Categories
e-ದಿನ

ಮಾರ್ಚ್-31

ಪ್ರಮುಖಘಟನಾವಳಿಗಳು:

627: ಟ್ರೆಂಚ್ ಕದನದಲ್ಲಿ ಅಬು ಸುಫ್ಯಾನನ ಬೃಹತ್ ಪಡೆ ಮದೀನಾದಲ್ಲಿ ಮುಹಮ್ಮದ್ ಅವರ ಪಡೆಗಳ ಮೇಲೆ ಮುತ್ತಿಗೆ ಹಾಕಿದವು. ಮುಹಮ್ಮದರ ಜಾಣ್ಮೆಯಿಂದ ವಿರೋಧಿಗಳ ಈ ಮುತ್ತಿಗೆ ಸಫಲವಾಗಲಿಲ್ಲ.

1889: ಪ್ಯಾರಿಸ್ಸಿನಲ್ಲಿ ಐಫೆಲ್ ಗೋಪುರವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಗೋಪುರದ ವಿನ್ಯಾಸಕಾರ ಗಸ್ಟಾವ್ ಐಫೆಲ್ ಅವರು ಗೋಪುರದ ಶಿಖರದಲ್ಲಿ ಫ್ರೆಂಚ್ ಧ್ವಜವನ್ನು ಹಾರಿಸಿದರು.

1918: ಅಮೆರಿಕದಲ್ಲಿ ಪ್ರಪ್ರಥಮ ಬಾರಿಗೆ ‘ಡೇ ಲೈಟ್ ಸೇವಿಂಗ್ ಟೈಮ್’ ಅನ್ನು ಜಾರಿಗೊಳಿಸಲಾಯಿತು. ಈ ಪ್ರಕಾರವಾಗಿ ಬೇಸಿಗೆ ಕಾಲದಲ್ಲಿ ಸಾಯಂಕಾಲಗಳು ಒಂದು ತಾಸು ಹೆಚ್ಚಿರಲಿ ಎಂದು ‘ದಿನವನ್ನು ಒಂದು ಗಂಟೆ ಮುಂಚಿತವಾಗಿ ಆರಂಭವಾಗುವಂತೆ’ ಗಡಿಯಾರಗಳಲ್ಲಿನ ಸಮಯವನ್ನು ಬದಲಿಸಿಕೊಳ್ಳುತ್ತಾರೆ. ಮತ್ತು ಬೇಸಿಗೆ ಕಳೆದ ನಂತರದಲ್ಲಿ ಪುನಃ ಗಡಿಯಾರಗಳನ್ನು ಸರಿಯಾದ ಸಮಯಕ್ಕೆ ಅಳವಡಿಸಿಕೊಳ್ಳುತ್ತಾರೆ.

1930: ಅಮೆರಿಕದಲ್ಲಿ ‘ಮೋಶನ್ ಪಿಕ್ಚರ್ ಪ್ರೊಡಕ್ಷನ್ ಕೋಡ್’ ಅಂದರೆ ಚಲನಚಿತ್ರಗಳ ನೀತಿ ಸಂಹಿತೆಯ ಅಳವಡಿಕೆಯನ್ನು ರೂಪಿಸಲಾಯಿತು. ಈ ಮೂಲಕವಾಗಿ ಅಲ್ಲಿ ಮುಂದಿನ 38 ವರ್ಷಗಳ ಕಾಲ ಲೈಂಗಿಕತೆ, ಅಪರಾಧ, ಧರ್ಮ ಮತ್ತು ಹಿಂಸೆಗಳನ್ನು ಬಿಂಬಿಸುವ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗುತ್ತಿತ್ತು.

1959: ಹದಿನಾಲ್ಕನೇ ದಲೈಲಾಮಾ ಅವರು ಗಡಿದಾಟಿ ಭಾರತದಲ್ಲಿ ರಾಜಕೀಯ ರಕ್ಷಣೆ ಪಡೆದರು.

