ಯಾ ದೇವ್ರರೆ ವೈದರೆ
ದೇವ್ರುಗೆ ಇಟು ಬೇಲಿ ಬಡಿಯಾಲಿ
ಬೆಂಕಿ ಆಕಿ ಸುಟ್ಟು ಬರ್ರಿರಾ .. ..
ನಿತ್ಯ ಪೂಜೆ ಮಾಡಿದೋನುರಾ
ಅಂತ ದೇವ್ರು ಕಳದು ಬಿಟ್ಟರಾ ..
ದೇವ್ರುಗೀಟು ಮಣ್ಣುವಾಕಲಿ
ದೇವ್ರುಗೀಟು ಮಣ್ಣುವಾಕಲಿ
ದೇವ್ರಗೆ ಬೇಲಿ ಬಡಿಯಾಲಿ

ನಿತ್ಯ ಪೂಜೆ ಮಾಡವನೆ ಕಳದು ಬಿಟ್ಟಾ ಇನ್ನ ಯಾ ದೇವ್ರು ಐದಾನ ದೆವ್ರುಗೆ ಇಟು ಬೆಂಕಿ ಹಚ್ಚಿ ಬರ್ರೀ‍ ದೇವ್ರುಗೆ ಇಟು ಮಣ್ಣು ತೂರುಬೇಕಿನ್ನ, ಆಹಾ ನನಗೆ ಯಾ ದೇವ್ರು ಇಲ್ಲಾ, ಆಹಾ ನಿನಗೆ ಇಲ್ಲದ್ದು ದೇವ್ರುಗೆ ಏನು ಆಯಿತೆ ಕೊಲು ಅಂತಾ ಹೇಳ್ಯಾನ, ಆಹಾ ಕೊಲ್ಲುನಾಗ ಇದ್ದಾತ ಕೊಲ್ಲು ಅಂತಾ ಹೇಳ್ಯಾನ, ಆಹಾ ಎಮ್ಮ ನಮ್ಮಿಗೆ ಬರಕಂಡು ಬಂದಿದ್ದೆ ಅಲ್ಲಿಗೆ ಬರಕಂಡು ಬಂದೀವಿ ನಮ್ಮಗ ಜೀವಕ ಬರದಾವನೇ ಪರದಾಟದಲ್ಲಿ ಬರದಾನ ಮತ್ತ ನಮ್ಮ ಜೀವ ಕಳೆದೋಗೈತೆ ಆ ದೇವ್ರು ಏನು ಮಾಡ್ತಾನ ಆ ಕೊಲ್ಲಿಗೆ ಮಾಡ್ತೀನಿ ಪೂಜೆ ಅಂದಾ ಅಂಬೊತ್ತಿಗೆ

ಇಲ್ಲಪ್ಪಾ ನಾನು ಕೊಡೋದು ದೇವ್ರಾಗ ಲೀದಿಂಡರಿಗಾಗಲೀ
ಎಡಗೈಲಿ ನಾನು ಕೊಡೋದೆ
ಹೊಯ್ಯಿದರೆ ಹೊಯ್ಯಿ ಮೈದುನಾ
ಇಲ್ಲದ್ದರೆ ಬಿಟ್ಟು ಹೋಗಪ್ಪಾ
ಯಾ ದೇವ್ರು ನಮ್ಮಿಗೆ ಎಲ್ಲರಾ ಸಯ್
ಯಾ ದೇವ್ರು ಕೊಡಾದಿಲ್ಲರಾ
ಯಾ ದೇವ್ರು ನಮ್ಮಿಗೆ ಇಲ್ಲರಾ
ಯಾ ದೇವ್ರು ಕೊಡಾದಿಲ್ಲರಾ
ಎಮ್ಮಾ ಈಗ ಎಡಗೈಲಿ ಕೊಡುತ್ತಿಯಂತೆ
ಕೊಡನ್ನ ಕೊಡೆ ಅತ್ತಿಗೆಮ್ಮ
ಜಲ್ದಿ ಮಾಡಿ ನಾನು ಬರ್ತೀನಿ

ಅಂದರೆ ಎಡಗೈಲಿ ಅಚ್ಚೇರು ಅಕ್ಕಿ ಕೊಟ್ಟು ಅರಪಾವು ಬ್ಯಾಳೆ ಕೊಟ್ಲು ಆಗ ಕಾಯಿ ಕರ್ಪೂರ ಊದಿನ ಕಡ್ಡಿ ಕೊಟ್ಲು, ಆಹಾ ಕೈಚೀಲದಾಗ ಇಟ್ಲು ಗುಂಡಾಲಿ ಇಟ್ಲು ಆಗ ಅದರ ತಟ್ಟೆ ಇಟ್ಲು ಪತ್ರಾಳ ಮರತು ಬಿಟ್ಲು, ಆಹಾ ಓ ಎಪ್ಪಾ ತಗಂಡಾ ಕೈ ಚೀಲ ಕುದ್ರಿ ತಲ್ಲಿಗೆ ಬಂದಾ ಬಾಯಿಗೆ ಸರಪಣಿ ಹಾಕಿದ ಬೆನ್ನಿಗೆ ಅಚ್ಚಿನಂದಿಂಡು ಹಾಕಿದ,

ಕುದ್ರಿ ಮ್ಯಾಲೆ ಕುಂತಕೊಂಡಾನೆ
ಸೋಮಯ್ಯ ಬರತಾನ ನೋಡಮ್ಮ
ಚಳ್ಳಚಳ್ಳನೆ ಹೊಡದಾನ ಸಯ್
ಆತ ಒಂದೆ ನೋಡುರಾ ಸಯ್
ಇನ್ನ ಎಡಗೈಲಿ ಒದ್ದಾನ ಬಲಗೈಲಿ ಜಡದಾನ
ಎಡಗೈಲಿ ಕುದ್ರಿ ಒದ್ದಾನೆ ಬಲಗೈಲಿ ಜಡದಾನೆ
ಚಳ್ಳಚಳ್ಳನೆ ಒಡದಾನ  ದೇವು ಗುಡಿಗೆ ಬಂದಾನ
ದೇವ್ರುಗುಡಿ ಕೆಳಗೆ ವೈತರಾ ಇನ್ನ ಬಸರಿ ಗಿಡ ನೋಡರಾ
ಬಸರಿಗಿಡ ಕೆಳಗೆ ಆಹಾ
ಗಿಡದ ಬಡ್ಡೆಕ್ಕೆ ಕುದ್ರಿ ಕಟ್ಟಿ ಹಾಕಿರಾ ಆಹಾ

