ಯಾವನು ಕುಲ ಮಾಡಿದ್ದು ಕೇಳೋ ಜಾತಿ ಮಾಡಾನ
ಒಂದು ತಾಯಿ ಮೊಲೆ ಯಾಕಾಲೆ
ಯಾಕ ಒಂತಾಯಿ ಹೊಟ್ಟಾಗ
ಎದಕಾಗಿ ನಾವು ಹುಟ್ಟೀವಿ
ಒಂದು ಗಂಗಳದಾಗ ನೋಡರಾ ಸಯ್
ಯಾಕಾಗಿ ಊಣಬಾರದೆ ಸಯ್
ಒಂದು ಗಂಗಳದಾಗ ನೋಡರಾ
ಯಾಕಾಗಿ ಊಟ ಮಾಡಬಾರದು
ಉಳಿದೋನಿಗೆ ಬುದ್ದಿ ಇಲ್ಲರಾ ಸಯ್
ಕುಲ ಮತದಾಗ ಇಲ್ಲರಾ ಸಯ್
ಕುಲ ಜಾತಿ ಎಲ್ಲಿ ವೈತೆರಾ ಸಯ್
ಬರ್ರೆಲಾ ತಮ್ಮನೋರೆ ಉಂಬಾನ

ಊಟ ಮಾಡಾನ ಬರ‍್ರೆಪಾ ಸರೆ ಇಷ್ಟೊಂದು ಅಂತಾನ ಅಣ್ಣಾನಾಡ, ಆಹಾ ಅಂತಾ ಒಂದೆ ಗಂಗಳಗ ಕುಂತಕಂಡರಪಾ ಮೂವರು ಅಣ್ಣಾ ತಮ್ಮಗಳು, ಆಹಾ ಗೋದಿರೊಟ್ಟಿ ಮುರಿದ ಹಾಲ್ದಾಗ ಅದ್ದಿದಾ ಶಕ್ಕರಿದಾಗ ಇಟ್ಟಕಂಡು ಆಗ ಬಾಯಿತಲ್ಲಿ ಇಟ್ಟಾರೆ ತುತ್ತು ಜಾರೀತೆ ಏ ಏ ಏ ಬಾಯಾಗ ರೊಟ್ಟಿ ಬಿದ್ದಿತೊ ಕೆಳಗಾ ಬಾಯಾಗ ರೊಟ್ಟಿ ಬಿದ್ದಿತೋ ಇನ್ನ ರಾಜ ಸೋಮಯ್ಯ ಕೊಟ್ಟಿದ್ದು ದೇವ್ರು ಉಣಾಗೊಡಿಸಲ್ಲಾ, ಆಹಾ ಕುಂತತಲ್ಲಿ ಕುಂದಾರಾಗೊಡಿಸುವಲ್ಲಾ, ಆಹಾ ಆಹಾ ಖಂಡೇರಾಯ ಸ್ವಾಮಿ ನಮ್ಮ ಮನೆ ದೇವ್ರು ತಮ್ಮ ಎಲ್ಲರೂ ಕಲ್ತು ಉಂಬಾನಂತ ರೊಟ್ಟಿ ಮುರಕಂಡು ಬಾಯಾಗ ಇಟ್ಟಾರೆ ಬಾಯಾಗ ರೊಟ್ಟಿ ಕಡದು ಕಸಕಂಡ ಮ್ಯಾಲೆ ಭೂದೇವಿತೆ,

ನಂದಲ್ಲ ಭೂದೇವಿತೆ
ಬಾಯಾಗ ಕಳಬಿದ್ದೆ ಮ್ಯಾಲರಾ ಮತ್ತೆ ಊಟ ಮಾಡಬಾರದು

ಅಲೆ ಲೆ ಲೆ ಏನೊ ಜಾರಿಬಿದೈತೆ ನಾಲಿಗ್ಯಾಗಲಿದ್ದ ಇನ್ನ ರೊಟ್ಟಿಗಳು ಐದಾವಲ್ಲ ಹಾಲು ಶಕ್ಕರಿಲ್ಲಪಾ ಇಲ್ಲ ಆ ರೊಟ್ಟೀನೆ ತಿನ್ನಬಾರದು, ಆಹಾ ಸರೆ ಬಿಡಣ್ಣಾ ಅನ್ನ ಊಟ ಮಾಡಾನ, ಆಹಾ ಅಂದರೆ ಅನ್ನ ಇನ್ನ ಮೊಸರು ಕಲಿಸಿ ನಾಕು ಮೂಲಿಗೆ ಕಲಿಸಿ ಒಂದು ತುತ್ತು ಬಾಯ್ ಇಟ್ಟಕಂಡರೆ ಬಾಯಲ್ಲ ಇಸವಾಯಿತೆ ಏ ಏ ಏ ಎಮ್ಮ ನಾಲೆಗೆನ್ನ  ಇಸವಾಯಿತೊ ಬಾಯಲ್ಲಾ ಇಸವಾಹಿತಾ, ಆಹಾ  ಆಹಾ ಆಹಾ ನಾಲಿಗೆನ್ನ ಇಸಕಾಣೀತೆ ಹೊಟ್ಯಾಗ ಗಡಿ ಗಡಿ ಆಯಿತೆ ಏ ಏ ಏ ಹೊಟ್ಯಾಗ ಇಸಿಕಿದಂಗ ಆಯಿತಪಾ ಹೊಟ್ಯಾಗ ಗಡಿಗಡಿ ಆಯಿತಾ ಗಂಗಳ ಬಿಟ್ಟು ಮಾ ಎದ್ದಾನ, ಆಹಾ ಆಹಾ ನಾನು ಸಲುವೋನು ಮಾರವಾಡಿನೋ ದಿಗ್ಗನಂಗೆ ಮ್ಯಾಕ ಎದ್ದಾನೆ ಏ ಏ ರಾಜ ನನ್ಗೆ ರೊಟ್ಟಿ ಅನ್ನ ರುಣ ಇಲ್ಲರಾ ಜೀವಕಾ ನನ್ಗೆ ರುಣ ಇಲ್ಲರಾ, ಆಹಾ ಆಹಾ… ದೇವ್ರು ರೊಟ್ಟಿ ಮಾಡ್ಯಾನೊ, ಆಹಾ ನೋಡಿಬಿಟ್ಟರು ತಮ್ಮನೋರು ಅಣ್ಣಾ ರೊಟ್ಟಿ ಉಮ್ಮಲಿಲ್ಲ ಅನ್ನ ಉಂಬಲಿಲ್ಲ, ಆಹಾ ದಿಗ್ಗನೆ ಎದ್ದುಬಿಟ್ಟೆ ಯಾಕಣ್ಣಾ ನಿನ ಇನ್ನ ಅಮಾಸೆ ಐತೆ ನೀನು ಎಂಗೆಂಗ ಮಾಡಿತಿ ನಿನ್ನ ಬಿಟ್ಟು ನಾವು ಉಂಬುವುದಿಲ್ಲ ನಿನ್ನ ಬಿಟ್ಟು ಉಣಂಗ ಆಗುವಲ್ದು ನಾನು ಎಂಗೆಂಗ ಮಾಡಿತಿ ನಿನ್ನ ಬಿಟ್ಟು ನಾವು ಉಂಬುವುದಿಲ್ಲ ನಿನ್ನ ಬಿಟ್ಟು ಉಣಂಗ ಆಗುವಲ್ದು ನಾನು ಉಂಬುವುದಿಲ್ಲ ನಾವು ಉಂಬುವುದಿಲ್ಲಣ್ಣಾ ಅಯ್ಯೋ ತಮ್ಮನೋರೆ ನಿಮ್ಮಗೆ ಬುದ್ದಿ ಐತೊ ಇಲ್ಲೊ ನನಗೆ ಉಂಬಂಗೆ ಆಗಲಿಲ್ಲ ಎದ್ದೀನಿ ನಿಮ್ಮಿಗ್ಯಾಕಪಾ ಆಹಾ ಊಟ ಮಾಡರಿ ನನಗೇನು ರ‍್ವಾಗ ಜಡ್ದಾ ಛಿ ಛಿ ಛಿ.. ನನ್ನ ಎಸನ ನಿಮ್ಮಿಗೆ ಬ್ಯಾಡಲೊ,

