ಬರ್ತಾರ ಬರ್ತಾರ ಅಂತೈತೆ
ಮುಂದಕೆ ತಲೆ ತೋರುಸ್ತೈತೊ
ಅವರೆ ನಾಳೆ ಬಂದಾರೆ
ನಾಳೆ ಬರ್ತಾರೆ ಅಮತೈತೊ

ಸರೆ ಕೊಡೊತನ್ಕ ಬಿಡದಿಲ್ಲ ಅಂದ್ರೆ ಬಿಡದಿಲ್ಲ ಅಮತೈತೊ ಆಗ ಬಲಕ್ಕೆ ಎಡಕ್ಕೆ ತೋರಿಸಿದ ಸರೆಮ್ಮಾ ನಿಮ್ಮ ಗೌಡ ಐದು ವರುಷ ಇರಲಿಕ್ಕೆ ಸಿದ್ದೋಗಿ, ಆಹಾ ಆಗ ಕೈಕಾಲು ಕಟ್ಟಿ ಆಸ್ತಿ ತಂದಕಂಡೋನು ಈಗ ಆವಾಗ ಕೈಲಿ ಇಡಿದಿಲ್ಲೋನು ಈವಾಗ ಮಕ್ಕಳು ಬಂದು ಅಣ್ಣಾನ ಮಕ್ಕಳು ಆಸ್ತಿ ಕೇಳಿದರೆ ಕೊಟ್ತಾರ ತಂದೆ ಆಸ್ತಿ ಕೊಟ್ತಾರ ಕೊಡದಿಲ್ಲ ಆಹಾ,

ಕೊಡಲಿದ್ದರೆ ಏನನ ಕುತ್ತಿಗೆ ಕೊಯ್ಯಿತಾರ
ಅಣ್ಣಾ ಮಕ್ಕಳೇನು ಕೊಲ್ಲುತಾರ
ಕೊಲ್ಲುತಾರ ಕೊಲ್ಲುತಾರ ಅಮತೈತೊ
ಬಲಗಾಲು ಮ್ಯಾಕೆ ಎತ್ತುತೈತೊ
ಮಣ್ಣ ಉಗ್ಗಿ ಬಿಡತೈತೊ

ಬಲಗಾಲು ಮ್ಯಾಲೆ ಎತ್ತುತದ ಮಣ್ಣ ಉಗ್ಗಿ ಬಿಟ್ಟೆತೊ ಬ್ಯಾಗರೋನು ಮ್ಯಾಕ ಮಣ್ಣು ಉಗ್ಗತೈತೆ ಎಡಗಾಲಿಂದ. ಆಹಾ ಈ ಮಣ್ಣು ಬೀಳುತೈತೆ ಅಂತಾ ಮಾತಾ ಆಹಾ ಅಂಗಾರೆ ಪೂಜೆ ಮಾಡ್ತಾರ ಓ ಮಾಡ್ತಾರ ಮಣ್ಣು ಹಾಕ್ತಾರ ಅದಕೇನ ನೀನು ಕೂಳು ನೀರು ಬಿಟ್ಟಿದ್ದು ಹೌದು ನನಮ್ಯಾಲೆ ಕುಂತೋನು ಸತ್ತಮ್ಯಾಲೆ ನಾನಿದ್ದೂ ಯಾತಕೆ ಅವನಿಗಿನ ಮುಂಚೆ ನಾನೆ ಸಾಯಿತೀನಿ ಅಂತಾ ನಾನು ಮಾಡಿದೆ ಅರೆರೆರೆ ಸರೆ ಇದೆ ಮಾತನ್ನ ನಿನ್ನ ಮ್ಯಾಲೆ ಕುಂದ್ರ ಗೌಡಗ ಸಿದ್ದೋಗಿಗೇಳ್ತೀನಿ, ಆಹಾ ಅವರು ಬರುವ ಮುಂಚೇನೆ ಅವರು ಏನನ ಮಾತಾಡಿಕೆಂಡಿದ್ದು ನೀನು ಕೇಳಿರುತ್ತಿ ಭೂಮಿಗೆ ಕಿವಿ ಇಟ್ಟು ಭೂಮ್ಯಾಗಲಿದ್ದ ಏನಮ್ಮಾ ಕುದ್ರಿ ಮತ್ತ ನಾನು ಹೋಗಿಹೇಳ್ತೀನಿ ಅವರು ಬಂದ ಮುಂಚ್ಯಾಗ ಕರೆಕಳಿಸಿ ಭಾಗ ಕೊಟ್ಟರೆ ನಿಮ್ಮ ರಾಜ ಉಳಿತಾನ ಓ ಉಳಿತಾನ ಬಲಗಾಲು ಎತ್ತುತೈತೆ ಸರೆ ಇದೆ ಮಾತು ಹೋಗಿ ಹೇಳ್ತೀನಮ್ಮ ಹೇಳ್ಲಾ ಬೇಡ ಹೇಳು ಅಂತಾ ಇನ್ನವರ ಎಡಗಾಲು ಎತ್ತಿತ್ತು, ಆಹಾ ಸರೆ ಬಿಡು ಅಂತಾ,

ಕುದುರೆ ಮ್ಯಾಲೆ ಕುತ ಕಂಡಾನ
ಬ್ಯಾಗರೋನು ಬಂದು ಬಿಟ್ಟಾನೆ
ಮನಿಗೆ ಬಂದು ಬಿಟ್ಟಾನೋ ಸಯ್
ಕುದ್ರಿ ಕಟ್ಟಿಬಿಟ್ಟಾನೊ ಸಯ್

ನೂರು ರೂಪಾಯಿ ಸಂಬಳ ಬರಬೇಕು ನನಗೆ ಮೂರು ತಿಂಗಳದು ತಿಂಗಳ ನೂರು ರೂಪಾಯಿ ಕೊಡೋನು ಅದ್ಯಾಕ ಹಾಳಾಗಿ ಹೋಗತೈತೆ ನನ ಸಂಬಳ ಬಂದ ಮ್ಯಾಲೆ ಕುದ್ರಿನ್ನ ಹಾಳಾಗಿ ಹೋಗಲಿ ಆತನನ್ನ ಹಾಳಾಗಿ ಹೋಗಲಿ, ಆಹ ನನ ರೊಕ್ಕ ಬರಬೇಕಂತ ಆ ಹೋದರೆ ಹೋಗಲೇಳು ರೊಕ್ಕಂತ ಹೇಳಲಾರದಂಗ ಸುಮ್ಮನೆ ಮನಿಗೆ ಹೋಗಿ ಇದ್ದರೆ ಬೇಸತ್ತು ಅವಾಗ ಬ್ಯಾಗರೋನು, ಆಹಾ ಅವನಿಗೆ ಬಂದಿದ್ದು ಗಾಸಾರ ಬಿಡಿಸಿಕಂಬೋನು, ಆಹಾ ಆಗ ರಾಜ ಇದ್ದ ಮನಿಗೆ ಬಂದ ಶರಣರಿ ಸಿದ್ದೋಗಿ ಮಾರವಾಡಿ ಶೇಠದೋನೇ ಏನಲೆ ಕುದ್ರಿಸಲುವೋನೆ ಅಂದ ಏನಿಲ್ರೀ ಒಂದು ಮಾತು ಐತೆ ಏನ ಮಾತು ಕುಂದರು ಬಾ ಕುಂತ್ಕಂಡ ಏನೇನು ಕಂಪ್ಲೇಂಟು ಹೇಳು ಅಂದ ಇಲ್ಲರ್ರೀ ನಿನ್ನ ನೋಡಿ ನನಗೆ ಹೆದರಿಕೆ ಆತೈತೆ ಅಂದ ಯಾಕ ಹೆದರಿಕೆ ಆತೈತೆ ಹೇಳು ಅಂದ ಏನಿಲ್ಲರ್ರೀ,

