ಲೇ ನನ್ನ ಕೊಲ್ಲುತ್ತೀರಾ
ನನಗೇನು ಮುಂಚ್ಯಾಗ ನಿಮನ ಕೊಲ್ಲಲಿದ್ದರೆ ನನ್ನ ಹೆಸ್ರೆ ಅಲ್ಲಾ ಆಹಾ
ಅಂತಾ ಈಗ ದೊಡ್ಡೋನು ಬಾಳ ಉಶಾರು
ನಡುವುಲೋನು ಸ್ವಲ್ಪ ದಡ್ಡ ಅಂತಾ
ಸಣ್ಣೋನು ಕಡಿಗೆ ನೋಡ್ಯಾನ
ನಡುವಿಲೋನು ನೋಡರಾ ಸಯ್
ಉರುಲು ಹಗ್ಗ ಒಗದೆ ಬಿಟ್ಟಾನ ಸಯ್
ಬ್ಯಾಗ ತಲೆ ಮ್ಯಾಲೆ ಬಿದ್ದೆತೊ ಸಯ್
ಕೈಲಿ ಎಳಕಂಡು ಬಿಟ್ಟಾನ ಸಯ್
ಅಂಗೆ ಕೆಸ್ರಾಗ ಮುಣಿಗ್ಯಾನ
ಕೈಲೆ ಅವರ ಇಡದಾರ
ಕೆಸ್ರಾಗ ಇನ್ನ ಮುಣಿಗ್ಯಾನ
ಆಗ ಎಳದು ಬಿಟ್ಟ

ಲೇ ತಮ್ಮಾ ಕುತ್ತಿಗೆ ಬಿದೈತಪಾ ಒಳಕ್ಕೆ ಕುತ್ತಿಗೆ ಮ್ಯಾಲೆ ಬಿದ್ದೋತು ಅಂಗೆ ಒಳಕ್ಕೆ ಹೋತಪಾ, ಆಹಾ ಅಂಗೆ ಬಿಗಸಕೆಂಡು ಬಿಟೈತೆ ನೋಡಿದಾ ಕದೇವೆ ಇವನು ಕೈಲಿ ಇಡಕಂಡಾನ ತಲೆಮ್ಯಾಲೆ ಬಿದ್ದಾತ್ತಕೆ ಲಟಕನೆ ಕೈಯಾಗ ಇಡಿದು ಅಂಗೆ ಮುಳುಗಿ ಬಿಟ್ಟಾನ, ಆಹಾ ಅಂಗೆ ಬೀಗದಲ್ಲಿ ಇಡಕಂಡಾನ ಏಯ್ ಬಿದೈತಲೆ ಕುತ್ತಿಗ್ಗೆ ಏಯ್ ಎಳಿರಾಲೇ ಖಂಡೇರಾಯನ ಕೆಸ್ರಾ ಕುಣ್ಯಾಗ ಕಡಿಯಾನ,

ಕೆಸ್ರಾ ಕುಣೀ ಇನ್ನಾರ ಸಯ್
ಗಡ್ಡಿಗೆ ಎಳದೆ ಬಿಡಾರ
ಖಂಡೇರಾಯನ ನೋಡಾರ
ಇನ್ನ ಗಡ್ಡಿಗೆ ಎಳೆತಾರೆ
ಊರು ಮಂದಿ ಇಡದಾರಪಾ ಆಹಾ
ಆಗ ಹಗ್ಗ ಹಿಡಿದು ಜಾಡಿಸಿ ಎಳಿಯಾವಾಗಣ್ಣಾ
ಲಡಕ್ಕನೆ ಹಗ್ಗ ಬಿಟ್ಟಾನ
ಎಪ್ಪಾ ದಪದಪ ಬಿದ್ದಾರ
ಹಲ್ಲು ಮುರಿದವರಿಗಾಗಣ್ಣಾ
ಏನಂತಾಗಿ ಹೇಳೋನು

ಅಣ್ಣಾ ನೀನು ನಡುವುಲೋನು ಬೋ ದಡ್ಡ ನೋಡಣ್ಣಾ, ಆಹಾ ಏನ ಲೋ ತಮ್ಮ ಇಲ್ಲಾ ಕುತ್ತಿಗೆ ಹೊಗದು ಬಿದ್ದಂಗ ಮಾಡಿ ಒಳಕ್ಕನ ಇನ್ನ ಕೆಸ್ರಾಗ ಮುಳಿಗಿದಾಗ ಇಡಕಂಡಾನಲ್ಲ ರವುಟಾನ ನಿನಗೆ ನಿಗಿ ಇಲ್ಲೇನಣ್ಣಾ ಶೂಟ ಇಲ್ಲಾ ಏ ತಲೆಮ್ಯಾಲೆ ಬಿಡ್ತಾಲೆ ಸರ‍್ರಗ್ಗೆನ ಎಳದೇಲೆ ಅಂಗೆ ಮುಣಗಿ ಬಿಟ್ಟನಲ್ಲೇ ಅಣ್ಣಾ ಎಂತವನಲ್ಲಾ ಕೈಲಿ ಇಡಕಂಡಾನ ಏನು, ಆಹಾ ನೋಡು ನಡುವು ಮುರುದವರಿಗ್ಯಾರು ಕೈ ಮುರಿದವರಿಗ್ಯಾರು, ಆಹಾ ಹಲ್ಲು ಮುರಿದವರ‍್ಯಾರು, ಆಹಾ ಹೌದಲ್ಲಪಾ ಎಷ್ಟು ಮೋಸ ಮಾಡಿದ ಇವನು ಆಹಾ,

