ಸಾಯಲಿ ಸಾಯಲಿ ಸುಮ್ಮನಿರು
ಏಸು
ಮಂದ್ಯಾನ್ನ ಸಾಯಲಿ

ಅಯ್ಯೊ ತಮ್ಮ ಎಂತವನಲೊ ಪಾಪಪ್ಪ ಕರ್ಮಲೋ ತಪ್ಪಿದಿಲ್ಲಲೋ ಆಗ ನಡೆಪಾ ನಾವು ಗದರಸನ ಅವರ್ನ ಅಂಬೊತ್ತಿಗೆ ನೋಡಣ್ಣಾ ನಾವು ಪೂಜೆ ಮಾಡಸಂದರೆ ಮಾಡಿಸಲಿಲ್ಲ, ಏಳು ಬ್ಯಾಟೆ ಕಡಿ ಅಂದರೆ ಕಡಿಲಿಲ್ಲ, ಅಣ್ಣಾ ಮೊಲ ಹೋಗಿತ್ತಲ್ಲಿ ಆಗ, ಊರಕಟ್ಟರೆ ಒಬ್ಬರು ಸಾಯಲಿಲ್ಲ ಅಂದೆಲ್ಲ ನೂರು ಮಂದಿ ಯಾಕ ಸತ್ತರು ಅಂಗಲ್ಲ ಭೂಮಿಗಲ್ಲ ನಾನು ಅಂಬೋದು ಈ ಅಗಸಿ ಕಟ್ಟೀವಿ ಏಳು ಸುತ್ತು ಅಗಸಿ ಅಂದರೆ ಏಳು ಬ್ಯಾಟೆನ್ನ ಕಡಿಬೇಕ ಇಲ್ಲ ಆಹಾ,

ಮತ್ತೆ ನೂರ ಮಂದಿ ಇನ್ನ ಸತ್ತಾರ
ನೂರು ಬ್ಯಾಟೆ ಬಿದ್ದಾಂಗ
ಈಗ ಬಿದ್ದರೆ ಸಾಯಂಗಿಲ್ಲಣ್ಣಾ

ಸರ್ರೆಪಾ ಅಮತ ಕುದುರೆಗೆ ಬಡಿಯೋದು ಬಾರ್ಕೋಲು ತಗಂಡರು ಮೂವರು, ಆಹಾ ಒಬ್ಬನು ಏನು ಮಾಡಿರಾ ನೋಡಣ್ಣಾ ನೀನು ದೊಡ್ಡೋನು ಕೋಂಟರು ಶ್ಯಾನಬೋಗರ ಓಣಿಗೆ ನೀನು ಹೋಗು, ಆಹಾ ಕೋಂಟರು ಶ್ಯಾನಬೋರು ನೀನು ಹೆದರಸು ಲೇ ನಡವುಲೋನೆ ನೀನು ಉಪಾರು ಕುರುಬರನ್ನ ಒಡ್ಡರನ್ನ ನೀನು ಹೆದರಸು ನಾನು ಇನ್ನು ಮಾದಿಗ ಬ್ಯಾಗರ್ನ ಹೆದರಸುತ್ತೇವೆ ಆಹಾ,

ಬಾರ್ಕೋಲು ಕೈಯಾಗ ಹಿಡಿದಾರೆ ಸಯ್
ಗುದ್ದಾಟಗಳು ನೋಡಾರ ಸಯ್
ಜಟ್ ಜಟ್ ಜಟ್ ಅಂತಾ ಒಡಿತಾರ ಸಯ್
ನೀವು ಕಟ್ಟಿದ ಮನಿ ಇದುರಾ ಸಯ್
ಯಾವನು ಬಾ ಅಂತಾ ಹೇಳಿದರಾ ಸಯ್
ಯಾರನಂತ ಕೇಳಿ ಬಂದಿರಿ ಸಯ್
ಗೊಲ್ಲರ ನಾರಾಣಮ್ಮನ ಸಯ್
ನಾರಣಮ್ಮನ ಕೇಳ ಬೇಕಾರಾ
ಊರಾಕ ನೀವು ಬರಬೇಕರಾ
ಆಯಮ್ಮದು ಊರು ಐತಪ್ಪಾ
ಆಯಮ್ಮ ರೊಕ್ಕಲಿಂದ ಕಟ್ಟೀವಿ
ನಮ್ಮದು ಅಲ್ಲ
ಯಾರು ಕೇಳಿ ನೀವು ಬಂದೀರಿ
ಲೇ ….. ಹೋತಿರೆ ಊರಿನ ಹೊರಗಾನ
ಎಪ್ಪಾ ಬಡಿಬ್ಯಾಡರಿ ಬಡಿಬ್ಯಾರಿ ಅಂತಾರ ಸಯ್
ಅವರಿಗೆ ಮುಗಿದೇವ ಅಂತಾರ ಸಯ್
ಗೋಸೆ ಉಚ್ಚಂಗ ಹೊರಗ ಬರತಾರ ಸಯ್

ಎಲ್ಲರೂ ಊರು ಹೊರಗ ಬಂದರು ಹತ್ತು ಎಕರೆ ಭೂಮಿ ಹಿಡಿಲಾರದಂಗ ಜನಸಂಖ್ಯೆ ನಿಂತಕಂಡಿತು, ಆಹಾ ಈ ಸತ್ತೋರ್ನು ಬಿಡು ಲೆಕ್ಕ ಮಾಡಿದರೆ ನೂರು ಮಂದಿ ಸತ್ತೋಗ್ಯಾರ ರಕ್ತನಾಡ ಅಗಸ ಮುಂದಕ ಏಳು ಸುತ್ತ ಅಗಸಕ ಬಂದೈತಪ್ಪಾ ಬಜಾರ ಕುಂಟಾ ತಮ್ಮ ನೂರು ಮಂದಿಗೆ ಯಾವಾಗ ಕುಣಿತೋಡೋದು,

