ಎಂತಹ ದಡ್ಡೋನು ದೊಡ್ಡೊಣ್ಣಾ
ಎಂತಹ ಮಾತ ನುಡಿದಿ ಅಣ್ಣಯ್ಯೊ
ಕೇಳಲೊ ತಮ್ಮನವರಾಗಿ
ಸುತ್ತ ಪಾರ್ಟಿ ಐದಾರ ಸಯ್
ತಂದೆ ಕೂಡ ನಮ್ಮಿಗೆ ಒಯ್ಯಿದಾರ ಸಯ್
ಬಾಳ ಉಶಾರು ತಮ್ಮನೋರ
ಬಾ ಉಶಾರು ತಮ್ಮನೊರ

ಅಪ್ಪಾಮ್ಮ ತಂದೆ ಅಂತೋನು ಪಾರ್ಟಿ ಆಗಿಬಿಟ್ಟಾನ, ಆಹಾ ಎದುರು ಆಗಿ ಬಿಟ್ಟಾನ, ಆಹಾ ನಮ್ಮ ಆಸ್ತಿ ಹೊಯ್ದು ನಮ್ಮ ಮ್ಯಾಲೆ ಎದುರಾಗಿ ಬಿಟ್ಟಾನ ಈಗ ಹೊಸಾದ ಸಾವಿರ ಲಕ್ಷ ಮನಿಗಳು ಕಟ್ಟೀವಿ, ಆಹಾ ಏಳು ಸುತ್ತ ಅಗಸಿ ಕಟ್ಟೀವಿ, ಆಹಾ ಮೂರು ನಾಯಿಗಳು ಕರಕಂಡು,

ಬಾಳ ಉಶಾರ ಮ್ಯಾಲೆ ಇರಬೇಕು
ಎಲ್ಡು ಸುತ್ತ ನೀವು ತಿರುಗಬೇಕು

ಯಾಕಣ್ಣಾ ಹೊಸೋರು ಯಾರನ್ನ ಬಂದಿರ್ತಾರ ಕಳ್ಳರು ಪಳ್ಳರನ ಕಳಿಸರ್ತಾನ ನೋಡ್ರಪ್ಪಾ ಊರು ಸುತ್ತ ನೀವು ತಿರುಗಬೇಕು ಸರುವೊತ್ತನಾಗ ಹೊತ್ತು ಮುಳುಗಿ ನಾಕು ಗಂಟೆ ಆಗ ಆರು ಗಂಟೆದಾಗ ತಿರುಗಬೇಕು ಅಂದಾ ಯಕಣ್ಣಾ ಇಲ್ಲ ಒಳ್ಳೇದಪ್ಪಾ ನಾವು ಕಾಯಿಕಂಡು ನಾವು ಹುಶಾರ ಮ್ಯಾಲೆ ಇರಬೇಕು ಅಂದಾ ಅಷ್ಟೆ ಆಗಲಿ ಬಿಡಣ್ಣಾ, ನೋಡಪಾ ತಮ್ಮನೋರೆ ಗೊಲ್ಲರು ನಾರಣಮ್ಮ ಅಡವಿ ಕಾಯೋ ಗೊಲ್ಲರ ತಲ್ಲಿ ಏಳು ಕೊಡಪಾನ ರೊಕ್ಕ ತಂದೀವಿ ಅವಾಗ ಬಡ್ಡಿ ಇಲ್ದಂಗ ಗಂಟು ಅರ್ಧ ಲಕ್ಷ ಕೊಟ್ಟೀವಿ, ಆಹಾ ಏನಪಾ ಮತ್ತೆ ಇವಾಗ ಉಸುಲು ಮಾಡಿ ಕಟ್ಟಾನಪಾ, ಆಹಾ ಸರೆ ಬಿಡಣ್ಣಾ ಇದ್ದೋರು ಐದಾರ ಇಲ್ದೋರು ಐದಾರ ಅಂದಾ ಪಾಪ ಅವರು ಬಂದು ಈಗ ನಾಕು ವರುಷ ಆಗೈತೆ ನಾಕು ವರುಷಾಗಿದ್ದು ಬೀಳಾಗ, ಆಹಾ ನಾವು ಮನಿಗಳು ಕಟ್ಟಿಕಂಡೀವಿ ಈಗ ಉಟ್ಟಿದ್ದ ಬಟ್ಟೆ ಆಗಲಿಲ್ಲ ತಿಂದಿದ್ದ ಅನ್ನ ಮೈಗೆ ಅತ್ತಿಲ್ಲ ಅವ್ರು ಹೊಲಗಳು ಬೆಳೆದಿಲ್ಲ ಮನಿಬಾಡಿಗೆ ಹೊಲಗುತ್ತ ಕೊಡು ಅಂದರೆ ಎಲ್ಲಿಂದ ಕೊಡ್ತಾರಣ್ಣಾ ಎಲ್ಲಿಂದ ಕೊಡ್ತಾರಣ್ಣಾ ನಾವು ಸಾಯೋತನಕ ಕೇಳದಿಲ್ಲ ಅಂದೀವಿ, ಆಹಾ ಇವಾಗ ಕೇಳಾಕ ಹೋದರೆ ಎಂಗಣ್ಣಾ ನೊಡಪಾ ಅವ್ರು ತಿಳಿಕೊಂಡು ಕೊಡಲಿ ತಗ ಅಂತಾ ಕೊಟ್ಟಿದ್ದು ತಗೊ ಇಲ್ಲ ಅಂದಿದ್ದು ಸುಮ್ಮನೆ ಬಿಡಣ್ಣಾ ಅಂದ ಸರೆ ಬಿಡು ತಮ್ಮಂದಿರಾ ಆಗ ಅಣ್ಣಾ ಬಂದಾ, ಆಹಾ ಆಗ ರಾಜ ಸೋಮಯ್ಯ ಬಂದು ಏನಂತಾನ,

ಊರಾಗ ಬಡವರು ಕೇಳಾರೆ
ನಮ್ಮ ಮನಿಗೋಳಾಗ ಇರೋರು
ಇನ್ನ ಬಾಡಿಗೆ ಕಟ್ಟೀರಿ

ಹೆಣ್ಣೂ ಗಂಡು ಕೇಳ್ರಪ್ಪಾ ನಿಮಗೆ ತಿಳಿದೋಟು ಮನಿಬಾಡಿಗೆ ಕಟ್ಟಬೇಕು ಆಗ ಹೊಲಗುತ್ತಾ ಕಟ್ಟಬೇಕಂದಾ, ಆಹಾ ನೋಡಿರಿ ಇದ್ದೋರು ಕಟ್ಟುತೀವಿ ಇಲ್ಲದೋರು ಏನು ಕಟ್ಟಾನರಿ ಅಂದಾ ನೋಡಮ್ಮಾ ನಾನು ಪುಕಸಾಟೆಗೆ ಕಟ್ಟಿಲ್ಲ ಗೊಲ್ಲರು ಅಡವಿ ಕಾಯೋ ಗೊಲ್ಲರ ತಲ್ಲಿ ಆ ಮುದಾಕಿ ಎಲ್ಲ ಕಲೆ ಇಟ್ಟಿದ್ದು ರೊಕ್ಕ ತಂದು ಆಯಮ್ಮನ ರೊಕ್ಕ ರೊಕ್ಕದ ಮ್ಯಾಲೆ ಸಾವಿರ ಲಕ್ಷ ಮನಿಗಳು ಕಟ್ಟಿದ್ದೀವಿ, ಆಹಾ ಮನಿಗಳು ಐದಿರಮ್ಮಾ ಇಗೋ,