ಕಳ್ಳ ಸೂಳೆ ಮಗ ಆಹಾ
ಆಗ ಎಲ್ಲರೂ ಬಿದ್ದರೆ
ಸಾಯಲಿ ಸಾಯಲಿ ಅಂತಾನೆ
ಕಿಲ ಕಿಲ ಅವನೆ ನಗುತಾನ
ಕಳ್ಳದೋನು
ಸಾಯಿರಿ ನಾಯಿ ಅಂತಾನ

ನಾನು ಒಬ್ಬನು ಸಾಯಬಾರದಲೋ ನೂರು ಮಂದಿ ಸಾಯಲಿ, ನಾನು ಒಬ್ಬನು ಸಾಯಬೇಕೊ ಎಲ್ಲರೂ ನೀವು ಸಾಯಾರಿ ಅಂಬೊತ್ತಿಗೆ ಚಿಕ್ಕ ತಮ್ಮ ಫೀರೋಜಿಗೆ ಸಿಟ್ಟು ಬಂತು,

ಲೇ ಎಷ್ಟು, ಮೋಸ ನೀನು ಮಾಡಿದೆಲೆ ಸಯ್
ನಿನ್ನ ಬಿಡದಿಲ್ಲ ನೋಡಲೆ ಸಯ್
ಎಲ್ಡು ಹಗ್ಗ ಆತ ಇಡದಾನ ಸಯ್
ಎಡಕ್ಕೆ ತೋರಿಸಿ ಬಿಟ್ಟಾನ ಸಯ್
ಬಲಕ್ಕೆ ತೋರಿಸಿ ಬಿಟ್ಟಾನ ಸಯ್
ಲಟಕ್ಕನೆ ಎಡಗೈಲಿ ಒಗದಾನ ಸಯ್
ಕುತ್ತಿಗ್ಗೆವಾಗೆ ಬಿದೈತೊ ಸಯ್
ಸರಗ್ಗನೆಂಗೆ ಎಳದಾನ
ಸರಗ್ಗನಂಗೆ ಎಳದಾನ
ಹಗ್ಗ ಕುತ್ತಿಗೆ ಇಡಕಂಡೈತೊ
ಉರ್ಲ ಹಗ್ಗನೆ ಅಣ್ಣಾಯ್ಯಾ

ಎಪ್ಪಾ ಈಗ ಎಳಿರಲೇ ಏ ಹೋಗಯ್ಯೊ ತಳ್ಳಿ ಬಿಟ್ಟಾವ ನಡುವಂಬೋದು, ಆಹಾ ಎಪ್ಪಾ ಏನು ಪರವಿಲ್ಲ ಇಂದಗಡೆ ನಾನು ತೋರಸ್ತೀನಿ ಎಳಿರಿ ಆತಾನ,

ಆಗ ಐವತ್ತು ಮಂದಿ ಇಡದಾರ
ಅವನ್ನ ಎಳದೆ ಬಿಟ್ಟಾರೆ
ಅವನಿಂದೆ ಕೆಸ್ರು ನೋಡರಾ ಸಯ್
ಅರ್ಧಕೆಸ್ರು ಬಂದೈತೊ ಸಯ್
ಕುಣ್ಯಾಗ ಇದ್ದ ಕೆಸ್ರು ಅಲ್ಲೈತೆ
ಅರ್ಧಕೆಸ್ರು ನೋಡರಾ ಅವನಿಂದೆ ಇನ್ನ ಬಂದೈತೊ

ಗಡ್ಡಿಗೆ ಎಳದರು, ಆಹಾ ಅವನೇನು ಬಡಿದಿಲ್ಲ ಬೈದಿಲ್ಲ ನೋಡಪಾ ನಿನ್ನ ಗಡ್ಡಿಗೆ ಎಳದೀವಿ ನಾವೇನು ಬಡೆದಿಲ್ಲ ಬೈಯದಿಲ್ಲ ನಮ ಕಕ್ಕನ ಕೈಯಾಗ ಇರೋನು, ಆಹಾ ರೊಕ್ಕ ತಿಂದು ಕಡದು ಬರೋನು, ಆಹಾ ನೀವು ಕಳ್ಳರಪಾ ನಮ್ಮಪ್ಪಗ ಬಲ ಕೊಟ್ಟೀರಿ ನೀವು ಆತ ಕೊಟ್ಟಗೆಲ್ಲ ನೀವು ಆತ ಕೊಟ್ಟಗೆಲ್ಲ ನೀವು ತಿಂಬೋರು, ಆಹಾ ಆಸಿ ಬೇಲಿ ಇಟ್ಟ ಬಿಟ್ಟರು ಅಂಟಿಬೇಲಿ ಜಾಲಿಬೇಲಿ ಬಾರೆಣ್ಣಾ ಬೇಲಿ, ಆಹಾ ಬೇಲಿಟ್ಟು ಇವನು ಮನಿಶಿ ಬಿಟ್ಟರು, ಆಹಾ ಬೇಲ್ಯಾಗ ಆಹಾ ಮತ್ತೆ ಮ್ಯಾಲೆ ಬೇಲಿ ಇಟ್ಟರು,

ಆಗ ಉರ್ಲ ಹಗ್ಗಲಿಂದ ವಣ್ಣಾಯ್ಯ ಅವರೆ ಬಿಗ್ಗಿಸಿಬಿಟ್ಟಾರೆ
ಬೇಲಿನ್ಯಾಗ ಕಟ್ಟಿಬಿಟ್ಟರೆ ಸಯ್
ಅವನಾಗಿ ಕಳ್ಳದೋನುರಾ ಸಯ್
ಅಸ್ರಾಪ ಕಳ್ಳದೋನುರಾ ಸಯ್
ಬೇಲ್ಯಾಗ ಕಟ್ಟಿವಣ್ಣಾಯ್ಯೊ ಸಯ್
ಏಲ್ಡು ನಗಗಳು ಕಟ್ಯಾರ ಸಯ್
ಕೆಂಪು ಹೋರಿ ಕರಗಳು ನೋಡರಾ ಸಯ್
ಅವು ಯಾವತ್ತು ನೋಡಿಲ್ಲ ಸಯ್
ಮನ್ಯಾಗ ಕಟ್ಯಾಕಿ ಜೋಪಾನ ಮಾಡುರಾ
ಮನಿಶರನ ನೋಡಿಲ್ಲ ನೋಡುರಾ

