ಕಳದೋನುತಾಗ ಬಂದಾರ
ಕಳ್ಳದೋನು ಕುತ್ತಿಗ್ಯಾಲೆ
ಎಡಗೈಲಿ ಕೂದಲು ಇಡದಾರ ಸಯ್
ಎಡಗಾಲನ್ನ ಇಡದಾರ ಸಯ್
ಎದೆಮ್ಯಾಲೆ ಇನ್ನರಾ ಸಯ್
ಬಲಗೈ ಇನ್ನ ನೋಡರಾ ಸಯ್

ಗಕ್ಕನೆ ಅಂಗೆ ಕುತ್ತಿಗೆ ಕೊಯ್ದಾರೆ ಗಿರಿಸಾಲಿ ಗಿರಿಮೋಲೆ ಕುತ್ತಿಗಾರೆ ಆಗ ಗಿರಿಸಾಲಿ ಗಿರಿಮೋಲೆ ಕುತ್ತಿಗೆ ಕೊಯಿಕಂಡರು ಆಗ ಅಣ್ಣನ ತಲೆ ತಗಂಡರು ಆಗ ಕುಲಕ್ಕೆ ಕುದ್ರಿಮ್ಯಾಲೆ ಕುಂತ್ಕಂಡು ನಾಯಿಗಳು ಕರಕಂಡು,

ಹಿಂದಕ ವಾಪಸು ಬರ್ತಾರ
ಕುದ್ರಿಮ್ಯಾಲೆ ಕುಂತ್ಕಂಡಾನ
ಅಣ್ಣಾನ ತಲೆ ತಗಂಡು
ಕಳ್ಳದೋನು ತಲೆ ತಗಂಡು
ನಾಯಿಗಳು ಕರಕಂಡು ಬರ್ತಾರೊ
ಕರಣಿ ಕಲ್ಲಿಗೆ ಬರ್ತಾರ ಅವರ ಬಂದೆ ನೋಡಯ್ಯಾ
ತಲೆ ಮ್ಯಾಲೆ ಇಡಕೊಂಡರೆ ಅವರೆ ದುಃಖ ಮಾಡ್ತಾರ
ನೀನು ಕುಂದ್ರ ಕುದ್ರಿ ಅಣ್ಣಯ್ಯೊ ಯಾರ ಕುಂದ್ರೋರುವೈದರಾ
ಕುದ್ರಿ ಬಿಟ್ಟೆ ಹೋದಿದೆ ಮಗನೆ ಬಿಟ್ಟೆ ಹೋದಿದೆ
ಎಷ್ಟು ಇರತಾನಂತ ಅಣ್ನಯ್ಯ ನಮ್ಮಿಗಾಗಿ ಆಸೆ ಇತ್ತರಾ
ನೀನು ಇರತೀಯಾಂತ
ಯಾರಿಗೇನು ಪಾಪ ಮಾಡೀವಿ ಯಾರಿಗೇನು ಕರ್ಮ ಮಾಡೀವಿ

ಒಬ್ಬರನ ನಾವು ಬೈದಿಲ್ಲೆ ಒಬ್ಬರನ ಬಡಿದಿಲ್ಲ ಅಂತಾ ಕುದ್ರಿ ತಲ್ಲಿ ದುಃಖ ಮಾಡಿ ಈಗ ಎಲ್ಡು ತಲೆ ತಗಂಡು ಆಗ ಪಾಂಟಿಕೆ ಏರಿ ಈಗ ಮನಿಗೆ ಬಂದು, ಆಹಾ ಆ ತಾಯಿ ಈಗ ಹೆಂಡ್ತಿ ಅಂಬಾಕಿ ಪಾದ ಇಡ್ಕಂಡು ಆಗ ದುಃಖ ಮಾಡಿ ನಿನ್ನರಾ ಆ.. ಆ.. ಆ.. ಅಂತಾ ಬಾಯಿ ಆ ಎಮ್ಮ ಮಾತಾಡಲಾರರಮ್ಮಯ್ಯ ಮೊಬ್ಬು ಬಂದೈತೆ ಆಯಮ್ಮಗೆ ಜನಲೋಕ ಸುತ್ತಿಕೊಂಡರಾ ಕರಣೆ ಕಲ್ಲಾಗ ಊರಾಗ ಎಪ್ಪಾ ಮಾರವಾಡಿಶೇಠಿದೋರಿಗೆ ಎಂತಾ ಕಷ್ಟ ಬಂತುರಾ ಏ.. ಏ.. ಎಪ್ಪಾ ಬಾಳೋನು ಇನ್ನ ಲೋಕಕೆ ಎಂತಾ ಕಷ್ಟ ಇನ್ನ ಬಾಳಲಿ ಹಾಳು ಮಾಡಿದರೆ ಲೋಕಕೆ ಅಂತಾ ಜನ ಲೋಕ ದುಃಖ ಮಾಡಿತು, ಆಹಾ ಆಯಮ್ಮನ ಎಮ್ಮ ಅತ್ತಿಗೆ ನೀನು ಎದ್ದೇಳಮ್ಮ ತಾಯಿ ಎಪ್ಪಾ ಮೈದನೋರೆ ಇವಾಗ ಹೋದರಿ ಆಗಲೇ ಕಳ್ಳರು ಸಿಕ್ಕರ ನಿಮಕೈಗೆ, ಆಹಾ ಎಮ್ಮ ದಾರಿ ಇಡಕಂಡು ಓಡುತ್ತಿದ್ದರು ತಲೆ ಬೀಸಾಕಿ ಓಡಿ ಹೋದರು ಈಗ ನಾಲೋರು ಓಡಿ ಹೋದರು ಒಬ್ಬನು ಸಿಕ್ಕರೆ ಕುತ್ತಿಗೆ ಕೊಯ್ಯಿಕೊಂಡು ಬಂದೀವಿ ನಾಯಿಗಳು ಹೊಡಕಂಡು, ಆಹಾ ಯಾರಪ್ಪಾ ನಿಮ್ಮಣ್ಣನ ಕಡ್ಯಾಕ ಬಂದೋರು ಇಗೋ ಇವನೆ ಕಳ್ಳ ಓಡೋನು ಕುತ್ತಿಗ ಇಡಕಂಡು ಬಂದೀವಿ ಕೊಯಿಕೊಂಡು, ಆಹಾ ಏ ಇವನ ಮೊಖ ನಿಮ್ಮಣ್ಣನ ಕಡಿಯೋನು, ಆಹಾ ನಿಮ್ಮಣ್ಣ ಕುತ್ತಿಗೆ ಕೊಯ್ಯೋನು ಛೆ ನೀವು ಇಂಗ ಹೇಳಿದರೆ ನಾನು ಒಪ್ಪದಿಲ್ಲ, ಆಹಾ ಆವಾಗ ಹೋದರಿ ಅಣ್ಣಾ ಹೊತ್ತಕಂಡು ಬಂದಿರಿ ಆಹಾ ಇವಾಗ ಹೋದರಿ ಆಗ್ಲೆ ಕಳ್ಳರು ಸಿಕ್ಕರ ನಿಮಗೆ, ಆಹಾ ಎಪ್ಪೊ ತಲೆ ಕಡದು ಆಗ ಬಚ್ಚಿಕ್ಕಿ ಬಂದಿರಿ ಇನ್ನ ಜಲ್ದಿ ಓಡಿ ತಂದಿರಾ ಆ.. ಆ.. ನಿಮ್ಮಣ್ಣ ತಲೆ ತಂದಿರಾ ಆ.. ಆ… ನೀವೆ ಕಡದು ತಂದಿರಾ ಮಾರ‍್ವಾಡಿಶೇಠಿ ಕುಲ ಏ.. ಏ..,

