ಹೆಂಡ್ತಿ ತಲ್ಲೀಗೆ ಬಂದಾನೆ
ಹೆಂಡ್ತಿ ಜೀಕ ಬಂದಾನೆ
ಆಗ ಇನ್ನ ನೋಡರಾ ಸಯ್
ಮೊಸರ ಗಡಿಗೆವೈತೆರಾ ಸಯ್
ನಿರಿಗೆ ಮ್ಯಾಲೆ ಇಟ್ಟಿದ್ದರಾ ಸಯ್
ದೊಪ್ಪನಂತಾ ಬಿದೈತೊ ಸಯ್
ಗಡಿಗೆ ಒಡಿದು ಹೋಗೈತೊ ಸಯ್
ಕನಸಿನಾಗ ಏನಂತಾ ಹೇಳ್ತಾನ ಸಯ್
ಎಷ್ಟೆ ನಿದ್ದೆ ಮಾಡತೀಯಾ ಸಯ್
ಗಂಡನ ಮ್ಯಾಲೆ ನೆಪ್ಪು ಇಲ್ಲೇನೆ ಸಯ್

ಎಷ್ಟು ನಿದ್ದೆ ಮಾಡಿತಿ ನೀನಾಲೆ ಗಂಡನ ಮ್ಯಾಲೆ ನೊಡರಾ ಎಷ್ಟು ನಿದ್ದೆ ಮಾಡತೀಯಾ ಆಹಾ,

ಕಳ್ಳರು ಕೈಯಾಗ ನಾನು ಸತ್ತೀನಿ ಸಯ್
ತಲೆ ಹೋಗಿ ಬಿಟೈತೊ ಸಯ್
ಜಲ್ದಿ ಎದ್ದೇಳು ನೀನಾರ ಸಯ್

ತಮ್ಮನೋರು ಕರೆ ಕಳಿಸಾರಾ ಜಲ್ದಿ ಇನ್ನ ಎದ್ದೇಳಾ ತಮ್ಮನೋರು ನೀನು ಎಬ್ಬಿಸಲಾ

ಈಗ ಎಡಕಲಿದ್ದ ಬಲಕ ಎದ್ದಾಳೆ
ಎಡಕ ನೋಡಿದರೆ ಗಂಡ ಇಲ್ಲಮ್ಮ
ಬಲಕ ನೋಡಿದರೆ ಮೊಗ ವೈದಾನೆ

ನೋಡಿಬಿಟ್ಟಳು ಹೊತ್ತು ಮಳುಗಿ ಮೂರು ಗಂಟ್ಯಾಗ ಹೋದೋನು, ಆಹಾ ಈಗ ಆರು ಗಂಟೆ ಆಗೈತೆ ಇನ್ನ ಬಂದಿಲ್ಲ ಆಗ ಕುಲಕ್ಕೆ ಎಂಗ ಮಾಡಬೇಕು ಜೀವಕಾ ಈಗ ನಮ್ಮ ಮೈದನೋರನ ಕರದರೆ ಎವ್ವಾನ ಉಡಿಕ್ಯಾಡ್ತಾರಂತಾ,

ಕೆವ್ವನೆ ಕ್ಯಾಕೆ ಹೊಡಿದಾಳೆ
ಇನ್ನ ಅಳಿಯೋನೋರು ಬಂದಾರ
ಮೈದನೋರು ತಾವು ಬಂದಾರ

ಏನಮ್ಮ ಅತ್ತಿಗೆ ಎಪ್ಪಾ ನಿಮ್ಮಣ್ಣಾ ಹೋದೋನು ಚಂಬ ತಗಂಡು ಬಂದಿಲ್ಲ ಬೆಳಕರೆಯೊ ಹೊತ್ತು ಆಗೈತೆ ಇನ್ನ ಬಂದಿಲ್ಲ ಏನು ಮಾಡಾನ ಏ ನಮ್ಮಣ್ಣಾ ಎಲ್ಯಾನ ಇರ್ತಾನ ಏನು ಕುದ್ರಿ ಮನ್ಯಾಗೊ ಎತ್ತುಗಳ ಮನ್ಯಾಗೊ ಆಗ ಜೀವಕೆ ತಾವು ಇರ್ತಾನಂತಾ,

ಆಗ ಎತ್ತುಗಳು ಮನಿಗೆ ಬಂದಾರೆ
ಎತ್ತುಗಳು ಮನಿಯಾಗೆ ನೋಡಾರೆ
ಕುದ್ರಿ ಮನಿಗೆ ಬಂದಾರೆ
ಕುದ್ರಿ ಮನೆ ನೋಡಾರೆ
ನಾಯಿಗಳು ಮನಿಗೆ ಬಂದಾರೆ
ನಾಯಿಗಳು ಮನ್ಯಾಗ ಇಲ್ಲರಾ
ಅವರಾಗಿ ನೋಡಿಕೆಂತರಾ
ಆಗ ಎಲ್ಲಾ ಬಂದಾರ ಅವರೆ ತಿರುಗಿ ಬಂದಾರ
ಬರೊತ್ತಿಗೆ ಬೆಳಕು ಆಗಾಕ ಬಂತಪ್ಪಾ ಆಹಾ
ಆಗ ದೊಡ್ಡಿಗೆ ಹೋಗೊ ದಿಕ್ಕಿಗೆ ಬಂದರು
ಅಣ್ಣಾಗ ಶಾಲು ಹೊದಿಸ್ಯಾರೆ
ಶಲ್ಯ ಹೊದಿಸಿ ಬಿಟ್ಟಾರ
ಅಣ್ಣಾಯ್ಯ ಇಲ್ಲಿ ಮಲಗಿದ್ಯಾ
ಎಲ್ಲ ಮನೆಗಳು ಬಿಟ್ಟಾನೋ
ಇಲ್ಲಿಯೂ ಮಣ್ಣೊಳಗ ಮಲಿಗೀಯಾ
ಎದ್ದೇಳು ಎದ್ದೇಳು ಅಣ್ಣಾಯ್ಯಾ
ಅಂತಾ ನಡಿವೋನು ಎದ್ದೇಳು ಅಣ್ಣಾ ಅಂತಾ
ಆಗ ಸೆರಗು ತಗದರೆ
ಬರೇ ಮುಂಡ ವೈತಿರಾ ಆಹಾ ಆಹಾ
ಅಣ್ಣನ ತಲೆ ಇಲ್ಲಪ್ಪಾ
ಇನ್ನೆಲ್ಲಿ ನಮ್ಮಣ್ಣಾನ ವೈದನೇ …. ದೇವ್ರುರಾ
ಅಣ್ಣಾ ನಿನ್ನೆ ಇಷ್ಟೊತ್ತಿನಾಗ ಐದೀಯಾ
ಇವೊತ್ತು ಇನ್ನ ಇಲ್ಲರೋ ಅಣ್ಣಾಯ್ಯಾ
ಎಷ್ಟುಗ್ಯಾನ ನಮಗೆ ಹೇಳಿದೆ
ಅಣ್ಣಾ ಎಷ್ಟು ದುಃಖ ನಮಗೆ ಹೇಳಿದೆ

