Categories
e-ದಿನ

ಮಾರ್ಚ್-23

ಪ್ರಮುಖಘಟನಾವಳಿಗಳು:

1857: ಎಲಿಷಾ ಓಟಿಸ್ ಅವರ ಪ್ರಥಮ ಎಲಿವೇಟರ್ ನ್ಯೂಯಾರ್ಕಿನ ಬ್ರಾಡ್ವೇಯಲ್ಲಿ ಅಳವಡಿತಗೊಂಡಿತು

1888: ವಿಶ್ವದ ಅತೀ ಹಳೆಯ ವೃತ್ತಿ ಫುಟ್ಬಾಲ್ ಸಂಘಟನೆಯಾದ ‘ದಿ ಫುಟ್ಬಾಲ್ ಲೀಗ್’ ತನ್ನ ಪ್ರಥಮ ಸಭೆ ನಡೆಸಿತು

1931: ಬ್ರಿಟಿಷ್ ಸರ್ಕಾರವು ಭಾರತದ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ ರಾಜಗುರು ಅವರುಗಳನ್ನು ಗಲ್ಲಿಗೇರಿಸಿತು. ಲಾಲಾ ಲಜಪತರಾಯ್ ಅವರ ಸಾವಿಗೆ ಕಾರಣವಾದ ಬ್ರಿಟಿಷ್ ದಬ್ಬಾಳಿಕೆಯ ಸೇಡು ತೀರಿಸಲು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸಾಂಡರ್ಸ್ ಎಂಬಾತನ ಹತ್ಯೆಗೆ ಕಾರಣರೆಂದು ಈ ಹೋರಾಟಗಾರರಿಗೆ ಬ್ರಿಟಿಷ್ ಸರ್ಕಾರ ಮರಣದಂಡನೆ ನೀಡಿತು.

1933: ಜರ್ಮನಿಯ ರೀಚ್ ಸ್ಟಾಗ್ ‘ಎನೇಬ್ಲಿಂಗ್ ಆಕ್ಟ್ 1933’ ಜಾರಿಗೊಳಿಸಿ ಅಡೋಲ್ಫ್ ಹಿಟ್ಲರನನ್ನು ಸರ್ವಾಧಿಕಾರಿಯನ್ನಾಗಿಸಿತು

1940: ಆಲ್-ಇಂಡಿಯಾ ಮುಸ್ಲಿಂ ಲೀಗ್ ತನ್ನ ವಾರ್ಷಿಕ ಅಧಿವೇಶನದಲ್ಲಿ ‘ಲಾಹೋರ್ ನಿರ್ಣಯವನ್ನು’ ಅಂಗೀಕರಿಸಿತು

1956: ಪಾಕಿಸ್ತಾನವು ಮೊಟ್ಟ ಮೊದಲ ಇಸ್ಲಾಮಿಕ್ ಗಣತಂತ್ರವಾಯಿತು

1965: ನಾಸಾವು ಇಬ್ಬರು ಗಗನಯಾತ್ರಿಗಳನ್ನು ಒಳಗೊಂಡ ‘ಜೆಮಿನಿ 3’ನ್ನು ಉಡ್ಡಯನ ಮಾಡಿತು. ಗಸ್ ಗ್ರಿಸ್ಸಮ್ ಮತ್ತು ಜಾನ್ ಯಂಗ್ ಅವರು ಇದರ ಯಾತ್ರಿಕರಾಗಿದ್ದರು.

1980: ಕರ್ನಾಟಕದ ಪ್ರಕಾಶ್ ಪಡುಕೋಣೆ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಗೆದ್ದ ಪ್ರಥಮ ಭಾರತೀಯರೆನಿಸಿದರು. ಇವರು ಅಂತಿಮ ಪಂದ್ಯದಲ್ಲಿ ಇಂಡೋನೇಶಿಯಾದ ಲೀಮ್ ಸ್ವೀ ಕಿಂಗ್ ಅವರನ್ನು ಸೋಲಿಸಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

