ಅಂಗೆ ಬಾರ್ಲ ಬಿದ್ದಾನ ಬಿದ್ದಾನ
ನಿನ್ನ ಕಡಿದಾರ ತಮ್ಮಯ್ಯಾ
ತಮ್ಮ ಬ್ಯಾಡ ಅಂದರೆ ಹೋದೆಲ್ಲೋಪಾ

ನಿನ್ನೆ ಕಡಿದರ ತಮ್ಮಯ್ಯಾ ಬ್ಯಾಡ ಅಂದರೆ ಹೋದೆಲ್ಲಾ ಬಾರ‍್ಲ ಬಿದ್ದು ಅಳುತಾನಪಾ ಕಳ್ಳದೊನು ತಲಿಮ್ಯಾಲೆ ಬಿದ್ದು ಈ ತಮ್ಮ ಏನು ಮಾಡಿದಾ

ಶರಣೆ ತಾಯಿ ನಿನಗೆ ಗಂಗಮ್ಮ
ನೀನು ಜಲ್ಮ ಉಳಿಸಿದೆ
ದೇವ್ರುಗೆ ಶರಣೆ ಮಾಡ್ಯಾನ
ಕುಪ್ಪಳಿಸಿ ಕೆಳಗೆ ಹಾರ್ಯಾನ

ನೋಡಿದಾ ಏನಣ್ಣಾ ಬಾರ‍್ಲ ಬಿದ್ದು ಒದ್ದಾಡಿತೀಯಾ ಅಯ್ಯೊ ಎಪ್ಪಾ ನೀನಾ ಇಗೋ ತಲೆ ನೊಡುಗೋ ನನ ತಮ್ಮದು ಕಡದು ಮುಂದಕ ಒಗದರಂತಾ ತಲೆ ಬಿದ್ದತ್ತಿಗೆ ಅಂಗೆ ಬಾರ‍್ಲ ಬಿದ್ಧೀನಿ, ಆಹಾ ಲೆಲೆಲೆಲೆ ಕಳ್ಳದೋನು ತಲೆ ಆಗಿದ್ದು ತಮ್ಮನ ತಲೆ ಆಗಿದ್ದು ಖೂನ ಇಡ್ಯಾಕ ಬರಲಿಲ್ಲ ಏನು, ಆಹಾ ಅವರು ಕರ‍್ರಗ ಐದಾರ ನಾವು ಕೆಂಪಗ ಐದೀವಿ ಗೊತ್ತಿಲ್ಲ ಇಷ್ಟು ದೊಡ್ಡವನಾಗಿಯೆ ಅದಕೆ ನೀನು ಅಣ್ಣಾಯ್ಯ ಕೆಸ್ರು ಕುಣಿಯಾಕ ಬಿದ್ದಿಯೋ ಎಷ್ಟು ದಡ್ಡವನು ಐದೀಯೊ ಎಂತವನಾಗಿ ಅಣ್ಣಾಯ್ಯಾ ಎಳವರಿಕೆ ತಿಳಿಯದ ನೀನಣ್ಣಾ ಎಷ್ಟು ತಿಳಿವರಿಕೆ ಇಲ್ಲ ಕೇಳ ನಡುವೋನೆ ನೀನಾಗಿ, ಆಹಾ ಎಪ್ಪಾ ತಮ್ಮಾ ಆ ತಮ್ಮನ ಕಡದೋತ್ತಿಗೆ, ಆಹಾ ಅಣ್ಣಾವ್ರು ನೋಡಿದ್ರು ಯಾರು ಶಂಬೆಗೆ ಮೆಂಬಗ ಐದರಪಾ ಅಪ್ರಾಪ್ತ ಕಳ್ಳೋನು ಕೊಲ್ಲದರು, ಆಹಾ ಮಂತ್ರಾಳ ಮಾದೇವನ ಮಂತ್ರಿಸಿ ಬಿಟ್ಟರು ಆಹಾ,

ಇನ್ನ ಇಬ್ಬರು ಐದಾರ
ಲೇ ನಮ್ಮ ತಮ್ಮ ಕಡಿದಾರ
ಅವನೇ ಮಂತ್ರ ತಂತ್ರ ಕಲಿತೋನು ಆಹಾ
ಈಗ ಮಾರವಾಡೋರನ ಕಡಿಯಾನ
ಲೇ ನಾಯ್ಕರು ಒಂದೆ ನೋಡಾರ ಸಯ್
ಇದ್ಯೆವು ಮಾಡಾಕ ಬಂದಾರ ಸಯ್
ಆಗ ಇನ್ನ ಮುಂದೆ ನೋಡಾರ ಸಯ್
ಆಗಸ್ಯಾಕಿನ್ನ ಬಂದಾರೆ ಸಯ್
ಹುಡುಗರು ಕಣ್ಣೀಲೆ ನೋಡ್ಯಾರ ಸಯ್
ಅಣ್ಣಾ ನಡುವೋನು ನೀನಾಲೆ ಸಯ್
ಹಿಂದಕೆ ಇರಲೇ ಅಣ್ಣಯ್ಯಾ ಸಯ್
ನಾನು ಮುಂದಕೆ ಹೋತೀನಿ ಸಯ್
ಮಗ ಬಂದೆ ನೋಡರಾ ಸಯ್
ಎಡಗೈ ಇನ್ನವಾದರೆ ಸಯ್
ಮೂರು ಗಡುವಿಕೆಂತ ಇಳಿದಾನ ಸಯ್
ಸಾಕು ನಿನ್ನ ಕೇಳೀರಲೆ ಸಯ್
ಆಗ ಕಳ್ಳರು ದೊಡ್ಡೀಗೆ ಇಳಿದಾನ ಸಯ್
ಎಡಕ್ಕೆ ಬಲಕ್ಕೆ ತೋರಿಸ್ಯಾನ
ಸರಕ್ಕನಾಗಿ ಕಡದಾನ ಸಯ್
ಗಂಡರು ಗೊಡ್ಲಿಲಿಂದ ನೋಡರಾ ಸಯ್
ಎಲ್ಡು ತಲೆ ಕತ್ತಿರಿಸಿ ಕೆಂತಾನ
ಇಬ್ಬರು ಒಂದೆ ಸತ್ತೀನಾ
ಎಲ್ಡು ತಲೆ ಇನ್ನ ಹೋದುವು
ಕೋಣ ಕಡಿದಾಂಗ ಆಗೈತೊ
ಒಂದೆ ಏಟಿಗೆ ಎಲ್ಡು ತಲೆಯಮ್ಮಾ