ಕನ್ನಡಿ ಮನಿಗೆ ನೋಡಮ್ಮ ಎಂಟಾಣಗಿ ಕೊಡ್ರಮ್ಮ
ಹೆಂಚಿನ ಮನಿಗೆ ನೋಡಮ್ಮ ಮೂರು ಪಾವಲಿ ಕೊಡ್ರಮ್ಮಾ
ಕೊಲ್ಲಿನ ಮನಿಗೆ ನೋಡಮ್ಮ ಆರಾಣಿ ನೀವು ಕೊಡ್ರಮ್ಮಾ
ಬಣ್ಣದ ಮನಿಗೆ ನೋಡ್ರಮ್ಮ ಪಾವಲಿ ನೀವೆ ಕೊಡ್ರಮ್ಮಾ
ಅಕ್ಕರೆಯಿಂದ ನೀವು ಕೊಡ್ರಮ್ಮಾ
ಏಕರೆ ರೂಪಾಯಿ ಕೊಡ್ರಮ್ಮಾ

ಅಂಬೊತ್ತಿಗೆ ಇದ್ದೋರು ಕೊಡ್ತಾರ ಇಲ್ದೋರು ಇಲ್ಲ ಅಂದಾರ ನ್ಯಾಯದಲ್ಲಿ ಎತ್ತಿಬಿಟ್ಟಾನ ಎಂತ್ತಿಂದೆ ಅರ್ಧಕೊಪ್ಪರ ಅಸ್ತಿ ಬಂದೈತೊ ಅರ್ಧಕೊಡಪಾನ ರೊಕ್ಕ ಬಂದೈತೊ ನೋಡದಾ ಅಲೆಲೆಲೆ ಅರ್ಧ ಅರ್ಧ ಕಟ್ಟಿಕಂಡಿದ್ದರೆ ಸುಮ್ಮನಿರ್ತರಾ ಗೊಲ್ಲರಾಗಿ ಬೇಸಲ್ಲಾ ಒಂದು ಕೊಪ್ಪರನ ತೀರಸಬೇಕು, ಆಹಾ ಇ ಇಂಗಾದರೆ ಅಲ್ಲಾ ಇವ್ರನ ಬಡಿದರೆ ರೊಕ್ಕ ಉಸುಲು ಅತೈತೆ ಅಂದಾ ಎಲ್ಲರೂ ಇಲ್ಲ ಇಲ್ಲ ಅಂತಾರ ಯಾರನ ಒಬ್ಬರು ಕೊಡ್ತಾರಪಾ ಕುದ್ರಿ ಒಡಿಯೋ ಬಾರ್ಕೋಲು ತಗಂಡಾ ಆಗ ಏಣು ಮಾಡ್ದ,

ಈಗ ಓಣ್ಯಾಕ ಬರ್ತಾನ ಸಯ್
ಕನ್ನಡಿ ಮನಿಗೆ ನೋಡಾರ ಸಯ್
ರೂಪಾಯಿ ಕೊಡಬೇಕು ನೀವುರಾ ಸಯ್
ಕೊಲ್ಲುಮನಿಗೆ ಎಂಟಾಣಿರಾ ಸಯ್
ಹೆಂಚಿನ ಮನಿಗೆ ನೀವುರಾ ಸಯ್
ಮೂರು ಪಾವಲಿ ನೀವು ಕೊಡಬೇಕು ಸಯ್
ಕೊಟ್ಟರೆ ಒಳ್ಳೇದು ನೋಡುರಾ ಸಯ್
ಕೊಡ್ಲಿಲ್ಲ ಅಂದರೆ ನೋಡರಾ ಸಯ್
ಮನಿಯೊಳಗ ನೀವು ಬಂದಾರಾ ಸಯ್

ಮನಿಬೀಗ ಹಾಕಿ ಹೋತಿನಿ ಮನಿ ಹೊರಗ ಹೊಂಟರೆ ಮನಿಗೆ ಬೀಗ ಹಾಕತೀನಿ ಸ್ವಾಮಿ ಇದ್ದೋರು ಕೊಡ್ತೀವಿ ಮಾರ‍್ವಾಡಿ ಶೇಠದೋನೆ ಇಲ್ಲದೋರು ನಾವು ಏನು ಕೊಡಾನಪಾ ರಾಜ ಸೋಮ

ಏನಿಮ್ಮಪಾ ಕಟ್ಟಿದ ಮನಿ ಅಲ್ಲಾ
ಗಂಡರು ಸತ್ತವರ ನೋಡಣ್ಣಾ
ಎಲ್ರು ರಂಡೆ ಮುಂಡೇವು ಐದೀವಿ
ನಾವು ಇಲ್ಲದೋರು ಎಲ್ಲಿ ತರಬೇಕು
ಇನ್ನ ಎಡಗೈಲಿ ಎಳೆತೀರ ಸಯ್
ಕೈ ಇಡಿದು ಹೊರಗ ಎಳೆತಾರ ಸಯ್
ಮನೆಗೆ ಬೀಗ ವಾಕ್ಯಾನ ಸಯ್
ಹೆಣಮಕ್ಕಳನೆ ಬಡಿತಾನ
ಹೆಣತಿ ಮಕ್ಕಳನೆ ಬಡಿತಾನ

ರಾಜ ಸೋಮಾಜಿ ಬಡಿಯೋ ಹೊತ್ತಿಗೆ ಎಲ್ಲರೂ ಕಣ್ಣೀಲಿ ನೋಡ್ಯಾರ ಹೆಣಮಕ್ಕಳ ಏನಂತಾರ ನೋಡದ್ಯಾ ನಮ್ಮ ಗಂಡರು ಕೂಡಾ ಎಳಿಯಂಗಿಲ್ಲ, ಆಹಾ ಆಗ ಮನಿ ಹೊರಗ ಎಳದು ಈಗ ನಮ್ಮನ ಬಡಿತಾನ

