Categories
e-ದಿನ

ಮಾರ್ಚ್-30

ಪ್ರಮುಖಘಟನಾವಳಿಗಳು:

1699: ಗುರುಗೋಬಿಂದ್ ಸಿಂಗ್ ಅವರು ಪಂಜಾಬಿನ ಆನಂದಪುರ ಸಮೀಪದ ಕೇಶ್ ಗಢಸಾಹಿಬ್ ನಲ್ಲಿ `ಖಾಲ್ಸಾ ಪಂಥ’ ಹುಟ್ಟು ಹಾಕಿದರು. ‘ಗುರುಗ್ರಂಥ ಸಾಹಿಬ್’ ಅನ್ನು ಸಿಖ್ ಪಂಥದ ಪವಿತ್ರ ಗ್ರಂಥ ಎಂದು ಘೋಷಿಸಲಾಯಿತು.

1841: ಅಥೆನ್ಸ್ ನಗರದಲ್ಲಿ ನ್ಯಾಷನಲ್ ಬ್ಯಾಂಕ್ ಆಫ್ ಗ್ರೀಸ್ ಪ್ರಾರಂಭಗೊಂಡಿತು.

1842: ಅಮೆರಿಕದ ಶಸ್ತ್ರಚಿಕಿತ್ಸಕರಾದ ಡಾ. ಕ್ರಾಫರ್ಡ್ ಲಾಂಗ್ ಅವರು ಪ್ರಥಮ ಬಾರಿಗೆ ಈಥರ್ ಅನೇಸ್ತೇಶಿಯಾವನ್ನು ಶಸ್ತ್ರ ಚಿಕಿತ್ಸೆಯೊಂದಕ್ಕೆ ಬಳಸಿದರು.

1867: ಅಮೆರಿಕವು ಅಲಾಸ್ಕಾವನ್ನು ರಷ್ಯಾದಿಂದ 7.2 ಮಿಲಿಯನ್ ಡಾಲರಿಗೆ ಕೊಂಡುಕೊಂಡಿತು.

1949: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಜೈಪುರದಲ್ಲಿ ‘ಯೂನಿಯನ್ ಆಫ್ ಗ್ರೇಟರ್ ರಾಜಸ್ಥಾನ’ವನ್ನು ಉದ್ಘಾಟಿಸಿದರು.

1952: ಕೆಂಗಲ್ ಹನುಮಂತಯ್ಯನವರು ಕರ್ನಾಟಕದ ಎರಡನೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು.

1981: ಜಾನ್ ಹಿಂಕ್ಲೈ ಎಂಬಾತ ರೋನಾಲ್ಡ್ ರೀಗನ್ ಅವರ ಮೇಲೆ ಗುಂಡು ಹಾರಿಸಿದ. ಈ ಗುಂಡು ರೀಗನ್ ಅವರ ಎದೆಗೆ ಪೆಟ್ಟು ನೀಡಿತಲ್ಲದೆ, ಈ ಘಟನೆಯಲ್ಲಿ ಇನ್ನೂ ಮೂವರಿಗೆ ಗಾಯಗಳಾದವು.

2007: ಹಡಗಿನಿಂದ ಹಡಗಿಗೆ 150 ಕಿಲೋ ಮೀಟರಿನವರೆಗೆ ಗುರಿ ಇಡಬಲ್ಲ ‘ಧನುಷ್ ಕ್ಷಿಪಣಿ’ಯ ಪರೀಕ್ಷಣಾ ಉಡಾವಣೆಯನ್ನು ಬಂಗಾಳಕೊಲ್ಲಿಯ ಪಾರಾದೀಪ್ ಬಂದರಿನ ಸಮೀಪದಲ್ಲಿ ಲಂಗರು ಹಾಕಿದ್ದ ನೌಕಾದಳದ ಹಡಗಿನಿಂದ ಯಶಸ್ವಿಯಾಗಿ ನಡೆಸಲಾಯಿತು.