ನೀವು ಅಣ್ಣ ತಮ್ಮರು ನಂಬಿಕೆ ಇಲ್ಲರಾ
ಮಾರ್ವಾಡಿಶೇಠಿ ಹುಡುಗರಾ
ಅಣ್ಣಾ ತಮ್ಮರು ನಂಬಂಗಿಲ್ಲರಾ
ಎಮ್ಮಾ ಅಂತ ಮಾತನುಡಿಬ್ಯಾಡವೇ ಅತ್ತಿಗೆ
ಎಮ್ಮಾ ಪಾದಾಗ್ನ ಅಮ್ಮಯ್ಯ

ಅಣ್ಣನ ನಾವು ಕಡದಿಲ್ಲ ಆ.. ಆ… ಅಣ್ಣ ಜೀವ ಕಡದಿಲ್ಲ… ಅಣ್ಣಾನ ಜೀವಕಡಲಿಲ್ಲೆ ಅತ್ತಿಗೆ ಅಂತಾ ಮಾತನುಡಿಬ್ಯಾಡಮ್ಮ ಜನ ಲೋಕ ಬುದ್ದಿ ತಿಳಿದೋರು ಬುದ್ದಿ ಇಲ್ಲದೋರು ಜನಲೋಕ ಹೆಣ್ಣುಗಂಡು ನೋಡಿ ನೋಡಮ್ಮಾ ಒಂದು ಹೊಟ್ಯಾಗ ಬಂದು ಒಂದು ಮೊಲೆ ಹಾಲು ಕುಡಿದು ಎಂಗ ಕಡೀತಿದ್ದರಮ್ಮ ಅಣ್ಣನಾ, ಆಹಾ ಛೆ ಅಂತ ಮಾತ ನುಡಿಬ್ಯಾಡಮ್ಮ, ಆಹಾ ಇಲ್ಲಪಾ ಹಿಂದಲ ಕಾಲ ಇವರು ಹುಟ್ಟಿದ ಐದು ವರುಷಾಕೆ ತಂದಿ ಬಂದು, ಆಹಾ ಮಕ್ಕಳ ಕೈಕಾಲು ಕಟ್ಟಿ ಆಹಾ ಆಸ್ತಿ ಹೊಯಿದೋನು ಈಗ ಇವರು, ಏನಂತಾ ತಿಳಕಂಡಾರ ಅಂದ್ರೆ ನಮ್ಮಣ್ಣ ಮದುವಿ ಮಾಡಿಕೆಂಡಾ ಮಗ ಹುಟ್ಟಿದ, ನಮಗೆ ಹೆಣ್ಣು ಹುಡುಕಲಿಲ್ಲ ನಮಗೆ ಮದುವಿ ಮಾಡಲಿಲ್ಲಂತ

ಇವರೇ ಕುತ್ತಿಗೆ ಕೊಯ್ದಾರ
ಇವರೆ ಬಿಟ್ಟರೆ ಯಾರಿಲ್ಲ
ನೀವು ಹೇಳಿದ್ರೆ ಕೇಳದಿಲ್ಲಪಾ
ಎಮ್ಮಾ ದೇವ್ರಾಣಿ ನಿನ್ನ ಪಾದಾಗ್ನ
ದೇವ್ರಾಣಿ ನಾವು ಕಡದಿಲ್ಲೆ
ಆಗ ಜನಲೋಕ ನೋಡರಾ ಸಯ
ಎಂಗೆಂಗ ಮಾತಾಡಿ ಬಿಡತಾರ ಸಯ್
ಆಮೆ ಗಂಡ ಕೊಯಿದ ಹೊತ್ತಿಗೆ ಸಯ್
ಇನ್ನ ಹುಚ್ಚು ಬಂದಂಗರಾ ಸಯ್

ಅವನು ಮಾತ ಇವನಿಗೆ ಬ್ಯಾಡಂತಾ ಎಂಗನಾ ಅಂದ ಕಮ್ಮಲಪಾ ಆಯಮನ ಮಾತು ಇಡಿಬ್ಯಾಡರಿ ಇಗೊ ನುಂಡಗೆ ತಲೆಗೆ ಈಗ ಬೆಳ್ಳಿ ತಂತಿ ತಗಂಡು ಈಗ ಸೂಜಿ ತಗಂಡು ಸೂಜಿಗೆ ಪೋಣಿಸಿ

