Categories
e-ದಿನ

ಮಾರ್ಚ್-18

ಪ್ರಮುಖಘಟನಾವಳಿಗಳು:

1068: ಲೆವಾಂಟ್ ಮತ್ತು ಅರೇಬಿಯನ್ ಪೆನಿನ್ಸುಲಾಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ 20,000 ಜನ ಸಾವಿಗೀಡಾದರು.

1850: ಹೆನ್ರಿ ವೆಲ್ಸ್ ಮತ್ತು ವಿಲಿಯಂ ಫರ್ಗೋ ಅವರಿಂದ ಪ್ರಸಿದ್ಧ ‘ಅಮೆರಿಕನ್ ಎಕ್ಸ್ಪ್ರೆಸ್’ ಹಣಕಾಸು ವ್ಯವಹಾರ ಸಂಸ್ಥೆ ಸ್ಥಾಪನೆಗೊಂಡಿತು.

1922: ಮಹಾತ್ಮಾ ಗಾಂಧೀಜಿ ಅವರಿಗೆ ಕಾನೂನು ಉಲ್ಲಂಘನೆಗಾಗಿ ಆರು ವರ್ಷದ ಶಿಕ್ಷೆ ವಿಧಿಸಲಾಯ್ತು. ಆದರೆ ಎರಡೇ ವರ್ಷಗಳಲ್ಲಿ ಬಿಡುಗಡೆ ಮಾಡಲಾಯಿತು.

1944: ನೇತಾಜಿ ಸುಭಾಶ್ ಚಂದ್ರ ಬೋಸ್ ನೇತೃತ್ವದಲ್ಲಿ ಅಜಾದ್ ಹಿಂದ್ ಫೌಜ್ ಸೇನೆ ಭಾರತದ ವಿಮೋಚನೆಗಾಗಿ ಬರ್ಮಾ ಗಡಿ ದಾಟಿ ಭಾರತದತ್ತ ಚಲಿಸಿತು.

1965: ಸೋವಿಯತ್ ಗಗನಯಾತ್ರಿ ಅಲೆಕ್ಸೀ ಲೆನೋವ್ ಅವರು ತಾವಿದ್ದ ಬಾಹ್ಯಾಕಾಶ ನೌಕೆ ವೊಸ್ಖೋಡ್ 2 ರಿಂದ ಹೊರಕ್ಕೆ ಬಂದು 12 ನಿಮಿಷಗಳ ಕಾಲ ನಡೆದಾಡಿದರು.

1968: ಅಮೆರಿಕದ ಕಾಂಗ್ರೆಸ್ಸು ‘ಕರೆನ್ಸಿ’ ಚಲಾವಣಾ ಹಣಕ್ಕೆ ಚಿನ್ನದ ಸಂಪನ್ಮೂಲದ ಅಗತ್ಯತೆಯನ್ನು ತೆಗೆದುಹಾಕಿತು.

1990: ವಿಶ್ವದ ಚರಿತ್ರೆಯಲ್ಲೇ ‘ಅತಿ ದೊಡ್ಡ ಕಲಾತ್ಮಕ ವಸ್ತುಗಳ ಕಳ್ಳತನ’ದಲ್ಲಿ, ಅಮೆರಿಕದ ಬೋಸ್ಟನ್ ನಗರದಲ್ಲಿನ ಇಸಾಬೆಲ್ಲಾ ಸ್ಟವಾರ್ಟ್ ಗಾರ್ಡನರ್ ಮ್ಯೂಸಿಯಂನಲ್ಲಿ 300 ದಶಲಕ್ಷ ಡಾಲರ್ ಮೌಲ್ಯದ ಕಲಾತ್ಮಕ ವಸ್ತುಗಳ ಕಳವಾಯಿತು.

1992: ವರ್ಣಭೇದವನ್ನು ಕಿತ್ತೊಗೆಯುವ ವಿಚಾರದಲ್ಲಿ ನಡೆದ ಸಾರ್ವಜನಿಕ ಅಭಿಪ್ರಾಯ ಕ್ರೋಡೀಕರಣ ‘ರೆಫರೆಂಡಮ್’ನಲ್ಲಿ ದಕ್ಷಿಣ ಆಫ್ರಿಕಾದ ಬಿಳಿಯರು ಅತ್ಯಂತ ಬಹುಮತದಿಂದ ವರ್ಣಭೇದವನ್ನು ಕಿತ್ತೊಗೆಯುವುದಕ್ಕೆ ಪೂರಕವಾದ ಬೆಂಬಲ ವ್ಯಕ್ತಪಡಿಸಿದರು.

