ಆಗ ಚಿಕ್ಕಾವನು ನೋಡರಾ ಸಯ್
ಚೆನ್ನಾಗಿ ಇಡದೆ ಬಿಡ್ತಾನ ಸಯ್
ಗದಗದ ಕಡಿಸ್ಯಾನ ಸಯ್
ತಾವೆ ಬಂದೆ ನೋಡರಾ ಸಯ್
ನಾಲಾರನೆ ಅಣ್ಣಾಯ್ಯಾ ಸಯ್

ಗಕ್ಕನಂಗೆ ಕಡಿದಾನ ನಾಲೋರು ಅಣ್ಣಾಯೋ ನೋಡರಾ ಗಕ್ಕನಂಗೆ ಕಡಿದಾರೆ,

ಗಕ್ಕನೆಂಗೆ ಕಡಿದಾರೆ ಸಯ್
ಊರೆ ಲೂಟಿ ಮಾಡ್ಯಾರೆ ಸಯ್
ಆಗ ಊರೆ ನೋಡ್ತಾರ ಸಯ್
ಮರಕಲ್ಲಿಗೆ ಬರ್ತಾರ ಸಯ್

ಇಳಾಸ ಹಾಕಿಬಿಟ್ಟರು ಇದುನೋಡಪಾ ಮರಕಲ್ಲು ಆಗ ದಡೇಗಾವು ಈಗ ನಮ್ಮ ಕರಣಿ ಕಲ್ಲಿಗೆ ಈಗ ನಾನಂದ ರಾವು ಈಗ ಜೀವಕ ಮಕ್ಕಳು ಈಗ ಸೋಮಯ್ಯ ಫಿರೋಜಿವೈತಪ್ಪಾ ಲಿಂಗವಂತರನ ನೋಡಣ್ಣಾ,

ಲಿಂಗವಂತರನ ನಾವು ಕೊಲ್ಲೀವಿ
ಲಿಂಗ ಪಟ್ಣ ನಮ್ಮಗೆ ಬಂದೈತೊ

ನಮ್ಮದೆ ಕರಣಿ ಕಲ್ಲಿಗೆ ಹೆಸ್ರು ಐತೆ ಅಂತಾ ಬೇಡರು ಹಾಕಿದಾ ಆಹಾ ಕುದ್ರಿ ಮ್ಯಾಲೆ ಕುಂತ್ಕಂಡು ನಾಯಿಗಳು ಕರಕಂಡು,

ಊರು ಬಿಟ್ಟು ತಾವು ಬಂದಾರೆ
ಕರುಣೆ ಕಲ್ಲಿಗೆ ಬಂದಾರೆ

ಕುದ್ರಿ ಮನ್ಯಾಗ ಕುದ್ರಿ ಕಟ್ಟಿ ಹಾಕಿದರು ನಾಯಿಗಳು ಮನ್ಯಾಗ ನಾಯಿಗಳು ಕಟ್ಟಿಹಾಕಿದರು ಕಟ್ಟಿಮನಿಗೆ ಬಂದರು ಎಮ್ಮಾ ಮರಕಲ್ಲಿಗೆ ಹೋಗಿ ಲಿಂಗವಂತರು ಕೊಲ್ಲು ಲಿಂಗ ಪಟ್ಣಗೆದ್ದು ಕಂಡು ಬಂದಿವಿ ಆಹಾ,

ಎಮ್ಮಾ ಈಗವ ಅಣ್ಣಾಗ ರೆಂಡಿ ಆಗರಿ
ಈಗನ ಅಣ್ಣಾನ ನೋಡಮ್ಮಾ
ಮುತ್ತೈದಿ ಕಲಿಯಿರಿ ಅಂತಾರೆ
ನಿಮ್ಮಣ್ಣಗ ನಾನೇ ಆಗುವುದಿಲ್ಲ

ಎಮ್ಮ ಅಂಗಾರೆ ನಮ್ಮಪ್ಪನ ಊರಿಗೆ ನಾವು ಹೋತಿವಿ, ಆಹಾ ಈಗ ತಾವಾಗಿ ಕರುಣೆ ಕಲ್ಲು ಬಿಟ್ಟು ಆಗ ನಾವು ಹೋತಿವಮ್ಮ ಕವಲೇಶೂ ಕೋಟಕ್ಕೆ,

ಕವಲೇಶು ಕೋಟಕೆ ಹೋತಿವಿ
ಅಂತಾ ಬಾಯಿನೆ ಅಂದಾರೆ

ಸರೆಪಾ ನನ್ನ ಬಿಟ್ಟು ನೀವು ಹೋತೀರಾ ನೀವಾಗಿ ಹೋದಿರಿ ಮರಕಲ್ಲಿಗೆ ಮೂರು ತಿಂಗಳು ನಿದ್ದಿ ಮಾಡಿಬಂದೀರಿ, ಆಹಾ ಈಗನ್ನ ನೀ ನನ್ನ ಅತ್ತಾಗ ಇತ್ತಾಗ ಹೋಗಿದ್ದೀರಿ ನಾನು ಹೋತೀನಿ ಡಾವುಡಿಂಗಲು ನಮ್ಮ ತಾಯಿ ತಂದೆ ತಲ್ಲಿಗೆ ಊರಿಗೆ ಮೂರು ತಿಂಗಳ ನಿದ್ದಿ ಮಾಡಿಬರ್ತೀನಿ, ಆಹಾ ನೋಡಮ್ಮಾ ನಾವು ಇರಾದಿಲ್ಲ ಅಂಬೊತ್ತಿಗೆ ನೀವು ಇಲ್ಲದ ಮ್ಯಾಲೆ ನಾವ್ಯಾಕೆ ಇರಾನ, ಆಹಾ ಈಗ ನಡಿರಪ್ಪಾ ಹೋಗಾನ ನಿಮ್ಮ ಊರಿಗೆ ಹೋಗಾನ ಎಮ್ಮಾ ಊರು ಹೊಸಾದು ಕಟ್ಟೀವಿ ಎಂಗ ಬಿಟ್ಟು ಹೋಗಾರ ಆತೈತೆ, ಆಹಾ ಅಲ್ಲೆ ಐದರಪ್ಪಾ ನೋಡಿದಾ ಯಾರು ಸಿದ್ದೋಗಿ ಎಂಗ ಮಾಡಬೇಕಪಾ ಇವರನ, ಆಹಾ ಆಗ ಜೀವಕೆ ಲಿಂಗವಂತರು ಕೊಲ್ಲಿಬಿಟ್ಟರು, ಆಹಾ ಇನ್ನ ಪಟ್ಣಗೆದ್ದು ಕಂಡು ಹೋದರು ಮಾರ‍್ವಾಡಿ ಲಂಬಣಿ ಕೇರೇರಿಗೆ ಲಂಬಣ ಕೇರಿಲಿಂದಾ ಕಳಿಸೇನಾ ಲಂಚ ಕೊಟ್ಟು ನಾನು ಕಡಿಸೇನಾ ಕುದ್ರಿ ಮ್ಯಾಲೆ ಕುಂತ್ಕಂಡು, ಆಹಾ ರಾಮಾನಾಯ್ಜ ಭೀಮಾನಾಯ್ದ ಲಚ್ಚಮಿ ನಾಯ್ಕರತಲ್ಲಿಗೆ ಬಂದರು, ಆಹಾ ಏನಪಾ ನಿಮ್ಮಗೆ ಐದು ಸಾವಿರ ಸಾಲ ಕೊಟ್ಟೀನಿ, ಆಹಾ ಐದು ಸಾವಿರ ನೀವೆ ತಿಂದು ಬಿಡ್ರಿ, ಆಹಾ ಇಗೋ ಕರಣೆಕಲ್ಲಿಗೆ ಹೋಗಿ, ಅಹಾ ನಮ್ಮಣ್ಣನ ಮಕ್ಕಳು ಈಗ ಫರೋಜಿ ಸೋಮಯ್ಯ ಐದಾರ, ಆಹಾ ಹೋಗಿ ಎತ್ತುಗಳು ಯಾಪಾರ, ಆಹಾ ಎಮ್ಮೆಗಳು ಯಾಪಾರ ಮಾಡಿಕೆಂತಾ ಹೋಗಿ ಸಮಂತರ ಬರೆದು,