…. ಯಾ ಕುಣಿ ತೋಡ್ತಿಯೋ ಅಣ್ಣಾಯ್ಯಾ
ಒಂದೆ ಕುಣಿ ತೋಡೊದು
ಒಬ್ಬರ ಮ್ಯಾಲೆ ಒಬ್ಬರ ಹಾಕೋದು
ಮ್ಯಾಲೆ ಬಂಡಿ ಮುಚ್ಚೋದು
ಬಂಡಮ್ಯಾಲೆ ಮಣ್ಣು ಹಾಕೋದು ಸಯ್

ಆದರೆ ಭೂಮ್ಯಾಗ ಹೋತಾರ ನೂರು ಮಂದಿಗೆ ನೂರು ಕಣಿ ತೋಡಬೇಕಂದ್ರ ಯಾವಾಗ ಆಗಬೇಕು, ಆಹಾ ಒಂದೆ ಕುಣಿ ತೋಡೋದು ಒಬ್ಬನ ಮ್ಯಾಲೆ ಒಬ್ಬನ ಹಾಕೋದು ಬಂಡೆ ಮುಚ್ಚೋದು ಮ್ಯಾಲೆ ಮಣ್ಣು ಹಾಕೋದು, ಆಹಾ ಆಗೈತು ಮಣ್ಣಾಗ ಹೋಗಿಬಿಡ್ತಾರವರೆ ಅಂಬೊವೊತ್ತಿಗೆ

ಒಬ್ಬರನ ಮ್ಯಾಲೆ ಒಬರನ ಹಾಕ್ಯಾರ ಸಯ್
ನೂರ ಮಂದೀನೆ ಹಾಕ್ಯಾರ ಸಯ್
ಮ್ಯಾಲೆ ಬಂಡಿ ಎಳದು ಬಿಟ್ಟಾರ ಸಯ್

ಕಣ್ಣು ಮ್ಯಾಲೆ ಮಣ್ಣು ಎಳದಾರ ಅವರೆ ಮ್ಯಾಲೆ ಮಣ್ಣು ಎಳದಾರ ಆಗ ನೋಡ್ರಪಾ ನಾವು ಹಳೇ ಮನಿಯಾಗೊ ಗುಡಿಸಲಾಗೊ ಯಾವುದೊ ಮನಿಯಾಗ ಇದ್ದಿವಿ, ಆಹಾ ಆ ಎಮ್ಮನ ಕರೆಕಳಿಸಿ ಮಾರ್ವಾಡಿಯವರೆ ಈಗ ನೂರು ಮಂದಿ ಸತ್ತಮ್ಯಾಲೆ,

ಈಗ ಹೋಗರಿ ಅಂಬೋದು ಒಳ್ಳೇದೇನು
ಎಂತಹ ಒಳ್ಳೇಯವರೈದಿರಿ
ಎಪ್ಪಾ ಜಲ್ಮ ಕಳಿಯವರು ನೀವಪ್ಪಾ
ಜೀವ ಕಳಿಯವರೆ ನೀವಪ್ಪಾ

ಲೇ…. ಕಷ್ಟ ಪಡದು ನಾವು ಗೊಲ್ಲರ ನಾರಾಣಮ್ಮ ಸಂಪಾಸಿದ ರೊಕ್ಕೆಲ್ಲಾ ಉಸುಲು ಮಾಡಿಕೆಂಡು ಬಂದು ಕಷ್ಟು ಪಟ್ಟು ಮನಿಗಳು ಕಟ್ಟಿಸಿದ್ರೆ ಸುಮ್ಮನಿರ್ರಪಾ ತಲಿಗೊಂದು ಮನ್ಯಾಗಂದ್ರೆ ನನ್ನ ಮನೆ ನಿನ್ನ ಮನೆ ಅಂತ ಗುದ್ದಾಡಿ ಸಾಯಿತಿದ್ದಾರೆ, ನೀವು ಸಾಯಿತಿದ್ದಿರಿ ನೀವು ರೊಕ್ಕ ಇಲ್ಲ ಗಿಕ್ಕ ಇಲ್ಲ ಸುಮ್ಮನೆ ಗುದ್ದಾಡಿ ಆಗ ಜೀವ ಕಳಕಂತಿದ್ದಿರಿ ನಾವು ರೊಕ್ಕ ಕಳಕಂಡು ಮನಿ ಕಟ್ಟಿದಿವಿ ಏ ಯಾರ ಹೋತಿರಿ ಸತ್ತೋನು ಸತ್ತಾನ ಇದ್ದೋರು ಐದಿರಿ ನಾವು ಹೋಗು ಅಂತ ಹೇಳಿವಾ ಇದೋ ನಾವು ತೋರಿಸಿದ ಮನ್ಯಾಗ ಕುಂದರಬೇಕು, ಮತ್ತೆ ಬ್ಯಾರ ಮನಿಯಾಗ ಎದ್ದು ಹೋಗಿ ಅಂದರೆ ಐದು ಐದು ತೊಗಲು ಬಾರಕೋಲಿನಿಂದ ಬಡಿತೀನಿ, ಆಹಾ ತೊಗಲು ಸುಲಿಯಂಗ,

