960ರ ಸೋವಿಯತ್ ಯೂನಿಯನ್ನಿನ ಸೋಯುಜ್ 1 ಬಾಹ್ಯಾಕಾಶ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಪುನಃ ಭೂಮಿಗೆ ಹಿಂದಿರುಗುವ ಸಂದರ್ಭದಲ್ಲಿ ಪ್ಯಾರಾಚೂಟ್ ವೈಫಲ್ಯದ ದೆಸೆಯಿಂದ ನಿಧನರಾದ ವ್ಲಾಡಿಮಿರ್ ಕೊಮಾರೋವ್ ಅವರು ಮಾಸ್ಕೋ ನಗರದಲ್ಲಿ ಜನಿಸಿದರು.

1929: ವಿಶ್ವಮಾನ್ಯ ಕವಿ, ವಿದ್ವಾಂಸ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪೇಟೆ ಕೃಷ್ಣಸ್ವಾಮಿ ರಾಮಾನುಜನ್ ಅವರು ಮೈಸೂರಿನಲ್ಲಿ ಜನಿಸಿದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆಗಳನ್ನು ಕೊಡುವುದರ ಜೊತೆಗೆ ಜೊತೆಗೆ ಕನ್ನಡದ ಕಸ್ತೂರಿಯನ್ನು ವಿಶ್ವದೆಲ್ಲೆಡೆ ಇಂಗ್ಲಿಷ್ ಭಾಷೆಯ ಮೂಲಕ ಪಸರಿಸುವ ಮನೋಜ್ಞ ಕಾರ್ಯ ಮಾಡಿದರು. 1993ರ ವರ್ಷದಲ್ಲಿ ನಿಧನರಾದ ಇವರಿಗೆ 1976ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1983ರಲ್ಲಿ ಪ್ರಸಿದ್ಧ ಮ್ಯಾಕ್ ಆರ್ಥರ್ ಫೆಲ್ಲೋಷಿಪ್ ಗೌರವ ಸಂದಿತು.

1935: ಸೂರ್ಯನಾರಾಯಣ ಶಾಸ್ತ್ರಿ ಎಂಬ ಹೆಸರಿನ ಪ್ರಖ್ಯಾತ ನಟ ಉದಯಕುಮಾರ್ ಅವರು ತಮಿಳುನಾಡಿನ ಧರ್ಮಪುರಿಯ ಪಾಲಕೋಡ್ ಎಂಬಲ್ಲಿ ಜನಿಸಿದರು. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಪ್ರಸಿದ್ಧಿ ಪಡೆದರು. ಪೋಷಕ ಪಾತ್ರಗಳಲ್ಲಿನ ಅಭಿನಯಕ್ಕಾಗಿ ಇವರು ಎರಡು ಬಾರಿ ಕರ್ನಾಟಕ ರಾಜ್ಯಸರ್ಕಾರದ ಚಲನಚಿತ್ರ ಪ್ರಶಸ್ತಿ ಗಳಿಸಿದ್ದರು.

1935: ಪ್ರಖ್ಯಾತ ರಂಗಕರ್ಮಿ ಜಿ.ವಿ. ಶಿವಾನಂದ್ ಅವರು ನಾಟಕ ರತ್ನ ಡಾ. ಗುಬ್ಬಿವೀರಣ್ಣನವರು ಮತ್ತು ತಾಯಿ ಜಿ. ಸುಂದರಮ್ಮನವರ ಪುತ್ರರಾಗಿ ಜನಿಸಿದರು. ಅನೇಕ ನಾಟಕ, ಸಿನಿಮಾ ಮತ್ತು ಕಿರುತೆರೆ ಕಥಾನಕಗಳಲ್ಲಿ ನಟಿಸಿ, ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದ ಇವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಗೌರವ ಮತ್ತು ಇನ್ನಿತರ ಗೌರವಗಳು ಸಂದಿದ್ದವು.