ಅಣ್ಣಾ ಮಕ್ಕಳ ನೆನೀ ನೀನು ಕಡಿಯಾರೆ
ಎಷ್ಟು ಕೇಳಿದರೆ ನಾವು ಕೊಟ್ಟೇನಾ
ಬೆಳ್ಳೀ ಬೆಳ್ಳಾನೆ ಕೊಟ್ಟೇನ
ಭಂಗಾರ ಕೇಳಿದರೆ ಕೊಟ್ಟೇನಾ
ಅಣ್ಣಾ ಮಕ್ಕಳು ಇರಬಾರದೆ

ಅಂಬೊತ್ತಿಗೆ ಇವರು ಏ ನೀನು ಎಷ್ಟು ಕೊಟ್ಟರೆ ನಮಗೆ ಬೇಕಿಲ್ಲ, ಆಹಾ ನಿಮ್ಮಣ್ಣನ ಮಕ್ಕಳು ಬಾಳ ಉಶಾರದೋರು, ಆಹಾ ಓದಿಕೆಂಡಿದ್ದವರು ಇದ್ಯಬುದ್ದಿಗ್ಯಾನ ಕಟ್ಟುಕೊಂಡವರು, ಆಹಾ ನಾವು ಕಡಿಯಾಕ ಹೋದರೆ ಸವಮಂತ್ರ ಬರ‍್ಯಾಕ ಹೋದರೆ,

ನಮ್ಮನೆ ಕೊಲ್ಲಿಬಿಡ್ತಾರೆ
ವಲ್ಲವಪ್ಪಾ ಹೋಗಾದಿಲ್ಲಪ್ಪಾ
ಲೋ ಎತ್ತುಗಳು ಎಮ್ಮೆ ಯಾಪಾರ ಮಾಡೋರೆ
ಎತ್ತಿಗೆ ಎತ್ತೆ ಕೊಯಿತೀನಿ
ಆಕಳಕ ಆಕಳ ಕೊಟ್ಟಾವ

ರೊಕ್ಕ ಇಲ್ದ ಯಾರು ಇಲ್ಲವೆ ನಮ್ಮತ್ತು ಅವರೆತ್ತು ಬದಲು ಮಾಡಾರು ಅಷ್ಟೆ ಬದಲು ಮಾಡಾರು ನೋಡಮ್ಮಾ ಅಂಬೊತ್ತಿಗೆ ಸರೆಪಾ ನಾವು ಹೋತೀವಿ ನಿಮ್ಮಣ್ಣಾನ ಮಕ್ಕಳನಾ ನೋಡಿಲ್ಲ ನಿಮ್ಮ ತಮ್ಮನ ಕಳಿಸದ್ರೆ ಇವರೆ ನಮ್ಮ ಅಣ್ಣಾನ ಮಕ್ಕಳು ಅಂದ್ರ ನಾವು ಸವಂತ್ರ ಬರೆದು, ಆಹಾ ಆಗ ನಾವು ಕೊಟ್ಟು ಬತ್ತೀವಿ ಅವರನ ನಾವು ಕೊಲ್ಲೋದಿಲ್ಲ ಆಹಾ ಸರೆ ಬಿಡಪಾ,

ಆಗ ಅವರಿಗಾಗಿ ನೋಡರಾ ಸಯ್
ಲಂಚಕಟ್ಟೆ ಬಿಟ್ಟಾನ ಸಯ್
ನಂಬಿಕೇಲಿ ಹೋಗಿ ಬಿಟ್ಟರೆ ಸಯ್
ಇನ್ನಾ ನಾವು ಬಂದು ಬಿಟ್ಟಾರ ಸಯ್

ಡಡೇಗಾವಿಗೆ ಬಂದಾ, ಆಹಾ ತಮ್ಮ ಖಂಡೇರಾಮ ಚಿಕ್ಕವನೆ ಬಾರಪಾ ಅಂದಾ ಏನಣ್ಣಾ ನಡುವನೋನೆ ಸಿದ್ದೋಗಿ ಏನಿಲ್ಲಾ ಲಂಬಾಣೆ ಕೇರರಿಗೆ ಲಂಚಕಟ್ಟಿ ಬಂದೀನಿ ಆಗ ಅಣ್ಣಾ ಮಕ್ಕಳೊಂದೆ ತೋರಿಸು ಅವರು ಎತ್ತುಗಳ ಯಾಪಾರ ಎಮ್ಮೆ ಯಾಪಾರ ಮಾಡಿಕೆಂತಾ ಹೋಗಿ ಸವಮಂತ್ರ ಬರೆದು ಅಣ್ಣಾನ ಮಕ್ಕಳಾನ ಕಡೀತಾರ, ಆಹಾ ಅರೆ ಅಣ್ಣಾ ಅಣ್ಣಾನ ಮಕ್ಕಳನ ಯಾಕ ಕಡಸ್ತೀಯಣ್ಣಾ ಅವರಿಗೆ ಮದ್ವಿ ಇಲ್ಲ ಏನಿಲ್ಲ ಹರೆ ಹುಡುಗರು ತಂದೆ ತಾಯಿ ಸತ್ತು ಹೋಗ್ಯಾರ ಆವಾಗ ಐದು ವರುಷದ ಹುಡುಗರು ಇದ್ದಾಗ ಕೈ ಕಾಲು ಕಟ್ಟಿ ರೊಕ್ಕ ತಂದು ಕಂಡೆ, ಆಹಾ ಈಗ ಬೆಳ್ಳಿ ಭಂಗಾರ ಎಲ್ಲಾ ತಂದರಂತೆ ಈಗನ್ನ ಅಲ್ಲಿಬಿದ್ದು ಇಲ್ಲಿ ಬಿದ್ದು ದೊಡ್ಡೋರು ಆಗ್ಯಾರ ಅಂಬೊತ್ತಿಗೆ ಲೇ ನೀನು ಹೋತಿಯಾ ನಿನ ಕೈಕಾಲು ತಿರಿವಿಕ್ಕೆ ಬಿಸಾಕಲಾ ಏ ಎಪ್ಪಾ ನೀನತಾಗ ಯಾಕ ಕೈಕಾಲು ತಿರಿವಿಕೆಂಬಲಿ ಕೆಟ್ಟೋನ ಕೈಯಾಗ ಸಾಯಬದಲು ಅಣ್ಣಾ ಮಕ್ಕಳ ಕೈಯಾಗ ಸಾಯತೀನಾ ಅಲ್ಲೇನಾ ಮಣ್ಣು ಹಾಕವಾರ ಹೋತೀನಿ ಬಿಡು ನಡುವವನೆ ಅಂತಾ ಲಂಬಾಣಿಕೊರ ಜತೇಲಿ ಬಂದಾ ರಾಮ ನಾಯ್ಕ ಬೀಮ ನಾಯ್ಕ ಅಂದಾ ಆಗ ಖಂಡೇರಾಯ ಬಂದೇನಪಾ ಸಿದ್ದೋಗಿ ತಮ್ಮ ಬಂದೆಪಾ ಅಂದರೆ ನನ್ನಂಗ ಏಶಾ ಆಡಬೇಕಪಾ ಹಾಕಲೇನಿ ಕೊಡ್ರಯ್ಯಾ ಅಂದಾ ಆಗ ಕರೆಕೋಟು ಕೊಟ್ಟರು ಕೆಂಪು ದ್ವಾತರು ಕೊಟ್ಟರು, ಆಹಾ ಕೆಂಪು ಹೊಲ್ಲಿ ಕೊಟ್ಟರು, ಆಹಾ ಆಗ ಎಲ್ಡು ಎತ್ತು ಇಡಕೊಂಡಾ ಎಲ್ಡು ಎತ್ತು ಇಡಕೊಟ್ಟರು ಆಹಾ ಆಗ ಒಬ್ಬನು ಮೂರು ಆಕಳ ಇಡಕಂಡಾ, ಆಹಾ ಒಬ್ಬನು ನಾಕು ಎತ್ತು ಇಡಕಂಡಾ, ಆಹಾ ಒಬ್ಬನು ಮೂರು ಎಮ್ಮೆ ಇಡಕಂಡಾ ಆಹಾ,

ಯಾಪಾರ ಮಾಡಾಕೆ ಬರ್ತಾರ
ಮಂತ್ರ ತಂತ್ರ ತಗಂಡು

ತಗಂಡು ಬರುವಾಗ, ಆಹಾ ಏನಂದಾ ಆ ಕುದ್ರಿನಾಡ ಸಿದ್ದೋಗಿ ಕುಂದ್ರೋದು, ಆಹಾ ಹೋಗಾನ ಇಲ್ಲನನ ತಮ್ಮ ಆ ನೋಡಿಬಾರಾಕ ಈಗ ಹೋಗಾಕ ಅವರು ಪ್ರಯತ್ನ ಮಾಡ್ಯಾರಪಾ, ಆಹಾ ನನ ತಮ್ಮ ಹೋಗ್ಯಾನೊ ಇಲ್ಗೆ ಆಹಾ ಆಗಲೇ ಬ್ಯಾಗಾರಸುಂಕ ಆಗ ಕುದ್ರಿ ಎತ್ತಾಗ ಹೋಯಿತು, ಆಹಾ ಅಂಬೊತ್ತಿಗೆ, ಆಹಾ ಆ ಕುದ್ರಿ ಎತ್ತಾಗ ಹೋಯಿತು, ಆಹಾ ಅಂಬೊತ್ತಿಗೆ, ಆಹಾ ಕುದ್ರಿ ಅರಕಂಡು ಹೋಗೈತೆ ಅಕೇದ್ಯಾಗ ಅರಕಂಡು ಹೋದರೆ ಆ ಕುದ್ರಿ ಇದ್ರೆ ಅಲ್ಲಾ ಅವನು ಹೋಗಾರು, ಆಹಾ ಕುದ್ರಿ ಇಲ್ಲದಿದ್ದರೆ ನಡದು ಹೋಗಾಕ ಆತೈತಾ, ಆಹಾ ಇಲ್ಲಿದ್ದ ಅಲ್ಲಿಗೆ ಬಂದ ಗಾತ್ತದಾ ಅಂತಾ ಆಗ ಬ್ಯಾಗಾರವನು ಇಡಕಂಡಾನೆ

 ಎಲ್ಡು ಏಟು ನಟ್ಟಿಲೆ ಬಡಿದಾನ
ಈಗ ಜೀತ ಹೋಗೊ ಟೈಮು ಬಂದೈತೊ
ಇಂತಾ ಟೇಮಿನಾಗ ನೀ ನಾಲೆ

ಬಿಳೆ ಅನ್ನದ ಮ್ಯಾಲೆ ಅಚ್ಚನ ತೊಗೆ ಮೊಸರು ಹಾಕಿ, ಆಹಾ ಕುತ್ತಿಗೆ ಮಟ ಊಟ ಮಾಡಿದಾ ಎಪ್ಪಾ ಹೊಟ್ಟೆ ಅಸಕಂಡು ಬಂದಿದ್ದೆ ಹೊಟ್ಟೆ ತುಂಬಾ ಅನ್ನ ಇಟ್ಟರು, ಆಹಾ ಇಗೋ ನಾನೊಂದು ನನ ಜಲ್ಮ ಉಳಿಸೀರಿ ನಿಮ್ಮ ಜಲ್ಮ ನಾನು ಉಳಿಸ್ತೀನಿ ಅಂದಾ, ಆಹಾ ನಮ್ಮ ಜೀವವನು ಉಳಿಸ್ತೀಯಲೆ ಕುದ್ರಿ ಸಲುವೋನೆ ಅಂದಾ, ಆಹಾ ಇಲ್ಲ ನಿಮ್ಮ ಕಕ್ಕ ಲಂಬಾಣ ಕೇರರಿಗೆ ಲಂಚ ಕೊಟ್ಟ ಬಂದಾನ, ಆಹಾ ನಿಮ್ಮ ಚಿಕ್ಕ ಕಕ್ಕ ಕೂಡಿರ್ತಾನ ಎತ್ತುಗಳು ಯಾಪಾರ ಎಮ್ಮೆ ಯಾಪಾರ ಆಗ ಎತ್ತಿಗೆ ಎತ್ತು ಕೊಡತೀವಿ ಸಾಟೆಗೆ ಮಾಡತೀವಿ, ಆಹಾ ಕುದ್ರಿಗೆ ಕುದ್ರಿ ಸಾಟ ಮಾಡತೀವಂತಾ ಬರ್ತಾರ, ಆಹಾ ಬಂದು ನಿಮ್ಮಗೆ ಆಗ ನೋಡಿಲ್ಲಂತಾ ನಂಬಿಕೆ, ಆಹಾ ಈಗ ನಿಮ್ಮ ಕಕ್ಕ ತೋರಿಸ್ತಾನಂತೆ ಆಹಾ ಈಗ ಖಂಡೇರಾಯ ನವಮಂತ್ರ ಬರೆದು, ಆಹಾ ನಿಮ್ಮನ ಕೊಲ್ಲಿಬಿಡ್ಥಾನಂತೆ ಆಹಾ ಅಂಗಾರೆ ಬರ್ತಾರ ಲಮಣಿಕೇರರು ಓಬರ‍್ತಾರ ಅಂಗಾರೆ ಎಂಗ ಮಾಡಾನಂದ ಏನಿಲ್ಲಾ ಮುನ್ನೂರು ಕೊಟ್ಟು ತರ್ಸು, ಆಹಾ ಏನಿಲ್ಲಾ ಕುಣಿ ತೋಡುತೀನಿ ನಡುವುಲಷ್ಟೆ, ಆಹಾ ಕುಣ್ಯಿಗ ಎಲ್ಲ ಗುಂಡುಗಳು ಹಾಕತೀನಿ, ಆಹಾ ಈಗ ಗುಂಡುಗಳು ಮ್ಯಾಲೆ ಸೊರಗ್ಗ ಹಾಕತೀನಿ ತಾವು ಜೀವರೆ ಮಾಡ್ಯಾರೆ ಈಗ ನಿಮ್ಮ ಕಕ್ಕ ಬರ್ತಾನ ಕೊಲ್ಲಿ ಬಿಡ್ಡಾರ ಅಂದರು ಸರೆ ಬಿಡು ಅಂದರು ಈಗ ನೀವು ಊರೆಲ್ಲ ಡಂಗರು ಸಾರಬೇಕು, ಆಹಾ ಅಂತಾ ಊರೆಲ್ಲ ಡಂಗರು ಸಾರಿದ, ಆಹಾ ಎಲ್ಲರೂ ಮುಚ್ಚಿಕಂಡರು, ಆಹಾ ಇವರು ಬಂದರು,

ಎತ್ತುಗೆ ಎತ್ತು ಕೊಡತೀವೆ
ಎಮ್ಮಿಗೆ ಎಮ್ಮಿ ಕೊಡತೀವೆ
ಆಕಳ ಆಕಳಾ ಕೊಡತೀವೆ

ಬ್ಯಾಗರೋನು ನೋಡಿರಾ ಏನಯ್ಯ ಈಗ ಹೊರಗನಿಂತ್ಯಂಡು ಎತ್ತಿಗ ಎತ್ತು ಕೊಡತೀವಿ ಆಕಳ ಕೊಡತೀವಿ ಅಂದರೆ ಎಂಗಪಾ, ಆಹಾ ಈಗ ನೀವು ಆವಾಗ ಹೋಗಬೇಕು,

ಊರಾಕ ಹೋಗರಿ ನೀವಾರೆ
ಬಜಾರದಾಗ ನಿಂದರಸಬೇಕಯ್ಯಾ
ಅಗಸೆ ತಡಾದು ಬಳಾಕ ಹೋಗರಿ
ಬಜಾರದಾಗ ನಿಂದರಿಸಿದರೆ

ಎಲ್ಲರೂ ಊರಾಳ ಮಂದಿ ಎಲ್ಲಾ ನೋಡತಾರಪಾ ಅಂದರೆ ಖರೇವು ಅಂತಾ ಅಗಸಿ ತಟಾದು ಎಲ್ಲರೂ ಬಂದ್ರಪಾ, ಆಹಾ ಐವತ್ತು ಮಂದಿ ಬಂದಾರ ಲಮಾಣಿಕೇರರು, ಆಹಾ ಆಗ ಬಂದು ಅಗಸ್ಯಾಗೆ ಬಜಾರದಾಗ ಎತ್ತುಗಳು ದನಗಳು ಎಮ್ಮೆಗಳು ನಿಂದರಿಸಿಕೊಂಡು, ಆಹಾ ನಿಂತಕಂಡರು ನಿಂತ ಕಂಬೊತ್ತಿಗೆ ಆಹಾ,

ಈತ ಏನನ ಮಾಡ್ಯಾನ ಸಯ್
ಅಗಸಿ ಮುಚ್ಚೆ ಬಿಟ್ಯಾನ ಸಯ್
ಆಗ ಅವರು ನೆಳ್ಳು ನೋಡ್ಯಾರ ಸಯ್
ಗುಂಡುಗಳಾಗ ನೋಡರಾ ಸಯ್
ದೊಪ್ ದೊಪ್ಪಂತರಾ ಸಯ್
ಗುಂಡುಗಳು ಎದ್ದೆ ಬಿಟ್ಟಾವೆ ಸಯ್
ಕಡೆಗೆ ಕಡೆಗೆ ನೋಡರಾ ಸಯ್
ಯಾಳೆ ಇನ್ನ ಗೌಡರ ಸಯ್
ಹೋಗಿ ಮುತ್ತಿಕೊಂಡರಾ ಸಯ್
ಗುಂಡುಗಳು ಬಿದ್ದು ನೋಡರಾ ಸಯ್
ನಾಯಿಗಳು ನಾಶನ ವಾಗೇವಾ ಸಯ್
ದನಗಳ ನಾಶನವಾಗೇವಾ ಸಯ್
ಲಂಬಾಡಿಕೇರರೆಲ್ಲಾ ಸತ್ತಾರ
ಲಂಬಾಡಿಕೇರರೆಲ್ಲಾ ಸತ್ತಾರ
ಗುಂಡು ಬಿದ್ದು ಅವರಾಲೆ
ಅಣ್ಣಾ ಮ್ಯಾಲೆ ಬೀಳತಿದ್ದರೆ ಅವರೆ ಬಿದ್ದೆ ಹೋತಾರ

ಆ ಹೊಗೆ ಸುತ್ತಿಕಂಡುದನಕರು ಓ ಅಂತಾ ಅರಸಿಸತ್ತವು ಇವರು ಹೊಗೆಗೆ ಗುಂಡುಗಳು-ಬಿದ್ದು ಎಲ್ಲರೂ ನಾಶವಾಗಿ ಹೋದರು, – ಆಹಾ ನಾಶವಾಗಿ ಹೋದಮ್ಯಾಲೆ ಈ ಬ್ಯಾಗರೋನು ಏನಂದಾ ಏನರ‍್ರೀ ಈಗ ಫಿರೋಜಿ ಸೋಮೋಜಿ ಮಾರವಾಡಿ ಹುಡುಗರಾ

ತೆರ್ರೀ ತೆರ್ರೀ ಈಗ ಊರೆಲ್ಲಾ ಇನ್ನ ತೆರ್ರಿ ಇವಾಗ
ಊರೆಲ್ಲಾ ತೆರೆದು ಬಿಟ್ಟಾರ ಸಯ್
ಬರೆ ಹೆಣಗಳು ನೋಡಾರ ಸಯ್
ನಿಮ್ಮ ಕಕ್ಕನ ನೋಡಿದರಾ ಸಯ್
ನಿಮ್ಮನ ಕಡಿಯಾಕ ಬಂದಾನ ಸಯ್
ನಿಮ್ಮ ಚಿಕ್ಕಾ ಕಕ್ಕಾನ ನಿಮ್ಮನ ಕಡಿಯಾಕ ಬಂದಾನ \

ಹೆಣಗಳು ಐರಿವಾಕ್ಯಂತ ಬಂದರು, ಆಹಾ ಈತೆ ನೋಡು ನಿಮ್ಮ ಕಕ್ಕ, ಆಹಾ ನಿಮ್ಮನ ತೋರಸೋದು ಇವರು ಮಾತ್ರ ಕಟ್ಟಿಗೆ ಕುಂದರೋರು, ಆಹಾ ಅಂಬೊತ್ತಿಗೆ ಆಗ ಈ ಕಾಲದವರು ಆದರೆ ಸಾಯಲಿ ಬಿಡು ನಮ್ಮ ಕಕ್ಕನ ಹಾಳಾಗಿ ಹೋಗ ಅಂತಿದ್ದರು, ಆಹಾ ಎಲ್ಲರೂ ಬಂದೆ ಆಗೇವು ಎಳಕಂಡೋಗಿ ಎಳಕಂಡೋಗಿ ದನಕರ ಮನುಶಾರನ ಒಂದೆ ಕುಣ್ಯಾಗ ಹಾಕಿದರು, ಆಹಾ ಈಗ ಕಕ್ಕಕನ ನೋಡಿದರು ಆಗ ಈ ಕಾಲದೋರು ಆದರೆ ಅಡವ್ಯಾಗ ಹಾಡುತ್ತಿದ್ದರು, ಆಹಾ ನಮ್ಮ ತಂದೆ ಪಾಪ ನಮ್ಮಿಗೆ ಇರತೈತೆ ಆಹಾ ಉಪ್ಪಾ ಒಬ್ಬನು ಇಲ್ದಂಗ ಹೋದಿರೆ ಮ… ಮ.. ಕಕ್ಕಾ ಅವರೆ ದುಃಖ ಮಾಡ್ಯಾರ ಒಂದು ಮಾತು ಮಾತಾನಾಡಿದ್ಯೊ ಮಗನ ಕೂಟ ಎಪ್ಪಾ ಮಕ್ಕಳಂತಾ ನೀನು ಬಂದಿಯಾ ಮಕ್ಕಳಂತಾ ನೀನು ಬಂದಿಯಾ ಕಕ್ಕಾ ನೀನೆ ಸತ್ತೀಯಾ ಅನಕಂತಾ ಖಂಡೇರಾಯನ ಮ್ಯಾಲೆ ಬಿದ್ದು ದುಃಖ ಮಾಡ್ತಿದ್ದರೆ ಅತ್ತಿಗೆ ನೋಡಿ ಏನಂತಾಳ ನೋಡಪಾ ಮೈದನೋರೆ, ಆಹಾ ಒಳ್ಳೆಯವರಾದರೆ ದುಃಖ ಪಡಬೋದು ಆಹಾ,

ಇವನು ಮಕ್ಕಳು ಕಡಿಸೋನು ನೋಡರಾ
ಇವನು ನೋಡಿಯಾಕ ಅಳತೀರೆ
ಅವರನ ನೋಡಿಯಾಕ ಅಳತೀರಿ
ಮಕ್ಕಳನ ಕಡಿಸೊರು ಅವರಾಗಿ
ಲೇ ಇನ್ನು ನನ್ನಂತವರಿಗೆ ಆಗಲೇ ಕಡಿತಿದ್ದರು ನೋಡಾಲೆ

ನನ್ನಂತವನು ನೋಡಿದ್ದರೆ ಆಗಲೆ ಕಡಿತಿರೆ, ಆಹಾ, ಹೊಟ್ಯಾಗ ಹುಟ್ಟಿದ ಮಕ್ಕಳ ಇನವರ ಬೆಳೆಸೋರು ಇನ್ನವರ ಕಡಿಸೋರು, ಆಹಾ ಇವರಂತಹ ಪರದಿನ್ನಿ ಇರಬೋರು ಮಕ್ಕಳಿಲ್ಲದ ಗೆಡ್ಡೋರು,

ಆಸ್ತಿಗೆ ಆಸೆ ಬೀಳೋರು ಹಾಳಾಗಿ ಇವರೆ ಹೋಗಲಿ

ಅಂಬೊತ್ತಿಗೆ ಅಮ್ಮಾ ನೀನಂತಿ ತಾಯಿ ಎಂತಾ ಕೆಡುಕರಾಗಲೀ ನಮ್ಮ ಅಣ್ಣಾ ಅಲ್ಲಮ್ಮಾ, ಆಹಾ ನಮ್ಮ ತಂದೆ ಅಲ್ಲಮ್ಮಾ, ಆಹಾ ಅಂಬೊತ್ತಿಗೆ ಈಗ ಆಗ ತಂದೆಗೆ ಮೈ ತೊಳೆದು ಆಹಾ ಆಗ ಸಮಾದಿ ಮಾಡಿ ಈಗ ತಾವಾಗಿ ಬೆಂಕಿ ಹಾಕಿದರು ಸುಟ್ಟು ಬೂದಿ ಮಾಡಿದರು, ಆಹಾ ನಿವಾಳಿ ಕಟ್ಟಿದರು ಆಹಾ ಆಗ ಸಮಾದಿ ಕಟ್ಟಿಮ್ಯಾಲೆ ಆಹಾ,

ಇನ್ನ ಮೈತೊಳಬೇಕಲಾ
ದಿನುಗಳು ಒಂಬತ್ತ ದಿನದಾಗ
ಆಮ ಕೊಡ ತಗಂಡು
ಹೊಳೆ ದಂಡಿಗೆ ಬಂದಾರೆ
ಹೊಳೆ ದಂಡೀಲೆ ಸಾನ ಮಾಡ್ಯಾರ
ಮಗ ನೀರೆ ತುಂಬ್ಯಾರ

ನೀರು ತುಂಬಿದ ಮ್ಯಲೆ, ಆಹಾ ಆ ಕಡೆಲಿದ್ದ ಕುದ್ರಿ ಸಲುಹೋನು ಬ್ಯಾಗರೋನು ಹೆಂಡ್ತಿ ಬಂದಳು ಕೊಡಲುಗಂಡು, ಆಹಾ ಆರಡೆ ಗಡ್ಡಿಗೆ ಹಾಕಿ ತುಂತಾಳ ಈಕಡೆ ಗಡ್ಡಿಗೆ ಇಕೆ ತುಂತಾಳ, ಆಹಾ ನೋಡಿದಳೂ ಅಲೆಲೆಲೆಲೆ ಅವಳು ಯಾತರೋಳು ಎತ್ತಗದೊಳು, ಆಹಾ ಅತ್ಯಾಗ ನೀರು ಇತ್ಯಾಗ ಬಂದುವೊ ಏನೊ, ಆಹಾ ಇನ್ನಾ ಎಳಿತಾಪಪಾ ಒಳಗಾ ಏನನ್ನಾಗಲೀ ಅತ್ತಾಗ ನೀರು ಇತ್ತಾಗ ಬಂದವೇನಂತಾ ತುಂಬಿಕಂಡಿದ್ದುವು ಅಂತಾ ಬಾಯಿ ಗಬಗಬ ಸುರಿವಿ ಕೆಂಚಿಟ್ಟು, ಆಹಾ ಕೊಡದಾಗಿನ ಇನ್ನಾ ಮ್ಯಾಕ ಬಂದಳು ಆ ಕಡೇಗೆ ಹೋಗಿರುವಾವಾ, ಆಹಾ ಕೆಳಗ ಹೋತಾವ, ಆಹಾ ಆಕೇನ ಗರ್ತಿ ಆಕೇನ ದೇವ್ರು ಪೂಜೆಗೆ ನೀರು ಹೂಯ್ಯಾಕಿ ನಾನು ಹೊಯ್ಯವಳಲ್ಲ ಆಹಾ ಆಡಿ ತುಂಬಿಕೆಂಡಾಕಿ ಸುರುವಿಬಿಟ್ಲು ಆಮ್ಯಾಲೆ ಎಲ್ಲಿ ಇನ್ನವರ ಕೊಡ ಬೊಗಸಿದಳೊ ಈ ಕಡೆಗೆ ಆಕಿ ಬಂದು ಆ ಕಡೆಗೆ ನೆಟ್ಟಗೆ ಕೊಡಬಗ್ಗಿಸಿದಳು ನೋಡಿದಳು ಯಾರು ಅಂತಬಾಯಿ ಆ ಕಡೆ ಗಡ್ಡವಳೆ ನೀರು ತುಂಬೋಳೆ ನೀನು ಯಾವಾಳಲೆ ಅಂದಳು ನಾನು ಯಾವಳು ಬ್ಯಾಗರೋನು ಹೆಂಡತಿ, ಆಹಾ ಕುದ್ರಿ ಸಲುಹೋನು ನಿಮ್ಮ ಕಕ್ಕನ ಕೈಯಾಗ ಇರೋರು, ಆಹಾ ಸರೆ ಈಗ ನೀನು ಚಿಕ್ಕ ಜಾತಿ ನಮ್ಮದು ದೊಡ್ಡ ಜಾತಿ, ಆಹಾ ಯಾಕ ನೀನು ಕೆಳಗ ತುಂಬಾರ ನನಗ ನೆಟ್ಟಕ ಬಂದವು ಆಹಾ ಏನಮ್ಮಾ ಈ ಕಡೆ ನೀರು ಆ ಕಡೆಗೆ ಬಂದಿದ್ದಾವ, ಆಹಾ ಆಗ ಕೇಳಲೆ ನಮ್ಮ ಮಾವ ಇಟ್ಟರು ನೀನು ತಿಂದು, ಆಹಾ ಈಗ ನಿನಗೆ ಬಾಳ ಮೊಖ ಏರಿಬಂದೈತಲ್ಲಾ, ಆಹಾ ಹೋಗಮ್ಮಾ ಈಗ ನಿಮ್ಮ ಮಾವಂದು ಸುದ್ದಿ ಹೇಳಿ ಬಿಟ್ಟರೆ, ಆಹಾ ನಿಮ್ಮ ಊರೆಲ್ಲಾ ನಾಶನ ಮಾಡುವಂತೋನು, ಆಹಾ ಯಾಕಮ್ಮಾ ಏ ನಿನಗೆ ಭಯವಿಲ್ಲ ನಾನು ಭಯಬೀಳಬೇಕಾ ಆಹಾ,

ನಿನ್ನ ಗಂಡನ ಕಡಿಸರು ನಿಮ್ಮ ಮಾವಾನೋಡಮ್ಮಾ
ಗಂಡನ ಕಡಿಸಿದರೇ ನೋಡಮ್ಮ ನಮ್ಮ ನಿನಗೆ ಭಯ ಇಲ್ಲೇನೆ
ನಮ್ಮ ಗೌಡನ ಹೆಸ್ರು ಹೇಳಿದರೆ ಲೋಕಾನೆಲ್ಲಾ ನಡಗಬೇಕು

ಅಂತವನ ಕೈಯಾಗ ಐದೀವಿ ನಾವು ಅಬಬಬಬಾ ಸರೆ ಅಂಗಾದ್ರೆ ನಿಮಗೆ ಗೌಡಾನ, ಆಹಾ ಆಗ ನಮ್ಮಿಗೆ ಕಡಿಸಿದ್ದು, ಆಹಾ ಹೌದಮ್ಮ ಸರೆಮ್ಮಾ ನಾವು ಸೋತಂಗ ನೀವು ಗೆದ್ದಂಗಾ ಈಗ ನೆಟ್ಟಗ ತುಂಬಿಕೆಂಡು ಹೋಗು ಅಂದಾ ಆ ಕಡೆ ಗಡ್ಡಿಗೆ ಆಕೆ ತುಂಬಿಕಂಡು ದಡೇಗಾವಗೆ ಹೋದಳು ಈಕಿ ಕರಣೆ ಕಲ್ಲಿಗೆ ತುಂಬಿಕಂಡು ಹೋದಳ, ಆಹಾ ಮೇಲೆ ಇಟ್ಟಳು ಬರ್ರೆ‍ಪ್ಪಾ ಮೈದನೋರೆ ಆಹಾ ಏನಮ್ಮಾ ಅತ್ತಿಗೆ ಅಂದರು ಆಹಾ ಏನಿಲ್ಲಾ ಬಡವ್ರೆಲ್ಲಾ ಕೊಲ್ಲಿ ಬಿಟ್ಟಿರಿ, ಆಹಾ ಕಳ್ಳರು ಕೊಲ್ಲಿಬಿಟ್ಟರಿ, ಆಹಾ ಲಿಂಗವಂತರು ಹಾಳು ಮಾಡಿಬಿಟ್ಟೀರಿ, ಆಹಾ ಅವರನೆಲ್ಲಾ ಯಾಕ ಕಡಿಕೆಂತಾ ಐದೀರಿ ಲಂಬಾಣಿಕೇರರನ ಹಾಳು ಮಾಡಿ ಬಿಟ್ಟೀರಿ ನಿಮ್ಮ ಕಕ್ಕಾ ಅಂತಾ ಕಡಿದಿದ್ದು ಸಿದ್ದೋಗಿ, ಆಹಾ ನನ ಗಂಡನ್ನ ನಿಮ್ಮ ಅಣ್ಣಾನ ಮತ್ತೆ ನೀವು ಕಡದು ಬರುಹೋಗರಿ ನಿಮ್ಮ ತಂದೀನಾ, ಆಹಾ ಕಡಿಕೆಂಡು ತಲೆ ತಗಂಡು ಬರಬೇಕು, ಆಹಾ ಅಂಗಾದರೆ ನಾನು ರಂಡೆ ಆತೀನಿ, ಆಹಾ ಇಲ್ಲಮ್ಮಾ ನಮ್ಮ ತಂದೆ ಕೈಯಾಗನ್ನ ನಾವು ಸತ್ತೇವು ನಾವು ತಂದಿನಾ ಕೈಯಾಗ ಜೀವನಾನ ಒಡಿಯಂಗಿಲ್ಲ ಆಹಾ ಜೀವ ಕಳಿಯಾದಿಲ್ಲ, ಆಹಾ ಸರ‍್ರೆಪಾ ನೀವೆ ಆಕ್ಯಳ್ಳರಿ, ಆಹಾ ನೀವು ಮುಂದೆ ಮದ್ವಿ ಮಾಡಿಕೆಂಬೋರು ಆಹಾ ಮುಂದೆ ಮಕ್ಕಳು ಆಗೋರು ತಂದೀನ ಬಡಿದು ಕರ್ಮಸುತ್ತಿಗ ಬ್ಯಾಡರಿ, ಆಹಾ ಈಗ ನನ ಮೊಗ ಆದರೆ ಮಗನ ಕೂಟ ಕರ್ಮ ಕಟ್ಟಿಕಾಬಾರ್ದು ನನ್ನ ಗಂಡನ ಜೀವ ಅವನು ಕಡಿದಾನ, ಆಹಾ ಅವನ ಜೀವ ಕಡಿದು ನಾನು ಕರ್ಮಕಟ್ಟಿಕೆಂತೀನಿ ಆಹಾ ನಾನು ಅಡೆಂಗಿಲ್ಲ ಅವನು ಬೆಳಸಂಗಿಲ್ಲಾ ಅಂತಾ ನಾನೇ ಹೋತೀನಂತೆ,

ಗಂಡನ ದಿರುಸು ಹಾಕ್ಯಾಳ ಸಯ್
ಪಗಡಾ ದಿರುಸು ಉಟ್ಯಾಳ
ಆಗ ಬೋಳಿ ಕತ್ತಿನೂರರಾ ಸಯ್
ನಡುವಿಗೆ ಹಾಕಿಂತ್ಯಾಳ ಸಯ್
ಬಂಗಾರ ಕಿರೀಟ ಇಡುತಾಳ ಸಯ್
ಕುದ್ರಿ ಬಾಯಿಗೆ ಸರಪಣಿ ಹಾಕ್ಯಾಳ
ಗಂಡನ ಕುದ್ರಿ ಮ್ಯಾಲೆ ಕುಂತಾಳ
ಗಂಡನ ಕುದ್ರಿ ಮ್ಯಾಲಮ್ಮ
ಆಮ ಬಂದೆ ಕುಂತಾಳೆ

ಕೇಳ್ರಪಾ ಮೈದನೋರೆ ನೀವು ಕಡಿಲಿದ್ದರೆ ನಾನೇ ಕಡಿಕಂಡು ಬರತೀನಿ, ಆಹಾ ಗಂಡಸರು ದಿರುಸು ಹಾಕಿಬಿಟ್ಲು ಗಂಡಂದು, ಅಹಾ ಈಗ ಮೈದನೋರು ಏನಂತಾರ,

ಎಮ್ಮಾ ತಂದೀನ ಕಡಿದು ಬರಬ್ಯಾಡೆ
ಎಮ್ಮಾ ಎಂತ ಕೆಡುಕುನೋನು ಆಗಲಿ

ಕೇಳೆ ಅತ್ತೆ ಅಮ್ಮಯ್ಯಾ ಮಾವನ ಕಡಿಯಾ ಬಾರದು, ಆಹಾ ಎಮ್ಮಾ ಮಾವ ಜೀವಗೆ ನೋಡರಾ ತಗೀಬ್ಯಾಡ,

ಮಾವಗ ಮುಂಚೆ ಅಮ್ಮಯ್ಯೊ .. ..

ಜಲ್ಮ ನೀನು ತಗೀಬ್ಯಾಡ, ಆಹಾ ಮೈದನೋರು ಅತ್ತಿಗೆ ಮೊಖ ನೋಡಿ ದುಃಖ ಮಾಡತಿದ್ದಾರೆ ಈಕಿ ಏನಂತಾಳ ಸರ‍್ರೆಪಾ ತಮದೀನಾ ಕಡೀಬ್ಯಾಡ ಅಂತಾ ನೀವು ಹೇಳತಿರಿ,

ನನ್ನ ಗಂಡನ ಕಳಕೊಂಡೀನೊ
ಎಮ್ಮ ಅವನು ಎಂತ ಮಾಡಿ ಐದಾನ
ನನ್ನ ಗಂಡನ ಕಡಿಸದನೆ ಅವನೆಂತಾ ಮಾವ ಐದಾನ
ಹೊಟ್ಯಾಗ ಹುಟ್ಟಿರ ಮಕ್ಕಳು ಕಡಿಸಬೋದು
ಅವನು ಎಂತಾ ತಂದಿ ವೈದಾನ
ಅಣ್ಣಾ ಮಕ್ಕಳಾದ್ರೆ ಒಂದೆರಾ ..
ನನ್ನ ಮಕ್ಕಳಾದ್ರೆ ಒಂದೆರಾ
ಅಣ್ಣಾ ಮಕ್ಕಳಾದ್ರೆ ಒಂದೆರಾ
ನನ್ನ ಮಕ್ಕಳಾದ್ರೆ ಒಂದೆರಾ

ಮಕ್ಕಳಿಲ್ಲದೋನು ಎಷ್ಟು ಜೀವಕ ಇರಬೇಕು, ಆಹಾ ಎಷ್ಟು ಜಲ್ಮದಲ್ಲಿ ಇನ್ನ ಜೋಪಾನ ಮಾಡ್ಬೇಕು, ಆಹಾ ಈಗ ಅಂತೋನು ಮ್ಯಾಕೆ ಕಡಿಬ್ಯಾಡಂತಿರಾ ಆಹಾ,

ನಾನು ಕಡಿದು ಬರ್ತೀನಿ ಬಿಡಾದಿಲ್ಲ
ಕೆಮ್ಮನೆ ಕ್ಯಾಕೆ ಬಡದಾಳ ಸಯ್
ಕುದ್ರಿ ಆಗ ನೋಡರೆ ಸಯ್
ಜಟ್ ಜಟ್ ಅಂತಾ ಹೊಡಿತಾಳೆ
ನತಾದೊಂದೆ ಒಡದಾಳೆ
ಇನ್ನ ಕರಣೆ ಕಲ್ಲುಲಿದ್ದರಾ ಸಯ್
ಹೊಳತಟಾದೆ ಬಂದಾಳ ಸಯ್
ದಡಗಾವಿನ ಮ್ಯಾಲೆ ನೋಡರಾ ಸಯ್
ಆಗ ಬಂದೆ ಬಿಟ್ಟಾಳ ಸಯ್
ಇನ್ನಾ ತಾವು ಮಾವನ ಮನಿಗೆ
ಮಾವನ ಊರಿಗೆ ಬಂದಾನಮ್ಮ
ಮಾವನ ಮುಂದೆ ಕುಪ್ಪಳಿಸಿ ಆರಿಕೆಂಡಳಪಾ
ಕುದ್ರಿ ಮ್ಯಾಲೆಲಿಂದಾ ಆಹಾ
ಆಗ ಏನಂತಾನ ಸಿದ್ದೋಗಿ
ಬಂದೆನಪಾ ನನ ಮಗನೆ
ದೊಡ್ಡು ಮಗನೆ ಬಂದೇನೊ
ದೊಡ್ಡು ಮಗನೆ ಸೋಮೋಜಿ
ಆಗ ತಂದಿ ನೋಡಾ ಮಿಕ್ಕೆ
ತಂದಿ ಮುದಿಯತನಾದರೆ ಸಯ್
ತಂದಿಗೆ ಮಕ್ಕಳು ಇಲ್ಲರಾ ಸಯ್
ಕರಕಂಡು ಹೋಗಾಕ ಬಂದೀಯಾ ಸಯ್
ಜೋಪಾನ ಮಾಡಾಕ ಬಂದೀಯಾ
ಕರಕಂಡು ಹೋಗಾಕ ಬಂದೀಯಾ

ಅಂದರೆ ಅಂಬಾ ಬಾಯಿ ಏನಂತಾಳ,

ಇನ್ನೆಲ್ಲ ನಿನ ಮೊಗವೈದಾನೊ ಸಯ್
ಮಕ್ಕಳಿಲ್ಲದ ಪರ ಜಂಜರಾ ಸಯ್
ನನ್ನ ಗಂಡನ ನೀನು ಕಡಿಸದೆ ಸಯ್
ಮಗನ ಕಡಿಸದೋನುರಾ ಸಯ್
ಇನ್ನೆಲ್ಲಿ ಮಗವೈದಾನ
ಮಗನೆ ನೀನೆ ಕಡಿನೋದೆ
ಇನ್ನೆಲ್ಲಿ ಮಗವೈದಾನ
ಒಂದು ಕೂಸಿನ ತಾಯಪಾ ಆಹಾ
ಹರೇದಾಕಿ ಆಹಾ
ಸಿದ್ದೋಗಿ ಮುದೇನು ಆಹಾ
ಕೇಳವೊ ಮಾವ ಆಹಾ
ಮಗನ ಕಡಿದಿ ಆಹಾ
ಈಗ ಮಾವನ ನಾನು ಕಡಿತೀನಿ ಆಹಾ
ನಾನ ಅಡಿಯಂಗಿಲ್ಲ ನೀನು ಬೆಳಸಂಗಿಲ್ಲ ಆಹಾ
ಕೇಳವೆ ಆಗ ಆಂತಬಾಯಿ ಆಹಾ
ನೀನು ಸೊಸೆ ಆಗಿ ನೀನು ಮಾವನ ಕಡಿತೀಯಾ ಆಹಾ
ನೀನು ಹೆಣಮಗಳು ಇದ್ದ ಮಾಡತೀಯಾ ಆಹಾ
ನನ ಮ್ಯಾಲೆ ನೀನು ಕುಸ್ತಿ ಮಾಡತೀಯಾ ಆಹಾ
ನನ ಕೊಲ್ಲುತೀಯಾ ಆಹಾ
ಆಗಲಿ ಒಂದೆ ಅಂತಾನ ಸಯ್
ಬಾರಲೆ ಮುಂದಕ ಅಂತಾನ ಸಯ್
ಮುಂದಕ ನೋಡಿಕೆಂಡು ಬರ್ತಾಳ ಸಯ್
ಹಿಂದಕ ನೋಡಿಕೆಂಡು ಬರ್ತಾಳ ಸಯ್
ಆಗ ಮಾವನ ನೋಡರಾ ಏಯ್ ಸಯ್
ಕೂದ್ಲು ಇಡದೆ ಬಿಟ್ಟಾಳ ಸಯ್
ಎಡಗೈಲಿ ಇನ್ನಾ ಇಡದಾಳ
ಬಲಗೈ ಕೈಕೊಡದಾಳ ಸಯ್
ಎತ್ತಿ ಕೈಳ ಕೆಳಪಾ
ಎತ್ತಿ ಕೆಳಗೆ ವಾಕ್ಯಾಳ
ಮಾವನ ಒಂದೆ ನೋಡಪಾ
ಮಾವನ ಕೆಳಗೆ ನೋಡರಾ ಸಯ್
ಮಾವನ ಎದೆ ಮ್ಯಾಲೆ ಕುಂತಾಳ
ಮಾವನ ಕೆಳಗ ವಾಕಿರಾ
ಮಾವನ ಎದೆಮ್ಯಾಲೆ ಕುಂತಾಳೆ
ಗುಂಡು ಕುಂತಂಗೆ ಕುಂತಾನೆ ಸಯ್
ಕೊಲ್ಲು ಕುಂತಂಗೆ ಕುಂತಾನೆ ಸಯ್
ಎಡಗೈಲಿ ಕೂದ್ಲು ಇಡದಾಳೆ ಸಯ್
ಬಲಗೈಲಿ ಕುತ್ತಿಗೆ ಇನ್ನರಾ ಸಯ್
ಸೂರಿ ಇಟ್ಟೆ ಬಿಟ್ಟಳಾ
ಎದ್ದು ಮಿಸಕಾದ್ದಂಗಾ
ಇನ್ನ ಮ್ಯಾಲೆ ಇನ್ನ ಕುಂತಾಳ
ಇನ್ನ ಸೂರೆ ಇಟ್ಟಳೆ

ಎತ್ತಿಕೆಳಗ ಹಾಕ್ಯಂಡು ಎದೆ ಮ್ಯಾಲೆ ಕುಂತುಬಿಟ್ಲುಪಾ ಆಹಾ ಎಡಗೈಲಿ ಕೂದ್ಲು ಇಡದ್ಲು ಬಲಗೈಲಿ ಸೂರಿ ಇಡದ್ಲು, ಆಹಾ ಗುಂಡಕಲ್ಲು ಕುಂತಂಗೆ ಕುತಾನಪಾ ಆಹಾ ಆಗ ಏನಂತಾನ ಸಿದ್ದೋಗಿ,

ಎಮ್ಮಾ ಸರವು ತಪ್ಪಾಗೈತೆ ನನದಮ್ಮಾ
ದೊದ್ದ ಸೊಸೆ ನೀನು ವೈದೀಯೆ
ಮನಿಗೆ ದೀಪ ಬೆಳಗಮ್ಮ
ನಿನ್ನ ಇಲ್ಲದರೆ ಇಲ್ಲಮ್ಮಾ
ಇಷ್ಟು ಲೋಕ ಹೆಸ್ರಾಗೀಮೆ
ಹೆಣ್ಸರ ಕೈಯಾಗ ಸತ್ತಾರೆಂತಾ
ಸೊಸೇನೋರು ಕೈಯ ಸತ್ತಾರಂತಾ
ಲೋಕಕ ಹೆಸ್ರೆಬ್ಯಾಡಮ್ಮಾ
ಉನ್ನಾ ಮೈದನೋರೆ ವೈದರಾ ಸಯ್
ಅಣ್ಣಾ ಮಕ್ಕಳರು ವೈದರಾ ಸಯ್
ಮಕ್ಕಳ ಕರೆಕಳಿಸಿ ನೋಡರಾ ಸಯ್
ಮಕ್ಕಳ ಕೂಟನೆ ಅಮ್ಮಯ್ಯಾ ಸಯ್
ನನ್ನ ಕುತ್ತಿಗೆ ಕೊಯ್ಯಿಸಮ್ಮ
ಮಕ್ಕಳ ಕೈ ಕೂಟಮ್ಮಾ
ನನ್ನ ಕುತ್ತಿಗೆ ಕೊಯ್ಯಿಸಮ್ಮ
ನನಗೆ ಮೊಮ್ಮಗ ಹುಟ್ಯಾನ ಸಯ್
ಒಬ್ಬ ಮೊಮ್ಮಗ ಹುಟ್ಯಾನ ಸಯ್
ನಿನ್ನ ಮೊಗನ ಕರೆಕಳಿಸರಾ ಸಯ್
ಮೊಮ್ಮಗನ ಗೂಟ ನೋಡರಾ ಸಯ್
ನನ್ನ ಜೀವಾನೆ ತಗಿಸಮ್ಮಾ
ಮೊಮ್ಮಗನ ಕೂಟ ನೋಡಮ್ಮ
ನನ್ನ ಜಲ್ಮ ತಗಿಸಮ್ಮಾ

ಅಂದರೆ ಅಂತಬಾಯಿ ಏನಂತಾಳ ನೋಡ ಮಾವ ಅವ್ರಿಗೆ ಮದ್ವಿ ಇಲ್ಲ,

ಈಗ ಕೈಗೆ ಬಂದಾರ
ಈಗ ತಂದಿನ ಕಡಿದು
ನೀನಂದರೆ ಉಚ್ಯಾದೋನು
ಮಕ್ಕಳಿಲ್ಲದೋನ ಪರಜಂಜವನು ಆಹಾ
ಹೊಟ್ಯಾಗ ಹುಟ್ಡಿದ ಮಕ್ಕಳು
ಅಣ್ಣಾನ ಮಕ್ಕಳೆಲ್ಲಾ ನಮ್ಮ ಮಕ್ಕಳು ಅಂತಾ ಭಾವಿಸಿಕೆಂಲಿಲ್ಲಾ ಆಹಾ
ನೀನೆ ಕಡಿಸಿಬಿಟ್ಟೆ ಆಹಾ
ಅಡೇವನ ಬೆಳಸವನ ಹಾಳು ಮಾಡಿಬಿಟ್ಟೆ ಆಹಾ
ಮಕ್ಕಳು ಬಂದು ನಿನ್ನ ಕಡಿದು
ಕರ್ಮ ಕಟ್ಟಿಕಂಡು ಸಾಯಂತೀಯಾ ಆಹಾ
ಮೊಮ್ಮಗ ಬಂದು ತಾತನ ಕಡಿದು
ಈಗ ಬೆಳಿಲಾರದಂಗ ಹಾಳಾಗಿ ಹೋಗು ಅಂತೀಯಾ ಆಹಾ

ಅಂಗಲ್ಲಾ, ಈಗ ನನ ಗಂಡನ ನೀನು ಕಡದೀಯಾ ನಿನ್ನ ನಾನು ಕಡಿತೀನಿ ಆಹಾ,