ಮನ್ಯಾಗ ಕಟ್ಯಾಕಿ ಬಿಟ್ಟಿದ್ದು ದಿನಾಲಿ ಕೇಜಿ ಕೇಜಿ ಕೊಬ್ಬರಿ ಬಟ್ಲಾ, ಆಹಾ ಗುಂಡಗ ಹಾಕಿ ರುಬ್ಬಿ ಪುಟ್ಯಾಗ ಹಾಕಿ ಎತ್ತುಗಳಿಗೆ ಇಡ್ತಾರ ಅವರು, ಆಹಾ ಅಂತಾ ಎತ್ತುಗಳು ಮನಿಶಾರನ ನೋಡಿಲ್ಲ, ಆಹಾ ಕಣ್ಣಿಗೆ ಇಟ್ಟಾರ ಕನ್ನಡಿ ಆಹಾ,

ಕನ್ನಡಿ ತಗದೆ ಬಿಟ್ಟಾರೆ ಸಯ್
ಅವರೆ ಮುಂದೆ ನೋಡರಾ ಸಯ್
ಕಣ ಕಣ ತಪ್ಪಡಿ ಒಡದಾರ ಸಯ್
ಈಸಲು ಬರಿ ಮುರಿಕೆಂತಾರ ಸಯ್
ಎಡಕ ವಳ್ಳಿದರೆ ಬಡಿತಾರ ಸಯ್
ಹಿಂದಕ ಇನ್ನ ಬಡಿತಾರ ಸಯ್
ಮುಂದಕ ಎತ್ತುಗಳು ಬಿಟ್ಟಾರ
ಮುಂದಕ ಎತ್ತುಗಳು ಬಿಟ್ಟಾರ
ಎಡಕೆ ಇನ್ನ ಬಡಿತಾರ
ಇನ್ನ ತಟಾರು ಬಂದರ ಸಯ್
ದಡೇಗಾವಗೆ ಬಂದಾರ ಸಯ್
ಮೂರು ಗಂಟ್ಯಾಗ ಬಂದಾರ ಸಯ್
ಒಳ್ಳೆ ಸಂಜೆ ನೋಡುರಾ ಸಯ್
ಸಂತೆಯಾಪಾರ ಐತಾರ
ಒಳ್ಳೆ ಚಲೋ ಯಾಪಾರ
ಬಲೊ ಯಾಪಾರ ವೈತಣ್ಣಾ
ಅವನು ಬೇಲ್ಯಾಗ ಇದ್ದೋನು ನೋಡ್ಯಾರ ಸಯ್
ಒಂದು ಸರ್ತಿ ಎಗರು ಹೊತ್ತಿಗೆ ಸಯ್
ಏರುಕೊಂಡೆ ಸತ್ತಾರ ಸಯ್
ಮುಂದುಕ ಮುಗದಾಣ ಹಾಕ್ಯಾರ
ತಲೆಯಂತವೈತ ಅವನಾಗಿ
ಅವನೆ ಕಳ್ಳದೋನುರಾ
ಲೇ ಒಂದು ಸರ್ತಿ ಎತ್ತುಗಳು ಎಗದರೆ ಸಯ್
ಮನಿಶೇರು ಎತ್ತರ ಎಗರ್ತಾವ ಸಯ್
ಸಣ್ಣ ಸಣ್ಣ ಗಿಡಗಳು ಅಲ್ಲರಾ ಸಯ್
ಎಗರಿಕೆಂಡು ಓಡುರಾ ಸಯ್
ದೊಡ್ಡು ದೊಡ್ಡು ಮರಗಳಿದ್ದರೆ ಸಯ್
ಮುರುಕಂತಾ ಅಂಗೆ ಹೋತಾವ
ದೊಡ್ಡು ದೊಡ್ಡು ಮರಗಳು ನೋಡರಾ
ಮುರುಕಂಡಾಗಿ ಹೋತಾವೆ

ಆಗ ದಡೇಗಾವ ಸಂತೆ ಮೂರುಗಂಟೆ ಒಳ್ಳೆ ಯಾಪಾರಪಾ, ಆಹಾ ಎಲ್ಲ ಸುತ್ತಾಲ ಗೋಡೆ ಆಹಾ ಹೋಗಾರ ಒಂದೆ ದಾರಿ ಬರಬೇಕು ಒಂದೆ ದಾರಿ, ಆಹಾ ಮಾಡಿದ್ದರೆ ಸಂತ್ಯಾಗನೆ ಒಡದಾರ ಸಂತಿ ಒಳಗನೆ ಬರತಾರ,

