ಇರಬಾರದೆ ಅಣ್ಣಯ್ಯಾ
ಒಬ್ಬರು ಕೈಯಾಗ ಇರಬಾರದು
ಬೀಗರು ಮನಿಯಾಗ ಇರಬಾರದು
ನಾವು ಊರು ಬಿಟ್ಟು ಹೋಗರಾ ಸಯ್
ಎಲ್ಲೇನಾ ಮನ್ಯಾಗ ಆಳಾರೆ ಸಯ್
ಯಾರನು ಬರುವ ರಾಜನೆ ಸಯ್
ನಾವು ಇನ್ನ ಸಂಬಳ ಸಯ್
ಸಂಬಳಾಗಿ ನಾವು ದುಡಿಯೋನು ಸಯ್
ದುಡಿದ್ದು ರೊಕ್ಕ ತಂದರಾ ಸಯ್
ಮನಿಯಾ ಕಟ್ಟಿಬಿಡನಾ
ದುಡಿದ್ದು ರೊಕ್ಕ ತಂದುರಾ
ಮನೆಗಳ ನಾವು ಕಟ್ಟಾನ

ಅಪ್ಪಾ ತಮ್ಮ ನೋರೆ, ನೀವು ಇಷ್ಟೊಂದು ಹೇಳ್ತೀರಿ ಇದ್ಯೆ ಕಲಿಸಿದಾ ಮಗಳು ಕೊಟ್ಟಾ ಆಗ ಆತ ಏನನ್ನ ಅಂದರೆ ನಾವು ಹೋಗಬಹುದು. ನೋಡಪಾ ಇಸು ದಿನ ಜೋಪಾನ ಮಾಡಿ ಇವಾಗ ಹೋತಿವಿ ಅಂದರೆ ಆತನ ಮುಖ ಎಷ್ಟು ಅಂದರಬಹುದು ಅಣ್ಣಾ ನಿನಗೆ ಬುದ್ದಿ ಐತೋ ಇಲ್ಲ ಆತ ಇಟ್ಟರೆ ತಿನ್ನಬೇಕು ಯಾರನ್ನ ಅಂದ್ರು ಏನನ್ನ ಏನಂತರಾ ಏ ನಿಮಗೆಷ್ಟು ಸೊಕ್ಕು ಬಂದೈತೆ ಇಂಗೆ ಹೋತಿರಲ್ಲಾ ಹೆಣ್ಣ ಮಕ್ಕಳು ಬಗ್ಲಾಗೆ ಹೋತಿರಲ್ಲಾ ನಿಮಗೆ ಎಷ್ಟು ಇರಬಹುದು,

ಹಾಕಿದ ಕೂಳುತಿಂಬುವರೆ
ಮಂದಿ ಕೂಳು ತಿಂಬುವರೇ
ಆಗ ಕೈಲಿ ಇಡಕಂಡು
ನಾವೇ ಮದುವೆ ಮಾಡಿದರು
ಎಲ್ಲಿ ಆಳಾಗಿ ಹೋಗಿದ್ದರು
ನಾವೇ ಮದುವೆ ಮಾಡಿದರು

ನಿಮಗೆ ಇರಿಸ್ತನ ಬಂದೈತೆ ಅಂತಾರ ಯಾಕಪ್ಪಾ ನಾವು ಸ್ವತಂತ್ರ ದುಡಿಕೆಂಬಾನ ಆಹಾ ಅಂಬೊತ್ತಿಗೆ ಹೌದು ಬಿಡು ತಮ್ಮ ಖರೇರೆ ಆಹಾ ಮುಂದುಕ ಏನನ್ನ ಬರಬಹುದು ಆಹಾ ನಮ್ಮ ತಾತನವರು ನಮ್ಮ ತಂದೆವರು ಏಂಗ ರಾಜ್ಯವು ಆಳ್ಯಾರ ಅಂಗ ಆಳಾನ ಅಂತಾ ಸರೆಬಿಡಂತಾ ಮೂವರು ಮಾತಾಡಿಕಂಡರು ಬಂದರು,

ಶರಣೆ ಇನ್ನ ಮಾವಯ್ಯ
ಮಗಳು ಕೊಟ್ಟಿದ ಮಾವಯ್ಯೊ
ಇದ್ಯೆ ಕಲಿಸಿದ ಮಾವಯ್ಯೊ
ನಿನ್ನ ಪಾದಕೆ ಶರಣರಾ ಸಯ್
ಮಗಳೆ ಕೊಟ್ಟೆ ಮಾಡಿದೆ ಸಯ್
ಈಗಲಿದ್ದರ ಮಾವಯ್ಯ ಸಯ್
ನಿನ್ನ ಬಿಟ್ಟು ನಾವು ಹೋತಿವಿ ಸಯ್
ನಮ್ಮೂರಿಗೆ ನಾವು ಹೋತಿವಿ

ನಿನ್ನ ಬಿಟ್ಟು ನಾವು ಹೋತಿವಿ ಮಾವ ಎದೆ ತಣ್ಣಾಗ ಆಯ್ತು ಮಾವಂದು ನನ್ತಲ್ಲೆ ಇರ್ತಾರ ಮೂವರಿಗೆ ಮೂರು ಮನೆ ಕೊಡ್ತೀನಿ ಈಗ ತಲಿಗೆ ಒಂದು ಎಕರೆ ಭೂಮಿ ಕೊಡ್ತೀನಿ, ಆಹಾ ಅಂತ ತಿಳಕಂಡಿದ್ದೆ ಇನ್ನೊಬ್ಬ ಮಗಳು ಕೊಡಾನ ಇನ್ನೊಬ್ಬನಿಗಿದ್ದರೆ ಎಲ್ಯಾನ ಹುಡುಕ್ಯಾಡಿ ಮಾಡ್ತೀನಿ ಅಂತ ನಾನು ತಿಳಕಂಡಿದ್ದೆ, ಆಹಾ ಎಷ್ಟೋ ಚೆಂದ ಐದಾರ ನನ ಕೈಯಾಗ ಹುಡುಗರಂತ ನಾನು ಎಷ್ಟೋ ಆಸಿ ಬಿದ್ದಿದ್ದೆ ಏನನಾ ಅಳಿಯನೋರೆ ನಿಮ್ಮನ್ನ ಏನನ ಬೈದಿನಾ ನಿಮ್ಮನ್ನ ಏನನ ಅಂದಿನಾ ನೋಡಪಾ ನನಗೆ ಇರಿಸ್ತನ ಅಲ್ಲ ನಿಮಗೆ ಇರಿಸ್ತನ ಕೊಡ್ತೀನಿ, ಆಹಾ ನೀವೆ ಇಟ್ಟರೆ ನಾನು ಊಟ ಮಾಡ್ತೀನಿ ನೀವು ಇಡಲಿದ್ದರೆ ನಾನು ಉಪವಾಸ ಇರ್ತೀನಿ,