ಎಲ್ಡು ತಲೆ ಕತ್ತರಿಸಿ ಕಂಡುಬಿದ್ದುವು, ಆಹಾ ಆಗ ನೋಡಿದಾ ಯಾರು ನಡುವುಲಾವ್ ಇನ್ನೇನಪಾ ಕಳ್ಳರೆಲ್ಲಾ ಕೊಲ್ಲಿಬಿಟ್ಟೀಲಿ, ಆಹಾ ಇನ್ನ ನಾಲಾರನ ಕೊಲ್ಲಿ ಬಿಟ್ಟೀವಿ ಇನ್ನ ಈ ಪಟ್ಲ ಎಲ್ಲಾ ಲೂಟಿ ಮಾಡಸಾನ, ಆಹಾ ಮೂನ್ನೂರು ಮಂದಿ ಕರಕಂಡು ಬಂದೀವಿ ನಾವು, ಆಹಾ ನಮ್ಮ ಕಕ್ಕ ಎಂಗ ಮಾಡಿಸ್ಯಾನೊ, ಆಹಾ ನಮ್ಮಪ್ಪ ಸತ್ತಾಗ ಅಂಗ ಮಾಡಸಾನ, ಆಹಾ ಆತನದಲ್ಲ ಊರು ಆಹಾ ಬೇಸು ಅಗಸಿಗೆ ಬೋಡರು ನಮ್ಮ ಹೆಸ್ರು ಹಾಕಿ ಹೋಗಾನ, ಆಹಾ ಕರುಣೆ ಕಲ್ಲುಗೆ ಈಗ ಫಿರೋಜಿ ಹೆಸ್ರು ಐತೆಂತ ನಮ್ಮ ಹೆಸ್ರು ಹಾಕಿ ಹೋಗಾನ ಆಹಾ ಮಕ್ಕಳು ಹೆಸ್ರು ಐತೆ ತಂದಿ ಇಲ್ಲ, ಆಹಾ ಸಿದ್ದೋಗಿ ಖಂಡೇರಾಯಗಿಲ್ಲಂತಾ ನಾವು ಆಗ ಹೆಸ್ರಾಕಿ ಹೋಗೋನು ಅಂಬೊತ್ತಿಗೆ ಆಗ ಏನಂತಾನ ಚಿಕ್ಕೋನು ಅಯ್ಯೋ ನಿನಗೇನು ಬಂದೈತಣ್ಣಾ ಅಂದಾ ಇವರಿಗೆ ತಂದೆ ಐದಾನ, ಆಹಾ ಕಳ್ಳದೋನು ತಂದೆ ಏನಿಲ್ಲ ಇಡಿಕಿ ಮಣ್ಣು ತಗಂಡು ಮಂತ್ರಿಸಿದರೆ ಆಗೈತು ನೋಡಾಕ ಕಣ್ಣಿಲ್ಲ ಮಾತಾಡಾಕ ಬಾಯಿಲ್ಲ ದಂಗ ಮಾಡ್ತಾನ, ಆಹಾ ಮುದೇನು ಎಂಬತ್ತು ನಲವತ್ತು ಅರವತ್ತು ವರುಷ ಐತೆ,

ಮುದ್ಯಾತ ಸತ್ತರೆ ಅಣ್ಣಯ್ಯ ನಮ್ಮಗೆ ಊರಿ ಸಿಕ್ಕಂಗಾ
ಇಲ್ಲದಿದ್ದರೆ ಇಲ್ಲಣ್ಣಾ ನಮ್ಮ ಜಲ್ಮ ಮ್ಯಾಲೆ ಬರೀತಾನ

ನಮ್ಮ ಸಾಧ್ಯವಿಲ್ಲ ಅಣ್ಣಾಯ್ಯಾ ಕೇಳೋ ಅಣ್ಣಯ್ಯಾ ನೀನು ಅಂಗಾರೆ ಹೋಗಿ ಕಡಿಯಾನ ನಡಿಯಾಪಾ ಅಂದಾ, ಆಹಾ ಅಯ್ಯೋ ಅಣ್ಣಾ ನಾವು ಎದುರಾಗಿ ಓಗಿ ಕಡಿಯಂಗ ಐತಾ ನೆಳ್ಳು ಬಿದ್ದರೆ ಆಯಿತು ಶಬ್ದಕೇಳಿದರೆ ಆಗೈತು ಅವನು ಸಾಧ್ಯವಿಲ್ಲ ನಾವು ಕೊಲ್ಲೋಕೆ, ಆಹಾ ಮತ್ತೆ ಎಂಗ ಏನಿಲ್ಲಾ ಸುಮ್ಮನೆ ಇರಣ್ಣಾ,

ನಾಯಿಗಳು ಕರಕಂಡು ಬಂದಾನ
ಮುದೇನು ಮನಿಗೆ ಬಂದಾನ
ಸಿಕ್ಕನಾಯಿ ಸರಿನಾಯಿರಾ ಸಯ್
ಮಟ್ಟಿ ನಾಯಿ ನಿಮಗೆಗೆ ಶರಣಮ್ಮ ಸಯ್
ಉಸುರು ಬಿಟ್ಟಾರ ಸಯ್
ನಾಯಿಗಳು ಮುಂದೆ ಬಿಟ್ಟಾರೆ ಸಯ್
ಒಂಟೆಮ್ಯಾಲೆ ಕುಳೀತೈದರಾ ಸಯ್
ಏನೊ ಬಂದಂಗೆ ಆಯಿತು ಸಯ್
ಕಟ್ಟಿಗೆ ಇಡಕಂಡು ಬಿಟ್ಟಾನೊ ಸಯ್
ಕಟ್ಟಿಗೆ ತಗಂಡು ನೋಡರಾ ಸಯ್

