Categories
e-ದಿನ

ಮಾರ್ಚ್-19

ಪ್ರಮುಖಘಟನಾವಳಿಗಳು:

1649: ‘ಹೌಸ್ ಆಫ್ ಲಾರ್ಡ್ಸ್’ ಅನ್ನು ಅನುಪಯೋಗಿ ಮತ್ತು ಇಂಗ್ಲೆಂಡಿನ ಜನರಿಗೆ ಮಾರಕವಾದದ್ದು ಎಂದು ಘೋಷಿಸಿದ ‘ಹೌಸ್ ಆಫ್ ಕಾಮನ್ಸ್’ ಅದನ್ನು ರದ್ದುಗೊಳಿಸುವ ಕಾಯಿದೆಯನ್ನು ಜಾರಿಗೊಳಿಸಿತು.

1687: ಮಿಸಿಸಿಪಿ ನದಿಯ ಬಾಯಿಯನ್ನು ಹುಡುಕುತ್ತಿದ್ದ ಅನ್ವೇಷಕರಾದ ರಾಬರ್ಟ್ ಕಾವೆಲಿಯರ್ ಅವರನ್ನು ಆತನ ಜನರು ಕೊಂದುಹಾಕಿದರು.

1863: ಅಮೆರಿಕದ ಒಕ್ಕೂಟದ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಯಾದ ‘ಎಸ್.ಎಸ್ ಜಾರ್ಜೀನಿಯಾ’ ಹಡಗು ಅಂದಿನ ಕಾಲದಲ್ಲಿನ ಒಂದು ಮಿಲಿಯನ್ ಡಾಲರಿಗೂ ಹೆಚ್ಚು ಮೌಲ್ಯದ ಯುದ್ಧ ಸಾಮಗ್ರಿಗಳು, ಔಷಧಗಳು ಮತ್ತು ಆಹಾರ ಪದಾರ್ಥಗಳೊಂದಿಗೆ ತನ್ನ ಮೊದಲ ಯಾನದಲ್ಲೇ ನಾಶಗೊಂಡಿತು.

1895: ಅಗಸ್ಟೆ ಮ್ಮತ್ತು ಲೂಯಿ ಲುಮಿಯೆರೆ ಅವರು ತಾವು ಪೇಟೆಂಟ್ ಪಡೆದ ಸಿನಿಮಾಟೋಗ್ರಾಫ್ ಮೂಲಕ ತಮ್ಮ ನಡೆಯನ್ನು ಚಿತ್ರೀಕರಿಸಿಕೊಂಡರು

1918: ಅಮೆರಿಕದ ಕಾಂಗ್ರೆಸ್ ಟೈಮ್ ಜೋನ್ಗಳನ್ನು ಅಳವಡಿಸಿ ‘ಡೇಲೈಟ್ ಸೇವಿಂಗ್ ಟೈಮ್’ ಅನ್ನು ಅಂಗೀಕರಿಸಿತು

1932:ಸಿಡ್ನಿ ಹಾರ್ಬರ್ ಬ್ರಿಡ್ಜ್ ಸಂಚಾರಕ್ಕೆ ಮುಕ್ತವಾಯಿತು

1945: ಎರಡನೇ ವಿಶ್ವಮಹಾಯುದ್ಧದಲ್ಲಿ ಜಪಾನಿನ ಡೈವರ್ ಬಾಂಬಿನೇಟು ತಿಂದ ‘ಏರ್ ಕ್ರಾಫ್ಟ್ ಕ್ಯಾರಿಯರ್ ಫ್ರಾಂಕ್ಲಿನ್’ನಲ್ಲಿದ್ದ 724 ಜನ ಮೃತರಾದರು. ತೀವ್ರವಾಗಿ ಜಖಂಗೊಂಡಿದ್ದರೂ ಈ ಹಡಗು ತನ್ನದೇ ಆದ ಶಕ್ತಿಯಲ್ಲಿ ಅಮೆರಿಕಕ್ಕೆ ಹಿಂದಿರುಗಿತು