ಎಪ್ಪಾ ನನ್ನ ಬಿಟ್ಟು ಹೋಗಬ್ಯಾಡರಪ್ಪಾ
ಎಷ್ಟೋ ನಂಬಿಕೊಂಡೀನಿ
ನಿಮ್ಮನ ಬಿಟ್ಟು ಇರಲ್ಲರಾ
ನಿಮ್ಮನ್ನ ಬಿಟ್ಟಾ ಇರಲ್ಲರಾ
ಹುಡುಗರಾ
ಇರಲಿಕ್ಕೆ ನನಗೆ ಮನೆ ಇಲ್ಲ ಆಹಾ
ಅಪ್ಪಾ ಹುಡುಗರಿಗೆ ಹೇಳರಾ
ನನ್ನ ಬಿಟ್ಟು ಹೋಗಬ್ಯಾಡರಾ
ಇನ್ನ ದುಃಖ ಮಾಡದು ನೋಡರಾ
ಅಳಿಯೊನೋರು ಮುಂದೆ
ಇನೂ ಹೋಗಬ್ಯಾಡರಾ
ಮಾವ ದುಃಖ ಮಾಡ್ತಾನ
ಇನ್ನ ಇಷ್ಟ ದುಃಖ ಮಾಡಿದರೆ ಮಾವ
ಅರ್ಧ ಘಂಟೆ ಇರದಿಲ್ಲರಾ
ಮನ್ಯಾಗ ಇರೋದಿಲ್ಲರಾ
ನಾವೆ ಹೋತಿವಿ ಮಾವಯ್ಯ
ಇಷ್ಟೆ ಸಾಕು ಮಾವಯ್ಯ ಸಯ್
ಕಳಿಸಿರಿ ಕಳಿಸಿರಿ ನಿನ ಮಗಳ ಸಯ್
ಇಲ್ಲಿದ್ದ ಬ್ಯಾಡ ನೋಡಯ್ಯಾ ಸಯ್
ನಿನಮನ್ಯಾಗ ಉಳಿಸಿಕೆಂಬಯ್ಯ ಸಯ್

ನಾವೇ ಮೂವರೋತಿವಿ ನಿನ್ನ ಮಗಳು ಕಳಿಸಿದರೆ ಕಳಿಸಯ್ಯ ಇಲ್ಲದಿದ್ದರೆ ನಾವೇ ಹೋತಿವಿ. ತಾಳಿ ಕಟ್ಟಿದ ಮಗಳ್ನ ಉಳಿಸಿಕಾಬೇಕಂತೆ ಇವರನ ಕಳಿಸಬೇಕಂತೆ ಎಪ್ಪಾ ಆಸ್ತಿ ಕೊಡ್ತೀನಿ ಛಿ ಛಿ ನಿನ ಆಸ್ತಿ ಬ್ಯಾಡ ಒಬ್ಬರು ಆಸ್ತಿಯಾಕಪ್ಪಾ ನಮ್ಮ ಆಸ್ತಿ ಆಳಾಗಿ ಹೊಗೈತೆ ನಿನ್ನ ಆಸ್ತಿ ತಗಂಡು ನಾವೇನು ಮಾಡಾನ, ಆಹಾ ನಮ್ಮ ತಾತನವರು ಎಂಗ ವೃದ್ಧಿಯಾಗಿ ಮಾಡಿದ್ದರೋ ಎಂಗ ಸಂಪಾಸಿ ಮಾಡಿದ್ದರೋ ಅಂಗ ನಾವು ಹೆಸರು ಆಗಬೇಕು ಆಹಾ ಅಂಬೊತ್ತಿಗೆ ಅಂಗಾದರೆ ಹೋತಿರೇನಪ್ಪಾ ಹೋತಿವಿ ಆಗ ಓಡಿಬಂದ ಏನಪಾ ಕೋಮಟರೆ ಸಾವುಕಾರ ಎಲ್ಲಪ್ಪಾ ನೀನನ ಸಲಿವಿದೋನು ನಿನ ಮಾತು ಕೇಳ್ತಾರೇನು ಅಳಿಯನೋರು ಎಷ್ಟು ನಂಬಿಕಂಡಿದ್ದೆ ಇನ್ನೊಬ್ಬ ಮಗಳ್ನ ಕೊಡಬೇಕಂದುಕಂಡಿದ್ದೆ ಏನಪಾ ನೀನನ ಹೇಳ ಬಾ, ಆಹಾ ಅಂದರೆ ಕೋಮಟರಾತ ಬಂದ ನೋಡಪಾ ಅಲ್ಲಿ ಕೈಕಾಲು ಕಟ್ಟಿದ್ದರೆ ಬಿಚ್ಚಿಕಂಡು ಕರಕಂಡು ಬಂದು ಗುಗ್ಗರಿ ಮಾರಿ ಜೋಪಾನ ಮಾಡಿರೆ, ಆಹಾ ಈಗ ಪುಣ್ಯಾತ್ಮ ಆಗ ಓದು ಕಲಿಸಿದಾ ಇದ್ಯೆ ಕಲಿಸಿದಾ ಮಗಳು ಕೊಟ್ಟ,

