Categories
e-ದಿನ

ಮಾರ್ಚ್-27

ವಿಶ್ವ ರಂಗಭೂಮಿ ದಿನ
ರಂಗಭೂಮಿ ಚಟುವಟಿಕೆಗಳಲ್ಲಿನ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ದೆಸೆಯಲ್ಲಿ ಮಾರ್ಚ್ 27ರ ದಿನವನ್ನು, 1962ರ ವರ್ಷದಿಂದ ಮೊದಲ್ಗೊಂಡಂತೆ ‘ವಿಶ್ವರಂಗಭೂಮಿ ದಿನ’ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ಯಾರಿಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ರಂಗಸಂಸ್ಥೆಯು, ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ. ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ‘ವಿಶ್ವರಂಗಭೂಮಿ ದಿನ’ದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು.

ಪ್ರಮುಖಘಟನಾವಳಿಗಳು:

1625: ಮೊದಲನೆಯ ಚಾರ್ಲ್ಸ್ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲ್ಯಾಂಡ್ ದೇಶಗಳ ರಾಜನಾಗುವುದರ ಜೊತೆಗೆ ಫ್ರಾನ್ಸಿನ ರಾಜತ್ವದ ಹಕ್ಕೂ ತನ್ನದೆಂದು ಪ್ರತಿಪಾದಿಸಿದ

1836: ಟೆಕ್ಸಾಸ್ ಕ್ರಾಂತಿಯ ಗೊಲ್ಲಿಯಾಡ್ ಹತ್ಯಾಕಾಂಡದಲ್ಲಿ ಲೋಪೆಸ್ ಡಿ ಸಂತಾ ಅನ್ನಾ ಎಂಬ ಜನರಲ್ ಆಜ್ಞೆಯ ಮೇರೆಗೆ ಮೆಕ್ಸಿಕನ್ ಸೇನಾ ಪಡೆಯು 342 ಯುದ್ಧಖೈದಿಗಳನ್ನು ಹತ್ಯೆ ಮಾಡಿತು.

1871: ಪ್ರಥಮ ಅಂತರರಾಷ್ಟ್ರೀಯ ರಗ್ಬಿ ಫುಟ್ಬಾಲ್ ಪಂದ್ಯವು ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಎಡಿನ್ಬರ್ಗ್ ನಗರದ ರೇಬರ್ನ್ ಪ್ಲೇಸ್ನಲ್ಲಿ ನಡೆಯಿತು

1884: ಓಹಿಯೋದ ಸಿನ್ಸಿನ್ನಾಟಿಯಲ್ಲಿ, ಒಂದು ಕೊಲೆಯಾದ ಘಟನೆಯನ್ನು ಸಾಧಾರಣ ಶಿಕ್ಷೆಗೆ ಅನುವಾಗುವಂತೆ ನರಹತ್ಯೆ ಎಂದು ತಿರುಚಿ ನ್ಯಾಯ ನೀಡಿದ ನ್ಯಾಯಾಲಯದ ವಿರುದ್ಧ ರೊಚ್ಚಿಗೆದ್ದ ಜನ, ನ್ಯಾಯಾಧೀಶರೊಬ್ಬರ ಮೇಲೆ ಆಕ್ರಮಣ ನಡೆಸಿದರು. ಮುಂದಿನ ಕೆಲವು ದಿನಗಳಲ್ಲಿ ಈ ಹೋರಾಟ ವಿಪರೀತಕ್ಕೆ ತಿರುಗಿ, ಜನ ಇಡೀ ನ್ಯಾಯಾಲಯವನ್ನೇ ಧ್ವಂಸಗೊಳಿಸಿದರು.

1958: ನಿಖಿತ ಕ್ರುಶ್ಚೇವ್ ಅವರು ಕಮ್ಯೂನಿಸ್ಟ್ ಪಕ್ಷದ ಮೊದಲ ಕಾರ್ಯದರ್ಶಿ ಮತ್ತು ಸೋವಿಯತ್ ಪ್ರಧಾನಿಯಾಗಿ ಆಯ್ಕೆಗೊಂಡರು.