ಯಾಕಂತ ಗೊಳೊ ಅತ್ತಾನೊ
ಕೇಳಲೆ ತಮ್ಮನವರಪ್ಪಾ
ಎದೆ ಬೀಳಬ್ಯಾಡರಿ ನೀವುರಾ ಸಯ್
ನನ್ನ ಜೀವಕೆ ನೀವುರಾ ಸಯ್

ಅನ್ನ ಬ್ಯಾಡದಿ ಉಂಬಾಕ ಎದೆ ಬೀಳಬ್ಯಾಡರಪಾ ಹೊಟ್ಟೆ ತುಂಬಾ ಊಟ ಮಾಡರಿ ಜಲ್ಮಕೆ ಅಣ್ಣಾ ನೀನು ಎಂಗೆಂಗೊ ಮಾಡ್ತಿ ನನಗೆ ಉಂಬಂಗೆ ಆಗಾದಿಲ್ಲ ಏನು ಪರವಾಗಿಲ್ಲ ಊಟ ಮಾಡರಪಾ, ಹದಿರೆಕೆಂತಾ ಅರ್ಧ ಹೊಟ್ಟೆ, ಊಟ ಮಾಡದಿರು ಊಟ ಮಾಡಿದ ಮ್ಯಾಲೆ ಎಪ್ಪಾ ತಮ್ಮನೋರೆ ನೀವು ಹೋಗೆ ರಾಜ ಕಛೇರಿದಾಗ ಒಂದೆ ಜಮಖಾಣ ಹೊಚ್ಚಿಕೆಂಡು ಹೊರಸದ ಮ್ಯಾಲೆ ಈಗ ನಿದ್ದೆ ಮಾಡರಿ ಸರವೊತ್ತಿನಾಗ ಎದ್ದು ನೀವು ಅಗಸಿ ಸುತ್ತ ಊರು ತಿರುಗಾಡ್ಬೇಕು ನಾಯಿಗಳ ಕರಕಂಡು ಅಂದಾ, ಆಹಾ ಇಲ್ಲಣ್ಣಾ ನೀನು ಎಂಗೆಂಗ ಮಾತಾಡ್ತೀಯಾ,

ನಿನ್ನ ಬಿಟ್ಟು ಹೋಗೋದಿಲ್ಲಣ್ಣಾ
ನಿನತಲ್ಲಿ ನಾವು ಇರತೀವಿ
ಇವತ್ತಾಗಿ ಅಮಾಸ ಸಯ್
ತುಂಬಾ ಅಮಾಸ ಐತಾರ ಸಯ್
ಇವತ್ತಿನಿಂದ ಅಣ್ಣಾಯ್ಯ ಸಯ್
ಆಯಿತಾವಾರ ಬಿಡಿದಿನ ಸಯ್

ನಿನ ಬಿಟ್ಟು ಹೋಗೋದಿಲ್ಲಣ್ಣಾ ಇವತ್ತು ಅಮಾಸೆ ಕತ್ತಲಾಯಿತು. ತಮ್ಮನೋರೆ ನನಗೇನು ಬ್ಯಾನೆ ಜಡ್ಡಾ ನೀವು ಬಿಟ್ಟು ಹೋಗೋದಿಲ್ಲ ಅಂತೀರಿ ಬುದ್ದಿ ಐತೊ ಬುದ್ದಿ ಇಲ್ಲ ನಿಮಗೆ ಅರ್ಥ ಆಗೈತೊ ಇಲ್ಲ ಏನಣ್ಣಾ ನೋಡಪಾ ನಾನು ಜೋಡಿ ಇದ್ದೋನು ನೀವು ಒಂಟಿಗಾರರು ನನಗಂದರೆ ಹೆಂಡ್ತಿ ಮನೆ,

ಅಂಗಾರೆ ಹೆಂಡ್ತಿ ಮನೆಗೆ ನೀವು ಬರ್ತೀರಾ
ನೀವು ಬುದ್ದಿ ಇಲ್ಲ ತಮ್ಮನೋರೆ
ಜೋಡಿ ಇದ್ದವನೆ ನಾನಾಪಾ
ಏನು ಪರವಾಯಿಲ್ಲ ಹೋಗಾರಿ

ಅಣ್ಣಾ ನಿನ ಬಿಟ್ಟು ಹೋಗಬೇಕಂದರೆ ಹದರಿಕೆ ಆತೈತೆ ಇವತ್ತು ಅಮಾಸ ತುಂಬಾ ಆಯಿತವಾರ, ಆಹಾ ಹದರಿಕೆ ಆತೈತೆ ಏನು ಪರವಾಗಿಲ್ಲ ಹೋಗಪಾ ಅಂದರೆ ಅತ್ತಿಗೆ ತಲ್ಲಿಗೆ ಬಂದರು ಏನಮ್ಮಾ ಅತ್ತಿಗೆ ಈಗ ನಮ್ಮ ಅಣ್ಣ ಇವತ್ತು ಅಮಾಸ ಏನೊ ಎಂಗಂಗೊ ಹೇಳ್ತಾನ, ಆಹಾ ಬಾಳ ಉಶಾರ ಇರಬೇಕು ಅಣ್ಣಾ ನಿನ ಬಗಲಾಗ ಇದ್ದಾಗ, ಆಹಾ ಅಣ್ಣಾ ಎಲ್ಲಿಗೆನ್ನ ರಾತ್ರೀ ಎದ್ದು ಹೋದರೆ ಆಹಾ,

