ಅರ್ಧ ಕೊಪ್ಪರ ಆಸ್ತಿ ಐತಾರ ಸಯ್
ಅರ್ಧ ಕೊಡ ತಗಂಡು ಬಂದರಾ ಸಯ್
ಆಗ ಇನ್ನ ನೋಡರಾ ಸಯ್
ಮೂವರು ಅಳಿಯನೋರುರಾ ಸಯ್
ಇನ್ನ ಸಾವುಕಾರ ಎಲ್ಲಪ್ಪಾ ಸಯ್
ಡಾವುಡಿಂಗಲದೋರು ನೋಡರಾ ಸಯ್
ಅಡವ್ಯಾಗಲಿಂದ ನೋಡರಾ ಸಯ್
ಅಡವಿ ಕಾಯೊಗೊಲ್ಲರ ತಲ್ಲಿಗೆ ಸಯ್
ಅವರೆ ಬಂದೆ ಬಂದಾರೆ ಸಯ್
ಎಮ್ಮ ಮುದುಕಿ ಕೆಳಗೆ ಬಿದ್ದಾಳ ಸಯ್
ಅನ್ನ ಉಂಬುಂಗಿಲ್ಲರಾ ಸಯ್
ಇನ್ಯಮ್ಯಾಕ ಎದ್ದಳಂಗಿಲ್ಲರಾ ಸಯ್

ಎದೆ ಬಿದ್ದು ಹೋಗಿಬಿಟ್ಟಾಳ ಅವ್ವಾ ನಿನ್ನ ಪಾದಕ ಶರಣು ಅಂದರು,

ಎಪ್ಪಾ ಮತ್ತೆ ಬಂದರು ಇವರಪ್ಪಾ
ಎಪ್ಪಾ ಮತ್ತೆ ಜೀವ ಹೋಗತೈತೊ

ಎವ್ವಾ ಸತ್ತಳೊ ಐದಾಳೊ ಅಂತಾ ನೀನು ಬರಲಿಲ್ಲ ಈಗ ನಾವು ಬಂದಿವವ್ವಾ, ಆಹಾ ಈಗ ನಾವು ಏಳು ಸುತ್ತು ಅಗಸಿ ಕಟ್ಟೀವಿ ಈಗ ಸಾವಿರ ಲಕ್ಷಮನಿ ಕಟ್ಟೀವಿ ಈಗ ನಿನ್ನ ಹೆಸರು ಹಾಕಿವಿ, ಆಹಾ ಇದು ಗೊಲ್ಲರ ನಾರಾಣಮ್ಮ ಆಯಮ್ಮ ರೊಕ್ಕಲಿಂದ ಈ ಊರು ತಯಾರಾಗೈತೆ ಬುಗುಡಿಮ್ಯಾಲೆ, ಆಹಾ ಇಲ್ಲದಿದ್ದರೆ ಆಗುತಿದ್ದಿಲ್ಲ ಆ ಯಮ್ಮಂದೆ ನಮ್ಮದಲ್ಲಂತ

ನಿನ್ನ ಹೆಸರು ಹಾಕಿವಿ
ಸಾಲ ತೀರಿದ ಮ್ಯಾಲೆ ನೋಡವ್ವಾ ನಮ್ಮ ಹೆಸರು ನಿನ್ನ ಬಗಲಾಗ
ನಮ್ಮ ಹೆಸರೇನೆ ಹಾಕತೀವಿ
ಎಪ್ಪಾ ಕೊಟ್ಟರೆ ಕೊಡರಿ ನೋಡರಾ ಸಯ್
ಇಲ್ಲದಿದ್ದರೆ ನೀವೆ ತಿನ್ನಿರಿ ಸಯ್
ನನ್ನ ಮಕ್ಕಳಿಗೆ ಹೇಳಬ್ಯಾಡರಿ ಸಯ್
ಏಳು ಮಂದಿ ಮಕ್ಕಳೈದರಾ ಸಯ್
ನಿಮ್ಮನ ಇದ್ದವ ಮಾಡ್ತಾರ ಸಯ್
ನೀವೇನ ಸಾಯ್ತೀರಿ ನೋಡಾರ ಸಯ್

ಮಕ್ಕಳ ಸಾಯ್ತಿರಿ ನೋಡಾರ ನೋಡವ್ವಾ ನಾವೇನು ಗುದ್ದಾಡಕ ಬಂದಿಲ್ಲ. ಏನೊ ನೀನು ಇಲ್ಲ ಅಂದಿದ್ದಕ್ಕೆ ಇಟ್ಟಕಂಡು ಇಲ್ಲ ಅಂದಿದ್ದಕ್ಕೆ ಏನು ಎಲ್ಡು ಏಟು ಬಡಿದು ಬೆದರಿಸಿದರೆ ಮುದ್ಯಾಕಿ ಕೊಡ್ತಾಳಂತ ನಾವು ಮಾಡಿದಿವವ್ವಾ ನಿನ್ನೇನು ಬಡಿಯಾಕ ನಾವೇನು ಸಾಧ್ಯವಿಲ್ಲವ್ವಾ ಈಗ ನಾವೇನು ಸಂಪಾದಿಸಿಲ್ಲ,

ಎವ್ವಾ ಪಾದಕ ಬಿದ್ದೆ ಬಿಟ್ಟೆವವ್ವಾ
ಎವ್ವಾ ಪಾದಕ ಶರಣೆ ಶರಣವ್ವಾ
ಎವ್ವಾ ಬಡ್ಡಿ ಕಟ್ಟಂಗಿಲ್ಲವ್ವೊ
ಬಡ್ಡಿಗಾಗಿ ನಿನ್ನ ಹೆಸರವೊ
ಗಂಟಿಗಾಗಿ ನಿನಗೆ ರೊಕ್ಕಾವೊ
ಅರ್ಧ ಕೊಪ್ಪರಿಕೆ ತಗವ್ರೊ
ಇನ್ನ ತಗ ಎವ್ವ
ಕೊಟ್ಟರು ಇಷ್ಟೆ ಸಾಕರ ಸಯ್
ಸತ್ತನ ಗಂಟು ನೋಡರಾ ಸಯ್
ಬಂದಿದೆ ನನಗೆ ಸಾಕರಾ ಸಯ್
ಎವ್ವಾ ಎಷ್ಟು ಬಂದರೆ ಅಷ್ಟು ಕೊಡತೀವಿ ಸಯ್
ಗಂಟಿಗೆ ನಾವು ಕೊಡ್ತೀವಿ ಸಯ್