1977: ಕ್ಯಾನರಿ ದ್ವೀಪದ ಟೆನೆರಿ ವಿಮಾನ ನಿಲ್ದಾಣದಲ್ಲಿ ಎರಡು ಬೋಯಿಂಗ್ 747 ವಿಮಾನಗಳು, ಮಂಜುತುಂಬಿದ ಓಟದ ಹಾದಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡೂ ವಿಮಾನಗಳಲ್ಲಿದ್ದ 583 ಮಂದಿ ನಿಧನರಾದರು. ಇವುಗಳಲ್ಲಿ ಒಂದು ವಿಮಾನದಲ್ಲಿದ್ದ 61 ಜನ ಬದುಕುಳಿದರು.

1998: ‘ವಯಾಗರ’ ಔಷದಕ್ಕೆ ಅಮೆರಿಕದ ಆಹಾರ ಮತ್ತು ಔಷದ ನಿಯಂತ್ರಣ ಮಂಡಳಿಯು ಪರವಾನಗಿ ನೀಡಿತು.

2006: ಭಾರತದ ಗಗನ್ ನಾರಂಗ್ ಅವರು ಚೀನಾದ ‘ಗುವಾಂಗ್ ಜೋ’ನಲ್ಲಿ ಐ ಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವರ್ಣಪದಕ ಗೆದ್ದು, 2008ರ ಬೀಜಿಂಗ್ ಒಲಿಂಪಿಕ್ ಕೂಟಕ್ಕೆ ನೇರ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರಿಗೆ ಬ್ಯಾಂಕಾಕ್ ಮೂಲದ ಏಷ್ಯಾ ಮತ್ತು ಶಾಂತ ಸಾಗರ ವಲಯಕ್ಕಾಗಿ ರಚಿಸಲಾದ, ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಆಯೋಗವು (ಯುನೆಸ್ಕ್ಯಾಪ್) ‘ಯುನೆಸ್ಕ್ಯಾಪ್’ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿತು. ಆಯೋಗವು ತನ್ನ ಅರವತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬ್ಯಾಂಕಾಕಿನಲ್ಲಿ ನಡೆದ ಸಮಾರಂಭದಲ್ಲಿ ಅಮರ್ತ್ಯ ಸೇನ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಬಗ್ಗೆ ತನ್ನ ಬಳಿ ಇರುವ ದಾಖಲೆಗಳಲ್ಲಿ ಯಾವ ಮಾಹಿತಿಯೂ ಇಲ್ಲ ಎಂಬ ವಿಚಾರವನ್ನು ಭಾರತ ಸರ್ಕಾರ ಬಹಿರಂಗಗೊಳಿಸಿತು.

2008: ಎರಡು ವಾರಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು ದಾಖಲೆಯ ಪ್ರಯೋಗಗಳಿಗೆ ಎಡೆಮಾಡಿಕೊಟ್ಟ ‘ಎಂಡೀವರ್’ ಗಗನ ನೌಕೆ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿತು. ಈ ಎರಡು ವಾರಗಳ ಅವಧಿಯಲ್ಲಿ ವ್ಯೋಮಯಾನಿಗಳು 5 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿ ದಾಖಲೆ ಸೃಷ್ಟಿಸಿದರಲ್ಲದೆ, ಜಪಾನಿನ ಒಂದು ಪ್ರಯೋಗಾಲಯ ಮತ್ತು ಕೆನಡಾದ ರೋಬೋಟ್ ಒಂದನ್ನು ಸಜ್ಜುಗೊಳಿಸುವಲ್ಲಿ ಸಹಾ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.