ಎಷ್ಟುಗ್ಯಾನ ನಮಗೆ ಹೇಳಿದೆ ಅಣ್ಣಾ ಆ.. ಆ.. ಎಷ್ಟು ಬುದ್ದಿ ನೀನು ಹೇಳಿದೆ ಅಂತಾ ತಮ್ಮನೋರು ಅಣ್ನನ ಮ್ಯಾಲೆ ಬಿದ್ದು ದುಃಖ ಮಾಡ್ತಾರ, ಆಹಾ ಚಿಕ್ಕ ತಮ್ಮ ನೋಡಿದಾ ಅಣ್ಣಾ ಈಗ ಅಣ್ಣಾ ತಲೆ ದೂರ ಹೋತತ, ಆಹಾ ಸಯೋತನಕ ನಮ್ಮ ಜೀವದಲ್ಲಿ ನಮ್ಮಣ್ಣಾ ದುಃಖ ಇರತಾನ, ಆಹಾ ಈಗ ತಲೆ ಹೋದ ಮ್ಯಾಲೆ ಮುಂಡ ಈಗ ಸಮಾದಿ ಮಾಡಾಕ ಬರಾದಿಲ್ಲ, ಆಹಾ ನಮ್ಮಣ್ಣಾ ಮೋಕ್ಷ ಗೀಕ್ಷಾ ಆಗಾದಿಲ್ಲ,

ಲೇ ನಡಿ ಅಣ್ಣಾನ ಹೊತ್ತಕಂಡು ಹೋಗಾನೆ
ಅತ್ಗೆ ಮನಿಗೆ ಹೋಗಾನ
ಅಣ್ಣಾನ ತಲೆ ಹುಡುಕಾನ
ಅಣ್ಣಾನ ತಲೆ ಹುಡುಕಾನ
ಅಣ್ಣಾನ ಎತ್ತಿಕಂಡು ಬಿಟ್ಟಾರ
ಆಗ ಅಳಕಂಡ ಬರತಾರ
ಆಗ ಕುದ್ರಿಸಲುವೋನು
ನಾಯಿಗಳು ಸಲುವೋನು

ಏನಪ್ಪಾ ನಿಮ್ಮಣ್‌ನ ಹೊತ್ತಕಂಡು ಬರ್ತೀರಿ ಏನಪಾ ನಾಯಿಗಳು ಇನ್ನವರ ತಾವು ಅರಿಸಿದವು ಅರಕಂಡ ಬಂದರೆ ಇನ್ನವರ ತಾವು ಅರಸಿದವು ಅರಕಂಡು ಬಂದರೆ ಬೇಸು ಕಟ್ಯಾಕರಿ ಅಂದಾ, ಆಹಾ ಕುದ್ರಿ ಬೇಸು ಕಟ್ಯಾಕರಿ ಅಂದಾ ಏನಪಾ ನಿಮ್ಮಣ್ಣಾನ ಹೊತ್ತಕಂಡು ಬರ್ತೀರಿ,

ಇನ್ನೆಲ್ಲಿ ನಮ್ಮಣ್ಣಾ ವೈದನೇ ಏಪ್ಪಾ ಯಾರೋ ಕುತ್ತಿಗೆ ವೈದರಾ
ಆಯಿತಪ್ಪಾ ಹೊಂಟು ಹೋದನಾ ಅಣ್ಣಾ ನಮ್ಮಿಗೆ ಸಿಗದಿಲ್ಲರಾ
ಯಾರಿಗೇನು ಪಾಪ ಮಾಡಿದಾ ಯಾರಿಗೇನು ಕರ್ಮ ಮಾಡಿದಾ
ಅಂತಾ ಆಗ ತಮ್ಮನೋರು ದುಃಖ ಮಾಡ್ತಾರ
ಈಗ ಅತ್ತಿಗೆ ಮನಿಗೆ ಬಂದರು
ಅಮ್ಮ ಅತ್ತಿಗೆ ಶರಣಮ್ಮೊ
ಕೇಳಮ್ಮ ನಿನಗೆ ಲೋಕಕ್ಕೆ

