ಕಲಾವಿದರು ಕಥಾಲೋಕವನ್ನು ಪ್ರವೇಶ ಮಾಡುವ ಮೊದಲು ಮೊರದಲ್ಲಿ ಅಕ್ಕಿ ಅಥವಾ ಜೋಳವನ್ನು ಇಟ್ಟು ಅದರ ಮೇಲೆ ಕಳಸವನ್ನು ಸ್ಥಾಪಿಸುತ್ತಾರೆ. ಕಳಸಕ್ಕೆ ಹೂವಿನಿಂದ ಅಲಂಕರಿಸಿ ಅರಿಶಿಣ ಕುಂಕುಮಗಳಿಂದ ಪೂಜಿಸುತ್ತಾರೆ. ಗಂಧದಕಡ್ಡಿಗಳಿಂದ ಬೆಳಗಿ ಹಚ್ಚುತ್ತಾರೆ. ಪಕ್ಕದಲ್ಲಿ ಎರಡೋ, ಮೂರೋ ತೆಂಗಿನ ಕಾಯಿಗಳನ್ನು ಇಟ್ಟುಕೊಂಡಿರುತ್ತಾರೆ. ಮುಂದೆ ಕಾವ್ಯದಲ್ಲಿ ಉಂಟಾಗಬಹುದಾದ ಸಾವಿನ ಸಂದರ್ಭದಲ್ಲಿ ಕಾಯಿಗಳನ್ನು ಒಡೆದು ಶಾಂತಿ ಪರಿಹಾರ ಮಾಡುತ್ತಾರೆ. ಇದನ್ನು ಮುಖ್ಯಗಾಯಕಿಯೇ ಮಾಡುತ್ತಾಳೆ. ಮುಖ್ಯ ಗಾಯಕಿ ಶ್ರುತಿ ಮಾಡಿದ ತಂಬೂರಿಯನ್ನು ಹಿಡಿದು ಬೆರಳಿಗೆ ಗಗ್ಗರಗಳನ್ನು ಹಾಕಿಕೊಂಡು ಕುಳಿತುಕೊಂಡಿರುತ್ತಾಳೆ. ಸಹಗಾಯಕಿಯರು ಮುಖ್ಯ ಗಾಯಕಿಯ ಅಕ್ಕಪಕ್ಕದಲ್ಲಿ ಗಮಟೆ ವಾದ್ಯಗಳನ್ನು ಶ್ರುತಿ ಮಾಡಿಕೊಂಡು ಕುಳಿತಿರುತ್ತಾರೆ. ಕಾವ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರಾರ್ಥನೆಯಲ್ಲಿ ಬರುವ ದೇವರುಗಳೆಲ್ಲ ಕಲಾವಿದರು ದಿನ ನಿತ್ಯ ಪೂಜಿಸುವ ಸುತ್ತಲಿನ ದೈವಗಳೇ ಆಗಿವೆ. ಅವು ಜನಸಾಮಾನ್ಯರ ದೇವತೆಗಳೂ ಹೌದು. ಕಲಾವಿದರು ಬಳ್ಳಾರಿ ಜಿಲ್ಲೆಯವರಾಗಿದ್ದರಿಂದ ಈ ಜಿಲ್ಲೆಯ ಸುತ್ತಲಿನ ದೇವತೆಗಳನ್ನು ಸ್ಮರಿಸುತ್ತಾರೆ. ಜನಪದರು ಯಾವುದೇ ಕಾರ್ಯ ಮಾಡುವ ಮೊದಲು ದೇವರನ್ನು ನೆನೆಸುವುದು ಆ ಕಾರ್ಯದ ಒಂದು ಸಾಮಾನ್ಯ ಭಾಗವಾಗಿ ಕಂಡುಬರುತ್ತದೆ.