ಕಟ್ಯಾಕಿ ಕೈಚೀಲ ತಗಂಡು ಪಾಂಟಿಕೇರಿ ಗುಡಿ ತಲ್ಲಿಗೆ ಬಂದಾ, ಗುಡಿ ಮುಂದೆ ಏತೈತೆ ಇಳೇ ಬಾವಿ, ಆಹಾ ಇಳೇ ಭಾವಿದಾಗ  ಇಳಕೂಂಡು ಸಾನಮಾಡಿಕೂಂಡು ಬಂದು ಆಗ ಸಾನ ಮಾಡಿಕೂಂಡು ಗುಂಡಾಲಾಗ ನೀರು ತುಂಬಿಕೂಂಡು ಬಂದು,

ಅನ್ನ ಅಡಿಗೆ ಮಾಡ್ಯಾನೊ
ಒಲೆ ಮ್ಯಾಲೆ ಅನ್ನ ಇಟ್ಟಾನೆ
ಒಲೆ ಮ್ಯಾಲೆ ಅನ್ನ ಇಟ್ಟಾನ
ಈಗ ಚೆರಿಗೆ ಕೂಡಾ ನೀರು ತಂದು
ಖಂಡೇರಾಯನ ಮೂಖ ತೊಳದಾನೆ 
ಆಗ ಮೊಖ ನೋಡಣ್ಣಾ ಇನ್ನ ರಾಜ ಸೋಮಣ್ಣಾ
ಆತ ನೋಡದು ನೋಡರಾ ಸಯ್
ಅರಿಶಿನ ಗಂಧವ ಅಚ್ಯಾನ ಸಯ್
ಅಚ್ಚಿ ನೇವುಲಿ ನೋಡಾರಾ ಸಯ್
ಊದಿನ ಕಡ್ಡೀನೆ ಆಚ್ಯಾನ ಸಯ್
ಕಾಯಿ ಕರ್ಪೂರ ನೋಡುರಾ ಸಯ್
ದೇವ್ರು ಮುಂದೆ ಇಟ್ಟಾನ ಸಯ್
ಆಗ ಚಂದ್ರಾಯುಧ ನೋಡುರಾ ಸಯ್
ಏಳು ಕತ್ತಿಸೂರಿ ನೋಡುರಾ ಸಯ್
ನಡುವುಲ ಇರೋದೆ ಬಿಟ್ಟಾನ
ದೇವ್ರು ಮುಂದೆ ಇಟ್ಟಾನ
ಎಲ್ಲ ಹಗ್ಗಗಳು ಬಿಚ್ಚಿರಾ
ದೇವ್ರ ಮುಂದೆ ಇಟ್ಟಾನಾ
ಇನ್ನ ಒಲೆಮ್ಯಾಲೆ ಕುರಿತಶೈತಪಾ ಆಹಾ
ಆಗ ಎಡೆ ಹಾಕರ ದೇವರಿಗೆ ಇನ್ನ ಅನ್ನ ಅಹಾ

ಪತ್ರಾಳಿ ಇಲ್ಲ ಅಲೆಲೆಲೆಲೆ ಪತ್ರಾಳಿ ನಮ್ಮತ್ತೆ ಇಟ್ಟಿಲ್ಲ ಅಂತಾ  ಮರಗಿಡಕೆ ಬಂದಾ, ಆಗವೆದಲೆ ಅರಕಂಡಾ, ಆಹಾ ಆಗ ಗುಡ್ಯಾಗ  ಕುಂತ್ಕಂಡು ಪತ್ರಾಳಿ ಒಲಿಕಂಡಾ ಕಣ್ಣೀರು ಉದುರುಸ್ತಾನ, ಆಹಾ ಅಯ್ಯಪ್ಪಾ ದೇವ್ರು ನಿತ್ಯ ಪೂಜೆ ಮಾಡೋನು ಹೋದುರಾ ದೇವ್ರು ಇವತ್ತಿಗೆ ಐದು ದಿವ್ಸಾರ ದೇವ್ರಾ ನೀನೆ ಕಳದೆಪ್ಪಾ ಆ…. ಆ… ನಮ್ಮಣ್ಣನ ಕಳೆದೆಪ್ಪಾ ಖಂಡೇರಾಯ ಆ… ಆ…  ಅಣ್ಣಾನ  ಅಣ್ಣಾನ ಕಳೆದೆ ಬಿಟ್ಟೆಲ್ಲಾ ನಮ್ಮನನ ಇಬ್ಬರ್ನ ಊಳಿಸೀದೆ ಏ.. ಏ.. ದೇವ್ರು ಎಪ್ಪಾ ನಮ್ಮ ಜೀವ ಇನ್ನರಾ ಕಳಿಬಾರ್ದ ಅಣ್ಣಾನ ಜೀವ ಕಳದೆಲ್ಲಾ ಅಂತ ಕಣ್ಣೀರು ಉದುರಿಸಿಕೆಂತಾ ಅಣ್ಣಾನ ನೆನಸಿಕಂತಾ ಪತ್ತಾಳ ಒಲಿತಾನಪಾ ಸಿದ್ದೋಗಿ ನೋಡಿದಾ ಆಗ ಅಣ್ಣಾ ಮಗ ಕಡಿದಾನಂದ್ರ ಯಾರನ ದು;ಖ ಮಾಡ್ತಾರ ಅವನೇನು ಏನಂತಾನ,