1945: ಹುಚ್ಚು ಆಜ್ಞೆಯ ‘ನೀರೋ ಡಿಕ್ರಿ’ಯನ್ನು ಹೊರಡಿಸಿದ ಅಡೋಲ್ಫ್ ಹಿಟ್ಲರ್ ಜರ್ಮನಿಯ ಎಲ್ಲ ಕೈಗಾರಿಕೆಗಳು, ಮಿಲಿಟರಿ ನೆಲೆಗಳು, ಅಂಗಡಿಗಳು, ಸಂಚಾರ ಮತ್ತು ಸಂಪರ್ಕ ವ್ಯವಸ್ಥೆಗಳೆಲ್ಲವನ್ನೂ ನಾಶಗೊಳಿಸಲು ಆದೇಶಿಸಿದ

1954: ವಿಲ್ಲಿ ಮಾಸ್ಕೊನಿ ಎಂಬಾತ ಓಹಿಯೋದ ಸ್ಪ್ರಿಂಗ್ ಫೀಲ್ಡ್ ಎಂಬಲ್ಲಿನ ಈಸ್ಟ್ ಹೈ ಬಿಲಿಯರ್ಡ್ ಕ್ಲಬ್ಬಿನ ಪ್ರದರ್ಶನ ಪಂದ್ಯವೊಂದರಲ್ಲಿ ಒಂದಾದ ನಂತರ ಮತ್ತೊಂದು ಎಂಬಂತೆ ನಿರಂತರವಾಗಿ 526 ಚೆಂಡುಗಳನ್ನು ಉರುಳಿಸಿದ ಅನನ್ಯ ಸಾಧನೆಯ ವಿಶ್ವದಾಖಲೆ ಮೆರೆದರು.

1965: ಕಡಲಾಳದಲ್ಲಿನ ಸಂಚಾರ ಸಾಹಸಿ ಮತ್ತು ಪುರಾತತ್ವ ಸಂಶೋಧನೆಯಲ್ಲಿ ಪ್ರಸಿದ್ಧರಾದ ಈ ಲೀ ಸ್ಪೆನ್ಸ್ ಅವರು ಇದೇ ದಿನದಂದು 102 ವರ್ಷಗಳ ಹಿಂದೆ ಭಗ್ನಗೊಂಡಿದ್ದ ಸುಮಾರು 50 ಮಿಲಿಯನ್ ಡಾಲರ್ ಮೌಲ್ಯವುಳ್ಳದೆಂದು ಅಂದಾಜಿಸಲಾಗಿರುವ ಅಮೆರಿಕನ್ ಒಕ್ಕೂಟದ ಶಕ್ತಿಶಾಲಿ ಕನ್ಫೆಡರೇಟ್ ಹಡಗಿನ ಅವಶೇಷಗಳನ್ನು ಪತ್ತೆಹಚ್ಚಿದರು.

1971: ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸರ್ಕಾರವು ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲ ಜಿ.ಎಸ್. ಪಾಠಕ್ ಅವರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದರು. ಮಾರ್ಚ್ 1972ರ ವರೆಗೆ ರಾಷ್ಟ್ರಪತಿಗಳ ಆಳ್ವಿಕೆ ಮುಂದುವರೆಯಿತು.