ಎಪ್ಪಾ ತೋರಿಸಿದ್ದಲ್ಲಿ ನಾವು ಇರತೀವಿ
ನಿಂದೆ ಮನೆ ಅಂತಾರ ಸಯ್
ಎಲ್ಲರಿಗೆ ತೋರಿಸ್ಯಾರ ಸಯ್
ಮೂರು ಸಾವಿರ ಲಕ್ಷ ಮನಿಗಳು ಸಯ್

ಎಲ್ಲರು ಬಿಟ್ಟುಬಿಟ್ಟಾರ ಮುನ್ನೂರು ಮಂದಿ ಉಳುದಾರ ಯಾ ಕುಲಜಾತಿ ಉಳಿದೈತಂದರೆ ಆಹಾ,

ಆಗ ಇನ್ನ ಮಾದರು ಉಳದಾರ
ಬ್ಯಾಗರ್ರೊಂದೆ ಉಳದಾರ
ನಾಯ್ಕರ ಗಂಡಸರು ಉಳದಾರ
ಅವರು ಏನಂತ ಅಂತಾರ
ಎಪ್ಪೊ ಇದ್ದೋರಿಗೆಲ್ಲಾ ತೋರಿಸಿದಿರೊ
ಬಡವರಿಗ್ಯಾರು ನೋಡೋರು
ನಮ್ಮಿಗೆ ಇಲ್ಲಂತ ನುಡಿತೀರಾ
ಏನು ಪಾಪ ನಿಮ್ಮಗೆ ಮಾಡೀವಿ
ಇದ್ದವನಾಗೆ ಇಡಿಯ ಏನು
ಬಡವರನ ನೋಡವರಲ್ಲಾರೆ
ಅನ್ಯಾಯ ಮಾಡಿದವರಾರು
ಅನ್ಯಾಯ ನಿಮಗೆ ಬರಲಿರಾ
ಬಡವರು ಅಂಬಾದಿದ್ದರೆ
ಮೂವರು ಅಣ್ಣಾ ತಮ್ಮರು ನೋಡ್ಯಾರ

ಕಣ್ಣೀಲಿ ಅವರೆ ನೋಡ್ಯಾರ ಖರೇವೆ ತಮ್ಮ ಈ ಕೋಂಟ್ರಗೆ ಮನಿಗಳು ಇಲ್ಲೇನಪ್ಪಾ, ಆಹಾ ಈ ಶ್ಯಾನಬೋಗ್ರಿಗೆ ಮನಿಗಳು ಇಲ್ಲೇನಪ್ಪಾ, ಆಹಾ ಈ ಲಿಂಗಾತರಿಗೆ ಇಲ್ಲೇನಪಾ ಈ ಉಪ್ಪಾರಿಗೆ ಇಲ್ಲೇನಪಾ, ಆಹಾ ಎಲ್ಲರೂ ಇದ್ದೋರಿಗೆ ತೋರಿಸಿದೆವಲ್ಲ, ಆಹಾ ಮಾದ್ರು ಬ್ಯಾಗರು ಕೊರಸರಿಗೆ ಇಲ್ಲ ಅಂದಿವಲ್ಲ ಇದು ಒಳ್ಳೇದೇನ ತಮ್ಮ ಅಂಬೊತ್ತಿಗೆ ನೋಡಪಾ ಉಳಕಂಡಿರ ಮುನ್ನೂರು ಮಂದಿ ನೀವೇನು ಊರಿಗೆ ಬಂದೋರು ಹೋಗಬ್ಯಾಡರಿ ಈಗ ತಾಳನ ಗುಡಿಸಲಿ ಆತನ ಗುಡಿಸಲಿ ಹುಲ್ಲಿನ ಗುಡಿಸಲಿ ಹಾಕ್ಯೋಳ್ರಿ ಆಹಾ,

ಮೂರು ತಿಂಗಳ ಹೋದ ಮ್ಯಾಲರಾ
ನಿಮ್ಮಿಗೆ ಮನಿಗಳು ಕಟ್ಟಿಸ್ತೀವಿ
ಆಗ ನಿಮ್ಮಗೆ ಮನಿಗಳು
ಅಂಗ ಅಗಲಿ ಅಂದರಾ ಸಯ್
ಗುಡಿಸಲು ಆಕ್ಯಂಬಿಟ್ಟರಾ ಸಯ್