1966: ಸೋವಿಯತ್ ಯೂನಿಯನ್ ‘ಲೂನಾ 10’ ಬಾಹ್ಯಾಕಾಶ ಅನ್ವೇಷಣಾ ಉಪಗ್ರಹವನ್ನು ಕಳುಹಿತು. ಇದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಪ್ರಥಮ ಉಪಗ್ರಹವೆನಿಸಿತು.

1970: ‘ಎಕ್ಸ್’ಪ್ಲೋರರ್-1’ ತನ್ನ ಹನ್ನೆರಡು ವರ್ಷಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಹಿಂದಿರುಗಿತು.

1981: ಭಾರತೀಯ ಸಂಜಾತ ಅಮೆರಿಕನ್ ವಿಜ್ಞಾನಿ ಆನಂದ ಚಕ್ರವರ್ತಿ ಅವರು ಪ್ಲಾಸ್ಮಿಡ್ ಉಪಯೋಗಿಸಿ ಕೃತಕವಾಗಿ ಜೀವಿ ಸೃಷ್ಟಿಸಿದ್ದಕ್ಕಾಗಿ ಪೇಟೆಂಟ್ ಪಡೆದರು. ಒಂದು ಜೀವಂತ ಕಣಕ್ಕೆ ಸಿಕ್ಕಿದ ಮೊದಲ ಪೇಟೆಂಟ್ ಇದು.

1998: ನೆಟ್ಸ್ಕೇಪ್ ಸಂಸ್ಥೆಯು ‘ಮೊಜಿಲ್ಲಾ’ವನ್ನು ಪರವಾನಗಿ ಮುಕ್ತ ಸೋರ್ಸ್ ಕೋಡ್ ರೂಪದಲ್ಲಿ ಬಿಡುಗಡೆ ಮಾಡಿತು.

2001: ಸಚಿನ್ ತೆಂಡುಲ್ಕರ್ ಅವರು ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 10,000 ರನ್ನುಗಳ ಸಾಧನೆ ಮಾಡಿದ ಪ್ರಥಮ ಕ್ರಿಕೆಟ್ ಆಟಗಾರ ಎನಿಸಿದರು.

2009: ವಿಶ್ವದ ಏಳು ಅಚ್ಚರಿಗಳಂತೆಯೇ ಭಾರತ ದೇಶದ ಏಳು ಅದ್ಭುತಗಳು ಪ್ರಕಟಗೊಂಡವು. ಇವುಗಳಲ್ಲಿ ತಾಜ್‌ಮಹಲ್‌ ಪ್ರಥಮ ಸ್ಥಾನ ಪಡೆದಿದ್ದು ಇತರ ಆರು ಸ್ಥಾನಗಳಲ್ಲಿ ಕೊನಾರ್ಕ್ ಸೂರ್ಯದೇಗುಲ, ಮಧುರೆ ಮೀನಾಕ್ಷಿ ದೇವಸ್ಥಾನ, ಖಜುರಾಹೋ, ಕೆಂಪು ಕೋಟೆ, ಜೈಸಲ್ಮೇರ್ ಅರಮನೆ, ನಲಂದಾ ವಿಶ್ವವಿದ್ಯಾಲಯ ಹಾಗೂ ಗುಜರಾತಿನ ಕಛ್ ಜಿಲ್ಲೆಯ ದೇಶದ ಅತಿದೊಡ್ಡ ಪ್ರಾಚ್ಯವಸ್ತು ತಾಣ ಧೊಲವಿರಾ ಸೇರಿವೆ. ದೇಶದ ವಾಸ್ತುಶಿಲ್ಪ ಪರಂಪರೆ ಗುರುತಿಸುವ ಉದ್ದೇಶದಿಂದ ಎನ್‌ಡಿಟಿವಿ ಸುದ್ದಿ ವಾಹಿನಿಯು ಈ ಅಭಿಯಾನ ನಡೆಸಿತ್ತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯ ಪಯಣಕ್ಕೆ ಚಾಲನೆ ದೊರಕಿತು. ಚೀನಾದ ಅಧ್ಯಕ್ಷ ಹು ಜಿಂಟಾವೊ ಅವರು ಬೀಜಿಂಗಿನ ತಿಯಾನನ್ಮೆನ್ ಚೌಕದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜ್ಯೋತಿಯ ಜಾಗತಿಕ ರಿಲೇಗೆ ಚಾಲನೆ ನೀಡಿದರು.