ಏನಪಾ ನಿಮ್ಮಣ್ಣಾನೇನು ಅಂಗ ಹೊತ್ತಕಂಬರ್ತೀರಿ ಶಲ್ಯ ಹೊಂದಿಸಿಕೊಂಡು ಶಾಲಿಲಿ ಇಲ್ಲಮ್ಮ ನಮ್ಮಣ್ಣ ಬೇಸು ಐದಾನ ಮಬ್ಬು ಬಂದೈತೆ ಮಕ್ಕಂಡಾನ ಅದಕೆ ಹೊತ್ಕಂಬದೀವಿ, ಆಹಾ ಇಲ್ಲಪಾ ಏನು ಅಂಗ ಹೊತ್ಕಂಡು ಬರ್ತೀರಿ ಯಾವ ರೀತಿ ಐದೀರಿ ಅಂದರೆ ಕೆಳಗ ಮನಿಗೀವಿ ಇನ್ನೆಲ್ಲಿ ನಮ್ಮಣ್ಣ ವೈದಾನೇ ಅತ್ತಿಗೆ ಎಮ್ಮ ಚೆಂಬ ತಗಂಡು ಹೋಗಿ ತಲ್ಲಿರಾ ರಾತ್ರೀಗಿ ಕಳ್ಳರು ಬಂದರಾ ಎಮ್ಮೊ ನಮ್ಮಣ್ಣಾ ಕುತ್ತಿಗೆ ಕೊಯ್ದಾರ ದೊಡ್ಡಿಗೆ ಹೋಗೊ ದಿಕ್ಕಿಗೆ ಒಳಗೆ ಅಣ್ಣಾನ ಕುತ್ತಿಗೆ ಕೋಯ್ದಾರ ಅಣ್ಣಾನ ಕುತ್ತಿಗೆ ಕೊಯ್ಕಂಡರ ಅಂಬೊತ್ತಿಗೆ ಮಗನ ಕೈಗೆ ಎತ್ತಕಂಡಿದ್ದು,

ಪಾದ ಮ್ಯಾಲೆ ಗಂಡಗ ಹಾಕ್ಯಾಳ .. .. ಹೆಂಡ್ತಿ
ಪಾದಮ್ಯಾಲೆ ಬಾರ್ಲಾ ಬಿದ್ದಾಳ
ಒಳ್ಳಾಡಿ ಒಳ್ಳಾಡಿ ಅಳ್ತಾಳೆ .. ..
ಅಯ್ಯಾ ರಂಡೆ ಮಾಡಿ ನೀವು ಹೋದಿರಾ
ಒಂದು ಕೂಸಿನ ತಾಯಿ ವೈದಿನೊ
ಅಯ್ಯಾ ಮದ್ವಿ ಆಗಿ ಮೂರು ವರುಷರಾ
ನಿನ್ನ ಜೀವ ಇನ್ನ ಕಳದಾರ .. ..
ನನಗೆ ರಂಡೆ ಮಾಡಿ ನೀನು ಹೋದಿಯಾ

ರಂಡೆ ಮಾಡಿ ನೀನು ಹೋದೆಲ್ಲಾ… ರಾ ಕಿನ್ನ ರಾಜೇಂದ್ರ ಕೇಳಿದರು ಆಗ ದುಃಖ ಮಾಡತಿದ್ರೆ ಆ ತಾಯಿ ಅಂತ ಬಾಯಿ ಈಗ ಚಿಕ್ಕ ಮೈದುನಾ ನೋಡಿರಾ ಅಮ್ಮ ನಮ್ಮಣ್ಣನ ತಲೆ ಕಳ್ಳರು ತಗಂಡು ಹೋಗ್ಯಾರ ಈಗ ಅಪ್ಪಣೆ ಕೊಡಮ್ಮ ನೀನೆ ನಮ್ಮಣ್ಣಾ ಅಣ್ಣಾ ಇದ್ದಂಗ ನೀನು, ಆಹಾ ಈಗ ನಿನ ಮಾತಿಗೆ ಎದುರಾಡದಿಲ್ಲ ತಾಯಿ, ಆಹಾ ಈಗ ಸಾಯೋತನಕ ನಮ್ಮಣ್ಣ ದುಃಖ ನನಗೆ ಇರ್ತೈತೆ, ಆಹಾ ಈಗ ತಲೆ ಓದ ಮ್ಯಾಲೆ ಸಮಾಧಿ ಕಟ್ಯಾಕ ಬರಾದಿಲ್ಲ, ಆಹಾ ಅಪ್ಪಣೆ ಕೊಡು ತಾಯಿ ಕುದ್ರಿಮ್ಯಾಲೆ ಕುಂತ್ಕಂಡು ನಾಯಿಗಳು ಕರಕಂಡು ಕಳ್ಳರು ಉಡಿಕ್ಯಾಡಿ ಬರ್ತೀವಿ, ಆಹಾ ನಮ್ಮಣ್ಣಾನ ತಲೆ ತಗಂಡು ಬರ್ತೀವಿ ಏನಪಾ ಮೈದುನಾರೆ ಈಗ ಹತ್ತು ಮಂದಿ ಬಂದರೆ ಎಡಗೈ ಆಗಾದಿಲ್ಲ ಇಪ್ಪತ್ತು ಮಂದಿ ಬಂದರೆ ಬಲಗೈ ಆಗಾದಿಲ್ಲ ಆ ನಿಮ್ಮಣ್ಣನಿಗೆ ನಿಮ್ಮಣ್ಣನ ಕಡೆಯೋರು ಯಾರಿಲ್ಲ, ಆಹಾ ಈಗ ಹಿಂದಲ ಕಾಲದಲ್ಲಿ ನಿಮ್ಮಪ್ಪ ನಿಮ್ಮಮ್ಮ ಸತ್ತು ಹೋದರೆ, ಆಹಾ ಈಗ ಹಿಂದಲ ಕಾಲದಲ್ಲಿ ನಿಮ್ಮಪ್ಪ ನಿಮ್ಮಮ್ಮ ಸತ್ತು ಹೋದರೆ, ಆಹಾ ನಿಮ್ಮ ಕಕ್ಕ ಬಂದು ಕೈಕಾಲು ಮುರಿದು ಸಣ್ಣಾ ಹುಡುಗರನ ಬಿಟ್ಟು ಆಗ ಆಸ್ತಿ ಹೊಯ್ಯಿದಾನ, ಆಹಾ ಈ ಕಾಲಕ್ಕೆ ನಮ್ಮಣ್ಣಾ ಮದುವಿ ಮಾಡಕೆಂಡಾ ಮಗ ಹುಟ್ಟಿದಾ, ಆಹಾ ಈಗ ನಿಮ್ಮಿಗೆ ಮದುವಿ ಅಂಬಲಿಲ್ಲ ಹೆಣ್ಣು ಹುಡಕಲಿಲ್ಲ ಅಂತಾ,