ಸಂತಿ ಒಳಗೆ ಒಡದಾರ ಸಯ್
ಹಿಂದಕ ನೋಡಿ ಬಂದಾರ ಸಯ್
ಊರು ಬಿಟ್ಟು ಒಳಕಿನ್ನರಾ ಸಯ್
ಹುಣಸೆ ಗಿಡಗಳು ಏರಿಬಿಟ್ಟರಾ ಸಯ್
ಬೇಲಿ ಗಿಡಗಳು ಏರಿ ಬಿಟ್ಟರಾ ಸಯ್
ಇವರು ಅಣ್ಣತಮ್ಮರು ಕುಂತಾರ
ಕರುಣೆ ಕಲ್ಲಿನೋರು
ಇವರು ಇಬ್ಬರು ಕುಂತಾರೆ
ಎತ್ತುಗಳಂದರೆ ಎತ್ತುಗಳಲ್ಲರಾ ಸಯ್
ಕೆಂಪು ಬಟ್ಟೆಗಳು ನೋಡಿಲ್ಲ ಸಯ್
ಬಿಳಿ ಬಟ್ಟೆಗಳು ನೋಡಿಲ್ಲ ಸಯ್
ಸಂತ್ಯಾಗ ಬರೊವೊತ್ತಿಗೆ ಸಯ್
ಎತ್ತುಗಳು ಯಾವಾಗ ಬಂದಾವ ಸಯ್
ದಸ್ಯು ದುಸ್ಯ ಅಂತಾರ ಸಯ್
ದಸ್ಸು ಇಲ್ಲ ದುಸ ಇಲ್ಲರಾ ಸಯ್
ಕೊಡಲಿದ್ದ ನೋಡರಾ ಸಯ್
ಹೊಟ್ಟೆಗಾಕಿ ಅಂಗೆ ತಿವಿತಾನ
ಹೊಟ್ಟೆಗಾಕಿ ಅಂಗೆ ತಿವಿತಾವೆ
ಇನ್ನ ಅಲ್ಲಿ ನೋಡುರಾ
ಮನಿಶಾರ ಮ್ಯಾಲೆ ಇರಿತಾವ ಸಯ್
ಕಣದಾಗ ಏರಿ ತುಳದಂಗ ಸಯ್
ಕಲಿಸಿ ಕಲಿಸಿ ತುಳಿತಾವ ಸಯ್
ಇನ್ನ ಬೇಲಿ ನೋಡುರಾ ಸಯ್
ಕಾಯಿ ಗಡ್ಡೆ ನೋಡುರಾ ಸಯ್
ಅಕ್ಕಿಬ್ಯಾಳೆ ನೋಡುರಾ ಸಯ್
ಎಲ್ಲ ಬಳಕಂಡು ಬರತೈತೊ
ಕಾಯಿ ಕಡ್ಡಿ ನೋಡುರಾ
ಅಕ್ಕಿಬ್ಯಾಳೆ ಬಳಕಂಡು
ಎಮ್ಮೊ ಯಾವನು ಎತ್ತುಗಳು ಬಿದ್ದವೊ
ಎಮ್ಮಾ ಇತ್ತಾಗ ಓಡಿದರೆ ಗ್ವಾಡೆಮ್ಮ
ಐವತ್ತು ಮಂದೀನಾ ಕೊಲ್ಯಾರ
ಅವರು ಕಣ್ಣೀಲೆ ನೋಡ್ಯಾ
ಹಂದಿ ಬಲೇನೆ ಹೊದ್ದಾರ
ಉರುಲಗ್ಗನೆ ತಂದಾರ
ಮಾಯ ಮರಳು ಹಾಕ್ಯಾರ
ಎತ್ತುಗಳು ಓಡಿಸೊ ಹೊತ್ತಿಗೆ
ಅಲ್ಲಿ ಬಲ್ಲಾಗ ಬಿದ್ದವ ಸಯ್
ಬಿದ್ದು ಹೊತ್ತಿಗೆ ನೋಡುರಾ ಸಯ್

ಎತ್ತುಗಳು ಬಾರ‍್ಲ ಬದ್ದಾವ ಅಲ್ಲಿ ಒಲೆಣ್ಣಾ ನೋಡುರಾ ಆಗ ದಡೇಗಾವದಾಗ ಸಂತ್ಯಾಗ ಐವತ್ತು ಮಂದಿ ಸತ್ತಮ್ಯಾಲೆ ಎಲ್ಲರೂ ಕಲಿತು ಹಂದಿ ಬಲಿ ಒಗದರು ಹಂದಿ ಬಲಿಯಾಗ ಒಕ್ಕಬಾರ್ಲು ಬಿದ್ದುವು, ಆಹಾ ಎತ್ತುಗಳು ಇಡಕಂಡರು ನಾಕು ಕಾಲು ಕಟ್ಟಿದರು, ಆಹಾ ನಗಾ ತೂರಿಸಿದರು, ಆಹಾ ಹೊತ್ತಕಂಡು ಮಾದ್ರು ಕರೆಕಳಿಸಿ ಹೋಲಿಗೇರನಾ ಆಗ ಊರ ಕೆಳಗ ಅಚ್ಯನ ಬಂಡೆ ಮ್ಯಾಕತಂದು,

ಕುತ್ತಿಗೆ ಕೊಯಿದು ಬಿಟ್ಟಾರೆ
ಜಲ್ಮ ಒಂದೆ ಕೊಯಿದಾರ
ಅಂಬೊ ಅಂತಾ ಅರಸ್ತಾವ ಎತ್ತುಗಳು .. ..
ಅವನೆ ಕುತ್ತಿಗೆ ಕೊಯಿಸ್ಯಾನ