ಅಮ್ಮ ಬಾರಮ್ಮ ಹುಲಿಗಿ ಮಾರಮ್ಮ
ಅಪ್ಪ ಬಾರಪ್ಪ ಮೈಲಾರ ಲಿಂಗ
ನಿನ್ನ ನಾವು ನೆನಸಿವಿ ತಾತ
ಹಂಪೆ ಒಳಗಿರುವ ಪಂಪಾಪತಿ
ವಸಿಪ್ಯಾಟಿ ಗಾಳಿಮಾರಮ್ಮ

ಹೀಗೆ ಮುಂದುವರಿಯುತ್ತದೆ. ಅಕ್ಷರ ಜ್ಞಾನವಿಲ್ಲದ ಬುದ್ಧಿವಂತರು, ಜಾಣರು ಬೃಹತ್ ಮಹಾಕಾವ್ಯಗಳನ್ನು ನೆನಪಿನಲ್ಲಿ ಇಟ್ಟುಕೊಂಡಿರುವ ಇವರ ಸ್ಮೃತಿ ಮತ್ತು ನಾಲಿಗೆಗೆ ದೇವರ ನಾಮಸ್ಮರಣೆ, ಹಲವು ಗಂಟೆಗಳವರೆಗೆ ಹೇಳುವ ಶಕ್ತಿಯನ್ನು ಕೊಡುತ್ತದೆ. ತಂಬೂರಿಯ ಮೇಲೆ ಗಗ್ಗರಗಳನ್ನು ಲಯಬದ್ಧವಾಗಿ ಬಾರಿಸುತ್ತಾ ಗಾಯಕಿ ಹಾಡಲು ಆರಂಭಿಸುತ್ತಾಳೆ. ಅದರಂತೆ ಗುಮಟೆ ಹಿಡಿದ ಸಹ ಗಾಯಕಿಯರು ಹಾಡುತ್ತಾರೆ. ನಾಲ್ಕರಿಂದ ಐದು ರಾತ್ರಿಗಳವರೆಗೆ ಸುಲಲಿತವಾಗಿ ಹಾಡಿದರೂ, ಮೊದಲಿನ ಉತ್ಸಾಹವನ್ನು ಕಳೆದುಕೊಳ್ಳದೆ ಕೊನೆಯವರೆಗೂ ಹಾಡುತ್ತಾ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಹಾವ ಭಾವ ಮುಖದ ಅಭಿನಯಗಳು ಕಾವ್ಯದಲ್ಲಿ ಬರುವ ಪಾತ್ರಗಳಿಗನುಗುಣವಾಗಿರುತ್ತವೆ. ಧ್ವನಿಯ ಏರಿಳಿತಗಳು ಕೂಡ ಅಷ್ಟೆ ಸೊಗಸಾಗಿ ಕೇಳಲು ಹಿತವಾಗಿರುತ್ತವೆ.

ಹಲವು ರಾತ್ರಿಗಳವರೆಗೆ ಹಾಡುವ ಶಕ್ತಿಯನ್ನ ಇಟ್ಟುಕೊಂಡ ಕಲಾವಿದೆ ಶ್ರೀಮತಿ ದರೋಜಿ ಈರಮ್ಮನ ಒಡಲಲ್ಲಿ ಇನ್ನೂ ಇಂತಹ ಅನೇಕ ಕಾವ್ಯಗಳಿವೆ. ಒಂದೊಂದು ಕಾವ್ಯವು ಹಲವು ರಾತ್ರಿಗಳವರೆಗೆ ಹಾಡುವ ದೀರ್ಘ ಕಾವ್ಯಗಳಾಗಿವೆ. ಈ ಕಾವ್ಯಗಳನ್ನು ಬಳ್ಳಾರಿಯ ಸುತ್ತಮುತ್ತಲಿನ ಹಳ್ಳಿಯ ರೈತರು ಸುಗ್ಗಿಯ ಕಾಲದಲ್ಲಿ ಕಲಾವಿದೆಯನ್ನು ಕರೆದು ಹಾಡಿಸುವ ಪದ್ಧತಿಯನ್ನು ಇಟ್ಟುಕೊಂಡಿದ್ದಾರೆ. ಹಾಡಿದ ಕಲಾವಿದೆಗೆ ಗೌರವಾರ್ಥವಾಗಿ ಊಟ, ತಿಂಡಿ ಕೊಟ್ಟು ಸ್ವಲ್ಪ ಧಾನ್ಯ, ಹೊಸ ಬಟ್ಟೆ ಹಾಗೂ ಹಣವನ್ನು ಕೊಡುತ್ತಾರೆ. ಕಾವ್ಯದಲ್ಲಿ ಜನರ ವಾಸ್ತವ ಜೀವನದ ರೀತಿ, ನೀತಿ, ನಿಯಮಗಳ ರಕ್ತ, ಮಾಂಸಗಳು ಮೈ ತುಂಬಿಕೊಂಡಿರುವುದರಿಂದ ಈಗಲೂ ಜನ ಕಾವ್ಯಗಳನ್ನು ಭಕ್ತಿ ಗೌರವಗಳಿಂದ ಕೇಳುತ್ತಾರೆ.

