ಅಂಗ ಆರು ವರುಷವಾಗಿದೆ ಸಯ್
ಎಂಟೆ ವರುಷವಾಗಿತೊ ಸಯ್
ಆದರಿನ್ನ ಹುಡುಗರು ಸಯ್
ಇಪ್ಪತ್ತು ವರುಷ ಆದರೆ ಸಯ್

ಗಡ್ಡ ಮೀಸೆ ಬಂದೈತೋ ಹುಡುಗರು ವಯಸ್ಸು ಬಂದಾರೆ ಇನ್ನ ಅವರೆ ದೊಡ್ಡೋರು ಆಗ್ಯಾರ. ಸಾಕಪ್ಪಾ ಇಲ್ಲಿಗೆ ಸಾಕು ಯಾರು ಭಾವನಾ ಸಾಂಚೆಕ್ಕಿ ಕಲಿಬೇಕು. ಆಹಾ ಇಲ್ಲರಿ ನಮಗೆ ಬರದಿಲ್ಲ ಅಂಗಲ್ಲ ಓದಿದಾಗ ಇಪ್ಪತ್ತು ಸಾವಿರ ವಿದ್ಯೆ ಮಾಡಾಕ ಬರ್ತಾರ. ಆಹಾ ಇಪ್ಪತ್ತು ಆಯುಧಗಳು ಒಗದರೆ ಎಲ್ಡು ಕೈಲಿ ನೋಡಲೆ ಬಂದವು ಬಂದವು ಹೋಗೊದ್ರು ಬಂದರು ಬಂದರು ಹೋದರೆ ಏ ಇಂದ ಇಲ್ಡು ಕಣ್ಣು ಇದ್ದರೆ ಹಿಂದಕ ಒಂದು ಕಣ್ಣು ಇರಬೇಕು ಮುಂದಕ ಒಂದು ಕಣ್ಣು ಇರಬೇಕು ಎಡಗಡಗೆ ಬಲಗಡೆಗೆ ಇರಬೇಕು ಎಡಗೈ ಎಡಕೆ ಇರಬೇಕು ಇನ್ನ ಲೋಕ ಗೆಲಿಯೋದು ಗೆಲಿಯದೆ ಇದ್ದವ ಮಾಡೋನು ಲೋಕ ಒಸಿ ತಿಳಿಬೇಕು. ಏ ನಿಮ್ಮ ಕಕ್ಕಂತವನೆ ಆಸ್ತಿ ಒಯ್ದಾನ ಇವರು ಬೇಸು ಐದಾರ ಅಲ್ಲ ಹುಡುಗರು ಅಂತಾ ಇವರು ಆಳು ಮಾಡಬೇಕು ಅಂತ ಇರ್ತಾರ. ಇದ್ದರ ಬರ್ತಾರ ನೀವು ಸಾಮ ಚಕ್ಕಿ ಕಲಿತರೆ ಗುರಿಯಿಟ್ಟು ಒಡಿಯೋದು ಅವರು ಮ್ಯಾಲೆ ಎಗರೋದು ಅವರನ್ನೆ ಕಡಿಯೋದು ಮತ್ತೆ ಕಲಿತು ಕೊಂತಿವ್ರಿ ಸರಿ ಅಂತೇಳಿ ಗೆರೆ ಬರೆದ. ಆಹಾ ಗೆರೆ ಅಚ್ಚಕಡಿಗೆ ನೀವು ಇರ್ರೀ ಗೆರೆ ಇಚ್ಚಕಡಿಗೆ ನಾನು ಇರ್ತೀನಿ ನೋಡಪಾ ಈಗೆರೆ ಒಳಗೆ ಎಳಕಂಡರೆ ನಾನು ಗೆದ್ದಂಗೆ ನೀವು ಗೆರೆ ಒಳಗೆ ಎಳಕಂಡರೆ ನೀವು ಗೆದ್ದಂಗೆ ಅಷ್ಟೇ ಆಗಲಿ ಉದ್ದದ್ದಿದ್ದೀವಾಕ ಬರದೆ ನೋಡದೆ ಬಂದಾರೆ,

ಬಂದೇವು ಬಂದೇವು ಅಂದಾನ
ಎಡಕೆ ತೋರಿಸಿ ಬಿಟ್ಟಾನ
ಬಲಕೆ ತೋರಿಸಿ ಬಿಟ್ಟಾನ
ನಡುವಿ ಎಲ್ಲಾ ತುಂಬಿ ಕಂಡಾನ
ಎಡಗೈಲಿ ಎಳಕಂಡು ಬಿಟ್ಟಾನ
ಎಡಗೈಲಿ ಎಳಕಂಡು ಬಿಟ್ಟಾನೆ
ತಾವೆ ಬಂದೆ ಅಣ್ಣಯ್ಯಾ

ಇಷ್ಟೇನಾ ಮಾವ ಇಷ್ಟೇ ನೋಡು ಅಲೆಲೆಲೆಲೆಲೆ ಇಷೇನಾ ನಾವು ಅತ್ತಗ ಇತ್ತಗ ನೋಡಬಾರ್ದು ಇತ್ತಾಗ ನೋಡಬೇಕು. ಆಹಾ ಅದಕೆ ಎಳಕಂಡೇನಲ್ಲಾ ಅತ್ತಗ ನೋಡ್ತಾನಂತ ಅತ್ತಗ ನೋಡತಿದ್ದೀವಿ ಇತ್ತಗ ನೋಡ್ತಾನಂತ ಇತ್ತಗ ನೋಡತಿದ್ದೀವಿ ಅತ್ತಗ ತೋರಿಸಿ ಇತ್ತಗ ತೋರಿಸಿ ನಡುವೆ ತುಂಬಿ ಕಂಡಿ ಸರಿಬಿಡು ಈಗ ಬರ್ತೀ ವೋಗಪ್ಪಾ ನಾವು ಬರ್ತೀ ವೋಗಪ್ಪಾ,