2001: ವೆಸ್ಟ್ ಇಂಡೀಸಿನ ವೇಗದ ಬೌಲರ್ ಕರ್ಟ್ನಿ ವಾಲ್ಷ್ ಅವರು 500 ವಿಕೆಟ್ ಗಳಿಸಿದ ವಿಶ್ವದ ಪ್ರಥಮ ಬೌಲರ್ ಎನಿಸಿದರು. ಟ್ರಿನಿಡಾಡಿನ ಪೋರ್ಟ್ ಆಫ್ ಸ್ಪೇನಿನಲ್ಲಿ ದಕ್ಷಿಣ ಆಫ್ರಿಕದ ಜಾಕ್ ಕಾಲಿಸ್ ಅವರನ್ನು ಔಟ್ ಮಾಡಿ ಅವರು ಈ ಸಾಧನೆ ಮೆರೆದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಜಯ್ ಪೆಂಬಾ ತಮಾಂಗ್ ಅವರಿಗೆ ಶೂಟಿಂಗ್ 25 ಮೀ. ರಾಪಿಡ್ ಫೈರ್ ಪಿಸ್ತೂಲ್ ಪೇರ್ಸ್ ಬಂಗಾರ, ರಾಜ್ಯವರ್ಧನ್ ಸಿಂಗ್ ರಾಥೋಡ್ – ವಿಕ್ರಮ್ ಭಟ್ನಾಗರ್ ಅವರಿಗೆ ಡಬಲ್ ಟ್ರ್ಯಾಪ್ ಫೇರ್ಸ್ ರಜತ, ಅಂಜಲಿ ಭಾಗ್ವತ್ – ಅನುಜಾ ಜಂಗ್ ಅವರಿಗೆ 50 ಮೀ. ರೈಫಲ್ ಮೂರು ಭಂಗಿ ಫೇರ್ಸಿನಲ್ಲಿ ಎರಡನೇ ಸ್ಥಾನ, ವೇಟ್ ಲಿಫ್ಟಿಂಗಿನಲ್ಲಿ ಮೊಹಮ್ಮದ್ ಜಾಕೀರ್ ಅಸುದುಲ್ಲಾ ಅವರಿಗೆ ಪುರುಷರ 77 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದವು.

2007: ಸೇಂಟ್ ಲೂಸಿಯಾದಲ್ಲಿ ನಡೆದ ಐಸಿಸಿ ವಿಶ್ವಕಪ್ನಲ್ಲಿ ಏಕದಿನ ಪಂದ್ಯಗಳ ಇತಿಹಾಸದಲ್ಲೇ ಗರಿಷ್ಠ ರನ್ (257) ಅಂತರದ ಜಯ ಗಳಿಸುವ ಮೂಲಕ ಭಾರತ ದಾಖಲೆ ಸೃಷ್ಟಿಸಿತು. ಇದರ ಜೊತೆಗೇ ವಿಶ್ವ ಕಪ್ ಕ್ರಿಕೆಟಿನಲ್ಲೇ ಅತಿ ಹೆಚ್ಚು ಮೊತ್ತ (413), ಕೊನೆಯ 10 ಓವರುಗಳಲ್ಲಿ 136 ರನ್ ಗಳಿಕೆಯ ದಾಖಲೆಗಳನ್ನೂ ಭಾರತ ನಿರ್ಮಿಸಿತು. ವಿಶ್ವದ ಮಹಾ ಕ್ರಿಕೆಟ್ ಸಮರಗಳಲ್ಲಿ 25 ಸಿಕ್ಸರ್ ಸಿಡಿಸಿದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟುವ ಮೂಲಕ ಸೌರವ ಗಂಗೂಲಿ ಇನ್ನೊಂದು ದಾಖಲೆ ಸೃಷ್ಟಿಸಿದರು. ಒಂದೇ ಪಂದ್ಯದಲ್ಲಿ 18 ಸಿಕ್ಸರ್ ಗಳಿಸಿದ ದಕ್ಷಿಣ ಆಫ್ರಿಕದ ದಾಖಲೆಯನ್ನೂ ಭಾರತ ಸರಿಗಟ್ಟಿತು.

2007: ಇರಾಕಿನಲ್ಲಿ ಸುಮಾರು 148 ಮಂದಿ ಶಿಯಾಗಳನ್ನು ಹತ್ಯೆ ಮಾಡಿದ ಅಪರಾಧಕ್ಕಾಗಿ, ಸದ್ದಾಮ್ ಹುಸೇನರ ಮಾಜಿ ಸಹಾಯಕರಾಗಿದ್ದ ತಾಹಾ ಯಾಸಿನ್ ರಂಜಾನ್ ಅವರನ್ನು ಬಾಗ್ದಾದಿನಲ್ಲಿ ಬೆಳಗಿನ ಜಾವ ಗಲ್ಲಿಗೇರಿಸಲಾಯಿತು.