2007: ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಅವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದರು. ಅವರು 271 ಪಂದ್ಯಗಳಲ್ಲಿ 337 ವಿಕೆಟ್ ಉರುಳಿಸಿದ್ದರು.

2008: ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ‘ಬಿಎಂಟಿಸಿ’ಯು ‘ವಾಯು ವಜ್ರ’ ಬಸ್ ಸೇವೆಯನ್ನು ಆರಂಭಿಸಿತು. ಜೊತೆಗೆ ನಗರದ ಒಳಭಾಗದಲ್ಲಿ ಹೆಚ್ಚಿನ ಜನಸಂದಣಿಯ ಅವಧಿಯಲ್ಲಿ ಸಂಚರಿಸಲಿರುವ ‘ಸುವರ್ಣ ಪೀಕ್ ಹವರ್’ ಬಸ್ ಸೇವೆಯನ್ನೂ ಆರಂಭಿಸಿತು.

2009: ಪಾಕಿಸ್ಥಾನದ ವಾಘಾ ಗಡಿ ಪ್ರದೇಶದಲ್ಲಿರುವ ಮನಾವನ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಶಸ್ತ್ರಸಜ್ಜಿತ ಉಗ್ರಗಾಮಿಗಳು ನಡೆಸಿದ ಭೀಕರ ದಾಳಿಯಲ್ಲಿ ಹನ್ನೊಂದು ಅಧಿಕಾರಿಗಳು ಸೇರಿ 27 ಪೊಲೀಸರು, ಎಂಟು ಉಗ್ರರ ಸಹಿತ ಒಟ್ಟು 35 ಜನ ಹತರಾಗಿ, 100ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡರು. ಆರು ಉಗ್ರರನ್ನು ಜೀವಂತ ಸೆರೆ ಹಿಡಿಯುವಲ್ಲಿ ಸೇನಾ ಪಡೆ ಯಶಸ್ವಿಯಾಯಿತು.

2009: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳು ಪುನಃ ಕನ್ನಡಿಗರಿಗೆ ದಕ್ಕಿದವು. ಈದಿನ ನಡೆದ ಚುನಾವಣೆಯಲ್ಲಿ ಮಹಾಪೌರರಾಗಿ ಯಲ್ಲಪ್ಪ ಕುರ್ಗರ ಹಾಗೂ ಉಪಮಹಾಪೌರರಾಗಿ ಜ್ಯೋತಿ ಭಾವಿಕಟ್ಟಿ ಆಯ್ಕೆಯಾದರು.

2009: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಬಯಸುವರಿಗೆ ಸಮರ್ಪಕ ಮಾಹಿತಿ ನೀಡಲು ನಿರಾಕರಿಸಿದರೆ ಅವರಿಗೆ ದಂಡ ವಿಧಿಸಬಹುದಾಗಿ ಎಂದು ಕೇಂದ್ರ ಮಾಹಿತಿ ಆಯೋಗ ತಿಳಿಸಿತು.

ಪ್ರಮುಖಜನನ/ಮರಣ:

1899: ಬಂಗಾಳಿ ಸಾಹಿತಿ ಮತ್ತು ಚಲನಚಿತ್ರ ಸಾಹಿತ್ಯಕಾರ ಶರದಿಂದು ಬಂದ್ಯೋಪಾಧ್ಯಾಯಾಯ್ ಅವರು ಬ್ರಿಟಿಷ್ ಭಾರತದ ಜೌನ್ ಪುರ್ ಎಂಬಲ್ಲಿ ಜನಿಸಿದರು. ‘ಬ್ಯೋಮಕೇಶ ಬಕ್ಷಿ ಕತೆಗಳು ಅವರ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ.