ಹುಡುಗರಂದರೆ ಹುಡುಗರಲ್ಲರಾ ಸಯ್
ಎಡಕೆ ತೋರಿಸಿ ಬಿಟ್ಟಾರ ಸಯ್
ಬಲಕೆ ತೋರಿಸಿ ಬಿಟ್ಟಾರ ಸಯ್
ಮುಂದಕೆ ತೋರಿಸ ಬಿಟ್ಟಾರ ಏಯ್
ಸಂದಿಲ್ಲದೆ ಹೊಡದಾರ
ಭಾವನ ಕೆಳಕೆ ನಿಂತಾನ
ಗೆರೆ ಒಳಗಾ ಹೊತಕಂಡ ಬಂದಾರ
ಗೆರೆ ಒಳಗಾ ಹೊತಕಂಡ ಬಂದಾರ
ಮಾವನ ಮುಂದೆ ನೋಡಮ್ಮ
ಎಪ್ಪೊ ಹುಡುಗರಂದರೆ ಹುಡುಗರಲ್ಲಪ್ಪೊ
ಎಪ್ಪೊ ನನ್ನ ಪೂಜಾವು ಮಾಡಾರೆ
ಇದ್ಯೆ ಹೋಗಿ ಬುದ್ದಿ ಮಾಡ್ತಾರ
ಸರೆ ಇದು ಒಂದು ಸರಿ
ಇನ್ನೊಂದು ಅಂದ
ಇನ್ನೊಂದು ಯಾವುದು ಅಂದಾ
ಕಡ್ಡಿ ಬಗಿಸೋದು ಕಲಿಬೇಕು
ಗುಂಡು ಎಬ್ಬಿಸೋದು ಕಲಿಕೇಬು
ಇನ್ನವಾದರೆ ಗಾದಾಣ
ತಾವೆ ಮುಂದುವರೆದು ಕೇಳಾರೆ
ಏನು ಪರವಾಗಿಲ್ಲ
ತೋರುಸಿ ಮುಂಚಾಕ ತೋರ್ಸು ಅಂದ್ರು
ಆಗ ಒಂದೆ ನೋಡರಾ ಸಯ್
ಒಣಿಕಿದಪ್ಪ ವೈದಿರಾ ಸಯ್
ಬಂಡಿಗೆ ದಾರಿ ಇಡದರಾ ಸಯ್
ಆಗ ಆತ ನೋಡರಾ ಸಯ್
ಈಗ ಒಂದು ಕೈಲಿ ಎತ್ಯಾನ ಸಯ್
ದಗ ದಗ ದಗ್ಗಂತ ತಿರಿಗಿಸ್ಯಾನ
ಬೀಸಿಕೊಲ್ಲು ಒಗದಾನ
ಗರಗರಗರ ತಿರುಗಿಸ್ಯಾನ
ಬೀಸಿಕೊಲ್ಲು ಒಗದಾನ
ಇಷ್ಟೇನಾ ಆಹಾ
ಎಡಗೈಲಿ ಒಂದು ಕೈಲಿ ಎತ್ತೋದು
ಗದಗದಗದ ಅತ್ತಾಗ ಒಗಿಯೊದು
ಅಷ್ಟೇನಾ ಆಹಾ
ಈಗ ನಾವು ಇಡಿತೀವಿ
ಈಗಲೇ ನಾವು ಇಡಿತೀವಿ
ಎಡಕೆ ಬಲಕ ನೋಡ್ತಾರ ಸಯ್
ಹನುಮಪ್ಪ ಹಲಗೆ ಬಡಿದಾಗ ಸಯ್
ಹುಡುಗರು ಮುಂದೆ ನೋಡಾರ ಸಯ್
ಇನ್ನ ಎಲ್ಡು ತಲಿಕಡಿದು ಸಯ್
ಫಳಫಳ ಮುರಿದಾರ ಸಯ್
ಕಟ್ಟಿಗೆ ಮುರಿದಂಗ ಮುರಿದಾರ
ಫಳಫಳ ಮಾಡಾರ
ಕಟ್ಟಿಗೆ ಮುರಿದಾಂಗ ಮುರಿದಾರ
ಎಪ್ಪೊ ಹುಡುಗರಂದರೆ ಹುಡುಗರಲ್ಲೆಪ್ಪೋ
ಎಪ್ಪೊ ಮುನ್ನೂರು ಮಂದಿ ಬಂದಾರೆ
ಎಡಗೈ ಆಗದಿಲ್ಲಪ್ಪಾ
ಒಂದೆ ಐವತ್ತು ಬಂದರೆ
ಎಡಗಾಲಿಗೆ ಆಗುದಿಲ್ಲಪಾ

