ಮಾರ್ವಾಡಿ ಶೇಠದ ಏನು ನೋಡಮ್ಮಾ
ರಾಜ ಸೋಮದ ಏನಮ್ಮ
ಕುದ್ರಿ ಬಿಟ್ಟ ಬಿಟ್ಟಾನ
ದೊಡ್ಡಿಗೋಗೊ ದಾರಿಗೆ ಬಂದಾನ
ಇತ್ತಾಗಲಿದ್ದ ಬಂದಾನ
ಹೊತ್ತು ಮುಣಿಗೆ ಮೂರು ಗಂಟ್ಯಾಗ ಸಯ್
ಆಗ ಕತ್ತಲ ವೈತರಾ ಸಯ್
ಆಯಿತಾರ ಬಿಡಿದಿನರಾ ಸಯ್
ಈತ ಬರುವಾಗ ನೋಡುರಾ ಸಯ್
ಕಳ್ಳರು ಬಾಗಿ ಕುಂತಾರ ಸಯ್
ಕುದ್ರಿ ಚಿಟ್ಟೆ ಬಿಟ್ಟಾರ ಸಯ್
ಗಾಂಜಿ ತಂಬಾಕ ಸೇದ್ತಾರ ಸಯ್

ಅವರು ಕಣ್ಣಿಲೆ ನೋಡ್ಯಾರ ಕುದ್ರಿ ತಿಪ್ಪೆ ಮ್ಯಾಲೆ ಕುತ್ಕಂಡು ಗಾಂಜ ತಂಬಾಕು ಸೇದಿಕೆಂತ ಕಳ್ಳರು ನೋಡ್ತಾರಪಾ,

ಹೊಂಟ ಹೊಂಟ ಹುಲ್ಯಾಲೆ
ಹೋತೈತೆ ಹೋತೈತೆ ಹಯಲ್ಯಾಲೆ
ಈವತ್ತು ಅಮಾಸಿ ದಿವಸಾಲೆ
ಆಯಿತಾರ ಒಳ್ಳೆವಾರವೇ
ಆಯಿತಾರ ಇವನ ಜೀವಾಲೇ
ಆಗ ಚಂಬುತಗಂಡು ಬಂದಾನ

ಅವನು ತಟಾದು ಅಮಾಸಿ ಕತ್ತಲ ನೋಡಿಲ್ಲ ಅವನು ಈತ ನೋಡಿಲ್ಲ ಅವರನ ಅವರೇನು ಈತನ್ನ ನೋಡ್ಯಾರ, ಆಹಾ ಆಗ ತೋಟದಾಗ ಬಂದಾ,

ನಿಮ್ಮಾಣ್ಣಾನ ಹರದಾರೆ
ಉಗುರು ಕೂಟ ತೊಗಲು ಬಿಡಿಸ್ಕಾರೆ

ಆಗ ನಿನ ಆಲೋಚನ ತಾವೇ ಬಂದು ರಾಜೇಂದ್ರ ರಾಜೇಂದ್ರ ಆಲೋಚನ ಮಾಡಿದ ಏನಂತಾ ಮಾಡಿದ ನಮ್ಮ ಕಕ್ಕ ನೋಡಾರ ಈಗ ನಮ್ಮಪ್ಪ ಸತ್ತರೆ ಕೈಕಾಲು ಕಟ್ಟಿ ಆಸ್ತಿ ಹೊಯ್ದ, ಆಹಾ ಈಗ ಇಬ್ಬರು ತಮ್ಮನೋರು ಮನ್ಯಾಗ ನಿದ್ದಿ ಮಾಡ್ಯಾರ, ಆಹಾ ನಾನು ಚೆಂಬು ತಗಂಡು ಬಂದೀನಿ ಈ ಅಣ್ಣಾ ಸುಲಿದಿನಿ ನಿಂಬೆಹಣ್ಣು ಇದ್ರಾಗ ತಮ್ಮ ನೋರ ಬಿಟ್ಟು ಊಟ ಮಾಡಿದರೆ ಭಾಗ ಕಳ್ದಂಗ ಆಗತೈತೆ ಆಹಾ,

ಅವರು ಎಲ್ಡು ಭಾಗನ ಇನ್ನ ತೆಗಿಯಾನ
ನಂತಾಗ ಭಾಗ ಇಡೋನು
ಮೂರು ಭಾಗನೇ ತಗಿದಾನೆ
ಲಾಸ್ಟ ನನ್ನ ಭಾಗವೆಂದಾನ
ರಾಜ ಸೋಮಯ್ಯ ನೋಡಾರ
ಸೂಣಿಗೆ ಚಿಕ್ಕವನ ಭಾಗ ಅಂದ
ಹಿಂದೆಗಡೆಗೆ ನಡುವನ ಭಾಗ ಅಂದಾನ
ಲಾಸ್ಟಗೆ ದೊಡ್ಡವನು ಭಾಗ ಅಂದಾನ ಆಹಾ
ನಿಂಬೆಹಣ್ಣು ಇಡಕಂಡು ನೋಡಿದರೆ
ಒಂದು ಕಡೆಗೆ ಹಾಲು ಇಳಿತೈತೆ
ಒಂದು ಕಡೆಗೆ ರಕ್ತ ಹರಿತೈತೆ
ನಿನ್ನೆಲಿದ್ದ ಇನ್ನ ಲಿಂಬೆದಾಗ
ಒಂದು ಕಡೆ ಹಾಲು ಇಳಿತೈತೆ
ಒಂದು ಕಡೆಗೆ ರಕ್ತ ಇಳಿತೈತೆ

ಅಯ್ಯೊ ತಮ್ಮ ಒಂದು ಕಡೆಗೆ ಹಾಲು ಒಂದು ಕಡ್ಗೆ ರಕ್ತ ಇಳಿತೈತೆ ನಿಂಬೆರಸ ಛೆ ಕಣ್ಣಲ್ಲಿ ನೋಡಿ ಎಂಗ ಉಂಬಲಿ ಏ ಏ ಏ ಕಣ್ಣಲ್ಲಿ ನೋಡಿ ಎಂಗ ತಿಂಬಲಿ ಹೊಟ್ಟಿಗೆ,