ಎಂತಾ ಹುಡುಗರು ಐದಿರಿ
ನಮ್ಮನ್ನ ಬಿಟ್ಟು ದೂರ ಹೋತಿರಿ
ನಮ್ಮನ್ನ ಬಿಟ್ಟು ಎತ್ತಾಕ ಹೋತಿರಿ
ನಮ್ಮ ತಲ್ಲಿ ನೀವು ಇರ್ರೀರಾ ಸಯ್
ಅವರು ಮನ್ಯಾಗ ಇರದಿದ್ದರೆ ಸಯ್

ನನ್ನ ಮನ್ಯಾಗ ನೀವು ಇರಾರೆ ಅವರು ಮನ್ಯಾಗ ನೀವು ಇರದಿದ್ದರೆ ನನ್ನ ಮನ್ಯಾಗ ನೀವು ಇರ್ರೆಪ್ಪಾ ಏನಪಾ ಹುಡುಗರಾ, ಆಹಾ ಮಾರ್ವಾಡಿ ಶೇಠಿ ಹುಡುಗರಾ, ಆಹಾ ಆತ ನಿಮ್ಮ ಮಾವನ ಮನ್ಯಾಗ ಇರದಿದ್ದರೆ ಹೆಣ್ಣು ಕೊಟ್ಟಿದ ಮನ್ಯಾಗ ಇರಬಾರದು ಬೀಗರತಲ್ಲಿ ಅಂದರೆ ನನ್ತಲ್ಲಿ ಇರ್ರೀ, ಆಹಾ ನನ್ತಲ್ಲಿ ಇರದಿದ್ದರೆ ಕೋಮಟರ ಮನ್ಯಾಗ ಎಂಗ ಇರ್ಲ ಅಂದರೆ ನಿಮಗೆ ಬ್ಯಾರೆ ಮನೆ ಕಟ್ಟಿಸ್ತೀನಿ, ಆಹಾ ಇಲ್ಲರಿ ಬೀಗರು ಇದ್ದ ಊರಾಗ ಇರದಿಲ್ಲ ಆಹಾ ಹೆಂಡತಿ ಮಾಡಿಕಂಡಿರೊ ಊರಾಗ ಇರದಿಲ್ಲ, ಆಹಾ ಈಗ ಕಳಿಸದರೆ ಕಳಿಸಿರಿ ಮಗಳ್ನ ನಾವೇ ಇರಂಗಿಲ್ಲಪ್ಪೊ ಹೋತಿವಿ ನಾವು ನಾವೇ ಹೊಂಟೇವಿ ಊರಿಗೆ ಎಲ್ಲಿಗೆ ಹೋತಿರಿ ನಮ್ಮ ಊರಿಗೆ ನಾವು ಹೋತಿವಿ ಅಯ್ಯೊ ಆಗ ನಮ್ಮ ಕಕ್ಕ ಬೀಗ ಅಕ್ಯಂಡು ಹೋಗ್ಯಾನ ಈಗ ಬೀಗ ಮುರಕಂತೀವಿ ಮನ್ಯಾಕ ಹೋತಿವಿ ನಮ್ಮನ್ಯಾಗ ನಾವು ಹೋಗಾಕೇನು ಅಂಗಾರೆ ನಿಮ್ಮ ಊರಿಗೆ ನೀವು ಹೋತಿರಿ ಓ ಹುಡುಗರಾ ನಿಮ್ಮ ಊರಿಗೆ ಹೋತಿರೇನಪ್ಪಾ ಹೋತಿವಯ್ಯಾ ಎಷ್ಟನ್ನ ಆಗಲಪ್ಪಾ ಹುಡುಗರಾ ಇಗೋ ಮೂವರಿಗೆ ಮೂರು ಕುದುರೆ ಕೋಡ್ತೀವಿ ಮೂವರಿಗೆ ಮೂರು ನಾಯಿ ಕೊಡ್ತೀವಿ ಅಂತಾ,

ಚಿಕ್ಕ ನಾಯಿ ಸೀಮಿ ನಾಯಿಯಣ್ಣ
ಮತ್ತಿನಾಯಿ ಗಲ್ಡಿ ನಾಯಿಯಣ್ಣ
ಮೂರೆ ಕೊಟ್ಟೆ ಬಿಟ್ಟಾರ

ಕೊಟ್ಟು ತಾವು ಜೀವಕ್ಕ ಮೂರು ಕುದುರೆ ಕೊಟ್ಟಾರ, ಆಹಾ ಮೂರು ಕುದುರೆ ಕೊಟ್ಟು ಅಲ್ಡುಪಲ್ಲಾ ಅಕ್ಕಿ ಹಾಕಿದರು ಆಗ ಮಗಳ ಪಾದಕೆ ಬಿದ್ದಾರೆ ಎಮ್ಮಾ ರುಬ್ಯಾಕನ್ನ ಇಲ್ಲರಾ ಉಟ್ಟಾಕ ಬಟ್ಟೆ ಇಲ್ಲರೆ ಹೋತಿಯಮ್ಮ  ನೀನು ಲೋಕದಾಗ ನೀನೆ ಹೋತಿ ಮಗಳಾ ಇರತಾರಂತ ತಿಳಕೊಂಡ್ನೆಮ್ಮಾ, ಇರತಾರಂತನಾಕೊಂಡೆನಮ್ಮ ಏ..ಏ.. ಮಗಳಾ ನಿನ್ನ ಅತ್ತು ಶರಣಮ್ಮ ಮಗಳಾ ಆಗ ಕೇಳಲೆ ಆಗ ಮೈದನೋರು ಬೈದಾರಾ ಮೈದನೋರು ಚಿನ್ನ ಐದಾರೆ ಅಪ್ಪ ಮಗಳಾ ಕೇಳಮ್ಮ ಎಮ್ಮ ಮೈದನೋರು ಹರೆದೋರು ನಿನಗಂಡದಡ್ಡ ಅವರು ಬಾಳ ತಿಳಿವರಿಕೆ ಇದ್ದವರು,