ಸರಿ ಇದು ಒಂದು ಗುಂಡು ಎಬ್ಬಿಸೋದು ಆಗ ಇಪ್ಪತ್ತು ಕೇಜಿ ಕೆಬ್ಬಿಣಗುಂಡು ಆಹಾ ತಂದು ಇಸ್ಕೂಲ್ ಮುಂದೆ ಹಾಕಿದರು ನೀನು ತೋರಿಸು ಮಾವ ಅಂದರು,

ಗುಂಡಿಗೆ ಶರಣ ಮಾಡ್ಯಾನ ಸಯ್
ಮುಂದೆ ಕುಂತಕೊಂಡಾನ ಸಯ್
ಆಗ ಮುಂದೆ ನೋಡರಾ ಸಯ್
ಎಲ್ಡು ಕೈಲಿ ಇಡದಾನ
ಮೊಣಕಾಲುಮ್ಯಾಲಿಂದ ಎತ್ತಿ ಹಾಕ್ಯಾನ
ಎಲ್ಡೆ ಕೊಲ್ಲೀಲೆ ಒಡದಾನ

ನಾವೇ ಬಂದೆ ಲೊಕದಲ್ಲಿ ಓ ಇಷ್ಟೇನಾ ನಾವು ಏನೊ ಅಂದ ಕಂಡಿದ್ದೀವಿ ಆಹಾ,

ನಾವು ಎತ್ತಿದರೆ ನೋಡರಾ ಸಯ್
ಚಿಕ್ಕ ತಮ್ಮವರ ನೋಡರಾ ಸಯ್
ಇಬ್ಬರುಗೆಲ್ಲ ಪರಹೊಗಿತಾನ ಸಯ್
ಚಿಕ್ಕವನು ಅಂತೆ ನೋಡರಾ ಸಯ್
ಪೀರೋಜಂದರೆ ನೋಡರಾ ಸಯ್
ಹಗಲಿ ಪೂಜಾ ಮಾಡಾರಾ ಸಯ್
ಸೋಮಾರಂದರೆ ನೋಡಾರ ಸಯ್
ಹಗಲೆ ಸೋಮಾರ ಮಾಡಾರ ಸಯ್
ಆಗ ಹುಡುಗರ ನೋಡಾರ ಸಯ್
ಎಲ್ಡು ಕೈಲಿ ಕೈ ಇಡದರಾ ಸಯ್
ಗುಂಡು ಎತ್ತಿ ನೋಡರಾ ಸಯ್
ಮಾವನ ಮುಂದೆ ಒಗದಾರ ಸಯ್
ಗುಂಡೆ ಎತ್ತಿ ನೋಡ್ಯಾರ ಸಯ್
ಎಪ್ಪಾ ಸತ್ತೇವಂತ ವಗದ್ಯಾನ ಸಯ್
ಇನ್ನ ಆತ ನೋಡರಾ ಸಯ್
ನನ ಮ್ಯಾಲೆ ಬಿದ್ದಿಹು ನೋಡರಾ ಸಯ್

ಒಂಟಿ ಹೋಗತಿದ್ದಿಯಾ ನನಮ್ಯಾಲೆ ಬಿದ್ದು ನೋಡರಾ ಹುಡುಗರಂದರೆ ಹುಡುಗರಲ್ಲಪ್ಪೊ ಇದು ಒಂದು ಸರಿ ಇನ್ನೊಂದು ತೋರ್ಸು. ಆಹಾ ಇನ್ನೊಂದು ನೋಡಪಾ ನಿಮ್ಮಗೆ ಅರವತ್ತು ಆಯುಧಗಳು ಕೋಳಿ ಕತ್ತಿ ಚೂರಿಗಳು ನಿಮ್ಮ ಕೈಯಾಗ ಕೋಡ್ತೀನಿ. ಆಹಾ ಮುವರು ನನ್ನ ಮ್ಯಾಲೆಗೆ ಒಗಿಬೇಕು ಆಹಾ ಅರವತ್ತು ಆಯುಧಗಳು ನನಮ್ಯಾಲೆ ಒಗಿಬೇಕು. ಆಹಾ ನಾನು ಎಲ್ಡು ಕೈಲಿ ಎಂಗ ಓಡಿಸ್ತೀನಿ ಅವನ್ನ ಆಹಾ ಸರೆ ನೋಡತೀವಿ ಅಂದರು,

ಗೆರೆ ಅಚ್ಚಕಡಿಗೆ ಮಾವ ನಿಂತಾನ
ಗೆರೆ ಇಚ್ಚಕಡಿಗೆ ಇವರು ನಿಂತಾರ
ಆದಿಗೊ ಬರ್ತಾವಯ್ಯಾ ಸಯ್
ಇದಿಗೊ ಬರ್ತಾ ಮಾವಯ್ಯ ಸಯ್
ಎಡಕೆ ಬಲಕೆ ತೋರಿಸ್ಯಾನ ಸಯ್
ಆತನ ಮ್ಯಾಕೆ ಒಗದಾನ
ಇನ್ನ ಒಂದೆ ತೋರಿಸ್ಯಾರ
ಏಯ್ ತೋರಿಸು ಒತ್ತಿಗೆ ನೋಡಾರ ಸಯ್
ಬಂದು ಬಿಟ್ಟವು ಮ್ಯಾಕರ ಸಯ್
ಎಡಗಡೆಗೊಂದು ನೋಡರಾ ಸಯ್
ಬಲಕ್ಕೊಂದೆ ನೋಡರಾ ಸಯ್
ಆಗ ಬಂದು ಬೆನ್ನಿಗೊಂದುವು ಸಯ್
ಇನ್ನವಾದರೆ ಎಡಗಾಲಿನಾಗ ಸಯ್
ಇಂದೇಲಿ ಒದ್ದು ಬಿಡತಾನ ಸಯ್
ಅರವತ್ತು ಆಯುಧಗಳು ನೋಡರಾ ಸಯ್
ಇಡದೆ ಬಿಡರೆ ಒಡ್ಡನಾ ಸಯ್
ಕುಪ್ಪಳಿಸಿ ಎಗರಿ ಒದ್ದೆ ಬಿಡ್ತಾನ ಸಯ್
ತಾವೆ ಒಂದೆ ಅಣ್ಣಾಯ್ಯಾ