ಒಬ್ಬನು ಇನ್ನ ಸರಿದೀಯಾ
ಇನ್ನ ಇಬ್ಬರು ವೈದಾರೆ
ಅವರು ಇಬ್ಬರು ಯಾವೂತ್ತುರಾ ಸಯ್
ಇನ್ನ ಕಡದು ಸಾಯಿತಾರೊ ಸಯ್
ಆವೊತ್ತು ಕಣ್ಣೀರು ಒಳಗಾರಾ ಸಯ್
ಖಂಡೇರಾಯನ ತೇರು ಮಾಡ್ಯಾನೊ
ಖಂಡೇರಾನ ತೇರು ಮಾಡ್ಯಾವಾ

ಅವರು ಇಬ್ಬರು ಸತ್ತಾರೆ ಒಬ್ಬನೆ ಸತ್ತಾನಂತೆ ಇನ್ನಾ ಇಬ್ಬರುವೈದರಂತೆ ಅವರಿಬ್ಬರು ಸತ್ತರೆ ನಮ್ಮನೆ ದೇವ್ರುಗೆ ತೇರು ಮಾಡಸ್ತೀನಿ ಗಂಧವತೇರು ಗಂಧವ ಗಿಡಲಿಂದ ತಯಾರು ಮಾಡಿಸ್ತೀವಿ ಖಂಡೇರಾಯ ದೇವ್ರ ಹೇಳಿದ ಅಂತೀವ ಎಂತಾಪಾಪಷ್ಟರು, ಆಹಾ ಆಗವನು ಮಾಡಿಬಿಟ್ಟಾ ಏಪ್ಪಾ ಕಳ್ಳರಾ ನಿಮಗೇನು ಪರವಿಲ್ಲಾ ಎಕರೆ ಭೂಮಿ ಕೊಡ್ತೀನಿ ಅಂದೀನಿ ಇನ್ನೊಬ್ಬನ್ನ ಕಡಿದು ಬರ‍್ರೀ ನಿಮ್ಮ ಹೆಸ್ರಲೆ ಮಾಡಸ್ತೀನಿ, ಆಹಾ ಅಯ್ಯೊ ಸಿಗಬೇಕಲ್ಲಪಾ ಅವರು ಒಬ್ಬನೇನು ಚೆಂಬು ತಗಂಡು ಬಂದಿದ್ದಾ ಆಮಾಸ ದಿನ ಕಡದು ಬಂದೀವಿ ಲೇ ಈಗ ಹುಡುಗರು ಏನು ಮಾಡಿಬಿಟ್ಟರು ಅಂದರೆ ತಾವು ಜೀವಾಕ ಎಪ್ಪಾ ಮರಕಳ್ಳರು ಲಿಂಗವಂತರು ನಾಲೋರು ಅಣ್ಣಾತಮ್ಮರು, ಆಹಾ ನಾಕು ಸಾವಿರ ಸಾಲ ಕೊಟ್ಟೀನಿ ಇಲ್ಲಿಗೆ ಹತ್ತು ವರುಷ ಆಗೈತೆ, ಆಹಾ ಬಡ್ಡಿಕೊಟ್ಟಿಲ್ಲಾ ಗಂಡುಕೊಟ್ಟಿಲ್ಲ ಲೇ ಬಾರೋ ನೀನಾದ್ರೆ ಉಸುಲು ಮಾಡಿಕೆಂಬರ್ರೀ‍ಯ ಅಸ್ರಾಪ್ ಕಳ್ಳ, ಆಹಾ ಪಕ್ಕಾ ಬಡ್ಡಿ ಆಗಲೀ ಗಂಟು ಆಗಲೀ ಕಳ್ಳತನಕ ಅವರು ಮನೆ ಬಿಟ್ಟು ಬರಬ್ಯಾಡ ಕೂಳಾಕರಿ ಕಟ್ಟಬೇರಾ ಬರತೀರಾ ಈಗ ನಮ್ಮ ಸಿದ್ದೋಗಿ ತಲ್ಲಿಗೆ ಅಂತಾ ಏಳಕಂಡು ಬಾದಾಲೆ ಸರೆ ಬಿಡಿದ್ರಿ ಅವರು ನಿಂತು ಉಸುಲು ಮಾಡಿಕೆಂಬರ್ತಾರ ಕುದ್ರಿ ಹೊರಗ ತಗಂಡು ಬಾಯಿಗೆ ಸರಪಣಿ ಹಾಕಿದ ಚಂದ್ರಾಯುದ ತಗಂಡಾ ಕುದ್ರಿಮ್ಯಾಲೆ ಕುಂತಕಂಡಾನ ಅಸ್ರಾಪಕಳ್ಳ, ಆಗ ಕಳ್ಳೋನು ಕುಂತಾನೆ ಅಸ್ರಾಪ ಕಳ್ಳೋನು ಬರ್ತಾನೆ,

ಅವನು ದಾರಿ ಇಡಿದು ಬರ್ತಾನ ಸಯ್
ಕರುಣಿಕಲ್ಲು ಬೆನ್ನು ನೋಡರಾ ಸಯ್
ಆಗ ದಾರಿ ಇನ್ನರಾ ಗುಡ್ಡದೊಳಗೇನೆ ಬರ್ತಾವ ಸಯ್
ಮರಗಳ ದಾರಿ ಇಡದಾನ
ಅಸ್ರಾಪ್ ಕಳ್ಳೋನು ಬರತಾನೆ
ಅಸ್ರಾಪ್ ಕಳ್ಳೋನಿಗೆ ಮರಕಡಿಗೆ ಎಂಗ ಹೋಗಬೇಕು ದಾರಿ
ಗುಡ್ಡಕಡೆಗೆ ಹೋತೈತೆ ದಾರಿ ಆಹಾ