ಪ್ರಮುಖಜನನ/ಮರಣ:

1845: ಜರ್ಮನಿಯ ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ವಿಲ್ಹೆಲ್ಮ್ ರೋಂಟ್ಗೆನ್ ಜರ್ಮನಿಯ ಲೆನ್ನೆಪ್ ಎಂಬಲ್ಲಿ ಜನಿಸಿದರು. ಎಕ್ಸ್-ರೇ ಅಥವಾ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಕಂಡುಹಿಡಿದ ಇವರಿಗೆ 1901 ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.

1847: ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಓಟ್ಟೋ ವಲ್ಲಾಚ್ ಅವರು ಪ್ರಸ್ಸಿಯಾದ ಕೊನಿಗ್ಸ್ ಬರ್ಗ್ ಎಂಬಲ್ಲಿ ಜನಿಸಿದರು. ‘ಅಲಿಸೈಕ್ಲಿಕ್ ಕಾಂಪೌಂಡ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1910 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1863: ಲಕ್ಷುರಿ ಕಾರು ಮತ್ತು ವಿಮಾನ ಎಂಜಿನ್ ತಯಾರಕ ಸಂಸ್ಥೆ ರೋಲ್ಸ್- ರಾಯ್ಸ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕರಾದ ಸರ್ ಫ್ರೆಡರಿಕ್ ಹೆನ್ರಿ ರಾಯ್ಸ್ ಅವರು ಇಂಗ್ಲೆಂಡಿನಲ್ಲಿ ಜನಿಸಿದರು.

1886: ಜರ್ಮನ್-ಅಮೇರಿಕನ್ ಕಟ್ಟಡಗಳ ವಿನ್ಯಾಸಕ, ಪ್ರಸಿದ್ಧ ಐಬಿಎಮ್ ಪ್ಲಾಜಾ ಮತ್ತು ಸೀಗ್ರಾಮ್ ಕಟ್ಟಡಗಳಿಗೆ ವಿನ್ಯಾಸ ನೀಡಿದ ಲುಡ್ವಿಗ್ ಮೈಲ್ಸ್ ವ್ಯಾನ್ ಡೆರ್ ರೋಹೆ ಅವರು ಪ್ರಸ್ಸಿಯಾದ ಆಚೆನ್ ಎಂಬಲ್ಲಿ ಜನಿಸಿದರು.

1901: ಜಪಾನಿನಲ್ಲಿ ಬಹು ದೀರ್ಘಕಾಲ ಪ್ರಧಾನ ಮಂತ್ರಿಗಳಾಗಿದ್ದ ನೊಬೆಲ್ ಶಾಂತಿ ಪುರಸ್ಕೃತ ಈಸಾಕು ಸಟೋ ಅವರು ಜಪಾನಿನ ಟಬ್ಯೂಸ್ ಎಂಬಲ್ಲಿ ಜನಿಸಿದರು.

1932: ಪ್ರಖ್ಯಾತ ವಿದ್ವಾಂಸ, ಪ್ರಾಧ್ಯಾಪಕ, ಸಂಶೋಧಕ, ಪತ್ರಿಕಾ ಸಂಪಾದಕ, ಬರಹಗಾರ, ಪ್ರವಾಸಿ ಡಾ. ಎಸ್. ರಾಮಸ್ವಾಮಿ ಬೆಂಗಳೂರಿನಲ್ಲಿ ಜನಿಸಿದರು.

1942: ಇಂಗ್ಲಿಷ್ ಜೀವವಿಜ್ಞಾನಿ ಮತ್ತು ವೈದ್ಯಶಾಸ್ತ್ರಜ್ಞರಾದ ಜಾನ್ ಸುಲ್ಸ್‘ಟನ್ ಅವರು ಕೇಂಬ್ರಿಡ್ಜ್ನಲ್ಲಿ ಜನಿಸಿದರು. ‘ಸೆಲ್ ಲಿನಿಯೇಜ್ ಅಂಡ್ ಜೇನೊಂ ಆಫ್ ದಿ ನೆಮಟೋಡ್ ಕೆನೋರ್ಹ್ಯಾಬ್ಡಿಟಿಸ್ ಎಲಿಗಾನ್ಸ್’ ಕುರಿತಾದ ಸಂಶೋಧನಾ ಕಾರ್ಯಕ್ಕಾಗಿ ಇವರಿಗೆ 2002 ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು.