1906: ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ಮಡಿಕೇರಿಯಲ್ಲಿ ಜನಿಸಿದರು. ಇವರು 1957ರಿಂದ 1961ರವರೆಗೆ ಭಾರತದ ಭೂಸೇನಾ ದಂಡನಾಯಕರಾಗಿದ್ದರು. ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆ ಅಧಿಪತಿಯಾಗಿದ್ದ ತಿಮ್ಮಯ್ಯನವರು ಯುದ್ಧ ಖೈದಿಗಳ ಸ್ವದೇಶಗಳಲ್ಲಿ, ಅವರುಗಳಿಗೆ ಪುನರ್ವಸತಿಯನ್ನು ಸ್ಥಾಪಿಸುವದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾದ ಬಳಿಕ ಸಂಯುಕ್ತ ರಾಷ್ಟ್ರಗಳ ಶಾಂತಿ-ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಸೈಪ್ರಸ್‌ನಲ್ಲಿದ್ದರು. ಹೀಗೆ ತಿಮ್ಮಯ್ಯನವರ ಸಾಧನೆಗಳು ವೈವಿಧ್ಯಪೂರ್ಣವಾದದ್ದು. ಭಾರತ ಸರಕಾರವು ಅವರನ್ನು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

1926: ಪ್ರಸಿದ್ಧ ಅಂತರರಾಷ್ಟ್ರೀಯ ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳ ಮಳಿಗೆ ‘ಐಕಿಯಾ’(IKEA) ಸ್ಥಾಪಕ ಸ್ವೀಡನ್ನಿನ ಉದ್ಯಮಿ ಇಂಗ್ವಾರ್ ಕಂಪರಾಡ್ ಅವರು ಪ್ಜಟ್ಟಿರಿಡ್ ಎಂಬಲ್ಲಿ ಜನಿಸಿದರು.

1908: ಚಲನಚಿತ್ರ ಅಭಿನೇತ್ರಿ, ನಿರ್ಮಾಪಕಿ, ಮೊಟ್ಟ ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ದೇವಕಿ ರಾಣಿ ಅವರು ವಿಶಾಕಪಟ್ಟಣದಲ್ಲಿ ಜನಸಿದರು. ಇವರು ಭಾರತೀಯ ಚಿತ್ರಲೋಕದ ಪ್ರಥಮ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಪದ್ಮಶ್ರೀ, ಪ್ರಥಮ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ನೆಹರೂ ಲ್ಯಾಂಡ್ ಪ್ರಶಸ್ತಿಗಳು ಇವರಿಗೆ ಸಂದಿದ್ದವು.

1938: ಜರ್ಮನಿಯ ಅರ್ಥಶಾಸ್ತ್ರಜ್ಞ ಮತ್ತು ತಂತ್ರಜ್ಞ ಹಾಗೂ ವಿಶ್ವ ಆರ್ಥಿಕ ಸಮುದಾಯ(ವರ್ಲ್ಡ್ ಎಕನಾಮಿಕ್ ಫೋರಂ) ಸ್ಥಾಪಕರಾದ ಕ್ಲಾಸ್ ಸ್ಕ್ವಾಬ್ ಅವರು ರೇವನ್ಸ್ ಬರ್ಗ್ ಎಂಬಲ್ಲಿ ಜನಿಸಿದರು.

1949: ಜರ್ಮನ್ ರಸಾಯನ ಶಾಸ್ತ್ರಜ್ಞ ಫ್ರೆಡ್ರಿಕ್ ಬೆರ್ಗಿಯಸ್ ಅವರು ಬ್ಯೂನೋಸ್ ಏರೆಸ್ ಎಂಬಲ್ಲಿ ನಿಧನರಾದರು. ‘ಕೆಮಿಕಲ್ ಹೈ ಪ್ರೇಷರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1931 ವರ್ಷದ ನೊಬೆಲ್ ರಸಾಯನ ಶಾಸ್ತ್ರ ಪುರಸ್ಕಾರ ಸಂದಿತು.