ಎಂಗ ಊಟ ಮಾಡಲಿ
ಕಣ್ಣಿಗೆ ಚೆಂದಾ ಆದರೆ ಹೊಟ್ಟಿಗೆ ಚೆಂದಾ ಆಹಾ
ಮೈಗೆ ಸುಖ ಅಂತಾ
ನನ ಜೀವಕ ಕೊಟ್ಟಿದ್ದು ದೇವರು ತುಟ್ಟಿ ಮಾಡಿದಾನ ಆಹಾ
ನನಭಾಗಕೆಲ್ಲ ಹೋಗೈತೆ
ನನ ದೈವಾಗಿ ಇಲ್ಲರಾ

ನಿಂಬೆಹಣ್ಣು ಬೀಸಾಕಿದ ಮುಂದಕ ಬಂದ ನಾನ ಮಲ್ಲಿಗೆ ಹೂವ ಗಮಗಮ ನಾತ ಹೊಡಿತೈತೆ, ಆಹಾ ಎಷ್ಟು ಚೆಲುವಿನಾತ ಹೊಡಿತೈತೆ ಅಲ್ಲಾ, ಆಹಾ ಗಿಡದಾಗಳ ಹೂವು ಅಂತಾ ಬಲಗೈಗೆ ಶರಣು ಮಾಡಿ ಆ ಹೂವ ಗಿಡಕ್ಕೆ ಹೂ ಅರಕಂಡು ಬಂಗಾರ ಕಿರೀಟ ಟೋಪಿಗೆ ಇಟಕಂಡ ತೆಲಿಗೆ, ಆಹಾ ದಿನಾಲಿ ಇಟಕಂಡರೆ ಇರತಿತ್ತು, ಆಹಾ ಅವೊತ್ತು ಒಳ್ಳಾಡಿ ಬಿದ್ದಿತೆ ಏ… ಏ… ಏ… ತಲೆ ತುಂಬ ಹೂವ ಬಿದ್ದಿತೆ ಕೆಳಗಾ ನೋಡಿದಾನಾಗ ಮಲ್ಲಿಗೆ ಹೂವ ನನ ತಲೆಮ್ಯಾಲೆ ಇರಬಾರದ ತಲ್ಯಾಗ ಇಟ್ಟಿದ ಹೂವ ಕೆಳಗ ಬಿತ್ತು ಆಹಾ ನನ ತಲೆ ಹೋತಲ್ಲ ಲೋಕಕೆ ಏ.. ಏ.. ಏ.. ಎಮ್ಮಯಾ ದೇವ್ರು ಇರತಾನ ಏ. . ಏ.. ಏ.. ಯಾ ದೇವ್ರು ಇರತೈತೆ ತಲೆ ಹೋಗುವಾಗ ತಲ್ಮಾಗ ಹೂವು ಇರತೈತಾ, ಆಹಾ ಇರದಿಲ್ಲ ಅಂತಾ ಆಗ ದೊಡ್ಡಿಗೆ ಬಂದಾ ದೊಡ್ಡಿಗೆ ಬಂದು ಏನು ಮಾಡಿದ ಬಂಗಾರ ಚೆರಿಗೆ ಆಗ ಕಿರಿಟ ಮ್ಯಾಲಿಟ್ಟ ಆಹಾ ಕತ್ತಲಾಗ ದೊಡ್ಯಾಗ ಯಾಕ ಕುಂದರಬೇಕಂತ ಗೋಡೆ ಬಗಲಾಗ ಹೊರಗ ಕುಂತಕಂಡ ಕುಂತ ಕಂಬತ್ತಿಗೆ ಈ ತಿಪ್ಪೆ ಕುಣ್ಯಾಗ ಇನ್ನ ಮ್ಯಾಲೆ ಕುಂತೋರು ಕಳ್ಳರು,

ಹೊಂಟ ಹೊಂಟ ನೋಡಾರೆ ಸಯ್
ನಡಿಯಾಳ ನಡೀತಾನೆ ನೋಡಾರೆ ಸಯ್
ಅಲ್ಲಿ ಕುತ್ತಿಗೆ ಕೊಯಾನ ಸಯ್
ಇನ್ನ ಕುಂತತಲ್ಲಿ ಬಂದಾರಾ ಸಯ್
ದಿಗ ದಿಗಿ ಎದ್ದಾರ ಅವರು ಬಂದೆ ಬಿಟ್ಟಾರ

ಅಮಾಸ ಕತ್ತಲು, ಆಹಾ ಆಗ ಬಂದು ಹಳೆ ಬಾವಿ ಕುಣಿ ಐತೆ ಆಹಾ ಆ ಕುಣ್ಯಾಗ ಎಲ್ಲರೂ ಕುಂತಕಂಡರು, ಆಹಾ ಏ ಆತನ ಕೈಯಾಗ ಸೂರು ಇದ್ದರೆ ಆತನ ತಂಟೆಗೆ ಹೋಗಬಾರದು, ಆಹಾ ಬಿಟ್ಟು ಹೋಗಿಬಿಡಲಿ ಈಗ ಮುನ್ನೂರು ಮಂದಿ ಬಂದರೆ ಬಲಗೈಗಾಗಲಿ ನೂರು ಮಂದಿ ಬಂದರೆ ಎಡಗೈಗಾಗಲಿ, ಆಹಾ ಆಗ ಐದು ಮಂದಿ ಬಂದರೆ ಎಡಗಾಲಿಗೆ ಆಗದಿಲ್ಲ, ಆಹಾ ಹತ್ತು ಮಂದಿ ಬಂದರೆ ಬಲಗಾಲಿಗೆ ಆಗದಿಲ್ಲ, ಕಾಲಿಲೆ ಹೊದ್ದು ಬಿಡ್ತಾನ ಆಹಾ ಕೈಲೆ ಗುದ್ದಿ ಬಿಡ್ತಾನ, ಈಗ ನೋಡಾನ ಆತ ಎದ್ದುವಾಗ ಕೈಯಾಗೇನನ ಸೂರು ಇದ್ದರೆ ಬಿಟ್ಟು ಹೋಗಾನ ಸೂರು ಇಲ್ಲದಿದ್ದರೆ,