ಯಾರು ಕೊಲುಮೆ ಬಿಡಿತಾನ ಇನ್ನ ಏನು ಆಗ್ಯೋತಾ ಕೋಲು ತಗಂಡು ಇನ್ನ ಬಡಿತಾನೆ ಆಗ ನಾಯಿಗಳೆಲ್ಲಾ ಮೂರು ನಾಯಿಗಳು ಬಂದವು ಹೊರುಸ ಅಡಾಲಿ, ಅಹಾ ಬರೋ ಹೊತ್ತಿಗೆ ಶಬ್ದ ಕೇಳಿದಾ ಏನು ಬಂದಾಗ ಅಗೈತೊ ಬೆಕ್ಕೇನೊ ಇಲಿನೋ ಅಂತಾ ಕೋಲು ಇನ್ನ ಕೈಗಾ ಬಗ್ಲಾಗ ಇರೋದು ಹೊರಸುಕ ಹಾಕಿ ಬಡಿದಾ, ಆಹಾ ಬಡಿದ ಹೊತ್ತಿಗೆ,

ಚಿಕ್ಕನಾಯೀನೆ ನೋಡರಾ ಸಯ್
ಇನ್ನ ಹೊರಸಕ ಹಾಕಿ ಬಡಿದಾರಾ ಸಯ್
ಹೊರಸಮ್ಯಾಲೆ ಇದ್ದ ಮಗನಾ ಸಯ್
ಎಗರಿ ಕುತ್ತಿಗೆ ಇಡಕ್ಕತೊ ಸಯ್
ಫಟ ಫಟ ಕಡಿದೈತೊ
ಚಿಕ್ಕನಾಯಿ ಕುತ್ತಿಗೆ ಇಡದೈತೊ ಸಯ್
ದೊಡ್ಡ ನಾಯಿ ಹೊಟ್ಟಿ ಇಡದೈತೊ ಸಯ್
ನಡುವು ನಾಯಿ ಇನ್ನ ಅಣ್ಣಯ್ಯ ಸಯ್
ಅವುನಾಗಿ ತಲೇರಾ ಸಯ್
ತಲೆ ಇಡಕಂಡು ಎಳದೈತೊ
ತಲೆ ಇಡಕಂಡು ನೋಡುರಾ
ಅವರೆ ನಾಯಿ ಬರತಾವ
ಕುತ್ತಿಗೆ ಯಾವಾಗ ಇಡದಾವ
ಅವನು ಜೀವ ಹೋಗೈತೊ
ಇನ್ನಾ ಜಲ್ಮ ಹೋಗೈತೊ
ಅವನೆ ಕೊಲ್ಲಿಬಿಟ್ಟಾವ
ಅವನ್ನ ಎಳಕಂಡು ಬಂದು ಮ್ಯಾಲೆ ಆಹಾ
ಮನ್ಯಾಕಲಿದ್ದ ವಣ್ಣಯ್ಯಾ
ಈಗ ಎಳಕಂಡು ಬಂದು ಮ್ಯಾಲೆ ಆಹಾ
ಚಿಕ್ಕ ತಮ್ಮ ನೋಡಿರಾ
ಈಗ ನಮ್ಮಿಗೆ ಸಂತೋಷ
ಕಳ್ಳರೆಲ್ಲ ನಾಶನ ಆದರು
ಕಳ್ಳರೆಲ್ಲ ನಾಶನ ಆದರು
ಕಳ್ಳರೆಲ್ಲ ನಾಶನ ಆದಕಂತಾ ಆಹಾ
ಹೆಣ ಮಕ್ಕಳು ನೋಡಿದರು
ಎಪ್ಪಾ ನಮ್ಮ ಗಂಡರನ ಕೊಲ್ಲೀರೊ
ನಮ್ಮಿಗ್ಯಾರು ಇನ್ನಾ ಸಲುಹೋದು
ನಮ್ಮನ ರಂಡೇ ಮಾಡಿಹೋದಿರೋ
ನಿಮ್ಮನ ರಂಡೆ ಮಾಡಿಲ್ಲರಾ ಸಯ್
ನಿಮ್ಮನ ಸಲುವೋನು ನೋಡರಾ ಸಯ್
ನಮ್ಮ ಕಕ್ಕತಲ್ಲಿಗೆ ಹೋಗಾರಿ ಸಯ್
ಗಂಡನ ಕಡಿಸಿದೋ ನಮ್ಮ ಸಯ್
ನಮ್ಮ ತಂದೆ ಕಡದು ಬಾ ಅಂದರೆ
ನಿಮ್ಮ ಗಂಡರುನ ನಾವು ಕಡಿದೀವೆ
ತಂದೆ ಕಡದು ಬಾ ಅಂದರೆ
ನಾವೇ ಇನ್ನ ಕಡಿದೇವೆ
ನಮ್ಮ ತಂದೆ ಹೇಳ್ಯಾನ ಸಿದ್ದೋಗಿ ಆಹಾ
ಖಂಡೇರಾಯ ಆಹಾ
ಆಗ ಕಡಿಕಂಡು ಬರ್ರೆಪ್ಪಾ
ಕಳ್ಳರನಾ ಅಂದ್ರೆ ನಾವು ಕಡಿದೀವಿ
ಗೊಲ್ಲರು ನಿಮ್ಮ ಗಂಡನಾ ಆಹಾ
ಆತನ ತಲ್ಲಿಗೆ ಹೋಗರಿ ಸಿದ್ದೋಗಿ ತಲ್ಲಿಗೆ ಅಹಾ
ಆತ ಕೂಳು ಹಾಕಿ ನಿಮ್ಮನ ಸಲುವುತಾನ
ಬಂಡಿ ಅನ್ನ ಕೊಡತಾನ ಅಲ್ಲಿ ಗೋಗರಿ
ನಮ್ಮನ ಕೇಳಂಗಿಲ್ಲ ನೋಡಮ್ಮಾ
ನಾವೇ ಇನ್ನ ಕಡದಿಲ್ಲ
ಆತ ಕಡಿ ಅಂದರೆ ನಾವು ಕಡದೀವಿ
ನಮ್ಮನ ಕೇಳಂಗಿಲ್ಲಮ್ಮಾ

ಆತ ಕಡಿ ಅಂತಾ  ಹೇಳ್ಯಾನ ಆತ ರೊಕ್ಕ  ಕೊಟ್ಟು ಕಳಿಸಿದ್ದಕ್ಕೆ ನಾವು ಕಡಿದೀವಿ,  ಆಹಾ ಏ ನಿಮ್ಮಗೆ  ಎಂಗ ಕಳಸ್ತಾನಪಾ ನಮ್ಮೋರನೆ ಒಂದು  ಬಾರಿ ಕಳಿಸಿದ್ದಾ ರೊಕ್ಕ ಕೊಟ್ಟು ಆಹಾ ಅಲ್ಲಲ್ಲಾ ನಮ್ಮಿಗೆ ರೊಕ್ಕಕೊಟ್ಟು ಮಕ್ಕಳೆ ಕಡಿದು ಬರ‍್ರಿ ಹೋಗ್ರಪಾ ಕಳ್ಳರ ನಾ ಅಂದ್ರೆ ನಾವು ಕಡದೀವಿ ನಿಮ್ಮ ಗಂಡರನಾ ಆಹಾ ಅಲ್ಲಿಗೆ ಹೋಗರಿ ನಮ್ಮ ಕಕ್ಕ ಕೂಳು ಹಾಕ್ತಾನ ಆಹಾ,