ಬಡ್ಡಿ ನಾವು ಕೊಡಾದಿಲ್ಲವ್ವಾ ಬಡ್ಡಿಗೆ ನಿನ್ನ ಹೆಸರು ಐತವ್ವಾ ಎಪ್ಪಾ ಎಷ್ಟೊ ಸತ್ತೋರು ಗಂಟು ಇದ್ದೋಟು ಬಂತು ಸಾಕು, ಆಹಾ ಅಂಬೊತ್ತಿಗೆ ನನ್ಮ ಮಕ್ಕಳು ಹೇಳಿದರೆ ಇದ್ದಕೆ ಹೋತಾರ ಆಗ ಮಕ್ಕಳೆ ಸಾಯ್ತರ ಇವರೆ ಸಾಯ್ತರ, ಆಹಾ ಅಂತಾ ಆ ಮುದುಕಿ ಹೇಳ್ತಾಳ, ಆಹಾ ಕಟ್ಟಿ ಈಗ ವರ್ಷಾಲಿ ಇಟು ಕಟ್ತಾರ ನನ್ನ ಅಳಿಯನೋರು ಈಗಮ್ಮ ಏನು ಎದೆ ಬೀಳಬ್ಯಾಡವ್ವಾ, ನೀನು ಅಂದರೆ ಆವೊತ್ತು ಬಂದು ಮುದ್ದೆ ಊಟ ಮಾಡ್ಯಾಳ, ಆಹಾ ಈಗ ಮನಿಗೆ ಬಂದರು ಹೋತಿವಪ್ಪಾ ನಾವು ಅಂತಾ ಹೋಗಿರಿ ಮಾವ ಅಂದರು ಸಾವುಕಾರು ಎಲ್ಲಪ್ಪಾ ಆಗಿನ್ನವರ ಕೊಂಟ್ರಾತ,

ಇಬ್ಬರು ತಾವೆ ಹೋಗ್ಯಾರ
ಡಾವುಡಿಂಗಲ ಪಟ್ಣಕ ಹೋಗ್ಯಾರ
ರಾಜ್ಯವಾಳುತಿದ್ದರೆ ಸಯ್
ಒಂದೆ ವರುಷ ಆಳ್ಯಾರ ಸಯ್
ಮೂರು ವರುಷಕೆ ಹೆಂಡತಿ ಹೊಟ್ಟೆ ಒಳಗರ
ಒಬ್ಬ ಮಗ ಹುಟ್ಟಿ ಬಿಟ್ಟಾನ
ಒಬ್ಬ ಮಗನೆ ಹುಟ್ಯಾನ
ಮಗನೆ ಹುಟ್ಟಿದ ಮ್ಯಾಲರಾ ಸಯ್
ದೊಡ್ಡೋನುಗಾಗಿ ನೋಡಾರ ಸಯ್
ಮಾವನ ಕರೆಕಳಿಸಿ ಬಿಟ್ಟಾರ ಸಯ್
ಸಾವುಕಾರ ಎಲ್ಲಪ್ಪರಾ ಸಯ್
ಗಂಧವ ತೊಟ್ಲ ಹಾಕ್ಯಾರ ಸಯ್
ಬೆಳ್ಳಿಯ ಉಡದಾರ ಹಾಕ್ಯಾರ ಸಯ್
ಬಂಗಾರ ಉಂಗುರ ಇಟ್ಟಾರ ಸಯ್
ಏನಂತಾ ಹೆಸರೆ ಇಡ್ತಾರ
ಮಗನಿಗಾಗಿ ನೋಡಾರ

ಆಗ ಡಾವುಡಿಂಗಲ ದೊರೆ ಏನಂತಾನ ನೋಡಪಾ, ಇನ್ನೊಬ್ಬ ಮಗಳು ಕೈಗೆ ಬಂದಾಳ ಆ ಯಮ್ಮನ ಕೊಟ್ಟು ಲಗ್ನ ಮಾಡ್ತೀವಿ ಒರೆ ನಿನ್ನ ಲಗ್ನನಾಡ ನಮ್ಮ ಲಗ್ನ ಮಸ್ತ ಆಗೈತೆ ಈಗ ಒಬ್ಬ ಮಗಳು ಕೊಟ್ಟಿದ್ದು ಸಾಕಪ್ಪಾ, ಆಹಾ ಈಗ ನಾವಿನ್ನ ಕರೆಕಳಿಸೀವಿ ತೊಟ್ಲದಾಗ ಆಕೀವಿ ಏನು ಹೆಸ್ರು ಇಡತಿ ಇಡಪಾ ಮೊಮ್ಮಗ್ಗೆ, ಆಹಾ ನೋಡಪಾ ಕರುಣೆಕಲ್ಲು ಹೊಸ ಊರು ಕಟ್ಟೀರಿ ಈಗ ಗೊಲ್ಲರ ನಾರಣಮ್ಮ ರೊಕ್ಕ ತಂದು ಉಸುಲು ಮಾಡಿಕೆಂಬಂದು ಕಟ್ಟೀರಿ ಈಗ ಈ ಮಗನೆ ನೋಡಪ್ಪಾ,

