Categories
e-ದಿನ

ಮಾರ್ಚ್-28

ಪ್ರಮುಖಘಟನಾವಳಿಗಳು:

1933: ಲಿವರ್ ಪೂಲ್ ನಗರದಲ್ಲಿ ಇಂಪೀರಿಯಲ್ ಏರ್’ವೇಸ್ ಸಂಸ್ಥೆಗೆ ಸೇರಿದ ವಿಮಾನವೊಂದು ಯಾತ್ರಿಕನೊಬ್ಬ ಬೆಂಕಿ ಹಚ್ಚಿದ ಪರಿಣಾಮವಾಗಿ ನಾಶಗೊಂಡಿತು. ಇದು ವಿಮಾನವೊಂದು ಪ್ರಪ್ರಥಮ ಬಾರಿಗೆ ವಿಧ್ವಂಸಕ ಕೃತ್ಯವೊಂದರಲ್ಲಿ ನಾಶವಾದ ಘಟನೆ ಎನಿಸಿದೆ.

1955: ಆಕ್ಲೆಂಡಿನ ಈಡನ್ ಪಾರ್ಕಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ನ್ಯೂಜಿಲ್ಯಾಂಡ್, ಕೇವಲ 26 ರನ್ನುಗಳಿಗೆ ತನ್ನ ಎಲ್ಲಾ ವಿಕೆಟ್ಟುಗಳನ್ನು ಕಳೆದುಕೊಂಡಿತು. ಇದು ಟೆಸ್ಟ್ ಕ್ರಿಕೆಟಿನ ಇನ್ನಿಂಗ್ಸ್ ಒಂದರಲ್ಲಿನ ಅತ್ಯಂತ ಕಡಿಮೆ ಓಟಗಳ ಗಳಿಕೆ ಎನಿಸಿದೆ.

1979: ಅಮೆರಿಕದ ಪೆನ್ಸಿಲ್ವೇನಿಯಾದ ಥ್ರೀ ಮೈಲ್ ದ್ವೀಪದ ಎರಡನೇ ಘಟಕದ ರಿಯಾಕ್ಟರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಸಿತು. ಇದು ಅತ್ಯಂತ ಹೆಚ್ಚಿನ ತಾಪಮಾನ ಮತ್ತು ಗಣನೀಯವಾದ ಹಿಮ ಕರಗುವಿಕೆಗೆ ಕಾರಣವಾಯಿತು.

2006: ಫ್ರಾನ್ಸ್ ದೇಶದಲ್ಲಿ ಕಡೇಪಕ್ಷ ಒಂದು ದಶಲಕ್ಷ ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳ ಸದಸ್ಯರು ಮತ್ತು ನಿರುದ್ಯೋಗಿಗಳು ಸರ್ಕಾರ ಉದ್ದೇಶಿಸಿದ ‘ಫಸ್ಟ್ ಎಂಪ್ಲಾಯ್ಮೆಂಟ್ ಕಾಂಟ್ರಾಕ್ಟ್’ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಕಾನೂನು ಪ್ರಕಾರ 26 ವಯಸ್ಸಿಗಿಂತ ಕಡಿಮೆ ವಯೋಮಾನದವರಿಗೆ ಕೆಲಸದ ಕಾಂಟ್ರಾಕ್ಟ್ ಲಭ್ಯವಾಗುವಂತೆ ಮಾಡಿ, ಉದ್ಯಮಿಗಳು ಯಾವುದೇ ಕಾರಣಗಳನ್ನೂ ನೀಡದೆ ಎರಡು ವರ್ಷದ ಒಳಗೆ ಒಂದಷ್ಟು ಹಣ ನೀಡಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಬಿಡುವಂತಹ ಅಂಶಗಳನ್ನು ಒಳಗೊಂಡಿತ್ತು.

2007: ಜಾಗತಿಕ ತಾಪಮಾನದ ಪರಿಣಾಮವಾಗಿ ಹಿಮಾಲಯದ ನೀರ್ಗಲ್ಲುಗಳು ಶೀಘ್ರವಾಗಿ ಕರಗುತ್ತಿವೆ ಎಂದು ಫ್ರೆಂಚ್ ಸಂಶೋಧಕರು ಉಪಗ್ರಹ ಚಿತ್ರಗಳನ್ನು ಅಧರಿಸಿ ಬಹಿರಂಗ ಪಡಿಸಿದರು. ಹಿಮಾಲಯದ ನೀರ್ಗಲ್ಲುಗಳು ಕ್ರಮೇಣ ಕರಗುತ್ತಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ ಅವರು ವಾರ್ಷಿಕ 8ರಿಂದ 10 ಮೀಟರಿನಷ್ಟು ನೀರ್ಗಲ್ಲುಗಳು ಕರಗುತ್ತಿವೆ ಎಂದು ಪ್ರಕಟಿಸಿದರು.