2001: ರಷ್ಯಾದ ಬಾಹ್ಯಾಕಾಶದಲ್ಲಿನ ಪ್ರಯೋಗಾಲಯವಾದ ‘ಮೀರ್’ ಅನ್ನು ಮೂರು ಹಂತಗಳಲ್ಲಿ ವಿಭಜಿಸಿ ಕಕ್ಷೆಯಿಂದ ಹೊರತಂದು ಫಿಜಿ ದ್ವೀಪದ ಬಳಿಯಲ್ಲಿ ಪೆಸಿಫಿಕ್ ಸಾಗರದಲ್ಲಿ ಬೀಳುವಂತೆ ಮಾಡಲಾಯಿತು. ಇದು ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಬಾಹ್ಯಾಕಾಶ ನಿಲ್ದಾಣವಾಗಿ ಕಾರ್ಯನಿರ್ವಹಿಸಿತ್ತು.

2006: ಲಾಭದಾಯಕ ಹುದ್ದೆಯ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ತಮ್ಮ ಲೋಕಸಭಾ ಸದಸ್ಯತ್ವ ಮತ್ತು ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸೋನಿಯಾ ಗಾಂಧೀ ಅವರ ದಾರಿಯನ್ನೇ ಅನುಸರಿಸಿದ ಕಾಂಗ್ರೆಸ್ ಸಂಸದ ಕರಣ್ ಸಿಂಗ್ ಅವರೂ ತಮ್ಮ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯ ಮಹಿಳೆಯರ 50 ಮೀ. ರೈಫಲ್ ವಿಭಾಗದಲ್ಲಿ ಭಾರತದ ಅನುಜಾ ಜಂಗ್ ಸ್ವರ್ಣ ಪದಕ ಗೆದ್ದುಕೊಂಡರು.

2007: ಇರಾಕಿನಲ್ಲಿ ಇರುವ ಅಮೆರಿಕದ ಪಡೆಗಳ ವಾಪಸಾತಿಯನ್ನು ನಾಲ್ಕು ತಿಂಗಳಲ್ಲಿ ಆರಂಭಿಸಲು ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಅವಕಾಶ ಒದಗಿಸುವ ಡೆಮಾಕ್ರಾಟಿಕ್ ಯೋಜನೆಗೆ ಸೆನೆಟ್ ಸಮಿತಿಯ ಅನುಮೋದನೆ ಲಭಿಸಿತು.

2008: 700 ರಿಂದ 900 ಕಿ.ಮೀ. ದೂರದವರೆಗೆ ಕ್ರಮಿಸಬಲ್ಲ ಘನ ಇಂಧನ ಚಾಲಿತ ‘ಅಗ್ನಿ-1′ ಕ್ಷಿಪಣಿಯ ಪರೀಕ್ಷೆಯನ್ನು ಒರಿಸ್ಸಾದ ಬಾಲಸೋರಿಗೆ ಸಮೀಪದ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

2008: ಹೂಳು ತುಂಬಿ, ಮಲಿನಗೊಂಡಿದ್ದ ಶತಮಾನದಷ್ಟು ಹಳೆಯದಾದ ಕಲ್ಯಾಣಿಯ ಹೂಳು ತೆಗೆಯುವ ಮೂಲಕ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮಸ್ಥರು ಮಹತ್ವದ ಕಾರ್ಯ ಕೈಗೊಂಡರು. ನೂರಕ್ಕೂ ಹೆಚ್ಚು ಮಂದಿಯ ತಂಡಗಳು ಮೂರು ದಿನಗಳಿಂದ ಎಡೆ ಬಿಡದೆ ಕಲ್ಯಾಣಿ ಬದಿ ಎತ್ತುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು.