ಎಲ್ಲರೂ ಕಲೆ ಬೀಳಾನ ಆತನ ಕುತಿಗೆ ಕೊಯ್ಯನ
ಏನಂತಾಗಿ ಅಂತಾರ ಸಯ್
ಅಮರೆ ಗಿಡಗಳು ವೈದಾವ ಸಯ್
ಹಳೇ ಭಾವಿ ಕುಣಿ ಒಳಗರ ಸಯ್
ಕುಂತಕೊಂಡು ಏನಂತರಾ ಸಯ್
ಇನ್ನೊಬ್ಬಂತಾ ಗೌಡರ ಸಯ್
ಮಾರ್ವಾಡಿ ಶೇಠಿದ ಏನುಲೇ ಸಯ್
ನೀನೆ ಇಡಿ ಮಗನೆ ಸಯ್
ನಾನೆ ಇಡಿ ಮಗನಾ ಸಯ್
ಗುದ್ದೆಕೊಲ್ಲಿ ಬಿಡಾನ
ರಾಜನ  ಕೆಳಗ ಹಾಕರಿ
ರಾಜನ ಕುತ್ತಿಗೆ ಕೊಯ್ಯಾನ
ಅಷ್ಟೊಂದು ಅಂದ್ರು ಬಕ್ಕ ಬಾರ್ಲು ಮಕ್ಕಂಡ್ರು ಆಹಾ
ಹಳೇ ಭಾವಿ ಕುಣ್ಯಾಗ
ಈತಗ ಹಿಂದೇಲಿ ಬಂದು ಇಡಕಂಡಾಗ ಆಯಿತ ಅವರು ಆಹಾ
ಓಹ್ ಯಾರು ನೀವು ಅಂದಾನೆ
ಕುಂತವನ ಮ್ಯಾಲೆ ಬಿದ್ದಾರೆ
ಕುಂತವನ ಇನ್ನವರ ಯಾರ ಅಂತ ಹಿಂದಕ ಎದ್ದುಬಿಟ್ಟ
ಎದ್ದು ಏನಂತಾನ
ಲೇ ಬೇವೂರವರೆ ಐದೀರಿ
ಇದ್ದೂರವರೆ ಐದೀರಾ
ಅವರು ಮಾತನಾಡಿಲ್ಲ
ಜೀವ ಕಳ್ಯಾಕ ಬಂದೋರು ಮಾತಾಡ್ತರ ಆಹಾ
ಮಾತಾಡಲಿದ್ದರೆ ಏನಂದಾ
ಪಿಶಾಚಿಗಳೆ ವೈದಿರಾ
ಭೂಮಿರಾವುಗಳು ವೈದಿರಾ
ದೆವ್ವಗಳು ನೀವಾಗಿ ಬಂದೀರಾ
ದೇವ್ರುವಾಗಿ ಬಂದೀರಾ

ಯಾರು ಮಾತಾಡಲಿಲ್ಲ ಏ ಇದೇನು ಭೂಮಿ ಹದರಿದಂಗಾಯ್ತು ಅಂತಾ ಮತ್ತೆ ಕುತ್ಕಂಡ ಎದ್ದಾಗ ಕೈಯಾಗ ಸೂರಿಲ್ಲ ಪಾರಿಲ್ಲ, ಆಹಾ ಆಗ ಕಳ್ಳರು ಏನು ಮಾಡಿದರು,

ಇನ್ನ ಏನಂತಾ ನುಡಿತಾರ ಸಯ್
ಲೇ ಅಂಗೆ ಕುಂತೆ ಬಿಟ್ಟಾರ ಸಯ್
ಹಿಡಕರಿ ಹಿಡಕರಿ ಇನ್ನರಾ ಸಯ್
ಕುತ್ತಿಗಿ ಕೊಯ್ಯಿರಿ ರಾಜೇಂದ್ರ ಸಯ್

ಕಣ್ಣಾ ಕಟ್ಟಿರಿ ರಾಜರಾ ನಾವೇ ಕುತ್ತಿಗೆ ಕೊಯ್ಯಾನ ಅಂಬೊತ್ತಿಗೆ ನೋಡಿದಾ ಅಲೆಲೆಲೆಲೆ,

ಇವರು ಇದ್ದೂರೋರೆ ಅಲ್ಲ ಬೇವೂರೋರೆ ಐದಾರ
ಹೊತ್ತು ಮುಳಿಗಿ ನಾಕು ಗಂಟೆ ಆಯಿತೆ
ಈಗ ನನಗೆ ಯಾರಿಲ್ಲ
ಕೈಯಾಗ ಸೂರೆ ಇಲ್ಲರಾ ಸಯ್
ಯಾ ಬಕ್ಕಣದಾಗ ಇಟ್ಟರಾ ಸಯ್
ಬರೆ ಬಕ್ಕಣಗಳು ವೈದಾವ ಸಯ್
ಬೊಳ್ಳ ಬಟ್ಟಸೂರಿ ಇಲ್ಲರಾ ಸಯ್
ಎಂಗಾ ಮಾಡಲಿ ನನ್ನ ಜೀವಕ್ಕೆ
ಬೊಳ್ಳ ಬಟ್ಟಸೂರಿ ಇಲ್ಲರಾ
ನನಗೆ ಇನ್ನೂ ಜಲ್ಮವ ಲೋಕಕೆ
ಹಿಂದೆ ನೋಡಿದರೆ ತಮ್ಮ ನೋರು ಇಲ್ಲರಾ ಸಯ್
ಮುಂದೆ ನೋಡಿದರೆ ನಾಯಿಗಳು ಇಲ್ಲರಾ ಸಯ್
ಕಾಲ ಅಡೇಲಿ ಕುದ್ರಿ ಇಲ್ಲರಾ ಸಯ್
ಕೈಯಾಗ ಸೂರೆ ಇಲ್ಲರಾ
ಕುದ್ರಿ ಕಾಲ ಅಡೋಲಿ ಇಲ್ಲರಾ
ಬೇವೂರು ಮ್ಯಾಲೆ ಬಂದಾರೆ ಸಯ್
ಕುತ್ತಿಗಿ ಕೊಯ್ಯೋರೆ ಬಂದಾರೆ ಸಯ್
ಜಲ್ಮ ತೆಗೆಯಲಿಕ್ಕೆ ಬಂದಾರೆ ಸಯ್
ಅವರ ಮ್ಯಾಲೆ ಇದ್ದ ಮಾಡಾಕ ಸಯ್
ಬರಗೈಲೆ ನೋಡರಾ ಸಯ್
ಎಲ್ಲಿಗೆನ್ನ ಇದ್ದ ಮಾಡಲಿ ಸಯ್
ಏಸು ಮಂದಿ ನನಗೆ ಬಂದಾರಾ ಸಯ್