ನಮ್ಮಂಗ ನೀನು ರಂಡ್ಯಾರಾಗಿ
ನಿನ್ನ ಹೆಂಡ್ತಿ ರಂಡೇ ಆಗಲಿ
ಎಂತಾ ಕೆಟ್ಟವರು ಆಗಿರಿ
ಎಂತಾ ಕೆಡಕು ಬಂದೈತೊ
ಇಸು ದಿನ ಒಳ್ಳೆಯವರು ಇದ್ದೀರಿ
ನಿಮ್ಮ ಮಕ್ಕಳಿದ್ದಂಗ ನಾವೆಲ್ಲ

ಎಪ್ಪಾ ನಿನ ಮಕ್ಕಳಿದ್ದಂಗ, ಆಹಾ ನಮ್ಮನ ಬಡಿದರೆ ರಂಡೆ ಮುಂಡೆ ಅಂತಾ ಆಗ ಇನ್ನ ಬೈಯಾಕ ನಿಂತರು ತಮ್ಮನೋರು ಕೇಳಿದರು ಏನಮ್ಮ ಅಂಗೆ ಬೈತೀರಿ ಇಲ್ಲಪಾ ಈಗ ಗಂಡರು ಇದ್ದೋರು ಕೂಡಾ ಎಳೆಂಗಿಲ್ಲಾ ಒಂದೇಟು ಬಡಿಯಂಗಿಲ್ಲಾ ಈಗ ನಿಮ್ಮ ಅಣ್ಣಾ ರೊಕ್ಕ ಇಲ್ಲ ಅಂದಿದ್ದರೆ ನಿಮ್ಮಪ್ಪಾ ಕಟ್ಟಿದ ಮನಿ ಅಲ್ಲ ಅಂತಾ ಹೊರಗ ಕೈ ಹಿಡಿದು ಎಳದು ಆಗ ಒಂದೇಟು ಬಡಿದ ನೋಡಪಾ ಬೀಗ ಹಾಕಿದ ಮನಿ ಅಂದರೆ ಈಸು ದಿನ ಒಳ್ಳೇರು ಇದ್ದಿರಿ ಈಗ ಎಂತಹ ಕೆಡುಗು ಬುದ್ದಿ ಬಂತಪ್ಪಾ ನಿಮಗೆ, ಆಹಾ ರಂಡೆ ಮಕ್ಕಳು ಬಡಿದರೆ ಬೇಸಾ,

ಅದಕೆ ನಾನಂದೆ ನಿನ್ನ ಹೆಂಡ್ತಿ ರಂಡೇ ಆಗಲಿ
ಬಾಯಿಗೆ ಬಂದಾಂಗ ಬೈದೆನಪಾ
ಎಮ್ಮಾ ನೀ ಬೈಬ್ಯಾಡರಮ್ಮಾ
ತಪ್ಪಾಗೈತೆ ನಮ್ಮಣ್ಣಾಗ
ರಂಡೆ ಶಾಪನಿ ಬೀಳಬಾರದು
ಹೆಣಮಕ್ಕಳು ಶಾಪನಿ ಬೀಳಬಾರರೆ
ನಿಮ್ಮ ರೊಕ್ಕ ನಿಮ್ಮಗೆ ಸಯ್
ಹಿಂದಕ್ಕೆ ಇಸಕೊಡ್ತೀನಿ ಸಯ್
ಬರ್ರೆಮ್ಮಾ ನೀವು ರಾಜತಾಗ ಸಯ್

ಅವರು ಇವರು ಪಾದ ಇಡಕಂಬಾದು ತರಾದು ಹೆಣಮಕ್ಕಳಿಗೆ ಕಟ್ಟಾದು ಅಂಗಿದ್ದರೆ ಎಮ್ಮಾ ನಿಮ್ಮ ರೊಕ್ಕ ನಿಮ್ಮ ಗೊಪಾಸು ಇಸುಕೊಡ್ತೀವಿ ಬಾ, ಆಹಾ ಅಂತಾ ರಾಜ ಕಛೇರಿಗೆ ಬಂದರು ಶರಣಪ್ಪಾ ರಾಜ ಸೋಮಯ್ಯ ಏನಪ್ಪ ತಮ್ಮ ಫೀರೋಜಿ ಈಗ ಏನಿಲ್ಲಣ್ಣಾ ಬುದ್ಧಿ ಐತೋ ಬುದ್ದಿ ಇಲ್ಲ ರಂಡೇ ಶಾಪ ಬೀಳಬಾರ್ದು ಹೆಣಮಕ್ಕಳು ಕರ್ಮ ಬೀಳಬಾರ್ದು ಬಡದಿಯಂತೆ ಆಗ ಹೊರಗ ಎಳ್ದು ಮನಿ ಬೀಗ ಹಾಕಿಯಂತೆ,

ಎಂತ ಬುದ್ದಿವಣ್ಣಯ್ಯ ಸಯ್
ಇಸದಿನ ಒಳ್ಳೇದು ಅನಿಸಿಕೊಂಡು ಸಯ್

ಎಂತ ಬುದ್ದಿ ಇಲ್ಲದೋನು ಅಣ್ಣಾ ಈಗ ಕರೆ ಕಳಿಸು ಮಂದಿನಾ ಅಂದಾ ಏನಪಾ ಸುಮ್ಮನೆ ಉಸಲು ಮಾಡದೆ ಎಲ್ಲರೂ ಇಲ್ಲ ಇಲ್ಲ ಅಂದರೂ ಎಲ್ಲೊ ಒಬ್ಬರು ಕೊಟ್ಟರು ಅದಕೆ ನನಗೆ ಸಿಟ್ಟು ಬಂತು ಒಡ್ಡೆ ಒಂದೇಟು, ಆಹಾ ಅಂಗಲ್ಲಣ್ಣಾ ಹೆಣ್ಮಕ್ಕಳು ಶಾಪನಿ ಬೀಳಬಾರ್ದು, ಆಹಾ ಬರ‍್ರೆಮ್ಮಾ ರಂಡೆಮುಂಡೆ ರಾಜ ಕಛೇರಿಗೆ, ಆಹಾ ಈಗ ನಿಮ್ಮ ರೊಕ್ಕ ನಿಮ್ಮಗೆ ವಾಪಸು ಕೊಟ್ಟು ಕಳಸ್ತೀವಿ ಅಂದರೆ ಹೇಣ್ಮಕ್ಕಳು ನೋಡಿದರು ಹರೇದೋರು ಏ ಎಮ್ಮ ಇವರು ಮಾರವಾಡೇರು ಕೇಳಿಹೋದರು ರಾಜ ಕಛೇರಿಗೆ ಹತ್ತು ಮಂದಿ ಸಭಾಕಾ ಗಂಡಸರು ಹೋಗೋದು ಹೆಂಗಸರು ಹೋಗಂಗಿಲ್ಲ ಅಲ್ಲಿ ಕಲೀತಾರ ನೋಡರಾ ಬಾಗ್ಲಾಕಿ ನಮ್ಮನ ಬಡೀತಾರ ಅಲ್ಲಿ ಕರೀತಾರ ನಮ್ಮನ್ನ ಏನನ ಬಡೀತರೇನಮ್ಮ,