2008: ಮಂಜೇಶ್ವರ ಗೋವಿಂದ ಪೈ ಅವರ 125ನೇ ಜನ್ಮದಿನಾಚರಣೆ ಮತ್ತು ‘ಗಿಳಿವಿಂಡು’ ಕಟ್ಟಡ ಸಂಕೀರ್ಣದ ಶಿಲಾನ್ಯಾಸ ಸಮಾರಂಭವನ್ನು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯಿಲಿ ಅವರು ಕಾಸರಗೋಡಿನ ಮಂಜೇಶ್ವರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

2009: ಮುಂಬೈನಲ್ಲಿ ವಿಶ್ವದ ಅತ್ಯಂತ ಅಗ್ಗದ ಕಾರಾದ ‘ನ್ಯಾನೋ’ ಬಿಡುಗಡೆಗೊಂಡಿತು

ಪ್ರಮುಖಜನನ/ಮರಣ:

1858: ಜರ್ಮನಿಯ ಕಾರ್ಯಕರ್ತ ಮತ್ತು ರಾಜಕಾರಣಿ ಲುಡ್ವಿಗ್ ಕ್ವಿಡ್ಡೆ ಅವರು ಬ್ರೆಮೆನ್ ಎಂಬಲ್ಲಿ ಜನಿಸಿದರು. 1927ರ ವರ್ಷದಲ್ಲಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1881: ಫ್ರೆಂಚ್ ಕಾದಂಬರಿಕಾರ ಮಟ್ಟ ಪೇಲಿಯೋಗ್ರೇಫರ್ ರೋಜರ್ ಮಾರ್ಟಿನ್ ಡ್ಯು ಗಾರ್ಡ್ ಜನಿಸಿದರು. ಇವರಿಗೆ 1937ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1881: ಜರ್ಮನ್ ರಸಾಯನ ಶಾಸ್ತ್ರ ವಿಜ್ಞಾನಿ ಹೆರ್ಮಾನ್ ಸ್ಟೌಡಿಂಗರ್ ಅವರು ವೋರ್ಮ್ಸ್ ಎಂಬಲ್ಲಿ ಜನಿಸಿದರು. ‘ಪಾಲಿಮರ್ ಕೆಮಿಸ್ಟ್ರಿ’ಯಲ್ಲಿನ ಕೊಡುಗೆಗಾಗಿ ಇವರಿಗೆ 1953 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1883: ಕನ್ನಡದ ಪ್ರಥಮ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಮಂಜೇಶ್ವರದಲ್ಲಿ ಜನಿಸಿದರು. ಸುಪ್ರಸಿದ್ಧ ಸಂಶೋಧಕರೂ, ಕವಿಗಳೂ ಆದ ಇವರು ಗೊಮ್ಮಟ ಜಿನಸ್ತುತಿ, ನಂದಾದೀಪ, ಗಿಳಿವಿಂಡು, ಗೊಲ್ಗೊಥಾ ವೈಶಾಖಿ, ಹೆಬ್ಬೆರಳು, ಶ್ರೀಕೃಷ್ಣ ಚರಿತ್ರೆ, ಬರಹಗಾರನ ಹಣೆಬರಹ, ಪಾಶ್ರ್ವನಾಥ ತೀರ್ಥಂಕರ ಚರಿತೆ ಮುಂತಾದ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದರು. ಮದ್ರಾಸ್ ಸರ್ಕಾರದ ರಾಷ್ಟ್ರಕವಿ ಗೌರವ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿದ್ದವು.

1893: ‘ಭಾರತದ ಎಡಿಸನ್’ ಎಂಬ ಖ್ಯಾತಿಗೆ ಪಾತ್ರರಾದ ಗೋಪಾಲಸ್ವಾಮಿ ದೊರೆಸ್ವಾಮಿ ನಾಯ್ಡು ಅವರು ಕೊಯಮತ್ತೂರು ಬಳಿಯ ಕಾಲಂಗಳ್ ಎಂಬಲ್ಲಿ ಜನಿಸಿದರು. ಭಾರತದಲ್ಲಿ ಪ್ರಥಮ ಎಲೆಕ್ಟ್ರಿಕ್ ಮೋಟಾರ್ ಕಂಡುಹಿಡಿದ ಕೀರ್ತಿ ಇವರದ್ದಾಗಿದೆ.