1949: ಅಮೆರಿಕದ ವೈದ್ಯಶಾಸ್ತ್ರಜ್ಞ ಫಿಲಿಪ್ ಷೋ ಆಲ್ಟರ್ ಹೆಂಚ್ ಜಮೈಕಾ ಬಳಿಯ ಓಚೋ ರಿಯೋಸ್ ಎಂಬಲ್ಲಿ ನಿಧನರಾದರು. ಹಾರ್ಮೋನ್ಸ್ ಆಫ್ ದಿ ಆಡ್ರೆನಾಲ್ ಕಾರ್ಟೆಕ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1950 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1981: ರೀಡರ್ಸ್ ಡೈಜೆಸ್ಟ್ ಪತ್ರಿಕೆಯ ಸಹ ಸಂಸ್ಥಾಪಕ ಡಿವಿಟ್ ವಾಲ್ಲೇಸ್ ನಿಧನರಾದರು.

1916: ರೊಮ್ಯಾಂಟಿಕ್ ಕಲೆಯ ರಸಋಷಿ ಎನಿಸಿದ್ದ ಎಸ್ ಎಂ ಪಂಡಿತ್‌ ಅವರು ನಿಧನರಾದರು. ಪೌರಾಣಿಕ ಪತ್ರಗಳಿಂದ ಸಿನಿಮಾ ಚಲನಚಿತ್ರ ನಟನಟಿಯರ ಚಿತ್ರಣ, ಹಾಗೂ ವಿದೇಶಗಳಲ್ಲಿನ ಅಂತರರಾಷ್ಟ್ರೀಯ ಪ್ರದರ್ಶನಗಳವರೆಗೆ ಇವರ ಕೀರ್ತಿ ವ್ಯಾಪಿಸಿತ್ತು. ಲಂಡನ್ನಿನ ರಾಯಲ್ ಸೊಸೈಟಿ ಫೆಲೋಷಿಪ್. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಹಲವಾರು ಗೌರವಗಳು ಇವರಿಗೆ ಸಂದಿದ್ದವು.

2005: ಪ್ರಸಿದ್ಧ ಸಾಹಿತಿ, ವ್ಯಂಗ್ಯಚಿತ್ರಕಾರ ಮತ್ತು ಚಿತ್ರಕಥೆಗಾರ ಓ.ವಿ. ವಿಜಯನ್ ಅವರು ಹೈದರಾಬಾದಿನಲ್ಲಿ ನಿಧನರಾದರು. ಮಲಯಾಳದಲ್ಲಿ ಹೆಚ್ಚು ಬರೆದಿದ್ದ ಇವರು ಅವುಗಳನ್ನು ಇಂಗ್ಲಿಷ್ ಭಾಷೆಯಲ್ಲೂ ಪ್ರಕಟಿಸಿದ್ದರು. ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

2006: ಖ್ಯಾತ ಹಿಂದಿ ಸಾಹಿತಿ, ಹಿರಿಯ ಪತ್ರಕರ್ತ ಮನೋಹರ್ ಶ್ಯಾಮ್ ಜೋಶಿ ಅವರು ತಮ್ಮ 73ನೇ ವಯಸ್ಸಿನಲ್ಲಿ ದೆಹಲಿಯಲ್ಲಿ ನಿಧನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕತರಾದ ಇವರು ‘ಹಿಂದೂಸ್ಥಾನ್’ ಹಿಂದಿ ವಾರಪತ್ರಿಕೆಯ ಸಂಪಾದಕರಾಗಿದ್ದರು. ‘ಹಮ್ ಲೋಗ್’ ಸೇರಿದಂತೆ ಅನೇಕ ಪ್ರಸಿದ್ಧ ಧಾರಾವಾಹಿಗಳನ್ನು ಬರೆದಿದ್ದರು.

2007: ಹಿರಿಯ ನಾಟ್ಯ ಕಲಾವಿದೆ ಮತ್ತು ನೃತ್ಯಗುರು ನರ್ಮದಾ ಅವರು ಬೆಂಗಳೂರಿನಲ್ಲಿ ನಿಧನರಾದರು. ಅನೇಕ ಖ್ಯಾತ ನೃತ್ಯ ಪಟುಗಳಿಗೆ ಇವರು ಗುರುವಾಗಿದ್ದರು. ಇವರಿಗೆ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರದ ಶಾಂತಲಾ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿದ್ದವು.