ಎತ್ತುಗಳು ಅಂಬೊ ಅಂತ ಅರಸೊ ತನಕ ಕುತ್ತಿಗೆ ಕೊಯಿದು ಬಿಟ್ಟಾ ಲೇ ಈ ಬೇಲ್ಯಾಗ ಏನು ಆಯಿತೆ ನೋಡರಲೆ ಅಂದಾ, ಆಹಾ ಬೇಲಿ ಬಿಚ್ಚಿ ನೋಡಿದರೆ ತುಂಡು ತುಂಡು ಆಗೈತಪಾ ಕುರಿಮಾಂಸ ಕೊಯಿದಂಗಾ ಅವನು ತಲೆ ಒಂದೆ ಕಳ್ಳದೋನುದು ಆಗ ಹೊಟ್ಯಾಗ ಹುಟ್ಟಿದು ಮಕ್ಕಳು ಸತ್ತರೆ ಅಣ್ಣನ ಮಕ್ಕಳು ದುಃಖ ಮಾಡಿಲ್ಲ, ಆಹಾ ಅಣ್ಣನ ಮಗ ಸತ್ತರೆ ದುಃಖ ಮಾಡಿಲ್ಲ, ಆಹಾ ಆ ಕಳ್ಳದೋನು ತಲೇನೆ ಬಾರ‍್ಲ ಬಿದ್ದು ಎಂಗ ಇಡಕಂಡು ದುಃಖ ಮಾಡ್ತಾನ ಆಹಾ,

ಎಪ್ಪಾ ಹೇಳ್ದ ಮಾತು ಕೇಳತಿದ್ದರೆ .. ..
ಕಳ್ಳ ಎಪ್ಪಾ ಮಗನ ರೀತಿ ನೀನು ಇದ್ದೆಲ್ಲೋ
ಮಗನಂತೆ ನಾನು ನೋಡಿದ್ಯಾ
ಎಪ್ಪಾ ಮಕ್ಕಳಾದರೆ ಇರಾದಿಲ್ಲರಾ
ಕಳ್ಳದೋನು ನೋಡಿ ಅಳತಾನ
ಎಲ್ಲಿಲ್ಲಿಗೆ ಹೋಗಿ ಬರತಿದ್ದೆ .. .. ಕಳ್ಳ
ಎಪ್ಪಾ ಅಣ್ಣಾ ಮಕ್ಕಳು ನಿನ್ನ ಕಡಿದಾರ

ಹೇಳಿದಾ ಮಾತ ನೀನು ಕೇಳತಿದ್ದೆಲ್ಲಾ ಅನ್ರಾಪ ಕಳ್ಳೋನು ಕೇಳಲೆ ಅಣ್ಣಾ ಮಕ್ಕಳು ನಿನ್ನ ಕಡಿದುರು ಅಂತಾ ಕಳ್ಳದೋನು ತಲೆಮ್ಯಾಲೆ ಬಾರ‍್ಲ ಬಿದ್ದು ದುಃಖ ಮಾಡ್ತಾನ, ಆಹಾ ಅವನು ಹೆಚ್ಚಾಗಿದ್ದಾನ ಅಣ್ಣಾ ಮಕ್ಕಳಾ ಹೆಚ್ಚಾಗಿದ್ದರಾ, ಆಹಾ ಹೇಳಿದಾ ಮಾತ ಕೇಳತಿದ್ದನಂತೆ ಎಲ್ಲಿಗೆ ಹೋಗಂದರೆ ಅಲ್ಲಿಗೆ ಹೋಗತಿದ್ದನಂತೆ ಎಪ್ಪಾ ನಿನಮಗ ಅಂದರು, ಆಹಾ ಆಗ ನೋಡಿದರು ಇವ ಏನ ನೋಡಿದಾ ಈಗ ನೋಡು ನಮ್ಮ ಕಕ್ಕ ಎಷ್ಟು ಮೋಸ ಮಾಡ್ಯಾನ, ಆಹಾ ನಮ್ಮಣ್ಣನ ಕಡದಾನ ಈಗ ನಮ್ಮ ಕಕ್ಕನ ಕಡಿಬೇಕಂದರೆ ನೋಡು ಅವನಂದರೆ ಕೆಟ್ಟ ಗುಣ ನಾವು ಕೆಟ್ಟತನ ಹೋಗಾನ ಬ್ಯಾಡ ನೋಡಿ ನೋಡಿ ತಂದೆ ದುಷ್ಟಾಗಲಿ ದುರ್ಮಾರ್ಗ ಆಗಲೀ ತಂದೀನ ಕೈಯಾಗನ ಸಾಯಬೇಕು,

ತಂದೀನ ನಾವು ಕಡೀಬಾರ್ದು
ಎಂಗ ಮಾಡಾನ ತಂದೆಪ್ಪೊ
ಎಂಗ ಜಲ್ಮ ಕಳೀಬೇಕು
ನಮ್ಮ ಜಲ್ಮನ್ನ ಕಳೀಬೇಕು
ತಂದಿ ಜೀವ ಕಳಿಬಾರ್ದು ಆಹಾ
ನೋಡಿ ನೋಡಿ ತಂದೀನ ಎಂಗ ಕಡಿಯಾನ ಆಹಾ
ದುಷ್ಟ ಆಗಲಿ ಕರ್ಮದೋನು ಆಗಲಿ ಆಹಾ