ಹರೇದೋಳು ನೀವು ಐದಿಯೋ
ಹರೇದು ಗಂಡಸರು ಐದಾರ
ಎಮ್ಮೊ ಎಷ್ಟೇ ಬುದ್ದಿ ಹೇಳಬೇಕು
ಎಷ್ಟೊ ಗ್ಯಾನ ಇರಬೇಕು
ಯಾರ ತಲ್ಲಿ ಎಂಗ ನುಡಿಬೇಕು
ಯಾರ ಎಂಗ ಮಾತನಾಡಬೇಕು
ಬಾಳ ಬುದ್ದಿವಂತಾದ್ದು
ತಲೆ ಕೂದಲು ಬಗ್ಗಿಸಬ್ಯಾಡಮ್ಮ
ಲೋಕ ಹೆಸರು ತರಬ್ಯಾಡ

ಅಂತ ಮಗಳಿಗೆ ಬುದ್ದಿ ಹೇಳಿದ. ಹೇಳಿ, ಉಡಿ ಅಕ್ಕಿ ಹಾಕಿ ಆಗ ಮಗಳಿಗೆ ಬಂಡಿ ಕಟ್ಟಿ ಕಳಿಸಿದ, ಆಹಾ ಕಳಿಸೊ ಹೊತ್ತಿಗೆ,

ಆಗ ಹುಡುಗರು ನೋಡರಾ ಸಯ್
ಮೂವರು ಮುಂದೆ ಹುಡುಗರಾ ಸಯ್
ಅವರೆ ಮುಂದೆ ಬಿಟ್ಟಾರಾ ಸಯ್
ಮೂರು ನಾಯಿಗಳ ಕರಕಂಡಾರ ಸಯ್
ನಾಯಿಗಳು ಮುಂದೆ ಹೋತಾವ ಸಯ್
ಹಿಂದೆ ಹಿಂದೆ ಬರ್ತಾರ
ಬಂಡಿ ಹಿಂದೆ ಬರ್ತಾರ
ಡಾವಡಿಂಗಲದವರು ನೋಡ್ಯಾರ
ಸಲುದೋನು ದುಃಖ ಮಾಡ್ತಾನ

ಸಾವುಕಾರ ಎಲ್ಲಪ್ಪ ಸಲಿವಿದೋನು ದುಃಖ ಮಾಡ್ತಾನ ಎಲ್ಲಿಗೆನ್ನ ಬರ್ಲಪ್ಪಾ ನಿಮ್ಮಿಂದೆ ನಿಮ್ಮಿಂದೆ ಏನೆಯಾರ ಬಿಟ್ಟು ಅಲ್ಲಿ ಬಿಟ್ಟೆ ಬೀಗ ಹಾಕಿದೆ ಬಂದೆ. ಆಹಾ ಇಲ್ಲಿ ಗುಗ್ಗರಿ ಯಾಪಾರ ಮಾಡದೆ ಎಲ್ಡು ಎಕರೆ ಭೂಮಿ ಕೊಣಕಂಡೆ ಮನಿ ಕೊಣಕಂಡೆ ಇಲ್ಲೇನಾ ಇರ್ತಾರ ಅಂತ ಮದುವಿಮಾಡ್ದೆ ಇಲ್ಲಿ ಬಿಟ್ಟು ನಿಮ್ಮ ಊರಿಗೆ ನೀವು ಹೋತಿವಿ ಅಂತಿರಿ ಇನ್ನು ಏನು ಮಾಡಬೇಕು ನಿಮ್ಮಿಂದೆ ನಾನು ಓಡಿಕಂಡು ಬರ್ಲಾ,

ಇಷ್ಟ ಹೋದರೆ ನನ್ನವನಾ
ಹೋತಿವಿ ಅಂತಾ ಅವರು ಬಂದಾರ
ಊರು ಬಿಟ್ಟು ಒಂದು ಗಾವುದಾ
ಎಲ್ಡೆ ಗಾವುದ ಬಂದಾರ
ಮೂರು ಗಾವುದಾ ಬಂದಾರ
ಬಗುಡಿ ಮ್ಯಾಕ ಬಂದಾರೆ
ಬಗುಡಿ ದಾರಿಗೆ ಬಂದಾರ ಸಯ್
ದಾರಿಗೆ ಕೊರಳ ಅರದಾರ ಸಯ್
ಮೊಲಪೈತೆ ಗಿಡಾನ
ಬಾರಿಗಿಡದಲ್ಲಿನಾ
ಮೊಲಕುಂತೈತೆ ನೋಡರಾ
ಆಂಗ ಮೊಲ ಐತೆ
ಕುದುರೆಗಳು ನೋಡಿ
ನಾಯಿಗಳು ನೋಡಿ
ಬಡಗ್ನ ಒಳಗ ಒಂಟಿತೊ
ಎದುರಿಕೆಂತಾನೆ ಬಂದಿತೊ ಸಯ್
ನಾಯಿಗಳು ಮ್ಯಾಲೆ ಬಿದ್ದವೊ ಸಯ್
ನಾಯಿಗಳು ಕಚ್ಚಿಕೊಂಡವೊ ಸಯ್
ಬಾಯಿ ಇನ್ನ ಇಡಿತಾವ ಸಯ್
ಹೊಟ್ಟೆ ಮ್ಯಾಲೆ ತೂರುವಾದ ಸಯ್
ಹಿಂದಕೆ ತಿರಿಗಿ ನೋಡಿದರೆ ಸಯ್
ಬೆನ್ನಮ್ಯಾಲೆ ಎಗರ್ತಿದಿತ್ತರ ಸಯ್
ಅದು ಮೊಲ ನೋಡರಾ ಸಯ್
ನಾಯಿಗಳು ತಪ್ಪಿಸಿ ಕೊಂಡಾರ ಸಯ್
ಕುದುರೆ ಮುಂದೆ ಬಂದೈವೋ ಸಯ್