ಜನ ಸಾಮಾನ್ಯರೊಂದಿಗೆ ಬದುಕಿ ಬಾಳಿ ಅವರಿಗೆ ಹತ್ತು ಹಲವು ರೀತಿಯಲ್ಲಿ ಸಹಾಯ ಮಾಡಿದ ಒಬ್ಬ ಶ್ರೀಮಂತ ಜೈನ ಮಾರವಾಡಿಯ ಕಥೆ ಇದಾಗಿದೆ. ಎಂದೋ ಒಂದು ಕಾಲದಲ್ಲಿ ನಡೆದ ಸತ್ಯ ಸಂಗತಿ ಜನರ ನೆನಪಿನಾಳಕ್ಕಿಳಿದು ಜನರಿಂದ ಜನರಿಗೆ ಹರಿದು ಇಂದು ಕಾವ್ಯವಾಗಿದೆ. ಈ ಕಾರಣದಿಂದಲೇ ಜನಪದ ಕಾವ್ಯಗಳೆಲ್ಲಾ ಜೀವನದ ಭಾಗವಾಗಿ ಕಾಣುತ್ತವೆ. ದಾಯಾದಿ ಮತ್ಸರ, ರಾಗದ್ವೇಷ ಎಲ್ಲವೂ ಮೇಳೈಸಿ ವಾಸ್ತವಕ್ಕೆ ಹತ್ತಿರವಾಗಿರುತ್ತವೆ. ಇದಕ್ಕೆ ಉದಾಹರಣೆಯಾಗಿ ಕಾವ್ಯದಲ್ಲಿ ಬರುವ ಕೆಲ ಪ್ರಸಂಗಗಳನ್ನು ನೋಡಬಹುದು. ತಾನು ತನ್ನದು, ತನ್ನ ಮಕ್ಕಳಿಗಾಗಿ ಮಾಡಿದ ಆಸ್ತಿ ಎಂದು ತನಗೆ ಮುಳುವಾಗುವುದು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಅನುರೂಪರಾದ ಕನ್ಯೆಯರೊಂದಿಗೆ ಮದುವೆ ಮಾಡಿಸಿದ ತಂದೆ ಮುದಿಯನಾದನೆಂಬ ಒಂದೇ ಕಾರಣಕ್ಕೆ, ಕೊನೆಯ ಎರಡೂ ಮಕ್ಕಳು ನೋಡಿಕೊಳ್ಳುವುದಕ್ಕೆ ನಿರಾಕರಿಸುತ್ತಾರೆ. ಆ ವಿವರಗಳನ್ನು ವಾಸ್ತವದಿಂದ ಅವಾಸ್ತವದ ಕಡೆಗೆ ಹೋಗದಂತೆ ಹಾಡುತ್ತಾರೆ.

ಯಪ್ಪ ತಾಯಿ ತಂದೆ ನನ್ಗೆ ಬೇಕಿಲ್ಲರ
ಮುದೇರು ಕೂಳ ಋಣಾರ
ಹಳೆದು ಬಟ್ಟಿದಾರ ಋಣಾರ
ನಿನ್ನ್ಹೆಂಡ್ತಿ ನೀಟದವರ
ನನ್ನ್ಹೆಂಡ್ತಿ ನೀಟದವರ