ಲೇ ಮುನ್ನೂರು ಮಂದಿ
ಲೂಟಿ ಮಾಡಾರಿ ಊರಾಲೆ
ಬಲ್ಲೇವು ತಗಂಡರ್ಲಾರರಾ ಸಯ್
ಇನ್ನ ಕೊಲ್ಲಿ ಇಡದೋರ್ಲಾರರಾ ಸಯ್
ಊರಾಗ ಮನ್ಯಾಗ ತೊರಿಕಂಡ ಸಯ್
ಟ್ರಂಕುಗಳಾ ಹೊಡೆ ಬಡೀತಾರ ಸಯ್
ಪೆಟ್ಟಿಗೆ ಬಡಿಯೆ ಬಡಿತಾರ ಸಯ್
ಮೂಗಿನಾಗ ಮುತ್ತು ಇದ್ದರೆ ಸಯ್
ಅಂಗೆ ಮೂಗೆ ಕೊಯಿತಾರ ಸಯ್
ಕಿವಿ ಇನ್ನ ಬೆಂಡಾಲಿ ಸಯ್
ಅಂಗೆ ಕಿವಿ ಕೊಯಿತಾರ ಸಯ್
ಕೊಳ್ಳಾಗ ತಾಳಿ ಇದ್ದರೆ ಸಯ್
ಕೊಳ್ಳಾಗ ತಾಳಿ ಹರಿತಾರ ಸಯ್
ಎಪ್ಪಾ ಸತ್ತೆನಾವೂರಾ ಸಯ್
ಲೂಟಿ ಮಾಡವರೆ ಬಂದಾರ ಸಯ್
ಹೆಣ್ಣು ಗಂಡು ನೋಡುರಾ ಸಯ್
ಊರೆಲ್ಲ ಬಿಟ್ಟು ಬಿಟ್ಟಾರ ಸಯ್
ಅಡವಿಗೆ ಓಡಿ ಹೋತಾರ
ಊರೆ ಒಂದು ಬಿಟ್ಟಾರ
ಅಡವಿಗೆ ಅವರೆ ಒಡ್ತಾರ
ಊರೆಲ್ಲ ಬಿಟ್ಟು ಓಡ್ತಾರೆ
ನಾಯಿಗಳು ನಾಡ ತೋರಸ್ತಾವ
ಅಗೇವು ಭೂಮ್ಯಾಗ ಇರೋವು
ಜೋಳ ಅಗೇವು ತೋರಸ್ತಾವ
ಸಜ್ಜೆ ಆಗೇವು ತೋರಸ್ತಾವ
ನಮಗೆ ಆಗೇವು ತೋರಸ್ತಾವ

ಪೆಟ್ಟಿಗೆ ತಲ್ಲಿ ಬಂಗಾರ ಬೆಳ್ಳಿ ಬಂಗಾರ ತೋರಸ್ತಾವೆ ಈ ಮಾರವಾಡಿ ಶೇಠಿ ನಾಯಿಗಳು ತೋರಸ್ತಾವ, ಆಹಾ ಎಲ್ಲಾ ಲೂಟಿ ಮಾಡಿದರು ಎತ್ತುಗಳು ಮ್ಯಾಲೆ ಹಾಕಿದರು ಒಂದೊಂದು ಎತ್ತಿಗೆ ಮೂರು ಮೂರು ಚೀಲ ಹಾಕಿದರು, ಆಹಾ ಧನಗಳು ಆಗ ಆಗ ನಗೆ ಬೇಡರ ಹಾಕಿದರು ಏನಂತಾ ಹಾಕಿದರು ನೋಡಪಾ ಇದು ಬಡೇಗಾವ್ ದಡೇಗಾವ್ ನಮ್ಮ ಕಕ್ಕ, ಆಹಾ ಈಗ ಬಡೇಗಾವ್‌ದಾಗ ಬಡಿದು ನಾವು ಲೂಟಿ ಮಾಡಿಕೆಂಡು ಹೋತೀವಿ, ಆಹಾ ಹಿಂದಲ ಕಾಲದಾಗ ಕೌಲೇಶುಕೋಟ ನಮ್ಮಪ್ಪ ಸತ್ತಾಗ ನಮ್ಮ ತಂದೆ ಹೊಯ್ದಾನ ಈಗ ತಂದಿಗೆ ಹುಟ್ಟಿರೋರು,

ಅರ್ಧದ ಆಸ್ತಿ ಹೋಯ್ಯತೀವಿ
ಅರ್ಧ ಆಸ್ತಿ ಹೋಯಿದಿಲ್ಲ
ಕೈಲಿಂದ ಕೊಡಲಿಲ್ಲಪಾ
ನಾವೇ ಕೈಲಿ ಒಯ್ಯಿತೀವಿ
ಬಾಯಿಲಿ ಕೇಳಿದರೆ ಕೊಡಾದಿಲ್ಲ ನಮ್ಮ ಕಕ್ಕ
ಈಗ ನಮ್ಮಪ್ಪನಿಗೆ ಹುಟ್ಟೀವಿ
ಅಪ್ಪನ ಆಸ್ತಿ ನಾವು ಹೊಯ್ಯಿತೀವಿ
ಕರುಣೆ ಕಲ್ಲಿಗೆ ನೋಡರಾ ಸಯ್
ಈಗ ಪಟ್ಣವೇ ಐತೆರಾ ಸಯ್
ಫಿರೋಜಿ ಸೋಮೋಜಿ ನೋಡರಾ ಸಯ್
ಇನ್ನ ತಮ್ಮರಾ ಬಂದಿರಾ ಸಯ್
ಮಕ್ಕಳ ಹೆಸ್ರಲಿ ವೈತೆರಾ ಸಯ್
ತಂದೀನಾ ಹೆಸ್ರೆ ಇಲ್ಲರಾ
ಮಕ್ಕಳಾ ಹೆಸ್ರು ವೈತೆರಾ
ಅಂತಾ ಬೇಸು ಅಗಸಿಗೆ ಬೇಡರು ಇಳಾಸ ಹಾಕಿದ ಹಾಗೆ
ಆಗ ಮುನ್ನೂರು ಮಂದಿ ಕರ್ಕಂಡು
ಕುದ್ರಿಮ್ಯಾಲೆ ಕುಂತ್ಕಂಡರಾ
ಎಡಗಾಲಲಿ ಒದ್ದೆ ಬಿಟ್ಟಾರ
ಕರುಣೆ ಕಲ್ಲಿಗೆ ಬಂದಾರ ಸಯ್
ಕುದ್ರಿಮನ್ಯಾಗ ಕುದ್ರಿಕಟ್ಟಾರೆ ಸಯ್
ನಾಯಿ ಮನ್ಯಾಗ ನಾಯಿ ಕಟ್ಯಾಕಿ ಸಯ್