ಇಷ್ಟು ನೋಡಪಾ ಯಿದುರಾಗ ಎಗರಾದು ಆಹಾ ತಪ್ಪಿಸಿ ಕೆಂಬಾದು ಏಸು ಮಂದೆನ್ನ ಬರಲಿ ಅಯ್ಯಯ್ಯೊ ಇಷ್ಟೇನಾ,

ನೀನು ಹಾಕಯ್ಯ ಮಾವಯ್ಯ
ನೀನು ಹಾಕು ಮಾವಯ್ಯ
ನಾವು ನೋಡತೀವಿ ಮಾವಯ್ಯ
ಯಾವತ್ತು ನೀವು ಕಲಿತಿಲ್ಲ
ಬಾಳ ಉಶಾರಿ ಮ್ಯಾಲಿ ಇರಿಬೇಕು
ಆಗ ಮೂವರು ನಾವೈದೀವಿ

ಒಬ್ಬರು ನೀನು ಇಡಿದೀಯಾ ನಾವು ಮೂವರು ಇಡಿಯಲಾರೆವೆ ಒಬ್ಬರು ನೀನ ಇಡಿದೆಲ್ಲಾ ನಾವು ಮೂವರು ಇಡಿಯಲಾರೆವೆ,

ಎಡಕೆ ತೋರಿಸಿ ಬಿಟ್ಟಾನ ಸಯ್
ಬಲಕೆ ತೋರಿಸಿ ಬಿಟ್ಟಾನ ಸಯ್
ಹುಡುಗರ ಮ್ಯಾಲೆ ಒಗದಾನ ಸಯ್
ಏಯ್ ಹಿಂದಲ ಕಡೆ ಇರುವನು ಸಯ್
ಚಿಕ್ಕ ತಮ್ಮನು ನೋಡರಾ ಸಯ್
ಉಪ್ ಅಂತ ಎಗರ್ಯಾನ ಸಯ್
ಎಲ್ಡು ಕೈಲಿ ಅಮರಿಕೆಂಡಾನ ಸಯ್
ಫಳ ಫಳ ಫಳ ಮುರಿದಾನ ಸಯ್
ಅರವತ್ತು ಆಯುಧಗಳು ಹಾಕ್ಯಾನ
ಫಳ ಫಳ ಫಳ ಮುರಿದಾನ
ಅರವತ್ತು ಆಯುಧಗಳು ಮುರಿದಾರ
ಹುಡುಗರಂದರೆ ಹುಡುಗರಲ್ಲಪ್ಪೋ
ಒಂದು ಏಟು ತಿಂಬೋರು ಅಲ್ಲಪ್ಪಾ
ಎಡಗೈಲಿ ಹಾಕಂಗಿಲ್ಲಪ್ಪೊ
ಬಲಗೈಲಿ ಹಾಕಂಗಿಲ್ಲಪ್ಪೊ
ಮುನ್ನೂರು ಮಂದಿ ಬಂದಾರೆ ಸಯ್
ಅವರು ಕಡಿದು ಹಾಕ್ತಾರ

ಸರಿಯಪ್ಪಾ ಯಿದ್ಯೆ ಕಲಿತಿರಿ ಓದು ಕಲಿತಿರಿ ಇವಾಗ ನನಗಿ ಒಪ್ಪಿದಲ್ಲಿ ಆಗೈತ

ಇಬ್ಬರು ಹೆಣ್ಮಕ್ಳು ಐದಾರ
ನಿಮ್ಮಗೆ ನಾನೆ ಕೊಡ್ತೀನಿ
ಗುಣ ನೋಡಿ ಕೊಡ್ತೀನಿ
ಆಗ ಹುಡುಗರು ಕೇಳರಾ

ಎಪ್ಪಾ ನಾನು ಬುದ್ದಿವಂತರು ಐದಾರಂತ ನಾನು ಆಸ್ತಿಗೆ ಬಿದ್ದಿಲ್ಲಪ್ಪಾ ಈಗ ಹುಡುಗರು ಚಲವರು ಮುಂದಕ ಬೇಸು ಬಾಳೇವು ಮಾಡಿಕೆಂಬು ತಿಂತಾರಂತ ನಾನು ಆಸಿ ಬಿದ್ದೀನಿ ಇಗೋ ನನ್ನ ಆಸ್ತಿ ಅರ್ಧ ಕೊಟ್ಟು ಬಿಡ್ತೀನಿ ನಿಮಗೆ ಈಗ ನನ್ನ ಮಕ್ಕಳು ಕೊಡ್ತೀನಿ ಯಾರು ಮಾಡಿಕೆಂಬುತ್ತೀರಿ ಮುವರ್ದಾಗ ಅಂದರೆ ಹುಡುಗರು ಏನಂತಾರ,