ಕೆವ್ವನ ಕ್ಯಾಕೆ ಹೊಡಿರಮ್ಮಾ
ಬರ್ರೆಪ್ಪಾ ಮೈದುನಾರಪಾ
ನಾವು ಓಡಿ ಬರತೀವಿ ನೋಡರಾ
ಹೋಗೋನು ಅಣ್ಣಾನ ಇಡಿತೀವಿ
ಅಣ್ಣಾನ ಹಿಂದೆ ನಾವು ಹೋತೀವಿ

ಅಯ್ಯೊಯ್ಯೋ ನಿಮ್ಮಣ್ಣಾಗ ಏನು ಆಗೈತಪಾ ನಿಮ್ಮಣ್ಣಾಗೇನು ಹುಚ್ಚು ಬಂದೈತೊ ಐಲು ಬಂದೈತೊ ಏನು ಪರವಾಗಿಲ್ಲ ಹೋಗರಪಾ ನೋಡಪಾ ಬಾಳ ಉಶಾರ ಮ್ಯಾಲೆ ಇರಬೇಕು ನೀನು ಅಣ್ಣಾನ ಬಿಟ್ಟು, ನಿದ್ದೆ ಮಾಡಬ್ಯಾಡ ಯಾಳತಪ್ಪಿ ಅಂದರೆ ಅಷ್ಟೆ ಆಗಲಿ ಹೋಗಪಾ ಅಂದಳು, ಆಹಾ ಅವರಿಬ್ಬರು ಅಣ್ಣಾತಮ್ಮಂದಿರು ಬಂದರು ಒಂದೆ ಹೊರಸನ ಮ್ಯಾಲೆ ಅತ್ತಿನ ದಿಡು ಹಾಕ್ಯಾಂಡರು ಜಮಕಾನ ಹೊದಿಕೆಂಡರು ಅಣ್ಣಾನ ಕೈ ತಮ್ಮ ಎದೆಮ್ಯಾಲೆ ತಮ್ಮನ ಕೈ ಅಣ್ಣಾನ ಎದೆಮ್ಯಾಲೆ ನಿದ್ದೆ ಮಾಡಿಬಿಟ್ಟರು, ಆಹಾ ನಿದ್ದೆ ಮಾಡಿದ ಮ್ಯಾಲೆ ಈ ರಾಜ ಏನಂತಾ ಹೇಳ್ತಾನ

ಕೇಳವ ಈಗ ಆಗ ಮೈದೋರು ಓಳ್ಳೋರು ಐದಾರ
ಮಗ ಒಬ್ಬನು ಹುಟ್ಯಾನ
ಮಗನು ಬೇಸು ಸಲವಾರಿ
ನನ ಹೆಸರಿಗೆ ಒಬ್ಬ ಐದನೆ
ಮಗನು ನೀನು ಕೊಲ್ಲುಬ್ಯಾಡರೆ
ನೀನೆ ಎದೆ ಬೀಳಬ್ಯಾಡ
ನೀನೆ ತಾಯಿ ಆಗಲೀ
ನಿನ ಮೈದನೋರು ಸಲುವುಬೇಕು
ನೀನೆ ಅಣ್ಣಾ ಇದ್ದಂಗ

ಆಗ ಅವರ್ನ ಕೈಲಿ ಇಡಿಬೇಕು ಎಷ್ಟು ಜೋಪಾನ ಮಾಡಬೇಕು ಅಬಬಬಾ ನಾನೇ ತಾಯಿ ಇದ್ದಂಗಂತೆ ಮೈದನೊರಿಗೆ, ಆಹಾ ನಾನೆ ಅಣ್ಣಾ ಇದ್ದಾಗೆ ಅಂತೆ ಕೈಹಿಡಿದು ಜೋಪಾನ ಮಾಡಬೇಕಂತೆ ನಾನ್ಯಾಕ ಕೈ ಇಡೀಲಿ ಏನು ಇಟ್ಟರೆ ಕೈಲಿ ಅನ್ನ ಇಡತೀನಿ, ಆಹಾ ನೀರು ಹಾಕ್ತೀನಿ, ಆಹಾ ಕೈಲಿ ಎಂಗ ಇಡಿಬೇಕು ಅವರ್ನ, ಆಹಾ ಏನ್ರಿ ಅಂದರೆ ಅಲ್ಲ ಜೀವನ ಬೇಸು ಜೋಪಾನ ಮಾಡಿಕಬೇಕು ಅಂದಾ ಈಗ ನೀನೆ ತಾಯಿ ಅಣ್ಣಾ ಇದ್ದಾಂಗ ಯಾಕ್ರೀ ನೀವು ಎತ್ತಾಗ ಹೋತಿಯಿ ಅಂಗಿಲ್ಲ ಇರಲಿ ಇರಲಿಕ್ಕೆ ಹೇಳತೀನಿ, ಆಹಾ ನಾನು ಎಲ್ಲಿಗಾನ ಊರಿಗೆ ಹೋಗಿದ್ದೆ ಒಳ್ಳೆ ಮಾತು ಹೇಳತೀನಿ ನಾನು, ಆಹಾ ನನಗೆ ಏನು ಆಗಿಲ್ಲ ಹೇಳತೀನಿ ಅಂದಾ ಸರೆ ಬಿಡರಿ ಅಂದ್ಲು ಕೇಳವೆ ಈಗ ತಲೆ ಬೊಗಸಬೇಡ ಇಂತವಳು ಮಗಳಪಾ ಇಂತವನ ಹೆಂಡ್ತಿ ಅಂತಾ,

ನನ ತಲೆ ಬೊಗಸಬ್ಯಾಡಲೇ
ಮೈತುಂಬಾ ಕಣ್ಣು ಇರಬೇಕು
ಕೈಯಾಗ ಜಲ್ಮ ಇಟಕೊಂಡು
ನೀವು ಬುದ್ದಿವಂತಳಾಗಲೇ
ಮೈದನೋರು ಹರೆದೋರಲೇ