ಅತ್ತಿಗೆ ಮನೆಗೆ ಬಂದಾರ ಅವರೆ ಬಂದೆ ಹಾದು ಶರಣಮ್ಮ ಅತ್ತಿಗೆ ಅಂದಾ ಏನಪ್ಪಾ ಮೈದನೋರೆ ನೋಡವ್ವಾ ನಮ್ಮಪ್ಪನ ಊರಿಗೆ ಹೋಗಿ ಆಗ ಕೆಸ್ರ ಕುಣ್ಯಾಗ ಕಳ್ಳ ಬಿದ್ದಿದ್ದರೆ ಅಸ್ರಾಪ ಕಳ್ಳೋನನ ಕೊಲ್ಲದಿವಿ ಸಂತೆಹಾಳ ಮಾಡದಿವಿ, ಆಹಾ ಎತ್ತುಗಳು ಕುತ್ತಿಗೆ ಕೊಯ್ಯಿದಾರ ಅಲ್ಲಿದ್ದ ಕಳ್ಳರು ಪಟ್ಣಕೆ ಹೋಗಿ ನಾಲಾರು ಕಳ್ಳರು ಕೊಲ್ಲಿ, ಆಹಾ ಅವರ ಪಟ್ಣಗೆದ್ದಿ ಕಂಡುಬಂದೀವಿ ನಮ್ಮಪ್ಪ ಆ ಕಾಲಕ್ಕೆ ಆಸ್ತಿ ಒಯ್ದಿದ್ದರೆ ಕೈಲಿದ್ದ ಕೊಡಂಗಿಲ್ಲಂತ ನಾವು ಕೈಲಿದ್ದ ಇಸಕಂಡು ಬಂದೀವಮ್ಮಾ ಅರ್ಧಕ್ಕ ಅರ್ಧ ಆಸ್ತಿ ತಿರುಮಗ ಮಾಡಿಕೆಂಡು ಬಂದೀವಮ್ಮ,

ಈಗನ್ನ ರಂಡೇ ಆಗಮ್ಮೋ
ಅಣ್ಣಾ ಕಡಿದೋರನ ಕಡಿದೀವಿ

ಅಂಗಾಲಪಾ ಮೈದನೋರೆ, ಮೀಸೆ ಇದ್ದು ರೋಸ ಇಲ್ಲಾ ಯಾಕಮ್ಮಾ ರೊಕ್ಕ ನಾನು ಕೊಟ್ಟರೆ ನೀವು ಕಡಿದು ಬರತಿ ಅಂಗಲ್ಲಾ ರೊಕ್ಕ ಕೊಟ್ಟು ಯಾವನು ಕಡಿಸ್ಯಾನೊ ಅವನು ಕಡಿಕ್ಕಂಡು ಬರ‍್ರೆಪಾ,

ಅವನಿಗೆ ರಂಡೇ ಆಗತೀನಿ
ಬಡವರೆಲ್ಲಾ ಯಾಕ ಕಡಿತೀರೊ
ಕಡಿದೋನು ಕಡಿಯಾ ಬೇಕಾರೊ
ಬಡವರೋನು ಕಡಿಯ ಬಾರದು ಸಯ್
ರೊಕ್ಕ ಇಲ್ಲದೋರು ಬಡವರು ಸಯ್
ಇಷ್ಟ ಅಚ್ಚುಕೊಂಡಾನಂದರೆ ಸಯ್
ಜೀವ ಹೋದರೇನು ಸಿಂತಿಲ್ಲ ಸಯ್
ಇಂತ ರೊಕ್ಕ ನಾವು ಕಾಣಿವಿ ಸಯ್
ಅಂತ ಬಡವರು ಬರ್ತಾರ
ಬಡವರೇನು ಬರ್ತಾರ
ಅವರೆ ಹಸಿರೆ ಬರ್ತಾರ