2006: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು 2007ರ ವಿಶ್ವಕಪ್ ವರೆಗೆ ರಾಹುಲ್ ದ್ರಾವಿಡ್ ಅವರನ್ನು ಭಾರತದ ಕ್ರಿಕೆಟ್ ತಂಡದ ನಾಯಕರನ್ನಾಗಿ ನೇಮಿಸಿತು.

2006: ಖ್ಯಾತ ಜಾದೂಗಾರ ಪಿ.ಸಿ. ಸರ್ಕಾರ್ ಅವರ ಪುತ್ರ ಮಾಣಿಕ್ ಸರ್ಕಾರ್ ಅವರಿಗೆ ಅಂತಾರಾಷ್ಟ್ರೀಯ ಲೇಸರ್ ಪ್ರದರ್ಶನ ಸಂಸ್ಥೆಯ ಪ್ರಶಸ್ತಿ ಸಂದಿತು. ವಾಷಿಂಗ್ಟನ್ನಿನಲ್ಲಿ ನಡೆದ ಲೇಸರ್ ಪ್ರದರ್ಶನದಲ್ಲಿ ಮಾಣಿಕ್ ಸರ್ಕಾರ್ ಅವರ ಬುದ್ಧನ ಚರಿತ್ರೆ ಕುರಿತಾದ ಲೇಸರ್ ಪ್ರದರ್ಶನಕ್ಕೆ ಈ ಬಹುಮಾನ ಲಭಿಸಿತು.

2008: ಈಜಿಪ್ಟಿನಲ್ಲಿ ನಡೆದ ಕೈರೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧಾತ್ಮಕ ವಿಭಾಗಕ್ಕೆ ಭಾರತದಿಂದ ಆಯ್ಕೆಯಾಗಿದ್ದ ‘ಕೇರ್ ಆಫ್ ಫುಟ್ ಪಾತ್’ ಮಕ್ಕಳ ಚಿತ್ರ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

2009: ರಾಹುಲ್ ದ್ರಾವಿಡ್ ಅವರು ಹ್ಯಾಮಿಲ್ಟನ್ನಿನಲ್ಲಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟಿನಲ್ಲಿ ಆಸ್ಟ್ರೇಲಿಯಾದ ಮಾರ್ಕ್ ವಾ ಅವರ ಅತಿ ಹೆಚ್ಚು 181 ಟೆಸ್ಟ್ ಕ್ಯಾಚುಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದರು.

2009: ಬೆಂಗಳೂರಿನ ಕೃಷ್ಣರಾಜಪುರ ರೈಲ್ವೆ ನಿಲ್ದಾಣ ಬಳಿಯಲ್ಲಿ ನಿರ್ಮಾಣಗೊಂಡಿರುವ ತೂಗುಸೇತುವೆಯು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಎಂಜಿನಿಯರ್ಸ್‌ ಸಂಸ್ಥೆ ನೀಡುವ ಅತ್ಯುತ್ತಮ ರಾಷ್ಟ್ರೀಯ ಸೇತುವೆ ಪ್ರಶಸ್ತಿಗೆ ಪಾತ್ರವಾಯಿತು.

ಪ್ರಮುಖಜನನ/ಮರಣ:

1828: ನೊಬೆಲ್ ಶಾಂತಿ ಪುರಸ್ಕೃತ ಇಂಗ್ಲಿಷ್ ಕಾರ್ಯಕರ್ತ ಮತ್ತು ರಾಜಕಾರಣಿ ರಾಂಡಲ್ ಕ್ರೀಮರ್ ಅವರು ಇಂಗ್ಲೆಂಡಿನಲ್ಲಿ ಜನಿಸಿದರು. ‘ಇಂಟರ್ನ್ಯಾಶನಲ್ ಆರ್ಬಿಟ್ರೇಶನ್ ಮೂವ್ಮೆಂಟ್’ನಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1858: ಡೀಸೆಲ್ ಇಂಜಿನ್ ಸಂಶೋಧಿಸಿದ ರುಡಾಲ್ಫ್ ಡೀಸೆಲ್ ಅವರು ಜರ್ಮನಿಯಲ್ಲಿ ಜನಿಸಿದರು.