1898: ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಸಯ್ಯದ್ ಅಹಮದ್ ಖಾನ್ ಅವರು ಆಲಿಘರ್ ಪಟ್ಟಣದಲ್ಲಿ ನಿಧನರಾದರು. ‘ಮುಸ್ಲಿಮರು ಅಳವಡಿಸಿಕೊಂಡ ಪಾಶ್ಚಾತ್ಯ ನೀತಿಗಳು’ ಇವರ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ.

1900: ಕ್ಯಾಂಪ್ಬೆಲ್ ಸೂಪ್ ಕಂಪೆನಿಯ ಸ್ಥಾಪಕ ಜೋಸೆಫ್ ಎ. ಕ್ಯಾಂಪ್ಬೆಲ್ ಅವರು ನ್ಯೂ ಜೆರ್ಸಿಯ ರಿವರ್ ಟನ್ ಎಂಬಲ್ಲಿ ನಿಧನರಾದರು.

1967: ಜೆಕೊಸ್ಲವಾಕಿಯಾದ ರಸಾಯನ ಶಾಸ್ತ್ರಜ್ಞರಾದ ಜಾರೋಸ್ಲಾವ್ ಹೇರೋವಸ್ಕೈ ಅವರು ಪ್ರೇಗ್ ನಗರದಲ್ಲಿ ನಿಧನರಾದರು. ಇವರಿಗೆ ಎಲೆಕ್ಟ್ರೋ ಅನಲಿಟಿಕಲ್ ಮೆಥಡ್ ಸಂಶೋಧನಾತ್ಮಕ ಕೊಡುಗೆಗಾಗಿ 1959 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1968: ವಿಶ್ವದ ಪ್ರಪ್ರಥಮ ಗಗನಯಾತ್ರಿ ಯೂರಿಗಗಾರಿನ್ ಅವರು ಮಾಸ್ಕೊದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಮೃತರಾದರು. ಅವರು ಮೃತರಾದ ಗಾಸ್ತಸ್ಕ್ ಪಟ್ಟಣಕ್ಕೆ ಗಗಾರಿನ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

2007: ಅಮೆರಿಕದ ರಸಾಯನ ಶಾಸ್ತ್ರಜ್ಞರಾದ ಪಾಲ್ ಲೌಟೆರ್ಬರ್ ಇಲಿನಾಯ್ಸಿನ ಉರ್ಬಾನಾದಲ್ಲಿ ನಿಧನರಾದರು. ಇವರಿಗೆ ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್ (MRI) ಸಂಶೋಧನೆಗಾಗಿ 2003 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2015: ಭಾರತೀಯ ಸೈನ್ಯದ ಬ್ರಿಗೇಡಿಯರ್ ಮತ್ತು ಮಿಜೋರಾಮ್ ಮುಖ್ಯಮಂತ್ರಿಗಳಾದ ಟಿ. ಸಾಲಿಯೋ ಐಸ್ವಾಲ್ನಲ್ಲಿ ನಿಧನರಾದರು. ಇವರು ಮಿಸೋರಾಮ್ ಪೀಪಲ್ಸ್ ಕಾನ್ಫರೆನ್ಸ್ ಸ್ಥಾಪಿಸಿದರು. ಸೈನ್ಯದಲ್ಲಿನ ಇವರ ಮಾನವೀಯ ಸೇವೆಗಳಿಗಾಗಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ಪದ್ಮಶ್ರೀ ಪ್ರಶಸ್ತಿ ಸಂದಿತ್ತು.