ತಾಯಿ ತಂದೆ ಸತ್ತಾಗ ಸಹ್
ಅಣ್ಣನ ಆಸ್ತಿ ತಂದು ಕೊಂಡಲ್ಲೊ ಸಯ್
ಅಣ್ಣ ಮಕ್ಕಳ ಬಿಟ್ಟು ಬಂದೆಲೋ
ಕೈ ಕಾಲು ಕಟ್ಟಿದು ನಾಗಿ
ಆಗ ಅಣ್ಣಾನ ಆಸ್ತಿರಾ ಸಯ್
ಭೂಮಿ ಭೂಮಿ ಗಳಿಸಿದಿ ಸಯ್
ರೊಕ್ಕರೊಕ್ಕ ಗಳಿಸದಿ ಸಯ್

ಬೆಳ್ಳಿ ಬೆಳ್ಳಿ ಕೂಡಿಸಿದೆ ನೀನೆ ಸಿದ್ದೋಗಿ ಕೇಳಲೊ,

…… ಐದು ವರುಷದ ಮಕ್ಕಳು ಬಿಟ್ಟಿದೆ ಸಯ್
ಮಕ್ಕಳಿಲ್ಲದ ಪರದೇಶವು ಸಯ್
ಗೋಡ್ದೋನು ಕರ್ಮಿಷ್ಟದೇನು ಐದಿಯೋ ಸಯ್
ಅವರು ಇವರು ಕೈಯಾಗ ಸಯ್
ಆಗ ಹುಡಗರು ದೊಡ್ಡೋರು ಆಗ್ಯಾರ ಸಯ್
ಓದು ಕಲ್ತೆಕೊಂಡಾರ ಸಯ್
ಈಗ ವಯಸ್ಸು ಹುಡುಗರು ಬಂದಾರ ಸಯ್
ಹರೆಯದೋರು ಹುಡಗರು ಐದಾರ ಸಯ್
ಸಾಲ ತಂದು ನೋಡರಾ ಸಯ್

ಸಾವಿರ ಲಕ್ಷ ಮನಿಗೋಳು ಕಟ್ಯಾರ ಸಾಲ ತಂದು ನೋಡರಾ ಸಾವಿರ ಲಕ್ಷ ಮನಿಗಳು ಕಟ್ಯಾರ ಏಳು ಸುತ್ತ ಅಗಸಿ ಕಟ್ಟಿಕಟ್ಯಾರ ಆಹಾ,

ಇನ್ನ ಇಬ್ಬರ ಮದುವಿ ಆಗಿಲ್ಲ
ನಾಳೆ ನಾಡ್ದ ಬರ್ತಾರ
ವಂದಿನ ಆಸ್ತಿ ಕೇಳಾಕ ಬರ್ತಾರ
ಕೊಟ್ಟರೆ ಒಳ್ಳೇದು ನೀನುರಾ ಸಯ್

ಕೊಡಲಿದ್ದರೆ ಸತ್ತೆ ಓತೀಯಾ ಅವರು ಬರೋದು ಮುಂಚ್ಯಾಗಿ ನೀನ ಎಲ್ಡು ಭಾಗ ತಗಂದು ಅವರಿಗೆ ಒಂದು ಭಾಗನ್ನ ನಿಮ್ಮಣ್ಣನ ಆಸ್ತಿ ತೆಗೆದುಕೊಟ್ಟಾರೆ ನೀನು ಉಳಿತಿಯಾ, ಇಲ್ಲದಿದ್ದರೆ ನೀನು ಸತ್ತು ಹೋತಿಯಾ ಗ್ಯಾರಂಟಿ ಅವರು ಮೂವರು ನಿನ್ನ ಕುತ್ತಿಗಿ ಕೊಯ್ಯಿತಾರ,

ಲೇ…… ಈಗ ತಿಂಗಳ ನೂರು ರೂಪಾಯಿ ಕೊಟ್ಟರೆ ಸಯ್
ನನ್ನ ರೊಕ್ಕ ತಿಂದರೆ ಸಯ್
ಅವರ್ನಮ್ಯಾಲೆ ಮಾಡತೀಯಾ ಸಯ್
ನನ್ನ ಕೆಳಗೆ ಮಾಡತೀಯಾ ಸಯ್
ಅವರೆ ಮ್ಯಾಲೆ ಮಾಡತೀಯಾ ಸಯ್
ನನ್ನ ಕೆಳಗೆ ಮಾಡತೀಯಾ
. ಆಸ್ತಿಕೊಡು ಅಂತಿಯಾ ಸಯ್
ಇನ್ನ ಸಾಯತೀಯಾ ಅಂತಿಯಾ ಸಯ್

ಅವರ ಬೆನ್ನ ಮ್ಯಾಲಿರೋದು ಬಾರ್ಕೋಲು ತಗಂಡಾನ ಎಡಗೈಲೆ ಇನ್ನ ಎಳದಾನ ಬಲಗೈಲೆ ಜಟ್ಟನೆ ಜಡದನ ಚಳ್ಳು ಚಳ್ಳನೆ ಒಡಿತಾನ ಬ್ಯಾಗರೋದೋನ್ನ ಒಡಿತಾನ,

ಚಳ್ಳು ಚಳ್ಳನೆ ಒಡಿದರೆ ಸಯ್
ಸತ್ತೆ ಸತ್ತೆ ನಾನರಾ ಸಯ್
ಇನ್ನ ದೇವ್ರಾ ಸಯ್
ಬಡಿಬ್ಯಾಡ ಕಾಲಿಗೆ ಬೀಳತೀವಿ ಸಯ್
ಐದು ಏಟು ಬಡಿದು ಬಿಟ್ಟಾನ ಸಯ್
ಅವನೆ ಕೈಬಿಡೊ ಹೊತ್ತಿಗೆ ಸಯ್
ಓಡಿ ಓಡಿ ಬಂದನಾ ಸಯ್
ಕೌದಿಮ್ಯಾಲ ಕೌದಿ ಹೊದಿಕಂಡು ಸಯ್