ನಿಮ್ಮಣ್ಣನ ನೀವೆ ಕಡದೀರಿ
ನಿಮ್ಮಣ್ಣನ ಜೀವ ತಗದೀರೊ
ಎಮ್ಮೊ ದೇವರಾಣಿ ನಾವು ಕಡದಿಲ್ಲ
ಭೂಮಿವಾಗ್ನ ನಾವು ಕಡದಿಲ್ಲ
ಒಂದೆ ಹೊಟ್ಯಾಗ ಹುಟ್ಟಿದೋರು ಸಯ್
ಒಂದೆ ಮೊಲೆ ಹಾಲು ಕುಡಿದೋರು ಸಯ್
ಎಂತ ಕರ್ಮದೋನಾಗಲಿ ಸಯ್

ಅಣ್ಣಾನ ಎಂಗ ಕಡೀತೀವಮ್ಮ ಎಂತ ಪಾಪದವನಾಗೀರ ಯಾ ಜಲ್ಮದೋನು ಕಡೀತಾರ ಅಮ್ಮ ಎಂತಹ ಪಾಪದೋನಾಗಲೀ ಒಂದು ಹೊಟ್ಯಾಗ ಹುಟ್ಟಿ ಒಂದು ಮೊಲೆ ಹಾಲು ಕುಡಿದೋರು ಅಣ್ಣಾನ ಎಂಗ ಕಡಿತಿದ್ದೆವಮ್ಮ ಇಲ್ಲ ನೀವೇ ಕಡಿದೀರಿ, ಆಹಾ ನಮ್ಮಣ್ಣಾ ಮದ್ವಿ ಅಂಬಲಿಲ್ಲ ಆಗ ಏನಂಬಲಿಲ್ಲ, ಆಹಾ ಅವನು ಮಾಡಾದಿಲ್ಲಂತ ಈಗ ಕುತ್ತಿಗೆ ಕೊಯ್ಯಿದೀರಿ, ಆಹಾ ನಿಮನ ಬಿಟ್ಟರೆ ಯಾರಿಲ್ಲ ನೋಡಪಾ, ಆಹಾ ಎಮ್ಮ ಅಂಗ ಅನ್ನಬ್ಯಾಡ ತಾಯಿ ನಿನ್ನ ಪಾರಾಗ್ನಿ ನಾವು ಕೊಲ್ಲಲಿಲ್ಲಮ್ಮ ಅಂಬೊತ್ತಿಗೆ ನೋಡಿದಾ ಚಿಕ್ಕ ತಮ್ಮ ವಿರೋಜಿ ಏನಮ್ಮಾ ಆಯಮ್ಮ ಅಂದರೆ ಗಂಡನ ಕಳಕಂಡು ಅಳ್ತಾಳ, ಆಹಾ ನಾವು ಜೀವ ಇರೋತನಕ ದುಃಖ ಇರ್ತೈತೆ ಆಹಾ ನೋಡಪಾ ನಡುವುದೋನೆ ಆಯಮ ಅಂದ ಮಾತಿಗೆ ಎದುರಾಡಬೇಡ ಆಗಲಮ್ಮ ಅಷ್ಟೆ ಆಗಲಿ ತಾಯಿ ನೀನು ಏನನ ಅಂದಕಮ್ಮ ನಾವು ಹೋತೀವಂತಾ,

ಬಾರೋ ಅಣ್ಣಾ ಹೋಗಾನ
ಕಳ್ಳರು ನಾವೇ ಹುಡುಕಾನ
ಅಣ್ಣಾನ ತಲೆ ತರಾನೆ
ತಲೆವಿಲ್ಲರಾಗಲಿಲ್ಲಣ್ಣಾ
ಅಂತಾ ಇಬ್ಬರು ಅಣ್ಣಾತಮ್ಮರು ಬಂದರು ಆಹಾ
ಬಂದು ನಾಯಿಗಳು ಮನಿಗೆ ಬಂದರು ಆಹಾ
ನಾಯಿಗಳು ಸರಪಣಿ ಬಿಟ್ಟವು ಆಹಾ

ಆಗ ಕುದ್ರಿ ತಲ್ಲಿಗೆ ಬಂದರು ಕುದ್ರಿ ಇನ್ನ ಹೊರಗ ತಗಂಡು ಬಾಯಿ ಸರಪಣಿ ಹಾಕಿ ಅರಳಿನ ದಿಂಡು ಹಾಕಿದರು.

ಕುದ್ರಿಮ್ಯಾಲೆ ಕುಂತಕೊಂಡಾರೆ
ಇಬ್ಬರು ಅಣ್ಣಾ ತಮ್ಮೋರು
ಸೋಮೋಜಿ ಅಂತೋನು ನೋಡರಾ ಸಯ್
ಹಗಲು ಸೋಬನ ಮಾಡೇನುರಾ ಸಯ್
ಪಿರೋಜಂತೆ ನೋಡರಾ ಸಯ್
ಹಗಲೆ ಪೂಜಾ ಮಾಡೋದು ಸಯ್
ಒಳ್ಳೆ ಹುಡುಗರು ನೋಡರಾ ಸಯ್
ಇನ್ನ ಯಾರು ಕುಂತಕಂಡರೆ ಸಯ್
ಜಿಟ್ ಜಿಟ್ ಜಲ್ಲೆಂತರಾ ಸಯ್
ಕುದ್ರಿ ಓಡಿಸಬಿಟ್ಟಾರ ಸಯ್
ನಾಯಿಗಳು ಬರ್ತಾವ ಸಯ್
ಇಬ್ಬರು ಅಣ್ಣ ತಮ್ಮೊರೊ
ಅವರೆ ಸೆಟ್ಟಗ ಬಂದಾರೆ
ಆಗ ಮರಗಿಡತಲ್ಲಿ ಬಂದು
ಆಗ ಗಿಡಸುತ್ತ ನಾಯಿಗಳು ತಿರಿಗ್ಯಾವೆ
ಚಿಕ್ಕನಾಯಿ ಸಿರಿನಾಯಣ್ಣಾ
ಕಳ್ಳರ ನಾತ ಇಡಿದಾವೆ
ಆಗ ದಾರಿ ಇಡಿದೆ ಬರ್ತಾವ
ದಾರಿ ಹಿಡಕಂಡು ಮುಂದೆ ಬರುತಾವ ಸಯ್
ಇನ್ನಷ್ಟು ಓಡಿ ಓಡಿ ಬರತಾವೆ ಸಯ್
ನಾಯಿಗಳು ಬರೋದು ನೋಡ್ಯಾರ ಸಯ್
ಕುದ್ರಿ ಬರೋದು ನೋಡ್ಯಾರ ಸಯ್
ಈಗ ಕಳ್ಳರತಾಗಿ ನೋಡ್ಯಾರ ಸಯ್
ಅವರು ಕಡೆ ಹೊಳದಂಡೇಲಿ ನೋಡ್ಯಾರ
ಕುದ್ರಿ ನಾಯಿಗಳು ಬರೋದು
ಲೇ ಮಾರವಾಡೇರು ಹುಡುಗರು ಬರ್ತಾರ
ಸೋಮೋಜಿ ಪೀರೋಜಿ ಬರ್ತಾರ
ನಮ್ಮ ಪೂಜೆ ಮಾಡ್ತಾನ