ಏಸು ಆಳು ಕಾಯತಿದ್ದಾರೋ ಏಸು ಮಂದಿ ಕಾಯಿ ತಿದ್ದಾರೋ ನನ್ನ ಜಲ್ಮ ಲೋಕಕ್ಕೆ ಏನು ಮಾಡಬೇಕಪಾ ಕಾಲ ಅಡೇಲಿ ಕುದ್ರಿ ಇಲ್ಲ ಮುಂದೆ ನೋಡಿದರೆ ನಾಯಿಲ್ಲ ಹಿಂದೆ ನೋಡಿದರೆ ತಮ್ಮ ನೋರು ಇಲ್ಲ, ಆಹಾ ಕೈಯಾಗ ಏನು ಇಲ್ಲ ಚೇರಿಗೆ ಒಂದೆ ಐತೆ, ಆಹಾ ಇದೆ ನನಗೆ ತಾಯಿ ಅಂತಾ,

ಆಗ ಒಂದೆ ರಾಜರಾ ಸಯ್
ಯಾ ಚೆಂಬು ತಗಂಡು ಬಿಟ್ಟಿಲ್ಲಾ ಸಯ್
ಹುಟ್ಟಿದ್ದೋನು ರಾಸಿ ಐತನೊ ಸಯ್
ಸುಮ್ಮನೆ ಸಯ್
ಬಂಗಾರ ಕಿರೀಟ ಇಟ್ಟಾನೆ ಸಯ್
ಇನ್ನ ಹಳೇ ಭಾವಿ ಕುಣ್ಯಾಗ
ಕುಪ್ಪಳಿಸ ಎಗರಿಬಿಟ್ಯಾನ
ಕಪ್ಪಳಿಸಿ ನೆಲಕೆ ಹಾರ್ಯಾನ
ದಡೇಗಾವ ಬಾವಿಗೆ ಹಾರ್ಯಾನ
ಬಂದ ಬಂದ ನೋಡರಾ ಸಯ್
ನೀನು ಓಡು ನಾನು ಓಡುರಾ ಸಯ್
ದಿಗಿ ದಿಗಿ ದಿಗಿ ಓಡ್ತಾರ ಸಯ್
ನೋಡಿ ಬಿಟ್ಟ ರಾಜನೋರರ ಸಯ್
ಎಲ್ಲಿಗೋಡ್ತೀರಿ ಕಳ್ಳದೋರುರಾ ಸಯ್
ಕುತ್ತಿಗೆ ಕೊಯಾಕ ಬಂದಾರೋ ಸಯ್
ಅಂಜಿಕೊಂಡು ಓಡಿ ಹೋತಿರಾ ಸಯ್
ಕುಪ್ಪಳಿಸಿ ಪಲ್ಟಿ ಹೊಡದಾನ ಸಯ್
ಮುಂದೆ ಹೋಗಾರ ನೋಡರಾ ಸಯ್
ಎಗರಿ ಹುಡುಗರನ ಇಡದಾನ ಸಯ್
ಬಲಗೈಲಿ ಚೆರಿಗೆ ಇಡದಾನ ಸಯ್

ಡಮುಡುಮುಕಿ ಬಡಿತಾನ ಬಲಗೈಲಿ ಚೆರಿಗೆ ಇಡಿದಾನ ಡಮುಡುಮುಕಿ ಬಡಿತಾನ,

ಎಡಗೈಲಿ ಬಂದವರು ನೋಡರಾ ಸಯ್
ಎಡಗೈಲಿ ಗುದ್ದಿ ಬಿಡತಾನ ಸಯ್
ಜಾಡಿಸಿ ಎದಿಗೆ ಒದ್ದರೆ
ಅಪ್ಪಾ ಅಂತಾ ಬಾಲು ಬಿಳ್ತಾರ

ಎಡಕ ಬಂದೋರ್ನ ಎಡಕ ಬಡಿತಾನ ಬಲಕ ಬಂದೋರ್ನ ಬಲಕ ಬಡತಾನ ಮುಂದೆ ಬಂದರೆ ಮುಂದೆ ಬಿಡಿತಾನ ಹಿಂದೆ ಬಂದರೆ ಹಿಂದೆ ಬಡಿತಾನ ಚೆರಿಗೆಲಿಂದೆ ಆಗ ನಾಲೋರು ಕೆಳಗ ಬಿದ್ದುಬಿಟ್ಟರು, ಆಹಾ ಚಂಬಿಗ ಮೆಂಬಿಗ ಮಂತ್ರಾಳ ಮಾದೇವ ಅಸ್ತಾರ ಕಳ್ಳದೊರು, ಆಹಾ ಈ ಗಿರಿಸಾಲಿ ಗಿರಿಮೋಲೆ ಚಿಗ್ರತನ ಕೈಯಾಗ ಇರೋನು ಅವನು ಎಲ್ಲರನ ಬಿಟ್ಟು ಮುಂದೆ ಓಡಿದಾ ಆಹಾ,