ಕುದುರೆ ಮ್ಯಾಲೆ ಕುಂತವರು ನೋಡಿದರು ಅಬಾ ಮೂರು ನಾಯಿ ತಪ್ಪಿಸಿಕೆಂಡು ಬಂದುಬಿಡ್ತಾ ಇಟು ಐತೆ ಆ ಮೊಲ ಬಿಟ್ರಿ ಇನ್ನ ಒಂದು ಮೊಳ ಐತೆ,

ಇಂದೆ ಬಿಡು ಮೊಲವು ಸಯ್
ಬೆನ್ನಿಗೆ ಅಡ್ಡಾ ಬಂದೈತೊ ಸಯ್
ಒಳ್ಳೇದು ಆಗಾದಿಲ್ಲ ನಮ್ಮಿಗೆ ಸಯ್
ಇದು ಕಡಿದು ಬಿಡಬೇಕೆಂದು ಸಯ್
ಕುಪ್ಪಳಿಸಿ ಎಗರಿ ಬಿಟ್ಟಾನ ಸಯ್
ಡಮಿಕ್ ಡಮಿಕ್ ಅಂತ ಅಂತಾನ ಸಯ್
ಇದು ಕಡಿದು ಬಿಡಬೇಕಂತಾ ಸಯ್
ಅವರು ಹಿಡಿಯಕಾ ಹೋದರೆ ಸಯ್
ಕಾಲಾಗ ಓಡಿ ಹೋಗುವುದಾಗ
ಮೂವರು ಇಡಿಯಾಕ ಹೋದರು ಸಯ್
ಮೂರು ನಾಯಿ ತಪ್ಪಿಸಿಕೆಂಡು ಹೊಗ್ಯೆತೊ ಸಯ್
ಮೊಲ ಹುಡಿ ಹೋಗ್ಯೆತೊ ಸಯ್
ಹಳ್ಳದಂಡಿಗೆ ಹೊಗ್ಯೆತೊ ಸಯ್

ಓದಿ ಹೋದು ಮ್ಯಾಲೆ ಬೇಸು ಆಲೋಚನೆ ಮಾಡಿದ. ಯಾರು ದೊಡ್ಡೋನು ಮಾವ ಎಷ್ಟು ದುಃಖ ಮಾಡಿದ ಸಾವುಕಾರ ಎಲ್ಲಪ್ಪಾ ಗುಗ್ರಿ ಯಾಪಾರ ಮಾಡಿ ಜೋಪಾನ ಮಾಡಿದವನು ದುಃಖ ಮಾಡಿದ ನೋಡು ಪಾಪ ಓದು ಕಲಿಸಿದಾ ಒಲ್ಲೆ ಒಲ್ಲೆ ಅಂದರೆ ನೀವೆ ಲಗ್ನ ಮಾಡಿದಿರಿ ಆತೇನು ನಮ್ಮನ್ನ ಬೈದಿಲ್ಲ ನೀವು ಎಷ್ಟು ಉಪವಾಸ ಮಾಡಿದಿರಿ ಅಗ್ಗಾ ಇರಬಾರದು ಒಬ್ಬರು ಕೈಯಾಗ ನಮ್ಮ ತಾತ ಹೆಸರಾದಂಗ ಒಬ್ಬರ ಕೈಯಾಗ ದುಡಿದು ರೊಕ್ಕ ತಂದು ಮನಿ ಕಟ್ಟಿಕಂಬಾನಂತ ನೀವು ಹೇಳಿದಿರಿ. ಆಗ ಬಂದೀನಿ ಕುದುರೆಗೆ ಕುಂದಿನಿ ಮೊಲ ಅಡ್ಡ ಬಂತು. ನಮ್ಮಿಗೆ ಒಳ್ಳೇದು ಆತೈತೇನು ಮುಂದಕ ಹೋದಿವಿ ಛೆ ಬಂದಿದ್ದಾರಿ ಒಳ್ಳೆದು ಅಲ್ಲ ಬಂದಿದ್ದಾರಿ ಒಳ್ಳೇದು ಅಲ್ಲಂತ ಹಿಂದಕ ಹೋಗನ್ನಡಿರಿ ಅಂದರೆ,

ಛೆ ಅಣ್ಣಾಯ್ಯ
ಮುಂದಕ ಇಟ್ಟೆರಚಾರ
ಹಿಂದಕ ಇಡು ಅಂತ ಹೇಳ್ತೀಯಾ
ಬುದ್ದಿ ಐತೊ ಬುದ್ದಿ ಇಲ್ಲಣ್ಣಾ
ಬುದ್ದಿವಂತರಿಲ್ಲರಾ
ದೊಡ್ಡೋನು ದಡ್ಡವೈದೀಯಾ
ನಿನಗೆ ಏನೇನು ತಿಳಿಯಾಗಿಲ್ಲಣ್ಣಾ
ಅದರ ಅರ್ಥ ನನ್ನ ಕೇಳು ನಾನು ಹೇಳ್ತೀನಿ ಆಹಾ
ನನ್ನಿಂದೆ ಇಬ್ಬರು ಹಿಂದೆ ಹುಟ್ಟಿದೋನು
ನಾನು ಹೇಳತೀನಿ ಅಂತಾನೆ
ತಾ ಏನು ಹೇಳುತಿ ಹೇಳಾಲೆ
ಹೇಳತಿನಿ ಕೇಳಲೆ ಅಣ್ಣಾಯ್ಯ
ಅಣ್ಣಾ ಹಿಡಕಂಡೆ ಹಿಡಕೆ ಐತೆ ಮೊಲ
ಆಗ ಮೂರು ನಾಯಿಗಳು
ನಮ್ಮನ್ನ ಮೂವರನ್ನ ತಪ್ಪಿಸಿಕೊಂಡು ಹೋಗಬೇಕಂದರೆ
ಒಳ್ಳೇದು ಆಗ್ತದ ಅಣ್ಣಾ
ಜೀವ ಒಳ್ಳೇದು ಬರ್ತಾನ
ಮೊಲ ಹೋಗಿತ್ತಲ್ಲ ನೋಡರಾ ಸಯ್
ಇಲ್ಲೆ ಗುಡಿಸಲು ವಾಕಿರೆ ಸಯ್
ಇಲ್ಲೆ ಊರು ಕಟ್ಯಾನ
ಇಲ್ಲೆ ಗುಡಿಸಲು ಹಾಕ್ಯಾರಾ
ಇಲ್ಲಿ ಅಂದರೆ ಕಟ್ಟೆಗೆ ಸಯ್
ಯಾರ್ಯಾರು ಸಾಯದಿಲ್ಲಣ್ಣಾ ಸಯ್
ಜೀವನೆ ಹೋಗೋದಿಲ್ಲರಾ ಸಯ್
ಊರು ಉದ್ದಾರ ಆತೈತೊ
ಯಾರು ಸಾಯಂಗಿಲ್ಲರಾ