ಅಂದಬಾಯಿ ತಾವು ಐದಾಳ
ರಾಜಸೋಮ ತಂದೆಪ್ಪಾ

ರಾಜ ತನ ಮಾಡೋನು ಇನ್ನ ಮೈತು ತುಳೆರಾವಪ್ಪ

ತುಳೆರಾವು ಅಂತಾ ಇಟ್ಟಾರೆ ಸಯ್
ನಿನ್ನ ಮಗನೆ ನೋಡರಾ ಸಯ್

ಹೆಸರುನಾಗಿ ಇಟ್ಟಾರಾ ಅವರೆ ಹೆಸರೆ ಇಟ್ಟರಾ ಮಗ ತುಳೇರಾವ್ ಅಂತಾ ಇನ್ನವರ ಹೆಸರು ಇಟ್ಟಾರ, ಇಟ್ಟದ ಮ್ಯಾಲೆ ತಾವು ಕುಲಕ್ಕಾಗಿ ಅವೊತ್ತು ದಿನ ಇದ್ದರು ತಿರುಗು ದಿನಸ ನಾವು ಹೋತಿವಿ ಅಂತಾ ಹೊದರು, ಆಗ ಮಗಹುಟ್ಟಿದ ಮ್ಯಾಲೆ.

ಒಂದೆ ತಿಂಗಳಾವಾಗಿರಾ
ಎಲ್ಡೆ ತಿಂಗಳಾವಾಗೈತೊ
ಮೂರೆ ತಿಂಗಳ ನೋಡರಾ ಸಯ್
ಇಲ್ಲಿ ಬಿದ್ದು ಅಲ್ಲಿ ಬಿದ್ದುರಾ ಸಯ್
ಇನ್ನ ದಡೇಗಾವ್ ನೋಡರಾ ಸಯ್
ಹೊಳೆ ಅಂಚಿಕಡೆಗೆ ನೋಡರಾ ಸಯ್

ಕಕ್ಕನ ಕಿವಿಮ್ಯಾಗ ಬಿದೈತೊ ತಾಯಿ ಅವರಿಗೆ ನೋಡನ್ನ ಆಗ ಆತನ ಸುಂದರ ಕುದುರಿ ಈಗ ಬ್ಯಾಗರ ಎಲ್ಲಪ್ಪಾ,

ಹೊಳ ಅಚ್ಚಿಗೆ ಕಡಿಗಣ್ಣಾ
ಇನ್ನು ಸಿದ್ದೋಗಿ ಐದಾನ
ಮಾರವಾಡಿ ಶೇಠಿದವನಣ್ಣಾ
ಆತ ಕುಂತ ಕುದ್ರಿಅಣ್ಣಾ
ಭೂಮಿ ತಾಯಿಗೆ ಕಿವಿ ಇಟೈತೊ
ಭೂಮ್ಯಾಗಲಿದ್ದ ಕೇಳೈತೊ

ಆ ಕುದ್ರಿ ಏನ ಮಾಡೈತೆ ಅಂದರೆ, ಆಹಾ ಭೂಮಿ ತಾಯಿಗೆ ಕಿವಿಯಿಟ್ಟು ಮಕ್ಕಂಡರೆ ಆಗ ಭೂಮ್ಯಾಗಲಿದ್ದ ಕೇಳಿ ಬಿಟೈತೆ ಕಿವ್ಸಾಗಲಿದ್ದ ಆಹಾ,

ನೆಲ ಮೇಲೆ ಕುಂತ್ಕಂಡ ಸಾಯತಾವ
ಅಣ್ಣಾ ಮಕ್ಕಳೆ ಬರ್ತಾರ
ಈಗ ಸಿದ್ದೋಗಿನ ಕೊಲ್ಲೋರು
ನನ್ನ ಸಲುವದು ಯಾರಮ್ಮ
ನಿನ ಮೇಲೆ ಕುಂತವನು ಯಾರಮ್ಮ
ಅಂತಕುದ್ರಿ ನೋಡರಾ ಸಯ್
ಕೂಳು ನೀರೆ ಬಿಟೈತೆ
ಕುದುರೆ ಬಂದೆ ನೋಡರಾ
ಕೂಳು ನೀರೆ ಬಿಟೈತೆ

ಆಬ್ಯಾಗಾರ ಸುಂಕ ಏನ್ ಮಾಡ್ದ ಹುಳ್ಳಿ ನುಚ್ಚು ಅಕ್ಕಿಕಾಳು ತಂದು ಪುಟ್ಯಾಗ ಇಟ್ಟರೆ,

ಅಮ್ಮ ಕುದ್ರಿಕೇಳಮ್ಮಾ
ನಾಯಮ್ಮ ಕುದ್ರಿ ಕೇಳಮ್ಮಾ
ನಿನಗೆ ಊಟ ತಂದೀನಿ
ಊಟ ಮಾಡಮ್ಮ ನೀನಾದರೆ
ಮೇವು ತಂದು ಹಾಕ್ಯಾನೊ
ಈಗ ಏನ್ನ ಮೇವು ಮೇಯಮ್ಮಾ
ಕುದುರೆ ಕಣ್ಣೀರು ಉದುರಸೋದು
ಕುದುರೆ ಮಂದಿ ನೋಡರಾ ಸಯ್
ದುಃಖ ಮಾಡ್ತದ ನೋಡರಾ ಸಯ್
ಮೇವು ಮೇಯುವಲ್ಲಿ ನೋಡರಾ ಸಯ್
ಕುದುರೆಯಂತ ನೋಡರಾ ಸಯ್
ನನಮ್ಯಾಲೆ ಕುಂತವನ್ನ ಕೊಲ್ಲುತಾರ ಸಯ್