1891: ಸಮಾಜ ಸೇವಕ, ಬರಹಗಾರ, ವೈದ್ಯ, ಯೋಗಿ, ಶತಾಯುಷಿ ರಾಘವೇಂದ್ರ ಸ್ವಾಮಿ ಅವರು ಕೇರಳದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು. ‘ತಿರುಕ’ ಇವರ ಕಾವ್ಯನಾಮದ ಇವರು ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿ ತಮ್ಮ ಶಿಷ್ಯರೊಡಗೂಡಿ ದುಡಿಮೆ ಮಾಡುತ್ತಿದ್ದು ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟು ಅವರ ರೋಗಗಳನ್ನು ನಿವಾರಿಸಿದರು. ಮಲ್ಲಾಡಿಹಳ್ಳಿಯಲ್ಲಿ ಅನಂತ ಸೇವಾಶ್ರಮವನ್ನು ಸ್ಥಾಪಿಸಿದರು. ಇವರು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಮುಂದೆ ಮಾಡಿದ ಯಾವುದೇ ಪ್ರಶಸ್ತಿಗಳನ್ನೂ ಸ್ವೀಕರಿಸಲಿಲ್ಲ.

1936: ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಕೊನೆಗಾಣಿಸಿದ ಎಫ್.ಡಬ್ಲ್ಯೂ. ಡಿ. ಕ್ಲರ್ಕ್ ಅವರು ಜೋಹಾನ್ಸ್ ಬರ್ಗ್ ನಗರದಲ್ಲಿ ಜನಿಸಿದರು. ಇವರು ತಮ್ಮ ರಾಷ್ಟ್ರದಲ್ಲಿ ವರ್ಣಭೇದ ನೀತಿಯನ್ನು ಕೊನೆಗೊಳಿಸಿ ಬಹುಸಂಖ್ಯಾತರಿಗೆ ಸಂಧಾನದ ಮೂಲಕ ಆಡಳಿತ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದರು. ಈ ಮಹಾನ್ ಸಾಧನೆಗಾಗಿ ಅವರಿಗೆ 1993ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು.

1938: ಪ್ರಖ್ಯಾತ ನಟ, ನಿರ್ಮಾಪಕ ಶಶಿಕಫೂರ್ ಕೋಲ್ಕತ್ತಾದಲ್ಲಿ ಜನಿಸಿದರು. ಉತ್ತಮ ನಟನೆ, ಉತ್ತಮ ಚಿತ್ರ ನಿರ್ಮಾಣಗಳಿಗೆ ರಾಷ್ಟ್ರೀಯ ಪ್ರಶಸ್ತಿಯೇ ಅಲ್ಲದೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿಯೂ ಇವರಿಗೆ ಸಂದಿದೆ.

1871: ಭಾರತದಲ್ಲಿ ಜನಿಸಿದ ಇಂಗ್ಲಿಷ್ ಗಣಿತಜ್ಞ ಅಗಸ್ಟಸ್ ಡಿ ಮೊರ್ಗಾನ್ ಲಂಡನ್ನಿನಲ್ಲಿ ನಿಧನರಾದರು.

1947: ಜನರಲ್ ಮೋಟಾರ್ಸ್ ಮತ್ತು ಚೆವ್ರೋಲೆಟ್ ಸಹ ಸಂಸ್ಥಾಪಕ ವಿಲಿಯಮ್ ಸಿ. ಡುರಾಂಟ್ ಅವರು ನ್ಯೂಯಾರ್ಕ್ನಲ್ಲಿ ನಿಧನರಾದರು.

1996: ನೊಬೆಲ್ ಪುರಸ್ಕೃತ ಗ್ರೀಕ್ ಸಾಹಿತಿ ಒಡಿಸ್ಸಿಯಾಸ್ ಎಲೈಟಿಸ್ ಅವರು ಅಥೆನ್ಸ್ ನಗರದಲ್ಲಿ ನಿಧನರಾದರು.

2007: ಭಾರತದಲ್ಲಿ ಜನಿಸಿದ ಇಂಗ್ಲಿಷ್ ಕ್ರಿಕೆಟ್ ಆಟಗಾರ ಮತ್ತು ತರಬೇತುದಾರ ಬಾಬ್ ವುಲ್ಮರ್ ಅವರು ಜಮೈಕಾದಲ್ಲಿ ನಿಧನರಾದರು.