ಎಲ್ಲರನ ನಾನು ಬಡಿತಿದ್ದರೆ ಮುಂದೆ ನಾನು ಹೋತಿಯಾ
ಕೈಯಾಗಳ ಚೆರಿಗೆ ತಗಂಡ ಸಯ್
ಬೀಸ ಒಗದೆ  ಬಿಟ್ಟಾನ ಸಯ್
ನೆಟ್ಟಗ ಚೆರಿಗೆ ಬಂದದ ಸಯ್
ಆಗ ಮೊಣಕಾಲಿಗೆ ತಟ್ಟಿತೊ
ಚೆರಿಗೆ ಅಂದರೆ ಚೆರಿಗಲ್ಲ
ಮೊಣಕಾಲು ತಟ್ಟೆವೊತ್ತಿಗೆ ಸಯ್
ಮೊಣಕಾಲು ಕಾಲು ನೋಡರಾ ಸಯ್
ಎಲುಬು ಪಟಕ್ಕನೆ ಮುರಿದೈತೊ
ಇನ್ನ ಕಾಲು ಅಂಬೋದು
ಕಾಲೆ ಇನ್ನ ಮುರಿದೈತೆ
ಕಾಲು ಮುರಿದೋತು
ಅಬ್ಬಾ ಸತ್ತೆ ಅಂತಾನ ಅಂಗೆ ಬಾರ್ಲ ಬಿದ್ದಾನ

ಅಯಿದು ಮಂದೀನಾ ಪಾಪಾ ಕೈಲಿದ್ದ ಕಾಲಿದ್ದ ಕುಸ್ತಿ ಮಾಡಿದಾ ಆಗ ಗುದ್ದಿಬಿಟ್ಟ ಬಾರ್ಲ ಬಿದ್ದು ಬಿಟ್ಟರು ಅವರು, ಆಹಾ ಜೀವ ಕಳದಿಲ್ಲ ಅಬ್ಬಾ ಸತ್ತರು ಅಂತಾ ಬಾರ್ಲ ಬಿದ್ದಾರ, ಆಹಾ ಎಲ್ದೇ ಏಟಿಗೆ, ಆಹಾಬಿದ್ದು ಅವರು ಇನ್ನ ತಾವಾಗಿ ಕೊಲೆಯತ್ನ ಅವರ ತಲ್ಲೆ ಐತೆ ಆಯುಧಗಳು ಬಲ್ಲೆಗಳು ಬಾಕುಗಳು, ಆಹಾ ಆಗ ಅವರದೆ ತಗಂಡು ಅಯಿದು ಮಂದಿ ಕುತ್ತಿಗೆ ಕೊಯಿದ್ದರೆ ಈತನ ಜೀವ ಉಳಿತಿತ್ತು, ಆಹಾ ಏ ಕೈಲಿದ್ದ ಬಡಿಹೊತ್ತಿಗೆ ಆಗಲೇ ಸತ್ತು ಹೋದರು, ಆಹಾ ಒಬ್ಬನು ಎದ್ದಾಳೊಲ್ಲ ಒಬ್ಬನು ಮಿಸಕಾಡೊಲ್ಲ, ಆಹಾ

ಇಂತವರಲ್ಲಿ ನೋಡಲೆನನ್ನೇನೆ ಕುತ್ತಿಗೆ ಕೊಯಿತಾರ
ಕೈಲಾಗದೋರು ಇವರಾಲೆ ನೈಸಾ ಇಲ್ಲದೋರು ಇವರಾಲೆ
ಇಂತವರನ ನೋಡಲೆ ಏನು ಜಲ್ಮ ತಗಿತಾರ

ಅಂತಾ ಕೊಟ್ಟಿದ್ದು ದೇವ್ರು ಖಂಡೇರಾಯ ಆಗ ಇನ್ನವರ ಕಣದಾಗೆ ತೆನೆ ಹೊಯಿತಾನಪಾ ಹೊಲ್ದಾಗ ತೆನೆ, ಆಹಾ ಎದೆಮ್ಯಾಲೆ ಕೈ ಇಟ್ಟು ಮುಂದುಕದಬ್ಬಿಟ್ಟ ಏನು ಮುಟ್ಟುಗೊಡಸಲೆ ಇಲ್ಲ, ಆಹಾ ಇವರೇನು ಇನ್ನ ನನ್ನ ಬಡಿತಾರಂತ ಆಹಾ

ಬಡಬಡ ಬರತಾನ ಸಯ್
ದೊಡ್ಡಿಗೆ ಹೋಗಿದ ದಾರಿಗೆ ಸಯ್
ಆತ ಬಂದೆ ಬಂದಾನ
ದೊಡ್ಡಿಗೆ ಹೋಗಿ ಬಂದಾನ
ಮಾರವಾಡಿ ಶೇಠಿ ಬಂದು ಆಹಾ
ದಿಡ್ಯಾಗ ಬಾಕ್ಲ ಇಟ್ಟಾರಲ್ಲ ಆಹಾ
ಮ್ಯಾಲೆ ಆಗ ಇನ್ನ ಬಗ್ಗುವಾಗ ಕಡ್ಡಿಕೆಬ್ಬಣ ಕಡ್ಡಿ ಐತೆ
ಬಂಗಾರ ಟೀಪಿ ಕಿರೀಟಣ್ಣಾ ಕಡ್ಡಿಗೆ ಸಿಗೆಬಿದೈತೆ
ಅಂಗೆ ಬಂದೆ ಬಿಟ್ಟಾನ ರಾಜಸೇವರಿಕೆ ಇಲ್ಲಾನ