ಏನ್ರಿ ಗುಡ್ಡಂತಾಗಂಡ ಇದ್ದು ನಾನ್ಯಾಕ ನೋಡಲಿರ‍್ರೀ, ಆಹಾ ಎಂತಾ ಮಾತಾ ಹೇಳ್ತೀರ‍್ರೀ ಇಲ್ಲ ಹೇಳತಿನಿ ಮುಂದಕಾ ನೀವು ಇನ್ನವರ ಬೇಸು ತಿಳಿಕಂಡು ರಾಜ ಬಾಳ ಬೇಕೆಂದು ನಾನೇಳ್ತೀನಿ ಸರೆ ಬಿಡರಿ ಅಂದಳು ಆಗ ಕೇಳಲೇ ಮಗನ ಕೊಡು ಅಂದಾ ಮಗನ ತಗಂದು,

ಫಳಫಳ ದುಃಖ ಹೋತಾಲೆ
ನೀವು ಹುಟ್ಟಿ ಮೂರು ತಿಂಗಳು
ಇವತ್ತು ನಿನ ಮೊಖಪ್ಪಾ
ಸಿಕ್ಕ ವಯಸ್ಸಿದಲ್ಲಿ ಹುಟ್ಟಿಯಾ
ಮದುವೆಯಾದ ಮೂರು ವರುಷಾಕೆ
ನೀನು ಹುಟ್ಟಿದ ಮೂರು ತಿಂಗಳಿಗೆ
ನಾನೆ ಹೋತೀನಿ ಮಗನೆ ಸಾಯತೀನಿ ಉಳಿತೀನರಾ
ಅಪ್ಪಾ ಮಗನೆ ದೇವ್ರುರಾ
ಅಂತಾ ಮಗನ ನೋಡಿ ದುಃಖಪಡಿತಿದ್ದರೆ
ಹುಡುಗ ತಂದೀನೆ ನೋಡಿಬಿಡ್ತಾನ
ಮೂರು ತಿಂಗಳ ಮಗ ನೋಡಮ್ಮಾ
ಎಮ್ಮ ಕಿಲಿ ಕಿಲಿ ಮಗನೆ ನಗುತಾನ
ತಂದೆ ಕೈಯಾಗ ಇರೋದು ಸಯ್
ಮೂರು ಕಡೆ ಚಂದ್ರಾಯುದರಾ ಸಯ್

ಹುಡುಗ ಕೈ ಹಾಕ್ಯಾನ ತಂದೆ ಇಡಿಯದು ನೋಡರಾ ಮೂರು ಕಡೆ ಚಂದ್ರಾಯುದರಾ ತಂದೆ ಕೈಲಿ ಇರೋದು ಈ ಹುಡ್ಗ ಕೈ ಹಾಕಿದ ತಂದೆ ಇಡಿಯೋದು ಚಂದ್ರಾಯುದ ಮ್ಯಾಲೆ ತಂದೆ ನೋಡಿದಾ ನಾನು ಸಾಯಲಿಲ್ಲ ಮಾಡಲಿಲ್ಲ ಆಗಲೇ ನನ್ನ ಆಸ್ತಿಗೆ ಕೈ ಹಾಕಿದನೆ ಇವನು, ಆಹಾ ಹುಟ್ಟಿದ ಮೂರು ತಿಂಗಳ ಹುಡ್ಗ ಆಹಾ

ಎಪ್ಪಾ ಇದು ನಂದು ಅಲ್ಲಾ ನೋಡರೆ
ಜೀವ ಇರಲಿಕ್ಕೆ ಕೈ ಹಾಕಿದೆ ಇದೆನಿಂದೆ ನನಮಗನೆ

ಹೌದು ನಕ್ಕಂತ ಇನ್ನವರ ಕೈಲಿ ಇಡಕಂಡಿದ್ದ ಫಳ ಫಳ ಮಿಂಚು ಹೊಡಿತಿತ್ತು ಬೆಳ್ಳಿ ಚಂದ್ರಾಯುದಾ ಆಗ ಈಗ ಅದರ ಮ್ಯಾಲೆ ಕೈ ಹಾಕಿದ, ಆಹಾ ಆ ಕೊತ್ತಿಗೆ ನನ ಚಂದ್ರಾಯುದ ಮ್ಯಾಲೆ ಕೈಹಾಕಿದೆ ಜೀವ ಇರಲಿಕ್ಕೆ ಇದು ನಿಂದೆ ನೀನು ಕೈಹಾಕಿದ ಮ್ಯಲೆನ ನಾನು ಕೈಯಾಗ ಇಡಿಯಂಗಿಲ್ಲ, ಆಹಾ ಅಂತ ಹೊರಸಮ್ಯಾಲೆ ಇಟ್ಟಬಿಟ್ಟಾ, ಆಹಾ ಆಗ ಕೈಯಾಗ ಇದ್ದ ಹುಡುಗ ಹೊರಸಮ್ಯಾಲೆ ಮಗಿಸಿಬಿಟ್ಟಾ,

ಕ್ಯಾವ ಕ್ಯಾವ ಮಗ ಅತ್ತಾನೆ
ಮೂರು ತಿಂಗಳು ಮಗ ನೋಡಮ್ಮಾ
ಕೇಳಲೆ ಮಗನ ಎತ್ತಿಕಾ ಅರಸ್ತಾನ ಅಂದಾ
ಕೇಳಲೆ ಪಗಡೆಯುದ್ದಲದ ಆಡಾನ

ಪಗಡಿ ಜೂಜ ಆಗ ಪಗಡಿತಗಂಬಾ ಪಗಡಿ ತಂದುಳು ದಿನಾಲಿ ಈತೆ ಗೆದ್ದು ಬಿಡತಿದ್ದ ಎಷ್ಟು ಹೆಣಮಕ್ಕಳು ಎಷ್ಟು ತಿಳವರಿಕೆ ಇದ್ದರೆ ಗಂಡಸರು ಕೆಳಗೆ ಹೆಂಗಸರು, ಎಡಗೈ ಹೆಣಸದು ನೀವಾರೆ ನೀನೆ ಕೇಳು ಅಂತಾನೆ ಬಲಗೈ ಹೆಣಸರು ನೀವಾರೆ ಮೊಳಕಾಲ ಕೆಳಗ ಅಂತಿದ್ದರಾ ಅವೊತ್ತಿನವರು ದೇವ್ರು, ದೃಷ್ಟ ಮಾಡುವಾ ಸಾಯುವಾಗ ಅತೆ ಸೋತು ಬಿಡ್ತಾನ ಆಮೆಗೆದ್ದು ಬಿಡ್ತಾಳ,

ಪಗಡೆ ಆಟನೆ ಆಡ್ಯಾರೆ
ಅವರೆ ಅಂತೆ ಆಡ್ಯಾರೆ
ಪಗಡೆ ಆಟ ಆಡ್ತಾರಮ್ಮಾ
ರಾಜ ಸೋಲೆ ಬಿಟ್ಟಾನ ಸಯ್
ಹೆಂಡತಿ ಗೆದ್ದೆ ಬಿಟ್ಟಳ ಸಯ್

