Categories
e-ದಿನ

ಮಾರ್ಚ್-21

ಪ್ರಮುಖಘಟನಾವಳಿಗಳು:

1788: ನ್ಯೂ ಆರ್ಲಿಯಾನ್ಸ್ ಪಟ್ಟಣವು ಬೆಂಕಿಗೆ ಸಿಲುಕಿ ಬಹುತೇಕ ಪಟ್ಟಣವು ಅವಶೇಷವಾಗುಳಿಯಿತು

1791: ಲಾರ್ಡ್ ಕಾರ್ನವಾಲಿಸ್ ಬೆಂಗಳೂರನ್ನು ವಶಪಡಿಸಿಕೊಂಡ. ಮೂರನೇ ಮೈಸೂರು ಯುದ್ಧದ ಸಮಯದಲ್ಲಿ ಈ ಘಟನೆ ಸಂಭವಿಸಿತು.

1844: ಬಹಾಯ್ ಕ್ಯಾಲೆಂಡರ್ ಪ್ರಾರಂಭಗೊಂಡು, ಈ ದಿನವು ಆ ಕ್ಯಾಲೆಂಡರಿನ ಪ್ರಥಮ ದಿನವೆನಿಸಿತು

1861: ಅಲೆಗ್ಸಾಂಡರ್ ಸ್ತೀಫನ್ಸ್ ಅವರು ಜಾರ್ಜಿಯಾದ ಸವನ್ನಾದಲ್ಲಿ ‘ಕಾರ್ನರ್ಸ್ಟೋನ್ ಸ್ಪೀಚ್’ ಎಂದು ಪ್ರಸಿದ್ಧವಾಗಿರುವ ಭಾಷಣವನ್ನು ಮಾಡಿದರು.

1946: ಆಫ್ರಿಕನ್–ಅಮೇರಿಕನ್ ಆಟಗಾರ ಕೆನ್ನಿ ವಾಷಿಂಗ್ಟನ್ ಅವರನ್ನು ಲಾಸ್ ಎಂಜೆಲಿಸ್ ರಾಮ್ಸ್ ತಂಡವು ತನ್ನ ಪರವಾಗಿ ಆಡಲು ಕರಾರು ಮಾಡಿಕೊಂಡಿತು. ಇವರು ಅಮೆರಿಕದ ಫುಟ್ಬಾಲ್ ಕ್ರೀಡೆಯ ಇತಿಹಾಸದಲ್ಲಿ 1933ರಿಂದೀಚೆಗೆ ಆಡಿದ ಪ್ರಥಮ ಆಫ್ರಿಕನ್-ಅಮೇರಿಕನ್ ಕ್ರೀಡಾಳುವಾಗಿದ್ದಾರೆ.

1965: ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ತಮ್ಮ ಮೂರನೆಯ ಮತ್ತು ಕೊನೆಯ ಯಶಸ್ವೀ ನಾಗರಿಕ ಹಕ್ಕುಗಳ ಹೋರಾಟದ ಮೆರವಣಿಯನ್ನು ಸೆಲ್ಮಾದಿಂದ ಅಲಬಾಮಾದ ಮಾಂಟಗೋಮೇರಿ ವರೆಗೆ ನಡೆಸಿದರು. ಇದರಲ್ಲಿ 3,200 ಜನರು ಭಾಗವಹಿಸಿದ್ದರು.

1980: ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ಸೋವಿಯತ್ ಯೂನಿಯನ್ನಿನ ಆಫ್ಘನ್ ಯುದ್ಧಕ್ಕೆ ಪ್ರತಿಭಟನೆಯಾಗಿ 1980ರ ಮಾಸ್ಕೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಮ್ಮ ದೇಶದ ಬಹಿಷ್ಕಾರವನ್ನು ಪ್ರಕಟಿಸಿದರು.