ನಾನು ಎಂಗ ಭೂಮಿ ಮ್ಯಾಲೆ ಇರಲೋ ನನ್ನ ಮ್ಯಾಲೆ ಕುಂತವನು ಸಾಯಿತಾನೆ. ನಾವೆಂಗೆ ಭೂಮಿಮ್ಯಾಲೆ ಇರಲಿ ಈಗ ಇತಗೆ ಗೊತ್ತಿಲ್ಲ ಆ ಕುದುರೆ ಎಷ್ಟು ಕಂಡು ಹಿಡಿದಿರಬೋದು, ಆಹಾ ಭೂಮ್ಯಾಗಲಿದ್ದ ಇನ್ನಕಿವಿಯಾಗಲಿದ್ದ ಕೇಳಿಬಿಟೈತೆ, ಆಹಾ ನನ್ನ ಮ್ಯಾಲೆ ಕುಂತವನ ಕೊಲ್ಲಿದ ಮ್ಯಾಲೆ ನಾನಿದ್ದು ಯಾತಕೆ. ಆತಕಿನ ಮುಂಚ್ಯಾಗಿ ಸಾಯತೀನಂತಾ ಮೇವು ಬಿಟ್ಟು ಬಟೈತೆ ಉಳ್ಳಿ ಕಾಳು ಅಕ್ಕಿಕಾಳು ಬಿಟ್ಟುಬಿಟೈತೆ, ಆಹಾ ಈ ಬ್ಯಾಗರದವನು ನೋಡಿದ ನನಗೆ ಸಂಬಳ ಬರಬೇಕು ಮುನ್ನೂರು ರೂಪಾಯಿ, ಆಹಾ ಮೂರು ತಿಂಗಳದು ಅದ್ವಾನ ಆಳಾಗಿ ಹೋಗ್ತದೆ ಈ ಕುದುರೆ ಎಂತಾದಪಾ, ಆಹಾ ಅವನಿನಿನ್ನಾ ಅಡ್ಡ ಹುಟ್ಟಿದ್ದು ಕುದ್ರಿ ಕುದ್ರಿಗನ್ನ ಅಡ್ಡಹುಟ್ಟಿದ್ದು ಅವನು, ಆಹಾ ಅರೆ ಹುಳ್ಳಿಕಾಳು ಅಕ್ಕಿಕಾಳು ತಂದು ಪುಟ್ಯಾಗಿಟ್ಟರೆ ಮೇಯಿವಲ್ಲದೆ ಕಣ್ಣೀರು ಉದುರುಸ್ತಿದೆ ಅಲೆಲೆಲೆಲೆ ಈಗ ನೀರನ್ನ ಕುಡಿಸಾನಂತ ಮುಸ್ರನೀರಿಂತಾಗ ಹಿಡಕಂಡಬಂದ,

ನೀರನ್ನ ನೀನು ಕುಡಿಯಮ್ಮ
ನಿನಗೇನ ನಾನು ಮಾಡೀನೊ
ನನ್ನ ಸಂಬಳ ಹಾಳ ಮಾಡಿದೆಲ್ಲೊ
ಮೂನ್ನೂರು ಕೊಡಬೇಕು ಅಳಿಮಯ್ಯ
ಸಂಬಳ ಬಂದ ಮ್ಯಾಲೆ ಸಾಯಪ್ಪ
ಬ್ಯಾಗರುದೋನು ನೀರು ಕುಡಿವಲ್ತು ಸಯ್
ಕಣ್ಣೀರು ಉದುರುಸ್ತೈತೆರಾ ಸಯ್
ಬ್ಯಾಗರದೋನು ಬೇಸು ನೋಡ್ಯಾನ

ಅರೆ ಮೇವು ಮಯವಲ್ದು ನೀರು ಕುಡಿವಲ್ದು ಆಗ ಅಕ್ಕಿಕಾಳ್ ಹುಳ್ಳಿಕಾಳು ತಿನವಲ್ಲದು ಅರೆರೆರೆ ಇದು ಕಟ್ಯಾಕಿ ಬೇಸು ಕಾಲು ಇಡಕಂಡೋಗಿ ಬಿಟ್ಟಾವ, ಆಹಾ ಎಲ್ಲೆಲ್ಲಿ ಕೀಲುನರಗಳು ಇಡಕಂಡೋಗಿ ಬಿಟ್ಟಾವ, ಆಹಾ ನಾರಳ್ಳಿಗ ಒಂದು ಗಾವುದ ಇನ್ನವರ ಓಡಿಸಿಕೆಂಡೋಗ್ತೀನಿ ಆಹಾ ಕುದುರೆ ಕುಂತಕ್ಕಂಡು ಎಲ್ಲೆಲ್ಲಿ ನರಗಳೆಲ್ಲಾ ಸಡ್ಲಾಗಿಬಿಡ್ತಾವ ಎಲ್ಲೆಲ್ಲಿ ಇನ್ನ ತರ ತಾವು ಕಾಲು ಕೈಯೆಲ್ಲ ಬೇಸು ಸಡ್ಲಾಗಿ,

ಆಗ ಏನದು ಊಟ ಮಾಡ್ತೈತೊ
ಇನ್ನ ಮೈನೋವಾಗಿ
ಕುದುರೆಗಾಗಿ ನೋಡರಾ
ಆಗ ಇನ್ನಹದ್ದಿದಿಂಡಾಗಿ ಸಯ್
ಆಗ ಬಾಯಿಗೆ ಹಾಕ್ಯಾನ ಸಯ್
ಸರಪಣಿ ಹಾಕಿ ಬಿಟ್ಟಾನ ಸಯ್
ಬಾರಕೋಲು ಕೈಯಾಗ ಇಡದಾನ ಸಯ್
ಆಗ ಕುದ್ರಿಮ್ಯಾಲೆ ನೋಡರಾ ಸಯ್