ಆತನ ಗುಡಿಸಲು ಅವರೆ ಅಕ್ಯಾಂಬಿಟ್ಟರಾ ಬಡವರು ಆಕ್ಯಂಬಿಟ್ಟರಾ,

ಮೂರು ಕಟ್ಟಿಗೆ ತೆಗದರಾ ಸಯ್
ಒಂದೆ ದಿನ ಹಾಕಿದರಾ ಸಯ್
ಎಲ್ಡೆ ದಿನ ವಾಯಿತು ಸಯ್

ಮೂರೆ ದಿನವಾ ಆಯಿತು ತಾವೇ ಬಂದೆವಣ್ಣಾಯ್ಯ ಊರಾಗ ಬಂದೋರು ಮೂರು ದಿವಸಾಯಿತು, ಆಹಾ ಒಬ್ಬರು ಸಾಯಲಿಲ್ಲ ಒಬ್ಬರು ಇನ್ನವರ ಸಾವುನಗಡಿಲ್ಲ ಒಬ್ಬರಗಿ ಜರ ಬಂದಿಲ್ಲ ಅಣ್ಣಾ ಯಾರೇನು ಸಾಯಲಿಲ್ಲ ಯಾರೇನು ಎಲ್ಲಾರು ಬೇಸೈದರಾ ಊರಾಗ ಬಂದು ಮೂರು ದಿನ ಆಯಿತು ಜನಸಂಖ್ಯೆ ನಾವು ಹೋಗಾನ ನಡಿರಣ್ಣಾ ಊರಾಕ, ಆಹಾ ನಮ್ಮ ಮನಿಗಳಾಕ ಹೋಗಾನ ನಡಿರಿ ತಮ್ಮ ಊರಾಕ ಹೋದರೆ ಸಾಯಿತಿವೋ ಉಳಿತೀವೋ ಹೊಸ ಊರು, ಆಹಾ ಪೂಜಾ ಮಾಡಿಲ್ಲ ಪುಣ್ಯ ಮಾಡಿಲ್ಲ ಪೂಜೆ ಮಾಡಿ ಹೋಗಾನ ನಾವು, ಆಹಾ ಸರಿ ಅಣ್ಣಾ ಪೂಜೆ ಮಾಡಿ ಹೋಗಬೇಕು ಅಂತಿಯಣ್ಣಾ ಸರೆ ಬಿಡು ಅಂತಾ,

ಆಗ ಇನ್ನ ಪೂಜೆ ಮಾಡ್ತಾನ
ತಾವೇ ಪೂಜೆ ಮಾಡಣ್ಣಾ
ಪೂಜೆ ಇನ್ನ ಮಾಡ್ತಾರ ಸಯ್
ಹತ್ತು ಸೇರು ಅನ್ನ ಮಾಡ್ಯಾರ ಸಯ್
ಕಾಯಿ ಕರ್ಪೂರ ತರಿಸ್ಯಾರ ಸಯ್
ಅವರೆ ಮುಂದೆ ನೋಡಾರ ಸಯ್
ಅವರಿಗೇನಂತ ನೋಡಾರ ಸಯ್
ಅವ್ವನ ಹೆಸರೆ ಮುಂದಾದ ಸಯ್

ನಾನೇ ಮರೆತ ಹೋಗಿವಿ ನಾವೇ ಬಂದ ಉಳಿತೀವಿ ಅಣ್ಣಾ ಅಣ್ಣನ ಎಂತ ಏನಣ್ಣಾ ನೀನನ ಏಳಲಿಲ್ಲಣ್ಣಾ ಈಗ ಹೆಸರೂ ಇಡಬೇಕು ಈ ಊರಿಗೆ, ಆಹಾ ಆವಾಗ ಸಾವರಿ ಲಕ್ಷ ಮನಿಗಳು ಕಟ್ಟಿದವರು ಆಗ ಹೆಸರು ಇಡರಿ ಅಂತ ಹೇಳಿಲ್ಲ, ಆಹಾ ನಾವು ಮರತೋಗಿ ಬಿಟ್ಟೀವಿ ವಡ್ಡರ ಬಾಯಾಕ ಏನು ಬರ್ತಿತ್ತೊ ಉಪ್ಪಾರ ಬಾಯಾಕ ಏನು ಬರ್ತಿತ್ತೊ ಅಂಬೊತ್ತಿಗೆ ತಮ್ಮಾ ನಿನಗೆ ತಿಳವರಿಕೆಪ್ಪಾ ನಮಗೇನು ತಿಳವರಿಕೆಪಾ, ಆಹಾ ದೊಡ್ಡೋರು ದಡ್ಡರಪ್ಪಾ ತಮ್ಮಾ, ಆಹಾ ಆಗ ಕಾಯಿ ಬಡದರು ಪೂಜೆ ಮಾಡಿದರು ಆ ಮುದಾಕಿದೇನಂತಾರ ಈಗ ಏಳು ಕೊಪ್ಪರಿದಿಂದ ಇನ್ನವರ ಕೊಡಪಾನಲಿಂದ ಆಕಿ ಮನೀದು ನಮ್ಮದು ಅಲ್ಲಂತ ಗೊಲ್ಲರ ನಾರಾಣಮ್ಮಂದು ಇದು ಅಂತ ಹೆಸರು ಹಾಕಿದರು ಇವರು ಏನಂತ ಹೆಸರು ಇಡ್ತಾರ,

ಈಗ ರಾವುಕರಣಿಕಲ್ಲವೈತಪ್ಪಾ
ಕರಣೀಕಲ್ಲ ವೈತಪ್ಪಾ
ಮರುಣಿಕಲ್ಲ ವೈತಪ್ಪಾ
ಪರಾಕಿ ಹೋಗದಿಲ್ಲರಾ ಸಯ್
ಪ್ರಪಂಚ ಪೋಟೊ ವೈತಿರಾ ಸಯ್
ಕರಣಿಕಲ್ಲು ಕಾಸಿಮುಂದುಕ ಹೋಗರಾ
ಇದು ರಾವುಕರಣಿ ಕಲ್ಲು ವೈತಪ್ಪಾ
ರಕ್ತ ಕರಣಿಕಲ್ಲು ವೈತಪ್ಪಾ
ಕರಣಿ ಕಲ್ಲಂತ ಹೆಸರಿಟ್ಟರು ಆಹಾ
ಹೆಸರಿಟ್ಟು
ಅವರೆ ಬಂದೆ ನೋಡರಾ ಸಯ್
ಕುದುರೆ ಮ್ಯಾಲೆ ಕುಂತಕಂಡರಾ ಸಯ್
ಅವರಿಗಿನ್ನ ಬಂದರಾ ಸಯ್
ಅವರು ಬಾಯಿ ತಾಗ ಬಂದರಾ ಸಯ್
ಅವರು ಅಗಸ್ಯಾಕ ಬಂದರಾ ಸಯ್
ಇನ್ನ ಬಜಾರ್ದಾಗ ಬಂದರಾ ಸಯ್
ಬಣ್ಣದ ಮನೆಗೆ ಬಂದಾರೆ