ನೀವೆ ಪೋಣಿಸಿ ಒಲಿರಪ್ಪಾ
ತಲೆಗೆ ಮುಂಡಗ ಒಲಿದಾರೆ
ಅವರು ಪೋಣಿಸಿ ಬಿಟ್ಟಾರ ಸಯ್
ಅವರೆ ಇಟ್ಟೆ ಬಿಟ್ಟಾರ ಸಯ್
ಅಣ್ಣಾಗ ಮೈಯೆ ತೊಳಿತಾರ ಸಯ್
ಬಿಸಿನೀರು ಕಾಸಿ ಬಿಟ್ಟಾರ ಸಯ್
ಸತ್ತವನಿಗೆ ಮೈಯೆ ತೊಳದು ಬಿಟ್ಟಾರ
ಸತ್ತೋನಿಗೆ ಮೈಯೆ ತೊಳದು ಬಿಟ್ಟಾರ
ಅಣ್ಣಾಯ್ಯಗಾಗಿ ನೋಡಯ್ಯಾ
ಅವರು ನೂರು ನಡವಿಗೆ ಸಯ್
ಕೈಯಾಗ ಚಂದ್ರಾಯುಧ ಕೊಡ್ತಾರ ಸಯ್
ಬಂಗಾರ ಕಿರೀಟ ಇಟ್ಟಾರೆ ಸಯ್
ನೂರು ಪಾನಾಕಿ ಇಟ್ಟಾರ ಸಯ್
ಅಣ್ಣನಿವಾಗಿ ನೋಡರಾ ಸಯ್
ಬ್ಯಾಕಳ ಕಟ್ಟಿಗೆ ಇಟ್ಟಾರ ಸಯ್
ಹತ್ತು ದಡೇವು ಹೂ ತಂದಾರ ಸಯ್
ಅಣ್ಣಾನಿಗಾಗಿ ಹಾಕ್ಯಾರ ಸಯ್
ಅಣ್ಣನ ಕುಂದರಿಸಿ ಬಿಟ್ಟಾರೆ
ರಾಜ ಸೋಮಗ ನೊಡಾರ
ಸೇರು ಮಲ್ಲಿ ಹೂವ ಹಾಕ್ಯಾರ ಸಯ್
ತಾಯಿಗೆ ಸೂಸುಗ ಹಾಕ್ಯಾರ ಸಯ್
ಅಮ್ಮ ಅತ್ತಿಗೆ ನೋಡರಾ ಸಯ್
ಸೂಸುಗ ಆಕ್ಯಾರ ಆಯಮಗೆ ಸಯ್
ಮಗನ್ನ ಎತ್ತಿಕೊಂಡಾಳ ಸಯ್
ಹೆಣಮಕ್ಕಳು ಊರಾಗರಾ ಸಯ್
ತುಂಬಾ ಸೆರಗೆ ಹಾಕ್ಯಾಳ ಸಯ್
ಅತ್ತಿಗೊಬ್ಬರು ಇತ್ತಗೊಬ್ಬರು ಸಯ್
ಆಯಮನಾ ಕೈ ಇಡದಾರ
ಅತ್ತಿಗೊಬ್ಬರು ಇತ್ತಗೊಬ್ಬರುರಾ
ಆಯಮನಾ ಕೈ ಇಡದಾರೆ
ಹೋದವನು ಬರಂಗಿಲ್ಲಮ್ಮೊ
ಮಗ ಮೊಖನೆ ನೋಡಮ್ಮ
ಎಂತ ಪಾಪದವನು ಕೊಯಿದಾರೋ
ಯಾ ಕರ್ಮಿದವನು ಬಂದಾರೋ
ಇದ್ದುರೋರು ಊರಾರಾ ಸಯ್
ಬೇವುರೋರೆ ಬಂದಾರೆ ಸಯ್
ಯಾವನು ಕಳಿಸಿಬಿದ್ದರೆ ಸಯ್
ಮಕ್ಕಳು ಮರಿಗಳು ಇದ್ದಾವೆ ಸಯ್
ಅವನು ಗೊಡ್ಡವನಾಗಿರೋನು ಸಯ್
ಎಂತ ಪಾಪ ಮಾಡಿದವನುರಾ ಸಯ್

ಉದ್ದಾರಾಗೋ ಮಗನ್ನ ಹಾಳು ಮಾಡಿದವನು ಹಾಳಾಗ ಅವನು ಉದ್ದಾರಾಗೋನ ಹಾಳ ಮಾಡ್ತಾನೋಡಾರೆ ಅಂತಾ ಜನ ಲೋಕೆಲ್ಲಾ ಬೈಕೆಂತಾ ಲಾಜ ಭಜಂತ್ರ ಕೂಡ,

ಉತ್ತರ ಕಡೆಗೆ ನೋಡಣ್ಣಾ
ಕಾಟಿ ರುದ್ರಾಗೆ ಬಂದಾರೆ
ಮೊಣಕಾಲ್ನಷ್ಟು ಕುಣಿತೋಡಿ
ಗಂಧವ ಚೆಕ್ಕಿ ಹಾಕ್ಯಾರೆ
ಬುಡ್ಡಿ ಚಿಮಣಿ ಎಣ್ಣೆ ಹಾಕ್ಯಾರ
ಅಣ್ಣನ ಕುಂದರಿಸಿ ಬಿಟ್ಟಾರ
ಆಗ ಬ್ಯಾಕಳ ಕಟ್ಟಿಗೆ ಆಗ ತಂದು ಇನ್ನ ಕುತ್ತಿಗೆ ಬೆನ್ನಿಗಿಟ್ಟರು
ಅಣ್ಣಾಗೆ ಉರಿಗೆ ಅಚ್ಯಾರ
ದಗ ದಗ ಉರಿತಾನೆ
ಅಣ್ಣಾ ಗಾವಿದಾ ಅಣ್ಣಯ್ಯ ಆಹಾ
ಎಮ್ಮ ತಮ್ಮ ನೋರು ಬಿಡಾಕ ಹೋತರಾ
ಬೆಂಕಿ ಹೊಳಗ ಬಿಳಾಕ ಹೋತರಾ
ಸತ್ತೋನು ಸತ್ತೆ ಅಣ್ಣಾಯ್ಯಾ ರಾಜ