ಬಕ್ಕಬಾರ್ಲು ಮನ್ಯಾಗ ಮನಿಕಂಡನ ಇದೇನು ಕರ್ಮಪ್ಪಾನಂದು ಮುನ್ನೂರು ರೂಪಾಯಿ ಹಾಳಾಗಿ ಹೋದರೆ ಚಿಂತಿಲ್ಲ, ಸುಮ್ಮ ನನ್ನ ಇರಲಿಲ್ಲ ಆ ಕುದ್ರಿ ಹೇಳಿದ ಮಾತು ಅವನಿಗೆ ಹೇಳಾನ ಏನೂ ಕರ್ದುನ್ನ ಕೊಟ್ತಾನ ಅವನ್ನ ಜಲ್ಮ ಉಳಿಸಿಕೆತಾನಂತ ನಾನು ಧರ್ಮ ಅಂತ ಓದರೆ,

ನನ್ನ ಜಲ್ಮ ಮೆತ್ತಗಾಗೀತೊ
ಐದು ಏಟು ಒಡಿಸಿಕೆಂಡ್ನಪ್ಪೊ
ಯಾವನನ್ನ ಸತ್ತು ಹೋಗಲಿ
ಯಾವನನ್ನ ಹಾಳಾಗಿ ಹೋಗಲಿ

ಇಗಲಿದ್ದ ಹೇಳಬಾರದು ಯಾವನನ್ನ ಇನ್ನ ಸಾಯಲಿ ನಾನಾಗಿ ಹೇಳಬಾರದು ಅಂತ ಕೌದಿ ಮ್ಯಾಲೆ ಕೌದಿ ಹೊದ್ದಿಕಂಡು ಬಕ್ಕಬಾರ್ಲು ಮಲಗಿಕಂಡು ಛಳಿ ಜ್ವರ ಬಂದೈತೆ ಪಾಪ ತೊಗಲು ಬಾರ್ಕೋಲು ಕುದುರೆ ಒಡಿಯೋದು ಹೆಗಲ ಮ್ಯಾಲೆ ಅಕ್ಯಂಡು ಹೋಗಿದ್ದು ಅದೆ ಕಸಗಂಡ ಎಡಗೈಲಿ ಇಡಕಂಡ ಡಮಡಮ ಬಲಗೈಲಿ ಬಡಿದ, ಆಹಾ ಆಗ ಏನಮಾಡ್ದ ಬ್ಯಾಗರಾನು ಹೋದಮ್ಯಾಲೆ ಆತ ಬೇಸು ಆಲೋಚನೆ ಮಾಡ್ದ, ಆಹಾ ನಮ್ಮ ಅಣ್ಣಾನ ಮಕ್ಕಳು ಬಂದು ಇವನಿಗೆ ಹೇಳಿ ಹೋಗ್ಯಾರೋ ಏನೋ, ಆಹಾ ನಾಳೆ ನಾಡ್ದ ಬರ್ತೀವಿ ನಮ್ಮ ಕಕ್ಕಗ ಏಳ್ರೀ ಆಸ್ತಿ ಕೊಡ್ರಿ ಅಂತಾ ಇಲ್ಲದಿದ್ದರೆ ಕುತ್ತಿಗೆ ಕೊಯ್ಕಿತಾರಂತರೇಳು ಅಂತ ಇವನಿಗೆ ಹೇಳಿಹೋಗ್ಯಾರೋ ಏನೋ, ಆಹಾ ಇವನು ಭಾಗ ಹಂಚಿಕೊಡು ಇಲ್ಲದಿದ್ದರೆ ನಿನ ಮದುವಿ ಆತೈತೆ ನಿನ ಕುತ್ತಿಗೆ ಕೊಯ್ಯಿತಾರ ಅಂದಾ ಹೌದಲೇ ಅವರ್ನ ಮ್ಯಾಕ ಮಾಡಲೆ ನನ್ನನ್ನ ಕೆಳಗೆ ಮಾಡತಿ ಅಂತಾ ಜಡತಾ ಜಡ್ದೆ ನಾನು, ಆಹಾ ಯಾವ್ದೊ ಇವನ್ನ ಬೇಸು ಕೇಳಿಕೊಳ್ಳಲಿಲ್ಲೆ, ಆಹಾ ಐದೇಟು ಬಡಿದು ಬಿಟ್ಟೆ ಅವನು ಹೋದ, ಆಹಾ ಬೇಸು ಅರ್ಥ ಮಾಡಿಕಾಬೇಕು ನಾನು ಕೇಳಿಕಬೇಕು ಲೇ ನನ್ನ ಕೈಯಾಗಿದ್ದ ಗಿಂಗಾಲಗಿಯಂತ್ರಿ ಬಾರೋ ಮಂತ್ರಿ ಅಂದ ಏನ್ರಿ ಅಂದಾ ಏನಿಲ್ಲ ಇವಾಗನ್ನ ಬಡಿದೆನಲ್ಲಾ ಕುದುರಿ ಸಲುವಾನ್ನ ಬ್ಯಾಗರೋನ್ನ ನಮ್ಮಣ್ಣನ ಮಕ್ಕಳೆ ಬಂದು ಹೇಳಿಹೋಗ್ಯಾರೊ ಇವನಿಗೆ ಇವನೆ ಹೋಗಿ ಕೇಳಿ ಬಂದಾನೋ ಅವನ್ನ ಕರಕಂಡು ಬರೋಗರಪಾ ಸರೆ ಬಿಡು ಅಂತಾ ಬಂದಾ,

ಎಪ್ಪಾ ಬ್ಯಾಗರ ಶರಣಯೊ
ನಿನ ಬಡಿದ ಗೌಡ ಕರೀತಾನ
ಮಾರ್ವಾಡಿ ಶೇಠಿದವನುರಾ
ನಿನಗೆ ಸಾಲ ಕೊಟವನೆ ಕರಿತಾನ
ನಿನಗೆ ಮದುವಿ ಮಾಡಿದವನು

ಕಿಸಿಕ್ ಅನ್ನಲಿಲ್ಲ, ಅವನನ್ನ ಸತ್ತೋಗಲಿ ಕುದುರೆನ್ನ ಹಾಳಾಗಿ ಹೋಗಲಿ ನನ್ನ ಮುನ್ನೂರು ರೂಪಾಯಿ ಹೋದರೆ ಹೋಗಲಿ, ಆಹಾ ಐದು ಏಟು ಬಡಿಸಿಕೊಂಡೀನಿ ಮೈಯೆಲ್ಲಾ ನೋವಾಗೈತೆ, ಆಹಾ ಕಿಸಿಕ್ ಅಂಬಲಿಲ್ಲ ಅವನು ಹಿಂದಕ್ಕೆ ಬಂದ ಏನ್ರೀ ಮಾರ್ವಾಡಿ ಶೇಠದವನೆ ಹೋಗ್ರೀ ಪಾಪ ಉಚ್ಚೆ ಹೊಯ್ಯಿಕೆಂಬಂಗೆ ಬಡುದು ಬಿಟ್ಟ ನೀನು ಐದು ಏಟು ಕುದ್ರಿ ಅಂತಾರು ಓಡಿ ಹೋಗ್ತಾದೆ, ಆಹಾ ಆಗ ಬಡಿದು ಬಿಟ್ಟೆ ಕಂಬಳಿ ಒದಿಕೆಂಡಾನ ಆಗ ಕೌದಿಮ್ಯಾಲೆ ಕೌದಿ ಒದಕೆಂಡಾನ ಕಿಸಕ್ ಅನ್ನುವಲ್ಲ,