1878: ಜಾಗತಿಕ ಹೆವಿ ವೈಟ್ ಬಾಕ್ಸಿಂಗ್ ಚಾಂಪಿಯನ್ ಆದ ಪ್ರಥಮ ಕರಿಯ ವ್ಯಕ್ತಿಯಾದ ಜಾನ್ ಆರ್ಥರ್ ‘ಜಾಕ್ ಜಾನ್ಸನ್’ ಅವರು ಟೆಕ್ಸಾಸಿನ ಗಾಲ್ವೆಸ್ಟನ್ ಎಂಬಲ್ಲಿ ಜನಿಸಿದರು.

1890: ಆಸ್ಟ್ರೇಲಿಯನ್-ಇಂಗ್ಲಿಷ್ ಭೌತಶಾಸ್ತ್ರಜ್ಞ ವಿಲಿಯಂ ಲಾರೆನ್ಸ್ ಬ್ರಾಗ್ ಅವರು ಆಸ್ಟ್ರೇಲಿಯಾದ ಅಡಿಲೈಡ್ ನಗರದಲ್ಲಿ ಜನಿಸಿದರು. ‘ಅನಾಲಿಸಿಸ್ ಆಫ್ ಕ್ರಿಸ್ಟಲ್ ಸ್ಟ್ರಕ್ಚರ್ಸ್ ಬೈ ಮೀನ್ಸ್ ಆಫ್ ಎಕ್ಸ್-ರೇ’ ಕುರಿತಾದ ಇವರ ಕಾರ್ಯಕ್ಕೆ 1915 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1906: ಜಪಾನಿನ ಭೌತವಿಜ್ಞಾನಿ ಸಿನ್-ಇಟಿರೋ ತೊಮೊನಗ ಅವರು ಟೋಕಿಯೋದಲ್ಲಿ ಜನಿಸಿದರು. ಇವರಿಗೆ ‘ಕ್ವಾಂಟಮ್ ಎಲೆಕ್ಟ್ರೋ ಡೈನಮಿಕ್ಸ್’ ಕುರಿತಾದ ಸಂಶೋಧನೆಗಾಗಿ 1965 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1914: ಸಾಹಿತಿ ಓಕ್ಟಾವಿಯೋ ಪಾಜ್ ಅವರು ಮೆಕ್ಸಿಕೋ ನಗರದಲ್ಲಿ ಜನಿಸಿದರು. ಅವರಿಗೆ 1990ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1934: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಕಾರ್ಲೋ ರಬ್ಬಿಯಾ ಅವರು ಇಟಲಿಯ ಗೊರಿಸಿಯಾ ಎಂಬಲ್ಲಿ ಜನಿಸಿದರು. ಇವರಿಗೆ ‘W and Z particles at CERN’ ಕುರಿತಾದ ಸಂಶೋಧನೆಗೆ 1958 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತು.

1938: ಹದಿನೈದು ವರ್ಷಗಳ ಕಾಲ ದೆಹಲಿಯ ಮುಖ್ಯಮಂತ್ರಿಗಳಾಗಿದ್ದ ಶೀಲಾ ದೀಕ್ಷಿತ್ ಪಂಜಾಬಿನ ಕಪುರ್ತಲ ಎಂಬಲ್ಲಿ ಜನಿಸಿದರು.