ಬಜಾರಾಗ ಬೈತಿದ್ದರೆ ಸಯ್
ಅಂತಾ ನಮ್ಮನ ಬಡಿತಾರ ಸಯ್
ಹೋಗಬ್ಯಾಡರಿ ಹರೆ ದೋರರಾ ಸಯ್
ಎಪ್ಪಾ ಮುದುಕರು ಬೈದಿರಿ ಸಯ್

ಮುದುಕರು ಹೋಗಿಬರ್ತೀನಿ ನಾವು ನೋಡಮ್ಮ ಮುದುಕರು ಹೋಗಿಬರ್ತೀವಿ ನೀವು ಹರೆದೋರು ಹೋಗಬ್ಯಾಡರಿ ಅಂತಾ ಮುದುಕರು ಬಂದರು, ಆಹಾ ಎವ್ವಾ ಈಗ ಬೈದೋರೆಲ್ಲಾ ಬರ‍್ರೆವ್ವಾ ಆಹಾ,

ಎಪ್ಪಾ ನಾವೇ ಬೈದಿದ್ದು ಬಂದಿವೊ
ಅಣ್ಣಾ ಅವರ ರೊಕ್ಕ ಅವ್ರಿಗೆ ವಾಪಸು ಕೊಡಣ್ಣಾ ಆಹಾ

ಅಂಬೊತ್ತಿಗೆ ಈಗಿನ್ನ ಕುಪ್ಪಿ ಹಾಕಿದರೆ ಈಗ ಕೊಟ್ಟಿದ್ದು ಖಂಡೇರಾಯ ಕುಪ್ಪಿ ಮಾಡಿದಾನ ಈಗ ಜೀವಕ್ಕೆ ಕುಪ್ಪಿ ಮಾಡಿದಂಗ ಆತ ತಿಳಿದಂಗೆಲ್ಲಾ ಕೊಡ್ತಾನ, ಆಹಾ ಏನಂತಾ ಕೊಡ್ತಾನ,

ಒಬ್ಬೊಬ್ಯಾಯಮ್ಮ ನೋಡರಾ ಸಯ್
ಬೊಗಸೆ ಇನ್ನ ಕೊಡ್ತಾನ ಸಯ್
ಸ್ಯಾರೆ ಮುಟ್ಟೆ ಕೊಡ್ತಾನ ಸಯ್
ಇಡಕಿ ಮುಟ್ಟೆ ಕೊಡ್ತಾನ ಸಯ್
ಒಬ್ಬೊಬ್ಯಾರೆ ನೋಡಾರ
ಇಲ್ಲಂತಾಗಿ ಹೇಳ್ತಾರ
ತಾವೇ ಮುಂದೆ ನೋಡಾರ ಸಯ್
ಇನ್ನ ಕೊಡಬ್ಯಾಡರಿ ಅಂತಾ ಹೇಳ್ತಾರ ಸಯ್
ತಾವು ತಿಳಿದಾಗ ನೋಡರಾ ಸಯ್
ಹುಚ್ಚು ಇಡದಂಗ ಮಾಡ್ತಾರ  ಸಯ್
ತಾವೇ ರಾಜ ಮಾಡ್ತಾರ
ಅಂಬೊತ್ತಿಗೆ
ಒಬ್ಬೊಬ್ಬರಗೆ ಬೊಗಸಿ ಕೊಡ್ತಾನ
ಒಬ್ಬೊಬ್ಬರಿಗೆ ಸ್ಯಾರೆ ಕೊಡ್ತಾನೆ
ಒಬ್ಬೊಬ್ಬರಿಗೆ ಹಿಡಿಕಿ ನೀಡ್ತಾನ
ಒಬ್ಬೊಬ್ಬರಿಗೆ ಇಲ್ಲ ಅಂತಾನ ಆಹಾ

ಕೊಟ್ಟಾರೇನು ಮಾರ‍್ವಾಡಿ ಶೇಠರಮ್ಮ ಬೇಸು ಕೊಟ್ಟಾನ ನೋಡು ಅಂತಾರ ಅಯ್ ನನಗೆ ಸ್ಯಾರೆ ನೀಡಾನ ಅಂತಾರ ಅಯ್ ನನಗೆ ಹಿಡಿಕಿ ಕೊಟ್ಟಾನ,

ಅಯ್ ನನಗೆ ಯಾವುದೇ ಕೊಡಲಿಲ್ಲ ಅಮ್ಮಯ್ಯೊ
ಆಗ ಜಲ್ಮಕ್ಕೆ ನೋಡಣ್ಣಾ
ಇನ್ನ ಒಂದು ಹೇಳಿ ಬಿಡತಾನ

ಆಗ ಜೀವಕ ನೋಡವಾ ಈಗಿನ್ನ ಕುಲಕಾಗಿ ಏಯಮ್ಮ ನನಗೆ ಅದುಕೊಟ್ಟಿಲ್ಲ ನೋಡು ಅಂದರೆ ಹೋದರು ಎಮ್ಮ ಬೇಸು ಕೊಡ್ತಾನ ನೋಡು ಮಾರವಾಡೇನು,

ಜಾತ್ರಿ ಬಂದಂಗ ಬರ್ತಾರ
ಥೇರಿಗೆ ಬಂದಂಗ ಬರ್ತಾರ

ನೋಡ್ದಾ ತಮ್ಮ ನೋಡಪಾ ಎಂಗಬರ್ತಾರ ಮಂದಿ ಅಂದಾ ಹೌರೆಲ್ಲಾ ಏನೋ ಬಡಿದವರು ಇಬ್ಬರು ಮೂವರ್ನ ಬಾ ಅಂತ ಹೇಳಿದಿವಿ ಊರೆಲ್ಲ ಬರ್ತಾರ ರೊಕ್ಕ ಕೊಟ್ಟು ಕಳಸ್ತಾರಂತ ಏ ಈಗ ನನ ಕೈಯಾಗ ಇರೋನೆ ಈಗನ್ನ ತಾವು ಬಾರಪ್ಪ ಆಗ ಹನುಮಂತಾ,

ಅಂತಾ ಹನುಮಂತಾಗಿ ಬಂದಾನೆ
ತಾವೆ ಏನಂದೆ ಬಂದಾನ
ಅವರನ ಇನ್ನ ಬಡಿಯಾನ
ಹೋತರಾ ಬೇಕಾ ಬಡಿದೋರಿಗೆ ಅಂದರೆ ಕೊಡ್ತಾರ
ಆಗ ನಿಮ್ಮಿಗೆನ್ನ ಏನು ಆಗೈತೆ ಆಹಾ
ರೊಕ್ಕ ಕೊಡ್ತಾರ ಮಾರವಾಡಿ ಶೇಠದವರು ಅಂತಾ ಬರ್ತೀರಾ
ಎಪ್ಪೊ ಬಡಿಬ್ಯಾಡ ಬಡಿಬ್ಯಾಡ ಹೋತೀವಿ
ಹಿಂದಲ ಬಾಕಲಾಗ ಹೋತಾರ