ನೋಡಪಾ ಯಾರಮ್ಮ ನಮ್ಮಣ್ಣ ಕಡಿದವರು ಕಡಿದವರು ಕಳ್ಳರು ಕಡಿಕಂಡು ಬಂದೀವಿ ಇನ್ನೊಬ್ಬರು ಯಾರು ಅಂಗಾಲ್ಲಪಾ ರೊಕ್ಕ ಕೊಟ್ಟು ಯಾರು ಕಡೀಸ್ಯಾರೊ ಅವರನ ಕಡಿಕ್ಕಂಡು ಬರ‍್ರೀ, ಆಹಾ ನನ್ನ ತಾಳಿ ಅವರ ಕೊಳ್ಳಾಗ ಕಟ್ಟಿ ಐದು ಬಗಸಿ ಮಣ್ಣಾಕಿ ಆಗ ಮುತ್ತೈದಿ ತನ ಕಳಿತೀನಿ ಅಷೊತ್ತನಕ ಕಳಿಯಾದಿಲ್ಲ,  ಆಹಾ ಇನ್ನ ಕಡಿದೋನು ಕಡೀತೀವಿ ಈ ಹುಡುಗನ ತಿಳಿವರಿಕೆ, ಆಹಾ ತಂದೆ ಕಡಿಸ್ಯಾನಂತ ಆಹಾ ಅವನಂದರೆ ದುಷ್ಟ ಆಗ ಇನ್ನ ತಂದೆ ಸತ್ತೋದ ಇವನನ್ನ ದುಷ್ಟ ಆಗಲೀ ದುರ್ಮಾರ್ಗ ಆಗಲಿ ನಮ್ಮ ತಂದೆ ಆತನ ಕೈಯಾಗನ ಸಾಯಿಬೇಕು ತಂದೆ ಮ್ಯಾಲೆ ಕೈನಾಸ ಬಾರದು, ಆಹಾ ತಂದೆನ ಕಡಿಬಾರದು, ಆಹಾ ತಂದೆ ಕೈಯಾಗ ಮಕ್ಕಳು ಸಾಯಿಬೇಕು ತಂದೀನ ನಾವು ಕಡೀಬಾರದು ಆಹಾ ಅಂತಾ ಆ ಹುಡುಗರು ತಿಳಕಂಡು, ಆಹಾ ಎಮ್ಮಾ ಎಷ್ಟೆ ಆಗಲೀ ನೀನು ಎಡಗೈಲಿ ಅನ್ನ ಇಕ್ಕತೀನಿ ಅಂತಿಯಾ ಇನ್ನ ನಾವು ಯಾಕ ಇರಾನ ಈಗ ಊರು ಬಿಟ್ಟು ನಾವು ಹೋತೀವಾ ಎಷ್ಟು ಹೇಳಿದರೆ ನೀನು ಕೇಳಲಾರೆ ಯಾರಪ್ಪಾ ನೀನ್ಯಾಕ ಹೊಂತೀರಿ ನಾನೇ ಹೋತೀನಿ, ಅಂಗಲ್ಲಮ್ಮಾ ಈಗ ನಿನ್ನ ಹೆಸ್ರಲಿ ಮಾಡಿಸಿವಿ ನಿನ್ನ ಹೆಸ್ರು ಅಂದುಕೊ ನಿನ್ನ ಗಂಡನ ಹೆಸ್ರಲಿ ಅಲ್ಲಾ, ಆಹಾ ಈಗ ಗುದ್ದಾಡಿ ಜಗಳಾಡಿ ಬಂದರೆ ಬಡವುರಿಗೆಲ್ಲಾ ರಾಜ ಮಾಡೋನು ಬುದ್ದಿ ಹೇಳೋನಂತಾ ರಾಜ್ಯ ಏಳೋನು ಈಗ ನಿಂದೆ ನೋಡುವಾರಮ್ಮ ನಮ್ಮದುವಲ್ಲ ನೋಡಮ್ಮ,

ಅವುರುವಾಗೀನೆ ಬಂದರಾ ಸು
ಇನ್ನ ಕುದ್ರಿ ತಲ್ಲಿ ಬಂದರಾ ಸಯ್
ಕುದ್ರಿ ಹೊರಗ ತಗದಾರ ಸಯ್
ಮೂರು ಕುದ್ರಿ ಇಡಕಂಡಾರ ಸಯ್
ನಾಯಿಗಳು ಇಡಕಂಡು ಬಿಟ್ಟಾರ ಸಯ್
ಅಣ್ಣ ಸತ್ತು ಸ್ವಾಮವಾರಿಗೆ
ತಮ್ಮನೋರು ಬಂದುಬಿಟ್ಟಾರ
ಅಣ್ಣಾಯ್ಯ ಸತ್ತು ಸ್ವಾಮಾರಗೆ
ತಮ್ಮನೋರು ಬಂದು ಬಿಟ್ಟರೆ

ಸೇರು ಮಲ್ಲಿ ಹೂವ ತಗಂಡು ಊದಿಲೋಬಾನ ತಗಂಡು ಆಗ ಸೇರುವಲ್ಲಿ ಹೂವ ತಗಂಡು ಅಣ್ಣಾನ ಸಮಾದಿಗೆ ಹಾಕಿ ಕಾಯಿ ಒಡದು ಎಲ್ಡು ಕೈ ಜೋಡಿಸಿ ಬೇಡಿಕೆಂತಾರ ವರವು ಕೊಡು ಅಣ್ಣಾ, ಆಹಾ ಸೋಮೋಜಿ ಅಣ್ಣಾಯ್ಯಾ ಸೋಮೋಜಿ ಶರಣ, ಆಹಾ ನೀನು ನಮಗೆ ವರವು ಕೊಡು ಅಣ್ಣಾಜ ನಿನಗೆ ಶರಣಾ ಆ.. ಆ.. ಆ.. ನೀನೆ ವರವೆ ಕೊಡಣ್ಣಾ ನಾವು ಊರು ಬಿಟ್ಟು ಹೋತೀವಿ ಏ.. ಏ.. ನಿನ್ನ ಇರ‍್ತಿ ಅಂತ ಮಾತ್ರಕೆ ನಾವು ಇರಾದಿಲ್ಲ ಏ.. ಏ.. ಏ.. ಅಂತಾ ಬೇಡಿಕೆಂಡರೆ ಅಣ್ಣಾ ಸತ್ತೋನು ಸೋಮೋಜಿ ಏನು ಮಾಡಿರಾ,

ಈಗ ಆತನ ಮ್ಯಾಲೆ ಹಾಕಿದ್ದ
ಹೂವ ಬೊಗಸ್ಯಾಗ ಬಿದೈತೊ
ಹೂವ ಅಂಬೋದು ನೋಡಣ್ಣಾ
ಅವರೆ ಬೊಗಸ್ಯಾಗ ಬಿದ್ದೈತೊ
ಪರವಿಲ್ಲಾ ತಮ್ಮನೋರರೆ
ಬೆನ್ನಿಂದೆ ನಾನೇ ಇರತೀನೆ
ನಿಮ್ಮ ಜೀವಕೆ ಇರತೀನೆ
ನಡಿರೆ ತಮ್ಮನೋರರಾ ಸಯ್
ಬೆನ್ನಿಂದೆ ನಾನೇ ಇರತೀನೆ
ನಡಿರೆ ತಮ್ಮನೋರುರಾ
ಬೆನ್ನಿಂದೆ ನಾನೇ ಇರತೀನೆ
ನಡಿರೆ ತಮ್ಮನೋರರಾ
ಬೆನ್ನಿಂದೆ ನಾನೇ ಇರತೀನೆ
ಆಗ ಹೂವ ಕೊಟ್ಟಾನಪಾ
ಆಗ ಇಷ್ಟೆ ಸಾಕಣ್ಣಾ ಅಂತಾ
ಅಣ್ಣಾ ಸುತ್ತ ಇನ್ನ ಪ್ರದಕ್ಷಿಣೆ ಮಾಡಿಕೆಂಡು ಆಹಾ
ಅಲ್ಲಿಗೆ ಮೂರು ಅರದಾರಿ
ಆಗ ಇನ್ನ ಮರಕಲ್ಲಿಗೆ ಬಂದಾರೆ
ಲಿಂಗವಂತರ ತಲ್ಲಿಗೆ ಬಂದಾರೆ
ಊರಿಗೆ ಎಲ್ಡು ಹೊಲಪೆಟ್ಟು ಆಹಾ
ಢೇರೆ ಹೊಡದರು ಆಹಾ
ಗುಡಾರ ಆಹಾ
ಗುಡಿಸಲು ಹಾಕಿ