ರಾಜ ಸೋತೆ ಬಿಟ್ಟಾನ ಹೆಂಡತಿ ಒಂದೆ ಗೆದ್ದಾಳ ಹೆಂಡತಿ ಗೆದ್ದು ಮ್ಯಾಲೆ ಏನಂತಾಳ,

ಎಷ್ಟು ಪರಾಕ ಗಂಡಸರತಾ ಗಂಡಸರತಾಕ ಆಡೇವಾ
ಹೆಣಸರ ಕೈಯಾಗ ನೋಡರಾ ಎಷ್ಟು ಪಾರಾಕ ಆದೀಕಿ
ಹೆಣಮಗಳು ಅಂತಾಳು
ಅಬಬಬಾ ಎಷ್ಟು ಪರಾಕ್ರಮ ಗಂಡಸರು ಕೈಯಾಗ ಅಂತ
ಪಟ ಪಟ ಹಲ್ಲೆ ಕಡಿದಾನ ಸಯ್
ಪಗಡೆಕಾಯಿ ಇಳಿಸ್ಯಾನ ಸಯ್
ಆಗ ಇಳಿಸೊ ಹೊತ್ತಿಗೆ ಸಯ್
ಕುಂತವನು ದಿಗ್ಗನೆ ಎದ್ದಾನ ಸಯ್
ಕುಂತಾಕಿನ್ನ ನೋಡರಾ ಸಯ್
ಗಂಡನ ಪಾದ ಇಡದಾಳ
ಅಯ್ಯೋ ಪಾದ ಇಡದಾ ಮ್ಯಾಲಯ್ಯ
ಹೆಣಸನು ಬಡಿಯೋಬಾರದು

ಶರಣಂದರಿಗೆ ಮರಣ ಇಲ್ಲಯ್ಯೊ ಕೈ ಮುಗಿದೋರಿಗೆ ಬಡಿಬಾರದು ಸರವು ತಪ್ಪು ಅಂದೀನೆ ಪಾದಾಕನಾನೆ ಬಿದ್ದೀನಿ ಪಾದಾಕ ಬಿದ್ದಾಕಿನ ನೋಡಿ ಏನಂದಾ ನೋಡವೆ ನೀನು ಅಂತಾ ಮಾತ ಅರ್ಥನೆ,

ನೀನುಗೆಲ್ಲ ಕೊಟ್ಟಿದ್ದು ದೇವ್ರು ಮಟ್ಟಿ ಮಾಡ್ತಾರ
ಯಾರಾಗಲೀ ಗೆದ್ದೋರು
ಮಾತಿಗೆ ನೋಡಲೆ ಗಣಸರು ಕಮ್ಮಿ ಆತಯಿಲ್ಲಾ

ಎಷ್ಟು ಪರಕ್ರಮ ಗಂಡಸರಾಗಲೀ ಹೆಣಸರು ಕೈಯಾಗ ಅಂದಿದ್ದಕ್ಕೆ ನನಗೆ ಸಿಟ್ಟು ಬಂತು, ಆಹಾ ಈಗ ನೀನು ಅಂದಿಲ್ಲ ನನಗೆ ಕೊಟ್ಟಿದ್ದು ದೇವ್ರು ಅನ್ನಿಸಾನ, ಆಹಾ ಇವಳು ಕೂಟ ಅನ್ನಿಸಬೇಕಲ್ಲ ಆತನ ಜೀವಕ ಅಂತಾ, ಆಹಾ ದೇವ್ರು ಕೊಟ್ಟುವಾಗ ಒಯ್ಯವಾಗಲೇ ಅಲ್ಲೆ ನನ್ನ ಹಾಕ್ಯಾನ ಕೇಳು ನಿನ್ನ ಅಂದಿಲ್ಲರ‍್ರೀ ಶರಣ ನನಗೆ ಬಾಯಿಗೆ ಬಂತು ದಿನಾಲಿ ನಾನು

ಗೆಲಿತಿದ್ದೆ ಈಗ ಎಷ್ಟಾಗಲೀ ಎಡಗೈ ಹೆಂಗಸರು, ಆಹಾ ಬಲಗೈ ಪರಾಕ್ರ ಇಲ್ಲ ಎಡಗೈ ಪರಾಕ್ರ ಅಂತಿದ್ರಿ ಇವತ್ತು ನನಗೆ ಬಾಯಿಗೆ ಬಂತು ಆಳಾಗಿ ಹೋಗ ನಾನು ಗೆದ್ದು ಬಿಟ್ಟೆ ಎಷ್ಟು ಪರಾಕ್ರ ಗಂಡಸೊ ಪರಕ್ರ ಹೆಣಮಕ್ಕಳ ಕೈಲಿ ಅಂದು ಬಿಟ್ಟೆ ಅಂಬೊತ್ತಿಗೆ ನಿನಗೆ ಸಿಟ್ಟು ಬಂತುರ‍್ರೀ ಸರವು ತಪ್ಪಾಗೇತ್ರಿ ಅಂಬೊತ್ತಿಗೆ ಕೇಳಲೆ ನಾನು ಹೊಟ್ಟೆ ಗಡಗಡ ಅಂತಾದ ಚೆಂಬು ತಗಂಡು ನನಗೆ ಕೊಡಾಲೆ ದೊಡ್ಡೀಗೆ ಹೋಗಿ ನಾನು ಬರ್ತೀನಿ ಹೊಟ್ಟೆ ಗಡಗಡ ಅಂತೈತೆ ನೋಡರಿ ಹೊತ್ತು ಮಣಗಿ ಮೂರು ಗಂಟೆ ಆಗೈತೆ ಅಮಾಸ ಕತ್ತಲು ಆಯಿತಾರ ಬಿಡದಿನ ನೋಡರಿ ಆಗ ಹೋಗ ಬ್ಯಾಡ ಗಾಳಿ ಬೀಸತಯೆ ಹನಿ ಉದುರುತೈತೆ, ಆಹಾ ನಾನು ಕುಂದರೊ ದೊಡ್ಡಿ ಮನ್ಯಾಗ ಐತೆ ಹೆಣಮಕ್ಕಳು ಗಣಮಕ್ಕಳಿಗೇನು ಪರವಾಗಿಲ್ಲ ಗಂಡ ಹೆಂಡತಿ,