2007: ದಕ್ಷಿಣ ರಷ್ಯಾದ ಗ್ರಾಮವೊಂದರ ವೃದ್ಧಾಶ್ರಮದಲ್ಲಿ ಮಧ್ಯರಾತ್ರಿ ಅಗ್ನಿ ಅನಾಹುತ ಸಂಭವಿಸಿ 63 ಹಿರಿಯ ನಾಗರಿಕರು ಮೃತರಾಗಿ, 33 ಮಂದಿ ಗಾಯಗೊಂಡರು.

2007: ಅಮೆರಿಕದ ಉತ್ತರ ನೆವಾಡಾ ರಾಜ್ಯದ ಅಧಿವೇಶನವು ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಗೊಂಡಿತು. ಉತ್ತರ ನೆವಾಡಾದ ಹಿಂದೂ ದೇವಾಲಯದ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕ ರಾಜನ್ ಜೆದ್ ವಿಧಾನಸಭೆಯ ಆರಂಭದಲ್ಲಿ ಗಾಯತ್ರಿ ಮಂತ್ರ ಪಠಿಸಿದರು. ನಂತರ ಉಪನಿಷತ್ತಿನಿಂದಲೂ ಕೆಲವು ಶ್ಲೋಕಗಳನ್ನು ಪ್ರಸ್ತುತ ಪಡಿಸಿದರು.

2008: ಭಾರತದ ಉಪಪ್ರಧಾನಿಗಳಾಗಿದ್ದ ಹಿರಿಯ ರಾಜಕಾರಣಿ ಎಲ್.ಕೆ. ಅಧ್ವಾನಿ ಅವರ `ಮೈ ಕಂಟ್ರಿ, ಮೈ ಲೈಫ್’ ಪುಸ್ತಕ ಬಿಡುಗಡೆಗೊಂಡಿತು. ಇದಕ್ಕೆ ಅಧ್ವಾನಿ ಅವರ ಹಲವಾರು ವರ್ಷಗಳ ಸಹಚಾರಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮುನ್ನುಡಿ ಬರಿದಿದ್ದಾರೆ.

2008: “ಭ್ರಷ್ಟಾಚಾರವುಳ್ಳ ವಿಶ್ವದ 180 ರಾಷ್ಟ್ರಗಳಲ್ಲಿ ಭಾರತವು 72ನೇ ಸ್ಥಾನದಲ್ಲಿದೆ” ಎಂದು ‘ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ’ ಇತ್ತೀಚೆಗೆ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಗ್ರಹಿಕೆ ವಿಷಯಸೂಚಿ ವರದಿ ತಿಳಿಸಿದೆ. ಈ ವಿಚಾರವು ಇಂದು ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿತು.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಫಾಹ್ಮಿದಾ ಮಿರ್ಜಾ ಅವರು ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಯ 60 ವರ್ಷಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಮಹಿಳಾ ಸಭಾಧ್ಯಕ್ಷರಾಗಿ ಆಯ್ಕೆಯಾದರು.

2008: ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1968′ ತಿದ್ದುಪಡಿಗೆ ರಾಜ್ಯ ಸರ್ಕಾರದ ಅನುಮೋದನೆ ದೊರಕಿ ರಾಜ್ಯದಾದ್ಯಂತ ಜಾರಿಗೆ ಬಂದಿತು.

2009: 1975ರ ನಂತರ ಇದೇ ಮೊದಲ ಬಾರಿಗೆ ಹಣದುಬ್ಬರ ಶೇ.0.44 ಮಟ್ಟಕ್ಕೆ ಕುಸಿಯಿತು. ಬಹುತೇಕ ಆಹಾರ ವಸ್ತುಗಳ ಬೆಲೆಗಳಲ್ಲಿ ಇಳಿಕೆ ಆಗದಿದ್ದರೂ ಹಣದುಬ್ಬರ ಇಳಿಯುವುದು ಮುಂದುವರಿಯಿತು. ಆರ್ಥಿಕತೆ ತೀವ್ರತರದ ಹಿಂಜರಿತಕ್ಕೆ ಸಿಲುಕಲಿದೆ ಎಂಬ ಭೀತಿಯನ್ನು ಇದು ಹುಟ್ಟುಹಾಕಿತು.