ಆಗ ಗುಡ್ಡ ತಲ್ಲಿಗೆ ಬಂದಾ ಇಂಗ ನೋಡಿದಾ ದೇವ್ರುನಾ ಅವ್ರು ದೇವುಗೆ ಮುಂದೆ ನೋಡಿರಾ ಕುದ್ರಿ ಕಟ್ಟಿ ಹಾಕ್ಯಾರಾ, ಆಹಾ ಅರೆರೆರೆ ಈ ಕುದ್ರಿ ಯಾರದು ಈ ಕುದ್ರಿ ಯಾರದಿಲ್ಲಾ ಮರವಾಡಿ ಶೇಠಿದವರು ಕುದ್ರಿ ಐತೆ ಅಲೆಲೆಲೆಲೆ ಅನ್ಣಾ ಸತ್ತೋಗಿ ಐದು ದಿವ್ಸಾ ಆಯಿತು ಅವರಣ್ಣನಾ ನಾವೇ ಕಡಿದದ್ದು ಐದು ದಿನಾ ಆಗೈತೆ, ಆಹಾ ಆಗ ದೇವ್ರು ಪೂಜೆ ಮಾಡಕ ಬಂದಾನ, ಆಹಾ ಅಣ್ಣಾ ಸತ್ತೋದು ಮ್ಯಾಲೆ ದೇವ್ರು ಪೂಜೆ ಮಾಡಬೇಕಲ್ಲಾ, ಆಹಾ ಒಬ್ಬನು ಬಂದಿದ್ದರೆ ದೇವ್ರು ಮುಂದೆ ಕುತ್ತಿಗೆ ಕೊಯಿಕೊಂಡು ಕುತ್ತಿಗೆ ತಗಂಡು ಹೋತಿದ್ದೆ ಸಿದ್ದೋಗಿ ಕೇಳಿದ್ದನೆಲ್ಲ ಕೊಡ್ತಾನ

ತಲೆ ತಗಂಡು ಹೋದರೆ ಬೆಳ್ಳಿ ಭಂಗಾರ ಆಹಾ
ಇಬ್ಬರು ಬರದಿದ್ದರೆ ಕೈನೆ ಮುಗಿದು ಬಿಡತೀನಿ

ಅಂತಾ ಏನು ಮಾಡ್ದರಾ ಬಂದ ಕುದ್ರಿ ಬಗ್ಯಾಗ ಕುದ್ರಿ ಕಟ್ಯಾಕಿದಾ ಗಿಡ ಮುಂದೆ ಪಾಂಟಿಕೆ ಏರಿ ಬಂದಾ ಬಂದರೆ ಅವನು ಮೆಲ್ಲಕ ಬಂದಾ, ಬಗ್ಗಿ ಬಗ್ಗಿ ಬಂದಾ ಆಹಾ ಅವರು ಮಾರ‍್ವಾಡೇರು ತಿಳಿಕಂತಾನೊ ಅರ್ಥ ಮಾಡಿಕೆಂತಾನೊ ನೋಡತಾನೋ ಇಲ್ಲೋ, ಆಹಾ ಆಗ ಸರಕ್ ಅಂದ್ರೆ ತಿಳವರಿಕೆ ಬಾಳ ಉಶಾರಂತೆ ನೋಡಬೇಕು ಬಗ್ಗಿ ಬಗ್ಗಿ ಬಂದಾ ಈತೇನು ದೇವ್ರು ಕಡಿಗೆ ಮೊಖ ಮಾಡ್ಯಾನ ಇವನು ಕಳ್ಳ ಬರೋನು ಕಡಿಗೆ ಬೆನ್ನು ಮಾಡ್ಯಾನ ಆಗ ಬರತಿದ್ದರೆ ಮುಂದೆ ಪತ್ರಾಳ ಹೊಲಿತ್ತಿದ್ದರೆ ಆ ಪತ್ರಾಳದಾಗ,

ಕಳ್ಳದೋನು ನೆಳ್ಳು ಕಂಡೈತೊ
ಬಗ್ಗಿ ಬಗ್ಗಿ ಬರೋದೆ
ಆಗ ಬಂದೆ ಅಣ್ಣಾಯ್ಯಾ ಇನ್ನವಾದರೆ ನೋಡಯ್ಯಾ
ಕಳ್ಳಬಂದಾ ನೋಡಯ್ಯ ಇನ್ನ ಬಗ್ಗಿ ಬಂದಾನೆ

ಈ ಪತ್ರಾಲ ಒಲಿತಿದ್ದರೆ ಬಗ್ಗಿ ಬಗ್ಗಿ ನೆಳ್ಳ ಬರ್ತೈತೆ ಅಲ್ಲಾ, ಆಹಾ ಏನಿರಬೋದು ಅಂತಾ

ಗಕ್ಕೆನೆ ಹಿಂದಕ ತಿರುಗಿ ನೋಡ್ಯಾನ
ನಿನಗೇನು ಬಂದೈತೆ ನೋಡಲೆ ಸಯ್
ಕಲ್ಡಿ ಬಂತಂತೆ ತಿಳಕೊಂಡೀನಿ ಸಯ್
ಅಡಿವ್ಯಾಗ ಹಂದಿನೋಡರಾ ಸಯ್
ಹಂದಿಯಂತ ತಿಳಕಂಡು ಬಿಟ್ಟಿನಿ ಸಯ್

ಅಂಗ ಬಗ್ಗಿ ಬಗ್ಗಿ ಬರ್ತೀಯೋ ಅಂಗ ಬಗ್ಗಿ ಬಗ್ಗಿ ಬರ್ತೀಯೋ ಹಂದಿಯಂತ ತಿಳಕಂಡು ಬಿಟ್ಟೀನಿ ಇಲ್ರೀ ನದಿವಾತ ಮಾರ‍್ವಾಡಿ ಶೇಠದೋನೆ ಏನಿಲ್ಲಾ ಆಗ ಮಾರವಾಡೋರು ಬಾಳ ತಿಳವರಿಕೆ ಅಂತೆ ಅದ್ಕೆ ನಾನು ನೋಡ್ತಾನ ಇಲ್ಲಂತಾ ಬಗ್ಗಿ ಬಗ್ಗಿಂದೆ,