ಅಣ್ಣಾ ನಮ್ಮನೆಲ್ಲ ಲೋಕ ಅಂತಾಳ ನಮ್ಮ ಅತ್ತಿಗೆ ಸತ್ತೊನು ಸತ್ತಿ ನೀನು ರಾ ಆ… ಆ… ಅಣ್ಣಾಯ್ಯ ನಮ್ಮಿಗೆ ಕಷ್ಟ ಕೊಟ್ಟಾಳ ನಾವೇನು ಕಡಿದಿವಂತಾಣ್ಣಾ ಏ.. ಏ.. ನಿನ್ನ ನಾವೆ ಕಡಿದಿವಂತೆ ನಿನ್ನ ನಾವೆ ಬಡಿದಿವಂತೆ, ಆಹಾ ನಮ್ಮ ಅತ್ತಿಗೆ ನಮ್ಮಿಗೆ ಬೈತಾಳ ನಮ್ಮತ್ತಿಗೆ ನಮ್ಮನ ಪಾಪಸ ತಾಳೆ ಎಮ್ಮ ಅತ್ತಿಗೆ ಮಾತ ಬಿಡಲಾರಿವೆ ಆ.. ಆ.. ಆಯಮ ಮಗ ಬೀಳಾಕ ಹೋತಾಳ ಜಗ ಲೋಕೆಲ್ಲಾ ಇಡಕಂಡರು, ಆಹಾ ಬೀಳಬ್ಯಾಡರಪಾ ಆತಗ ಅದೃಷ್ಟ ಇಲ್ಲ ಯಾವನು ದುಷ್ಟ ಜೀವ ತಗದಾನ ಎಪ್ಪಾ ಅವನೇನು ಉದ್ದಾರ ಆಕ್ತಾನ ತಮ್ಮ ನೀವನ ಇದ್ದು ರಾಜ್ಯವಾಳರಪಾ, ಆಹಾ ಏನ್ ಪರವಾಯಿಲ್ಲ ದುಃಖ ಮಾಡಬ್ಯಾಡರ‍್ರೀ ಆಹಾ ಅಂತ ಜನಲೋಕ ಹೇಳಿದರು ತಮ್ಮ ಹೋದೋನು ಹೊಗ್ಯಾನ ಬರಂಗಿಲ್ಲ ಮಗನ ಮೊಖ ನೋಡಿ ಮೈದನೋರನ ಇಡಕಂಡು

ನೀನೆ ಲೋಕ ಆಳಮ್ಮಾ
ನೀನೆ ಬುದ್ದಿವಂತಾಳೆ
ಗ್ಯಾನವಸ್ತರ ಮಗಳಮ್ಮ

ಲೋಕದಾಗ ಇದ್ಯಬರಾಮ್ಮ ಅಂಬೊತ್ತಿಗೆಲ್ಲ ಆರು ಇನ್ನ ಉರಿದು ಬೂದಿಯಾಗಿ ಕುಪ್ಪೆ ಬಿಟ್ಟು ಬಿಡ್ತಪಾ ಬೂದೆಲ್ಲ ಕೂಡಿ ಮಾಡಿದರು ಸರೆಮ್ಮಾ ಈಗ ನೀನು ತಾಳಿಕಟ್ಯಾನ ಆಹಾ ಈಗ ಬಳೆ ಐದಾವ ತಾಳಿ ಐದಾವ

ಗಂಡಗ ರಂಡೇವು ಆಗಮ್ಮ
ಮುತ್ತೈದೆ ತನ ಕಳಿಯಮ್ಮಾ

ಅಂದರೆ ಆ ಮಾತಿಗೆ ಅಂತಬಾಯಿ ಏನಂತಾಳ ನೋಡಪಾ ನನಗಂಡನ ಯಾರು ಕಡದಿಲ್ಲ, ಆಹಾ ನಮ್ಮ ಮೈದನೋರೆ ಕಡದಿದ್ದು, ಆಹಾ ಇವರಿಬ್ಬರ ನನಗಂಡನ ಕಡದಿದ್ದು, ಆಹಾ ಇನ್ನ ಇವರನ ಬಿಟ್ಟರೆ ಯಾರು ಕಡದಿಲ್ಲ ನಾನು ರಂಡೆ ಆಗಾದಿಲ್ಲ, ಆಹಾ ಈಗ ಬಳೆ ತಗೆದಿಲ್ಲ ಮುತ್ತು ತಗೆದಿಲ್ಲ ತಾಳಿ ಅರೆದಿಲ್ಲ, ಆಹಾ ಅಮ್ಮಾ ಗಂಡ ಸತ್ತಮ್ಯಾಲೆ ಇಟಕಂಡ ಇದ್ದರೆ ಎಂಗಮ್ಮಾ, ಆಹಾ ಆದರೆ ನಂದು ಅಂತಾರ ನಿಂದು ಅಂತಾರ, ಆಹಾ ಏನಪಾ ಇಸು ದಿನಾ ತೂಕ ಆಗಿದ್ದಿಲ್ಲ ಇವಾಗ ತೂಕ ಆಯಿತಾ, ಆಹಾ ಏ ಎಮ್ಮಾ ಆಕೆಗಿ ಗಂಡ ಸತ್ತರೇನೆ ಅಂಗೆ ಬಳೆ ಇಟ್ಟಕೆಂಡಳಾ, ಆಹಾ ಅಂಗೆ ಮುತ್ತು ಅಂಗೆ ತಾಳಿ ಉಳಿಸಿಕೆಂಡಾಳ, ಆಹಾ ಈಕೆ ರಂಡೆ ಆಗಿಲ್ಲ ಗಂಡಗ ಆಹಾ ಜನಲೋಕ ಅಂತಾರಮ್ಮ, ಆಹಾ ಅಂದರೆ ಅವರು ಬಾಯಿಲಿ ಅನ್ನಕಂತಾರ, ಆಹಾ ನನಗೇನನ ತಟ್ಟತೈತಾ, ಆಹಾ ಏ ಎಮ್ಮಾ ಅಂಗಲ್ಲ ನನ್ನ ಗಂಡನ ಯಾವನು ಕಡಿಸ್ಯಾನೊ,