ಕೈಮುಗಿದೆ ಬಿಟ್ಟಾನ ಬ್ಯಾಗರ್ದೋನು ನೋಡರಾ ಕುದುರೆ ಮ್ಯಾಲೆ ಕುಂತಾನೆ, ಆಗ ಬಾಗರೋನು ಶರಣು ಮಾಡ್ದ ಕುದ್ರಿಮ್ಯಾಲೆ ಕುಂತ್ಕಂಡ ಆ ಕುದುರೆ ಎಂಗ ಓಡಿಸ್ತಾನ ಕೀಲು ಕಾಲು ಎಲ್ಲ ಸಡ್ಲ ಆಗಬೇಕಂತ,

ಆಗ ಕುದುರೆ ನೋಡರಾ ಸಯ್
ಚಳ್ಳು ಚಳ್ಳನೆ ಒಡದಾನ ಸಯ್
ಸವಾರೆ ನಡುವೆ ಬಿಡತಾನ ಸಯ್
ಕುಪ್ಪಳಿಸಿ ಎಗರಿ ಬಿಡ್ತಾದ ಸಯ್
ಒಂದೆ ಅರ್ಧ ಘಂಟೇನ ಸಯ್

ಒಂದು ಗಾವುದ ನಡೆದು ಬರ್ತೈತೆ ಅರ್ಧ ಘಂಟಿಗೆಲ್ಲ ಬಂದೈತೊ

ನಾರಳ್ಳಗೆ ಬಂದಾನೆ
ಆತ ಇನ್ನ ಇಳಿದಾನೊ

ಕುದುರೆ ಮ್ಯಾಲಿದ್ದ ಕೆಳಗಿಳಿದ ಕುದುರೆ ಇಡಕಂಡ ಹಳ್ದಾಕ ಬಂದು ಬಿಟ್ಟಾ, ಆಹಾ ಆಗ ಕುತ್ತಕಿ ಮಾವನೀರ್ದಾಗ ನಾರಾಳ್ಳದಾಗ ನಿಲ್ಲಿಸಿ ಬಿಟ್ಟಾ,

ಕುದುರಿಗೆ ಮೈತೊಳ್ದಾನ
ಬೇಸುವಾಗಿ ತೊಳ್ದಾನ
ಆಗ ನೀರುದಾಗ ನಿಂದರಸಿ

ಆಬ್ಯಾಗರೋನು ನೋಡಿದ ನನಗೆ ಇಬ್ಬರು ಮಕ್ಕಳು ಐದಾರ, ಆಹಾ ಮೂರು ತಿಂಗಳು ಸಂಬಳ ತಿಂಗಳಿಗೆ ಇನ್ನವರ ತಾವು ನೂರು ರೂಪಾಯಿ, ಆಹಾ ಅದ್ವಾನ ಆಗಿ ಹೋತೈತೆ ಮುನ್ನೂರು ರೂಪಾಯಿ ಹೋತಾವ ಲೇ ಕುದುರೆ ಸಲುವಾಕೆ ನಿನ್ನ ಬಿಟ್ಟೀನಿ ನನ್ನ ಕುದ್ರಿ ಮೇವು ಬಿಟ್ಟಾನ ನೀರು ಬಿಟ್ಟಾಗ ನನಗೆ ಹೇಳಬೇಕಿತ್ತು, ಆಹಾ ಏನು ಬ್ಯಾನೆ ಬಂದಿತ್ತು ನಾನು ನೋಡಿಕೆಮ್ಮತಿದ್ದೆ ನನ್ನ ಕುದ್ರಿನಾ ನಾನು ತೋರಿಸಿಕೆಮ್ಮತಿದ್ದೆ ಎಲ್ಯಾನ, ಆಹಾ ಔಷದ ಹಚ್ಚುತಿದ್ದೆ ಅಂತಾನನ್ನ ಸಂಬಳ ಹಾಳು ಮಾಡ್ತನಲ್ಲ, ಆಹಾ ನನ್ನ ಕುದುರೆ ಕಳದು ಬಿಟ್ಟೀನಿ ನಿನಗೆ ಸಂಬಳ ಕೊಡದಿಲ್ಲ ಸಂಬಳ ಕೊಡದಿಲ್ಲ ಹೋಗಲೆ ಅಂತಾನ, ಆಹಾ ಎಂಗ ಮಾಡ್ಕಬೇಕಂತ ಆಗಬ್ಯಾಗರೋನು,

ಎಲ್ಡು ಕೈಜೋಡಿಸಿ ಬಿಟ್ಟಾನೆ
ಎಮ್ಮ ಕುದಿರಿನಾಕಿ ಬೇಡಿಕೆಮ್ಮತಾನ
ಏನು ಬ್ಯಾನಿ ನಿನಗೆ ಬಂದೈತೆ
ಈಗನ್ನ ನೀರು ಕುಡಿಯವ್ವ
ಕುದ್ರಿ ನನ್ನ ರೊಕ್ಕನೇನು ಹಾಳು ಮಾಡಬ್ಯಾಡ
ಅಮ್ಯಾಯ್ಯಾ ತಲೆಮ್ಯಾಲೆ ಕುಂತೇನು ಸಿದ್ದೋಗಿ
ನಿಮ್ಮ ಗೌಡ ಒಳ್ಳೇನು ಅಲ್ಲರಾ

ಅಮ್ಮ ಕುದುರೆ ಶರಣೆ ಎಷ್ಟು ಬೇಡಿಕೆಂದರೂ ನೀರು ಕುಡಿವಲ್ತು, ಆಹಾ ಎಡಗಣ್ಣಾಗ ನೀರು ಎಡಗಣ್ಣಾಗ ಇಳಿತಾವ ಬಲಗಣ್ಣು ನೀರು ಬಲಗಣ್ಣಾಗ ಇಳಿತಾವ, ಆಹಾ ನೋಡಿದ ಬ್ಯಾಗರೋನು ಸಿಟ್ಟು ಬಂದುಬಿಡ್ತು ಏ ಮುನ್ನೂರು ರೂಪಾಯಿ ಸಂಬಳ ಹೋದರೆ ಚಿಂತಿಲ್ಲ ಕುದುರೆಗೆ ಎಷ್ಟ ಇರಬೋದು ಏನ ರೋಗ ಏನಜಡ್ಡು ಬಂದೈತೊ ನಾನೆ ಕೂನ ಹಿಡಿಬೇಕು ಇದ್ರರೋಗಾನ, ಆಹಾ ಏನನ ಹಲ್ಲು ನೋವಾಗ್ಯಾವ ಏನಂತ,