2009: ಪಾನೀಯ ಮತ್ತು ಆಹಾರ ತಯಾರಿಕಾ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಬಳಸಿದ ವಿವಿಧ ಬಗೆಯ ಪದಾರ್ಥಗಳ ಬಗ್ಗೆ ವಿವರಣೆ ನೀಡುವುದನ್ನು ಕಡ್ಡಾಯಗೊಳಿಸಿದ ಭಾರತ ಸರ್ಕಾರದ ನೂತನ ಆಹಾರ ಸುರಕ್ಷತಾ ಕಾನೂನು ಜಾರಿಗೊಂಡಿತು.

2009: ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರಿಮ್ ತೆಲಗಿಗೆ ಅಹಮದಾಬಾದಿನ ಸಿಬಿಐ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಪ್ರಮುಖಜನನ/ಮರಣ:

1821: ಇಂಗ್ಲಿಷ್ ವಿದ್ವಾಂಸ, ಪ್ರವಾಸಿ ಮತ್ತು ಸಂಶೋಧಕ ಸರ್ ರಿಚರ್ಡ್ ಫ್ರಾನ್ಸಿಸ್ ಬರ್ಟನ್ ಅವರು ಇಂಗ್ಲೆಂಡಿನ ಡೆವೋನ್ ಬಳಿಯ ಟಾರ್ಕ್ವೇ ಎಂಬಲ್ಲಿ ಜನಿಸಿದರು. ‘ದಿ ಅರೇಬಿಯನ್ ನೈಟ್ಸ್’ ನ ಭಾಷಾಂತರವನ್ನು ಪ್ರಕಟಿಸಿದ ಇವರಿಗೆ ಯೂರೋಪ್, ಏಷ್ಯಾ ಮತ್ತು ಆಫ್ರಿಕಾದ 29 ಭಾಷೆಗಳ ಅದ್ಭುತ ಜ್ಞಾನವಿತ್ತು.

1876: 1920ರ ವರ್ಷದಲ್ಲಿ ಸಿಂಧೂ ಕಣಿವೆ ನಾಗರೀಕತೆಯ ಪ್ರದೇಶಗಳಾದ ಹರಪ್ಪ ಮತ್ತು ಮೊಹೆಂಜದಾರೋ ಉತ್ಖನನಕ್ಕೆ ಕಾರಣರಾದ ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಅವರು ಇಂಗ್ಲೆಂಡಿನ ಚೆಶೈರ್ ಬಳಿಯ ಚೆಸ್ಟರ್ ಎಂಬಲ್ಲಿ ಜನಿಸಿದರು. ಭಾರತೀಯ ಪುರಾತತ್ವ ಇಲಾಖೆಯಲ್ಲಿ 1920-31 ಅವಧಿಯಲ್ಲಿ ಇವರು ಡೈರೆಕ್ಟರ್ ಜನರಲ್ ಆಗಿದ್ದರು.

1883: ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ನಾರ್ಮನ್ ಹಾವೊರ್ಥ್ ಅವರು ಇಂಗ್ಲೆಂಡಿನ ಲಂಕಾಶೈರ್ ಬಳಿಯ, ಕೋರ್ಲಿ ಎಂಬಲ್ಲಿ ಜನಿಸಿದರು. “ವಿಟಮಿನ್ ‘ಸಿ’ಯಲ್ಲಿ ಕಾರ್ಬೋ ಹೈಡ್ರೇಟ್ಸ್” ಕುರಿತಾದ ಸಂಶೋಧನೆಗೆ ಇವರಿಗೆ 1937 ವರ್ಷದಲ್ಲಿ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತು.

