Categories
e-ದಿನ

ಮಾರ್ಚ್-22

ದಿನಾಚರಣೆಗಳು
ವಿಶ್ವ ನೀರಿನ ದಿನ
ಮಾರ್ಚ್ 22 ದಿನವನ್ನು ವಿಶ್ವ ನೀರಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಶುದ್ಧ ನೀರಿನ ಮಹತ್ವವನ್ನು ಬಿಂಬಿಸುವುದರ ಜೊತೆಗೆ, ನೀರನ್ನು ವ್ಯರ್ಥವಾಗಿ ಪೋಲು ಮಾಡದೆ, ಶುದ್ಧ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸಿ, ಯೋಗ್ಯ ರೀತಿಯಲ್ಲಿ ನಿರ್ವಹಿಸುವುದರ ಕಡೆಗೆ ಗಮನ ಸೆಳೆಯುವುದು ಈ ಆಚರಣೆಯ ಉದ್ಧೇಶವಾಗಿದೆ.

ಪ್ರಮುಖಘಟನಾವಳಿಗಳು:

1739: ದೆಹಲಿಯನ್ನಾಕ್ರಮಿಸಿದ ನಾದೆರ್ ಷಾ ಅಲ್ಲಿನ ವೈಭವೋಪೇತ ಸಿಂಹಾಸನದೊಂದಿಗೆ ನಗರವನ್ನು ಲೂಟಿಗೈದ. ಆತ ಲೂಟಿಗೈದ ಸಂಪತ್ತು ಎಪ್ಪತ್ತು ಕೋಟಿಗೂ ಹೆಚ್ಚು ಮೌಲ್ಯದ್ದಾಗಿದ್ದು, ಆತ ತನ್ನ ದೇಶಕ್ಕೆ ಹಿಂದಿರುಗಿದಾಗ ಮೂರು ವರ್ಷಗಳ ಕಾಲ ತೆರಿಗೆಯನ್ನೇ ವಸೂಲು ಮಾಡಲಿಲ್ಲವಂತೆ!

1784: ಎಮೆರಾಲ್ಡ್ ಬುದ್ಧ ವಿಗ್ರಹವನ್ನು ಈಗಿರುವ ಥೈಲ್ಯಾಂಡಿನ ವಾಟ್ ಫ್ರಾ ಕಯೆವ್ ಎಂಬಲ್ಲಿಗೆ ಸಕಲ ವೈಭವಗಳೊಂದಿಗೆ ತರಲಾಯಿತು.

1912: ಬಿಹಾರ್ ರಾಜ್ಯವನ್ನು ಬಂಗಾಳದಿಂದ ಬೇರ್ಪಡಿಸಿ ಪ್ರತ್ಯೇಕ ರಾಜ್ಯವನ್ನಾಗಿಸಲಾಯಿತು

1942: ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವ ರಾಜಕೀಯ ಸೂತ್ರ ರೂಪಿಸುವ ಸಲುವಾಗಿ ಸರ್ ಸ್ಟಾಫರ್ಡ್ ಕ್ಲಿಫ್ ಆಯೋಗ ಭಾರತಕ್ಕೆ ಆಗಮಿಸಿತು. ಈ ಯತ್ನ ವಿಫಲಗೊಂಡು ಕೆಲವು ತಿಂಗಳ ಬಳಿಕ ಕ್ವಿಟ್ ಇಂಡಿಯಾ ಚಳವಳಿ ಆರಂಭವಾಯಿತು.

1945: ಕೈರೋದಲ್ಲಿ ಮಧ್ಯಪ್ರಾಚ್ಯ ದೇಶಗಳ ‘ಅರಬ್ ಲೀಗ್’ ಸ್ಥಾಪನೆಗೊಂಡಿತು.