1899: ಗೋವಾವನ್ನು ಪೋರ್ಚುಗೀಸ್ ಆಡಳಿತದಿಂದ ಮುಕ್ತಗೊಳಿಸುವ ಸಲುವಾಗಿ ಹೋರಾಡಿದ ಭಾರತೀಯ ಪತ್ರಕರ್ತ, ಕವಿ, ಸ್ವಾತಂತ್ರ್ಯ ಹೋರಾಟಗಾರ ಟೆಲೋ ಡಿ ಮಸ್ಕರೇಙಸ್ ಜನಿಸಿದರು. ಇವರು ಪೋರ್ಚುಗೀಸ್ ಭಾಷೆಯಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

1901: ಭಾರತೀಯ ವೈಷ್ಣವ ಪರಂಪರೆಯ ಗೌಡಿಯಾ ಮಠದ ಗುರು ಬಾನ್ ಮಹಾರಾಜ್ ಅವರು ಅಂದಿನ ಬ್ರಿಟಿಷ್ ಬಂಗಾಳದ ಆಡಳಿತ ಕ್ಷೇತ್ರದಲ್ಲಿದ್ದ ಬಹಾರ್ ಎಂಬಲ್ಲಿ ಜನಿಸಿದರು. ವೃಂದಾವನದಲ್ಲಿ ಇನ್ಸ್ಟಿಟ್ಯೂಟ್ ಆಫ್ ಓರಿಯಂಟಲ್ ಫಿಲಾಸಫಿ ಸ್ಥಾಪಿಸಿದರು.

1907: ಸ್ವಿಸ್-ಇಟಾಲಿಯನ್ ವೈದ್ಯ ವಿಜ್ಞಾನಿಗಳಾದ ಡೇನಿಯಲ್ ಬೋವೆಟ್ ಸ್ವಿಟ್ಜರ್ಲ್ಯಾಂಡ್ ದೇಶದ ಫ್ಲ್ಯೂರಿಯರ್ ಎಂಬಲ್ಲಿ ಜನಿಸಿದರು. ‘ನ್ಯೂರೋ ಟ್ರಾನ್ಸ್ಮಿಟರ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1957 ವರ್ಷದ ವೈದ್ಯಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

1910: ಜಪಾನಿನ ಮಹಾನ್ ಚಿತ್ರ ನಿರ್ದೇಶಕರಾದ ಅಕಿರಾ ಕುರೊಸಾವಾ ಟೋಕಿಯೋ ಬಳಿಯ ಶಿನಗಾವಾ ಎಂಬಲ್ಲಿ ಜನಿಸಿದರು. ಮೂವತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ ಇವರ ಇಕಿರು, ರಾಶೊಮನ್, ಸೆವೆನ್ ಸಮುರಾಯ್ ಮುಂತಾದ ಅನೇಕ ಚಿತ್ರಗಳು ಶ್ರೇಷ್ಠತೆಗೆ ಪ್ರಸಿದ್ಧಿ ಪಡೆದಿವೆ. ಇವರಿಗೆ ಅಕಾಡೆಮಿಯ ಹಲವಾರು ಪ್ರಶಸ್ತಿಗಳಲ್ಲದೆ ಜೀವಮಾನ ಸಾಧನೆ ಪ್ರಶಸ್ತಿ ಸಹಾ ಸಂದಿತ್ತು. ಇವರನ್ನು ಏಷ್ಯನ್ ಆಫ್ ದಿ ಸೆಂಚುರಿ ಎಂದು ಸಹಾ ಮರಣೋತ್ತರವಾಗಿ ಹೆಸರಿಸಲಾಯಿತು.

1910: ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಪಕ್ಷದ ಸ್ಥಾಪಕ, ಕಾರ್ಮಿಕ ಪರ ಹಾಗೂ ಶೋಷಣೆಯ ವಿರುದ್ಧದ ಹೋರಾಟಗಾರ ರಾಮ್ ಮನೋಹರ್ ಲೋಹಿಯಾ ಉತ್ತರ ಪ್ರದೇಶದ ಅಕ್ಬರಪುರ್ ಎಂಬಲ್ಲಿ ಜನಿಸಿದರು.