1900: ಫ್ರೆಂಚ್ ವೈದ್ಯ ಶಾಸ್ತ್ರ್ರಜ್ಞ ಫ್ರೆಡೆರಿಕ್ ಜೋಲಿಯಟ್ ಕ್ಯೂರಿ ಅವರು ಪ್ಯಾರಿಸ್ನಲ್ಲಿ ಜನಿಸಿದರು. ಇವರು ಮತ್ತು ಇವರ ಪತ್ನಿ ಐರೀನ್ ಕ್ಯೂರಿ ಅವರಿಬ್ಬರಿಗೂ ಜಂಟಿಯಾಗಿ 1935ರ ವರ್ಷದಲ್ಲಿ ‘ಆರ್ಟಿಫಿಸಿಯಲ್ ರೆಡಿಯೋ ಆಕ್ಟಿವಿಟಿ’ ಕುರಿತಾದ ಸಂಶೋಧನೆಗಾಗಿ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1912: ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ವೇಷಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ವಾಸುದೇವ ಗಿರಿಮಾಜಿ ಜನಿಸಿದರು. ರಂಗಭೂಮಿ ನಟನೆಯೊಂದಿಗೆ ಸಿನಿಮಾದೊಂದಿಗೂ ಇವರಿಗೆ ನಂಟು ಬೆಳೆದು ಕನ್ನಡ, ಹಿಂದಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದರಲ್ಲದೆ ನಾಯಕ, ಖಳನಾಯಕ ಪಾತ್ರಗಳನ್ನೂ ನಿರ್ವಹಿಸಿದ್ದರು.

1943: ಮೆಕ್ಸಿಕನ್ ರಸಾಯನ ಶಾಸ್ತ್ರಜ್ಞ ಮಾರಿಯೋ ಜೆ. ಮೊಲಿನಾ ಅವರು ಮೆಕ್ಸಿಕೋ ನಗರದಲ್ಲಿ ಜನಿಸಿದರು. ‘ಓಜೋನ್ ಲೇಯರ್ಗಳಲ್ಲಿ ಕ್ಲೋರೋಫ್ಲೋರ್ ಕಾರ್ಬನ್ ಗ್ಯಾಸ್ಗಳಿಂದ ಆಗುವ ಬದಲಾವಣೆಗಳ ಬಗ್ಗೆ ಗಮನ ಸೆಳೆದ’ ಇವರ ಸಂಶೋಧನೆಗಳಿಗಾಗಿ ಇವರಿಗೆ 1995 ವರ್ಷದಲ್ಲಿ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತು.

1950: ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ನಾರ್ಮನ್ ಹಾವೊರ್ಥ್ ಅವರು ಇಂಗ್ಲೆಂಡಿನ ವೋರ್ಸೆಸ್ಟ್ಶೈರ್ ಪ್ರದೇಶದ ಬಾರ್ನ್ಟ್ ಗ್ರೀನ್ ಎಂಬಲ್ಲಿ ನಿಧನರಾದರು. “ವಿಟಮಿನ್ ‘ಸಿ’ಯಲ್ಲಿ ಕಾರ್ಬೋ ಹೈಡ್ರೇಟ್ಸ್” ಕುರಿತಾದ ಸಂಶೋಧನೆಗೆ ಇವರಿಗೆ 1937 ವರ್ಷದಲ್ಲಿ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತು.

1978: ಭಾರತದ ನ್ಯಾಯವಾದಿ ಮತ್ತು ಲೋಕಸಭೆಯ ಎರಡನೇ ಅಧ್ಯಕ್ಷರಾಗಿದ್ದ ಎಂ. ಎ. ಅಯ್ಯಂಗಾರ್ ಅವರು ಆಂಧ್ರಪ್ರದೇಶದ ತಿರುಪತಿಯಲ್ಲಿ ನಿಧನರಾದರು. ಅವರು ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

1982: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಂಸದೀಯ ಪಟು, ಕಿಸಾನ್ ಮಜ್ದೂರ್ ದಳ ಸ್ಥಾಪಕರಾದ ಜೆ.ಬಿ. ಕೃಪಲಾನಿ ಅವರು ತಮ್ಮ 93ನೇ ವಯಸ್ಸಿನಲ್ಲಿ ಅಹಮದಾಬಾದಿನಲ್ಲಿ ನಿಧನರಾದರು.