ಅತ್ತಿಗೆ ಬಂದೆ ಬಂದಾರೆ ಆಗ ಅತ್ತಿಗೆ ಅಣ್ಣನ ಹೆಂಡತಿ ಅತ್ತಿಗೆ ಅಂದಬಾಯಿನ ಬಣ್ಣದ ಮನಿಯಾಗ ಬಿಟ್ಟರು, ಆಹಾ ಈಗ ಎತ್ತುಗಳು ಮನ್ಯಾಗ ಬಂದು ಎತ್ತುಗಳು ಕಟ್ಟಿಹಾಕಿದರು. ಆಹಾ ನಾಯಿಗಳು ಮನ್ಯಾಕ ಬಂದು ನಾಯಿಗಳು ಕಟ್ಟ ಹಾಕಿದರು, ಆಹಾ ಅಣ್ಣನ ಕರ್ಕಂಡು ರಾಜ ಕಛೇರಿಗೆ ಬಂದರು ಅಣ್ಣಾ ಈ ಊರಾಗ ಸಾವಿರ ಲಕ್ಷ ಮನಿಗಳು ಕಟ್ಟೀವಿ ಸಂಸಂಗಿ ಜಾತ್ರಿ ಯಾವಾನು ಗುದ್ದಾಡ್ತನೊ ಯಾವನೊ ಸಾಯ್ತನೋ,

ಹೇಳೋದು ಇಲ್ಲದಂಗ ಆಗೈತೊ
ಬಡವರಗೆ ಭಯ ಇಲ್ಲದಂಗ ಆಗೈತೊ
ದೊಡ್ಡವರು ಊರಿಗೆ ಇಲ್ಲದಂಗ
ಯಾರು ಮಾತು ಇನ್ನ ಕೇಳ್ತಾರ ಸಯ್
ನೀನೆ ದೊಡ್ಡೋವನಾಗಣ್ಣಾ ಸಯ್

ನಿನ್ನ ಮಾತು ಅವರು ಕೇಳ್ತಾರ ನಿನ್ನ ದೊಡ್ಡೋನು ಮಾಡ್ಯಾವ ನಿನ್ನ ಮಾತನೆ ಕೇಳ್ತಾರ ತಮ್ಮಾ ಊರು ಕಟ್ಟಿದೋರು ನಾವೇ ನನ್ನ ದೊಡ್ಡೋನು ಮಾಡ್ತೀರಾ, ಆಹಾ ಬಡವರು ನನ ಮಾತಾದ್ರೆ ಕೇಳ್ತಾರ, ಆಹಾ ಇಲ್ಲಪಾ ವಯಸ್ಸದಲ್ಲಿ ದೊಡ್ಡೇನು ದಡ್ಡ ವಯ್ಸಿದಲ್ಲಿ ಚಿಕ್ಕೋನಾದ್ರೆ ಬುದ್ದಿದಲ್ಲಿ ದೊಡ್ಡೋನು ಆಹಾ,

ನೀವಾಗರಿ ದೊಡ್ಡೋರು
ನೀವೆ ರಾಜ್ಯವಾಳರಿ
ಕರಣಿ ಕಲ್ಲರಾಜ್ಯವಂತಪ್ಪಾ
ಬಡವರಿಗೆಲ್ಲಾ ಬುದ್ದಿಹೇಳರಾ
ರಾಜ ಕಛೇರಿ ರಾಜನಾಗಪ್ಪಾ
ಎಪ್ಪಾ ನಿನ್ನ ಕೇಳಿ ಅಣ್ಣಾಯ್ಯಾ

ಅಣ್ಣಾ ನಾವು ಬಾಳ ಕಟ್ಟಿರೋದು ಹೆಚ್ಚಿ ಕಮ್ಮಿ ಮಾತಾಡಿದ್ರೆ ನಾವು ಬಡಿಯೋರು, ಆಹಾ ಈಗ ಬೇಸಲ್ಲ ನೀನಾದ್ರೆ ಈಗಿನ್ನ ದೊಡ್ಡೋನಾದ್ರೆ ಅವರು ಹೆಚ್ಚು ಮಾತಾಡಿದ್ರೇನಾ,

ಬಗ್ಗಿ ಮಾತನಾಡವರೆ
ರಾಜ ತಾನ ಮಾಡಿದ ಮ್ಯಾಲಪ್ಪ
ಒಳ್ಳೆಯವರಿಗನ್ನ ಕೊಡಬೇಕು
ಕೆಟ್ಟವನಾಗಿ ನೋಡಬೇಕು
ರೌಡಿ ಮನಿಸತನ ನೋಡಬೇಕು