1951: ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಅವರು ಶಿವಮೊಗ್ಗ ಜಿಲ್ಲೆಯ ಅನವಟ್ಟಿಯಲ್ಲಿ ಜನಿಸಿದರು. ‘ಸಮುದಾಯ’ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಲ್ಲದೆ, ಸಮುದಾಯ ವಾರ್ತಾಪತ್ರ ಸ್ಥಾಪನೆ, ರಂಗಾಯಣ ನಿರ್ವಹಣೆ, ಕವಿ-ಕಾವ್ಯ ಟ್ರಸ್ಟ್ ಸ್ಥಾಪನೆ, ಋಜುವಾತು ಪತ್ರಿಕೆಗೆ ಹೊಸರೂಪ, ದೇಸಿ ಅಂಗಡಿ ಸ್ಥಾಪನೆ ಮುಂತಾದ ಅನೇಕ ಬಹುರೂಪಿ ಸಾಧನೆಗಳನ್ನು ಇವರು ಮಾಡಿದ್ದಾರೆ. ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

1953: ಬಯೋಕಾನ್ ಸಂಸ್ಥೆಯನ್ನು ಸ್ಥಾಪಿಸಿ ವಿಶ್ವದೆಲ್ಲೆಡೆ ಪ್ರಸಿದ್ಧರಾಗಿರುವ ಕಿರಣ್ ಮಜುಮ್ದಾರ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಓತ್ಮರ್ ಅಂತರರಾಷ್ಟ್ರೀಯ ಚಿನ್ನದ ಪದಕ, ಪದ್ಮಭೂಷಣ ಪ್ರಶಸ್ತಿಯನ್ನೂ ಒಳಗೊಂಡಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1976: ನಟಿ, ನಿರ್ಮಾಪಕಿ, ರಾಜಕಾರಣಿ, ಕೇಂದ್ರ ಮಂತ್ರಿಗಳಾದ ಸ್ಮೃತಿ ಇರಾನಿ ದೆಹಲಿಯಲ್ಲಿ ಜನಿಸಿದರು.

1931: ಬ್ರಿಟಿಷ್ ಸರ್ಕಾರವು ಭಾರತದ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ ರಾಜಗುರು ಅವರುಗಳನ್ನು ಗಲ್ಲಿಗೇರಿಸಿತು. ಲಾಲಾ ಲಜಪತರಾಯ್ ಅವರ ಸಾವಿಗೆ ಕಾರಣವಾದ ಬ್ರಿಟಿಷ್ ದಬ್ಬಾಳಿಕೆಯ ಸೇಡು ತೀರಿಸಲು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸಾಂಡರ್ಸ್ ಎಂಬಾತನ ಹತ್ಯೆಗೆ ಕಾರಣರೆಂದು ಈ ಹೋರಾಟಗಾರರಿಗೆ ಬ್ರಿಟಿಷ್ ಸರ್ಕಾರ ಮರಣದಂಡನೆ ನೀಡಿತು.

1991: ಎರಡನೇ ಮಹಾಯುದ್ಧದ ಸಮಯದಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಕ್ಕಾಗಿ ಅತ್ಯುನ್ನತ ಬ್ರಿಟಿಷ್ ಸೇನಾ ಗೌರವವಾದ ವಿಕ್ಟೋರಿಯಾ ಕ್ರಾಸ್ ಪಡೆದ ಸೇನಾನಿ ಪರಕಾಶ್ ಸಿಂಗ್ ಅವರು ಲಂಡನ್ನಿನ ಈಲಿಂಗ್ ಎಂಬಲ್ಲಿ ನಿಧನರಾದರು.

1992: ಆಸ್ಟ್ರಿಯಾ-ಜರ್ಮನಿಗಳ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಫ್ರೆಡ್ರಿಕ್ ಹಯೆಕ್ ಜರ್ಮನಿಯ ವುಟ್ಟೆಂಬರ್ಗ್ ಎಂಬಲ್ಲಿ ನಿಧನರಾದರು. ಅವರಿಗೆ 1974 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತ್ತು.