ಬಾಳ ಉಶಾರು ಐದೀಯೊ
ನನ್ನ ನೋಡಿದೆ ನೀನಪಾ
ಆಗ ಹಿಂದಕ ಬಂದಾನೆ
ಮುಂದುಕ ಬಂದು ಕುಂತಾನ

ರಾಜ ಸೋಮಯ್ಯಂತಾಗ ಬಮದು ಕುತ್ಕಂಡ ಬಂದು ಏನ್ರಿ ಆಗ ಕುಂತೋನು ಕಳ್ಳ ಸುಮ್ಮನೆ ಕುಂತಕ ಬಾರದಾ ಏನ್ರಿ ಆಗ ದೇವ್ರ ಗುಡಿಗೆ ಪೂಜೆ ಮಾಡಾಕ ಬಂದೀಯ ಏನ್ರಿ ಅಂದಾ ಹೌದಪಾ ನೀನು ಎಲ್ಲಿಗೆ ಹೋತಿಯಾ ಅಂದ ನೋಡಪಾ ನಾನು ಮರಕಲ್ಲಿಗೆ ಹೋತಿನಿ ಲಿಂಗವಂತರಿಗೆ ನಾಕು ಸಾವಿರ ಕೊಟ್ಟಾನಂತೆ ನಿಮ್ಮ ಕಕ್ಕಾ, ಆಹಾ ಬಡ್ಡೇನಾ ಗಂಟನ್ನ ಉಸುಲು ಮಾಡಿಕೆಂಡು ಬರಬೇಕಂತೆ ಇಲ್ಲದಿದ್ದರೆ ಅವರನ ಎಳಕಂಡು ಬರಬೇಕಂತೆ, ಆಹಾ ಅದಕೆ ನಾನು ಹೋತಿದ್ದೆನಪಾ, ಆಹಾ ಹೋತಿದ್ದರೆ ನೀನು ಕುದ್ರಿ ಕಟ್ಯಾಕಿದೆ ಅಲೆಲೆಲೆ ಮಾರವಾಡೇರದು ಕುದ್ರಿ ಕಟ್ಯಾಕರಾ ಏನು ದೇವ್ರು ಮಾಡಂಗ ಐದಾರ ನನಗೀಟು ಉಂಬಾಕ ಇಡ್ತಾರಂತ ಊಟ ಮಾಡಿ ಹೋಗ್ಯೇಕಂತ ನಾನು ಬಂದೀನಪಾ, ಆಹಾ ಅಂಗಾದರೆ ಒಲೆಮ್ಯಾಲೆ ಇಟ್ಟೇನಪಾ ಅಕ್ಕಿಬ್ಯಾಳೆ ಕಲಿಸಿ ಹಾಕಿ ನಿನಗೆ ಉಂಬಾಕ ಇಡತೀನ ನಾನು ಊಟ ಮಾಡತೀನಿ ಈಗ ನೀನು ನೀನು ಮರಕಲ್ಲಿಗೆ ಹೋಗು ನಾನು ಕರಣಿಕಲ್ಲಿಗೆ ಹೋಗತೀನಿ, ಆಹಾ ಅಂಗಾದರೆ ಸರಿ ಬಿಡರಿ ಅಂತಾ ಆ ಕಳ್ಳದೋನು ಕುಂತ್ಕಂಡಾ ಕುಂತ್ಕಂಡೋನು ಸುಮ್ಮನೆ ಕುಂದರಬೇಕಾ, ಆಹಾ ಏನಂತಾನ,

ಏನಪಾ ಆಗ ಮಾರವಾಡಿ ಇನ್ನ ಸೋಮೋಜಿ ಆಹಾ
ಅಣ್ಣಾ ಮಾಡ್ತಿದ್ದ ದಿನಾಲೆ ಇವತ್ಯಾಕ ಬಂದಿಲ್ಲ
ನೀನು ಬಂದಿ ಇನ್ನರಾ ಸಯ್
ನಿಮ್ಮಣ್ಣ ಎತ್ತಾಗ ಹೋಗ್ಯಾನ ಸಯ್
ದೊಡ್ಡೋನು ನಿಮ್ಮಣ್ಣ ವೈದಾನ
ನಿಮ್ಮಣ್ಣ ಎತ್ತಾಗ ಹೋಗ್ಯಾನ
ನಿಮ್ಮನ ಬಿಟ್ಟು ಅಡವ್ಯಾರ

ನಿಮ್ಮಣ್ಣ ದೊಡ್ಡಣ್ಣ ಎತ್ತಾಗ ಹೋಗ್ಯಾನಪಾ, ಆಹಾ ಅಂದಾ ಅಪ್ಪಾ ಅಣ್ಣಾನ ಎತ್ತ ಬ್ಯಾಡ ಯಾಕ ಎತ್ತುತಿ ಯಾಕಪಾ ಒಳ್ಳೇನು ಬುದ್ದಿವಂತ ಗ್ಯಾನಸ್ತಾ ಏನು ಎತ್ತಾಗ ಹೋಗ್ಯಾನಂದಾ

ಇನ್ನೆಲ್ಲಿ ನಮ್ಮಣ್ಣಾ ವೈದಾನೆ .. .. ಕಳ್ಳ
ಇವತ್ತಿಗೆ ಐದು ದಿನವಾಯಿತು
ನಮ್ಮಣ್ಣಾನ ಯಾರೊ ಕಡದಾರೆ ದೇವ್ರು
ನಮ್ಮಣ್ಣನ ಜೀವ ತಗದಾರ

ಅಂಬೊತ್ತಿಗೆ ಅವನು ಸುಮ್ಮನೆ ಇರಬಾರದ ನಾನು ಸುಮ್ಮನೆ ಇದ್ದರೆ ನೀನೆ ಕಡದಿ ಅಂತಾನೇನು, ಆಹಾ ನಾನೊಂದು ಬಂಗಾಳಿ ದುಃಖ ಮಾಡಬೇಕಂತಾ, ಆಹಾ ಅವನು ಏನಂತಾನ