1986: ಡೆಬಿ ಥಾಮಸ್ ಅವರು ವಿಶ್ವ ಫಿಗರ್ ಸ್ಕೇಟಿಂಗ್ ಚಾಂಪಿಯನ್ಷಿಪ್ ಗೆದ್ದ ಪ್ರಥಮ ಆಫ್ರಿಕನ್ ಅಮೆರಿಕನ್ ಎನಿಸಿದರು

2006: ಅಂತರಜಾಲ ಸಾಮಾಜಿಕ ಮಾಧ್ಯಮವಾದ ‘ಟ್ವಿಟ್ಟರ್’ ಸ್ಥಾಪನೆಗೊಂಡಿತು

2007: ವೃದ್ಧರು ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಪಾಲಕರ ರಕ್ಷಣೆಗಾಗಿ ಲೋಕಸಭೆಯಲ್ಲಿ ‘ಹಿರಿಯ ನಾಗರಿಕರ ಮಸೂದೆ-2007’ನ್ನು ಸರ್ಕಾರ ಮಂಡಿಸಿತು. ಇದರ ಪ್ರಕಾರ 60 ವರ್ಷಕ್ಕೂ ಮೇಲ್ಪಟ್ಟ ತಂದೆ-ತಾಯಿಗಳನ್ನು ಕಡೆಗಣಿಸುವವರಿಗೆ 5000 ರೂಪಾಯಿ ದಂಡ ಅಥವಾ ಮೂರು ತಿಂಗಳು ಸೆರೆಮನೆವಾಸ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

2008: ಖ್ಯಾತ ಕಲಾವಿದ ಎಂ. ಎಫ್. ಹುಸೇನ್ ಅವರು ರಚಿಸಿದ ಸಮಕಾಲೀನ ಭಾರತದ ಕಲಾಕೃತಿಯು ನ್ಯೂಯಾರ್ಕಿನಲ್ಲಿ 1.6 ದಶಲಕ್ಷ ಅಮೆರಿಕ ಡಾಲರಿಗೆ ಹರಾಜಾಗುವುದರೊಂದಿಗೆ ದಾಖಲೆ ಬೆಲೆ ಕಂಡಿತು. ಹುಸೇನ್ ಅವರ ವಿವಾದಾತ್ಮಕ ಕೃತಿಗಳ ಬಗ್ಗೆ ಹರಾಜು ನಡೆದ ಕಟ್ಟಡದ ಹೊರ ಭಾಗದಲ್ಲಿ ಭಾರಿ ಪ್ರತಿಭಟನೆಯೂ ನಡೆಯಿತಾದರೂ ಅನಾಮಧೇಯ ವ್ಯಕ್ತಿಯೊಬ್ಬರು ‘ಬ್ಯಾಟಲ್ ಆಫ್ ಗಂಗಾ ಆಂಡ್ ಜಮುನಾ; ಮಹಾಭಾರತ 12′ ಕೃತಿಯನ್ನು 1.6 ದಶಲಕ್ಷ ಡಾಲರಿಗೆ ಖರೀದಿಸಿದರು.

2009: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂತನ ಮುಖ್ಯಸ್ಥರಾಗಿ ಮೋಹನ್ ಭಾಗವತ್ ಆಯ್ಕೆಯಾದರು. ಈವರೆಗೆ ಮುಖ್ಯಸ್ಥರಾಗಿದ್ದ ಕೆ.ಎಸ್.ಸುದರ್ಶನ್ ಅವರು ನಾಗಪುರದಲ್ಲಿ ನಡೆದ ಆರ್‌ಎಸ್‌ಎಸ್ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತಿ ಘೋಷಿಸಿದ ನಂತರ ಈ ಆಯ್ಕೆ ನಡೆಯಿತು.

ಪ್ರಮುಖಜನನ/ಮರಣ:

1887: ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಭಾರತೀಯ ಕಮ್ಮ್ಯೂನಿಸ್ಟ್ ಪಕ್ಷದ ಸ್ಥಾಪಕ ಎಂ.ಎನ್. ರಾಯ್ ಬಂಗಾಳದ ಚಂಗ್ರಿಪೋಟ ಎಂಬಲ್ಲಿ ಜನಿಸಿದರು.

1916: ಮಹಾನ್ ಶಹನಾಯ್ ವಾದಕ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರು ಬಿಹಾರದ ದುಮ್ರೋನ್ ಎಂಬಲ್ಲಿ ಜನಿಸಿದರು. ಶೆಹನಾಯಿಯನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವಾಗಿಸಿದ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತರತ್ನ’ವನ್ನೂ ಒಳಗೊಂಡಂತೆ ಅನೇಕ ಗೌರವಗಳು ಸಂದಿವೆ.