ಆದರೆ ತಂದೆ ತಾಯಿಯರ ಬಗೆಗೆ ಅಪಾರವಾದ ಗೌರವ ಪ್ರೀತಿ ಇಟ್ಟುಕೊಂಡಿರುವ ದೊಡ್ಡ ಮಗ ತನ್ನ ಹುಟ್ಟಿಗೆ ಕಾರಣರಾದವರನ್ನು ಮರೆಯುವುದಿಲ್ಲ. ನೀವಿಲ್ಲದೆ ನಾನು ಇಲ್ಲಿ ಬರಲು ಸಾಧ್ಯವಿಲ್ಲ. ನನಗೆ ಆಸ್ತಿ, ಮನೆ, ಮಠ, ಬೆಳ್ಳಿ, ಬಂಗಾರ ಮತ್ತು ರತ್ನಗಳೇನು ಬೇಡ, ನೀವು ನನಗೆ ಬೇಕು. ನನ್ನ ಗುರುದೈವ ಎಲ್ಲವೂ ನೀವೇ. ನಿಮ್ಮನ್ನು ಸಾಯುವ ತನಕ ಜೋಪಾನ ಮಾಡುತ್ತೇನೆ ಎಂದು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅದರಂತೆ ಆತನ ಧರ್ಮಪತ್ನಿಯು ಕೂಡ ಅತ್ತೆಮಾವರನ್ನು ಆರೈಕೆ ಚೆನ್ನಾಗಿ ಮಾಡುತ್ತಾಳೆ. ಕಾವ್ಯವು ನಿತ್ಯ ನಡೆಯುವ ವಾಸ್ತವ ಸಂಗತಿಯನ್ನು ಹೇಳುತ್ತಾ ಮುಂದುವರೆಯುತ್ತದೆ.

ಯಪ್ಪ ನೀಲಿಲ್ದೆ ನಾವು ಹುಟ್ಟಿಲ್ಲರ
ತಾಯಿ ಇಲ್ದೆ ನಾವು ಬೆಳೆದಿಲ್ಲರ
ತಾಯ ತಂದೆ ಗುರು ದೈವರ
ಬೆಳ್ಳಿ ಬಂಗಾರ ಬೇಕಿಲ್ಲರ
ತಾಯಿ ತಂದೆ ನನ್ಗೆ ಬೇಕುರ
ಜೀವ ನನ ತಾಯಿ ತಂದೆರ
ಜೀವ ಹೋಗುವ ತನಕ ಸಲುತಿನ
ಜನಮ ತನಕ ಸಲುತಿನ
ಜನಮ ತನಕ ಜೋಪಾನ ಮಾಡಿನ

ಹೀಗೆ ಆಸ್ತಿ ಮನೆ, ಬಂಗಾರ ಮತ್ತು ರತ್ನ ಎಲ್ಲವುಗಳಿಗಿಂತ ಜನ್ಮ ನೀಡಿ, ಬೆಳೆಸಿದ ತಂದೆ, ತಾಯಿ ಮೇಲು ಎಂಬ ನೀತಿಯನ್ನು ಸಾರುತ್ತದೆ.

‘ಮಾರ್ವಾಡಿ ಶೇಠರ’ ಕಾವ್ಯವು ಬಜೆರಾವ್‌ನು ಊರನ್ನು ಕಟ್ಟುವಲ್ಲಿಂದ ಆರಂಭವಾಗಿ ಅವನ ಮೂರು ತಲೆಮಾರಿನ ಮೊಮ್ಮಕ್ಕಳು ದೊಡ್ಡ ನಗರಕ್ಕೆ ಬರುವಲ್ಲಿಗೆ ಮುಗಿಯುತ್ತದೆ. ಈ ನಡುವೆ ಆಸ್ತಿಯನ್ನು ಮಾಡುವ, ಮಾಡಿದನ್ನು ಉಳಿಸಿಕೊಳ್ಳುವ, ಜನರಿಗೆ ಸಹಾಯ ಮಾಡುವ ಹೀಗೆ ಹತ್ತು ಹಲವು ವಿವರಣೆಗಳೊಂದಿಗೆ ಸಾಗುತ್ತದೆ. ಇದರ ಜೊತೆಗೆ ಕುಟುಂಬದಲ್ಲಿಯ ಜಗಳ, ಒಬ್ಬನ ಆಸ್ತಿ ಇನ್ನೊಬ್ಬನು ಅನುಭವಿಸುವದರಿಂದ ಆಗುವ ತೊಂದರೆಗಳು, ಸಾವು ನೋವುಗಳು ಎಲ್ಲವು ಕಾವ್ಯದ ಒಳಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಕೊನೆಗೆ ಎಲ್ಲಿಂದ ಬಂದರೂ ಅಲ್ಲಿಗೆ ಹೋಗುವಲ್ಲಿ ಕಾವ್ಯ ಕೊನೆಯನ್ನು ಕಾಣುತ್ತದೆ.