ಛಿ ಬ್ಯಾಡ ಈಗ ನಮ್ಮ ಕಕ್ಕಗ ಇನ್ನ ಭಯ ಬಂದಿಲ್ಲ ಸಂತೆ ಹಾಳು ಮಾಡಿದದೇನ ಸಿಂತಿ ಇಲ್ಲ, ಆಹಾ ಈಗ ಲೋಕದಾಗ ಕಳ್ಳದೋನು ಕಡದರನಾ ಅವನಿಗೆ ಇನ್ನ ಎದೆ ಬಿದ್ದಿಲ್ಲ ಲೋ ಕಳ್ಳ ಕುಲದಾಗ ನೆಂಚಿ ಮಕ್ಕಳು ಆಗ ಒಬ್ಬರು ಐದಾರ ಒಬ್ಬನು ಅಪ್ರಾಪ್ತ ಕಳ್ಳವನು ಕೊಲ್ಲಿಬಿಟ್ಟೀವಿ, ಆಹಾ ಇಗೋ ಕಳ್ಳರ ಪಟ್ಣಕೆ ಹೋಗಾನ ಆ ಮೂವರು ಐದಾರ ಇನ್ನ ಮೂವರು ಕಡದು ತಂದೀನ ಕಡಕಂಡು ಆಗ ಪಟ್ಣವೆಲ್ಲಾ ಲೂಟಿ ಮಾಡಾನ ಇನ್ನ ಊರು ಲೂಟಿಯಾಗಲೀ ಲೂಟಿ ಮಾಡಿ ನಾವು ಬರಾಣ ಮೂರು ತಿಂಗಳು ಮಾಡಿಕೆಂಬಾನ ನಮ್ಮ ಕಕ್ಕಬಂದು ನಮ್ಮನ ಕೈಕಾಲು ಕಟ್ಯೆ ಆಸ್ತಿ ಲೂಟಿ ಮಾಡಿ ನಮ್ಮೂರು ಎಂಗ ತಿರುವುಣಿಗಿ ಮಾಡಿಕೆಂಡು ಹೋದನು, ಆಹಾ ಆ ಊರು ಆತನ ಹೆಸ್ರು ಅಲ್ಲಾ, ಆಹಾ ಆತನ ಇಲಾಖೆ ಆಯಿತಲ್ಲಾ ನಾವು ಕಳ್ಳರನು ಕೊಲ್ಲಿ ನಾವು ಬೋಡರ ಹಾಕಿ ಅಗಸಿಗೆ ನಮ್ಮ ಕಡಿಗೆ ತಿರುವುನ ಮಾಡಿಕೊಂಡು ಬರಾನ ಅಂತ,

ನಾಯಿಗಳು ಕರಕಂಡು ಬಿಟ್ಟಾರೆ
ಮುನ್ನೂರು ಮಂದಿ ಕರಕಂಡು
ಆಗ ಕಳ್ಳರು ಪಟ್ಟಾಕೆ
ಬಡೇಗಾವನೆ ಬಿಟ್ಟಾರೆ
ದಡೇಗಾವಿಗೆ ಬಂದಾರೆ
ಬಡೇಗಾವನೆ ಬಿಟ್ಟಾರೆ
ದಡೇಗಾವಿಗೆ ಬಂದಾರೆ

ದಡೇಗಾವು ಬರೊ ಹೊತ್ತಿಗೆ ಮೂವರು ಕಳ್ಳರು ಐದರಪಾ, ಈಗ ಅಸ್ರಾಪ ಕಳ್ಳೋನು ಕೊಲ್ಲಾರ ಶಂಬೆಗೆ ಮೆಂಬೆಗ ಮಂತ್ರಾಳ ಮಾದೇವ ಐದಾನ ಮೂವರು ಐದಾರ ಕಳ್ಳರು ದತ್ತೋಜಿ ಮಕ್ಕಳು ಆತ ಏನಿಲ್ಲಪಾ ಸುಮ್ಮನೆ ಇನ್ನವರ ಮಣ್ಣು ಇಡಕಂಡು ಉಗ್ಲಿದರೆ ಆಗೈತು ಎಷ್ಟು ಪರಾಕ್ರಮ ದೋನಾದರ ಸುಮ್ಮನೆ ನಿಂದರಬೇಕು ಕಣ್ಣು ಮುಚ್ಚಿಕಂಡು, ಅಹಾ ಅಂತವನು ತಂದೆ, ಆಹಾ ಈಗ ನಿರಿವಿ ತಿಕ್ಕಿ ಪುಡಿ ಮಾಡಿ ಆಗ ಒಣಗಿಟ್ಟು ಮತ್ತೆ ಪುಡಿಯಲ್ಲಾ ಕೈ ಇಡಕಂಡು ಜೀವ ಕೊಟ್ಟು, ಎಬ್ಬಿಸ್ತಾನ, ಆಹಾ ಅಂತ ಮಂತ್ರ ಕಲಿತಾನ, ಅಹಾ ಮುದಿಯವನಾಗ್ಯಾನ ಕಣ್ಣ ಕಾಣದಿಲ್ಲ ಕಿವಿ ಕೇಳಾದಿಲ್ಲ ವರುಷಮ್ಯಾಲೆ ಆಯಿತು, ಆಹಾ ಆಗ ಮೂವರು ನೋಡಿದರು ಲೇ ಅವರು ಅಣ್ಣಾ ಕಡಿದಿದ್ದು ಪತ್ತಾಗಿ ಬಿಟೈತೆ,

ಊರು ಮ್ಯಾಕ ಇನ್ನಾ ಬಂದಾರ
ನಾಯಿಗಳು ಕರಕಂಡು ಬಂದಾರೆ
ಮಾರವಾಡಿ ಶೇಠಿ ಕುಲಾಲೆ
ನಮ್ಮನೆ ಹಾಳು ಮಾಡ್ತಾರ
ಲೇ ಎಂಗ ಮಾಡಾನಂತ
ಆಗ ಅವರು ಏನಂದರು ಕಳ್ಳರು
ಶರಣಪ್ಪಾ ಮಾರವಾಡೋರೆ
ನಿಮ್ಮ ಪಾದಕೆ ಶರಣಪ್ಪಾ
ಎದಕಾಗಿ ನೀವು ಬಂದೀರಿ

ಅಂಬೊತ್ತಿಗೆ ನೋಡ್ರಪಾ ಶರಣಂತಾ ಅಂತಿರಿ, ಅಹಾ ಇದೋ ನಮ್ಮ ಅಣ್ಣನ ಕಡಿದು, ಬಂದೀರಿ ನಿಮ್ಮನ ಬಿಡದಿಲ್ಲ,