ಬಂದವನ ಮುಂದಕ ನಾಕು ಗೇಣು ಬಂದಾ, ಆಹಾ ಅವಾಗ ತುಂಬಿತೆಲಪಾ ಗಣಮಕ್ಕಳಾಗಲಿ ಹೆಣಮಕ್ಕಳಾಗಲೀ ಮೊಂಡ ತೆಲೆ ಇಲ್ಲ, ಆಹಾ ಇವಾಗ ಮೊಂಡತೆಲಿ ಗಣಮಕ್ಕಳಿಗೆ, ಆಹಾ ತುಂಬಿದ ತಲೆ ಇದ್ದರೆ ತುಂಬಿದ ಜೀವ ಅಂತಾ ಅವರದು, ಆಹಾ ಆತನ ಕೂದಲ ನಾಡಿ ಮಣಕಾಲು ತಟತಾವ ಮಾರವಾಡಿ ಶೇಠಿದೋನರು, ಆಹಾ ತುರುವು ಕಟ್ಟಿ ಬಂಗಾರ ಕಿರೀಟ ಇಡಿಸಿದರು, ಆಹಾ ಆ ಕಿರೀಟ ಯಾವಾಗ ಟೋಪಿ ಹೋಗಿತೋ

ಈಗ ತುರುಬೆ ಉಚ್ಚೆ ಬಿಟ್ಟಿತೊ ಕೂದಲು ಒಂದೆ ಕಟ್ಯಾನ
ಎಡಗೈಲೆ ತಲೆಮ್ಯಾಲೆ ಇಟ್ಟೆ ನೋಡ್ಯಾನ

ಟೋಪಿ ಐತೇನಂತಾ ತಲೆಮ್ಯಾಲೆ ನೋಡಿಕೆಂಡರೆ ಎಡಗೈ ಇಟ್ಟು ಬಂಗಾರ ಕಿರೀಟ ಟೋಪಿಲ್ಲ ಅಲೆಲೆಲೆಲೆ ದಿಡ್ಯಾಗ ಬರುವಾಗ ಬಂಗಾರ ಸೇರು ಪಾವು ಟೋಪಿ ಅಲ್ಲೆ ಕಡ್ಡೀಗೆ ಸಿಗೆ ಬಿದೈತೆ ಆಹಾತಿ ನನತಲಿಗೆ ಇರೋದು ಕೊಡೋದು ಒಂದೆ ನನ ತಲೆಕೊಡೋದು ಒಂದೆ ಆಹಾ,

ಮೊಂಡ ತಲೀಲೆ ಎಂಗ ಹೋಗಲೀ ಹೆಂಡ್ತಿ ಮನೆಗೆ ನಾನಮ್ಮ
ಹೆಂಡ್ತಿಗೆ ಮೊಖ ತೋರಸಾಲಿ
ಹಿಂದಕ ನಾನು ಹೋತೀನಿ
ಎಲ್ಲಿ ಬಿದ್ದು ಹೋಗೈತೊ

ಅವರು ಕಳ್ಳರು ಕೂಟ ಇದ್ದ ಮಾಡುವಾಗ ಎಲ್ಲಿ ಬಿದ್ದು ಹೋಗೈತೋ ಗಿಡುಗಳಾಗ ಬಿದ್ದಿತೊ ಆಗ ಬಾಕ್ಲಾಗ ಬಿದೈತೋ ಈಗ ನಾನು ಉಡಿಕಾಡಿ ಕಂಡು ಬರ್ತೀನಂತಾ ಗಕ್ಕನೆ ಇಂದಕ ತಿರುಗಿ ಬಿಟ್ಟಾ, ಆಹಾ ಹೋದ ಪ್ರಯತ್ನ ನಾಯಿಗಳಾಗಲೀ ಆಗಕ್ಯಾಕೆ ಹೊಡಿದಿದ್ದರೆ ತಮ್ಮನೋರನ ಬರ್ತೀದ್ದರು, ಆಹಾ ಕುದ್ರಿನಾ ಅಕ್ಯಾಂಡು ಬಂದಿದ್ದರೆ ಆತನ ಜೀವ ಉಳಿತಿತ್ತು, ಆಹಾ ಕೊಟ್ಟಿದ್ದು ಖಂಡೇರಾಯ ಆತಗ ಎದಮ್ಯಾಲೆಕ್ಕೆ ಇಟ್ಟದಬ್ಬಿದಂಗಾಯ್ತು, ಆಹಾ ಗಕ್ಕನೆ ಹಿಂದಕ ತಿರುಗಿ ಆಗ ದಿಡ್ಡಿ ತಲ್ಲಿಗೆ ಬರ್ತಾನ, ಆಹಾ ಇವರು ಏನ ಮಾಡಿದರು

ದಿಗಿ ದಿಗಿ ಎದ್ದಾರ
ಕಳ್ಳರೆಲ್ಲ ಎದ್ದು ಬಿಟ್ಟಾರ
ಲೇ ಕೈಯಾಗ ಸೂರು ಇಲ್ಲ ಏನಿಲ್ಲಾ
ಕೈಲಿದ್ದ ಕಾಲಿದ್ದ ಎಷ್ಟು ಒದ್ದು ಹೋಗಿಬಿಟ್ಟಾನಲ್ಲೇ ಆಹಾ
ಲೇ ನನ ಎದೆಗುಂಡೆ ಅಂಗಾ ಆದರೆ ಚಿಂತಿಲ್ಲ ಆಹಾ
ಐನನ ಕೈತಿರುವಿದ್ದರೆ ಕೈ ನೋಡಲೆ ಅಳ್ಳಾಡತೈತೆ ಆಹಾ
ಅಯ್ಯೊ ಚರಿಗೆ ತಗಂಡು ಬಡಿದರೆ ಮೊಣಕಾಲು ನೋಡಲೆ
ತೊಟ್ಲಾ ತೂಗಿದಂಗೆ ತೂಗುತೈತೆ ಆಹಾ
ಎಂಗಲೇ ನಾನು ನಡಿಯೋದು ಆಹಾ
ದಿಗ್ಗನೆ ಎದ್ದು ಕೂರಾನ ದಪ್ಪನೆ ಅಂಗೆ ಬಿಳ್ತಾನ
ಗಿರಿಸಾಲಿ ಗಿರಿಮೋಲೆ
ಎಂಗ ಮಾಡಬೇಕಲೆ
ಲೇ ಗಿಡದಾಗಳ ಮಾವಿನ ಗಿಡದು
ಒಂದು ಕೊಮ್ಮೆ ಮುರಿದು ಕೊಡ್ರಲೆ ಕಟ್ಟಿಗೆ ಕೈದಪ್ಪದು ಆಹಾ
ಕುಂಟಿಕೆಂತ ಕುಂಟಿಕೆಂತಾನೆ ನಾನು ಬಂದೆ ಬರತೀನಿ
ಅಂಬೊತ್ತಿಗೆ
ಆಗ ಕೊಮ್ಮೆ ಮುರಿದು ಕೊಟ್ಟರಪಾ ಒಂದು ಕೋಲು ಆಹಾ