ಅವನೆ ಒಂಟಿ ಹೋಗ್ಯಾನ
ಸತ್ತೆ ಹೋಗಿಬಿಟ್ಟಾನ
ನನ್ನ ಮ್ಯಾಲೆಬಾಳ ಜೀವಾರ ಸಯ್
ಅಂತೋನು ಬಡಿದೆ ಬಿಟ್ಟಾರ ಸಯ್
ಈಗ ಬಂದು ತಾಸೋತ್ತು ನನ್ನ ಬಿಟ್ಟಿರೊಲ್ಲರಾ ಸಯ್

ನನ್ನ ಬಿಟ್ಟೆ ಇರೋನಲ್ಲ ರಾ ಆತನ ಹೊಡೆದು ಬಿಟ್ಟೆನಲ್ಲಾ ಅಂಗರೆ ಸತ್ತೋಗ್ಯಾನ, ಸತ್ತ್ಯೋಗ್ಯಾನ ಆಗಲೆ ಹೊಂಟೊಗೈತೋ ಜೀವ ಏನೋ ಒಳ್ಳಾಡಿಕೆಂತಾ ಹೋಗಿ ಜೀವ ಬಿಟ್ಟಾನೋ, ಆಹಾ ಕೌದಿ ಮ್ಯಾಲೆ ಕೌದಿ ಒದ್ದೂಕಂಡು ಸರಿ ಬಿಡಪಾ ನಾನೆ ಹೋತಿನಿ ಬಡಿದೋನು ನನ ತಲ್ಲಿ ಬಂದು ಬಡಿಸಿಕೆಂಡಾನ ಅವನ ತಲ್ಲಿ ಹೋಗಿ ನಾನು ಎಬ್ಬಿಸ್ತೀನಿ ಅಂತಾ,

ಆಹಾ ಆಗ ಸಿದ್ದೋಗಿ ಮಾರವಾಡಿಮ್ಮ
ಬ್ಯಾಗರೋನು ಮನಿಗೆ ಬಂದಾನ
ಅಪ್ಪಾಬ್ಯಾಗರವನ ಐದೀಯೋ
ಕಿಸಿಕ್ ಅಂಬದಿಲ್ಲ ಅವನಮ್ಮ
ನನ್ನ ತಲ್ಲಿಗೆ ಬಂದೀಯಾ

ನಿನ್ನ ತಲ್ಲಿಗೆ ಬಂದು ನಾನು ಬಡಿಸಿ ಕೆಂಡೀನಿ ಇವಾಗ ನನ್ನ ಮನೆಗೆ ಬಂದೀಯಾ

ಬಾರಲೇ ನನ್ನ ಮಗನೆ
ಇನ್ನ
ಮನ್ಯಾಕ ಬಂದಾನ

ಕೌದಿ ಮ್ಯಾಲೆ ಕೌದಿ ಒದಿಕಂಡಾನ ಬಕ್ಕಬಾರ್ಲ ಮಕ್ಕಂಡಾನ ಬೇಸು ಕೇಳ್ತಾನ ಎಪ್ಪಾ ಬ್ಯಾಗರಿ ಏನು ತಿಳಿಯಲಾರದೆ ಬಡಿದೀನೊ ನೀನು ತಮ್ಮ ಇದ್ದಂಗ,

ಹೇಳ್ದ ಬದುಕು ನೀನು ಮಾಡವನು
ಹೋಗೊ ಜಲ್ಮ ನೀನು ಉಳಿಸವನು
ಸಾಯೋ ಜಲ್ಮ ನೀನು ತಪ್ಪಿಸವನು
ಕೇಳಿದ್ದು ನಾನೇ ಕೊಡತೀನು
ಎಪ್ಪಾ ಜೀವ ಕಳಿಯಬೇಡಪ್ಪಾ
ನನ್ನ ಜಲ್ಮ ಕಳಿಬ್ಯಾಡಪ್ಪಾ
ಎಪ್ಪಾ ಕಾಲಿಗೆ ಬಿದ್ದೀನಿ ಎದ್ದೇಳೊ
ಶರಣೆ ಮಾಡ್ತೀನಿ ಎದ್ದೇಳು

ಏನೇನು ತಮ್ಮ ಅಣ್ಣಾನಮಕ್ಕಳು ಬಂದು ನಿನಗೆ ಹೇಳಿಹೋದರಾ ಇಲ್ಲದ್ದರೆ ನೀನೆ ಹೋಗಿದ್ದೆ ನಮ್ಮಣ್ಣನ ಮಕ್ಕಳ ತಲ್ಲಿಗೆ ಅಂದ, ಆಹಾ ನಾನ ಹೋಗಿಲ್ಲ ನಿಮ್ಮ ಅಣ್ಣ ಮಕ್ಕಳ ಮೊಖ ನೋಡಿಲ್ಲ, ಆಹಾ ಅವರು ಬಂದು ನನ ಮೊಖ ನೋಡಿಲ್ಲ ಆಹಾ ಅವರು ನನಗೆ ಹೇಳಿಲ್ಲ ಮತ್ತೆ ಯಾರು ಹೇಳಿದರು ಈ ಮಾತಾ ನಿನಗೆ ಎಂಗ ಅರ್ಥ ಆಯಿತು, ಹೋಗಯ್ಯ ಹೋಗು ಕುದ್ರಿ ತಲೆ ಅಂಬೋದೊ ಕಿವಿ ಅಂಬೋದು ಭೂದೇವಿತೆಗೆಟ್ಟು ಮಕ್ಕಂಡೈತೆ ಅಂತೆ, ಆಹಾ ಅಲ್ಲಿ ಮಾತಾಡಿಕೆಂಡಿದ್ದು ಅವರು ಅಣ್ಣಾ ತಮ್ಮರು ಭೂಮ್ಯಾಗಲಿದ್ದ ಗಾಳ್ಯಾಕ ಬಂದು ಭೂಮ್ಯಾಗಲಿದ್ದ ಕಿವ್ಯಾಗ ಹೊಕ್ಕಂಡೈತೆ ಅಂತೆ, ಆಹಾ ಆ ಕುದುರೆ ಕೇಳೈತೆ ನಿನಮ್ಯಾಲೆ ಕುಂದರೂ ಕುದರೆ, ಆಹಾ ನನಮ್ಯಾಲೆ ಕುಂತೋನು ಸಾಯಿತಾನಂತ ಆತಗನ ಮುಂಚ್ಯಾಗ ನಾನೇ ಜೀವ ಬಿಡ್ತೀನಂತಾ ಕೂಳು ನೀರು ಬಿಟೈತೆ,