ಎಷ್ಟು ಬುದ್ದಿವಂತ ಇದ್ದಾರ ನಿಮ್ಮಣ್ಣಾ .. ..
ಎಷ್ಟು ಗ್ಯಾನತನ ಇದ್ದಾರ
ಎಂತ ಕರ್ಮದೋನು ಕಡದಾರಾ
ಎಂತ ಪಾಪದೋನು ಕಡಿದಾರಾ
ಬಂಗಾಳ ದುಃಖ ಮಾಡ್ತಾನ ಕಳ್ಳ .. ..
ಅಂತ ಹುಡುಗರು ಎಲ್ಲಿ ಇಲ್ಲರಾ
ಭೂಮಿಮ್ಯಾಲೆ ಇಲ್ಲಪಾ
ಎಪ್ಪಾ ಬೊಧ ರ್ಮನದೋರು ಇದ್ರಪಾ .. ..
ಬೋ ಧರ್ಮದೋನು ಇದ್ದರಾ ಹಿಮ್ಮೇಳ
ರಾಜ ಸೋಮಯ್ಯ ನೋಡರಾ ಹಿಮ್ಮೇಳ
ನಿಮ್ಮ ಕಕ್ಕ ಕೆಟ್ಟವನು ಐದಾನೆ
ಎಪ್ಪಾ ಮಕ್ಕಳ ಇಲ್ಲದ ಪರದೇಶಿರಾ
ಅಂತಾ ನನ್ನ ಕಾಯಲಿಲ್ಲರಾ

ಮತ್ತೆ ಇವನೆ ಅಂಬೋದು ಎಪ್ಪಾ ಮಗ ಹುಟ್ಟಿ ಮೂರು ತಿಂಗಳ ಎಷ್ಟು ವಯಸದಲ್ಲಿ ಸತ್ತಾನ ರಾಜ ಎಪ್ಪಾ ನಿಮ್ಮ ಅಣ್ಣಾ ಸಾಯ ಬದಲು ನಿಮ್ಮ ಕಕ್ಕಾ ಸಾಯಬಾರದು ಅಂತಾ ಕೆಡದೋನು ಸಾಯಬಾರದಾ, ಮತ್ತೆ ಅಂಬೊದೋನೆ ಅಂದರೆ ದುಃಖ ಮಾಡತಿದ್ದರೆ ಎಪ್ಪಾ ಹೋದೋನು ಬರಂಗಿಲ್ಲ ಅಳಬ್ಯಾಡಯ್ಯ ಮಾರ‍್ವಾಡಿ ಶೇಠದೋನೆ ದುಃಖ ಮಾಡಬ್ಯಾಡ ಸೋಮೋಜಿ, ಈಗ ಇನ್ನವರಿಸಿಕೊ ಆ ನೀರು ಇಲ್ಲಪಾ ವರಿಸಿಕೊಂತೀನಿ ಬಿಡು ಏ ನಾನನ ವರಸ್ತೀನಿ ಬ್ಯಾಡ ಬಿಡಪಾ ಅಂದರೆ,

ಎದ್ದೆ ಬಿಟ್ಟಾನ ಅವನು ರಾ ಸಯ್
ಆಗ ಇನ್ನ ನೋಡರಾ ಸಯ್
ಎಲ್ಡು ಕಣ್ಣಿಗೆ ಇಟ್ಟಾನ ಸಯ್
ಎದೆಮ್ಯಾಲೆ ಮೊಣ ಕಾಲು ಇಟ್ಟಾನ ಸಯ್
ಎಡಗೈಲಿ ಕೂದಲು ಇಡದಾನ ಸಯ್
ಬಲಗೈಲೆ ಕುತ್ತಿಗೆ ಇಡದಾನ
ಬಲಗೈಲೆ ಕುತ್ತಿಗೆ ಇಡದಾನ
ರಾಜನ ಕುತ್ತಿಗೆ ಇಡದಾನ
ನಿಮ್ಮಣ್ಣನ ಕಡದೋರು ಯಾರಿಲ್ಲ
ನಾವೆ ಕಡದೀವಿ ನಿಮ್ಮಣ್ಣನಾ
ಕುದ್ರಿ ತಿಪ್ಯಾಗ ಕುಂತುರಾ ಸಯ್
ಚಂಬು ತಗಂಡು ಅಣ್ಣಾರ ಸಯ್
ಚೆರಿಗೆ ತಗಂಡು ಇನ್ನರಾ ಸಯ್
ನಿಮ್ಮ ಅಣ್ಣಾ ದೊಡ್ಡಿಗೆ ಹೋಗುವಾಗರಾ ಸಯ್
ಮಂತ್ರಗಳು ನಾವು ಬರದೀವಿ ಸಯ್
ಚೌಕಟ್ಟು ನಾವು ಕಟ್ಟೀವಿ ಸಯ್
ಕುತ್ತಿಗೆ ಕೊಯ್ಯಿಕೊಂಡು ನಾವು ಹೋಗೆವೆ
ದೊಡ್ಡೀಗಿ ಹೋಗುವದಾರ್ಯಾಗ ಹಿಮ್ಮೇಳ
ನಿಮ್ಮಣ್ಣ ಕತ್ತೆಕೊಯಿದೀವಿ ಹಿಮ್ಮೇಳ
ಈಗ ನಿನಕುತ್ತಿಗೆ ಕೊಯಿಕಂಡು ಹೋದರೆ
ನಿಮ್ಮ ಕಕ್ಕ ಬೇಕಾದಂಗ ಕೊಡ್ತಾನ
ನಿನ ಬಿಡದಿಲ್ಲ ಅಂದಾ
ಗೋಡಿಗೆ ಆನಿಸಿ ಬಿಟ್ಟಾನ
ಎದೆಮ್ಯಾಲೆ ಮಣಕಾಲು ಇಟ್ಟಾನ
ಕುತ್ತಿಗಿ ಮಿಸಕಾಡಲಾರದಂಗ ಕುತ್ತಿಗೆ ಇಡಕಂಡಾನ ಆಹಾ
ಎಡಗೈಲಿ ಕೂದ್ಲು ಇಡದಾನ
ಗೋಡಿಗೆ ಅನಿಸಿಬಿಟ್ಟಾನ ಆಹಾ