ಎಂದೋ ಒಂದು ಕಾಲಘಟ್ಟದಲ್ಲಿ ಘಟಿಸಿದ ಸತ್ಯ ಸಂಗತಿ ಕಾವ್ಯವಾಗಿ ಜನಪದ ನೆನಪಿನಾಳದಲ್ಲಿ ಸೇರಿ ಪರಂಪರೆಯಿಂದ ಪರಂಪರಗೆ ಮೌಖಿಕವಾಗಿ ಸಾಗಿ ಬಂದಿದೆ. ಈ ಕತೆ ತನ್ನದೇ ಆದ ಸಾಂಸ್ಕೃತಿಕ ವಿವರಗಳ ಮೂಲಕ ತನ್ನ ಇಚ್ಚೆಗೆ ತಕ್ಕುದಾದ ನಾದ, ಲಯಗಳ ಮೂಲಕ ಬುರಕಥಾ ಕಲಾವಿದರ ನೆನಪಿನಾಳದಲ್ಲಿ ಇನ್ನೂ ಜೀವಂತವಾಗಿದೆ. ಇದುವರೆಗೂ ನೆನಪಿನಿಂದ ನೆನಪಿಗೆ ಸಾಗುತ್ತಿದ್ದ ಕಾವ್ಯವನ್ನು ಮೊಟ್ಟ ಮೊದಲು ಮೂಲಕ್ಕೆ ದಕ್ಕೆ ಬರದ ಹಾಗೆ ಅಕ್ಷರದಲ್ಲಿ ಹಿಡಿದಿಡಲಾಗಿದೆ.

* * *

ಮಹಾಕಾವ್ಯವು ಗದ್ಯ ಪದ್ಯಗಳಿಂದ ಕೂಡಿದ ಜನಪದ ಚಂಪೂಶೈಲಿಯಲ್ಲಿದೆ. ಮುಖ್ಯ ಗಾಯಕಿ ಹಾಡುವ ಪ್ರತಿ ಚರಣದ ಕೊನೆಯಲ್ಲಿಯೂ ಸಹ ಗಾಯಕಿಯರು ಸಯ್ ಎಂಬ ಧ್ವನಿ ಸೇರಿಸಿ ಹಾಡುತ್ತಾರೆ. ಅಲ್ಲದೆ ಗದ್ಯ ಸಂಭಾಷಣೆಯಲ್ಲಿ ಆಹಾ… ಎಂಬ ಸೊಲ್ಲನ್ನು ಸೇರಿಸಿ, ಕಥೆಯು ಮುಂದುವರಿಯುವುದಕ್ಕೆ ಸಹಕರಿಸುತ್ತಾರೆ. ಕಥೆಯ ಓಟದಲ್ಲಿ ಪೂರ್ಣ ವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಹಾಗೂ ಆಶ್ಚರ್ಯಕರ ಚಿಹ್ನೆಗಳ ಕೆಲಸವನ್ನು ಸಹಗಾಯಕಿಯರು ಹಾಡಿನ ಮಧ್ಯೆ ಸೇರಿಸುವ ಧ್ವನಿಗಳಾದ ಸಯ್, ಆಹಾ… ಹಾಗೂ ಪ್ರತಿ ಹಾಡಿನ ಕೊನೆಯ ಎರಡು ಚರಣಗಳು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಗ್ರಹಿಸಿದರೆ, ಮಹಾಕಾವ್ಯವು ಓದಿಸಿಕೊಂಡು ಹೋಗುವುದಲ್ಲದೇ ಸುಲಭ ಗ್ರಹಿಕೆಗೆ ಸಹಕಾರಿಯಾಗುತ್ತದೆ.