ಎಪ್ಪಾ ಇಂಗ ಗುದ್ದಾಡಬಾರದರ ಲೊ ಇಂಗ ಮಾಡಿದರೆ ಎಂಗಲೊ ಅಂತಾ ನಿದಾನ ಹೇಳತಿದೆ,

ನಿನಗೆ ಇದ್ದ ಶಾಂತಿ ಅಣ್ಣಾಯ್ಯ
ನಮಗೆ
ಶಾಂತಿ ಇಲ್ಲಯ್ಯ

ಇಲ್ಲಪಾ ತಮ್ಮ ನೋರೆ ನೀವೆ ರಾಜ್ಯವಾಳರಪಾ ಇಲ್ಲ ನಿನ್ನೆ ಮಾಡ್ತೀವಿ ಅಂತಾ

ಮ್ಯಾಳ ತಾಳ ತರಿಸ್ಯಾರ ಸಯ್
ಅಣ್ಣಾಗ ಹೂವಿನಾರ ಹಾಕ್ಯಾರ ಸಯ್
ಊರಾಗ ಮೆರವಣಿಗೆ ಮಾಡ್ಯಾರ ಸಯ್

ನಮ್ಮಣ್ಣಾ ಊರಿಗೆ ರಾಜನಾದರೆ ಸಣ್ಣರೊ ದೊಡ್ಡೋರು ಅಂತಾರ ನೋಡ್ರಪಾ ಊರು ಕಟ್ಟಿದೋರು ನಾವೆ, ಆಹಾ ಈಗ ನಮ್ಮ ಅಣ್ಣಾನೆ ರಾಜ್ಯಕರಣಿಕಲ್ಲಿಗೆ ಈಗ ರಾಜ್ಯ ಕಛೇರಿಗೆ ಗಂಡಹೆಂಡ್ತಿ ಗುದ್ದಾಡಲಿ ಯಾರನ್ನ ಗುದ್ದಾಡಲಿ ನಮ್ಮಣಂತಲ್ಲಿಗೆ ಬಂದರೆ ಧರ್ಮ ಕರ್ಮ ಹೇಳ್ತಾನ,

ನ್ಯಾಯದಲ್ಲಿ ನ್ಯಾಯ ಬಗೆಹರಿಸ್ಯಾನ
ಇನ್ನ ನಿಮ್ಮಿಗೆ ಬುದ್ದೀನ
ರಾಜ್ಯವಾಳಿ ನಿಮಗೆ ಕಳಿಸ್ತಾನ
ರಾಜರ ತಲ್ಲಿಗೆ ಹೋದರೆ ಸಯ್

ರಾಜವಾಡಿ ಕಳಸ್ಯಾನ ಅಂತಾ ಹೇಳಿದರು ಸರಿ ಅಂತ ಬೇಡ ಅಂದರೆ ಕರಣಿಕಲ್ಲು ಅಣ್ಣಾನ ಹೆಸರಲಿ ಮಾಡಿಸಿದ್ರು, ಆಹಾ ಮಾಡಿಸಿ ಊರೆಲ್ಲ ಮೆರವಣಿಗೆ ಮಾಡಿಸಿ ಖುರ್ಚಿ ಮ್ಯಾಲೆ ಕುಮದರಿಸಿದರು,

ಒಂದೆ ತಿಂಗಳವಾಗೀತೆ
ಎಲ್ಡೆ ತಿಂಗಳಾವಾಗೀತೆ
ಆದ ಮ್ಯಾಲೆ ನೋಡರಾ ಸಯ್
ಇನ್ನ ಸಾವುಕಾರ ಎಲ್ಲಪ್ಪಾ ಸಯ್
ಆಗ ಡಾವುಡಿಂಗಲದೋರುರಾ ಸಯ್
ಇನ್ನ ನಿಮ್ಮ ಅಳಿಯೋನುರು ನೋಡಪಾ ಸಯ್
ನಿಮ್ಮ ಅಳಿಯೋನುರು ನೋಡಪಾ
ಸಾವಿರ ಲಕ್ಷ ಮನಿಗೋಳು ಕಟ್ಟಸ್ತರಾ
ಏಳು ಕೊಪ್ಪರಿಕೆ ತಂದರಾ ಸಯ್
ಅವರೆ ಬಂದ ನೋಡಿರಾ ಸಯ್
ಏಳ ಸುತ್ತ ಅಗಸಿ ಕಟ್ಯಾರ ಸಯ್
ಬಾರಯ್ಯ ನೋಡಿ ಬರಾಣ
ನಾವೇ ಬಂದೇವು

ಅಂದರೆ ಮಾವ ಆಗ ಸಾವುಕಾರ ಎಲ್ಲಪ್ಪಾ ಇಬ್ಬರು ಇನ್ನವರ ಕುದುರೆ ಮ್ಯಾಲೆ ಕುಂತ್ಕಂಡು,

ಅವರೆ ಕುದುರೆ ಒಡಿತರ ಸಯ್
ಚಳ್ಳು ಚಳ್ಳು ಅಂತಾ ಬಡಿತಾರ ಸಯ್
ಡಾವುಡಿಂಗಲ ಪಟ್ಣದಿಂದರಾ ಸಯ್
ಒಂದೆ ಗಾವುದ ಬಂದರೆ ಸಯ್
ಎಲ್ಡೆ ಗಾವುದ ಬಂದರೆ ಸಯ್
ಮೂರೆ ಗಾವುದರೊಡರೆ ಸಯ್
ಬುಗುಡೆ ಮ್ಯಾಕ ನೋಡರಾ ಸಯ್