ನೋಡಪಾ ಮೂರು ದಿವಸ ಅಲ್ಲ ಐದು ದಿವಸ ಆಗೈತೆ ನಾನು ಅನ್ನ ಉಂಡಿಲ್ಲ, ಆಹಾ ನೀರು ಕುಡದಿಲ್ಲ ಈಗ ಅಣ್ಣನ ದುಃಖದಲ್ಲಿ ಐದೀವಿ ನೀನು ಸುಮ್ಮನೆ ಬಿಡತೀಯಾ ಬೇಕಾ ಅಂದಾ ಆಹಾ,

ನಿಮ್ಮಣ್ಣನ ನಾವು ಕಡದೀವಿ
ಈಗ ಐದು ದಿನದಾಗ
ಇವತ್ತು ನಿನಕಡಿಕಂಡು ಹೋತೀನಿ ನೋಡು ಆಹಾ

ಅಂಗಾರೆ ನನ್ನ ಕಡಿತೀಯಾ ಅಂದಾ ಏ ಖಂಡೇರಾಯನ ಮುಂದೆ ಅಂಗೆ ದೇವ್ರ ಮುಂದೆ ಕಡೀತಿನಿ ಅಂದಾ ಅಂಗಾರೆ ನಮ್ಮಣ್ಣನ ಕೊಲ್ಲಿದ್ದು ನೀನೆನಾ, ಆಹಾ ಮತ್ತೆ ನಾವೇ ಅಂದಾ ಸರೆ ಕಡಿದೀರಾ ಕಡಿದೀವಿ ಅಂಬೊತ್ತಿಗೆ,

ಆಗ ಸ್ವಾಮನ ತಂದಾರ ಸಯ್
ಆಗ ಇನ್ನ ಮಗನು ಸಯ್
ಬಲಗೈನಾಗೆ ನೋಡರಾ ಸಯ್
ಮೆಲ್ಗುರಾಗೆ ತಗಂಡು ಸಯ್
ಜಾಡಿಸಿ ಎದೆಗೆ ಗುದ್ಯಾರ
ಜಾಡಿಸಿ ಎದೆಗೆ ಗುದ್ಯಾನ
ತಾವೇ ಇನ್ನ ಕೈಲಿಂದಾ
ಎಮ್ಮೊ ಇನ್ನ ಕಳ್ಳದೋನು ನೋಡುರಾ ಸಯ್
ದೊಪ್ಪನಂಗೆ ಬಿದ್ದಾನ
ಎಮ್ಮೆ ಬಿದ್ದಂಗ ನೋಡುರಾ
ಕೋಣ ಬಿದ್ದಂಗ ನೋಡುರಾ
ಜಾಡಿಸಿ ಬಲಗೈಲೆ ಇನ್ನವರ ಎಡಗೆ ಗುದ್ದೊ ವೊತ್ತಿಗೆ
ಬಕ್ಕಬಾರ್ಲ ಹಿಂದಕ ಬಿದ್ದು ಬಿಟ್ಟನಮೊ
ಆಗ ರಾಜರು ಎಡಗೈಲಿ ಕುತ್ತಿಗೆ ಇಡದಾರ ಸಯ್
ಎದೆಮ್ಯಾಲೆ ಕುಂತು ಬಿಟ್ಟಾರ ಸಯ್
ಆಟದಪ್ಪ ಇನ್ನ ಇಲ್ಲರಾ ಸಯ್
ಜಾದು ಬಲದಿಂದ ಇದ್ದೋನು ಸಯ್
ಅಪ್ಪೆಬಾಯಿ ತಗದು ಕೊಂಡಾನ
ಜಾಣ ಕಳ್ಳದೋನುರಾ ಆಹಾ

ಲೇ ನಮ್ಮಣ್ಣನ ಕುತ್ತಿಗೆ ಕೊಯ್ದಿದ್ದಂತ ನನಗೆ ಗೊತ್ತಾಗಿದ್ದರೆ ನನಗೆ ಗೊತ್ತಾಗಿದ್ದರೆ ನಿನ ಊರಿಗೆ ಬಂದು ನಾನು ಕಡಿಕೆಂತು ಬರ್ರ‍್ತಿ‍ದ್ದೆ ಆಹಾ,

ಈಗ ನಿಮ್ಮನ ಬಿಡದಿಲ್ಲ ಸಯ್
ಇನ್ನ ಖಂಡೇರಾಯನ ಮುಂದೆ ನೋಡರಾ ಸಯ್
ನಿನ್ನ ನಾನು ಕಡಿತೀನೆ
ಖಂಡೇರಾನ ಎದುರಿಗೆ
ಏನಮ್ಮ ತಂದೆ ಕೈಯಾಗ ಸಯ್
ರೊಕ್ಕ ಕೊಟ್ಟಂಗೆಲ್ಲ ತಿಂತೀರಿ ಸಯ್
ನಮ್ಮನ ಕಡಿಯಾಕ ಬರ್ತೀರಾ
ಕೊಟ್ಟಾ ನೀವೆ ಆಗಲಿ
ನಮ್ಮನ ಕಡಿಯಾಕ ಬರತೀರಾ

ಅಂಬೊತ್ತಿಗೆ ಆಹಾ ಗುಡ್ಡ ಕುಂತಂಗೆ ಕುಂತಾನಪಾ, ಆಹಾ ಯಾರು ನಡುವಾತ ಸೋಮೋಜಿ ಆಹಾ ಈ ಕಳ್ಳದೋನು ಏನಂತಾನ, ಆಹಾ ಏ ಇಲ್ಲಯ್ಯಾ ನನಕ್ಯಾಡ ಮಾಡ್ದೆ ನೋಡಯ್ಯ