ಅವನ ಕಡಿಯಾ ಬೇಕಾಲೇ ಅನವನಿಗೆ ರಂಡಿಯಾಗಬೇಕು
ಅವನು ಜೀವಗ ರಂಡೆವಾತೀನಿ
ಗಂಡ ಜೀವಾಗ ರಂಡೆ ಆದಂಗ
ನನ್ನ ಬಳೆ ಅವನಿಗೆ ತೊಡಸ್ತೀನಿ ಸಯ್
ನನ್ನ ತಾಳಿ ಅವನಿಗೆ ಕಟ್ಟತೀನಿ ಸಯ್

ಐದು ಬೊಗಸ ಮೊಣ್ಣು ಹಾಕತೀನಿ ಅವನಿಗೆ ಬೆಂಕಿ ಇಡತೀನಿ ಅವನಿಗೆ ತಾಳಿ ಕಟತೀನಿ ಅಷ್ಟೊತ್ತನಕ ಮೈದುನಾ ನಾನು ರಂಡೇವು ಆಗದಿಲ್ಲಪಾ,

ನಿಮ್ಮಣ್ಣಾನ ಯಾವನು ಕಡಿಸ್ಯಾನೋ ಸಯ್
ಅವನ್ನ ಕಡಿಕಂಡು ಬರ್ತಾರಾ

ನಿಮ್ಮಣ್ಣನ ಯಾವನು ಕಡದನಾ ಅವನ ಕಡಿಕಂಡು ಬರ‍್ರಿ ನೀವು, ಆಹಾ ಅಮ್ಮ ಕಳ್ಳರು ಕಡಿಕಂಡು ತಲೆ ತಗಂಡು ಹೋತ್ತಿದ್ದರು ಮತ್ತೆ ಕಳ್ಳರು ಕಡದ ಏನೆ ಕಡಕಂಡು ಬಂದೀವಲ್ಲಮ್ಮಾ ಆಹಾ,

ಇವರು ಕಡದಿಲ್ಲ ನೋಡಪಾ
ಲಂಚಕೊಟ್ಟರೆ ಯಾರು ಕಡಿತಾರ

ಸರೆ ನಾನೆ ಸಾವಿರ ರೂಪಾಯಿ ಕೊಡ್ತೀನಿ ಇಂತವರನಾ ಕಡಿದು ಬಾ ಅಂತೀನಿ, ಆಹಾ ಕಡದು ಬರತೀಯ ಅಂಗಲ್ಲಾ ಕಡಿದು ಹೋದ ಏನಲ್ಲಾ,

ರೊಕ್ಕ ಯಾವನು ಕಡಿಸ್ಯಾನೊ ಅವನ್ನೆ ಕಡಕಂಡು ಬರಬೇಕು
ಅವನು ಕೊಳ್ಳಗ ತಾಳಿ ಕಟ್ಟಬೇಕು ಅವನಿಗೆ ರಂಡೆ ಆಗಬೇಕು
ಇಷ್ಟು ಮಂದಿ ಹೇಳಿದರೆ ನೋಡಪಾ ನಾನೇ ಕೇಳವಳು

ಯಾರು ಹೇಳಿದರೆ ಕೇಳಂಗಿಲ್ಲಾ ಎಷ್ಟು ಹೆಣಮಕ್ಕಳು ಗಣಮಕ್ಕಳು ಎಷ್ಟು ಮಂದಿ ಹೇಳಿದರೆ ಆಯಮ್ಮ ಕೇಳಂಗಿಲ್ಲ, ಆಹಾ ಆ ಅರ್ಥವಾಯಿತು ನನ್ನ ಜೀವಾನ ಕಡಿದವನು ಅವನ ಜೀವ ಕಡಿಬೇಕು ಅವನ ಜೀವಕ ರಂಡೆ ಆಗಬೇಕು ನಾನು, ಆಹಾ ಎಮ್ಮಾ ನಾವೇನು ಮಾಡಾನ ನೋಡಪಾ ಆಯಮ್ಮ ಹೇಳಿದರೆ ಕೇಳಂಗಿಲ್ಲ ನೋಡು ಯಾರನ್ನ ಅಮ್ಮಲಿ ಅಂತಾಳ ನನಗೆ ತೂಕ ಆತೈತೆ ನಿಮ್ಮಗೆ ತೂಕ ಆತೈತಾ ಅಂತಾಳ ಇನ್ನೇನ ಮಾಡತೀಯಪಾ,

ಐದೈದು ಬೊಗಸೆ ಮಣ್ಣಾಕಿ
ಮುತ್ತಿನ ಸರ ಗೀಲೆ ಶರಣಮ್ಮ
ಆಗ ತಮ್ಮನೋರು ಬಾರ್ಲ ಬಿದ್ದಾರೆ
ಅಣ್ಣಾಗ ಶರಣೆ ಮಾಡ್ಯಾಕ
ಮಗನ ಒಳ್ಳಾಡಿಸಿ ಬಿಟ್ಟಾರ
ಎಪ್ಪಾ ನಿಮ್ಮ ತಂದೆ ಹೋಗಿ ಬಿಟ್ಟಾನೊ
ಆಗ ಮಗನ ಎತ್ಯಾರ
ಸಮಾದಿ ಕಟ್ಟಿಸಿ ಬಿಟ್ಟಾರೆ
ನಿವಾಳಿ ಕಟ್ಟಿಸೆ ಬಿಟ್ಟಾರ
ಸಮಾದಿ ಒಂದೆ ಕಟ್ಟಿಸ್ಯಾರ
ಸಮಾದಿ ಒಂದೆ ಮಾಡ್ಯಾರ