ಗುಡಿಸಲ್ಯಾಗ ಮೂರು ನಾಯಿ ಕಟ್ಯಾಕಿದರು, ಆಹಾ ಆ ಗುಡಿಸಲು ಮುಂದೆ ಮೂರು ಕುದ್ರಿ ಕಟ್ಯಾಕಿದರು ಆಗ ಅಣ್ಣ ತಮ್ಮರು ಇಬ್ಬರು ಕುಂತ್ಕಂಡರು, ಆಹಾ ಬಂದಿದ್ದ ದಿವಸ ಉಪಾಸ ಈಗ ಕುದ್ರಿಗೆ ಮೇವಿಲ್ಲ ಆಹಾ ನಾಯಿಗಳಿಗೆ ಅನ್ನ ಇಲ್ಲ ಆಹಾ ಇವರಿಗೆ ನೀರಲ್ಲ, ಆಹಾ ಬಂದಿದ್ದದಿನ್ನ ಯಾರು ನೋಡಿಲ್ಲ, ಆಹಾ ತಿರುಗದಿಸಾ ಮುಂಜಾಲೆ ಬರಬೇಕಲ್ಲಾ ಲಿಂಗವಂತರು ಬಂದರು ಆಗ ಬಂದೆ ಅಣ್ಣಯ್ಯ ತಾವು ಏನು ಅಂದವರು ಮೂವರು ಅಣ್ಣಾತಮ್ಮರು ತಾವಿನ್ನ ಕಲ್ತುಕೊಂಡು ಆಗ ಬಂದರು ಲೇ ಇವರು ಯಾದೇಸದೋರು ಗಣಮಕ್ಕಳು ಬಾಲ ಕೆಂಪಗ ಐದಾರ ನೋಡಾಲೆ, ಆಹಾ ಯಾ ಸೀಮೆದೋರು,

ಇವ್ರು ಕುದ್ರಿಯಾಪಾರ ಮಾಡೋರು
ನಾಯಿಗಳು ಯಾಪಾರ ಮಾಡೋರು
ನಮ್ಮಿಗೆ ನಾಯಿ ಕೊಡತಾರೆ

ಲೇ ಎಷ್ಟು ಚಲೀತೆ ಐದಾವಲೆ ನಾಯಿಗಳು, ಆಹಾ ಇಗೋ ಈಟೆ ಐದವಲ್ಲಾ ಬೆಕ್ಕು ಇದ್ದಂಗೆ ಐದಾವಲೇ ನಾಯಿಗಳು, ಆಹಾ ಕುದ್ರಿ ಎಷ್ಟು ತೆಳ್ಳಗ ಐದಾವ ಇವರು ಕುದ್ರಿ ಮಾರಿಕೆಂಟಾರೇನು ಇವರು ಇನ್ನವರ ನಾಯಿಗಳು ಮಾಡಿಕೆಂಟಾರೇನು, ಆಹಾ ಯಾ ದೇಸದೋರು ಬಂದು ಡೇರೆ ಗುಡಿಸಲು ಹಾಕ್ಯಾರ ಅಂತಾ ಲಿಂಗವಂತರು ಬಂದರಪಾ, ಆಹಾ ಹತ್ತು ಮಂದಿ ಬಂದರು ಎಲ್ಲ ಊರಾಗ, ಆಹಾ ಆಗ ಮರಕಳ್ಳರೊ ಬಂದು;