ಹೋದ ಮ್ಯಾಲೆ ಒಂದು ಕೊಪ್ಪರ ಆಸ್ತಿ ಉಳಿತಪ್ಪಾ, ಆಹಾ ಉಳಿದ ಮ್ಯಾಲೆ ತಮ್ಮ ನಾಳೆ ಹೋಗಿ ಆಗ ಗೊಲ್ಲರ ನಾರಾಣಮ್ಮ ತಾಕ ಹೋಗಿ ಸಾಲ ತೀರಿಸಿ ಬರ್ತೀನಪಾ ಅಣ್ಣಾ ನಾವು ಬರ್ತೀವಿ ಇಬ್ಬರು ಹೋಗನಾ ನಡ್ರಿ ಅಂಬೊತ್ತಿಗೆ ಛೆ ಛೆ ಛೆ ನಾನು ದೊಡ್ಡೋನು ಬಿಟ್ಟು ನೀ ಬರ್ತೀರಾ ನನ್ನಿಂದೆ ಬರಬ್ಯಾಡರಿ ನಾನೊಬ್ಬನೆ ಹೋಗಿ ತೀರಿಸಿ ಬರ್ತೀನಿ ಇಷ್ಟು ತೀರ್ಯಾತೆ ಇಷ್ಟು ಐತವ್ವಾ ಅಂತ ಹೇಳಿ ಬರ್ತೀವಿ ಅಂದಾ ಅಂಗಲ್ಲಣ್ಣಾ ನೀನು ಹುಚ್ಚೋನು ಮಾಡಿರಂಗ ಮಾಡ್ತೀಯಾ ಅಮಾಸೆ ನಾಳಿಲ್ಲ ನಾಡ್ದ ಐತೆ ಈಗ ನೀನು ಇನ್ನ ಬರಬ್ಯಾಡ ನಾವೇ ಇನ್ನ ಹೋಗಿ ಕಟ್ಟಿಬರ್ತೀವಿ ಇಲ್ಲಲ್ಲಲ್ಲ ನೀವು ಹೋದರೆ ಏನಂತಾಳ ಆಕೆ ಗೊಲ್ಲರು ನಾರಾಣಮ್ಮ ಏ ನಿಮ್ಮಣ್ಣಾ ಏನು ಇಲ್ಲೇನಪಾ,

ಇಲ್ಲದಂಗ ಆತೀನಿ ಇದ್ದವನು
ದೊಡ್ಡೋನಾಗಿ ನೋಡಪ್ಪಾ
ನಾನು ಹೋಗಿ ಕಟ್ಟಿ ಬರ್ತೀನಿ ಸಯ್
ಕೈಮುಗಿದು ಬರತೀನಿ ಸಯ್

ಸರೆ ಬಿಡಣ್ಣಾ ಹೋತಿಯಾ ಕಟ್ಟಿ ಬರತೀಯಾ ಅಷ್ಟೆ ಅಲ್ಲ ಅಂಬೊತ್ತಿಗೆ ನೋಡಪಾ ನಿಮ್ಮ ಅತ್ತಿಗೆ ಐದಾಳ ನನಗೆ ಒಬ್ಬ ಮಗ ಹುಟ್ಯಾನ ಹರೇದ ಹೆಂಡ್ತಿ ಹರೇದು ತಮ್ಮನೋರು ಈಗ ಅತ್ತಿಗೆ ನೀವು ನೋಡರಪಾ,

ಅಣ್ಣಾ ಸತ್ತಾನ ಅಂತಾರ ಸಯ್
ಅಣ್ಣಾ ಐದಾನ ಅಂತಾರ ಸಯ್
ಅತ್ತಿಗೇನ ಬೇಸ ನೋಡಾರಿ
ಅತ್ತಿಗೇನ ಬೇಸ ನೋಡಾರಿ
ಅತ್ತಿಗೆ ಅಲ್ಲ ನೋಡಾಪಾ ಸಯ್
ಅತ್ತಿಗೆ ಸಾಲಿ ಓದ್ಯಾಳ ಸಯ್

ತಾಯಿ ಅಂತ ನಂಬಿಕಿರಲಿ ಅಬಾ ಅತ್ತಿಗೆನ್ನ ಬೇಸು ನೋಡಿ ಕೊಳ್ಳರಿ ಅಣ್ಣಾನ ಹೆಂಡತಿ ಅಂತಾ ಬೇಸು ಜೋಪಾನ ಮಾಡರಿ ಅಂತಾನ ನೀನು ಎತ್ತಾಗ ಹೋಯಿತಿಯಣ್ಣಾ ಗುಡ್ಡ ಇದ್ದಾಂಗ ಇದ್ದು, ಆಹಾ ಇಲ್ಲಪಾ ಇವತ್ತು ಇದ್ದೋರು ನಾಳೆ ಇಲ್ಲ, ಆಹಾ ನಾಳೆ ಇದ್ದೋರು ನಾಡ್ದಾ ಇಲ್ಲ ನೋಡಪಾ ತಮ್ಮನೋರೆ ಜೀವ ಇರಲಿಕ್ಕ ಹೇಳ್ತೀನಿ ಸರೆ ಬಿಡಣ್ಣಾ ನೋಡಪ್ಪಾ ಒಬ್ಬ ಮಗ ಹುಟ್ಯಾನ ಮೂವರ ನಡುವಿಲಿ ಒಬ್ಬ ಮಗ,

ನನ ಮಗನೆ ಅಲ್ಲಾರೆ
ನಿಮ್ಮ ಮಗ ವೈದಾನೆ
ಮಗನೆ ಬೇಸು ಸಲುವಾರೆ
ಬಾಳ ಊಶಾರು ಇರಬೇಕು

ಅಣ್ಣಾ ನಿಮ್ಮಗೆ ಮಗ ನಮ್ಮಿಗೆ ಮಗ ಎಲ್ಲರತಲ್ಲಿರ ತಾನ ಇನ್ನಷ್ಟೊಂದು ಹೇಳಲೆ ಬಾಳ ಉಶಾರಂತಿ ಮಕ್ಕಳಿಗೆ ನೋಡಿಕಂಡು ಹೋಗು ಅಂತಿ ಎದುಕಣ್ಣಾ ನೀನು ನೋಡಪಾ ಇದಲ್ಲಾ ಇನ್ನೊಂದು ಹೇಳತಿನಿ ಬಡಗ್ಗನೆ ನಾನು ಸತ್ತು ಹೋದರೆ ಆಗ ಬಂದೀವೆಣ್ಣಾಯ್ಯ,