ಕಟ್ಟಿ ದಡೇವು ಮಲ್ಲಿಗೆ ಹೂ ಹಾಕಿ ಪ್ರದರ್ಶನ ಮಾಡಿಕ್ಯೆಂಡು ಮನಿಗೆ ಬಂದರು, ಆಹಾ ಮನಿಗೆ ಬಂದ ಮ್ಯಾಲೆ ಅಣ್ಣನ ಕುರ್ಚಿ ಇಡಕಂಡು ಅಣ್ಣಾ ಇಷ್ಟೊತ್ತಿನಾಗ ಕುಂತಿದ್ದೆ ಅಣ್ಣಾ ಇವತ್ತು ಯಾಕ ಕುಂತಿಲ್ಲ ಇವತ್ತಿನಾಗ ಇದ್ದಿರಾ ಅಣ್ಣಯ್ಯಾ ಅಣ್ಣಾ ಸೋಮಾಜಿ ರಾಜನೆ ನಮ್ಮನ ಪರದೇಸಿ ಮಾಡಿದೆ ಏ.. ಏ.. ಅಣ್ಣಾನ ನಮ್ಮನ ಏನಗತಿ ಮಾಡಿದೆ…. ದೊಡ್ಡ ಅಣ್ಣಾ ಕೇಳಣ್ಣಾ ಒಂದೊತ್ತಿಗೆ ಇವರು ದುಃಖ ಮಾಡಿಕೆಂತಿದ್ದರೆ ಯಾರಿಗೆ ಗೊತ್ತಾಗೈತೆ ಡಾವುಡಿಂಗಲದೋರಿಗೆ ಆಗ ಕುಲ್ಲಕ್ಕೆ ಸಾವುಕಾರ ಎಲ್ಲಪ್ಪಾ,

ಅವ್ರು ಕುದ್ರಿಮ್ಯಾಲೆ ಕುಂತಕಂಡಾರೆ
ಅವ್ರು ಬಂದೆ ಬಿಟ್ಟಾರ
ಮಗಳು ಪಾದಕೆ ಬಿದ್ದಾರ ಸಯ್
ಡಾವುಡಿಂಗಲದೋರು ಬಿದ್ದಾರ ಸಯ್
ನನ ಊರಿನಾಗ ಇರಲಿಲ್ಲಮ್ಮಾ ಸಯ್
ಇರಲಿಲ್ಲ ಅಳಿಯದೋರುರಾ ಸಯ್
ಯಾರು ಕಳಿಸದಾರು ನೋಡುರಾ ಸಯ್
ಯಾವನು ನಿನ್ನ ಕಡದಾನ ಸಯ್
ಇನ್ನ ಯಾರು ಕುಲದಾಗರಾ ಸಯ್

ಹರೇದೋರು ಸತ್ತಾರ ಹರೆಯದವನ ಕೊಲ್ಲಿಬಿಟ್ಟಾರ ಮಗಳು ಪಾದ ಇಡಕಂಡು ದುಃಖ ಮಾಡ್ತಾನ, ಅಹಾ ಎಪ್ಪ ಯಾರು ಕಡದಿಲ್ಲ ನನ ಗಂಡನಾ ನಿನ್ನ ಅಳಿಯನ ಯಾರು ಕಡದಿಲ್ಲ,

ಇವರೇ ಮೈದನೋರು ಕಡದಾರ
ಕಡೆಲೋರು ಯಾರು ಕಡಿದಿಲ್ಲ
ಮಾರ್ವಾಡಿಶೇಠಿ ಕುಲದಲ್ಲಿ
ಅಣ್ಣಾ ತಮ್ಮರು ಸೇರಂಗಿಲ್ಲಣ್ಣಾ
ಬೆಳ್ಳಿಯಾಪಾರ ಮಾಡವರು ಲೇ
ಆಸ್ತಿಗೆ ಆಸೆ ಬಿದ್ದವರು ಸಯ್
ಬೆಳ್ಳಿ ಬಂಗಾರಗ ಆಸೆ ಬಿದ್ದವರು
ಬೆಳ್ಳಿ ಬಂಗಾರಗ ಆಸೆ ಬಿದ್ದವರು
ಜೀವಗ ಆಸೆ ಬಿದ್ದಿಲ್ಲ

ಇವರೇ ಕಡದಿದ್ದು ನನ್ನ ಮೈದನದವರು ಅಂದರೆ ಅಮ್ಮಾ ಮಗಳೆ ಹುಚ್ಚು ಐತೇನಮ್ಮ ನಿನನಗೇನನ್ನ ಆಗ ಮೈದನೋರು ಎಂಗ ಕಡಿತಿದ್ದರಮ್ಮ ಬೆನ್ನ ಹಿಂದೆ ಹುಟ್ಟಿದೋರು ಎಂಜಲ ಹಾಲು ಕುಡಿದೋರು ಇಲ್ಲ ಅವರೆ ಕಡಿದದ್ದು ಮಗಳಾ ಬುದ್ದಿ ಇಲ್ಲಮ್ಮಾ ಈಗ ಜೀವದ ಗಂಡಗ ರಂಡೆ ಆಗಬೇಕು ಮಗಳಾ ಛೆ ಛೆ ನಾನು ಆಗಾದಿಲ್ಲ ನೋಡು, ಆಹಾ ನಿನ್ನ ಹೊಟ್ಯಾಗ ಹುಟ್ಟಿರಬೋದು ಈಗ ನನ ಮಾತ ನೀನು ಕೇಳಬೇಕು ನಿನ ಮಾತು ನಾನು ಕೇಳೋಳು ಅಲ್ಲ, ಆಹಾ ಯಾರಮ್ಮಾ ಯಾಕಿಲ್ಲ ನನ್ನ ಗಂಡು ಜೀವಕ ನಾನು ರಂಡೆ ಆಗತೀನಿ, ಆಹಾ ಇನ್ನೇನು ಹೇಳಾನ ಸಾವುಕಾರ ಎಲ್ಲಪ್ಪ ಹೇಳಿದಾ ಕೋಮಟ್ರಾತ ಈಗ ಅಡದ ತಂದೆ ಹೇಳಿದಾ ತಾಯಿ ಹೇಳಿದಳು ಯಾರು ಹೇಳಿದರು ಕೇಳದಿಲ್ಲ, ಆಹಾ ತಗೆದಿಲ್ಲ ಅಂಬೊತ್ತಿಗೆ ನಿನ್ನ ಇಷ್ಟ ತಾಯಿ ಏನಪಾ ಕೊಮಟ್ರಾತ ನೋಡಿದಾ,