ಎಪ್ಪಾ ನಿಮ್ಮದು ಯಾವೂರು ಅಂದಾರೆ
ಯಾ ದೇಸ ನಿಮ್ಮದು ಅಂತಾರ

ಅಂದರೆ ಏನಪಾ ನಮ್ಮದು ಕರಣೆಕಲ್ಲು ಆಹಾ ಕರುಣೆ ಕಲ್ಲುದಾಗ ಮಾರವಾಡಿ ಶೇಠಿದೋರು ನಾವು ಆಹಾತಿ ಏನು ಮಾಡ್ತಿ ನಮ್ಮಣ್ಣಾ ಸತ್ತೋಗಿ ಬಿಟ್ಟಾ, ಆಹಾ ಕಳ್ಳರಿಟ್ಟು ಕಡಿದರು, ಆಹಾ ಕಡಿದಿದ್ದರೆ ಅಣ್ಣಾ ದುಃಖ ಕಳಕಬೇಕು ಅಣ್ನನ ಮರತು ಹೋಗಬೇಕಂತ ಇರಂಗೆ ಆಗಲಿಲ್ಲ ಅದಕ್ಕೆ ನಾವು ಊರು ಬಿಟ್ಟು ಬಂದಿವಪಾ ಒಂದು ತಿಂಗಳು ಇದ್ದು ಹೋಗಬೇಕಂತಾ ನೀವು ಯಾರನ್ನ ಬರ‍್ರೆ ಅಂದರೆ ಬರೀತೀವಿ ಕೆಡು ಅಂದರೆ ಕೆಡಸ್ತೀವಿ, ಆಹಾ ಅವರು ಕೈಯಾಗ ಗುಮಾಸ್ತ ಆಗಿ ದುಡೀತಿವಪ್ಪಾ, ಆಹಾ ನಾವು ಓದು ಕಲ್ತವರು ಆಹಾ ಈಗ ಯಾರು ಮನ್ಯಾಗನ್ನ ಇರು ಅಂದರೆ ಇರ್ತೀವಂದ್ರು, ಆಹಾ ಈ ನಾಯಿಗಳು ಮಾರ್ತೀರಾ ನಮಗೆ ಅಂತ ಕೇಳಿದರು ಅಂದರೆ ಏ ನಾಯಿಗಳು ಮಾರಾವಲ್ಲ, ಆಹಾ ಮತ್ತೆ ಕುದ್ರಿ ಕೊಡ್ತೀರಾ ಏ ಕುದ್ರಿ ಕೊಡೋರಲ್ಲ ನಾವು, ಆಹಾ ಏನು ಅಣ್ಣಾನ ದುಃಖ ಕಳಕಬೇಕಂತಾ ನಾವು ಬಂದೀವಿ, ಆಹಾ ನಾಯಿಗಳು ಮಾರೋರು ಅಲ್ಲಾ ಕುದ್ರಿ ಮಾರೋರು ಅಲ್ಲಾ. ಆಹಾ ಸರೆಪ್ಪಾ ನೀವು ಬಾಳ ಬುದ್ದಿವಂತರು ಇದ್ದಂಗೆ ಐದೀರಿ, ಆಹಾ ಏನಿಲ್ಲಾ ನಮ್ಮ ಬಗಲಾಗ ಒಂದು ಕಾಲಿಮನಿ ಐತೆ, ಆಹಾ ಆ ಕಾಲಿಮನಿ ತೋರಿಸ್ತೀನಿ ಕುದ್ರಿಗಳು ಕಟ್ಯಾಕಿಕೊಂಡು ನಾಯಿಗಳು ಕಟ್ಯಾಕಿಕೊಂಡು ನಮ್ಮನ್ಯಾಗ ಇರುವಂತಿರಿ ಬರ‍್ರೀ, ಆಹಾ ನೋಡಪಾ ನಾವು ಹೆಣ್ಮಕ್ಕಳು ಇಲ್ಲದೊರು ನಮ್ಮ ನಾಯಿಗಳು ಒಳ್ಳೆವಲ್ಲಾ, ಆಹಾ ಮನಿಶಾರು ಬಂದರೆ ಆಗ ಸೇರವಾಲ್ಲ, ಆಹಾ ಈಗ ನಮ್ಮ ಕುದ್ರಿಗಳಿಗೆ ಊರಾಗ ಸಜ್ಜಾಗದಿಲ್ಲ, ಆಹಾ ಇಲ್ಲಿ ಡೇರೆ ಹೊಡೀದೀವಿ ನಮ್ಮಿಗೆ ಇಲ್ಲೆ ಬೇಸು ಐತೆ, ಆಹಾ ಮತ್ತೆ ನಿಮ್ಮಗೆ ಅಡಿಗೆ ಎಂಗಾ ಎಪ್ಪಾ ಬರೆ ಗಣಮಕ್ಕಳು ಇಬ್ಬರು ಅಣ್ಣತಮ್ಮರು ಎಂಗ ಮಾಡಿಕೆಂತೀವಿ ಏ ಬೇಕಾದಂಗ ಮಾಡಿಕೆಂತಿವಪಾ ಅಂಗಾರೆ ಅಕ್ಕಿಬ್ಯಾಳ ಹಾಲು ಸಕ್ಕರೆ ಕೊಡ್ತೀವಿ ನೀವು ತಂದಕರ‍್ರೀ ಏನು ರೊಕ್ಕ ಕೊಡಬ್ಯಾಡರ‍್ರೀ ನಮ್ಮ ಕೈಯಾಗ ಇರಬೇಕು ನೀವು, ಆಹಾ ಬರಿ ಅಂದರೆ ಬರೀಬೇಕು ಕೆಡಸು ಅಂದರೆ ಕೆಡಸಬೇಕು, ಆಹಾ ನೋಡಪಾ ರಾಜ ಕಛೇರಿದೊಳಗೆ ಈಗ ಎತ್ತಾಗಿಲಿದ್ದನಾ ಪತ್ರ ಬಂದರೆ ಓದಬೇಕು ನಮ್ಮಿಗೆ ತೋರಸಬೇಕು, ಆಹಾ ನಿಮ್ಮಿಗೆ ತಿಂಗಳಿಗೆ ನೂರು ರೂಪಾಯಿ ಸಂಬಳ ಕೊಡ್ತೀವಂತಾ ಆಹಾ ಅಯ್ಯೊ ಎಪ್ಪಾ ಇಬ್ಬರ ನಡವೀಲೆ ತಿಂಗಳಿಗೆ ನೂರು ರೂಪಾಯಿ ಸಂಬಳ ಕೊಡ್ತೀರಾ ನಮ್ಮ ನಾಯಿಗಳಿಗೆ ಆಗಾದಿಲ್ಲ, ಆಹಾ ಈಗ ನಮ್ಮ ಕುದ್ರಿಗೆ ಹುಳ್ಳಿ ಅಕ್ಕಿ ನುಚ್ಚು ಬರಾದಿಲ್ಲ, ಆಹಾ ನಮ್ಮಿಗೆ ಬರಾದಿಲ್ಲ ಅಂಗಾಲ್ಲಪಾ ತಲಿಗೊಂದು ನೂರುರೂಪಾಯಿ ಕೊಟ್ಟರೆ ಇನ್ನೂರು ರೂಪಾಯಿ ಕೊಟ್ಟರೆ ನಾವು ಸಂಬಳ ಇರ್ತೀವಿ ಇಲ್ಲದ್ದರೆ ಇಲ್ಲ, ಆಹಾ ನೋಡಿದರು ಯಾರು ಲಿಂಗವಂತರು ಮರಕಲ್ಲೋರು ಏ ಅಷ್ಟೆ ಆಗಲಿ ಬಿಡಲೇ ಇನ್ನೂರು ಹೋದರೆ ಸಿಂತಿಲ್ಲ ಇವರು ನಾಯಿಗಳು ಏರಿಕೆ ಐದಾವ ಯಾರಾನ ನಮ್ಯಾಕ ಇದ್ದಕ ಬಂದರೆ ಸಾಲಕೇಳಾಕ ಬಂದರೆ ಆಗ ಸಿದ್ದೋಗಿ ಇವರು ಕಡಿ ಅಂದರೆ ಕಡೀತಾರ ನಾಕು ಸಾವಿರ ಉಳಕಂತಾವ, ಆಹಾ ಅಂತಾ ಉಪಾಯ ಮಾಡಿ ಆಹಾ ಇರ‍್ರೆಪಾ ಅಂದಾ ಅವರು ಏನು ಮಾಡಿದರು,