ಮೇವು ಮೇಯಿ ಒಲ್ಲರ ಸಯ್
ನೀರು ಕುಡಿಯೆ ಒಲ್ಲದು ಸಯ್
ಈಗ ಎಡಕಣ್ಣಾಗರಾ ಸಯ್
ಎಡಕೆ ನೀರೆ ಹೋತಾವ ಸಯ್
ಬಲಗಣ್ಣಾಗ ನೋಡರಾ ಸಯ್

ಬಲಕೆ ನೀರೆ ಇಳಿತಾವ ಹಳ್ಳಕ ಹೋಡಿಸಿಬಿಟ್ಟೆ ಕುದ್ರಿನಾ ಕುದ್ರಿಮ್ಯಾಲೆ ಕುಂತು ಏನನ ಕಾಲು ಕೈ ಇಡ ಕಂಡಾವೇನಂತಾ ಅಲ್ಲಿ ಮೈತೊಳೆದೆ ಎಷ್ಟು ಬೇಡಿಕೊಂಡರೆ ಆಗ ನೀರು ಕುಡಿಲಿಲ್ಲ. ನಾನೆ ಅರ್ಥ ಮಾಡಿಕ್ಯಾಬೇಕಂತ ಮೂರು ಬೋಗಸಿ ನೀರು ತೆಗೆದು ಮೊಖ ತೊಳೆದು ಬೇಡಿಕಂಡೆ, ಆಹಾ ಆಗ ನಿನ್ನ ಕುದ್ರಿ ಹೇಳಿದ ಮಾತಾ ಹೇಳಲೇನೆಮ್ಮ ಅಂದ್ರೆ ಹೇಳು ಅಂದೆ ಆಹಾ ಪಾಪ ಅಂತ ಹೇಳಾಕ ಬಂದ್ರೆ ಐದೇಟು ಹೊದ್ದು ಬಿಟ್ಟೆ ನೀನು, ಆಹಾ ನಿನ್ನ ತಲ್ಲಿಗೆ ಬಂದು ನಾನು ಹೊದಿಸಿಕೆಂಡೀನಿ ನಿನ್ನ ತಲ್ಲಿಗೆ ಬಂದು ಶರಣು ಮಾಡಿದ್ದಕ್ಕೆ ಎದ್ದೀನಿ, ಆಹಾ ಇಲ್ಲಿಗೆ ಸಾಲತೀರಿತು, ಆಹಾ ಅಂಬೊತ್ತಿಗೆ ಸರ್ರೆಪಾ ಮತ್ತೆ ನಿನಗೆ ಹೇಳಿದ ಮಾತು ನನಗೆ ಹೇಳ್ತತ ಹೇಳ್ತೈತೊ ಹಾಳಾಗಿ ಹೋತಿಯೋ ನನಗೇನು ಗೊತ್ತು ಆಹಾ ನಾನು ಹೇಳಿನಿ ಅಂಗಲ್ಲ ನೀನ ಬಾ ಏನಾನು ಬರೊದಿಲ್ಲ, ಆಹಾ ಹೇಳೊ ಮಾತಾ ಹೇಳಿನಿ ಕುದ್ರಿ ಹೇಳಿದ ಮಾತಾ ನಾನು ಹೇಳಿನಪ್ಪಾ ಕುದ್ರಿ ನನ್ನ ಬೇಡಿರೊ ನೀನು ಕುದ್ರಿನ್ನ ಇಬ್ಬರೂ ಆಳಾಗಿ ಹೋಗರಿ ಅಂಗಲ್ಲ ತಮ್ಮಾ ನೀನು ಬಾ ನೀನು ಕುದ್ರಿಸಲಿವಿದೋನು ಮೂವತ್ತಾರು ಗಂಟೆ ನಿನಮ್ಯಾಲೆ ಜೀವ ನನಗೆ ಐತಾ ಆ ಕುದ್ರಿ, ಆಹಾ ಸುಮ್ಮನೆ ಎಲ್ಲೆನ್ನ ಹೋದರೆ ಕುದ್ರಿ ಮ್ಯಾಲೆ ಕುಂತಕಮತೀನಿ ಹೋತೀನಿ ಮತ್ತೆ ಬರ್ತೀನಿ, ಆಹಾ ಈಗ ನಿನಗೆ ಇದ್ದ ಜೀವ ನನಮ್ಯಾಲೆ ಇಲ್ಲಪಾ, ಆಹಾ ಬಾರಪಾ ಇಬ್ಬರೂ ಹೋಗಾನ ಬಾ,

ಸಾಯನಾ ಸಾಯಿ ಹೋಗಾನ
ನಡಿಯೋ
ಸಿದ್ದೋಗಿ ಹೋಗೋನಾ

ಬ್ಯಾಗರೋನು ಕರ್ಕಂಡು ಸಿದ್ದೋಗಿ ಬಂದಾ, ಆಹಾ ಆಗ ಕುದ್ರಿ ಮೊಖ ತೊಳೆದ, ಆಹಾ ಕುದ್ರಿಪಾದ ತೊಳೆದಾ ಎಲ್ಡುಕ್ಕೆ ಜೋಡಿಸಿಕೆಂಡಾ ಜೋಡಿಸಿಕೆಂಡು ನಿಂತು ಅಮ್ಮ ಕುದ್ರಿ ಶರಣಮ್ಮ,

ಅಣ್ಣಾ ಮಕ್ಕಳೆ ವೈದಾರ
ಐದು ವರುಷ ಇದ್ದು ವಾಗಮ್ಮ
ಆಸ್ತಿ ನಾನು ತಂದೀನಿ
ಕೈಕಾಲು ಮುರಿಯೆ ಹೋದವು
ಅವರು ಜೀವನ ಕುತ್ತಿಗೆ ಕೊಯಿದಿದ್ದರೆ
ಇಷ್ಟೊಂದು ಕಷ್ಟ ಬರ್ತಿದ್ದಿಲ್ಲ