ನಿಮ್ಮನ ನಾವು ಕಡಿತೀವಿ
ನಿಮ್ಮನ ನಾವು ಬಿಡದಿಲ್ಲೆ

ಸರೆ ಎಪ್ಪಾ ನಿಮ್ಮಣ್ಣನ ನಾವು ಕಡಿದಿಲ್ಲ ಯಾವನೊ ಕಡಿದಾನು ಇಲ್ಲಿಲ್ಲ ನೀವೇ ಕಡಿದಿದ್ದು ಆಹಾ ನೀವು ಇದ್ದಿದ್ದಕೆ ನಮ್ಮ ಕಕ್ಕಗ ಬಲಬಂದೈತೆ ನಿಮ್ಮನೆಲ್ಲ ಕೊಲ್ಲಿಬಿಟ್ಟರೆ ನಮ್ಮ ಕಕ್ಕ ಆಗ ಮಕ್ಕಳೆ ಅಂತಾ ನಮ್ಮಿಗೆ ಕೈ ಮುಗಿತಾನ ಅಷ್ಟತನಕ ಬಗ್ಗದಿಲ್ಲ ನಮ್ಮ ಹತ್ತಿರ ಅಂಗಾದರೆ ನಮ್ಮನ ಕಡಿತೀರಾ, ಆಹಾ ನೀವು ಇಬ್ಬರು ನಾವು ಮೂವರು ಐದೀವಿ, ಅಹಾ ಒಬ್ಬನು ಹೋಗ್ಯಾನ ರೊಕ್ಕ ಉಸುಲು ಮಾಡಿಕೆಂಬಾಕ, ಆಹಾ ಹೋಗ್ಯಾನೊ ಆಳಾಗಿ ಹೋಗ್ಯಾನೊ, ಆಹಾ ಅಂಗಾರೆ ನೀವು ಮೂವರು ಕಡೀತೀರಾ ಓಡತೀತಿವಿ ಅಂದರೆ ಮತ್ತೆ ಕಡೀರಿ ಊಟ ಮಾಡ್ರಿ ಊಟ ಮಾಡಿ ಬಂದಮ್ಯಾಲೆ ನಿಮ್ಮನ್ನ ನಾವು ಕಡದು ನಿಮ್ಮರ ನಾವು ಮಾಡಿಕೆಂತೀವಿ ನಮ್ಮನ ಕಡದು ನಮ್ಮೂರನ ಗೆದ್ದು ಕೊಂಡು ಹೋಗಿರಿ ಅಂತಾ ಕಳ್ಳರು ಅಂದರು, ಆಹಾ ಸರೆ ಬಿಡು ನಡುವೋನು ನೋಡಿದಾ ಆಗ ತಮ್ಮ ಊಟ ಅಂದಾಗ ಜೀವಕ ಕೊಲ್ಲಬಾರ‍್ದು, ಆಹಾ ಜೀವ ತುಂಬಾ ಊಟ ಮಾಡಿದ ಮ್ಯಾಲೆ ಜೀವ ಕಳಿಬೇಕು ಅಂದಾ ಆಹಾ ಹೋಗಿಲಿ ಬಿಡಪ ಅವರನ ಊಟ ಬರ‍್ರೀ ಅಂದಾ, ಆಹಾ ಅಂಬೊತ್ತಿಗೆ ಇವರಿಗೆ ಯಾವ ಊಟ ಇಲ್ಲಪಾ ಮಂತ್ರಗಳು ತಂತ್ರಗಳು ಮಾಳಿಗೆ ಮ್ಯಾಲೆ ಇಟ್ಟರಪಾ ಆಹಾ ಹೆಣಮಕ್ಕಳು ಇದ್ದಮನ್ಯಾಗ ಇಡಂಗಿಲ್ಲ ಅಂಟು ಮೈಲೆ ಇರೈತೆ ಅಂತಾ ಆಗ ತಣ್ಣೀರು ಸಾನ ಮಾಡಿಕೆಂಡು ಮಂತ್ರಾಳ ಮಾದೇವ ಆಗ ಪಾಂಟೆಗೆ ಏರಿ ಮ್ಯಾಕ ಏರಿಬಿಟ್ಟು ತೂತಿನಾಗಿಂದ ಏರಿ ಆಗ ಲೋಬನ ಹಾಕಿ ಊದಿನ ಕಡ್ಡಿ ಹಚ್ಚಿ,

ನಿಂಬೆಹಣ್ಣು ಕೈಯಾಗ ಇಡದಾನ
ಅವನು ಮಂತ್ರಿಸಿ ನಿಂತಾನ
ಗಾಳಿ ಮಾರೆಮ್ಮನ ಕಡೆಗೆ ನೋಡಮ್ಮ
ಗಾಳಿಯಮ್ಮಗ ಶರಣಮ್ಮೊ
ನಿನ್ನ ಪಾದಕೆ ಶರಣಮ್ಮೊ

ಚಿಕ್ಕ ತಮ್ಮ ಅಂದರೆ ಪಕ್ಕಾ ಉಶಾರೆ ಅಣ್ಣಾ ನಾಡವೋನೆ ಅವರು ನಾಯ್ಕರು ಎಲ್ಲ ಹೋದರು ಅಂದಾ ಅಯ್ಯೋ ಊಟ ಮಾಡಿಕೊಂಡು ಬರ‍್ತೀವಂತ ಹೋದರಪಾ ಅರ್ಧ ಘಂಟೆ ತಡಿದಪ್ಪಾ ಅಂತಾ ಊಟ ಮಾಡಿ ಬಂದ ಮ್ಯಾಲೆ ಅವರನ ನಾವಾನ ಕಡಿಯಾನ, ನಮನ ಅವರನ್ನ ಕಡಿಯಲಿ, ಆಹಾ ನಿನ್ನ ಹಾಳಾಗಿ ಹೋಗಾ ಎಲ್ಲಿ ಊಟ,