ಅಣ್ಣಾ ದೊಡ್ಡವನೆ
ನೀನು ಲಗ್ನವಾಗಣ್ಣಾ
ದೊಡ್ವೋರು ಮುಂಚೆ ಆಗಬೇಕು
ದೊಡ್ವೋನು ಆದ ಮ್ಯಾಲರಾ
ಚಿಕ್ಕ ತಮ್ಮನವರು ನೋಡರಾ
ಇಬ್ಬರು ಒಂದಿಕೊಂಡು ಹೋಗಬೇಕು
ಚಿಕ್ಕ ತಮ್ಮ ನೋಡರಾ

ಅಂಗಲಪ್ಪಾ ಹುಡುಗರಾ ಈಗ ಇಬ್ಬರನ ಮಾಡಿಕಳ್‌ರ್ರೀ ಒಬ್ಬಾಕಿ ನೆರ್ತಾಕಿ ಕೈಗೆ ಬಂದಾಕಿ ಐದಾಳ. ಆಹಾ ಒಬ್ಬಾಯಮ್ಮ ಸಣ್ಣಯಮ್ಮ ಐದಾಳ ಇಬ್ಬರ್ನ ಮಾಡ್ತೀನಿ ಇನ್ನೊಬ್ಬನು ಇರ್ತಾನಲ್ಲ ನಾನೇ ಹುಡುಕಾಡಿ ಲಗ್ನ ಮಾಡ್ತೀನಿ ನಿಮಗೆ ಮೂವರಿಗೆ ನಾನೇ ಮಾಡ್ತೀನಿ ಆಹಾ ಅಂದರೆ ಏನಪಾ ಅಣ್ಣಾನವರೆ ಅಂತ ಚಿಕ್ಕವನು ಅಂದ ಇಲ್ಲಪ್ಪಾ ದೊಡ್ಡೋನು ಏನಂತಾನ ನೀವಿಬ್ಬರು ಅಣ್ಣ ತಮ್ಮರು ಮಾಡಿಕಳ್ಳರಿ ನಾನು ಮಾಡಿಕೆಂಬಾದಿಲ್ಲ ಯಾಕಣ್ಣಾ. ಆಹಾ ದೊಡ್ಡೋನು ಬಿಟ್ಟು ನಾವು ತಮ್ಮನವರು ಎಂಗ ಮಾಡಿಕೆಂಬಾಕ ಬರ್ತದೆ. ಆಹಾ ದೊಡ್ಡೋನು ಮದುವೆ ಆಗಬೇಕು ಮುಂಚ್ಯಾಗ ಹಿಂದಗಡೆ ನಾವು ತಮ್ಮನವರು ಮಾಡಿಕಾಬೇಕು ಆಹಾ,

ಗುಣ ನೋಡಿ ಕೊಡ್ತಾನಂತೆ
ಗುಣ ನೋಡಿ ಕೊಡ್ತಾನಂತೆ
ಆಸ್ತಿಗೆ ಆಸಿ ಬಿದ್ದಿಲ್ಲಂತೆ
ಇದ್ಯೆ ಕಲಿಸಿದ ಗುರುವಪ್ಪೊ
ಗುರುವರ ಮಗಳೆ ತಾಯಪ್ಪ
ಗುರುವರ ಮಗಳೆ ತಾಯಪ್ಪ
ಇದ್ಯೆ ಕಲಿಸಿದ ಗುರುವಪ್ಪೊ
ಗುರುವನ ಮಗಳೆ ಒಳ್ಳೇರಾ ಸಯ್
ನಾನು ಉದ್ದಾರಾಗದಿಲ್ಲರಾ ಸಯ್
ನನಗೆ ತಾಯಿ ಆಗ್ತಾಳಾ ಸಯ್
ನಾನು ಒಲ್ಲೆ ಮದುವೇನಾ
ನನಗೆ ತಾಯಿ ಆಗ್ತಾಳ
ನಾನು ಒಲ್ಲೇನು ತಮ್ಮರಾ
ಓದು ಕಲಿಸಿದಾ ತಾಯಿರಾ ಸಯ್
ಮೈ ತೊಳೆದ ತಾಯಿರಾ ಸಯ್
ನೀರುಹಾಕಿದ ತಾಯಿರಾ ಸಯ್
ಅನ್ನವಿಟ್ಟಿದ ತಾಯಿರಾ ಸಯ್
ನಾನೆ ಒಲ್ಲೆ ಲೋಕಕ್ಕೆ
ನಾನೇ ಒಲ್ಲೆ ನೋಡರಾ

ತಾಯಿನ ಲಗ್ನ ಮಾಡಿಕೆಂಬಾದಿಲ್ಲ. ಅರರೆ ತಂದೆ ಓದುಕಲಿಸ್ಯಾನ ಆದರೆ ಆಕಿ ಕಲಿಸ್ಯಾಳ, ಇನ್ನ ಉಂಬಾಕ ಮಾಡಿಟ್ಟಾಳ ಇನು ನೀರುಕಾಸಿ ಹಾಕಿರ್ತಾಳ. ಆಹಾ ಇಟು ಬೆನ್ನು ತಿಕ್ಕಿರ್ತಾಳ ಆದರೆ ತಾಯೇನು ಗುರುವಿನ ಮಗಳು