ಏನಂತಾಗಿ ನುಡಿತಾನ
ತಮ್ಮನೋರಿಗೆ ಬುದ್ದಿ ಹೇಳ್ತಾನಪಾ ಜೀವ ಇರಲಿಕ್ಕೆ ಆಹಾ
ಇನ್ನ ನಾಳೆ ಸತ್ತು ಹೋತಿನಿ  ನಾನು ಅ೦ತಾ
ಕೇಳಪಾ ಅಣ್ಣಾ ಸತ್ತ ಊರಾಗ ಇರಬಾರದು
ಈ ಅಣ್ಣಾನ್ನ ನಡಿಸಿಕೊ೦ಡು ನಾವು ಜೀವ 
ಈಗ ಕೂಳು ನೀರು ಬಿಟ್ಟು ಸಾಯತೀವಿ
ಯಾರನ್ನ ಕಡಿಯೋಲೂರಿಗೆ ಹೋಗಿ
ಅಣ್ಣಾನಾ ಕಳಕ೦ಡು ಬರಾನ ಅ೦ತಾ

ಊರು ಬಿಟ್ಟು ಹೋದರೆ  ಹೋಗಿದ್ದು ದಿವಸ ಯಾರು ನೋಡ೦ಗಲ್ಲ, ಆಹಾ ತಿರುಗಿ ದಿವಸ ಅವರಿಗೆ ನಿಮಗೆ ಊರ ಮನೆ ನಿಮಗೆ ಬಾಳ ಜೊತೆ ಆತೈತೆ,

ಜೊತೆ ಜೊತೆ ನೋಡಲಿ ಜೀವಗ ಜೊತೆ ಆತಾರ
ಜೊತೆ ಜೊತೆ ನೋಡಲಿ ಜಲ್ಮಗ ಜೊತೆ ಆತಾರ
ಅವರು ಕಡಿಬೇಕು ಅಂತಾರ ಅವರು ಜೀವ ತೆಗೀತಾರ
ಬಾಯಕ ಬೆಲ್ಲ ಇಡತೈತೊ ಹೊಟ್ಯಾಗ ಇಸ ಇಡತೈತೊ
ದೇವ್ರಗೆ ಹೋದರೆ ತಮ್ಮಯ್ಯಾ ಸಯ್
ಜೀವ ಜತೆಗಾರ ಮ್ಯಾಲರಾ ಸಯ್
ಬಾಳ ಉಶಾರದಲ್ಲಿ ಇರಬೇಕು
ಬೇವೂರಿಗೆ ಹೋಗಿ ತಮ್ಮಯ್ಯಾ
ಬಾಳ ಉಶಾರದಲ್ಲಿ ಇರಬೇಕು ಆಹಾ
ಜತೆಗಾರ ಕೊಟಬಾಳ ಉಶಾರ ಇರಬೇಕು
ಈಗ ಕಡಿಬೇಕು ಅಂತಾ ಇರ್ತಾದ
ಎಡಕ್ಕೂ ಬಲಕ್ಕೂ ಬಾಲ ಕಣ್ಣಾಗ ಇರ್ತಾರ 

ಯಾಕಣ್ಣಾ ನಾವು ಎದಕ ಹೋತಿವಿ ಬೇವೂರಿಗೆ ನೋಡಿಪಾಬಡಗ್ಗನ ಅಣ್ಣಾ ಸತ್ತ ಊರಾಗ ಇರಬಾರದು ಈಗ ಅಣ್ಣಾನ ನೆನಪಿಸಿಕೊಂಡು ಕೂಳು ನೀರು ಬಿಟ್ಟು ಸಾಯತೀರಿ ಅಂತಾ ಅಣ್ಣಾನ ಮರ್ತು ಬರಾನ ಅಂತಾ ಬೇವೂರಿಗೆ ಹೋದರೆ ಆಹಾ,

ಸರೆ ಏನಮಾಡ್ತಾರ ಅವರೇನು ಮಾಡ್ತಾರ
ಕಡೀಬೇಕಂತಾ ಆತ್ಮದಲಿ ಇರತೈತೆ
ಮ್ಯಾಲೆ ಬಣ್ಣದ ಮಾತು ನುಡೀತಾರ ಆಹಾ
ಜೀವ ಜೊತೆ ಜತೇಲಿ ಕಳೀತಾರ ಆಹಾ

ಬಾಳ ಉಶಾರು ಇರಬೇಕು ಇಬ್ಬರು ನಡವೀಲೆ ನಾಯಿನ ಮನಶಿಕ ಬೇಕು, ಆಹಾ ಈಗ ಅತ್ತಗ ಒಂದು ನಾಯಿ ಇತ್ತಗ ಒಂದು ನಾಯಿ ಕಟ್ಟಬೇಕು, ಆಹಾ ಏನಪಾ ನೀವು ಇಬ್ಬರು ಅಣ್ಣಾತಮ್ಮರು ಎಂಗ ನಿದ್ದೆ ಮಾಡಬೇಕು ಅಂದರೆ ಒಬ್ಬನು ನಿದ್ದೆ ಮಾಡಬೇಕು ಒಬ್ಬನು ಕುಂದರಬೇಕು ಮತ್ತೆ ಅವನು ಮಕ್ಯಂಡ ಮ್ಯಾಲ ಇವನು ಎದ್ದೇಳಬೇಕು ಕುಂದ್ರ ಬೇಕು, ಆಹಾ ಇಬ್ರರು ಯಾವಾಗ ತಕ್ಷಣ ನಿದ್ದೆ ಮಾಡಿದ್ದೇನಾ

ಕುಕ್ಕನೆ ನಾಯೀನ ಎಬ್ಬಿಸೆ ಬಿಡತೈತೊ
ನಾಯಿನ ಇಬ್ಬರ ನಡುವಿಲೆ
ನಿಮ್ಮ ತಿಳಿವರಿಕೆ ಮಾಡತಾತಾ ಸಯ್
ನಾಯನ್ನ ಮ್ಯಾಕ ಎಬ್ಬಿಸತೈತೊ
ನಿಮ್ಮಗೆ ತಿಳಿವರಿಕೆ ಅತೈತೆ