ಆಗ ಇಡಕಂಡು ಕುಂಟಿಕಂತ ಬರ್ತಾನ ಲೇ ಹೋದಿತಲ್ಲ ಹುಲಿ ಊರಾಗ ಹೋಗಿ ಬಿಟ್ಟಾ ಇನ್ನೆಲ್ಲಿ ಸಿಗತಾನಲೇ ನಮಗೆ ಐದು ದಿವಸ ಕಾದಿವಿ, ಆಹಾ ಏ ಅವರು ಬಡಬಡ ಓಗೋದಿಲ್ಲ,

ನಿದಾನದಲ್ಲಿ ಹೋತಾರ
ನಾವು ಬಡಬಡ ಅಗಸಿಗೆ ಹೋಗಾನ
ದೊಡ್ಡಿಗೆ ಹೋಗೋ ದಿಡ್ಡಿಗೆ ಹೋಗಾನ

ಬಡ ಬಡ ಬಂದುಬಿಟ್ಟರು, ಅಹ ಬಂದರೆ ಬಂದಾರ ಕಿರೀಟ ಸೇರ ಪಾವದು ತಲೆಗಿಟ್ಟಾರು ಮಾರವಾಡೋನು ತಳಕ್ಕನೆ ಮಿಂಚು ಹೊಡಿತು ಲೇ ಇಲ್ಲಿ ಕಡ್ಡಿಗೆ ಸಿಗೆ ಬಿದ್ದೈತೆ, ಆಹಾ ಆಗ ತಲಿಗಿರೋದು ಬಂಗಾರ ಕಿರೀಟ ಬಿಟ್ಟು ಅವರು  ಹೋಗೋದಿಲ್ಲ ಮೊಂಡ ತಲೆ ಕೂದಲ ವಾಪ್ಸ ಬರತಾನ, ಆಹಾ ಬಂದಾಗ ಚೌಕಟ್ಟು ಕಟ್ಟಿ ಮಂತ್ರ ಬರದು ನಾವು ಕೊಲ್ಲೋನ, ಆಹಾ ಲೇ ಆ ಟೋಪಿ ತಗದು ಕೆಳಗ ಇಕ್ಕರಲೇ, ಆಹಾ ಟೋಪಿ ತಗದು ಕೆಳಗ ಇಟ್ಟರು, ಆಹಾ ಇಟ್ಟ ಮ್ಯಾಲೆ ನಿಂಬೆಹಣ್ಣ ತಗಂಡ್ರು, ಆಹಾ ಫಳ ಫಳ ಮಂತ್ರಿಸಿ ಬಾರೆಮುಳ್ಳೂ ಚುಚ್ಚಿದರು, ಆಹಾ ನಿಂಬೆಹಣ್ಣಿಗೆ, ಆಹಾ ಆ ಕಡೆಗೋಡಿಗೆ, ಈ ಕಡೆಗೋಡಿಗೆ ನಿಂತ ಕಂಡಾನಪಾ, ಆಹಾ ಆಗ ಅಮಾಸಿ ಕತ್ತಲು ಹನಿ ಉದುರಾತಾವ,

ರಾಜ ಹುಡಿ ಹುಡಿಕ್ಯಾಡಿಕೆಂತಪ್ಪಾ
ಅಲ್ಲಿಗೆವಾಗಿ ಬಂದಾನೆ ರಾಜ ಸೋಮಾಜಿ ಬಂದಾನ
ಇನ್ನ ರಾಜ ಮರಾಠಿ
ಮಾರ್ವಾಡಿ ಶೇಠೋನ ಬಂದೊತ್ತಿಗೆ
ಆಗ ಜೀವಕ್ಕಾಗಿ
ಅಲೆಲೆಲೆ ಇಲ್ಲೆ ಅಮ್ಮಯ್ಯೊ
ನನ ಕಿರೀಟ ಇಲ್ಲೇನು
ತಲೆ ಜಲ್ಮಕ ಕಳೆಯೋನು
ಇಲ್ಲಿ ವೈದಿ ಅಂತಾರ
ಅಂತ ಬಗ್ಗಿ ತಗೋವಾಗ ಅವರು ಏನು ಮಾಡಿದರು ಅಂದರೆ ಆಹಾ
ಬಗ್ಗೊ ತಗಂಡು ತಲಿಗೆ ಇಡಕೊಡವಾಗ ಆಹಾ
ನಿಂಬೆ ಹಣ್ಣು ಎದೆಗೆ ಹಾಕೀನೆ ಬಡಿದಾರೆ
ಎದೆಗೆ ನಿಂಬಿಹಣ್ಣು ನಾಟೈತೊ
ನಿಂಬೆಹಣ್ಣು ತಟ್ಟಿದ ಮ್ಯಾಲರಾ ಸಯ್
ಆತಗ ಅಷ್ಟು ಬಡದಾರ ಸಯ್
ನಯಾಪೈಸಾ ಬಾಯಿಲ್ಲರಾ ಸಯ್
ಮಾತನಾಡಲು ಬಾಯಿಲ್ಲರಾ ಸಯ್
ನಿಂತವನಾಗಿ ನೋಡರಾ ಸಯ್
ದೋಮನಂತ ಬಿದ್ದಾನ
ನಿಂತವನು ಕೆಳಗ ಬಿದ್ದಾನ
ಸವ್ ಮಂತ್ರದಿಂದಲೆ ಸಯ್
ಮಾಯಮಂತ್ರದಿಂದಲೆ ಸಯ್