ಗುರುವಿನ ಮಗಳು ತಾಯಿ ಎಂಗಾ ಆಗ್ತಾಳ
ಆದರೆ ಗುರುವಿನ ಹೆಂಡ್ತಿ ತಾಯಿ ಆಗ್ತಾಳ ಆಹಾ
ತಾಯಿ ಮಗಳು ತಂಗಿ ಆಗ್ತಾಳ
ಒಲ್ಲೆ ನಾನು ಲೋಕಕ್ಕೆ
ಒಲ್ಲೆ ನಾನು ಜೀವ ಹೋದರೆ
ಜೀವ ಹೋದರೆ ನಾನು ಒಲ್ಲೆಪ್ಪೊ
ತಮ್ಮ ನೋರೆ ನೀವೈದಿರಿ ಸಯ್
ತಣ್ಣಗ ಲಗ್ನ ಆಗರಿ ಸಯ್

ತಣ್ಣಗ ಲಗ್ನ ಮಾಡಿಕೆಳ್ಳರಿ ಅಂತ ಅಂತಾನ. ಅರೆರೆ ನಮ್ಮಣ್ಣಗೇನು ಹುಚ್ಚು ಬಂದೈತೆ ಐಲು ಬಂದೈತೊ. ಆಹಾ ಅರೆರೆ ತಾಯಿ ಇಲ್ಲ ತಂದೆ ಇಲ್ಲ ಆಸ್ತಿ ಇಲ್ಲ ಏನಿಲ್ಲ ಆತೆ ಕೊಟ್ಟು ಮಾಡುವಾಗ ನಮ್ಮಣ್ಣ ಎಂತ ದಡ್ಡವ ಒಲ್ಲೆ ಅಂತಾನ. ಮುಂಚ್ಯಾಗ ಅವನಿಗೆ ಮಾಡಬೇಕು. ಇಂದಗಡೆ ನಾವು ಮಾಡಿಕ್ಯಾಬೇಕು ಅಣ್ಣಾ ನಡುವವನೆ ಚಿಕ್ಕವನೆ ಏ… ಎಂಗನ ಮಾಡಿನೋಡಪ್ಪಾ ಅಣ್ಣಗ ಮದುವಿ ಮಾಡಾನ ಎಂಗನ ಮಾಡಿ ನೋಡಪ್ಪಾ ಅಣ್ಣಾಗ ಮದುವಿ ಮಾಡಾನ,

ನಾವು ಹಿಂದಗಡೇವು ಅಣ್ಣಾಯ್ಯ ಸಯ್
ನಾನು ನೀನು ಮಾಡಿಕೆಂಬಾನ ಸಯ್
ಮುಂಚ್ಯಾಗ ಅಣ್ಣಾಯ್ಯಗ ಮಾಡಾನ ಸಯ್
ಇಬ್ಬರು ಕಲ್ತು ಅಣ್ಣಾಗ ಮಾಡಾನ
ನಾವೇ ಇಬ್ಬರು ಕಲ್ತು
ಅಣ್ಣಯ್ಯಗ ಲಗ್ನ ಮಾಡಾನ
ಅಣ್ಣಾ ಒಲ್ಲೆ ಅಂತಾನ ಸಯ್
ಎಂಗ ಮಾಡದೊ ತಮ್ಮಯ್ಯ ಸಯ್
ಅಂಗೆ ಇಡಕಂಡು ನಾವಾರ ಸಯ್
ಬಲಂತದಲಿ ತಾಳಿ ಕಟ್ಟನಾ
ಬಲಂತದಲ್ಲಿ ಮಾಡಾನ

ನಾವೇ ಲಗ್ನ ಮಂಡಪ ಹಾಕಿ ಮಾವ ನೀನು ಪಾದಕ ಶರಣು ತಾಯಿ ತಂದೆ ಇಲ್ಲದವರು ಏನಪಾ ಕೋಮಟರೆ ಸಾವುಕಾರ ಎಲ್ಲಪ್ಪಾ ನಮ್ಮಣ್ಣಾ ಒಲ್ಲೆ ಅಂತಾನ ನೋಡು. ಇದ್ಯೆ ಕಲಿಸಿದ ಗುರು ಕೊಡ್ತಾನಂದರೆ ಮಗಳ್ನ ಮನೆ ಮುಂದೆ ಮಾಡಿಕೊಡ್ತಾನಂತೆ. ಈಗ ನೀನನ್ನ ಹೇಳಬೇಕಪ್ಪಾ. ಅಯ್ಯೊ ಎಪ್ಪಾ ಅಕ್ಕಿ ಬೇಳೆ ನಂದು ಮಗಳು ಕೊಟ್ಟಿದ್ದು ಆತಂದು,

ಎಪ್ಪಾ ಮಾಡಿಕೆರ್ರೀ ನೀವು ಹುಡುಗರು
ಯಾರು ಕೈಲಿ ನಿಮ್ಮನ್ನು ಹಿಡಿತಾರ
ಯಾರೇ ನಿಮ್ಮನ್ನ ಹಿಡಿತಾರ
ಆಗ ತಿಂಬಕ ಅನ್ನ ಇಲ್ಲ
ತಿಂಬಕ ಅನ್ನ ಇಲ್ಲಪ್ಪಾ
ಉಡಕ ಬಟ್ಟೆ ಇಲ್ಲಪ್ಪಾ
ಹೆಣ್ಮಕ್ಕಳ ಯಾರು ಕೊಡ್ತಾರ ಸಯ್
ಗುಣ ನೋಡಿ ಕೊಡುವಾಗರ ಸಯ್
ಒಲ್ಲೆ ಅನ್ನಬಾರದು ನೀವುರಾ ಸಯ್
ಎಂತಹ ಹುಡುಗರು ಐದಿರಿ