1957: ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ರಾಜ್ಯಾಂಗದ ಭಾಗವಾಗಿ ರಾಷ್ಟ್ರೀಯ ಪಂಚಾಂಗದ ಅಗತ್ಯತೆ ಉಂಟಾಯಿತು. ಹಾಗಾಗಿ ಕ್ರಿ.ಶ. 1952ರ ನವೆಂಬರ್ ನಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಪಂಚಾಂಗದ ರಚನೆಗಾಗಿ ಸಮಿತಿಯೊಂದನ್ನು ನೇಮಿಸಿತು. ಅದು ಕ್ರಿ.ಶ. 1957 ಮಾರ್ಚಿ 22ನೆಯ ತಾರೀಖಿನಿಂದ ಜಾರಿಗೆ ಬರುವಂತೆ ‘ರಾಷ್ಟ್ರೀಯ ಪಂಚಾಂಗ’ವನ್ನು ಪ್ರಕಟಿಸಿತು. ಇದು ಶುದ್ಧ ಸೌರ ಪಂಚಾಂಗವಾಗಿದ್ದು ಋತುಮಾನಕ್ಕೆ ಅನುಗುಣವಾಗಿದೆ. ಭಾರತದ ಗೆಜೆಟ್ನಲ್ಲಿ ಇದನ್ನು ಗ್ರೆಗೋರಿಯನ್ ಕ್ಯಾಲೆಂಡರಿನ ಜೊತೆ ಜೊತೆಯಾಗಿ ಬಳಸಲಾಗಿದೆ.

1960: ಆರ್ಥರ್‌ ಅಮೇರಿಕಾದ ಲಿಯೋನಾರ್ಡ್ ಸ್ಕಾವ್ಲೋವ್ ಮತ್ತು ಚಾರ್ಲ್ಸ್ ಹಾರ್ಡ್ ಟೌನೆಸ್ ಅವರು ಲೇಸರ್ಗಾಗಿ ಪ್ರಥಮ ಪೇಟೆಂಟ್ ಪಡೆದರು.

1993: ಇಂಟೆಲ್ ಕಾರ್ಪೊರೇಷನ್ ಸಂಸ್ಥೆಯು ಪ್ರಥಮ ಪೆಂಟಿಯಮ್ ಚಿಪ್ (8೦586) ಅನ್ನು ಮಾರಕಟ್ಟೆಗೆ ರವಾನೆ ಮಾಡಿತು. ಇದು 60 ಎಂ.ಹೆಚ್.ಸೆಡ್ ಕ್ಲಾಕ್ ಸ್ಪೀಡ್, 100+ ಎಂ.ಐ.ಪಿ.ಎಸ್ ಮತ್ತು 64 ಬಿಟ್ ಡಾಟಾ ಪಾತ್ ಸಾಮರ್ಥ್ಯ ಉಳ್ಳದ್ದಾಗಿತ್ತು.

1995: ಬಾಹ್ಯಾಕಾಶ ಯಾತ್ರಿ ವಲೇರಿ ಪಾಲಿಯಾಕೊವ್ ಅವರು 438 ದಿನಗಳ ಬಾಹ್ಯಾಕಾಶದಲ್ಲಿನ ವಾಸ್ತವ್ಯದಿಂದ ಭುವಿಗೆ ಹಿಂದಿರುಗಿದರು.

1997: ಕೇವಲ 14 ವರ್ಷ 10 ತಿಂಗಳ ಬಾಲಕಿ ತಾರಾ ಲಿಪಿನ್ಸ್ಕಿ ಅವರು ವಿಶ್ವ ಫಿಗರ್ ಸ್ಕೇಟಿಂಗ್ ಚಾಂಪಿಯನ್ ಆದ ಆತ್ಯಂತ ಕಿರಿಯ ವ್ಯಕ್ತಿ ಎನಿಸಿದರು.

1997: ಹಾಲೆ-ಬಾಪ್ ಧೂಮಕೇತುವು ಭೂಮಿಗೆ ಅತ್ಯಂತ ಸನಿಹದಲ್ಲಿ ಆಗಮಿಸಿತ್ತು.

