ಮಾಲೇರ ವೇಷಭೂಷಣ

ಮಾಲೇರು ಸಮುದಾದಯದ ಮಹಿಳೆ ತನ್ನ ವೃತ್ತಿಗೆ ಅನುಗುಣವಾದ ಉಡುಪನ್ನು ಧರಿಸುತ್ತಾಳೆ. ಇವಳು ಕರ್ನಾಟಕದಲ್ಲಿರುವ ಬ್ರಾಹ್ಮಣ, ಶೆಟ್ಟಿ,ಲಿಂಗಾಯಿತ, ಗೌಡ ಈ ವರ್ಗಗಳ ಮನೆ, ಹೊಲ, ಗದ್ದೆ, ತೋಟಗಳ ಕೂಲಿ ಕೆಲಸ, ದೇವಾಲಯಗಳ ಸೇವೆಯೇ ಇವರ ಪ್ರಧಾನ ಕಸುಬಾಗಿದೆ. ಈ ವೃತ್ತಿಗಳಿಗೆ ಅನುಗುಣವಾಗಿ ವೇಷಧರಿಸುತ್ತಾರೆ. ಕೃಷಿ ಕೂಲಿ ಮಾಡುವುದು ಗ್ರಾಮೀನ ಪ್ರದೇಶಗಳಲ್ಲೆ ಅದರಲ್ಲೂ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಸುತ್ತಮುತ್ತ ಪ್ರಧಾನವಾಗಿ ಬೆಳೆಯುವ ತೋಟದ ಬೆಳೆಗಳು ವಿಳ್ಳೆದ ಎಲೆ, ಅಡಕೆ.ಇವುಗಳನ್ನು ಕೊಯ್ಯುವಾಗಾಗಲಿ,ತೋಟದ ಬೇರೆ ಕೆಲಸ ಮಾಡುವಾಗಾಗಲಿ ಅವರು ತೊಡುವ ಉಡುಪುಗಳೇ ಬೇರೆ. ಇಲ್ಲಿ ಗಂಡಸರು, ಹೆಂಗಸರು ಇಬ್ಬರು ಸಹಕಾರದಿಂದ ಕೆಲಸ ಮಾಡುತ್ತಾರೆ. ವಿಳ್ಳೆದ ಎಲೆ ಹಂಬಿನಿಂದ ಎಲೆಯನ್ನು ಅಡಿಕೆ ಮರದಿಂದ ಅಡಿಕೆಯನ್ನು ಕೊಯ್ಯುವವರು ಗಂಡಸರೇ. ಇವರ ಜೊತೆಗೆ ಎಲೆಯನ್ನು, ಜೋಡಿಸುವ, ಅಡಿಕೆಯನ್ನು ಆಯುವ ಕೆಲಸ ಹೆಂಗಸರು ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರ ತೊಡುವ ಉಡುಪುಗಳು ಬಹಳ ವಿಶೇಷವಾದವು. ಹೆಂಗಸರು ಗಂಡಸರೆಲ್ಲ ತೋಟದ ಕೆಲಸ ಮಾಡುವಾಗ ತಲೆಗೆ ಅಡಕೆಯ ಹಾಳೆಯಿಂದ ಮಾಡಿದ ’ಹಾಳೆಟೋಪಿ’ಯನ್ನು ಗೋಣಿಚೀಲದಿಂದ ಮಾಡಿದ ಗೊರಬನ್ನು ಇಲ್ಲವೆ ಎಲೆಗಳಿಂದ ಮಾಡಿದ ಗೊರಬನ್ನು ಹಾಕಿಕೊಂಡು ಒಂದು ಕತ್ತಿಯನ್ನೋ, ಕುಡುಗೋಲನ್ನು ಸೊಂಟಕ್ಕೆಕಟ್ಟಿಕೊಂಡು ಹೋಗುತ್ತಾರೆ. ಇವು ಅಲ್ಲಿಯ ಕೆಲಸದ ವಿಶೇಷ ಉಡುಪುಗಳು. ಎಲೆ ಕೊಯ್ಯುವಾಗ ಹೆಬ್ಬೆರಳಿಗೆ ಕಬ್ಬಿಣದ್ದೊ ಇಲ್ಲ ತಾಮ್ರದ್ದೋ ಉಗುರು ಪಟ್ಟಿ ಹಾಕಿಕೊಂಡು ಎಲೆಯ ತೊಟ್ಟನ್ನು ಕಟ್ಟು ಮಾಡುತ್ತಾರೆ. ವಿಳ್ಳೆದ ಎಲೆ, ಅಡಕೆಯನ್ನು ಕೊಯ್ಯುವಾಗ “ಕೊಟ್ಟೆಮಣೆ” ಯನ್ನು ಹಾಕಿ ಕುಳಿತು ಕುಯ್ಯುತ್ತಾರೆ. ಈ “ಕೊಟ್ಟೆಮಣೆ” ಯನ್ನು ಎಲೆ, ಅಡಕೆ ಕೊಯ್ಯುವ ಮರಕ್ಕೆ ನೇತುಹಾಕಿಕೊಂಡು ಮಧ್ಯ ಕುಳಿತು ಎಲೆ ಅಡಕೆ ಕೆಡವಲು ಅನುಕೂಲ ಆಗುವಂತೆ ಕಟ್ಟಿಕೊಂಡು ಕೂರುತ್ತಾರೆ.

’ಹಾಳೆ ಟೋಪಿ’ಯನ್ನು ಹೆಂಗಸರು ಮತ್ತು ಗಂಡಸರೆಲ್ಲ ’ಅಡಕೆ ಪಟ್ಟಿಯ ಈ ಟೋಪಿ ತಂಪೆಂದು’ ತಮ್ಮ ತಲೆಯ ರಕ್ಷಣೆಗಾಗಿ ಧರಿಸುತ್ತಾರೆ. ಅಡಕೆ ಪಟ್ಟಿಯನ್ನು ತಲೆಯ ಟೋಪಿಗಾಗುವಷ್ಟು ಕತ್ತರಿಸಿ ಹಿಂದೆ-ಮಂದೆ ಎರಡು ಕಡೆ ಗುಪ್ಪು ಗುಪ್ಪಗೆ ಅಂಚುಗಳನ್ನು ಸೇರಿಸಿ ಕಟ್ಟಿ ತಲೆಗೆ ಸರಿಯಾಗಿ ಕೂರುವಂತೆ ಅಗಲವಾಗಿ ಕಟ್ಟಿರುತ್ತಾರೆ. ಈ ಟೋಪಿಯನ್ನು ಗಂಡಸರು ಉದ್ದುದದ್ದ ಹಾಕಿದರೆ; ಹೆಂಗಸರು ಅಡ್ಡಡ್ಡ ಹಕುತ್ತಾರೆ. ಏಕೆಂದರೆ ಅವರ ತಲೆಯ ತುರುಬಿಗೆ, ಕೂದಲಿಗೆ ಹಾಕಿ ತೆಗೆಯುವಾಗ ಏಟಾಗದಿರಲೆಂದು.

ಈ ಕೆಲಸ ಮಾಡುವಾಗ ಹಾಕುವ ಗೊರಬು ಮಳೆಗಾಲದಲ್ಲಿ, ಚಳಿಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಈ ಮೂರು ಕಾಲಗಳಲ್ಲೂ ಕೆಲಸ ಮಾಡಲು ಜನಕ್ಕ ಎಉಪಯೋಗವಾಗುತ್ತದೆ. ಇದನ್ನು ಮರಗಳ ದೊಡ್ಡ ದೊಡ್ಡ ಎಲೆಗಳಾದ ತೇಗ, ಮುತ್ತುಗದಂತಹ ಎಲೆಗಳನ್ನು ಬಿಡಿಸಿ ತಂದು ಒಣಗಿಸಿ ಬಿದಿರ ದಬ್ಬೆಯನ್ನು ಕಟ್ಟಿ, ಅವರ ಮೇಲೆ ಒಣಗಿದೆಲೆಗಳ ಮೇಲೆ ನೀರು ಚಿಮುಕಿಸಿ ಮೆತ್ತಗೆ ಮಾಡಿ ದಾರದಿಂದ ಕೊಣಿಸಿ (ಹೊಲೆದು) ಬಿದಿರ ದಬ್ಬೆಗಳಿಗೆ ಸುತ್ತ ಜೋಡಿಸಿ ಮಾಡುತ್ತಾರೆ. ಇದು ಇವರ ತೋಟದ ಕೆಲಸದ ವಿಶೇಷ ಉಡುಪು,.

ಹೊಲ, ಗದ್ದೆ, ಮನೆ ಮತ್ತಿತರ ಕೆಲಸಗಳಲ್ಲಿ ಆಯಾ ಕೆಲಸಕ್ಕೆ ಅನುಗುಣವಾಗಿ ಆಯಾ ಪ್ರಾದೇಶಿಕ ಭಿನ್ನತೆಯಿಂದ ಉತ್ತಮ ಜಾತಿಯವರ ಬಟ್ಟೆಗಳಿಗೆ ಸಮನಾಗಿಲ್ಲದಂತಹ ಕಡಿಮೆ ದರ್ಜೆಯ ಉಡುಪುಗಳನ್ನು ಇವರು ಧರಿಸಬೇಕಾಗಿತ್ತು. ಏಕೆಂದರೆ ಉತ್ತಮರ ಮನೆಯಲ್ಲಿ ಅವರ ಸೇವೆಯಾಗಲಿ, ಕೂಲಿಯಾಗಲಿ ಮಾಡುತ್ತಿದ್ದರಿಂದ. ಅದರಲ್ಲೂ ಬ್ರಾಹ್ಮಣರು ಧರಿಸುವ ಉತ್ತಮ ಬಟ್ಟೆಗಳನ್ನು ಹೆಣ್ಣಾಗಲಿ, ಗಂಡಾಗಲಿ ಯಾರು ಧರಿಸುವಂತಿರಲಿಲ್ಲ. ಉತ್ತಮ ಜಾತಿಯವರ ಮನೆಯಲ್ಲೇ ಕೆಲಸ ಮಾಡುತ್ತಿದ್ದರಿಂದ ಇವರು ಉಟ್ಟು ಹಳೆಯದಾದ ಮೇಲೆ ಅವರ ಬಟ್ಟೆಗಳನ್ನು ಈ ಮಾಲೇರು ಕೂಲಿಯವರಿಗೆ ಕೊಡುತ್ತಿದ್ದರು. ಬಡವರಾದ ಇವರು ನಮ್ಮ ಅಯ್ಯ, ಅಮ್ಮಂದಿರ ಬಟ್ಟೆಗಳೆಂದು ಸಂತೋಷದಿಂದಲೇ; ಹರಿದಿದ್ದರೆ ಪ್ಯಾಚ್ ಹಾಕಿ ಹೊಲೆದುಕೊಂಡು ಉಡುತ್ತಿದ್ದರು. ಹಬ್ಬ ಹರಿದಿನಗಳಾದಾಗ, ವಿಶೇಷ ಕಾರ್ಯಕ್ರಮಗಳಾದಾಗ ಹೊಸ ಬಟ್ಟೆ ತೊಡುವಂತಹ ಸಂದರ್ಭ ಬಂದಾಗ ಮಾರಿಗೆ ಬಟ್ಟೆ ಧರಿಸುತ್ತಿದ್ದರು. (ಅಂದರೆ ಇವತ್ತು ಮಾರಾಟ ಮಾಡುವ ರೆಡಿಮೇಡ್ ಬಟ್ಟೆಗಳು, ಆದರೆ ಇವತ್ತಿನ ಬಟ್ಟೆಯಂತಹ ಹೊಲಿಗೆ ಉತ್ತಮ ಬಟ್ಟೆಗಳಲ್ಲ) ಈ ಮಾರಿಗೆ ಬಟ್ಟೆಗಳು ಆಯಾ ಊರುಗಳ ಸುತ್ತಮುತ್ತ ಸಂತೆಗಳಾದರೆ, ಜಾತ್ರೆಗಳಾದರೆ ಮಾತ್ರ ಅಲ್ಲಿಗೆ ತಂದು ಮಾರುತ್ತಿದ್ದರು. ಅಲ್ಲಿಗೆ ಹೋಗಿ ಅವರವರ ಅಳತೆಗೆ ಅನುಗುಣವಾಗಿ ಹುಡುಕಿಕೊಂಡು ತರುತ್ತಿದ್ದರು. ಇವರ‍್ಯಾರು ಹೊಸ ಬಟ್ಟೆ ತಂದು ಹೊಲಿಸಿಕೊಂಡು ತೊಡುವ ಸ್ಥಿತಿಯಲ್ಲಿರಲಿಲ್ಲ. ಹಾಗೇನಾದರೂ ತೊಟ್ಟರೆ ಬೇರೆ ಜನಗಳು ಅದನ್ನು ಸೈರಿಸುತ್ತಿರಲಿಲ್ಲ. ಇಂತಹ ಇತಿಮಿತಿಯೊಳಗೆ ಉಡುವ, ತೊಡುವ, ಊಟ ಮಾಡುವ, ತಿರುಗುವ, ಯಾವ ಸ್ವತಂತ್ರವಾದ ಬದುಕಿಲ್ಲದೆ ಎಲ್ಲ ನಿರ್ಬಂಧಿತ ಬದುಕೆ ಇವರ ಪಾಲಿಗೆ ಕಟ್ಟಿಟ್ಟ ಬುತ್ತಿಯಾಗಿತ್ತು.

ಮಾಲೇರ ಮಹಿಳೆಯರು ಬ್ರಾಹ್ಮಣ ಮಹಿಳೆಯರಂತೆ ಸ್ನಾನ ಮಾಡಿ ತಲೆಗೆ ಕ್ರಾಫ್ ತೆಗೆದು ಓರೆ ಅಥವಾ ಮಧ್ಯ ಬಕ್ತಾಲೆ(ಕ್ರಾಫ್) ತೆಗೆದು ತಲೆ ಬಾಚುವಂತಿರಲಿಲ್ಲ. ಜಡೆ ಹೆಣೆದು ತುರುಬು ಹಾಕಿ, ಏರುಪಿನ್ನುಗಳನ್ನು ಹಾಕಿ ತಲೆ ಕಟ್ಟುವಂತಿರಲಿಲ್ಲ. ಜಡೆ ಹೆಣೆದು ತುರುಬು ಹಾಕಿ, ಏರುಪಿನ್ನುಗಳನ್ನು ಹಾಕಿ ತಲೆ ಕಟ್ಟುವಂತಿರಲಿಲ್ಲ. ತಲೆ ಬೆಳೆದಿದ್ದರೆ ಅದನ್ನು ಸುತ್ತಿ ಅರಬಳ್ಳು(ಹಳೆಯ ಗಟ್ಟಿ ಬಟ್ಟೆಯ ದಾರ) ವಿನಿಂದ ಕಟ್ಟಿಕೊಳ್ಳಬೇಕಾಗಿತ್ತು. ಸೀರೆ, ರವಿಕೆ ತೊಡುವಾಗಲು ಬ್ರಾಹ್ಮಣರಾಗಲಿ, ಮೇಲ್ಜಾತಿಯ ಶ್ರೀಮಂತ ಮಹಿಳೆಯರು ಯಾರೇ ಆಗಲಿ ಅವರು ಒಳ ಉಡುಪು ಲಂಗ, ಬ್ರಾ ತೊಟ್ಟು ಸೀರೆ ರವಿಕೆ ತೊಡುತ್ತಿದ್ದರು. ಆದರೆ ಮಾಲೇರ ಮಹಿಳೆಯರು ಈ ಯಾವ ಒಳ ಉಡುಪುಗಳನ್ನು ತೊಡದೆ ಕೇವಲ ಸೀರೆ ರವಕೆಯನ್ನು ಅವು ಹರಿದಿದ್ದರು ಹಾಗೆ ಪ್ಯಾಚ್ ಹಾಕಿಕೊಂಡು ಹೊಲೆದುಕೊಂಡು ತೊಡಬೇಕಾಗಿತ್ತು. ಅಕಸ್ಮಾತ್ ಯಾರಾದರು ಈ ನಿರ್ಬಂಧವನ್ನು ಸೈರಿಸದೆ ಚಂದಕ್ಕಾಗಿ ಇಷ್ಟವಾಗಿ ತೊಟ್ಟರೆ ಉತ್ತಮ ಜಾತಿಗೆ ಸಮನಾಗಿ ಇವರು ವೇಷ-ಭೂಷಣಗಳನ್ನು ತೊಟ್ಟು ನಡೆದರೆ ಉತ್ತಮರಿಂದ, ಹಿರಿಯವರಿಂದ ಟೀಕೆಗೆ, ತಿರಸ್ಕಾರಕ್ಕೆ ಗುರಿಯಾಗುತ್ತಿದ್ದರು. ಹಾಗಾಗಿ ಮೇಲ್ಜಾತಿಯವರೊಳಗೆ ಈ ಜನ ತಗ್ಗಿ ಬಗ್ಗಿ ತಮ್ಮ ಆಸೆ ಆಕಾಂಕ್ಷೆಗಳನ್ನೆಲ್ಲ ಸುಟ್ಟುಕೊಂಡು ದೇಹ, ಮನಸ್ಸುಗಳನ್ನೆಲ್ಲ ಮುದುಡಿಕೊಂಡು ಬಾಳಬೇಕಾಗಿತ್ತು. ಆದರೆ ಈಗ ಈ ಸಮುದಾಯ ಹಿಂದಿನ ಎಲ್ಲ ನಿರ್ಬಂಧಗಳನ್ನು ಮೀರಿ ಕಳೆದ ೫೦ ವರ್ಷಗಳನ್ನು ದಾಟಿ ಹೊರ ಬಂದಿದ್ದಾರೆ.

ಹಾಗೆ ನೋಡಿದರೆ ಮಾಲೇರು ಸಮುದಾಯ ಕರ್ನಾಟಕದಲ್ಲಿ ತುಂಬ ಕಡಿಮೆ ಜನರಿರುವುದರಿಂದ ಇವರು ಆಯಾ ಪ್ರದೇಶದ ಪ್ರಧಾನ ಜಾತಿಗಳ ವೇಷ-ಭೂಷಣಗಳನ್ನು ಅವರ ಮಾರ್ಗದಶನದಂತೆ ಅನುಸರಿಸುತ್ತ ಬಂದು ಈಗ ಇವರಿಗೆ ಇವರ ಬೆಳವಣಿಗೆಗೆ, ಅಂತಸ್ಥಿಗೆ, ಗೌರವಕ್ಕೆ ಯಾವುದು ಹೊಂದಿಕೆ ಆಗುತ್ತದೊ ಅಂತಹ ಬಟ್ಟೆ-ಒಡವೆಗಳನ್ನು ಧರಿಸುತ್ತಾರೆ. ಹಳ್ಳಿಗಳಲ್ಲಿ ಮಾತ್ರ ಮೇಲ್ಜಾತಿಯವರನ್ನೆ ಅವಲಂಬಿಸಿರುವ ಕುಟುಂಬಗಳನ್ನು ಬಿಟ್ಟು ಉಳಿದವರೆಲ್ಲ ತಮ್ಮ ಸ್ವಾತಂತ್ರಕ್ಕೆ ಅನುಗುಣವಾಗಿ ಬದುಕುತ್ತಿದ್ದಾರೆ. ಹಾಗಾಗಿ ಈ ಸಮುದಾಯಕ್ಕೆ ಬೇರೆ ಬುಡಕಟ್ಟು ಜನರಂತೆ ತನ್ನದೆ ಆದ ಭಾಷೆಯಾಗಲಿ ವೇಷ-ಭೂಷಣವಾಗಲಿ ಕಂಡುಬರುವುದಿಲ್ಲ. ಆದರೆ ಎಲ್ಲರು ಬಡತನದ ಬೇಗೆಯಲ್ಲಿ ಶೋಷಣೆಯ ಹಿಂಸೆಯಲ್ಲಿ ನೊಂದು ಬೆಂದು ಎಚ್ಚೆತ್ತುಕೊಂಡವರಾಗಿ, ಬದಲಾವಣೆಯ ದಾರಿ ಹಿಡಿದಿದ್ದಾರೆ. ಆದ್ದರಿಂದಲೇ ಈ ಸಮುದಾಯ ಬೆಂಗಳೂರು,ಮೈಸೂರು, ಶಿವಮೊಗ್ಗ, ಬಿಜಾಪುರ, ಚಿಕ್ಕಮಗಳೂರು ಹೀಗೆ ಯಾವ ಪ್ರದೇಶದಲ್ಲಿರಲಿ ಇವರನ್ನು ನೋಡಿ ಇವರ ಭಾಷೆ ಇರಬಹುದು. ವೇಷಭೂಷಣಗಳಿರಬಹುದು. ಸಂಸ್ಕೃತಿಯಾಚರಣೆಗಳಿರಬಹುದು ಯಾವುದರಿಂದಲೂ ಇವರು ಮಾಲೇರು ಜನಾಂಗವೆಂದು ಗುರುತಿಸಲಾಗುವುದಿಲ್ಲ. ಇವರು ಆಯಾ ಪ್ರದೇಶಕ್ಕೆ ಅನುಗುಣವಾಗಿ ಹೊಂದಿಕೊಂಡು, ಎಲ್ಲವು ಮಿಶ್ರಣಗೊಂಡ, ಒಂದು ವಿಶಿಷ್ಟ ಜೀವನ ಪದ್ಧಿತಿಯ ಅಪರೂಪದ ಜನ ಸಮುದಾಯವಾಗಿ ಮಾಲೇರು ಮಹಿಳೆಯರು ಕಂಡುಬರುತ್ತಾರೆ.

ಕುಟುಂಬ, ಜೀವನ ಪದ್ಧತಿ

ಕರ್ನಾಟಕದ ಮಾಲೇರು ಸಮುದಾಯದ ’ಕುಟುಂಬ ಪದ್ಧತಿ ಮತ್ತು ಜೀವನ ಸ್ವಾತಂತ್ರ‍್ಯ ಪೂರ್ವದ ದಿನಗಳಲ್ಲಿ ಮಹಾನ್ ಶೋಚನೀಯ ಸ್ಥಿತಿಯಲ್ಲಿತ್ತು. ಆ ಕಾಲದಿಂದ ಈ ಸಮುದಾಯದ ಮೂಲವಾದ ಹೆಣ್ಣಿನ ಜೀವಕ್ಕೆ ಇಲ್ಲದ ಬಾಳಗಿತ್ತು. ಬದುಕು ಬಾಲವಿಧವೆಯಾದ, ದೇವದಾಸಿಯಾದ, ಮದುವೆಗೆ ಮುನ್ನ ಮೈನೆರೆದ ಹೆಣ್ಣು, ಹೀಗೆ ನಾನಾ ಕಾರಣಗಳಿಂದ ಉತ್ತಮ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿದ್ದಳು. ಇವರೆಲ್ಲ ತಮ್ಮ ತಮ್ಮ ಮುಗ್ಧತೆಯಿಂದ ಶಿಕ್ಷಣವಿಲ್ಲದೆ, ತಿಳುವಳಿಕೆಯಿಲ್ಲದೆ ಪುರುಷರ ಪ್ರಾಬಲ್ಯಕ್ಕೆ ಒಳಪಟ್ಟಿದ್ದರು. ಪುರೋಹಿತರ ಮಾನಸಿಕ, ದೈಹಿಕ ಶೋಷಣೆಗೆ ಒಳಪಟ್ಟು ಪಡೆದ ಮಕ್ಕಳಿಗೆ ತಾನೆ ತಂದೆ ತಾಯಿ ಬಂಧು-ಬಳಗವೆಂಬ ಸರ್ವ ಸಂಬಂಧವಾಗಿದ್ದಳು. ಹೀಗೆ ತನ್ನ ಮಕ್ಕಳನ್ನು ತಾನೆ ಹೆತ್ತು ಹೊತ್ತು ರಕ್ಷಿಸಿ ಕಾಪಾಡಿದಳು. ಇಂತಹ ತಾಯಂದಿರ ಮಕ್ಕಳಿಗೆ ತಂದೆಯ ಹೆಸರು ಹೇಳಿಕೊಂಡು ಬದುಕುವ ಸ್ವಾತಂತ್ರ‍್ಯವಿಲ್ಲದೆ ಸಮಾಜದಿಂದ ತಿಸ್ಕೃತವಾಗಿ, ಅವರಿಂದ ಕೀಳಾಗಿ ಕಾಣಲ್ಪಟ್ಟು ದೈಹಿಕ, ಮಾನಸಿಕ ಹಿಂಸೆಗೊಳಪಟ್ಟ ಪಾರಂಪರಿಕ ಗುಂಪೆ ಈ ಮಾಲೇರು. ಹಾಗಾಗಿ ಈ ಸಮುದಾಯದ ಮೂಲ ಕೇಂದ್ರ ಹೆಣ್ಣೆ. ಆದ್ದರಿಂದಲೇ ಮಾಲೇರು ಜನಾಂಗ ಮಾತೃಕೇಂದ್ರ ಕುಟುಂಬ ಮತ್ತು ಸಮಾಜವಾಗಿ ರೂಪುಗೊಂಡಿದೆ.

ಮಾಲೇರು ಸಮುದಾಯದ ಅದರಲ್ಲೂ ದೇವದಾಸಿ ಆದವರ ವಿವಾಹ ಮತ್ತು ಕುಟುಂಬ ಪದ್ದತಿ ಹೇಗಿತ್ತು ಎಂಬುದಕ್ಕೆ ಮಾಲೇರು (ಗಿರಿಜನ) ವರ್ಗದ ಸಂಘ, ಶಿವಮೊಗ್ಗ ಇದರ ಪ್ರತಿನಿಧಿಗಳಿಗೆ ಇಬ್ಬರು ದೇವದಾಸಿಯರಾದ ಪುಟ್ಟಮ್ಮ ಮತ್ತು ಲಕ್ಷ್ಮಮ್ಮನವರು ಬರೆದುಕೊಂಡ ಅರ್ಜಿಯ ಪೂರ್ಣ ಮಾಹಿತಿಯನ್ನುಇಲ್ಲಿ ಉಲ್ಲೇಖಿಸುತ್ತಿದ್ದೇನೆ.

೧) ಕರ್ನಾಟಕ ರಾಜ್ಯದ ಮಾಲೇರು(ಗಿರಿಜನ) ವರ್ಗದ ಸಂಘ (೨) ಶಿವಮೊಗ್ಗ

ಈ ಸಂಘದ ಪ್ರತಿನಿಧಿಗಳಲ್ಲಿ ಕೊಪ್ಪ ತಾಲ್ಲೂಕು ಕಸಬ ಹೋಬಳಿ ಬಂದಿಗೇರೆ ಗ್ರಾಮದ ಮೇಲು ಕೊಪ್ಪದ ವಾಸಿ ಪುಟ್ಟಮ್ಮನ ಹೇಳಿಕೆ ಏನೆಂದರೆ

ನಮ್ಮ ಪೂರ್ವಿಕರ ಪರಂಪರಾಗತವಾದ ದೇವರಿಗೆ ಧಾರೆಯೆರೆಯುವ ಪದ್ಧತಿಯ ಪ್ರಕಾರ ನನ್ನನ್ನು ಈಗ್ಗೆ ೪೦ ವರ್ಷಗಳ ಹಿಂದೆ ದೇವರಿಗೆ ಧಾರೆಯೆರೆದಿರುತ್ತಾರೆ. ದೇವರಿಗೆ ಧಾರೆಯೆರೆಯುವ ಕ್ರಮ ಏನೆಂದರೆ ನಮ್ಮ ವಂಶದಲ್ಲಿ ತುಳಸೀಕಟ್ಟೆಯ ಮುಂದೆ ಕೂರಿಸಿ ತುಳಸೀ ದೇವರಿಗೆ ನನ್ನಿಂದ ಪೂಜೆ ಮಾಡಿಸಿ ನಮ್ಮ ಪೂರ್ವಿಕರು ಮತ್ತು ನಮ್ಮ ವಂಶದವರೊಂದಿಗೆ ನನ್ನ ತಾಯಿಯರು ನನ್ನ ಕೈಯಲ್ಲಿ ಮಾಂಗಲ್ಯಗಳನ್ನು ಕೊಟ್ಟು ಅದನ್ನು ನನ್ನ ಕೈಯಲ್ಲಿಯೇ ನನ್ನ ಕೊರಳಿಗೆ ಕಟ್ಟಿಕೊಳ್ಳುವಂತೆ ತಿಳಿಸಿದರು. ಅದರಂತೆ ಮಾಂಗಲ್ಯವನ್ನು ಕಟ್ಟಿಕೊಂಡಿರುತ್ತೇನೆ. ಇದೇ ದೇವರಿಗೆ ಧಾರೆ ಎರೆಯುವ ಕ್ರಮ.

೪ ವರ್ಷಗಳ ನಂತರ ಗುಡ್ಡೇಕೊಪ್ಪದ ಅನಂತಯ್ಯನವರ ಜೊತೆ ಸೇರೆ ಒಂದನೇ ವೆಂಕಟೇಶ, ಎರಡನೇ ಲಕ್ಷ್ಮೀದೇವಿ, ಮೂರನೆಯದಾಗಿ ತಾರಾ ಮತ್ತು ನಾಲ್ಕನೆಯದಾಗಿ ಶಾರದೆ ಎಂಬ ಈ ನಾಲ್ಕು ಜನ ಮಕ್ಕಳು ಹುಟ್ಟಿರುತ್ತಾರೆ. ಸದರಿ ಅನಂತಯ್ಯನವರು ಸ್ವರ್ಗಸ್ಥ-ರಾಗಿರುತ್ತಾರೆ. ಇದೇ ನಮ್ಮ ವಂಶಪಾರಂಪರೆಯಾಗಿ ಬಂದಿರುವ ಪದ್ಧತಿಯಾಗಿರುತ್ತದೆ.

ಪುಟ್ಟಮ್ಮನವರ ಹೆಬ್ಬೆಟ್ಟಿನ ಸಹಿ ಇದೆ
೧೨-೦೧-೧೯೭೫

ಕೆಳಗಿನ ಸಾಕ್ಷಿದಾರರ ಸಹಿ ಇದೆ.
ಕೆ.ಸಿ. ಸೀತಾರಾಮಯ್ಯ
ಕೆ.ಎಂ.ರಾಮಚಂದ್ರ
ಎಸ್.ಅನಂತಯ್ಯ
ಕೆ. ಶ್ರೀನಿವಾಸಯ್ಯ
ಹೆಚ್.ಎಸ್.ನಾಗರಾಜರಾವ್

II)

ಕರ್ನಾಟಕ ರಾಜ್ಯ
ಮಾಲೇರು(ಗಿರಿಜನ) ವರ್ಗದ ಸಂಘ(ರಿ)}
ಶಿವಮೊಗ್ಗ
ಕಾರ್ಯಾಲಯ, ಬೆಂಗಳೂರು
ದಿನಾಂಕ ೬-೧-೧೯೭೫

ಮಾಲೇರು ಸಂಘದ ಪ್ರತಿನಿಧಿಗಳಲ್ಲಿ ಕೊಪ್ಪ ತಾಲ್ಲೂಕ್ ಕಸಬಾ ಹೋಬಳಿ ಬೊಮ್ಮಾಪುರ ಗ್ರಾಮದ ಮಠಗೋಡು ವಾಸಿ ಲಕ್ಷ್ಮಮ್ಮನ ಹೇಳಿಕೆ ಏನೆಂದರೆ

ನನಗೆ ಕೈ ಕಾಲು ಇಲ್ಲದ ಪ್ರಯುಕ್ತ ನಮ್ಮ ಪೂರ್ವಿಕರು ವಂಶಪರಂಪರೆಯಾಗಿ ದೇವರಲ್ಲಿ ಒಲವಿರುವುದರಿಂದ ನನ್ನನ್ನು ಕೂಡ ನಮ್ಮ ವಂಶಪರಂಪರೆ ಪದ್ಧತಿ ಪ್ರಕಾರ ಅಂತೆಯೇ ದೇವರಿಗೆ ಧಾರೆ ಎರೆದಿರುತ್ತಾರೆ. ದೇವರಿಗೆ ಧಾರೆ ಎರೆಯುವುದು ಹೇಗೆ ಎಂದರೆ,

ನನ್ನನ್ನು ಈಗ್ಗೆ ಸುಮಾರು ೨೫ ವರ್ಷಗಳ ಹಿಂದೆ ನನ್ನನ್ನು ದೇವರ ಮುಂದೆ ಮಣೆಯನ್ನು ಹಾಕಿ ಕುರಿಸಿ, ಪೂರ್ವ ಪದ್ಧತಿ ಪ್ರಕಾರ ನನ್ನಕೈಯಲ್ಲಿ ಮಾಂಗಲ್ಯವನ್ನು ಕೊಟ್ಟರು.ನನ್ನ ಪೂರ್ವಿಕರು ನನಗೆ ಕೊಟ್ಟು ಆ ತಾಳಿಯನ್ನು ನನ್ನ ಪೂರ್ವಿಕರು ಹೇಳಿದಂತೆ ನನ್ನ ಕೈಯಲ್ಲೇ ನಾನೇ ಕಟ್ಟಿಕೊಂಡಿದ್ದೇನೆ. ನಂತರ ಇವಾಗಿನ ನವನಾಗರಿಕತೆಯಂತೆ ನನಗೆ ಆರಕ್ಷತೆ ಪೂರೈಸುತ್ತಾರೆ. ನಂತರ ಸುಮಾರು ೨ ವರ್ಷಗಳನಂತರ ಗೋವಿಂದಯ್ಯ(ಮಠಗೋಡು) ಜೊತೆ ಸೇರಿಕೊಂಡು ಒಂದು ಗಂಗುಮಗು ಜನಿಸಿರುತ್ತೇ. ಇದೇ ನಮ್ಮ ಪೂರ್ವಿಕರ ಪದ್ಧತಿಯಂತೆಯೇ ಅನುಸರಿಸಿಕೊಂಡು ಬಂದಿರುತ್ತೇನೆ. ನನಗೆ ಆಸ್ತಿ, ಮನೆ ಯಾವುದು ಇಲ್ಲ. ನಾನು ಕಷ್ಟದಿಂದ ಜೀವನ ಮಾಡುತ್ತಿದ್ದೇನೆ.

ಇಂತಿ ಲಕ್ಷ್ಮಮ್ಮ
ಹೆಬ್ಬೆಟ್ಟಿನ ಸಹಿ ಇದೆ.

ಸಾಕ್ಷಿಗಳು
ಎಂ.ಸುಬ್ರಾಯ ಮಠದಬಾಗಿಲು
ಹೆಚ್.ಎಸ್.ನಾಗರಾಜರಾವರ‍್ ಆತ್ರೆಮನೆ
ಕೆ.ಸಿದ್ದಪ್ಪಗೌಡ ಪಟೇಲ್
ಕಗ್ಗ ಶೇಷಪ್ಪ ನಾಯ್ಕ
ಎಂ.ಎನ್.ಮಂಜುನಾಥ ಭಟ್ಟ
ರುಕ್ಮಿಣಿಯಮ್ಮ}
ಎಂ.ಜಿ.ಸುಬ್ಬಣ್ಣ
ಕೆ.ಎಸ್.ಪದ್ಮನಾಭಗೌಡ
ಬಿ.ಬಿ.ಲಕ್ಷ್ಮೀನಾರಾಯಣ

ಈ ಒಂಬತ್ತು ಜನ ಸಹಿ ಮತ್ತು ವಿಳಾಸಗಳು ಲಕ್ಷ್ಮಮ್ಮ ಬರೆಸಿಕೊಟ್ಟ ವಿವರದ ಪತ್ರದಲ್ಲಿವೆ.

ದೇವದಾಸಿ ಪದ್ಧತಿ ಮತ್ತು ಇವರ ಸಂಸಾರದ ವ್ಯವಸ್ಥೆಯ ಹಿನ್ನೆಲೆ ಬ್ರಾಹ್ಮಣ ಸಮಾಜ, ಸಂಸ್ಕೃತಿಗೆ ಒಂದು ಕಪ್ಪುಚುಕ್ಕಿ. ಇಂತಹ ಸಮಾಜದಿಂದ ಬೆಳೆದು ಬಂದ ಹೆಣ್ಣು ತಾಯಿಯಾಗಿ ತನ್ನ ಮಕ್ಕಳನ್ನು ಪೊರೆದವಳು. ಇವಳ ಗಂಡು ಮಕ್ಕಳೆ ಇವತ್ತಿನ ಕುಟುಂಬದ ನಿಯಂತ್ರಣ ಹೊಂದಿರುವುದು. ಹಾಗಾಗಿ ಮೊದಲ ತಾಯಿಯ ನಿಯಂತ್ರಣ ಇಂದು ಮಾಲೇರು ಸಮುದಾಯದಲ್ಲಿ ಉಳಿದಿಲ್ಲ. ಏಕೆಂದರೆ ಸ್ಥಳೀಯ ಉತ್ತಮ ಜಾತಿಗಳು ಪುರುಷ ಕೇಂದ್ರಿತ ಕುಟುಂಬಗಳಾಗಿದ್ದವು. ಈ ಕುಟುಂಬಳ ಜೊತೆ ಮಾಲೇರು ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದುರ. ಹಾಗಾಗಿ ಇವರು ತಮ್ಮ ಒಡೆಯರ ಕುಟುಂಬ ಪದ್ಧತಿಗಳನ್ನೇ ಅನುಸರಿಸುತ್ತ ಬಂದ್ದು ಮತ್ತು ನನ್ನ ತಾಯಿ, ಸಹೋದರಿಯರು, ಹೆಂಡತಿ, ಅತ್ತೆ ಇತರ ಮಹಿಳಾ ಬಳಗವನ್ನು ಇತರರಿಂದ ರಕ್ಷಿಸಬೇಕಾದದ್ದು, ಆ ಸಮುದಾಯದ ಪುರುಷರ ಕರ್ತವ್ಯವಾಯಿತು. ಇದರಿಂದ ತನ್ನ ಕುಟುಂಬವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದದ್ದು ಅನಿವಾರ್ಯವಾಗಿದೆ. ಆದರೂಹಿರಿಯ ಹೆಣ್ಣಿನ ಮಾರ್ಗದರ್ಶನ ತಿಳುವಳಿಕೆಗಳನ್ನೆ ಗಂಡು ಕೇಳುತ್ತಾನೆ. ಅದರಂತೆ ನಡೆದುಕೊಳ್ಳುತ್ತಿದ್ದಾನೆ. ಹಾಗಾಗಿ ನಗರ, ಪಟ್ಟಣ, ಹಳ್ಳಿಗಳಲೆಲ್ಲ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬಗಳೆರಡು ಆಯಾ ಕುಟುಂಬಗಳ ಹೊಂದಾಣಿಕೆ, ಪರಿಸರಗಳಿಗೆ ಅನುಗುಣವಾಗಿ ರಚನೆಗೊಂಡಿವೆ. ಹಾಗಾಗಿಈ ಎರಡು ಮಾದರೆಇ ಕುಟುಂಬಗಳಲ್ಲೂ ತಂದೆ-ತಾಯಿ-ಮಕ್ಕಳು, ಅಜ್ಜ-ಅಜ್ಜಿ, ಚಿಕ್ಕಪ್ಪ, ದೊಡ್ಡಪ್ಪಂದಿರೆಲ್ಲ ಒಟ್ಟಿಗೆ ಸೌಹಾರ್ದಯುತವಾಗಿ ಪ್ರೀತಿಯಿಂದಕೂಡಿಬಾಳುತ್ತಿರುವುದು ಈ ಸಮುದಾಯದ ವಿಶೇಷ. ಉದ್ಯೋಗ ಹುಡುಕಿಕೊಂಡು ವ್ಯಾಪಾರದ ಸಲುವಾಗಿ ಬೇರೆ ಬೇರೆ ನಗರ, ಪಟ್ಟಣ ಸೇರಿದಮಕ್ಕಳು ಮಾತ್ರ ವಿಭಕ್ತ ಕುಟುಂಬಗಳಾಗಿ ಒಡೆದಿವೆ. ಆದರೆ ಯಾವ ಕುಟುಂಬವು ವೈಮನಸ್ಸು, ತಾರತಮ್ಯ, ಬೇದಭಾವ ಒಡಕು ತೊಡಕುಗಳಿಂದ ಕೂಡಿದ ಕುಟುಂಬಗಳಾಗಿಲ್ಲ. ತಂದೆ-ತಾಯಿಯ ಹಿಡಿತದಲ್ಲಿ ಮಕ್ಕಳಿವೆ ಗಂಡನ ಹಿಡಿತದಲ್ಲಿ ಹೆಂಡತಿ ಇದ್ದಾಳೆ. ಹೆಂಡತಿಯ ನಡೆನುಡಿ ವ್ಯವಹಾರ ತಿಳುವಳಿಗೆ ಗಂಡನು ಬೆಲೆಕೊಡುತ್ತಾ ತನ್ನ ಕುಟುಂಬವನ್ನು ಮುನ್ನೆಡೆಸಿಕೊಂಡು ಗಂಡ ಹೆಂಡತಿಯರು ಸಾಗುತ್ತಿದ್ದಾರೆ.

ಹಳ್ಳಿಗಳಲ್ಲಿ ಇನ್ನು ತುಂಬ ಬಡತನದ ಕುಟುಂಬಗಳಿದ್ದರೂ ಪ್ರೀತಿ, ವಿಶ್ವಾಸ, ಸ್ನೇಹ ಸಂಬಂಧಗಳಿಂದ ಈ ಕುಟುಂಬಳು ಮುನ್ನೆಡೆಯುತ್ತಿವೆ. ಇವರೆಲ್ಲ ಚಿಕ್ಕ ಚಿಕ್ಕ ಕುಟುಂಬಗಳಾಗಿ ಒಡೆದಿದ್ದರೂ, ಒಡೆಯದವರಂತೆ ಜೀವನ ಮಾಡುತ್ತಿದ್ದಾರೆ. ಈ ಸಮುದಾಯದ ಜನ, ಕೃಷಿಕರಾಗಲಿ, ಕೂಲಿಕಾರ್ಮಿಕರಾಗಲಿ, ಸರ್ಕಾರಿ ಕೆಲಸದಲ್ಲಿರಲಿ, ವ್ಯಾಪಾರ ಮಾಡಿಕೊಂಡಿರಲಿ ಅಥವಾ ಜೀವನೋಪಾಯಕ್ಕೆ ಏನೆ ಕೆಲಸ ಮಾಡಿಕೊಂಡಿರಲಿ; ಕುಟುಂಬದ ಗಂಡ-ಹೆಂಡತಿ ಮಕ್ಕಳೆಲ್ಲ ದುಡಿದು, ಬಂದ ಆದಾಯದಿಂದ ಎಲ್ಲರೂ ಕೂಡಿ, ಒಬ್ಬರಿಗೊಬ್ಬರು ಒಗ್ಗಟ್ಟಿನಿಂದ ಸಹಾಯಕರಾಗಿ ಜೀವನ ಮಾಡುತ್ತಿದ್ದಾರೆ. ಇಂತಹ ಕುಟುಂಬವನ್ನು ಹೆಣ್ಣು ಶಾಂತಿ, ಸಹನೆ, ಸಹಬಾಳ್ವೆಯ ಸಹಕಾರ ಮೂರ್ತಿಯಾಗಿ ಮುನ್ನೆಡೆಸುತ್ತಿದ್ದಾಳೆ.

ಆಚರಣೆಗಳು

ಮಾಲೇರು ವಾಸ ಮಾಡುತ್ತಿರುವ ವಾತಾವರಣದಲ್ಲಿ ಹಿಂದೂ ಸಂಸ್ಕೃತಿಯಲ್ಲಿ ಬರುವ ಯಾವ ಹಬ್ಬ ಆಚರಣೆಗಳಾಗಲಿ,ಜಾತ್ರೆ ಪರುಸೆಗಳಾಗಲಿ, ದೇವರ ಪೂಜೆ, ಪುರಸ್ಕಾರ-ಗಳಾಗಲಿ ಅವರವರ ಸಂಪ್ರದಾಯ, ನಂಬಿಕೆಗಳಿಗೆ ಅನುಗುಣವಾಗಿ ಆಯಾ ಪ್ರದೇಶದ ಜನರ ಜೊತೆ ಸೇರಿ ಆಚರಿಸುತ್ತಾ ಬಂದಿದ್ದಾರೆ.

ಚಿಕ್ಕಮಗಳೂರು, ಶಿವಮೊಗ್ಗ,ಉಡುಪಿ, ಕುಂದಾಪುರಗಳಲ್ಲಿ ಹೆಚ್ಚಾಗಿರುವ ಈ ಸಮುದಾಯದ ಸಾಂಸ್ಕೃತಿಕ ಹಬ್ಬ, ಆಚರಣೆ, ನಂಬಿಕೆಗಳಲ್ಲಿ ಜಾತ್ರೆ ಪರುಸೆಗಳಾಗಿ ಶೂದ್ರಾತಿಶೂದ್ರರ ಸಾಂಸ್ಕೃತಿಕ ಆಚರಣೆಗಳನ್ನೆ ಅನುಸರಿಸುತ್ತಾ ಬಂದಿದ್ದಾರೆ. ಹಾಗಾಗಿ ಮೂಲ ಬ್ರಾಹ್ಮಣರ ಕುಟುಂಬವಾಗೆ ಕಂಡರು ಬದುಕಿನಲ್ಲಿ ಜೀವನ ಪದ್ಧತಿಯಲ್ಲಿ ಬ್ರಾಹ್ಮಣ ಸಮಾಜ ಸಂಸ್ಕೃತಿಯಿಂದ ದೂರಾದವರು. ಆದ್ದರಿಂದಲೇ ಇವತ್ತಿಗೂ ಇವರ ನಂಬಿಕೆ, ಪೂಜೆ, ಹಬ್ಬಗಳು ಭೂತ, ಕೋಲ, ಚೌಡಿಗಳ ಮೇಲೆಯೇ ನಡಯುತ್ತವೆ. ಇವುಗಳು ಯಾವನ್ನು ಬ್ರಾಹ್ಮಣರು ಪೂಜಿಸುವುದಿಲ್ಲ. ಇವು ಈ ಸಮುದಾಯ ನಂಬಿ ಪೂಜಿಸುತ್ತ ಬಂದಿರುವ ಪ್ರಾದೇಶಿಕ ದೇವತೆಗಳು. ಜೊತೆಗೆ ಧರ್ಮಸ್ಥಳದ ಅಣ್ಣಪ್ಪ ಕೋಲನ ಮೇಲೆ ಈ ಜನರ ಅಪಾರ ಭಕ್ತಿ. ಪಂಜರಹಳ್ಳಿ ಭೂತನ ಪೂಜೆ ಮತ್ತು ಚೌಡಿ(ಚೌಡೇಶ್ವರಿ) ಜಾತ್ರೆಗಳು ಇವರ ವಿಶೇಷ ಹಬ್ಬಾಚರಣೆಗಳು.

ಮಾಲೇರು ಯಾವ ಭಾಗದಲ್ಲಿದ್ದರೂ ಬಲಿ ಪೂಜೆಯನ್ನು ದೀಪಾವಳಿಯಲ್ಲಿ ಮಾಡುತ್ತಾರೆ. ಇವರು ವಾಮನನ ದ್ವೇಷಿಗಳಾದ್ದರಿಂದ ಅವನ ಪೂಜೆಯನ್ನು ಮಾಡುವುದಿಲ್ಲ.ಭೂಮಿ ಪೂಜೆ, ಭುಮಿಹುಣ್ಣಿಮೆಯನ್ನು ಆರಾಧಿಸುತ್ತಾರೆ. ಹಿಂದೂ ಸಾಂಪ್ರದಾಯಿಕ ಹಬ್ಬಗಳಲ್ಲಿ ಗೌರಿ ಹಬ್ಬವನ್ನು ಮಾಡುವುದಿಲ್ಲ. ಗಣೇಶನ ಹಬ್ಬ ಮಾಡುತ್ತಾರೆ. ಗಣನಾಯಕ ಕೆಳವರ್ಗದವನು ಎಂಬ ನಂಬಿಕೆಯಿಂದ ಗಣೇಶನ ಹಬ್ಬ ಮಾಡುತ್ತಾರೆ. ಗೌರಿಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದು ಬ್ರಾಹ್ಮಣರ ಸಂಪ್ರದಾಯ, ಇದು ನಮ್ಮದಲ್ಲ ಹಾಗಾಗಿ ಗೌರಿಹಬ್ಬಕ್ಕೆ ಬಾಗಿನ ಕೊಡುವುದಾಗಲಿ, ಹಬ್ಬದ ಆಚರಣೆ ಮಾಡುವುದಾಗಲಿ ಇವರು ಅನುಸರಿಸುತ್ತಿಲ್ಲ

ನವರಾತ್ರಿ ಹಬ್ಬದಲ್ಲಿ ಹಾಡು, ನೃತ್ಯ ಮಾಡಿ ರಾತ್ರಿಯೆಲ್ಲ ಜನ ಸೇರಿ ಸಂತೋಷದಿಂದ ಹಳ್ಳಿಗಳಲ್ಲಿ ಕಾಲ ಕಳೆಯುತ್ತಾರೆ. ಇಂತಹ ಆಚರಣೆ ವಿಶೇಷ ಪೂಜೆಗಳು ನಗರಗಳಲ್ಲಿ ಇಲ್ಲ. ಇದ್ದರೆ ಅವರವರ ಮನೆಗಳಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ಆಚರಣೆಯಾಗುತ್ತಿವೆ. ಆದರೆ ಹಳ್ಳಿಗಳಲ್ಲಿ ಮಾತ್ರ ಇನ್ನು ಜೀವಂತವಾಗಿವೆ. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ನವರಾತ್ರಿ ಹಬ್ಬ ಜಾತ್ರೆಗಳು ನಡೆಯುತ್ತವೆ. ಈ ಹಬ್ಬದಲ್ಲಿ ಶಾರದಮ್ಮನಿಗೆ ೯ದಿನ ೯ರೀತಿ ಅಲಂಕಾರ ಮಾಡಿಜನಗಳ ಜಾತ್ರೆ ನಡೆದರೆ ಅದೇ ಸಂದರ್ಭದಲ್ಲಿ ಜಾನುವಾರುಗಳ ಜಾತ್ರೆಯು ವಿಶೇಷವಾಗಿ ನಡೆಯುತ್ತದೆ. ಎತ್ತುಗಳಾಗಿರಬಹುದು, ಹಸುಗಳಾಗಿರಬಹುದು, ದಷ್ಟಪುಷ್ಟವಾಗಿ ಬೆಳೆದ ಒಂದೇ ರಿತಿಯ ಜೋಡಿ ದನಗಳನ್ನು ಮೆರವಣಿಗೆ ಮಾಡಿ ಅವುಗಳಿಗೆ ಪೂಜೆ ಸಲ್ಲಿಸಿ ಉತ್ತಮ ಜೊಡಿಗೆ ಬಹುಮಾನ ಕೊಡುತಾರೆ.

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಆಸುಪಾಸುಗಳಲ್ಲಿ ಲಕ್ಷ್ಮಿದೀಪೋತ್ಸವ ಮಾಡುತ್ತಾರೆ. ಆ ದೀಪೋತ್ಸವಕ್ಕೆ ೧೦ ಅಥವಾ ೧೦೦ ಇಲ್ಲಾ ೧೦೦೦ ದೀಪಗಳನ್ನು ತಂದು ಹಚ್ಚುತ್ತೇನೆಂದು ಜನರುಹರಕೆ ಹೊರುತ್ತಾರೆ. ಇಲ್ಲೆಲ್ಲ ನವರಾತ್ರಿ ಜಾತ್ರೆಯಂತೆ ದುರ್ಗಾ ಜಾತ್ರೆಯು ನಡೆಯುತ್ತದೆ. ಹಾಗೆಯೇ ಸುಬ್ರಹ್ಮಣ್ಯ ದೇವರಿಗೆ ಕಜ್ಜಿ, ತುರಿಕೆಗೆ ಹರಕೆ ಮಾಡುತ್ತಾರೆ. ಮಾಡಿದ ಹರಕೆಯನ್ನು ಸುಬ್ರಮಣ್ಯ ಜಾತ್ರೆಯಲ್ಲಿ ನಾಗರ ಸೆಡೆಯನ್ನು ತೆಗೆದುಕೊಟ್ಟು ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಹುತ್ತವನವನು ಪೂಜೆ ಮಾಡಿ ನಾಗದೇವರಿಗೂಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ನಾಗರಪಂಚಮಿ ಹಬ್ಬವನ್ನು ಮಾಡುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಮಲಾಪುರದಲ್ಲಿ ’ತ್ರಿಪುರಾಂತಕಿ’ ಅಮ್ಮನವರು ಎಂಬ ದೇವತೆ ಇದೆ. ಇದು ತುಂಬ ಪ್ರಾಚೀನವಾದ ದೇವಾಲಯ. ಅಂದರೆ ಸುಮಾರು ೩೦೦-೪೦೦ ವರ್ಷಗಳ ಇತಿಹಾಸವಿರಬಹುದು. ಈ ದೇವತೆಯನ್ನು ಎಲ್ಲಾ ಜಾತಿಯವರು ಪೂಜೆ ಮಾಡುತ್ತಾರೆ. ಮತ್ತು ನಂಬಿದ್ದಾರೆ. ಆದರೆ ಆ ದೇವತೆಗೆ ಪೂಜೆ ಸಲ್ಲಿಸುವವರು ಮಾತ್ರ ಬ್ರಾಹ್ಮಣರೆ. ಆ ಗರ್ಭಗುಡಿಗೆ ಇನ್ನು ಯಾವ ಜಾತಿ ಮತದವರಿಗೂ ಪ್ರವೇಶವಿಲ್ಲ. ಆದರೂ ಎಲ್ಲರಂತೆ ಮಾಲೇರು ಸಹ ಆ ದೇವರನ್ನು ತುಂಬ ನಂಬಿ ಪೂಜೆ ಸಲ್ಲಿಸುತ್ತಾರೆ. ಆ ಅಮ್ಮನವರಿಗೆ ತಪ್ಪಾಗಿ ನಡೆದುಕೊಂಡರೆ ಕೆಟ್ಟದ್ದಾಗುತ್ತದೆ ಎಂಬ ಭಯ, ಭೀತಿಯಿಂದ ಆ ದೇವರಿಗೆ ನಡೆದುಕೊಳ್ಳುತ್ತಾರೆ.ಈ ದೇವರ ಹೆಸರಿನಲ್ಲೆ ಬೊಮ್ಮಲಾಪುರದಲ್ಲಿ ಅಮ್ಮನವರ ಜಾತ್ರೆ ನಡೆಯುತ್ತದೆ. ಈಜಾತ್ರೆ ನಡೆದರೆ ತ್ರಿಪುರಾಂತಕಿ ಅಮ್ಮನವರನ್ನು ನಂಬಿದ ಸುತ್ತಮುತ್ತಲ ಪ್ರದೇಶದ ಜನ ಒಕಳಿ, ಅನ್ನ, ಬಾಳೆಗೊನೆ, ಅವಲಕ್ಕಿ, ಬೆಲ್ಲ ತಂದು ಪೂಜೆ ಸಲ್ಲಿಸುತ್ತೇನೆಂದು ಹೊತ್ತ ಹರಕೆಯನ್ನು ತೀರಿಸುತ್ತಾರೆ. ಅದೇ ಆ ಜಾತ್ರೆಯ ಸಂತಸದ ಉತ್ಸವ. ವರ್ಷಕ್ಕೊಮ್ಮೆ ನಡೆಯುವ ಈ ದೇವರ ಜಾತ್ರೆಗೆ (೪-೫ ಸಾವಿರಕ್ಕೂ ಹೆಚ್ಚು) ಜನರು ಉತ್ಸವದಿಂದ ಸೇರಿ ತಮ್ಮ ಹರಕೆ, ಪೂಜೆ, ಪುರಸ್ಕಾರಗಳನ್ನು ತೀರಿಸಿಕೊಂಡು ಸಂತೋಷದಿಂದ ಕುಟುಂಬ ಸಮೇತರಾಗಿ ಸೇರಿ ಮತ್ತೆ ಮರಳುತ್ತಾರೆ.

ತ್ರಿಪುರಾಂತಕಿ ಅಮ್ಮನ ಬಗ್ಗೆ ಒಂದು ಐತಿಹ್ಯವಿದೆ. ಈಗ ಈ ದೇವರುಇರುವ ಮಾರ್ಗದಲ್ಲಿ ’ಬೊಮ್ಮಣ್ಣ ಹೆಗ್ಗಡೆ’ ಎಂಬ ರಾಜ (ದೊಡ್ಡ ಸಾಹುಕಾರ) ಯಾವಾಗಲೂ ಕುದುರೆಯ ಮೇಲೆ ಅಡಕೆಯನ್ನು ಹೇರಿಕೊಂಡು ತನ್ನ ಸಹಚರರ ಜೊತೆ ಹೋಗುತ್ತಿದ್ದನಂತೆ. ಒಂದು ದಿನ ಈ ಮಾರ್ಗ ಮಧ್ಯದಲ್ಲಿ ಹೋಗುವಾಗ ಒಂದು ಸ್ಥಳದಲ್ಲಿ ವಿರಾಮಕ್ಕಾಗಿ ಉಳಿದನಂತೆ. ಆಗ ಒಬ್ಬ ವ್ಯಕ್ತಿಒಂದು ಕುದುರೆ ಮತ್ತು ಅದರ ಮೇಲಿದ್ದ ಅಡಕೆಯ ಗೊಂಚಲು ಎಲ್ಲಾ ಮಾಯವಾದವಂತೆ. ಏನು ಹೀಗೆ ಎಂದು ಸುತ್ತಮುತ್ತ ಹುಡುಕಾಡಿದರಂತೆ ಆದರೆ ಇವರು ತಂಗಿದ್ದ ಸ್ಥಳದ ಪಕ್ಕದಲ್ಲೇ ಒಂದು ಅಡಕೆ ಗೊನೆಯ ವಿಗ್ರಹ ರೂಪದಲ್ಲಿರುವ ಮೂರ್ತಿಯೊಂದು ಗೋಚರವಾಯಿತಂತೆ ಬೊಮ್ಮಣ್ಣ ಹೆಗ್ಗಡೆಗೆ ಆಗ ಅವನು ಅಲ್ಲೆ ನೆಲೆಸಿ ಆ ಮೂರ್ತಿಗೆ ಒಂದು ದೇವಾಲಯ ಕಟ್ಟಿಸಿ ತನ್ನ ಸಹಚರರೊಂದಿಗೆ ಅಲ್ಲೇ ನೆಲೆಸಿದನಂತೆ. ಅಲ್ಲಿಂದ ಆ ಊರಿಗೆ ’ಬೊಮ್ಮಲಾಪುರ’ ವೆಂದು ಹೆಸರಾಯಿತು ಎಂದು ಅಲ್ಲಿಯ ವಯಸ್ಸಾದ ಜನರು ಹೇಳುತ್ತಾರೆ.

ಸುಮಾರು ೧೫೦ ವರ್ಷಗಳ ಹಿಂದೆ ತ್ರಿಪುರಾಂತಕಿ ಅಮ್ಮನ ದೇವಾಲಯದ ಮುಂದೆ ಒಂದು ಬಾವಿ (ಕ್ವೊಣ) ತೆಗೆದರಂತೆ. ಅಗೆದು ತೆಗೆಯುವಾಗ ಆ ಬಾವಿ ಗುಂಡಿಯಿಂದ ರಕ್ತದಂತ ನೀರು ಬರುತ್ತಿತ್ತಂತೆ. ಅವನ್ನು ನೋಡಿ ಬಾವಿ ತೆಗೆಯುವುದನ್ನು ಅಲ್ಲಿಗೆ ನಿಲ್ಲಿಸಿ, ಆ ಜಾಗಕ್ಕೆ ’ಅಶೋಕ’ ಮರದ ಗಿಡವನ್ನು ನೆಟ್ಟರಂತೆ. ಅದು ಈಗ ಬೆಳೆದು ಹೆಮ್ಮರವಾಗಿದೆ. ಈ ಮರ ತ್ರಿಪುರಾಂತಕಿ ದೇವಾಲಯದ ಕಾಂಪೌಂಡ್ ಒಳಗಡೆ ಇದೆ.

ಬೊಮ್ಮಲಾಪುರದ ತ್ರಿಪುರಾಂತಕಿ ಅಮ್ಮನ ದೇವಾಲಯದ ೧೫೦ ಮೀಟರ‍್ ದೂರದ ಎದುರು ಪಕ್ಕದಲ್ಲಿ ಪಂಜರೊಳಿ ಭೂತ, ಒಂಟಿ ಭೂತ ಮತ್ತುಜೋಡಿ ಭೂತಗಳೆಂಬ ಮುರು ದೇವತೆಗಳಿವೆ. ಈ ಭೂತಗಳಿಗೆ ಬಲಿ ಪೂಜೆ ನಡೆಯುತ್ತದೆ. ಕೋಳಿ, ಕುರಿ, ಆಡು (ಹೋತ)ಗಳನ್ನು ಬಲಿ ಕೊಡಬೇಕು. ಈ ಭೂತಗಳಿಗೆ ಹರಕೆ ಹೊತ್ತವರು ದೇವರುಗಳ ಎದುರು ಸ್ವಲ್ಪ ಪಕ್ಕದಲ್ಲಿ ಕೊಟ್ಟಿಗೆ ಇದೆ ಅಲ್ಲಿಗೆ ಪೂಜೆ ಮಾಡಿ ಎಳೆದೊಯ್ದು ಬಲಿ ಕೊಡುತ್ತಾರೆ. ಈ ದೇವತೆಗಳನ್ನು ಪೂಜೆ ಮಾಡುವವರು ’ಮಾಲೇರು’ ಈ ದೇವರುಗಳು ಮಾಲೇರು ಕುಲದ ರಕ್ಷಕರಂತಿದ್ದಾರೆ. ಈ ಜನ ಪಂಜರೊಳಿ ಭೂತಗಳನ್ನು ತುಂಬ ಭಯಭೀತಿ-ಯಿಂದ ಪೂಜಿಸುತ್ತಾರೆ. ಈ ದೇವರುಗಳನ್ನು ಆರಂಭದಲ್ಲಿ ಬ್ರಾಹ್ಮಣ ಪೂಜಾರಿಗಳೆ ಪೂಜೆ ಮಾಡುತ್ತಿದ್ದರಂತೆ ಕೊನೆಗೆ ಅವರಿಗೆ ಏಳಿಗೆ ಆಗದೆ ಆ ದೇವರ ಪೂಜೆ ಮಾಡುವುದನ್ನು ಬಿಟ್ಟಿದ್ದಾರೆ. ಈಗ ಮಾಲೇರು ಜನಾಂಗದವರೆ ಪೂಜೆ ಮಾಡುತ್ತಿದ್ದಾರೆ. ಹಿಂದೆ ಸುಬ್ಬಯ್ಯ ಎನ್ನುವವರು ಪೂಜೆ ಮಾಡುತ್ತಿದ್ದರು ಆಮೇಲೆ ಇವರ ಮಗ ಕೃಷ್ಣಯ್ಯ ಮಾಡುತತಿದ್ದರು. ಇವರುಗಳ ನಂತರ ಕೃಷ್ಣಯ್ಯನವರಮಗ ಸುಬ್ಬಣ್ಣ ಎಂಬುವವರು ಈಗ ಭೂತಗಳ ಪೂಜಾರಿಕೆಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ. (ಇವರ ಮೇಲೆ ಈ ಭೂತ ಮೈಮೇಲೆ ಬಂದು ಜನರ ಕಷ್ಟಸುಖದ ಪ್ರಶ್ನೆಗಳಿಗೆ ಸಲಹೆ ಸೂಚನೆಗಳ ಉತ್ತರ ನೀಡುತ್ತದೆ) ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲೆಲ್ಲ ಈ (ದೇವತೆಗಳ ಮೇಲೆ ಹೆಚ್ಚು ನಂಬಿಕೆ ಇಟ್ಟಿರುವುದರಿಂದ) ಪಂಜರೊಳಿ ಭೂತಗಳದ್ದು ಹೆಚ್ಚು ಪ್ರಸಿದ್ಧಿ.

ಮಾಲೇರು ಸಮುದಾಯದವರ ಸಂಪ್ರದಾಯ, ಆಚರಣೆ, ನಂಬಿಕೆಗಳಲ್ಲಿ ಭೂಮಿ, ನಾಗದೇವತೆ, ಗಣೇಶ, ಭೂತ, ಕೋಲ, ಚೌಡಿ, ದುರ್ಗೆ, ಲಕ್ಷ್ಮಿ ಮುಂತಾದ ದೇವತೆಗಳು ಈ ಜನರ ರಕ್ಷಣೆಗೆ ಇರುವ ದೇವತೆಗಳೆಂದು ನಂಬಿದ್ದಾರೆ. ಆದ್ದರಿಂದಲೇ ಹಬ್ಬ, ಜಾತ್ರೆ, ಪೂಜೆಗಳನ್ನು ಈ ದೇವತೆಗಳ ಹೆಸರಿನಲ್ಲಿ ಮಾಡುತ್ತಾರೆ. ಈ ಜನರ ಮೂಲ ದೇವತಾರಾಧನೆಗಳಲ್ಲಿ ಮೇಲೆ ಹೇಳಿದ ದೇವತೆಗಳು ಮಾತ್ರ. ಇವಲ್ಲದೆ ಬ್ರಾಹ್ಮಣರು ಪೂಜಿಸುವ ತಿರುಪತಿ ವೆಂಕಟಾಚಲ, ಕೃಷ್ಣ, ರಾಮ, ರಾಘವೇಂದ್ರ ಇಂತಹ ದೇವತೆಗಳನ್ನು ಇವರು ಪೂಜಿಸುವುದಿಲ್ಲ. ಆದರೆ ಬ್ರಾಹ್ಮಣರೆಂದು ಜಾತಿಸುಳ್ಳು ಹೇಳಿಕೊಂಡು ನಗರ ಪಟ್ಟಣಗಳಲ್ಲಿ ವಾಸವಾಗಿರುವವರು ಮಾತ್ರ ಆಯಾ ಪ್ರದೇಶಗಳಲ್ಲಿ ಇರುವ ಬ್ರಾಹ್ಮಣರ ಸಂಪ್ರದಾಯ, ಆಚರಣೆಗಳಿಗೆ ಅನುಗುಣವಾಗಿ ಆಯಾ ದೇವರನ್ನು ಪೂಜೆ ಮಾಡುವುದನ್ನು ಕಾಣುತ್ತೇವೆ, ಆದರೆ ಈ ಜನರು ಮತ್ತೆ ಅವರ ಮೂಲಸ್ಥಳಕ್ಕೆ ಹೋದರೆ ಅವರು ಪೂಜಿಸುವುದು ಆರಾಧಿಸುವುದು ಭೂತ, ಕೋಲ, ಚೌಡಿ, ಭೂಮಿ, ನಾಗಪೂಜೆಯನ್ನೆ, ಏಕೆಂದರೆ ಈ ದೇವತೆಗಳು ಅವರ ಹಿರಿಯರ, ಮಕ್ಕಳ, ಸ್ತ್ರೀಯರ ಕಷ್ಟ ಸುಖಗಳಿಗೆ ರಕ್ಷಣೆಗಾಗಿ ಇರುವ ದೇವತೆಗಳೆಂದು ನಂಬಿ ಆರಾಧಿಸುವುದು ರೂಢಿಯಾಗಿ ಬೆಳೆದು ಬಂದಿದೆ.

ಮಾಲೇರು ಸಮುದಾಯದ ಮದುವೆ ಹಾಡುಗಳು

ಮಾಲೇರು ಸಮುದಾಯ ಪರಿಶಿಷ್ಟ ವರ್ಗವಾಗಿದೆ. ಇವರನ್ನು ಅಂದಿನಿಂದ ಬುಡಕಟ್ಟು ಜನರೆಂದು ಗುರುತಿಸಿದ್ದರೂ ಇವರಿಗೆ ಬುಡಕಟ್ಟು ಜನಗಳಿಗಿರುವ ಸಾಂಸ್ಕೃತಿಕ ಹಿನ್ನೆಲೆ ಇಲ್ಲ. ಆದಿಯಿಂದ ಇವರ ಜೀವನ ಕಾಡು, ಬೆಟ್ಟ, ಗುಡ್ಡಗಳಲ್ಲೆ ಸಾಗಿದ್ದರೂ ಕೂಡ; ಇವರು ಪರಸ್ಪರ ಬೆರೆತು ಕೂಡುವ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ವ್ಯಾವಹಾರಿಕ ಸಂಬಂಧ ಬೆಳಸದೆ ಇವರ ಸಮುದಾಯ ವೃದ್ದಿಗೆ ಸಾಧ್ಯವಾಗಿಲ್ಲ. ಆದ್ದರಿಂದಲೇ ಅಲ್ಲೊಂದು ಇಲ್ಲೊಂದು ಕುಟುಂಬ ಎಲ್ಲೆಲ್ಲೋ ಬೆಳೆದು ಯಾರಿಗೂ ಗೊತ್ತು ಗುರಿ ಇಲ್ಲದೆ ಸಾಗಿ ಬಂದಿರುವ ಸಮುದಾಯವಿದು. ಹಾಗಾಗಿ ಇವರಿಗೆ ಆದಿಯಿಂದ ಒಂದು ಸಾಂಸ್ಕೃತಿಕ ಹಿನ್ನೆಲೆಯ ನೆಲೆಗಟ್ಟು ದೊರೆಯದಾಗಿದೆ. ಆದರೆ ಇರುವ ಒಂದೊಂದು ಕುಟುಂಬಗಳು ಪ್ರಬಲ ಜಾತಿ ಸಮುದಾಯದ ಜೊತೆ ಆಯಾ ಪ್ರದೇಶದಲ್ಲಿ ವಾಸಮಾಡುತ್ತ ಅವರ ಸಾಂಸ್ಕೃತಿಕ ಜೀವನ ಪದ್ಧತಿಯನ್ನು ರೂಢಿಸಿಕೊಂಡು ಬಂದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಹಾಗಾಗಿ ’ಮಾಲೇರು’ ಜನಾಂಗದವರದೇ ಆದ ರೂಢಿ, ಸಂಪ್ರದಾಯ, ಆಚರಣೆಯ ಸಾಂಸ್ಕೃತಿಕ ಜೀವನ ಪದ್ಧತಿಗಳು ಬೆಳೆದಿಲ್ಲ. ಅದೇ ರೀತಿ ಅವುಗಳಿಗೆ ಪೂರಕವಾದ ಹಾಡು, ಕಥೆ, ಗಾಧೆ, ಒಗಟು, ಒಡಪುಗಳಾವುವು ಕಂಡುಬರುವುದಿಲ್ಲ. ಹೀಗಿರುವ ಈ ಜನರು ಹೆಚ್ಚಾಗಿ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಹುಟ್ಟಿ ಬೆಳೆದಿದ್ದರಿಂದ ಆ ಜಿಲ್ಲೆಗಳ ಪ್ರಬಲ ಜಾತಿ ಜನರು ಬಳಸುವಂತಹ ಗಾದೆಗಳಿರಬಹುದು ಅಥವಾ ಸಾಂಪ್ರದಾಯಿಕ ಹಾಡುಗಳಿರಬಹುದು. ಅವುಗಳನ್ನೆ ಮಾಲೇರು ಜನಾಂಗವು ರೂಢಿಸಿ ಬೆಳೆಸಿಕೊಂಡಿರುವುದನ್ನು ಕಾಣುತ್ತೇವೆ. ಅಂತಹವುಗಳಲ್ಲಿ ಮದುವೆ ಸಂದರ್ಭದಲ್ಲಿ ಒಂದೆರಡು ಹಾಡುಗಳು ಹೀಗಿವೆ.

ಹಸೆಮಣೆಗೆ ಗಂಡನ್ನು ಕರೆವ ಹಾಡುಗಳು

೧)       ಬಾ ಬಾ ಬಾ ಹಸೆಗೆ
ಬಾ ಬಾ ಹಸೆಗೆ ಶೇಷಶಯನ||
ಕಂಬು ಕಂಠಿ ತುಂಬ ಕುಶಲ
ಅಂಬುಜಾಕ್ಷಿಯರ‍್ ಕರೆವರು ಹಸೆಗ||
ಸಾರ ಸಾಕ್ಷ ಸರ್ಪಶಯನ
ನೀಲವೇಣಿಯರ ಕರೆವರು ಹಸೆಗೆ||

ಎತ್ತಿದರು ಮುತ್ತಿನಾರತಿಯಾ
ಮದರಾಜ ಗಮನೆಗೆ||
ಅಂಬುಜಾಕ್ಷಿರೆಲ್ಲರು ಬಂದು ಸೇರಿ
ಎತ್ತಿದರು ಮುತ್ತಿನಾರತಿಯಾ||

೨)       ಮೋಹನ ಕೃಷ್ಣ ಬಾ ಹಸೆಗೆ
ಬಾರೈ ವೇಣುಗೋಪಾ
ಹತ್ತವತಾರ ಎತ್ತಿದ ಧೀರ
ಶೂರ ಸಂಹಾರ… ಬಾರೈ ಶೂರ ಸಂಹಾರ||

ಆಲದ ಎಲೆಯ ಮೇಲೆ ವಾಸವಾಗಿರುತಿ
ಲೀಲೆಯಿಂದಿರುತ ಬಾರೈ ಲೀಲೆಯಿಂದಿರುತ||

ದೇವಕಿಕಂದ ಕಂಸನ ಕೊಂದ
ಬಾಲಗೋಪಾಲ ಬಾರೈ ಬಾಲಗೋಪಾ||

ಇಂತಹ ಹಾಡುಗಳನ್ನು ಮದುವೆ ಸಂದರ್ಭದಲ್ಲಿ ಹಾಡುತ್ತಾರೆ. ಇವು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಶಾಸ್ತ್ರಗಳಿಗೆ ಅನುಗುಣವಾಗಿ ಹಾಡುಗಳು ಭಿನ್ನವಾಗಿರುತ್ತವೆ. ಮದುವೆ ಮಾಡುವಂತೆ ಈ ಸಮುದಾಯದ ಜನ, ಬ್ರಾಹ್ಮನರು ಮುಂಜಿಮಾಡುವ ಸಂಪ್ರದಾಯವನ್ನು ಇವರು ರೂಢಿಸಿಕೊಂಡಿಲ್ಲ. ಹಾಗಾಗಿ ಅಂತಹ ಸಂಪ್ರದಾಯ ಆಚರಣೆಗಳ ಹಾಡಾಗಲಿ, ಕಥೆಗಳಾಗಲಿ ಕಂಡುಬರುವುದಿಲ್ಲ. ಅದೇ ರೀತಿ ಇಂದು ಮಾಡುವ ಸಾಂಪ್ರದಾಯಿಕ, ಹಬ್ಬಾಚರಣೆಗಳಹಾಡುಗಳು ಎಲ್ಲೂಕಂಡುಬರುತ್ತಿಲ್ಲ. ಆದರೆ ಮಲೆನಾಡು ಪ್ರದೇಶದ ಈ ಜನರ ಭೂತಾಚರಣೆ ಹಬ್ಬಗಳಲ್ಲಿ ಪೂಜೆ ಪುರಸ್ಕಾರಗಳು ತುಂಬ ಶ್ರದ್ಧೆ, ಭಯ, ಭಕ್ತಿಗಳಿಂದ ನಡೆಯುತ್ತವೆ. ಹೀಗಿದ್ದರೂ ಭೂತವಿರಲಿ ಅಥವಾ ಯಾವ ದೇವತಾ ಪೂಜೆಯಿರಲಿ ಯಾವುದರ ಮೇಲೂ ಹಾಡುಗಳನ್ನು ಹೇಳುವ ಜನಪದರು ಮತ್ತು ಜನಪದ ಕಲಾವಿದರಾರು ಈ ಸಮುದಾಯದಲ್ಲಿ ಈ ಕಂಡು ಬರುತ್ತಿಲ್ಲ.

ಮಲೆನಾಡು ಪ್ರದೇಶಗಳಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತೀರ್ಥಹಳ್ಳಿ, ಸಾಗರ, ಶಿವಮೊಗ್ಗ ಮತ್ತಿತರ ಪ್ರದೇಶಗಳಲ್ಲಿರುವ ಮಾಲೇರು ಜನಕ್ಕೆ ಮತ್ತಿತರ ಸಮುದಾಯದವರು ಅವರ ಸಮೀಪವರ್ತಿಗಳಾಗಿದ್ದಾರೆ. ಇವರೆಲ್ಲರ ಕೊಡುಕೊಳ್ಳಿವಿಕೆಯ ಸಂಪರ್ಕದಿಂದಾಗಿ ಈ ಮಾಲೇರು ದಿನನಿತ್ಯ ಬಳಸುವ ವ್ಯವಹಾರಿಕ ಮಾತುಗಳ ನಡುವೆ ಗಾದೆಗಳನ್ನು ಹಲವಾರು ಸಂದರ್ಭದಲ್ಲಿ ಬಳಸವುದು ರೂಢಿಯಲ್ಲಿದೆ. ಅಂತಹ ಕೆಲವು ಗಾದೆಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.

ಗಾದೆ ಮತ್ತು ಒಗಟುಗಳು

೧) ಅತ್ತೆಗೊಂದು ಕಾಲ ಸೊಸೆಗೊಂದು ಕಾಲ

೨) ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರೀಲಿ ಕೊಡೆ ಹಿಡಿದು ತಿರುಗಿದನಂತೆ

೩) ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು

೪) ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

೫) ಆಕಳು ಕಪ್ಪಾದರೆ ಹಾಲು ಕಪ್ಪೇ?

೬) ಆಕಾಶ ಹರಿದು ಬೀಳುವಾಗ ಅಂಗೈ ಒಡ್ಡಿದರೆ ನಿಂತೀತೆ?

೭) ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ

೮) ಆನೆ ಮಟ್ಟಿದಲ್ಲೇ ಹಾದಿ, ಸೆಟ್ಟಿ ಬಿಟ್ಟಲ್ಲೇ ಪಟ್ಟಣ

೯) ಆಡುವ ಮಗುವಿಗೊಂದು ಕಾಡುವ ಕೂಸು

೧೦) ಆಪತ್ತಿಗೆ ಆದವನೇ ನೆಂಟ

೧೧) ಆಳಾಗಬಲ್ಲವ ಅರಸಾಗಬಲ್ಲ

೧೨) ಇಕ್ಕುವವಳು ನಮ್ಮವಳಾದರೆ ಕೊಟ್ಟಿಗೆಯಲ್ಲೂ ಉಂಡೇನು\

೧೩) ಇಲಿಗೆ ಹೊಡಯಲು ಹೋಗಿ ಗಣಪತಿಗೆ ಪೆಟ್ಟು ಬಿತ್ತಂತೆ

೧೪) ಇಂಗು ತೆಂಗಿದ್ದರೆ ಮಂಗಮೂಳಿ ಕೂಡ ಅಡಿಗೆ ಮಾಡಿಯಾಳು

೧೫) ಉಪ್ಪು ತಿಂದವನು ನೀರು ಕುಡಿತಾನೆ

೧೬) ಉರಿಯೋ ಗಾಯಕ್ಕೆ ಉಪ್ಪು ಸುರಿದಂತೆ
೧೭) ಊಟ ಕೆಟ್ಟರೆ ಜೀವಕ್ಕೆ ಕೇಡು, ಹೆಂಡತಿ ಕೆಟ್ಟರೆ ಮನೆಗೆ ಕೇಡು

೧೮) ಊಟಬಲ್ಲವನಿಗೆ, ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ

೧೯) ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ

೨೦) ಎತ್ತು ಏರಿಗೆ ಎಳೆಯಿತು. ಕೋಣ ನೀರಿಗೆ ಎಳೆಯಿತು

೨೧) ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ

೨೨) ಎರಡು ಕೈ ಸೇರಿದರೆ ಚಪ್ಪಾಳೆ

೨೩) ಎಲ್ಲಾ ಬಿಟ್ಟು ಯೆಲ್ಲವ್ವಗೆ ಹೋದಂತೆ

೨೪) ಏಕಾದಶಿ ಮಾಡುವವರ ಮನೆಗೆ ಶಿವರಾತ್ರಿ ಮಾಡುವವರು ಬಂದರಂತೆ

೨೫) ಕಾಸಿನ ಕಡ್ಲೆನೂ ಬೇಡ ಹೂಸಿನ ನಾತನೂ ಬೇಡ

೨೬) ಕೀಲು ತೆಗೆಯಲು ಹೋಗಿ ಬಾಲ ಸಿಕ್ಕಿಕೊಂಡಂತೆ

೨೭) ಗಾಣಗಿತ್ತಿ ಅಯ್ಯೋ ಎಂದರೆ ನೆತ್ತಿ ತಂಪಾದೀತೆ?

೨೮)  ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?

೨೯) ಗುಡ್ಡಕ್ಕೆ ಕಲ್ಲು ಹೊತ್ತಂತೆ

೩೦) ಗಂಡಸು ಕುಳಿತು ಕೆಟ್ಟ,ಹೆಂಗಸು ತಿರುಗಿ ಕೆಟ್ಟಳು

೩೧) ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತೆ

೩೨) ಘಟ್ಟ ಹತ್ತಿದವನು ಅಟ್ಟ ಏರನೇ?

೩೩) ಚರ್ಮ ತೊಳೆದರೆ ಕರ್ಮ ಹೋದೀತೆ?

೩೪) ಚಾಡಿ ಹೇಳುವವನಿಗೆ ಊರೆಲ್ಲಾ ನೆಂಟರು

೩೫) ತಲೆಗೆ ಹಾಕಿದ ನೀರು ಕಾಲಿಗೆ ಬರುತ್ತೆ

೩೬) ತಾನು ಸಾಯಿಬೇಕು ಸ್ವರ್ಗ ಕಾಣಬೇಕು

ಈ ಹಾಡು ಮತ್ತು ಗಾದೆಗಳನ್ನು ಪದ್ಮಾವತಮ್ಮ ಕೃಷ್ಣಮೂರ್ತಿ ಅವರು ಹೇಳಿಕೊಟ್ಟಿದ್ದಾರೆ.