ಆತ ಕೆಳಗ ಬಿದ್ದಾನ ರಾಜ ಸೊಮಯ್ಯಾ ನೋಡರಾ ಕೆಳಗ ಬಿದ್ದಮ್ಯಾಲೆ, ಆಹಾ ಆಗ ಏನಂತಾನ, ಆಹಾ ನೋಡಿದಾ ಆಗ ನೋಡಾಕ ಕಣ್ಣಿಲ್ಲ ಮಾತಾಡಕಾ ಬಾಯಿಲ್ಲ, ಆಹಾ ಅಷ್ಟು ಪರಾಕ್ರದೋನು, ಆಹಾ ಕಾಲಿದ್ದ ಕೈಲಿದ್ದ ಇದ್ದ ಮಾಡಿದೋನು, ಅಹಾ ಕೆಳಗ ಬಿದ್ದಮ್ಯಾಲೆ ನಿಂಬೆಹಣ್ಣು ಎದಿಮ್ಯಾಲೆ ಕುಂತೈತೆ, ಆಹಾ ಚೌಕಟ್ಟು ಕಟ್ಟೆ, ಆಹಾ ಇತನು ಕಾಲು ಮುರಿದೋನು ಗಿರಿಸಾಲಿಗಿರಿಮೋಲೆ

ಕುಂಟಿಕೆಂತಾ ಕುಂಟಿಕಂತಾಲೆ
ಎದಿಮ್ಯಾಲೆ ಕುಂತಕಂಡನಪ್ಪಾ
ಕಾಲೆ ಇಟ್ಟೆಬಿಟ್ಟಾನ
ಎಡಗೈಲೆ ಉದೋಳಿ ಇಡದಾನ
ಬಲಗೈಲಿ ಸೂರಿ ಇಡದಾನ

ಕುತ್ತಿಗೆ ಮ್ಯಾಲೆ ಸೂರಿ ಇಟ್ಟಾರೆ ಏ.. ಏ.. ಏ.. ಏ.. ನಾಲಾರು ನಾಯ್ಕರು ಕೇಳಾರೆ ಕಳ್ಳರು ನಾಯ್ಕರು ಲೇ ಅಪ್ಪಣಿ ಕೊಡ್ರಲೆ ಈ ಮಾರವಾಡಿ ಶೇಠದೋನು ಕುತ್ತಿಗೆ ಕೊಯ್ಯಿತೀನಿ ಅಂದಾ ಅಲೆಲೆಲೆಲೆ ಅದರಾಗ ಕಳ್ಳರದಾಗ ಇರ್ತಾರ ಒಬ್ಬನ ಧರ್ಮ ಒಬ್ಬನು ಕರ್ಮ ಒಬ್ಬನು ದುಷ್ಟ ಇರ್ತಾನ, ಆಹಾ ಅಲೆಲೆಲೆ ಪಾಪ ಅಷ್ಟು ಪರಾಕ್ರಮದೋನು ಹುಲಿ ಸಿಕ್ಕಿದಂಗೆ ಸಿಕ್ಯೆನಾ ಆಹಾ ಕೊಟ್ಟಿದ್ದು ದೇವ್ರು ತುಟ್ಟಿ ಮಾಡಿದ್ದಕ್ಕೆ ಸಿಕ್ಕಿಬಿಟ್ಟನಾ ಇಲ್ಲದ್ದರೆ ನಮ್ಮ ಕೈಲಿ ಸಿಗೋನಲ್ಲ, ಆಹಾ ಕೇಳಪಾ ನೋಡಾಕಕಣ್ಣಿಲ್ದಂಗ ಮಾಡೀವಿ, ಆಹಾ ಮಾತಾಡಕ ಬಾಯಿಲ್ದಂಗ ಮಾಡೀವಿ, ಆಹಾ ಎದ್ದಾಳ್ಲಿಕ್ಕೆ ಜೀವ ಇಲ್ಲದಂಗ ಮಾಡೀವಿ, ಆಹಾ ಸವಂತ್ರ ಬರೆದು, ಆಹಾ ನಾವು ಮಂತ್ರ ಬರೆದು ಮಾಟ ಮಾಡಿ ನಾವು ಜೀವಕೊಲ್ಲಿರಿ ಅನೇಕವೇನೆ ಪಾಪ, ಆಹಾ ನಾವು ಯಾಕ ಕೈಗನ್ನ ಸಿಗತೀವಪ್ಪಾ, ಆಹಾ ಒಬ್ಬರು ಪಾಪ ಪುಣ್ಯ ಅಂತಾರ ನನ ಮಾತು ಕೇಳರಿ, ಆಹಾ ನೋಡಪಾ ನಿಂಬೆಹಣ್ಣಿಗೆ ಎದೆಮ್ಯಾಲೆ ಕುಂತೈತೆ ನಿಂಬೆಹಣ್ಣು, ಆಹಾ ಆಗ ಎಲ್ಡು ಮುಳ್ಳು ಬಾರೆ ಮುಳ್ಳು ಕಿತ್ತಿಬಿಡು, ಆಹಾ ನೋಡಾಕ ಕಣ್ಣು ಮಾತಾಡಾಕ ಬಾಯಿ, ಆಹಾ ಕೈಮುಗ್ಯಾಕ ಕೈ, ಆಹಾ ಅಂಬೊತ್ತಿಗೆ ಸರೆ ಬಿಡಂತಾ ಆಗ ಮಾತಾಡಾಕ ಬಾಯಿ ನೋಡಾಕ ಕಣ್ಣು ಆಗ ಕೈಮುಗಿಯಾಕ ಕೈ, ಆಹಾ ಕೊಡೊವೊತ್ತಿಗೆ ಎಡಕಲಿದ್ದ ಬಲಕ ನೋಡ್ಯಾನೆ ಏ… ಏ… ಏ ರಾಜ,