ಏ ಮಾವನ ಕೈಯಾಗಿದ್ವಿ, ಆಹಾ ಆಗ ಮಾವ ಇಟ್ಟರೆ ತಿಂಬೊದು ಸುಮ್ಮನೆ ಓಡಾಡೋದೊ ಒದಕ ಕಳ್ಸಿದ್ರೆ ಓದಿಕೆಂಬೋದು ಈಗ ಹುಟ್ಟಾಕ ಬಟ್ಟೆ ಇಲ್ಲ ತಿಂಬಾಕ ಅನ್ನ ಇಲ್ಲ ನಾಯಿಗಳಿಗೆ ಕೂಳಿಲ್ಲ ಕುದುರೆಗಳಿಗೆ ಹುಲ್ಲು ನುಚ್ಚಿಲ್ಲ, ಆಹಾ ತಮ್ಮಾ ಏನ್ ಮನೆ ಕಟ್ತಿ ಅಂದ ಗುಡಿಸಲಿ ಅಕ್ಕಂಬನಾ ಆಕನ ಗುಡಿಸಲಿ, ಆಹಾ ಸುಮ್ಮನೆ ಆಪ್‌ನ ಗುಡಿಸಲಿ ಅಕ್ಕಂದು ಆಪ್‌ನ ಗುಡಿಸಲಾಗ ಏನ್ಮಡ್ತಿ, ಆಹಾ ನನ್ ಬದುಕು ಮಾಡಾನಪಾ ಯಾರ್ ಕೈಯಾಗನ ಇದ್ರೆ ಬರಿ ಅಂದ್ರೆ ಬರಿಯಾದು ಕೆಡಿಸು ಅಂದ್ರೆ ಕೆಡಿಸೋದು ಏನಪಾ ನಮ್ಮಿಗೇನನಾ ಸಂಬಳ ಕೊಡ್ತಾನ, ಆಹಾ ಆ ರೊಕ್ಕ ತಂದ್ಕಂಡು ನಾವೀಟು ತಿಂಬೋದು ಮನಿಕಟ್ಟಕೆಂಬತಿದ್ವಿ, ಆಹಾ ಹೆಂಡರು ಮಕ್ಕಳು ಬೇಕಾತೈತೆ ಅಲ್ಲಪ್ಪ, ಆಹಾ ಅಂದ ಮುದೈತಲ್ಲಾ ನೀವು ದೊಡ್ಡೋರು ದಡ್ಡರಣ್ಣಾ, ಆಹಾ ನಾಯಿನ ಬಡಿದರೆ ಏಟ್ ಬಿರ್ತದ ಲಕ್ಷಪಟ ರೊಕ್ಕ, ಆಹಾ ಏ ಏನೋ ತಂದೀಯಾ ಬಿಡಪಾ ನೀನು ಮೋಸಗಾರ ಇದ್ದಂಗೆ ಐದೀಯಾ ಬಿಡಪಾ, ಆಹಾ ಮಾವನ ಮನ್ಯಾಗ ಏನನಾ ರೊಕ್ಕ ತಂದೀಯಾ ಛಿ ಛಿ ಛಿ ಛಿ… ಮಾವ ಓದು ಕಲಿಸಿ ನಮಗೆ ಆಗ ಬುದ್ದಿಕಲಿಸಿ ನಮಗೆ ಲಗ್ನ ಮಾಡಿದಾನ ಮನ್ಯಾಗ ನಾವು ಕಳ್ತನ ಮಾಡತೀನ ರೊಕ್ಕ ತಂದಿಲ್ಲ ಮಾನ ಕಾಯಿ ಅಂದ ಮತ್ತೆ ಎಂಗೈತಪ್ಪಾ ಯಾರದೇನು ಈ ಭೂಮ್ಯಾನು ಯಾರದ್ಯಾಕ ಆಗ್ತದೆ ಇದು ದುಡ್ಡ ಹುಲಿ ಇಲ್ಲಿಗೆ ಕೆಂಪು ಮೆಟ್ಟಿನೆಲ್ಲ ಯಾವನು ಮಾತಾಡ್ತನ,