ನಾನು ಕುಂದರೊ ದೊಡ್ಯಾಗ ನೀನೆ ಕುಂದರು ನೋಡಯ್ಯ

ಅಂದರೆ ಆ ಮಾತಿಗೆ ಏನಂತಾನ ರಾಜ ಮಾರ‍್ವಾಡೇನೊ ಸರೆ ಹೆಣಮಕ್ಕಳು ಕುಂದರೊ ದಡ್ಯಾಗ ಕುಂತ್ಕಂಡೆ ಹತ್ತುಮಂದಿ ಸಭಾಕೆ ಹೆಣ್ಣಗಂಡು ರಾಜ್ಯ ಮಾಡಾನು ರಾಜ ಕಛೇರಿಗೆ ಹೋಗಿದೆ ಯಾರಾನ ಬಡಗನ ಬಂದರು ನೋಡಿದ್ರು ಏ ಇತೇನು ನ್ಯಾಯ ಹೇಳ್ತಾನಪಾ,

ಹೇಣ್ಮಕ್ಕಳು ಕುಂದರಾ ದೊಡ್ಯಾಗ ಇವನೆ ಕುಂತು ಸಯ್
ಈತೇನು ನ್ಯಾಯ ಹೇಳ್ತಾನ ಸಯ್
ಈತೇನು ಪಾರಾಕ್ರ ವೈದಾನ
ಈತೇನು ನ್ಯಾಯ ಏಳ್ತಾನ
ಇದ್ರು ನಾನು ಸತ್ತಂಗ ಸಯ್
ಇಲ್ಲದಿದ್ದರೆ ಹೆಸರು ಹೋದಂಗೆ ಸಯ್

ನಾವು ಜೀವ ಹೋದರೆ ಇದ್ದಂಗ ಇದ್ದರೆ ಚಿಂತೆ ಇಲ್ಲರಾ ಇಲ್ಲದ ಜೀವ ಹೋದಂಗ ಅಂಗೆ ಆಗಲಿ ನನಜೀವ ಹೋದರೆ ಕುಂದರಂಗಿಲ್ಲ ನನದೊಡ್ಡೀಗೆ ನಾನು ಹೋತೀನಿ ನನ್ದು ಊರು ಹೊರಗ ಐತೆ ತೋಟದ ಬಗಲಾಗ, ಆಹಾ ನನ್ದು ಸಿಮೆಂಟು ರೂಮ ಮಾಡೀನಿ ಈಗ ಮನ್ಯಾಗ ಆದ್ರೆ ಗಲೀಜು ಆತೈತೆ ಅಂತೇಳಿ ಅಲ್ಲಿ ಮಾಡಿಸೀನಿ, ಆಹಾ ನಮ್ಮ ತಮ್ಮ ನೋರಿಗೆ ನನ್ನಗೆ ಗಣಮಕ್ಕಳಿಗೆ, ಆಹಾ ಹೆಣ ಮಕ್ಕಳಂದರೆ ಮನಿಬಿಟ್ಟು ಹೋಗಬಾರ್ದು ಅಂತಾ ಮನ್ಯಾಗ ಮಾಡಿಸಿನಿ, ಅಹಾ ಈಗ ನನ ದೊಡ್ಡೀಗೆ ನಾನು ಹೋತೀನಿ ಯಾವನದೇನು ಭಯ,

ಯಾರಿಗೇನು ಎದುರಿಲ್ಲರಾ
ಎಲ್ಲರೂ ಹೆಣ್ಣು ಗಂಡರಾ
ನನಗೆ ಕೈಮುಗಿತಾರ

ಅಂಬೊತ್ತಿಗೆ ಆಗಿನ್ನವರ ಸೆರಿಗೆ ತುಂಬ ನೀರು ತಂದಳು, ಆಹಾ ತರೊ ಬರೋವಾಗಲೇ ಕೋಳಕತ್ತಿ ಚೂರು ಮೈಮೇಲೆ ಆಗ ಅರವತ್ತು ಸೂರು ಬಿಚ್ಚಿ ಹೊರಸು ಮ್ಯಾಲಿಟ್ಟು ಏನೇನು ಒಂದು ಬೊಳ್ಳೋಟು ಸೂರು ಇಲ್ಲದಂಗ ಮಾಡಿಕಂಡ, ಆಹಾ ಬರೆ ಕೈಲಿ ನಿಂತಕಂಡ ಆಹಾ ಆಕಿ ಬಂದಳು ನೀರು ತಗಂಡು ಯಾವನು ನೀನು ಬಂದಿಯೋ,

ನಿನ್ನ ಗಂಡ ನಾನು ವೈದೀನ
ನನ್ನ ಗಂಡ ನೀನು ಅಲ್ಲಯ್ಯೊ

ಕೇಳಲೆ ಕತ್ತಲಾಗ ಮೊಖ ಕಾಣತೈತೇ ಇಲ್ಲ ನಿನಗಂಡನೆ ಇಲ್ಲರ‍್ರೀ ಆಯುಧಗಳು ಕಿರೀಟಗಳು ಎಲ್ಲ ಇದ್ದುರ‍್ರೀ ಏನ್ರಿ ಇಂಗ ಐದಿರಿ ಅಂದಳು ಇಲ್ಲ ಇವೋಸು ಹೊತ್ತಕಂಡು ಹೋಗಿ ಕಟ್ಟಿಕೊಂಡು ಮೈತುಂಬಾ ಕೈತುಂಬಾ ನಡುವಿನ ತುಂಬಾ ಕೈಯಾಗ ಇಡಕಂಡೋಗಿ ಅಲ್ಲಿ ಕೆಳಗ ಬಿಚ್ಚಿ ಮತ್ತೆ ಕುಂತಕಂಡು ಮತ್ತೆ ಎಲ್ಲ ಹಾಕ್ಕೊಂಡು ಬರೋದು ಅದಕೆ ಇನ್ನ ಬರೆ ಕೈಲಿ ಹೋದರೆ ಬಡಗ್ಗನ ಕುಂತಕತೀನಿ ಬರತೀನಿ, ಆಹಾ ಈಗ ಮುಂಜಾಲೆ ಆಕ್ಯಂತೀನಿ ಅಂತಾ ನಾನು ಬಿಚ್ಚಿ ಬಿಟ್ಟೀನಿ ಅಂದಾ ಇಲ್ಲರಿ ಒಂದು ಬೊಳ್ಳಷ್ಟಸೂರು ತಗಂಡೋಗರಿ ಆಹಾ ಛಿ ಛಿ ಛಿ ಬ್ಯಾಡ ನಾನ್ಯಾಕ ಹೊಯ್ಯಿಲಿ ಯಾವನೆ ಎದುರು ಐದಾನ ನಾನು ದೊಡ್ಡೀಗೆ ಹೋತೀನಿ ಬರ್ತೀನಿ ಸರೆ ಬಿಡರಿ ಗಂಡ ಹೆಂಡತಿ ತಪ್ಪಾದಿಲ್ಲ ಮಗ ಮಕ್ಕಂಡಾನ,