ಆಗಲೇ ಐದು ವರುಷ ಹುಡುಗರು ಇದ್ದಾಗೆ ಮೂವರಿಗೆ ಕೊಲ್ಲ ಬಂದಿದ್ದರೆ ನನ ಜಲ್ಮಗೇನು ಸೂರಿರಿತಿದ್ದಲ್ಲಾ ನನಗೆ ಕಷ್ಟನೇ ಬರ್ತಿದ್ದಿಲ್ಲ, ಆಹಾ ಇವಾಗ ಅಲ್ಲಿ ಬಿದ್ದು ಇಲ್ಲಿ ಬಿದ್ದು ದೊಡ್ಡೋರು ಆಗಿ ಬಿಟ್ಟರಂತೆ ಒಬ್ಬನು ಮದ್ವಿ, ಮಾಡಿಕೆಂಡಾನಂತೆ ಎಮ್ಮ ಕುದ್ರಿ ಈಗ ಕುಲಕ್ಕೆ ಸಾವಿರ ಲಕ್ಷ ಮನಿಗಳು ಕಟ್ಯಾರಂತೆ ಏಳು ಸುತ್ತ ಅಗಸಿ ಕಟ್ಯಾರಂತೆ, ಏಳುಸುತ್ತ ಅಗಸಿ ಕಟ್ಯಾನಂತೆ ಈಗ ಸಾಲ ತಂದಾರಂತೆ,

ನಾಳೆ ನಾಡ್ದ ಬರ್ತಾರ
ಭಾಗ ಕೇಳಾಕ ಬರ್ತಾರ
ಬರ್ತಾರ ಬರ್ತಾ ಅಂತತೈತೊ
ಕೇಳೆ ಮುಂಟುಸುದೈತೊ

ಸಾಲ ಕೊಡತನಕ ಅವರು ಬಾಗ ಕೊಡೊ ತನಕ ಬಿಡೋದಿಲ್ಲಲ್ಲ ಬಿಡೋದಿಲ್ಲ ಅಂತಾ ಬಲಗಾಲು ಎತೈತೆ ಸರ್ರೆಮ್ಮಾ,

ಜೀವ ಹೋದರೆ ಕೋಡೋದಿಲ್ಲಮ
ಅವರಿಗೆ ನಯಾಪೈಸೆ ಕೊಡೋದಿಲ್ಲಮ್ಮಾ

ನಾನು ಕೊಡುವನೆ ಅಲ್ಲದೆ ಬೆನ್ನಿಂದ ಅಣ್ಣಾಗ ಹುಟ್ಟೀನಿ ಎಂಜಾಲಾನ ನಾನು ಕುಡಿದೋನು ಅಣ್ಣಾನ ಆಸ್ತಿ ನಾನು ತಿಂತೀನಿ ಅಣ್ಣಾನ ಮಕ್ಕಳು ಬೇಕಿಲ್ಲ ಅಣ್ಣಾನ ಆಸ್ತಿ ಬೇಕು ನನಗೆ, ಸರೆ ಆಗ ಏನನ ಬಾಕಿ ಕೊಡದಿದ್ದರೆ ನನಗೆ ಕುತ್ತಿಗೆ ಕೊಯಿತಾರೆ ನಮ್ಮ ಅಣ್ಣನ ಮಕ್ಕಳು ಜೀವ ತೆಗಿತಾರ ಅಂತಾ ಆಗ ಬಂದೆ ನೋಡರಾ ಹೊಟ್ಯಾಗ ತಲೆ ಇಟೈತೋ ಎಡಗಾಲಲಿ ಮಣ್ಣೆ ಉಗೈತೋ ಹೋಟ್ಯಾಗ ತಲೆ ಇಟ್ಯಾತೋ,

ಹೋತಿಯೋ ನೀನು ಹೋತಿಯೋ
ಮಣ್ಣಾ ನಿನಗೆ ಬೀಳೋದು

ಕೇಳೋ ಸಿದ್ದೋಗಿ ನೀನು ಏ ಆತೈತೆ ಅಂತ ನನಮದ್ವೆ ಎಂಗ ಮಾಡಬೇಕಲೆ, ಆಹಾ ಅಣ್ಣಾನ ಮಕ್ಕಳು ನಾಳೆನಾಡ್ದ ಬರ್ತಾರಂತೆ ಅವರು ಮೂವರು ಅವರು ಹರೇದವರು ನಾನು ಮುದಿಯವನು ಮತ್ತೆ ನಾನು ಎಂಗ ಮಾಡಬೇಕು ಎಂಗ ಮಾಡತಿವೈಕೊ, ಆಹಾ ನಾವೇನು ಮಾಡಾನು, ಆಹಾ ಆತಾನ ಅವರ ಆಸ್ತಿ ಅವರಿಗೆ ಕೊಡ ಆದರೆ ನಿನ್ಮ್ಯಾಕ ನಮ್ಮ ಕಕ್ಕ ಅಂತಾ ಎಷ್ಟೋ ಜೀವ ಇರ್ತೈತೆ ನಿನಗೆ ಮಕ್ಕಳು ಆಗಿಲ್ಲಲ್ಲ ಅವರು ಮಕ್ಕಳು ಆದ್ರೇನು ನಿನಮಕ್ಕಳು ಆದ್ರೇನು ಆಹಾ,

ಜೀವನ್ನ ಕಳ್ವೇನು ನೋಡರಾ
ನಾನು ನಯಾಪೈಸಾ ಕೊಡದಿಲ್ಲರಾ
ಜೀವನ ಕಳ್ವೇ ನೋಡರಾ
ಒಂದು ನಯಾ ಪೈಸ ಕೊಡದಿಲ್ಲರಾ

ಮತ್ತೆ ನಾವೇನು ಮಾಡನಪಾ ಅಂಗಲ್ಲರೆ ಬ್ಯಾಗರ ಸುಂಕ ಅವರು ಬರದ ಮುಬ್ಯಾಗೆ ಇವತ್ತು ನಾಯ್ಕರಿಗೆ ಹೋಗಿ ಈಗ ಸಾವ್ರ ರೂಪಾಯಿ ಸಂಚ್ಕಾರ ಕೊಟ್ಟು ಸೇರು ಬೆಳ್ಳಿ ಕೊಟ್ಟು ಅವರು ಕಳಿಸ್ತೀನಿ ಯಾರು ನಮ್ಮಣ್ಣನ ಊರಿಗೆ, ಆಹಾ ಅಣ್ಣನ ಮಕ್ಕಳು ತಲ್ಲೀಗೆ ಕರಣೆ ಕಲ್ಲಿಗೆ ಕಳಿಸ್ತೀನಿ ಎಪ್ಪಾ ಐದು ದಿವಸ ಕಾಯಿರಿ ಒಬ್ಬನ ಸಿಕ್ಕರೆ ಆಗ ಒಂದು ತಲೆ ಕಡಕಂಡು ಬರ್ರೀ, ಆಹಾ ಇಬ್ಬರು ಸಿಕ್ಕರೆ ಎಲ್ಡು ತಲೆ ಕಡಕಂಡು ಬರ್ರೀ ಮೂವರು ಸಿಕ್ಕರೆ ಮೂರು ತಲೆ ಕಡಕಮಬರ್ರೀ, ಆಹಾ ಒಂದು ಎಕರೆ ಭೂಮಿ ಕೊಟ್ಟೇನಾ ನಿಮ್ಮಗೆ ನಾನು ಕೊಟ್ಟೇನಾ ಕಡಕೆಂಡು ಬಂದಮ್ಯಾಲೆ,