ಇದು ಯಾವನು ಭೂಮಿ ಅಲ್ಲಪಾ
ಯಾವನಿಗೆ ಆದರೆ ಕೇಳಬೇಕು

ಸರಿ ತಮ್ಮ ಹೋಗದ್ದಿಕೆ ಕೊಟ್ಟರೆ ಮುದ್ಯಾಕಿಗೆ ನಾವು ಕಸಬಳದೊ ಎಂಗೊ ಮಾಡಿ ತೀರ್ಸಬೋದು, ಆಹಾ ಕೊಡಲಿದ್ದರೆ ನೀನ್ ಮರ್ಯಾದೇನು ಉಳಿತು ಇದ್ದಿದ್ದು ನೋಡಿದ್ಯಾ ಇಲ್ಲಿದ್ದು ನೋಡಿದ್ಯಾ ಆಹಾ ಏಯ್ ಅಣ್ಣಾ ಕೋಂಟ್ರಾತ ನಮ್ಮಪಾ ಮಾತಾಡಿಕ್ಯಾನಾಗ ನಾನು ಬೇಸು ಕೇಳಿದೆ, ಆಹಾ ನಡಿ ನಾನು ಉಸುಲು ಮಾಡ್ತೀನಿ ನಡಿ ಕಾಲು ಬಿದ್ದು ಕೈ ಮುಗಿದು ಆ ಮುದ್ಯಾಕಿತಲ್ಲಿ ಇಸಕಂಬತೀನಿ ನಡಿ, ಆಹಾ

ಅಂಗಂದರೆ ನಡಿ ನಾವು ಹೋಗಾನ
ನಡಿಯಲೆ ಹೋಗಾನ ನನ್ ತಮ್ಮ
ಗುಡಿಸಲು ಹಾಕಾನ ಮುಂಚಾಲೆ

ಈಸಲು ಅಲ್ಲ ಈಸಲು ಬರಿ ಪೇಪರಿ ಬಂದ್ವು, ಈಸಲು ಗುಡಿಸಲು ಹಾಕಿದರು ಹಾಕಿ ಅಯಮ್ಮನ ಕುಂದರ್ಸಿದರು, ನಾಯಿಗಳು ಕಟ್ಯಾಕಿದರು ಕುದುರೆ ಕಟ್ಯಾಕಿದರು ಎತ್ತುಗಳು ಕಟ್ಯಾಕಿದರು,

ಮೂವರು ಅಣ್ಣಾತಮ್ಮರು ಬರ್ತಾರ
ಅವರೆ ಮುಂದೆ ನೋಡಾರೆ

ಆಗ ಗೊಲ್ಲರ ನಾರಾಣಮ್ಮ ಏನ್ಮಾಡ್ತಳ ಅಂದ್ರೆ, ಏಳು ಮಂದಿ ಮಕ್ಕಳು, ಆಹಾ ಏಳು ಮಂದಿ ಸೊಸೆಯರು ಏಳು ಮಂದಿಗೆ ಹುಟ್ಟಿದೋರು, ಆಹಾ ಒಂದು ಪಲ್ಲ ರಾಗಿ ಮುದ್ದೆ  ಮಾಡಿದರೆ ಗಂಡಮಕ್ಳಗೆ ಒಂದುವರೆ ಮುದ್ದೆ ಹೆಣಮಕ್ಳಗೆ ಒಂದೆ ಮುದ್ದೆ ಹುಡುಗರಿಗೆ ಅರ್ಧ ಮುದ್ದೆ, ಆಹಾ ಇನ್ನ ಬಟಸಲ ಆತೈತೆ ಅಂದರೆ ನಡೆಂಗಿಲ್ಲ ಅಲ್ಲಿಗೆ ಆಹಾ ಏಳು ಕೊಡ ಹಾಲು ಒಂದು ಕೊಡ ನೀರಾಕಿ ಮಾರಿಕೆಂಬರ್ತಾರ, ಆಹಾ ಹೊಟ್ಯಾಗ ಇರೊ ಮರಿಸತ್ತೋದ್ರೆ ತೊಗಲು ಬಿಡ್ಸಿ, ಸಣ್ಣಾಗ ಕೂಯಿದು ಪುಟ್ಯಾಗ ಆಕ್ಯಂಡೋದ್ರು,

ಮಾರಿಕೊಂಡು ಬರ್ತಾರೆ
ಮುದಿಕಿಗೇನ ಮನ್ಯಾಗ
ಮುದ್ಯಾತಗಾಗಿ ನೋಡರಾ ಸಯ್
ಮರಿಗಳು ಕಾಯಕ ಇಟ್ಟಾಳ ಸಯ್
ಸೊಸೆನೋರು ಕುಳಿತೈದಾರ ಸಯ್
ಆಗ ಕೋಳಿ ಕಾಯಕ ಇಟ್ಟಾಳ ಸಯ್
ಆಗ ಹುಡುಗರು ಎಲ್ಲರ ಸಯ್
ಇನ್ನ ಕುದುರೆ ಕಾಯಕ ಕಳಿಸ್ತಾಳ
ಇನ್ನವಾದರೆ ನೋಡರಾ ಸಯ್
ಐದು ತಿಂಗಳ ಬಾಣತಿದವರುರಾ ಸಯ್

ಕುರಿಗಳ ಮೇಸಕ ಕಳಿಸ್ತಾಳ ಕುರಿತಪ್ಪಲ ಇಲ್ಲ ಆಗ ಕುರಿ ಉಣ್ಣಿಮೆ ಮಾರಿಕೆಂಡರೆ ಅಗ್ತರ ಆತೈತೆ ಅಂತಾ,

ರಾಟರಿಗಾಕಿ ತಿರುವುತಾರ
ಕಂಬಳಿ ಮಾರಿಕೆಂಡು ಬರ್ತಾಳ
ಕಂಬಳಿ ಒಂದೆ ಮಾರ್ಯಾಳೆ
ಕಂಬಳಿನಾದರೆ ಮಾರಾನ ಸಯ್
ನಾವು ಮಾಡಿ ಬಂದು ಬಿಡನಾ ಸಯ್
ಮಾರಿಕೆಂಡರೆ ರೊಕ್ಕ ಬರ್ತೈತೊ
ಅಂತಾ ಮುದಿಕಿ ನೋಡರಾ