ಎಂಗ ಮಾಡಬೇಕು ಹುಡುಗರನ ದುಃಖ ಮಾಡಿ ಸುತ್ತು ಹೋತರಾ
ಏನಪಾ ನಾಳೆ ಇಲ್ಲ ನಾಡ್ದ
ಮನಿ ಅಂಗಡಿ ಬೀಗ ಅಕ್ಕಂಡು ಬರ್ತೀನಿ
ಇಗೋ ಇಲ್ಲೆ ಜೋಪಾನ ಮಾಡ್ತೀನಿ

ಆಗ ಇಡದೀನಂತೆ ಈಗ ಇಡಿತೀನಿ, ಆಹಾ ತಾಯಿ ತಂದೆ ಇಲ್ಲದ ಮಕ್ಕಳು ಅಂತಾ ಸಾವುಕಾರ ಎಲ್ಲಪ್ಪ ಈಗ ಡಾವುಡಿಂಗಲದೋರ ಹೋಗಿ ಬಿಟ್ಟರು ಅವರು ಬಂದಂಗೆ ಹೋದಮ್ಯಾಲೆ ಈ ಹುಡುಗರು ದುಃಖ ಮಾಡಿ ಮಾಡಿ ಹೊಟ್ಟೆಸಲಾಗಿ ನೀರಡಿಕೆ ಆತತೆ ಅತ್ತಿಗೆ ಮನಿಗೆ ಬಂದರು,

ಅಮ್ಮ ಅತ್ತಿಗೆ ಶರಣಮ್ಮ
ನೀನೆ ನಮ್ಮಣ್ಣಾ ಐದೀಯೊ
ನಾವೇ ತಮ್ಮನೋರು ಇದ್ದಂಗ
ನಮ್ಮಿಗೆ ಅನ್ನ ನೀಡಮ್ಮ
ನೀರು ನಮ್ಮಿಗೆ ಕೊಡಮ್ಮ
ಎಡಗೈಲಿ ಅನ್ನ ಇಡತಾಳ
ಎಮ್ಮ ಎಡಗೈಲಿ ಇಟ್ಟರೆ ನೋಡರಾ ಸಯ್
ಎಂಗ ಊಟ ಮಾಡನಾ ನಾವುರಾ ಸಯ್
ಇನ್ನ ಎಡಗೈ ನೋಡುರಾ ಸಯ್
ಬಲಗೈಲಿದ್ದ ಇಡಮ್ಮ ಸಯ್
ಜೀವಕ ಊಟ ಮಾಡೇವಾ

ಬಲಗೈಲಿದ್ದ ನೀಡಮ್ಮ ಜೀವಕ ಊಟ ಮಾಡೇವಾ ಸರೆಪಾ ಮೈದುನಾರೆ ನಿಮ್ಮಣ್ಣಾನ ಯಾವನು ಕಡದಾನ ಕಡಿಕಂಬರ‍್ರೀ ಈಗ ಮುತೈದೆ ತನ ತಗಿತೀನಿ ಬಳೆತಗಿಯತನಕ,

ಬಲಗೈಲಿ ಇಡದಿಲ್ಲರಾ
ಬಳೆ ತೆಗೆಯೊತನಕಪ್ಪ
ತಾಳಿ ಅರಿಯೊತನಕಪ್ಪಾ
ರಂಡೆ ಆಗಬೇಕು ನೋಡರಾ ಸಯ್
ಬಲಗೈಲಿ ಇಡಬೇಕು ನೋಡುರಾ ಸಯ್
ಅಷ್ಟೋತನಕ ನೋಡಪಾ ಸಯ್
ಎಡಗೈಲಿ ಅನ್ನ ನೋಡೋದು ಸಯ್
ಎಡಗೈಲಿ ನೀರು ಹಾಕೋದು
ಎಡಗೈಲಿ ಅನ್ನ ನೀಡೋದು
ಎಡಗೈಲಿ ನೀರು ಹಾಕೋದು
ಎಡಗೈಲಿ  ಕೊಟ್ಟರೆ ನಾವು ಗಣಮಕ್ಕಳು ಎಂಗ ಊಟ ಮಾಡಾನಮ್ಮ
ಅಲ್ಲಪಾ ನಿಮ್ಮಣ್ಣಗಿನ್ನ ಹೆಚ್ಚು ಬಂದಿಲ್ಲ
ಇದ್ದರೆ ಇರಬೋದು ನೀವಪ್ಪಾ ಹೋದರೆ ಹೋಗಬೋದು ನೋಡಪಾ
ತಿಂದರೆ ತಿಂದರೆ ಊಟಾಲೆ ಇಲ್ಲದಿದ್ದರೆ ಉಪಾಸೆ ನೋಡ್ರಪ್ಪಾ
ಗುಡ್ಡವಂತನು ಹೋದ ಮ್ಯಾಲರಾ ಸಯ್
ನೀವು ಇದ್ದ ನನಗೆ ಇಲ್ಲರಾ
ಗುಡ್ಡ ಅಂತ ಗಂಡ ಹೋದಮ್ಯಾಲೆ
ನೀವು ಇದ್ದು ಏನು ಮಾಡಲಿ
ಇದ್ದರೆ ಇರಬೋದು ನೋಡರಾ ಸಯ್
ಹೋದರೆ ಹೋಗಬೋದು ನೋಡರಾ ಸಯ್
ನಿಮಗೇನು ಆಸೆ ಇಲ್ಲರಾ ಸಯ್
ಗಂಡ ಹೋದ ಮ್ಯಾಲೆ
ಗಂಡ ಹೋದ ಮ್ಯಾಲೆ ನೋಡುರಾ