ಕಳ್ಳಿರಿಗಿಟ್ಟು ನಾನು ಕಡಿಸೇನಾ
ಅಣ್ಣಾನ ಮಕ್ಕಳಾ ಕಡಿಸಿ ಬಿಡ್ತೀನಿ
ಅಣ್ಣಾ ಮಕ್ಕಳು ಉಳಿಸಿಕೆಳ್ಳರಾ
ಅವರು ಕೊಡು ಭಾಗ ನೋಡರಾ ಸಯ್
ಆಗ ಒಂದೆ ನೋಡರಾ
ಏನಂತಾಗಿ ನುಡಿತಾನ
ಇನ ಸಿದ್ದೋಗಿ ತಾಗ್ಯಾರಾ
ಕಳ್ಳರಿಗಿಟ್ಟು ನಾನು ಕಡಿಸೇನಾ

ಅಂತಾ ಕರ್ಮಿಷ್ಟದೋನು ಏನ್ಮಾಡಿಬಿಟ್ಟಾ ಏ ಬ್ಯಾಗರ ಸುಂಕ ಕುದ್ರಿ ಇನ್ನವರ ತಾನಾಗಿ ನಾನು ಶರಣು ಮಾಡಿಕೆಂತೀನಿ ಅಂದಾ ನೋಡಪಾ ಕುದ್ರಿ ಅನ್ನ ಸತ್ತೊಗಲಿ ನೀ ನನ್ನ ಸತ್ತೋಗು ನಾನೇನು ಮಾಡ್ಲಪ್ಪಾ ಹೇಳು ಅಂದರೆ ಹೇಳಿನಿ, ಆಹಾ ಈಗನ್ನ ಹೇಳಿತಾ ಕುದ್ರಿ ಹೇಳಲಿ ಬಿಡಾಪಾ ಈ ಕುದ್ರಿ ನನ್ನ ಜಲ್ಮ ಉಳಿಸಿದಂಗ ಇಲ್ಲದಿದ್ದರೆ ನಾಳೆ ನಾಡ್ದ ಬರ್ತಾರಂತೆ ಬಂದರೆ ಆಸ್ತಿ ತಗಂಡೋಗಾಕ ನನ ಜಲ್ಮ ಕಳೀತಾರಂತೆ ಕೊಡಲಿದ್ದರೆ, ಆಹಾ ನಾನು ಜೀವನ್ನ ಬಿಟ್ಟೇನು ಅವರಿಗೆ ಪೈಸಾ ಕೊಡೊಲ್ಲ, ಆಹಾ ಮತ್ತೆ ನಿನ್ನ ಇಷ್ಟಪಾ ಅಂದರೆ ಎಮ್ಮಾ ಕುದ್ರಿ ಈಗ ಮೇವು ಮೆಯ್ಯಿ ಈಗ ನೀರು ಕುಡಿ ಅಣ್ಣಾನ ಮಕ್ಕಳು ಮೂವರು ಸಿಕ್ರೆ ಮೂರು ತಲೆ ತಂದು ನಿನಪಾದಕ ಇಡ್ತೀನಿ, ಆಹಾ ಇಬ್ಬರು ಸಿಕ್ಕರೆ ಏಲ್ಡು ತಲೆತರ್ತೀನಿ ಒಬ್ಬನು ಸಿಕ್ಕರೆ ಒಂದು ತಲೆ ತರ್ತೀನಿ ಅಣ್ಣನ ಮಕ್ಕಳ ಕಡಿಸ್ತೀ ನಮ್ಮ ನಿನಪಾದಕೆ ಶರಣು ಕುದ್ರಿ ನಿನಪಾದಕೆ ಶರಣು ಊಟ ಮಾಡ ಅಂದ ಊಟ ಮಾಡದಿಲ್ಲ, ಆಹಾ ಅಂಗಾರೆ ಅಣ್ಣಾನ ಮಕ್ಕಳು ಸಿಗದಿಲ್ವ ಸಿಗದಿಲ್ಲಾ ಅಂತೈತೊ ಸಾಯದಿಲ್ಲ ಅಂತೈತೊ ಎಂಗ ಮಾಡಬೇಕಪಾ ಎಂಗನ್ನ ಆಗಲಮ್ಮಾ ಕಳ್ಳರಿಗೆ ಲಂಚಕೊಟ್ಟು ಕಳಿಸಿ ಎಂಗನ್ನ ಅವರು ಐದು ದಿವಸ ಕಾದು ಕಡಿಕೆಂಬರೊ ಅಂಗೆ ನಾನು ಮಾಡ್ತೀನಿ, ಆಹಾ ಕಡಿಸ್ತೀನಮ್ಮ ಅಂಬೊತ್ತಿಗೆ ಮೇವು ಮೆಯ್ಸಿ ಏಲ್ಡು ನೀರು ಕುಡಿವಲ್ತು ಈ ಬ್ಯಾಗರೋನು ನೋಡಿರಾ ಏ ಅಂಗ ಮಾಡಿದ್ರೆ ಅದ್ರನಮ್ಮಿಕೆ ಇಲ್ಲ, ಆ ಹುಡುಗರು ಓದಿಕೆಂಡೋರು ತಿಳಿವಳೀಕೆ ಇದ್ದೋರು ಬಂದು ಹೇಳಿದರೆ ನಾಕು ಬಡಿಯೋರು, ಆಹಾ ಸ್ವಸಂತ್ರ ಸಾವಿರ ಲಕ್ಷ ಮನಿಗಳು ಏಳು ಸುತ್ತ ಅಗಸಿ ಕಟ್ಯಾಕ ಸಾಧ್ಯವಿಲ್ಲ ಅವರು ಎಷ್ಟು ಪರಾಕ್ರಮ ಹುಡುಗರು ಅಂದಕಂಡಿ ನೀನೇನು ಇಲ್ಲ ಸುಮ್ಮನೆ ಮುದಿಯವನಾಗಿಯೆ ಯಾ ಸಾವಿರ ಲಕ್ಷ ಮನಿಗಳು ಕಟ್ಟೀಯಿ,