ಅಣ್ಣಾನ ಕಡದಿದ್ದು ಅವರ ಕಿವ್ಯಾಗ ಬಿದೈತೆ ಬಂದು ಬಿಟ್ಟರು ಲೇ ಕುದ್ರಿಮ್ಯಾಲೆ ನಾಯಿಗಳು ಬರ್ತಾವಲೇ ಬೌ ಅನ್ನಕಂತಾ ಲೇ ಇವನು ನೋಡಿದಾ ಗಿರಿಸಾಲಿ ಗಿರಿಮೋಲೆ ಕಾಲು ಮುರಿದೋನು, ಆಹಾ ಇವರೇನು ಎಲ್ಡು ಕಾಲದ್ದೋರು ಓಡೋಕ್ತಾರ ನನಜಲ್ಮ ಓತೈತೆ ನಂದು ಒಂದೆ ಕಾಲಲ್ಲಿ, ಆಹಾ ಎಲ್ಲಿಗನ ಓಡಬೇಕು ನನ್ನ ಜೀವ ಹೋತೈತೆ ಇವರು ಜೀವ ಉಳಿತೈತೆ ಆಹಾ ನನ ಜೀವಕ ಇವರು ಜೀವ ಕಳೀಬೇಕು ಅಂತಾ ಗಿರಿಸಾಲಿಗಿರಿಮೋಲೆ ಏನಂತಾನ ಅವರು ಮಾರವಾಡಿ ಶೇಠದೋರಲ್ಲಾ,

ಈಡಿಗರಾಗಿ ಬರ್ತಾರೆ
ಈಡಿಗರು ಕುದ್ರಿಮ್ಯಾಲರೆ
ಕುದ್ರಿ ಹಾಕ್ಯಂಡ ಬರ್ತಾರೆ
ಈಡಿಗರು ಕುದ್ರಿ ಹಾಕ್ಯಂಡು ಬರ್ತಾರ ಆಹಾ
ಮತ್ತೆ ನಾಯಿಗಳು ಕರ್ಕಂಡು ಬರ್ತಾರ ಆಹಾ
ಕುದ್ರಿಮ್ಯಾಲೆ ಹೆಂಡ ಹಾಕ್ಯಾಂಡು ಮಾರಾಕ ಹೋಗಾಕ ಆಹಾ
ಲೇ ಹೆಂಡ ಹಾಕ್ತಾರೆ ಕುಂದರಾಲೇ
ಕುಂದರಾಲೇ ನಮಗಾನ
ಈಸಲು ಹೆಂಡ ಕುಡಿದು ಹೋಗಾನ
ಇಲ್ಲ ಮಾರವಾಡೋರು ಅಲ್ಲಾ
ಅಂತ ಇವನು ಒಯ್ಯಿಕೊಂತಾನ
ಲೇ ಈಡಿಗರಲ್ಲ ಈಡಿಗರಲೆ ನನಮಗನೇ
ಅವರೇ ವೈದರಾ ನನ ಮಗನೆ
ಸತ್ತು ಹೋತಿವಿ ನನಮಗನೆ

ಬೌ ಅಂತಾವಪಾ ನಾಯಿಗಳು ಆಗ ದಗ ದಗ ಅಂತಾ ಬೆಂಕಿ ಹಾಕ್ಯಾರ ಏ ಬೆಂಕಿ ಬ್ಯಾಡ ತಲೆಬ್ಯಾಡ ನಮಗೆ ಜೀವಹೋತೈತೆ ಅಂತಾ,

ರಾಜನ ತಲೆ ಬಿಟ್ಟಾರ ಸಯ್
ಕುಂಟವನಾಗೆ ಬಿಟ್ಟಾರ ಸಯ್
ನಾಲಾರು ಕಳ್ಳರು ನೋಡಾರ ಸಯ್
ಮಂತ್ರಿಸಿಕಂತ ನೋಡಾರ ಸಯ್
ಹಿಂದಕ ತಿರುಗಿ ನೋಡಲಾರದ ಸಯ್
ಊರಿಗೆ ಓಡುತ್ತಿದ್ದರ ಸಯ್
ಅವರ ಪಟ್ಲಕ ಅವರು ಓಡುವೈದಾರ
ಇನ್ನ ಓಡಿ ಬಂದರೆ
ಅವರ ಪಟ್ಣಕೆ ಬಂದಾರೆ
ಓಡಿ ಓಡಿ ಬರ್ತಾರ
ಅವರು ಊರಿಗೆ ಅಣ್ಣಾಯ್ಯ

ಅವರು ಊರಿಗೆ ಓಡಿ ಹೋದರಪಾ ಇವನು ಕುಂಟೋನ ನೋಡಿದಾ ಎಂಗ ಮಾಡಬೇಕಪಾ, ಆಹಾ ನನ ಕಾಲು ಇಟದಪ್ಪ ಕಂಬದಪ್ಪ ಬಾತೈತೆ,