2007: ಪತಿಯೊಡನೆ ವಾಸಿಸಲು ನಿರಾಕರಣೆ ಮತ್ತು ಮಗು ಬೇಡ ಎಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಪತ್ನಿಯ ವರ್ತನೆ ಮಾನಸಿಕ ಹಿಂಸೆ ಎನಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಪತಿ ವಿಚ್ಛೇದನ ಕೇಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.

2008: ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆಯಿರುವ ಪ್ರಧಾನ ಮಂತ್ರಿಗಳ ಕಚೇರಿಯ ಹೊರಭಾಗದಲ್ಲಿ ಸಂಭವಿಸಿದ ಗುಂಡು ಹಾರಾಟದಲ್ಲಿ ದೆಹಲಿ ಪೊಲೀಸ್ ಕಮಾಂಡೋ ಸಂಜಯ್ ಅವರಿಗೆ ಗಾಯವಾಯಿತು.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಹಣಾಹಣಿಯಲ್ಲಿ ಕೇವಲ 278 ಎಸೆತಗಳಲ್ಲಿ ಅತಿ ವೇಗದ ತ್ರಿಶತಕ ದಾಖಲಿಸಿದ ವೀರೇಂದ್ರ ಸೆಹ್ವಾಗ್ ಅವರು ಎರಡು ಬಾರಿ ತ್ರಿಶತಕ ಗಳಿಸಿದ ಡಾನ್ ಬ್ರಾಡ್ಮನ್ ಅವರನ್ನೊಳಗೊಂಡ ಪಟ್ಟಿಯಲ್ಲಿ ಸ್ಥಾನ ಗಳಿಸಿದರು. ಎರಡು ಬಾರಿ ತ್ರಿಶತಕ ಗಳಿಸಿದ ಸಾಧನೆ ಮಾಡಿರುವ ಈ ಪಟ್ಟಿಯಲ್ಲಿ ಸೆಹ್ವಾಗ್ ಅವರು ವೆಸ್ಟ್ ಇಂಡೀಸಿನ ಬ್ರಿಯನ್ ಲಾರಾ ಅವರಿಗಿಂತ ಮೇಲಿದ್ದು ಡಾನ್ ಬ್ರಾಡ್ಮನ್ ಅವರ ನಂತರದ ಎರಡನೇ ಸ್ಥಾನವನ್ನಲಂಕರಿಸಿದ್ದಾರೆ.

2009: ‘ನಾವಿಕ’- ನಾರ್ತ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಶನ್ ಎಂಬ ಹೆಸರಿನ ಕನ್ನಡಪರ ಸಂಸ್ಥೆ ಅಮೆರಿಕದ ಫ್ಲೋರಿಡಾ ನಗರದಲ್ಲಿ ಸ್ಥಾಪನೆಯಾಯಿತು.

2009: ಮದರ್ ತೆರೆಸಾ ನಂತರ ‘ಸುಪೀರಿಯರ್ ಜನರಲ್’ ಜವಾಬ್ದಾರಿ ವಹಿಸಿಕೊಂಡಿದ್ದ ಸಿಸ್ಟರ್ ನಿರ್ಮಲ ಅವರು ಅನಾರೋಗ್ಯದ ಕಾರಣದಿಂದ ತಮ್ಮ ಹನ್ನೆರಡು ವರ್ಷಗಳ ಸೇವೆಗೆ ವಿದಾಯ ಹೇಳಿ ತಮ್ಮ ನಂತರದ ಸ್ಥಾನದಲ್ಲಿದ್ದ ಸಿಸ್ಟರ್ ಪ್ರೇಮಾ ಅವರಿಗೆ ಕೋಲ್ಕತದಲ್ಲಿ ‘ಸುಪರೀಯರ್ ಜನರಲ್’ ಪದವಿಯನ್ನು ಹಸ್ತಾಂತರಿಸಿದರು.