ಒಲ್ಲೆ ಅನ್ನಬಾರದು ಕೇಳ್ರಪಾ. ಇಲ್ಲಪ್ಪಾ ನಾನು ಬಲ್ಲೆ ಗುರುವಿನ ಮಗಳು ನನಗೆ ತಾಯಿ ನಾನೊಲ್ಲೆ. ಆಹಾ ಏ ಎಂಗ ಆಗ್ತಾಳಂತ,

ಆಗ ಒಂದೆ ನೋಡರಾ ಸಯ್
ಅವರು ತನ್ನ ನೋಡರಾ ಸಯ್
ಕಲೆ ಬಿದ್ದರ ನೋಡರಾ ಸಯ್
ಕೋಮಟರ ಎಲ್ಲಪ್ಪ ನೋಡರಾ ಸಯ್
ಹುಡುಗರ ನೋಡರಾ ಸಯ್
ಆಗ ಕೇಳೊ ಮಾವಯ್ಯ ಸಯ್
ಒಲ್ಲೆ ಒಲ್ಲೆ ಅಂದರೆ ನೋಡರಾ ಸಯ್
ಅಂಗೆ ಗಂಟು ಹಾಕ್ಕಾರ
ಒಲ್ಲೆ ಒಲ್ಲೆ ಅಂದರೆ ನೋಡರಾ
ಅಂಗೆ ಗಂಟುಹಾಕ್ಯಾರ
ಅಂತ ಏನು ಮಾಡದಿರು
ಆಗ ಜನಲೋಕನ ಕರೆ ಕಳಿಸಿ
ಒಳಗ ಹೊರಗ ಸಾರಿಸ್ಯಾರ
ಒಂದ ಎಕರೆ ಭೂಮಿ ಅಗಲಾಗ
ಹಂದರ ಹಾಕಿಸಿ ಬಿಟ್ಟಾರೆ
ಅಡಗಿ ಮಾಡಕ ಎಂಟು ಮಂದಿರಾ ಸಯ್
ಉಂಬಾಕ ಇಡಾಕ ಐವತ್ತು ಮಂದಿರಾ ಸಯ್
ಊಟಕ ಮಾಡಿಬಿಟ್ಟಾರ ಐವತ್ತು ಮಂದಿ ನೋಡಾರ
ತಾವೇ ಬಂದೆ ಮಾಡ್ಯಾರೆ
ಮ್ಯಾಳ ತರಿಸೆ ಬಿಟ್ಟಾರೆ ಸಯ್
ಬಂದರಿಗಿಲ್ಲನಂದನೊ ಸಯ್
ಇಲ್ಲ ಚಂದಿರ ತಂದನೊ ಸಯ್
ಆಗ ಕದಿರೆ ಹಾಕ್ಯಾರೆ ಸಯ್
ಒಲ್ಲೆ ಒಲ್ಲೆನಂದಾರು ಸಯ್
ನಾನು ಮಾಡಿಕೆಂಬದಿಲ್ಲರಾ ಸಯ್
ಇದ್ಯೆ ಕಲಿಸಿದ ಮಗಳ್ಗ ಸಯ್
ನಾನೆ ಒಲ್ಲೆ ಅಂತಾನ
ಇದ್ಯೆ ಕಲಿಸಿದ ಮಗಳ್ನ (ಕೋರಸ್)
ನಾನೆ ಒಲ್ಲೆ ಅಂತಾನ
ಒಲ್ಲೆ ಅಂದರೆ ಬೇಸಲ್ಲರಾ ಸಯ್
ಮೈ ತೊಳೆದು ಬಿಟ್ಟಾರ ಸಯ್
ಆಗಸ್ಯಾಸೆ ಕರಕಂಡು ಬಂದಾರ ಸಯ್
ಕರೆಕಂಬಳಿ ನ್ಯಾಸಿ ಹಾಕ್ಯಾರ ಸಯ್
ಅಣ್ಣನ ಕುಂದರಿಸಿ ಬಿಟ್ಟಾರ
ಅಣ್ಣಯ್ಯ ಲೋಕದಾಗಮ್ಮೊ
ಡಾವುಡಿಂಗಲ ಪಟ್ಣದಾಗಮ್ಮೊ
ಅಂದವಾಗಿರೊ ಮಗಳಮ್ಮೊ
ಕರಕಂಡಾಗಿ ಬಂದಾರೆ