2001: ಆಸ್ಟ್ರೇಲಿಯಾದ ವಿರುದ್ಧ ಮುಗಿದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಹರ ಭಜನ್ ಸಿಂಗ್ ಅವರು 3 ಕ್ರಿಕೆಟ್ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಟ್ಟು 32 ವಿಕೆಟ್ ಗಳಿಸಿದ ದಾಖಲೆ ನಿರ್ಮಿಸಿದರು. ಈ ಹಿಂದೆ 23 ವಿಕೆಟ್ ಪಡೆದ ಅನಿಲ್ ಕುಂಬ್ಳೆ ಹೆಸರಿನಲ್ಲಿ ಈ ದಾಖಲೆಯಿತ್ತು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಐದನೆಯ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಸಮರೇಶ್ ಜಂಗ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ದಾಖಲೆಗೆ ಪಾತ್ರರಾದರು. 10 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸಮರೇಶ್ ಜಂಗ್ ದಾಖಲೆಯ 685.4 ಅಂಕ ಗಳಿಸಿ, ಎಂಟು ವರ್ಷಗಳ ಹಿಂದೆ ಇಂಗ್ಲೆಂಡಿನ ಮೈಕೆಲ್ ಗಾಲ್ಫ್ ಸೃಷ್ಟಿಸಿದ್ದ 679.9 ಅಂಕಗಳ ದಾಖಲೆಯನ್ನು ಅಳಿಸಿ ಹಾಕಿದರು.

2006: ಕೇರಳದಲ್ಲಿ ಜಲ ಸಂರಕ್ಷಣೆ ಪ್ರಾಮುಖ್ಯ ಕುರಿತು ಜಾಗೃತಿ ಮೂಡಿಸಲು ನಡೆಸಿದ ಪ್ರಯತ್ನಗಳಿಗಾಗಿ `ಮಲಯಾಳಂ ಮನೋರಮಾ’ ಪತ್ರಿಕೆಗೆ ‘ಯುನೆಸ್ಕೊ’ ಪ್ರಶಸ್ತಿ ಲಭಿಸಿತು.

2007: ಭಾರತೀಯ ಸಂಜಾತ ಅಮೆರಿಕನ್ ಗಣಿತಜ್ಞ ಶ್ರೀನಿವಾಸ ಎಸ್. ಆರ್. ವರದನ್ ಅವರು, ಗಣಿತ ಕ್ಷೇತ್ರಕ್ಕೆ ನೀಡಲಾಗುವ 8.50 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ನಾರ್ವೆ ದೇಶದ ಪ್ರತಿಷ್ಠಿತ ‘ಅಬೆಲ್ ಪ್ರಶಸ್ತಿ’ಗೆ ಪಾತ್ರರಾದರು.

2007: ಪಾಕಿಸ್ಥಾನವು ಸುಮಾರು 700 ಕಿ.ಮೀ. ದೂರ ಅಣ್ವಸ್ತ್ರ ಸಾಗಿಸುವ ಸಾಮರ್ಥ್ಯದ `ಬಾಬರ್’ (ಹಾಟ್ಫ್-7) ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು.

ಪ್ರಮುಖಜನನ/ಮರಣ:

1720: ಫ್ರೆಂಚ್ ಕಟ್ಟಡ ವಿನ್ಯಾಸಕಾರ ನಿಕೊಲಸ್-ಹೆನ್ರಿ ಜಾರ್ಡಿನ್ ಸೈಂಟ್ ಜರ್ಮನ್ ಡೆಸ್ ನೋಯರ್ಸ್ ಎಂಬಲ್ಲಿ ಜನಿಸಿದರು. ಅವರು ಯೆಲ್ಲೋ ಪ್ಯಾಲೇಸ್ ಮತ್ತು ಬರ್ನ್ಸ್ಟೋರ್ಫ್ ಪ್ಯಾಲೇಸ್ ವಿನ್ಯಾಸಗಳಿಗೆ ಪ್ರಸಿದ್ಧರಾಗಿದ್ದಾರೆ.

1814: ಅಮೆರಿಕದ ‘ಸ್ಟಾಚು ಆಫ್ ಫ್ರೀಡಮ್’ ಶಿಲ್ಪಿ ಥಾಮಸ್ ಕ್ರಾಫರ್ಡ್ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.