ಇನ್ನ ಅವರು ಇಳಿಕೆ ಬಂದಾರ ಇಳಕಂಡು ಆಗ ಅಗಸ್ಯಾಗಲಿಂದ ಬಣ್ಣದ ಮನ್ಯಾಗ ಬಂದರು,

ಶರಣಮ್ಮ ನನ್ನ ಮಗಳೆ
ಅಂದವಾಗಿ ನನ್ನ ಮಗಳೆ
ಶರಣಪ್ಪ ನನ್ನಾಗೆ ತಂದೆ
ಆಗ ಕೇಳಲೆ ಅಳಿಯೋನೋರೆ

ಎಲ್ಲಿ ಗೋದರಮ್ಮ ಈಗ ರಾಜತನ ಮಾಡ್ತಾನಪ್ಪ, ಆಹಾ ಈಗ ಕುಲದಲ್ಲಿ ಮಾರಾವಾಡಿ ಶೇಠವರು ಈಗ ಗೊಲ್ಲರ ನಾರಾಣಮ್ಮ ಈಗ ಅಡವಿ ಕಾಯೊಗೊಲ್ಲರ ತಲ್ಲಿಗೆ ಹೋಗಿ ಆಗ ಏಳು ಕೊಪ್ಪರ ಆಸ್ತಿ ತಂದು ಕೊಪ್ಪರ ಆಸ್ತಿ ತಂದು ಮನಿಗಳು ಕಟ್ಟಿ ಈಗ ಏಳು ಸುತ್ತ ಅಗಸಿ ಕಟ್ಟಿ, ಆಹಾ ಈಗ ರಾಜತನ ಮಾಡ್ತಾರಪಾ ಸರೆ ರಾಜಕಛೇರಿಗೆ ಬಂದರು

ಶರಣಪ್ಪಾ ಅಳಿಯೇನವರೆ
ಎಂತ ಬುದ್ದಿತನ ಮಾಡವರೆ
ನನ್ನ ಕೇಳಬೇಕಿತ್ತು
ಮುದುಕಿ ತಲ್ಲಿಯಾಕ ತಂದೀರಿ
ಎಲ್ಲೆಬಿದ್ದು ಏನು ಸತ್ತಾಳು

ಗೊಲ್ಲರ ನಾರಾಣಮ್ಮ ಕಡ್ಡಿಪುಡಿ ಬಾಯಿಗೆ ಉಗ್ಗಿ ಎಷ್ಟೊ ಸಂಪಾದಿಸ್ಯಾಳ ಈಗ ಮ್ಯಾಲೆ ಇಟ್ಟರೆ ಸುಟ್ಟು ಬೂದಿ ಆತವ ಅಂತೇಳಿ ಭೂಮ್ಯಾಗ ಊಣಿಕ್ಕಿದ್ದ ರೊಕ್ಕ ಹೆದರಿಸಿ ಬೆದರಿಸಿ ತಂದು ಸಾವಿರ ಲಕ್ಷ ಮನಿಗಳು ಏಳು ಸುತ್ತ ಅಗಸಿಕಟ್ಟಿ ಇರುವಾಗ ನಯಾ ಪೈಸ ಕೊಡಲಿದ್ದರೆ ಎಂಗಪಾ, ಆಹಾ ಅಳಿಯೋನೋರೆ ಒಬ್ಬರ ರುಣದಾಗ ಇದ್ದರೆ ಆ ಮುದುಕಿ ಎದೆ ಬಿದ್ದು ಎಲ್ಲಿ ಸತ್ತೊದಳು,

ಈಗ ನಾನು ಕೊಡತೀನೆ ಅಳಿಯೋನೋರೆ
ಮುದುಕಿಗೆ ತೀರಿಸಿ ಬರ್ರೆಪ್ಪಾ
ಇಂದೆ ನನಗೇನು ಕೊಡಬ್ಯಾಡರಿ
ನೀನೇನು ಪುಗಸೆಟ್ಟಿ ಕೊಡ್ತೀಯಾಪ್ಪಾ
ಮುದಿಗೇನು ಪುಗಸೆಟ್ಟಿಗೆ ಕೊಡ್ತಾಳ

ನೋಡು ಆ ಮುದಾಕಿ ಅಂದರೇನು ನಮ್ಮವ್ವಾ ಅಂದರೆ ಅನವಲ್ಲಾಕ ಅಂತ ಅನಿಸಿಕೆಂತೀವಿ,

ನೀನು ಮಾವ ಅಂದರೆ ಬಿಡಲಾರಿವಿ
ಇನ್ನ ನಮಗೆ ಸಾಧ್ಯವಿಲ್ಲ
ವರುಷದ ಮ್ಯಾಗ ಮಾವಯ್ಯಾ ಸಯ್
ಒಂದು ಕೊಪ್ಪರಿ ಹಣ ನೋಡ್ಯಾರಿ ಸಯ್
ಬಡ್ಡಿ ಇಲ್ಲದೆ ಒಟ್ಟು ತೀರಿಸ್ತೀವಿ ಸಯ್
ಗಂಟುಬಿದ್ದರೆ ಬಡ್ಡಿ ಕಟ್ಟತೀವಿ ಸಯ್
ಯಾರು ಬಿದ್ದರೆ ಅದು ಕೊಡ್ತೀವಿ ಸಯ್
ಅವ್ವನ ಪಾದ ಮುಗಿತೀವಿ

ಅಂದರೆ ಸಾವುಕಾರ ಎಲ್ಲಪ್ಪ ನೋಡಿದಾ ಏನಪಾ ನಾನೇನು ಕೊಡದು ನೋಡಪಾ ಅರ್ಧ ಕೊಪ್ಪರ ಆಸ್ತಿ ಕೊಡ್ತೀನಿ ನಾನು ಊರು ಬಿಟ್ಟು ಊರು ಬಂದೋನು ಅಂಬೊತ್ತಿಗೆ. ಅಯ್ಯಾ ಯಾರು ಕೊಡೋದು ಬ್ಯಾಡ ನಮ್ಮನ್ನು ಇಡಿಯೋದು ಬ್ಯಾಡ ನಮ್ಮಪ್ಪ ಆಸ್ತಿ ಒಯ್ದು ಬಿಟ್ಟಾರ, ಆಹಾ ಈಗಲಿದ್ದಂಗ ಆಗಿದ್ದರೆ ನಮ್ಮ ತಂದೆ ಮೂರೆಗೇಣಪ್ಪ ನಾವೇ ಬಿಡುತಿದ್ದಿಲ್ಲ ಅಂದರೆ ಚಿಕ್ಕ ತಮ್ಮ ಏನಂತನಾ ಇಬ್ಬರಿಗಿಂತ ಚಿಕ್ಕೋನು ಆಹಾ ಅಣ್ಣಾ ತಿಂಬಲಿ ತಿಂಬಲಿ,