ಹಲ್ಲನ್ನ ಅಲ್ಲಾಡಿಸ್ಯಾನ
ಯಾವುದು ನೋವು ಆಗ್ಯಾತೊ
ಏನು ಹೊಟ್ಟೆ ಉಬ್ಬರ ಬಂದೈತೊ
ಹೊಟ್ಟೆ ಆಡೇಲಿ ಕೈ ಇಟ್ಟಾನ

ಕೈ ಇನ್ನ ಹೊತ್ತಿದ ಹೊಟ್ಟೆ ಅಡೇಲಿ ಕೈ ಇಟ್ಟು ಹೊಟ್ಟೆಲ್ಲಾ ಇಸಗಾಡಿ ಬಿಟ್ಟಾ ಏನ ಹೊಟ್ಟೆ ಉಬ್ಬರ್ವಾಗತೆ ಅಂದ್ರೆ ಏನು ಉಬ್ಬರ ಆಗಿಲ್ಲ ಏನನ ಆಗ ಇದ್ರಗೇ ನನರ್ವಾಗ ಜಡ್ಡು ಬಂದೈತಂತ ಬೆನ್ನ ಮ್ಯಾಲೆ ಕೈ ಇಟ್ಟು ನೋಡಿದಾ ಏನು ರ್ವಾಗ ಇಲ್ಲ ಜಡ್ಡಿಲ್ಲ, ಆಹಾ ಅಲೆಲೆಲೆ ರ್ವಾಗಿಲ್ಲ ಜಡ್ಡಿಲ್ಲ, ಆಹಾ ಏತಿದ್ದು ಗೊಬ್ಬರ ಆ ಹೆಂಡ್ಯಾಗ ಏನನ ಹುಳ ಐದಾವೇನು ಹೊಟ್ಯಾಗ, ಆಹಾ ಅವು ಏನನ ಕಡಿತಿದ್ದವು ಅಂತಾ ಆಹೆಂಡೆ ಗೊಬ್ಬರದಾಗ ನೋಡಿದಾ, ಆಹಾ ಏನು ರ್ವಾಗ ಇಲ್ಲ ಲೇ ನಿನಗೆಷ್ಟು ಇರಬೋದು ನನಮ್ಯಾಲೆ ಮುನ್ನೂರು ರೂಪಾಯಿ ಹಾಳು ಮಾಡಬೇಕಂತ ಐದಿಯಂತ

ಕುಡಿತಿಯ ಬೇಕ ಅಂದನಾ ಸಯ್
ತಲೆ ಇಡಕಂಡು ಬಿಟ್ಟಾನ ಸಯ್
ನೀರುದಾಗ ಮುಣಸಿ ಬೊಗಿಸ್ಯಾನ ಸಯ್

ಕುಡಿ ಕುಡಿ ಅಂತಾನ ನೀರುದಾಗ ಬೊಗಿಸ್ಯಾನ ನೀರು ಬಂದಿತು ಕುಡಿರೇಲೆ ಕುಡಿಯೆ ನೀರು ಅಂತಾನ ಮೇವು ತಿಂದಿಲ್ಲ ಒಂದಿನ್ನವದ ಅಕ್ಕಿಕಾಳು ತಿಂದಿಲ್ಲ ನೀರು ಕುಡಿ ಅಂದ್ರೆ ಕುಡಿಯದಿಲ್ಲ, ಆ ಅಂತ ತಲೆಕೂದಲು ಇಡಕಂಡು ಮೂರು ಸರ್ತಿ ಬೊಗಿಸಿ ಬಿಟ್ಟಾ ನೀರ್ದಾಗ ಆಹಾ ಕುದ್ರಿಬೇಸು ಅರ್ಥ ಮಾಡಿಕೆಂತು ಲೇ ನನಕಷ್ಟ ನನಿಗೆ ಆಗಿದ್ರೆ ನೀನು ನೀರು ಕುಡಿ ಅಂತ ತಲೆ ಕೂದಲು ಇಡಕಂಡು ಕಿವ್ಯಾಗ ನೀರು ಹೋಗಿ ಸಾಯಂಗ ನೀಡು ಬೊಗಸ್ತೀಯಾ,

ಲೇ ನಿನಗೆ ಇಷ್ಟು ಇದ್ದರೆ ಸಯ್
ನನಗೆ ಎಷ್ಟ ಇರಬೇಕು ಸಯ್
ನೀರು ಕುಡಿಬಾರ್ದು ಅಂತಾನ ಸಯ್
ಆಗ ಎಲ್ಡು ಕಾಲು ಅಡ್ಯಾಲೆ ಸಯ್
ತಲೆ ತೂರಿಸಿಬಿಟ್ಟಾನೊ ಸಯ್
ಎತ್ತಿ ಕೆಳಗ ಒಗದಾನೊ
ಎತ್ತಿ ಕೆಳಗ ಆಗೈತೆ
ಹಳ್ಳದಾಗ ಆಕಿ ಬಿಟ್ಟಾನ
ಅವನು ಮ್ಯಾಲೆ ತುಳಿತೈತಣ್ಣಾ
ಅವ್ನ ಕೆಳಗ ವಾಕೈತೊ ಸಯ್
ಕುದುರೆ ಗಡ್ಡೆ ಏರೀತು ಸಯ್
ಸವಾರೆ ತಕ್ಕಂತೆ ನೋಡದಾ ಸಯ್
ಓಡಿ ಓಡಿ ಬರ್ತಾರ ಸಯ್
ಆಗ ಗಾವುದಾ ನೋಡರಾ ಸಯ್
ಇನ್ನ ಇಲ್ಲಿಗೆ ಬಂದೈತಾರ ಸಯ್
ದಡೆಗಾವಿಗೆ ಬಂದೈತೊ