1868: ಅಮೆರಿಕದ ಭೌತವಿಜ್ಞಾನಿ ರಾಬರ್ಟ್ ಆ್ಯಂಡ್ರೂಸ್ ಮಿಲ್ಲಿಕಾನ್ ಇಲಿನಾಯ್ಸ್ ನಗರದಲ್ಲಿ ಜನಿಸಿದರು. ‘ಫೋಟೋ ಎಲೆಕ್ಟ್ರಿಕ್ ಎಫೆಕ್ಟ್ ಮತ್ತು ಎಲೆಮೆಂಟರಿ ಎಲೆಕ್ಟ್ರಾನಿಕ್ ಚಾರ್ಜ್’ ಕುರಿತಾದ ಸಂಶೋಧನೆಗಳಿಗಾಗಿ ಇವರಿಗೆ 1923 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1893: ಚಿಟ್ಟಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ಪ್ರಸಿದ್ಧರಾದ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ ಅವರು ಚಿಟ್ಟಗಾಂಗ್ನಲ್ಲಿ ಜನಿಸಿದರು. ಮೂಲತಃ ಶಿಕ್ಷಕರಾಗಿದ್ದ ಅವರನ್ನು ಜನ ಪ್ರೀತಿಯಿಂದ ಮಾಸ್ಟರ್ ದಾ ಎಂದು ಸಂಬೋಧಿಸುತ್ತಿದ್ದರು. ಬ್ರಿಟಿಷ್ ಸರ್ಕಾರ ಇವರನ್ನು 1934 ಜನವರಿ 12ರಂದು ನೇಣುಗಂಬಕ್ಕೇರಿಸಿತು.

1922: ಯೂನಿವಾಕ್ಸ್ ವಾದಕರಾಗಿ ಸಂಗೀತಲೋಕದಲ್ಲಿ, ಹಾಗೂ ಕಲಾವಿದರಾಗಿ ರಂಗಭೂಮಿಯಲ್ಲಿ ಮತ್ತು ಚಲನಚಿತ್ರಗಳಲ್ಲಿ ಪ್ರಸಿದ್ಧರಾದ ಬಿ. ಹನುಮಂತಾಚಾರ್ ಅವರು ಬಳ್ಳಾರಿಯಲ್ಲಿ ಜನಿಸಿದರು. ಅನೇಕ ಭಕ್ತಿ ಗೀತೆಗಳ ಸಂಗೀತ ನಿರ್ದೇಶಕರಾಗಿ ಸಹಾ ಪ್ರಖ್ಯಾತರಾದ ಇವರ ಸಂಗೀತ ನಿರ್ದೇಶನದಲ್ಲಿ ಡಾ. ರಾಜ್ ಕುಮಾರ್ ಅವರನ್ನೂ ಒಳಗೊಂಡಂತೆ ಅನೇಕ ಪ್ರಸಿದ್ಧ ಕಲಾವಿದರು ಹಾಡಿದ್ದಾರೆ.

1931: ಅಮೆರಿಕದ ಭೌತವಿಜ್ಞಾನಿ ಬರ್ಟನ್ ರಿಚ್ಟರ್ ಅವರು ಬ್ರೂಕ್ಲಿನ್ ನಗರದಲ್ಲಿ ಜನಿಸಿದರು. ‘J/ψ meson’ ಕುರಿತಾದ ಸಂಶೋಧನೆಗಾಗಿ ಅವರಿಗೆ 1976 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1948: ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಅರಳುಮಲ್ಲಿಗೆ ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅನೇಕ ಗ್ರಂಥಗಳು, ಧ್ವನಿ ಸುರುಳಿಗಳು ಮತ್ತು ಉಪನ್ಯಾಸಗಳಿಂದ ಪ್ರಸಿದ್ಧರಾಗಿರುವ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಒಳಗೊಂಡಂತೆ ಅನೇಕ ಗೌರವಗಳು ಸಂದಿವೆ.