ದಿಗ್ಗನೆ ಎದ್ದು ಕೂತಾನ
ದಪ್ಪನೆ ಅಂಗೆ ಬಿಳ್ತಾನ
ಮೂರು ಸರ್ತಿ ಎದ್ದು ಬಿಟ್ಟಾನ
ಮೂರು ಸರ್ತಿ ಅಂಗೆ ಬಿದ್ದಾನ

ಎಂಗ ಮಾಡಬೇಕರ ಅಂತಾ ಎಲ್ಲೆಲ್ಲಿ ಇಲ್ಲ ಆಗ ಇನ್ನ ಹೊಳೆ ದಂಡಿ ಬಗಲಾಗ, ಆಹಾ ಆಗ ಇನ್ನ ಬಾರಿಹಣ್ಣು ಗಿಡ ಐತೆ ಆಹಾ ಕಾಣಿಗೆ ಗಿಡ ಐತೆ ಆಗ ಬಾರೆ ಗಿಡ ಕಾಣಿಗೆ ಗಿಡ, ಆಹಾ ಎಲ್ಡು ಕಲ್ತು ಕಂಡು ಬೆಳಕಂಡಾವ, ಆಹಾ ಭೂಮಿಮ್ಯಾಲೆ ಹಾಸಿಕೆಂಡು ಹೊಗೈತೆಪಾ ಆಹಾ,

ಗಿಡದಾಕೆನೆ ಬಂದಾನ
ಗಿಡಾಗ ತೂರಿಕೆಂಡು ಬಿಟ್ಟಾನೆ
ಕಾಣಿಗೆ ತಪ್ಪಲು ಮುಚ್ಚಿಕೊಂಡಾನ
ಅವನು ಇನ್ನ ಬಂದಾನಪ್ಪಾ

ಕುಣಿ ತೋಡಿಕೊಂಡ ಆಗಿತ ಅಡೇಲಿ ಆಗ ಇನ್ನ ಮೊಣಾಕಾಲಷ್ಟು ಆಹಾ ಆ ಕುಣ್ಯಾಗ ಕುತ್ಕಂಡು ಕಾಣಿಗೆ ತಪ್ಪಲ ಮುಚ್ಚಿಕಂಡನಪಾ ಏ ನಾಯಿ ಬಂದರೇನು ಅದೋಟು ಉಡಿಕ್ಯಾಡ್ತಾವ ಬೆಂಕಿ ಸುತ್ತಾ ತಿರುಗಾಡ್ತಾವ ಚಳಿಕಾಸಾಕ ಹಾಕೀವಿ ಹೋತಾವ ಈ ಗಿಡದಾಗ ಯಾಕ ಬಂದು ನನ್ನ ಗಿಡದಾಗ ಇದ್ದೋನು ಇಡಿತಾವ, ಆಹಾ ನನ ಜೀವ ಉಳಿತೈತಲ್ಲಾ ಅಂತ ತಿಳಕಂಡಾ, ಆಹಾ ಹಾಳಾಗಿ ಹೋಗೋದು ಗೊತ್ತಿಲ್ಲ ಅವನಿಗೆ, ಆಹಾ ಆಗ ರಾಜನ ತಲೆ ಬಿಟ್ಟು ಓಡಿ ಹೋಗಿಬಿಟ್ಟಾರಪಾ, ಆಹಾ ಇವರು ನೋಡಿ ಬಿಟ್ಟರು ಯಾರು ಪೀರೋಜಿ ಸೋಮೋಜಿ ನಡುವೋನು ಏನಂದಾ ಅಯ್ಯೊ ತಮ್ಮ ಚಿಕ್ಕೋನೆ ಪಾಪ ಈಡಿಗರು ಬೆಂಕಿ ಹಾಕ್ಯಾಂಡಾರ,ಆಹಾ ಅಂಗೆ ಬಿಟ್ಟಿದ್ದರೆ ನಾಯಿಗಳು ಕಳ್ಳರನು ಕೊಲ್ಲಬಿಡುತಿದ್ದವು ಇವರಿಗೇನು ಬಂತು ಪಾಪ ಈಡಿಗರು ಇನ್ನ ಚಳಿಕಾಸಿಕೆಂತಿರ್ತಾರ, ಆಹಾ ನಾಯಿಗಳು ಏನು ತಿಳಿಲಾರವು ಹೋಗಿ ಬಡಗನ ಕಡದರೆ ನಮಗೆ ಬೈತಾರಂತ,

ನಾಯಿಗಳು ಇಡಕಂಡು ಬಿಟ್ಟಾರೆ
ಗಡಿ ಬಿಡಿ ಇನ್ನ ಇಡದಾರೆ

ಏ ಮೂರು ನಾಯಿನ ಇಡಕಂಡ್ರಪಾ ಸರಪಣಿ ಹಾಕಿ ಆಹಾ ಆಗ ಏನು ಮಾಡಿಬಿಟ್ಟರು ಹಳ್ಳತಲ್ಲಿಗೆ ಬಂದರು ಬರೋವೊತ್ತಿಗೆ ಹೊಳೆದಂಡಿತಲ್ಲಿಗೆ, ಆಹಾ ಈಗ ಬೆಂಕಿ ಆಕ್ಕೆಂಬೋದು ದಗ ದಗ ಅಂಬೋದು ಗಪ್ಪ ಆಗಿಬಿಡ್ತು, ಆಹಾ ನೋಡಿದಾ ಚಿಕ್ಕ ತಮ್ಮ,

ಅಣ್ಣಾ ಅವರೆ ಕಳ್ಳರೆ ಅಣ್ಣಾಯ್ಯ
ನಾವು ಎಷ್ಟು ದಡ್ಡದವರಣ್ಣಾ
ಶಾಣೆದೋರು ನಾವಲ್ಲಣ್ಣಾ

ಅಣ್ಣಾ ನಾಯಿಗಳು ಕೊಲ್ಲುತ್ತಿದ್ದುವು ಎಂಗ ಮಾಡಿಕೆಂಡಿವಣ್ಣಾ, ಆಹಾ ನಾವೇ ನಾಯಿಗಳು ಇಡಕಂಡು ಅವರು ಜಲ್ಮ ಉಳಿಸಿದೀವಿ ಆಹಾ

ಬಿಡಬಿಡಾರೆ ನಾಯಿಗಳೆ
ಮೂರು ನಾಯಿಗಳು ಬಿಟ್ಟಾರೆ
ನಾಯಿಗಳು ಬಂದೆ ಬಿಟ್ಟಾವೆ

ನೀರು ಮ್ಯಾಲೆ ಕಳ್ಳರು ಹೋಗಿದ್ದು ನಾತ ಇಡಿದರೆ ನಾತ ಸಿಗುವಲ್ತಪಾ, ಆಹಾ ಅಲ್ಲಿ ಇಲ್ಲಿ ನೋಡ್ತಾವಪ್ಪಾ ಚಿಕ್ಕ ನಾಯಿ ನೋಡಿತಾ,

ಕಳ್ಳರು ಇಳಿದು ತಲ್ಯಣ್ಣಾ ಕುಪ್ಪಳಿಸಿ ಎಗರಿಬಿಡ್ತು
ನಾಯಿ ಎಗರಿದ ಮ್ಯಾಲೆ ನೋಡರಾ ಸಯ್
ಕುದ್ರಿ ಇಂದೆ ಎಗರ್ಯಾವ ಸಯ್
ಈಸಲು ಹೊಡಿಕೆಂಡ ಬರ್ತಾವೆ ಸಯ್
ಕಡೆ ದಂಡಿಗೆ ಬಂದಾರ ಈಸಲು ಹೊಡಕಂತ ಬಂದಾರೆ
ಆಗ ಕುದುರೆಗಳು ನಾಯಿಗಳು ಆಹಾ
ಆಗ ಈಸಲು ಒಡಕಂಡ ಕಡೆ ದಂಡಿ ಏರಿದವು ಆಹಾ
ಕುದ್ರಿಮ್ಯಾಲೆ ಕುಂತೋರು ಅಣ್ಣಾತಮ್ಮಂದಿರು
ತಲೆ ತಲೆ ಇಡಕಂಡಾ
ಎಮ್ಮ ಅಣ್ಣಾನ ತಲೆ ನೋಡಿ ಅಳತಾರ
ಅಣ್ಣಾ ನೀನೆ ಹೋಗಿದ್ಯಾ ಊರಾಗ ತಲೆ ಅಣ್ಣಾಯ್ಯ
ಅಡವ್ಯಾಗ ಮುಂಡ ಬಿತ್ತಯ್ಯೊ

ಅಣ್ಣಾ ಅಡವ್ಯಾಗ ತಲೆ ಊರಾಗ ಮುಂಡ, ಆಹಾ ಅಣ್ಣಾಯ್ಯ ನಿನ ತಲೆ ಹೋತಿತ್ತು ನಾವು ಬಂದಿವಿ ಎಂಗ ಮಾಡಬೇಕು, ಆಹಾ ಅಪ್ಪಾ ತಮ್ಮ ಅಣ್ಣಾನ ತಲೆ ತಗಂತೀನಿ ಅಣ್ಣಾ ಮಂತ್ರಿಸ್ಯಾರೋ ಕಟ್ ಕಟ್ಯಾರೋ ಆಗ ಮಂತ್ರಬರದಾರೋ ಮತ್ತೆ ಎಂಗ ತಮ್ಮ ಏನಿಲ್ಲ ನಾನೇ ತಗಂತೀನಿ

08__MS_346-KUH

ದೇವ್ರು ಖಂಡೇರಾಯರ ಸಯ್
ಎಲ್ಲಿ ವೈದಿ ಮನೆದೇವ್ರು ಸಯ್
ದೇವ್ರು ನೆನಸಿಕೊಂಡರಾ ಸಯ್
ಎಲ್ಡು ಕೈಲಿ ಅಣ್ಣಾ ಮುಗದಾನ ಸಯ್
ಎಲ್ಡು ಕೈಲಿ ಕೈಮುಗಿದಾನ ಸಯ್
ಅಣ್ಣಾನ ಮುಂದೆ ನೋಡರಾ ಸಯ್
ಲಗುವಾಗಿ ಬರುತಾನ ಸಯ್
ಕುದ್ರಿಮ್ಯಾಲೆಲಿಂದ ಬರ್ತಾನ ಸಯ್
ಅಣ್ಣಾನ ತಲೆ ಎತ್ಯಾನ ಸಯ್

ಎಲ್ಡು ಕೈಲಿ ತಾನಿಡದಾನ ಅಣ್ಣನ ತಲೆ ತಕ್ಕಂಡು ತಾವೇ ಎಲ್ಡೆ ಕೈಲಿಂದ ಆಗ ಅಣ್ಣನ ಕೈಮುಗಿದು ಎಲ್ಡು ಕೈಲಿತಗಂಡ ತಗಂಡು ಅಣ್ಣನ ತಲೆಮ್ಯಾಲೆ ಬಿದ್ದು ಇಬ್ಬರು ಅಣ್ಣಾತಮ್ಮಂದಿರು ಅಳ್ತಾರಪಾ, ಆಹಾ ಈ ಮೂರು ನಾಯಿಗಳನಾಡ,

ಕಳ್ಳರು ನಾತಾ ಇಡದಾವೊ
ಕುಂಟೋನು ನಾತ ಇಡದಾವೆ
ಕಾಣಿಗೆ ಗಿಡಕೆ ಬಂದಾವೆ

ಆಗ ಬರೆಗಿಡ ಕಾಣಿಗೆ ಗಿಡಕೆ ಬಂದವು, ಆಹಾ ಆಗ ಗಿಡ ಸುತ್ತ ಸುತ್ತಿಕೆಂಡವು, ಆಹಾ ಅವನು ಕುಂಟೋನು ನೋಡಿದಾ ಇವು ಆಳಾಗಿ ಹೋಗ ನಾಯಿಗಳು ಮಾರವಾಡಿಶೇಠಿ ನಾಯಿಗಳು ನಾಡ ಇಲ್ಲಿ ಅದೀಟು ಗಿಡಗಳು ಬಿಟ್ಟು ನನ ಗಿಡಕ್ಕೆ ಬರಬೇಕ ಇವು ಅಂತಾ, ಆಹಾ ಎಂಗ ಜೀವ ಹೊತೈತೆ ಅಂತಾ ಸುಮ್ಮನಿರಬಾರದಾ ಕುತ್ತಿಗೆ ಕೊಯಿದೋನು, ಆಹಾ ಕಾಣಿಕೆ ತಪ್ಪಲು ತಗಂಡು

ದುಸ್ಸ ದುಸ್ಸ ಅಂತಾನೆ
ಗಿಡದಾಗಲಿದ್ದ ಅಣ್ಣಯ್ಯ
ಚಿಕ್ಕನಾಯಿ ಕಣ್ಣೀಲಿ ನೋಡೈತೆ
ಬಿಸಿವಿಲ್ಲದಸಿವಿಲ್ಲರಾ ಸಯ್
ಗಿಡದಾಗ ಒಕ್ಕಂಡು ಬಿಟೈತೆ ಸಯ್
ಎಗರಿ ಕುತ್ತಿಗೆ ಇಡದೈತೊ
ಗಿಡದಾಗ ಒಕ್ಕಂಡು ಬಿಟ್ಟಿತೊ
ಎಗರಿ ಕುತ್ತಿಗೆ ಇಡದೈತೊ
ಕುತ್ತಿಗೆ ಇಡದು ಅಣ್ಣಾಯ್ಯ
ಪಟ ಪಟ ಕಡಿದೈತೊ ಕುತ್ತಿಗಿನಾ
ಕಡದೈತೆ ತಾವೇ ಒಂದೆ ಅವನಾಗಿ
ಕುತ್ತಿಗೆ ಇಡದಾಗ ನೋಡರಾ ಸಯ್
ಬ್ಯಾಗ ಹೋಗೈತೊ ಜಲ್ಮಾಲೆ
ಮೂರೆ ನಾಯಿಗಳು ನೋಡರಾ ಸಯ್
ಕೂದಲು ಕೈ ಇಡಕೊಂಡು ಸಯ್
ಕುತ್ತಿಗೆ ಇಡಕೊಂಡು ನೋಡರಾ ಸಯ್
ಗಿಡದಾಗ ಇದ್ದವನು ನೋಡರಾ ಸಯ್

ಗಿಡ ಹೊರಗ ಎಳಕಂಡು ಬಂದವು ಇನ್ನ ಹೊರಕ್ಕೆ ಅವೆ ನಾಯಿಗಳು ಎಳದಾವೆ ಗಡ್ಡಿಗೆ ಎಳಕಂಡು ಬಂದವಪಾ, ಆಹಾ ಎಳಕಂಡು ಬಂದಮ್ಯಾಲೆ ಆಗ ಅವನ್ತಲ್ಲಿ ಈಗ ಕುಲಕ್ಕಾಗಿ ಮೊಖ ನೋಡಿ ಮೊಖನೋಡಿ ಕಡಿತಾವ ಎಮ್ಮ ಬೋ ಅಂತಾ ಇನ್ನ ಅರಸ್ತಾವ ಬೋ ಅಂತಾನೆ ಅರಸ್ತಾವ ಆ.. ಆ.. ಅವರೆ ಬಂದೆ ನೋಡರಾ ಅವನು ಮೊಖ ನೋಡ್ತಾವ ಬೋ ಅಂತಾ ಅರಸ್ತಾವ, ಆಹಾ ಮೊಖ ಮೊಖ ಕಡೀತಾವ, ಆಹಾ ಆಗ ನೋಡಿದ ಚಿಕ್ಕ ತಮ್ಮ ಅಣ್ಣಾ ಅತ್ತಗ ನೋಡಣ್ಣಾ ಯಾವನ್ನೊ ಕಡದು ಕಳ್ಳದೋನು, ಆಹಾ ಎಳಕಂಡು ಬಂದು ಆಗ ಅರಸ್ತಾವ ನೋಡು, ಆಹಾ ನಾವು ಇಲ್ಲಿ ಅಳಕಂತ ಐದೀವಿ, ಆಹಾ ಸಾಯೋ ತನಕ ನಮ್ಮ ಜೀವಕ ಅಣ್ಣನ ಮರೆಯಂಗಿಲ್ಲ, ಆಹಾ ಈಗ ನಮ್ಮಣ್ಣನ ತಲೆಗೆ ಏಸು ಮಂದಿ ಕಾಯ್ಕಂಡು ಐದಾರೋ, ಆಹಾ ನಮ್ಮ ನಾಯಿಗಳಿಗೆ ನಮ್ಮ ಕುದ್ರಿಗಳಿಗೇ ಚೌಕಟ್ಟು ಕಟ್ಟಿ ನಮ್ಮಣ್ಣನ ಎಂಗ ಕಡದಾರೋ ಅಂಗ ನಮ್ಮನ ಇಬ್ಬರನ ಕೂಡ ಕಡೀತಾರ, ಆಹಾ ಏಸು ಮಂದಿ ಬಂದಾರೊ ನಮ್ಮಣ್ಣನ ಕಡಿಯಾಕ ಅಣ್ಣಾ ನಾವು ಇರೋದು ಬ್ಯಾಡ ಈಗ ನಡೆ ಜಲ್ದಿ ಊರಿಗೆ ಹೋಗಾನ ಅಂತಾ ಅಣ್ಣಾನ ತಲೆ ತಗಂಡರು, ಆಹಾ ನಮ್ಮ ಅತ್ತಿಗೆ ಏನಂತಾಳ ನೀವೆ ಕಡದು ಬಂದೀರು ಅಂತಾ ನಮ್ಮೇಲೆ ಇನ್ನವರ ಮಾತು ಓರಿಸಿ ಬಿಟ್ಟಾಳ ಆಹಾ ಇಗೋ ಇವನ ಕುತ್ತಿಗೆ ಕೊಯ್ಯಿಕಂಡಾನ ಹೋಗಿ, ಆಹಾ ಮೊಖ ತೋರ್ಸಾನಂತಾ ಅಂತಾ,