ದಡೆಗಾವಿಗೆ ಬಂದೈತೊ ಕುದಿರೆ ಬಂದೈ ನೋಡರಾ ದಡೆಗಾವಿಗೆ ಕುದ್ರಿ ಓಡಿ ಬಂತು, ಆಹಾ ನೋಡಿ ಯಾರು ಕುದ್ರಿ ಸಲುವೋನು ಅವನೆ ಕಂಡು ಹಿಡಿಬೇಕು ಕುದ್ರಿ ಸಲುವಿದೋನೆ ಕಂಡುಹಿಡಿಬೇಕು, ಆಹಾ ಇದ್ರರ್ವಾಗ ಜಡ್ದು ಬ್ಯಾನಿ ಎಲ್ಲ ಕಂಡು ಹಿಡಿಬೇಕು, ಆಹಾ ಬ್ಯಾಗರ ಸುಂಕ ನೋಡಿದ ಅಲೆಲೆ ಇದರಕ ಏನು ಬಂದಿರಬಹುದು ಎಡಗಣ್ಣು ನೀರು ಎಡಕ್ಕೆ ಇಳಿತಾವ ಬಲಗಣ್ಣು ನೀರು ಬಲಕ್ಕೆ ಇಳಿತಾವ, ಆಹಾ ಏನನ ಬ್ಯಾನಿಬಂದೈತಾ ಒಣಿಗಿ ಹೋಗ್ಯಾತ ಇದು, ಆಹಾ ಕುದ್ರಿ ಕೈ ಹಾಕಿದರೆ ಜಾರುತೈತೆ, ಆಹಾ ಬೆನ್ನ ಮ್ಯಾಲೆ ತನುರ್ಯಾಗಿಲ್ಲ ಜಡ್ಡಿಲ್ಲ ಇದನ್ನ ನಾನೇ ಕಂಡುಹಿಡಿಬೇಕು, ಆಹಾ ಅಂತ ಕುದ್ರಿ ಇಡಕಂಡು ಮತ್ತೆ ಹಳ್ಳಕೆ ಬಂದ ಮೊಖ ತೊಳದ ಮೂರು ಬೊಗಸ ನೀರು ತಂದು ಎಲ್ಡು ಬೊಗಸೆ ಇಡಿದು ಎಷ್ಟು  ಚೆಲುಪಾದ ಹಿಡಕಂಡು ಬೇಡಿಕೆಂತಾನ, ಆಹಾ ಆ ಕುದ್ರಿದೆಲ್ಲಾ ಅರ್ಥ ಮಾಡಿಕೆಂತಾನ ಯಾರು ಕುದ್ರಿ ಸಲುವ ಬ್ಯಾಗರೋನು ಆಹಾ,

ಎಮ್ಮಾ ಯಾರನ್ನ ಪಾರ್ಟಿ ಐದಾರೆ
ನಿನಮ್ಯಾಲೆ ಕುಂತ ಗೌಡಮ್ಮ
ಮಾರವಾಡಿ ಶೇಠಿದೋ ನಮ್ಮ
ಕಡಿತಾರಂತ ಚಿಂತೆ ಮಾಡ್ತೀಯಾ
ಹೌದು ಹೌದು ಅಂತೈತೆ
ತಲೆ ಮುಂದೆ ಸೂಸುತೈತೆ
ಎಮ್ಮ ನಾಳೆ ನಾಡ್ದ ಬರ್ತಾರೆ
ನಿಮ್ಮ ರಾಜನ ಕಡಿಯಾಕ
ಹೌದು ಹೌದು ಅಂತೈತೊ
ಅದಕೆ ಕೂಳು ನೀರು ಬಿಟ್ಟೀಯಾ
ಹೌದು ಹೌದು ಅಂತೈತೊ

ಅಬ್ಬಲೆಲೆ ಮನಿಶಾನಿಗೆ ಅರ್ಥ ಮಾಡಿಲ್ಲೆ ಕುದ್ರಿಗೆ ಎಷ್ಟು ಅರ್ಥ ಮಾಡಿಕೆಂಡಿರಬಾರ್ದು, ಆಹಾ ನನಮ್ಯಾಲೆ ಕುಂತವನ ಕೊಲ್ಲಾಕ ಬರ್ತಾರ ಆತನ ಸತ್ತುಮ್ಯಾಲೆ ನಾನಿದ್ದು ಯಾಕ ಆತಗನ್ನ ಮುಂಚ್ಯಾಗ ನಾನೆ ಕೂಳು ನೀರು ಬಿಟ್ಟು ಸಾಯ್ತೀನಿ ಅಂತ ಇದು ಇಷ್ಟು ಮಾಡೈತೆ ನೋಡಿರಾ, ಆಹಾ ಈಗ ಅರ್ಥ ಆಯಿತು ನೋಡು ಎಮ್ಮ ಈಗ ಕುಲದಲ್ಲಾಗಿ, ಆಹಾ ಕೆಳಗಡೆ ಊರಾಗ ಹೊಳೆ ಅಚ್ಚಕಡಿಗೆ ದಡೇಗಾವ್‌ಬಡೇಗಾವ್‌ಬಡೆಗಾವ್‌ದಾಗ ಯಾರು ಐದಾರ ಸಿದ್ದೋಗಿ ನಿನಮ್ಯಾಲೆ ಕುಂದರೋನು, ಆಹಾ ಕೆಳಗೆ ಇನ್ನ ಏರ ತಾವು ದಡೇಗಾವ್‌ದಾಗ ಯಾರು ಐದಾರ ಕುಲದಾಗ ಅವರು ದತ್ತು ಮಕ್ಕಳು ಶಂಬೆಗ ಮೆಂಚಿಗೆ ಮಂತ್ರಾಳ ಮಾದೇವ ಆಸ್ರಾಪ್‌ಕಟ್ಟೋನು ನಾಲೋರು ಮಕ್ಕಳು ಅವನಿಗೆ, ಆಹಾ ನೋಡಮ್ಮ ಮಂತ್ರಗಳು ತಂತ್ರಗಳು ಕಟ್ಟೋದು ಅವರು ಕೊಲ್ಲು ಅಂದರೆ ಕೊಲ್ಲಕಂಡು ಬರ್ತಾರ ತಲೆ ತಗಂಡು ಬಾ ಅಂದರೆ ತಲೆ ತಗಂಡು ಬರ್ತಾರ ಆಹಾ,