1977: ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಮ್ಮ್ಯೂನಿಸ್ಟ್ ರಾಜಕಾರಣಿ ಎ.ಕೆ. ಗೋಪಾಲನ್ ತಿರುವನಂತಪುರದಲ್ಲಿ ನಿಧನರಾದರು. ಸತ್ಯಾಗ್ರಹಿಯಾಗಿ ಜೈಲುವಾಸ ಅನುಭವಿಸಿದ್ದ ಇವರು ಕಮ್ಮ್ಯೂನಿಸ್ಟ್ ಸಿದ್ಧಾಂತಕ್ಕೆ ಒಲಿದು ಕಮ್ಯೂನಿಸ್ಟ್ ಪಕ್ಷದ ಮುಖೇನ ರಾಜಕಾರಣದಲ್ಲಿದ್ದರು. ಕಾಫಿ ಬೋರ್ಡ್ ಸ್ಥಾಪನೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

2001: ಅನಿಮೇಷನ್ ಪಾತ್ರಗಳಾದ ‘ಯೋಗಿ ಬೀಯರ್’ ‘ಸ್ಕೂಬಿ ಡೂ’, ‘ಫ್ಲಿನ್ ಸ್ಟೋನ್ಸ್’ ಇತ್ಯಾದಿಗಳನ್ನು ಸೃಷ್ಟಿಸಿದ ವಿಲಿಯಂ ಹೆನ್ನಾ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಜೋಸೆಫ್ ಬಾರ್ಬೇರಾ ಅವರ ಜೊತೆ ಸೇರಿ ಈ ಅನಿಮೇಷನ್ ಪಾತ್ರಗಳನ್ನು ಅವರು ಸೃಷ್ಟಿಸಿದ್ದರು.

2007: ಯು. ಜಿ. ಕೃಷ್ಣಮೂರ್ತಿ ಎಂದು ಪರಿಚಿತರಾಗಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ ಅವರು ಇಟಲಿಯ ವಲ್ಲೆ ಕ್ರೋಸಿಯಾ ಎಂಬಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಜ್ಞಾನೋದಯ ಪಡೆದವರೆಂದು ಪ್ರಸಿದ್ಧಿ ಪಡೆದವರಾಗಿದ್ದರೂ, “ಅದು ಜ್ಞಾನೋದಯವಲ್ಲ, ನನ್ನ ಸಹಜ ಸ್ಥಿತಿ” ಎನ್ನುತ್ತಿದ್ದ ಇವರು ಜ್ಞಾನೋದಯ ಮತ್ತು ಸತ್ಯದ ಅರಿವಿನ ದೃಷ್ಟಿಯಲ್ಲಿ ಚಿಂತನೆಗಳನ್ನು ಅಲ್ಲಗೆಳೆಯುತ್ತಿದ್ದರು.

2010: ಸ್ಕಾಟ್ಲ್ಯಾಂಡಿನ ಜೀವವಿಜ್ಞಾನಿ ಮತ್ತು ವೈದ್ಯವಿಜ್ಞಾನಿ ಜೇಮ್ಸ್ ಬ್ಲ್ಯಾಕ್ ಲಂಡನ್ನಿನಲ್ಲಿ ನಿಧನರಾದರು. ಅನೇಕ ಔಷದಗಳನ್ನು ಕಂಡುಹಿಡಿದ ಮತ್ತು ಪ್ರೋಪ್ರನೋಲಾಲ್ ಮತ್ತು ಸಿಮೆಟಿಡ್ಲೈನ್ ಮುಂತಾದವುಗಳಿಗೆ ಅನುವು ಮಾಡಿಕೊಟ್ಟ ಸಂಶೋಧನೆಗಳಿಗಾಗಿ ಇವರಿಗೆ 1988 ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು.

2014: ಕನ್ನಡದ ಪ್ರಸಿದ್ಧ ಕತೆ, ಕಾದಂಬರಿಕಾರ ಯಶವಂತ ಚಿತ್ತಾಲ ಅವರು ಮುಂಬೈನಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ಇವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ, ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪಶಸ್ತಿಗಳೂ ಸೇರಿದಂತೆ ಹಲವಾರು ಗೌರವಗಳು ಸಂದಿದ್ದವು.