ಪ್ರಮುಖಜನನ/ಮರಣ:

1862: ಹನ್ನೊಂದು ಬಾರಿ ಫ್ರಾನ್ಸಿನ ಪ್ರಧಾನಿಯಾದ ಅರಿಸ್ಟೈಡ್ ಬ್ರಿಯಾಂಡ್ ಜನಿಸಿದರು. ‘ಲೀಗ್ ಆಫ್ ನೇಷನ್ಸ್’ ಸ್ಥಾಪಿಸಿ ವಿಶ್ವಶಾಂತಿಗಾಗಿ ತೀವ್ರವಾಗಿ ಶ್ರಮಿಸಿದ ಇವರಿಗೆ 1926ರ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಸಂದಿತು.

1892: ಬೆಲ್ಜಿಯಂ ದೇಶದ ವೈದ್ಯವಿಜ್ಞಾನಿ ಕಾರ್ನೀಲ್ಲೆ ಹೇಯ್ಮನ್ಸ್ ಅವರು ಘೆಂಟ್ ಎಂಬಲ್ಲಿ ಜನಿಸಿದರು. ಇವರು ದೇಹವು ಹೇಗೆ ರಕ್ತದೊತ್ತಡ ಮತ್ತು ರಕ್ತದಲ್ಲಿರುವ ಆಮ್ಲಜನಕದ ತೂಕವನ್ನು ನಿಷ್ಕರ್ಷಿಸಿ ಮೆದುಳಿಗೆ ರವಾನಿಸುತ್ತದೆ ಎಂಬುದನ್ನು ತೋರಿಸಿಕೊಟ್ಟರು. ಈ ಸಾಧನೆಗಾಗಿ ಇವರಿಗೆ 1938ರ ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1916: ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ಅವರು ರಾಯಚೂರು ಜಿಲ್ಲೆಯ ತಳಕಲ್ಲಿನ ಬಡ ವಿಶ್ವಕರ್ಮ ಕುಟುಂಬವೊಂದರಲ್ಲಿ ಜನಿಸಿದರು.

1919: ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹಾನ್ ಸಾಧಕಿ ದಿವಂಗತ ಡಿ.ಕೆ. ಪಟ್ಟಮ್ಮಾಳ್ ಅವರು ಕಾಂಚೀಪುರದಲ್ಲಿ ಜನಿಸಿದರು. ಸಿನಿಮಾ ಕ್ಷೇತ್ರದಲ್ಲಿ ಪ್ರಣಯ ಗೀತೆಗಳನ್ನು ಹಾಡಲು ಒಪ್ಪದಿದ್ದರೂ ನೂರಾರು ಚಿತ್ರಗಳಲ್ಲಿ ಹಾಡಿದ್ದಾರೆ. 2009ರಲ್ಲಿ ನಿಧನರಾದ ಇವರಿಗೆ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಸಂದಿದ್ದವು.

1926: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಪಾಲಿ ಉಮ್ರಿಗಾರ್ ಸೋಲಾಪುರದಲ್ಲಿ ಜನಿಸಿದರು. ಇವರು ಟೆಸ್ಟ್ ಕ್ರಿಕೆಟಿನಲ್ಲಿ ದ್ವಿಶತಕ ಭಾರಿಸಿದ ಮೊಟ್ಟ ಮೊದಲ ಭಾರತೀಯರೆನಿಸಿದ್ದು ಒಟ್ಟು 12 ಬಾರಿ ಶತಕಗಳಿಸಿದ್ದರು.

1930: ಅಮೆರಿಕದ ಭೌತಶಾಸ್ತ್ರಜ್ಞ ಜೆರೋಮ್ ಐಸಾಕ್ ಫ್ರೀಡ್ಮ್ಯಾನ್ ಅವರು ಚಿಕಾಗೊದಲ್ಲಿ ಜನಿಸಿದರು. ಮುಂದೆ ಕ್ವಾರ್ಕ್ಸ್ ಎಂದು ಹೆಸರಾದ ಪ್ರೋಟಾನ್ಗಳ ಒಳ ರಚನೆಯನ್ನು ತೋರಿಸಿಕೊಟ್ಟ ಇವರಿಗೆ 1990 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1936: ಪೆರು ದೇಶದ ಕಾದಂಬರಿಗಾರ, ನಾಟಕಕಾರ ಮತ್ತು ಪ್ರಬಂಧಕಾರ ಮಾರಿಯೋ ವರ್ಗಾಸ್ ಲ್ಲೋಸಾ ಅವರು ಆ ದೇಶದ ಅರೆಕ್ವಿಪ ಎಂಬಲ್ಲಿ ಜನಿಸಿದರು. ಇವರಿಗೆ 2010 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1953: ಭಾರತದ ಕ್ರಿಕೆಟ್ ಟೆಸ್ಟ್ ಆಟಗಾರರಾಗಿ ಕರ್ನಾಟಕವನ್ನು ಪ್ರತಿನಿಧಿಸಿದ ಬ್ರಿಜೇಶ್ ಪಟೇಲ್ ಜನಿಸಿದರು. ದೇಶದ ಪರವಾಗಿ 21 ಟೆಸ್ಟ್ ಪಂದ್ಯಗಳನ್ನಾಡಿದ ಅವರು ಕರ್ನಾಟಕದ ಪರವಾಗಿ ಪ್ರಥಮ ದರ್ಜೆ ಪಂದ್ಯಗಳಲ್ಲಿ 11000ಕ್ಕೂ ಹೆಚ್ಚು ರನ್ ಗಳಿಸಿದ್ದರು.