ಅವರೇ ನನ್ನ ಬರ್ತಾರ
ಅವರಿಗೆ ಎಲ್ಡು ಸಾವಿರ ಸಾಲ ಕೊಟ್ಟಾನೆ
ಸಾಲ ಕೊಡಂತ ಕೇಳ್ತಾರ
ಗೌಡನ ಕೊಲ್ಲಿದರೆ ನೋಡಾನ

ನಮ್ಮ ಸಾವು ನಮ್ಮಿಗೆ ಉಳಿತೈತಲ್ಲಾ, ಆಹಾ ಅವನು ಕೊಡಬೇಕಲ್ಲ, ಆಹಾ ಕೊಡಲಿದ್ದರೆ ಅದೇ ರೊಕ್ಕನಮ್ಮಿಗೆ ಉಳಿತೈತಲ್ಲಾ ಅಂತ ಏನನ ಬರ್ತಾರ ಏನಂದಿಲ್ಲ, ಆಹಾ ಸರೆ ಇಲ್ಲಿಗೆ ಮೂರು ಗಾವುದ ಐತೆ,

ಲಿಂಗವಂತರಿಗೆ ಐದು ಸಾವಿರ ಕೊಟ್ಟಾನ
ಲಿಂಗವಂತರಿಗೆ ಕೊಟ್ಟಾನ
ಅವರೇ ನನ್ನ ಬರ್ತಾರ
ಅವರಂದ್ರಗೆ ನಂದಿಲ್ಲ
ಆಗ ಸುತ್ತ ನೋಡರಾ ಸಯ್
ಸುತ್ತ ಕೇಳಿಕೊಂಡು ನೋಡರಾ ಸಯ್
ಅಣ್ಣ ಮಕ್ಕಳ ಮ್ಯಾಲೆ ನೋಡರಾ ಸಯ್

ಬ್ಯಾಗರೋನ ನೆಪ್ಪು ಬಂದೈತೊ ಅಣ್ಣಾ ಮಕ್ಕಳು ಬಂದರಾ ಎಮ್ಮಾ ಕರೆಣೆ ಕಲ್ಲು ಅಡವಿ ಕಾಯೋದು ಗೊಲ್ಲರಾಕಿ ತಲ್ಲಿ ಏಳು ಕೊಡಪಾನ ರೊಕ್ಕ ತಂದು ಸಾವಿರ ಲಕ್ಷ ಮನಿಗಳು ಕಟ್ಟಿಸ್ಯಾರ ಏಳು ಸುತ್ತ ಅಗಸಿ ಕಟ್ಯಾರ ಆಹಾ

ಅವರು ಕಟ್ಟಿ ಈಗ ನಾಕು ವರುಷ ಆಗೈತೊ
ಅವರು ಊರೆ ಕಟ್ಯಾರೆ
ಅಣ್ಣಾ ಮಕ್ಕಳು ಐದಾರೆ
ತಾಯಿ ತಂದೆ ಸತ್ತುವಾಗಾರೆ ಸಯ್
ನಿನಮ್ಯಾಲೆ ಕುಂತು ಗೌಡರೆ ಸಯ್
ಕೈಕಾಲು ಅವರಿಗೆ ಕಟ್ಟಿದ ಸಯ್
ಹುಡುಗರನೆ ಬಡಿದಾರ ಸಯ್
ಬೆಳ್ಳಿ ಬಂಗಾರ ಆಸತಾರ ಸಯ್

ಆಸ್ತೆಲ್ಲಾ ತಂದು ಕೊಂಡಾರ ಕೇಳವೊ ಕುದ್ರಿ ಐದು ವರುಷ ಹುಡಗರಿದ್ದಾಗ ತಾಯಿ ತಂದಿ ಸತ್ತಾಗ ಕಂಬಕಟ್ಟಿ ಆಸ್ತೆಲ್ಲಾ ತಂದು ಕೊಂಡಾನ ಆಹಾ ಈಗ ಅವರು ಕೈಯಾಗ ಇವರು ಕೈಯಾಗ ಕಸ ಬಳದು ಅವರು ಹೇಳ್ದ ಬದುಕು ಮಾಡಿ ಆಗ ಹುಡುಗರು ಓದು ಕಲ್ಲು ದೊಡೋರಾಗಿ ಒಬ್ಬನು ದೊಡ್ಡೋನಿಗೆ ಮದುವಿ ಆಗ್ಯಾತೆ, ಆಹಾ ಅವರು ಬುದ್ದಿ ತಿಳಿಕಂಡು ರೊಕ್ಕತಂದು ಆಗ ಸ್ವಸಂತ್ರ ಮನಿಗಳು ಕಟ್ಟಿಕಂಡರಾ ಆಹಾ ಅವರು ಏನನ್ನ ಬರ್ತಾರ ಸಾಲಕೇಳಾಕಲ್ಲ ಆಗ ತಂದೇನ ಆಸ್ತಿ ಕೇಳಾಕಲ್ಲ ಬರ್ತಾರ ಏನಂದ್ರೆ,