ನಾಯನ್ನ ಮ್ಯಾಕ ಎಬ್ಬಿಸತೈತೊ ಯಾಕಾಗಿ ಎಬ್ಬಿಸತೈತೊ ನೋಡಪಾ ಕಳ್ಳರು ಕಡಿಬೇಕಂತ ಇರ್ತಾರ ನೀವು ಯಾಳ ತಪ್ಪೊ ಮಕ್ಕಂಡಿರ್ತೀರಿ, ಆಹಾ ಎಂಗ ಗೊತ್ತಾಗಬೇಕು ಆ ನಾಯನ್ನ ನಿಮ್ಮಗೆ ಕಳ್ಳರನ ಇಡಕೊಡತೈತಪಾ, ಆಹಾ ಜಲ್ಮ ಉಳಸತೈತೆ, ಆಹಾ ಉಹ್ಮ ಇದೊಂದು ಇನ್ನೊಂದು ತಮ್ಮ ಅಂದಾ ಇನ್ನೇನು ಅಂದಾ ಏ ಇಲ್ಲದ ಜಾತ್ರೆ ಮಾಡಸ್ತರಾ ಅವರಾಗಿ ಎಲ್ಲಿಗಾರ ಸ್ನೇಹಿತರು ಇವರ್ನ ಕಡಿಬೇಕಲ್ಲಂತ, ಆಹಾ ಆಗ ಏನಮಾಡ್ತಾರ ಬರ‍್ರೆಪಾ ಇಲ್ಲದ ದೇವ್ರು ಮಾಡಿ ಬಾಪ ಅನ್ನ ಮಾಡಿವಿ ಊಟ ಮಾಡಬರ‍್ರೀ ಅಂತಾರ ಆಗ ಊಟ ಮಾಡುವಾಗ ಎಷ್ಟು ಉಶಾರ ಇರಬೇಕು, ಆಹಾ ಒಬ್ಬನು ಉಂಡು ಎದ್ದೇಳಮ್ಯಾಲೆ ಇನ್ನೊಬ್ಬನು ನಾಯಿನ ಇಡಕಂಡು ಅತ್ತಾಗ ಇತ್ತಾಗ ನೋಡಿಕೆಂತ ಇರಬೇಕು, ಆಹಾ ಇಲ್ಲರ‍್ರೀ ಎಲ್ಲರೂ ಒಂದೆ ಬಾರಿ ಕುಂತ್ಕರ‍್ರೀ ಅಂಗಲ್ಲ ನಮ್ಮ ಕುಲದಾಗ ಮರ‍್ವಾಡಿ ಶೇಠವರು ಆಹಾ ಅಣ್ಣಾ ಉಂಡರೆ ತಮ್ಮ ನಿಂದರಬೇಕು ತಮ್ಮ ಉಂಡರೆ ಅಣ್ಣಾ ನಿಂದರಬೇಕು, ಆಹಾ ನಾವಿಬ್ಬರ್ನ ಜತೋಲೆ ಹುಟ್ಟಿಲ್ಲ, ಆಹಾ ಜತೋಲೆ ಕುಂದರಕಾ ಅಂತ ಹೇಳಿದರು, ಆಹಾ ಅದು ತಿಳವರಿಕೆ ನೆಪ್ಪು ತಗಳ್ಳರಿ, ಆಹಾ ಇನ್ನೊಂದು ಇವರಿಗೆ ಇಸ ಇಟ್ಟು ಕೊಲ್ಲಬೇಕಂತ ಎಲ್ಲರಿಗೆ ಅರಿಶನಾ ಕಲಿಸಿದ್ದು, ಆಹಾ ಎಲ್ಲರಿಗೆ ಅಚ್ಚನ ಅನ್ನ ನೀಡ್ತಾರ, ಆಹಾ ಅರಿಶಣ ಪುಡಿ ಕಲಿಸದ್ದೂ, ಆಹಾ ಇಟ್ಟಾರೆ ನಿಮ್ಮಗೆ ಇಸಕಲಿಸಿ ಇಡ್ತಾರ, ಆಹಾ ಯಾದೆ ಆಗಲಿ ಯಾವನನ್ನ ಅನ್ನ ಇಕ್ಕಲಿ ನೀವು ಊಟ ಮಾಡಬಾರದು ಆಹಾ ಶಿವನಿಗೆ ತುತ್ತು ಅನ್ನ ತೆಗೆದು ನಾಯಿಗೆ ಹಾಕರಿ ನಾಯಿ ಊಟ ಮಾಡಿದರೆ ನೀವು ಊಟ ಮಾಡಿ ಆಹಾ,

ನಾಯಿ ಊಟ ಮಾಡದಿದ್ದರೆ ನೀವು ಊಟ ಮಾಡಬ್ಯಾಡರಿ
ನಾಯಿನ ಬಿಟ್ಟು ಊಟ ಮಾಡಿದರೆ ಸಯ್
ನೀವು ಸತ್ತೆ ಹೋತೇರಿ ತಮ್ಮಾರೆ
ನೀವು ಇರಲಿಕ್ಕೆ ಹೇಳ್ತೀನೊ
ಜಲ್ಮ ಇರಲಿಕ್ಕೆ ಹೇಳ್ತೀನೊ
ಕೊಟ್ಟದ್ದು ದೇವರು ಸುದ್ದಿ ಮಾಡ್ಯಾನ ತಮ್ಮನೊರೆ
ಸಾಯವನಲ್ಲ ನೋಡರಾ
ದೇವ್ರು ಕೊಟ್ಟಾನ ಕಡಿಮೆ ಮಾಡಿಲ್ಲ ಆಹಾ ಆಹಾ
ಎಪ್ಪಾ ಚಿಕ್ಕವಯಸಾ ಹರೆದೋನುರಾ ಆಹಾ ಆಹಾ
ಎಪ್ಪಾ ಚಿಕ್ಕವಯಸಾ ಹರೆದೋನುರಾ ಆಹಾ ಆಹಾ
ತಂದೆ ಕಾಲಾಗ ನನಗೆ ಬಂದೈತೆ
ತಂದೆ ಕಾಲಾಗ ನನಗೆ ಬಂದೈತೆ
ನಮಗೆ ಒಂದೇ ಅಣ್ಣಾಯ್ಯ
ಚಿಕ್ಕಪ್ಪಾ ಚಿಂದೋಗಿಲಿಂದರಾ
ಅಂತಾ ರಾಜಸೋಮಾಜಿ ದುಃಖ ಮಾಡ್ತಾನ ಮಾರ್ವಾಡಿಶೇಠೋನು
ಯಾಕಾನ ಬಾಳ ಅಳತಿಯಣ್ಣಾ
ನಿನ ಬಿಟ್ಟು ದೋಡಣ್ಣಾ
ನಾವು ಎತ್ತಗಾ ಹೋಗದಿಲ್ಲಣ್ಣಾ
ನಿನನ ಬಿಟ್ಟು ಅಣ್ಣಾಯ್ಯ
ಎತ್ತಗ ಹೋಗದಿಲ್ಲಣ್ಣಾ