ನೀನು ನಿಜ ಅಂತ ತಿಳಕಂಡು ಬಿಟ್ಟೀಯಾ
ದೇವ್ರಾಣಿ ನಿಮ್ಮನ ಕಡಿದಿಲ್ಲಾ
ದಿಂಡ್ರುವಾಣಿ ನಾವು ಕಡಿದಿಲ್ಲಾ
ಭೂಮಿಮಗ್ನ ನಾವು ಕಡಿದಿಲ್ಲಾ

ಆ ರಾಜ ಇಡದಾಗ ಮಾರ‍್ವಾಡಿ ಶೇಠಿದೋನು ದೇವ್ರಾಣಿ ನಾವು ಕಡಿದಿಲ್ಲ ಭೂಮ್ಯಾ ಆಗ್ನೆ ನಾವು ಕಡದಿಲ್ಲಾ, ಆಹಾ ಏನು ಕುವ್ಡಾಡ ಅಂದೀವಿ ನಿನ ಆತ್ಮದಲ್ಲಿ ಏನು ತಿಳಕಂತಾನ ಅಂತಾ ನಾನು ಅಂದು ಬಿಟ್ಟೆಪ್ಪಾ, ಆಹಾ ಇಲ್ಲಪಾ ನಾವು ಕಡದಿಲ್ಲ,

ಏ… ಕಡದಿಲ್ಲ ಅಂದರೆ ನಾನು ಬಿಡಾದಿಲ್ಲ
ಅವಾಗ ನೀನು ಅಂದೋನು
ನನಗೆ ತಿಳವರಿಕೆ ಆಯಿತು
ನಿನ್ನ ಈಗ ಬಿಡದಿಲ್ಲರಾ
ಈಗ ನಿನ್ನ ನೋಡುರಾ ನಿನ್ನ ಜಲ್ಮ ಬಿಡಾದಿಲ್ಲ
ಅಂದರೆ
ಆಗ ಕೇಜಿ ಕೇಜಿ ಐದಾರಪ್ಪಾ
ಒಬ್ಬರನ ಇನ್ನ ಸೋಲಂಗಿಲ್ಲ ಆಹಾ
ಅವರು ಕೈ ಕೈ ಇಡಕೊಂಡಾ
ಏಳ್ಳಾಡಿ ಏಳ್ಳಾಡಿಕೆಂತಾರ
ಗುಡಿ ಹೊರಗೆ ಬಂದಾರ
ಜಾರಿ ಬಂಡಿಗೆ ಬಂದಾರೆ

ಖಂಡೇರಾಯನ ಮೈತೊಳೆದ ನೀರೆಲ್ಲ ಜಾರಿ ಬಂಡೆ ಮ್ಯಾಲೆ ಇಳಿತಾವ ಕುಣಿ ಕುಣ್ಯಾಗ ಕೆಸರು, ಆಹಾ ಆನೆ ಒಂಟಿ ಮುಳುಗಿ ಹೋತಾವಪಾ ಬರೆ ಕೆಸರು ನೀರು ಆಹಾ,

ಜಾರಿ ಬಂಡೇಲಿ ಉಳ್ಳಾಡಿಕೆಂತಾ ಬಂದು
ಜಾರಿ  ಬಂಡಿ ಮ್ಯಾಲೆ ಜಾರ್ಯಾರೆ
ಕುಣ್ಯಾಗಾಗಿ ಬಿದ್ದಾರೆ
ಕೆಸ್ರು ಕುಣ್ಯಾಗ ನೋಡುರಾ ಸಯ್
ಡುಮಿಕ್ ಅಂತಾ ಬಿದ್ದಾರ
ಕೆಸ್ರು ಕುಣ್ಯಾಗಂತ ನೋಡುರಾ
ಅವರೆವಂತಾ ಬಿದ್ದಾರ

ಆಗ ಗುಡ್ಯಾಗಲಿಂದ ಉಳ್ಳಾಡಿಕೆಂತ ವಳ್ಳಾಡಿಕೆಂತ ಬಂದರು, ಆಹಾ ಆ ಜಾರಿಬಂಡಿಗೆ ಬಂದರು ಜರಕ್ಕನೆ ಜಾರಿ ಕೆಸ್ರುಕುಣ್ಯಾಗ ಬಿದ್ದರು, ಆಹಾ ನಟ್ಟ ನಡುವೀಲೆ ಕಳ್ಳೋನು ಬಿದ್ದಾ ಈಗ ನಡುವಲಷ್ಟು ಕೆಸರಾಗ ಕೊನೇಲಿ ರಾಜಬುದ್ದಾ ಸೋಮೋಜಿ ಬಿದ್ದೊತ್ತಿಗೆ ಈಗ ಕಳ್ಳ ನೋಡಿದಾ ಮಿಸಕ್ಯಾಡಿದಂಗೆಲ್ಲಾ ಕುತ್ತಿಗೆ ಮಟ ಹೋತಾನ, ಆಹಾ ಈವಾಗ ತಮ್ಮ ಬರ್ತಾನ, ಆಹಾ ಅಣ್ಣಾ ದೇವ್ರು ಗುಡೆಗೆ ಹೋಗ್ಯಾನಂದ್ರೆ ಬರ‍್ತಾನ ಒಬ್ಬನು ಹೋಗ್ಯಾನಂತಾ, ಆಹಾ ಎಂಗ ನಿನ ಜೀವ ಹೋತೈತೆ, ಆಹಾ ನನ ಬರ್ತಾನ ಕಡೀತಾನ ಆ ತಮ್ಮ ಬರೋದು ಮುಂಚ್ಯಾಗೆ ಈತನ ನಾನು ಕೊಲ್ಲುಬೇಕು ಆಕೆಸ್ರುಲಿದ್ದ ಎಂಗ ಕೊಲ್ಲುಬೇಕು ನಾನು, ಆಹಾ ಸರೆ ಬಿಡು ಅಂದಾ ಈ ಕಳ್ಳದೋನು ಪಕ್ಕಾ ಉಶಾರು, ಆಹಾ