ಮಾಳಿಗೆ ಮ್ಯಾಕ ನೋಡಣ್ಣಯ್ಯ
ಮ್ಯಾಕೆ ನೋಡು ಮಾಳಿಗೇನಾ
ಕೂದಲು ಬಿಟ್ಟು ಕೊಂಡು ಅಣ್ಣಯ್ಯಾ
ಮಂತ್ರಾ ಊದ ಉದತಾರೆ
ನಾಯಿಗಾಗಿ ಚೌಕಟ್ಟಾನ
ಕುದ್ರಿಗೆ ಮಂತ್ರ ಬರೀತಾರ
ನಮ್ಮನ ಕುತ್ತಿಗೆ ಕೊಯ್ಯಿತಾರೆ

ಮೋಸ ಮಾಡಿ ಕುತ್ತಿಗೆ ಕೊಯಿತಾರ ನಮ್ಮಣ್ಣಗೆ ಮಂತ್ರ ತಂತ್ರ ಮಾಡಿ ನಮ್ಮಣ್ಣನ ಜೀವ ತಗಿದಾರ, ಆಗ ಬಗ್ಗಿ ಅವನು ಕೂದಲ ಬಿಟ್ಟಕಂಡು ಎಂಗ ಓದ್ತಾನಲ್ಲಿ ಲೋಬಾನ ಹಾಕಿ ಊದಿನ ಕಡ್ಡಿ ಹಚ್ಚಿ, ಆಹಾ ಹೌದಲ್ಲಾ ಹಾಳಾಗಿ ಹೋಗಾ ಊಟ ಮಾಡಿಕಂಡು ಬರ‍್ತೀವಂದ್ರಪಾ, ಆಹಾ ಆಗ ಒಬ್ಬನು ಕೂದ್ಲ ಬಿಟ್ಟುಕಂಡು ಆಗ ಇನ್ನಷ್ಟು ಓದ್ತಾನ, ಆಹಾ ಆಗ ಅಣ್ಣಾ ಅವನ್ನ ಕಡಿಕಂಡಿ ಬರ‍್ತೀನಿ ಈಗ ನೀನು ಇಲ್ಲೇ ಇರಬೇಕು ಅಂದಾ ಈ ಮಾಳಿಗೆ ಮ್ಯಾಕ ಎಂಗ ಎಗರತಿ ಅಂದಾ ಎಂಗ ಒಂದು ರೀತಿ ಎಗರತೀನಿ ನೀನೇನು ಎದೆ ಬೀಳಬ್ಯಾಡ ಅಂಬೊತ್ತಿಗೆ ಇನ್ನ ಇಬ್ಬರು ನಿನಮ್ಯಾಕ ಬರ‍್ತಾರ ಅತ್ತಗ ಹೋದಮ್ಯಾಲೆ ನೀನು ಬಾಳ ಉಶಾರ ಇರಬೇಕು ಅಂದಾ ಆಹಾ,

ಚಿಕ್ಕ ತಮ್ಮ ನೋಡರಾ ಸಯ್
ಮಂತ್ರೋನ ತಾಕ ಹೋದಾನ ಸಯ್
ಆಗ ಬಂದೆ ನೋಡರಾ ಸಯ್ .. ..
ಹಿಂದಕ ನೋಡಿ ಕಂತಾ ಬಂದಾನ ಸಯ್
ಆಗ ಹಿಂದಕ ನೋಡಿ ಹೇಳಿ ಹೋಗ್ಯಾನ ಸಯ್
ಆಗ ಮತ್ತೆ ನೋಡರಾ ಸಯ್
ಕುಪ್ಪಳಿಸಿ ಪೆಲ್ಟಿ ಒಡದಾನ ಸಯ್
ಮೂವರ ನಿಂತು ನೋಡರಾ ಸಯ್
ಮಾಳಿಗೆ ಮ್ಯಾಕ ಎಗರಿಬಿಟ್ಟಾನ
ಮಾಳಿಗೆ ಮ್ಯಾಲೆ ಎಗರ್ಯಾನ
ಎಗರಿ ಒಂದೆ ನೋಡರಾ ಸಯ್
ಬಗ್ಗಿ ಹೋದೋನು ನೋಡರಾ ಸಯ್
ಚಪ್ಪನಂಗೆ ಇನ್ನ ಕಡದಾನ
ಇನ್ನ ಮಂತ್ರ ಊದೋನನ
ಅವನ ತಲೆ ಬಂದೈತೊ ಅಣ್ಣನ ಮುಂದೆ ಬಿದೈತೊ

ಆಗ ಬಗ್ಗಿ ಹೋದ್ತಾನ ಕುಪ್ಪಳಿಸಿ ಎಗರಿ ಲಟಕ್ಕನೆ ಕಡದಾ, ಆಹಾ ಆ ತಲೆ ಎಗರಿ ಬಂದು ಆತನ ಮುಂದೆ ಬಿತ್ತು ಕೆಳಗ ಐದಾನಲ್ಲ ನಡವಣ್ಣಾ ಆಹಾ ಸೋಮಯ್ಯ ಗೊತ್ತಿಲ್ಲ, ಆಹಾ ಹೌದಪ್ಪಾ ನನ ತಮ್ಮನ ತಲೆ ಈಗ ಕಳ್ಳದೋನು ತಲೆ ಅಂತಾ ಗೊತ್ತಿಲ್ಲ, ಆಹಾ ಅಯ್ಯೊ ಎಪ್ಪಾ ನನ್ನ ತಮ್ಮನ್ನ ಕಡದು ನನ ಮುಂದೆ ಒಗದರು ಅಂತಾ,