ನಮ್ಮ ಆಸ್ತಿ ಏಸು ದಿನ ತಿಂತಾರ
ಕಕ್ಕಾನ ಜಲ್ಮ ಕಳಿದಿದ್ದರೆ ತಂದೀಗೆ ಯಾಕ ಹುಟ್ಟಬ್ಯಾಕು
ನಿನಗೊಂದು ಮದುವೆ ಮಾಡವೆ
ನಾವಿಬ್ಬರು ಐದಿವೊ ಸಯ್
ನಾನು ತಂದಿ ಆಸ್ತಿ ಕೊಡವನೆ
ಮದುವಿ ಮಾಡಾವನು ಆತಾನೊ
ಆಸ್ತಿಕೊಟ್ಟರೆ ಒಳ್ಳೇದುರಾ ಸಯ್
ಮದುವಿ ಮಾಡಿದರೆ ಒಳ್ಳೇದುರಾ ಸಯ್

ಬಂದಿದ್ದ ದಾರಿಗೆ ಬಂದರೆ ಎಲ್ಡುದಾರಿ ತಪ್ಪಾದರೆ ಅವರು ಜೀವ ಹೋಗೋದು ಖರೇವು ಅಂದರೆ ಮಾವ ಖರೇವು ಬಿಡಪಾ ದೊಡ್ಡೋನ ನೋಡಿ ಏನಂತಾನ ಛಿ ತಮ್ಮಾ ಚಿಕ್ಕವನೆ,

ಲುಚ್ಚದವನ ಮಾತ ನುಡಿಬ್ಯಾಡ
ಬಂಗದವನ ಮಾತನು ನುಡಿಬ್ಯಾಡ
ಗೊಡ್ಡು ಕರ್ಮಿಷ್ಟವನಲ್ಲ
ಅವನು ಮಕ್ಕಳಿಲ್ಲದ ಪರದೇಶಿಪ್ಪ

ತಾಯಿ ತಂದೆ ಸತ್ತು ಆಗ ಐದು ವರುಷ ಹುಡುಗರಿದ್ದಾಗೆ ಕೈಲಿಡಕಂಡಿಲ್ಲದನು, ಆಹಾ ಹೋಗವನು ಸುಮ್ಮನೆ ಹೋಗಲಾರದ ಸೇರು ಹಗ್ಗ ಹಾಕಿ ಕಂಬಕ ಬಿಗಿಸಿ ಹೋದ, ಆಹಾ ಕೋಂಟ್ರಾತ ಗುಗ್ಗರಿ ಮಾರಿ ನಮ್ಮನ್ನ ಜೋಪಾನ ಮಾಡಿದ ಇಪ್ಪತ್ತು ವರುಷ ಇಪ್ಪತ್ತು ವರುಷ ಇನ್ನವರು ತಾವಾಗಿ ಡಾವುಂಡಿಂಗಲದೋರು ಜೋಪಾನ ಮಾಡಿದರು, ಆಹಾ ಅವರು ಕೈಯಾಗ ಇವರು ಕೈಯಾಗ ಅವರು ಮನಿಯಾಗ ಇವರು ಮನಿಯಾಗ ದೊಡ್ಡೋರಾದ್ವಿ

ಛಿ ಲುಚ್ಚದೋನು ನೆನಸಬ್ಯಾಡರಿ
ಅವನ ಮಾತಡೋದು ಬ್ಯಾಡ
ಅವನ ಆಸ್ತಿ ನಮಗೆ ಬ್ಯಾಡಪ್ಪ

ಅಂಬೊತ್ತಿಗೆ ಅಣ್ಣಾ ನೀನು ಆಸೆ ಬಿಳಬ್ಯಾಡಂತಿಯಲ್ಲ ಅಂಗಾರೆ ಬ್ಯಾಡ ಏನಣ್ಣಾ ಛಿ ಅವನು ಮೊಖನೆ ನೋಡದು ಬ್ಯಾಡ ಅವನು ಕೇಳಬಾರದು ಸರಿಬಿಡಣ್ಣಾ ಅಂಗಾರೆ ಬ್ಯಾಡ ಕೇಳಪ್ಪಾ ಮಾವನವರೆ ವರ್ಷಾಲಿ ಇಷ್ಟು ಗೊಲ್ಲರ ನಾರಾಣಮ್ಮನದು ತೀರಿಸ್ತೀವಪಾ, ಆಹಾ ಇಲ್ಲಪಾ ನಮ್ಮಗೆದುರಾಗಿ ಬಡ್ಡಿ ಗಂಟೊ ಕಟಟ್ಬೇಕಪ್ಪಾ ಆ ಮುದುಕಿ ಎದೆ ಬಿದ್ದು ಸತ್ತೊದಳೊ ಏನು, ಆಹಾ ಅಂಗಾದರೆ ನಡ್ರಿ ಹೋಗಾನ ಮೊದಲು,