1924: ಖ್ಯಾತ ಸಂಗೀತ ವಿದ್ವಾಂಸ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿ ಅವರು ದಾವಣಗೆರೆಯಲ್ಲಿ ಜನಿಸಿದರು. ‘ಗಾಯನ ಗಂಗಾ’ ಸಂಗೀತ ಮಾಸಪತ್ರಿಕೆ ನಡೆಸಿ, ‘ಉರುಗಾಚಲ’ ಅಂಕಿತದಲ್ಲಿ ಕೃತಿಗಳ ರಚನೆ ಮಾಡಿದ್ದಲ್ಲದೆ, 500ಕ್ಕೂ ಹೆಚ್ಚು ಭಕ್ತಿಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ಸಂಗೀತ ಕಚೇರಿಗಳನ್ನು ನಡೆಸಿದ ಇವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಗಾಂಧರ್ವ ಮಹಾವಿದ್ಯಾಲಯದ ಸಂಗೀತ ಮಹೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.

1923: ಧಾರ್ಮಿಕ ನಾಯಕಿ, ‘ಸಹಜ ಯೋಗ’ ಪದ್ಧತಿಯ ಪ್ರವರ್ತಕಿ ನಿರ್ಮಲ ಶ್ರೀವಾಸ್ತವ ಅವರು ಮಧ್ಯಪ್ರದೇಶದ ಚಿಂದ್ವಾರ ಎಂಬಲ್ಲಿ ಜನಿಸಿದರು.

1932: ಅಮೆರಿಕದ ರಸಾಯನ ಶಾಸ್ತ್ರ ವಿಜ್ಞಾನಿ ವಾಲ್ಟರ್ ಗಿಲ್ಬರ್ಟ್ ಬೋಸ್ಟನ್ ನಗರದಲ್ಲಿ ಜನಿಸಿದರು. ನ್ಯೂಕ್ಲಿಯೋಟೈಡ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತು.

1942: ಭಾರತದ ಪ್ರಸಿದ್ಧ ಲೋಹ ಶಾಸ್ತ್ರಜ್ಞ ಪಚ್ಚ ರಾಮಚಂದ್ರ ರಾವ್ ಅವರು ಆಂಧ್ರಪ್ರದೇಶದ ಕವುಟಾವರಂ ಎಂಬಲ್ಲಿ ಜನಿಸಿದರು. ಇವರಿಗೆ ಶಾಂತಿ ಸ್ವರೂಪ್ ಭಟ್ನಾಗರ್ ಗೌರವವೂ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ.

1966: ಪ್ರಸಿದ್ಧ ನೃತ್ಯ ಕಲಾವಿದೆ ಮತ್ತು ಚಲನಚಿತ್ರ ನಟಿ ಶೋಭನಾ ತಿರುವನಂತಪುರದಲ್ಲಿ ಜನಿಸಿದರು. ಪದ್ಮಶ್ರೀ ಗೌರವ, ಎರಡು ಚಿತ್ರಗಳ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರವೂ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.

1980: ಪ್ರಸಿದ್ಧ ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ರೋನಾಲ್ಡಿನ್ಹೋ ಪೋರ್ಟೊ ಅಲೆಗ್ರೆ ಎಂಬಲ್ಲಿ ಜನಿಸಿದರು. ‘FIFA ವರ್ಲ್ಡ್ ಪ್ಲೇಯರ್ ಆಫ್ ದಿ ಯಿಯರ್’ ಪ್ರಶಸ್ತಿಯನ್ನು ಇವರು 2004 ಮತ್ತು 2005 ವರ್ಷಗಳಲ್ಲಿ ತಮ್ಮದಾಗಿಸಿಕೊಂಡಿದ್ದರು.

1985: ಇಂಗ್ಲಿಷ್ ರಂಗಭೂಮಿ ಹಾಗೂ ಸಿನಿಮಾ ನಟ ಮೈಕೆಲ್ ರೆಡ್ ಗ್ರೇವ್ ತಮ್ಮ 77ನೇ ಹುಟ್ಟುಹಬ್ಬದ ಒಂದು ದಿನದ ಬಳಿಕ ಈದಿನ ಮೃತರಾದರು.

2003: ಪ್ರಸಿದ್ಧ ಹಿಂದೀ ಕಾದಂಬರಿಗಾರ್ತಿ ಶಿವಾನಿ ನವದೆಹಲಿಯಲ್ಲಿ ನಿಧನರಾದರು. ಇವರಿಗೆ ವರ್ಷದಲ್ಲಿ ಪದ್ಮಶ್ರೀ ಗೌರವ ಸಂದಿತ್ತು.