ತಂದೆ ಆಸ್ತಿ ತಿಂಬೊನಲ್ಲಾ

ಮತ್ತೆ ಎಂಗ ಮಾಡಬೇಕಲೆ ಬ್ಯಾಗರೆ ಹೇಳಲೆ ಏನಿಲ್ಲಾ ಹರಿಶಿಣ ಕುಂಕುಮ ಬಂಢಾರ ಇಕ್ಕು ಕಡಿಸ್ತೀನಿ ಅಂತಾ ಭಾಷೆ ಕೊಡು, ಆಹಾ ಅಂಗಾದ್ರೆ ಅದಕೆ ಅನುಮಾನ ಬೇಸು ಇನ್ನ ತರ ನಮ್ಮರೆ ಆತೈತೆ ಇಲ್ಲದಿದ್ದರೆ ನಮ್ಮಿಕೆ ಆಗಲ್ಲ ಅವರೇನು ಬಂದಿಲ್ಲ ಬರಕಿಲ್ಲ ಮೂವರು ಅಣ್ಣಾ ತಮ್ಮರು ಮಾತಾಡಿಕೆಂಡಾರ ಏನಂತಾ ಮಾತಾಡಿಕೆಂಡಾರ ಅಣ್ಣಾ ಈಗ ಅಡವಿ ಕಾಯೋ ಗೊಲ್ಲರು ನಾರಾಣಾಮ್ಮರಲ್ಲಿ ಈಗ ರೊಕ್ಕ ತಂದು ಸಾವ್ರ ಲಕ್ಷ ಮನಿಗಳು ಕಟ್ಟಿವಿ ಇಗೋ ಸಾಲ ಬೇರಸೋದು, ಆಹಾ ಇದೋ ನಮ್ಮ ತಂದೆ ಆಸ್ತಿ ಹೊಯ್ದನಲ್ಲ ನಮ್ಮ ಕಕ್ಕ ತಂದೆ ಆಸ್ತಿ ತಂದು ನಮ್ಮ ಸಾಲ ತೀರಿಸೋನ ಅಂದರು ಯಾರು ಇಬ್ಬರು ತಮ್ಮನೋರು ಅಣ್ಣಾ ಏನಂದಾ ತೂ ಆ ಲುಚ್ಚಾದೋನು ಮಾತು ನುಡಿಬಾರ್ದು, ಆಹಾ ನಾವು ಐದು ವರುಷ ಇದ್ದಾಗ ತಾಯಿ ತಂದೆ ಸತ್ತಾಗೆ ಕೈಲಿ ಇಡಿಲಿಲ್ಲಾ ಇವಾಗ ಹೋಗಿ ಆಸ್ತಿ ಕೇಳಿದರೆ ಕೊಡ್ತಾನ ಕೊಡದಿಲ್ಲ ಲುಚ್ಚಾದೋನು ಅವನ್ನ ಕೇಳೊ ಬದಲು ಯಾರನನ್ನ ಸೌದ ಇಡಕಂಡು ಸಾಲ ತಂದು ಸಾಲ ತೀರಿಸಿ ಕೆಂಬಾನಪಾ, ಆಹಾ ಬ್ಯಾಡಪಾ ಅಂತಾ ಅಷ್ಟೆ ಆಗಲಿ ಬಿಡಣ್ಣಾ ಅಂದಾ ಅಷ್ಟೆ ನೋಡು ಮಾತಾಡಿಕೆಂಡಿದ್ದು ನೋಡು ಅಂದಾ ಅವರು ಬರಲಿಲ್ಲ ಇವರು ಕುತ್ತಿಗೆ ಕೊಯ್ಯಿಲಿಲ್ಲ, ಆಹಾ ಈ ಮಾತಿಗೆಲ್ಲಾ ಆಗಲೇ ಹೇಳೈತೆಪಾ, ಆಹಾ ಆಗ ಏನು ಮಾಡ್ದ ಕುದ್ರಿ ಹಾಕ್ಯಂಡು ಹೋತಿನಮ್ಮ ಅಂತ ಭಾಷ ಕೊಟ್ಟ ಆಗ ಸೇರು ಕಡಗ ಆಕ್ಯಂಡ ಈಗ ಎಲ್ಡು ಸಾವ್ರ ಬೊಕ್ಕಣಾದಾಗ ಇಟ್ಕಂಡ,

ಕುದ್ರಿ ಮ್ಯಾಲೆ ಕುಂತಾನ ಸಯ್
ದಡೇಗಾವದಿಂದ ನೋಡರಾ ಸಯ್
ದಡೇಗಾವಗ ಬಂದಾನ

ಬಂದವೊತ್ತಿಗೆ ಕಳ್ಳರ ದತ್ತು ಮಕ್ಕಳು ಗಂಟೆಗ ಮುಂಚಗೆ ಮಂತ್ರಾಲ ಮಹದೇವ ನೋಡಿದರು ಏ ರಾಜ ಬಂದಾನ ಯಾರು ಮಾರ್ವಾಡಿ ಶೇಠದವನು,

ಬರ್ರಿ ಬರ್ರಿ ನೀವುನು
ಏದಕಾಗಿ ನೀನು ಬಂದೀಯಾ
ಇನ್ನ ಕೇಳು ಶರಣಯ್ಯ

ಏನಿಲ್ಲಪ್ಪಾ ಎದತಾಗಿ ಬಂದೀಯಂತೀಯಾ ನಿಮಕೋಸ್ಕಾರ ನಾನು ಬಂದೀನಿ ನನಗೆ ಕಷ್ಟ ಬಂದೈತೆ ನೀವು ಕಾಪಾಡು ಬೇಕಪಾ ನನ ಜೀವ ಆಹಾ,

ಯಾವನು ನಿನಮ್ಯಾಲೆ ಇರೋದು
ಯಾವನು ವಿದೇರ ಪಾರ್ಟಿ
ಅವನು ಹೆಸ್ರು ಹೇಳಯ್ಯ
ಬಾಯಾಗ ಮಾತಾ ಬಾಮಾಗ ಇದ್ದರೆ

ತಲೆ ಕಡಕಂಡು ಬರ್ತೀವಿ ತಲೆ ಕಡ್ದು ತರ್ತೀವಿ,

ಕನ್ನ ಮನೆತೋರಿಸು ಸಯ್
ಕನ್ನಹೊಡೆದ ಬರ್ತೀನಿ ಸಯ್
ಬಣ್ಣದ ಮನೆ ತೋರಿಸು ಸಯ್

ಬಾಕುಲು ಮರಕಂಡು ಬರ್ತೀವಿ ಎಂತ ಏನು ಒಸಿ ತೋರಿಸಿರಿ ಯಾವನು ನಿನಮ್ಯಾಲೆ ಪಾರ್ಟಿ ಅಂಬೊತ್ತಿಗೆ ಆಗ ಏನಂತಾ ಹೇಳ್ತಾನ ಅಷ್ಟು ಪರಾಕ್ರಮದೋರು ನಾಯ್ಕರು ಮಂತ್ರಗಳು ತಂತ್ರಗಳು ಕಲ್ತವರು ಬೇಕಷ್ಟುಮಂತ್ರ ಬರೆದು ಜೀವ ತಗಿಯವರು, ಆಹಾ ಈ ಕರಣೆ ಕಲ್ಲೂ ಅಂಬೊತ್ತಿಗೆ ಗಡಗಡ ನಡುಗುತೈತೆ ಒಳಗ ಜೀವಾ ಆಹಾ,