1968: ಕ್ರಿಕೆಟ್ ಆಟಗಾರ ನಾಸೆರ್ ಹುಸ್ಸೇನ್ ಚೆನ್ನೈನಲ್ಲಿ ಜನಿಸಿದರು. ಇವರು ಇಂಗ್ಲೆಂಡ್ ತಂಡದ ನಾಯಕರಾಗಿ ಸಹಾ ಸೇವೆ ಸಲ್ಲಿಸಿದ್ದಾರೆ.

1941: ಬ್ರಿಟಿಷ್ ಆಡಳಿತದಲ್ಲಿ ಡೆಪ್ಯೂಟಿ ಕಮಿಷನರ್ ಆಫ್ ಪೋಲೀಸ್ ಹುದ್ದೆಗೇರಿದ ಪ್ರಥಮ ಭಾರತೀಯರಾದ ಕವಾಸ್ಜಿ ಜೆಮ್ಶೆಡ್ಜಿ ಪೆಟಿಯಾಗರ ಅವರು ಸೂರತ್ನಲ್ಲಿ ನಿಧನರಾದರು. ಇವರು 1928ರ ವರ್ಷದಲ್ಲಿ ಮುಂಬೈನ ಡೆಪ್ಯೂಟಿ ಕಮಿಷನರ್ ಆಫ್ ಪೋಲೀಸ್ ಆಗಿ ಅಧಿಕಾರ ವಹಿಸಿಕೊಡು ಬ್ರಿಟಿಷ್ ಸರ್ಕಾರದಿಂದ ಉನ್ನತ ಶ್ರೇಣಿಯ ಗೌರವಗಳನ್ನು ಸ್ವೀಕರಿಸಿದ್ದರು.

1982: ಕೆನಡಾದ ರಸಾಯನ ಶಾಸ್ತ್ರ ವಿಜ್ಞಾನಿ ವಿಲ್ಲಿಯಮ್ ಜಿಯಾಕ್ಯೂ ಅವರು ಕ್ಯಾಲಿಫೋರ್ನಿಯಾದ ಬರ್ಕ್ಲೀ ಎಂಬಲ್ಲಿ ನಿಧನರಾದರು. ಸೊನ್ನೆ ಡಿಗ್ರಿ ಉಷ್ಣಾಂಶದಲ್ಲಿ ವಸ್ತುವಿನ ಗುಣಗಳನ್ನು (ಪ್ರಾಪರ್ಟಿಸ ಆಫ್ ಮ್ಯಾಟರ್ ಇನ್ ಆಬ್ಸಲ್ಯೂಟ್ ಜೀರೋ) ನಿರೂಪಿಸಿದ ಇವರಿಗೆ 1949 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

2006: ಟೆಂಪಲ್ ಆಫ್ ಕಾನ್ಷಿಯಸ್ ಮುಖ್ಯಸ್ಥ ಆಧ್ಯಾತ್ಮಿಕ ಗುರು ವೇಥಾಥಿರಿ ಮಹರ್ಷಿ ತಮ್ಮ 96ನೆಯ ವಯಸ್ಸಿನಲ್ಲಿ ಕೊಯ್ಮತ್ತೂರಿನಲ್ಲಿ ನಿಧನರಾದರು.

2006: ನಾಲ್ಕು ಬಾರಿ ಹರ್ಯಾಣದ ಮುಖ್ಯಮಂತ್ರಿಗಳಾಗಿದ್ದ ಬನ್ಸಿಲಾಲ್ ಅವರು ನವದೆಹಲಿಯಲ್ಲಿ ನಿಧನರಾದರು.