ಬರತೀನಿ ನಡಿರಿ ನಿನ್ನಿಂದೆ
ಜತೇಲಿ ನಾವು ಹೋಗಾನ
ಗಂಡ ಹೆಂಡತಿ ತಪ್ಪಾದಿಲ್ಲಯ್ಯೊ
ಮಾತಾನಾಡಿಕೆಂತಾ ಹೋಗಾನ
ಮಾತಾನಾಡಿಕೆಂತಾ ಬರಾನ

ಅಂಬೊತ್ತಿಗೆ ಲೇ ನನ್ನಿಂದೆ ನೀನು ಬಂದರೆ ಹೆಣ್ಣು ಗಂಡು ನೋಡಿ ಏನಂತಾರ

ಲೇ ಹೆಂಡ್ತಿ ಕರಕಂಡು ಹೋತಾನೆ
ಈತ ಏನು ಪಾರಕ್ರ ಇರಬೇಕು
ಹೊತ್ತು ಮುಳಗಿದರೆ ನೋಡರಾ ಸಯ್
ಅಂಜಿಕೊಂಡು ಇತ ಸಾಯತಾನ ಸಯ್
ಹೆಂಡ್ತಿಕರಕಂಡು ಹೋಗಿದರಾ ಸಯ್

ಈತ ಚೆಂಬು ತಗಂಡು ಹೊಂಟನಾ ನೋಡಯ್ಯ ಚೆಂಬು ತಗಂಡು ಹೋಗಾನ ಹೆಂಡ್ತಿನ ಕರಕಂಡು ಹೋತಾನೆ ಹತ್ತು ಮಂದಿ ಸೊಸೆ ಬಂದರೆ ನಾನು ಇದ್ದಾಗಿನ್ನ ಪರವಾಗಿಲ್ಲ ನಾನು ಸತ್ತಾಂಗ ಆತೈತೆ ನೋಡಾರೆ ನಾನು ಇದ್ದಂಗೆ ಒಂದೆ ತಲ್ಲಾರೆ ಸತ್ತಂಗೆ ನಂದು ಜಲ್ಮ ನಾ,

ಹತ್ತು ಮಂದಿಗ್ಯಾನ ಹೇಳೋನು ಸಯ್
ಹತ್ತು ಮಂದಿ ಶರಣು ಮಾಡೋರು ಸಯ್
ಯಾವನು ನಂಗೆ ಎದುರಿಲ್ಲ ಸಯ್
ನಾನು ಹೋಗೆ ಬರ್ತೀನಿ
ನಾನೆ ಒಬ್ಬರೆ ಹೋಗಿನಿ

ಕೇಳೆ ಅಂಬು ಬಾಯಿಯನಳೆ ಸರೆ ಬಿಡರಿ ಅಂಬೊತ್ತಿಗೆ ಅಂತಾ ಅಂತಾ ಮಗನ ಬಗ್ಲಾಗ ಹಾಕ್ಕಂಡು ಅಯಮ್ಮ ಹೊರಸಮ್ಯಾಲೆ ಮಕ್ಕಂಡ್ಲು ಈತ ಸೆರಿಗೆ ತಗಂಡು,

ಆತ ಎಲ್ಲಿಗೆ ಬರ್ತಾನ
ತಮ್ಮನೋರು ತಲ್ಲಿಗ ಬರ್ತಾನ

ಆಗ ಬಾಕ್ಲಿ ಮುಚ್ಚಿಕೊಂಡು ಹೊರಸಮ್ಯಾಲೆ ಜಮಕಾನ ಹೊಚ್ಚಿಕೊಂಡು ಮಕ್ಕಂತಾರ ಹೊರಗ ನಿಂತಕಂಡು ರಾಜ ಕಛೇರಿಗೆ ಕೈ ಮುಗಿದಾನ

ನಿನ್ನ ಆಳವನೇ ಹೋತಿನಿ
ಹಾಳಾಗಿ ನಾನು ಹೋತಿನಿ
ಇನ್ನ ಯಾರು ಆಳ್ತಾರಪಾ
ನ್ಯಾಯ ಧರ್ಮ ಹೇಳ ಏನು
ನಿನಗಾಗಿ ನಾನು ಹೋತಿನಿ
ಇವತ್ತು ಅಮಾಸೆ ಐತಪ್ಪಾ
ಆಯಿತಾರ ನಾನು ಹೋತಿನಿ

ರಾಜ ಸುಂಕನು ಅಳತಾನು ಮಾರ‍್ವಾಡಿ ಶೇಠ ಏನು ದುಃಖ ಮಾಡಿದಾ ದುಃಖ ಮಾಡಿ ಕೈಮುಗಿದು ಆಗ ತಮ್ಮ ನೋರನ ಎಬ್ಬಿಸಿಕೆಂಡಿಲ್ಲ ಒಂದು ಬೊಳ್ಳಷ್ಟು ಸೊರನ್ನ ತಗಂಬಂದಿಲ್ಲ, ಆಹಾ ಚೆಂಬುತಗಂಡು ಮತ್ತೆ ತಮ್ಮನೋರು ರಾಜ ಕಛೇರಿ ಬಿಟ್ಟು ಮುಂದಕೆ ಬಂದಾ ಆಹಾ ಮುಂದಕೆ ಬರೋ ಹೊತ್ತಿಗೆ ನಾಯಿಗಳು,

ಬೌ ಅಂತಾ ನಾಯಿಗಳು ಅರಸ್ತಾವೆ
ಕಳ್ಳರು ನಾತೆ ಇಡದಾವೆ
ನಮ್ಮನು ಸಲುವೋನು ಹೋತಾನೆ
ಇನ್ನದ್ಯಾಂಗ ಕೊಲ್ಲುತಾರ

ಆತ ಸತ್ತುನಾವಿರ‍್ಯಾಕ,

ನಾಯಿಗಳು ಒಂದೆ ನೋಡರಾ ಸಯ್
ಬೌ ಅಂತಾನೆ ನೋಡರಾ ಸಯ್
ಆಗ ಸರಪಣಿ ನೋಡರಾ ಸಯ್

ಅರೆ ಬಡಕಂಡು ಬಂದಾವ ಸರಪಣಿ ಅರೆ ಬಡಕಂಡು ಬಂದುವ ಆಗ ಆಗ ಆತನ ಇನ್ನದೋತರ ಇಡಕಂಡವು,

ಹಿಂದಕ ಎಳಕಂಡು ಬರ್ತಾವೆ
ಹೋಗಬೇಡಲೆ ಅಂತಾವೆ
ಹಿಂದಕ ಇನ್ನ ದಬ್ಬುತಾವೆ

ನೋಡಿದಾ ಯಾರು ರಾಜ ಸಂಬೋಜಿ ನೋಡಿ ಏನಂತಾನ ಅಮ್ಮಾ ನಾನಿದ್ದಾಗ ಮೈತೊಳಿ ಅಂತಾ ಏಳತಿದ್ದೆ ನಾಯಿಗಳು ಉಣ್ಣಕ ಇಡಕಂತಾ,