ಆಮೇಲೆ ಕುಂದರಿಸಿದರು. ಆಗ ಶರಣು ದೇವ ವಿಷ್ಣು ಈಶ್ವರ ಅಂತಾ ಆಗ ಅಂತಿದಿರೆ,

ಕಣ್ಣೀರು ಉದುರುತಿದ್ದರೆ
ನಾನು ಉಳಿಯೊಂಗಿಲ್ಲಮ್ಮ
ಗುರುವಿನ ಮಗಳೈದಳೆ ಸಯ್
ಇನ್ನ ಒಲ್ಲೆ ಒಲ್ಲೆ ಅಂದರೆ ಸಯ್
ತಮ್ಮನೋರು ಬಿಡೊವಲ್ಲರುರಾ ಸಯ್
ಸಾವುಕಾರ ಎಲ್ಲಪ್ಪರಾ ಸಯ್
ಎಲ್ಲರೂ ಕಲಿತು ಮಾಡ್ತಾರ ಸಯ್
ಬಂಗದಲ್ಲಿ ಮದುವೆ ಮಾಡ್ತಾರ
ನನ್ನ ಜಲ್ಮ ಲೋಕಕ್ಕೆ
ಕಣ್ಣೀರು ಉದುರುತಿದ್ದರೆ ಸಯ್
ಮಗ ತಾಳಿ ಕಟ್ಯಾನೆ ಸಯ್
ತಾಳಿ ಕಟ್ಟಿದ ಮ್ಯಾಲರೆ ಸಯ್
ಹಾಲು ತುಪ್ಪ ಕಲಿಸಿ ಉಣತಾರ ಸಯ್
ಊಟ ಮಾಡೆ ಬಿಟ್ಟಾರ ಸಯ್
ಊರಾಗ ಮೆರಣಿಗೆ ಮಾಡ್ಯಾರ
ತಾಳಿ ಕಟ್ಟಿ ಬಿಟ್ಟಾರ

ಆಗ ಐದು ದಿನದಲ್ಲಿ ಹಂದರ ಕಿತ್ತಿ ತಿರಿವಿ ನೀರು ಹಾಕಿದರು. ಆಹಾ ಹಾಕಿದ ಮ್ಯಾಲೆ ಆಗ ಇನ್ನ ಮದುವೆ ಆದ ಮ್ಯಾಲೆ,

ಒಂದೆ ತಿಂಗಳು ಹಾಗ್ಯೆತೊ ಸಯ್
ಎಲ್ಡೆ ತಿಂಗಳು ಹಾಗ್ಯೆತೊ ಸಯ್
ಮೂರು ತಿಂಗಳು ಹಾಗ್ಯೆತೊ ಸಯ್
ಐದು ತಿಂಗಳು ಹಾಗ್ಯೆತೊ

ಅವರಿಗಾಗಿ ಲೋಕದಾಗ ಐದು ತಿಂಗಳು ಆದಮ್ಯಾಲೆ ಆಗ ಏನು ಮಾಡಿಬಿಟ್ಟರು ಮೂವರು ಅಣ್ಣಾತಮ್ಮರು ಸಾನ ಮಾಡಿಕೆಂಡು ಬಾವಿಗೆ ಹೋಗಿ ಸ್ವಾಮವಾರದಿನ ಬರುವಾಗ ಆ ಚಿಕ್ಕ ತಮ್ಮಗ ಏನಂತ ಹೇಳ್ತಾನ, ಅಣ್ಣಾ ನಡುವವನೆ ದೊಡ್ವೋನು ನಿಂದರಣ್ಣಾ ಏನು ತಮ್ಮಾ ಏನಿಲ್ಲಣ್ಣಾ ಇದ್ಯೆ ಕಲಿಸಿದಾ ಮಗಳು ಕೊಟ್ಟ ಲಗ್ನ ಮಾಡಿದಾ ಆತ ಇಟ್ಟರೆ ಉಣಬೇಕು ಇಲ್ಲದಿದ್ದರೆ ಉಪಾಸ ಇರಬೇಕು. ಆಹಾ ಆತ ಉಣುವಾಗ ನಾವು ಉಣಬೇಕು ಇಲ್ಲದಿದ್ದರೆ ಇಲ್ಲ ನಮ್ಮ ಸ್ವತಂತ್ರ ಇಲ್ಲದಸಂತ್ರ ಇಲ್ಲ ಯಾಗಂದರೆ ಆಗ ಇಟ್ಕಂಡು ತಿಂಬಾಕಿಲ್ಲ ಯಾಗಂದರೆ ಆಗ ಇಡರಿ ಅಂಬಾಕಿಲ್ಲ, ಆಹಾ ಅಣ್ಣಾ ನಮ್ಮ ತಾತ ಎಂಗ ಇದ್ದ ಈಗ ಇಪ್ಪತ್ತಾರು ಗಾವುದ ಅಗಲ ಸುತ್ತುಕೊಂಡು ಸಾವಿರದ ಅಂಚಿನ ಮನೆಗಳ್ನ ಕಟ್ಟಿದ್ನಂತೆ ನಮ್ಮಪ್ಪಂಗೆ ಸಂಪಾಸಿದ ಯಾರನ ಕುಲ್ಡ ಆಗಲಿ ಕುಂಟಾಗಲಿ ಬಂದರಪ್ಪಾ ಇಲ್ಲಿದಾರ್ಯಾಗ ಹೋತಿದ್ದಿವಿ ಎಪ್ಪಾ ಅಂತಾ ಹತ್ತು ಪೈಸೆ ಕೊಡು ಅಂದರು ಎದರಲಿಂದ ನಾವು ದಾನ ಮಾಡೋದು ಅನ್ನ ಉಂಬೋದು ಸುಮ್ಮನೆ ಇರೋದು ನಮ್ಮ ಸ್ವಸಂತ್ರ ಆದರೆ ರೊಕ್ಕ ಬಕ್ಕಣದಾಗ ಇರ್ತೈತೆ ಕುರುಡರ ಕುಂಟರಿಗೆ ದಾನ ಮಾಡಿ ಪಾಪ ಕಳಕಂಬಾನ ಅಣ್ಣಾ ಇದೇನಣ್ಣಾ,