ಆ ಮುದ್ಯಾಕಿ ಒಂದೆ ಕುಂತಾಳ ಹತ್ತು ಗುಡಿಸಲು ಐದಾವ ಆ ಮುದ್ಯಾಕಿ ಕುಂತ್ಕಂಡು ಆಗ ರಾಟಿಂಗೆ ಹಾಕಿ ತಿರುವುತಾಳ, ಆಹಾ ತಿರುವುತಿದ್ದರೆ ಈ ಹುಡುಗ ನಾಕು ಹೊಲ ತೆಟ್ಟು ಪುರ್ಲಕ್ಕೆ ನೋಡಿಕೆಂತ ಬರ್ತಾನ ಆ ಮುದಿಕಿನಿ ಮೂರು ಹೊಲ ತೆಟ್ಟ ಬರೊಹೊತ್ತಿಗೆ ಇವರ ಕಡೆಗೆ ನೋಡಿಬಿಟ್ಟಳು ಮುದುಕಿ ರಾಟಿ ತಿರುವಿಕೆಂತ,

ಎಪ್ಪೊ ಅಡವಿ ಕಾಯೋರೆ ಬರ್ತಾರೆ
ಗುಡ್ಡ ಕಾಯೋರೆ ಬರ್ತಾರೆ
ಕುರಿಕೊಡು ಅಂತಾರ
ಆಗ ಕುರಿಗೊಂದು ಅಪ್ಪಾ

ಕುರಿಗೊಂದು ರೂಪಾಯಿ ಕೊಡು ಅಂತಾರ, ಆಹಾ ಸಾವಿರ ಕುರಿ ಐದಾವ ಆಹಾ ಸಾವಿರ ರೂಪಾಯಿ ಎಲ್ಲಿ ಕೊಡಲಿ, ಆಹಾ ಅವರೇನು ಮನಿಗುಳೆಲ್ಲ ನೊಡ್ತಾರ ಹೋತಾರ ನಮ್ಮಿಗೇನು ಗಂಗಳಿಲ್ಲ ಚರಿಗಿಲ್ಲ ಗುಂಡಾಳಲ್ಲ, ಆಹಾ ಮಣ್ಣ ಮುಟ್ಟಾಳ ಮಣ್ಣ ಮಾಲೆ ಮಣ್ಣು ಗಡಿಗೆ, ಆಹಾ ಬಗ್ಗೆನೆ ಅಯ್ಯೊ ಮೇಸ ಕಂಡರೆ ಬಿಟ್ಟು ಹೋಗಿಬಿಟ್ಟಾರ ಗುಡಿಸಲು ಅಕ್ಯಂಡು ಅಂತಾರ ಹೋತಾರಂತ,

ಮುದುಕಿ ರಾಟಿನ ಬಿಟ್ಟಿ ಬಿಟ್ಟಾಳ
ಮುದುಕಿ ಗುಡಿಸಲಾಕ ಹುಕ್ಕಂಡು
ತೂರಿಕೆಂಡು ಮನಿಯಾಕ ಬಂದಾಳ

ಮನಿಯಾಕ ಆರೆ ಬಂದಾಳ ಗುಡಿಸಲಾಕ ಬಂದು ಪಡಗ ಮೇಲೆ ಪಡಗ ಆಂಗ ಮುರು ಪಡಗ ಇಟ್ಟಾಳ,

ಪಡಗ ಹಿಂದುಕೆ ಹೋಗ್ಯಾಳ
ಮುದುಕಿ ಕುಂತೆ ಬಿಟ್ಟಾಳ ಸಯ್
ಪಿಳಿ ಪಿಳಿ ಕಣ್ ಬಿಡ್ತಾಳ ಸಯ್
ಬೆಕ್ಕು ಬಿಟ್ಟಂಗೆ ಬಿಡ್ತಾಳ ಸಯ್
ಆಗ ಪಡಗಕ ಆನಿಕೆಂಡೆ ಕುಂತಾಳ
ಪಟಗಕ ಬಂದೆ ನೋಡರಾ
ಆನಿಕೆಂಡೆ ತಾನು ಕುಂತಾಳ

ಇವರು ಅಣ್ಣಾರು ನೋಡಿಲ್ಲಪಾ, ಆ ಗಿಡಗಳೂ ಈ ಗಿಡಗಳು ನೋಡಿಕ್ಯಾಂತ ಬಂದರೊ ಏನಪಾ ಇವೇನ ಗುಡಿಸಲುಗಳು, ಆಹಾ ಇವೇ ನೋಡು ಅಂದರು ಗೊಲ್ಲರು ನಾರಾಣಮ್ಮ ಅಡವಿ ಕಾಯೋ ಗೊಲ್ಲರು ಉಂ ಸರೆ ಒಬ್ಬರು ಇಲ್ಲವೆ ಬರೇ ಗಡಿಗಿಗಳು ಪಡಗಗಳು ಬಿಸಾಕಿ ಹೋಗ್ಯಾರ, ಆಹಾ ಏಸು ದಿನ ಆಗ್ಯಾತೊ ಬಿಟ್ಟೋಗಿ ಪಾಪ, ಆಹಾ ಆವಾಗ ಎಲ್ಡುದಿನ ಗುಡಿಸಲು ಹಾಕ್ಯಾಂತರಾ ಮೈಸಿಕೆಂತಾರ ಹೋಗಿಬಿಟ್ಟಾರ ಆಹಾ ಅರೆ ಒಬ್ಬರನ ಹೆಣ್ಣು ಮಕ್ಳ ಇಲ್ವಲ್ಲ, ಆಹಾ ಒಬ್ಬ ಹುಡುಗನ ಇರದಿಲ್ಲ, ಆಹಾ ಒಬ್ಬಗಂಡ ಮಗನ ಇರದಿಲ್ಲ, ಆಹಾ ಒಬ್ಬರು ಇಲ್ಲ ಅಣ್ಣಾ ಏ ಆ ಮನಿಗಳೆಲ್ಲ ಯಾಕ ನೋಡ್ತಿರಿ,