ಅಯ್ಯೋ ತಮ್ಮನೋರೆ ನಾನು ಬುದ್ದಿ ಹೇಳತಿದ್ದೆನೆಪಾ ಸಾಯಲಿ ಇರಲಿ ಅಂತಾ ನನಗೇನು ರ‍್ವಾಗ ಬ್ಯಾನೆ, ಆಹಾ ಎಂತವರು ಇದಲ್ಲ ತಮ್ಮ ಇನ್ನೊದು ಹೇಳತೀನಿ, ಆಹಾ ಇಬ್ಬರು ಕೈಮುಗಿರಿ ಅಂತ ಇಬ್ಬರು ಇನ್ನ ಬಗ್ಗಿರುವಾಗ ಹಿಂದೇಲೆ ಕಡೀತಾರ ದೇವ್ರು ನಿಮಗೆ, ಆಹಾ ಒಬ್ಬರು ಮುಗಿದ ಮ್ಯಾಲೆ ಒಬ್ಬರು ಮುಗಿಬೇಕು ಅಂಗಲ್ಲಪಾ ಎಲ್ಲರೂ ಒಂದೆ ಸರ್ತಿ ಮುಗಿಬೇಕು ಅಂತಾರ ಸ್ನೇಹಿತರು ಜತೆಗಾರರು ಅಂಗಲ್ಲಪಾ ಇಬ್ಬರು ಒಂದೆ ಸಾರಿ ಹುಟ್ಟಿಲ್ಲ ಯಾರಿಗಿಂತ ಕೊಡ್ತಾನ ವರವು, ಆಹಾ ಒಬ್ಬನು ಮುಗಿದ ಮ್ಯಾಲೆ ಒಬ್ಬನು ಮುಗಿದರೆ ಯಾರತಲ್ಲಿ ಭಕ್ತಿ ಇರತೈತೊ ಅವರಿಗೆ ಆ ತಾಯಿ ಹೂ ಹಾಕ್ತಾಳ, ಆಹಾ ಅಂತಾ ನೀವು ಅನಬೇಕು ತಮ್ಮಾ ಅಷ್ಟೆ ಆಗಲಣ್ಣಾ ಅಂಗಾದರೆ ಗೆದ್ದು ಬರ್ತೀರಿ ಇಲ್ಲದ್ದರೆ ಇಲ್ಲಪಾ ಅಂದಾ ಸರೆ ಬಿಡಣ್ಣಾ ಅಂದಾ ತಮ್ಮ ನೋರೆ ಈಗ ಬರ‍್ರೆಪ್ಪಾ ನಾವು ಕಲ್ತು ಊಟ ಮಾಡಾನ,

ಇವತ್ತು ನಿಮ್ಮ ಬಿಟ್ಟು ತಮ್ಮನೋರೆ ನನಗೆ ಉಂಬಂಗ ಆಗಲ್ಲರಾ
ಅಂಗಾರೆ ನಡೀರೆ ಹೋಗಾನ ಅಡಗಿ ಮನೆಗೆ ಹೋಗಾನ
ಮೂವರು ಅಣ್ಣಾ ತಮ್ಮೊರೆ
ಅತ್ತಿಗೆ ಮನೆಗೆ ಬಂದಾರ
ಅಣ್ಣಾನ ಹೆಂಡ್ತಿನ ಕಣ್ಣೀಲಿ ನೋಡ್ಯಾರ
ಮೈದನೋರು ಗಂಡ ಬಂದಾರ
ಮೂರು ಸೆರಿಗೆ ನೀರು ತಂದಾಳ ಸಯ್
ಬಾಕಲಿ ಮುಂದೆ ಇಟ್ಟಾಳೆ ಸಯ್
ಅವರು ಕೈಕಾಲು ತೊಳದಾರ ಸಯ್
ಮನಿ ಒಳಗನೆ ಬಂದಾರ
ಕೈಕಾಲು ಇನ್ನ ತೊಳದಾರ
ಮನಿ ಒಳಗೆ ಬಂದಾರ

ಮಗನ ಹೊರಸಮ್ಯಾಲೆ ಮಕ್ಕಂತಾಗ ಆಗ ಅವರಿಬ್ಬರು ಮಾರ‍್ವಾಡಿ ಕುಲ್ದಾನಂದರೆ ಮದ್ವಿ, ಅದೋರೆಲ್ಲ ಒಂದು ಗಂಗಳದಾಗ ಮದ್ವಿ ಇಲ್ಲದೋರೆಲ್ಲ ಒಂದು ಗಂಗಳದಾಗ, ಆಹಾ ಮದ್ವಿ ಆದ ಮ್ಯಾಲೆ ಮದ್ವಿ, ಇಲ್ಲದೋರು ಗಂಗಳದಾಗ ಕಲ್ತು ಊಟ ಮಾಡರಿಲ್ಲಪಾ ಅವರು, ಆಹಾ ಅವರು ಹೆಂಡ್ತಿ ಇದ್ದೋರು ಶಟ್ಟಿದಂಗೆ ಹೆಂಡ್ತಿ ಇಲ್ಲೋರು ಶೇಷ್ಟವಾದ ಇದ್ದಂಗ ಆಹಾ ಅವರು ಕುಲ್ದಾಗ ಅಣ್ಣಾ ತಮ್ಮರ ಆಗಲಿ ಹಿಂದೆ ಹುಟ್ಟಿದವನಾಗಲೀ ಮುಂದೆ ಹುಟ್ಟಿದವನಾಗಲೀ, ಆಹಾ ಅಣ್ಣಾಗೆ ಒಂದು ಗಂಗಳ ಒಂದು ಸೆರಿಗೆ ಇವರಿಬ್ಬರಿಗೆ ಅಣ್ಣಾ ತಮ್ಮರಿಗೆ ಒಂದು ಸೆರಿಗೆ ಒಂದು ಗಂಗಳ ವಂದು ಅಂತಾ ದೇವಿ ಇಟ್ಲು, ಆಹಾ ಇಡುವತ್ತಿಗೆ ನೋಡಿದಾ ಏನಪಾ ತಮ್ಮ ನೋರೆ ನಿಮ್ಮನ ಬಿಟ್ಟು ನನಗೆ ಉಣಂಗೆ ಆಗಾದಿಲ್ಲ ಇನ್ನರು ಎಲ್ಲಾರು ಕಲ್ತು ಉಂಬಾನರಪಾ, ಆಹಾ ಅಣ್ಣಾ ನೀನು ಮದ್ವಿ, ಆದೋನು ನಾವು ಮದ್ವಿ ಇಲ್ಲದೋರು, ಆಹಾ ನಮ್ಮ ಕುಲ್ದೋರು ನೋಡಿದರೆ ಕುಲವೊರಗ ಹಾಕ್ತಾರ ಬ್ಯಾಡಣ್ಣಾ, ಆಹಾ ನಮ್ಮಗೆ ಮದ್ವಿ ಆದಮ್ಯಾಲೆ ಎಲ್ಲರೂ ಕಲ್ತು ಉಂಬಾನ, ಆಹಾ ಅಂಬೊತ್ತಿಗೆ ಅಮ್ಮಾ ಒಂದು ತಾಯಿಗೆ ಹುಟ್ಟೀವಿ ಆಗ ಒಂದು ತಾಯಿ ಮೊಲೆ ಹಾಲೆ ಕುಡಿದೀವಿ, ಆಹಾ ಒಂದು ಗಂಗಳದಾಗ ಯಾಕ ಉಂಬಕಿಲ್ಲ,