ನೀವೆ ಇದ್ದರೆ ಏನಾನು ಅಂಬೊತ್ತಿಗೆ ಆಗ ಸಾವುಕಾರ ಎಲ್ಲಪ್ಪಾ ಬಂದಾ ಏನಪಾ ಹುಡುಗರಾ ಊಟ ಮಾಡಿದಿರಾ ಇಲ್ಲಪಾ ಎಲ್ಲಿ ಊಟ ಮಾಡೀವಿ ಎಡಗೈಲಿ ನೀರು ಕೊಡಾಕ ಬರ‍್ತಾಳ ಎಡಗೈಲಿ ಅನ್ನ ಇಡಾಕ ಬರ್ತಾಳ ನಮ್ಮ ಅತ್ತಿಗೆ ನೀವೆ ಕೊಲ್ಲೀರಿ ಅಂತಾ ನಮ್ಮ ಮ್ಯಾಲೆ ಕೇಸು ಇಕ್ತಾಳ, ಆಹಾ ಈಗ ಆಮ ಅಂಬ ಮಾತಿಗೆ ನಾವು ಇರಬಾರದಪ್ಪಾ ಈಗ ಜೀವಾಕ್ಯ,

ಇಲ್ಲಯ್ಯ ನಾವು ಊರಾಗ ಇರಾದಿಲ್ಲ
ಊರು ಬಿಟ್ಟು ನಾವು ಹೋತೀವೆ ಎತ್ತಾಗನ್ನ ಹೋತೀವೆ
ಅಣ್ಣನ ದುಃಖಮರತು ಬರ್ತೀವಿ
ನಾಕು ದಿವಸ ಕಾಲಕಳದೇವಾ
ನಾವು ಆಗಿ ಬಂದೇವಾ
ಎಮ್ಮಾ ಅಣ್ಣಾನ ದುಃಖ ಕಳಕಂಡು ಬರ್ತೀವಿ ಆಹಾ
ಈಗ ನಾವು ಹೋಗಿ ಬಿಡ್ತೀವಿ

ಅಂಬೊತ್ತಿಗೆ ಕೇಳಪಾ ಮೈದನೋರೆ ನೀವೆ ಹೋತೀವಿ ಅಣ್ಣಾ ದುಃಖ ಕಳಕಂಡು ಬರ್ತೀವಿ ಅಂತಿರಲ್ಲಾ, ಆಹಾ ಈಗ ನಾನು ಜೀವ ಎಂಗ ಇರಬೇಕಪಾ, ಆಹಾ ನೀವು ಗಣಮಕ್ಕಳೆ ಹೋತೀವಿ ಅಂದಾಗ,

ನಾನು ಹೆಣಮಗಳು ಇರಬೇಕಲ್ಲಾ
ಕೇಳಲೆ ಗುಡ್ಡಂತ ಗಂಡನ ಕಳಕಂಡು ನಾನಿರಲಾ
ನಾನೆ ಹೋತೀನಿ ಹೇಳಾರೆ
ನೀವೆ ಇರ್ರೀ ಮೈದಾರೆ
ತಾಯಿ ಮನಿಗೆ ನಾನು ಹೋತೀನಿ
ತಾಯಿ ತಂದೆ ತಲ್ಲಿಗೆ ಹೋತೀನಿ
ಐದು ದಿವಸ ಇನ್ನವರ ಕಾಲ ಕಳದು ಬರ್ತೀನಿ
ಗಂಡನ ಮರ್ತು ಬರ್ತೀನಿ
ಎಮ್ಮ ನನ್ನ ಸಾದ್ಯವೆ ಅಲ್ಲಮ್ಮೊ
ಮನಿ ಬಿಟ್ಟು ಹೋಗುವಾಗಮ್ಮ
ನೀನೆ ಇರು ನನ್ನ ತಾಯಿ

ನೀನೆ ಇರು ನಾವೆ ಹೋತೀವಿ ಅಂದರು ಇಲ್ಲಪಾ ನೀವು ಹೋಗಾಕಿಲ್ಲ ನಾನೇ ಹೋಗಬೇಕು ನೀವೆ ಇರಬೇಕು ಅಂದಳು ಅಂದರೆ ಆಗ ಇನ್ನ ದುಃಖ ಮಾಡಿಕೆಂತಾ ರಾಜಕಛೇರಿಗೆ ಬಂದಳು ಅಣ್ಣನ ಕುರ್ಚಿ ಇಡಕಂಡು ದುಃಖ ಮಾಡತಾಳ ದುಃಖ ಮಾಡತಾ ಮಾಡತಾ

ಚಿಕ್ಕೋನು ನಿದ್ದೆ ಮಾಡ್ಯಾನ
ಆಗ ನಡುವಲೋನು ಐದಾನ

ಅಳಕಂತಾ ಅಳಕಂತಾ ತಲಿಗೊಂದು ಕುರ್ಚಿ ಕುಂದರೋವ್ರ ಈಗ ಚಿಕ್ಕೋನು ನಿದ್ದಿ ಮಾಡಿದಾ ನಡುವುಲೋನು ನೋಡಿದಾ ಅಲೆಲೆಲೆ ನಮ್ಮಣ್ಣಾ ಸತ್ತೋಗಿ ಐದು ದಿವಸ ಆಯಿತು ನಮ್ಮ ಮನಿದೇವ್ರಿಗೆ ದೀಪ ಹಚ್ಚಿ ಬಂದಿಲ್ಲ ಒಂದು ಕಾಯಿ ಒಡದು ಬಂದಿಲ್ಲ ದಿನಾಲಿ ನಮ್ಮ ಅಣ್ಣಾ ಸ್ನಾನ ಮಾಡಿಕಂಡು ಹೋಗಿ ನಿತ್ಯ ಪೂಜೆ ಮಾಡತಿದ್ದ ನಿತ್ಯ ಪೂಜೆ ಮಾಡೋನೆ ಕಳಕಂಡ ಆ ದೇವ್ರು, ಅಹಾ ಈಗ ಅಣ್ಣಾ ಸತ್ತು ಐದು ದಿನದಾಗನ್ನ ದೆವ್ರಗೆ ಎಡೆ ಹಾಕಿ ಕಾಯಿ ಹೊಡಕಂಡು ಕೈಮುಗದು ಕೊಂಡು ಬರಾನಂತ, ಆಹಾ ಇನ್ನ ತಮ್ಮಮಕ್ಕಂಡಾನ ಯಾಕ ಎಬ್ಬಿಸಬೇಕು ಎದ್ದುವೊತ್ತಿಗೆ ಬರ್ತೀನಂತಾ,