1952: ಪ್ರಸಿದ್ಧ ಸಂಗೀತ, ಸುಗಮ ಸಂಗೀತ ಮತ್ತು ನೃತ್ಯ ಕಲಾವಿದರಾದ ಎಂ. ಎಸ್. ಶೀಲಾ ಅವರು ಬೆಂಗಳೂರಿನಲ್ಲಿ ಜನಿಸಿದರು. ವಿಶ್ವದಾದ್ಯಂತ ಕಾರ್ಯಕ್ರಮ ನೀಡುತ್ತಿರುವ ಇವರಿಗೆ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ಅತ್ಯುತ್ತಮ ಹಿರಿಯ ಗಾಯಕಿ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ರಾಜ್ಯ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1961: ಮೆಕ್ಫರ್ಲೇನ್ ಆಟಿಕೆ ಸಂಸ್ಥೆ ಸ್ಥಾಪಕ ಟಾಡ್ ಮೆಕ್ಫರ್ಲೇನ್ ಅವರು ಕೆನಡಾದ ಕಾಲ್ಗರಿ ಎಂಬಲ್ಲಿ ಜನಿಸಿದರು.

1914: ಸ್ವಿಟ್ಜರ್ಲ್ಯಾಂಡ್ ದೇಶದ ರಾಜಕಾರಣಿ ನೊಬೆಲ್ ಶಾಂತಿ ಪುರಸ್ಕೃತ ಚಾರ್ಲ್ಸ್ ಆಲ್ಬರ್ಟ್ ಗೊಬಾಟ್ ಅವರು ಬೆರ್ನ್ ಎಂಬಲ್ಲಿ ನಿಧನರಾದರು.

1935: ಸ್ಕಾಟಿಷ್ ವೈದ್ಯ ವಿಜ್ಞಾನಿ ಜಾನ್ ಜೇಮ್ಸ್ ರಿಕ್ಕರ್ಡ್ ಅವರು ಸ್ಕಾಟ್ಲ್ಯಾಂಡಿನ ಅಬೆರ್ಡೀನ್ ಎಂಬಲ್ಲಿ ನಿಧನರಾದರು. ‘ಕಾರ್ಬೋಹೈಡ್ರೇಟ್ ಮೆಟಬಾಲಿಸಂ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1923 ವರ್ಷದ ನೊಬೆಲ್ ವೈದ್ಯಪುರಸ್ಕಾರ ಸಂದಿತ್ತು.

1940: ನೊಬೆಲ್ ಪುರಸ್ಕೃತ ಸ್ವೀಡಿಷ್ ಲೇಖಕಿ ಸೇಲ್ಮಾ ಲೇಗರ್ಲೋಫ್ ಅವರು ಸ್ವೀಡನ್ನಿನ ಮರ್ಬಕ್ಕ ಎಂಬಲ್ಲಿ ನಿಧನರಾದರು. ಇವರ ಮಕ್ಕಳ ಕೃತಿ ‘ನಿಲ್ಸ್ ಹೊಲ್ಗೆರ್ಸನ್ಸ್ ಅಂಡರ್ಬೆರಾ ರೆಸಾ ಜೆನೋಮ್ ಸ್ವೆರಿಗೆ’ (ನಿಲ್ಸನ ಅತ್ಯದ್ಭುತ ಸಾಹಸಗಳು) ಎಂಬ ಕೃತಿ ಅತ್ಯಂತ ಜನಪ್ರಿಯವಾಗಿತ್ತು.

1998: ಇಂಗ್ಲಿಷ್-ಅಮೆರಿಕನ್ ಸಾವಯವ ರಸಾಯನಶಾಸ್ತ್ರ ವಿಜ್ಞಾನಿ ಡೆರೆಕ್ ಬಾರ್ಟನ್ ಅವರು ಅಮೆರಿಕದ ಟೆಕ್ಸಾಸಿನ ಕಾಲೇಜ್ ಸ್ಟೇಷನ್ ಎಂಬಲ್ಲಿ ನಿಧನರಾದರು. ‘ಕಾನ್ಸೆಪ್ಟ್ ಆಫ್ ಕನ್ಫಾರ್ಮೇಶನ್ ಅಂಡ್ ಇಟ್ಸ್ ಅಪ್ಲಿಕೇಶನ್ ಇನ್ ಕೆಮಿಸ್ಟ್ರಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1969 ವರ್ಷದ ನೊಬೆಲ್ ರಸಾಯನಶಾಸ್ತ್ರ ಪುರಸ್ಕಾರ ಸಂದಿತ್ತು.