1972: ಟ್ವಿಟ್ಟರ್ ಮತ್ತು ಪೈರಾ ಲ್ಯಾಬ್ಸ್ ಸಹ-ಸಂಸ್ಥಾಪಕ ಇವಾನ್ ವಿಲಿಯಮ್ಸ್ ಅವರು ಅಮೆರಿಕದ ಕ್ಲಾರ್ಕ್ಸ್ ಎಂಬಲ್ಲಿ ಜನಿಸಿದರು.

ಪ್ರಮುಖಜನನ/ಮರಣ:

1917: ಜರ್ಮನಿಯ ವೈದ್ಯ ವಿಜ್ಞಾನಿ ಎಮಿಲ್ ವಾನ್ ಬೆಹ್ರಿಂಗ್ ಅವರು ಮಾರ್ಬರ್ಗ್ ಎಂಬಲ್ಲಿ ನಿಧನರಾದರು. ಡಿಫ್ತೀರಿಯಾ ರೋಗಕ್ಕೆ ಔಷದ ಕಂಡುಹಿಡಿದ ಇವರು ‘ಮಕ್ಕಳ ಸಂರಕ್ಷರೆಂಬ’ ಕೀರ್ತಿಗೆ ಪಾತ್ರರಾಗಿ 1901 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಪಡೆದರು.

1945: ಜರ್ಮನಿಯ ರಸಾಯನ ಶಾಸ್ತ್ರಜ್ಞ ಹಾನ್ಸ್ ಫಿಷರ್ ಅವರು ವಿಶ್ವಮಹಾಯುದ್ಧದ ಕೊನೆಯ ದಿನಗಳಲ್ಲಿ ತಮ್ಮ ಸಂಸ್ಥೆ ಮತ್ತು ಮಾಡಿದ ಕೆಲಸಗಳು ಧ್ವಂಸಗೊಂಡಿದ್ದರಿಂದ ನೋವಿನಿಂದ ಮ್ಯೂನಿಚ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ‘ಹೆಮಿನ್ ಮತ್ತು ಕ್ಲೋರೋಫಿಲ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1930 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2001: ಪುರಸ್ಕೃತ ಭೌತಶಾಸ್ತ್ರಜ್ಞ ಕ್ಲಿಫ್ಫರ್ಡ್ ಷುಲ್ ಅವರು ಮೆಸ್ಸಚುಸೆಟ್ಸ್ ಪ್ರದೇಶದ ಮೆಡ್ಫೋರ್ಡ್ ಎಂಬಲ್ಲಿ ನಿಧನರಾದರು. ಇವರಿಗೆ ‘ನ್ಯೂಟ್ರಾನ್ ಸ್ಕಾಟರಿಂಗ್’ ಕುರಿತಾದ ಸಂಶೋಧನೆಗಾಗಿ 1994 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

2007: ಸಂಗೀತ ಕಲಾವಿದ ಎಸ್. ಜಿ. ರಘುರಾಂ ಅವರು ತಮ್ಮ 76ನೆಯ ವಯಸ್ಸಿನಲ್ಲಿ ಮೈಸೂರಿನಲ್ಲಿ ನಿಧನರಾದರು. 1983ರಲ್ಲಿ ಅಮೆರಿಕದಲ್ಲಿ ನಡೆದ ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾವಗೀತೆ ಹಾಡಿದ ಮೊದಲ ಕನ್ನಡಿಗರು ಎಂಬ ಕೀರ್ತಿಗೆ ರಘುರಾಂ ಭಾಜನರಾಗಿದ್ದರು. ಇವರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸಂದಿತ್ತು.

2016: ಹಂಗೇರಿಯ ಸಾಹಿತಿ ನೊಬೆಲ್ ಪುರಸ್ಕೃತ ಇಮ್ರೆ ಕೆರ್ಟೆಸ್ ಅವರು ಬುಡಾಪೆಸ್ಟ್ ಎಂಬಲ್ಲಿ ನಿಧನರಾದರು.