ನಾಯಿಗಳ ಕೊಲ್ಲು ಬ್ಯಾಡರಪ್ಪಾ
ಉಪಾಸ ಒಂದೆ ಇರಬೇಡರಂತಾ
ಎಷ್ಟು ಬುದ್ದಿ ಹೇಳತಿದ್ದೆ

ಎಷ್ಟು ಗ್ಯಾನ ಹೇಳತಿದ್ದೆ ಈಗಲಿದ್ದ ಯಾರು ಸಲುವುತಾರ ನಾಯಿಗಳಾ, ಆಹಾ ಆಹಾ ಈಗಲಿದ್ದ ಯಾರು ಹೇಳೋರಾ, ಆಹಾ ಈಗಲಿದ್ದ ಯಾರು ಕೊಡೋರೆ ಚಿಕ್ಕನಾಯಿ ಸರಿ ನಾಯೋರು ಏ ಏ ಏ ಏ ಮಟ್ಟಿನಾಯಿ ಗಂಡು ನಾಯೀರಾ ಮಟ್ಟಿನಾಯಿ ಗಂಡು ನಾಯೀರಾ ಆ ನಾಯಿಗಳನ ಇಡಕಂಡು ದುಃಖ ಮಾಡ್ತಾನಪಾ, ಆಹಾ ರಾಜ ಸೋಮೋಜಿ ಮುಖ ಹೊಡಿ ಅಂದಾ ದಃಖ ಮಾಡಿ ಆಗ ಬಾರಪಾಲೇ ನಾಯಿಗಳು ಸಲುವೋನೆ ಈ ನಾಯಿಗಳನ ಬೇಸು ಕಟ್ಟಾಕಿ ನೋಡು ಅನ್ನ ಅಲ್ಲೋ ಅಂತಾ ಬೋ ಅಂತಾವ ಹೊಟ್ಯಾಗ ತಲಿ ಇಟ್ಟು ಹೇಳ್ತಾವ ಬಾಯಿ ಈತೆ ಉಂಬಾಕ ಇಡು ಅಂತಾ ಕೇಳ್ತಾರ, ಆಹಾ ಏನಪಾ ಗೋದಿ ರೊಟ್ಟಿ ಹಾಲುಸಕ್ಕರೆ ಮೊಸರು ಹಾಲು ಹಾಕಬೇಕು, ಆಹಾ ಈಗ ದಿನಾಲು ಮೈತೊಳಿಬೇಕು ನಾಯಿಗಳಿಗೆ, ಆಹಾ ಅಂದಾ ಇಲ್ರೀ ಅಂಗೆ ಗಂಗಳದಾಗ ಬಟ್ಲಾದಾಗ ಅಂಗೆ ಐತೆ ಗೋದಿ ರೊಟ್ಟಿ ಹಾಲು ಸಕ್ಕರೆ ಅಂಗೆ ಐತಿರ‍್ರೀ ಏನೋ ನಿನ್ನ ನೋಡಿ ಓಡಿ ನಂದಾನರ‍್ರೀ ನೋಡಪಾ ನಾಯಿಗಳನ ಇಡಕಂಡೋಗಿ ಒಳ್ಳೆ ಸರಪಣಿ ಹಾಕಿ ಬಿಗದಲ್ಲಿ ಹಾಕು, ಆಹಾ ನಾಯಿಗಳನಾ ಹಿಡಕಂಡು ಬಂದಾ ಬಿಗದಲ್ಲಿ ಕಟ್ಟೀರಾ, ಆಹಾ ಆಗ ಕಣ್ಣೀರು ಉದುರಿಸಿಕೆಂತಾ,

ಕುದ್ರಿ ತಲ್ಲೀಗೆ ಬಂದಾನ
ತಾವು ಕುಂದ್ರೂ ಕುದ್ರಿಪ್ಪೊ
ಕಳ್ಳರನಾತ ಇಡಿತೈತೆ
ಮಾರವಾಡೀನಾ ಇನ್ನಪ್ಪೊ
ಆಗ ಕುದ್ರಿ ನೋಡರಾ ಸಯ್
ಇದಿ ಎಂತಾ ನೋಡರಾ ಸಯ್
ಸರಪಣಿ ಅರಕಂಡು ಬಂದೈತೊ ಸಯ್
ಆತನ ಮುಂದಕ ಬಂದೈತೊ ಸಯ್
ಹೊಟ್ಯಾಗ ತಲೆ ಇಟೈತೊ
ಹಿಂದಕ ದಬ್ಬಿ ಬಿಡತೈತೊ

ಹೋಗಬ್ಯಾಡ ಅಂತಾ ಅರೆರೆರೆ ಅಲ್ಲಿ ನೋಡಿದರೆ ನಾಯಿಗಳು ಹಿಂದಕದಬ್ಬಿದವು ಇಲ್ಲಿ ನೋಡಿದರೆ ಹಿಂದಕ ದಬ್ಬುತಾವ ಚೆಂಬುತಗಂಡು ನಾನು ಯಾವಾಗ ಹೋಗಲಿ ಚೆರಿಗೆ ತಗಂಡು ಅಂತಾ ಅಂತಾ ಆಗವನು ಹೇಳಿದಾ ಲೇ ಕುದ್ರಿ ಸಲುವೋನೆ ಬಾರೋ ಅಂದಾ ಈ ಕುದ್ರಿಗೆ ಮೇವು ನೀರು ಬೇಸು ಆಕ್ರಪಾ ನೀವೆ ನೋಡಿಕೆರ‍್ರೀ ನೀವೆ ತಾಯಿತಂದೆ, ಆಹಾ ಈಗ ನೋಡಿ ನನಗೆ ಅಡ್ಡಾ ಬಂದು ನನಗೆ ಹೊಟ್ಟಾಗ ತಲಿ ಇಟ್ಟು ಹೇಳ್ತೈತೆ ಆಗಬಂದೆ ನೋಡಣ್ಣಾ ಮಾರ‍್ವಾಡಿ ಶೇಠಿದ ಏನಣ್ಣಾ,