1987: ಫ್ರೆಂಚ್ ಭೌತವಿಜ್ಞಾನಿ ಲೂಯಿ ಡಿ ಬ್ರೊಗಿಲೆ ಅವರು ಫ್ರಾನ್ಸಿನ ಲೊವೀಸಿಯೆನ್ನೆಸ್ ಎಂಬಲ್ಲಿ ನಿಧನರಾದರು. ‘ವೇವ್ ಲೈಕ್ ಬಿಹೇವಿಯರ್ ಆಫ್ ಮ್ಯಾಟರ್’ ಕುರಿತಾಗಿ ಪ್ರಾತ್ಯಕ್ಷಿಕೆಯ ರೂಪದಲ್ಲಿ ನಿರೂಪಣೆಗೈದ ಇವರಿಗೆ 1929 ವರ್ಷದಲ್ಲಿ ಭೌತವಿಜ್ಞಾನದ ನೊಬೆಲ್ ಪುರಸ್ಕಾರ ಸಂದಿತು.

1998: ಕೇರಳದ ಪ್ರಥಮ ಮುಖ್ಯಮಂತ್ರಿಗಳೂ, ಭಾರತದ ಕಮ್ಮ್ಯೂನಿಸ್ಟ್ ಮಾರ್ಕ್ಸಿಸ್ಟ್ ಪಕ್ಷದ ನಾಯಕರೂ ಮತ್ತು ಬರಹಗಾರರೂ ಆದ ಇ.ಎಮ್.ಎಸ್. ನಂಬೂದರಿಪಾದ್ ಅವರು ತಿರುವನಂತಪುರದಲ್ಲಿ ನಿಧನರಾದರು.

2007: ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಬೆಂಗಳೂರಿನಲ್ಲಿ ನಿಧನರಾದರು. ವಿಜಾಪುರ ಜಿಲ್ಲೆಯ ಇಂಡಿ ಎಂಬಲ್ಲಿ ಜನಿಸಿದ್ದ ಇವರಿಗೆ ಕರ್ನಾಟಕ ಸಾಹಿತ್ಯ ಆಕಾಡೆಮಿಯ ಕೃತಿ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿಗಳು ಸಂದಿದ್ದವು. ಧಾರವಾಡದ ಮನೋಹರ ಗ್ರಂಥಮಾಲೆಯು ಖಾಸನೀಸರ ಎಲ್ಲ ಕಥೆಗಳನ್ನು ಸೇರಿಸಿ ‘ಸಮಗ್ರ ಕಥೆಗಳನ್ನು’ ಪ್ರಕಟಿಸಿದೆ.

2008: ವೈಜ್ಞಾನಿಕ ಕಲ್ಪನೆಗಳ ಜಗತ್ಪ್ರಸಿದ್ಧ ಇಂಗ್ಲಿಷ್ ಕಥೆಗಾರ ಸರ್ ಆರ್ಥರ್ ಚಾರ್ಲ್ಸ್ ಕ್ಲಾರ್ಕ್ ತಮ್ಮ 90ನೇ ವಯಸ್ಸಿನಲ್ಲಿ ಕೊಲೊಂಬೋದಲ್ಲಿ ನಿಧನರಾದರು.

2008: ದಕ್ಷಿಣ ಭಾರತದ ಜನಪ್ರಿಯ ಬಹುಭಾಷಾ ಚಲನಚಿತ್ರ ನಟ ರಘುವರನ್ ತಮ್ಮ 60ನೇ ವಯಸ್ಸಿನಲ್ಲಿ ಚೆನ್ನೈಯಲ್ಲಿ ನಿಧನರಾದರು. ಇವರು ಬಹಳಷ್ಟು ತಮಿಳು, ತೆಲುಗು, ಕನ್ನಡ, ಮಲೆಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ವೈವಿಧ್ಯಪೂರ್ಣ ಪಾತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದರು.