ಎತ್ತುಗಳು ಒಡಕಂಡು ಹೋಗಾನ
ಅಂಗಾರೆ ಊರಾಕ ಬಿಡತಾರ
ಇಲ್ಲದಿದ್ದರೆ ನಮಗೆ ಸಿಗದಿಲ್ಲ
ಯಾವನು ಬಂದರು ಅಂತಾರ ಸಯ್
ನಮ್ಮನು ಕುತ್ತಿಗೆ ಕೊಯ್ಯಿತಾರ ಸಯ್
ಎತ್ತುಗಳು ಹೊಡಕಂಡು ಹೋಗಾನ ಸಯ್
ಇನ್ನ ಮಾರವಾಡಿದವರುರಾ ಸಯ್
ಸಂಬಳದಾಳುಗಳು ಅಂತಾ ತಿಳಕಂಡು ಸಯ್
ಅವರು ಕೈಯಾಗ ಇರೋರು ಅಂತಾರೆ ಸಯ್
ಎತ್ತುಗಳು ಸಲುವೋನು ಅಂತಾರೆ ಸಯ್
ಅವರು ಸುಮ್ಮನೆ ಆತಾರೆ

ಮನಿಸಂಬಳಗಾರ ಅಂತಾ ನಮ್ಮ ಜೀವ ಉಳಿತೈತೆ, ಆಹಾ ಅಂತಾ ಏನು ಮಾಡದಿರಿ,

ಮಂತ್ರಾಳ ಮಾದೇವ ನೋಡರಾ ಸಯ್
ಗಾಳೆಮ್ಮ ಎಲ್ಲಿ ವೈದಿಯೋ ಸಯ್
ನಿನಗೆ ಶರಣೆ ಅಂದನಾ ಸಯ್
ಥಳ ಥಳ ನಿಂಬೆಹಣ್ಣ ತಗಂಡು ಸಯ್
ನಿಂಬೆಹಣ್ಣು ಮಂತ್ರಿಸಿಬಿಟ್ಟಾನ ಸಯ್
ಮಣ್ಣುಗಾರೆ ಮಂತ್ರಿಸಿ ಸಯ್
ಮಣ್ಣು ತಗಂಡೆ ಉಗ್ಯಾನ
ಮಣ್ಣು ತಗಂಡೆ ಉಗ್ಯಾನ

ತಾವೆ ಮುಂದಕ ಮಾಡಿದಾ ನಿಂಬೆಹಣ್ಣು ತಗಂಡ ಇಟು ಮಣ್ಣಾ ತಗಂಡ, ಆಹಾ ಫಳ ಫಳ ಮಂತ್ರಿಸಿದ ಗಾಳೆಮ್ಮ ಅಂದಾ ಹೊಗದು ಬಿಟ್ಟಾ ಅವರು ಏನು ಮಾಡಿದರು ಮಬ್ಬು ಬಂದಾಂಗ ಆಯಿತವರಿಗೆ ಆಹಾ,

ಆಗ ಕಬ್ಬಿಣ ಮಡಿಕೆ ಒಡದಾರ ಹೊಲ್ದಾಗ ಇನ್ನ ಬಿದ್ದಾರ
ನೋಡಾರಣ್ಣೆ ಇಲ್ಲಣ್ಣಾ ಮಾತಾಡಕಬಾಯೆ ಇಲ್ಲಣ್ಣಾ
ಅವರೆ ದೋತರು ಉಟಕಂಡು ಅವರೆ ಬಂದೆವಣ್ಣಯ್ಯ
ಬಿಚ್ಚಕಂಡು ದೋತರು ಒದಿಕೆಂಡು ಹೊಲ್ದಾಗೆ ಮಕ್ಕಂಡರು
ಇವರು ಐದು ಮಂದಿ ಕಳ್ಳರು ಬಂದಾರ
ಕಬ್ಬಿಣ ಮಡಿಕೆ ಕಟ್ಯಾರ
ನಗಗಳ ಬಿಚ್ಚಿಕೆಂಡಾರ
ನಗಗಳು ಬೀಸಾಕ್ಯಾರೆ
ಮುಗದಾಣ ಹಿಡಿದು ಎಳಿತಾರ
ಎತ್ತುಗಳು ಒಡಕಂಡು ಬರ್ತಾರ
ಕರಣಿ ಕಲ್ಲಿಗೆ ಬಂದಾರ
ಅಗಸೆ ಕಾಯೋ ಕೇಶಣ್ಣಾ
ಅಗಸೆ ಮುಚ್ಚಿ ಬಿಟ್ಟಾನೆ

ಆಗ ಅಗಸಿ ಕಾಯೋ ಕೇಶಣ್ಣಾ ಅಗಸಿ ಮುಚ್ಚಿ ಬಿಟ್ಟಾನ ಹೊರಸು ಹಾಕ್ಯೊಂಡು ಮಕ್ಯಂಡಾನ ಎತ್ತುಗಳು ಬಂದುವು ನಿಂತ್ಕಂಡವು, ಅಗಸಿ ತೆಗದರಲ್ಲ ಹೋಗವು ಮುಚ್ಚಿಬಿಟ್ಟಾನ ಅವರ ಹೆಸರು ಯಾರಿಗೆ ಗೊತ್ತು ಅಗಸ ಕಾಯೋನೆ ಇರ್ತಾನಂತ ಸಿದ್ದಯ್ಯ ಕೈಯಾಗ ಇರ್ತಾನಲ್ಲ ಮಂತ್ರಿ ಗಿರಿಸಾಲಿ ಗಿರಿಮೂರ್ತಿ ಅವನಿಗೆ ಗೊತ್ತು, ಆಹಾ ಏನಂತಾನ,

ಅಪ್ಪಾ ಇನ್ನಾವದರೆ ಕೇಳಣ್ಣಾ
ಅಗಸೆ ಕಾಯೋಕೇಳಣ್ಣಾ
ಅಗಸೆ ತಲ್ಲಿಗೆ ಬರತೀವಿ
ನಾವು ಇನ್ನ ಮಾರವಾಡಿ ಸಂಬಳದಾಳ ವೈದಿವಿ
ಆಗ ಮಡಕಿ ಹೊಡಿಯಾಕ ಹೋಗಿದ್ದಿವಿ

ಮಡಕಿ ಒಡದು ನಾವು ಬಂದಿವಿ ಬದುಕಿಗೆ ಹೋಗಿದ್ದಿವಿ ಕೆಬ್ಬಣ ಮಡಕಿಗೆ ಬಂದೀವಿ ಆಗ ಅದೀಟು ಐದು ಎಕರೆ ಮುಗಿಸಿ ಬರಾಬೇಕಂತ ಮುಗಿಸಿ ಬಂದಿವಿ ಹೊತ್ತಾಗಿಯಾಳ ತಪ್ಪಿ ಬಂದಿವಿ ಆಗ ಅಗಸಿ ತಗೆಪ್ಪಾ ಅಂದರು, ಆಗ ಹೊರಸುಮ್ಯಾಲೆ ಮಕ್ಕಂಡೋನು ಅಗಸಿ ಕಾಯೋನು ಕೇಳ್ದಾ ಮಾರವಾಡಿ ಸಂಬಳದೋರು ಅಂದರೆ ಸಣ್ಣಗ ಮಾತಾಡ್ತಾರ ಸುದ್ದಿಬೇಸು ಐತೆಧ್ವನಿ ಇವರು ಕಳಬಡಿಯೋಕ್ವಾಣ ಹರಸದಂಗವ್ಯಾಹಾ ಅಂತಾರ,

ಇವರು ನಮ್ಮೋರು ಅಲ್ಲಾ ನೋಡವನೆ
ನಮ್ಮ ಊರಿದವರು ಅಲ್ಲಪಾ
ಯಾವೂರು ಬೇವೂರು ಐದಾರ

ಮಾರವಾಡಿ ಸಂಬಳದೋರೆ ಕಬ್ಬಿಣ ಮಡಕಿ ಒಡದೋರೆ ಇಷ್ಟತನಕ ಯಾವನು ಇರು ಅಂತಾ ಹೇಳ್ದ ಆಹಾ ಹೊತ್ತು ಮುಳುಗಿ ಮೂರು ಗಂಟೆಗೆ ಯಾವನು ಇರು ಅಂತಾ ಹೇಳ್ದಾ, ಆಹಾ ಎಲ್ಡು ಗಂಟೆ ನೋಡ್ದೆ ಮೂರು ಗಂಟೆಗೆ ಅಗಸಿ ಮುಚ್ಚಿದೆ, ಆಹಾ ಮುಚ್ಚಿದ ಅಗಸಿ ತೆರೆಯಂಗಿಲ್ಲ, ಆಹಾ ಹೊರಗೆ ನಿಂತಕಳ್ಳರಿ ಎತ್ತುಗಳು ನೀವು

ಈಗ ಕೋಳಿ ಕೂಗಿದಾಗ ತರೀತೀನಿ
ಬೆಳಕರಿದಾಗ ತೆರೀತೀನಿ
ಅಷ್ಟೊತನಕ ತೆರಂಗಿಲ್ಲರಾ

ಏ ಬೆಳಕು ಅರೆತನಕ ತೆರೆಂಗಿಲ್ಲಂತೆ ಬೆಳಕು ಅರೆದರೆ ನಮ್ಮಡಿಗೆ ತಯಾರಾಗತೈತೆ,

ಹೆಣ್ಣು ಗಂಡು ನಮ್ಮನ ನೋಡ್ತಾರ
ಎಪ್ಪೋ ನಮ್ಮ ಊರೋರರೆ ಅಲ್ಲಪ್ಪೊ
ಇವು ಏನು ಕಳ್ಳತನ ಮಾಡವರು
ರೌಡಿ ಮಾಡವರಿದ್ದಂಗೆ
ನಮ್ಮನ ಎಲ್ಲ ನೋಡ್ತಾರ ಇಡಕಂತಾರ
ಆಗ ಬಂದೆ ನೋಡಣ್ಣಾ
ಅಗಸಿ ಕಾಯೋಕೇಳಣ್ಣಾ

ನೋಡಪಾ ಗಾಳಿ ಬೀಸತೈತೆ ನಮ್ಮಿಗೆ ಅನ್ನ ಇಲ್ಲ, ಎತ್ತುಗಳಿಗೆ ಮೇವು ಇಲ್ಲ ಆಹಾ ನೋಡು ಕೆಬ್ಬಣ ಮಡಿಕೆ ಒಡೆದಿದ್ದು ದಣಕಂಡಾವ ಎತ್ತುಗಳು ನಾವು ದಣಕಂಡೀವಿ ಈಗ ನೀನು ಏನಂತಿಯಲ್ಲ ಬೆಳಕರೆಯೋ ತನಕ ಹೊರಗೆ ಇರತೀವಿ ನೋಡಪಾ ಮಾರವಾಡೇರು ಒಳ್ಳೇರು ಅಲ್ಲ ಈಗ ಅವರು ಕೈಯಾಗ ಹೇಳದ ಬದುಕು ಮಾಡೋದು, ಆಹಾ ನಾವು ಹೇಳ್ದ ಮಾತು ಅವರು ಕೇಳೋರು ನೋಡಿ ಎಂತವನ ಅಗಸಿ ಕಾಯಕ ಇಟ್ಟೀರಿ ನೀವು ಮಾರ‍್ವಾಡಿ ಶೇಠರವರು ಯಾಳ ತಪ್ಪಿ ಇಟು ಭೂಮಿ ಒಂದು ಕನ ಅಡ್ಡಾಲಿದ್ದರೆ ಪೂರಾ ಮುಗಿಸಿ ಬಿಡ್ತೀವಿ ಯಾಳ ತಪ್ಪಿ ಬಂದರೆ ಅಗಸ್ಯಾಕ ತರಿಬಾರ್ದು ಆತನು, ಆಹಾ ಎತ್ತುಗಳಿಗೆ ಮೇವಿಲ್ಲ ನಮಗೆ ಕೂಳಿಲ್ಲ ಬೆಳಕರೆಯೋ ತನಕ ಹೊರಗ ಇರು ಅಂತಾನ,

ಇಂತವನಲ್ಲಾ ನೋಡಯ್ಯ ಅಗಸೆ ಕಾಯಕ್ಯಾಕ ಇಟ್ಟೀಯಾ
ಅಂತ ಏಸಿಡಬೇಕು ನಿನ್ನ ನಾವು ತೆಗದಾಕತೀವಿ
ನಿನ್ನ ಸಂಬಳ ಇನ್ನವರ ಅಗಸಿ ಕಾಯೋದು ಬಿಡಸಿ ಬಿಡತೀವಿ

ನೋಡತೀಯಾ  ಈಗ ನಮ್ಮ ಮಾತ ಕೇಳ್ತಾರ ಹೌದಲೆ ನಿನ್ನಪ್ಪನೇನು ಗಂಟು ಹೋತಿತ್ತು,
ನನ್ನ ಕೈಯಾಗ ಇದ್ದೋರು ಯಾವಾಗ ತೆಗೆ ಅಂದರೆ ಅವಾಗ ತಗಿಬೇಕು, ಆಹಾ ನೀನು
ಎತ್ತುಗಳು ಕೊಲ್ಲಿಬಿಟ್ಟೆ ಮನುಷ್ಯರನಾ ಕೊಲ್ಲಿಬಿಟ್ಟೆ,

ಬಿಡು ಅಂತಾರ ನಿನ ಬಿಡಲಿಲ್ಲಂದರೆ ಆವಾಗ ಕೇಳು

ಖರೇವೆ ಇವರು ಹೇಳಿದರೇನೆ ಹೇಳೊರು ಅವರು ಕೈಯಾಗ ಇದ್ದೋರು ಇವರು ಮಾತು ಅವರು ಕೇಳ್ತಾರ ಅವರು ಮಾತು ಇವರು ಕೇಳ್ತಾರ ಅದವಾನ ಅತೈತೆ ಕುಂತ್ಕಂಡು ಉಂಬೋದು, ಆಹಾ ಇದು ಕಳಕಂಡರೆ ಏನತಾಸ ಈಗ ಬಿಡಂದರೆ ಮತ್ತಿನ್ನ ಬಿಸಲಿಗೆ ಗಾಳಿಗೆ ಹೋಗಬೇಕು, ಆಹಾ ಎಪ್ಪಾ ಈಗ ತೆರೆನ್ನ ತೆರೀತೀನಿ ಬರದೇವ್ರು ದೊಡ್ಡಿಗೋಗತಾಲಿ ತೆರೀತೀನಿ ಈ ದೊಡ್ಡ ಅಗಸಿ ತೆಗಿಯಾಕ ಬರಾದಿಲ್ಲ, ಆಹಾ ಹೆಣ್ಮಕ್ಕಳು ಗಣ್ಮಕ್ಕಳು ಚೊಮ್ಮತಗಂಡು ಹೊತಾರಲ್ಲ ಆಗ ಬನ್ನಿ,

ಅದು ಇನ್ನ ತೆರೀತೀನಿ
ದೊಡ್ಡಿ ಗೋಗತಲ್ಲಿ ತೆರೀತೀನಿ
ಇದು ಅಗಸಿ ತೆರೆಯಾಂಗಿಲ್ಲರಾ
ಎತ್ತುಗಳು ಹೊಡೆದು ಬಿಟ್ಟಾರ
ಅವು ಔಹಾರಿಬಿಟ್ಟಾವ
ಆದಾರಿಗೆ ಈದಾರಿಗೊಂದುರಾ
ದಾರಿಗೆ ಬಂದಾವೂ ಸಯ್
ಎತ್ತುಗಳು ಹಿಂದೇನೆ ಇವರು ಬಂದಾರಾ

ಜಿಗಿದು ಅವರು ಬಂದು ಕಳ್ಳರೆಲ್ಲ ತಗದು ಬಿಟ್ಟಾ ನೋಡರು ಇವ್ರ ಅಂಗಿ ಬಿಚ್ಚಿ ಕರೆನಿಕ್ಕರ, ಕರೆ ಅಂಗಿ, ಕರೆದೋತಿ ಅವ್ರು ಕರ್ರಗ ಐದಾರ ಅವ್ರ ಬಟ್ಟೆಗಳು ಕರ್ರಗ ಐದಾವ, ಅರೆರೆ ಎಲ್ಲನಾ ಕತ್ತೆಗಳು ಹೋದಂಗ ಕಲ್ಡಿಗಳು ಹೋದಂಗ ಹೋತಾರ,

ಲೇ ಇಷ್ಟತ್ತು ಯಾಕಿದ್ದಿರಿ ಹೇಳಲಾ
ಕಿಸಿಕ್ ಮಾತಾಡ ವಲ್ರಣ್ಣಾ
ನಮ್ಮ ಧ್ವನಿ ದಪ್ಪನಾಗಿ ಐತರಾ ಸಯ್
ಮಾತಾಡಿದರೆ ಕೂನ ಇಡಿತಾರ ಸಯ್
ಕಳ್ಳರು ಕಳ್ಳರು ಬರ್ರೆ ಅಂತಾನ ಸಯ್
ಎಲ್ಲರೂ ಕಲೇಬಿಳ್ತಾರ ಸಯ್
ನಮ್ಮನ್ನ ಇಡಕಂಡು ಬಿಡ್ತಾರ
ಅವರೆಲ್ಲ ಕಲೆಬಿದ್ದರಾ
ನಮ್ಮನ್ನ ಇಡಕಂಡು ಬಿಡ್ತಾರ
ಮಾತಾಡಿದ್ರೆ ಧ್ವನಿ ಕೂನ ಹಿಡಕಂತಾರ

ನಮ್ಮೋರಲ್ಲಿ ಬಂದ್ರೀರೋ ಕಳ್ಳರು ಬರ‍್ರೀ ಅಂತಾರ, ಆಹಾ ಎಲ್ಲರೂ ಬರ್ತಾರ ನಮ್ಮನ್ನ ಹಿಡಕಂಡು ಹೋತಾರ, ಆಹಾ ಬಗ್ಗಿ ಬಗ್ಗಿ ಎತ್ತುಗಳು ತಲ್ಲಿ ಬಗಲಾಗ ನಡೀತಾರ, ಆಹಾ ಇವೇನು ಕಳ್ದೆ ಪಚ್ಚೆ, ಇಂಗ ಹೋತಾವ ಎತ್ತುಗಳ ಬಗಲಾಗ ಲೇ ಸಂಬಳದಾಳು ಎಲ್ಲಿಗೆ ಹೋತಿರಲೇ ಲೇ ಇಷ್ಟೊತ್ತು ಎಲ್ಲಿದ್ದರಲೇ ಲೇ ಕತ್ತಲಾಗ ಮೊಖ ಕಾಣಿಕಿಲ್ಲ ಗಾಳಿಬೀಸತೈತೆ ಕಿಸಕ್ ಅನಾಕಿಲ್ಲ,

ಲೇ ಮಾತಾಡಂದ್ರೆ ನೋಡಾಲೆ ಸಯ್
ಒಬ್ಬನನ್ನ ಮತಾಡವಕ್ಕರುರಾ ಸಯ್
ಮನೆಗೆ ಹೋಗೆ ಹೋತೀನಿ ಸಯ್
ದೀಪ ಇನ್ನ ತರ್ತೀನಿ ಸಯ್
ನಿಮ್ಮ ಮೊಖಗಿಟ್ಟು ನಾನು ನೋಡ್ತೀನಿ
ಆಗ ಜ್ಯೋತಿ ತಂದು
ಈಗಂತ ಮನೆಗೆ ಓಡಿ ಬಂದಾನ ಸಯ್
ಓಡಿ ಬಂದು ಬಗ್ಗೆ ನೋಡ್ಯಾನ ಸಯ್
ಎತ್ತುಗಳು ಓಡಿಸಿ ಬಿಟ್ಟಾರ ಸಯ್
ಎತ್ತುಗಳು ಮನೆಗಳು ನೋಡರಾ

ಬರೆ ಸಿಲುಕಿ ಹಾಕಿ ಬಿಟ್ಟಾರ ಆಹಾ ಸಿಲುಕಿ ತೆಗೆದರು ಮನ್ಯಾಕ ಬಂದವು, ಆಹಾ ಮನ್ಯಾಕ ಬಂದ ಮ್ಯಾಲೆ ಎಲ್ಲಿನಿಂತ ಎತ್ತುಗಳು ಅಲ್ಲೆ ನಿಂತಾವ, ಆಹಾ ಅವು ಕಟ್ಟಿ ಆಕಿ ಅಭ್ಯಾಸ ಅಲ್ಲ, ಆಹಾ ಯಾ ಗೂಟತಲ್ಲಿ ಯಾ ಹಗ್ಗತಲ್ಲಿ ಅವು ನಿಂತಕಂಡಾವು ಆಹಾ,

ಹಗ್ಗ ಇಟ್ಟಿ ಬಿಟ್ಟಾರೊ
ಬಿಳಿಜೋಳ ಸೊಪ್ಪು ಹಾಕ್ಯಾರೆ
ನವಣೆ ಹೊಟ್ಟು ಹಾಕ್ಯಾರೆ

ಈಗ ನಾವು ಹೊರಗ ಕುಂದುರಬಾರದು ಆಗ ಗೋದ್ಲ್ಯಾಗ ಮಕ್ಕಂಬೋದು ನಮ್ಯಾಲೆ ಸಪ್ಪಾ ಅಕ್ಕಂಬೋರು ನಮ್ಯಾಲೆ ಮೈ ತಿರುತಾವ ಅವು,

ಯಾರು ನೋಡಂಗಿಲ್ಲರೆ
ಬೇಸು ಕಳ್ಳರು ಮನ್ಯಾಗ

ಮ್ಯಾಲೆ ಬೆನ್ನ ಮ್ಯಾಲೆ ಸೊಪ್ಪು ಆಕ್ಕಂಡರು ಗೋದ್ಲ್ಯಾಗ ಮಕ್ಕಂಡರು ಇವರು ಮ್ಯಾಲೆ ಮೈತಾವಪ್ಪಾ ಆಗ ಇವರು ಐದಾರ ಆತನ ದೀಪತರಬೇಕಂತ ಅಗಸಿ ಕಾಯೋ ಕೇಶಣ್ಣಾ,

ಬುಲ್ಡಿ ಅಚ್ಚಿ ಕೊಂಡಾನ
ಮನಿವೊರಗ ಬರೋವೊತ್ತಿಗೆ ಸಯ್
ದಾರೀಲಿ ಬಕ ಬಕ ಅಂತಾರ ಸಯ್
ಅವರಿನ್ನ ಹಾರಿ ಹೋತ್ಯೆತೊ
ಮತ್ತೆ ಮನ್ಯಾಗ ಬಂದಾರ
ಮತ್ತೆ ಬೆಂಕಿ ಹಚ್ಯಾರ ಸಯ್
ಮತ್ತೆ ಬಂದು ಬಿಟ್ಟಾನ ಸಯ್
ಅದು ದಗದಗ ಉರಿತಾದ ಸಯ್
ಗಕ್ಕನೆ ಆರಿ ಹೋಯಿತು
ಎಲ್ಡು ಸರಿತು ಹಾರಿ ಹೋಯಿತು ಮುರೆ ಸರಿತಿಗೆ ಬಟ್ಟೆ ಹೊಸರುಕಂಡು
ಬುಲ್ಡಿ ತಗಂಡು ಬಂದಾನ
ಆಗ ಇನ್ನ ದೊಡ್ಡೀಗೆ

ದೊಡ್ಡೀಗೆ ಬಂದರೆ ಯಾರೈದರಾ ಎತ್ತುಗಳು ಇಲ್ಲ ಯಾರಿಲ್ಲ ಆಗ ಎತ್ತುಗಳು ಮನಿಗೆ ಬಂದು ನೋಡಿದಾ ಪಾಪ ಎತ್ತುಗಳು ಅಟ್ಯಾಕಿ ಮೇಲಾಕಿ ಹೋಗಿಬಿಟ್ಟಾರ, ಆಹಾ ಏ ಅವರು ಸಂಬಳದೊರೆ ಬಿಡು ಅಂತಾ ದೊಡ್ಡಿಗೋಗ್ಗೋದು ಬಾಕಿಲು ಮುಚ್ಚಿದಾ ಬೀಗ ಹಾಕಿದ ಅಗಸಿಗೆ ಬಂದಾ ಹೊರಸಮ್ಯಾಲೆ ಮಂಚ ಅಕ್ಕಂಡು ಮಕ್ಕಂಡ ಇವ್ರು ತಾಸೊತ್ತು ಏನು ಮಾಡಿದರು ನಿದ್ರೆ ಮಾಡಿದರು ನಿದ್ರೆ ಮಾಡಿದರು ಲೇ ಮುಂಜಾಲೆದ್ರೆ ಬೆಳಗಾ ಮುಂಜೇಲೆ ಬರ್ತಾರ ಯಾರು ಸಂಬಳದೋರು ಹೆಂಡೆ ಬಳಿಯಾಕ ಸಗಣಿ ಬಳಿಯಾಕೆ ಗಾಯ ಗಂಟಿಲ್ಲ ಇನ್ನ ತೆಗಿಯಾಕ ಬರ್ತಾರ

ಇನ್ನ ಕೈ ಇಟ್ಟರೆ ನೋಡರಾ ಸಯ್
ನಾವು ಕಾಣೆ ಬರ್ತೀವಿ ಸಯ್
ಕಳ್ಳರು ಕಳ್ಳರೇನೆ ಅಂತಾರ ಸಯ್
ಬಾಕಿಲಿ ಮುಚ್ಚೆ ಬಿಡ್ತಾರ ಸಯ್
ಪುಕಸೆಟ್ಟೆ ಜಲ್ಮ ಹೋತೈತೊ

ಮತ್ತೆ ಎಂಗ ಮಾಡಾನಲೆ, ಆಹಾ ಏ ನಾವು ಊರಾಗ ಇರಬಾರದು ಊರು ಹೊರಗೆ ಇರಬೋದು ಅಂತಾ,

ದಿಗ ದಿಗ ಎದ್ದಾರ ಸಯ್
ಅಗ್ಗಗಳ ತಾಗಂದಾರ ಸಯ್
ಅವರೆ ಬಂದೆ ಬಿಟ್ಟಾರ ಸಯ್
ದೊಡ್ಡಿಗೋಗೊ ತಲ್ಲಿಗೆ ಬಂದಾರ ಸಯ್
ಸಿಮೆಂಟು ಗ್ವಾಡೆ ಮ್ಯಾಲಕಾ ಸಯ್

ಬಳೆ ಸೂರು ಇನ್ನ ಕಟ್ಟಾರ ಸುತ್ತಲೂನ್ನಿನ ಕಟ್ಯಾರ ಬಳೆಸೂರು ಇನ್ನ ಗಾಜಿಪುಡಿ ಕಟ್ಟಾರಪಾ, ಇಲಿಚಿ ಏರಾಕಿಲ್ಲ ಇಲಿಚಿ ಇಳಿಯಂಗಿಲ್ಲ, ಆಹಾ ಎಂಗ ಮಾಡಾನಲೇ ಗ್ವಾಡಿ ಏರಾಕಿಲ್ಲ ಮತ್ತೆ ಕಡ್ಡಿ ಬಾಕಿಲು ಕೂಡಾ ಏರಾಂಗಿಲ್ಲ, ಆಹಾ ಬಲ್ಲಿಗಳು ಬಾಕುಗಳು ಇದ್ದಗ ಐದಾವ ಮತ್ತೆ ಎಂಗ ಮಾಡಾನ ಲೇ ಮಂತ್ರಾಳ ಮಾದೇವಿ ಈ ಹಗ್ಗಕ್ಕೆ ಮಂತ್ರಕಟ್ಟಿ ಹೊಗದು ಬಿಡು ಅದು ಅಂಗೆ ಇಡಬೇಕು ಗೊಡೇನಾ,

ಹಗ್ಗ ಇಡಕಂಡು ಏರ್ಯಾನ
ಕಡೆ ಕುಪ್ಪಳಸಿ ಹಾರ್ಯಾನ
ಅಂಗವಾಗಲೆ ಅಂದಾನ
ಅವನು ಏನು ಮಂತ್ರದಿಂದರಾ ಸಯ್
ಗಾಳಿಕಾಲಲಿನಡಿಸ್ಯಾನು ಸಯ್
ಫಳಫಳ ಫಳಂತ ಬಿಸಕ್ಯಾನ ಸಯ್
ಹಗ್ಗಗ್ವಾಡಿಗೆ ಒಗದಾನ ಸಯ್
ಆಗೆ ಹಗ್ಗ ಇಳಿದೈತೊ ಸಯ್
ಹಗ್ಗ ಇಡಕಂಡು ಏರಿದಾರೆ ಸಯ್
ಇಲಿಸಿ ಏರಿದಂಗೆ ಏರ್ಯಾರ ಸಯ್
ಕೋತಿ ಏರಿದಂಗೆ ಏರ್ಯಾರ
ಇಲಿಸಿ ಏರಿದಂಗೆ ಏರ್ಯಾರ ಸಯ್
ಕೋತಿ ಏರಿದಂಗೆ ಏರ್ಯಾರ
ಅವರು ಹಗ್ಗ ಹಿಡಕಂಡು ನೋಡ್ತಾರ ಸಯ್
ಕಡೆ ಆಚೆ ಗ್ವಾಡಿಗೆ
ಕುಪ್ಪ ಕುಪ್ಪಾಳಾಸಿ ಬಿಟ್ಟಾರೆ

ಎಗರಿ ಬಿಟ್ಟರಪ್ಪಾ ಎಗರಿ ಏನು ಮಾಡಿದರು ಅಲ್ಲಿ ತಿಪ್ಪಿ ಕುಣಿದರು ಕುದ್ರಿ ಏತಿದೆಲ್ಲಾ ಗೊಬ್ಬರಾಕ್ಯಾರ ಒಂದು ಎಲ್ಡು ಲಾರೆಷ್ಟು, ಬಿದೈತಪಾ, ಆಹಾ ಬರೇ ಕುದ್ರಿ ಗೊಬ್ಬರ ಎತ್ತುಗಳ ಗೊಬ್ಬರ ಆ ಗೊಬ್ಬರ ಮ್ಯಾಲೆ ತಪ್ಪೆ ಮ್ಯಾಲೆ ಏನು ಬೆಳೆದೈತೆ ಅಂದರೆ,

ಕುಂಬಳಕಾಯಿ ಬಳ್ಳಿ ಅತೈತೊ
ಆಗೆ ಬಂದು ಬಿಟೈತೊ
ಬಂದೆ ಬೇಲೆ ನೋಡರಾ ಸಯ್

ಮರ ಅಡ್ಡಾಲಿವೈದಾವಾ ಬಂದೆ ಬೇಲಿ ನೋಡರಾ ಲೇ ಎಲ್ಲ ಗಂಡಸರು ಹೆಂಗಸರು ಇದೇ ದಾರಿಗೆ ದೊಡ್ಡಿಗೆ ಹೋಗೋದು ಬಲಕ್ಕೊ ಹೆಂಗಸರು ಕೊಡ್ತಾರ ಹೆಡಕ್ಕೆ ದೊಡ್ಡೋರು ಗಂಡಸರು ಕೂಡ್ತಾರ ಆಹಾ,

ಇಲ್ಲೆ ಸಿಗಬೇಕು ನನ ಮಗನೆ
ಹೆಣ್ಣು ಗಂಡು ಆಗಲೀ
ಗುಡ್ಯಾಗಲಿದ್ದ ಬರ್ತಾರ

ಇಲ್ಲಿ ಕುತ್ತಿಗೆ ಕೊಯಾಕ ಬೇಸು ಇರ್ತೈತೆ ಅಂತಏನ ಮಾಡಿದರು ತಿಪ್ಪೆ ಕುಣಿಯಾಗ, ಆಹಾ ಕುಣಿ ತೋಡಿಕೊಂಡರಪ್ಪಾ ಒಬ್ಬೊಬ್ಬರು ಕುತ್ತಿಗಿ ಮಟ ಕುಣಿ ತೋಡಿಕೊಂಡು ಆಗ ಕುಣ್ಯಾಕ ಕುಂತ್ಕಂಡರು, ಆಹಾ ಮ್ಯಾಲಕುಂಬಳಕಾಯಿ ಬಳ್ಳಿ ಮುಚ್ಚಿಕಂಡರು, ಆಹಾ ಮುಚ್ಚಿಕಂಡರೆ ಆ ತಿಪ್ಪೆ ಕುಣ್ಯಾಗ ಆ ಹೆಂಡೆ ಹುಳಾ ಎಷ್ಟು, ದಪ್ಪ ಐದಾವ,

ಒಂದೊಂದಾದರೆ ನೋಡಣ್ಣಾ ಕೈದಪ್ಪಾ ವೈದಾವೆ
ಮುಗುಳಿಗಿಟ್ಟ ನೋಡಣ್ಣಾ ಚಟಕ್ ನಂಗೆ ಕಡೀತಾವೆ
ಅರ್ಧ ಮುಗಳಿ ಕಡೀತಾವ ಕಂಡ ಕಂಡ ಇಳಿತಾವೆ
ಕಂಡಕಂಡ ಇಳಿತಾವೆ ಅವರನಾಗಿ ಕಡಿತಾವೆ
ಅಬ್ಬಬ್ಬಾ ನೋಡಲೇ ಕರಣಿ ಕಲ್ಲು ಇನ್ನ ಹೆಂತೆ ಗೊಬ್ಬರದಾಗ ಇಷ್ಟಪವರ್ ಐತೆ
ನಮ್ಯಾಲೆ ಇಷ್ಟು ಇಸಾಲೆ ರಕ್ತರಕ್ತಾನ ಇಳಿತಾವ
ಹುಳಗಿಟ್ಟು ಪವರು ಐದಾರ ಸಯ್
ಅವರು ಗಿಟ್ಟು ಪವರು ಇರ್ತಾರ
ಗೊಬ್ಬರುದಾಗ ನೋಡರಾ ಸಯ್
ಬರೆ ಚೋಳೇನೆ ಐದಾವ ಸಯ್
ಏಟು ದಪ್ಪನೆ ಅಣ್ಣಯ್ಯ ಸಯ್
ಇನ್ನವಾದರೆ ನೋಡರಾ ಸಯ್
ಇನ್ನ ಚೇಳು ಕಡಿದರೆ ಸಯ್

ಇಸಾ ಏರಿದಂಗ ಆಗ್ತೈತೆ ಇನ್ನ ಚೇಳು ಐದಾವೆ ಕರೆ ಚೇಳು ನೋಡಣ್ಣಾ ಆಗ ಕರೆ ಚೇಳು ನೋಡಪಾ ಏಟು ದಪ್ಪ ಐದಾವ, ಆಹಾ ಚೇಳು ಕಡಿದರೆ ಮನಿಷಾರು ಎಚ್ಚಾರಕಿ ಇಲ್ಲದಂಗೆ ಬಾರ‍್ಲು ಬಿದ್ದು ಬಿಡ್ತಾರ ಏ ಅವು ಇಸ ಏರ್ದಂಗ ಆಗ್ತೈತೆ ಲೇ ಚೇಳಿಗೆ ಎಷ್ಟು ಇಸ ಐತಲೇ ನಮ್ಮಮ್ಯಾಲೆ ಲೇ ಆ ಹುಡುಗರು ಎಷ್ಟು ಇಸ ಇರಬೋದು, ಆಹಾ ಕಕ್ಕನ ಮ್ಯಾಲೆ ಅಂತೇಳಿ ಕಳ್ಳರು ಮಾತಾಡಿದರು ಲೇ ಇಲ್ಲಿದ್ದರೆ ತಿಪ್ಪೆ ಕುಣ್ಯಾಗ ಮೂರು ದಿನಕೆ ಸತ್ತು ಹೋತಿವಿ, ಆಹಾ ಎಂಗ ಮಾಡನಲೆ ಬೇಸಲ್ಲ ಜಾಗ ನಡಿರಿ ಹೋಗಾನ ದಿಗಿ ದಿಗಿ ಅಂತಾ ಮ್ಯಾಕ ಎದ್ದು ಬಿಟ್ಟರು ಎದ್ದು ಎಡಕ್ಕೆ ಏನೈತೆ ನಿಂಬೆವನಪ್ಪ ಬಾಳೆವನಪ್ಪ ತೆಂಗಿನವನಪ್ಪ ಹಾಕ್ಕಾರಪಾ ತೋಟ ಹಾಕ್ಯಾರ ಹತ್ತು ಎಕರೆಪಾ, ಆಹಾ ಯಾರು ಮಾರವಾಡೇರು ತೋಟ ಹಾಕಿದರೆ ನಿಂಬೆಹಣ್ಣು ಅರಕಂಡು ತಿಂದರು, ಆಹಾ ಆಗ ದ್ರಾಕ್ಷಿ ಬಳ್ಳಿ ಅಡೇಲಿ ತೂರಿಕಂಡರು ಗಿಡದಾಗ ಲೇ ನಾಳೆ ಅಯಿತಾರ ಸಂತೆ

ಹಣ್ಣು ಅರಿಯಾಕ ಬರ್ತಾರ
ಬ್ಯಾಕಳ ಕಟ್ಟಿಗೆ ಇಡಿತಾರ
ಬ್ಯಾಕಳ ಕಟ್ಟಿಗೆ ರಾಗಲ ಕಟ್ಟಿಗೆ ತಗಂತಾರ
ಬಳ್ಳಿ ಇಟ್ಟು ಮ್ಯಾಕ ಎತ್ತುತಾರ
ಕಳ್ಳರು ಐದಾರ ಅಂತಾರ
ಅಂಗೆ ಕುತ್ತಿಗೆ ಕೊಯಿತಾರ
ಪುಗಡಟ್ಟೆಗೆ ನಾವು ಸಾಯಿತೀವಿ
ಪುಗಸಟ್ಟಿಗೆ ಜಲ್ಮ ಬಿಡತೀವಿ

ಆದರೆ ಅವ್ರಗಿನ ಮುಂಚೇಲಿ ನಾವೆ ಸಾಯಿತೀ ಎಂಗ ಮಾಡನಲೇ ಲೇ ಇಲ್ಲಿ ಬೇಲಿ ಕಡದು ಹಾಕ್ಯಾರ ಒಬ್ಬೊಬ್ಬರು ಬಣಯಷ್ಟು ಹಾಕಿದಂಗ ಹಕ್ಯಾರ, ಆಹಾ ಏಟು ಬಡಿಯಾಕ ತ್ವಾಟ ಆಗ ಬೇಲ್ಯಾಗ ತೂರಿಕಂಡು ಇರಾನ ಬೇಲ್ಯಾಗ ತೂರಿಕಂಡರು ಲೇ ಮುಂಜಾಲೆ ಆಯಿತ್ತಾರ ಬರ್ತಾರ ಎಂತ ಏನಲೇ ನೀನು ಸಂಬಳದೋರು ಬೇಲಿ ಬಡರಿಪ್ಪಾ ಹೊಲ ಸುತ್ತಾ ತೋಟ ಸುತ್ತಾ ದನಗಳು ಹೋತಾವ ಅಂತಾರ ಆಗ ಬೇಲಿ ಎತ್ತಿದಾಗ ನಾವು ಕಂಡರೆ,

ಅಂಗ ಬೇಲಿ ಇಡ್ತಾರ
ಅಂಗೆ ಬೆಂಕಿ ಅಚ್ತಾರ
ಪುಗಸಟ್ಟಿಗೆ ಸತ್ತೆ ಹೋತೀವಿ
ನಾವೇ ಸತ್ತೆ ಹೋತೀವಿ

ಲೇ ಬೇಸಲ್ಲಲೇ ಅಲ್ಲಿಗೆ ಹೋಗಾನ ಎಂಗ ಮಾಡಾನಲೇ ಎಂಗಲೇ ಪುಗಸೆಟ್ಟಿಗೆ ಸಾಯಿತಿವಿ ಅಂಗಲ್ಲಾ ಚೇಳು ಕಡದಾಗ ರೊಟ್ಟಿ ಕಡಿದೀವಿ ಗೋದಿರೊಟ್ಟೆ, ಆಹಾ ನಾವು ಗೋದಿ ರೊಟ್ಟಿ ಕಟ್ಟಿಕೊಂಡು ಬುತ್ತಿ ಮಾಡಿಕೊಂಡು ಬಂದೀವಿ ಐದು ದಿವಸಕ ಆಹಾ,

ಈಗ ಹುಳಕಡಿದಾಗ ಗಾಂಜಿ ತಂಬಾಕ ಸೇದಾರಿ
ನಿಶಾಮ್ಯಾಲೆ ಇಸ ಇಳಿದು ಹೋತೈತೆ
ಎಂಗದರೆ ಇನಾರ ಐದು ದಿವಸ ನಾವು ಇರೋಣ
ಎಂಗನ್ನ ಕಾಲ ಕಳೆಯೋಣ
ಐದು ದಿವಸ ಇರೋಣ
ನಮ್ಮಿಗೆ ಸಾಧ್ಯವಾಗದಿಲ್ಲಪ್ಪೊ

ನಾಲರು ಕಳ್ಳರು ಅಣ್ಣ ತಮ್ಮರು ನಮ್ಮಿಗೆ ಸಾಧ್ಯವಾಗದಿಲ್ಲಪ್ಪೊ ಅಂದ್ರು ಈ ಸಿದ್ದೋಗಿ ಕೈಯಾಗ ಇರೋನು ಮಂತ್ರಿ ಅವನಿಗೆನ್ನ ಅಡ್ಡ ಹುಟ್ಟಿದೋನು ಇವನು ಇತನಿಗೆನ್ನ ಅಡ್ಡ ಹುಟ್ಟಿದೋನು ಅವನು, ಆಹಾ ಗಿರಿಸಾಲಿ ಗಿರಿಮೋಲೆ ಲೇ ನನ್ನ ಮಾತು ಕೇಳಿದರೆ ಬೇಸಾಯಿತು, ಆಹಾ ಆತು ಏನಂತಾನ ಕೈಕಾಲು ಮುರೀತಿನಿ ಅಂದಾನ, ಆಹಾ ನೀನು ತೋರಿಸು ಬೇಕು ನೀನು ಬೇಸು ಅವರನ ನೋಡಿಕೊಂಡು ಬರಬೇಕು ಅಂತಾ ಕಳಿಸ್ಯಾನ, ಆಹಾ ನಾನೆನಿಲ್ಲ ಮೂವರು ಸಿಕ್ಕಿದರಪಾ ಕೈ ಮುಗಿದಿದ್ದಕ್ಕೆ ಎಲ್ಡು ಸಾವಿರ ಕೊಟ್ಟಿದ್ದಕ್ಕೆ ಲಂಚ ತಂದು ಬಿಟ್ಟು ಬಂದರು ಅಂತಾ ಹೇಳತೀನಿ ನಾನು, ಆಹಾ ಲೇ ಇವನು ಆಳಾಗಿ ಹೋಗ ಬರ್ತಾ ಬರ್ತಾ ಬೆಕ್ಕು ಬಗಲಾಗ ಇಟ್ಟುಕಂಡು ಬಂದಂಗಾತು, ಆಹಾ ಇವನು ಕರಕಂಡು ಬಂದಿವಿ ಇವ್ನೆ ಬಿಟ್ಟು ಬಂದಿದ್ದರೆ ನಾವು ನಾಲಾರು ಅಣ್ಣಾ ತಮ್ಮರು ಬಂದಿದ್ದರೆ

ಹಳ್ಳದಾಗ ಕುಂದರತಿದ್ವೀ ನಾವೇ ಹೋಗುತ್ತಿದ್ದೀವಿ
ಸಿಗಲಿಲ್ಲಂದರೆ ನೋಡಪಾ ನಮಗೇನು ಮಾಡ್ತಾನ ಸಿದ್ದೋಗಿ
ಇವನು ಕರೆಕಳಿಸ್ಯಾನಾ ವಾರಾ ಇವನ ಅಡ್ಡ ಕಳಿಸ್ಯಾನ

ನಮ್ಮಗೇನು ಗಾಚಾರ ಬಂತು ಇವನ ಕರಕಂಡು ಬಂದೀವಿ ಅಂತಾ ಎಂಗಲೇ ಗಿರಿಸಾಲಿ ಗಿರಿಮೋಲೆ ಎಂಗನಾ ಮಾಡಪಾ ನೋಡು ಚೇಳು ಕಡ್ದಾಗ ರೊಟ್ಟಿ ಕೊಟ್ಟೆ ಹುಳ ಕಡ್ದಾಗ ಗಾಂಜಿ ತಂಬಾಕ ಸೇದಿದಿ, ಆಹಾ ಮೀಸೆ ಮ್ಯಾಲೆ ಅಂಗೆ ಇರ್ತೈತೆ ಆ ರೊಕ್ಕ ಇಳಿದೊ ಹೋತೈತೊ ನಿಶೆ ಏರಿ ಬರ್ತೈತೊ ಸರಿಬಿಡು ಅಂತಾ ಕುಂಬಳಕಾಯಿ ಇನ್ನವರ ಬಳ್ಳಿ ಮುಚ್ಚಿಕಂಡು ತಿಪ್ಪೆ ಕುಣ್ಯಾಕ ಕಾಯಿತಾರಪಾ, ಆಹಾ ಅವರು ಬಂದರು ಕಾಯಾಕ ನಿಂತರು, ಆಹಾ ಈ ದೇವ್ರು ಯಾವಾಗ ವರವು ಕೇಳ್ತಾನೊ ಈ ಕಳ್ಳರಿಗೆ ಅವ್ರು ಮನೆ ದೇವ್ರು ಖಂಡೇರಾಯ ಈತನ ಎಂಗ ಇನ್ನ ಹುಟ್ಟಿ ಬರ್ತೈತೆಪಾ ಐಲು ಎಬ್ಬಿಸ್ಯಾನ ಕುಂತವಲ್ಲಿ ಕುಂದರಗೊಡಿಸುವಲ್ಲೇ ದೇವರು,

ಎಪ್ಪಾ ನಿಂತತಲ್ಲಿ ನಿಂದರು ಗೊಡಿಸುವಲ್ಲೆ
ಕುಂದರತಲ್ಲಿ ಕುಂದರ ಗೊಡಿಸುವಲ್ಲ
ನಿಂತತಲ್ಲಿ ನಿಂದರ ಗೊಡಿಸುವಲ್ಲ
ಇಬ್ಬರು ಅಣ್ಣಾ ತಮ್ಮರೆ
ಏನಂತಾ ದುಃಖ ಹೋತಾರ
ರಾಮ ಸೋಮಯ್ಯ ನೋಡಾರ
ಎಪ್ಪಾ ನೀವು ಕೈಯಿಗೆ ಬಂದೀರೊ
ನಾನೆ ಮದಿವಿ ಮಾಡ್ತೀನೇ
ಮಾಡಬೇಕಂತ ನಾನು ಇದ್ನೆಪಾ
ನಾಳೆ ಇಷ್ಟೊತ್ತಿಗೆಂತಪ್ಪಾ
ನಿಮ್ಮನ ನೋಡತೀನೊ ಇಲ್ಲಪ್ಪಾ
ಕೇಳು ತಮ್ಮ ಬೇಸು ಐದಿ
ಅಬಬಾ ಏನು ನಮ್ಮಣ್ಣಾ ಇಂಗಾ ಮಾತಾಡ್ತಾನಾ ಆಹಾ
ಏನಣ್ಣಾ ಹುಚ್ಚೆ ನಿನಗೆ ಬಂದೈತೆ
ಐಲಾ ನಿನಗೆ ಬಂದೈತಾ
ಇಬ್ಬರಿಗಾನ ದೊಡ್ಡೋನಾಪಾ
ನಿನಗೆ ಬಿಟ್ಟು ಅಣ್ಣಾಯ್ಯ

ಅಣ್ಣಾ ನಿನ್ನ ಬಿಟ್ಟು ನಾವು ಎತ್ತಗ ಹೋತೀವಿ ನಮ್ಮನ ಬಿಟ್ಟು ನೀನು ಎತ್ತಗ ಹೋತೀಯಾ, ಆಹಾ ಅಂಗ ಅಲ್ಲಪಾ ಈಗ ಹೇಳತೀನಿ ಕೇಳು ಅಣ್ಣಾ ಊರಾಗ ಇದ್ದರೆ ನಿಮ್ಮ ಅಣ್ಣಾ ಐದಾನಪಾ ಅಂತಾರ, ಆಹಾ ಐದಾನಪಾ ಅಂತೀಯ ಎಲ್ಲಿಗೆನಾ ಹೋಗಿದ್ದರೆ ಏನಂತೀಯಾ ಹೋಗ್ಯಾನಪಾ ನಮ್ಮಣ್ಣಾ ಅಂತೀಯಾ ಹೋದಂಗಲ್ಲೇನು ನಮ್ಮ ತಮ್ಮ ಇದ್ದಾಂಗಲ್ಲಾ ನಮ್ಮ ತಮ್ಮ ಅರೆರೆರೆ ಊರಿಗೆ ಹೋಗಿದ್ದರೆ ಹೋಗ್ಯಾನಪಾ ಅಂತೀವಿ ಅಂಗಾರೆ ಹೋದಂಗೇನು.